ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ

ಕವಿರಾಜಮಾರ್ಗದಿಂದ ಅಂದಿನ ಸಮಕಾಲೀನ ಜೀವನ ಪರಿಣತಿಯ ಚಿತ್ರ ದೊರೆಯುವಂತೆಯೇ ಅದಕ್ಕಿಂತ ಹಿಂದಿನ ಸಾಹಿತ್ಯ ಪರಂಪರೆಯ ಸೂಚನೆಯೂ ಸಾಕಷ್ಟು ದೊರೆಯುತ್ತದೆ. ಹಾಗಾಗಿ ಇದು ಕನ್ನಡ ಸಾಹಿತ್ಯದ ಕತ್ತಲು ಯುಗದ ದಾರಿದೀಪವಾಗಿ ಮುಂದಿನ ಸಾಹಿತ್ಯದ ರಾಜಮಾರ್ಗವಾಗಿ ಕಾಣಿಸುತ್ತದೆ.

ಡಾ.ವಿ.ಸಿ.ಕಟ್ಟೆಪ್ಪನವರ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಕವಿರಾಜಮಾರ್ಗ ಕೃತಿಯು ಕನ್ನಡದ ಮೊಟ್ಟಮೊದಲ ಉಪಲಬ್ಧ ಕೃತಿಯಾಗಿದೆ. ಇದರ ಕಾಲ ಕ್ರಿ.ಶ. ಸು. 850. ಕೆ.ಬಿ.ಪಾಠಕರು ಕವಿರಾಜಮಾರ್ಗ ಕೃತಿಯನ್ನು ಕ್ರಿ.ಶ 1898ರಲ್ಲಿ ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯದ ಕುರಿತು ಅಮೂಲ್ಯವಾದ ಸಂಗತಿಗಳನ್ನು ಹಾಗೂ ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿಗಳನ್ನು ಈ ಕೃತಿ ತಿಳಿಸುತ್ತದೆ. ಆದ್ದರಿಂದ ಈ ಕೃತಿಯ ಕರ್ತೃ ಕನ್ನಡಿಗರ ಪ್ರೇಮಕ್ಕೂ ಹೆಮ್ಮೆಗೂ ಕಾರಣನಾಗಿದ್ದಾನೆ.

ಕರ್ನಾಟಕದ ವಿಸ್ತಾರವನ್ನು ಮೊದಲಬಾರಿಗೆ ಈ ಕೃತಿಯ ಕರ್ತೃ ಹೇಳುತ್ತಾನೆ. ಆತನ ಕಾಲಕ್ಕೆ ಗೋದಾವರಿಯ ಉತ್ತರಕ್ಕೂ ಕಾವೇರಿಯ ದಕ್ಷಿಣಕ್ಕೂ ಕನ್ನಡ ನಾಡಿನ ಗಡಿಗಳಿದ್ದವು. ಆ ಕನ್ನಡ ಸಾಮ್ರಾಜ್ಯದಲ್ಲಿ ಕಿಸುವೊಳಲು, ಕೋಪಣನಗರ, ಪುಲಿಗೆರೆ, ವಕ್ಕುಂದ ಇವುಗಳ ಮಧ್ಯಪ್ರದೇಶ ತಿರುಳ್ಗನ್ನಡದ ನಾಡಾಗಿತ್ತು. ಇಲ್ಲಿನ ಜನ ಹದವರಿತು ಮಾತನಾಡಬಲ್ಲವರು. ಇತರರ ಮಾತುಗಳನ್ನು ಅರ್ಥಮಾಡಿಕೊಂಡು ವಿಚಾರ ವಿಮರ್ಶೆ ಮಾಡಬಲ್ಲವರು. ಅಷ್ಟೇ ಅಲ್ಲ ‘ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’, ಅಂದರೆ ಅಕ್ಷರ ವಿದ್ಯೆಯಿಲ್ಲದವರಾಗಿದ್ದರೂ ಸಹೃದಯರಾಗಿ, ಕಾವ್ಯಕರ್ತೃಗಳಾಗಬಲ್ಲವರಾಗಿದ್ದರು.

ಈ ಮಾತನ್ನು ಒತ್ತಿ ಹೇಳುವಂತೆ ಪುನಃ ‘ಕುರಿತವದರಲ್ಲಿದೆ ಮತ್ತಂ! ಪೆರಕುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್’ ಎಂದು ಹೇಳುವುದನ್ನು ನೋಡಿದರೆ ಕನ್ನಡ ಸಾಹಿತ್ಯ ಪರಂಪರೆಯು ಅಖಂಡವಾಗಿ ಅವ್ಯಾಹತವಾಗಿ ಸಮೃದ್ಧವಾಗಿ ಹರಿದುಕೊಂಡು ಬಂದಿರಬೇಕು. ಅದಕ್ಕೆ ತಕ್ಕಂತೆ ಕವಿರಾಜಮಾರ್ಗವು ಸಮಕಾಲೀನವಾದ ಮತ್ತು ತನಗೂ ಪ್ರಾಚೀನವಾದ ಸಾಹಿತ್ಯ ಸಮೃದ್ಧಿಯ ಮೇಲೆ ಅಪಾರವಾದ ಬೆಳಕನ್ನು ಚೆಲ್ಲುತ್ತದೆ. ಕನ್ನಡ ಭಾಷೆಯ ಪ್ರಭೇದ, ಕಾವ್ಯ ಪ್ರಕಾರ, ಕವಿಗಳು ಇತ್ಯಾದಿ ವಿವರಗಳಿರುವುದನ್ನು ನೋಡಿದರೆ ಕ್ರಿ.ಶ. 9ನೇ ಶತಮಾನಕ್ಕಾಗಲೇ ಕನ್ನಡವು ಪ್ರಬುದ್ಧ ಸಾಹಿತ್ಯ ಭಾಷೆಯಾಗಿರುವ ಅಂಶ ತಿಳಿಯುತ್ತದೆ. ಹೀಗೆ ಕವಿರಾಜಮಾರ್ಗದಿಂದ ಮೊದಲು ಮಾಡಿ ಇಂದಿನವರೆಗೆ ಕನ್ನಡ ಸಾಹಿತ್ಯ ಕೊಂಡಿ ಕಳಚದಂತೆ ಅನುದಿನವು ಬೆಳೆದುಕೊಂಡು ಬಂದಿದೆ.

ಈ ಮೊದಲು ನೃಪತುಂಗನೇ ಈ ಕಾವ್ಯದ ಕರ್ತೃ ಎನ್ನುವ ನಂಬಿಕೆ ಬಲಿಷ್ಠವಾಗಿತ್ತು. ಆದರೆ ಕೃತಿಯ ಬಗ್ಗೆ ಸಂಶೋಧನೆ ಹೆಚ್ಚಾದಂತೆ ಕರ್ತೃವಿನ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿವೆ. ಎ.ಆರ್.ಕೃಷ್ಣಶಾಸ್ತ್ರೀಯವರ ಶ್ರಮದಿಂದ ಮುಳಿಯ ತಿಮ್ಮಪ್ಪಯ್ಯನವರ ಸಾಧನೆಯಿಂದ ಈ ಕೃತಿಯನ್ನು ರಚಿಸಿದ ಕವಿ ಶ್ರೀವಿಜಯನೇ ಎಂದು ಹೇಳಲು, ಅಭಿಪ್ರಾಯ ಗಟ್ಟಿಕೊಳ್ಳಲು ಅನುಕೂಲವಾಯಿತು.

ಶ್ರೀವಿಜಯ ಜೈನಕವಿ. ಇವನಿಗೆ ಆಶ್ರಯವಿತ್ತ ದೊರೆ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ. ಅವನ ಅನುಮೋದನೆಯಿಂದಲೇ ಕವಿರಾಜಮಾರ್ಗ ರಚನೆಗೊಂಡಿದೆ. ಅಮೋಘವರ್ಷ ನೃಪತುಂಗನ ಸುದೀರ್ಘ ಆಳ್ವಿಕೆ (814-877) ಕರ್ನಾಟಕದ ಇತಿಹಾಸದಲ್ಲಿ ದಾಖಲಾಗಿರುವಂತಹದ್ದು. ತನ್ನ ರಾಜ್ಯದ ಒಳಹೊರಗನ್ನು ದಕ್ಷತೆಯಿಂದ ನೋಡಿಕೊಂಡ ಈ ಅರಸ ಪ್ರಜಾನೆಮ್ಮದಿ, ಕಾವ್ಯರಚನೆ, ವಿದ್ವಜ್ಜನ ಪ್ರೋತ್ಸಾಹಕ್ಕೂ ನೆರವಾಗಿದ್ದಾನೆ. ಅಂತೆಯೇ ಅವನನ್ನು ‘ಅತಿಶಯಧವಳ’ ‘ಪರಮ ಸರಸ್ವತಿ ತೀರ್ಥಾವತಾರ’ ‘ವಿವೇಕ ಬೃಹಸ್ಪತಿ’ ಎಂದು ಮೊದಲಾಗಿ ಕೊಂಡಾಡಲಾಗಿದೆ. ಇಂಥ ಅರಸನ ರಾಜಧಾನಿಯೊಳಗೆ ಪ್ರವೇಶಿಸಬೇಕಾದರೆ ವ್ಯಾಕರಣ, ಕಾವ್ಯ, ನಾಟಕ, ಲೋಕಕಲೆಗಳಲ್ಲಿ ಪರಿಣತನಾಗಿರಬೇಕಿತ್ತು! ಆತನ ರಾಜಸಭೆಯನ್ನು ಪ್ರವೇಶಿಸಲು ಕವಿವೃಷಭರ ಕೃತಿಗಳನ್ನು ಬಲ್ಲವನಾಗಿರಬೇಕಿತ್ತು! ಈ ಅರ್ಹತೆಗಳೆಲ್ಲ ಕವಿ ಶ್ರೀವಿಜಯನಿಗಿರುವುದರಿಂದಲೇ ನೃಪತುಂಗನ ಆಸ್ಥಾನ ಸೇರಲು ಸಾಧ್ಯವಾಗಿರಬೇಕು. ಇದರಿಂದ ಆತ ಮಾನ್ಯಖೇಟಕ್ಕೆ ಹೊರಗಿನಿಂದ ಬಂದು ನೆಲೆಸಿರಬೇಕೆಂದು ಊಹಿಸಲಾಗಿದೆ.

“ಕವಿರಾಜಮಾರ್ಗ” ಎಂಬ ಶಿರೋನಾಮವೇ ಅನ್ವರ್ಥಕ ನಾಮವಾಗಿದ್ದು, ಕವಿರಾಜಮಾರ್ಗ ಪದವನ್ನು ಬಿಡಿಸಿದರೆ…

  1. ಕವಿ + ರಾಜಮಾರ್ಗ = ಕವಿಗಳಿಗೆ ರಾಜಮಾರ್ಗ ನೀಡುವ ಕಾವ್ಯ ಎಂದರ್ಥ.
  2. ಕವಿರಾಜ + ಮಾರ್ಗ = ರಾಜಕವಿಗೆ ಇನ್ನೂ ರಾಜಮಾರ್ಗ ನೀಡುವ ಕಾವ್ಯ ಎಂದರ್ಥ.

ಹೀಗೆ ಎರಡು ರೀತಿಯಿಂದ ಬಿಡಿಸಿದರೂ ಅರ್ಥ ಹೀಗಾಗುತ್ತದೆ. ಶ್ರೇಷ್ಠಕವಿಗಳಾಗಲು ಬಯಸುವವರಿಗೆ ಬೇಕಾದ ರಾಜಮಾರ್ಗವನ್ನು ಇದು ತೋರಿಸುತ್ತದೆ. ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಕವಿಗೆ ಮಹಾಕವಿಗಿಂತ ಮೇಲಿನ ಸ್ಥಾನವನ್ನು ಪಡೆಯಲು ಇದು ವಿಷಯವನ್ನು, ಮಾರ್ಗವನ್ನು ಒದಗಿಸುವುದು ಎಂದು ಗುರುತಿಸಿದ್ದಾನೆ. ಒಟ್ಟಾರೆಯಾಗಿ ಈ ಕಾವ್ಯವು ಕವಿವೃಷಭರಿಗೆ ಶ್ರೇಷ್ಠಕವಿಗಳಿಗೆ ಬೇಕಾದ ಪಾಂಡಿತ್ಯವನ್ನು ನೀಡುವ ಕಾಮಧೇನು ಎನ್ನುವ ಅರ್ಥ ನೀಡುತ್ತದೆ.

ಕವಿರಾಜಮಾರ್ಗದಲ್ಲಿ ಮೂರು ಪರಿಚ್ಛೇದಗಳಿದ್ದು, 541 ಕಂದಪದ್ಯಗಳನ್ನೊಳಗೊಂಡ ಲಾಕ್ಷಣಿಕ ಕೃತಿಯಾಗಿದೆ. ಕವಿರಾಜಮಾರ್ಗ ಹೆಸರೇ ಸೂಚಿಸುವಂತೆ ಅದು ಕವಿಗಳಿಗೆ ರಾಜಮಾರ್ಗ. ಈ ವಿಶಾಲ ಅರ್ಥದ ಈ ಕೃತಿಗೆ ಮೂಲಮಾತೃಕೆ ದಂಡಿಯ ಸಂಸ್ಕೃತದ ಕಾವ್ಯಾದರ್ಶ. ಆದರೆ ಇದು ಕಾವ್ಯಾದರ್ಶದ ನೇರ ಅನುವಾದವಾಗದೇ ಕಾವ್ಯಾಲಂಕಾರದ ವಿಚಾರಗಳನ್ನೂ ಕನ್ನಡದ ವೈಶಿಷ್ಟ್ಯಗಳನ್ನೂ ತಿಳಿಸುವ ಕೃತಿಯಾಗಿದೆ. ಕೃತಿಯುದ್ದಕ್ಕೂ ಕವಿ ಶ್ರೀವಿಜಯನ ಸ್ವಂತಿಕೆ ಎದ್ದುಕಾಣುತ್ತದೆ. ಕವಿರಾಜಮಾರ್ಗದಿಂದ ಅಂದಿನ ಸಮಕಾಲೀನ ಜೀವನ ಪರಿಣತಿಯ ಚಿತ್ರ ದೊರೆಯುವಂತೆಯೇ ಅದಕ್ಕಿಂತ ಹಿಂದಿನ ಸಾಹಿತ್ಯ ಪರಂಪರೆಯ ಸೂಚನೆಯೂ ಸಾಕಷ್ಟು ದೊರೆಯುತ್ತದೆ. ಇದರಿಂದಾಗಿ ಈ ಕೃತಿಯು ಕನ್ನಡ ಸಾಹಿತ್ಯದ ಕತ್ತಲು ಯುಗದ ದಾರಿದೀಪವಾಗಿ ಮುಂದಿನ ಸಾಹಿತ್ಯದ ರಾಜಮಾರ್ಗವಾಗಿ ಕಾಣಿಸುತ್ತದೆ.

ಕವಿರಾಜಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ. ಅವುಗಳಲ್ಲಿಯ ವಿಷಯಗಳು:

  • ಪ್ರಥಮ ಪರಿಚ್ಛೇದ: ದೋಷಾದೋಷಾನುವರ್ಣನಾ ನಿರ್ಣಯಂ
  • ದ್ವಿತೀಯ ಪರಿಚ್ಛೇದ: ಶಬ್ದಾಲಂಕಾರ ವರ್ಣನಾ ನಿರ್ಣಯಂ
  • ತೃತೀಯ ಪರಿಚ್ಛೇದ: ಅರ್ಥಾಲಂಕಾರ ಪ್ರಕರಣಂ

‘ದೋಷಾದೋಷಾನುವರ್ಣನಾ ನಿರ್ಣಯಂ’ ಎಂಬ ಮೊದಲ ಪರಿಚ್ಛೇದದಲ್ಲಿ ಕಾವ್ಯರಚನೆಯಲ್ಲಿ ಸಂಭವಿಸಬಹುದಾದ ದೋಷಗಳು ಮತ್ತು ಅವುಗಳ ಪರಿಹಾರವನ್ನು ನಿರೂಪಿಸಲಾಗಿದೆ. ‘ಶಬ್ದಾಲಂಕಾರವರ್ಣನಾ ನಿರ್ಣಯಂ’ ಎಂಬ ಎರಡನೆಯ ಪರಿಚ್ಛೇದದಲ್ಲಿ ಶಬ್ದಗಳನ್ನು ಪ್ರಯೋಗಿಸುವ ರೀತಿ, ಅವು ಕಾವ್ಯಕ್ಕೆ ಅಲಂಕಾರಪ್ರಾಯವಾಗುವ ವಿಧಾನ, ದಕ್ಷಿಣೋತ್ತರ ಮಾರ್ಗ, ಪ್ರಾಸ ಇತ್ಯಾದಿ ವಿಚಾರಗಳಿವೆ. ಮೂರನೆಯ ‘ಅರ್ಥಾಲಂಕಾರ ಪ್ರಕರಣಂ’ ಪರಿಚ್ಛೇದದಲ್ಲಿ ಮೂವತ್ತಾರು ಅರ್ಥಾಲಂಕಾರಗಳನ್ನು ಹೇಳಲಾಗಿದೆ. ಒಟ್ಟು ಮೂರು ಪರಿಚ್ಛೇದಗಳ ವಿಷಯ ನಿರೂಪಣೆಗಾಗಿ ದಂಡಿಯ ಕಾವ್ಯಾದರ್ಶ ಮತ್ತು ಭಾಮಹನ ಕಾವ್ಯಾಲಂಕಾರ ಗ್ರಂಥಗಳನ್ನು ಅನುಸರಿಸಿದ್ದರೂ ಸ್ವತಂತ್ರ ವಿಚಾರಗಳಿಗೇನೂ ಕೊರತೆ ಇಲ್ಲ. ಹೀಗಾಗಿ ಇದನ್ನು ಸ್ವತಂತ್ರ ಕೃತಿಯೆಂಬಂತೆ ಶ್ರೀವಿಜಯ ರಚಿಸಿರುವುದು ಆತನ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.

ಕವಿರಾಜಮಾರ್ಗದ ಮಹತ್ವ:

ಕವಿರಾಜಮಾರ್ಗವು ಕಾವ್ಯಮೀಮಾಂಸೆಯ ವಿಚಾರಗಳನ್ನೊಳಗೊಂಡ ಶಾಸ್ತ್ರಕೃತಿಯಾಗಿದೆ. ಅಲ್ಲದೇ ಭಾಷೆ, ಸಾಹಿತ್ಯ ಮತ್ತು ನಾಡಿನ ಬಗ್ಗೆ ವಿವರಗಳನ್ನೊದಗಿಸುವ ಕೃತಿಯೆಂದು ಕವಿರಾಜಮಾರ್ಗಕ್ಕೆ ಮಹತ್ವ ಬಂದಿದೆ. ಕವಿರಾಜಮಾರ್ಗದ ಮೊದಲ ಪರಿಚ್ಛೇದದಲ್ಲಿ ಕಾವ್ಯಮೀಮಾಂಸೆಗೆ ಸಂಬಂಧಪಟ್ಟಂತೆ ಕಾವ್ಯಲಕ್ಷಣ, ಕವಿವರ್ಗ, ಕಾವ್ಯದೋಷಗಳನ್ನು ಹೇಳುವ ಸಂದರ್ಭದಲ್ಲಿ ಕನ್ನಡನಾಡು, ಕನ್ನಡ ಜನ, ಕನ್ನಡ ಭಾಷೆಯ ಸ್ಥಿತಿ, ಪೂರ್ವ ಕವಿಕಾವ್ಯ ವಿಚಾರ ಇತ್ಯಾದಿ ವಿವರಗಳ ವರ್ಣನೆ ಬಂದಿದೆ.

ಕಾವೇರಿಯಿಂದಮಾ ಗೋ

ದಾವರಿವರಮರ‍್ದ ನಾಡದಾ ಕನ್ನಡದೋಳ್

ಭಾವಿಸಿದ ಜನಪದಂ ವಸು

ಧಾವಲಯ ವಿಲೀನ ವಿಶದ ವಿಷಯ ವಿಶೇಷಂ ||ಬ||                         

ಕನ್ನಡ ನಾಡಿನ ಸೀಮೆ, ಕನ್ನಡ ನಾಡವರ ಕಾವ್ಯ ಪ್ರಯೋಗ ಪರಿಣತಿ, ಲೌಕಿಕ-ಸಾಮಯಿಕ, ಗದ್ಯಕಥೆ, ಚತ್ತಾಣ-ಬೆದಂಡೆಗಬ್ಬ ಕಾವ್ಯ ಪ್ರಕಾರಗಳು, ಗದ್ಯ-ಪದ್ಯ ಕವಿಗಳು, ಕನ್ನಡದ ತಿರುಳು, ದಕ್ಷಿಣೋತ್ತರ ಮಾರ್ಗಗಳು ಪ್ರಾದೇಶಿಕ ಭಿನ್ನತೆ ಮೊದಲಾದ ವಿಷಯಗಳನ್ನು ಗುರುತಿಸಿದ್ದಾನೆ. ಭಾಷೆಯ ಬಗೆಗೆ ಹೇಳಿದ ಕವಿ ಕನ್ನಡ ನಾಡಿನ ವಿಸ್ತಾರವನ್ನು ಅಲ್ಲಿನ ಜನಪದವನ್ನು ಬಣ್ಣಿಸಿದ್ದಾನೆ. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ ನಾಡೇ ಕನ್ನಡ ನಾಡು. ಈ ನಾಡಿನಲ್ಲಿ ವಾಸಿಸುವವರು ಕನ್ನಡ ಜನಪದರು. ಭೂಮಂಡಲದಲ್ಲಿಯೇ ಇದು ವಿಶೇಷವಾದ ನಾಡು. ಕಿಸುವೊಳಲು (ಪಟ್ಟದಕಲ್ಲು), ಕೋಪಣನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಂಕುಂದ (ಒಕ್ಕುಂದ)ಗಳ ನಡುವಿನ ನಾಡೇ ತಿರುಳ್ಗನ್ನಡ (ಅಚ್ಚಗನ್ನಡ) ಪ್ರದೇಶ. ಇಲ್ಲಿನ ಜನ ತಿಳಿದು ಮಾತನಾಡಬಲ್ಲ, ಮಾತನಾಡಿದುದನ್ನು ಅರಿತು ನೋಡಬಲ್ಲ ಚತುರರು. ಕುರಿತು ಓದದೇ ಇದ್ದರೂ ಕಾವ್ಯ ಪ್ರಯೋಗ ಪರಿಣತಮತಿಗಳಾಗಿದ್ದರು.

ಕವಿರಾಜಮಾರ್ಗದ ವಿಶ್ಲೇಷಣೆ: 

ಕನ್ನಡ ಭಾಷೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ನಾಲ್ಕು ಘಟ್ಟಗಳಲ್ಲಿ ವಿಭಜಿಸಲಾಗಿದೆ. ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ. ಈ ವಿಭಜನೆಗೆ ಕಾಲಮಿತಿಯ ಗೆರೆ ಎಳೆದು ತೋರಿಸುವುದು ಕಷ್ಟವಾದರೂ ಆಯಾ ಕಾಲಘಟ್ಟದ ಕೃತಿಗಳನ್ನು ಒಂದೆಡೆ ಸ್ಥೂಲವಾಗಿ ಅಭ್ಯಸಿಸಲು ಅನುಕೂಲವಾಗುತ್ತದೆ. ಕವಿರಾಜಮಾರ್ಗವು ಪೂರ್ವದ ಹಳಗನ್ನಡ ಕಾಲಘಟ್ಟದ ಪ್ರಮುಖ ಕೃತಿಯಾಗಿದ್ದು, ಆ ಕಾಲದ ಭಾಷೆಯ ವಿವರಗಳನ್ನು ಇದು ನೀಡುತ್ತದೆ.

ಪ್ರಸ್ತುತ ಗ್ರಂಥದಲ್ಲಿ ಭಾಷೆಯ ಮಹತ್ವ, ಪ್ರಯೋಜನ, ಕಾವ್ಯರಚನಾ ಸಾಮರ್ಥ್ಯ, ನಾಡಿನ ವಿಸ್ತಾರ ಮತ್ತು ಕನ್ನಡಿಗರ ಗುಣ-ಸ್ವಭಾವಗಳ ನೈಜ ಚಿತ್ರಣವಿದೆ. ಪ್ರಾರಂಭದಲ್ಲಿ ಕವಿ ಶ್ರೀವಿಜಯ ಭಾಷೆಗೆ ಸಂಬಂಧಿಸಿದ ತನ್ನ ವಿಚಾರಗಳನ್ನು ಪ್ರಸ್ತಾಪಿಸಿದ್ದಾನೆ. ಸಾಮಾನ್ಯವಾಗಿ ಜೀವಿಸುವ ಪ್ರಾಣಿ-ಪಕ್ಷಿಗಳು ತಮ್ಮ ದೈನಂದಿನ ವ್ಯವಹಾರಕ್ಕಾಗಿ ಕೆಲವು ಸಂಕೇತಗಳನ್ನು ಮೈಗೂಡಿಸಿಕೊಂಡಿರುತ್ತವೆ. ಇವು ಆಂಗಿಕ ಇಲ್ಲವೇ ಧ್ವನಿ ಸಂಕೇತಗಳಾಗಿದ್ದು, ಅವನ್ನೇ ವಿಶಾಲಾರ್ಥದಲ್ಲಿ ಭಾಷೆ ಎಂದು ಗುರುತಿಸಲಾಗುತ್ತಿದೆ. ಇಲ್ಲಿನ ಸಂಕೇತಗಳಿಗೆ ಭಾವನೆ, ವಿಚಾರಗಳು ಸೇರಿದರೆ ಮಾತಾಗುತ್ತದೆ. ಈ ಮಾತಿನಿಂದಾಗಿ ಮನುಷ್ಯನು ತಾನು ಪ್ರಾಣಿಗಳಿಗಿಂತ ಭಿನ್ನನಾಗಿದ್ದಾನೆ. ಭಾಷೆಯಿಂದ ಬುದ್ಧಿ, ಬುದ್ಧಿಯಿಂದ ವಿಚಾರ ಮಾಡುವ ಶಕ್ತಿ ಮನುಷ್ಯನಿಗೆ ಪ್ರಾಪ್ತವಾಯಿತು. ಇದರಿಂದ ಇದು ಗುಣ ಇದು ದೋಷ ಎಂಬ ಅರಿವು ಬಂದಿತು. ಈ ಅರಿವು ಮನುಷ್ಯನಿಗೆ ಸಹಜವಾಗಿ ದೊರೆತ ಸಂಸ್ಕಾರ ಎಂದು ಕವಿರಾಜಮಾರ್ಗಕಾರ ಭಾವಿಸಿದ್ದಾನೆ. ಭಾಷೆಯ ಬಗೆಗಿನ ಈ ನಿಲುವು ಆ ಕಾಲದ ಭಾರತೀಯ ವಿದ್ವಾಂಸರ ವಿಚಾರಗಳಿಗಿಂತ ಭಿನ್ನವಾಗಿದ್ದು, ಅದರ ಸಹಜ ಹುಟ್ಟಿನತ್ತ ನಮ್ಮ ಗಮನ ಸೆಳೆಯುತ್ತದೆ. ಸಹಜ ಪ್ರತಿಭೆ, ಪರಿಶುದ್ಧ ವಿದ್ಯೆ. ಸತತ ಅಭ್ಯಾಸ ಇವು ಕಾವ್ಯಸಂಪತ್ತಿಗೆ ಕಾರಣ ಎನ್ನುತ್ತಾನೆ. ಜಾಣ್ಮೆಯ ಕವಿ ಮಾತ್ರ ಛಂದೋಬದ್ಧವಾಗಿ ಕಿರಿದರಲ್ಲಿ ಹಿರಿದರ್ಥವನ್ನು ನೀಡಬಲ್ಲ. ಇಲ್ಲದಿದ್ದರೆ ಅದು ಗುಹಾಧ್ವನಿಯಂತೆ ಕೇವಲ ಪ್ರತಿಧ್ವನಿಯಾಗುತ್ತದೆ. ಇಲ್ಲೆಲ್ಲ ಕವಿರಾಜಮಾರ್ಗಕಾರ ಕಾವ್ಯ ರಚನೆಗೆ ಕಾರಣ, ಅದರ ಪ್ರಯೋಜನ, ಭಾಷೆಯ ಬಳಕೆ, ಆ ಕುರಿತಾದ ಎಚ್ಚರ ಮತ್ತು ಒಳ್ಳೆಯ ಕವಿ ಯಾರು – ಇತ್ಯಾದಿ ಅಂಶಗಳನ್ನು ತುಂಬ ಅರ್ಥಗರ್ಭಿತವಾಗಿ ವಿವೇಚಿಸಿದ್ದಾನೆ.       

ಗದ್ಯಕಥೆಯಂತೆ `ಚತ್ತಾಣ’ `ಬೆದಂಡೆ’ ಎರಡು ಕಾವ್ಯ ರೂಪಗಳನ್ನು ಕವಿರಾಜಮಾರ್ಗಕಾರ ಹೆಸರಿಸುತ್ತಾನೆ.

ನುಡಿಗೆಲ್ಲಂ ಸಲ್ಲದಕ

ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ

ಗಡಿನ ನೆಗೆಮ್ತಿಯ ಕಬ್ಬದೊ

ಳೊಡಂಬಡಂ ಮಾಡಿದರ್ ಪುರಾತನ ಕವಿಗಳ್

ಕಂದಗಳೂ, ವೃತ್ತಗಳೂ, ಬೆಡಂಗೊಂದಿ ಸುಂದರಿ ರೂಪಿನಿಂದ ಬಂದರೆ ಅದು ಬೆದಂಡೆ, ಕಂದಗಳು, ಹಲವು ಬಂದು ಅವುಗಳ ನಡುನಡುವೆ ಸುಂದರವಾದ ಕನ್ನಡ ವೃತ್ತಗಳಾದ ಅಕ್ಕರ, ಚೌಪದಿ, ಗೀತಿಕೆ, ತ್ರಿಪದಿಗಳು ಬಂದರೆ `ಚತ್ತಾಣ’. ಇಲ್ಲಿ ಪ್ರಸ್ತಾಪಿಸಿರುವ ಚತ್ತಾಣ-ಬೆದಂಡೆಗಳೆರಡೂ ಪದ್ಯ ಕಾವ್ಯಗಳೇ. ಇವುಗಳ ರಚನಾ ವಿಧಾನವನ್ನು ನೋಡಿದರೆ ಇವುಗಳಲ್ಲಿ ಮೊದಲನೆಯದು ಓದುಗಬ್ಬವಾಗಿಯೂ, ಎರಡನೆಯದು ಹಾಡುಗಬ್ಬವಾಗಿಯೂ ಇದ್ದಿರಬೇಕೆಂದು ತೋರುತ್ತದೆ.

ಪೂರ್ವಕವಿಗಳ ಪಟ್ಟಿ:     

ಕವಿರಾಜಮಾರ್ಗಕಾರನು ‘ಚಿರಂತನಾಚರ‍್ಯರ್ಕಳ್’, `ಪುರಾತನ ಕವಿಗಳ್’ ‘ಕವಿವೃಕ್ಷಭರ್’ ‘ಕವಿ ಪ್ರಧಾನರ್’ ‘ಪುರಾಣ ಕವಿಗಳ್’ ‘ಪೂರ್ವಚಾರ್ಯರ್’ ಮುಂತಾದ ಮಾತುಗಳನ್ನು ಬಳಸಿರುವುದನ್ನು ನೋಡಿದರೆ ಆತನಿಗಿಂತಲೂ ಪೂರ್ವದಲ್ಲಿ ವಿಪುಲವಾದ ಸಾಹಿತ್ಯ ಕೃತಿಗಳು ಸೃಷ್ಟಿಯಾಗಿದ್ದಿರಬೇಕೆಂದು ತೋರುತ್ತದೆ. ಇದಕ್ಕೆ ತಕ್ಕಂತೆ ಕವಿ ತನ್ನ ಕಾವ್ಯದ ನಿಯಮಗಳಿಗೆ ಲಕ್ಷ್ಯವಾಗಬಲ್ಲ ಗದ್ಯ, ಪದ್ಯ ಕಾವ್ಯಗಳನ್ನು ಬರೆದ ಕವಿಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾನೆ.

ವಿಮಳೋದಯ ನಾಗಾರ್ಜುನ

ಸಮೇತ ಜಯಬಂಧು ದುರ್ವಿನೀತಾದಿಗಳೀ

ಕ್ರಮದೊಳ್ ನೆಗೆಮ್ವಿ ಗದ್ಯಾ

ಶ್ರಮ ಪದ ಗುರುತಾಪ್ರತೀತಿಯಂ ಕಯ್ಕಂಡರ್

ವಿಮಳ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತ, – ಇವರು ಗದ್ಯ ರಚನೆಯಲ್ಲಿ ಅತ್ಯಂತ ಪರಿಶ್ರಮವುಳ್ಳವರು. ಈ ಪಟ್ಟಿಯನ್ನು ಕೊಡುವುದಕ್ಕೂ ಪೂರ್ವದಲ್ಲಿಯೇ ‘ಅಗಣಿತಗುಣ’ ಗದ್ಯ ಪದ್ಯ ಸಮ್ಮಿಶ್ರಿತವಾದ ಗದ್ಯಕಥೆಯ ವಿಚಾರ ಬಂದಿದೆ. ಕವಿಗೆ ಗೊತ್ತಿರಬೇಕಾದ ‘ವಸ್ತು ವಿಸ್ತಾರ’ ವಿಚಾರ ಕವಿರಾಜಮಾರ್ಗ ಕಾವ್ಯದಲ್ಲಿದೆ. ಇದು ಹೆಮ್ಮೆಯ ವಿಷಯ. ಹೀಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ್ಯವೂ ಅಮೂಲ್ಯವಾದ ಈ ಕೃತಿಯು ಪೂರ್ವದ ಹಳಗನ್ನಡ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದ್ದು, ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.

*ಲೇಖಕರು ಶಿಗ್ಗಾಂವಿಯ ಎಸ್.ಆರ್.ಜಿ.ವಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕನ್ನಡ ಮಹಿಳಾ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ’ ವಿಷಯದಲ್ಲಿ ಕರ್ನಾಟಕ ವಿವಿಯಿಂದ ಪಿಎಚ್.ಡಿ. ಪಡೆದಿದ್ದು ಕಥೆ, ಕಾದಂಬರಿ, ಲಲಿತಪ್ರಬಂಧ, ನಾಟಕ, ಕವನಗಳನ್ನು ರಚಿಸಿದ್ದಾರೆ.

 

 

Leave a Reply

Your email address will not be published.