ಕನ್ನಡದ ಮೊದಲ ಮಹಾಪುರಾಣ ‘ಚಾವುಂಡರಾಯ ಪುರಾಣಂ’

-ಡಾ.ತಿಪ್ಪೇರುದ್ರ ಸಂಡೂರು

ಕನ್ನಡ ಸಾಹಿತ್ಯದ ಆರಂಭದ ಗದ್ಯಕೃತಿಗಳಲ್ಲಿ ಚಾವುಂಡರಾಯ ಪುರಾಣವು ಮಹತ್ವದ ಗ್ರಂಥವಾಗಿದ್ದು, ಜೈನ ಧರ್ಮದ ಪುರಾಣಗಳ ಸಮಸ್ತ ತೀರ್ಥಂಕರರ ವಿವರಗಳನ್ನು ನೀಡಿದ ಮೊದಲ ಕೃತಿ ಎನ್ನುವ ಹೆಗ್ಗಳಿಕೆ ಈ ಕೃತಿಗಿದೆ.

 

ಕನ್ನಡ ಸಾಹಿತ್ಯ ಚರಿತ್ರೆಯನ್ನೊಮ್ಮೆ ಅವಲೋಕಿಸಿದಾಗ ಹತ್ತನೆಯ ಶತಮಾನವನ್ನು ‘ಸುವರ್ಣಯುಗ’ ಎಂದು ಗುರುತಿಸಲಾಗಿದೆ. ಈ ಶತಮಾನದಲ್ಲಿ ರಚನೆಯಾದ ಕೃತಿಗಳಲ್ಲಿ ಗದ್ಯಕೃತಿಗಳು ವಿರಳವಾಗಿದ್ದು, ಅಂತಹ ಅಪರೂಪದ ಕೃತಿಗಳಲ್ಲಿ ಚಾವುಂಡರಾಯನು ರಚಿಸಿದ ‘ತ್ರಿಷಷ್ಠಿಲಕ್ಷಣಮಹಾಪುರಾಣ’ ಎಂಬ ಚಾವುಂಡರಾಯ ಪುರಾಣವು ಒಂದು ಮಹತ್ವದ ಗದ್ಯಗ್ರಂಥವಾಗಿದೆ. ಹಳಗನ್ನಡದಲ್ಲಿ ರಚಿತವಾದ ವೈಶಿಷ್ಟö್ಯಪೂರ್ಣ ಗದ್ಯಶೈಲಿಯಿಂದ ಓದುಗರ ಮನಸೆಳೆದ ಕೃತಿಯಿದು. ಜಿನಸೇನರು ಮತ್ತು ಗುಣಭದ್ರರು ಸಂಸ್ಕೃತದಲ್ಲಿ ಶ್ಲೋಕ ರೂಪದಲ್ಲಿ ಬರೆದ ಮಹಾಪುರಾಣವೇ ಇದರ ಆಕರ ಕೃತಿಯಾಗಿದ್ದು, ಈ ಕೃತಿಯ ಕಾಲವನ್ನು ಕ್ರಿ.ಶ.ಸು.978 ಎಂದು ನಿರ್ಧರಿಸಲಾಗಿದೆ.

ಚಾವುಂಡರಾಯನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಕನಾಗಿ ಪ್ರಸಿದ್ಧನಾಗಿರುವಂತೆ ಪ್ರಸಿದ್ಧ ಸಾಹಿತಿಯೂ ಆಗಿದ್ದಾನೆ. ಈತನು ಗೋವಿಂದಮಯ್ಯನ ಮೊಮ್ಮಗನೂ, ಮಾಬಲಯ್ಯನ ಮಗನೂ ಆಗಿದ್ದನು. ಈತನ ತಾಯಿ ಕಾಳಲಾದೇವಿ. ಹೆಂಡತಿ ಅಜಿತಾದೇವಿ. ಮಗ ಜಿನದೇವಣ, ತಮ್ಮ ನಾಗವರ್ಮ. ಅಜಿತಸೇನ ಭಟ್ಟಾರಕರು ಹಾಗೂ ಆಚಾರ್ಯ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳು ಚಾವುಂಡರಾಯನ ಗುರುಗಳು. ಈತನಿಗೆ ಅಣ್ಣ, ರಾಯ, ಚಾವುಂಡಯ್ಯ, ಚಾಮುಂಡರಾಯ, ಚಾಮುಂಡರಾಜ ಎನ್ನುವ ಪರ್ಯಾಯ ಹೆಸರುಗಳಿದ್ದವು. ಗಂಗ ಮನೆತನದ ಅರಸರಾದ ಮಾರಸಿಂಹ, ರಾಚಮಲ್ಲ ಹಾಗೂ ರಕ್ಕಸಗಂಗ ರಾಚಮಲ್ಲ ಇವರ ಆಡಳಿತಾವಧಿಯಲ್ಲಿ ಮಂತ್ರಿ ಹಾಗೂ ಸೇನಾಧಿಕಾರಿಯಾಗಿದ್ದನು. ಸಮರಪರಶುರಾಮನುಂ, ಪ್ರತಿಪಕ್ಷರಾಕ್ಷಸನುಂ, ಸುಭಟ ಚೂಡಾಮಣಿಯುಂ ಎನ್ನುವ ಬಿರುದುಗಳನ್ನು ಹೊಂದಿದ್ದ ಚಾವುಂಡರಾಯನು ಶ್ರವಣಬೆಳಗೊಳದ ಜಗದ್ವಿಖ್ಯಾತ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾನೆ. ಕವಿಯೂ, ಕಲಿಯೂ ಆಗಿದ್ದ ಈತನು ಸಾಹಿತ್ಯಕವಾಗಿ ಕೃತಿಗಳನ್ನು ರಚಿಸಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾನೆ.

ಜೈನಧರ್ಮದಲ್ಲಿ ಅರುವತ್ತುಮೂರು ಮಹಾವ್ಯಕ್ತಿಗಳು ಪೂಜ್ಯನೀಯರಾಗಿದ್ದು, ಇವರ ಕಥೆಗಳನ್ನು ಸಂಸ್ಕೃತ ಮಹಾಪುರಾಣದ ಸಂಪ್ರದಾಯವನ್ನು ಅನುಸರಿಸಿ ವಿಸ್ತಾರವಾದ ಮಹಾಪುರಾಣವನ್ನು ಕನ್ನಡದಲ್ಲಿ ಗದ್ಯಪ್ರಕಾರದಲ್ಲಿ ಬರೆದ ಮೊದಲ ಕವಿ ಚಾವುಂಡರಾಯ. ಈತನ ‘ತ್ರಿಷಷ್ಟಿ ಲಕ್ಷಣ ಮಹಾಪುರಾಣ’ವು ‘ಚಾವುಂಡರಾಯ ಪುರಾಣ’ ಎಂದು ಜನಪ್ರಿಯವಾಗಿದೆ. ಅರವತ್ತೂö್ಮರು ಮಹಾಪುರುಷರ ಜೀವನಕಥೆಗಳನ್ನು ವಿವರಿಸುವ ಈ ಕೃತಿಯು ಸಂಸ್ಕೃತ ಜೈನಪುರಾಣಗಳ ಕಥೆಗಳನ್ನು ಸಮಗ್ರವಾಗಿ ಕನ್ನಡಕ್ಕೆ ಮೊದಲಬಾರಿಗೆ ಗದ್ಯದಲ್ಲಿ ತಂದುಕೊಟ್ಟಿದ್ದರಿAದ ಐತಿಹಾಸಿಕ ಮಹತ್ವವಿದೆ. ಪುರಾತನವಾದದ್ದನ್ನು ಪುರಾಣವೆಂದು ಕರೆಯುತ್ತಾರೆ. ಜೈನಧರ್ಮದಲ್ಲಿನ ಪುರಾಣವು ತೀರ್ಥಂಕರರAತಹ ಮಹಾನ್ ವ್ಯಕ್ತಿಗಳ ಗರ್ಭಾವತರಣ, ಜನ್ಮಾಭೀಷೇಕ, ಪರಿನಿಷ್ಕçಮಣ, ಕೇವಲ ಜ್ಞಾನ, ಪರಿನಿರ್ವಾಣ ಎನ್ನುವ ಪಂಚಕಲ್ಯಾಣಗಳ ವರ್ಣನೆಯನ್ನು, ಭವಾವಳಿಗಳ ಕಥೆಗಳನ್ನು, ಉಪದೇಶಗಳು, ತತ್ವಗಳನ್ನು ಒಳಗೊಂಡಿರುವುದರಿAದ ಮಹಾಪುರಾಣವೆನಿಸಿಕೊಳ್ಳುತ್ತದೆ.

ಜೈನಧರ್ಮದ ತತ್ವಗಳನ್ನು ಅನುಸರಿಸಿ ಸಂಸಾರದಿOದ ವಿಮುಕ್ತರಾಗಿ, ಶಾಶ್ವತ ಸುಖ ಪಡೆದಂತಹ ಈ ಕೆಳಕಂಡ ಇಪ್ಪತ್ತಾö್ನಲ್ಕು ಜನ ತೀರ್ಥಂಕರರು, ಹನ್ನೆರಡು ಜನ ಚಕ್ರವರ್ತಿಗಳು, ಒಂಬತ್ತು ಜನ ವಾಸುದೇವರು, ಒಂಬತ್ತು ಜನ ಬಲದೇವರು, ಒಂಬತ್ತು ಜನ ಪ್ರತಿವಾಸುದೇವರ ಚರಿತ್ರೆಯನ್ನು ತಿಳಿಸುವುದಕ್ಕಾಗಿ ರಾಯನು ಈ ಕೃತಿ ಬರೆದಿದ್ದಾನೆ.

ತೀರ್ಥಂಕರರು

1.ವೃಷಭ 2. ಅಜಿತ 3. ಶಂಭವ 4. ಅಭಿನಂದನ 5. ಸುಮತಿ 6. ಪದ್ಮಪ್ರಭ 7. ಸುಪಾಶ್ರö್ವ 8. ಚಂದ್ರಪ್ರಭ 9. ಪುಷ್ಟದಂತ 10. ಶೀತಲ 11. ಶ್ರೇಯಾಂಸ 12. ವಾಸುಪೂಜ್ಯ 13. ವಿಮಲ 14. ಅನಂತ 15. ಧರ್ಮ 16. ಶಾಂತಿ 17. ಕುಂಥು 18. ಅರ 19. ಮಲ್ಲಿ 20. ಮುನಿಸುವ್ರತ 21. ನಮಿ 22. ನೇಮಿ 23. ಪಾಶ್ವ 24. ವರ್ಧಮಾನ

ಚಕ್ರವರ್ತಿಗಳು

1.ಭರತ 2. ಸಗರ 3. ಮಘವ 4. ಸನತ್ಕುಮಾರ5. ಶಾಂತಿ 6. ಕುಂಥು 7. ಅರ 8. ಸುಭೌಮ 9. ಮಹಾಪದ್ಮ 10. ಹರಿಷೇಣ 11. ಜಯಸೇನ 12. ಬ್ರಹ್ಮದತ್ತ

ಬಲದೇವರು

1.ವಿಜಯ 2. ಅಚಲ 3. ಧರ್ಮಪ್ರಭ 4. ಸುಪ್ರಭ 5. ಸುದರ್ಶನ 6. ನಂದಿಸೇಣ 7. ನಂದಿಮಿತ್ರ 8. ರಾಮಚಂದ್ರ 9. ಪದ್ಮ

ವಾಸುದೇವರು

1.ತ್ರಿಪುಷ್ಠ 2. ದ್ವಿಪುಷ್ಠ 3. ಸ್ವಯಂಭೂ 4. ಪುರುಷೋತ್ತಮ 5. ನರಸಿಂಹ 6. ಪುಂಡರೀಕ 7. ದತ್ತದೇವ 8. ಲಕ್ಷö್ಮಣ 9. ಕೃಷ್ಣ

ಪ್ರತಿವಾಸುದೇವರು

1.ಅಶ್ವಗ್ರೀವ 2. ತಾರಕ 3. ಮೇರಕ 4. ನಿಕುಂಭ 5. ಮಧುಕೈಟಭ 6. ಪ್ರಹ್ಲಾದ 7. ಬಲಿ 8. ರಾವಣ 9. ಜರಾಸಂಧ ಸಂಸ್ಕೃತದಲ್ಲಿ ಶ್ಲೋಕರೂಪದಲ್ಲಿರುವ ಮಹಾಪುರಾಣವು ಕನ್ನಡದಲ್ಲಿ ಗದ್ಯಪ್ರಕಾರದಲ್ಲಿದೆ. ಚಾವುಂಡರಾಯ ಪುರಾಣವು ಮುಖ್ಯವಾಗಿ ಗದ್ಯದಲ್ಲಿದ್ದರೂ ಕನ್ನಡದ ಕಂದಪದ್ಯಗಳು ಹಾಗೂ ವಿವಿಧ ವೃತ್ತಗಳಿವೆ.

ಗಾಹೆ: ಉಪಸಪ್ಪಣಿ ಅವಸಪ್ಪಿಣಿ ಸಮಯಾವಳಿಯಾಸು ಣಿರವ ಸೇಸಾಸು |

ಜಾದೋ ಮುದೋ ಯ ಬಹುಸೋ ಹಿಂಡAತೋ ಕಾಳ ಸಂಸಾರೇ || 112 ||

[ಅವಸರ್ಪಿಣಿಯ ಮತ್ತು ಉತ್ಸರ್ಪಿಣಿಯ ನಿಶ್ಶೇಷವಾದ ಸಮಯ ಸಂತಾನಗಳಲ್ಲಿ ಜೀವನು ಹಲವು ಸರಿ ಹುಟ್ಟಿದ್ದಾನೆ ಮತ್ತು ಸತ್ತಿದ್ದಾನೆ – ಹೀಗೆ ಕಾಲಸಂಸಾರದಲ್ಲಿ ಅಲೆದಾಡಿದ್ದಾನೆ.] ಭಗವತೀ ಆರಾಧನೆಯ ಟೀಕೆಯಲ್ಲಿ ಬರುವ ಈ ಗಾಹೆಯನ್ನು ‘ಮುನಿಸುವ್ರತ ಪುರಾಣ’ದ ಕಾಲಸಂಸಾರ ವಿಚಾರವನ್ನು ತಿಳಿಸುವಾಗ ಬಳಸಿದ್ದಾನೆ. ಹೀಗೆ ಮಹಾಪುರುಷರ ಚರಿತ್ರೆಯನ್ನು ವಿವರಿಸುವಾಗ ಸಾಂದರ್ಭಿಕವಾಗಿ 12 ಗಾಹೆಗಳನ್ನು ಈ ಕೃತಿಯಲ್ಲಿ ಚಾವುಂಡರಾಯನು ಉಲ್ಲೇಖಿಸಿದ್ದಾನೆ.

ಕನ್ನಡ ಭಾಷೆಯ ಜೊತೆಗೆ ಸಂಸ್ಕೃತ ಭಾಷೆಯ ಮೇಲೆ ಪಾಂಡಿತ್ಯವನ್ನು ಹೊಂದಿದ್ದ ರಾಯನು ಜಿನಸೇನ, ಭೂಪಾಲಕವಿ, ಜಟಾಸಿಂಹನAದಿ ಮೊದಲಾದ ಕವಿಗಳ ಶ್ಲೋಕಗಳನ್ನು ಹಾಗೂ ಸ್ವತಃ ರಚಿಸಿದ 12 ಶ್ಲೋಕಗಳು ಸೇರಿದಂತೆ 50 ಸಂಸ್ಕೃತ ಶ್ಲೋಕಗಳನ್ನು ಈ ಕೃತಿಯಲ್ಲಿ ಬಳಸಿದ್ದಾನೆ. ಓದುಗರು ಈ ಕೃತಿಯನ್ನು ಓದುವಾಗ ಗದ್ಯದ ಏಕತಾನತೆಯನ್ನು ಪರಿಹರಿಸುವ ಸಲುವಾಗಿ ಸಂಸ್ಕೃತ ಶ್ಲೋಕಗಳನ್ನು ಬಳಸಿಕೊಂಡಿರುವುದನ್ನು ಕಾಣಬಹುದು.

ಶ್ಲೋಕ:

ಧರ್ಮಾರ್ಥ ಕಾಮ ಮೋಕ್ಷಾಃ ಸಮ್ಯಗ್ದೃಷ್ಟೀಷು ಪರಸ್ಪರಾನುಗುಣಾಃ|

ಸಂಸಾರಹೇತುಭೂತಾ ಮಿಥ್ಯಾದೃಷ್ಟಿಷು ವಿರುದ್ಧತ್ವಾತ್ || 52 ||

[ಧರ್ಮ, ಅರ್ಥ, ಕಾಮ, ಮೋಕ್ಷಗಳು-(ಅನುಭವಿಸಲು ಬಲ್ಲ) ಸಮ್ಯಗ್ದೃಷ್ಟಿಗೆ ಪರಸ್ಪರ ಅನುಕೂಲಗಳು. ಸಂಸಾರಕ್ಕೆ ಕಾರಣಭೂತವಾದ ಮಿಥ್ಯಾದೃಷ್ಟಿಗಳಿಗೆ ಇವೇ (ವಿರುದ್ಧತ್ವದಿಂದ) ಪ್ರತಿಕೂಲಗಳು]

ಚಾವುಂಡರಾಯ ಪುರಾಣದಲ್ಲಿ ರಾಯನು ಅಲ್ಲಲ್ಲಿ ಕಂದಪದ್ಯಗಳು, ಮತ್ತೇಭವಿಕ್ರೀಡಿತ, ಚಂಪಕಮಾಲೆ, ಉತ್ಪಲಮಾಲೆ, ಮಹಾಸ್ರಗ್ಧರಾ, ಅರ್ಧಸಮವೃತ್ತ, ವಸಂತತಿಲಕA, ಉಪೇಂದ್ರವಜ್ರO ಮೊದಲಾದ ವೃತ್ತಗಳು ಗದ್ಯಕ್ಕೆ ಪೂರಕವಾಗಿ ಬಂದಿರುವುದರಿOದ ಈ ಕೃತಿಗೆ ವಿಶೇಷ ಮೆರಗನ್ನು ನೀಡಿವೆ.

ಸುರಲೋಕ ರಾಜ್ಯಸುಖಮಂ

ಸುರರಾಜ್ಯA ಕೊಳೆದು ಪುಲ್ಲದಕ್ಕಂ ಬಗೆವಂ

ತಿರೆ ಬಗೆದು ಬಿಸುಟನೆಂದೊಡೆ

ನರರಾವ ಸುಖಕ್ಕೆ ಬಯಸುವರ್ ಸಂಸ್ಕೃತಿಯA || 93 ||

ಈ ಕಂದಪದ್ಯ ಸಂಸಾರ ಸುಖದ ನಶ್ವರತೆಯನ್ನು ಅದನ್ನು ಪರಿಭವಿಸಬೇಕಾದ ರೀತಿಯನ್ನು, ಸುರಲೋಕಸುಖ, ರಾಜ್ಯಸುಖಗಳು ಕೊಳೆತ ಹುಲ್ಲಿಗೆ ಸಮಾನವೆಂದು ಬಗೆದು ಬಿಸುಟನೆಂಬ ಮಾತನ್ನು ಸುಂದರವಾಗಿ ತಿಳಿಸುತ್ತದೆ. “ಕೊಳೆತ ಹುಲ್ಲನ್ನು ಉಪೇಕ್ಷಿಸುವ ರೀತಿಯಲ್ಲಿ ಅದನ್ನು ಬಿಸುಟು ಬಿಡುವುದನ್ನು ತಿಳಿಸುವ ರೀತಿ, ಮೆಚ್ಚುಗೆಯಾಗುತ್ತದೆ. ಚಾವುಂಡರಾಯನ ಕಾವ್ಯ ಪ್ರತಿಭೆಯನ್ನು ತೋರ್ಪಡಿಸುತ್ತದೆ.”

‘ತ್ರಿಷಷ್ಟಿ ಲಕ್ಷಣ ಮಹಾಪುರಾಣ’ದಲ್ಲಿ ಅರವತ್ತೂö್ಮರು ಮಹಾಪುರುಷರ ಬದುಕನ್ನು ವೈವಿಧ್ಯಮಯವಾಗಿ ಪರಿಚಯಿಸುತ್ತದೆ. ಈ ಕೃತಿಯಲ್ಲಿ ಜೈನಧರ್ಮದ ಮೊದಲ ತೀರ್ಥಂಕರನಾದ ಆದಿನಾಥನ ಜೀವನ ಚರಿತ್ರೆ ವಿಸ್ತಾರವಾಗಿದೆ. ಪುರುದೇವ, ಆದಿದೇವ, ಋಷಭದೇವ ಎಂಬ ಹೆಸರುಗಳುಳ್ಳ ಈತನ ಪಂಚಕಲ್ಯಾಣ, ಭವಾವಳಿ, ವೈರಾಗ್ಯ ಪಡೆದ ಪ್ರಸಂಗ, ಆಹಾರ ಪಡೆದ ಘಟನೆ, ಮಡದಿ ಮಕ್ಕಳು ಇತ್ಯಾದಿ ವಿವರಗಳನ್ನು ರಾಯನು ವಿವರವಾಗಿ ತಿಳಿಸಿದ್ದಾನೆ. ಇದರ ಜೊತೆಗೆ ಶಾಂತಿಪುರಾಣ, ಮುನಿಸುವ್ರತ ಪುರಾಣ, ನೇಮಿಪುರಾಣ ಮತ್ತು ವರ್ಧಮಾನ ಪುರಾಣ ಭಾಗಗಳು ಸಹ ದೊಡ್ಡದಾಗಿವೆ. ಇನ್ನುಳಿದ ಪುರಾಣಗಳು ಸಂಕ್ಷಿಪ್ತವಾಗಿವೆ.

ಈ ಕೃತಿಯಲ್ಲಿ ಆದಿಪುರಾಣ, ಚಂದ್ರಪ್ರಭಪುರಾಣ ಬಿಟ್ಟರೆ ಉಳಿದ ತೀರ್ಥಂಕರರ ಪುರಾಣದ ಮೊದಲು ಆ ತೀರ್ಥಂಕರನನ್ನು ಸ್ತುತಿಸುವ ಕಂದಪದ್ಯವಿದೆ. ಉದಾ:

ಶ್ರೀಮದಮರೇಂದ್ರರುAದ್ರ ಶಿ

ಖಾಮಣಿ ಗಣ ಕಿರಣಜಾಲ ಜಟಿಲತ ಚರಣಂ

ಚಾಮೀಕರಾAಗರಜಿತ

ಸ್ವಾಮಿಗಳೆಮಗೀಗೆ ಮೋಕ್ಷಲಕ್ಷಿö್ಮÃ ಪದಮಂ || (ಅಜಿತ ಪುರಾಣಂ)

ಪ್ರತಿ ತೀರ್ಥಂಕರರ ಪುರಾಣದ ಕಥೆÀ ಮುಗಿಯುವಾಗ ಗದ್ಯವಿರುತ್ತದೆ. ಉದಾ: “ಇದು ಸಕಳ ಶಾಸ್ತçಸಂಯಮ ಸಂಪನ್ನ ಶ್ರೀಮದಜಿತಸೇನಭಟ್ಟಾರಕ ಚರಣಕಮಲ ಚಂಚರೀಕA ಧರ್ಮವಿಜಯ ಶ್ರೀಮಚ್ಚಾವುಂಡರಾಯ ವಿರಚಿತ ತ್ರಿಷಷ್ಠಿ ಲಕ್ಷಣ ಮಹಾಪುರಾಣದೊಳ್ ಆದಿಪುರಾಣಂ ಸಮಾಪ್ತಂ.” ಇದರ ನಂತರ ಕಥೆಯ ಮಾದರಿಯು ಶಿವಕೋಟ್ಯಾಚರ‍್ಯನ ‘ವಡ್ಡಾರಾಧನೆ’ಯ ಕೃತಿಯನ್ನು ನೆನೆಪಿಸುತ್ತದೆ. ಈ ಜಂಬೂದ್ವೀಪದ ಭರತಕ್ಷೇತ್ರದ… ಹೀಗೆ ಇಲ್ಲಿಯ ಬಹುತೇಕ ಕಥಾನಕಗಳ ಮಾದರಿ ಈ ರೀತಿ ಇದೆ.

ಜೈನಧರ್ಮ ಪ್ರತಿಪಾದನೆಯೂ ಈ ಕೃತಿಯ ಪ್ರಧಾನ ಆಶಯವಾಗಿದ್ದು, ಆದಿಪುರಾಣಂ, ಅಜಿತಪುರಾಣಂ, ಶಂಭವ ಪುರಾಣಂ, ಅಭಿನಂದನ ಪುರಾಣಂ, ಸುಮತಿ ಪುರಾಣಂ, ಪದ್ಮಪ್ರಭ ಪುರಾಣಂ, ಸುಪಾರ್ಶ್ವ ಪುರಾಣಂ, ಚಂದ್ರಪ್ರಭ ಪುರಾಣಂ, ಪುಷ್ಪದಂತ ಪುರಾಣಂ, ಶೀತಲನಾಥ ಪುರಾಣಂ, ಶ್ರೇಯಾಂಸ ಪುರಾಣಂ, ವಿಮಲನಾಥ ಪುರಾಣಂ ಮೊದಲಾದ ಪುರಾಣಗಳಲ್ಲಿ, ಸಗರ ಚಕ್ರವರ್ತಿ ಚರಿತಂ, ಮೇಘರಥ ಚರಿತಂ, ತ್ರಿಪೃಷ್ಠ ಚರಿತ್ರಂ, ಮಘವ ಚಕ್ರವರ್ತಿ ಚರಿತಂ, ಸನತ್ಕುಮಾರ ಚಕ್ರವರ್ತಿ ಚರಿತಂ, ಬಲದೇವ ವಾಸುದೇವ ಸುಧರ್ಮಸ್ವಯಂಭುಗಳ ಚರಿತಂ, ರಾಮ ಲಕ್ಷö್ಮಣರ ಚರಿತಂ ಎನ್ನುವ ಚರಿತ್ರೆಗಳಲ್ಲಿ ಜೈನಧರ್ಮದ ಶ್ರೇಷ್ಠತೆಯನ್ನು ಚಾವುಂಡರಾಯನು ತಿಳಿಸಿದ್ದಾನೆ.

ಈ ಕೃತಿಯಲ್ಲಿ ಬರುವ ಅಹಿಂಸಾ ಲಕ್ಷಣಂ ಧರ್ಮಂ, ಉರಿಯುತ್ತಿರ್ದ ಸೊಡರಂ ಸೊಡರ್ಗೊಂಡರಸುವAತೆ, ಕರ್ಮದ ಬೇ¾ಂ ಪಱಿವಂತೆ, ಕಿಚ್ಚುಂ ಗಾಳಿಯುಂ ಕೂಡಿದಂತೆ, ದೀವಳಿಗೆಯ ಪಱಿಯಂತೆ, ನೀರಿರೆ ಪಾಲನೆ ಪೀರ್ಗುವಂತೆ, ನೀರೊಳ್ ಬೆಣ್ಣೆಯನ¾ಸುವಂತೆ, ಪುಡುಕೆಯ ಮೊಲನಂತೆ, ಪಾಷಾಣದೊಳ್ ಪೊನ್ನನ¾ಸುವಂತೆ, ಪೆಂಡಿರ ಧೈರ್ಯವೆಂಬುದು ಕರಿಕಳಭ ಮೊಲನಂತೆ, ಸತ್ತಂ ಪುಟ್ಟಂ, ಕೊಟ್ಟಂ ಕೆಟ್ಟಂ ಮೊದಲಾದ ವಾಕ್ಯಗಳು ರಾಯನ ಕಾವ್ಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

“ಮಹಾಪುರಾಣದ ವಿಸ್ತಾರ, ವಿಲಂಬ ಶೈಲಿ ಚಾಮುಂಡರಾಯ ಪುರಾಣದಲ್ಲಿಲ್ಲ. ಇಲ್ಲಿಯದು ಸಂಕ್ಷಿಪ್ತವಾದ ತ್ವರಿತಗತಿಯ ಶೈಲಿ, ತಂತಿ ಕಳಿಸುವಾಗ ಬಳಸುವಂತೆ ಇಲ್ಲಿಯದು ಕಡಿಮೆ ಶಬ್ದಗಳ ಭಾಷೆ. ಶಾಸ್ತçದೃಷ್ಟಿ, ಪುರಾಣದ ದೃಷ್ಟಿ, ಕಥಾ ಸಂಗ್ರಹದೃಷ್ಟಿ ಇಲ್ಲಿ ಪ್ರಧಾನವಾಗಿರುವುದರಿಂದ ಕಾವ್ಯದೃಷ್ಟಿ ಗೌಣವಾಗಿದೆ. ಇವನ ಮುಖ್ಯ ಉದ್ದೇಶ ಮೂಲ ಆಕರವಾಗಿರುವ ಸಂಸ್ಕೃತ ಮಹಾಪುರಾಣದ ಕಥೆ-ವಸ್ತುಗಳನ್ನು ಬಹುಮಟ್ಟಿಗೆ ಯಥಾವತ್ತಾಗಿಯೂ ತುಂಬ ಸಂಗ್ರಹವಾಗಿಯೂ ಕನ್ನಡಕ್ಕೆ ಇಳಿಸುವುದು- ಸಾಕಷ್ಟು ಯಶಸ್ವಿಯಾಗಿ ಈಡೇರಿದೆಯೆನ್ನಬಹುದು.” ಎನ್ನುವ ಡಾ.ಕಮಲಾ ಹಂಪನಾ ಅವರ ಅಭಿಪ್ರಾಯವು ಈ ಕೃತಿಯ ಮೌಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕನ್ನಡದಲ್ಲಿ ಬಂದ ಜೈನಪರಂಪರೆಯ ರಾಮಾಯಣ, ಭಾರತ ಮತ್ತು ಭಾಗವತ ಕಥೆಗಳ ಕೃತಿಗಳಿಗೆ ಆಕರ ಗ್ರಂಥವಾಗಿದೆ.

ಕರ್ನಾಟಕದ ಇತಿಹಾಸ, ಕನ್ನಡ ಭಾಷೆ, ಜೈನ ಧರ್ಮದ ಪ್ರಸಾರ, ಉಲ್ಲೇಖಿತ ಸಂಸ್ಕೃತ ಮತ್ತು ಪ್ರಾಕೃತಿಕ ಪದ್ಯಗಳು, ತೀರ್ಥಂಕರರ ಭವಾವಳಿಗಳು, ಚಕ್ರವರ್ತಿಗಳ ಜೀವನದ ಕಥಾವಸ್ತು ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಇದಕ್ಕೊಂದು ಮಹತ್ವದ ಸ್ಥಾನವಿದೆ. ಒಟ್ಟಾರೆಯಾಗಿ ಕನ್ನಡ ಸಾಹಿತ್ಯದ ಆರಂಭದ ಗದ್ಯಕೃತಿಗಳಲ್ಲಿ ಚಾವುಂಡರಾಯ ಪುರಾಣವು ಮಹತ್ವದ ಗ್ರಂಥವಾಗಿದ್ದು, ಜೈನ ಧರ್ಮದ ಪುರಾಣಗಳ ಸಮಸ್ತ ತೀರ್ಥಂಕರರ ವಿವರಗಳನ್ನು ನೀಡಿದ ಮೊದಲ ಕೃತಿ ಎನ್ನುವ ಹೆಗ್ಗಳಿಕೆ ಈ ಕೃತಿಗಿದೆ. ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದಲೂ ಇದೊಂದು ಮಹತ್ವದ ಕೃತಿಯಾಗಿದ್ದು, ಇದನ್ನು ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿ ನೀಡಿದ ಚಾವುಂಡರಾಯನು ಅಜರಾಮರನಾಗಿದ್ದಾನೆ.

*ಲೇಖಕರು ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಅವರ ಪಿ.ಎಚ್.ಡಿ. ವಿಷಯ: ‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು-ಒAದು ಅಧ್ಯಯನ’.

 

Leave a Reply

Your email address will not be published.