ಕನ್ನಡದ ಹಿರಿಮೆಗೆ ತಮಿಳಿನ ಗರಿಮೆ ಸೂರರೈ ಪೋಟ್ರು

-ರೇವು ಸೂರ್ಯ

ನಿರ್ದೇಶಕಿಯ ಜಾಣ್ಮೆಯೊಂದು ನಮ್ಮನ್ನು ಆಕರ್ಷಿಸುತ್ತದೆ. ಮಾರ ಮತ್ತು ಸುಂದರಿಯ ಆತ್ಮಗೌರವದ ಮದುವೆ ‘ಮಂತ್ರ ಮಾಂಗಲ್ಯ’ ಮಾದರಿಯಲ್ಲಿ ಆಗುತ್ತದೆ. ಮದುವೆಯ ಬ್ಯಾನರ್ ನಲ್ಲಿ ತಮಿಳು ವರ್ಷನ್ ನಲ್ಲಿ ಪೆರಿಯಾರ್ ಫೋಟೋ ಬಳಸಿದ್ದರೆ, ಕನ್ನಡ ಡಬ್‌ನಲ್ಲಿ ಕುವೆಂಪು ಫೋಟೋ ಬಳಸಿರುವುದು ಕನ್ನಡಿಗರಿಗೆ ಮೆಚ್ಚುಗೆಯಾಗಿದೆ.

ಒಟಿಟಿ ವೇದಿಕೆಯು ಚಿತ್ರಮಂದಿರ ನೀಡುವ ಸುಖವನ್ನು ನೀಡುವುದಿಲ್ಲ ಎಂಬ ಕೊರಗಿನ ನಡುವೆಯೇ ಅದೇ ವೇದಿಕೆಗಳಲ್ಲಿ ಜನ ಹೆಚ್ಚೆಚ್ಚು ಸಿನಿಮಾಗಳನ್ನು ನೋಡಬೇಕಾದ, ಒಟಿಟಿಗಳಲ್ಲೇ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಬೇಕಾದ ಕೊರೊನಾ ಕಾಲಘಟ್ಟದ ಅಂತಿಮ ಹಂತದಲ್ಲಿದ್ದೇವೆ. ಜನರು ಮತ್ತೆ ಚಿತ್ರಮಂದಿರದತ್ತ ಕಾಲಿಡುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿಯೇ ಚಿತ್ರಮಂದಿರದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವ ಸಾಹಸಕ್ಕೂ ಕೈಹಾಕುತ್ತಿರುವ ಹೊತ್ತಿನಲ್ಲೇ ಅಮೆಜಾನ್ ಫ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ತಮಿಳಿನ ‘ಸೂರರೈ ಪೋಟ್ರು’ 35 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿರುವ ಸುದ್ದಿಯೂ ಬರುತ್ತಿದೆ. ಒಳ್ಳೆಯ ಸಿನಿಮಾಗಳು ಬಿಡುಗಡೆಯಾದರೆ ಜನ ಹುಡುಕಿಕೊಂಡು ನೋಡುತ್ತಾರೆ ಎಂಬುದು ಒಂದು ಕಡೆಯಾದರೆ, ತಮಿಳಿನ ಈ ಸಿನಿಮಾ ಕನ್ನಡದ ಮಣ್ಣಿಗೂ ಹೆಮ್ಮೆ ತಂದಿರುವುದು ಮತ್ತೊಂದು ಸಂತಸದ ಸಂಗತಿ.

ನಮ್ಮ ನೆಲದ ಸಾಹಸಿ ವ್ಯಕ್ತಿ, ಉದ್ಯಮಿ, ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರ ಆತ್ಮಕತೆ ‘ಸಿಂಪ್ಲಿ ಫ್ಲೈಕೃತಿಯಿಂದ ಪ್ರೇರಿತರಾಗಿ ನಿರ್ಮಿಸಿದ ‘ಸೂರರೈ ಪೋಟ್ರು’ ಸಿನಿಮಾಕ್ಕೆ ಕನ್ನಡದ ಮನಸ್ಸುಗಳು ಮಿಡಿದಿವೆ. ಲಕ್ಷಾಂತರ ಕನ್ನಡಿಗರು ಈಗಾಗಲೇ ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

‘ಸೂರರೈ ಪೋಟ್ರು’ ಸಿನಿಮಾ ಬಿಡುಗಡೆಯಾದ ಬಳಿಕ ಗೋಪಿನಾಥ್ ಅವರ ‘ಸಿಂಪ್ಲಿ ಫ್ಲೈ ಪುಸ್ತಕಕ್ಕಾಗಿ ಈಗಾಗಲೇ ಹುಡುಕಾಟ ಶುರುವಾಗಿದೆ. ಕನ್ನಡಕ್ಕೂ ಈ ಕೃತಿಯನ್ನು ಪತ್ರಕರ್ತ ವಿಶ್ವೇಶ್ವರ ಭಟ್ ಹಲವು ವರ್ಷಗಳ ಹಿಂದೆಯೇ ಅನುವಾದಿಸಿದ್ದು, ಅಳಿದುಳಿದ ಪ್ರತಿಗಳೆಲ್ಲ ಈಚೆಗೆ ಮಾರಾಟವಾಗಿವೆ ಎನ್ನುತ್ತಾರೆ ಪುಸ್ತಕ ಮಳಿಗೆಯವರು. ಮೂಲ ಇಂಗ್ಲಿಷ್ ಕೃತಿಯೂ ಖಾಲಿಯಾಗಿವೆ. ಸಿನಿಮಾಗಳೆಂದರೆ ಹೀಗೆ- ಸಮಾಜದ ಮೇಲೆ ಯಾವ ಪರಿಣಾಮವನ್ನಾದರೂ ಬೀರಬಹುದು!

ಕನ್ನಡಿಗ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಹಲವು ಸಾಹಸಗಳಿಗೆ ಕೈ ಹಾಕಿ ಏಳುಬೀಳುಗಳನ್ನು ಕಂಡವರು. ಅವರೇ ಹೇಳುವಂತೆ: “ನಾನು ಮಾಡಿರುವ ಕಸುಬುಗಳು ಒಂದೆರಡಲ್ಲ. ನಾನು ನನ್ನ ತೋಟದಲ್ಲಿ, ಹಳ್ಳಿಯಲ್ಲಿ ಮತ್ತು ಸಣ್ಣಪುಟ್ಟ ಪಟ್ಟಣಗಳಲ್ಲಿ ನೆಚ್ಚಿಕೊಂಡಿದ್ದ ಕೆಲಸಗಳ ಪಟ್ಟಿ ತುಂಬಾ ದೊಡ್ಡದು. ಚುಟುಕಾಗಿ ಹೇಳಬೇಕೆಂದರೆ ನಾನು ನನ್ನ ಬದುಕಿನಲ್ಲಿ ದನಗಳನ್ನು ಸಾಕಿ ನೋಡಿದ್ದೇನೆ, ಹಾಲು ಕರೆದು ಅದನ್ನು ಹೊತ್ತು ಮಾರಿದ್ದೇನೆ, ಕೋಳಿ ಫಾರಂ ಮಾಡಿ ಅದರ ಮಾಂಸ ಮಾರಿದ್ದೇನೆ, ರೇಷ್ಮೆ ಬೆಳೆದಿದ್ದೇನೆ, ಮೋಟಾರ್ ಸೈಕಲ್ಲುಗಳ ಡೀಲರ್ ಆಗುವ ಜೊತೆಗೆ ಅವುಗಳ ರಿಪೇರಿ ಮಾಡಿದ್ದೇನೆ, ಉಡುಪಿ ಹೋಟೆಲ್ ಇಟ್ಟು ಅದನ್ನೂ ನಡೆಸಿದ್ದೇನೆ, ಸ್ಟಾಕ್ ಬ್ರೋಕರ್ ಆಗಿದ್ದೇನೆ, ನೀರಾವರಿ ಪಂಪ್ ಸೆಟ್ ಮೋಟಾರುಗಳ ಡೀಲರ್ ಆಗಿದ್ದೇನೆ, ನೀರು ಬಳಕೆ ನಿರ್ವಹಣೆಯ ಬಗ್ಗೆ ರೈತರಿಗೆ ಸಲಹೆ ನೀಡಿದ್ದೇನೆ, ತೋಟಗಾರಿಕೆ ಮಾಡಿದ್ದೇನೆ, ಕೈತೋಟ ವಿನ್ಯಾಸಕಾರನಾಗಿ ದುಡಿದಿದ್ದೇನೆ, ಹೆಸರುವಾಸಿ ರೈತನಾಗಿದ್ದೇನೆ, ಸಣ್ಣ ಪ್ರಮಾಣದ ರಾಜಕಾರಣಿಯಾಗಿ ಕೆಲಸ ಮಾಡಿದ್ದೇನೆ, ಆನಂತರ ಗಂಭೀರವಾಗಿ ರಾಜಕೀಯಕ್ಕೆ ಇಳಿದು ಆಗ ತಾನೇ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ತಿಣುಕಾಡುತ್ತಿದ್ದ ರಾಷ್ಟಿಯ ಪಕ್ಷವೊಂದರ ಸ್ಥಳೀಯ ಮುಖಂಡನಾಗಿ ಬೆವರು ಸುರಿಸಿದ್ದೇನೆ, ಚುನಾವಣೆಯ ಅಖಾಡಕ್ಕೆ ಇಳಿದು ದಯನೀಯವಾಗಿ ಸೋತಿದ್ದೇನೆ, ಇವೆಲ್ಲವೂ ಆದ ಮೇಲೆ ಕಟ್ಟಕಡೆಗೆ ನಾನೊಂದು ವಿಮಾನಯಾನ ಸಂಸ್ಥೆ ಕಟ್ಟಿದ್ದೇನೆ… ಹೀಗಿದ್ದೂ ನನ್ನ ಬದುಕಿನಲ್ಲಿ ಏಳುವುದು, ಬೀಳುವುದು, ಒದ್ದಾಡುವುದು, ಮತ್ತೆ ಏನೋ ಹೊಸ ಸಾಹಸಕ್ಕೆ ಅಣಿಯಾಗುವುದು ಎಲ್ಲವೂ ನಡೆದೇ ಇದೆ…”

ಗೋಪಿನಾಥ್ ಅವರು ಏಳನೇ ತರಗತಿವರೆಗೆ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಮುಂದೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಅಧ್ಯಯನ ನಡೆಸಿ ಎಂಟು ವರ್ಷ ಸೇನೆಯಲ್ಲಿದ್ದ ಅವರು ಭಾರತ- ಬಾಂಗ್ಲಾ ಯುದ್ಧದಲ್ಲೂ ಪಾಲ್ಗೊಂಡಿದ್ದರು. ಹೀಗೆ ಬಹುಮುಖ, ಪ್ರಯೋಗಶೀಲ ವ್ಯಕ್ತಿ ಗೋಪಿನಾಥ್ ಕನ್ನಡದ ಹಿರಿಮೆ.

‘ಸೂರರೈ ಪೋಟ್ರು’ ‘ಸಿಂಪ್ಲಿ ಪ್ಲೆ ಕೃತಿಯಿಂದ ಪ್ರೇರಣೆ ಪಡೆದು ಮಾಡಿದ ಸಿನಿಮಾವೇ ಹೊರತು, ಜಿ.ಆರ್.ಗೋಪಿನಾಥ್ ಅವರ ಕುರಿತ ಬಯೋಪಿಕ್ ಅಲ್ಲ. ಚಿತ್ರತಂಡವೇ ಹೇಳುವಂತೆ “ಕಡಿಮೆ ಖರ್ಚಿನ ವಾಯುಯಾನಕ್ಕೆ ಸಂಬAಧಿಸಿದAತೆ ಹಲವು ಸತ್ಯ ಘಟನೆಗಳ ಆಧಾರಿಸಿದ ಸಿನಿಮಾವಿದು”. ವಿಮಾನಯಾನ ಸಂಸ್ಥೆಯನ್ನು ಕಟ್ಟಿ ಜನಸಾಮಾನ್ಯರೂ ಬಾನಂಗಳದಲ್ಲಿ ಹಾರಾಡಬಹುದು ಎಂಬುದನ್ನು ಸಾಕಾರಗೊಳಿಸಿದ ಕ್ಯಾಪ್ಟನ್ ಗೋಪಿನಾಥರ ಒಂದು ಸಾಹಸವನ್ನು ನಿರೂಪಿಸಿದ ಸಿನಿಮಾವಿದು.

ಜನಪ್ರಿಯ ಸಿನಿಮಾ ಮಾಡುವಾಗ ಏನೆಲ್ಲ ಸರಕುಗಳು ಬೇಕೋ ಅದೆಲ್ಲವನ್ನೂ ನಿರ್ದೇಶಕಿ ಸುಧಾ ಕೊಂಗಾರ ಅಳವಡಿಸಿಕೊಂಡಿದ್ದಾರೆ. ಭಾವುಕ ಸನ್ನಿವೇಶಗಳನ್ನು ಕಟ್ಟಿ ಮನಸ್ಸನ್ನು ಮುದಗೊಳಿಸುತ್ತಾರೆ, ಅಳಿಸುತ್ತಾರೆ, ನಗಿಸುತ್ತಾರೆ, ಸೋತವನ ಎದೆಯಲ್ಲಿ ಉತ್ಸಾಹವನ್ನು ಚಿಮ್ಮಿಸುತ್ತಾರೆ.

ಉತ್ಪೆಕ್ಷೆ ಅನಿಸಬಹುದಾದ ದೃಶ್ಯಗಳಿದ್ದರೂ ಅವು ಒಂದು ಸಿನಿಮಾ ಚೌಕಟ್ಟಿನಾಚೆ ಜಿಗಿಯುವುದಿಲ್ಲ. ಆರಂಭದಿAದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದುಕೊಳ್ಳುವ ‘ಸೂರರೈ ಪೋಟ್ರು’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಸೂರ್ಯ ಅವರಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ.

ಆತ ಬಡ ಶಿಕ್ಷಕನ ಮಗ- ಹೆಸರು ನೆಡುಮಾರನ್ ರಾಜಾಗಮ್ (ಸೂರ್ಯ). ಆತ ಕೋಪ, ಆವೇಶ, ಕನುಸುಗಳ ಮನುಷ್ಯ. ಆರ್ಮಿಯಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿ, ಈಗ ಮಹತ್ತರವಾದ ಕೆಲಸಕ್ಕಾಗಿ ಕನಸು ಕಾಣುತ್ತಿದ್ದಾನೆ. ನೆಡುಮಾರನ್ ಬಾಳ ಸಂಗಾತಿಯಾಗಿರುವ ಸುಂದರಿ (ಮತ್ತೊಂದು ಹೆಸರು ಬೊಮ್ಮಿ) ಆತನ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಬೊಮ್ಮಿಯಾಗಿ ಅಭಿನಯಿಸಿರುವ ಅಪರ್ಣಾ ಬಾಲಮುರಳಿಯಂತೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ. ನವ ಉದ್ಯಮಿಯೊಬ್ಬನಿಗೆ ಎದುರಾಗುವ ಸವಾಲುಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕಿ ಯಶಸ್ವಿಯಾಗಿದ್ದಾರೆ. ಇನ್ನೂ ಪರೇಶ್ ರಾವಲ್ (ಉದ್ಯಮಿ ಪರೇಶ್ ಗೋಸ್ವಾಮಿ), ಊರ್ವಶಿ (ಮಾರನ ತಾಯಿ), ಅಚ್ಯುತ್‌ಕುಮಾರ್ (ಅನಂತ ನಾರಾಯಣ್), ಪ್ರಕಾಶ್ ಬೆಳವಾಡಿ (ಪ್ರಕಾಶ್ ಬಾಬು), ಪೂ ರಾಮು (ಮಾರನ ತಂದೆ) ಹೀಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವವರೆಲ್ಲ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ನೆಡುಮಾರನ್ ಏರ್ ಡೆಕ್ಕನ್ ಸಂಸ್ಥೆಯನ್ನು ಕಟ್ಟಿ, ಬಡವನೂ ಹಾರಾಡಬಹುದು ಎಂಬ ಕನಸು ನನಸು ಮಾಡುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಕೊನೆಯಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರ ಸಾಧನೆಯ ಕುರಿತು ಬರುವ ತುಣುಕು ಕನ್ನಡಿಗರ ಮೈನವಿರೇಳಿಸುತ್ತದೆ.

ಕ್ಯಾಪ್ಟನ್ ಗೋಪಿನಾಥ್ ಅವರು ಈ ಸಿನಿಮಾವನ್ನು ನೋಡಿದಾಗ ಹೀಗೆಂದಿದ್ದಾರೆ: “ಸಿಕ್ಕಾಪಟ್ಟೆ ಕಾಲ್ಪನಿಕವಾಗಿ ಮಾಡಿದ್ದರೂ ಕೂಡ, ನನ್ನ ಜೀವನದಲ್ಲಿ ಇರುವ ಸತ್ಯ ಅಂಶಗಳು ಅಡಗಿವೆ… ಕೆಲ ಕೌಂಟುಬಿಕ ದೃಶ್ಯ ನೋಡಿ ತುಂಬಾ ಅತ್ತಿದ್ದೇನೆ, ನಕ್ಕಿದ್ದೇನೆ, ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ಗ್ರಾಮೀಣ ಭಾಗದಿಂದ ಬಂದ ಉದ್ಯಮಿಗಳ ಹೋರಾಟದ ವಿರುದ್ಧದ ಭರವಸೆಯ ಮನೋಭಾವನೆ ನಾಟಕೀಯವೆನಿಸಿದರೂ ಸತ್ಯ”.

ಸೂರರೈ ಪೋಟ್ರು ಕನ್ನಡಕ್ಕೂ ಡಬ್ಬಾಗಿರುವುದರಿಂದ ಹೆಚ್ಚು ಕನ್ನಡಿಗರನ್ನು ತಲುಪಿದೆ. ಸಿನಿಮಾ ಟೈಟಲ್ ಅನ್ನು ಕನ್ನಡ ಡಬ್ಬಿಂಗ್‌ನಲ್ಲೂ ‘ಸೂರರೈ ಪೋಟ್ರು’ ಎಂದೇ ಉಳಿಸಿಕೊಂಡಿರುವುದು ಯಾಕೆಂದು ತಿಳಿಯಲಿಲ್ಲ. ತೆಲುಗು ಡಬ್ ಮಾಡುವಾಗ ಹೆಸರನ್ನು ಬದಲಿಸಲಾಗಿದೆ ಎಂಬುದನ್ನು ಗಮನಿಸಬೇಕು. (ಮಲಯಾಳಂಗೂ ಸಿನಿಮಾ ಡಬ್ಬಾಗಿದೆ). ತಮಿಳಿನಲ್ಲಿ ಆಪ್ತವಾಗುವಂತೆ ಕನ್ನಡದ ಡಬ್ಬಿಂಗ್ ಸಾಂಗ್‌ಗಳು ಆಪ್ತವಾಗುವುದಿಲ್ಲ. ಇನ್ನು ಡಬ್ಬಿಂಗ್ ಹಾಡುಗಳಿಗೆ ಬಳಸಿರುವ ಸಬ್ ಟೈಟಲ್ ತಮಿಳಿಗೆ ಬಳಸಿದ ಸಬ್‌ಟೈಟಲ್‌ಗಳೇ ಆಗಿರುವುದರಿಂದ ಹಾಡಿಗೂ ಸಬ್ ಟೈಟಲ್‌ಗೂ ಸಂಬAಧವಿಲ್ಲ. ಇಂತಹ ಕೆಲವು ಕೊರಗನ್ನು ಹೊರತುಪಡಿಸಿದರೆ ಉತ್ಕöÈಷ್ಟವಾಗಿ ಕನ್ನಡಕ್ಕೆ ಡಬ್ ಆಗಿದೆ ಎಂಬುದು ಅನೇಕರ ಅಭಿಪ್ರಾಯ.

ನಿರ್ದೇಶಕಿಯ ಜಾಣ್ಮೆಯೊಂದು ನಮ್ಮನ್ನು ಆಕರ್ಷಿಸುತ್ತದೆ. ಮಾರ ಮತ್ತು ಸುಂದರಿಯ ಆತ್ಮಗೌರವದ ಮದುವೆ ‘ಮಂತ್ರ ಮಾಂಗಲ್ಯ’ ಮಾದರಿಯಲ್ಲಿ ಆಗುತ್ತದೆ. ಮದುವೆಯ ಬ್ಯಾನರ್ ನಲ್ಲಿ ತಮಿಳು ವರ್ಷನ್ ನಲ್ಲಿ ಪೆರಿಯಾರ್ ಫೋಟೋ ಬಳಸಿದ್ದರೆ, ಕನ್ನಡ ಡಬ್‌ನಲ್ಲಿ ಕುವೆಂಪು ಫೋಟೋ ಬಳಸಿರುವುದು ಕನ್ನಡಿಗರಿಗೆ ಮೆಚ್ಚುಗೆಯಾಗಿದೆ.

ನೆಡುಮಾರನ್ ಎದುರಿಸುವ ಸವಾಲುಗಳು ಅನೇಕ. ಇನ್ನೊಬ್ಬ ಏರ್‌ಲೈನ್ ಆರಂಭಿಸಿದರೆ ತನ್ನ ಹೆಸರು ಕುಂದುತ್ತದೆ ಎಂದು ಪರೇಶ್ ಗೋಸ್ವಾಮಿ ಒಡ್ಡುವ ಸಂಕಷ್ಟಗಳಿಗೆ ಎಲ್ಲೆ ಎಂಬುದಿಲ್ಲ. ಆರಂಭವಾಗಬೇಕಿರುವ ಡೆಕ್ಕನ್ ಏರ್‌ಲೈನ್‌ನ ವಿಮಾನಕ್ಕೆ ಕುತಂತ್ರದಿAದ ತೊಂದರೆಯೊಡ್ಡಿ, ನಿಡುಮಾರನ್‌ಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಾನೆ. ಇದಕ್ಕೆ ರೇಡಿಯೋ ಸಂದರ್ಶನದಲ್ಲಿ ನಿಡುಮಾರನ್ ನೀಡುವ ಪ್ರತಿಕ್ರಿಯೆಗಳು ಇಡೀ ಸಿನಿಮಾದ ಆತ್ಮವೆಂದರೆ ತಪ್ಪಾಗಲಾರದು.

“ಕಮ್ಮಿ ಬೆಲೆಗೆ ಟಿಕೆಟ್ ಕೊಡಬೇಕು ಅಂತ ಮಾಡಿದ್ದೇವೆ ಹೊರತು, ಸೇಪ್ಟಿ ಕಡಿಮೆ ಮಾಡಬೇಕು ಅಂತ ಅಲ್ಲ… ನಾವು ಆಕಾಶನ ಅಳತೆ ನೋಡೋ ಅಭ್ಯಾಸ ಮಾಡಿಕೊಂಡಿದ್ದೇವೆ. ಈ ಭೂಮಿ ನೋಡಬೇಕು ಅಂತ ಕನಸು ಕೂಡ ಕಂಡಿಲ್ಲ. ಗೋಸ್ವಾಮಿ ಅಂಥವರು ಹೇಳುತ್ತಾರೆ: ನಮ್ಮಂಥವರು ಕ್ವಾಲಿಟಿ ಇಲ್ಲದವರು ಇಂಡಸ್ಟಿçಗೆ ಬರುತ್ತಿರುವುದನ್ನು ನೋಡಿ ಭಯ ಆಗುತ್ತಿದೆ ಅಂತ. ಅವರಿಗೆ ಚೆನ್ನಾಗಿ ಗೊತ್ತು- ಅವರ ಏರ್‌ಲೈನ್ ಪಾಸ್ ಆಗಿರುವ ಎಲ್ಲ ಟೆಸ್ಟ್ನಲ್ಲೂ ನಮ್ಮ ಏರ್‌ಲೈನ್ ಕೂಡ ಪಾಸ್ ಆಗಿದೆ ಅಂತ. ಹಾಗಾದರೆ ಭಯ ಏಕೆ? ಯಾಕೆಂದರೆ ಯಾವುದೇ ಹಿನ್ನೆಲೆ ಇಲ್ಲದವನು ಅವರ ಮಟ್ಟಕ್ಕೆ ಬೆಳೆದುಬಿಡುತ್ತಾನೆ ಅನ್ನೋ ಭಯ. ಇಲ್ಲದೆ ಇರುವವನು ಕೊನೆವರೆಗೂ ಇಲ್ಲದೆ ಇರುವವನಾಗಿಯೇ ಇರಬೇಕು ಅಂತ.

ನೂರು ವರ್ಷದ ಹಿಂದೆ ಕರೆಂಟ್ ಅವರಿಗೆ (ಶ್ರೀಮಂತರಿಗೆ) ಮಾತ್ರ ಅಂತ ಹೇಳುತ್ತಿದ್ದರು. ಐವತ್ತು ವರ್ಷಕ್ಕಿಂತ ಹಿಂದೆ ಕಾರು ಅವರಿಗೆ ಮಾತ್ರ ಅಂತ ಹೇಳುತ್ತಿದ್ದರು. ಇದನ್ನೆಲ್ಲ ಅವರೇ ಹೇಳುತ್ತಾರೆ.

ಯಾಕೆಂದರೆ ಇದನ್ನೆಲ್ಲ ಅವರನ್ನು ಬಿಟ್ಟು ಬೇರೆ ಇನ್ನಾö್ಯರೂ ಅನುಭವಿಸಬಾರದು ಅಂತ ತಾನೇ? ಅನುಕೂಲ ಇಲ್ಲದೆ ಇರುವವರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ನಾಯಿ ಹಾಗೆ ಅಲೆಯುವಾಗ ಹಣವಂತರು ಮಾತ್ರ ಆಕಾಶದಲ್ಲಿ ದೇವರ ಥರ ಹಾರಿ ಹೋಗಿಬಿಡ್ತಾರೆ. ನಾವು ಅವರ ಥರ ಆಗಿಬಿಟ್ಟರೆ ಅವರ ಕೆಳಗೆ ಯಾರೂ ಇರುವುದಿಲ್ಲವಲ್ಲ ಅನ್ನೋದೇ ಅವರ ಭಯ.”

“ಜನ ಚಿಕ್ಕಚಿಕ್ಕ ಊರಲ್ಲೇ ಚಿಕ್ಕದಾಗಿ ಉಳಿದುಕೊಳ್ಳುತ್ತಾರೆ. ಯಾಕೆ ಮುಂದುವರಿದಿಲ್ಲ? ನಾವು ಮುಂದುವರಿಯಬೇಕು ಅಂದರೆ ಕೆಲವು ವಿಷಯಗಳು ನಡೆಯಬೇಕು. ಕೆಲವು ಸಲ ಓಡಿದರೆ ಮಾತ್ರ ಮುಂದಕ್ಕೆ ಹೋಗ್ತಿವಿ. ಆಗ ಓಡಲೇ ಬೇಕಾಗುತ್ತದೆ. ಹಾಗೇ ಓಡೋದಕ್ಕೆ ಹೆಸರೇ ಏರ್ ಕನೆಕ್ಟಿವಿಟಿ… ಎಲ್ಲ ಚಿಕ್ಕಚಿಕ್ಕ ಊರುಗಳಿಗೂ ನಮ್ಮ ಫ್ಲೈಟ್ ಹೋಗುತ್ತೆ. ಆಗ ನಾವೇ ಎಲ್ಲ ಅಂದುಕೊಳ್ತಾ ಹೆಮ್ಮೆಪಡುತ್ತಿರುವವರಿಗೆ ಭಯ ಸಹಜ ಅಲ್ವಾ ಸಾರ್?”

“ಆಧುನಿಕತೆಯ ಫಲ ಎಲ್ಲ ಅನುಭವಿಸಬೇಕು ಅಂತ ನಾನು ಅಂದುಕೊಳ್ತಾ ಇದ್ದೇನೆ.- I want break the cost barrier and the damn caste barrier” ಅದಕ್ಕೆ ನನ್ನ ಪ್ಲೆöÊಟ್ ಟಿಕೆಟ್ ಬೆಲೆ ಒಂದು ರೂಪಾಯಿ ಇರೋದು…”

ಹೀಗೆ ಹೇಳುವ ಮಾತುಗಳು ತರತಮದ ಮನಸ್ಸುಗಳಿಗೆ ಕರೆಂಟ್ ಶಾಕ್ ಕೊಟ್ಟಂತಿವೆ.

ಸಿನಿಮಾದ ಕೊನೆಯಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ಏರ್ ಡೆಕ್ಕನ್ ಶುರು ಮಾಡಲು ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟ ಕ್ಯಾಪ್ಟನ್ ಸ್ಯಾಮ್, ವಿಷ್ಣು ರಾವಲ್ ಭಾವಚಿತ್ರದೊಂದಿಗೆ ಪುಟ್ಟ ಪರಿಚಯ ನೀಡಲಾಗಿದೆ.

ಹಲವು ಏರ್‌ಲೈನ್‌ಗಳಲ್ಲಿ ಫಸ್ಟ್ ಕ್ಲಾಸ್ ಎಂಬುದನ್ನು ಕೊನೆಗಾಣಿಸಿದ ಸಾಹಿಸಿಗಳಿವರು. ಏರ್ ಡೆಕ್ಕನ್ ಶುರು ಮಾಡಿ ಕೇವಲ ಮೂರು ವರ್ಷಗಳಲ್ಲಿ 45 ಫ್ಲೈಟ್ ಕೊಂಡುಕೊAಡು ಒಂದು ದಿನಕ್ಕೆ 25,000 ಜನ ಹಾರುವ ಹಾಗೆ ಮಾಡಿದರು. ಚಿಕ್ಕಚಿಕ್ಕ ಊರುಗಳಿಗೆ ಮೊದಲ ಸಲ ಫ್ಲೈಟ್‌ಗಳನ್ನು ಹಾರಿಸಿ ಅವರಿಗೂ ಏರ್ ಕನೆಕ್ಟಿವಿಟಿ ಕೊಟ್ಟಿದ್ದು ಕ್ಯಾಪ್ಟನ್ ಗೋಪಿನಾಥ್. ಅವರ ಹೆಂಡತಿ ಭಾರ್ಗವಿ ತಮ್ಮ ‘ಬರ್ನ್ ವರ್ಡ್’ ಬೇಕರಿ ಮೂಲಕ ಏರ್ ಡೆಕ್ಕನ್‌ನಲ್ಲಿ ಫುಡ್ ಕಾಂಟ್ರಾಕ್ಟ್ ತಗೆದುಕೊಂಡರು. ಮೊದಲನೇ ವರ್ಷದಲ್ಲೇ 7 ಕೋಟಿ ರೂಪಾಯಿ ಲಾಭ ಮಾಡಿದರು. ಗೋಪಿನಾಥ್ ತಮ್ಮ ಕನಸನ್ನು ನನಸು ಮಾಡಿ ಮೂರು ಮಿಲಿಯನ್ ಭಾರತೀಯರು ಒಂದೇ ರೂಪಾಯಿನಲ್ಲಿ ಹಾರುವಂತೆ ಮಾಡಿದರು. 15 ವರ್ಷಗಳ ನಂತರ ಅವರ ಕನಸು ಭಾರತ ಸರ್ಕಾರದ ಗಮನ ಸೆಳೆದು ಪ್ರತಿ ಭಾರತೀಯನೂ ಹಾರಾಡಬೇಕು ಎಂಬ ಆಲೋಚನೆಯೊಂದಿಗೆ ‘ಉಡಾನ್’ ಎಂಬ ಯೋಜನೆ ಆರಂಭವಾಯಿತು. ಈಗ ಕ್ಯಾಪ್ಟನ್ ಗೋಪಿನಾಥ್ ಆ ಯೋಜನೆಗೆ ಸಲಹೆಗಾರರಾಗಿದ್ದಾರೆ.

ಇಂತಹ ಸಾಹಿಸಿ ಕನ್ನಡಿಗನ ಜೀವನವೊಂದು ತಮಿಳಿನವರಿಗೆ ಸಿನಿಮಾ ಮಾಡಲು ಕಾಣಿಸಿರುವುದು ಭಾಷಾ ಸೌಹಾರ್ದದ ಕಾರಣಕ್ಕೂ ಹೆಮ್ಮೆ ಪಡಬೇಕಾದ ವಿಷಯ. ಲಾಂಗು, ಮಚ್ಚು ಹಿಡಿದವರ ಕತೆಗಳು ಮಾತ್ರ ನಮ್ಮ ಚಿತ್ರರಂಗಕ್ಕೆ ಕಾಣಿಸದೆ ಗೋಪಿನಾಥ್ ಅವರಂತಹ ಹೃದಯಶೀಲರು ಇನ್ನಾದರೂ ಕಾಣಿಸಲಿ ಎಂದು ಆಶಿಸೋಣ.

 

Leave a Reply

Your email address will not be published.