ಕನ್ನಡದ ಹೊಸ ತೋಂಡಿತನ

– ರಂಗನಾಥ ಕಂಟನಕುಂಟೆ

ಕನ್ನಡ ಸಮುದಾಯ ಮತ್ತೆ ಅಕ್ಶರದಿಂದ ನವಮೌಖಿಕತೆಯ ಕಡೆಗೆ ಚಲಿಸತೊಡಗಿದೆ ಎನ್ನಿಸುತ್ತದೆ. ಕನ್ನಡದ ಓದು, ಬರೆಹ ಮತ್ತು ಕನ್ನಡದ ಬಳಕೆಗಳು ಕೆಲವರಿಗೆ ಮಾತ್ರ ಎನ್ನುವಂತಾಗಿದೆ. ತಂತ್ರಜ್ಞಾನ ಮತ್ತು ಹೊಸ ದೃಶ್ಯಮಾಧ್ಯಮಗಳು ಬಹುಸಂಖ್ಯಾತ ಕನ್ನಡಿಗರನ್ನು ಮತ್ತೆ ‘ಅನಕ್ಶರತೆ’ಯ ಕಡೆಗೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಇದು ಕನ್ನಡವನ್ನು ನಮ್ಮ ‘ನಾಳೆ’ಗಳಿಗೂ ಉಳಿಸಿಕೊಳ್ಳಲು ಬಯಸುವವರ ಎದುರು ಹೊಸ ಸವಾಲನ್ನು ಮುಂದಿಟ್ಟಿದೆ.

ಕಳೆದ ಕೆಲವು ದಶಕಗಳ ಹಿಂದೆ ಶಿಕ್ಶಣದ ಮುಖ್ಯ ಉದ್ದೇಶಗಳಲ್ಲಿ ‘ಅಕ್ಶರ’ ಕಲಿಯುವುದು ಮತ್ತು ‘ಓದಿನ’ ಕಸುವನ್ನು ಪಡೆಯುವುದು ಮುಖ್ಯ ಗುರಿಯಾಗಿತ್ತು. ಓದು ಮತ್ತು ಬರೆಹದ ಕೌಶಲಗಳನ್ನು ಗಳಿಸಿಕೊಳ್ಳುವ ಮೂಲಕ ಹೊಸಕಾಲದ ಅಗತ್ಯಗಳನ್ನು ಈಡೇರಿಸಿಕೊಳ್ಳುವುದಾಗಿತ್ತು. ಅಂದರೆ ಇಪ್ಪತ್ತನೆಯ ಶತಮಾನದಲ್ಲಿ ಸಾಮಾಜಿಕ ಮುಂಚಲನೆಯನ್ನು ಪಡೆಯಲು ಓದು ಮತ್ತು ಬರೆಹದ ಕೌಶಲಗಳು ಬಹಳ ಮುಖ್ಯವೆನಿಸಿದ್ದವು. ಅವುಗಳ ಮೂಲಕ ಅಗತ್ಯವಿರುವ ಶೈಕ್ಶಣಿಕ ಕಸುವು ಪಡೆದು ಉದ್ಯೋಗ ಗಳಿಸಿಕೊಳ್ಳುವುದು ಮತ್ತು ಆ ಮೂಲಕ ತಮ್ಮ ಸಾಮಾಜಿಕ ಏಳ್ಗೆಯನ್ನು ಹೊಂದಲು ಪ್ರಯತ್ನಿಸಲಾಗುತ್ತಿತ್ತು. ಈ ಉದ್ದೇಶದಿಂದ ಜನರು ಈಗಲೂ ದೂರವೇನು ಬಂದಿಲ್ಲ. ಇಂದೂ ಕೂಡ ಶಿಕ್ಶಣದ ಕೊನೆಯ ಉದ್ದೇಶ ಉದ್ಯೋಗ’ ಗಳಿಕೆಯೇ. ಇದು ಅತಿಗೆ ಮುಟ್ಟಿ ಉದ್ಯೋಗ ದೊರಕಿಸಿ ಕೊಡದ ಶಿಕ್ಶಣ ಶಿಕ್ಶಣವೇ ಅಲ್ಲ ಎಂಬಂತಾಗಿದೆ. ವೃತ್ತಿಪರ ಶಿಕ್ಶಣಕ್ಕೇ ಹೆಚ್ಚಿನ ಆದ್ಯತೆ ದೊರೆತು ಮೂಲ ವಿಜ್ಞಾನ ಮತ್ತು ಕಲಾವಿಶಯಗಳ ಪದವಿಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿ ಬಹುತೇಕ ಕಾಲೇಜುಗಳಲ್ಲಿ ಅಂತಹ ಕೋರ್ಸುಗಳನ್ನೇ ಮುಚ್ಚಲಾಗಿದೆ. ಆಳದಲ್ಲಿ ‘ಶಿಕ್ಶಣ’ದ ಮೂಲ ಉದ್ದೇಶ ಶಿಕ್ಶಣ ನೀಡುವವರಿಗೆ ಮತ್ತು ಪಡೆಯುವವರಿಗೆ ಮರೆತುಹೋಗಿದೆ. ಕಲಿಕೆ’ ಯಾಂತ್ರಿಕವಾಗಿ ನೀರಸ ಚಟುವಟಿಕೆಯಾಗಿದೆ. ಇಂತಹ ವೇಳೆಯಲ್ಲಿಯೇ ಕನ್ನಡ ನುಡಿಯ ಕಲಿಕೆ, ಕಲಿಸುವಿಕೆ ಮತ್ತು ಬಳಕೆಗಳಲ್ಲಿ ಹಲವು ಬದಲಾವಣೆಗಳು ನಡೆದಿವೆ; ಮತ್ತು ಒಟ್ಟಾರೆ ನುಡಿ ಕಸುವನ್ನು ಶೈಕ್ಶಣಿಕವಾಗಿ ಸ್ವಾಧೀನಪಡಿಸಿಕೊಳ್ಳುವ ಹಂತದಲ್ಲಿ ಸಮಸ್ಯೆಗಳು ದೈತ್ಯಾಕಾರವಾಗಿ ಬೆಳೆದು ನಿಂತಿವೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಇಂದಿಗೂ ಶಿಕ್ಶಣದಿಂದ ವಂಚಿತವಾಗಿರುವ ಅದೇಶ್ಟೋ ಜನರಿ ದ್ದಾರೆ ಮತ್ತು ಜನ ಸಮುದಾಯಗಳಿವೆ. ನಮ್ಮ ಸಮಾಜದಲ್ಲಿ ಅನಕ್ಶರತೆಯ ಸಮಸ್ಯೆಯನ್ನು ಇಂದಿಗೂ ಪೂರ್ಣವಾಗಿ ನಿವಾರಿ ಸಿಕೊಳ್ಳಲು ಸಾಧ್ಯವಾಗಿಯೇ ಇಲ್ಲ. ಎಶ್ಟೋ ಜನರಿಗೆ ಇಂದಿಗೂ ಅಕ್ಶರ ಕಲಿಕೆ ಮತ್ತು ಓದಿನ ಕಸುವನ್ನು ಗಳಿಸಿಕೊಳ್ಳಲು ಸಾಧ್ಯವಾಗದೆ ಇಂದಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಬಹಳವೇ ಹಿಂದುಳಿದಿದ್ದಾರೆ. ಇಂತಹವರಲ್ಲಿ ಕನ್ನಡ ನುಡಿಬಳಕೆಯ ಕಸುವು ತೋಂಡಿ ಕಸುವಾಗಿಯೇ ಉಳಿದಿದೆ. ಇಂತಹವರನ್ನು ಸಾಕ್ಶರರನ್ನಾಗಿಸುವ ಹೊಣೆ ಪ್ರಭುತ್ವದ ಮೇಲೆ ಹಾಗೆಯೇ ಉಳಿದಿದೆ. ಇಂದಿಗೂ ಅಕ್ಶರ ವಂಚಿತ ಜನರು ಮತ್ತು ಜನಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿದ್ದು ಒಟ್ಟು ಸಮಾಜದಲ್ಲಿ ಅವರನ್ನು ಕಡೆಗಾಣಿಸಲಾಗುತ್ತಿದೆ. ಈ ಹಿಂದುಳಿಯುವಿಕೆಯ ಅಸಮಾನತೆಯನ್ನು ನಿವಾರಿಸಬೇಕಿರುವುದು ಯಾವುದೇ ಆಧುನಿಕ ನಾಗರಿಕ ಸಮಾಜದ ಆದ್ಯ ಕೆಲಸವೂ ಆಗಿದೆ. ಈ ಕೊರತೆಯನ್ನು ನೀಗಿಸದ ದೇಶಗಳನ್ನು ಹಿಂದುಳಿದ ಅನಭಿವೃದ್ಧಿಗೊಂಡಿರುವ ದೇಶಗಳೆಂದು ಆರ್ಥಿಕ ಚಿಂತಕರು ಗುರುತಿಸುತ್ತಾರೆ. ಅಕ್ಶರ ಮತ್ತು ಓದಿನ ಕೌಶಲಗಳು ಇಂದಿನ ಕಂಪ್ಯೂಟರ್ ಮತ್ತು ಇಂಗ್ಲಿಶ್‍ಗಳಂತೆ ಸಾಮಾಜಿಕ ಮುಂಚಲನೆಯ ಪರಿಕರಗಳಾಗಿದ್ದು ಅವುಗಳಿಂದ ವಂಚಿತವಾದ ಸಮುದಾಯಗಳು ಅವನ್ನು ಗಳಿಸಿಕೊಳ್ಳುವ ಕನಸು ಕನಸಾಗಿಯೇ ಉಳಿದಿದೆ. ಇವುಗಳನ್ನು ಗಳಿಸಿಕೊಳ್ಳದೇ ಹೋದರೆ ಸಾಮಾಜಿಕವಾಗಿ ಏಳ್ಗೆ ಹೊಂದಲು ಸಾಧ್ಯವೇ ಇಲ್ಲವೆಂಬ ಸ್ಥಿತಿಯಿದೆ. ಇದು ಇಂದಿಗೂ ಜೀವಂತವಾಗಿರುವ ಸಮಸ್ಯೆ.

ಆದರೆ ಇಲ್ಲಿ ಕಳೆದ ಎರಡು ದಶಕಗಳಿಂದ ಈಚೆಗೆ ‘ಶಿಕ್ಶಣ’ ಪಡೆದವರಲ್ಲಿ ಹೆಚ್ಚುತ್ತಿರುವ ಕನ್ನಡದ ‘ನವಮೌಖಿ ಕತೆ’ ಮತ್ತು ಕುಗ್ಗಿರುವ ಬರೆಹದ ಕಸುವಿನ ಬಗೆಗೆ ಚರ್ಚಿಸಲು ಪ್ರಯತ್ನಿಸಲಾಗುವುದು. ಇಲ್ಲಿ ಕೇಳಿಕೊಳ್ಳಬೇಕಾದ ಕೇಳ್ವಿಯೆಂದರೆ, ಕನ್ನಡ ‘ಕಲಿತವರ ನವಮೌಖಿಕತೆ ಎಂದರೇನು?’ ಈ ಕೇಳ್ವಿಯನ್ನು ಇಂದು ಬಹಳ ಗಂಭೀರವಾಗಿ ಎದುರಾಗಬೇಕಿದೆ. ಅಂದರೆ ಮೇಲೆ ಹೇಳಿದಂತೆ ಶಿಕ್ಶಣದ ಹಲವು ಉದ್ದೇಶಗಳಲ್ಲಿ ಅಕ್ಶರ ಕಲಿಕೆಯೂ ಒಂದು. ಅದರಲ್ಲಿಯೂ ಕನ್ನಡದಂತಹ ನುಡಿಗಳಲ್ಲಿ ಅಕ್ಶರಸ್ಥರಾಗುವುದೆಂದರೆ ಕಲಿತ ವ್ಯಕ್ತಿಯು ಸಾಮಾಜಿಕವಾಗಿ ಸಬಲೀಕರಣಗೊಳ್ಳುವುದು ಒಂದಾದರೆ, ಕನ್ನಡ ನುಡಿಯನ್ನು ಆಧುನಿಕ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಸಜ್ಜುಗೊಳಿಸುವುದು ಮತ್ತೊಂದು ಮುಖ್ಯ ಗುರಿಯಾಗಿರುತ್ತದೆ. ಆ ಮೂಲಕ ಕನ್ನಡವನ್ನು ಅದರದೇ ನೆಲದಲ್ಲಿ ಸಂಗೋಪನೆ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಈ ಉದ್ದೇಶದಿಂದಲೇ ನಮ್ಮ ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಶಿಕ್ಶಣದ ಮಾಧ್ಯಮವಾಗಿಯೋ ಇಲ್ಲವೇ ಒಂದು ಭಾಶೆಯನ್ನಾಗಿಯೋ ಕಲಿಸಲಾಗುತ್ತಿದೆ. ಕನ್ನಡದ ಕಸುವನ್ನು ಬೆಳೆಸುವ  ಇಚ್ಚೆಯೊಂದಿಗೆ ಇಂದಿಗೂ ಇದನ್ನು ಮುಂದುವರಿಸಿ ಕೊಂಡು ಬರಲಾಗುತ್ತಿದೆ.

ಆದರೆ ಇಂದು ಈ ಉದ್ದೇಶ ಈಡೇರಿದೆಯೇ? ಎಂಬ ಕೇಳ್ವಿ ಇಲ್ಲಿ ಹುಟ್ಟುತ್ತದೆ. ಯಾಕೆಂದರೆ ಇಂದು ಕನ್ನಡ ಕಲಿತ ಬಹುತೇಕರು ತಮ್ಮ ದೈನಂದಿನ ವ್ಯಾವಹಾರಿಕ ಅಗತ್ಯಕ್ಕೆ ಕನ್ನಡವನ್ನು ‘ಬರೆಹದ ನುಡಿ’ಯಾಗಿ ಬಳಸುತ್ತಿದ್ದಾರೆಯೇ? ಎಂದು ಕೇಳಿಕೊಂಡರೆ ‘ಅವರು ಬಳಸುತ್ತಿಲ್ಲ’ ಎಂಬುದೇ ಉತ್ತರವಾಗಿರುತ್ತದೆ. ಅವರು ಕೊನೆಗೆ ಸಹಿ ಮಾಡಲಾದರೂ ಬಳಸುತ್ತಾರೆಯೇ ಎಂದರೆ ಅದೂ ಇಲ್ಲ. ಆರಂಭದಲ್ಲಿ ‘ಹೆಬ್ಬೆಟ್ಟು’ ಎಂಬ ಹಣೆಪಟ್ಟಿಯಿಂದ ಬಿಡುಗಡೆಗೊಳ್ಳಲು, ಅಂದರೆ ಸಹಿ ಮಾಡಲಾದರೂ ಅಕ್ಶರ ಕಲಿಯಬೇಕೆಂಬ ಅಪೇಕ್ಶೆ ಒತ್ತಾಯಗಳಿದ್ದವು. ಈಗ ನಮ್ಮ ಶಿಕ್ಶಣ ವ್ಯವಸ್ಥೆಯ ದೋಶಪೂರಿತ ಪರಿಸರದಿಂದ ಕನ್ನಡಕ್ಕೆ ಅಂತಹ ‘ಸಹಿಭಾಗ್ಯ’ವೂ ಇಲ್ಲ. ಇಂದು ಶೇ.99ರಶ್ಟು ಜನರು ಇಂಗ್ಲಿಶ್‍ನಲ್ಲಿಯೇ ಸಹಿ ಮಾಡುತ್ತಾರೆ. ಅಂದರೆ ಬರೆಹವನ್ನು ಒಂದು ಕೌಶಲವಾಗಿ ಕನ್ನಡದಲ್ಲಿ ಪಡೆದ ಜನರು ಅದನ್ನು ತಮ್ಮ ಬದುಕಿನಲ್ಲಿ ಬಳಸುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಕನ್ನಡವನ್ನು ಬರೆಹ ಮಾಡಲು ಕಲಿತ ಬಹುಸಂಖ್ಯಾತರು ತಮ್ಮ ಬರೆಹದ ಕಸುವನ್ನು ಇನ್ನೆಲ್ಲಿ ವ್ಯಕ್ತಪಡಿಸುತ್ತಾರೆ? ಅವರ್ಯಾರು ಆಡಳಿತಗಾರರಲ್ಲ; ವೃತ್ತಿಪರ ಬರೆಹಗಾರರೂ ಅಲ್ಲ. ಅವರು ತಮ್ಮ ಅನೌಪಚಾರಿಕ ಮಾತುಕತೆಗೆ ಕನ್ನಡ ಬಳಸುವುದನ್ನು ಹೊರತುಪಡಿಸಿದರೆ ಬರೆಹದ ಅಗತ್ಯಕ್ಕೆ ಹೆಚ್ಚು ಬಳಸುತ್ತಿಲ್ಲ. ನಮ್ಮ ಪೂರ್ವಿಕರೂ ಕೂಡ ಕನ್ನಡವನ್ನು ಮೌಖಿಕವಾಗಿಯೇ ಉಳಿಸಿಕೊಂಡು ಬಂದಿದ್ದರಲ್ಲವೇ? ಆದರೆ ಅವರ ಮೌಖಿಕತೆಗೂ ಕಲಿತವರ ಮೌಖಿಕತೆಗೆ ಹೆಚ್ಚು ಅಂತರವಿದೆ ಮತ್ತು ಅಪಾಯಗಳಿವೆ.

ಈ ನವಮೌಖಿಕತೆಗೆ ಹಲವು ಕಾರಣಗಳಿವೆ. ಒಂದು, ಕಂಪ್ಯೂಟರ್ ಮತ್ತು ಸಾಫ್ಟ್‍ವೇರ್ ತಂತ್ರಜ್ಞಾನದ ವಿಪರೀತ ಬಳಕೆ. ಎರಡು, ಕನ್ನಡದ ದೋಷಪೂರಿತ ಬೋಧನೆ ಮತ್ತು ಕಲಿಕೆ. ಮೂರು, ಬದಲಾದ ಆರ್ಥಿಕ ರಾಜಕೀಯ ನೀತಿಗಳಿಂದ ರೂಪುಗೊಂಡ ಔದ್ಯಮಿಕ ಮತ್ತು ಸಾಮಾಜಿಕ ಪರಿಸರ. ನಾಲ್ಕು, ಬದಲಾದ ಆರ್ಥಿಕ ನೀತಿಗಳ ಲಾಭ ಪಡೆದು ಸೃಷ್ಟಿಯಾಗುತ್ತಿರುವ ಪ್ರತಿಷ್ಟಿತ ವರ್ಗ. ಅಂದರೆ ಎಲೈಟ್ ಕ್ಲಾಸ್ ಮತ್ತು ಅದರ ಜೀವನ ಪದ್ಧತಿ-ಧೋರಣೆ. ಈ ವರ್ಗ ‘ತನ್ನತನ’ವನ್ನು ಕಳೆದುಕೊಂಡು ಇಲ್ಲವೇ ಮರೆಮಾಚಿಕೊಂಡು ‘ಕನ್ನಡ ಮನಸ್ಸಿ’ನಿಂದ ದೂರ ಸರಿಯುತ್ತಿರುವುದು ಇದೆ. ಹೀಗೆ ಹಲವು ಸಂಗತಿಗಳು ಕನ್ನಡವನ್ನು ಮತ್ತೆ ನವಮೌಖಿಕತೆಗೆ ಮತ್ತು ಅಂಚಿಗೆ ತಳ್ಳುತ್ತಿವೆ. ಮೊದಲಿಗೆ ಇಲ್ಲಿ ಗಮನಿಸುವುದಾದರೆ ತಂತ್ರಜ್ಞಾನ ಬದುಕಿನ ಎಲ್ಲ ವಲಯವನ್ನು ಆವರಿಸಿಕೊಳ್ಳುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಅದರ ಬಳಕೆ ಹೆಚ್ಚಿದಂತೆ, ಇಂಗ್ಲಿಶ್ ಕೂಡ ಎಲ್ಲೆಡೆ ನುಗ್ಗಿಬಿಟ್ಟಿದೆ. ದಿನಸಿ ಅಂಗಡಿಯ ರಸೀದಿಗಳಿಂದ ಆರಂಭವಾಗಿ ನಿತ್ಯ ರವಾನಿಸುವ ಫೋನುಗಳ ಸಂದೇಶಗಳವರೆಗೆ ಇಂಗ್ಲಿಶ್ ಹಬ್ಬಿದೆ. ದಟ್ಟ ಮೋಡದಂತೆ ಕವಿದಿದೆ. ಎಲ್ಲೆಡೆ ಕಣ್ಣುಗಳಿಗೆ ಅಪ್ಪಳಿಸುವ ಭಾಷೆಯಾಗಿ ಇಂಗ್ಲಿಶ್ ಕಾಣುತ್ತಿದೆ. ಹೊಸಕಾಲದ ನುಡಿಬಳಕೆಯ ನೆಲೆಗಳಲ್ಲಿ ಕನ್ನಡಕ್ಕೆ ಅವಕಾಶ ಇರುವಂತೆ ನೋಡಿಕೊಳ್ಳುವುದು ನಿತ್ಯ ಹೋರಾಟವಾಗಿದೆ. ಅಂ ದರೆ ಕನ್ನಡ ಕಲಿತವರು ದೈನಂದಿನ ಬದುಕಿನ ವ್ಯಾವಹಾರಿಕ ಅಗತ್ಯಗಳಿಗೆ ಕನ್ನಡ ಬಳಸದಂತಹ ಸನ್ನಿವೇಶವೊಂದು ನಿತ್ಯವೂ ಸೃಷ್ಟಿಯಾಗುತ್ತಲೇ ಇದೆ. ಇಂತಹ ಸನ್ನಿವೇಶದಿಂದ ಬಿಡುಗಡೆ ಪಡೆಯಬೇಕೆಂಬ ಎಚ್ಚರವೂ ಕಣ್ಮರೆಯಾಗುವ ಸನ್ನಿವೇಶ ಇಂದಿದೆ. ಈ ಪರಿಸರದ ಒತ್ತಡ ಕನ್ನಡದ ಅಕ್ಷರಸ್ಥರನ್ನೂ ಅದರ ಬಳಕೆಯಿಂದ ದೂರವೇ ಇರುವಂತೆ ಮಾಡುತ್ತಲೇ ಇದೆ.

ಇದರ ಜೊತೆಗೆ ಕನ್ನಡವನ್ನು ಅದರ ಬಳಕೆಯ ನೆಲೆಯಲ್ಲಿ ನವಮೌಖಿಕತೆಗೆ ತಳ್ಳುತ್ತಿರುವ ಅಂಶಗಳಲ್ಲಿ ಮುಖ್ಯವಾದುದು ಕನ್ನಡದ ದೋಷಪೂರಿತ ಬೋಧನೆ ಮತ್ತು ಕಲಿಯುವ ಪ್ರಕ್ರಿಯೆ. ಕನ್ನಡದ ಕಲಿಕೆ ಮತ್ತು ಬೋಧನಾ ಕ್ರಮ ಕನ್ನಡ ನುಡಿಯ ಬಗೆಗೆ ನಂಬಿಕೆ ವಿಶ್ವಾಸಗಳನ್ನು ಮೂಡಿಸದ ಕಾರಣ ಕನ್ನಡ ‘ಕಲಿತ’ವರಲ್ಲಿಯೇ ಅದರ ಬಗೆಗೆ ಕೀಳರಿಮೆ ಉಂಟಾಗಿದೆ. ಈ ಕೀಳರಿಮೆ ದೋಶÀಪೂರಿತ ಕಲಿಕೆಯನ್ನು ನೆನಪಿಸುತ್ತಲೇ ಇರುತ್ತದೆ. ಕನ್ನಡವನ್ನು ಎಲ್ಲಿಯಾದರೂ ಬಳಸುವ ಹೊತ್ತು ಒದಗಿಬಂದರೂ ಅಂತಹ ಕಡೆ ಅದನ್ನು ಬಳಸದೇ ಇರುವುದು ಇದೆ. ಇದಕ್ಕೆ ಬೇರೇನೂ ಕಾರಣವಿಲ್ಲ. ಕನ್ನಡ ‘ಕಲಿತವರು’ ಅವರ ಕನ್ನಡ ಕಲಿಕೆಯ ಬಗೆಗೆ ವಿಶ್ವಾಸವಿಲ್ಲದ ಕಾರಣ ಕನ್ನಡವನ್ನು ಬಳಸದೇ ಇರುತ್ತಾರೆ. ಹಾಗಾಗಿ ಕಲಿತರಲ್ಲಿನ ಇಂತಹ ಕೀಳರಿಮೆಯಿಂದಲೂ ಕನ್ನಡವನ್ನು ಬರೆಹದ ವ್ಯಾವಹಾರಿಕ ಅಗತ್ಯಗಳಿಗೆ ಬಳಸದೇ ಇರುವಂತೆ ಮಾಡುತ್ತಿದೆ. ಇಂತಹ ಸನ್ನಿವೇಶ ನಿರ್ಮಾಣವಾಗುವುದರ ಹಿಂದೆ ಮೇಲೆ ಹೇಳಿದಂತೆ ನಮ್ಮ ಶಿಕ್ಷಣ ಬೋಧನಾ ವ್ಯವಸ್ಥೆಯ ವಿಧಾನಗಳೂ ಕಾರಣವಾಗಿವೆ. ಮಕ್ಕಳಲ್ಲಿ ಓದು ಮತ್ತು ಬರೆಹದ ಸಾಮಥ್ರ್ಯ ಬೆಳೆಸಲು ಬೇಕಾದ ವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಳ್ಳದಿರುವುದು ಕನ್ನಡವನ್ನು ಬಳಸದೇ ಇರುವುದಕ್ಕೆ ಪ್ರಬಲವಾದ ಕಾರಣವನ್ನು ಒದಗಿಸುತ್ತಿದೆ. ಅಂದರೆ ಕನ್ನಡ ನುಡಿ ಕಲಿಸುವ ಬಗೆ ಕೇವಲ ಒಂದು ಆಚ ರಣೆಯಂತಾಗಿದ್ದು ಅದು ಕಲಿಸುವವರು ಮತ್ತು ಕಲಿಯುವವರಲ್ಲಿ ಒಂದು ಕ್ರಿಯಾಶೀಲ ಬಗೆಯಾಗಿ ರೂಢಿಯಲ್ಲಿಲ್ಲ. ಮುಖ್ಯವಾಗಿ ಕನ್ನಡದಂತಹ ಒಂದು ನುಡಿಯನ್ನು ಒಂದು ಸಮಾಜದಲ್ಲಿ ಯಾಕೆ ಶಿಕ್ಶಣದ ಮೂಲಕ ಕಲಿಸಲಾಗುತ್ತದೆ? ಅದರ ಉದ್ದೇಶಗಳೇನು? ಎಂಬುದೇ ಗೊತ್ತಿಲ್ಲದಂತೆ ಇದೆ. ಬೋಧಕರಾದ ತಪ್ಪಿಗೆ ಏನೋ ಒಂದನ್ನು ಕಲಿಸಬೇಕು; ಏನೋ ಒಂದನ್ನು ಕಲಿತರಾಯಿತು ಎಂಬ ಧೋರಣೆಯಿದೆ. ನುಡಿ ಬೋಧನೆ ಮತ್ತು ಕಲಿಕೆಗಳು ದಾರಿ ತಪ್ಪಿ ನಡೆಯುತ್ತಿರುವುದು ಕನ್ನಡವನ್ನು ನವಮೌಖಿಕತೆಗೆ ಮತ್ತೆ ತಳ್ಳಿವೆ. ಇದು ನಿಡುಗಾಲದಲ್ಲಿ ಕನ್ನಡಕ್ಕೆ ಬೇರೆ ರೀತಿಯ ಸಮಸ್ಯೆಗಳನ್ನು ತಂದೊಡ್ಡಲಿವೆ. ಇದುವರೆಗಿನ ನಮ್ಮ ಅನುಭವವೆಂದರೆ ಬಗೆಹರಿಸದ ಒಂದು ಸಮಸ್ಯೆ ನೂರು ಹೊಸ ಸಮಸ್ಯೆಗಳಿಗೆ ಕಾರಣವಾಗಿರುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ.

ಇನ್ನು ಬದಲಾದ ಸಂದರ್ಭದಲ್ಲಿ ಆರ್ಥಿಕ ಮತ್ತು ಔದ್ಯಮಿಕ ಪರಿಸರ ಇಂಗ್ಲಿಶ್ಮಯವಾಗಿದೆ. ಇದಕ್ಕೆ ನಮ್ಮ ರಾಜಕೀಯ ಆರ್ಥಿಕ ನೀತಿಗಳೇ ಕಾರಣವಾಗಿವೆ. ಸರ್ಕಾರದ ಆಡಳಿತ ವಲಯದಲ್ಲಿ ಕನ್ನಡ ಬಳಕೆಗೆ ಒತ್ತಡವಿದ್ದು ಅದನ್ನು ಕೊಂಚ ಪಾಲಿಸಲಾಗುತ್ತಿದೆ ಬಿಟ್ಟರೆ ಖಾಸಗಿ ಆಡಳಿತವಂತೂ ಬಹುತೇಕ ಇಂಗ್ಲಿಶ್ ಮಯವಾಗಿದೆ. ಖಾಸಗಿ ಶಾಲಾ ಕಾಲೇಜುಗಳಿಂದ ಹಿಡಿದು ಉದ್ಯಮಗಳವರೆಗೆ ಎಲ್ಲವೂ ಇಂಗ್ಲಿಶ್ಮಯ. ಇನ್ನು ಇಂತಹ ಪರಿಸರದ ಉಪ ಉತ್ಪನ್ನವಾಗಿ ನಿರ್ಮಾಣವಾಗಿರುವ ನವಮಧ್ಯಮ ವರ್ಗ ಇಲ್ಲವೇ ಪ್ರತಿಶ್ಟಿತ ವರ್ಗ ತನ್ನ ಸಾಂಸ್ಕøತಿಕ ಪ್ರತಿಶ್ಟೆಯ ಸಂಕೇತವಾಗಿ ಇಂಗ್ಲಿಶ್ ಅನ್ನೇ ತನ್ನ ಬದುಕಿನ ವಲಯಗಳಲ್ಲಿ ಬಳಸಲು ಬಯಸುತ್ತದೆ. ಅಲ್ಲದೆ ಈ ವರ್ಗ ತನ್ನನ್ನು ತಾನು ಪ್ರತಿಶ್ಟಿತವೆಂದು ಸಮಾಜದಲ್ಲಿ ಸ್ಥಾಪಿಸಿಕೊಂಡು ತಾನೇ ಸಮಾಜದಲ್ಲಿ ಮೇಲುವರ್ಗವೆಂದು ‘ಶ್ರೇಶ್ಟ’ ವರ್ಗವೆಂದು ಬಿಂಬಿಸಿಕೊಂಡಿರುವುದರಿಂದ ಇದನ್ನೇ ಇದಕ್ಕಿಂತ ಕೆಳಗಿನವರು ಅನುಕರಿಸಲು ಬಯಸುತ್ತಾರೆ. ಇದಕ್ಕಿಂತ ಕೆಳಗಿನವರು ಈ ವರ್ಗಕ್ಕೆ ಏರಲು ಬಯಸುತ್ತಾರೆ. ಅಂತಹ ಏರಿಕೆಗೆ ಇಂಗ್ಲಿಶ್ ಕೂಡ ಒಂದು ಪರಿಕರವಾಗಿದ್ದು ಅದನ್ನು ಸ್ವಾಧೀನಪಡಿಸಿಕೊಳ್ಳುವ ಆತುರದಲ್ಲಿ ತನ್ನ ಮೂಲನುಡಿಯನ್ನು ಬದಿಗೆ ಸರಿಸಲು ಬಯಸುತ್ತಾರೆ. ತನ್ನ ನುಡಿಯ ಬಗೆಗೆ ಕೀಳರಿಮೆಯನ್ನೂ ಅನುಭವಿಸುತ್ತಾರೆ. ಕೊನೆಗೆ ಅದರಿಂದ ಪ್ರಯೋಜನವಿಲ್ಲವೆಂದು ದೂರಿ ಇಂಗ್ಲಿಶನ್ನು ಅಪ್ಪಿಕೊಳ್ಳುವ ಇಚ್ಚೆ ತೋರುತ್ತಾರೆ. ಇದು ನಿತ್ಯದ ಪ್ರಕ್ರಿಯೆ. ಹೀಗೆ ಕನ್ನಡವನ್ನು ಅಂಚಿಗೆ ಸರಿಸುವ ಕೆಲಸ ನಿತ್ಯ ನಡೆಯುತ್ತಲೇ ಇದೆ.

ಇದಲ್ಲದೆ ಇಂದಿನ ಕಾಲಘಟ್ಟದಲ್ಲಿ ಓದು ಮತ್ತು ಬರೆಹ ಎಂಬ ಪರಿಕರಗಳೇ ಹಳೆಯವಾಗಿ ಅವನ್ನು ಬಳಸದೆಯೂ ಸಾಮಾಜಿಕ ವಾಗಿ ಮುಂಚಲನೆ ಪಡೆಯಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಮೇಲೆ ಹೇಳಿದಂತೆ ಅದಕ್ಕೆ ತಂತ್ರಜ್ಞಾನ ನೆರವು ನೀಡುತ್ತಿದೆ. ಕನಿಶ್ಟ ಭಾಶಿಕ ಜ್ಞಾನವಿದ್ದರೂ ಸಾಕು ಸಂದರ್ಭ ಸನ್ನಿವೇಶವನ್ನು ನಿರ್ವಹಿಸಬಹುದು ಎಂಬ ‘ವಿಶ್ವಾಸ’ ಯುವಜನರಲ್ಲಿ ಮೂಡಿಬಿಟ್ಟಿದೆ. ಅದಲ್ಲದೆ ಇಂದು ಪುಸ್ತಕಗಳ ಓದಿಗಿಂತ ಕಣ್ಣೋದು ಹೆಚ್ಚಾಗುತ್ತಿದೆ. ಅಂದರೆ ದೃಶ್ಯಪಟ್ಯಗಳ ಬಳಕೆ ಹೆಚ್ಚಾಗುತ್ತಿದೆ. ‘ಲೋಕಜ್ಞಾನ’ವನ್ನು ಓದಿನಿಂದಲ್ಲದೆ ನೋಡುವುದರಿಂದ ಪಡೆದುಕೊಳ್ಳಲಾಗುತ್ತಿದೆ. ಒಂದು ಕಾಲಕ್ಕೆ ಪುಸ್ತಕಗಳು ಪಡೆದುಕೊಳ್ಳುತ್ತಿದ್ದ ಸಮಯವನ್ನು ಇಂದು ವಿವಿಧ ದೃಶ್ಯಮಾಧ್ಯಮಗಳು ಪಡೆದುಕೊಳ್ಳುತ್ತಿವೆ. ಪುಸ್ತಕಗಳು ಬಹುಸಂಖ್ಯಾತ ಜನಕ್ಕೆ ಅಪ್ರಸ್ತುತ ಎನ್ನಿಸುತ್ತಿವೆ. ಈಗಾಗಲೇ ವೃತ್ತಪತ್ರಿಕೆಗಳು ಅಪ್ರಸ್ತುತವಾಗತೊಡಗಿವೆ. ಅಲ್ಲದೆ ಅವುಗಳ ಓದು ಕಶ್ಟದಾಯಕ ಎನ್ನಿಸತೊಡಗಿವೆ. ಹಾಗಾಗಿ ಸುಲಭವಾಗಿ ಮತ್ತು ಹೆಚ್ಚು ಆಕರ್ಶಕವಾಗಿ ದೃಶ್ಯಮಾಧ್ಯಮಗಳು ಜನರನ್ನು ಆವರಿಸಿಕೊಂಡುಬಿಟ್ಟಿವೆ. ಓದು ಮತ್ತು ಬರೆಹಗಳು ಕಡೆಗಣಿಸಲ್ಪಡುತ್ತಿವೆ.

ಇದೆಲ್ಲದರ ಒಟ್ಟು ಪರಿಣಾಮವಾಗಿ ಕನ್ನಡ ಸಮುದಾಯ ಮತ್ತೆ ಅಕ್ಶರದಿಂದ ನವಮೌಖಿಕತೆಯ ಕಡೆಗೆ ಚಲಿಸತೊಡಗಿದೆ ಎನ್ನಿಸುತ್ತದೆ. ಕನ್ನಡದ ಓದು, ಬರೆಹ ಮತ್ತು ಕನ್ನಡದ ಬಳಕೆಗಳು ಕೆಲವರಿಗೆ ಮಾತ್ರ ಎನ್ನುವಂತಾಗಿದೆ. ತಂತ್ರಜ್ಞಾನ ಮತ್ತು ಹೊಸ ದೃಶ್ಯಮಾಧ್ಯಮಗಳು ಬಹುಸಂಖ್ಯಾತ ಕನ್ನಡಿಗರನ್ನು ಮತ್ತೆ ‘ಅನಕ್ಶರತೆ’ಯ ಕಡೆಗೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಇದು ಕನ್ನಡವನ್ನು ನಮ್ಮ ನಾಳೆ’ಗಳಿಗೂ ಉಳಿಸಿಕೊಳ್ಳಲು ಬಯಸುವವರ ಎದುರು ಹೊಸ ಸವಾಲನ್ನು ಮುಂದಿಟ್ಟಿದೆ. ಕನ್ನಡವನ್ನು ನಮ್ಮ ನಾಳೆಗಳಿಗೆ ತಕ್ಕಂತೆ ಸಜ್ಜುಗೊಳಿಸಲು ಮಾಡಬೇಕಾದ ಹೊಸಪ್ರಯತ್ನಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಬಗೆಗೆ ಕನ್ನಡಪರ ಕಾಳಜಿಯುಳ್ಳವರು ಎಂದಿಗಿಂತ ಹೆಚ್ಚು ಇಂದು ಯೋಚಿಸಬೇಕಾಗಿದೆ. ಈ ನವಮೌಖಿಕತೆ ಕನ್ನಡ ಸಾಹಿತ್ಯದ ಬರೆಹ ಪರಂಪರೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕರ್ನಾಟಕದಲ್ಲಿ ಸಾಕ್ಶರರ ಸಂಖ್ಯೆ ಶೇಕಡವಾರು ಎಶ್ಟೇ ಹೆಚ್ಚಾದರೂ ಕನ್ನಡದ ಒಂದು ಸಾವಿರ ಕೃತಿಗಳು ಮಾರಾಟವಾಗಲು ಎಷ್ಟೋ ವರುಶಗಳು ಬೇಕಿವೆ. ಅಕ್ಶರಸ್ಥರ ಸಂಖ್ಯೆ ಹೆಚ್ಚಿದಂತೆ ಕನ್ನಡದ ವಿವಿಧ ಬಗೆಯ ಕೃತಿಗಳ ಬಳಕೆ, ಕನ್ನಡದ ದಿನಪತ್ರಿಕೆಗಳ ಓದುಗರಲ್ಲಿ ಹೆಚ್ಚಳ ಆಗಬೇಕಿತ್ತು. ಆಡಳಿತ ಮುಂತಾದ ಕಡೆ ಕನ್ನಡ ಬಳಕೆ ಹೆಚ್ಚಾಗಬೇಕಿತ್ತು. ಆದರೆ ದಿನೇ ದಿನೇ ಅವುಗಳ ಸಂಖ್ಯೆಗಳಲ್ಲಿ ಇಳಿಮುಖವಾಗುತ್ತಿರುವುದು ಕಂಡುಬಂದಿದೆ. ಅಂದರೆ ಒಂದು ಸಮುದಾಯದಲ್ಲಿ ಅಕ್ಶರಸ್ಥರ ಸಂಖ್ಯೆ ಹೆಚ್ಚಿಯೂ ಓದುಗರ ಪ್ರಮಾಣ ಇಳಿಮುಖವಾಗುವುದು ‘ಅಕ್ಶರಸ್ಥರ ನವಮೌಖಿಕತೆ’ಯನ್ನೇ, ಅಂದರೆ ಕನ್ನಡ ಅಕ್ಶರಸ್ಥರಲ್ಲಿ ನವಮೌಖಿಕತೆಯ ಒಂದು ಪ್ರಬಲಧಾರೆ ಬೆಳೆಯುತ್ತಿರುವುದು ಇದರಿಂದ ಕಂಡುಬರುತ್ತದೆ. ಇಲ್ಲಿ ಕಂಡುಬರುವ ಮತ್ತೊಂದು ಅಪಾಯವೆಂದರೆ ಈ ನವಮೌಖಿಕ ಸಮುದಾಯ ಬಹಳ ಬೇಗ ಅವೈಚಾರಿಕಗೊಳ್ಳುತ್ತದೆ. ಅತ್ಯಂತ ವೇಗವಾಗಿ ಜನಪ್ರಿಯವಾದ ‘ಮರುಳ್ಗಳ’ ಮಾತುಗಳಿಗೆ ಬಲಿಯಾಗುತ್ತದೆ. ಫ್ಯಾಸಿಸಂ ಮತ್ತು ಸರ್ವಾಧಿಕಾರಿಗಳು ಇಂತಹ ಸನ್ನಿವೇಶದಲ್ಲಿ ಬಹಳ ಬೇಗ ಬೆಳೆಯಬಹುದು. ಇದರ ನಿಚ್ಚಳ ಪರಿಣಾಮವನ್ನು ನಮ್ಮ ನಾಡಿನಲ್ಲಿ ನಾವಿಂದು ಕಾಣಬಹುದಾಗಿದೆ. ನವಮೌಖಿಕ ವರ್ಗ ಆಕ್ರಮಣಕಾರಿ ಯಾಗಿ ವರ್ತಿಸುತ್ತಿರುವುದರ ಸೂಚನೆಗಳೂ ಕಾಣಿಸುತ್ತಿವೆ. ಓದುಗ ವರ್ಗ ತಮ್ಮ ಓದಿನಿಂದ ‘ಮಾನವತೆ’ಯ ಸಾಮಾನ್ಯ ‘ವಿವೇಕ’ವನ್ನು ರೂಢಿಸಿಕೊಳ್ಳುತ್ತಿತ್ತು. ಆದರೆ ಇಂದು ಈ ನವಮೌಖಿಕ ವರ್ಗ ತಮ್ಮ ಮಾತುಗಳಿಗೆ ನಿಯಂತ್ರಣವಿಲ್ಲದೆ ನುಡಿ ಬಳಸುವ ಕಾಲವೂ ಇದೇ ಆಗಿದೆ.

ಹಾಗಾಗಿ ಈ ನವಮೌಖಿಕತೆ ನಿಜಕ್ಕೂ ಕನ್ನಡದ ವಿವೇಕಕ್ಕೆ ದೊಡ್ಡ ಸವಾಲಾಗಿದೆ. ಇಂತಹ ಸವಾಲನ್ನು ಎದುರಿಸಲು ಇಂದು ಪ್ರಜ್ಞಾವಂತ ಜನರು ಸಿದ್ದವಾಗಬೇಕಿದೆ. ಓದು ಮತ್ತು ಬರೆಹ ಪರಂಪರೆಯ ನೈಜ ಮಹತ್ವವನ್ನು ತೆರೆದು ತೋರಿಸಬೇಕಿದೆ.

(ಗಮನಿಸಿ: ಈ ಲೇಖನದಲ್ಲಿ ಶ ಮತ್ತು ಷ ಗಳನ್ನು ಪೂರಕವಾಗಿ ಒಂದಕ್ಕೆ ಮತ್ತೊಂದು ಬದಲಿಯಾಗಿ ಬಳಸಲಾಗಿದೆ; ಇವು ಮುದ್ರಣ ದೋಷಗಳಲ್ಲ. ಬರಹಕ್ಕೆ ಸಂಬಂಧಿಸಿದಂತೆ ಲೇಖಕರಿಗೆ ಬೇರೆಯದೇ ಅಭಿಪ್ರಾಯವಿರುವುದು ಇದಕ್ಕೆ ಕಾರಣ)

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.