ಕನ್ನಡಪರ ಹೋರಾಟಗಾರ ರಮಾನಂದ ಅಂಕೋಲ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ರಮಾನಂದ, ತಮ್ಮ ಇಂಜಿನಿಯರಂಗ್ ವೃತ್ತಿ ಬದುಕಿನ ಜೊತೆ ಕಳೆದ ಆರು ವಷರ್ದಿಂದ ಕನ್ನಡಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಕರ್ನಾಟಕ ರಣಧೀರ ಪಡೆ ಸಂಘಟನೆಯ ರಾಜ್ಯ ಸಮಿತಿ ಸದಸ್ಯರೂ ಆಗಿರುವ ರಮಾನಂದ, ಕನ್ನಡ ಚಳವಳಿಯ ಅನುಭವ, ನಂಟು, ಕನ್ನಡ ಬೆಳವಣಿಗೆಯ ಕುರಿತು ಇಲ್ಲಿ ಮಾತನಾಡಿದ್ದಾರೆ.

ನಿಮ್ಮ ಭಾಷಾಭಿಮಾನದ ಅಭಿವ್ಯಕ್ತಿ ಹೇಗೆ?

ನನ್ನ ಪ್ರಕಾರ ಭಾಷೆ ಅಂದರೆ ಅದು ಕುರುಡು ಅಭಿಮಾನದ ಸರಕಲ್ಲ. ಅದು ನಮ್ಮ ಬದುಕು. ಅದು ಪರಂಪರೆ. ನೆಲದ ಜನರ ಕಷ್ಠಗಳಿಗೆ ಸ್ಪಂದಿಸದ, ಅವರ ನೋವಿಗೆ ಹೆಗಲು ಕೊಡಲು ಪ್ರಯತ್ನಿಸದ ಚಳವಳಿ ವ್ಯರ್ಥ ಎಂಬುದು ನನ್ನ ಭಾವನೆ. ಹಾಗಾಗಿ ನನ್ನ ಕನ್ನಡ ಅಭಿಮಾನವನ್ನು ನನ್ನ ನೆಲದ ಜನರ ಪರವಾಗಿ ನನ್ನ ಕೈಲಾದಷ್ಟು ಕೆಲಸ ಮಾಡುವ ಮೂಲಕ ನಾನು ಪ್ರದರ್ಶಿಸುತ್ತೇನೆ

ಕನ್ನಡ ಉಳಿಯಬೇಕಾದರೆ ನೀವು-ನಾವು ಏನು ಮಾಡಬೇಕು? ಹಾಗೆಯೇ ಸರ್ಕಾರ ಮಾಡಬೇಕಾದದ್ದೇನು?

ನಮ್ಮ ಭಾಷೆ ಕಳೆದುಕೊಂಡರೆ ನಮ್ಮ ಸಂಸ್ಕತಿ, ಅಸ್ಮಿತೆಯನ್ನೇ ಕಳೆದುಕೊಳ್ಳುತ್ತೇವೆ. ನಾಡು ನುಡಿ ಪರವಾಗಿ ನನ್ನ ಮಿತಿಯೊಳಗೆ ಏನು ಮಾಡಲು ಸಾಧ್ಯವೋ ಅದನ್ನು ನಾನು ಮಾಡುತ್ತಿದ್ದೇನೆ. ಅದನ್ನು ಹೀಗೆಯೇ ಅಥವಾ ಇದಕ್ಕಿಂತ ಹೆಚ್ಚಿನದಾಗಿಯೇ ಮುಂದುವರೆಸುವ ಇರಾದೆಯಿದೆ. ನಾನು ಓದಿ ಬಂದಿರುವ ಮೂರು ಸರ್ಕಾರಿ ಶಾಲೆಗಳನ್ನು ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಜೊತೆಗೂಡಿ ಅಲ್ಲಿನ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟಕ್ಕೇರಿಸಬೇಕು, ಬಹಳ ಯಶಸ್ವಿ ‘ಮಕ್ಕಳ ಮನೆ’ ಪ್ರಯೋಗದ ಮೂಲಕ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಈ ಕಾಲದ ಅಗತ್ಯಗಳಾದ ಇಂಗ್ಲಿಷ್ ಮತ್ತು ಕಂಪ್ಯೂಟರನ್ನು ಅತ್ಯುತ್ತಮವಾಗಿ ಕಲಿಸುವ ವ್ಯವಸ್ಥೆ ಮಾಡಬೇಕು ಎಂಬ ಕನಸಿದೆ.

ಇನ್ನು ಜನ ಏನು ಮಾಡಬಹುದೆಂದರೆ-

• ಅಂಚೆ, ಬ್ಯಾಂಕಿಂಗ್, ರೈಲ್ವೇ ಅಥವಾ ಯಾವುದೇ ಖಾಸಗಿ ಸೇವೆಗಳಾಗಲಿ ನಮ್ಮ ಭಾಷೆಯಲ್ಲೇ ಸೇವೆ ಪಡೆಯುವುದು ನಮ್ಮ ಹಕ್ಕು; ಹಾಗಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಹಕ್ಕೊತ್ತಾಯಗಳಿಂದಲೇ ಸ್ಮಾರ್ಟ್ಫೋನ್ಗಳಲ್ಲಿ, ಬಿಸ್ಲೆರಿ ಬಾಟಲ್ ಮೇಲೆ, ಎಫ್‍ಎಂ ಚಾನೆಲ್ ಗಳಲ್ಲಿ, ಕ್ರಿಕೆಟ್/ಕಬ್ಬಡ್ಡಿ ಕಮೆಂಟರಿ, ಡಿಸ್ಕವರಿಯಂತಹ ಚಾನೆಲ್, ಮೊನ್ನೆಯಷ್ಟೇ  ಫೋನ್ ಪೇ ಅಂತಹ ಅಪ್ಲಿಕೇಶನ್ ಗಳಲ್ಲಿ ಕನ್ನಡ ಬರಲಾರಂಭಿಸಿದೆ.

• ಕನ್ನಡಕ್ಕೆ ಅನ್ನ ಹುಟ್ಟಿಸುವ ಬಲ ಬರದೇ ಇಂಗ್ಲಿಷಿಗಿರುವ ಸ್ಥಾನಮಾನ ಸಿಗದು. ಸದ್ಯ ನಾವು ಇಂಗ್ಲಿಷನ್ನು ಉತ್ತಮವಾಗಿ ಕಲಿಯುತ್ತಲೇ ಕನ್ನಡಕ್ಕೂ ಅಂತಹುದೇ ಸಾಧ್ಯತೆ ಕಲ್ಪಿಸುವತ್ತ ಕೆಲಸ ಮಾಡಬೇಕು. ಅಂತಹ ತಂಡಗಳಿಗೆ ಜನರ ಬೆಂಬಲ ಬೇಕು.
ರಾಜ್ಯ ಸರ್ಕಾರ ಏನು ಮಾಡಬಹುದೆಂದರೆ,

• ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮತ್ತು ಶೈಕ್ಷಣಿಕ ಕೋರ್ಸುಗಳ ಪ್ರವೇಶಕ್ಕೆ ಈಗಿರುವ ಮೀಸಲಾತಿಯನ್ನು ಹೆಚ್ಚಿಸಬೇಕು. ಆಗ ಸಹಜವಾಗಿಯೇ ಒಂದಿಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದತ್ತ ಆಕರ್ಷಿತರಾಗುತ್ತಾರೆ.

• ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಈಗಾಗುತ್ತಿರುವ ಅನಿಯಂತ್ರಿತ ವಲಸೆಯನ್ನು ಕಡಿಮೆಯಾಗಬಹುದು. ಕನ್ನಡ ಅಭಿವೃದ್ದಿ ಪ್ರಾಧಿಕಾರ ಪ್ರೂ.ಎಸ್.ಜಿ.ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 2017ರಲ್ಲಿ ಸಲ್ಲಿಸಿದ ಸರೋಜಿನಿ ಮಹಿಷಿ ಪರಿಷ್ಕøತ ವರದಿಯಲ್ಲಿರುವ ಯಾರ ಅನುಮತಿ ಪಡೆಯದೇ ಅನುಷ್ಠಾನಕ್ಕೆ ತರಬಹುದಾದ 14 ಶಿಫಾರಸ್ಸುಗಳನ್ನು ಕೂಡಲೇ ಜಾರಿ ಮಾಡಬೇಕು.

• 1983ರ ಕರ್ನಾಟಕ ಶಿಕ್ಷಣ ಕಾಯ್ದೆ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇರುವ 1 ಕಿಮಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ಇರುವ 3 ಕಿಮಿ ವ್ಯಾಪ್ತಿಯಲ್ಲಿ ಬೇರೆ ಯಾವುದೇ ಶಾಲೆಗಳಿರಬಾರದು) ಯನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ಹುಟ್ಟಿಕೊಂಡಿರುವ ಲಾಭಕೋರ ವಿದ್ಯಾವ್ಯಾಪಾರಿ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಿ ಸರ್ಕಾರಿ ಶಾಲೆಗಳಿಗೆ ಅನುದಾನ ಹೆಚ್ಚಿಸಿ, ಅತ್ಯುತ್ತಮ ಸೌಕರ್ಯಗಳನ್ನು ಒದಗಿಸಬೇಕು.

• ಸರ್ಕಾರ ಕನ್ನಡವನ್ನು ಆಡಳಿತ ಭಾಷೆ ಎಂದು 1979ರಲ್ಲೇ ಘೋಷಿಸಿ ಅಲ್ಲಿಂದ ಇಲ್ಲಿಯತಕ ಈ ಸಂಬಂಧ 320ಕ್ಕೂ ಹೆಚ್ಚು ಅಧಿಸೂಚನೆಗಳನ್ನು ಹೊರಡಿಸಿದರೂ ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ ಅನುಷ್ಠಾನ ಆಗಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು.

ಕನ್ನಡ ಹೋರಾಟಗಳಿಗೆ ಧುಮುಕುವಂತೆ ನಿಮ್ಮನ್ನು ಪ್ರೇರೇಪಿಸಿದ್ದು ಏನು?

ಸ್ವಯಂ ಪ್ರೇರಣೆಯಿಂದ ಕನ್ನಡ ಚಳವಳಿಗೆ ಧುಮುಕಿದವನು ನಾನು. ಫೆಬ್ರುವರಿ 8, 2014ರಂದು ಬೆಂಗಳೂರಿನ ಆರ್.ಟಿ.ನಗರದ ವೀನಸ್ ಹೊಟೇಲಿನ ಸಭಾಭವನದಲ್ಲಿ ಕೆಲವು ಯುವಕರು ಸೇರಿಕೊಂಡು ಕರ್ನಾಟಕ ರಣಧೀರ ಪಡೆ ಎಂಬ ಹೊಸ ಸಂಘಟನೆ ಹುಟ್ಟುಹಾಕುತ್ತಿದ್ದಾರೆಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ನೋಡಿ, ಅವರ ಜೊತೆಯಾಗುವ ಮೂಲಕ ಕನ್ನಡಪರ ಹೋರಾಟದ ನನ್ನ ಪ್ರಯಾಣ ಶುರುವಾಯಿತು.

ಶಾಲಾ ಪಠ್ಯವಾಗಲಿ

‘ಕನ್ನಡ ಚಳವಳಿ: ಹೋರಾಟದಿಂದ ಮಾರಾಟದವರೆಗೆ’ ಲೇಖನ ಬಹಳ ಅರ್ಥಗರ್ಭಿತವಾಗಿದೆ. ಕಳೆದ ದಶಕಗಳ ಕನ್ನಡ ನಾಡಿನ ಸ್ಥಿತಿ, ಹಲವು ಸಂಘಸಂಸ್ಥೆ ಸಂಸ್ಥಾಪಕರ ಉದ್ದೇಶಗಳು, ನಿಸ್ವಾರ್ಥ ಸೇವೆ, ನಾಡಿಗೆ ನೀಡಿದ ಬಲಿದಾನ… ಎಲ್ಲವನ್ನೂ ಜಾಣಗೆರೆಯವರು ಯಥಾವತ್ತಾಗಿ ಬರೆದಿದ್ದಾರೆ. ಸಾಕಷ್ಟು ಗೊತ್ತಿರದ ವಿಷಯಗಳನ್ನು ತಿಳಿದಂತಾಯಿತು. ಇದು ಕೇವಲ ಲೇಖನವಾಗಿ ಉಳಿಯದೇ ಶಾಲಾ ಪಠ್ಯಪುಸ್ತಕ ಸೇರಲಿ ಅಂತ ಆಶಿಸುತ್ತೇನೆ.

-ಸಿ.ಎಂ.ಗುರುಬಸವರಾಜ, ಬಳ್ಳಾರಿ.

ಸಮಸ್ಯೆಗಳು ಕಡಿಮೆಯಾಗಿವೆಯೇ?
ಜಾಣಗೆರೆ ವೆಂಕಟರಾಮಯ್ಯನವರ ‘ಕನ್ನಡ ಚಳವಳಿ-ಹೋರಾಟದಿಂದ ಮಾರಾಟದವರೆಗೆ’ ಲೇಖನ ಸಮಯೋಚಿತವಾಗಿದೆ; ಬೆಂಗಳೂರಿನಲ್ಲಿ ಕನ್ನಡ ಭಾಷಿಕರ ದುಃಸ್ಥಿತಿ ಮತ್ತು ಕನ್ನಡ ಚಳವಳಿ ಕುರಿತು ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಒಂದು ಕಡೆ ‘ವಿಶೇಷವಾಗಿ, ರಾಜಧಾನಿಯಾಗಿದ್ದ ಬೆಂಗಳೂರಿನಲ್ಲೇ ಕನ್ನಡಿಗರು ಸುರಕ್ಷಿತವಾಗಿರಲಿಲ್ಲ, ಎಲ್ಲೆಲ್ಲೂ ನೆರೆ ರಾಜ್ಯಗಳ ಮತ್ತು ಉತ್ತರ ಭಾರತದ ಜನರು ತುಂಬಿ ಹೋಗಿದ್ದರು, ರಾಜಧಾನಿಯಲ್ಲಿ ಸ್ಥಾಪನೆಯಾಗಿದ್ದ ಕೇಂದ್ರೋದ್ಯಮಗಳಲ್ಲೂ ಪರಭಾಷಿಕರೇ ತುಂಬಿದ್ದರು’ ಎಂದು ಬರೆಯುತ್ತಾರೆ. ಅಂದರೆ ಈಗ ಬೆಂಗಳೂರಿನಲ್ಲಿ ಕನ್ನಡಿಗರು ಸುರಕ್ಷಿವಾಗಿದ್ದಾರೆಯೇ? ಸಮಸ್ಯೆಗಳು ಕಡಿಮೆಯಾಗಿವೆಯೇ?

-ಗೌರಿ ಚಿ. ತಿಮ್ಮಯ್ಯ, ಬೆಂಗಳೂರು.

ಬದಲಾದ ಕಾಲಮಾನದಲ್ಲಿ ಕನ್ನಡ ಹೋರಾಟದ ಸ್ವರೂಪದ ಬಗ್ಗೆ ನಿಮಗೆ ಏನನಿಸುತ್ತದೆ?

ಕನ್ನಡ ಹೋರಾಟ ಈಗ ಮೊದಲಿನಂತೆ ಟೌನ್‍ಹಾಲ್ ಅಥವಾ ಮೈಸೂರು ಬ್ಯಾಂಕ್ ವೃತ್ತಕ್ಕೆ ಸೀಮಿತವಾಗಿಲ್ಲ. ನಾಡಿಗೆ, ನಾಡಭಾಷೆಗೆ ಅನ್ಯಾಯವಾದಾಗ ಧರಣಿ, ಪ್ರತಿಭಟನೆ, ಸತ್ಯಾಗ್ರಹಗಳ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್ಬುಕ್ ಮುಖಾಂತರವೂ ಸಂಬಂಧಪಟ್ಟವರ ಮುಂದೆ ಪ್ರತಿರೋಧ ದಾಖಲಾಗುತ್ತಿದೆ. ಬಹುತೇಕ ರಾಜಕಾರಣಿಗಳು ಅಥವಾ ಅಧಿಕಾರಿ ವರ್ಗ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವುದರಿಂದ ಯಾವುದೇ ಒಂದು ಹೋರಾಟ ಹಮ್ಮಿಕೊಂಡರೂ ಅದರ ಮೊದಲಿನ ದಿನ ಅಥವಾ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿಯೇ ಟ್ವಿಟರ್ ಟ್ರೆಂಡ್‍ಗೆ ಕರೆಕೊಡಲಾಗುತ್ತಿದೆ. ನಾವು ಹಮ್ಮಿಕೊಂಡಿದ್ದ ‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ’ ಅಭಿಯಾನ #KarnatakaJobsForKannadigas ಅಡಿಬರಹದ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದು ಎರಡು ಮಾಜಿ ಮುಖ್ಯಂತ್ರಿಗಳು ಮತ್ತು ಹಾಲಿ ಮುಖ್ಯಮಂತ್ರಿ ಈ ಬಗ್ಗೆ ಮಾತನಾಡುವಂತಾಗಿದ್ದು ಟ್ವಿಟರ್ ಅಭಿಯಾನದ ಮೂಲಕವೇ.

ಇತ್ತೀಚೆಗೆ ಹಿಂದಿ ಹೇರಿಕೆಯ ಕುರಿತಾಗಿ ನೀವು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಿರಿ, ಅದರ ಕುರಿತು ಹೇಳಿ, ಅದಕ್ಕೆ ಯುವಕರಿಂದ ಯಾವ ರೀತಿಯ ಸ್ಪಂದನೆಯಿತ್ತು?

ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಗುಜರಾತ್ ಹೈಕೋರ್ಟು ಸ್ಪಷ್ಟನೆ ಕೊಟ್ಟರೂ ಹಿಂದಿ ರಾಷ್ಟ್ರಭಾಷೆ ಎಂಬ ರೀತಿಯ ಹಸಿ ಸುಳ್ಳನ್ನು ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ಹರಡುತ್ತಾ, ಒಕ್ಕೂಟ ವ್ಯವಸ್ಥೆಯ ಮೂಲ ಆಶಯ ಕಡೆಗಣಿಸಿ ಕೇಂದ್ರ ಸರ್ಕಾರ ಬಲವಂತದ ಹೇರಿಕೆಯ ಮುಖಾಂತರ ಹಿಂದಿಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಕೇಂದ್ರದ ಉದ್ಯೋಗ ನೇಮಕಾತಿಗಳಲ್ಲಿ ಹಿಂದಿಯೇತರರಿಗೆ ಅದರಲ್ಲೂ ಕನ್ನಡಿಗರಿಗೆ ತುಂಬಾ ಅನ್ಯಾಯವಾಗುತ್ತಿದೆ. ಐಬಿಪಿಎಸ್ ಮತ್ತು ರೈಲ್ವೆ ಉದ್ಯೋಗಗಳಲ್ಲಿ ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದ್ದರಿಂದ ಕರ್ನಾಟಕದ ಹಲವು ಉದ್ಯೋಗಗಳು ಪರಭಾಷಿಕರ ಪಾಲಾಗಿವೆ ಮತ್ತು ಪಾಲಾಗುತ್ತಿವೆ.

ಈ ಅನ್ಯಾಯದ ಬಗ್ಗೆ ಹಿಂದೆಂದಿಗಿಂತಲೂ ಬಲವಾಗಿ ಯುವಸಮೂಹ ತಮ್ಮ ಪ್ರತಿರೋಧ ದಾಖಲಿಸುತ್ತಿದೆ. ಅದು ಕನ್ನಡವನ್ನು ಹಿಂದೆ ತಳ್ಳಿ ಮೆಟ್ರೊದಲ್ಲಿ ಹಿಂದಿ ಬಂದು ಕುಳಿತಾಗ, ಹೆದ್ದಾರಿಗಳಲ್ಲಿ ಕನ್ನಡದ ಜಾಗವನ್ನು ಹಿಂದಿ ಆಕ್ರಮಿಸತೊಡಗಿದಾಗ ಎದ್ದಂತಹ ಪ್ರತಿಭಟನೆಗಳಾಗಿರಬಹುದು ಅಥವಾ ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರ ಆಚರಿಸಿದ ‘ಹಿಂದಿ ದಿವಸ’ಕ್ಕೆ ಈ ಬಾರಿ ತಮಿಳುನಾಡಿಗಿಂತ ಬಲವಾಗಿ ಬೆಂಗಳೂರಿನಲ್ಲಿ ನಡೆದ ಕರಾಳ ದಿನ ಆಚರಣೆ ಆಗಿರಬಹುದು, ಟ್ವಿಟರಿನಲ್ಲಿ ದಾಖಲಾದ ವಿರೋಧನ ಧ್ವನಿ ಆಗಿರಬಹುದು.

ಹಿಂದೆ ಗೋಕಾಕ್ ಚಳವಳಿಯಾದಾಗ ಕನ್ನಡದ ಮೇರುನಟ ರಾಜ್‍ಕುಮಾರ್ ಭಾಗವಹಿಸಿದ್ದರು ಮತ್ತದನ್ನು ಯಶಸ್ವಿಗೊಳಿಸಿದ್ದರು; ಹಾಗೆ ಈಗ ಕನ್ನಡದ ಪರವಾಗಿ ಮಾತನಾಡಲು ದಿಟ್ಟವಾದ ಧ್ವನಿಯೊಂದು ಇದೆ ಅನಿಸುತ್ತದೆಯೇ ನಿಮಗೆ? ಇದ್ದರೆ ಯಾರು?

ಡಾ.ರಾಜ್‍ಕುಮಾರ್ ಅವರಷ್ಟು ಪ್ರಬಲ ಧ್ವನಿ, ಕನ್ನಡ ಹೋರಾಟಕ್ಕೆ ಜನರನ್ನು ಸೆಳೆಯುವ ಸಾಮಥ್ರ್ಯ ಈಗಿರುವ ಯಾರಿಗೂ ಇಲ್ಲ ಎಂದೇ ಅನಿಸುತ್ತದೆ. ಆದರೆ ರಾಜಕಾರಣಿಗಳಲ್ಲಿ ನೋಡಿದರೆ ಒಕ್ಕೂಟ ವ್ಯವಸ್ಥೆ ಅಥವಾ ರಾಜ್ಯಪರ ಯಾವುದಾದರೂ ವಿಷಯದಲ್ಲಿ ಧ್ವನಿ ಎತ್ತುವುದರಲ್ಲಿ ಮುಂಚೂಣಿಯಲ್ಲಿರುವ ಈಗಿನ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರಿಗೆ ಇರುವಷ್ಟು ಸ್ಪಷ್ಟತೆ ಬೇರೆ ರಾಜಕಾರಣಿಗಳಿಗೆ ಇಲ್ಲ. ಅವರಿಂದ ಕರ್ನಾಟಕದ ಇತರ ರಾಜಕಾರಣಿಗಳು ಕಲಿಯಬೇಕಾಗಿದೆ.

ಯಾವುದೇ ರಾಜ್ಯದ ರಾಜ್ಯ ಭಾಷೆಯ ಪರವಾಗಿ ಹೊಡೆದಾಡುವವರನ್ನು ಒಂದು ವರ್ಗ ಗೂಂಡಾಗಳನ್ನಾಗಿ ನೋಡುತ್ತದೆ. ಈ ಅಭಿಪ್ರಾಯ ಬರಲು ಕಾರಣವೇನು?

ಕನ್ನಡಪರ ಹೋರಾಟಗಾರರ ವಿಚಾರದಲ್ಲಿ ಈ ಅಭಿಪ್ರಾಯ ಇತ್ತೀಚೆಗೆ ಹೆಚ್ಚಾಗಿದೆ ಅಥವಾ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಕನ್ನಡಪರ ಹೋರಾಟದ ಹೆಸರಿನಲ್ಲಿ ಕೆಲವು ಆಸೆಬುರುಕ ವ್ಯಕ್ತಿಗಳು ತಪ್ಪು ಮಾಡಿರಬಹುದು. ಇದಕ್ಕೆ ಇಡೀ ಚಳವಳಿಯನ್ನು ಅಪರಾಧಿಯನ್ನಾಗಿ ಮಾಡುವುದು, ಗೂಂಡಾಗಳಂತೆ ಚಿತ್ರಿಸುವುದು ಸರಿಯಲ್ಲ. ಕನ್ನಡಪರ ಸಂಘಟನೆಗಳು ಸಾಕಷ್ಟು ಒಳ್ಳೆಯ ಕೆಲಸ ಮಾಡಿವೆ ಮತ್ತು ಮಾಡುತ್ತಿವೆ.

ಸಂದರ್ಶನ: ಮೌನೇಶ್ ಬಡಿಗೇರ್

Leave a Reply

Your email address will not be published.