‘ಕನ್ನಡಿಗಳು ಬೇಕಾಗಿವೆ’

ಸಂಸ್ಕೃತಿನಿಷ್ಠ ವಿಮರ್ಶೆ ಮತ್ತು ಕೃತಿನಿಷ್ಠ ವಿಮರ್ಶೆಗಳ ನಡುವೆ ಯಾವುದೇ ಬಿರುಕು ಅಥವಾ ವಿಚ್ಛೇದ ಇರುವ ಅಗತ್ಯವಿಲ್ಲ. ಸಾಮಾಜಿಕನಾಗಿ,  ಸಂಸ್ಕೃತಿನಾಯಕನಾಗಿ ಒಬ್ಬ ಲೇಖಕನಬೆಲೆಕಟ್ಟುವಾಗ ಅವನ ಸಮಗ್ರ ಚಿಂತನೆ ಮತ್ತು ಜೀವನಗಳ ಹಿನ್ನೆಲೆಯನ್ನು ಗಮನಿಸಬೇಕು. ಅವನ ಸಾಹಿತ್ಯಕೃತಿಗಳನ್ನು ನೋಡುವಾಗ ಅವುಗಳಿಂದಲೇ ಮೂಡಿಬರುವ ಜೀವನಮೀಮಾಂಸೆ, ಸಮಾಜಮೀಮಾಂಸೆ ಮತ್ತು ಕಲಾಮೀಮಾಂಸೆಯನ್ನು ನೋಡುವುದು ಸರಿ.

ಹೌದು. ನಮ್ಮ ಈ ಕಾಲದಲ್ಲಿ ಕನ್ನಡಿಗಳು ಕಣ್ಮರೆಯಾಗಿವೆ. ಅನ್ಯವನ್ನು ನೋಡುವ, ಬೆಲೆಕಟ್ಟುವ ಮತ್ತು ನಿರಾಕರಿಸುವ ರಭಸದಲ್ಲಿ ಸ್ವತಃ ನಮ್ಮನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳುವ ಕೆಲಸವನ್ನು ಮರೆತಿದ್ದೇವೆ. ಈ ಮಾತು ಲೇಖಕರು, ‘ಸಂಸ್ಕೃತಿ ’ಚಿಂತಕರು, ವಿಮರ್ಶಕರು, ಹೋರಾಟಗಾರರು, ಅಧ್ಯಾಪಕರು, ಶೋಷಕರು, ಶೋಷಿತರು ಎಲ್ಲರಿಗೂ ಅನ್ವಯಿಸುತ್ತದೆ. ಹಿಂದೆಯೂ ಈ ಪರಿಸ್ಥಿತಿ ಬೇರೆ ಬೇರೆ ಪ್ರಮಾಣದಲ್ಲಿ ಇತ್ತು. ಸ್ವವಿಮರ್ಶೆಯ ಗೈರುಹಾಜರಿಯು, ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ ಎಲ್ಲ ಬಗೆಯ ಸಮುದಾಯಗಳಿಗೂ ಅನ್ವಯಿಸುವ ಲಕ್ಷಣ. ನಾನೆಸರಿತನ ಮತ್ತು ಆಕ್ರಮಣಶೀಲತೆಗಳು ಇದರ ಪರಿಣಾಮ. ಸಾಹಿತ್ಯವಿಮರ್ಶೆಯು ‘ಸಾಹಿತಿ ವಿಮರ್ಶೆ’ ಅಥವಾ ‘ಸಂಸ್ಕೃತಿ ವಿಮರ್ಶೆ’ಗಳಾಗಿ ಬದಲಾಗುತ್ತಿರುವ ವಿದ್ಯಮಾನದ ಲಾಭನಷ್ಟಗಳನ್ನು ಕುರಿತು ಆಲೋಚನೆ ಮಾಡುವುದು ನ್ಯಾಯವೇ ಆಗಿದೆ.

‘ಸಾಹಿತ್ಯ ವಿಮರ್ಶೆ’ ಎಂಬ ಸಂಸ್ಥೆಯನ್ನು ಕುರಿತು, ವಿಮರ್ಶೆಯೆಂಬ ಬರೆಹಗಳನ್ನು ಕುರಿತು, ವಿಮರ್ಶಕರೆಂಬ ರಕ್ತ-ಮಾಂಸಗಳ, ಈರ್ಷೆ-ಮಹತ್ವಾಕಾಂಕ್ಷೆಗಳ, ಶಕ್ತಿ-ಪರಿಮಿತಿಗಳ ಮನುಷ್ಯರನ್ನು ಕುರಿತು ಹೇಳಬೇಕಾದ್ದು ಬೇಕಾದಷ್ಟಿದೆ. ಆದರೆ, ಈ ಬರವಣಿಗೆಯು ಮುಖ್ಯವಾಗಿ ಸಂಪಾದಕರು ಕೇಳಿರುವ ಪ್ರಶ್ನೆಗಳನ್ನು ಗಮನಿಸುತ್ತದೆ. ಈ ವಿಷಯಗಳನ್ನು ಕುರಿತು ಈಗಾಗಲೇ ಬಂಡಿಗಟ್ಟಲೆ ಚರ್ಚೆ ನಡೆದಿದೆ, ನಡೆಯಲಿದೆ. ಈ ಸಂದರ್ಭದಲ್ಲಿ ವಿಮರ್ಶೆಯ ಫಲಾನುಭವಿಗಳಾದ(?) ಲೇಖಕರು ಮತ್ತು ಓದುಗರ ಅಭಿಪ್ರಾಯಗಳನ್ನೂ ತಿಳಿದುಕೊಳ್ಳುವ ಅಗತ್ಯವಿದೆ.

ಇಲ್ಲಿ ಕೇಳಿಕೊಂಡಿರುವ ಎರಡು ಪ್ರಶ್ನೆಗಳು ಒಂದಕ್ಕೊಂದು ಪೂರಕವಾಗಿವೆ. ಲೇಖಕನ ವ್ಯಕ್ತಿತ್ವ, ಜೀವನ, ಲೋಕ, ಸಮಾಜ, ಸಂಸ್ಕೃತಿ ಇವೆಲ್ಲವೂ ವಿಮರ್ಶೆಗೆ ಒಳಪಡಬೇಕಾದ ಸಂಗತಿಗಳೇ. ಒಬ್ಬ ಸಾಹಿತಿಯ ವಿಚಾರ/ಜೀವನ ವಿಮರ್ಶೆ ಮತ್ತು ಸಾಹಿತ್ಯದ ವಿಮರ್ಶೆಗಳ ನಡುವೆ ಕೆಲವು ಸಮಾನ ಅಂಶಗಳಿದ್ದರೂ ಅವೆರಡೂ ಒಂದೇ ಅಲ್ಲ. ಲೇಖಕನ ಸಮಗ್ರ ಸಾಹಿತ್ಯವನ್ನು ಅವನ ಬೆಳವಣಿಗೆಯ ಹಿನ್ನೆಲೆಯಲ್ಲಿ ನೋಡುವ ಹಾಗೆಯೇ ಕೇವಲ ಒಂದು ಕವಿತೆಯನ್ನು ಕಥೆಯನ್ನು ಬಿಡಿಯಾಗಿ ನೋಡುವುದೂ ಅಗತ್ಯವೇ. ಎರಡಕ್ಕೂ ಅದರದೇ ಆದ ಕೆಲಸಗಳಿವೆ. ಸಾಹಿತಿಯನ್ನು ವರ್ಗ, ವರ್ಣ, ಲಿಂಗಗಳ ಪ್ರತಿನಿಧಿಯಾಗಿ ನೋಡುವಾಗಲೂ ಅವರು ಅದನ್ನು ಮೀರಲು ಪ್ರಯತ್ನಿಸಿರುವ ಸಾಧ್ಯತೆಗಳನ್ನೂ ಪರಿಗಣಿಸಬೇಕಾಗುತ್ತದೆ.

ಹಲವು ಹಂತಗಳಲ್ಲಿ ಹಲವು ಉದ್ದೇಶಗಳಿಂದ ವಿಮರ್ಶಯು ನಡೆಯುವುದು ಸಹಜ ಮತ್ತು ಅಗತ್ಯ. ಸಾಹಿತ್ಯಶಿಕ್ಷಣ ಮತ್ತು ಅಭಿರುಚಿ ನಿರ್ಮಾಣಗಳನ್ನು ನಿಯಂತ್ರಿಸುವ ಸಂಗತಿಗಳು ವಿಮರ್ಶಕರ ಕೈಯಲ್ಲಿ ಮಾತ್ರ ಇಲ್ಲ. ಇವೆಲ್ಲದರ ರೋಗನಿದಾನ ಮತ್ತು ಚಿಕಿತ್ಸೆ ಮಾಡುವ ಸಾಧ್ಯತೆಗಳು ಬಹಳ ಕಡಿಮೆ.

‘ಸೋಷಿಯಲ್ ಮೀಡಿಯಾ’ಗಳಲ್ಲಿ ಕಾಣಿಸಿಕೊಳ್ಳುವ ‘ಸಕ್ಕರೆ ಗುಳಿಗೆ’/’ಇಲಿ ಪಾಷಾಣ’ಗಳಿಂದ ಮೊದಲಾಗಿ, ಸಂಪಾದಕರ/’ಗುತ್ತಿಗೆದಾರ’ ವಿಮರ್ಶಕರ ಮರ್ಜಿಗೆ ಅನುಸಾರವಾಗಿ ಮೂಡಿ ಬರುತ್ತಿದ್ದ, ಇಂದು ಪುಸ್ತಕ ಪರಿಚಯವಾಗುತ್ತಿರುವ ಪತ್ರಿಕೆಗಳ, ನಿಯತಕಾಲಿಕಗಳ ಹಾದಿಯಲ್ಲಿ ನಡೆದು, ‘ಗಂಭೀರವೆನಿಸಿದರೂ’ ಕೆಲವರು ಮಾತ್ರ ಓದುವ ಅಧ್ಯಯನಗಳವರೆಗೆ ಹಲವು ನೆಲೆಗಳಲ್ಲಿ ‘ಸಾಹಿತ್ಯ ವಿಮರ್ಶೆ’ಯು ನಡೆಯುತ್ತದೆ. ಹೀಗೆ ಹಲವು ಹಂತಗಳಲ್ಲಿ ಹಲವು ಉದ್ದೇಶಗಳಿಂದ ವಿಮರ್ಶಯು ನಡೆಯುವುದು ಸಹಜ ಮತ್ತು ಅಗತ್ಯ. ಸಾಹಿತ್ಯಶಿಕ್ಷಣ ಮತ್ತು ಅಭಿರುಚಿ ನಿರ್ಮಾಣಗಳನ್ನು ನಿಯಂತ್ರಿಸುವ ಸಂಗತಿಗಳು ವಿಮರ್ಶಕರ ಕೈಯಲ್ಲಿ ಮಾತ್ರ ಇಲ್ಲ. ಇವೆಲ್ಲದರ ರೋಗನಿದಾನ ಮತ್ತು ಚಿಕಿತ್ಸೆ ಮಾಡುವ ಸಾಧ್ಯತೆಗಳು ಬಹಳ ಕಡಿಮೆ. ಏಕೆಂದರೆ ಇಡೀ ದೇಹವನ್ನು ಆವರಿಸಿರುವ ರೋಗವನ್ನು ಒಂದು ಅಂಗದ ನೆಲೆಯಲ್ಲಿ ಗುಣಪಡಿಸಲು ಸಾಧ್ಯವಿಲ್ಲ.

ಸಂಪಾದಕರು ಕೇಳಿರುವ ವಿಚಾರಗಳಲ್ಲಿ ಎರಡು ಭಾಗಗಳಿವೆ. ಮೊದಲು ಅಡಿಗ, ಭೈರಪ್ಪ, ಕುವೆಂಪು, ದೇವನೂರ ಮಹಾದೇವ, ಕಂಬಾರ ಮುಂತಾದ ಸಾಹಿತಿಗಳನ್ನು ಕುರಿತ ವಿಮರ್ಶೆಯ ಕೊರತೆಗಳನ್ನು ಹೇಳಲಾಗಿದೆ. ಎರಡನೆಯ ಭಾಗದಲ್ಲಿ ಲೇಖಕನ ಜೀವನ, ಅವನ ಸಾಮಾಜಿಕ ನಿಲುವುಗಳು ಮತ್ತು ಚಟುವಟಿಕೆಗಳಿಗೂ ಅವನ ಬರವಣಿಗೆಯ ವಿಮರ್ಶೆಗೂ ಇರಬೇಕಾದ ಸಂಬಂಧವನ್ನು ಕುರಿತ ಅಭಿಪ್ರಾಯಗಳಿವೆ. ಆ ಅಭಿಪ್ರಾಯಗಳ ಓಲುವೆಯಂತೆ, ಲೇಖಕರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಪ್ರತ್ಯೇಕವಾಗಿ ನೋಡುವುದು ಅಸಾಧ್ಯ ಮತ್ತು ಸರಿಯಲ್ಲ. ಈ ಎರಡು ಭಾಗಗಳ ನಡುವೆ ಪರಸ್ಪರ ವಿರೋಧ ಇದೆ. ಏಕೆಂದರೆ, ಅಡಿಗ, ಭೈರಪ್ಪ, ಕಂಬಾರ ಮುಂತಾದವರಿಗೆ ಆಗಿದೆ ಎಂದು ಹೇಳಲಾಗಿರುವ ‘ಅನ್ಯಾಯ’ಗಳು ಅವರ ವ್ಯಕ್ತಿತ್ವವನ್ನು ಆಧರಿಸಿದ ಮೌಲ್ಯಮಾಪನದ ಫಲವೂ ಆಗಿವೆ. ನಮ್ಮ ಆಲೋಚನೆಗಳು ಈ ತೊಡಕನ್ನು ಗಮನಿಸಬೇಕು.

ಈ ಮೂರು ನೆಲೆಗಳು ಮೂಡುವ, ಪರಿಣಮಿಸುವ ಮತ್ತು ಪ್ರಭಾವಿಸುವ ಬಗೆಗಳು ಬೇರೆಬೇರೆಯಾದವು. ಕುಮಾರವ್ಯಾಸ ಕೃತಿಯನ್ನು ಮಾತ್ರ ಬರೆದವನು. ಬಸವಣ್ಣನವರು ಈ ಮೂರೂ ನೆಲೆಗಳಲ್ಲಿ ಕೆಲಸ ಮಾಡಿದ್ದಾರೆ. ಕುವೆಂಪು ಮತ್ತು ಚಂದ್ರಶೇಖರ ಪಾಟೀಲರ ‘ಆಕ್ಟಿವಿಸಂ’ನ ಚಹರೆಗಳು ಸಂಪೂರ್ಣವಾಗಿ ಬೇರೆ ಬೇರೆಯಾದವು.

ನಾವು ಒಂದೇ ಕಾಲದಲ್ಲಿ ಸಾಂಸ್ಕೃತಿಕ ನಾಯಕರ ಅಂತೆಯೇ ಸಾಹಿತ್ಯದ ಮೌಲ್ಯಮಾಪನ ಎರಡನ್ನೂ ಮಾಡುವ ಜವಾಬ್ದಾರಿಯನ್ನು ಹೊರುತ್ತಿದ್ದೇವೆ. ಪ್ರತಿಯೊಬ್ಬ ಕಲಾವಿದನಿಗೂ ಮನುಷ್ಯನಾಗಿ, ಸಾಮಾಜಿಕನಾಗಿ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸುವ ಹೊಣೆಗಾರಿಕೆ ಇರುತ್ತದೆ. ಅವನು ಅದನ್ನು ಕೇವಲ ಕಲಾಕೃತಿಗಳ ಮೂಲಕವೇ ನಿರ್ವಹಿಸಬಹುದು, ಕಲಾಕೃತಿ ಮತ್ತು ವೈಚಾರಿಕ ಚಿಂತನೆಗಳೆರಡರ ಮೂಲಕವೂ ನಿರ್ವಹಿಸಬಹುದು ಅಥವಾ ಕಲಾಕೃತಿ-ವೈಚಾರಿಕ ಚಿಂತನೆ ಮತ್ತು ಆಕ್ಟಿವಿಸಂ ಎಂಬ ಮೂರೂ ನೆಲೆಗಳಲ್ಲಿ ನಿರ್ವಹಿಸಬಹುದು. ಈ ಮೂರು ನೆಲೆಗಳು ಮೂಡುವ, ಪರಿಣಮಿಸುವ ಮತ್ತು ಪ್ರಭಾವಿಸುವ ಬಗೆಗಳು ಬೇರೆಬೇರೆಯಾದವು. ಕುಮಾರವ್ಯಾಸ ಕೃತಿಯನ್ನು ಮಾತ್ರ ಬರೆದವನು. ಬಸವಣ್ಣನವರು ಈ ಮೂರೂ ನೆಲೆಗಳಲ್ಲಿ ಕೆಲಸ ಮಾಡಿದ್ದಾರೆ. ಕುವೆಂಪು ಮತ್ತು ಚಂದ್ರಶೇಖರ ಪಾಟೀಲರ ‘ಆಕ್ಟಿವಿಸಂ’ನ ಚಹರೆಗಳು ಸಂಪೂರ್ಣವಾಗಿ ಬೇರೆ ಬೇರೆಯಾದವು. ನಮ್ಮ  ಸಂಸ್ಕೃತಿವಿಮರ್ಶೆಯು ಇವುಗಳನ್ನು ಸರಿಯಾಗಿಯೇ ಗುರುತಿಸಿ ಅವರವರಿಗೆ ಕೊಡಬೇಕಾದ ಮಹತ್ವವನ್ನು ಕೊಟ್ಟಿದೆ.  ಸಂಸ್ಕೃತಿನಾಯಕರು ಎನ್ನಿಸಿಕೊಂಡವರಿಗೆ ಹೆಚ್ಚು ಮನ್ನಣೆಯನ್ನೇ ಕೊಟ್ಟಿದೆ. ಉದಾಹರಣೆಗೆ ಯಶವಂತ ಚಿತ್ತಾಲರ ಕಥೆ-ಕಾದಂಬರಿಗಳು ಅನಂತಮೂರ್ತಿಯವರ ಕಥೆ-ಕಾದಂಬರಿಗಳಿಗಿಂತ ಎಷ್ಟೋ ಮುಖ್ಯವಾದರೂ ಸಾಂಸ್ಕೃತಿಕ ನಾಯಕರೆಂಬ ಮನ್ನಣೆಯನ್ನು ಗಳಿಸಿಕೊಂಡವರು ಅನಂತಮೂರ್ತಿಯವರೇ.

ಆದರೆ ಸಮಸ್ಯೆ ಹುಟ್ಟುವುದು ‘ಸಾಹಿತಿ ವಿಮರ್ಶೆ’ ಮತ್ತು ‘ಸಾಹಿತ್ಯ ವಿಮರ್ಶೆ’ಗಳ ನಡುವೆ ಗಲಿಬಿಲಿ ಮಾಡಿಕೊಂಡು ಒಂದರ ಜಾಗದಲ್ಲಿ ಇನ್ನೊಂದನ್ನು ಮಾಡತೊಡಗಿದಾಗ. ಲಂಕೇಶ, ತೇಜಸ್ವಿ, ಅನಂತಮೂರ್ತಿ, ಕಿ.ರಂ.ನಾಗರಾಜ್ ಮುಂತಾದವರ ಬಗ್ಗೆ ಬಂದ ಹತ್ತಾರು ಪುಸ್ತಕಗಳು, ನೂರಾರು ಲೇಖನಗಳು ಅವರ ವ್ಯಕ್ತಿತ್ವ ಹಾಗೂ ಜೀವನಗಳ ಸುತ್ತ ಗಿರಕಿ ಹೊಡೆದು ಅವರ ಬರವಣಿಗೆಯ ಗೊಡವೆಗೆ ಹೋಗದೆ ಹೋದಾಗ, ಎಲ್ಲೋ ಏನೋ ತಪ್ಪಾಗಿದೆ ಎನ್ನಿಸುತ್ತದೆ. (ಅವರ ಬರವಣಿಗೆಯ ಗುಣದೋಷಗಳ ಬಗ್ಗೆ ನಾನು ಯಾವ ತೀರ್ಮಾನವನ್ನೂ ಕೊಡುತ್ತಿಲ್ಲ.)  ಸಂಸ್ಕೃತಿ ನಾಯಕರ ಬರವಣಿಗೆಯನ್ನು ಕುರಿತ ‘ವಿಮರ್ಶೆ’ಯಲ್ಲಿ ‘ಸಾಹಿತ್ಯ’ವೇ ಕಾಣೆಯಾಗಿದೆ ಎನ್ನಿಸುತ್ತದೆ.  ಸಂಸ್ಕೃತಿನಾಯಕರ ಆರಾಧನೆಯ ಜೊತೆಗೆ, ಅಸ್ಮಿತೆಗಳನ್ನು ಆಧರಿಸಿದ ವಿಮರ್ಶೆಯದು ಇನ್ನೊಂದು ಸಮಸ್ಯೆ.

ಆ ಎಲ್ಲ ನೆಲೆಗಳಿಂದಲೂ ವಿಮರ್ಶಕರು ಮೂಡಿ ಬರಬೇಕು/ಬಂದಿದ್ದಾರೆ. ನಿರ್ಲಕ್ಷಿತವಾದ ಬರೆಹಗಳ ‘ಮರುಹುಟ್ಟು’ ಕೂಡ ಸಾಧ್ಯವಾಗಬೇಕು. ಆದರೆ, ಇಂಥ ಯಾವ ಸಂಗತಿಯೂ ಸಮುದಾಯಗಳಿಗೆ ಒಟ್ಟಂದದಲ್ಲಿ ಸಲ್ಲಬೇಕಾದ ನ್ಯಾಯವೇ ಹೊರತು ನಿರ್ದಿಷ್ಟ ಲೇಖಕನಿಗೆ ಕೊಡುವ ರಿಯಾಯತಿಗಳಲ್ಲ.

ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮುಂತಾದ ಶೋಷಿತರು ಎಲ್ಲ ಬಗೆಯ ಸವಲತ್ತುಗಳನ್ನು ಪಡೆಯಬೇಕು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರ ಸಾಹಿತ್ಯಕ ಅಭಿವ್ಯಕ್ತಿಯ ವೈವಿಧ್ಯ ಮತ್ತು ಶಕ್ತಿ ಮತ್ತು ಸಾಧ್ಯತೆಗಳನ್ನು ಗುರುತಿಸಲೇ ಬೇಕು. ಆ ಎಲ್ಲ ನೆಲೆಗಳಿಂದಲೂ ವಿಮರ್ಶಕರು ಮೂಡಿ ಬರಬೇಕು/ಬಂದಿದ್ದಾರೆ. ನಿರ್ಲಕ್ಷಿತವಾದ ಬರೆಹಗಳ ‘ಮರುಹುಟ್ಟು’ ಕೂಡ ಸಾಧ್ಯವಾಗಬೇಕು. ಆದರೆ, ಇಂಥ ಯಾವ ಸಂಗತಿಯೂ ಸಮುದಾಯಗಳಿಗೆ ಒಟ್ಟಂದದಲ್ಲಿ ಸಲ್ಲಬೇಕಾದ ನ್ಯಾಯವೇ ಹೊರತು ನಿರ್ದಿಷ್ಟ ಲೇಖಕನಿಗೆ ಕೊಡುವ ರಿಯಾಯತಿಗಳಲ್ಲ. ಯಾರು ಯಾವುದೇ ಹಿನ್ನೆಲೆಯಿಂದ ಬಂದಿರಲಿ, ಸಾಹಿತ್ಯರಚನೆಗೆ ಅಗತ್ಯವಾದ ಸೃಜನಶೀಲತೆ ಇಲ್ಲದವರು ಸಾಹಿತಿಗಳಾಗುವುದಿಲ್ಲ. ಎಷ್ಟು ದೊಡ್ಡ ಚಿಂತಕರಾದರೂ ಹೋರಾಟಗಾರರಾದರೂ ಅವರು ಆ ಕಾರಣದಿಂದಲೇ ಕವಿಯೋ ಕಥೆಗಾರನೋ ಆಗಿಬಿಡುವುದಿಲ್ಲ.

ಲೇಖಕರ ಬರವಣಿಗೆಯನ್ನು ಬದಿಗೆ ಸರಿಸಿ ‘ಅಸ್ಮಿತೆ’ಯನ್ನು ಮುಂದೆ ಮಾಡಿದಾಗ, ಪರಸ್ಪರ ಸಹಕಾರಸಂಘಗಳಂತಹ ‘ಲಾಬಿ’ಗಳು ಹುಟ್ಟಿಕೊಂಡಾಗ ಅದೇ ಪದದಲಿತ ವರ್ಗಗಳ ‘ನಿಜವಾದ’ ಲೇಖಕರಿಗೆ ಅನ್ಯಾಯವಾಗುತ್ತದೆ. ಮುಳ್ಳೂರು ನಾಗರಾಜ, ಯೋಗಪ್ಪನವರ್, ಕೆ.ಪಿ.ಮೃತ್ಯುಂಜಯ, ಕೃಷ್ಣ ಮಾಸಡಿ, ಎಚ್.ಎಸ್.ಚಂಪಾವತಿ, ರೇಖಾರಾಣಿ, ಬಿ.ಯು.ಸುಮಾ ಮುಂತಾದವರು ಒಳ್ಳೆಯ ಪುಸ್ತಕಗಳನ್ನು ಬರೆದರು. ‘ಗಾಡ್ ಫಾದರ್’ಗಳ ಹುಡುಕಾಟದಲ್ಲಿ ತೊಡಗಲಿಲ್ಲ. ಅವರು ಓದು ಮತ್ತು ಮನ್ನಣೆ ಎರಡರಿಂದಲೂ ವಂಚಿತರಾಗಿದ್ದಾರೆ. ಡಿ.ಎನ್.ಶಂಕರಭಟ್ ಮತ್ತು ಜಿ.ವೆಂಕಟಸುಬ್ಬಯ್ಯನವರ ಸಾಧನೆ ಮತ್ತು ಅವರು ಪಡೆದಿರುವ ಮನ್ನಣೆಗಳನ್ನು ಹೋಲಿಸಿನೋಡಿದಾಗ ಇಂತಹ ಮಾರ್ಗದ ಮಿತಿಗಳು ಸ್ಪಷ್ಟವಾಗುತ್ತವೆ.

ಏಕೆಂದರೆ ಲೇಖಕನ ವ್ಯಕ್ತಿತ್ವ, ವೈಚಾರಿಕ ನಿಲುವುಗಳು, ಹೋರಾಟದ ಚಟುವಟಿಕೆಗಳು, ಅಂತರಂಗದ ಬೆಳವಣಿಗೆ, ಸಂವೇದನೆಯ ಹರಿತ, ಭಾಷೆಯ ಬಗೆಗಿನ ಕಾಳಜಿ ಇವೆಲ್ಲವೂ ಅವನು ಆ ಕ್ಷಣದಲ್ಲಿ ಬರೆಯುತ್ತಿರುವ ಪುಸ್ತಕದ ಭಾಗವಾಗಿಯೇ ಇರುತ್ತದೆ.

ವಿಮರ್ಶಕರು ಸಂವೇದನಶೀಲರಾಗಿದ್ದಾಗ ‘ಕೇವಲ’ ಸಾಹಿತ್ಯಕೃತಿಯ ವಿಮರ್ಶೆಯೆನ್ನುವುದು ಇರುವುದೇ ಇಲ್ಲ. ಏಕೆಂದರೆ ಲೇಖಕನ ವ್ಯಕ್ತಿತ್ವ, ವೈಚಾರಿಕ ನಿಲುವುಗಳು, ಹೋರಾಟದ ಚಟುವಟಿಕೆಗಳು, ಅಂತರಂಗದ ಬೆಳವಣಿಗೆ, ಸಂವೇದನೆಯ ಹರಿತ, ಭಾಷೆಯ ಬಗೆಗಿನ ಕಾಳಜಿ ಇವೆಲ್ಲವೂ ಅವನು ಆ ಕ್ಷಣದಲ್ಲಿ ಬರೆಯುತ್ತಿರುವ ಪುಸ್ತಕದ ಭಾಗವಾಗಿಯೇ ಇರುತ್ತದೆ. ಇವೆಲ್ಲದರ ಜೊತೆಗೆ ಅವನ ಸುಪ್ತಚಿತ್ತದ ಸೃಜನಶೀಲತೆಯ ಏರಿಳಿತಗಳು ಹಾಗೂ ಅವನು ತನ್ನ ‘ಏಕಾಂತ’/ಆತ್ಮವಿಮರ್ಶೆಯನ್ನು ಕಾಪಾಡಿಕೊಂಡಿರುವ ಬಗೆಗಳು ಕೂಡ ಅವನ ಬರವಣಿಗೆಯ ಬೆಲೆಯನ್ನು ತೀರ್ಮಾನ ಮಾಡುತ್ತವೆ.

ಲೇಖಕನು ನಿಜಕ್ಕೂ ಒಂಟಿಜೀವಿ ಮತ್ತು ತನ್ನ ಕಸುಬಿನ ಬಗ್ಗೆ ಆತಂಕದಿಂದ ತುಂಬಿರಬೇಕಾದ ಜೀವಿ. ದೇವನೂರ ಮಹಾದೇವ, ರಾಘವೇಂದ್ರ ಖಾಸನೀಸ ಮುಂತಾದವರ ಸೃಜನಶೀಲ ಮೌನವು ಇಂಥ ಕಟ್ಟೆಚ್ಚರದ ಫಲವೆಂದೇ ನಾನು ತಿಳಿದಿದ್ದೇನೆ. ‘ಕಾನೂರು ಹೆಗ್ಗಡಿತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳ ನಡುವೆ ಇರುವ ವ್ಯತ್ಯಾಸವನ್ನು ಗ್ರಹಿಸಲು ಕುವೆಂಪು ಅವರ ಜೀವನಚರಿತ್ರೆಯ ಅಧ್ಯಯನದ ಅಗತ್ಯವಿಲ್ಲ. ಶಿವರಾಮ ಕಾರಂತರ ಕಾದಂಬರಿಗಳ ಓದಿನಿಂದಲೇ ಅವರ ಪ್ರಗತಿಮೀಮಾಂಸೆಯಲ್ಲಿ ಆದ ಬದಲಾವಣೆಗಳನ್ನು ಗ್ರಹಿಸಬಹುದು. ಇದು ಕನ್ನಡದ ಯಾವುದೇ ಮುಖ್ಯ ಲೇಖಕನಿಗೂ ಅನ್ವಯಿಸುತ್ತದೆ.

ಆದರೆ, ಅದರ ಸಂಗಡವೇ ‘ತುಘಲಕ್’, ‘ಕೂಪಮಂಡೂಕ’, ‘ಗುಣಮುಖ’, ‘ಶ್ರೀ ರಾಮಾಯಣ ದರ್ಶನಂ’ ಮುಂತಾದ ಕೃತಿಗಳು ಬೇರೆ ಯಾವುದೇ ‘ರೆಫರೆನ್ಸ್ ಪಾಯಿಂಟ್’ಗಳು ಇಲ್ಲದೆಯೂ ಮೌಲಿಕವಾಗುತ್ತವೆ, ಅರ್ಥಪೂರ್ಣವಾಗುತ್ತವೆ. ಗಿರೀಶ ಕಾರ್ನಾಡರು ತುಘಲಕ್ ಬರೆದ ಮೇಲೆ ಏನು ಬರೆದರು, ಹೇಗೆ ಬದುಕಿದರು, ಯಾವುದರ ಪರವಾಗಿ ಇದ್ದರು ಮುಂತಾದ ಸಂಗತಿಗಳು ಆ ನಾಟಕವನ್ನು ಕುರಿತು ಬರೆಯುವಾಗ ಗೌಣ.

ಹಾಗೆಯೇ ಒಂದೇ ಒಂದು ಕವಿತೆಯ ಓದು ಇತರ ಹತ್ತು ಹಲವು ಕವಿತೆಗಳ ಸಹಯೋಗದಲ್ಲಿ ಪಡೆದುಕೊಳ್ಳುವ ಅಸ್ತಿತ್ವವು ‘ಸಾರ್ವಜನಿಕ’ವಾದುದು. ಅಲ್ಲಮ, ಬಸವಣ್ಣ ಮತ್ತು ಅಕ್ಕಮಹಾದೇವಿಯರ ವಚನಗಳು ಒಂದು ಇನ್ನೊಂದಕ್ಕೆ ಒಳಹೊಗುವ ಹಾದಿಗಳನ್ನು ಕಲಿಸುತ್ತವೆ. ಆದರೆ, ಅದರ ಸಂಗಡವೇ ‘ತುಘಲಕ್’, ‘ಕೂಪಮಂಡೂಕ’, ‘ಗುಣಮುಖ’, ‘ಶ್ರೀ ರಾಮಾಯಣ ದರ್ಶನಂ’ ಮುಂತಾದ ಕೃತಿಗಳು ಬೇರೆ ಯಾವುದೇ ‘ರೆಫರೆನ್ಸ್ ಪಾಯಿಂಟ್’ಗಳು ಇಲ್ಲದೆಯೂ ಮೌಲಿಕವಾಗುತ್ತವೆ, ಅರ್ಥಪೂರ್ಣವಾಗುತ್ತವೆ. ಗಿರೀಶ ಕಾರ್ನಾಡರು ತುಘಲಕ್ ಬರೆದ ಮೇಲೆ ಏನು ಬರೆದರು, ಹೇಗೆ ಬದುಕಿದರು, ಯಾವುದರ ಪರವಾಗಿ ಇದ್ದರು ಮುಂತಾದ ಸಂಗತಿಗಳು ಆ ನಾಟಕವನ್ನು ಕುರಿತು ಬರೆಯುವಾಗ ಗೌಣ. ಯಾವ ಕೃತಿಯು ತನ್ನ ದೇಶ, ಕಾಲ, ಸಂದರ್ಭಗಳನ್ನು ಮೀರಿಯೂ ಮೌಲಿಕವಾಗಿಯೇ ಉಳಿಯುವುದರ ಕಾರಣಗಳನ್ನು ಕುರಿತು ವಿಮರ್ಶಕರು ಗಮನಿಸಲೇ ಬೇಕು.

ಈ ಎಲ್ಲ ಗೊಂದಲದಲ್ಲಿ ನಾವು ಮರೆಯುವ ಸಂಗತಿಯೆಂದರೆ, ಸಾಹಿತ್ಯವು ಭಾಷೆಯನ್ನು ಮಾಧ್ಯಮವಾಗಿ ಬಳಸಿಕೊಂಡು, ಜೀವನವನ್ನು ಅದರ ಸಮಗ್ರತೆಯಲ್ಲಿ ಅನುಸಂಧಾನ ಮಾಡುವ ಕಲೆ ಎನ್ನುವುದನ್ನು. ನಮ್ಮ ದೈನಿಕಗಳಲ್ಲಿ, ವಿಚಾರ ಮಂಡನೆಗಳಲ್ಲಿ, ಅಧ್ಯಯನ-ಅಧ್ಯಾಪನಗಳಲ್ಲಿ, ಮಾಧ್ಯಮಗಳಲ್ಲಿ ಭಾಷೆಯನ್ನು ಬಳಸುವ ಬಗೆಗೂ ಸಾಹಿತ್ಯದಲ್ಲಿ ಅದನ್ನು ‘ಕಟ್ಟಿಕೊಡುವ’ ರೀತಿಗೂ ವ್ಯತ್ಯಾಸಗಳಿವೆ. ಸ್ವತಃ ಸಾಹಿತಿಯ ಇತರ ಬರವಣಿಗೆಗೂ ಅವನ ಸಾಹಿತ್ಯಕೃತಿಗಳಿಗೂ ಖಚಿತವಾದ ಅಂತರ ಇರುತ್ತದೆ. ಚಿತ್ರ, ಸಂಗೀತ, ನೃತ್ಯ ಮುಂತಾದ ಕಲೆಗಳ ಮಾಧ್ಯಮಗಳಿಗೆ ಇರುವ ‘ಮುಕ್ತ’ ಗುಣವು ಭಾಷೆಗೆ ಇಲ್ಲ. ಆದ್ದರಿಂದ, ಅದರ ದೈನಂದಿನ ಉಪಯೋಗ ಮತ್ತು ಕಲಾತ್ಮಕ ಉಪಯೋಗಗಳ ನಡುವೆ ಲೇಖಕರು ಹಾಗೂ ಓದುಗರು ಇಬ್ಬರೂ ‘ಕನ್ಫ್ಯೂಸ್’ ಮಾಡಿಕೊಳ್ಳುವ ಸಂಭವ ಇದೆ. ಆಡುಮಾತು ಎನ್ನುವುದು ಕೂಡ ಇಂತಹುದೇ ಇನ್ನೊಂದು ಬೋನು.

ಭಾಷೆಯ ಬಳಕೆಯು ಕೇವಲ ಅಷ್ಟೇ ಆಗದೆ, ಆಕೃತಿರೂಪಣವನ್ನೂ ಮಾಡುತ್ತದೆ. ಮತ್ತು ಇವೆಲ್ಲವೂ ಬರೆಯುವ ಕ್ಷಣದಲ್ಲಿ ‘ಆಗುತ್ತವೆಯೇ’ ಹೊರತು ಮೊದಲೇ ‘ರೆಡಿಮೇಡ್’ ಆಗಿರುವುದಿಲ್ಲ. ಈ ಸಂಗತಿಗಳನ್ನು ಲೇಖಕನ ಒಳಮನಸ್ಸು ನಿರ್ಧರಿಸುತ್ತದೆ.

ಸಾಹಿತ್ಯಕೃತಿಯು ತನ್ನೊಳಗೆ ಹಲವು ಸಾಧ್ಯತೆಗಳನ್ನು, ಸಾಹಿತಿಯನ್ನೂ ಮೀರುವ ನಿಗೂಢತೆಯನ್ನು ಹುದುಗಿಕೊಂಡಿರುತ್ತದೆ. ಖಚಿತತೆಯು ಹೇಳಿಕೆಗಳಿಗೆ ಹಾದಿಯಾಗುವುದೇ ವಿನಾ ಕಥೆ-ಕವಿತೆಗಳಿಗೆ ಅಲ್ಲ. ಕೊನೆಯ ಕ್ಷಣದವರೆಗೂ ಟೀಕೆ-ಟಿಪ್ಪಣಿಗಳನ್ನು ಪಾರದರ್ಶಕವಾಗಿ ಬರೆದು, ಕಥೆ-ಕವಿತೆಗಳನ್ನು ಅ-ಪಾರದರ್ಶಕವಾಗಿ ಬರೆಯುತ್ತಿದ್ದ ಲಂಕೇಶರಿಗೆ ಈ ಗುಟ್ಟು ಗೊತ್ತಿತ್ತು. ಕವಿತೆಯಲ್ಲಿ ಲಯವಿನ್ಯಾಸ, ಪದರಚನೆ, ವಾಕ್ಯರಚನೆ, ಪ್ರತಿಮಾಸಂಯೋಜನೆ ಮುಂತಾದ ಅಂಶಗಳನ್ನು ಒಳಗೊಳ್ಳುವ ಈ ಕಲೆಗಾರಿಕೆಯು ಕಥೆ, ಕಾದಂಬರಿ, ನಾಟಕಗಳಂತಹ ಪ್ರಕಾರಗಳಲ್ಲಿ ಇನ್ನಷ್ಟು ಆಯಾಮಗಳನ್ನು ಹೊಂದುತ್ತದೆ. ಭಾಷೆಯ ಬಳಕೆಯು ಕೇವಲ ಅಷ್ಟೇ ಆಗದೆ, ಆಕೃತಿರೂಪಣವನ್ನೂ ಮಾಡುತ್ತದೆ. ಮತ್ತು ಇವೆಲ್ಲವೂ ಬರೆಯುವ ಕ್ಷಣದಲ್ಲಿ ‘ಆಗುತ್ತವೆಯೇ’ ಹೊರತು ಮೊದಲೇ ‘ರೆಡಿಮೇಡ್’ ಆಗಿರುವುದಿಲ್ಲ. ಈ ಸಂಗತಿಗಳನ್ನು ಲೇಖಕನ ಒಳಮನಸ್ಸು ನಿರ್ಧರಿಸುತ್ತದೆ. ಅಷ್ಟೇ ಅಲ್ಲ, ಅವನ ಒಳಗಡೆಯೇ ಅಡಗಿ ಕುಳಿತಿರುವ, ಅವನೇ ಓದದಿದ್ದರೂ ‘ಕನ್ನಡ’ದ ಒಡಲಿನೊಳಗೆ ಇರುವ, ಸಮಗ್ರ ಸಾಹಿತ್ಯ ಪರಂಪರೆಯೇ ಅವನ ಜೊತೆಗೆ ಇರುತ್ತದೆ.

ಕವಿ ಹೇಳಿದಂತೆ ‘ರಾಮಾಯಣ ದರ್ಶನ’ವು ಕುವೆಂಪು ಅವರನ್ನು ಸೃಷ್ಟಿಸುತ್ತದೆ. ಇದು ಬೀಜಮಾತು. ನಿಜಕ್ಕೂ ನೋಡಿದರೆ, ಸಾಹಿತ್ಯಕೃತಿಯು ಭಾಷೆಯ ಖಾಸಗೀ ಮತ್ತು ಸಾರ್ವಜನಿಕ ಅಸ್ತಿತ್ವಗಳ ‘ಕೂಡುಬಿಂದು’. ಲೇಖಕನಿಗೆ ವಿಶಿಷ್ಟವೆನ್ನಲಾಗುವ ಶೈಲಿಯು ಕನ್ನಡಕ್ಕೆ ಇರುವ, ಹೊಸದಾಗಿ ಬರುತ್ತಿರುವ ಅನಂತ ಸಾಧ್ಯತೆಗಳಲ್ಲಿ ಒಂದು ಮಾತ್ರ. ಇದನ್ನು ಗಮನಕ್ಕೆ ತಂದುಕೊಳ್ಳದೆ, ಕೇವಲ ಆಶಯಗಳ ಹಾಳುಬಾವಿಯಲ್ಲಿ ರಮಿಸುವ ವಿಮರ್ಶಕನಿಗೆ ಹುಸಿ ಮತ್ತು ದಿಟಗಳ ನಡುವಿನ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಉದಾಹರಣೆಗೆ, ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಇಬ್ಬರಾದ ಅಮರೇಶ ನುಗಡೋಣಿ ಮತ್ತು ಮೊಗಳ್ಳಿ ಗಣೇಶ್ ಅವರ ಕಥೆಗಳನ್ನು ಹೋಲಿಸಿ ನೋಡಿದಾಗ ಅವರಿಬ್ಬರ ವಿಶಿಷ್ಟತೆ ಮತ್ತು ಲೇಖಕನ ಸೃಜನಶೀಲತೆಯ ಸ್ವರೂಪದ ಬಗ್ಗೆ ಅನೇಕ ಹೊಳಹುಗಳು ಸಿಗುತ್ತವೆ. ನಿಜವಾದ ಓದುಗರು ಮತ್ತು ವಿಮರ್ಶಕರು ಪ್ರತಿಯೊಂದು ‘ಕೃತಿ’ಯಲ್ಲಿಯೂ ಇರುವ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾರೆ. ಹುಟ್ಟಿಸುತ್ತಾರೆ. ಇಂದು ಕನ್ನಡ ವಿಮರ್ಶೆಯ ಬಹುಭಾಗವು ಈ ಸಂಗತಿಯನ್ನು ಗಮನಿಸಲೇಬೇಕು. ಆದ್ದರಿಂದ ಕೊಂಚ ವಿವರವಾಗಿ ಹೇಳಿದ್ದೇನೆ. ಕೃತಿಗಳನ್ನು ಬದಿಗಿರಿಸಿ ಕೇವಲ ಕೃತಿಕಾರನ ಬಗ್ಗೆ ಮಾತನಾಡುವುದು, ‘ಕೃತಿ’ಗಳ ಬಗ್ಗೆ ಬರೆದಾಗಲೂ ಕೇವಲ ಆಶಯನಿಷ್ಠವಾದ ‘ತಪ್ಪು ಓದು’ಗಳನ್ನು ಮಾಡುವುದು ಎರಡೂ ಅಪಾಯಗಳೆಂದೇ ನಾನು ತಿಳಿಯುತ್ತೇನೆ.

ಅಷ್ಟೇಕೆ ಪ್ರತಿಯೊಬ್ಬ ಲೇಖಕನೂ ತನಗೆ ಸರಿಯೆನಿಸುವ ಮೀಮಾಂಸೆಯೊಂದಿಗೆ ಕಲೆ ಮತ್ತು ಲೋಕದೊಂದಿಗೆ ವ್ಯವಹಾರ ನಡೆಸುತ್ತಿರುತ್ತಾನೆ. ವಿಮರ್ಶೆ ಕೂಡಾ ತನ್ನದೇ ಆದ ಚಲನಶೀಲವೂ ಮುಕ್ತವೂ ಆದ ಮೀಮಾಂಸೆಯೊಂದಿಗೆ ಅದೇ ಕೆಲಸ ಮಾಡುತ್ತದೆ.

ಇಲ್ಲಿಯೇ ಇನ್ನೆರಡು ಮಾತುಗಳನ್ನೂ ಹೇಳಬೇಕು. ಕೃತಿನಿಷ್ಠ ವಿಮರ್ಶೆಯು ‘ಸಾಮಾಜಿಕ ಪ್ರಜ್ಞೆ’ಗೆ ಎರವಾಗುವುದು ಅನಿವಾರ್ಯವೇನೂ ಅಲ್ಲ. ನವ್ಯವಿಮರ್ಶೆಯ ಮಿತಿಗಳನ್ನು ಮೀರಿ, ಕೃತಿನಿಷ್ಠ ವಿಧಾನಗಳನ್ನು ಬಳಸಿದಾಗ, ಕಂಡುಬರುವ ಹೊಳಹುಗಳಲ್ಲಿ ಸಾಮಾಜಿಕ ಪ್ರಜ್ಞೆಯೂ ಇದ್ದೇ ಇರುತ್ತದೆ. ಇಷ್ಟಕ್ಕೂ ಸಾಹಿತ್ಯಕೃತಿಗಳ ಬಗ್ಗೆ ಬರೆಯುವಾಗ ಅವುಗಳನ್ನೇ ಬದಿಗಿರಿಸಿ ಬರೆಯುವುದಾದರೂ ಹೇಗೆ? ಎರಡನೆಯದಾಗಿ ಕಲಾಮೀಮಾಂಸೆ, ಸಾಹಿತ್ಯಮೀಮಾಂಸೆ ಮುಂತಾದವು ಆಚಂದ್ರಾರ್ಕವಾಗಿ ಉಳಿಯುವ, ಬದಲಾಗಬಾರದ ಜಡಸಂಗತಿಗಳೇನೂ ಅಲ್ಲ. ವಾಸ್ತವವಾಗಿ ನೋಡಿದರೆ, ಏಕಕಾಲದಲ್ಲಿ ಹಲವು ಕಾವ್ಯಮೀಮಾಂಸೆಗಳು ಅಸ್ತಿತ್ವದಲ್ಲಿದ್ದು ಯಾವುದೋ ಒಂದು ಪ್ರತಿಷ್ಠಿತ ಶಕ್ತಿಗಳ ಬೆಂಬಲವನ್ನು ಪಡೆದುಕೊಂಡಿರುತ್ತದೆ.

‘ಚಿಕ್ಕದೇವರಾಯಬಿನ್ನಪಂ’ ಮತ್ತು ‘ಮಂಟೇಸ್ವಾಮಿ ಕಾವ್ಯ’ಗಳು ಒಂದೇ ಕಾಲದಲ್ಲಿ ಅಸ್ತಿತ್ವದಲ್ಲಿರುತ್ತವೆ. ಪ್ರತಿಯೊಂದು ಕಾಲ, ದೇಶ, ಸಂದರ್ಭಕ್ಕೂ ತನ್ನದೇ ಆದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಳ್ಳುವ ಹಕ್ಕು, ಅಧಿಕಾರ ಇದೆ. ಆದರೆ, ಯಾವುದೇ ಬಗೆಯ ಮೀಮಾಂಸೆಯನ್ನೂ ಹೊಂದಿರದ ಕಲೆ-ಸಾಹಿತ್ಯ ಇರುವುದಿಲ್ಲ. ಲೋಕನಿಷ್ಠವೆನ್ನಲಾದ ಬರೆಹಕ್ಕೂ ತನ್ನದೇ ಆದ ತಾತ್ವಿಕತೆ, ಕಲಾತ್ಮಕತೆ ಇರುತ್ತದೆ. ಅಷ್ಟೇಕೆ ಪ್ರತಿಯೊಬ್ಬ ಲೇಖಕನೂ ತನಗೆ ಸರಿಯೆನಿಸುವ ಮೀಮಾಂಸೆಯೊಂದಿಗೆ ಕಲೆ ಮತ್ತು ಲೋಕದೊಂದಿಗೆ ವ್ಯವಹಾರ ನಡೆಸುತ್ತಿರುತ್ತಾನೆ. ವಿಮರ್ಶೆ ಕೂಡಾ ತನ್ನದೇ ಆದ ಚಲನಶೀಲವೂ ಮುಕ್ತವೂ ಆದ ಮೀಮಾಂಸೆಯೊಂದಿಗೆ ಅದೇ ಕೆಲಸ ಮಾಡುತ್ತದೆ. ಕೃತಿ ಮತ್ತು ಲೋಕಗಳ ಸಂಗಡ ಸಂವಾದ ನಡೆಸುತ್ತದೆ. ಆದರೆ ಅನೇಕ ಕೃತಿಗಳು ಲೇಖಕನ ಪೂರ್ವಾಪರಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅನಿವಾರ್ಯತೆಯನ್ನು ಹುಟ್ಟಿಸುವುದಿಲ್ಲ. ಕೃತಿರಚನೆಯ ಬಳಿಕ ಲೇಖಕ ಮತ್ತು ಅದರ ನೇರ ಸಂಬಂಧ ಕಡಿದುಹೋಗುತ್ತದೆ. ಕೃತಿಗಳ ವ್ಯಾಖ್ಯಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ.

ಸಂಸ್ಕೃತಿನಾಯಕನಾಗಿ ಒಬ್ಬ ಲೇಖಕನ ಬೆಲೆಕಟ್ಟುವಾಗ ಅವನ ಸಮಗ್ರ ಚಿಂತನೆ ಮತ್ತು ಜೀವನಗಳ ಹಿನ್ನೆಲೆಯನ್ನು ಗಮನಿಸಬೇಕು. ಅವನ ಸಾಹಿತ್ಯಕೃತಿಗಳನ್ನು ನೋಡುವಾಗ ಅವುಗಳಿಂದಲೇ ಮೂಡಿಬರುವ ಜೀವನಮೀಮಾಂಸೆ, ಸಮಾಜಮೀಮಾಂಸೆ ಮತ್ತು ಕಲಾಮೀಮಾಂಸೆಯನ್ನು ನೋಡುವುದು ಸರಿ.

ಇಷ್ಟಕ್ಕೂ ಜನಪರತೆ, ಲೋಕಪರತೆ, ನೈತಿಕತೆ ಎಂದು ನಾವು ಕರೆಯುವ ಪರಿಕಲ್ಪನೆಗಳು ಮನುಷ್ಯನ ಜೀವನ ಮತ್ತು ಅದರ ಅರ್ಥವನ್ನು ಕುರಿತ ಮೂಲಭೂತವಾದ ಪ್ರಶ್ನೆಗಳ ನಿಕಷದಲ್ಲಿಯೂ ಶೋಧಿತವಾಗುತ್ತವೆ. ಕೊನೆಗೂ ಯಾರು ದುಷ್ಟರು ಯಾರು ಸಜ್ಜನರು ಎನ್ನುವ ಪ್ರಶ್ನೆಗೆ ದೊರೆಯುವ ಉತ್ತರಗಳು ಎಷ್ಟು ಸರಳವೋ ಅಷ್ಟೇ ಸಂಕೀರ್ಣವಾದವು. ಕಲೆಯು ಆ ಸಂಕೀರ್ಣತೆಯನ್ನು ತಲುಪಿಸಲು ಬಯಸುವುದೇ ಹೊರತು ಸಿದ್ಧವಾದ ಉತ್ತರಗಳ ಪಟ್ಟಿ ನೀಡುವುದಿಲ್ಲ.

ಸಂಗ್ರಹವಾಗಿ ಹೇಳುವುದಾದರೆ,  ಸಂಸ್ಕೃತಿನಿಷ್ಠ ವಿಮರ್ಶೆ ಮತ್ತು ಕೃತಿನಿಷ್ಠ ವಿಮರ್ಶೆಗಳ ನಡುವೆ ಯಾವುದೇ ಬಿರುಕು ಅಥವಾ ವಿಚ್ಛೇದ ಇರುವ ಅಗತ್ಯವಿಲ್ಲ. ಸಾಮಾಜಿಕನಾಗಿ,  ಸಂಸ್ಕೃತಿನಾಯಕನಾಗಿ ಒಬ್ಬ ಲೇಖಕನ ಬೆಲೆಕಟ್ಟುವಾಗ ಅವನ ಸಮಗ್ರ ಚಿಂತನೆ ಮತ್ತು ಜೀವನಗಳ ಹಿನ್ನೆಲೆಯನ್ನು ಗಮನಿಸಬೇಕು. ಅವನ ಸಾಹಿತ್ಯಕೃತಿಗಳನ್ನು ನೋಡುವಾಗ ಅವುಗಳಿಂದಲೇ ಮೂಡಿಬರುವ ಜೀವನಮೀಮಾಂಸೆ, ಸಮಾಜಮೀಮಾಂಸೆ ಮತ್ತು ಕಲಾಮೀಮಾಂಸೆಯನ್ನು ನೋಡುವುದು ಸರಿ. ಪೂರ್ವ ಮತ್ತು ಪಶ್ಚಿಮಗಳೆರಡರಲ್ಲೂ ‘ಸಾಹಿತ್ಯ’ದ ಅಧ್ಯಯನ ನಡೆದುಬಂದಿರುವುದೇ ಹೀಗೆ. ಲೇಖಕನ ಸಮಗ್ರ ಕೃತಿಗಳ ಓದು ಮತ್ತು ಬಿಡಿ ಕೃತಿಗಳ ಓದು ಎರಡಕ್ಕೂ ತನ್ನದೇ ಆದ ಸ್ಥಾನ ಇದೆ.

*ಲೇಖಕರು ಹೆಸರಾಂತ ವಿಮರ್ಶಕ, ಕಥೆಗಾರ, ಅನುವಾದಕರು; ಮೆಲು-ಮಾತಿನ ಸರಳ ವ್ಯಕ್ತಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ 36 ವರ್ಷ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ. ನಿವೃತ್ತಿಯ ನಂತರ, ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತಲ್ಲೀನರು.

Leave a Reply

Your email address will not be published.