ತೆರೆಯ ಹಿಂದೆ

ಇದು ಸುಮಾರು ಎರಡೂವರೆ ದಶಕಗಳ ಹಿಂದಿನ ಘಟನೆ. ನಾನಾಗ ಕನ್ನಡದ ಏಕೈಕ ಡೈಜೆಸ್ಟ್ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕೀಯ ತಂಡದಲ್ಲಿದ್ದೆ. ಸುದೀರ್ಘ ಇತಿಹಾಸವಿರುವ ಈ ಪತ್ರಿಕೆಯಲ್ಲಿ ‘ಕಸ್ತೂರಿ ನಡೆದುಬಂದ ದಾರಿ’ ಎಂಬ ಅಂಕಣವಿತ್ತು; ಹಿಂದೆ ಪ್ರಕಟವಾದ ಬರಹವೊಂದನ್ನು ಆಯ್ದು ಹೊಸ ಓದುಗರಿಗಾಗಿ ಪುನರ್ಮುದ್ರಿಸುವುದು ಇದರ ಉದ್ದೇಶ. ನಾನೊಮ್ಮೆ ಪ್ರಥಮ ಬಾರಿ ಕಸ್ತೂರಿಯಲ್ಲಿ ಬೆಳಕುಕಂಡಿದ್ದ ಲಂಕೇಶರ ‘ಸಂಕ್ರಾಂತಿ’ ನಾಟಕವನ್ನು ಈ ಅಂಕಣಕ್ಕಾಗಿ ಆಯ್ದೆ, ಪ್ರಕಟವೂ ಆಯ್ತು.

ಇದನ್ನು ಕಂಡ ಲಂಕೇಶ್ ಕೆಂಡಾಮಂಡಲ! ‘ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ಈ ನಾಟಕ ಪ್ರಕಟಸಲು ನಿಮಗೆ ಅನುಮತಿ ಕೊಟ್ಟವರಾರು? ನಾನು ಕಾನೂನು ಕ್ರಮ ಕೈಗೊಳ್ಳುವೆ’ -ಇದು ಆಗಿನ ಸಂಯುಕ್ತ ಕರ್ನಾಟಕ ಬಳಗದ ವ್ಯವಸ್ಥಾಪಕ ಸಂಪಾದಕ ಶಾಮರಾಯರಿಗೆ ಲಂಕೇಶ್ ಬರೆದ ಪತ್ರದ ಒಕ್ಕಣಿ. ಆ ಪತ್ರವನ್ನು ನನ್ನೆದುರು ಇಟ್ಟು, ‘ಏನು ಮಾಡ್ತಿಯೋ ಗೊತ್ತಿಲ್ಲ!’ ಎಂದು ದೂರ ಸರಿದರು ನಮ್ಮ ಸಂಪಾದಕರು. ಸಂಸ್ಥೆ ತುಂಬ ಗುಲ್ಲು, ಗುಸುಗುಸು. ನಾನು ಗಲ್ಲಿಗೇರುವುದೊಂದೇ ಬಾಕಿ.

ಕೆಲಕಾಲ ಲಂಕೇಶ್ ಪತ್ರಿಕೆಗೆ ಬಳ್ಳಾರಿಯಿಂದ ವರದಿಗಾರನಾಗಿ ಕೆಲಸಮಾಡಿದ್ದೆ, ನನ್ನ ಒಂದೆರಡು ಕಥೆಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಸಂಯುಕ್ತ ಕರ್ನಾಟಕ ಸೇರುತ್ತೇನೆಂದಾಗ, ‘ಅಲ್ಯಾಕೆ ಹೋಗ್ತೀಯಾ, ಅದು ಮಾಧ್ವಮಠ ಕಣಯ್ಯ…’ ಎಂದು ಲಂಕೇಶರಿಂದ ಹಿತವಾಗಿ ಬೈಸಿಕೊಂಡಿದ್ದೆ. ಆ ಸಲಿಗೆಯಿಂದ ನೇರವಾಗಿ ಲಂಕೇಶರಿಗೆ ಕರೆ ಮಾಡಿ, ಅವರಿಂದಲೇ ಕಲಿತಿದ್ದ ಧೈರ್ಯ ಒಗ್ಗೂಡಿಸಿಕೊಂಡು, ‘ತಪ್ಪು, ಹೊಣೆ ನನ್ನದೇ…’ ಎಂದೆ. ಅವರು ‘ಆಯ್ತು ಬಿಡು’ ಎಂದು ಮಾಫಿ ಮಾಡಿ ಗಂಡಾಂತರಕ್ಕೆ ಅನಿರೀಕ್ಷಿತ ‘ತೆರೆ’ ಎಳೆದುಬಿಡಬೇಕೇ?

ಈ ಸಂಚಿಕೆಯ ಪುಸ್ತಕ ಪ್ರಪಂಚದಲ್ಲಿ ಲಂಕೇಶರ ಬಹುಮುಖ್ಯ ಅಸಂಗತ ನಾಟಕ ‘ತೆರೆಗಳು’ ಪ್ರಕಟವಾಗಿದೆ. ನನ್ನಿಂದ ಈ ಹಿಂದಿನ ತಪ್ಪು ಮರುಕಳಿಸಿಲ್ಲ; ಇದನ್ನು ಪ್ರಕಟಿಸಲು ಉದಾರವಾಗಿ ಅನುಮತಿ ನೀಡಿದ ಇಂದಿರಾ ಲಂಕೇಶ್ ಅವರಿಗೆ ಕೃತಜ್ಞತೆಗಳು.

ಹೊರನೋಟಕ್ಕೆ ಅಸಂಬದ್ಧ ಎನ್ನಿಸುವ ಆಲೋಚನೆಗಳನ್ನು ನಿಮ್ಮೆದುರು ಸುಸಂಬದ್ಧವಾಗಿ ಮಂಡಿಸಲು ಈ ಸಂಚಿಕೆಯ ಮುಖ್ಯಚರ್ಚೆಯಲ್ಲಿ ಪ್ರಯತ್ನಿಸಿದ್ದೇವೆ. ಅಸಂಬದ್ಧತೆಯ ಮುಖವಾಡ ತೊಟ್ಟು ಇಲ್ಲಿ ಕಾಣಿಸಿಕೊಂಡಿರುವ ಈ ಆಲೋಚನೆಗಳು ಅಸಂಭವ ಅಲ್ಲ ಎಂಬ ಗುಮಾನಿ ಹುಟ್ಟಿಸುವಲ್ಲಿ ಸಫಲವಾದರೆ ನಮ್ಮ ಶ್ರಮ ಸಾರ್ಥಕ. ಒಂದು ಸಿದ್ಧಜಾಡು ಹಿಡಿದ ನಮ್ಮ ನಿತ್ಯದ ನೋಟ, ಚಿಂತನಾ ಕ್ರಮವನ್ನು ಸ್ಥಿತ್ಯಂತರಗೊಳಿಸುವ ವಿಶಾಲ ಉದ್ದೇಶವೂ ಈ ವಿಷಯದ ಆಯ್ಕೆಯ ಹಿಂದಿದೆ.

ಈ ಸಂಚಿಕೆಯೊಂದಿಗೆ ‘ಸಮಾಜಮುಖಿ’ಗೆ ಒಂದು ವರ್ಷ ತುಂಬುತ್ತದೆ; ಪತ್ರಿಕೆಯ ಸ್ವರೂಪ, ಸ್ವಂತಿಕೆ, ಚಿಂತನೆಯನ್ನು ಕನ್ನಡಿಗರಿಗೆ ಮನವರಿಕೆ ಮಾಡಿಕೊಡುವಲ್ಲಿನ ಆರಂಭಿಕ ಪ್ರಯಾಸ ಕೊನೆಗೊಂಡಿರುವುದೇ ನಿರಾಳತೆಗೆ ಕಾರಣ. ಈಗ ಪತ್ರಿಕೆಯೊಂದಿಗೆ ಜೊತೆಗೂಡಿರುವ ಬದ್ಧ ಓದುಗರ, ಪ್ರಬುದ್ಧ ಬರಹಗಾರರ, ಶುದ್ಧ ಹಿತೈಷಿಗಳ ಪಡೆ ನಮ್ಮ ನಡೆಯನ್ನು ಇನ್ನಷ್ಟು ದಿಟ್ಟ, ಸರಳ, ನಿರ್ದಿಷ್ಟಗೊಳಿಸಿದೆ. ಈ ಸಂದರ್ಭದಲ್ಲಿ ನಿಮಗೆ ಔಪಚಾರಿಕವಾಗಿ ಹೇಳಬಹುದಾದ ಧನ್ಯವಾದ ಪದಕ್ಕೆ ನಮ್ಮ ಭಾವನೆಯ ಒಂದಂಶ ಹೊರುವ ತಾಕತ್ತೂ ಇಲ್ಲ. ಶರಣು.

One Response to " ತೆರೆಯ ಹಿಂದೆ

- ಸಂಪಾದಕ

"

Leave a Reply

Your email address will not be published.