‘ಕನ್ನಡ ಉಳಿಸಲು ಅಲ್ಲ, ಬಳಸಲು ಹೋರಾಡಿ’

ಕೆಜಿಎಫ್ ಮೂಲಕ ಕನ್ನಡ ಸಿನಿರಂಗದ ಕಡೆಗೆ ಅಂತರರಾಷ್ಟ್ರೀಯ ಸಿನಿಮಾ ಸಂಸ್ಥೆಗಳೂ ತಿರುಗಿ ನೋಡುವಂತೆ ಮಾಡಿದ್ದರಲ್ಲಿ ರವಿ ಬಸ್ರೂರ್ ಸಂಗೀತ ನಿರ್ದೇಶನದ ಪಾಲು ದೊಡ್ಡದಿದೆ.

‘ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ… ಒಂದು ಚೂರು ಬಯ್ಯುದಿಲ್ಲ ರಾತ್ರಿ ಕುಡ್ಕಂಬಂದ್ರೆ…’ ಎಂಬ ‘ಅಂಜನೀಪುತ್ರ’ ಸಿನಿಮಾದ ಹಾಡು ಎರಡು ವರ್ಷಗಳ ಹಿಂದೆ ರಾಜ್ಯದಾದ್ಯಂತ ಎಲ್ಲಿಲ್ಲದ ಜನಪ್ರಿಯತೆ ಗಳಿಸಿತು. ಊರೂರಿನ ಬಸ್ಸಿನಲ್ಲಿ, ಆಟೋಗಳಲ್ಲಿ, ಹಲವರ ಮೊಬೈಲ್‍ಗಳಲ್ಲಿ ಈ ಹಾಡಿನದ್ದೇ ಅಬ್ಬರ. ತನ್ನೂರಿನ ಭಾಷೆ ಅಳಿವಿನಂಚಿಗೆ ಸೇರುವ ಮುನ್ನ ಅದನ್ನು ಉಳಿಸಿ, ಜಗತ್ತಿಗೆ ಹರಡಬೇಕು ಎಂಬ ಅದಮ್ಯ ಕನಸಿನೊಂದಿಗೆ, ಕೆತ್ತನೆಯ ಕೆಲಸ ಬಿಟ್ಟು ಸಿನಿಮಾ ಸಂಗೀತ ಲೋಕಕ್ಕೆ ಕಾಲಿಟ್ಟ ರವಿ ಬಸ್ರೂರ್ ಎಂಬ ವ್ಯಕ್ತಿ ನಾಡಿನ ಮುಂದೆ ಏಕಾಏಕಿ ತೆರೆದುಕೊಂಡದ್ದು ಈ ಹಾಡಿನ ಮೂಲಕ.

ಸಂಗೀತ ಕಲಿಯಬೇಕು ಎನ್ನುವ, ಗುರುವಿಲ್ಲದ ಗುರಿ ಇಟ್ಟುಕೊಂಡು ಊರಿನಿಂದ ಬೆಂಗಳೂರಿಗೆ, ಮುಂಬೈಗೆ ಓಡಾಡಿದವರು ರವಿ. ಸಂಗೀತ ಪರಿಕರಗಳನ್ನು ಕೊಳ್ಳಲು ಕಾಸಿಲ್ಲದೆ ತನ್ನ ಒಂದು ಕಿಡ್ನಿಯನ್ನೇ ಮಾರಲು ಮುಂದಾಗಿದ್ದರು. ಅವರು ಗುರಿ ಸಾಧನೆಯ ಹಾದಿಯಲ್ಲಿ ಮುಂದೆ ಸಾಗಿದ ಬಗೆ ಬಲು ರೋಚಕ.

ಕುಂದಗನ್ನಡ ಕೇವಲ ಕುಂದಾಪುರ, ಉಡುಪಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಅಡಿಗರ, ವೈದೇಹಿ ಅವರ ಪದ್ಯಗಳಲ್ಲಿ ಕಾಣಸಿಗುವ ಪದಗಳಷ್ಟೇ ಕುಂದಾಪುರದವರಲ್ಲದವರಿಗೆ ಅಲ್ಪಸ್ವಲ್ಪವಾಗಿ ಪರಿಚಯವಿತ್ತು. ಕುಂದಗನ್ನಡದಲ್ಲಿ ‘ಗರ್‍ಗರ್ ಮಂಡ್ಲ’, ‘ಬಿಲಿಂಡರ್’ನಂತಹ ಸಿನಿಮಾಗಳನ್ನು ನಿರ್ದೇಶಿಸಿ, ಕಥೆ, ಸಂಗೀತ ನಿರ್ದೇಶನ ಮಾಡಿ ಕುಂದಾಪುರದ ಜನತೆಗೆ ತಮ್ಮ ಭಾಷೆಯ ಸಿನಿಮಾವನ್ನು ಮೊದಲು ಒದಗಿಸಿದ ಕೀರ್ತಿ ರವಿ ಅವರಿಗೆ ಸಲ್ಲುತ್ತದೆ. ರವಿ ಬಸ್ರೂರ್ ಕನ್ನಡ ಚಿತ್ರರಂಗದಲ್ಲಿ ಒಮ್ಮೆ ಮಿಂಚಿನಂತೆ ಬಂದು ಹೋದದ್ದು ‘ಉಗ್ರಂ’ ಸಿನಿಮಾದ ಮೂಲಕ. ‘ಉಗ್ರಂ’ ಸಂಗೀತ ನಿರ್ದೇಶನಕ್ಕಾಗಿ ರವಿ ಅವರಿಗೆ ಫಿಲ್ಮ್‍ಫೇರ್ ಪ್ರಶಸ್ತಿಯೂ ಲಭಿಸಿತು. ಅಂದಿನಿಂದ ಕನ್ನಡ ಸಿನಿಮಾ ರಂಗ ಒಬ್ಬ ಅತ್ಯುತ್ತಮ ಸಂಗೀತ ನಿರ್ದೇಶಕನನ್ನೂ ಪಡೆಯಿತು.

ವೇದಿಕೆಗಳಲ್ಲೆಲ್ಲ ಕುಂದಗನ್ನಡದಲ್ಲೇ ಮಾತು ಆರಂಭಿಸುವ ರವಿ ಬಸ್ರೂರ್, ತನ್ನ ಗುರಿಯನ್ನು ಈಗಾಗಲೇ ತಲುಪಿದ್ದಾರೆ. ಸಂಗೀತದ ಜತೆಗೆ ಭಾಷೆಯನ್ನೂ ಸುಲಭವಾಗಿ ತಲುಪಿಸುವ ರವಿ ಬಸ್ರೂರ್ ಅವರ ಜಾಣ್ಮೆ ನಿಜಕ್ಕೂ ಮಾದರಿ.

ಈಗ ರವಿ ಬಸ್ರೂರ್ ಹೆಸರು ಕೇಳದವರಿಲ್ಲ. ಕರ್ವ, ಮಫ್ತಿ, ಅಂಜನೀಪುತ್ರ, ಕಟಕ, ಕೆಜಿಎಫ್ ಭಾಗ-1 ಮುಂತಾದ ಸಂಗೀತ ಪ್ರಧಾನ ಚತ್ರಗಳಲ್ಲಿ ರವಿ ಹೆಸರು ರಾರಾಜಿಸುತ್ತಿದೆ. ವೇದಿಕೆಗಳಲ್ಲೆಲ್ಲ ಕುಂದಗನ್ನಡದಲ್ಲೇ ಮಾತು ಆರಂಭಿಸುವ ರವಿ ಬಸ್ರೂರ್, ತನ್ನ ಗುರಿಯನ್ನು ಈಗಾಗಲೇ ತಲುಪಿದ್ದಾರೆ. ಸಂಗೀತದ ಜತೆಗೆ ಭಾಷೆಯನ್ನೂ ಸುಲಭವಾಗಿ ತಲುಪಿಸುವ ರವಿ ಬಸ್ರೂರ್ ಅವರ ಜಾಣ್ಮೆ ನಿಜಕ್ಕೂ ಮಾದರಿ.

‘ಹಿಂದೆ ಕುಂದಗನ್ನಡದಲ್ಲಿ ಮಾತನಾಡುವಾಗ ಬೇರೆ ಊರಿನ ಜನ ಇದು ಯಾವುದೋ ಚೈನೀಸ್ ಭಾಷೆ ಎನ್ನುವ ಹಾಗೆ ನೋಡುತ್ತಿದ್ದರು. ನಾವು ಬಳಸುವ ಪದಗಳೆಲ್ಲ ಕನ್ನಡವೇ. ಆದರೆ ಮಾತು ಸ್ವಲ್ಪ ವೇಗವಾಗಿರುತ್ತವೆ ಅಷ್ಟೆ. ಅದನ್ನು ಜನರಿಗೆ ಮನವರಿಕೆ ಮಾಡುವುದು ಕಷ್ಟವಾಗಿತ್ತು. ಇದಕ್ಕೊಂದು ಬದಲಾವಣೆ ತರದೇ ಇದ್ದರೆ ಈ ಭಾಷೆ ಉಳಿಯುವುದು ಕಷ್ಟ ಅಂತನಿಸಿ ನನ್ನ ಪ್ರಯತ್ನಗಳನ್ನು ಮಾಡಿದೆ’ ಎನ್ನುತ್ತಾರೆ ರವಿ ಬಸ್ರೂರ್

‘ಕನ್ನಡವನ್ನು ಹೊರತುಪಡಿಸಿ ಭಾರತದ ಬೇರೆಲ್ಲಾ ಭಾಷೆಗಳನ್ನು ದ್ವೇಷಿಸುವ ಮನಸ್ಥಿತಿ ನಮ್ಮದು. ಅವರಿಂದಾಗಿ ಹೀಗಾಯ್ತು, ಹಾಗಾಯ್ತು ಎನ್ನುತ್ತೇವೆ. ಆದರೆ ನಮ್ಮನ್ನು ಈ ರೀತಿ ವಿಭಜಿಸುತ್ತಿರುವುದು ಇಂಗ್ಲಿಷ್. ತೆಲುಗು, ತಮಿಳು, ಮಲಯಾಳಂ ಅಥವಾ ಹಿಂದಿ ನಮ್ಮನ್ನು ನುಂಗಿಲ್ಲ, ನಮ್ಮನ್ನು ನುಂಗಿರುವುದು ಇಂಗ್ಲಿಷ್. ಅದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಭಾಷಾ ಸಾಮ್ಯ ಇರುವ ಉತ್ತರ ಭಾರತದಂತಹ ಭಾಗಗಳಲ್ಲಿ ಇಂತಹ ಸಮಸ್ಯೆ ಇರುವುದಿಲ್ಲ’ ಎನ್ನುತ್ತಾರೆ ಅವರು.

‘ಗ್ರಾಮೀಣ ಭಾಷೆಗಳಲ್ಲಿ ಬಹಳಷ್ಟು ಮಾಹಿತಿಗಳಿರುತ್ತವೆ. ಅವು ಕಳೆದುಹೋದರೆ ಬಹಳ ಕಷ್ಟ. ಒಂದು ಪದದ ಹಿಂದೆಯೇ 13ರಷ್ಟು ಪದಗಳಿರುತ್ತವೆ. ಒಂದು ಮಾವಿನ ಹಣ್ಣಿನಲ್ಲಿಯೇ 23 ಪದಗಳು ಸಿಗುತ್ತವೆ. ಅವು ಇಂಗ್ಲಿಷ್‍ನಲ್ಲಿ ಸಿಗಲು ಸಾಧ್ಯವಿಲ್ಲ. ಗ್ರಾಮೀಣ ಭಾಷೆಯಲ್ಲಿ ಭಾವನಾತ್ಮಕತೆ ಇದೆ, ಅದರದೇ ಸೊಗಡು ಇದೆ. ಬದಲಾವಣೆ ಏಕೆ ಆಗಬೇಕು ಎಂಬುದು ಅರ್ಥವಾದರಷ್ಟೇ ಜನ ಅದನ್ನು ಎದೆಗಿಳಿಸುತ್ತಾರೆ. ಕನ್ನಡ ಉಳಿಸಲು ಹೋರಾಟ ಮಾಡುವ ಅಗತ್ಯ ಇಲ್ಲ. ಏಕೆಂದರೆ ಅದು ಸಾಯುವುದಿಲ್ಲ. ಆದರೆ ಕನ್ನಡ ಬಳಸಲು ಹೋರಾಡಿ’ ಎಂಬುದು ರವಿ ಅವರ ಕಿವಿಮಾತು.

‘ಪಣಕ್ ಮಕ್ಕಳ್’ ಎಂಬ ಕುಂದಗನ್ನಡ ಆಲ್ಬಂನಿಂದ ತೊಡಗಿ, ಕೆಜಿಎಫ್ ಭಾಗ-1 ರ ವರೆಗೆ ಬಸ್ರೂರ್ ಪಯಣ, ಕನ್ನಡ ಕಟ್ಟುವ ಕಾಯಕದ ಪಯಣವೂ ಹೌದು. ಕೆಜಿಎಫ್ ಮೂಲಕ ಕನ್ನಡ ಸಿನಿರಂಗದ ಕಡೆಗೆ ಅಂತರರಾಷ್ಟ್ರೀಯ ಸಿನಿಮಾ ಸಂಸ್ಥೆಗಳೂ ತಿರುಗಿ ನೋಡುವಂತೆ ಮಾಡಿದ್ದರಲ್ಲಿ ರವಿ ಬಸ್ರೂರ್ ಸಂಗೀತ ನಿರ್ದೇಶನದ ಪಾಲು ದೊಡ್ಡದಿದೆ. ಬಸ್ರೂರ್ ಸಂಗೀತದ ಹೊರತಾಗಿ ಕೆಜಿಎಫ್ ಸಿನಿಮಾವನ್ನು, ಅದರ ಯಶಸ್ಸನ್ನು ಊಹಿಸುವುದು ಪ್ರೇಕ್ಷಕರಿಗೆ ಕಷ್ಟವಾಗಬಹುದು. 

Leave a Reply

Your email address will not be published.