ಕನ್ನಡ ಕಟ್ಟುವ ಪರ್ಯಾಯ ಚಿಂತನೆಗಳು

ಜಾಗತೀಕರಣದ ಬೀಸು ಭಾಷಾ ಕಲಿಕೆಯ ಮೇಲೆ ಪರಿಣಾಮ ಬೀರಿದಂತೆ ತಂತ್ರಜ್ಞಾನವನ್ನು ಸಾರ್ವಜನಿಕಗೊಳಿಸಿದೆ. ಈ ತಂತ್ರಜ್ಞಾನವನ್ನೇ ಸನ್ನೆಯಾಗಿಸಿ (ಲಿವೆರ್) ಕನ್ನಡವನ್ನು ಉಳಿಸಿ ಬೆಳೆಸುವ ಕೆಲ ಪರ್ಯಾಯ ಚಿಂತನೆಗಳು ಇಲ್ಲಿವೆ.

ಕನ್ನಡ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು; ಸುಮಾರು ಆರೂವರೆ ಕೋಟಿ ಜನರ ಭಾಷೆ ಇದಾಗಿದೆ. ಕರ್ನಾಟಕದ ಹೊರಗೂ ಕನ್ನಡಿಗರು ನೆಲೆಸಿದ್ದಾರೆ. ಮುಂಬಯಿ ಪ್ರದೇಶದಲ್ಲಿಯೇ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿ ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರಿಗೆ ಕನ್ನಡವನ್ನು ಆದ್ಯ ಭಾಷೆಯಾಗಿ ಉಳಿಸುವುದು ಇಂದಿನ ಪಂಥಾಹ್ವಾನವಾಗಿದೆ.

ಜಾಗತೀಕರಣ ಕನ್ನಡ ಭಾಷೆಯ ಕಲಿಯುವಿಕೆಯ ಮೇಲೆ ಕೂಡ ಪರಿಣಾಮ ಬೀರಿದೆ. ಕನ್ನಡ ಭಾಷಾಭಿಮಾನ ಕಳೆದ ಮೂರು ದಶಕಗಳಲ್ಲಿ ಸ್ವಲ್ಪ ಕುಂದಿದಂತೆ ತೋರುತ್ತದೆ. ವಿವಿಧ ಆರ್ಥಿಕ ಕಾರಣಗಳಿಂದ ಭಾರತದ ಇತರ ಪ್ರದೇಶಗಳಿಂದ ಜನರು ಬಂದು ಕರ್ನಾಟಕದಲ್ಲಿ ನೆಲೆಸುತ್ತಿದ್ದಾರೆ. ಹಾಗೆಯೇ ಕನ್ನಡಿಗರು ನಾಡಿನಾಚೆಗೆ ಹೋಗಿ ನೆಲೆಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಭಾಷೆ ನಂಟನ್ನು ಉಳಿಸುವುದು ಮತ್ತು ಬೆಳೆಸುವುದು ದುಸ್ತರವಾಗುತ್ತಿದೆ.

ರಾಜ್ಯ ಸರಕಾರದ ಭಾಷಾನೀತಿ, ಪರ್ಯಾಯ ಭಾಷೆಯ ಸಾಮಥ್ರ್ಯ, ಕನ್ನಡಿಗರ ಮುಂದಿನ ಪೀಳಿಗೆಯ ಭವಿಷ್ಯದ ಯೋಚನೆ, ಜಾಗತಿಕ ಆಗುಹೋಗುಗಳು ಭಾಷಾ ಕಲಿಕೆಯ ಮೇಲೆ ಪ್ರಭಾವ ಬೀರುತ್ತಿವೆ. ಸಾಂಪ್ರದಾಯಿಕ ವಿಧಾನಗಳಿಂದ ಹೊಸ ಜನಾಂಗವನ್ನು ಭಾಷಾ ಕಲಿಕೆಯ ವಿಚಾರದಲ್ಲಿ ಹದ್ದುಬಸ್ತಿನಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗದ ಮಾತು ಎಂದು ಇದುವರೆಗಿನ ಅನುಭವ ಸಿದ್ಧಪಡಿಸಿದೆ. ಆದ್ದರಿಂದ ಉದ್ದೇಶಿತ ಆಶಯವನ್ನು ಸಾಧಿಸಲು ಪರ್ಯಾಯವನ್ನು ಕಂಡುಕೊಳ್ಳುವುದು ಅನಿವಾರ್ಯವೇ ಆಗಿದೆ.

ಭಾಷೆಗಳು ಕಾಲಕಾಲಕ್ಕೆ ಶಿಥಿಲವಾಗುವುದನ್ನೂ ಹೊಸ ಭಾಷೆಗಳು ಪ್ರವರ್ಧಮಾನಗೊಳ್ಳುವುದನ್ನೂ ನಾವು ಭಾಷೆಯ ಇತಿಹಾಸವನ್ನು ಅವಲೋಕಿಸುವಾಗ ಗಮನಿಸಬಹುದು. ಕನ್ನಡಭಾಷೆಯೂ ಇದೇ ಏಳುಬೀಳುಗಳನ್ನು ಕಂಡುಕೊಂಡಿದೆ. ಕಾಲವು ಭಾಷೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿರುವುದೂ ಗಮನಾರ್ಹ. ಕನ್ನಡ ಭಾಷೆಯು ಪ್ರಾದೇಶಿದ ಪ್ರಬೇಧಗಳನ್ನು ಕಂಡುಕೊಂಡದ್ದೂ ಅದರ ಚಲನಶೀಲತೆಗೆ ಸಾಕ್ಷಿಯಾಗಿದೆ.

ಕನ್ನಡ ಒಂದು ಮಗುವಿನ ಭಾಷೆಯಾಗಬೇಕಾದರೆ ಅದು ಬೆಳೆಯುವ ಪರಿಸರವನ್ನು ಕನ್ನಡಮಯವಾಗಿಸುವುದು ಅಗತ್ಯ. ತಂತ್ರಜ್ಞಾನವನ್ನು ಸನ್ನೆಯಾಗಿಸಿ, ಇದನ್ನು ಸಾಧ್ಯವಾಗಿಸಬಹುದು.

ಜಾಗತೀಕರಣದ ಬೀಸು ಭಾಷಾ ಕಲಿಕೆಯ ಮೇಲೆ ಪರಿಣಾಮ ಬೀರಿದಂತೆ ತಂತ್ರಜ್ಞಾನವನ್ನು ಸಾರ್ವಜನಿಕಗೊಳಿಸಿದೆ. ಈ ತಂತ್ರಜ್ಞಾನವನ್ನೇ ಸನ್ನೆಯಾಗಿಸಿ (ಲಿವೆರ್) ಕನ್ನಡವನ್ನು ಉಳಿಸಿ ಬೆಳೆಸುವ ಕೆಲ ಪರ್ಯಾಯ ಚಿಂತನೆಗಳು ಇಲ್ಲಿವೆ.

1.
ಭಾಷೆ ಒಂದು ಆಡುಭಾಷೆಯಾಗಿ ಜನಸಮೂಹದಲ್ಲಿ ಇಂಗಬೇಕಾದರೆ, ಅಂತಹ ಪ್ರಯತ್ನಗಳು ಮಗುವಿನ ಹುಟ್ಟಿದಾರಭ್ಯ ಪ್ರಾರಂಭವಾಗಬೇಕು. ಮಗು ತನ್ನ ಪರಿಸರದಿಂದ ಕಲಿಯುವ ಕಲಿಕೆಗಳಲ್ಲಿ ಭಾಷೆ ಮುಖ್ಯವಾದದ್ದು. ಆದುದರಿಂದ ಕನ್ನಡ ಒಂದು ಮಗುವಿನ ಭಾಷೆಯಾಗಬೇಕಾದರೆ ಅದು ಬೆಳೆಯುವ ಪರಿಸರವನ್ನು ಕನ್ನಡಮಯವಾಗಿಸುವುದು ಅಗತ್ಯ. ತಂತ್ರಜ್ಞಾನವನ್ನು ಸನ್ನೆಯಾಗಿಸಿ, ಇದನ್ನು ಸಾಧ್ಯವಾಗಿಸಬಹುದು.

ಜಾಗತೀಕರಣದ ಕೊಡುಗೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಒಂದು ಅಂಶ. ಮುಖ್ಯವಾಗಿ ಮೊಬೈಲ್ ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗಿದೆ. ಒಂದು ಕೌಟುಂಬಿಕ ಪರಿಸರವನ್ನು ಕನ್ನಡಮಯವಾಗಿಸಲು ಇದು ಸಹಕಾರಿ. ಭಾಷಾ ಹಂಬಲ ಬೆಳೆಯುತ್ತಿರುವ ಮಗುವನ್ನು ಮೊಬೈಲ್ ತಂತ್ರಜ್ಞಾನದ ಮೂಲಕ ತಲುಪುವುದು ಸಾಧ್ಯ.

ಇಂದಿನ ತಾಯಂದಿರಿಗೆ ತೊಟ್ಟಿಲ ಮಕ್ಕಳನ್ನು ಬೆಳೆಸುವ ಸಾಧನಗಳಾದ ಜೋಗುಳ, ಲಾಲಿ ಹಾಡುಗಳಂತಹ ಸಾಧನಗಳು ಅಷ್ಟಾಗಿ ಪರಿಚಯವಿಲ್ಲ, ಇದ್ದರೂ ಹಿಂದಿನಂತೆ ಪುರುಸೊತ್ತು ಇಲ್ಲ. ಕುಟುಂಬಗಳು ಛಿದ್ರವಾಗುತ್ತಿರುವುದರಿಂದ ಅಜ್ಜಿಯರ ಕೌಶಲ್ಯವೂ ಲಭ್ಯವಿಲ್ಲ. ಮಕ್ಕಳಿಗೆ ಜೀವನಕ್ರಮವಾಗಬೇಕಾದ ಜೋಗುಳ, ಹಾಡುಗಳನ್ನು ಮೋಬೈಲ್ ಮತ್ತು ಇತರ ತಂತ್ರಜ್ಚಾನದ ಮೂಲಕ ಮನೆಮನೆಗೆ ತಲಪಿಸುವುದು ಮೊದಲ ಹೆಜ್ಜೆ. ತೊಟ್ಟಿಲಿನಿಂದ ಆಚೆ ಬಂದ ಮಕ್ಕಳನ್ನು ಇಂದಿನ ತಾಯಂದಿರು ‘ಸ್ವಯಂ ತೊಡಗಿಸಲು’ ಉಪಯೋಗಿಸುವುದು ‘ಕಾರ್ಟೂನ್’ ನಂತಹ ಮನೋರಂಜನೆಯನ್ನು. ಬೇರೆ ಭಾಷೆಗಳಲ್ಲಿ, ಮುಖ್ಯವಾಗಿ ಇಂಗ್ಲಿಷ್‍ನಲ್ಲಿ, ಬಂದಷ್ಟು ಕಾರ್ಟೂನುಗಳು ಕನ್ನಡದಲ್ಲಿ ಬಂದಿಲ್ಲ (ಬಂದೇ ಇಲ್ಲ ಎಂದೂ ಹೇಳಬಹುದು). ಮುಖ್ಯವಾಗಿ ಇಂಗ್ಲಿಷಿನಲ್ಲಿ ಮಾತ್ರ ಲಭ್ಯವಿರುವ ಕಾರ್ಟೂನುಗಳನ್ನು ಬಳಸುವುದರಿಂದ ಅದೇ ಭಾಷೆ ಮಗುವಿಗೆ ಆಪ್ತವಾಗುತ್ತದೆ. ಅದನ್ನು ತಪ್ಪಿಸಿ ಕನ್ನಡದ ವಾತಾವರಣ ಮೂಡಿಸಬೇಕಾದರೆ, ಶಿಶು ಸ್ನೇಹಿಯಾದ ಕನ್ನಡ ಮನರಂಜನೆಗಳನ್ನು ಮಕ್ಕಳಿಗೆ ತಲಪಿಸಬಹುದು (ಇದರ ಅರ್ಥ ಮಕ್ಕಳನ್ನು ಕನ್ನಡ ಕಾರ್ಟೂನುಗಳ ವ್ಯಸನಿಗಳಾಗಿಸಬೇಕು ಎಂದಲ್ಲ!).

ಮಕ್ಕಳ ಸಂಸ್ಕಾರಗಳನ್ನು ಬೆಳೆಸಬಲ್ಲ ರಾಮಾಯಣ-ಮಹಾಭಾರತದಂತಹ ಕಥಾನಕಗಳು ಭಾಷೆಯ ಬಗ್ಗೆ ಬಂಧವನ್ನು ಬೆಳೆಸಲು ಸಹಕಾರಿ.

ಮಗು ತನ್ನ ವಿದ್ಯಾಭ್ಯಾಸಕ್ಕೆ ಕಾಲಿಡುವಾಗ ಶಾಲೆಯ ಭಾಷಾ ಮಾಧ್ಯಮ ಯಾವುದೇ ಇದ್ದರೂ ಕನ್ನಡದ ಕಾಗುಣಿತಗಳನ್ನು ಪರಿಚಯಿಸುವುದು ಹೆತ್ತವರ ಆದ್ಯತೆಯಾಗಬೇಕು. ಕಾಗುಣಿತ ಕಲಿಸುವ ಸುಲಭ ಪರ್ಯಾಯಗಳನ್ನೂ ಕಂಡುಕೊಳ್ಳುವುದು ಅಗತ್ಯ. ಮಕ್ಕಳಿಗೆ ಸೂಕ್ತ ಪರಿಕರಗಳನ್ನು ಒದಗಿಸಿದರೆ, ಶಾಲೆಗಳಲ್ಲಿ ಕನ್ನಡ ಕಲಿಸದಿದ್ದರೂ ತಮ್ಮ ಮಕ್ಕಳಿಗೆ ಕನ್ನಡದ ಒಲವು ಮತ್ತು ಆಸಕ್ತಿಯನ್ನು ಬೆಳೆಸುವುದು ಸಾಧ್ಯ.

2.
ಮಕ್ಕಳು ಮುಂದಿನ ಹಂತಕ್ಕೆ ಬಂದಾಗ (6-10 ವರ್ಷ ವಯಸ್ಸು) ಅವರು ವ್ಯವಹರಿಸುವುದು ತಾಯಿ-ತಂದೆಯ ಜೊತೆ. ಸಾಮಾನ್ಯವಾಗಿ ಹೆತ್ತವರು ಮಕ್ಕಳನ್ನು ಟ್ಯೂಶನ್ ಕ್ಲಾಸಿಗೆ ಕಳಿಸುವುದು ಇಂದಿನ ಪ್ರವೃತ್ತಿ. ಹಾಗಿಲ್ಲದಿದ್ದರೆ ಸ್ವಯಂ ತೊಡಗುವ ಹವ್ಯಾಸಗಳಿಗೆ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ತಂದೆ ತಾಯಂದಿರಿಗೆ ಸಮಯದ ಅಭಾವವಿರುವುದರಿಂದ ಮಕ್ಕಳು ಓದಬಹುದಾದ ಪುಸ್ತಕಗಳನ್ನು ತಂದು ಕೊಟ್ಟರಾಯಿತು ಎನ್ನುವುದು ಅವರ ಧೋರಣೆ. ಕೊಮಿಕ್‍ಗಳು ಕಾರ್ಟೂನ್‍ಗಳು ಅವರಿಗೆ ಸಿಗುವ ಸುಲಭ ಸಾಹಿತ್ಯ.

ಮಕ್ಕಳು ತಮ್ಮ ಇಂಗ್ಲಿಷ್ ಜ್ಞಾನ ಹೆಚ್ಚಿಸಿಕೊಳ್ಳಲಿ ಎಂಬ ಹಂಬಲದಿಂದ ಅವರ ಆಯ್ಕೆ ಕನ್ನಡದ್ದಾಗಿರುವುದಿಲ್ಲ. ಕನ್ನಡದಲ್ಲಿ ವಿದ್ಯುನ್ಮಾನಕ್ಕೆ ಅಳವಡಿಸಿದ ಇಂತಹ ಜ್ಞಾನ ಮನೋರಂಜನೆಯ ಸವಲತ್ತುಗಳೂ ಕಡಿಮೆಯೇ. ಮಕ್ಕಳ ಸಂಸ್ಕಾರಗಳನ್ನು ಬೆಳೆಸಬಲ್ಲ ರಾಮಾಯಣ-ಮಹಾಭಾರತದಂತಹ ಕಥಾನಕಗಳು ಭಾಷೆಯ ಬಗ್ಗೆ ಬಂಧವನ್ನು ಬೆಳೆಸಲು ಸಹಕಾರಿ. ಇಂತಹ ಸಂಸ್ಕಾರ ಬೆಳೆಸುವ ವಿದ್ಯುನ್ಮನ ಸಾಹಿತ್ಯವನ್ನು ಬೆಳೆಸಿ ಜನಸಾಮಾನ್ಯರಿಗೆ ಮುಕ್ತವಾಗಿ ಒದಗಿಸುವ ಮೂಲಕ ಕನ್ನಡದ ಆಸಕ್ತಿಯನ್ನು ಎಳೆ ಮನಸ್ಸುಗಳಲ್ಲಿ ಬಿತ್ತಲು ಸಾಧ್ಯ. ರಾಮಾಯಣ- ಮಹಾಭಾರತ ಟಿವಿಯಲ್ಲಿ ಮೂಡಿಸಿದ ಪರಿಣಾಮವನ್ನು ಇಲ್ಲಿ ಸ್ಮರಿಸಬಹುದು.

3.
ಮಕ್ಕಳ ಮುಂದಿನ ಹಂತದಲ್ಲಿ ಪ್ರಿಯವಾಗುವುದು ಚಾರಿತ್ರಿಕ ವಿಚಾರಗಳು. ಕರ್ನಾಟಕದ ಪ್ರತಿಯೊಂದು ಪ್ರದಶಕ್ಕೂ ತನ್ನದೇ ಆದ ಚರಿತ್ರೆಯಿದೆ. ಕೋಟೆಕೊತ್ತಲಗಳು, ಧಾರ್ಮಿಕ ಕೇಂದ್ರಗಳು, ಯುದ್ಧದ ಕತೆಗಳು, ಶೌರ್ಯ-ಜಾಣ್ಮೆಯ ಸನ್ನಿವೇಶಗಳು ಎಷ್ಟೊಂದಿವೆ. ಇವುಗಳನ್ನು ವಿದ್ಯುನ್ಮಾನದ ಮೂಲಕ ಜನಜನಿತಗೋಳಿಸಿದರೆ ನಾಡು ಮತ್ತು ಭಾಷೆಯ ಅಭಿಮಾನ ಬೆಳೆಸುವುದು ಸಾಧ್ಯ. ಹೀಗಾಗಿ ಲಿಖಿತ ಮಾಧ್ಯಮದಲ್ಲಿರುವ ನಾಡಿನ ಚರಿತ್ರೆಯನ್ನು ದೃಶ್ಯ ಮಾಧ್ಯಮಕ್ಕೆ ಪರಿವರ್ತಿಸಬೇಕು. ಕರ್ನಾಟಕದ ಚರಿತ್ರೆಯಲ್ಲಿ ವೀರರಿಗೇನು ಕೊರತೆ? ನಮ್ಮ ಮನೆಮನೆಯನ್ನು ತಲಪುವ ಟಿ.ವಿ ಮಾಧ್ಯಮ ಕೂಡ ಇಂತಹ ಕೆಲಸದಲ್ಲಿ ಭಾಗವಹಿಸಬಲ್ಲುದು. ಹೆತ್ತವರು ಬಯಸುವ ಸೂಕ್ತ ಹೂರಣವನ್ನು ಕೊಡಲು ಸಾಧ್ಯವಾದರೆ ನೋಡುಗರನ್ನು ಆಕರ್ಷಿಸುವುದು ಕಷ್ಟದ ಮಾತಲ್ಲ. ಮಾಧ್ಯಮಗಳು ಕೂಡ ಇದರಲ್ಲಿ ಕೈಜೋಡಿಸದಿರವು.

ಈಗ ಇಂತಹ ವೈವಿಧ್ಯಮಯ ಭಂಡಾರ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು, ವಾಣಿಜ್ಯ ಪುಸ್ತಕ ಭಂಡಾರಗಳಲ್ಲಿ ಮಾತ್ರ ಕಾಣಬಹುದು. ಹೆಚ್ಚಿನ ಓದುಗರಿಗೆ ಈ ಎರಡು ಮೂಲಗಳನ್ನೂ ತಲಪುವುದು ಕಷ್ಟಸಾಧ್ಯವಾದ ಮಾತು.

4.
ಇಂದಿನ ವಿದ್ಯಾರ್ಥಿಗಳು ತಮ್ಮ ಓದನ್ನು ತಮ್ಮ ಪಠ್ಯ ಪುಸ್ತಕಗಳಾಚೆ ಹರಿಸದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಮನನ ಯೋಗ್ಯವಾದ ಪಠ್ಯವನ್ನು ಕನ್ನಡದಲ್ಲೇ ಬೆಳೆಸಿ ಉಣಬಳಿಸಿದರೆ ಅದಕ್ಕೂ ಬೇಡಿಕೆ ಕಂಡುಕೊಳ್ಳಬಹುದು. ಕನ್ನಡ ಭಾಷೆ ತಾಂತ್ರಿಕ ಕಲಿಕೆಗೆ ಬೇಕಾದ ಶಬ್ದ ಭಂಡಾರವನ್ನು ಹೊಂದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಂತಹ ತಾಂತ್ರಿಕ ಶಬ್ದಗಳ ದತ್ತು ತೆಗೆದುಕೊಂಡು ಈ ನ್ಯೂನತೆಯನ್ನು ನಿವಾರಿಸಬಹುದು.

5.
ಕನ್ನಡಕ್ಕೆ ಶ್ರೀಮಂತವಾದ ಸಾಹಿತ್ಯವಿದೆ. ಅದು ‘ಎಕಡಮಿಕ್’ ಕ್ಷೇತ್ರಕ್ಕೆ ಸೀಮಿತವಾಗಬಾರದು. ಅದರ ಬಗ್ಗೆ ಆಸಕ್ತಿ ಇರುವ ಓದುಗರು ಸಾಕಷ್ಟಿದ್ದಾರೆ. ಕನ್ನಡದ ಮೌಲಿಕ ಸಾಹಿತ್ಯವನ್ನು (ಹತ್ತನೇ ಶತಮಾನದಿಂದ ಇಪ್ಪತ್ತೊಂದನೆಯ ಶತಮಾನವನ್ನೂ ಒಳಗೊಂಡು) ವಿದ್ಯುನ್ಮಾನ ಸಾಹಿತ್ಯದ ಭಂಡಾರವಾಗಿ ಮುಕ್ತವಾಗಿ ಓದಲು ಸಿಗುವಂತೆ ಮಾಡಿದರೆ ಆಸಕ್ತ ಓದುಗರು ಕನ್ನಡ ಅಭಿಮಾನವನ್ನು ಭಾವನಾತ್ಮಕವಾಗಿ ಹೆಚ್ಚಿಸಬಹುದು.

‘ಮಾತೃಭಾಷೆ’ಯನ್ನು ಇಷ್ಟಪಡದವರು ಯಾರಿರುತ್ತಾರೆ. ಅವರಿಗೆ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಂಪತ್ತನ್ನು ತೆರೆದಿಡುವುದು ಸಾಧ್ಯವಾದ ಮಾತು. ಈಗ ಇಂತಹ ವೈವಿಧ್ಯಮಯ ಭಂಡಾರ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು, ವಾಣಿಜ್ಯ ಪುಸ್ತಕ ಭಂಡಾರಗಳಲ್ಲಿ ಮಾತ್ರ ಕಾಣಬಹುದು. ಹೆಚ್ಚಿನ ಓದುಗರಿಗೆ ಈ ಎರಡು ಮೂಲಗಳನ್ನೂ ತಲಪುವುದು ಕಷ್ಟಸಾಧ್ಯವಾದ ಮಾತು. ಗೂಗಲಿನಲ್ಲಿ ನೋಡಿದರೆ ಅನ್ಯ ವಿದೇಶೀ ಭಾಷೆಗಳ ಸಾಹಿತ್ಯದ ಕೆಲ ಭಾಗವಾದರೂ ಮುಕ್ತವಾಗಿ ಓದಲು ಸಿಗುತ್ತದೆ. ಕನ್ನಡದಲ್ಲಿ ಇದನ್ನು ಏಕೆ ಅಳವಡಿಸಬಾರದು. ಭಾವನಾತ್ಮಕವಾದ ಭಾಷೆಯ ವಿಚಾರದಲ್ಲಿ ಲಾಭನಷ್ಟಗಳ ವಿಚಾರ ತಲೆಹಾಕಬಾರದು!

6.
ಕನ್ನಡ ಓದು ಬರಹ ಕಲಿಯದವರು ತಾವು ಏನನ್ನೋ ಕಳೆದುಕೊಳ್ಳುತ್ತೇವೆ ಎನ್ನುವ ವಾತಾವರಣವನ್ನು ಸಾಮಾಜಿಕವಾಗಿ, ವ್ಯಾವಹಾರಿಕವಾಗಿ ಮತ್ತು ಆರ್ಥಿಕವಾಗಿ ರೂಪಿಸುವುದು ಅಸಾಧ್ಯದ ಮಾತಲ್ಲ. ತಮಿಳುನಾಡಿನಲ್ಲಿ ತಮಿಳನ್ನು ಅನಿವಾರ್ಯವಾದ ರೀತಿಯಲ್ಲಿ ಬೆಳೆಸಿದಂತೆ ಕನ್ನಡವನ್ನು ಕಲಿಯದೆ ಇಲ್ಲಿರುವುದು ಕಷ್ಟವೆನ್ನುವಂತೆ ಮಾಡುವುದು, ಕನ್ನಡಿಗರಿಗೆ ಅಸಾಧ್ಯವೇ? ಇದನ್ನು ಕೈತಿರುಚದಂತೆ ಲಾಭದಾಯಕ ಅನಿವಾರ್ಯತೆಯಂತೆ ಪ್ರಯತ್ನಿಸುವುದು ಸೂಕ್ತ.

ಆಗ, ಬಹುಜನರು ಕನ್ನಡ ಭಾಷೆಯಲ್ಲಿ ಅಭಿಮಾನವನ್ನೂ, ಆಸಕ್ತಿಯನ್ನೂ ನಂಬಿಕೆಯನ್ನೂ ಉಳಿಸಿಕೊಳ್ಳುವರು. ನಮ್ಮ ಕನ್ನಡ ಇಂಗ್ಲಿಷ್ ಭಾಷೆಗಿಂತ ಯಾವ ರೀತಿಯಲ್ಲೂ ಕಡಿಮೆಯದಲ್ಲ;

7.
ತಂತ್ರಜ್ಞಾನದ ವ್ಯಾಪ್ತಿ ಮತ್ತು ತಲುಪುವಿಕೆಯ ಬಗ್ಗೆ ಒಂದೆರಡು ಅಂಶಗಳನ್ನು ಗಮನಿಸಬೇಕು. ಇಂದು ಮಾಹಿತಿ ತಂತ್ರಜ್ಞಾನ ಕನ್ನಡಿಗರಿರುವ ಮೂಲೆಮೂಲೆಗಳಿಗೂ ತಲಪಿದೆ. ಈಗ ಬೇಕಾಗಿರುವುದು ಕನ್ನಡತನವನ್ನು ಹರಳುಗೊಳಿಸಬಲ್ಲ ವಿದ್ಯುನ್ಮಾನ ಸೌಲಭ್ಯಗಳು. ತಂತ್ರಜ್ಞಾನಿ- ಜಾಣರ ಪರಿಶ್ರಮವನ್ನು ಭಾಷಾ ಪ್ರಚಾರಕ್ಕೆ ಅಳವಡಿಸುವ (ಚನಲೈಸಿಂಗ್) ಮೂಲಕ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ಗೂಗಲ್‍ನಂತಹ ಗ್ರಾಹಕ ಸ್ನೇಹೀ ಅಂತರ್ದೇಶೀಯ ಕಂಪೆನಿಯ ಜೊತೆ ಒಡಂಬಡಿಕೆ ಮಾಡಿಕೊಂಡು ಕನ್ನಡವನ್ನು ಆಸಕ್ತರ ಅಂಗೈಗೆ ತಲುಪಿಸುವುದು ಸಾಧ್ಯ.

8.
ಕನ್ನಡವನ್ನು ಕಟ್ಟಲು ಒಂದು ಸುಸಂಘಟಿತ ಪ್ರಯತ್ನ ಅಗತ್ಯವಿದೆ. ಈಗ ಕನ್ನಡದ ಅಭಿವೃದ್ಧಿಗೆ ವಿವಿಧ ಸಂಘ ಸಂಸ್ಥೆಗಳಿದ್ದರೂ ಅವುಗಳು ವಿಘಟಿತವಾಗಿ ಕಾರ್ಯವೆಸಗುವಂತೆ ತೋರುತ್ತದೆ. ಇದರಿಂದ ಬಹಳಷ್ಟು ದ್ವಿರುಕ್ತಿಗಳಾಗಿ (ಡ್ಯುಪ್ಲಿಕೇಶನ್) ಕ್ಷಮತೆ ಕ್ಷಯಿಸುತ್ತದೆ. ಸುಸಂಘಟನೆಯಿಂದ (ಕೊಓರ್ಡಿನೇಷನ್) ಕೆಲಸಮಾಡುವ ಮೂಲಕ ಉದ್ದೇಶವನ್ನು ಸಾಧಿಸುವುದು ಸುಲಭವಾದೀತು. ಕನ್ನಡವನ್ನು ಕಟ್ಟುವ ಮುಂದಿನ ನಡೆಗಳು ಭಾಷೆಯನ್ನು ಭಾಷಿಗರಿಗೆ ತಲಪಿಸುವ ಕೆಲಸವಾಗಬೇಕು. ಆಗ, ಬಹುಜನರು ಕನ್ನಡ ಭಾಷೆಯಲ್ಲಿ ಅಭಿಮಾನವನ್ನೂ, ಆಸಕ್ತಿಯನ್ನೂ ನಂಬಿಕೆಯನ್ನೂ ಉಳಿಸಿಕೊಳ್ಳುವರು. ನಮ್ಮ ಕನ್ನಡ ಇಂಗ್ಲಿಷ್ ಭಾಷೆಗಿಂತ ಯಾವ ರೀತಿಯಲ್ಲೂ ಕಡಿಮೆಯದಲ್ಲ; ನಮ್ಮ ಭಾಷೆಯಲ್ಲಿ ಓದಿದರೂ ನಮ್ಮ ಭವಿಷ್ಯ ಮಂಕಾಗಲಾರದು ಎನ್ನುವ ಹಾಗಿರಬೇಕು ನಮ್ಮ ಕನ್ನಡದ ಚಹರೆ! ಅಂತಹ ಭರವಸೆಯನ್ನು ಕನ್ನಡ ಭಾಷೆಯೇ ಕೊಡಬೇಕು.

ಉಪಸಂಹಾರ

ಇಂದಿನ ಕಾಲಮಾನದಲ್ಲಿ ಕನ್ನಡ ಕಟ್ಟುವ ಕೆಲಸ ‘ಕಾವಲು ಪಡೆ’ ಯಂತಹ ಜಿದ್ದಿನಿಂದ ನಡೆಯುವ ಕೆಲಸವಲ್ಲ. ಇದಕ್ಕೆ ಹಿಂದೆಂದೂ ಕಂಡರಿಯದ ಕಾರ್ಯತಂತ್ರದ ಅಗತ್ಯವಿದೆ. ಬೀದಿಗಿಳಿದು ಹೋರಾಡುವುದು ಒಂಟಿ ಕಾಳಗವಾದೀತೇ ಹೊರತು ಗೆಲ್ಲುವ ಆಟವಾಗಲಾರದು. ಎಲ್ಲ ಕನ್ನಡ ಭಾಷಿಗರನ್ನು ಒಳಗೊಳ್ಳುವಂತಹ ಹೋರಾಟವಷ್ಟೇ ಕನ್ನಡವನ್ನು ಕಟ್ಟಲು ಸಮರ್ಥವಾದೀತು. ಹಾಗಾಗಬೇಕಾದರೆ, ಮೇಲೆ ಹೇಳಿದ ಕಾರ್ಯಗಳ ಮೂಲಕ ಕನ್ನಡಿಗರನ್ನು ತಲಪುವ ಪೂರ್ವ-ತಯಾರಿ ಮಾಡಲೇ ಬೇಕು. ಈ ತಯಾರಿಗೆ ಬುದ್ಧಿವಂತರಾದ ಜಾಣರ ಸೈನ್ಯ ಬೇಕು, ಭುಜಬಲದ ಪರಾಕ್ರಮವಲ್ಲ!

*ಲೇಖಕರು ಮೂಲತಃ ಕಾಸರಗೋಡು ತಾಲೂಕಿನ ಕೊಳ್ಚಪ್ಪೆಯವರು; ಸಾಹಿತಿ, ಅಂಕಣಕಾರರು, ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾಗಿ ಮುಂಬೈನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಮಾಡಿದ್ದಾರೆ.

Leave a Reply

Your email address will not be published.