ಕನ್ನಡ ಕೇಂದ್ರಿತ ಗ್ರಾಹಕ ಚಳವಳಿ: 21ನೇ ಶತಮಾನದ ಕನ್ನಡ ಚಳವಳಿ

ಮಾರುಕಟ್ಟೆಯಲ್ಲಿ ಅರ್ಧ ಲೀಟರ್ ಹಾಲು ಕೊಳ್ಳುವವನಿಂದ ಹಿಡಿದು ಸಿಂಗಾಪುರ್ ಏರ್‍ಲೈನ್ಸ್‍ನಲ್ಲಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಮಾಡುವವನವರೆಗೆ ಪ್ರತಿಯೊಬ್ಬರು ಗ್ರಾಹಕನೂ ಹೌದು, ಕನ್ನಡಿಗನೂ ಹೌದು. ತನ್ನ ಹಣಕ್ಕೆ ತಕ್ಕ ಸೇವೆ ಕನ್ನಡದಲ್ಲಿ ದೊರೆಯಲೇಬೇಕು ಮತ್ತು ಅದಕ್ಕಾಗಿ ದನಿ ಎತ್ತಲು ಹಿಂಜರಿಯೇ ಅನ್ನುವ ಮನಸ್ಥಿತಿಯ ಕನ್ನಡಿಗರನ್ನು ಹುಟ್ಟುಹಾಕುವ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿಯೇ ಇಪ್ಪತ್ತೊಂದನೆಯ ಶತಮಾನದ ಕನ್ನಡ ಚಳವಳಿಯ ಬಹುಮುಖ್ಯ ಭಾಗವಾಗಬೇಕಿದೆ.

ಯಾವುದೇ ಊರಿಗೆ ಒಂದು ಸೊಗಡು ಇಲ್ಲವೇ ಗುರುತು ದೊರೆಯುವುದು ಅದರ ಸಂಸ್ಕೃತಿಯಿಂದ. ಅಲ್ಲಿನ ಸ್ಥಳೀಯ ಭಾಷೆಯೆನ್ನುವುದು ಆ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಪ್ಯಾರಿಸಿಗೆ ಹೋದರೆ ಪ್ರಪಂಚದ ನೂರು ದೇಶಗಳ ಫ್ಯಾಶನ್ ಉತ್ಸಾಹಿಗಳನ್ನು ಕಾಣಬಹುದು. ಆದರೆ ಅಲ್ಲಿನ ಸ್ಥಳೀಯ ಸಂಸ್ಕೃತಿಯ ಬುನಾದಿ ಫ್ರೆಂಚ್ ಭಾಷೆಯ ಮೇಲೆ ನಿಂತಿರುವುದನ್ನು ಕಾಣುತ್ತೇವೆ. ಟೋಕಿಯೋ, ಟೆಲ್ ಅವಿವ್, ಹೆಲ್ಸಿಂಕಿ ಹೀಗೆ ಪ್ರಪಂಚದ ವ್ಯಾಪಾರ ವಹಿವಾಟಿನ ಪ್ರಮುಖ ನಗರಗಳು ಪ್ರಪಂಚಕ್ಕೆ ಎಷ್ಟೇ ತೆರೆದುಕೊಂಡಿದ್ದರೂ ತಮ್ಮ ಊರಿನಲ್ಲಿ ತಮ್ಮ ಭಾಷೆಯ ಸಾರ್ವಭೌಮತ್ವವನ್ನು ಯಾವ ರೀತಿಯಲ್ಲೂ ಬಿಟ್ಟು ಕೊಡದೇ ತಮ್ಮ ಗುರುತನ್ನು ಕಟ್ಟಿಕೊಂಡಿವೆ. ಇದರ ಅರ್ಥ ಈ ಊರುಗಳಲ್ಲಿ ಅಲ್ಲಿನ ಭಾಷೆ ಕೇವಲ ಆಡಳಿತ, ಶಿಕ್ಷಣದಂತಹ ವಿಚಾರಗಳಿಗೆ ಸೀಮಿತವಾಗದೇ ಅಲ್ಲಿನ ಮಾರುಕಟ್ಟೆಯ ಎಲ್ಲ ಹಂತದ ಭಾಷೆಯಾಗಿಯೂ ನೆಲೆ ನಿಂತಿದೆ. ಹೀಗೆ ಆಗುವಲ್ಲಿ ಅಲ್ಲಿನ ಸರ್ಕಾರ ಮತ್ತು ಸಮಾಜಗಳೆರಡರ ಪಾತ್ರವೂ ಇದೆ.

ಈ ಪೀಠಿಕೆಯನ್ನಿಟ್ಟುಕೊಂಡು ಕರ್ನಾಟಕದ ನಮ್ಮ ಊರುಗಳಲ್ಲಿ ಮಾರುಕಟ್ಟೆಯ ನುಡಿಯಾಗಿ ಕನ್ನಡ ಹೇಗೆ ನೆಲೆ ನಿಂತಿದೆ ಎಂದು ಗಮನಿಸಲು ಹೋದರೆ ಸಾಕಷ್ಟು ನಿರಾಸೆ ಆಗುತ್ತದೆ. ಕರ್ನಾಟಕದ ಊರುಗಳು ಹೆಚ್ಚೆಚ್ಚು ನಗರೀಕರಣಗೊಂಡಂತೆಯೇ ಅವು ಕನ್ನಡದಿಂದ ದೂರ ದೂರ ಸಾಗುತ್ತಿವೆ ಅನ್ನುವ ರೀತಿಯಲ್ಲಿ ನಮ್ಮ ನಗರೀಕರಣವಾಗುತ್ತಿದೆ. ಇದಕ್ಕೆ ಪರಿಹಾರವೇನು? ಸರ್ಕಾರದ ಕಾನೂನುಗಳು ಒಂದು ಹಂತದವರೆಗೆ ಸಹಾಯ ಮಾಡಬಹುದು. ಬೀದಿ ಹೋರಾಟವೂ ಹಲವು ಸಂದರ್ಭಗಳಲ್ಲಿ ಬೇಕಾಗುತ್ತದೆ. ಆದರೆ ಖಾಸಗಿ ಬಂಡವಾಳ ಕೇಂದ್ರಿತ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಕನ್ನಡವೆನ್ನುವುದು ಕರ್ನಾಟಕದ ಊರು-ಪಟ್ಟಣ-ನಗರಗಳ ಸಾರ್ವಭೌಮ ಭಾಷೆಯಾಗಿ ನೆಲೆ ನಿಲ್ಲಬೇಕು ಅಂದರೆ ಅದು ಕನ್ನಡ ಕೇಂದ್ರಿತ ಗ್ರಾಹಕ ಚಳವಳಿಯೊಂದರಿಂದಲೇ ಸಾಧ್ಯ.

ಮಾರುಕಟ್ಟೆಯಲ್ಲಿ ಅರ್ಧ ಲೀಟರ್ ಹಾಲು ಕೊಳ್ಳುವವನಿಂದ ಹಿಡಿದು ಸಿಂಗಾಪುರ್ ಏರ್‍ಲೈನ್ಸ್‍ನಲ್ಲಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಮಾಡುವವನವರೆಗೆ ಪ್ರತಿಯೊಬ್ಬ ಗ್ರಾಹಕನೂ ಹೌದು, ಕನ್ನಡಿಗನೂ ಹೌದು. ತನ್ನ ಹಣಕ್ಕೆ ತಕ್ಕ ಸೇವೆ ಕನ್ನಡದಲ್ಲಿ ದೊರೆಯಲೇಬೇಕು ಮತ್ತು ಅದಕ್ಕಾಗಿ ದನಿ ಎತ್ತಲು ಹಿಂಜರಿಯೇ ಅನ್ನುವ ಮನಸ್ಥಿತಿಯ ಕನ್ನಡಿಗರನ್ನು ಹುಟ್ಟು ಹಾಕುವ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿಯೇ ಇಪ್ಪತ್ತೊಂದನೆಯ ಶತಮಾನದ ಕನ್ನಡ ಚಳವಳಿಯ ಬಹುಮುಖ್ಯ ಭಾಗವಾಗಬೇಕಿದೆ.

ಭಾರತದ ಗ್ರಾಹಕ ಸೇವೆಯ ಕುರಿತ ಕಾನೂನುಗಳು ಜನರ ಭಾಷೆಯಲ್ಲಿ ಗ್ರಾಹಕ ಸೇವೆ ನೀಡುವ ಕುರಿತು ಯಾವುದೇ ಸಾಂಸ್ಥಿಕ ಸ್ವರೂಪದ ಕಾನೂನಿನ ಹೆಜ್ಜೆಗಳನ್ನು ಇರಿಸದೇಹೋದ ಪರಿಣಾಮ ಅತ್ಯಂತ ಸಹಜವಾಗಿ ಕರ್ನಾಟಕದ ಮಾರುಕಟ್ಟೆಯ ನುಡಿಯಾಗಬೇಕಿದ್ದ ಕನ್ನಡ ಇಂದು ನೆಲೆ ನಿಲ್ಲಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಪಂಚದಲ್ಲಿ ಎಲ್ಲೆಲ್ಲಿ ಮಾರುಕಟ್ಟೆ ಆಧರಿತ, ಖಾಸಗಿ ಬಂಡವಾಳ ಕೇಂದ್ರಿತ ಅರ್ಥ ವ್ಯವಸ್ಥೆ ಜಾರಿಗೆ ಬಂದಿದೆಯೋ ಅಲ್ಲೆಲ್ಲವೂ ಒಂದು ಗಟ್ಟಿಯಾದ ಗ್ರಾಹಕ ಚಳವಳಿಯೂ ಅಸ್ತಿತ್ವಕ್ಕೆ ಬಂದಿದೆ. ಅಮೆರಿಕದ ಅಧ್ಯಕ್ಷರಾಗಿದ್ದ ಜೆ.ಎಫ್.ಕೆನೆಡಿ 1962ರಲ್ಲಿ ಅಮೆರಿಕದ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುತ್ತಾ, ಸುರಕ್ಷತೆ, ಆಯ್ಕೆ, ತಿಳಿವಳಿಕೆ ಹಾಗು ತಿಳಿಸುವಿಕೆ ಅನ್ನುವ ನಾಲ್ಕು ಗ್ರಾಹಕ ಹಕ್ಕುಗಳ ಬಗ್ಗೆ ಮೊದಲ ಬಾರಿ ಪ್ರಸ್ತಾಪಿಸಿದರು. ಇವೇ ಮುಂದೆ Consumer Bill of Rights (ಗ್ರಾಹಕ ಹಕ್ಕು ಪತ್ರ) ಎನ್ನುವ ಹೆಸರಿನಡಿಯಲ್ಲಿ ಗ್ರಾಹಕ ಹಕ್ಕುಗಳನ್ನು ಗುರುತಿಸುವ ಕಾಯ್ದೆಯಾಗಿ ಅಮೆರಿಕದ ಸಂವಿಧಾನದಲ್ಲಿ ಅಧಿಕೃತವಾಗಿ ಅಂಗೀಕರಿಸಲಾಯಿತು.

ಸಾಮಾನ್ಯವಾಗಿ ಅಳತೆ, ತೂಕ ಹಾಗು ಪ್ರಮಾಣಗಳಲ್ಲಿ ಆಗುವ ಲೋಪದೋಷಗಳು ಅನ್ನುವುದಕ್ಕೆ ಸೀಮಿತವಾಗಿದ್ದ ಗ್ರಾಹಕ ಹಕ್ಕುಗಳ ಕುರಿತ ತಿಳಿವಳಿಕೆ ಇಲ್ಲಿಂದ ಬದಲಾಗತೊಡಗಿತು. ಎಲ್ಲ ವ್ಯಾಪಾರದ ಕೇಂದ್ರ ಬಿಂದುವಾಗಿ ಗ್ರಾಹಕನ ಹಿತವನ್ನು ನೋಡುವ ಚಿಂತನೆಗೆ ಬಲ ಬರತೊಡಗಿತು. ಇದನ್ನು ಪ್ರಪಂಚದ ಹಲವು ದೇಶಗಳು ಮಾನ್ಯ ಮಾಡಿ ತಕ್ಕ ಕಾನೂನುಗಳನ್ನು ರೂಪಿಸಿಕೊಂಡಿವೆ. ಭಾರತದಲ್ಲಿ 1986ರಲ್ಲಿ ಜಾರಿಗೆ ಬಂದ ಗ್ರಾಹಕ ಸುರಕ್ಷತೆ ಕಾಯ್ದೆ ಗ್ರಾಹಕರ ಹಿತ ಕಾಯುವತ್ತ ಇಡಲಾದ ಪ್ರಮುಖ ಹೆಜ್ಜೆ ಎಂದೇ ಗುರುತಿಸಲಾಗಿದೆ. ಆದರೆ ಭಾರತದ ಗ್ರಾಹಕ ಸೇವೆಯ ಕುರಿತ ಕಾನೂನುಗಳು ಜನರ ಭಾಷೆಯಲ್ಲಿ ಗ್ರಾಹಕ ಸೇವೆ ನೀಡುವ ಕುರಿತು ಯಾವುದೇ ಸಾಂಸ್ಥಿಕ ಸ್ವರೂಪದ ಕಾನೂನಿನ ಹೆಜ್ಜೆಗಳನ್ನು ಇರಿಸದೇಹೋದ ಪರಿಣಾಮ ಅತ್ಯಂತ ಸಹಜವಾಗಿ ಕರ್ನಾಟಕದ ಮಾರುಕಟ್ಟೆಯ ನುಡಿಯಾಗಬೇಕಿದ್ದ ಕನ್ನಡ ಇಂದು ನೆಲೆ ನಿಲ್ಲಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಭಾರತವೆಂದರೆ ಹಿಂದಿ ಎಂದು ಬಿಂಬಿಸುವ ಮನಸ್ಥಿತಿ ಆಳುವವರಲ್ಲಿ ಇರುವಾಗ ಆಯಾ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆಗಳ ಸಾರ್ವಭೌಮತ್ವ ಇರಲಿ ಅನ್ನುವ ಕಾಳಜಿ ಬರುವುದಾದರೂ ಹೇಗೆ ಸಾಧ್ಯ?

ಹಾಗಂತ ಕೈಕಟ್ಟಿ ಕುಳಿತರೆ ಆಗದು. ಕನ್ನಡಿಗರ ಕೊಳ್ಳುವ ಶಕ್ತಿಯ ಜೊತೆ ಅವರ ನುಡಿಯಲ್ಲಿ ಸೇವೆಗೆ ಹಕ್ಕೊತ್ತಾಯ ಮಂಡಿಸುವ ಭಾಷಾ ಕೇಂದ್ರಿತ ಗ್ರಾಹಕ ಚಳವಳಿಯನ್ನು ರೂಪಿಸುವತ್ತ ಗಮನ ಕೊಡಲೇಬೇಕು ಅನ್ನುವ ಕಾರಣಕ್ಕೆ ಕನ್ನಡ ಗ್ರಾಹಕರ ಕೂಟ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಮಾರುಕಟ್ಟೆ ಸಮೀಕ್ಷೆ, ಸೋಶಿಯಲ್ ಮಿಡಿಯಾ ಅಭಿಯಾನ, ಕಾನೂನು ಹೋರಾಟ, ಸಂಸ್ಥೆ-ಸರ್ಕಾರಗಳೊಡನೆ ಚರ್ಚೆ, ಅಭಿಪ್ರಾಯ ರೂಪಿಸುವಿಕೆ ಹೀಗೆ ಹಲವಾರು ಆಯಾಮಗಳಲ್ಲಿ ಈ ಚಿಂತನೆಯನ್ನು ಕಟ್ಟುವ ಕೆಲಸದಲ್ಲಿ ಕನ್ನಡ ಗ್ರಾಹಕರ ಕೂಟ ಕಳೆದ ಹತ್ತು ವರ್ಷದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸಂಸ್ಥೆಯ ನಿರಂತರ ಪ್ರಯತ್ನಗಳಿಂದ ಆಗಿರುವ ಕೆಲ ಬದಲಾವಣೆಗಳನ್ನು ಪಟ್ಟಿ ಮಾಡುವುದಾದರೆ:

1. ದೇಶದ ಪ್ರಮುಖ ಬ್ಯಾಂಕುಗಳಾದ ಎಚ್.ಡಿ.ಎಫ್.ಸಿ/ಸಿಟಿಬ್ಯಾಂಕ್ ಮುಂತಾದ ಬ್ಯಾಂಕುಗಳ ಎ.ಟಿ.ಎಂ. ಮತ್ತು ಕರೆಕೇಂದ್ರ ಸೇವೆಗಳು ಕನ್ನಡದಲ್ಲಿ ದೊರೆಯುವಂತಾಗಿದೆ.

2. ಹಲವು ಅಂತರ್ಜಾಲ ತಾಣಗಳಲ್ಲಿ (Spotify, Deezer,Apple Music, Amazon Prime) ಕನ್ನಡ ಹಾಡು, ಸಿನೆಮಾ ಮತ್ತು ಧಾರಾವಾಹಿಗಳು ದೊರೆಯುವಂತಾಗಿದೆ.

3. ಕ್ರಿಕೆಟಿಗೆಂದೇ ಮೀಸಲಾದ ಸ್ಟಾರ್ ಸ್ಪೋಟ್ರ್ಸ್ ಕನ್ನಡ ಚಾನೆಲ್ ಶುರುವಾಗಲು ಎರಡು ವರ್ಷಗಳ ನಿರಂತರ ಗ್ರಾಹಕರ ಹಕ್ಕೊತ್ತಾಯ ಕೆಲಸ ಮಾಡಿದೆ. ಈಗ ಐಪಿಎಲ್, ವಲ್ರ್ಡ್ ಕಪ್ ಎಲ್ಲವನ್ನೂ ಕನ್ನಡದಲ್ಲೇ ಸವಿಯಲು ಸಾಧ್ಯವಾಗಿದೆ.

4. ಡಿಸ್ಕವರಿ, ಡಿಸ್ಕವರಿ ಕಿಡ್ಸ್, ಅನಿಮಲ್ ಪ್ಲಾನೆಟ್ ತರದ ವಾಹಿನಿಗಳು ಈಗ ಕನ್ನಡದಲ್ಲೂ ದೊರೆಯುವ ಹಂತ ಬಂದಿದೆ.

5. ಪ್ರಪಂಚದ ಜ್ಞಾನ, ಮನರಂಜನೆಯೆಲ್ಲವೂ ಕನ್ನಡಿಗರಿಗೆ ಕನ್ನಡದಲ್ಲಿ ದೊರೆಯಬೇಕು ಅನ್ನುವ ಹಿನ್ನೆಲೆಯಲ್ಲಿ ಕೈಗೊಂಡ ದಶಕದ ಅಭಿಯಾನದ ಫಲವಾಗಿ ಈಗ ಪರಭಾಷಾ ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವುದು ಆರಂಭವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಸೈರಾ ನರಸಿಂಹ ರೆಡ್ಡಿ ಅನ್ನುವ ತೆಲುಗು ಮೂಲದ ಚಿತ್ರವನ್ನು ಸಾವಿರಾರು ಕನ್ನಡಿಗರು ಕನ್ನಡದಲ್ಲೇ ನೋಡಲು ಸಾಧ್ಯವಾಯಿತು.

6. ಸಿಂಗಾಪೂರ್ ಏರ್ ಲೈನ್ಸ್, ಲುಫ್ತಾನ್ಸಾ, ಬ್ರಿಟಿಷ್ ಏರ್ ವೇಸ್ ಹೀಗೆ ಹಲವು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಸೇವೆಯನ್ನು ಕನ್ನಡದಲ್ಲಿ ಒದಗಿಸುವಂತೆ ಮಾಡಿದ್ದು ಕನ್ನಡ ಗ್ರಾಹಕರ ಹಕ್ಕೊತ್ತಾಯದ ಫಲವಾಗಿದೆ.

7. ಇಂದು ಅತೀ ಹೆಚ್ಚು ಜನ ಬಳಸುವ ಫೇಸ್ ಬುಕ್, ಟ್ವಿಟರ್, ವಾಟ್ಸ್ಯಾಪ್, ಬುಕ್ ಮೈ ಶೋ, ಟೆಲಿಗ್ರಾಮ್ ಮುಂತಾದ ಅಪ್ಲಿಕೇಶನ್ಸ್ ಈಗ ಕನ್ನಡದಲ್ಲೂ ಬಳಸಲು ಸಾಧ್ಯವಾಗಿದ್ದರೆ ಅದಕ್ಕಾಗಿ ನೂರಾರು ಜನ ಕೈಜೋಡಿಸಿ ಅನುವಾದಿಸಿ ಕನ್ನಡಕ್ಕೆ ತರುವ ಕೆಲಸಕ್ಕೆ ಕನ್ನಡ ಗ್ರಾಹಕರ ಕೂಟ ಒತ್ತಾಸೆಯಾಗಿ ನಿಂತಿದೆ.

6. ಸರ್ಕಾರಿ ಬ್ಯಾಂಕು, ರೈಲ್ವೇ, ವಿಮಾನ ಸೇವೆ, ರಾಷ್ಟ್ರೀಯ ಹೆದ್ದಾರಿ ಮುಂತಾದ ಸೇವೆಗಳಲ್ಲಿ ಕನ್ನಡ ಚೆನ್ನಾಗಿ ಕಾಣಿಸುವತ್ತ ನಿರಂತರ ದನಿ ಎತ್ತುವ ಕೆಲಸ ನಡೆಯುತ್ತಿದೆ. ಟ್ವಿಟರಿನಲ್ಲಿ #ServeInMyLanguage ಅನ್ನುವ ಹ್ಯಾಶ್ ಟ್ಯಾಗ್ ಅಡಿ ಸಾವಿರಾರು ಜನರು ಟ್ವೀಟ್ ಮಾಡುವ ಮೂಲಕ ಜನಪ್ರತಿನಿಧಿಗಳು ಮತ್ತು ಮಾಧ್ಯಮವನ್ನು ಎಚ್ಚರಿಸುವ ಕೆಲಸವನ್ನು ಕನ್ನಡ ಗ್ರಾಹಕರ ಕೂಟದ ವತಿಯಿಂದ ಮಾಡಲಾಗಿದೆ.

ಇವು ಕೆಲವು ಉದಾಹರಣೆಗಳಷ್ಟೇ. ಒಂದು ಸಣ್ಣ ಗುಂಪು ಅತ್ಯಂತ ಶ್ರದ್ಧೆಯಿಂದ ಗಮನವಿಟ್ಟು ರೂಪಿಸಿದ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಕೊಡಿಸುವಲ್ಲಿ ದೊಡ್ಡದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಈ ಚಿಂತನೆ ಪಸರಿಸಿದಷ್ಟೂ ನಾಡಿನ ಉದ್ದಗಲಕ್ಕೂ ಕನ್ನಡವಿಲ್ಲದೇ ವ್ಯಾಪಾರವೇ ಸಾಧ್ಯವಾಗದ ಸ್ಥಿತಿ ಸಂಸ್ಥೆಗಳಿಗೆ ಬಂದೊದಗಲಿದೆ. ಅದು ಕನ್ನಡ ಬಲ್ಲ ಯುವಕರಿಗೆ ಕೆಲಸ ಕೊಡಿಸುವುದಷ್ಟೇ ಅಲ್ಲದೆ ಕರ್ನಾಟಕದಲ್ಲಿ ನೆಲೆಸಿರುವ ಕನ್ನಡ ಬಾರದ ಪರಭಾಷಿಕರಿಗೂ ಕನ್ನಡ ಕಲಿಯುವ ಒತ್ತಡ ತರುತ್ತದೆ. ಕನ್ನಡ ಚಳವಳಿಯ ಕುರಿತ ನಮ್ಮ ಆಲೋಚನೆಗಳಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿ ಗಟ್ಟಿಯಾಗಿ ನೆಲೆ ನಿಲ್ಲುವುದು ಮುಂದಿನ ದಿನಗಳಲ್ಲಿ ಅನಿವಾರ್ಯವೇ ಆಗಲಿದೆ.

ಇದರ ಜೊತೆ ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ವಿವರಗಳು ಕನ್ನಡದಲ್ಲಿ ಕಡ್ಡಾಯವಾಗಿ ಇರಬೇಕು, ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಮತ್ತು ನಾಗರಿಕ ಸೇವೆಗಳನ್ನು ಖಾತರಿಪಡಿಸುವ ಕಾನೂನುಗಳನ್ನು ತಂದುಕೊಳ್ಳಲು ಸಾಧ್ಯವಾದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕನ್ನಡವನ್ನು ಮಾರುಕಟ್ಟೆಯ ಭಾಷೆಯಾಗಿ ಸ್ಥಾಪಿಸಲು ಸಾಧ್ಯ. ಇಪ್ಪತ್ತೊಂದನೆಯ ಶತಮಾನದ ಕನ್ನಡ ಚಳವಳಿ ಇದೇ.

*ಲೇಖಕರು ಕನ್ನಡ ಗ್ರಾಹಕ ಕೂಟದ ಸಕ್ರೀಯ ಸದಸ್ಯರು; ಬೆಂಗಳೂರು ಮೂಲದವರು, ಸದ್ಯಕ್ಕೆ ಲಂಡನ್ನಿನ ನಿವಾಸಿ.

Leave a Reply

Your email address will not be published.