ಕನ್ನಡ ಗಜಲ್ ಹಾದಿ

ಕನ್ನಡದ ಸಮಕಾಲೀನ ಕಾವ್ಯ ಪರಂಪರೆಯಲ್ಲಿ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿರುವ ಪ್ರಕಾರವೆಂದರೆ ಗಜಲ್. ಉರ್ದು ಕಾವ್ಯದ ರಾಣಿ ಗಜಲ್ ಈಗ ಕನ್ನಡ ಕಾವ್ಯಾಸಕ್ತರ, ಕವಿಗಳ ಕಣ್ಮಣಿ. ಈ ಹೊತ್ತಿನಲ್ಲಿ ಓದುಗರಿಂದ ಹಿಡಿದು ಬರೆಯುವ ಎಲ್ಲರೂ ಗಜಲ್ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರಬೇಕಾದುದು ತೀರಾ ಆವಶ್ಯಕ.

ಮೂಲತಃ ಅರಬ್ಬಿ ಭಾಷೆಯಿಂದ ಬಂದ ಗಜಲ್‍ನ ಮೂಲ ಹುಡುಕಿದರೆ ಧೀರರ ಹೊಗಳಿಕೆ, ದಾರ್ಶನಿಕತೆಯನ್ನು ತುಂಬಿzಮಧುರ, ಪ್ರೀತಿ-ಪ್ರೇಮದ ಅನುಭೂತಿಗಳಿಂದ ಕೂಡಿದ ಯೌವನ, ಮಧು, ಮುಕ್ತತೆ, ಶೃಂಗಾರಭಾವಗಳಿಂದ ಕೂಡಿದ ಪೀಠಿಕೆಯ ದ್ವಿಪದಿಗಳನ್ನು ಹೊಂದಿರುವ ಕಸೀದ್ ಎನ್ನುವ ಕಾವ್ಯ ಪ್ರಕಾರದ ಬಳಿ ನಮ್ಮನ್ನು ತಂದು ನಿಲ್ಲಿಸುತ್ತದೆ. ಕಸೀದ್ ಕಾವ್ಯದಲ್ಲಿರುವ ಈ ಪೀಠಿಕೆ(ತಷಬೀಬ್)ಯ ಷೇರ್(ದ್ವಿಪದಿ)ಗಳನ್ನು ಎತ್ತಿ ತಂದು ಅದನ್ನೇ ಗಜಲ್ ಮಾಡಲಾಯಿತು ಎನ್ನುವುದು ನಂಬಿಕೆ. ಯಾಕೆಂದರೆ ತಷಬೀಬ್‍ಗೂ ಗಜಲ್‍ನ ಮೊದಲ ಷೇರ್ ಮಕ್ತಾಕ್ಕೂ ರಚನೆ, ಕಾಫಿಯಾ, ರಧೀಪ್‍ಗಳಲ್ಲಿ ವ್ಯತ್ಯಾಸವೂ ಕಾಣುವುದಿಲ್ಲ. ಕಸೀದ್ ಹಾಗೂ ಗಜಲ್‍ನ ಮತ್ಲಾ, ಮಕ್ತಾಗಳ ಆಂತರಿಕ ಹಾಗೂ ಬಾಹ್ಯ ರಚನಾ ವಿಧಾನಗಳಲ್ಲಿ ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿದೆ. ಆದರೆ ಅರಬ್ಬರ ಗಂಭೀರತೆ ಹಾಗು ಶಿಷ್ಟತೆಯಿಂದ ಸೊರಗಿದ ಗಜಲ್ ಅರಬ್ಬರು ಇರಾನ್‍ನ್ನು ವಶ ಪಡಿಸಿಕೊಂಡ ಮೇಲೆ ಪಾರ್ಸಿ ಭಾಷೆಯಲ್ಲಿ ತೀರಾ ವೈಶಿಷ್ಟ್ಯಪೂರ್ಣವಾಗಿ ಬೆಳೆದದ್ದನ್ನು ಕಾಣಬಹುದು.

ಹಾಗೆ ನೋಡಿದರೆ ಇರಾನ್‍ನಲ್ಲಿಯೂ ಆ ಹೊತ್ತಿಗಾಗಲೇ ಕಸೀದ್‍ನ್ನು ಹೋಲುವಂತಹ ಚಾಮ ಎನ್ನುವ ಸಂಗೀತಮಯ ಕಾವ್ಯ ಪ್ರಕಾರವೊಂದು ಜನಪದರಲ್ಲಿ ಹಾಸುಹೊಕ್ಕಾಗಿತ್ತು. ಅದರಲ್ಲಿಯೂ ಹೆಂಗಸರು ಆಶು ಕವಿತೆಗಳಂತೆ ರಚಿಸಿ ಹಾಡುತ್ತಿದ್ದ ಚಾಮ ಮನಸೂರೆಗೊಳ್ಳುವಂತೆ ಇರುತ್ತಿದ್ದು ಸ್ವತಃ ರಾಜನೇ ಇದನ್ನು ಕೇಳಲು ಜನಸಾಮಾನ್ಯರಂತೆ ವೇಶ ಬದಲಿಸಿ ಬರುತ್ತಿದ್ದುದಕ್ಕೆ ಈತಿಹ್ಯಗಳಿವೆ. ಹೀಗಾಗಿಯೇ ಪಾಕಿಸ್ತಾನದ ಪ್ರಸಿದ್ಧ ವಿಮರ್ಶಕರಾದ ಡಾ.ವಜೀರ್ ಆಗಾ ಹಾಗೂ ‘ಗಜಲ್ ಕಿ ಸರ್‍ಗುಜಷ್ತ್’ ಬರೆದ ಅಖ್ತರ್ ಅನ್ಸಾರಿ ಇಬ್ಬರೂ ಚಾಮ ಪಾರ್ಸಿ ಭಾಷೆಯಲ್ಲಿದ್ದುದರಿಂದಲೇ ಗಜಲ್ ಇರಾನ್‍ನಲ್ಲಿ ಆಪ್ತವಾಗಿ ಪ್ರಚಲಿತಗೊಂಡಿತು ಎನ್ನುತ್ತಾರೆ.

ಆದರೆ ಗಜಲ್ ಉರ್ದು ಭಾಷೆಗೆ ಬಂದ ನಂತರ ಅದರ ಖದರ್ ಬದಲಾಗಿ ಹೋಯಿತು. ತನ್ನದೇ ಆದ ಸ್ವಂತ ವೈಶಿಷ್ಟ್ಯವನ್ನು ಉರ್ದು ಸಾಹಿತ್ಯದಲ್ಲಿ ಬೆಳೆಸಿಕೊಂಡ ಗಜಲ್ ಭಾರತೀಯ ಸಂಸ್ಕøತಿಯನ್ನು, ರೀತಿ ರಿವಾಜುಗಳನ್ನು, ಇಲ್ಲಿನ ಪ್ರೇಮದ ಅಭಿವ್ಯಕ್ತಿಯನ್ನು, ವಿರಹದ ಸಂವೇದನೆಯನ್ನು ತನ್ನದಾಗಿಸಿಕೊಂಡು ಸಶಕ್ತವಾಯಿತು. ಮೊದಲೇ ಎರಡು ಪದ ಹೆಚ್ಚಾಗಿ ನುಡಿದರೆ ಮಾತಿಗೇ ಇರುವೆ ಮುತ್ತುವಷ್ಟು ಸಿಹಿಯಾಗಿರುವ ಉರ್ದು ಭಾಷೆ ಗಜಲ್‍ನ ಸಾಂಗತ್ಯದಿಂದಾಗಿ ಇನ್ನಷ್ಟು ಸಿಹಿಯನ್ನೂ ಮೃದುತ್ವವನ್ನೂ, ನವಿರನ್ನೂ ಪಡೆದುಕೊಂಡಿತು. ಉರ್ದುವಿನಿಂದ ಭಾರತೀಕರಣಗೊಂಡ ಗಜಲ್ ಇಲ್ಲಿನ ಹತ್ತಾರು ಭಾವನಾತ್ಮಕ ವಿಷಯಗಳನ್ನು ಒಳಗೊಂಡು ಸಂಪೂರ್ಣವಾಗಿ ಭಾರತೀಯತೆಯನ್ನು ಪಡೆದುಕೊಂಡಿದ್ದು ಈಗ ಇತಿಹಾಸ.

ಈಗಾಗಲೇ ಹೇಳಿದ ಹಾಗೆ ತಷಬೀಬ್‍ನಲ್ಲಿರುವಂತೆ ಗಜಲ್‍ನ ರಚನೆಯೂ ವಿಶಿಷ್ಟವಾದದ್ದು. ದ್ವಿಪದಿಯಲ್ಲಿ ಇರುವ ಗಜಲ್‍ನಲ್ಲಿ ಮತ್ಲಾ, ಕಾಫಿಯಾ, ರಧೀಪ್. ಮಕ್ತಾ ಮುಂತಾದ ಅಂಗಗಳಿವೆ. ಗಜಲ್‍ನ ದ್ವಿಪದಿಗಳಿಗೆ ‘ಶೇರ್’ ಎನ್ನುತ್ತಾರೆ. ಇದನ್ನು ಬೈತ್ ಎಂದೂ ಕರೆಯುತ್ತಾರೆ. ಗಜಲ್‍ನ ಒಂದು ಚರಣಕ್ಕೆ ‘ಮಿಸ್ರ’ ಎನ್ನುತ್ತಾರೆ. ಮೊದಲ ದ್ವಿಪದಿಗೆ ‘ಮತ್ಲಾ’ ಎನ್ನುತ್ತಾರೆ. ಮತ್ಲಾ ಗಜಲ್‍ಗೆ ಲಯ ಮತ್ತು ಪ್ರವೇಶಿಕೆಯ ಜೊತೆಜೊತೆಗೆ ವಿಷಯವನ್ನೂ ಒದಗಿಸಿಕೊಡುತ್ತದೆ. ಮತ್ಲಾದ ಎರಡೂ ಚರಣಗಳಲ್ಲಿ ಕಾಫಿಯಾ ಮತ್ತು ರಧೀಪ್ ಇರಲೇ ಬೇಕು.

ಪುರಾತನ ಗಜಲ್‍ಕಾರರು ಒಂದೇ ಮತ್ಲಾ ಬಳಸುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಮತ್ಲಾಗಳನ್ನು ಬಳಸಲಾರಂಭಿಸಿದರು. ಮತ್ಲಾದ ನಂತರ ಬರುವ ಇನ್ನೊಂದು ಮಹತ್ವದ ಮತ್ಲಾವನ್ನು ‘ಮತ್ಲಾಸಾನಿ’ ಅಥವಾ ‘ಹುಸ್ನೆ ಮತ್ಲಾ’ ಎಂದು ಕರೆಯುತ್ತಾರೆ. ಇಲ್ಲಿ ಹುಸ್ನೆ ಅಂದರೆ ಚೆಲುವು. ಮತ್ಲಾದ ಹೊರತಾಗಿಯೂ ತುಂಬಾ ಸುಂದರವಾದ ಮತ್ಲಾವನ್ನು ಈ ಹೆಸರಿನಿಂದ ಕರೆಯುವ ಪರಿಪಾಠ ಬೆಳೆದುಬಂತು. ಇಡೀ ಗಜಲ್ ಮತ್ಲಾದಿಂದ ಕೂಡಿದ್ದರೆ ಅದನ್ನು ಸಂಪೂರ್ಣ ಗಜಲ್ ಎಂದು ಕರೆಯುವ ರೂಢಿಯೂ ಇದೆ.

ರಧೀಪ್ ಮತ್ತು ಕಾಫಿಯಾ ಎರಡೂ ಪ್ರಾಸ ಪದಗಳು. ಗಜಲ್‍ನ ಮತ್ಲಾದ ಕೊನೆಯಲ್ಲಿ ಪುನಃ ಪುನಃ ಬರುವ ಶಬ್ಧ ರಧೀಪ್. ಇದು ಗಜಲ್‍ನ ಪ್ರತಿ ಶೇರ್‍ನ ಎರಡನೆಯ ಮಿಸ್ರಾದ ಕೊನೆಯ ಶಬ್ಧವಾಗಿಯೂ ಬರುತ್ತದೆ. ಇದು ಗಜಲ್‍ಗೆ ಒಂದು ಗೇಯತೆಯನ್ನು ನೀಡುತ್ತದೆ. ರಧೀಪ್‍ನ ಲಾಲಿತ್ಯ ಹೆಚ್ಚಿದಷ್ಟೂ ಗಜಲ್ ತನ್ನ ಭಾವತೀವ್ರತೆಯನ್ನು, ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸಂಗೀತಮಯವಾಗುತ್ತದೆ. ಮೂಲತಃ ಹಾಡುಗಬ್ಬದಿಂದಲೇ ಗುರುತಿಸಿಕೊಂಡಿರುವ ಗಜಲ್‍ಗೆ ಇದು ಅತ್ಯವಶ್ಯ.

ಕಾಫಿಯಾ ಎಂದರೆ ಹಿಂದೆ ಬರುವುದು ಎಂದರ್ಥ. ಒಂದು ನಿರ್ದಿಷ್ಟ ಅಕ್ಷರ ಬೇರೆಬೇರೆ ಪದಗಳಲ್ಲಿ ಮತ್ಲಾದ ಎರಡೂ ಮಿಸ್ರದಲ್ಲಿ ಹಾಗೂ ಉಳಿದ ಶೇರ್‍ಗಳ ಎರಡನೆಯ ಮಿಸ್ರಾದಲ್ಲಿ ಬರುತ್ತದೆ. ಕಾಫಿಯಾದ ಕೊನೆಯ ಪ್ರಾಸದ ಅಕ್ಷರ ರವಿ.

ಆದರೆ ಡಾ.ಮಸೂದ್ ಹುಸೇನ್‍ಖಾನ್ ಅವರು ‘ನಗಾರೆ ಪಾಕಿಸ್ತಾನ’ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಗಜಲ್‍ಗೆ ರಧೀಫ್ ಒಂದು ಹೆಚ್ಚಿನ ಬಂಧ. ಅದು ಕವಿಯ ಇಚ್ಛಾನುಸಾರ ಬಳಕೆಯಾಗುತ್ತದೆ ಎಂದಿದ್ದರೆ, ಖ್ಯಾತ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖಲಾಕ್ ದೆಹಲವಿ ತಮ್ಮ ‘ಘನೆ ಶಾಯರಿ’ ಎಂಬ ಕೃತಿಯಲ್ಲಿ ರಧೀಪ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ ಎಂಬರ್ಥದ ಮಾತುಗಳನ್ನು ಬರೆದಿದ್ದಾರೆ. ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್‍ರಷೀದ್ ತಮ್ಮ ‘ಇಲ್ಮ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರಲ್ಲದೇ ಗಜಲ್‍ಗೆ ರಧೀಪ್ ಅತ್ಯವಶ್ಯವಲ್ಲ. ಆದರೆ ಕಟ್ಟುನಿಟ್ಟಾಗಿ ಕಾಫಿಯಾಗಳನ್ನು ಬಳಸಬೇಕು ಎಂದು ಸೂಚಿಸಿದ್ದಾರೆ. ಅಂದರೆ ಗಜಲ್ ಕಾಫಿಯಾದ ಬಳಕೆಯ ಮೇಲೆ ನಿಂತಿದೆ ಎನ್ನುವುದು ಸರ್ವವಿದಿತ.

ಕನಿಷ್ಟ ಎರಡು ಶಬ್ಧಗಳನ್ನಾದರೂ ಹೊಂದಿರಲೇಬೇಕಿರುವ ಕಾಪಿಯಾದಲ್ಲಿ ಎರಡು ಭಾಗಗಳಿವೆ. ಹರ್ಫ ಮುಸ್ತಕಿಲ್ ಹಾಗೂ ಹರ್ಫ ಮುತ್‍ಬದಿಲ್. ಹರ್ಫ್ ಮುಸ್ತ್‍ಕಿಲ್‍ನಲ್ಲಿ ಕಾಫಿಯಾದ ಕೊನೆಯ ಅಕ್ಷರ ಅಥವಾ ಅಕ್ಷರಗಳು ಸ್ಥಿರವಾಗಿರುತ್ತದೆ. ಇದನ್ನು ರವೀಶ್ ಎಂದೂ ಕರೆಯುತ್ತಾರೆ. ಆದರೆ ಹರ್ಫ್ ಮುತ್‍ಬದಿಲ್‍ನಲ್ಲಿ ಕೊನೆಯ ಅಕ್ಷರ ಅಂದರೆ ರವಿಯನ್ನು ಬಿಟ್ಟು ಅದರ ಹಿಂದಿನ ಅಕ್ಷರ ಬದಲಾಗುತ್ತದೆ. ರವಿಯ ಹಿಂದಿನ ಅಕ್ಷರವನ್ನು ‘ಅಲಾಮತ್’ ಎಂದು ಕರೆಯಲಾಗುತ್ತದೆ. ಅಲಾಮತ್ ಕಾಫಿಯಾದ ಅನಿವಾರ್ಯ ಅಂಗ. ಕಾಫಿಯಾ ಗಜಲ್‍ನ ಹೃದಯವಾದರೆ ಅಲಾಮತ್ ಕಾಫಿಯಾದ ಮಿಡಿತ ಎಂದು ಹೇಳಬಹುದು. ಒಂದುವೇಳೆ ಅಲಾಮತ್ ಸ್ವರ ಎಲ್ಲಾ ಶೇರ್‍ಗಳಲ್ಲಿಯೂ ಒಂದೇ ರೀತಿಯಿದ್ದರೆ ಅದನ್ನು ‘ಏಕ ಅಲಾಮತ್’ ಎಂದೂ, ಪ್ರತಿ ಶೇರ್‍ನಲ್ಲಿಯೂ ಅಲಾಮತ್ ಬದಲಾಗುತ್ತ ಹೋದರೆ ಅದನ್ನು ‘ಬಹು ಅಲಾಮತ್’ ಎಂದೂ ಕರೆಯುತ್ತಾರೆ.

ಆದರೆ ಕಾಫಿಯಾದಲ್ಲಿ ಒಂದೇ ಶಬ್ಧ ಮತ್ತೆಮತ್ತೆ ಬರುವಂತಿಲ್ಲ. ಆ ಶಬ್ಧದ ಅರ್ಥ ವ್ಯತ್ಯಾಸವಾಗದ ಹೊರತು. ಒಂದೇ ಕಾಫಿಯಾವನ್ನು ಪುನಃ ಪುನಃ ಬಳಸುವುದು ಕವಿಯ ಅಸಮರ್ಥತೆಯನ್ನು ಸೂಚಿಸುತ್ತದೆ. ಆದರೆ ಒಂದೇ ಶಬ್ಧಕ್ಕೆ ಬೇರೆ ಬೇರೆ ಅರ್ಥಗಳಿದ್ದಲ್ಲಿ ಅಂತಹ ಕಾಫಿಯಾವನ್ನು ಅತ್ಯವಶ್ಯವಾಗಿ ಬಳಸಬಹುದು. ಹೀಗೆ ಒಂದೇ ಶಬ್ಧ ಅರ್ಥವ್ಯತ್ಯಾಸದೊಂದಿಗೆ ಮತ್ತೆ ಅದೇ ಗಜಲ್‍ನಲ್ಲಿ ಕಾಣಿಸಿಕೊಂಡರೆ ಅದನ್ನು ‘ಬಾಜ್ ಕಾಫಿಯಾ’ ಎಂದು ಹೇಳುವುದನ್ನು ಗಮನಿಸಬಹುದು.

ಒಂದುವೇಳೆ ಅದಕ್ಕಿಂತ ಹೆಚ್ಚು ಶೇರ್‍ಗಳು ಬೇಕಿದ್ದರೆ ಮತ್ತೆ ಪುನಃ ಮತ್ಲಾ ಬರೆದು ಮುಂದುವರೆಸಬಹುದು. ಹೀಗೆ ಎಷ್ಟು ಗಜಲ್‍ಗಳನ್ನಾದರೂ ಮುಂದುವರೆಸಬಹುದು. ಇದನ್ನು ‘ಸೆಹಗಜಲ್’ ಎನ್ನುತ್ತಾರೆ.

ಕಾಫಿಯಾದ ಒಂದು ನಿರ್ದಿಷ್ಟ ಶಬ್ಧದೊಂದಿಗೆ ಇನ್ನೊಂದು ಅಕ್ಷರ ಅಥವಾ ಅಕ್ಷರಗಳು ಸೇರಿ ಬಂದಿದ್ದರೆ ಅದು ‘ಹಮ್ ಕಾಫಿಯಾ’. ಸಾಮಾನ್ಯವಾಗಿ ಒಂದು ಕಾಫಿಯಾದ ಜೊತೆಗೆ ಮತ್ತೊಂದು ಕಾಫಿಯಾ ತರುವುದನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಇಲ್ಲಿ ಕಾಫಿಯಾದ ಹಿಂದಿನ ಶಬ್ಧವೂ ಕೂಡ ಕಾಫಿಯಾದಂತೆಯೇ ನಿರ್ದಿಷ್ಟ ರವಿಯನ್ನು ಹೊಂದಿರುತ್ತದೆ. ಇದನ್ನು ‘ಜುಲ್ ಕಾಫಿಯಾ’ ಎಂದು ಪರಿಗಣಿಸುತ್ತಾರೆ. ಒಂದು ವೇಳೆ ಇಡೀ ಗಜಲ್‍ನ ಎಲ್ಲಾ ಕಾಫಿಯಾಗಳು ಹರ್ಫ್ ಮುಸ್ತಕಿಲ್ ಅಂದರೆ ನಿರ್ದಿಷ್ಟ ಅಕ್ಷರಗಳಿಲ್ಲದೇ ಬರಿ ಅಲಾಯತ್‍ನ ಸ್ವರಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಕಾಫಿಯಾವನ್ನು ಬಳಕೆಗೆ ತಂದರೆ ಅದನ್ನು ಸ್ವರ ಕಾಫಿಯಾ ಎನ್ನುತ್ತಾರೆ.

ಗಜಲ್‍ನಲ್ಲಿ ಕನಿಷ್ಟ ಐದು ಶೇರ್ ಇರಬೇಕು. ಗರಿಷ್ಟ ಹದಿನೇಳು ಶೇರ್ ಇರಬೇಕು. ಕೆಲವು ಕಡೆಗಳಲ್ಲಿ ಇಪ್ಪತ್ತೈದು ಶೇರ್‍ಗಳವರೆಗೂ ಬರೆಯಬಹುದು ಎಂಬ ಮಾಹಿತಿಯೂ ಇದೆ. ಒಂದುವೇಳೆ ಅದಕ್ಕಿಂತ ಹೆಚ್ಚು ಶೇರ್‍ಗಳು ಬೇಕಿದ್ದರೆ ಮತ್ತೆ ಪುನಃ ಮತ್ಲಾ ಬರೆದು ಮುಂದುವರೆಸಬಹುದು. ಹೀಗೆ ಎಷ್ಟು ಗಜಲ್‍ಗಳನ್ನಾದರೂ ಮುಂದುವರೆಸಬಹುದು. ಇದನ್ನು ‘ಸೆಹಗಜಲ್’ ಎನ್ನುತ್ತಾರೆ.

ಕೊನೆಯಲ್ಲಿ ಬರುವುದು ಶೇರ್ ಮಕ್ತಾ. ಇದರ ಎರಡು ಮಿಸ್ರಗಳಲ್ಲಿ ಒಂದು ಕಡೆ ಗಜಲ್‍ಕಾರ ತನ್ನ ಕಾವ್ಯನಾಮವನ್ನು ಬಳಸಬಹುದು. ಈ ಕಾವ್ಯನಾಮವನ್ನು ತಖಲ್ಲೂಸ್ ಎನ್ನುತ್ತಾರೆ. ಕೆಲವೊಮ್ಮೆ ಹಿರಿಯ ಉರ್ದು ಗಜಲ್‍ಕಾರರು ಮತ್ಲಾದಲ್ಲೂ ತಖಲ್ಲೂಸ್‍ನ್ನು ಬಳಸಿದ್ದು ಕಾಣಬಹುದು.

ಸುಸಂಬದ್ಧವಾದ ವಿಷಯಗಳಿರುವ ಗಜಲ್‍ಗಳನ್ನು ಮುಸಲ್‍ಸಿಲ್ ಎಂದು ಕರೆದರೆ ಪ್ರತಿ ಶೇರ್ ಕೂಡ ಅಸಂಗತವಾದ ವಿಷಯಗಳನ್ನು ಒಳಗೊಂಡಿದ್ದರೆ ಅದು ಗೈರ್‍ಮುಸಲ್‍ಸಿಲ್ ಎನ್ನಿಸಿಕೊಳ್ಳುತ್ತದೆ. ಯಾವುದಾದರೂ ಇಷ್ಟವಾದ ಇತರರ ಸಾಲನ್ನು ಇಟ್ಟುಕೊಂಡು ಮುಂದೆ ಗಜಲ್ ಬರೆಯುವುದಕ್ಕೆ ತರ್‍ಹಿ ಗಜಲ್ ಎನ್ನುತ್ತಾರೆ.

ಗದ್ಯ ರೂಪದಲ್ಲಿರುವ ‘ನಜರೀ ಗಜಲ್’, ಪ್ರಾಯ್ಡ್‍ನ ವಿಚಾರಗಳನ್ನೊಳಗೊಂಡ ಲೈಂಗಿಕತೆಯನ್ನು ಆಧರಿಸಿ ಬರೆದ ‘ಜಿನ್‍ಸಿ ಗಜಲ್’ ಝೆನ್ ಸಿದ್ಧಾಂತಗಳನ್ನು, ಬೌದ್ಧ ತತ್ವಗಳನ್ನು ಆಧಾರವಾಗಿಟ್ಟುಕೊಂಡು ಬರೆದ ‘ಝೆನ್ ಗಜಲ್’, ರಾಜಕೀಯ ವಿಷಯಾಧಾರಿತ ‘ರಾಜಕೀಯ ಗಜಲ್’, ಮುಕ್ತ ಛಂದಸ್ಸಿನ ಆಜಾದಿ ಗಜಲ್, ಮುಂತಾದ ವಿಭಾಗಗಳನ್ನೂ ಗುರುತಿಸಬಹುದು.

ಗಜಲ್ ಎಂದರೆ ಕೇವಲ ರಧೀಪ್, ಕಾಫಿಯಾ, ಮತ್ಲಾ, ಮಕ್ತಾ ಎಂದು ತಿಳಿಯದೇ ಅದು ಛಂದಸ್ಸಿಗೆ ಅನುಗುಣವಾಗಿ ಇರಬೇಕು ಎಂಬುದನ್ನೂ ಗಮನಿಸಬೇಕಿದೆ. ಅಕ್ಷರಗಣ ಹಾಗೂ ಮಾತ್ರಾಗಣದ ಚೌಕಟ್ಟಿಗೆ ಒಳಪಡಿಸಿಕೊಂಡು ಗಜಲ್‍ನ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬರೆಯಬೇಕಿದೆ. ಉದ್ದುದ್ದದ ಸಾಲುಗಳು, ದ್ವಿಪದಿಯ ಒಂದೊಂದು ಮಿಸ್ರ ಒಂದೊಂದು ಆಕಾರದಲ್ಲಿ ಇರುವ ಹತ್ತಾರು ಪ್ರಯತ್ನಗಳ ನಡುವೆಯೂ ಸಾಂಪ್ರಾಯಿಕ ಗಜಲ್‍ಗಳು ಒಂದಿಷ್ಟು ಸಮಚಿತ್ತವನ್ನು ಕಾಪಿಡುತ್ತಿವೆ. ಇಂತಹ ಪ್ರಯತ್ನವನ್ನು ಇತ್ತೀಚೆಗೆ ಗಿರೀಶ ಜಕಾಪುರೆಯವರು ಮಾಡುತ್ತಿದ್ದಾರೆ. ಅವರ ಸಾವಿರ ಕಣ್ಣಿನ ನವಿಲು ಅಕ್ಷರಗಣಕ್ಕೆ ಅನುಸಾರವಾಗಿ ರಚಿತಗೊಂಡಿರುವ ಕೃತಿ.

ಇತ್ತೀಚಿನ ಟ್ರೆಂಡ್ ನೋಡಿದರೆ ಗಜಲ್ ಕನ್ನಡದ ಅತ್ಯಂತ ಮಹತ್ವದ ಪ್ರಕಾರವಾಗಿ ಬೆಳೆಯುವುದರಲ್ಲಿ ಯಾವ ಅನುಮಾನವೂ ಬೇಡ. ಆದರೆ ಉರ್ದು ಹಾಗೂ ಹಿಂದಿ ಗಜಲ್‍ಗಳು ಜನಸಾಮಾನ್ಯರನ್ನು ತಲುಪಲು ಮುಖ್ಯವಾದÀದ್ದು ಮುಶಾಯಿರಾ. ಕನ್ನಡದಲ್ಲಿ ಇಂತಹ ಯಾವ ಪ್ರಯತ್ನಗಳೂ ಇಲ್ಲಿಯವರೆಗೆ ಆಗಿಲ್ಲ. ಅಂತಹದ್ದೊಂದು ಪ್ರಯತ್ನ ಕೂಡ ಶೀಘ್ರದಲ್ಲಿಯೇ ಆಗಬೇಕಿದೆ.

ಆಧಾರ: ಕನ್ನಡ ಗಜಲ್‍ಗಳು ಸಂಪಾದನೆ (ಚಿದಾನಂದ ಸಾಲಿ), ಸಾವಿರ ಕಣ್ಣಿನ ನವಿಲು (ಗಿರೀಶ ಜಕಾಪುರೆ), ಬಿಸಿಲ ಹೂ (ಸಂಪಾದನೆ: ಡಾ.ದಸ್ತಗೀರ್ ಸಾಬ್ ದಿನ್ನಿ)

*ಲೇಖಕರು ಕಾರವಾರದ ಸೀ ಬರ್ಡ್ ನಿರಾಶ್ರಿತರ ಕಾಲೋನಿಯಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕಿ. ಒಟ್ಟು ಹತ್ತು ಪುಸ್ತಕಗಳು ಪ್ರಕಟವಾಗಿವೆ. ಮೂಲತಃ ಅಂಕೋಲದವರು.

ಕನ್ನಡದ ಗಜಲ್ ಕವಿಗಳು

ಅಮಿರ್ ಖುಸ್ರೋ, ಮಿರ್ಜಾ ಗಾಲಿಬ್, ಇಕ್ಬಾಲ್, ಮೀರ್, ಫಿರಾಕ್, ಕೈಫಿ ಅಜ್ಮಿ, ಬಲರಾಜ್ ಕೋಮಲ್, ಫರ್ವಿನ್ ಶಾಕಿರ್, ಮುಂತಾದ ಪ್ರಸಿದ್ಧ ಉರ್ದು ಗಜಲ್‍ಕಾರರನ್ನು ಉರ್ದು ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿದ ಶಾಂತರಸರು ಗಜಲ್ ಮತ್ತು ಬಿಡಿ ದ್ವಿಪದಿಗಳು ಎನ್ನುವ ಕೃತಿಯ ಮೂಲಕ ಮೊದಲು ಗಜಲ್‍ನ್ನು ಕನ್ನಡಕ್ಕೆ ತಂದರು. ಅದರ ನಂತರ ಕನ್ನಡದ ಗಜಲ್ ನಿಧಾನವಾಗಿ ಸಣ್ಣ ತೊರೆಯಂತೆ ಮುಂದುವರೆಯಿತು.
ಸುಬ್ರಾಯ ಭಟ್ ಬಕ್ಕಳ, ಡಾ.ಪಂಚಾಕ್ಷರಿ ಹಿರೇಮಠ, ಪ್ರೊ.ಅಬ್ದುಲ್ ಮಜೀದ್ ಖಾನ್, ಮುಕ್ತಾಯಕ್ಕ, ಸಿದ್ಧಲಿಂಗ ಪಟ್ಟಣಶೆಟ್ಟಿ, ಸಿದ್ಧರಾಮ ಹಿರೇಮಠ, ಜಂಬಣ್ಣ ಅಮರಚಿಂತ, ಕಾಶಿನಾಥ ಅಂಬಲಗೆ, ಬಿ.ಆರ್.ಲಕ್ಷ್ಮಣರಾವ್, ನಜೀರ್ ಚಂದಾವರ, ಪ್ರಭಾವತಿ ದೇಸಾಯಿ, ಶೂದ್ರ ಶ್ರೀನಿವಾಸ, ಸರಜೂ ಕಾಟ್ಕರ್, ಡಾ.ಬಸವರಾಜ ಸಬರದ ಮುಂತಾದ ಹಿರಿಯರು ಗಜಲ್ ರಚಿಸಿದ್ದಾರೆ.
ಗಜಲ್ ಬರೆಯುತ್ತಿರುವ ಹೊಸಪೀಳಿಗೆಯ ದಂಡು: ಅರಿಫ್ ರಾಜಾ, ಚಿದಾನಂದ ಸಾಲಿ (ಮೌನ), ಅಲ್ಲಾಗಿರಿರಾಜ (ನೂರ್ ಗಜಲ್, ತುರೂರ್ ಗಜಲ್ ತೊಂಬತ್ತೊಂತ್ತು ಗಜಲ್, ಆಜಾದಿ ಗಜಲ್ ಸಾಕಿ ಗಜಲ್), ಗಿರೀಶ ಜಕಾಪುರೆ (ಸಾವಿರ ಕಣ್ಣಿನ ನವಿಲು), ಶ್ರೀದೇವಿ ಕೆರೆಮನೆ (ಅಲೆಯೊಳಗಿನ ಮೌನ), ರಮೇಶ ಗಬ್ಬೂರ (ಗಬ್ಬೂರ್ ಗಜಲ್), ದೊಡ್ಡಕಲ್ಲಳ್ಳಿ ನಾರಾಯಣಪ್ಪ (ಎದೆಯೊಳಗಿನ ಇಬ್ಬನಿ), ಇಟಗಿ ಈರಣ್ಣ (ಬಿಡಿ ಗಜಲ್‍ಗಳು), ಸಂಗೂ ಹುಂಡೇಕಾರ (ಸಮಾಧಿನಿ), ಈರಣ್ಣ ಬಂಗಾಲಿ (ಚಿಮಣಿ ದೀಪದ ಬೆಳಕಿನಲ್ಲಿ), ಪ್ರಕಾಶ ಜಾಲಹಳ್ಳಿ (ದೀಪ ಹಚ್ಚಿಟ್ಟ ರಾತ್ರಿ), ಪ್ರೇಮಾ ಹೂಗಾರ (ಪಣೀತೆ), ಗಣೇಶ ಹೊಸ್ಮನೆ (ಹರಿದು ಕೂಡುವ ಕಡಲು), ಗೋವಿಂದ ಹೆಗಡೆ, ಅರುಣಾ ನರೇಂದ್ರ (ಮಾತು ಮೌನದ ನಡುವೆ), ಲಕ್ಷ್ಮಿ ದೊಡ್ಮನಿ (ಅರಳು ಮಲ್ಲಿಗೆ).

2 Responses to " ಕನ್ನಡ ಗಜಲ್ ಹಾದಿ

-ಶ್ರೀದೇವಿ ಕೆರೆಮನೆ.

"

Leave a Reply

Your email address will not be published.