ಕನ್ನಡ ಚಳವಳಿ: ಹೋರಾಟದಿಂದ ಮಾರಾಟದವರೆಗೆ!

1960ರ ದಶಕದಲ್ಲಿ ಕನ್ನಡ ಮತ್ತು ಕನ್ನಡಿಗರ ಪಾಲಿಗೆ ಜೋರು ಧ್ವನಿಯೆತ್ತುವವರು ಯಾರಾದರೂ ಬಂದಾರೆಯೇ ಎಂದು ಜನರು ನಿರೀಕ್ಷಿಸುತ್ತಿದ್ದರು. ಆದರೆ, ಈ 60 ವರ್ಷಗಳ ದೀರ್ಘಾವಧಿಯ ಕನ್ನಡ ಚಳವಳಿಯನ್ನು ಕಂಡಿರುವ ಜನ, ಯಾಕಾದರೂ ಕನ್ನಡ ಚಳವಳಿ ನಡೆಸುವವರು ಹುಟ್ಟುಕೊಳ್ಳುತ್ತಾರೋ ಎಂದು ಪರಿತಪಿಸುವಂತಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡ ಏಕೀಕರಣ ಚಳವಳಿ ಸ್ವಾತಂತ್ರ್ಯೋತ್ತರದಲ್ಲೂ ಮುಂದುವರಿದಿತ್ತು. ಸ್ವಾತಂತ್ರ್ಯ ಪಡೆದ ಹುರುಪು-ಹುಮ್ಮಸ್ಸಿನಲ್ಲಿದ್ದ ರಾಷ್ಟ್ರದ ನಾಯಕರಿಗೆ ಕನ್ನಡಿಗರ ಅಳಲು ಅರ್ಥವಾಗುವ ಹೊತ್ತಿಗೆ ವರ್ಷಗಳು ಉರುಳಿದ್ದವು. ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿದ ರಾಜ್ಯವೊಂದನ್ನು ಕೊಡಬಹುದು ಅನ್ನಿಸಿದ್ದು ತಡವಾಗಿ. ಕೇಂದ್ರದ ಒಪ್ಪಿಗೆಯೊಡನೆ 1956ರ ನವೆಂಬರ್ 1ರಂದು ಕನ್ನಡ ಭಾಷಾ ಪ್ರಾಂತ್ಯ ರಚನೆಯಾಯಿತು. ಮುಂಬೈ, ಮದ್ರಾಸ್, ಹೈದ್ರಾಬಾದ್ ಪ್ರಾಂತ್ಯಗಳಲ್ಲಿ ಹಲವು ದಶಕಗಳಿಂದ ನರಳಿದ್ದ ಕನ್ನಡಿಗರು ತಮ್ಮದೇ ತೌರಿನೊಳಗೆ ಸೇರಿದಂತೆ ಸಂಭ್ರಮವನ್ನಾಚರಿಸಿದರು. ‘ಇನ್ನು ನಮಗಿಲ್ಲ ಚಿಂತೆ, ನಮ್ಮ ಭಾಗ್ಯೋದಯದ ಬಾಗಿಲು ತೆರೆದುಕೊಂಡಿದೆ, ಐಕ್ಯ ಕನ್ನಡಿಗರೆದೆಯಲ್ಲಿ ಭಾವೈಕ್ಯತೆ ಮೊಳಗಿದೆ, ಅಖಂಡ ಕರ್ನಾಟಕವೊಂದು ಉದಯಿಸಿದೆ, ಅದರಿಂದ ನಮ್ಮ ಬಾಳು ಬೆಳಗಲಿದೆ’ ಎಂಬ ಸಂತಸೋಲ್ಲಾಸ ಎಲ್ಲರಲ್ಲಿ.

ಅಲ್ಲಿಂದ ಅರ್ಧ ದಶಕವೂ ಕಳೆದಿರಲಿಲ್ಲ. ಅಷ್ಟರಲ್ಲೇ ಕನ್ನಡಿಗರು ಒಂದು ರೀತಿಯ ಅಸ್ಥಿರತೆಯನ್ನು, ತಬ್ಬಲಿತನವನ್ನು ಅನುಭವಿಸತೊಡಗಿದ್ದು ವಿಪರ್ಯಾಸ. ದಕ್ಷಿಣದ ಎಂಟು ಜಿಲ್ಲೆಗಳೊಡನೆ ಉತ್ತರ ಭಾಗದ ಹತ್ತು ಜಿಲ್ಲೆಗಳು ಸೇರಿಕೊಂಡು ರಾಜ್ಯ ಏಕೀಕರಣವಾಗಿತ್ತು. ಆದರೆ, ಗಡಿ ಜಿಲ್ಲೆಗಳುದ್ದಕ್ಕೂ ಕನ್ನಡ ಸೊರಗಿತ್ತು. ಅಲ್ಲಿಯ ಕನ್ನಡಿಗರು ರಕ್ಷಣೆಯಿಲ್ಲದೆ ಭಯಭೀತರಾಗಿದ್ದರು. ವಿಶೇಷವಾಗಿ, ರಾಜಧಾನಿಯಾಗಿದ್ದ ಬೆಂಗಳೂರಲ್ಲೇ ಕನ್ನಡಿಗರು ಸುರಕ್ಷಿತವಾಗಿರಲಿಲ್ಲ. ಎಲ್ಲೆಲ್ಲೂ ನೆರೆ ರಾಜ್ಯಗಳ ಮತ್ತು ಉತ್ತರ ಭಾರತದ ಜನರು ತುಂಬಿಹೋಗಿದ್ದರು.

ರಾಜಧಾನಿಯಲ್ಲಿ ಸ್ಥಾಪನೆಯಾಗಿದ್ದ ಕೇಂದ್ರೋದ್ಯಮಗಳಲ್ಲೂ ಪರಭಾಷಿಕರೇ ತುಂಬಿದ್ದರು. ಕನ್ನಡಿಗರಿಗೆ ಬೆರಳೆಣಿಕೆ ಸಂಖ್ಯೆಯ ಉದ್ಯೋಗ ಮಾತ್ರವಿದ್ದವು. ಕೇಂದ್ರ ಸರ್ಕಾರೀ ಇಲಾಖೆಗಳಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ಸರ್ಕಾರೀ ನೌಕರಿ ಕನ್ನಡಿಗರ ಪಾಲಿಗೆ ಅಷ್ಟಿಷ್ಟು ದಕ್ಕಿದ್ದವು. ರಾಜಧಾನಿಯ ವ್ಯಾಪಾರ-ವಹಿವಾಟು-ಉದ್ಯಮ ರಂಗವೂ ಪರಭಾಷಿಕರ ನಿಯಂತ್ರಣದಲ್ಲಿದ್ದವು. ತಮಿಳು, ತೆಲುಗು, ಮಲಯಾಳಿ, ಹಿಂದಿ ಭಾಷೆಗಳ ಆರ್ಭಟದ ನಡುವೆ ಕನ್ನಡ ಭಾಷೆ ನಲುಗಿತ್ತು. ಕನ್ನಡ ಚಿತ್ರಗಳು ಲೆಕ್ಕಕ್ಕಿರಲಿಲ್ಲ. ಕನ್ನಡ ಪತ್ರಿಕೆಗಳ, ಕನ್ನಡ ಪುಸ್ತಕಗಳ ಪ್ರಕಟಣೆಯೂ ಕ್ಷೀಣ ಸಂಖ್ಯೆಯಲ್ಲಿತ್ತು. ದಂಡು ಪ್ರದೇಶ, ಹಲಸೂರು, ದೇವರ ಜೀವನ ಹಳ್ಳಿಗಳಿರಲಿ, ಶಾಂತಿನಗರ, ಸಿಟಿ ಮಾರ್ಕೆಟ್ ಪ್ರದೇಶ, ಅರಳೇಪೇಟೆ, ಗಾಂಧಿನಗರ, ಶ್ರೀರಾಮಪುರ, ಶೇಷಾದ್ರಿಪುರದಂಥ ಪ್ರದೇಶಗಳಲ್ಲೂ ಕನ್ನಡಿಗರ ಮೇಲೆ ಹಲ್ಲೆಗಳು ನಡೆಯುತ್ತಿದ್ದವು. ಅದನ್ನು ಕಂಡು ಹಿರಿಯ ಕನ್ನಡಿಗರು ಆತಂಕದಲ್ಲಿ ಬೇಯುತ್ತಿದ್ದರೆ, ಕಿರಿಯರು ಭಯಭೀತರಾಗಿದ್ದರು.

ಅಂತಹ ಸಂದರ್ಭದಲ್ಲೇ ರಾಜ್ಯ ವಿಧಾನಸಭೆಯಲ್ಲಿ ಘಟನೆಯೊಂದು ಜರುಗಿತು. 1960ರ ದಶಕದ ಆರಂಭ ಕಾಲ. ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ ಅವರು ಜಂಟಿ ಅಧೀವೇಶನವನ್ನುದ್ದೇಶಿಸಿ ಭಾಷಣ ಓದುತ್ತಿದ್ದರು. ಸದನದಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದವಾಗಿ ಸದನ ಭಾಷಣ ಆಲಿಸುತ್ತಿತ್ತು. ಇದ್ದಕ್ಕಿದ್ದಂತೆ ಶಾಂತವೇರಿ ಗೋಪಾಲಗೌಡ, ಅಂದಾನಪ್ಪ ದೊಡ್ಡಮೇಟಿಯಂಥವರು ಎದ್ದು ಕೂಗಾಡುತ್ತಾ ಭಾಷಣದ ಪ್ರತಿಗಳನ್ನು ಹರಿದರು, ಮೈಕುಗಳನ್ನು ಬಿಸಾಡಿದರು. ‘ಇಂಗ್ಲಿಷ್ ಭಾಷಣಕ್ಕೆ ಧಿಕ್ಕಾರ, ಧಿಕ್ಕಾರ’ ಎಂದು ಘೋಷಣೆ ಮೊಳಗಿಸಿದರು. ‘ಇದು ಕನ್ನಡ ರಾಜ್ಯ. ವಿಧಾನಸಭೆಯಲ್ಲಿ ಕನ್ನಡ ಮೊಳಗಲಿ’ ಎಂದು ಆಗ್ರಹಿಸಿದರು.

ಅ.ನ.ಕೃಷ್ಣರಾಯ, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾಯ, ಕೋಣಂದೂರು ಲಿಂಗಪ್ಪ, ಬಂದಗದ್ದೆ ರಮೇಶ್, ಅ.ಸಂಜೀವಪ್ಪ, ರಾಮಕೃಷ್ಣದೇವ ಮುಂತಾದವರು ಒಗ್ಗೂಡಿ ಧ್ವನಿಗೂಡಿಸಿದರು. 1961ರಲ್ಲೇ ಚಿಕ್ಕಲಾಲ್‍ಬಾಗ್‍ನಲ್ಲಿ ಮೊದಲ ಬಾರಿಗೆ ರಾಜ್ಯೋತ್ಸವವನ್ನಾಚರಿಸಿ ಕನ್ನಡ ಕಹಳೆಯನ್ನು ಮೊಳಗಿಸಿದರು.

ಇದು ಕನ್ನಡ ದಿನಪತ್ರಿಕೆಗಳಲ್ಲಿ ದೊಡ್ಡ ಪ್ರಚಾರ ಪಡೆದುಕೊಂಡಿತು. ಇಂಗ್ಲಿಷ್ ಪತ್ರಿಕೆಗಳು ಅಷ್ಟೊಂದು ಪ್ರಾಧಾನ್ಯ ನೀಡದೇ ಹೋದವು. ಆದರೆ, ರಾಜಧಾನಿಯಲ್ಲಿದ್ದ ಸಾಹಿತ್ಯ ದಿಗ್ಗಜರು ಆ ಪ್ರಕರಣದಿಂದ ಪ್ರೇರೇಪಿತರಾದರು. ಅ.ನ.ಕೃಷ್ಣರಾಯ, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾಯ, ಕೋಣಂದೂರು ಲಿಂಗಪ್ಪ, ಬಂದಗದ್ದೆ ರಮೇಶ್, ಅ.ಸಂಜೀವಪ್ಪ, ರಾಮಕೃಷ್ಣದೇವ ಮುಂತಾದವರು ಒಗ್ಗೂಡಿ ಧ್ವನಿಗೂಡಿಸಿದರು. 1961ರಲ್ಲೇ ಚಿಕ್ಕಲಾಲ್‍ಬಾಗ್‍ನಲ್ಲಿ ಮೊದಲ ಬಾರಿಗೆ ರಾಜ್ಯೋತ್ಸವವನ್ನಾಚರಿಸಿ ಕನ್ನಡ ಕಹಳೆಯನ್ನು ಮೊಳಗಿಸಿದರು.

ತರುವಾಯ 1962ರಲ್ಲಿ ಅನಕೃ ನೇತೃತ್ವದಲ್ಲಿ ಕರ್ನಾಟಕ ಸಂಯುಕ್ತ ರಂಗ ಸ್ಥಾಪನೆಗೊಂಡಿತು. ಸುಭಾಶ್‍ನಗರ ಮೈದಾನದಲ್ಲಿ ಸ್ಥಾಪಿಸಿದ ವಿದ್ಯಾರಣ್ಯ ಮಂಟಪದಲ್ಲಿ ರಾಜ್ಯೋತ್ಸವ ಆಚರಣೆ ನಡೆಯಿತು. ಅದರಲ್ಲಿ ಕನ್ನಡ ಕುಲಪುರೋಹಿತರೆನಿಸಿದ್ದ ಆಲೂರು ವೆಂಕಟರಾಯರು ಭಾಗವಹಿಸಿ, ಕನ್ನಡಿಗರು ಎಚ್ವೆತ್ತುಕೊಳ್ಳುವಂತೆ ಕರೆಯಿತ್ತರು. ಅಲ್ಲಿ ತರಾಸು, ಮೈಸೂರು ನಟರಾಜ್, ಕರ್ಲಮಂಗಲಂ ಶ್ರೀಕಂಠಯ್ಯ, ಭಾರತೇಂದ್ರ ಸ್ವಾಮಿಗಳು, ಬೆ.ನಿ.ಈಶ್ವರಪ್ಪ, ಅ.ಸಂಜೀವಪ್ಪ, ಸ.ಕೃ.ಸಂಪಂಗಿ, ಜಗದೀಶರೆಡ್ಡಿ ಮುಂತಾದವರೆಲ್ಲಾ ಭಾಗವಹಿಸಿದ್ದರು.

ಅದೇ ಸಂದರ್ಭದಲ್ಲಿ ಸಿಟಿ ಇನ್‍ಸ್ಟಿಟ್ಯೂಟ್‍ನಲ್ಲಿ ಸಂಗೀತ ಸಾಮ್ರಾಜ್ಞಿಯೆನಿಸಿದ್ದ ಎಂ.ಎಸ್.ಸುಬ್ಬುಲಕ್ಷ್ಮಿಯವರ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿ ಬಹುತೇಕ ಕನ್ನಡೇತರ ಭಾಷೆಯ ಗೀತೆಗಳನ್ನು ಹಾಡುತ್ತಿದ್ದರು. ಅದರ ವಿರುದ್ಧ ಕರ್ನಾಟಕ ಸಂಯುಕ್ತ ರಂಗದ ಸಾಹಿತಿ ಗಣ್ಯರು ಪ್ರತಿಭಟನಾ ಹೋರಾಟವನ್ನು ರೂಪಿಸಿದರು. ಅಷ್ಟರಲ್ಲಿ ಜಾಗೃತಿಗೊಳ್ಳತೊಡಗಿದ್ದ ಕನ್ನಡಿಗರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಅಲ್ಲಿ ದೊಡ್ಡ ಸಂಘರ್ಷಮಯ ವಾತಾವರಣ ಸೃಷ್ಟಿಸಲಿದ್ದ ಅನಾಹುತವನ್ನು ಪೊಲೀಸರ ಮಧ್ಯ ಪ್ರವೇಶದಿಂದ ತಪ್ಪಿಸಿದಂತಾಯಿತು.

ಕನ್ನಡ ಗಾಯಕರಿಗೆ, ಕಲಾವಿದರಿಗೆ ಮಾನ್ಯತೆ ಸಿಗತೊಡಗಿತು. ಕನ್ನಡಿಗರ ಈ ಬಗೆಯ ಹೋರಾಟವನ್ನು ಕನ್ನಡದ ದಿಗ್ಗಜ ಸಾಹಿತಿಗಳಾದ ಬಿಎಂಶ್ರೀ, ಕುವೆಂಪು, ಗೋವಿಂದ ಪೈ, ಆಲೂರು ವೆಂಕಟರಾಯರು ಮುಂತಾಗಿ ಕನ್ನಡ ಅಭಿಮಾನದ ಅಗತ್ಯವನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ತುಂಬಿ ಕನ್ನಡಿಗರ ಮನದಾಳವನ್ನು ಹೊಕ್ಕು ಜಾಗೃತಿಗೊಳಿಸಿದ್ದು ಸಹಕಾರಿಯಾಯಿತು.

ಈ ಬೃಹತ್ ಪ್ರತಿಭಟನೆ ಕನ್ನಡಿಗರೆದೆಯಲ್ಲಿ ನಾಡಪರವಾದ ಚೈತನ್ಯ ಶಕ್ತಿಯನ್ನು ತುಂಬುವಲ್ಲಿ ಯಶಸ್ವಿಯಾಯಿತು. ಅಲ್ಲಿಂದ ರಾಜಧಾನಿಯಲ್ಲಿ ಕನ್ನಡ ಗೀತೆಗಳಿಗೆ ಅವಕಾಶ ಲಭಿಸತೊಡಗಿತು. ಹಾಗೇ ಕನ್ನಡ ಗಾಯಕರಿಗೆ, ಕಲಾವಿದರಿಗೆ ಮಾನ್ಯತೆ ಸಿಗತೊಡಗಿತು. ಕನ್ನಡಿಗರ ಈ ಬಗೆಯ ಹೋರಾಟವನ್ನು ಕನ್ನಡದ ದಿಗ್ಗಜ ಸಾಹಿತಿಗಳಾದ ಬಿಎಂಶ್ರೀ, ಕುವೆಂಪು, ಗೋವಿಂದ ಪೈ, ಆಲೂರು ವೆಂಕಟರಾಯರು ಮುಂತಾಗಿ ಕನ್ನಡ ಅಭಿಮಾನದ ಅಗತ್ಯವನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ತುಂಬಿ ಕನ್ನಡಿಗರ ಮನದಾಳವನ್ನು ಹೊಕ್ಕು ಜಾಗೃತಿಗೊಳಿಸಿದ್ದು ಸಹಕಾರಿಯಾಯಿತು.

ಅದೇ ಹುರುಪಲ್ಲಿ ಕನ್ನಡ ಚಳವಳಿಗೆ ಕೆಲವಾರು ಯುವಕರ ಪ್ರವೇಶವಾಯಿತು. ವಾಟಾಳ್ ನಾಗರಾಜ್, ಜಿ.ನಾರಾಯಣಕುಮಾರ್, ಕೆ.ಪ್ರಭಾಕರರೆಡ್ಡಿ, ಟಿ.ಪಿ.ಪ್ರಸನ್ನಕುಮಾರ್, ಜಿ.ಮುದ್ದೇಗೌಡ, ರಾಮಸ್ವಾಮಿ, ಸೋಸಲೆ ಜವರಯ್ಯ ಮುಂತಾದವರಿಂದ ಚಳವಳಿಗೆ ಶಕ್ತಿ ಸಂಚಯವಾಯಿತು. ಸಿಟಿ ಪ್ರದೇಶದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಸಭೆ-ಸಮಾರಂಭಗಳು ಏರ್ಪಟಾಗುತ್ತಿದ್ದವು. ಪ್ರತಿಭಟನೆಗಳೂ ಒಂದರ ಹಿಂದೆ ಒಂದರಂತೆ ರೂಪುಗೊಳ್ಳತೊಡಗಿದವು.

ಆ ಸಂದರ್ಭದಲ್ಲಿ ‘ಕಾಂಚಿತ್ತಲೈವನ್’ ತಮಿಳು ಚಿತ್ರದ ವಿರುದ್ಧ ದೊಡ್ಡ ಪ್ರತಿಭಟನೆ ನಡೆಯಿತು. ಅದರಲ್ಲಿ ಕನ್ನಡದ ದೊರೆ ಇಮ್ಮಡಿ ಪುಲಕೇಶಿಯನ್ನು ಬಫೂನ್‍ನಂತೆ ಚಿತ್ರಿಸಿ ಅವಮಾನಿಸಲಾಗಿತ್ತೆಂದು ಧ್ವನಿಯೆತ್ತಿದ್ದರಿಂದ ಚಳವಳಿಗಾರರಿಗೆಂದೇ ಪ್ರದರ್ಶನವೊಂದು ಏರ್ಪಟಾಯಿತು. ಅದನ್ನು ವೀಕ್ಷಿಸುತ್ತಿದ್ದಾಗಲೇ ಅಭಿಮಾನಿಗಳು ರೊಚ್ಚಿಗೆದ್ದು ಚಿತ್ರಮಂದಿರದ ಸೀಟುಗಳನ್ನು ಹರಿದು ಧ್ವಂಸಗೊಳಿಸಿದರು. ಅದನ್ನು ಕಂಡ ಸಾತ್ವಿಕ ಸ್ವಭಾವದ ಅನಕೃ ಚಳವಳಿಯಿಂದಲೇ ದೂರ ಉಳಿದರು. ಕನ್ನಡಿಗರನ್ನು ತಮ್ಮ ಉಗ್ರ ಭಾಷಣದಿಂದ ಜಾಗೃತಿಗೊಳಿಸುತ್ತಿದ್ದ ಮ.ರಾಮಮೂರ್ತಿ ಕನ್ನಡಿಗರಿಗೆ ತಮ್ಮದೇ ಆದ ಪ್ರಾದೇಶಿಕ ಪಕ್ಷವಿರಬೇಕೆಂದು ‘ಕನ್ನಡ ಪಕ್ಷ’ ಸ್ಥಾಪಿಸಿದರು. ಅದಕ್ಕೆ ಹಳದಿ-ಕೆಂಪು ಬಾವುಟ ರೂಪಿಸಿದರು.

ಕನ್ನಡ ಪಕ್ಷ ಮತ್ತು ಕನ್ನಡ ಚಳವಳಿ ಕೇಂದ್ರ ಮಂಡಳಿ ಪ್ರತ್ಯೇಕವಾಗಿಯೇ 1965ರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಐದಾರು ಸ್ಥಾನ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರೂ, ಆಗ ರಾಜಧಾನಿಯಲ್ಲಿ ಬಲಾಢ್ಯವಾಗಿದ್ದ ಡಿಎಂಕೆಗೆ ಸವಾಲೊಡ್ಡುವಲ್ಲಿ ಸಫಲವಾಗಲಿಲ್ಲ.

ರಾಮಮೂರ್ತಿ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದ ವಾಟಾಳ್, ಅ.ಸಂಜೀವಪ್ಪ ಮುಂತಾದವರು ಸೇರಿ ‘ಕನ್ನಡ ಚಳವಳಿ ಕೇಂದ್ರ ಮಂಡಳಿ’ ರಚಿಸಿಕೊಂಡು ಪ್ರತ್ಯೇಕವಾದರು. ನೃಪತುಂಗ ಮಂಟಪ ನಿರ್ಮಿಸಿ ತಿಂಗಳುಗಟ್ಟಲೆ ರಾಜ್ಯೋತ್ಸವಾಚರಣೆ ಪ್ರಾರಂಭವಾಯಿತು. ಕನ್ನಡ ಪಕ್ಷ ಮತ್ತು ಕನ್ನಡ ಚಳವಳಿ ಕೇಂದ್ರ ಮಂಡಳಿ ಪ್ರತ್ಯೇಕವಾಗಿಯೇ 1965ರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಐದಾರು ಸ್ಥಾನ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರೂ, ಆಗ ರಾಜಧಾನಿಯಲ್ಲಿ ಬಲಾಢ್ಯವಾಗಿದ್ದ ಡಿಎಂಕೆಗೆ ಸವಾಲೊಡ್ಡುವಲ್ಲಿ ಸಫಲವಾಗಲಿಲ್ಲ.

ಇಂತಹ ಭಿನ್ನಾಭಿಪ್ರಾಯಗಳ ನಡುವೆಯೂ ಕನ್ನಡ ಚಳವಳಿಗಾರರಿಂದ ಕೆಲವು ಯಶಸ್ವೀ ಹೋರಾಟಗಳು ನಡೆದವು:

• 1964ರಲ್ಲಿ ನಗರಸಭೆ ಮುಂದಿದ್ದ ಸೆನೊಟಾಫ್ ರಣಸ್ತಂಭ ಉರುಳಿಸುವ ಗೆರಿಲ್ಲಾ ಮಾದರಿ ಚಳವಳಿ. ಬ್ರಿಟಿಷ್ ರಣಸ್ತಂಭದ ಜಾಗದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಯಾಯಿತು.

• 1966ರಲ್ಲಿ ‘ತಾಳವಾಡಿ ಕರ್ನಾಟಕಕ್ಕೆ ಸೇರಬೇಕು’ ಎಂದು ತಾಳವಾಡಿಯಲ್ಲಿ ದೊಡ್ಡ ಹೋರಾಟ, ವಾಟಾಳ್ ಬಂಧನ-ಬಿಡುಗಡೆ.

• 1970ರಲ್ಲಿ ಶ್ರೀರಾಮಪುರ ರೈಲ್ವೆ ಸೇತುವೆ ಮೇಲೆ ರೈಲು ತಡೆ ಸತ್ಯಾಗ್ರಹ. ರೈಲಿಗೆ ಸಿಕ್ಕಿ ಮು. ಗೋವಿಂದರಾಜು ಬಲಿದಾನ.

• ಕನ್ನಡ ಚಿತ್ರರಂಗವನ್ನು ಬಾಧಿಸುತ್ತಿದ್ದ ಡಬ್ಬಿಂಗ್ ಹಾವಳಿ ವಿರುದ್ಧ ಪ್ರತಿಭಟನೆ. ಸರ್ಕಾರದಿಂದ ಡಬ್ಬಿಂಗ್ ನಿಷೇಧ.

• ಕನ್ನಡ ಚಿತ್ರರಂಗ ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಚಳವಳಿ. ಬೆಂಗಳೂರು-ಮೈಸೂರಿಗೆ ಕನ್ನಡ ಚಿತ್ರರಂಗ ಸ್ಥಳಾಂತರ. ಕನ್ನಡ ಚಿತ್ರಗಳಿಗೆ ಸಬ್ಸಿಡಿ ಘೋಷಣೆ.

• ಕನ್ನಡವನ್ನು ಪಂಚಾಯ್ತಿ ಮಟ್ಟದಿಂದ ವಿಧಾನಸೌಧದ ಮಟ್ಟದವರೆಗೆ ಆಡಳಿತ ಭಾಷೆಯಾಗಿ ಘೋಷಣೆ. ಹಲವು ಸುತ್ತೋಲೆಗಳು ಹೊರಟವು.

• ಕನ್ನಡಿಗರಿಗೆ ಉದ್ಯಮಗಳಲ್ಲಿ, ಕಛೇರಿಗಳಲ್ಲಿ ಉದ್ಯೋಗ ನೀಡಬೇಕೆಂಬ ಕೂಗಿಗೆ ಶಕ್ತಿ ಬಂತು.

• 1973ರಲ್ಲಿ ರಾಜ್ಯಕ್ಕೆ ‘ಕರ್ನಾಟಕ’ ನಾಮಕರಣ ಘೋಷಣೆಯಾಯಿತು.

ಈ ಬಗೆಯ ಹತ್ತಾರು ಕಾರ್ಯಗಳು ಕನ್ನಡ ಚಳವಳಿಯ ಫಲವಾಗಿ ಕಾರ್ಯರೂಪಕ್ಕೆ ಬಂದವು. ಕನ್ನಡಿಗರು ಕನ್ನಡ ಚಳವಳಿಯತ್ತ ಸಹಸ್ರಾರು ಸಂಖ್ಯೆಯಲ್ಲಿ ಆಕರ್ಷಿತರಾಗಿ ಬರುತ್ತಿದ್ದರು. ಆದರೆ, ಕನ್ನಡ ಚಳವಳಿಯಲ್ಲಿ ಇಣುಕಿದ ಒಡಕು, ಸ್ವಾರ್ಥದಾಟ, ಮೇಲುಕೀಳಿನಾಟ ಮತ್ತು ದುರಂತ ಪ್ರಕರಣಗಳು ಚಳವಳಿಯ ಶಕ್ತಿಯನ್ನು ಕುಗ್ಗಿಸುವಲ್ಲಿ ಸಹಕಾರಿಯಾದವು.

ಕನ್ನಡ ಚಳವಳಿಯಲ್ಲಿ ಭಲೇ ಜೋಡಿಯಂತಿದ್ದ ವಾಟಾಳ್-ಜಿನಾಕು-ಪ್ರಭಾಕರರೆಡ್ಡಿ ನಡುವೆ ಒಡಕುಂಟಾಗಿ ಪ್ರತ್ಯೇಕಗೊಂಡರು. ಕನ್ನಡ ಚಳವಳಿಗೆ ನಾಯಕತ್ವ ತಂದುಕೊಟ್ಟಿದ್ದ ಮ. ರಾಮಮೂರ್ತಿಯವರು 1967ರಲ್ಲಿ ತಮ್ಮ ಮಕ್ಕಳೊಡನೆ ದುರಂತ ಸಾವಿಗೀಡಾದರು. ಕನ್ನಡ ಚಳವಳಿಯಲ್ಲಿ ಉಗ್ರವಾದಿಯಾಗಿದ್ದ ಟೋಪಿ ಬಸವರಾಜ್‍ರನ್ನು ದುಷ್ಟರು ಹತ್ಯೆ ಮಾಡಿದರು. ಕನ್ನಡ ಚಳಚಳಿಗೆ ಶಕ್ತಿ ತುಂಬಿದ್ದ ಅ. ಸಂಜೀವಪ್ಪ ಚಳವಳಿ ಹಿಡಿದ ದುಷ್ಟ ಹಾದಿಯನ್ನು ಕಂಡು ಕಾವಿ ತೊಟ್ಟು 12 ವರ್ಷ ಮೌನವ್ರತ ಆಚರಿಸಿದರು. ಅದೊಂದು ದಿನ ಬೀದಿ ಹೆಣವಾಗಿ ಅಂತ್ಯ ಕಂಡರು. ಕನ್ನಡ ಚಳವಳಿಯಲ್ಲಿ ಯುವ ಶಕ್ತಿಯಾಗಿದ್ದ ಕೇಸರಿ ಗೋಪಿನಾಥ್ ಜೀವನ ಭಾರ ನಿಭಾಯಿಸಲಾಗದೆ ರೈಲಿಗೆ ತಲೆ ಕೊಟ್ಟು ಬಲಿಯಾದರು. ಕನ್ನಡ ಚಳವಳಿಯನ್ನು ಮುನ್ನಡೆಸಿದ್ದ ರಹಮಾನ್‍ಖಾನ್ ಅಪಘಾತದಲ್ಲಿ ಮರಣವನ್ನಪ್ಪಿದರು.

ವಾಟಾಳ್ ನಾಗರಾಜ್ ಅಗ್ರಗಣ್ಯರು. ನಾಲ್ಕೈದು ಬಾರಿ ಶಾಸಕರಾಗಿ ದುಂಡಗಾದರು. ಆದರೆ, ಬೇರೆಯವರನ್ನು ಬೆಳೆಸಲು ಮೀನಮೇಷವೆಣಿಸಿದರು. ಕನ್ನಡ ಚಳವಳಿ ನಾಯಕ ಜಿ. ನಾರಾಯಣಕುಮಾರ್ ಜನತಾ ಪರಿವಾರ ಸೇರಿ ಎರಡು ಬಾರಿ ಶಾಸಕರಾದರು.

ಏಕೀಕರಣದ ತರುವಾಯದಲ್ಲಿ ಗಡಿ ಜಿಲ್ಲೆಗಳಾದ ಕೋಲಾರ, ಬಳ್ಳಾರಿ, ರಾಯಚೂರು ಮುಂತಾದವು ತೆಲುಗುಮಯವಾಗಿದ್ದವು. ಕೆಜಿಎಫ್, ಬೆಂಗಳೂರಿನ ಅರ್ಧ ಭಾಗ, ಹಿರಿಯೂರು, ಭದ್ರಾವತಿಗಳಲ್ಲಿ ತಮಿಳು ಭಾಷೆಯ ಆರ್ಭಟ ಮೇರೆ ಮೀರಿತ್ತು. ಕಾರವಾರ, ಬೆಳಗಾವಿ, ಬಿಜಾಪುರ, ಬೀದರ್‍ಗಳಲ್ಲಿ ಮರಾಠಿಗಳ ಆರ್ಭಟ ಹೇಳತೀರದಾಗಿತ್ತು. ಅಂತಹ ಕ್ಲೇಷಮಯ ಸನ್ನಿವೇಶವನ್ನು ಕನ್ನಡ ಚಳವಳಿ ಕ್ರಮೇಣವಾದರೂ ಹತೋಟಿಗೆ ತರುವಲ್ಲಿ ಯಶಸ್ವಿಯಾಯಿತು. ಕನ್ನಡ ಚಿತ್ರಗಳನ್ನು ಪ್ರದರ್ಶಿಸದಿದ್ದ ಕೋಲಾರ, ಕೆಜಿಎಫ್, ಬೆಂಗಳೂರು ದಂಡು ಪ್ರದೇಶ, ಮಂಗಳೂರು, ಬಳ್ಳಾರಿ, ಕಲಬುರಗಿ, ಬಿಜಾಪುರ, ಬೆಳಗಾವಿಯಲ್ಲಿ ದಶಕಗಳ ಕಾಲದ ನಂತರ ಕನ್ನಡ ಚಿತ್ರ ಪ್ರದರ್ಶನ ಆರಂಭಗೊಂಡಿತು.

ಕನ್ನಡ ಚಳವಳಿಯಿಂದಾಗಿ ಕೆಲವಾರು ನಾಯಕರು ಖ್ಯಾತಿಯ ಜೊತೆಗೆ ಲಾಭವನ್ನೂ ಮಾಡಿಕೊಂಡರು. ಅದರಲ್ಲಿ ವಾಟಾಳ್ ನಾಗರಾಜ್ ಅಗ್ರಗಣ್ಯರು. ನಾಲ್ಕೈದು ಬಾರಿ ಶಾಸಕರಾಗಿ ದುಂಡಗಾದರು. ಆದರೆ, ಬೇರೆಯವರನ್ನು ಬೆಳೆಸಲು ಮೀನಮೇಷವೆಣಿಸಿದರು. ಕನ್ನಡ ಚಳವಳಿ ನಾಯಕ ಜಿ. ನಾರಾಯಣಕುಮಾರ್ ಜನತಾ ಪರಿವಾರ ಸೇರಿ ಎರಡು ಬಾರಿ ಶಾಸಕರಾದರು. ಹುಟ್ಟಿನಿಂದಲೇ ಸಿರಿವಂತರಾಗಿದ್ದ ಕೆ. ಪ್ರಭಾಕರರೆಡ್ಡಿ ವಾಟಾಳ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕನ್ನಡ ಚಳವಳಿಯಿಂದಲೇ ಶಾಸಕರಾದರು. ಕನ್ನಡ ಚಳವಳಿಯಿಂದಲೇ ಬೆಳೆದ ಕೆ. ಲಕ್ಕಣ್ಣನವರು ಕಾಂಗ್ರೆಸ್ ಸೇರಿ ಒಮ್ಮೆ ಶಾಸಕರಾದರು.

ಕನ್ನಡ ಚಳವಳಿ 1980ರ ದಶಕದಲ್ಲಿ ದೊಡ್ಡ ಶಕ್ತಿಯಾಗಿತ್ತು. ಗೋಕಾಕ್ ಚಳವಳಿ, ಕಾವೇರಿ ಚಳವಳಿಗಳಿಂದ ಚಳವಳಿಗೆ ಶಕ್ತಿ ಬಂದಂತಾಗಿತ್ತು. ಆದರೆ, ಅದನ್ನು ರಾಜಕೀಯ ಶಕ್ತಿಯಾಗಿ ಸೂಕ್ತವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಸರಿಯಾಗಿ ನಡೆಯದೇ ಹೋದವು. ಕನ್ನಡಿಗರನ್ನು ಒಗ್ಗೂಡಿಸಬೇಕಾದ ಕನ್ನಡ ಚಳವಳಿಯಲ್ಲಿ ಉದ್ದಕ್ಕೂ (1960ರಿಂದ 2010ರವರೆಗೆ ಅರ್ಧ ಶತಮಾನ ಕಾಲ) ಒಡಕು, ವೈಮನಸ್ಸು, ಪರಸ್ಪರ ಕಚ್ಚಾಟ, ಮೇಲು-ಕೀಳಾಟ, ಸ್ವಾರ್ಥಪರದಾಟಗಳು ನಡೆದವೇ ಹೊರತು ನಿಸ್ವಾರ್ಥ ದೃಷ್ಟಿಯ ಚಳವಳಿ ತೀರಾ ಅಪರೂಪವಾಗಿದ್ದು ದೊಡ್ಡ ದುರಂತ.

ನಿರಂತರವಾಗಿ ಚಳವಳಿ ಸಂಘಟನೆ ಉಳಿಸಿಕೊಂಡು ಬಂದ ರಾಮಣ್ಣ ಕೋಡಿಹೊಸಳ್ಳಿ ದೊಡ್ಡ ಸಾಧನೆಗೆ ಅಡಿಯಿಡಲಾಗದೆ ಉಳಿದರು. ಹೊಸದೊಂದು ಶಕ್ತಿಯ ಭರವಸೆ ಮೂಡಿಸಿದ ಟಿ.ಎ.ನಾರಾಯಣಗೌಡ ಸಂಘಟನೆಗೆ ದೊಡ್ಡ ಶಕ್ತಿ ತಂದುಕೊಟ್ಟಂತೆಯೇ ವೈಯಕ್ತಿಕ ಸಂಪತ್ ವೃದ್ಧಿಯನ್ನೂ ಮಾಡಿಕೊಂಡು ಚಳವಳಿ ಬೇಕೋ ಬೇಡವೋ ಎಂಬಂತೆ ಉಳಿದಿರುವುದು ವಿಷಾದಕರ.

ಮೊದಲ ತಲೆಮಾರಿನಲ್ಲಿ ಅನಕೃ, ಮ.ರಾಮಮೂರ್ತಿ, ನಂತರದಲ್ಲಿ ವಾಟಾಳ್, ಜಿನಾಕು, ಪ್ರಭಾಕರರೆಡ್ಡಿ, ಆನಂತರದಲ್ಲಿ ಎಂ.ಚಿದಾನಂದಮೂರ್ತಿ, ಅಶೋಕ್, ಗೋಕಾಕ್ ಚಳವಳಿ ನಂತರದಲ್ಲಿ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಹೆಸರಲ್ಲಿ ಸಾ.ರಾ.ಗೋವಿಂದು, ಟಿ.ವೆಂಕಟೇಶ್ ಅವರೆಲ್ಲಾ ಸಕ್ರಿಯವಾಗಿ ನಡೆಸಿದರೂ ದಡ ತಲುಪಿಸುವಲ್ಲಿ ವಿಫಲರಾದರು. ಅಲ್ಲಿಂದ ಮುಂದೆ ಆರ್‍ಎಸ್‍ಎನ್ ಗೌಡ ಚಳವಳಿಗೆ ಉಗ್ರ ಸ್ವರೂಪ ಕೊಡಲು ಹೋಗಿ ಬೇಗ ಎಡವಿಬಿಟ್ಟರು. ಇನ್ನು ನಿರಂತರವಾಗಿ ಚಳವಳಿ ಸಂಘಟನೆ ಉಳಿಸಿಕೊಂಡು ಬಂದ ರಾಮಣ್ಣ ಕೋಡಿಹೊಸಳ್ಳಿ ದೊಡ್ಡ ಸಾಧನೆಗೆ ಅಡಿಯಿಡಲಾಗದೆ ಉಳಿದರು. ಹೊಸದೊಂದು ಶಕ್ತಿಯ ಭರವಸೆ ಮೂಡಿಸಿದ ಟಿ.ಎ.ನಾರಾಯಣಗೌಡ ಸಂಘಟನೆಗೆ ದೊಡ್ಡ ಶಕ್ತಿ ತಂದುಕೊಟ್ಟಂತೆಯೇ ವೈಯಕ್ತಿಕ ಸಂಪತ್ ವೃದ್ಧಿಯನ್ನೂ ಮಾಡಿಕೊಂಡು ಚಳವಳಿ ಬೇಕೋ ಬೇಡವೋ ಎಂಬಂತೆ ಉಳಿದಿರುವುದು ವಿಷಾದಕರ. ಅವರಿಂದ ದೂರವಾದ ಹೆಚ್.ಶಿವರಾಮೇಗೌಡ, ಪ್ರವೀಣ್‍ಕುಮಾರ್ ಶೆಟ್ಟಿ ಕತೆಯೂ ಭಿನ್ನವಾಗೇನೂ ಇಲ್ಲ.

ಈಗಂತೂ ಕನ್ನಡದ ಪಾಲಿಗೆ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ. ಅವುಗಳ ಮೂಲಕ ರಾತ್ರೋರಾತ್ರಿ ರಾಜ್ಯ ನಾಯಕ ಪಟ್ಟಕ್ಕೇರಿದವರೂ ಇದ್ದಾರೆ. ಕನ್ನಡಕ್ಕೆ ಕುತ್ತು ಬಂದಾಗ, ಕಾವೇರಿ, ಕೃಷ್ಣೆ, ಮಹದಾಯಿ ಮುಂತಾದ ನೆಲ-ಜಲ-ಗಡಿ ವಿಚಾರಗಳಿಗೆ ಕುತ್ತು ಎದುರಾದಲ್ಲಿ ಬೀದಿಗಿಳಿದು ಹೋರಾಡಲು ಸಜ್ಜಾಗಿದ್ದೇವೆಂದು ಘೋಷಣೆ ಕೂಗಲು ಹಲವರಿದ್ದಾರೆ. ಆದರೆ, ಕನ್ನಡ ಚಳವಳಿ ಕೆಲವರು ಏಕಾಏಕಿ ಕೋಟ್ಯಾಧೀಶರಾಗಲು ನೆರವಾಗಿದ್ದು ಹೇಗೆಂಬ ಕುತೂಹಲ ಅನೇಕರಲ್ಲಿ ಈಗಲೂ ಉಳಿದುಕೊಂಡು ಅಂತಹ ಅಪೂರ್ವ ಅವಕಾಶ ತನ್ನ ಪಾಲಿಗೂ ದಕ್ಕೀತೆ ಎಂಬ ಆಸೆಬುರುಕುತನ ತುಂಬಿಕೊಂಡಿರುವವರೇ ಹೆಚ್ಚಾಗಿರುವುದರಿಂದ ಕೆಚ್ಚು-ರೊಚ್ಚು-ಆಕ್ರೋಶಗಳು ತಾತ್ಕಾಲಿಕವಾಗಿ ಭುಗಿಲೆದ್ದು ತಣ್ಣಗಾಗುವ ಲಕ್ಷಣಗಳೇ ಅಧಿಕವಾಗಿವೆ.

1960ರ ದಶಕದಲ್ಲಿ ಕನ್ನಡ ಮತ್ತು ಕನ್ನಡಿಗರ ಪಾಲಿಗೆ ಜೋರು ಧ್ವನಿಯೆತ್ತುವವರು ಯಾರಾದರೂ ಬಂದಾರೆಯೇ ಎಂದು ಜನರು ನಿರೀಕ್ಷಿಸುತ್ತಿದ್ದರು. ಆದರೆ, ಈ 60 ವರ್ಷಗಳ ದೀರ್ಘಾವಧಿಯ ಕನ್ನಡ ಚಳವಳಿಯನ್ನು ಕಂಡಿರುವ ಜನ, ಯಾಕಾದರೂ ಕನ್ನಡ ಚಳವಳಿ ನಡೆಸುವವರು ದಿನವೂ ಅಣಬೆಗಳಂತೆ ಹುಟ್ಟುಕೊಳ್ಳುತ್ತಿದ್ದಾರೋ ಎಂಬ ಆತಂಕದೊಡನೆ ಕಾಲ ದೂಡುತ್ತಿದ್ದಾರೆಂದರೆ ಚಳವಳಿಯು ಹಿಡಿದ ವಿಚಿತ್ರ ಹಾದಿ ಅರ್ಥವಾಗುತ್ತದೆ.

*ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ; ಕನ್ನಡಪರ ಹೋರಾಟಗಾರರು. 

Leave a Reply

Your email address will not be published.