ಕನ್ನಡ ಚಿತ್ರರಂಗದ ಕೊನೆಯ ಸೂಪರ್ ಸ್ಟಾರ್

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ
ನನ್ನ ತಮ್ಮಾ… ಮಂಕು ತಿಮ್ಮಾ
ತೂಕಡಿಸಿ ತೂಕಡಿಸಿ ಬಿದ್ದರೋ
ನನ್ನಜ್ಜ ನಿನ್ನಜ್ಜ ಮುತ್ತಜ್ಜ

ಎಂದು ಕನ್ನಡಿಗರನ್ನು ತನ್ನ ಶೈಲಿಯಲ್ಲಿಯೇ ಬಡಿದೇಳಿಸಿದ್ದ ಅಂಬರೀಶ್ ಇದೇ ನವೆಂಬರ್ 24ರಂದು ಚಿರನಿದ್ರೆಗೆ ಜಾರಿದ್ದಾರೆ. ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ತನ್ನ ಅಪಾರ ಅಭಿಮಾನಿಗಳ ಬಳಗವನ್ನು ತೊರೆದು “ಏ ಹೋಗ್ರೊಲೋ ಹೋಗ್ರೋ..” ಎಂದು ಹೇಳುತ್ತಾ ತಾವೇ ಜೀವನದ ಬೆಳ್ಳಿಪರದೆಯಿಂದ ಸರಿದಿದ್ದಾರೆ.

ನಾಗರಹಾವಿನ ಜಲೀಲನ ಪಾತ್ರದಿಂದ ಹಿಡಿದು ಇತ್ತೀಚೆಗಿನ ‘ಅಂಬಿ ನಿಂಗೆ ವಯಸ್ಸಾಯ್ತೋ’ವರೆಗೆ ಅಂಬರೀಶ್ ನೂರಾರು ಪಾತ್ರಗಳಲ್ಲಿ ಪ್ರೇಕ್ಷಕರೊಡನೆ ಒಂದು ಬಗೆಯ ಆತ್ಮೀಯತೆಯನ್ನು ಗಳಿಸಿದ್ದರು. ಪಾತ್ರಗಳಲ್ಲಿ ‘ರಾ ಸೆನ್ಸಿಟಿವಿಟಿ’ ತುಂಬುವ ಜೊತೆಗೆ ತಮ್ಮ ‘ಕ್ಯಾಶುಯಲಿ ಅಪೀಲಿಂಗ್’ ಮಾತು, ನಟನೆ, ನೃತ್ಯ ಹಾಗೂ ಸಾಹಸಗಳಲ್ಲಿ ಪ್ರೇಕ್ಷಕರ ಮನ ಸೂರೆಗೈದಿದ್ದರು. ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯ ಅಂಬರೀಶ್, ಪಿಟೀಲು ಚೌಡಯ್ಯನವರ ಮಗಳ ಮಗನಾಗಿದ್ದುದು ಅವರ ಕಲಾಸ್ವಂತಿಕೆಗೆ ಗರಿಮೆ ತಂದಿತ್ತು. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿನ ಕನ್ನಡಿಗರ ಸಿಟ್ಟು, ಅಸಹನೆ, ಬಂಡಾಯ ಹಾಗೂ ಹೋರಾಟಗಳಿಗೆ ತಮ್ಮ ಚಿತ್ರಗಳಲ್ಲಿ ಪ್ರಾತಿನಿಧಿಕ ‘ರೆಬೆಲ್’ ಮೂರ್ತರೂಪ ನೀಡಿದ್ದ ಅಂಬರೀಶ್ ಅವರನ್ನು ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವು ನಿರ್ದೇಶಕರು ರೂಪಿಸಿದ್ದರು. ಕಳೆದೆರೆಡು ದಶಕಗಳಲ್ಲಿ ಚಿತ್ರಂಗದ ಹಿರಿಯಣ್ಣನಾಗಿ ಕಿರಿಯರಿಗೆ ಕಿವಿಹಿಂಡಿ ಮಾರ್ಗದರ್ಶನ ಮಾಡುತ್ತಿದ್ದ ಅಂಬರೀಶ್‍ರವರು ರಾಜಕುಮಾರ್ ಮತ್ತು ವಿಷ್ಣುವರ್ಧನ್ ನಂತರದ ಕನ್ನಡ ಚಿತ್ರರಂಗದ ಕಡೆಯ ‘ಸೂಪರ್‍ಸ್ಟಾರ್’ ಆಗಿದ್ದರು.

ರಾಜಕೀಯದಲ್ಲಿ ಎಂಪಿ, ಕೇಂದ್ರಮಂತ್ರಿ, ಎಂಎಲ್‍ಎ ಹಾಗೂ ರಾಜ್ಯದ ಮಂತ್ರಿಯೆಲ್ಲಾ ಆಗಿದ್ದ ಅಂಬರೀಶ್‍ರವರಿಗೆ ರಾಜಕೀಯ ಅಸಹಜ ಆಕರ್ಷಣೆ. ಎಂದೂ ಯಾರ ಹಂಗಿನಲ್ಲಿಯೂ ಇರಬಯಸದೆ ‘ಬೇಕಿದ್ರೆ ಇರು ಬ್ಯಾಡ್‍ದಿದ್ರೆ ಹೋಗ್’ ಎಂದು ಹೇಳುವ ಜಾಯಮಾನದವರಾಗಿದ್ದರು. ಇದನ್ನೂ ಮಾಡಿಯೇಬಿಡಬೇಕು ಅನ್ನುವÀ ಮಟ್ಟಿಗಷ್ಟೇ ರಾಜಕೀಯದಲ್ಲಿದ್ದ ಅಂಬರೀಶ್ ಸಾಧಿಸಿದ್ದು ಹೆಚ್ಚೇನಿಲ್ಲ. ಆದರೆ ತಮ್ಮ ವೃತ್ತಿಜೀವನದಲ್ಲಿ ಅವರು ಗಳಿಸಿದ ಜೀವದ ಗೆಳೆಯರಾದ ವಿಷ್ಣುವರ್ಧನ್, ರಾಜೇಂದ್ರಸಿಂಗ್ ಬಾಬು, ಮೋಹನ್ ಬಾಬು, ರಜನಿಕಾಂತ್, ಶತ್ರುಘ್ನ ಸಿನ್ಹಾ ಕಡೆಯವರೆಗೂ ಅವರ ನೆರಳಾಗಿದ್ದರು. ಸ್ನೇಹಕ್ಕೆ ಜೀವ ಕೊಡಲೂ ಸಿದ್ಧರಿದ್ದರೂ ದ್ವೇಷ ಮಾಡುವಷ್ಟು ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎಷ್ಟು ಉದಾರಿಯೋ ಅಷ್ಟೇ ಉಡಾಫೆ, ಎಷ್ಟು ಮಾತಿನಲ್ಲಿ ಚುರುಕೋ ಅಷ್ಟೇ ಸೋಮಾರಿ, ಎಷ್ಟು ವಿಶ್ವಾಸಿಯೋ ಅಷ್ಟೇ ತುಂಟ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಮಂಡ್ಯ-ಮೈಸೂರಿನ ಅಂತರಾತ್ಮ. ಟ್ರೂ ರೆಬೆಲ್ ಅಂಡ್ ಸ್ಟಾರ್.

ಮೋಹಪಟ್ಟು ಮದುವೆಯಾದ ಚಲನಚಿತ್ರ ನಾಯಕನೊಬ್ಬನನ್ನು ನಿಜಜೀವನದ ನಾಯಕನನ್ನಾಗಿ ಮಾಡಿದ ಹಿರಿಮೆ ಅಂಬರೀಶ್ ಮಡದಿ ಸುಮಲತಾ ಅವರದ್ದು. ಪತ್ನಿ, ಪುತ್ರ ಅಭಿಷೇಕ್ ಗೌಡರ ದುಃಖದಲ್ಲಿ ಕನ್ನಡನಾಡೇ ಭಾಗಿ.

Leave a Reply

Your email address will not be published.