ಕನ್ನಡ ಚಿತ್ರರಂಗದ ದುಃಸ್ಥಿತಿ ಯಾರನ್ನು ದೂರುವುದು?

ವರ್ಷಕ್ಕೆ 250 ರಿಂದ 300 ಕನ್ನಡ ಚಿತ್ರಗಳು ರಿಲೀಸ್ ಆಗುತ್ತವೆ. ಇದರಲ್ಲಿ 50 ರಿಂದ 60 ಚಿತ್ರಗಳು ಬೇರೆಬೇರೆ ಕಾರಣಕ್ಕೆ ಬಿಡುಗಡೆ ಆಗೋದೇ ಇಲ್ಲ. ಪರವಾಗಿಲ್ಲ ಅಂತ ಹೇಳುವ ಚಿತ್ರಗಳ ಸಂಖ್ಯೆ 10 ರಿಂದ 20 ಮಾತ್ರ. ಇದರಲ್ಲೂ ಇಣುಕಿ ನೋಡಿದಾಗ 10 ರಿಂದ 15 ಸಿನಿಮಾ ಕತೆಗಳು ಅನ್ಯಭಾಷೆಯವಾಗಿರುತ್ತವೆ. ಶೇ.3 ರಷ್ಟು ಚಿತ್ರಗಳು ಮಾತ್ರ ಪಾಸಾಗುತ್ತವೆ. ಬಾಕಿ ಚಿತ್ರಗಳೆಲ್ಲಾ ತೋಪು.

ಒಂದು ಕಾಲಕ್ಕೆ ಇಡೀ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ಹೆಸರುವಾಸಿ. ಇಲ್ಲಿ ರಿಲೀಸ್ ಆದ ಚಿತ್ರಗಳನ್ನು ನಕಲು ಮಾಡಲು ಅತ್ತ ಆಂಧ್ರ ಇತ್ತ ತೆಲುಗು ಅಷ್ಟೇಕೆ ಹಿಂದಿ ನಿರ್ದೇಶಕರೂ ತುದಿಗಾಲಲ್ಲಿ ಕಾಯುತ್ತಿದ್ದರು. ಪುಟ್ಟಣ್ಣ ಕಣಗಾಲರ ಹ್ಯೂಮರಸ್ ಜಾದೂ ಸನ್ನಿವೇಶ, ಡಾ.ರಾಜ್ ಅವರ ಕಾದಂಬರಿ ಆಧಾರಿತ ಪಾತ್ರದ ವೈವಿಧ್ಯ, ಈಶ್ವರೀ ಬ್ಯಾನರ್ ಅಡಿಯ ಅದ್ಧೂರಿ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಮುಗಿಬೀಳುತ್ತಿದ್ದರು.

ಇಂಡಿಯನ್ ಮೆಲೋಡ್ರಾಮಾ ಸ್ಯಾಂಡಲ್‍ವುಡ್ನಲ್ಲೇ ತಯಾರಾಗುತ್ತಿದೆ ಎಂಬ ಹೊಗಳಿಕೆಗೂ ಕನ್ನಡ ಚಿತ್ರರಂಗ ಪಾತ್ರವಾಗಿತ್ತು. ಇಷ್ಟಾದ್ರು ವರ್ಷಕ್ಕೆ 10 ರಿಂದ 30 ಚಿತ್ರಗಳು ಮಾತ್ರ ರಿಲೀಸ್ ಆಗುತ್ತಿದ್ದವು. ಅವೆಲ್ಲಾ ಒಂದಕ್ಕಿಂತ ಒಂದು ಪುಟವಿಟ್ಟ ಚಿನ್ನ! ವಂಶವೃಕ್ಷ, ಘಟಶ್ರಾದ್ಧ, ಶರಪಂಜರ, ಬೆಳ್ಳಿಮೋಡ, ರಂಗನಾಯಕಿ.. ಇಂಥ ಟ್ರೆಮಂಡಸ್ ಚಿತ್ರಗಳ ಪಟ್ಟಿಯನ್ನು ನೆನೆದಾಗ ಇಂದಿಗೂ ಕನ್ನಡಿಗರ ಮೈಯಲ್ಲಿ ಅವ್ಯಕ್ತ ಪುಳಕ!

ಹಳೆಯ ತಲೆಮಾರು ಬಳಿಕ ಬಂದ ಅಯ್ಯರ್, ಗಿರೀಶ್ ಕಾರ್ನಾಡ್, ಕಾರಂತ, ಕಾಸರವಳ್ಳಿ ಅವರ ಕಲಾತ್ಮಕ ಚಿತ್ರಗಳು ರಿಲೀಸ್ ಆದ್ರೂ ಇಡೀ ದೇಶವೇ ಕರ್ನಾಟಕದತ್ತ ತಿರುತಿರುಗಿ ನೋಡುತ್ತಿತ್ತು. ಬರ ಬರುತ್ತಾ ಕಮರ್ಷಿಯಲ್ ಕಮ್ ಸಕ್ಸಸ್ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಯಶಸ್ವಿಯಾಗಿದ್ದ ನಾಗಾಭರಣ, ಸುನಿಲ್‍ಕುಮಾರ್ ದೇಶಾಯಿ, ರಾಜೇಂದ್ರಬಾಬು, ಸೂರಿ, ಮಹೇಂದ್ರ, ಉಪೇಂದ್ರ, ನಾಗತಿಹಳ್ಳಿ, ಪ್ರೇಮ್ ಮುಂತಾದ ಪ್ರತಿಭಾವಂತರಿಂದಾಗಿ ಸ್ಯಾಂಡಲ್‍ವುಡ್‍ಗೆ ಒಂದು ವಿಶಿಷ್ಟ ಸ್ಥಾನ ಲಭಿಸಿತು.

ಕೆಲವು ನಿರ್ದೇಶಕರು ಇಂದಿನ ಆಂಡ್ರಾಯಿಡ್ ತಾಂತ್ರಿಕತೆಯನ್ನು, ಬದಲಾಗುತ್ತಿರುವ ಜನರೇಷನ್ ಮೆಥಡಾಲಜಿಯನ್ನು ಅರ್ಥ ಮಾಡಿಕೊಳ್ಳದೆ, ಮೊಬೈಲ್‍ನ ಇಂಟರ್‍ನೆಟ್ ಸ್ಪೀಡಿಗೆ ತಕ್ಕಂತೆ ಅಪ್‍ಡೇಟ್ ಆಗದೆ ಗಾಂಧಿನಗರದ ಗಲ್ಲಿಗಳಲ್ಲಿ ಕಳೆದು ಹೋಗಿದ್ದಾರೆ. ಇತ್ತೀಚೆಗೆ ತುಂಬಾ ನಿರೀಕ್ಷೆ ಹುಟ್ಟಿಸಿದ್ದ ‘ಸಿಕ್ಸರ್’, ‘ಕೃಷ್ಣ ಲೀಲಾ’, ‘ಬಚನ್’, ‘ಮೊಗ್ಗಿನ ಮನಸು’ ಚಿತ್ರಗಳ ನಿರ್ದೇಶಕ ಶಶಾಂಕ್ ‘ತಾಯಿಗೆ ತಕ್ಕ ಮಗ’ ಮೂಲಕ ಮತ್ತೆ ಅನುಮಾನ ಹುಟ್ಟಿಸಿದ್ದಾರೆ. ‘ಮೈನಾ’, ‘ಸಂಜು ವೆಡ್ಸ್ ಗೀತಾ’ದಿಂದ ಸದ್ದು ಮಾಡಿದ್ದ ನಾಗಶೇಖರ್ ಎದ್ದೇಳಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

ಇದು ಚಿತ್ರವೇ ಅಲ್ಲ ಅಂತ ತಪ್ಪುಗಳ ಸರಮಾಲೆಯನ್ನು ಮುಂದಿಡುವವರೂ ಇದ್ದಾರೆ. ಕೋಟಿಕೋಟಿ ಗಳಿಸಿ, ಹಲವು ಭಾಷೆಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಹಂಡ್ರೆಡ್ ಡೇಸ್ ಓಡಿದ್ದು ಮಾತ್ರ ಸತ್ಯ!

ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದು ಮತ್ತೊಮ್ಮೆ ಇಡೀ ಭಾರತದ ಕಮರ್ಷಿಯಲ್ ಚಿತ್ರಪ್ರೇಮಿಗಳನ್ನು ಸೆಳೆದ ಕೆಜಿಎಫ್ ಚಿತ್ರ ಕನ್ನಡಿಗರ ಅಸ್ಮಿತೆ ಎನ್ನುವವರೂ ಇದ್ದಾರೆ. ಇದು ಚಿತ್ರವೇ ಅಲ್ಲ ಅಂತ ತಪ್ಪುಗಳ ಸರಮಾಲೆಯನ್ನು ಮುಂದಿಡುವವರೂ ಇದ್ದಾರೆ. ಕೋಟಿಕೋಟಿ ಗಳಿಸಿ, ಹಲವು ಭಾಷೆಗಳಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಹಂಡ್ರೆಡ್ ಡೇಸ್ ಓಡಿದ್ದು ಮಾತ್ರ ಸತ್ಯ!

ಈ ಕ್ರೆಡಿಟ್ ‘ಕೆಜಿಎಫ್’ನ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲ್ಲುತ್ತದೆ. ಅದೇ ರೀತಿ ಕಮರ್ಷಿಯಲ್‍ನ ಎಬಿಸಿ ಸೆಂಟರ್ ಗಳಲ್ಲಿ ಮಿಂಚಿದ್ದ ‘ರ್ಯಾಂಬೋ’ ಚಿತ್ರದ ನಿರ್ದೇಶಕ ಅನಿಲ್‍ಕುಮಾರ್, ‘ರಾಮಾಚಾರಿ’ ಹಾಗೂ ‘ರಾಜಕುಮಾರ’ ಚಿತ್ರಗಳ ಮೂಲಕ ಯಶ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ರಸದೌತಣ ನೀಡಿದ್ದ ಸಂತೋಷ್ ಆನಂದ್‍ರಾಮ್ ಅಂತಹ ಪ್ರತಿಭಾವಂತರೂ ಇದ್ದಾರೆ.

ಇನ್ನೂ ಕೆಲವರು ಬೇರೆ ರೀತಿಯ ಟ್ಯಾಲೆಂಟ್ ನಿರ್ದೇಶಕರೂ, ನಿರ್ಮಾಪಕರೂ ಇದ್ದಾರೆ. ಇವರು ಸರ್ಕಾರದ ಸಬ್ಸಿಡಿಯನ್ನು ಗುರಿ ಯಾಗಿಟ್ಟುಕೊಂಡು ಬಾಣ ಬಿಡುವುದರಲ್ಲಿ ಏಕಲವ್ಯರು, ಬಿಲ್ವಿದ್ಯಾ ಪ್ರವೀಣರು! ಅಂದರೆ 15 ಲಕ್ಷದ ಸಬ್ಸಿಡಿಗಾಗಿ ಕತೆಗಾರರಿಗೆ, ಕಲಾವಿದ ರಿಗೆ, ಇತರೆ ಕೆಲಸಗಾರರಿಗೆ ಚಿಪ್ಪು ಕೊಟ್ಟು, ಗಲಾಟೆ ಮಾಡುವವರಿಗೆ ಸೇರಿ 5 ಲಕ್ಷ ರೂ ವೆಚ್ಚ ಮಾಡಿ ಒಂದು ಅವಾರ್ಡ್ ಚಿತ್ರ ಮಾಡುತ್ತಾರೆ. ಈ ಚಿತ್ರಗಳಿಗೆ ಥಿಯೇಟರ್ ಸಿಗಲ್ಲ, ಜನ ನೋಡಲ್ಲ. ಆದರೆ ಅವಾರ್ಡ್ ಗ್ಯಾರೆಂಟಿ. ಆ ಮೂಲಕ ಇಂಥವರು ಕನ್ನಡದ ಅಸ್ತಿತ್ವಕ್ಕೆ ಸಾಕ್ಷಿ ಪ್ರಜ್ಞೆಯಂತಿರುತ್ತಾರೆ.

ಭಾರತದ ಮೊದಲ ಶಿಕ್ಷಕಿಯ ಜೀವನಗಾಥೆ ಸಾರುವ ವಿಶಾಲ್ ನಿರ್ದೇಶನದ ‘ಸಾವಿತ್ರಿಬಾಯಿ ಬಾಫುಲೆ’, ಕಾರಂತರ ಕಾದಂಬರಿ ಆಧಾರಿತ, ಪಿ.ಶೇಷಾದ್ರಿ ಅವರ ‘ಮೂಕಜ್ಜಿಯ ಕನಸುಗಳು’ ಸೇರಿದಂತೆ ಹಲವಾರು ಸಿನಿಮಾಗಳು ಕನ್ನಡದ ನೇಟಿವಿಟಿಯನ್ನು, ಕನ್ನಡಿಗರ ಗೌರವವನ್ನು ಕಾಪಾಡಿದ್ದನ್ನು ದಾಖಲಿಸಲೇ ಬೇಕು.

ಭಾಷಾ ಸಮಸ್ಯೆ ಮುಂದಿಟ್ಟುಕೊಂಡು ಗಮನ ಸೆಳೆದ ಶಿವಾನಂದ್ ಅವರ ‘ಹಲ್ಮಿಡಿ’, ರಿಷಭ್ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥನಿಕ ಶಾಲೆ ಕಾಸರಗೋಡು’, ಮಂಜು ಪಾಂಡವಪುರ ಅವರ ‘ಸ್ಮಶಾನ ಮೌನ’, ಲೈಂಗಿಕ ತೃಷೆ, ನಂಬಿಕೆಗಳ ಸಂಘರ್ಷ ಹುಟ್ಟಿಸಿದ ಮನಸೂರ್ ಅವರ ‘ನಾತಿ ಚರಾಮಿ’, ಭಾರತದ ಮೊದಲ ಶಿಕ್ಷಕಿಯ ಜೀವನಗಾಥೆ ಸಾರುವ ವಿಶಾಲ್ ನಿರ್ದೇಶನದ ‘ಸಾವಿತ್ರಿಬಾಯಿ ಬಾಫುಲೆ’, ಕಾರಂತರ ಕಾದಂಬರಿ ಆಧಾರಿತ, ಪಿ.ಶೇಷಾದ್ರಿ ಅವರ ‘ಮೂಕಜ್ಜಿಯ ಕನಸುಗಳು’ ಸೇರಿದಂತೆ ಹಲವಾರು ಸಿನಿಮಾಗಳು ಕನ್ನಡದ ನೇಟಿವಿಟಿಯನ್ನು, ಕನ್ನಡಿಗರ ಗೌರವವನ್ನು ಕಾಪಾಡಿದ್ದನ್ನು ದಾಖಲಿಸಲೇ ಬೇಕು. ಇದರ ಹೊರತಾಗಿ ಕನ್ನಡ ಚಿತ್ರಗಳ ಅವನತಿಯನ್ನು, ಹೆಡ್ಡರ ನಡುವೆ ಚಿತ್ರರಂಗ  ಸಾಗುತ್ತಿರುವ ವೇಗವನ್ನು ಕಂಡವರಿಗೆ ಮಾಲೆ ಗಟ್ಟುತ್ತದೆ ಬೆವರು! `

ಯಾಕಾದ್ರೂ ಇಂಥಾ ದರಿದ್ರ ಸಿನಿಮಾ ನೋಡಲು ಬಂದೆವೋ! ಯಾವ ಕಾರಣಕ್ಕೆ ಇಂಥ ಸಿನಿಮಾ ಮಾಡ್ತಾರೆ.. ಅವರಿಗೆ ತಲೆ ಇಲ್ಲವೇ, ಕಾಮನ್‍ಸೆನ್ಸ್ ಬೇಡ್ವೇ? ಒಂದು ಕತೆ ಇಲ್ಲ, ಕಚಡಾ ಡೈಲಾಗ್, ವರ್ಸ್ಟ್ ಹಾಡು, ಮೈ ಮನಸು ಕೊಲ್ಲುವ ಮ್ಯೂಸಿಕ್, ಸಾಲದ್ದಕ್ಕೆ ಹೀರೋಯಿನ್ ಬಟ್ಟೆಗಳನ್ನೇ ಹರಾಜು ಹಾಕಿರ್ತಾರೆ. ಒಂದು ಸೀನಿಗೂ, ಸಿನಿಮಾಕ್ಕೂ ಲಿಂಕೇ ಇರಲ್ಲ.. ಅಬ್ಬಬ್ಬಾ, ಝಂಡೂ ಬಾಮ್ ಕೊಡ್ರಿ,’ ಎನ್ನುವುದು ಇಂದಿನ ಪ್ರೇಕ್ಷಕರ ವರಾತ.

ಕಳಪೆ ಚಿತ್ರಗಳಿಗೆ ಕಾರಣಗಳೇನು?

ಪ್ರಮುಖವಾಗಿ ಯಾರು ಯಾವ ಕೆಲಸ ಮಾಡಬೇಕೋ ಅದನ್ನು ಮಾಡದೆ, ಬೇರೆಲ್ಲಾ ವಿಭಾಗದಲ್ಲಿ ಒಬ್ಬರೇ ಕೈ ಆಡಿಸಲು ಹೋಗುವುದು; ಇಡೀ ಚಿತ್ರದ ಕಪ್ತಾನ ಆಗಿರಬೇಕಾದ ನಿರ್ದೇಶಕನ ತಲೆ ಖಾಲಿಯಾಗಿರುವುದು. ಒಂದಿಬ್ಬರು ಯಡವಟ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್ ನಿರ್ದೇಶಕರಾಗಿ ಏನೂ ಕಲಿಯದೆ ನೇರವಾಗಿ ಗಾಂಧಿನಗರಕ್ಕೆ ನಿರ್ದೇಶಕರಾಗಿ ಬಂದು ಪ್ರತಿಷ್ಠಾಪನೆ ಗೊಳ್ಳುವುದು. ಟೆಕ್ನಿಕಲ್‍ ಟೀಮ್‍ಅನ್ನು ಪರಿಗಣಿಸದೆ, ತಾವೇ ಕ್ಯಾಮೆರಾ ಕೈಗೆತ್ತಿಕೊಳ್ಳುವುದು. ಕಮರ್ಷಿಯಲ್‍ ಟೀಮ್‍ನ ಲೆಕ್ಕಾಚಾರ ಪರಿಗಣಿಸದೆ ಎಲ್ಲಾ ಕೆಲಸಗಳನ್ನು ತಾವೊಬ್ಬರೇ ಮಾಡುವ ಕೆಟ್ಟ ಚಾಳಿ. ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ಹಾಡುತಾ ವೊಬ್ರೇ ಬರೆಯುವ ಕೊಲೆಗಡುಕ ಕೆಲಸಕ್ಕೆ ಕೈ ಹಾಕುವುದು. ಏನೂ ಅರಿಯದ ಮುಗ್ಧರನ್ನು ಚಿತ್ರಕತೆ ಡಿಸ್ಕಷನ್‍ಗೆ ಕರೆದು, ತಾವು ಹೇಳಿದ್ದೇ ಸತ್ಯ, ಫೆಂಟಾಸ್ಟಿಕ್ ಅಂತ ಆತ್ಮರತಿ ಮಾಡಿಕೊಳ್ಳುವುದು.

ಕತೆಗೂ, ಸಂಗೀತಕ್ಕೂ, ಲಯಕ್ಕೂ, ಮಾಧುರ್ಯಕ್ಕೂ ತಿಲಾಂಜಲಿ ಇಡುವ ಅನ್ಯಭಾಷಿಕ ಸಂಗೀತ ನಿರ್ದೇಶಕರಿಗೆ ಮಣೆ ಹಾಕುವುದು. ಕನ್ನಡದ ಸೃಜನಶೀಲ ಕವಿಗಳನ್ನು ಕಡೆಗಣಿಸಿ, ತಮಿಳು, ಕನ್ನಡ, ಮರಾಠಿ ಆಡುನುಡಿಗಳನ್ನೇ ರಾಗಕ್ಕೆ ಜೋಡಿಸಿ ತಾವೇ ಹಾಡು ಬರೆದಿದ್ದೇವೆ ಅಂತ ಜನರನ್ನು ವಂಚಿಸುವುದು. ಚಲಾವಣೆಯಲ್ಲಿರುವ ಕಮರ್ಷಿಯಲ್ ನಾಯಕ ನಟರ ಮೂಗಿನ ನೇರಕ್ಕೆ ಚಿತ್ರದ ಹೆಸರಿಟ್ಟು, ನಾಲ್ಕು ಫೈಟು, ಐದು ಡ್ಯಾನ್ಸ್ ಸೇರಿಸಿ, ಸಿನಿಮಾದಲ್ಲಿ ಕತೆಯೇ ಇಲ್ಲದೆ, ತೀರ ಕೀಳು ಮಟ್ಟದ ಸಂಭಾಷಣೆ ಹೆಣೆದ ಪ್ರೇಕ್ಷರ ಅಭಿರುಚಿಯನ್ನೇ ಕೊಲೆ ಮಾಡುವುದು.ಇದನ್ನು ವಿಮರ್ಶಿಸಿ ಹೇಳಬೇಕಾದ ಮಾಧ್ಯಮಗಳೂ ನಿರ್ಮಾಪಕರು ಕೊಡುವ ಜಾಹೀರಾತುಗಳ ಮುಲಾಜಿಗೆ ಒಳಗಾಗಿ ಚಿತ್ರದ ‘ಸತ್ಯ’ವನ್ನು ಮರೆಮಾಚಿ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ರಿವಿವ್ಯೂಗಳನ್ನು ಬರೆಯುವುದು.

ಅಲ್ಲಿಗೂ ಸುಮ್ಮನಾಗದೆ ಇನ್ನೊಂದು ಹೆಜ್ಜೆ ಮುಂದೆ ಇಡುವ ಕನ್ನಡ ಸಿನಿಮಾದ ಹಿತಚಿಂಕತರು, ‘ಡಬ್ಬಾ ನನ್..ಳು ಕಣ್ರೀ.. ಪ್ರೇಕ್ಷಕನ ತಲೆಗೆ ಮೊಳೆ ಹೊಡೆಯೋಕೆ ಅಂತಲೇ ಇಂಥ ನಿರ್ದೇಶಕರು ಹುಟ್ಟಿಬಂದ್ರಾ?’ ಅಂತ ಹಿಡಿ ಶಾಪ ಹಾಕುತ್ತಾರೆ. ನಿಜ, ಪರಿಸ್ಥಿತಿ ಕೈಮೀರಿ ಹೋಗಿದೆ. ಹಾಗಂತ ಎಲ್ಲಾ ನಿರ್ದೇಶಕರೂ ಕೆಟ್ಟವರಲ್ಲ. ಎಲ್ಲಾ ಸಿನಿಮಾಗಳು ಕೆಟ್ಟದಾಗಿರಲ್ಲ. ದುರಂತವೆಂದರೆ ವರ್ಷಕ್ಕೆ 250 ರಿಂದ 300 ಚಿತ್ರಗಳು ರಿಲೀಸ್ ಆಗುತ್ತವೆ. ಇದರಲ್ಲಿ 50 ರಿಂದ 60 ಚಿತ್ರಗಳು ಬೇರೆಬೇರೆ ಕಾರಣಕ್ಕೆ ಬಿಡುಗಡೆ ಆಗೋದೇ ಇಲ್ಲ. ಪರವಾಗಿಲ್ಲ ಅಂತ ಹೇಳುವ ಚಿತ್ರಗಳ ಸಂಖ್ಯೆ 10 ರಿಂದ 20 ಮಾತ್ರ. ಇದರಲ್ಲೂ ಇಣುಕಿ ನೋಡಿದಾಗ 10 ರಿಂದ 15 ಸಿನಿಮಾ ಕತೆಗಳು ಅನ್ಯಭಾಷೆಯವಾಗಿರುತ್ತವೆ. ಶೇ.3 ರಷ್ಟು ಚಿತ್ರಗಳು ಮಾತ್ರ ಪಾಸಾಗುತ್ತವೆ. ಬಾಕಿ ಚಿತ್ರಗಳೆಲ್ಲಾ ತೋಪು.

‘ಉತ್ತಮ ಕತೆ, ಅತ್ಯುತ್ತಮ ಸಂಗೀತ, ಮನ ಮಿಡಿಯುವ ಸಂಭಾಷಣೆ, ಪಾತ್ರಕ್ಕೆ ಜೀವ ತುಂಬುವ ಪ್ರತಿಭಾವಂತ ನಟನಟಿಯರ ತಂಡ ಇದ್ದ ಸಿನಿಮಾ ಎಂದು ಸೋಲುವುದಿಲ್ಲ’ ಎನ್ನುತ್ತಾರೆ ಪ್ರಸಿದ್ಧ ನಿರ್ದೇಶಕ ನಿಹಾಲಾನಿ. ಈ ಎಲ್ಲಾ ಅಂಶಗಳಿಗೂ ಮೀರಿ ಸಿನಿಮಾ ಮಾಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದು ಡಾ.ರಾಜ್ ಅವರ ವಜ್ರೇಶ್ವರಿ ಕಂಪನಿ. ಇವರು ಮಾಡುವ ಪ್ರತಿಯೊಂದು ಸಿನಿಮಾಕ್ಕೂ ಕತೆ ಇರುತ್ತಿತ್ತು, ಅತ್ಯುತ್ತಮ ಆಯ್ಕೆ ಸಮಿತಿಯೂ ಕಾರ್ಯನಿರ್ವಹಿಸುತ್ತಿತ್ತು. ಸೃಜನಶೀಲ ಕವಿಗಳು ಹಾಡು ಬರೆಯುತ್ತಿದ್ದರು. ಜನರ ನಾಡಿ ಅರಿತ ಬರಹಗಾರರು ಸಂಭಾಷಣೆ ರೂಪಿಸುತ್ತಿದ್ದರು. ಮಾಧುರ್ಯಪೂರ್ಣ ಸಂಗೀತ ಕನ್ನಡಿಗರ ಗಮನ ಸೆಳೆಯುತ್ತಿತ್ತು. ಪ್ರೇಕ್ಷಕರನ್ನು ಹಿಡಿದಿಡುವ ತಾರಾಗಣ ಪ್ರಮುಖವಾಗಿರುತ್ತಿತ್ತು. ಸಣ್ಣಪುಟ್ಟ ಲೋಪ, ವೈಫಲ್ಯದ ಚಿತ್ರಗಳ ಹೊರತಾಗಿಯೂ ಇದೆಲ್ಲವೂ ವಜ್ರೇಶ್ವರಿ ಕಂಪನಿಯ ವೈಶಿಷ್ಟ್ಯವಾಗಿತ್ತು. ಆದರೆ ಇಂದಿನ ಚಿತ್ರರಂಗದಲ್ಲಿ ಇಂಥ ಕಂಪನಿಗಳಿಲ್ಲ.

ಕನ್ನಡದಲ್ಲಿ ಉತ್ತಮ ಕತೆಗಳಿವೆ; ಒಪ್ಪಿಕೊಳ್ಳುವ ಮನಸುಗಳಿಲ್ಲ. ಅದ್ಭುತ ಸಿನಿಮಾ ಮಾಡುವ ನಿರ್ದೇಶಕರಿದ್ದಾರೆ; ಅವರನ್ನು ಗೌರವಿಸುವ ನಿರ್ಮಾಪಕರು ಕಡಿಮೆ. ಸಿದ್ಧಸೂತ್ರಕ್ಕೆ ಮೊರೆ ಹೋಗುವ, ರಿಮೇಕ್ ಮಾಸ್ಟರ್‍ಗಳೇ ಹೆಚ್ಚಾಗಿರುವುದು ಇಂದಿನ ದುರಂತ.

-ಎಸ್.ಮಹೇಂದರ್, ಪ್ರಸಿದ್ಧ ನಿರ್ದೇಶಕ.

 

 

2004ರಲ್ಲೇ ಚಪ್ಪಾಳೆ ಚಿತ್ರಕತೆಗೆ ಮೂರೂಮುಕ್ಕಾಲು ಲಕ್ಷ ರೂ. ಸಂಭಾವನೆ ಕೊಟ್ಟಿದ್ದೆ. ಆಗಿನ ಕಾಲಕ್ಕೆ ಅದೇ ಅತಿ ಹೆಚ್ಚು ಸಂಭಾವನೆಯಾಗಿತ್ತು. ಬರಹಗಾರರನ್ನು, ತಾಂತ್ರಿಕ ವರ್ಗವನ್ನು, ಕಲಾವಿದರನ್ನು ಗೌರವಿಸಬೇಕು. ಕನ್ನಡಿಗರು ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ಕೆಲವು ತಲೆ ತಿರುಕರಿಂದಾಗಿ ಇಂಡಸ್ಟ್ರೀ ಇಂತಹ ಸ್ಥಿತಿಗಿಳಿದಿದೆ.

-ಎನ್.ಎಮ್.ಸುರೇಶ್, ಖ್ಯಾತ ನಿರ್ಮಾಪಕರು.

 

ಯಾವುದೇ ಚಿತ್ರ ಕೆಟ್ಟದಾಗಿರಲ್ಲ. ಆದರೆ ನೋಡುವ ದೃಷ್ಟಿ ಸರಿಯಾಗಿರಬೇಕು. ಕೆಲವು ಚಿತ್ರಗಳು ಕಳಪೆಯಾಗಿರಬಹುದು. ಅದನ್ನು ತೆಗಳದೆ, ಕನ್ನಡಿಗರು ಪ್ರೋತ್ಸಾಹಿ ಸಬೇಕು. ಹಿಂದಿನ ಕಾಲದ ಟ್ರೆಂಡ್ ಬೇರೆ. ಈಗಿನ ಸ್ಥಿತಿ ಬೇರೆ. ಆದರೆ ಯಾವುದೇ ಚಿತ್ರ ಬಂದಾಗಲೂ ನಮ್ಮ ಪ್ರಚಾರ ಕಾರ್ಯದಲ್ಲಿ ಭಿನ್ನತೆ ಇರುವುದಿಲ್ಲ. ಎಲ್ಲರಿಗೂ ಸಮಾನ ಪ್ರಚಾರ ಕೊಡುವುದು ನಮ್ಮ ವೃತ್ತಿ ಧರ್ಮ

-ವೆಂಕಟೇಶ್, ಸಿನಿಮಾ ಪ್ರಚಾರಕರು.

Leave a Reply

Your email address will not be published.