ಕನ್ನಡ ಚಿತ್ರಸಾಹಿತ್ಯ: ಅಂದು ಇಂದು

ಕನ್ನಡ ಚಲನಚಿತ್ರ ಚರಿತ್ರೆಯಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ; ಆರಂಭದ ದಿನಗಳಿಂದ ಇಂದಿನವರೆಗೆ ಚಿತ್ರಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ ಭಾವ, ಭಾಷೆ, ಅಭಿರುಚಿ, ಅಭಿವ್ಯಕ್ತಿಗಳು ಬದಲಾಗಿವೆ. ಆದರೆ ಹೊಸತಿನ ಹೊಳಪಿನಲ್ಲಿ ಹಳತು ಮಸುಕಾಗಿಲ್ಲವೆಂಬುದೇ ವಿಶೇಷ. ಕನ್ನಡ ನಾಡು, ನುಡಿ, ಸಂಸ್ಕತಿಯನ್ನು ಆಯಾ ಕಾಲಘಟ್ಟದಲ್ಲಿ ಕನ್ನಡ ಚಲನಚಿತ್ರ ಸಾಹಿತ್ಯ ಎದುರುಗೊಂಡ ಬಗೆ ಇಲ್ಲಿದೆ.

ಎಂಬತ್ತೈದು ವರ್ಷಗಳಷ್ಟು ಸದ್ಯದ ಇತಿಹಾಸವನ್ನು ಹೊಂದಿರುವ ಕನ್ನಡ ಚಲನಚಿತ್ರ ಪರಂಪರೆಯ ಪ್ರಮುಖ ಘಟಕವಾದ ಸಾಹಿತ್ಯವನ್ನು ಕುರಿತು ಚರ್ಚಿಸುವಾಗ ಮೊದಲಿಗೇ ಹೇಳಬೇಕಾದ ಮುಖ್ಯವಾದ ಮಾತೆಂದರೆ, ಕನ್ನಡ ಚಲನಚಿತ್ರ ಸಾಹಿತ್ಯವನ್ನು ಕುರಿತು ಗಂಭೀರ ಪರಿಭಾವನೆ ಮತ್ತು ಚರ್ಚೆ ಪ್ರಾರಂಭವಾದದ್ದು ತೀರಾ ಇತ್ತೀಚೆಗೆ ಎಂಬುದು. ಅಕಾಡೆಮಿಕ್ ವಲಯದಲ್ಲಿ ಸಾಹಿತ್ಯದ ಬಗ್ಗೆ ಚರ್ಚಿಸುತ್ತಿದ್ದವರಿಗೆ ಆ ಕಾಲದಲ್ಲಿ ಸಿನಿಮಾ ಸಾಹಿತ್ಯ ಕೂಡಾ ತಾವು ವಿಶ್ಲೇಷಿಸಬೇಕಾದದ್ದೇ ಎಂದೆನಿಸಲಿಲ್ಲ. ಹಾಗೆಯೇ ಸಿನಿಮಾಗಳನ್ನು ಅವು ಹುಟ್ಟಿನ ದಿನದಿಂದಲೂ ವೀಕ್ಷಿಸುತ್ತಾ ಆಸ್ವಾದಿಸುತ್ತಾ ಬಂದ ಚಿತ್ರಪ್ರೇಮಿಗಳಿಗೆ ಮನರಂಜನೆಯಾಚೆಗೆ ಅವುಗಳನ್ನು ಕುರಿತು ಚಿಂತಿಸುವುದು ಸಾಧ್ಯವಾಗಲಿಲ್ಲ. ಹೀಗೆ ಸಿನಿಮಾ ಸಾಹಿತ್ಯ ಬಹುಕಾಲದವರೆಗೆ ‘ಸೆಕೆಂಡರಿ ಲಿಟರೇಚರ್’ ಅಥವಾ ‘ಬೈ ಪ್ರೊಡಕ್ಟ್’ ಎಂಬ ಸೀಮಿತ ನೆಲೆಯಿಂದ ಎತ್ತರ ಹಾಗೂ ವಿಸ್ತಾರಗಳಿಗೆ ತನ್ನನ್ನು ವ್ಯಾಪಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.

ಆದರೆ ಪರಿಸ್ಥಿತಿ ಈಗ ಭಿನ್ನವಾಗಿದೆ. ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಸಂಸ್ಥೆ, ಪೀಠ, ಕೇಂದ್ರಗಳು ಸಂಶೋಧನೆಗಾಗಿ ಕನ್ನಡ ಸಿನಿಮಾ ಸಾಹಿತ್ಯವನ್ನು ಕುರಿತಾದ ವಿಷಯಗಳನ್ನು ಸೂಚಿಸುತ್ತಿವೆ. ಅಂಥ ಸಂಶೋಧನೆಗಳ ಫಲಿತಗಳಾದ ಮಹಾಪ್ರಬಂಧಗಳಿಗೆ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡುತ್ತಿವೆ. ಇಂಥ ಥಿಸೀಸ್‍ಗಳು ಗ್ರಂಥರೂಪದಲ್ಲಿ ಪ್ರಕಟಗೊಳ್ಳುತ್ತಲೂ ಇವೆ. ಜೊತೆಗೆ ಪದವಿ ಹಂತದ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಸಿನಿಮಾ ಗೀತೆಗಳು ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿಗದಿಗೊಳ್ಳುತ್ತಿವೆ.

ಪ್ರಸ್ತುತ ವಿಷಯಕ್ಕೆ ಬರುವುದಾದರೆ, ಕನ್ನಡ ಚಲನಚಿತ್ರ ಸಾಹಿತ್ಯದ ಅಂದು-ಇಂದಿನ ಗಡಿರೇಖೆಯನ್ನು ನಿಖರವಾಗಿ ಗುರುತಿಸಿಕೊಳ್ಳುವುದು ತುಸು ಕಷ್ಟದ ಕೆಲಸವೇ ಆಗಿದೆ. ‘ಅಂದು’ ಎಂದು ಗುರುತಿಸಬಹುದಾದ ಅವಧಿಯಲ್ಲೂ ಹಲವು ಘಟ್ಟಗಳಿವೆ. ‘ಇಂದು’ ಎಂಬ ವ್ಯಾಪ್ತಿಗೆ ಒಳಪಡುವ ಅವಧಿಯಲ್ಲೂ ಪಾರಂಪಾರಿಕ ಸೊನೆ-ಬನಿಗಳೂ ಸೇರಿಕೊಂಡಿವೆ. ಆದರೂ ಅನುಕೂಲದ ದೃಷ್ಟಿಯಿಂದ 1934ರಿಂದ (ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಬಿಡುಗಡೆಗೊಂಡ ವರ್ಷ) 1990ರ ವರೆಗಿನ ಕಾಲಾವಧಿಯನ್ನು ನಾನು ‘ಅಂದು’ ವ್ಯಾಪ್ತಿಗೆ ತಂದುಕೊಂಡಿದ್ದೇನೆ. 1990ರ ಮುಂದಿನ ಅವಧಿ ಸಹಜವಾಗಿಯೇ ‘ಇಂದಿನ’ ವ್ಯಾಪ್ತಿಗೆ ಬರುತ್ತದೆ. ಇದು ಕೂಡಾ ಅತ್ಯಂತ ಸ್ಥೂಲವಾದದ್ದು ಎಂಬುದನ್ನು ಗಮನಿಸಬೇಕು.

ಚಾರಿತ್ರಿಕವಾಗಿ ನೋಡಿದರೆ ಬೆಳ್ಳಾನೆ ನರಹರಿಶಾಸ್ತ್ರಿಯವರು ಕನ್ನಡದ ಮೊದಲ ಚಿತ್ರಸಾಹಿತಿಯಾಗಿ ದಾಖಲಾಗಿದ್ದಾರೆ. ಅನಂತರದಲ್ಲಿ ಕನ್ನಡ ಚಲನಚಿತ್ರಗಳಿಗೆ ಸಾಹಿತ್ಯವನ್ನು ರಚಿಸುತ್ತಾ ಬಂದವರ ಒಂದು ಪಟ್ಟಿಯೇ ಇದೆ. ದೇವುಡು ನರಸಿಂಹಶಾಸ್ತ್ರಿ, ಲಾವಣಿ ನಂಜಪ್ಪ, ಜಿ.ವಿ.ಅಯ್ಯರ್, ಹುಣಸೂರು ಕೃಷ್ಣಮೂರ್ತಿ, ಕು.ರಾ.ಸೀತಾರಾಮಶಾಸ್ತ್ರಿ, ಎಂ.ನರೇಂದ್ರಬಾಬು, ಕಣಗಾಲ್ ಪ್ರಭಾಕರಶಾಸ್ತ್ರಿ, ಸೋರಟ್ ಅಶ್ವತ್ಥ್, ಸದಾಶಿವಯ್ಯ, ಎಸ್.ಕೆ.ಕರೀಂ ಖಾನ್, ವಿಜಯನರಸಿಂಹ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್, ಗೀತಪ್ರಿಯ, ದೊಡ್ಡರಂಗೇಗೌಡ, ಭಂಗಿರಂಗ, ಎಂ.ಎನ್.ವ್ಯಾಸರಾವ್, ಹಂಸಲೇಖ, ವಿ.ಮನೋಹರ್, ಬರಗೂರು ರಾಮಚಂದ್ರಪ್ಪ, ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್, ಕವಿರಾಜ್, ಯೋಗರಾಜ ಭಟ್- ಈ ಎಲ್ಲಾ ಪ್ರತಿಭಾವಂತರು ಒಟ್ಟು ಕನ್ನಡ ಚಲನಚಿತ್ರ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಕೆ ಆರ್ ಸೀತಾರಾಮಶಾಸ್ತ್ರಿ ಆರ್.ಎನ್.ಜಯಗೋಪಾಲ ಚಿ ಉದಯಶಂಕರ್ ಹಂಸಲೇಖ ಜಯಂತ ಕಾಯ್ಕಿಣಿ

 

ಮೊದಲಿಗೆ ಹೇಳಬೇಕಾದ ಬಲುಮುಖ್ಯವಾದ ಮಾತೆಂದರೆ, ನಮ್ಮ ಆರಂಭಿಕ ಹಂತದ ಚಿತ್ರಸಾಹಿತಿಗಳು ಸಿನಿಮಾ ಗೀತೆಗಳಿಗೆ ಒಂದು ಹೊಸ ವಿನ್ಯಾಸವನ್ನು ಪ್ರಾಪ್ತವಾಗಿಸಿದುದು. ಅಂದರೆ, ಅಂದಿನ ಸಿನಿಮಾಗಳಿಗೆ ಭದ್ರ ಬುನಾದಿಯಂತಿದ್ದ, ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದ್ದ ನಾಟಕಗಳ ಗೀತೆಗಳನ್ನು ಯಥಾವತ್ತಾಗಿ ಬಳಸದೆ ಚಿತ್ರಗಳಿಗಾಗಿ ಬೇರೆಯೇ ಸ್ವರೂಪದ ಗೀತೆಗಳನ್ನು ರಚಿಸಿದ್ದು ತುಂಬಾ ಮಹತ್ವದ ಸಂಗತಿ. ಒಂದು ಹೊಸ ಮಾಧ್ಯಮಕ್ಕೆ ಹೊಸದಾದ ಬಗೆಯ ಗೀತಸಾಹಿತ್ಯವನ್ನು ರಚಿಸಿ ಅದರ ವಿಶಿಷ್ಟ ಅಸ್ಮಿತೆಗೆ ಕಾರಣರಾದ ಅಂದಿನ ಚಿತ್ರ ಸಾಹಿತಿಗಳು ಖಂಡಿತಾ ಅಭಿನಂದನಾರ್ಹರಾಗಿದ್ದಾರೆ. ರಂಗಗೀತೆಗಳ ಭಾಷೆ, ವಿನ್ಯಾಸ, ಲಯಗಳನ್ನು ಪರಿಷ್ಕರಿಸಿ ನಾಟಕಕ್ಕಿಂತ ಭಿನ್ನವಾದ ಹೊಸ ಅಭಿವ್ಯಕ್ತಿ ವಿಧಾನಗಳನ್ನು ಕಂಡುಕೊಂಡದ್ದು, ಕಾರಣವಾಗಿ ನಾಟಕಗಳ ಸಾಮಾನ್ಯ ಪ್ರೇಕ್ಷಕರಾಗಿರದ ಜನವರ್ಗ ಸಿನಿಮಾ ಪ್ರೇಕ್ಷಕರಾಗಿ ಕಲಾಲೋಕವನ್ನು ಪ್ರವೇಶಿಸುವಂತಾಯಿತು. ಇದು ಕನ್ನಡ ಸಿನಿಮಾಗಳ ಒಟ್ಟು ಬೆಳವಣಿಗೆಗೆ ಮಹತ್ವದ ನಾಂದಿ ಹಾಡಿತು. ಕನ್ನಡ ಚಲನಚಿತ್ರ ಕಾಲದ ಜೊತೆಗೆ ಕಥಾವಸ್ತು, ನಿರೂಪಣಾ ವಿಧಾನ, ನೂತನ ತಂತ್ರಜ್ಞಾನಗಳ ಬಳಕೆ- ಈ ನೆಲೆಗಳಲ್ಲಿ ಮುಂದು ಮುಂದಕ್ಕೆ ಸಾಗಿದಂತೆಲ್ಲಾ ಸಾಹಿತ್ಯದ ಸ್ವರೂಪದಲ್ಲೂ ಕೊಂಚ ಕೊಂಚವೇ ಬದಲಾಗುತ್ತಾ ಬಂದಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಮಾತನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಅಂದಿನ ನಿರ್ಮಾಪಕ ಮತ್ತು ನಿರ್ದೇಶಕರನ್ನು ಕುರಿತು ಅವರು ಹೇಳಿದ್ದು: ‘ಕಲೆಯ ಮೂಲಕ ರಸಾನುಭವ ಮತ್ತು ಬದುಕಿನ ಆಳವಾದ ತಿಳಿವಳಿಕೆ ನೀಡಿ ಜನ ಬದುಕುವ ಆಶಯವನ್ನು ಈಡೇರಿಸುವ ಕಲಾವಿದನಾಗಿದ್ದ ನಿರ್ಮಾಪಕ-ನಿರ್ದೇಶಕ.’ ಅಂದರೆ ‘ತಿಳಿವಳಿಕೆ’ ಮತ್ತು ‘ಜನ ಬದುಕುವ ಆಶಯ’ ಅಂದಿನ ಚಿತ್ರಗಳ ಮುಖ್ಯ ಧೋರಣೆಯಾಗಿತ್ತು. ಅಂದಿನ ಸಾಹಿತ್ಯದ ಸ್ವರೂಪವನ್ನು ನಿರ್ಧರಿಸುತ್ತಿದ್ದ ಅಂಶ ಇದೇ ಆಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಂದಿನ ಚಿತ್ರ ಸಾಹಿತ್ಯ, ‘ಮನರಂಜನೆ ಮತ್ತು ಮನೋವಿಕಾಸ’ ಈ ಎರಡೂ ಆಯಾಮಗಳನ್ನು ಒಳಗೊಂಡಿತ್ತು. ಹಾಗಾಗಿ ಅಂದಿನ ಸಾಹಿತಿಗಳು ಭಾಷಾ ಬಳಕೆಯಲ್ಲಿ ಒಂದು ಸಾಂಸ್ಕೃತಿಕ ಎಚ್ಚರವನ್ನು ಮೈತುಂಬಿಕೊಂಡಿದ್ದರು.

ಒಂದು ಉದಾಹರಣೆಯನ್ನು ಗಮನಿಸುವುದಾದರೆ 1958ರಲ್ಲಿ ತೆರೆಕಂಡ ‘ಭೂಕೈಲಾಸ’ ಚಿತ್ರದಲ್ಲಿ ಒಂದು ಗೀತೆ ಇದೆ. ಶಿವನ ಆತ್ಮಲಿಂಗ ಬಯಸಿ ತಪೋನಿರತನಾಗಿದ್ದ ರಾವಣನ ಮನಸ್ಸಿನಲ್ಲಿ ಭೋಗಾಸಕ್ತಿಯನ್ನು ಮೂಡಿಸಿ, ಅವನ ತಪೋಭಂಗ ಮಾಡುವ ಉದ್ದೇಶದಿಂದ ಊರ್ವಶಿ ನಟಿಸುತ್ತಾ ಹಾಡುವ ಗೀತೆ ಅದು. ಆ ಗೀತೆಯ ಒಂದು ಚರಣ ಹೀಗಿದೆ:

ಯೋಗ ಬಲು ಕಹಿ ವಿರಾಗವು ಕಹಿ
ಅನುರಾಗವೊಂದೆ ಸಿಹಿ
ಸಾಕು ಸಾಧನೆ ಹೊರನೂಕು ವೇದನೆ
ಸಂತೋಷಾಂಬುಧಿ ಸೇರುವ
ಅಲ್ಲಿ ನಾನೊಂದು ನೀನೊಂದು ಮೀನಾಗುವ
ಸುಖ ಮಾಧುರ್ಯ ಮೈತುಂಬಿ ತೇಲಾಡುವ
ತೇಲಾಡುವ ಓಲಾಡುವ ಹದಮೀರಿ ಮದವೇರಿ ಈಜಾಡುವ
(ರಚನೆ: ಕು.ರಾ.ಸೀತಾರಾಮಶಾಸ್ತ್ರಿ)

ಈ ಸಾಲುಗಳ ಸಾಮಾನ್ಯ ಓದು ಅಥವಾ ಶ್ರವಣದಲ್ಲಿ ಯಾವ ಅಸಹ್ಯಾರ್ಥವೂ ಸೂಚಿತವಾಗುವುದಿಲ್ಲ. ಆದರೆ ಸಾಹಿತ್ಯಾಸ್ವಾದನೆಯ ಸೂತ್ರಗಳ ಅರಿವಿನಲ್ಲಿ ಇದನ್ನು ಗ್ರಹಿಸಿದರೆ ಅದು ಹೊರಡಿಸುವ ಅರ್ಥ ಪರಂಪರೆ ಅದ್ಭುತವೆನಿಸುತ್ತದೆ. ಚಿತ್ರದ ನಿರ್ದಿಷ್ಟ ಸಂದರ್ಭದಲ್ಲಿ ಈ ಗೀತೆಯ ಪರಿಣಾಮ ರಮಣೀಯತೆ ಮೂಡಿಸಿ ಯಶಸ್ವಿ ಎನಿಸಿದೆ.

ಈ ವಿಚಾರವನ್ನೇ ಮುಂದುವರಿಸಿ ಅರವತ್ತರ ದಶಕದ ಉತ್ತರಾರ್ಧದಲ್ಲಿ ಮೊದಲಿಗೆ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡ ‘ಕ್ಯಾಬರೆ’ ಹಾಡುಗಳ ಬಗ್ಗೆ ಇಲ್ಲಿ ಉಲ್ಲೇಖಿಸಬಹುದು. ಅಶ್ಲೀಲಾರ್ಥ ಹೊರಹೊಮ್ಮಬಹುದಾದ ಸಾಧ್ಯತೆ ಇರುವುದು ಇಂಥ ಕ್ಯಾಬರೆ ಹಾಡುಗಳಲ್ಲಿಯೆ. ಆದರೆ ಅಂದಿನ ಸಾಹಿತಿಗಳು ತುಂಬಾ ಎಚ್ಚರಿಕೆಯಿಂದ ಈ ಬಗೆಯ ಗೀತೆಗಳನ್ನು ರಚಿಸಿರುವುದು ಗಮನಾರ್ಹ. ಉದಾಹರಣೆಗೆ ಕ್ಯಾಬರೆ ಗೀತೆಗಳಲ್ಲಿಯೇ ತುಂಬಾ ಜನಪ್ರಿಯವಾಗಿರುವ ‘ಪರೋಪಕಾರಿ ಚಿತ್ರದ ಗೀತೆಯನ್ನು ಗಮನಿಸಬಹುದು. ಆ ಗೀತೆಯ ಮೊದಲ ಸಾಲುಗಳಿವು:

ಜೋಕೆ, ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು

ಈ ಪಲ್ಲವಿಯಲ್ಲಿ ಬಳಸಲಾಗಿರುವ ‘ಮಿಂಚು’, ‘ಕತ್ತಿ’, ‘ಬಲೆ’, ‘ಸಂಚು’ ಪದಗಳು ಕ್ಯಾಬರೆ, ಕ್ಯಾಬರೆ ನರ್ತಕಿ ಮತ್ತು ಮೋಜು ಮಸ್ತಿಯ ಆ ಪರಿಸರಕ್ಕೆ ಆಹ್ವಾನಿಸುವುದರ ಬದಲು ಇತ್ತ ಬಾರದಿರು ಎಂದು ಎಚ್ಚರಿಸುವಂತಿದೆ. ‘ಕಸ್ತೂರಿ ನಿವಾಸ’ ಚಿತ್ರದ ‘ಓ ಗೆಳೆಯಾ ಈ ದಾರಿ ಮರೆತೆಯಾ’ ಎಂಬ ಗೀತೆಯ ಸಾರವೂ ಇದೇ ಆಗಿದೆ. ‘ಕವಲೆರಡು ಕುಲವೊಂದು’ ಚಿತ್ರದಲ್ಲಿ ಬಳಸಲಾಗಿರುವ ಕ್ಯಾಬರೆ ಹಾಡೊಂದರ ಪಲ್ಲವಿ ಕೇವಲ ಎರಡೇ ಪದಗಳಿಂದ ಕೂಡಿದೆ. ಆ ಎರಡೇ ಪದಗಳ ಪಲ್ಲವಿ ಹೀಗಿದೆ: ‘ಜೋಪಾನ ಯೌವನ’. ಇಂಥ ಹಲವಾರು ಸಾಲುಗಳನ್ನು ಉದಾಹರಿಸಬಹುದು. ಮೇಲೆ ಉದ್ಧರಿಸಿರುವ ಗೀತೆಗಳನ್ನು ಬರೆದಿರುವವರು ಆರ್.ಎನ್.ಜಯಗೋಪಾಲ್. ಇಲ್ಲೆಲ್ಲಾ ಕಂಡುಬರುವುದು ಸದಭಿರುಚಿಯ ಸಾಪೇಕ್ಷ ಅಂಶ.

ಅಂದಿನ ಚಲನಚಿತ್ರಗಳ ಪ್ರೇಮಗೀತೆಗಳು ಪರಿಶುದ್ಧವೂ ವಿಶಿಷ್ಟವೂ, ಅನನ್ಯವೂ ಆಗಿ ಗಮನ ಸೆಳೆಯುತ್ತವೆ. ‘ಪಂಚಮವೇದ ಪ್ರೇಮದ ನಾದ’, ‘ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ’, ‘ದೇವರೆ ನುಡಿದ ಮೊದಲ ನುಡಿ ಪ್ರೇಮ’ ‘ಬಹುಜನ್ಮದ ಪೂಜಾಫಲ ಈ ಪ್ರೇಮ ಸಮ್ಮಿಲನ’, ‘ಒಲವೆ ಜೀವನ ಸಾಕ್ಷಾತ್ಕಾರ’ -ಇತ್ಯಾದಿ ಪಲ್ಲವಿಗಳೇ ಅಂದಿನ ಚಿತ್ರಗಳ ಪ್ರೇಮಗೀತೆಗಳ ಸ್ವರೂಪ-ಲಕ್ಷಣಗಳನ್ನು ಅನಾವರಣಗೊಳಿಸುತ್ತವೆ. ಆ ಕಾಲಘಟ್ಟದ ಎಲ್ಲಾ ಪ್ರೇಮಗೀತೆಗಳು -ಬರೆದ ಸಾಹಿತಿ ಯಾರೇ ಆಗಿರಲಿ- ಇಂದಿಗೂ ‘ಹೃದಯ ತಣಿಸುವ ಹೊಸಗಾನ’ಗಳಾಗಿ ಚಿತ್ರಪ್ರೇಮಿಗಳ ಹೃದಯವನ್ನು ತುಂಬಿಕೊಂಡಿವೆ. ‘ಆದರ್ಶ’ ಮತ್ತು ‘ಶುದ್ಧತೆ’ ಆ ಕಾಲದ ಗೀತೆಗಳ ಜೀವಾಳವಾಗಿದೆ.

‘ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನೇ’ (ನ್ಯಾಯವೇ ದೇವರು), ‘ಬಂಗಾರವಾಗಲಿ ನಿನ್ನ ಬಾಳೆಲ್ಲ’ (ಅಮ್ಮ), ‘ಓಡುವ ನದಿ ಸಾಗರವ ಬೆರೆಯಲೆ ಬೇಕು’ (ಬಂಗಾರದ ಹೂವು), ‘ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ’ (ಸ್ವಯಂವರ), ‘ನಲಿಯುವ ಬಾ ಇನಿಯಾ ಕೂಡಿ ಬೆರೆಸುವ ಬಾ ಕಣ್ಣಾಲಿಯ’ (ಬೇಡರ ಕಣ್ಣಪ್ಪ), ‘ಕಣ್ಣು ಕಣ್ಣು ಒಂದಾಯಿತು (ದೇವರಗುಡಿ), ‘ಶುಭಮಂಗಳ ಸುಮುಹೂರ್ತವೆ ಶುಭವೇಳೆ’ (ಶುಭಮಂಗಳ), ಕನಸಲೂ ನೀನೆ ಮನಸಲೂ ನೀನೆ (ಬಯಲುದಾರಿ), ‘ಹೂವಿನ ಸೊಗಸು ನಿನಗಾಗಿ (ಸೀತಾರಾಮು) -ಈ ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಬಹುದು. ಒಟ್ಟಾರೆ ಈ ಬಗೆಯ ಅಂದಿನ ಗೀತೆಗಳು ವಿವಾಹಪೂರ್ವ ಪ್ರೇಮದ ಬಗ್ಗೆಯಾಗಲಿ, ದಾಂಪತ್ಯಪ್ರೇಮದ ಬಗ್ಗೆಯಾಗಲಿ ಒಂದು ಸದ್ಭಾವನೆಯನ್ನು ಮೂಡಿಸಿ ಸಾರ್ಥಕ್ಯ ಕಂಡಿವೆ ಎನ್ನಬಹುದು.

ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವಲ್ಲಿಯೂ ಅಂದಿನ ಚಿತ್ರ ಸಾಹಿತ್ಯ ಮಹತ್ವದ ಪರಿಣಾಮ ಬೀರಿದೆ. ವಿಶೇಷವೆಂದರೆ 1937ರಲ್ಲಿ ಬಿಡುಗಡೆಯಾದ ‘ಚಿರಂಜೀವಿ’ ಎಂಬ ಚಿತ್ರದಲ್ಲಿ ಸ್ವಾತಂತ್ರ್ಯಪೂರ್ವ, ಕರ್ನಾಟಕ ಏಕೀಕರಣಪೂರ್ವ ಕಾಲಘಟ್ಟದ ಅನಧಿಕೃತ ನಾಡಗೀತೆಯೆಂದೇ ಪ್ರಸಿದ್ಧಿ ಪಡೆದಿದ್ದ ಹುಯಿಲಗೊಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಗೀತೆಯನ್ನು ಬಳಸಲಾಗಿದೆ. ಮುಂದೆ ಕಥಾ ಪರಿಸರಕ್ಕೆ ಅನ್ಯವೆನಿಸದಂತೆ, ಕಥೆಯ ನಡೆಗೆ ತೊಡರುಗಾಲಾಗದಂತೆ, ನಾಡುನುಡಿಯ ಅಭಿಮಾನದ ಗೀತೆಗಳು ಬಳಕೆಗೊಂಡಿವೆ. ಅಂಥ ಗೀತೆಗಳನ್ನು ಅಂದಿನ ಬಹುತೇಕ ಚಿತ್ರಸಾಹಿತಿಗಳು ರಚಿಸಿದ್ದಾರೆ.

ಕನ್ನಡದ ಅಸ್ಮಿತೆಯನ್ನು ದಾಖಲಿಸುವಲ್ಲಿ ಈ ಎಲ್ಲಾ ಗೀತೆಗಳು ಸಮ ಪ್ರಮಾಣದಲ್ಲಿ ಸುಸಂಪನ್ನವಾಗಿವೆ. ಅಂದಿನ ಒಟ್ಟು ಚಲನಚಿತ್ರ ಸಾಹಿತ್ಯವನ್ನು ಅವಲೋಕಿಸಿದಾಗ, ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ ಇತ್ಯಾದಿ ಮೌಲ್ಯಗಳನ್ನು ಅವು ಎತ್ತಿ ಹಿಡಿದಿರುವುದು ಗೋಚರಿಸುತ್ತದೆ. ಅಂತೆಯೆ ವ್ಯಕ್ತಿಯ ಸ್ವಾಭಿಮಾನದ ಘನತೆಯನ್ನು ಸಾರುವುದು, ಕಾಯಕದ ಮಹತ್ವವನ್ನು ಪ್ರಚುರಪಡಿಸುವುದು, ಜಾತೀಯತೆಯನ್ನು ಧಿಕ್ಕರಿಸುವುದು ಇತ್ಯಾದಿ ಮಾನವೀಯ ಹಾಗೂ ಜೀವಪರ ಮೌಲ್ಯಗಳನ್ನು ಅಂದಿನ ಸಾಹಿತ್ಯ ತುಂಬುಧ್ವನಿಯಲ್ಲಿ ಘೋಷಿಸಿ ಪ್ರತಿಪಾದಿಸಿರುವುದು ಅತ್ಯಂತ ಮಹತ್ವದ ಸಂಗತಿ.

ಈಗ ಇಂದಿನ ಚಿತ್ರಸಾಹಿತ್ಯದ ಬಗ್ಗೆ ತುಸು ವಿವೇಚಿಸಬಹುದು. ಚಲನಶೀಲತೆ ಎಂಬ ಪರಿಭಾವನೆ ‘ಚಲನಚಿತ್ರ’ ಎಂಬ ಹೆಸರಿನಲ್ಲಿಯೇ ಇದೆ. ಸಿನಿಮಾವನ್ನು ‘ಶತಮಾನದ ಭಾಷೆ’ ಎಂದು ಕರೆಯಲಾಗಿದೆ. ಇಂಥ ಸಿನಿಮಾದ ಭಾಷೆ ದಶಮಾನಕ್ಕೆ ಬದಲಾಗುವುದು ಸಹಜ. ಈ ಬಗೆಯ ಭಾಷಿಕ ನೆಲೆಯ ಬದಲಾವಣೆಯನ್ನು ತಡೆಗಟ್ಟಲಾಗುವುದಿಲ್ಲ. ಆದರೆ ಸಮಸ್ಯೆ ಇರುವುದು ಅಭಿರುಚಿಯ ವಿಚಾರದಲ್ಲಿ. ಆಯಾ ಕಾಲದ ಜನಭಾಷೆಯನ್ನು ಕನ್ನಡ ಚಲನಚಿತ್ರ ಲೋಕ ಬಳಸಿಕೊಳ್ಳುತ್ತಾ ಬಂದಿದೆ. ಅದಕ್ಕೊಂದು ಉದಾಹರಣೆಯನ್ನು ಇಲ್ಲಿ ಗಮನಿಸಬಹುದು. ಒಂದೇ ಕಲ್ಪನೆ ಮೂರು ವಿಭಿನ್ನ ಕಾಲಘಟ್ಟದಲ್ಲಿ ಭಾಷಾಭಿವ್ಯಕ್ತಿಯ ನೆಲೆಯಲ್ಲಿ ವ್ಯತ್ಯಾಸ ಕಂಡಿರುವುದಕ್ಕೆ ಈ ಕೆಳಗಿನ ಸಾಲುಗಳು ಉದಾಹರಣೆಯಾಗಿವೆ.

ಸುಂದರಿಯೆ ಚಂದಿರನು ನಿನ್ನಂದವ ಕಾಣುತ
ಮರೆಯಾದನು ಮೋಡದಲಿ ಮರೆಸಿ ಮುಖವ ನಾಚುತ
(ಚಿ.ಸದಾಶಿವಯ್ಯ- ‘ಅಮರಶಿಲ್ಪಿ ಜಕ್ಕಣಾಚಾರಿ’)

ಮೇಲೆ ನೋಡಿದರೆ ಅಲ್ಲಿ ಚಂದ್ರನಿಲ್ಲ ಬಾನಿನಲ್ಲಿ
ನೀನೆ ನಿಂತಿದ್ದೆ ಅಲ್ಲಿ ಹಾಲಿನಂಥ ನಗುವನು ಚೆಲ್ಲಿ
(ಹಂಸಲೇಖ- ‘ನಾನು ನನ್ನ ಹೆಂಡತಿ’)

ಪೂರ್ಣ ಚಂದಿರ ರಜೆ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ’
(ಜಯಂತ ಕಾಯ್ಕಿಣಿ- ‘ಮುಂಗಾರು ಮಳೆ’)

-ಈ ಮೂರು ಗೀತಾಖಂಡಗಳನ್ನು ಅವಲೋಕಿಸಿದಾಗ ‘ಇಂದಿನ’ ಚಿತ್ರಸಾಹಿತಿಗಳು ಕನ್ನಡ ಚಲನಚಿತ್ರ ಸಾಹಿತ್ಯ ಪರಂಪರೆಯ ನಿಜದ ವಾರಸುದಾರರಾಗಿರುವುದು ವೇದ್ಯವಾಗುತ್ತದೆ. ಇಂದು ಬರೆಯುತ್ತಿರುವ ಚಿತ್ರಸಾಹಿತಿಗಳು ಮತ್ತು ಸಾಹಿತ್ಯದ ಬಗ್ಗೆ ಏಕಾಏಕಿ ಸಿನಿಕತನದ ಭಾವವನ್ನು ತಾಳಬೇಕಾಗಿಲ್ಲ. ನವೀನ ಬಗೆಯ ನುಡಿಗಟ್ಟುಗಳ ಬಳಕೆ, ವಿನೂತನವಾದ ಕಲ್ಪನಾ ಸಾಮಥ್ರ್ಯ, ಪ್ರಸಕ್ತ ಕಾಲ ಮೆಚ್ಚಿ ಸ್ವಾಗತಿಸಬಹುದಾದ ಪದಪುಂಜಗಳು, ಅಭಿವ್ಯಕ್ತಿ ವಿಧಾನಗಳಿಂದ ಇಂದಿನ ಚಿತ್ರಸಾಹಿತ್ಯವೂ ಗಮನಸೆಳೆಯುತ್ತದೆ, ಮುದಗೊಳಿಸುತ್ತದೆ, ಮಜಾ ನೀಡುತ್ತದೆ.

ಆದರೆ ಅಲ್ಲಲ್ಲಿ ಮುಜುಗರವನ್ನುಂಟುಮಾಡುವ, ಅಶ್ಲೀಲತೆಯನ್ನು ಮೆರೆಸುವ ಗೀತೆಗಳೂ ಕೇಳಿಬರುತ್ತಿರುವುದು ವಿಷಾದಕರ ಸಂಗತಿ. ಅಂಥ ಸಾಲುಗಳನ್ನಿಲ್ಲಿ ನಾನು ಉಲ್ಲೇಖಿಸಲು ಹೋಗುವುದಿಲ್ಲ. ಅಂಥ ಗೀತೆಗಳನ್ನು ಕೇಳಿರುವ ಎಲ್ಲರ ನೆನಪಿನಲ್ಲಿಯೂ ಅವುಗಳಿವೆ. ಅನೇಕರಿಗೆ ಅವೇ ಹೆಚ್ಚು ಇಷ್ಟವಾಗಿದ್ದರೆ ಆಶ್ಚರ್ಯಪಡಬೇಕಿಲ್ಲ. ನಾನಿಲ್ಲಿ ಮುಖ್ಯವಾಗಿ ಪ್ರಸ್ತಾಪಿಸಬಯಸುವುದು ಇಂಥ ಸಾಹಿತ್ಯ ರಚನೆಗೆ ಕಾರಣವಾಗಿರುವ ಅಂಶಗಳನ್ನು ಮಾತ್ರ.

ಕಲಾವಿದರು ಮತ್ತು ಕಲಾಪ್ರೇಮಿಗಳ ಕಲಾಪ್ರೋತ್ಸಾಹಕ ದಿಟ್ಟ ಪ್ರಯತ್ನದ ಫಲವಾಗಿ ಅಸ್ತಿತ್ವ ಪಡೆದ ಸಿನಿಮಾ ಇಂದು ‘ಉದ್ಯಮಪತಿ’ಗಳ ಪೂರ್ಣ ನಿಯಂತ್ರಣದಲ್ಲಿದೆ. ಉದ್ಯಮಪತಿಗಳು ಮತ್ತು ಕಲೆಗೆ ಸಂಬಂಧಪಟ್ಟಂತೆ ಒಂದು ಮಾತಿದೆ. ಉದ್ಯಮಪತಿಯೊಬ್ಬರಿಗೆ ಯಾರೋ ಒಬ್ಬರು ‘ಕಲೆ ಎಂದರೇನು’ ಎಂಬುದು ನಿಮಗೆ ಗೊತ್ತೇ’ ಎಂದು ಕೇಳಿದರಂತೆ; ಅದಕ್ಕೆ ಉದ್ಯಮಪತಿ ಉತ್ತರಿಸಿದನಂತೆ, ‘ನನಗೆ ಕಲೆಯ ಬಗ್ಗೆ ಏನೂ ಗೊತ್ತಿಲ್ಲ. ಆದರೆ ನಾನು ಅದನ್ನು ಖರೀದಿಸಬಲ್ಲೆ; ನಾನು ಹೇಳಿದಂತೆ ಅದು ಕುಣಿಯುವ ಹಾಗೆ ಮಾಡಬಲ್ಲೆ’ ಎಂದು. ಈ ಮಾತನ್ನು ವಿಸ್ತರಿಸುವ ಅಗತ್ಯವಿಲ್ಲ.

ಸಾಂಸ್ಕೃತಿಕ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆ ದೂರವಾದಾಗ, ಉದ್ಧರಿಸುವ ಸಾಮಥ್ರ್ಯ ಹೊಂದಿರುವ ಕಲೆಯೂ ತಪ್ಪು ದಾರಿ ಹಿಡಿಯುತ್ತದೆ. ಚಿತ್ರಪ್ರೇಮಿಗಳನ್ನು ‘ಅಭಿಮಾನಿ ದೇವರು’ ಎಂದು ಪರಿಭಾವಿಸಿದಾಗ ಮೂಡುವ ಚಿತ್ರಗಳ ಸ್ವರೂಪವೇ ಬೇರೆ, ‘ಆರ್ಡಿನರಿ ಕಸ್ಟಮರ್’ ಎಂದು ತಿಳಿದಾಗ ರೂಪ ಪಡೆಯುವ ಚಿತ್ರಗಳೇ ಬೇರೆ. ಹಿಂದೆ ಪ್ರೇಕ್ಷಕನ ಘನತೆಯನ್ನು ಗೌರವಿಸಲಾಗುತ್ತಿತ್ತು. ಇಂಥ ಗೌರವವೇ ಶುದ್ಧ ಸಾಹಿತ್ಯ ಸೃಷ್ಟಿಗೆ ಕಾರಣವಾಗಿತ್ತು. ಹೀಗೆ ಗೌರವಿಸುವವರು ಈಗ ಇಲ್ಲವೇ ಇಲ್ಲ ಎಂದೇನಿಲ್ಲ. ಹಾಗಾಗಿಯೇ ಈಗಲೂ ಸದಭಿರುಚಿಯ, ಶುದ್ಧ ಸಾಹಿತ್ಯವಿರುವ ಚಿತ್ರಗಳು ತೆರೆಕಾಣುತ್ತಿವೆ.

ಈಗ ಮುಖ್ಯವಾಗಿ ಆಗಬೇಕಾದದ್ದು ಉದ್ಯಮದ ಧ್ಯೇಯೋದ್ದೇಶಗಳು ಕಲೆಗೆ ಶರಣಾಗಬೇಕು. ಹೀಗಾದಾಗ ಚಲನಚಿತ್ರ ಸಾಹಿತ್ಯವೂ ತನ್ನ ಅನನ್ಯತೆ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುತ್ತದೆ.

*ಲೇಖಕರು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು.

Leave a Reply

Your email address will not be published.