ಕನ್ನಡ ಪತ್ರಿಕೋದ್ಯಮದ ಅನೀತಿ ಪರ್ವದ ಆರಂಭ!

ಮುಂದುವರಿದ ಚರ್ಚೆ

ಸಮಾಜವನ್ನು ಸುಸ್ಥಿತಿಗೆ ಕರೆದೊಯ್ಯುವ, ಅನ್ಯಾಯ-ಅಕ್ರಮಗಳನ್ನು ಎತ್ತಿ ಹೇಳುವ, ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳನ್ನು ಸದಾ ಎಚ್ಚರಿಸುವ ಮಹತ್ತರ ಹೊಣೆಗಾರಿಕೆಯನ್ನು ಹೊಂದಿದ್ದ ಮಾಧ್ಯಮರಂಗವು ಅಡ್ಡದಾರಿ ಹಿಡಿದ ಅಧ್ವಾನದ ಕತೆ ಹೀಗಿದೆ.

ಚಿಂತನಶೀಲ ಸಮಾಜಮುಖಿ’ ಸಂಪಾದಕೀಯಕ್ಕೆ ‘ಮಾಧ್ಯಮ ರಂಗದ ವ್ಯಭಿಚಾರ’ ಎಂಬ ತಲೆಬರಹ ಕೊಟ್ಟಿರುವುದನ್ನು ಓದಿ ರೋಮಾಂಚನಗೊಂಡೆ. ಅದರಲ್ಲಿ ‘ಹಣ ಮಾಡುವುದು ಹೇಗೆ? ಯಶಸ್ಸು ಗಳಿಸುವುದು ಹೇಗೆ?’ ಎಂಬುದನ್ನು ಕುರಿತು ಬೇಕಾದಷ್ಟು ಪುಸ್ತಕಗಳು ಪ್ರಕಟವಾಗಿವೆ. ಆದರೆ ‘ಪ್ರಾಮಾಣಿಕವಾಗಿ ಬದುಕುವುದು ಹೇಗೆ?’ ಎಂಬುದರ ಕುರಿತಂತೆ ಯಾವುದೇ ಕೈಪಿಡಿ ಅಥವಾ ಕೃತಿಗಳು ಪ್ರಕಟವಾಗದಿರುವುದಕ್ಕೆ ವಿಷಾದ ವ್ಯಕ್ತವಾಗಿದೆ.

ಇದು ‘ಸಮಾಜಮುಖಿ’ಯ ನಿಜವಾದ ಕಾಳಜಿಯನ್ನು ತೋರುತ್ತದೆ. ಅದರ ಜೊತೆಗೆ ಈ ನಮ್ಮ ಮಾಧ್ಯಮ ರಂಗದ ವ್ಯಭಿಚಾರ ಕುರಿತಂತೆ ಅನುಭವೀ ಪತ್ರಕರ್ತರಿಂದ ಗಂಭೀರ ಚಿಂತನ ಬರಹಗಳನ್ನು ಆಹ್ವಾನಿಸಿ ಪ್ರಕಟಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಕಾರ್ಯವಾಗಿದೆ. ಅದಲ್ಲದೆ, ಈಗಾಗಲೇ ವiಧ್ಯಮ ಸ್ಥಾನಕ್ಕೆ ಕುಸಿದಿರುವ ಮಾಧ್ಯಮದ ಆಗುಹೋಗುಗಳು ಅಧಮ ಸ್ಥಾನಕ್ಕೆ ಜಾರದಿರಲೆಂಬ ಸದುದ್ದೇಶವನ್ನು ಹೊಂದಿ, ಈ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಲು ಮುಂದಾಗಿರುವುದು ಶ್ಲಾಘನೀಯ.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿನ ಲೋಪದೋಷಗಳನ್ನು ಎತ್ತಿ ಹೇಳುವ, ತಿದ್ದುವ ಮಹತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವು ಸ್ವಾತಂತ್ರ್ಯೋತ್ತರದ ಏಳು ದಶಕಗಳಲ್ಲಿ ಅಧಃಪತನದ ಹಾದಿ ಹಿಡಿದಿದ್ದು ಈ ಹೊತ್ತಿನ  ಬಹುತೇಕ ಅನಾಹುತಗಳಿಗೆ ಕಾರಣವಾಗಿದೆ ಅನ್ನಿಸುತ್ತದೆ. ವಾಸ್ತವವಾಗಿ ಶಾಸಕಾಂಗ, ಕಾರ್ಯಾಂಗ ಹಾದಿ ತಪ್ಪಿ ಎಷ್ಟೋ ಕಾಲವಾಗಿದೆ. ದೇಶದ ನ್ಯಾಯಾಂಗದಲ್ಲೂ ಅನೇಕ ಸಂದರ್ಭದಲ್ಲಿ ಲೋಪಗಳುಂಟಾಗಿದ್ದರ ದೆಸೆಯಿಂದ, ಅದರ ಮೇಲೆ ಕೂಡಾ ಜನತೆ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಅಂತಹ ಕ್ಲೇಷಮಯ ಸನ್ನಿವೇಶದಲ್ಲಿ ಅಸಹಾಯಕ ಜನತೆ ಆಸೆಗಣ್ಣಿನಿಂದ ನೋಡಿದ್ದು ಈ ಮಾಧ್ಯಮ ರಂಗದತ್ತ. ದುರಂತವೆಂದರೆ, 1980ರ ಕಾಲಘಟ್ಟದಿಂದೀಚೆಗೆ ಈ ರಂಗವೂ ಹಾದಿ ತಪ್ಪಿ, ದಿಕ್ಕಾಪಾಲಾಗುತ್ತಿರುವ ದುಸ್ಥಿತಿಯನ್ನು ಕಂಡು ಜನಸಾಮಾನ್ಯರು ದಂಗುಬಡಿದಿರುವುದುಂಟು. ಅದರಲ್ಲೂ ವಿದ್ಯುನ್ಮಾನ ವಾಹಿನಿಗಳ ಹಾವಳಿ ಹೆಚ್ಚಾಗುತ್ತಾ ಹೋದಂತೆಲ್ಲಾ ಈ ರಂಗವು ಕುಲಗೆಡುತ್ತಿರುವ ರೀತಿ ಕಂಡು ಮಾಧ್ಯಮ ರಂಗದ ಪ್ರಾಮಾಣಿಕರೇ ಗಾಬರಿಪಡುವಂತಾಗಿದೆ.

ಒಂದೆಡೆ, ಸಮಾಜದಲ್ಲಿ ‘ಹಳದಿ ಪತ್ರಿಕೋದ್ಯಮ’ ಎಂಬ ಅವಹೇಳನಕ್ಕೆ ಗುರಿಯಾದರೆ, ಇನ್ನೊಂದೆಡೆ ಪತ್ರಿಕೋದ್ಯಮದ ಹೆಸರಲ್ಲಿ ದಂಧೆಯನ್ನು ರಾಜಾರೋಷಾಗಿ ನಡೆಸಿದ್ದು ನಾಚಿಕೆಗೇಡಿನ ವಿಚಾರ.

ಮಾಧ್ಯಮ ರಂಗದ ಮೂಲೋದ್ದೇಶವು ಮಹತ್ವದ ‘ಸಾಮಾಜಿಕ ಹೊಣೆಗಾರಿಕೆ’ಯಾಗಿದೆ. ಆ ದೆಸೆಯಲ್ಲಿ ಪ್ರಾಮಾಣಿಕವಾಗಿ ಹೆಜ್ಜೆಯಿಟ್ಟು ಸಮಾಜ ಮತ್ತು ದೇಶವನ್ನು ಸುರಕ್ಷೆಯತ್ತ ಒಯ್ಯಬೇಕಾದ ಜವಾಬ್ದಾರಿಯನ್ನು ಬದಿಗಿಟ್ಟು ಬರೀ ಸ್ವಾರ್ಥದಾಸೆಗೆ ಬಲಿಯಾಗಿ ಇಡೀ ಕ್ಷೇತ್ರವನ್ನು ಕೆಲವರು ಹಾಳುಗೆಡವುತ್ತಿರುವುದಕ್ಕೆ ಅನೇಕ ಪ್ರಕರಣಗಳು ನಮ್ಮ ಮುಂದೆ ಅಪ್ಪಳಿಸುತ್ತವೆ. ಹಾಗೆಯೇ, ಈ ರಂಗದಲ್ಲಿ ಉಳಿದಿರುವ ನಿಷ್ಠಾವಂತರ, ಪ್ರಾಮಾಣಿಕರ ಜಂಘಾಬಲ ಕುಗ್ಗಿಸುತ್ತಿರುವುದು ವಿಪರ್ಯಾಸದ ಸಂಗತಿ.

ಇಂತಹ ಅನೀತಿಯ, ಸ್ವಾರ್ಥಪರವಾದ ಆಟಗಳು 1980ರ ದಶಕದ ಸುಮಾರಿನಲ್ಲೇ ಆರಂಭಗೊಂಡವು ಎಂದು ಹೇಳಲು ವಿಷಾದವಾಗುತ್ತದೆ. ಆಗ ಸಣ್ಣ ಮತ್ತು ಮಧ್ಯಮ ವರ್ಗದ ಪತ್ರಿಕೆಗಳಿಗೆ ಸುಗ್ಗಿಯ ಕಾಲ. ಅದರಲ್ಲೂ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಆಕರ್ಷಣೀಯವಾಗಿತ್ತು. ಅಂತಹದರಲ್ಲೂ ಕೆಲವು ಪತ್ರಕರ್ತರು ಪತ್ರಿಕಾ ನೀತಿ ಮತ್ತು ನಿಲುವುಗಳಿಗೆ ಬದ್ಧರಾಗಿಯೇ ಹೆಣಗಾಡಿದ್ದುಂಟು. ಮಿಕ್ಕುಳಿದ ಅನೇಕರು ಎಲ್ಲ ನೀತಿ ನಿಯತ್ತನ್ನು ಗಾಳಿಗೆ ತೂರಿ ಪತ್ರಿಕೋದ್ಯಮವನ್ನು ಅನ್ಯಾಯ-ಅಕ್ರಮಗಳಿಗೆ ಅಡಮಾನವಿಟ್ಟ ಪ್ರಸಂಗಗಳು ಅಂಕೆ ಮೀರಿ ನಡೆದುಹೋದವು ಎಂದು ಹೇಳಲೇಬೇಕಾಗಿದೆ. ಒಂದೆಡೆ, ಸಮಾಜದಲ್ಲಿ ‘ಹಳದಿ ಪತ್ರಿಕೋದ್ಯಮ’ ಎಂಬ ಅವಹೇಳನಕ್ಕೆ ಗುರಿಯಾದರೆ, ಇನ್ನೊಂದೆಡೆ ಪತ್ರಿಕೋದ್ಯಮದ ಹೆಸರಲ್ಲಿ ದಂಧೆಯನ್ನು ರಾಜಾರೋಷಾಗಿ ನಡೆಸಿದ್ದು ನಾಚಿಕೆಗೇಡಿನ ವಿಚಾರ.

ಆಗಿನ ಕಾಲಕ್ಕೆ ಪತ್ರಿಕೆಗಳ ಮುದ್ರಣಕ್ಕೆ ಬಳಸುವ ನ್ಯೂಸ್‍ಪ್ರಿಂಟ್ ಕಾಗದವನ್ನು ಕೋಟಾ ನಿಯಂತ್ರಣಕ್ಕೊಳಪಡಿಸಲಾಗಿತ್ತು. ಯಾವುದೇ ಮಾನ್ಯತೆ ಪಡೆದ ಪತ್ರಿಕೆ ತನ್ನ ಪ್ರಸಾರ, ಓದುಗರು, ಚಂದಾದಾರರು ಮತ್ತು ಹಣಕಾಸಿನ ವ್ಯವಹಾರದ ಲೆಕ್ಕಪತ್ರಗಳನ್ನು ವ್ಯವಸ್ಥಿತವಾಗಿಟ್ಟುಕೊಂಡು ಪ್ರತೀ ವಾರ್ಷಿಕ ಆಡಿಟ್ ವರದಿಯನ್ನು ತಯಾರಿಸಿ ಆರ್‍ಎನ್‍ಐ ಕಛೇ ರಿಗೆ ಸಲ್ಲಿಸಿ, ಪತ್ರಿಕೆಯ ಪ್ರಸಾರ ಸಂಖ್ಯೆಗನುಗುಣವಾಗಿ ನ್ಯೂಸ್‍ಪ್ರಿಂಟ್ ಹಂಚಿಕೆ ಮಾಡಿಸಿಕೊಳ್ಳುತ್ತಿತ್ತು. ಪ್ರತೀ ದಿನಕ್ಕೆ, ವಾರಕ್ಕೆ, ತಿಂಗಳಿಗೆ ಬೇಕಿರುವ ಪ್ರಮಾಣದ ನ್ಯೂಸ್‍ಪ್ರಿಂಟ್ ಅನ್ನು ಅಲ್ಲಿಂದಲೇ ಹಂಚಿಕೆ ಮಾಡಿಸಿಕೊಂಡು, ಅದರ ಆದೇಶವನ್ನು ಎಂಪಿಎಂ ಸಂಸ್ಥೆಗೆ ನೀಡಿ, ಹಣ ತೆತ್ತು ಬಿಡುಗಡೆ ಮಾಡಿಸಿಕೊಂಡು ಬಳಸಬೇಕಾಗಿತ್ತು.

ಒಬ್ಬೊಬ್ಬರು ಹತ್ತಾರು ಪತ್ರಿಕೆಗಳ ಹೆಸರನ್ನು ನೋಂದಾಯಿಸಿಕೊಂಡರು. ಪ್ರಸಾರ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಸಿಕೊಂಡು ದಾಖಲೆಗಳನ್ನು ಸೃಷ್ಟಿಸಿದರು. ಕಛೇರಿಯ ಅಧಿಕಾರಿಗಳಿಗೂ ಇದು ಇಷ್ಟವಾಗತೊಡಗಿತು. ಬೆಂಗಳೂರಿನಿಂದ ದೆಹಲಿ ಕಛೇರಿಗೆ ಹೋಗಿ ಬರುವುದು ನೀರು ಕುಡಿದಷ್ಟು ಸುಲಭವಾಯಿತು. ಕೆಲವರಂತೂ ವಿಮಾನದಲ್ಲೇ ಹೋಗಿ ಬರಲು ಆರಂಭಿಸಿದರು. 

1980ರವರೆಗೆ ಅದು ಮಾಮೂಲಿಯಾಗಿ ನಡೆದುಕೊಂಡು ಬಂದಿತ್ತು. ಆದರೆ, ಯಾವಾಗ ಟ್ಯಾಬ್ಲಾಯ್ಡ್ ಹಾವಳಿ ಹೆಚ್ಚಿತೋ, ಕೆಲವರು ತಮ್ಮ ಆದಾಯ ಮೂಲಗಳನ್ನು ಸಂಶೋಧನೆ ಮಾಡಿಕೊಳ್ಳುವ ಕಾರ್ಯಕ್ಕಿಳಿದರು. ಆಗ ನ್ಯೂಸ್‍ಪ್ರಿಂಟ್ ಕೋಟಾ ಸಂಗತಿ ಹೊಚ್ಚ ಹೊಸ ಆದಾಯ ಮೂಲವಾಗಿ ಗೋಚರಿಸಿ ರೋಮಾಂಚನಗೊಂಡರು. ಆರಂಭದಲ್ಲಿ ಕೆಲವರು ಪ್ರಯೋಗಕ್ಕಿಳಿದರು. ಪತ್ರಿಕೆಯ ಪ್ರಸಾರವನ್ನು ಹಲವು ಪಟ್ಟು ಹೆಚ್ಚಿಸಿದ ಲೆಕ್ಕಪತ್ರಗಳನ್ನು ಸಿದ್ಧಪಡಿಸಿ ಆರ್ ಎನ್‍ಐ ಕಛೇರಿಗೆ ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನ್ಯೂಸ್‍ಪ್ರಿಂಟ್ ಹಂಚುವಿಕೆ ಪ್ರಕ್ರಿಯೆ ಪತ್ರಿಕೆಯ ಮಾನ್ಯತೆ ಮತ್ತು ಆಡಿಟ್ ಆದ ಲೆಕ್ಕಪತ್ರಗಳನ್ನು ಅವಲಂಬಿಸಿದ್ದರಿಂದ, ಇಂತಹ ದಂಧೆಯನ್ನು ಕೆಲವು ಅಧಿಕಾರಿ, ನೌಕರರೇ ಪ್ರೋತ್ಸಾಹಿಸಿದ್ದರ ಫಲವಾಗಿ ನ್ಯೂಸ್‍ಪ್ರಿಂಟ್ ದಂಧೆ ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳತೊಡಗಿತು.

ನಂತರ ಪತ್ರಕರ್ತರ ಹಿಂಡು ಸೃಷ್ಟಿಗೊಂಡಿತು. ಒಬ್ಬೊಬ್ಬರು ಹತ್ತಾರು ಪತ್ರಿಕೆಗಳ ಹೆಸರನ್ನು ನೋಂದಾಯಿಸಿಕೊಂಡರು. ಪ್ರಸಾರ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಸಿಕೊಂಡು ದಾಖಲೆಗಳನ್ನು ಸೃಷ್ಟಿಸಿದರು. ಕಛೇರಿಯ ಅಧಿಕಾರಿಗಳಿಗೂ ಇದು ಇಷ್ಟವಾಗತೊಡಗಿತು. ಬೆಂಗಳೂರಿನಿಂದ ದೆಹಲಿ ಕಛೇರಿಗೆ ಹೋಗಿ ಬರುವುದು ನೀರು ಕುಡಿದಷ್ಟು ಸುಲಭವಾಯಿತು. ಕೆಲವರಂತೂ ವಿಮಾನದಲ್ಲೇ ಹೋಗಿ ಬರಲು ಆರಂಭಿಸಿದರು. ಒಮ್ಮೊಮ್ಮೆ ಪಕ್ಕಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ದೆಹಲಿಗೆ ಹಾರಿದರೆಂದರೆ, ನೂರಾರು ಟನ್ ನ್ಯೂಸ್‍ಪ್ರಿಂಟ್ ಹಂಚಿಕೆ ಮಾಡಿಸಿಕೊಂಡು ಬರುತ್ತಿದ್ದರು. ಅದರ ಹಂಚಿಕೆ ಆದೇಶವನ್ನು ನ್ಯೂಸ್‍ಪ್ರಿಂಟ್ ವ್ಯವಹಾರಸ್ಥರಿಗೆ ವ್ಯಾಪಾರ ಮಾಡಿ ವರ್ಗಾಯಿಸುತ್ತಿದ್ದುದು ಮಾಮೂಲಿಯಾಗತೊಡಗಿತು. ಬರೀ ಸಾಧಾರಣ ನ್ಯೂಸ್‍ಪ್ರಿಂಟ್ ಕಾಗದವಲ್ಲದೆ, ಗ್ಲೇಜ್ಡ್ ಕಾಗದ ಮತ್ತು ಆರ್ಟ್ ಕಾಗದಗಳೂ ಈ ಬಗೆಯ ದಂಧೆಯಲ್ಲಿ ಸೇರ್ಪಡೆಗೊಂಡವು.

ಇದೊಂದು ರೀತಿಯ ಕ್ಷಿಪ್ರ ಕ್ರಾಂತಿಯ ದಂಧೆ. ಪತ್ರಿಕೆಗಳ ಮುದ್ರಣಕ್ಕೆಂದು ಸರ್ಕಾರ ರಿಯಾಯಿತಿ ದರದಲ್ಲಿ ನ್ಯೂಸ್‍ಪ್ರಿಂಟ್ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಹಲವು ವರ್ಷಗಳ ಹಿಂದೆಯೇ ಪ್ರಾರಂಭಿಸಿತ್ತು. ಸಾಮಾನ್ಯವಾಗಿ ದೊಡ್ಡ ಪತ್ರಿಕಾ ಸಂಸ್ಥೆಗಳು ವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನು ಸಲ್ಲಿಸಿ, ತಮಗೆ ಅಗತ್ಯವಾಗಿರುವ ನ್ಯೂಸ್‍ಪ್ರಿಂಟ್ ಕೊಂಡು ಮುದ್ರಣಕ್ಕೆ ಬಳಸಿಕೊಳ್ಳುವುದು ನಡೆಯುತ್ತಿತ್ತು. ಆದರೆ, ಹೊರಗಿನ ಮಾರುಕಟ್ಟೆಯಲ್ಲಿ ಇದೇ ನ್ಯೂಸ್‍ಪ್ರಿಂಟ್ ಕಾಗದಕ್ಕೆ ದುಬಾರಿ ಬೆಲೆಯಿತ್ತು. ಕಾಗದ ವ್ಯಾಪಾರಿಗಳು ಕೆಲವು ಪತ್ರಕರ್ತರು ಆರಂಭಿಸಿದ ನ್ಯೂಸ್‍ಪ್ರಿಂಟ್ ದಂಧೆಯನ್ನು ಕಂಡು ರೋಮಾಂಚಿತರಾಗಿದ್ದರು. ಟನ್‍ವೊಂದಕ್ಕೆ ಒಂದು ಸಾವಿರವಾದರೂ ನಿಗದಿತ ದರಕ್ಕಿಂತ ಹೆಚ್ಚಾಗಿ ಹಂಚಿಕೆಯಾದ ಪತ್ರಕರ್ತರಿಗೆ ನೀಡಿ ಆದೇಶ ಪತ್ರವನ್ನು ಪಡೆದುಕೊಂಡು ತಾವೇ ನ್ಯೂಸ್‍ಪ್ರಿಂಟ್‍ನ್ನು ಸಂಸ್ಥೆಯಿಂದ ಕೊಳ್ಳುವ, ಅದನ್ನು ಅಧಿಕ ಲಾಭಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಮಾರಿ ಕೊಳ್ಳುವ ದಂಧೆ ಅವ್ಯಾಹತವಾಗಿ ನಡೆಯತೊಡಗಿತು.

ಸಮಾಜವನ್ನು ಸುಸ್ಥಿತಿಗೆ ಕರೆದೊಯ್ಯುವ, ಅನ್ಯಾಯ-ಅಕ್ರಮಗಳನ್ನು ಎತ್ತಿ ಹೇಳುವ, ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳನ್ನು ಸದಾ ಎಚ್ಚರಿಸುವ ಮಹತ್ತರ ಹೊಣೆಗಾರಿಕೆಯನ್ನು ಹೊಂದಿದ್ದ ಮಾಧ್ಯಮ ರಂಗವು ಹೀಗೆ ಅಡ್ಡದಾರಿ ಹಿಡಿದ ಅಧ್ವಾನದ ಕತೆ ಈ ಹೊತ್ತಿನ ಅನೇಕ ಮಾಧ್ಯಮ ಮಿತ್ರರಿಗೆ ತಿಳಿಯದೇ ಹೋಗಿರಬಹುದು.

ಇದು ಎಷ್ಟರಮಟ್ಟಿಗೆ ನಡೆಯಿತೆಂದರೆ, ವ್ಯಕ್ತಿಗಳಿಗೆ ಸೀಮಿತವಾಗಿದ್ದ ನ್ಯೂಸ್‍ಪ್ರಿಂಟ್ ದಂಧೆ ಕೆಲವು ಸಣ್ಣಪುಟ್ಟ ಸಂಸ್ಥೆಗಳಿಗೂ ಹಬ್ಬಿತು. ಪತ್ರಕರ್ತರ ನಡುವೆ ಪೈಪೋಟಿಯೂ ನಡೆಯಿತು. ಸಂಸ್ಥೆಗಳು ಕೂಡಾ ಪ್ರಸಾರವಾಗುತ್ತಿದ್ದ ಪತ್ರಿಕೆ ಜೊತೆಗೆ ಇನ್ನೂ ನಾಲ್ಕಾರು, ಹತ್ತಾರು ಪತ್ರಿಕೆಗಳ ಹೆಸರನ್ನು ನೋಂದಾಯಿಸಿಕೊಂಡು, ಅವುಗಳಿಗೆ ಅಧಿಕ ಪ್ರಸಾರ ಸಂಖ್ಯೆಯ ದಾಖಲೆಗಳನ್ನು ಸೃಷ್ಟಿಸಿ, ಆರ್.ಎನ್.ಐ ಕಛೇರಿಗೆ ಸಲ್ಲಿಸಿ, ನ್ಯೂಸ್‍ಪ್ರಿಂಟ್ ಹಂಚಿಕೆ ಮಾಡಿಸಿಕೊಳ್ಳುವ, ಹಂಚಿಕೆ ಆದೇಶವನ್ನು ವ್ಯಾಪಾರಿಗಳಿಗೆ ಮಾರಿಕೊಂಡು ಲಕ್ಷಾಂತರ ಅಕ್ರಮ ಹಣ ಗಳಿಸುವ ದಂಧೆಯನ್ನು ಲಜ್ಜೆಗಟ್ಟು ಮಾಡತೊಡಗಿದ್ದು ಪತ್ರಿಕಾ ರಂಗದ ನೈತಿಕತೆಯ ಆಧಾರ ಸ್ತಂಭವನ್ನೇ ಅಲುಗಾಡಿಸಿಬಿಟ್ಟಿತು. ಈ ದಂಧೆಯಲ್ಲಿ ತೊಡಗಿದ್ದವರೇ ತಮ್ಮ ಪತ್ರಿಕೆಯಲ್ಲಿ ಇತರರ ನ್ಯೂಸ್‍ಪ್ರಿಂಟ್ ದಂಧೆಯನ್ನು ಟೀಕಿಸಿ ಬರೆದು ಅಟ್ಟಹಾಸ ಮೆರೆದಿದ್ದೂ ಉಂಟು.

ಇದು ಹತ್ತಾರು ವರ್ಷಗಳ ಕಾಲ ಎಗ್ಗಿಲ್ಲದೆ ನಡೆದುಹೋಯಿತು. ಕೆಲವರು ಕುಬೇರರಾದರು. ಅದರ ಲಾಭದಿಂದ ಮುದ್ರಣ ಸಂಸ್ಥೆಗಳನ್ನೇ ಪ್ರಾರಂಭಿಸಿದರು. ಮಾರುಕಟ್ಟೆಗೇ ಬಾರದ, ಓದುಗರ ಕೈಯನ್ನೇ ಸೇರದ ಪತ್ರಿಕೆ ಹೆಸರಲ್ಲಿ ಸಹಸ್ರಾರು ಪ್ರಸಾರ ಸಂಖ್ಯೆಯ ದಾಖಲೆಗಳೊಡನೆ ಪ್ರಕಾಶಕನಿಗೆ ಲಕ್ಷಾಂತರ ಆದಾಯ ತಂದು ಕೊಡುವ ಕತೆ ಕನ್ನಡ ಪತ್ರಿಕೋದ್ಯಮದಲ್ಲಂತೂ ಕೋಲಾಹಲವನ್ನುಂಟು ಮಾಡಿತು. ಆದರೆ, ಈ ನ್ಯೂಸ್‍ಪ್ರಿಂಟ್ ದಂಧೆಯು ದೊಡ್ಡ ಹಗರಣದಂತೆ ಪ್ರಚಾರಗೊಂಡಾಗ ಸರ್ಕಾರವೇ ದಂಗುಬಡಿಯಿತು. ಆಗ ನಿಧಾನವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಂಡು ದಂಧೆಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆಸಿತು.

ಅದರ ಪರಿಣಾಮವಾಗಿ, 1990ರ ದಶಕದಲ್ಲಿ ನ್ಯೂಸ್‍ಪ್ರಿಂಟ್ ಹಂಚಿಕೆ ಪ್ರಕ್ರಿಯೆ ಮೇಲಿದ್ದ ನಿಯಂತ್ರಣವನ್ನೇ ಹಿಂತೆಗೆದುಕೊಂಡು ಸಂಪೂರ್ಣ ಮುಕ್ತ ಮಾರುಕಟ್ಟೆ ತೆರೆಯಿತು. ಅಲ್ಲಿಗೆ ನ್ಯೂಸ್‍ಪ್ರಿಂಟ್ ದಂಧೆಗೆ ಚರಮಗೀತೆ ಹಾಡಲಾಯಿತು. ಆಗ ನ್ಯೂಸ್‍ಪ್ರಿಂಟ್ ದಂಧೆಯ ಲೆಕ್ಕಪತ್ರಗಳಲ್ಲಿದ್ದ ಹಲವಾರು ಪತ್ರಿಕೆಗಳು ಬೆಳಕಿಗೇ ಬರಲಿಲ್ಲ.

ಸಮಾಜವನ್ನು ಸುಸ್ಥಿತಿಗೆ ಕರೆದೊಯ್ಯುವ, ಅನ್ಯಾಯ-ಅಕ್ರಮಗಳನ್ನು ಎತ್ತಿ ಹೇಳುವ, ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳನ್ನು ಸದಾ ಎಚ್ಚರಿಸುವ ಮಹತ್ತರ ಹೊಣೆಗಾರಿಕೆಯನ್ನು ಹೊಂದಿದ್ದ ಮಾಧ್ಯಮ ರಂಗವು ಹೀಗೆ ಅಡ್ಡದಾರಿ ಹಿಡಿದ ಅಧ್ವಾನದ ಕತೆ ಈ ಹೊತ್ತಿನ ಅನೇಕ ಮಾಧ್ಯಮ ಮಿತ್ರರಿಗೆ ತಿಳಿಯದೇ ಹೋಗಿರಬಹುದು. ಅದೇನೇ ಇರಲಿ, ಆ ನ್ಯೂಸ್‍ಪ್ರಿಂಟ್ ದಂಧೆಯು ಮಾಧ್ಯಮ ರಂಗದ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು. ಆದರೆ, ಈ ಕಾಲಘಟ್ಟದ ಕೆಲವಾರು ಪತ್ರಕರ್ತರು ತಮ್ಮ ಸ್ವಾರ್ಥಕ್ಕಾಗಿ ಹೊಸ ಹೊಸ ಹಾದಿಗಳನ್ನು ಹಿಡಿದುಕೊಂಡು ಹೊರಟಿರುವುದು ಈ ಕ್ಷೇತ್ರದಲ್ಲಿನ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿರುವುದಂತೂ ಸತ್ಯ.

*ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ; ಕನ್ನಡಪರ ಹೋರಾಟಗಾರರು.

Leave a Reply

Your email address will not be published.