ಕನ್ನಡ ಭಕ್ತಿ ಸಿನೆಮಾಗಳಲ್ಲಿ ಹಿಂಸೆಯ ಅಭಿವ್ಯಕ್ತಿ

ಭಕ್ತಿ ಸಿನೆಮಾಗಳೆಲ್ಲವೂ ಹಿಂಸೆಯೆಂಬ ಕಚ್ಚಾವಸ್ತುವಿನಿಂದ ತಯಾರಿಸಿದ ಮಾರ್ಕೆಟಿಂಗ್ ಸರಕುಗಳಂತೆ ಕಾಣುತ್ತವೆ. ಭಕ್ತರಿಗೆ ಹೆಚ್ಚೆಚ್ಚು ಹಿಂಸೆ ಉಂಟಾದಷ್ಟೂ ಸಿನೆಮಾದ ಶಕ್ತಿ ಹೆಚ್ಚುತ್ತದೆ. ಸಿನೆಮಾ ಮುಗಿಯುವ ವೇಳೆಗೆ ತೆರೆಯ ಮೇಲೆ ಕಂಡ ಹಿಂಸೆ, ಕ್ರೌರ್ಯ ಎಲ್ಲವೂ ಕರಗಿ ಭಕ್ತ ಮತ್ತು ಪ್ರೇಕ್ಷಕ ಇಬ್ಬರಿಗೂ ದೇವರ ದರ್ಶನವಾಗುತ್ತದೆ.


ಗೋವಿಂದರಾಜು ಎಂ. ಕಲ್ಲೂರು

ಶಭಾನ ಮೈಸೂರು

ಕನ್ನಡದಲ್ಲಿ ವಾಕ್ಚಿತ್ರಗಳು ಆರಂಭವಾದಾಗ (1933-34) ಮಾತಿನ ಸಿನೆಮಾಗಳಿಗೆ ಬಹುಮುಖ್ಯ ಆಧಾರವಾಗಿ ನಿಂತದ್ದು ಧಾರ್ಮಿಕ ಸಂಪನ್ಮೂಲಗಳು. ಅಂದರೆ ಪೌರಾಣಿಕ ಕಥನಗಳು, ಧಾರ್ಮಿಕ ಗ್ರಂಥಗಳು, ಧಾರ್ಮಿಕ ಸ್ಥಳ ಪುರಾಣಗಳು ಮತ್ತು ಸಂತಭಕ್ತರ ಕಥೆಗಳು. ಕನ್ನಡದ ಮೊದಲ ವಾಕ್ಚಿತ್ರಗಳು ಎಂದು ಗುರುತಿಸಲ್ಪಟ್ಟ ‘ಭಕ್ತಧ್ರುವ’ (ಚಿತ್ರೀಕರಣ ಪ್ರಾರಂಭಿಸಿದ ಮೊದಲ ವಾಕ್ಚಿತ್ರ-1933) ಮತ್ತು ‘ಸತಿ ಸುಲೋಚನ’ (ಮೊದಲು ತೆರೆ ಕಂಡ ವಾಕ್ಚಿತ್ರ- 1934) ಚಲನಚಿತ್ರಗಳೂ ಸಹ ಪೌರಾಣಿಕ ಮತ್ತು ಭಕ್ತಿಕಥನವನ್ನು ಕೇಂದ್ರೀಕರಿಸಿದ್ದವುಗಳೇ ಆಗಿದ್ದವು. ಈ ಎರಡೂ ಸಿನೆಮಾಗಳ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಗಲ್ಲಾಪೆಟ್ಟಿಗೆಯನ್ನು ತುಂಬಿಸುವ ಸಿದ್ಧಮಾದರಿಯೊಂದನ್ನು ಆರಂಭಿಕ ವಾಕ್ಚಿತ್ರಗಳ ನಿರ್ಮಾಪಕ/ ನಿರ್ದೇಶಕರು (ಯು.ಎಲ್.ನಾರಾಯಣರಾವ್, ಯು.ಎಲ್.ವ್ಯಾಸರಾವ್, ವೈ.ವಿರಾವ್) ಕಂಡುಕೊಂಡಿದ್ದರು.  

ಸತಿಸುಲೋಚನ ಚಿತ್ರದ ನಾಯಕಿ ಸುಲೋಚನೆಯು ಅಪಾರ ಕಷ್ಟ-ನಷ್ಟಗಳನ್ನು ಅನುಭವಿಸುತ್ತಾ ಪರದೆಯಲ್ಲಿ ಕಣ್ಣೀರು ಸುರಿಸಿ ಸಹಗಮನ ಮಾಡಿದರೆ, ಬಾಲಕಧ್ರುವ ಮಲತಾಯಿಯ ತಾತ್ಸಾರವನ್ನು ಅನುಭವಿಸುತ್ತಾ ಅನೇಕ ಸಂಕಟಗಳನ್ನು ನುಂಗಿಕೊಂಡು ತನ್ನ ಹರಿಭಕ್ತಿಯನ್ನು ಸಾಬೀತು ಪಡಿಸಲು ಉಗ್ರ ತಪಸ್ಸು ಮಾಡುತ್ತಾನೆ. ಈ ರೀತಿಯಾಗಿ ಕನ್ನಡದ ನಿರ್ದೇಶಕರು ಕಂಡುಕೊಂಡ ನಾಯಕ-ನಾಯಕಿಯನ್ನು ಅಪಾರ ಸಂಕಷ್ಟಕ್ಕೀಡುಮಾಡುವ ಹಿಂಸಕ ಸೂತ್ರಗಳನ್ನು ಪೌರಾಣಿಕ/ಭಕ್ತಿ ಸಿನೆಮಾಗಳ ಮೂಲಕ ಹೇಗೆ ಪ್ರಸಾರ ಮಾಡಲಾಯಿತು ಎಂಬುದನ್ನು ಪರಿಶೀಲಿಸುವುದು ಈ ಬರೆಹದ ಉದ್ದೇಶವಾಗಿದೆ.

  1. ಸಣ್ಣ ಹೊರನೋಟ

ಭಾರತೀಯ ಪರಂಪರೆಯಲ್ಲಿ ಭಕ್ತಿಗೆ ಮಹತ್ವದ ಸ್ಥಾನವಿದೆ. ಅಧಿಕಾರದ ಸ್ಥಾನದಲ್ಲಿರುವುದಕ್ಕಿಂತ ಭಕ್ತನಾಗಿರುವುದು ಮೌಲ್ಯಯುತವಾದದ್ದು ಎಂಬುದನ್ನು ಭಾರತೀಯ ಸಮಾಜ ಒಪ್ಪಿದೆ. ಇಂತಹ ಒಪ್ಪಿತ ಧಾರ್ಮಿಕ ಕಥನಗಳನ್ನು ಆಧರಿಸಿ ಬಂದ ಭಕ್ತಿಸಿನೆಮಾಗಳು ಸಾಮಾನ್ಯವಾಗಿ ಅಸಮಾನತೆಯನ್ನು ವಿರೋಧಿಸುವ, ಮಠೀಯ ಸಂಸ್ಕøತಿಯ ಆತ್ಮವಂಚನೆಯ ನಡೆಗಳನ್ನು ಬಯಲಿಗೆಳೆಯುವ, ಮೂಢನಂಬಿಕೆಗಳನ್ನು ತಿರಸ್ಕರಿಸುವ, ಡಾಂಭಿಕ ಭಕ್ತರ ಅಹಂನಿರಸನ ಮಾಡುವ ಮತ್ತು ಆಧ್ಯಾತ್ಮವನ್ನು ಶುದ್ಧಗೊಳಿಸುವ ಪ್ರಯತ್ನವೆಂಬಂತೆ ನಿರೂಪಿಸಲ್ಪಟ್ಟಿರುತ್ತವೆ. ಆರಂಭಿಕ ಕನ್ನಡ ಸಿನೆಮಾದ ಸಂದರ್ಭದಲ್ಲಿ ಪುರಾಣ ಮತ್ತು ಭಕ್ತಿಕೇಂದ್ರಿತ ಸಿನೆಮಾಗಳೇ ಏಕೆ ನಿರ್ದೇಶಕರ ಆದ್ಯ ಆಯ್ಕೆಗಳೆಂಬಂತೆ ತಯಾರಾಗುತ್ತಿದ್ದವು ಮತ್ತು ಜನಪ್ರಿಯವಾಗಿದ್ದವು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳವುದು ಅವಶ್ಯಕವಾಗಿದೆ.

ಸಿನೆಮಾ ಇತಿಹಾಸಕಾರರಾದ ಕೆ.ಪುಟ್ಟಸ್ವಾಮಿಯವರು ಹೇಳುವಂತೆ “ಭಾರತೀಯ ಸಂಸ್ಕøತಿ ಅದರಲ್ಲೂ ಕರ್ನಾಟಕದ ಸಾಹಿತ್ಯ-ಸಂಸ್ಕøತಿಯ ಸಂದರ್ಭದಲ್ಲಿ ಭಕ್ತಿಪಂಥ ಮತ್ತು ಸಾಹಿತ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಯಜಮಾನ ಧರ್ಮವೊಂದು ತನ್ನ ಕಠೋರತೆಯಿಂದ ಜನವಿಮುಖವಾದಾಗ ಅದನ್ನು ಜನಮುಖಿಯಾಗಿಸಿದ್ದು ಭಕ್ತಿಪಂಥ. ಮಠಮಾನ್ಯಗಳ, ದೇವಸ್ಥಾನಗಳ ಗರ್ಭಗುಡಿಯಲ್ಲಿ ರೂಪುಗೊಂಡ ಧಾರ್ಮಿಕ ರೀತಿ ರಿವಾಜುಗಳು ತಮ್ಮ ಮಡಿವಂತಿಕೆ ಮತ್ತು ಸಂಪ್ರದಾಯ ಶರಣತೆಯಿಂದಾಗಿ ಮಾನವ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಬಹಳ ಬಂಧನಕಾರಿ ವ್ಯವಸ್ಥೆಯನ್ನು ರೂಪಿಸಿದಂಥವು. ತಳಸಮುದಾಯಗಳಿಗೆ ದೇವರು ಅಧ್ಯಾತ್ಮವನ್ನು ನಿರಾಕರಿಸಿದಂಥವು. ಈ ಬಂಧನಕಾರಿ ವ್ಯವಸ್ಥೆಗೆ ಪ್ರತಿರೋಧ ಒಡ್ಡಿದ್ದೇ ಭಕ್ತಿಪಂಥ.” ಭಾರತೀಯರಲ್ಲಿ ಭಕ್ತಿಪಂಥದ ನಾಯಕರ ಚರಿತ್ರೆಯನ್ನು ಮತ್ತು ಪುರಾಣಕಥನಗಳನ್ನು ಕೇಳುವುದು, ಹೇಳುವುದು, ಮತ್ತು ನೋಡುವುದು ಪಾರಂಪರ್ಯ ಪವಿತ್ರಕಾರ್ಯಗಳಾಗಿ ಉಳಿದುಬಂದಿದ್ದವು. ಇಂತಹ ಭಕ್ತಿಕಥನಗಳನ್ನು ತೆರೆಯ ಮೇಲೆ ನೋಡಲು ಜನರಿಗೂ ಅತೀವವಾದ ಆಸಕ್ತಿ ಇತ್ತು.

ಸಿನೆಮಾ ವಿದ್ವಾಂಸರಾದ ‘ರಾಶೆಲ್ ಡ್ವಯರ್’ ತಮ್ಮ ‘ಫಿಲ್ಮಿಂಗ್ ದ ಗಾಡ್ಸ್: ರೀಜನ್ ಅಂಡ್ ಇಂಡಿಯನ್ ಸಿನೆಮಾ’ ಎಂಬ ಪುಸ್ತಕದಲ್ಲಿ ಹಿಂದಿ ಮತ್ತು ಮರಾಠಿ ಸಿನೆಮಾಗಳನ್ನು ಆಧರಿಸಿ ಹೇಳುವ “ಪೌರಾಣಿಕ ಮತ್ತು ಭಕ್ತಿಕೇಂದ್ರಿತ ಸಿನೆಮಾಗಳು ಭಾರತ ಚಿತ್ರೋದ್ಯಮದ ತಳಪಾಯ ಆಗಿದ್ದವು. ಎಂಬುದು ಕನ್ನಡ ಭಾಷಾ ಸಿನೆಮಾಗಳಿಗೂ ಅನ್ವಯಿಸುತ್ತದೆ. 1934ರಲ್ಲಿ ಪ್ರಾರಂಭವಾದ ಕನ್ನಡ ಚಿತ್ರೋದ್ಯಮ ಮುಂದಿನ ಎರಡು ದಶಕಗಳಲ್ಲಿ ಬರೇ 40 ಚಿತ್ರಗಳನ್ನು ನಿರ್ಮಿಸಿದರೆ ತದನಂತರ ಎರಡು ದಶಕಗಳಲ್ಲಿ 394 ಚಿತ್ರಗಳನ್ನು ನಿರ್ಮಿಸಿತು. 1954ರ ತನಕ ನಿರ್ಮಿಸಲ್ಪಟ್ಟ ಈ 40 ಚಿತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪೌರಾಣಿಕ, ಭಕ್ತಿಕೇಂದ್ರಿತವಾಗಿದ್ದರೆ ಉಳಿದವು ವಿನೋದಪೂರಿತ, ಸಾಮಾಜಿಕ, ಐತಿಹಾಸಿಕ ಮತ್ತು ರಂಗದಿಂದ ಅಳವಡಿಸಿಕೊಂಡ ಕಥಾನಕಗಳಾಗಿದ್ದವು. 1965ವರೆಗೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೌರಾಣಿಕ ಹಾಗೂ ಭಕ್ತಿಕೇಂದ್ರಿತ ಸಿನೆಮಾಗಳನ್ನು ಮಾಡಲಾಯಿತು. ಈ ದಶಕದಲ್ಲಿ ಸರಾಸರಿ ಸುಮಾರು 5ರಂತೆ ಹೆಚ್ಚು-ಕಡಿಮೆ 56 ಇಂಥ ಚಿತ್ರಗಳನ್ನು ತೆಗೆಯಲಾಯಿತು. ಕೆಲವೊಂದು ವರ್ಷಗಳಲ್ಲಿ 8-9 ಚಿತ್ರಗಳು ತೆರೆಕಂಡಿದ್ದವು.” [ಡಾ. ಹೆಚ್ ನಿಖಿಲ, 2013, ಭಕ್ತ ಕನಕದಾಸ ಚಿತ್ರದ ಸಾಮಾಜಿಕ ಶ್ರೇಣೀಕರಣದ ವಿಮರ್ಶೆ, (ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ, ಸಂ: ಡಾ.ಬಿ.ಶಿವರಾಮ ಶೆಟ್ಟಿ) ಪುಟ- 147ರಿಂದ 148].

ಹೀಗೆ ತೆರೆಕಾಣುವ ಪ್ರತಿ ಭಕ್ತಿಸಿನೆಮಾಗಳಲ್ಲಿ ಭಕ್ತಿಸಂತರನ್ನು ಸಮಾಜದ ಉದ್ಧಾರಕ್ಕಾಗಿ ಅವತಾರವೆತ್ತಿ ಬಂದವರಂತೆ ಬಿಂಬಿಸಲಾಯ್ತು. ಈ ಸಿನೆಮಾಗಳ ಚೌಕಟ್ಟುಗಳನ್ನು ಜೋಡಿಸುವಾಗ ಭಕ್ತರನ್ನು ಸುಧಾರಣಾವಾದಿಗಳನ್ನಾಗಿಯೂ ಇಡೀ ಸಿನೆಮಾವನ್ನು ಪ್ರಗತಿಪರ ಸಂದೇಶವಾಹಕವಾಗಿರುವಂತೆಯೂ ನೋಡಿಕೊಳ್ಳಲಾಯಿತು.

  1. ಭಕ್ತಿ’ ಮತ್ತು ‘ಹಿಂಸೆ’

ಮನುಷ್ಯನ ಮಾನಸಿಕ ರಚನೆಯಲ್ಲಿಯೇ ‘ಆಕ್ರಮಣಕಾರಿ ಮನೋಭಾವ’ (ಂggಡಿessiveಟಿess) ಅಡಕವಾಗಿದೆ.* ಹಿಂಸೆಯ ಸಂಘಟನೆ ಮತ್ತು ಅನುಭವಿಸುವುದು ಎರಡೂ ಅಪಚಾರಗಳೇ. ಭಕ್ತಿಯು ಇಂತಹ ಅಪಚಾರಗಳಿಂದ ಕೂಡಿದ ಮನುಷ್ಯನ ಮನಸ್ಸನ್ನು ಶಾಂತವಾಗಿಸಬೇಕಿತ್ತು. ಎದೆಯಲ್ಲಿರುವ ಹಿಂಸಾ ಪ್ರವೃತ್ತಿಯನ್ನು ಇಲ್ಲವಾಗಿಸಬೇಕಿತ್ತು. ಭಾರತೀಯ ಸಂಸ್ಕøತಿ ಮತ್ತು ಆಚರಣೆಗಳಂತೆ [ಕೊಂಡ ಹಾಯುವುದು, ಪ್ರಾಣಿ ಬಲಿ, ಸಿಡಿ ಆಡುವುದು, ಬಾಯಿಬೀಗ ಹಾಕಿಕೊಳ್ಳುವುದು, ಜೋಗತಿ ಹೋಗುವುದು, ಬೇವಿನ ಉಡುಗೆ, ಅರೆಬೆತ್ತಲೆ ಮೆರವಣಿಗೆ ಸೇವೆಗಳನ್ನು ಕೈಗೊಳ್ಳುವುದು ಇತ್ಯಾದಿ.] ಭಾರತೀಯ ಭಕ್ತಿಸಿನೆಮಾಗಳೂ ಹಿಂಸೆಯನ್ನು ದೇಶದ ಸಾಂಸ್ಕøತಿಕ ಮತ್ತು ಧಾರ್ಮಿಕ ಅಂಶಗಳಲ್ಲಿ ಒಂದೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತವೆ.

“ಧಾರ್ಮೀಕರಣದ ಹಿನ್ನೆಲೆಯಲ್ಲಿ ತನ್ನನ್ನು ದಮನಿಸುವ ಶಕ್ತಿಗಳಿಗೇ ಪಾಸಿಟೀವ್ ಮೌಲ್ಯವನ್ನಿತ್ತು ತನ್ನ ಅಂತರಾತ್ಮದಲ್ಲಿ ನೆಲೆ ಮಾಡಿಕೊಟ್ಟಿರುವ ವ್ಯಕ್ತಿ ಹಿಂಸೆಯಿಂದುಂಟಾದ ಅನುಭವವನ್ನು ಆದಷ್ಟು ಮಟ್ಟಿಗೆ ಸುಪ್ತಾವಸ್ಥೆಯಲ್ಲಿ ಅದುಮಿಕ್ಕುತ್ತಾನೆ.” (ಡಾ.ಬಿ.ಕೃಷ್ಣಮೂರ್ತಿ*, 1993, ಆಶಯ ಲೇಖನ, ಕನ್ನಡ ಸಾಹಿತ್ಯದಲ್ಲಿ ಹಿಂಸೆಯ ಸ್ವರೂಪ, ಪುಟ-2). ಧಾರ್ಮಿಕ ಉದ್ದೀಪನಕ್ಕೆ ಒಳಗಾದ ಭಕ್ತರೇ ಹಿಂಸೆಯನ್ನು ಹೊರುವ ಮತ್ತು ಪಾಲಿಸುವ ಕಾರ್ಯವನ್ನು ವಿಶ್ವಾಸದಿಂದ ನಡೆಸುತ್ತಾರೆ.

ಆಲಯದ ಆವರಣದಲ್ಲಿ ಅಥವಾ ದೈವದ ಹೆಸರಿನಲ್ಲಿ ನಡೆಯುವ ಹಿಂಸೆಯು ಪವಿತ್ರ ಧಾರ್ಮಿಕ ಕರ್ತವ್ಯವಾಗುತ್ತದೆ. ಸಿನೆಮಾದಲ್ಲಿ ಬರುವ ಭಕ್ತರೂ ಇದರಿಂದ ಬಿಡಿಸಿಕೊಳ್ಳಲಾರರು. ತೆರೆಯ ಮೇಲೆ ಹಿಂಸೆಯನ್ನು ತಿರಸ್ಕರಿಸದೆ ಒಪ್ಪಿ ನಡೆಯುವ ಭಕ್ತರು ಸುಸಂಸ್ಕøತರಾಗಿ, ನೈತಿಕ ಗುಣನಿಧಿಗಳಾಗಿ ಪ್ರೇಕ್ಷಕರ ಕರುಣೆಯಲ್ಲಿ ಪಾಲು ಪಡೆಯಲು ಅರ್ಹರಾಗುತ್ತಾರೆ. ಭಕ್ತರಿಗೆ ದೇವರು ಒಲಿಯುವುದು ಅವರು ಅಂತಿಮ ಅಸಹಾಯಕ ಸ್ಥಿತಿ ತಲುಪಿದಾಗ ಮಾತ್ರ. ಅಲ್ಲಿಯವರೆಗೆ ಭಕ್ತರಿಗೆ ಬಂದೆರಗುವ ಸಂಕಷ್ಟಗಳು ಒಂದೆರಡಲ್ಲ. ಕನ್ನಡ ಭಕ್ತಿಸಿನೆಮಾಗಳಲ್ಲಿ ಭಕ್ತ ಮತ್ತು ಅವರ ಪರಿವಾರವನ್ನು ಹಿಂಸೆಗೆ ಗುರಿಪಡಿಸುತ್ತಾ, ಸಿನೆಮಾವನ್ನು ಗೆಲ್ಲಿಸುವ ತಂತ್ರವನ್ನು ಪದೇ-ಪದೇ ಉದ್ದೇಶ ಪೂರ್ವಕವಾಗಿಯೇ ಪ್ರಯೋಗಿಸಲಾಗುತ್ತದೆ. ನೋವುಣ್ಣದ ಭಕ್ತರ ಕಥೆಗಳು ಕನ್ನಡ ಸಿನೆಮಾ ಸಂದರ್ಭದಲ್ಲಿ ಇಲ್ಲವೆಂದೇ ಹೇಳಬಹುದು. ಇದು ಪ್ರೇಕ್ಷಕರ ಭಾವನೆಗಳನ್ನು ಪ್ರಚೋದಿಸುವ ಕುಟಿಲ ತಂತ್ರವೂ ಹೌದು; ನಿರ್ದೇಶಕನೊಬ್ಬನಿಗೆ ತನ್ನ ಸಿನಿಮಾವನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕೆಂಬ ಜವಾಬ್ದಾರಿಯೂ ಹೌದು.

ಪೌರಾಣಿಕ/ಭಕ್ತಿಸಿನಿಮಾಗಳ ನಾಯಕ-ನಾಯಕಿಯರು ದೇವರ ವರಪ್ರಸಾದ ಅಥವಾ ಶಾಪದಿಂದ ಜನ್ಮವೆತ್ತಿದವರಾಗಿರುತ್ತಾರೆ. ಬಹುತೇಕ ಸಿನೆಮಾಗಳ ಮೊದಲ ಭಾಗದಲ್ಲಿ ಇವರನ್ನು ದೇವರನ್ನು ನಂಬದ ಬಂಡುಕೋರರನ್ನಾಗಿ, ತೋಳ್ಬಲದಿಂದಲೇ ಜಗವನ್ನು ಗೆಲ್ಲಲು ಹೊರಟ ಹುಂಬರನ್ನಾಗಿ, ಬುದ್ಧಿ ಭ್ರಮಣೆಯಾಗಿ ತಿರುಗುವ ಅಥವಾ ಬುದ್ಧಿಯೇ ಇಲ್ಲದ ದಡ್ಡರನ್ನಾಗಿ, ಲೌಕಿಕ ಭೋಗಲಾಲಸಿಗಳನ್ನಾಗಿ ತೋರಿಸಲಾಗುತ್ತದೆ. ತರುವಾಯದ ಕಾಲದಲ್ಲಿ ಜರುಗುವ ಘಟನೆಗಳ ಪ್ರಭಾವದಿಂದಲೋ, (ಕನಕನಾಯಕ ತನ್ನ ಜೀವನದಲ್ಲಿ ಸಂಭವಿಸಿದ ಯುದ್ಧದ ನಂತರ ಭಕ್ತ ಕನಕದಾಸನಾಗುತ್ತಾನೆ.) ಇತರರ ಸಹವಾಸದಿಂದಲೋ, ಸಿನೆಮಾದಲ್ಲಿ ದೈವವೇ ತನ್ನ ಭಕ್ತರಿಗಾಗಿ ನಡೆಸುವ ಲೀಲೆಗಳಿಂದಲೋ ಭಕ್ತರಾಗಿ ಪರಿವರ್ತಿತರಾಗುತ್ತಾರೆ.

ಈ ಬದಲಾವಣೆಯ ನಂತರ ಭಕ್ತರು ಹಸಿವು, ಬಡತನ, ದಬ್ಬಾಳಿಕೆಯನ್ನು, ಶೋಷಣೆಗಳನ್ನು ಪ್ರತಿಭಟಿಸದೆ ಒಪ್ಪಿಕೊಳ್ಳುತ್ತಾರೆ. ಶಿಕ್ಷೆಯ ವಿರುದ್ಧದ ವಿಚಾರದಲ್ಲಿ ಅವರು ಯಾವುದೇ ಪವಾಡವನ್ನು ಮಾಡಲಾರರು. ಪರದೆಯ ಮೇಲೆ ಅವರಿಗೆ ಒದಗುವ ವಿಪತ್ತುಗಳು ಭಕ್ತಿಯನ್ನು ಪರೀಕ್ಷಿಸಿಕೊಳ್ಳಲು ಸಿಕ್ಕ ಅವಕಾಶಗಳಾಗುತ್ತವೆ. ಭಗವಂತನು ತಮ್ಮ ಭಕ್ತಿಯ ಪ್ರಮಾಣವನ್ನು ಪರೀಕ್ಷಿಸಲು ಹೆಣೆದ ಲೀಲಾವಿನೋದಗಳಾಗಿ ಹಿಂಸಾಸ್ವೀಕಾರಾರ್ಹತೆಯೇ ಭಕ್ತರಿಗೆ ಇರಬೇಕಾದ ಸಾಮಾಜಿಕ ಮೌಲ್ಯವೆಂಬಂತೆ ತೆರೆಯ ಮೇಲೆ ಬಿತ್ತರಗೊಳ್ಳುತ್ತದೆ. ಈ ವಿದ್ಯಮಾನವನ್ನು ಬಹಳ ಗಂಭೀರವಾಗಿಯೇ ನೋಡಬೇಕು. ಪ್ರಾಯಶಃ ಭಕ್ತಿ ಸಿನೆಮಾಗಳೆಲ್ಲವೂ ಹಿಂಸೆಯೆಂಬ ಕಚ್ಚಾವಸ್ತುವಿನಿಂದ ತಯಾರಿಸಿದ ಮಾರ್ಕೆಟಿಂಗ್ ಸರಕುಗಳಂತೆ ಕಾಣುತ್ತವೆ. ಹೆಚ್ಚು ಹೆಚ್ಚು ವಿಚಿತ್ರವಾದ ಹಿಂಸೆಗಳು ಭಕ್ತರಿಗೆ ಉಂಟಾದಷ್ಟೂ ಆ ಸಿನೆಮಾದ ಶಕ್ತಿ ಹೆಚ್ಚುತ್ತದೆ. ಸಿನೆಮಾ ಮುಗಿಯುವ ವೇಳೆಗೆ ತೆರೆಯ ಮೇಲೆ ಕಂಡ ಹಿಂಸೆ, ಕ್ರೌರ್ಯ ಎಲ್ಲವೂ ಕರಗಿ ಹೋಗಿ ಭಕ್ತ ಮತ್ತು ಪ್ರೇಕ್ಷಕ ಇಬ್ಬರಿಗೂ ದೇವರ ದರ್ಶನವಾಗುತ್ತದೆ.

ತನ್ನ ಇಷ್ಟದೈವದ ಮೇಲಿನ ನಿರಂತರ ನಿಷ್ಠೆಯನ್ನು ತೋರಿಸುವ ಪ್ರತಿಯೊಬ್ಬ ಭಕ್ತನೂ ಒಂದಿಲ್ಲೊಂದು ಅವಘಡಗಳಿಗೆ ಒಳಗಾಗಲೇ ಬೇಕಿರುತ್ತದೆ. ಭಕ್ತಿ ನಡೆಸುವುದು ದಿವ್ಯವನ್ನು ಹಿಡಿಯುವುದೂ ಎರಡೂ ಒಂದೇ ಆಗಿವೆ. ಭಕ್ತಿಯಲ್ಲಿ ನಿಷ್ಠೆ ಕಡಿಮೆಯಾದರೆ ದಿವ್ಯ ಹಿಡಿವಲ್ಲಿ ಅಸತ್ಯವಿದ್ದರೆ ಅಧರ್ಮಿಯ ನಾಶ ಖಚಿತ. ಭಕ್ತಿಸಿನೆಮಾದ ಆರಂಭದಿಂದಲೂ ಹಿಂಸೆ ಅಪಮಾನವನ್ನು ಧರಿಸಿಕೊಳ್ಳುವ ಭಕ್ತರು ಸಿನೆಮಾದ ಕೊನೆಯಲ್ಲಿ ದೈವದ ಕೃಪೆ ಪಡೆಯುತ್ತಾರೆ. ಅಥವಾ ಅವರನ್ನು ದೇವರು ಸಶರೀರರನ್ನಾಗಿ ಕೈಲಾಸಕ್ಕೋ-ವೈಕುಂಠಕ್ಕೋ ಕರೆದೊಯ್ಯುತ್ತಾನೆ (ಡಾ.ರಾಜಕುಮಾರ್ ಅಭಿನಯದ ಸಂತ ತುಕಾರಾಂ ಮತ್ತು ಓಹಿಲೇಶ್ವರ ಸಿನೆಮಾಗಳ ಸಮಾಪ್ತಿಯಲ್ಲಿ ಪುಷ್ಪಕವಿಮಾನ ಬಂದು ತುಕಾರಾಂ ಮತ್ತು ಓಹಿಲಯ್ಯನನ್ನು ಸಶರೀರವಾಗಿ ದೈವಲೋಕಕ್ಕೆ ಕರೆದೊಯ್ಯುವಂತೆ).

ಸಿನೆಮಾದ ಕೊನೆಯ ಹತ್ತು-ಹದಿನೈದು ನಿಮಿಷಗಳಲ್ಲಿ ಭಕ್ತನ ಸಂಕಟಗಳು ದೂರವಾಗುತ್ತವೆ. ಸಿನೆಮಾವೂ ಸುಖಾಂತ್ಯದಿಂದಲೇ ಮುಗಿಯುತ್ತದೆ. ಆದರೆ ಪ್ರೇಕ್ಷಕ ಇದುವರೆಗೆ ಕಂಡ, ತನ್ನವನೆಂದುಕೊಂಡ ಭಕ್ತನಿಗೆ ಸಿನೆಮಾದಲ್ಲಿ ನೆಮ್ಮದಿ ಸಿಕ್ಕ ಘಳಿಗೆ ಅತಿ ಕಡಿಮೆ. ಶ್ರೋತೃಗಳ ಪಾಲಿಗಂತೂ ಭಕ್ತನು ಅನುಭವಿಸಿದ ಸಂಕಟದ ಹೊರೆಯೇ ಅಧಿಕವಾಗಿ ಉಳಿಯುತ್ತದೆ. 

3 ಹಿಂಸೆಯ ವಿವಿಧ ಸ್ವರೂಪ

ಭಕ್ತಿಸಂತರಿಗೆ ತಮ್ಮ ಭಕ್ತಿಯನ್ನು ಸಾರ್ವಜನಿಕ ಪ್ರದರ್ಶನ ಮಾಡುವ ಯಾವುದೇ ಉದ್ದೇಶಗಳು ಇರುವುದಿಲ್ಲ. ಯಾರ ತಂಟೆ-ತಕರಾರುಗಳಿಗೂ ಹೋಗದೆ ತಮ್ಮ ಭಕ್ತಿಯನ್ನು ನಡೆಸುತ್ತಿರುತ್ತಾರೆ. ಆದರೆ ಭಕ್ತರ ಭಕ್ತಿಯನ್ನು ಸಾರ್ವಜನಿಕರ ಎದುರಿಗೆ ಪ್ರಕಟಿಸುವ ‘ಇವನು ನನ್ನ ಪ್ರಿಯಭಕ್ತ’ನೆಂದು ಜಾಹೀರುಗೊಳಿಸುವ ಸಲುವಾಗಿ ದೇವರು ಅನೇಕ ಪರೀಕ್ಷೆಗಳನ್ನು ಸೃಷ್ಟಿಸುತ್ತಾನೆ. ದೈವವು ಇಂತಹ ಪರೀಕ್ಷೆಗಳನ್ನು ಸೃಷ್ಟಿಸುವಾಗ ಹಿಂಸೆ, ಅಪಮಾನ ಮತ್ತು ಪುತ್ರ-ಪತ್ನಿ ವಿಯೋಗವನ್ನು ಭಕ್ತರು ಅನುಭವಿಸುತ್ತಾರೆ. ಭಕ್ತರು ಅನುಭವಿಸಿದ ಯಾತನೆಗಳ ವಿಪುಲ ಕಥನಗಳು ಕನ್ನಡ ಸಿನೆಮಾಗಳಲ್ಲಿವೆ. ಹೀಗೆ ಕನ್ನಡ ಭಕ್ತಿಸಿನೆಮಾಗಳಲ್ಲಿ ಕಂಡುಬರುವ ಹಿಂಸೆಯ ವಿಧಾನಗಳನ್ನು ಈ ಕೆಳಕಂಡಂತೆ ವಿಭಾಗಿಸಬಹುದಾಗಿದೆ.

ಅಚಲ ಭಕ್ತಿಯ ಪ್ರದರ್ಶನಕ್ಕಾಗಿ ಪ್ರಭುತ್ವದಿಂದ ಒದಗುವ ಹಿಂಸೆ/ಶಿಕ್ಷೆಗಳು:

ಪ್ರಭುತ್ವ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲವನ್ನೂ ತನ್ನ ಅಧೀನದಲ್ಲಿಡಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಅದು ಕೇವಲ ತನ್ನಾಧೀನ ಸಂಸ್ಥೆಗಳನ್ನು ಮಾತ್ರವಲ್ಲ ಜನರ ಭಾವನೆಗಳ ನಿರ್ಣಯಕನಾಗಿ ತಾನೇ ಇರಬೇಕು ಎಂಬ ಪ್ರಯತ್ನವನ್ನು ನಡೆಸಿದ ದೃಷ್ಟಾಂತಗಳು ನಮ್ಮ ಮುಂದಿವೆ. ಸಾಹಿತ್ಯದಲ್ಲಂತೂ ಕವಿ ರಾಜನನ್ನು ಹೊಗಳಿ ಬರೆಯುವುದು, ಅವನ ಜೋಳದ ಪಾಳಿಯಲ್ಲಿರುವುದು, ಕೊನೆಗೊಮ್ಮೆ ಪ್ರಭುತ್ವದ ಸಾಮ್ರಾಜ್ಯಶಾಹಿ, ದಮನಕಾರಿ ನೀತಿಗಳ ವಿರುದ್ಧ ಧ್ವನಿಯೆತ್ತಿದ ಪ್ರಸಂಗಗಳು ಸಾಕಷ್ಟಿವೆ. ಕನ್ನಡದ ಅನೇಕ ಸಿನೆಮಾಗಳಲ್ಲಿ ಭಕ್ತನೊಬ್ಬ ರಾಜನ ಆಸ್ಥಾನದಲ್ಲಿದ್ದು ರಾಜನ ಆಣತಿಯನ್ನು ಧಿಕ್ಕರಿಸಿ ಭಕ್ತಿ ನಡೆಸಿದ ಕಾರಣಕ್ಕಾಗಿ ಭಕ್ತರನ್ನು ದಂಡಿಸುವ ದೃಶ್ಯಗಳ ಸಂಯೋಜನೆ ಇದೆ. ಶಿವಲೀಲೆ (1996) ಸಿನೆಮಾದಲ್ಲಿ ಚಂದ್ರಸೇನ ಮಹಾರಾಜ ಕಠಿಣ ಪ್ರಶ್ನೆಗಳ ಸವಾಲನ್ನು ಒಡ್ಡಿ ಶಿವಭಕ್ತನನ್ನು ಅಧೀರಗೊಳಿಸುತ್ತಾನೆ.

ಪುರೋಹಿತಶಾಹಿ ವ್ಯವಸ್ಥೆ ಮತ್ತು ಜಮೀನ್ದಾರರಿಂದ ಒದಗುವ ಹಿಂಸೆ:

ಇದೊಂದು ರೀತಿಯಲ್ಲಿ ಹಿಂಸೆಯ ಶ್ರೇಣೀಕರಣ. ಮೊದಲ ಅಂಶದಲ್ಲಿ ಪ್ರಭುತ್ವ ಭಕ್ತರ ಮೇಲೆ ಚಲಾಯಿಸಿದ ಹಿಂಸೆ ಒಂದು ರೀತಿಯದ್ದಾದರೆ ಪ್ರಭುತ್ವದ ನಂತರದ ಸ್ಥಾನದಲ್ಲಿ ಬರುವ ಅಧಿಕಾರೀ ವ್ಯವಸ್ಥೆಯೂ ಭಕ್ತರನ್ನು ಹಿಂಸಿಸಿದೆ. ತಿರುಮಲತಿರುಪತಿ ದೇವಾಲಯದ ಪುರೋಹಿತ ವರ್ಗವು ವೃದ್ಧ ಭಕ್ತನೊಬ್ಬನಿಗೆ (ಬಾಲಾಜಿ) ಆನೆ ತಿನ್ನುವಷ್ಟು ಕಬ್ಬನ್ನು ಒಂದೇ ರಾತ್ರಿಯಲ್ಲಿ ತಿಂದು ಮುಗಿಸುವ ಶಿಕ್ಷೆ ವಿಧಿಸುತ್ತದೆ. ಆಲಯದ ಕೇಂದ್ರಕ್ಕೆ ಪ್ರವೇಶ ನಿರಾಕರಣೆ ಮಾಡಲಾಗುತ್ತದೆ (ಶ್ರೀ ಶ್ರೀನಿವಾಸಕಲ್ಯಾಣ-1974). ಭಕ್ತ ಕನಕದಾಸ (1960)ದಲ್ಲಿ ಪೂಜಾ ಸಮಯಕ್ಕೆ ದೇವರನ್ನು ತೋರಿಸಲು ಪುರೋಹಿತಶಾಹಿಯು ಸವಾಲು ಹಾಕುವುದು, ಛಾಟಿ ಏಟಿನ ಶಿಕ್ಷೆ ನೀಡುವುದು ಕಂಡುಬಂದರೆ ಭಕ್ತ ಸಿರಿಯಾಳ (1980) ಸಿನೆಮಾದಲ್ಲಿ ಜಮೀನ್ದಾರರು, ಗ್ರಾಮದ ಮುಖಂಡರು ಸಿರಿಯಾಳನನ್ನು ಸಂಕಷ್ಟಕ್ಕೆ ಒಡ್ಡಲೆಂದೇ ಹವಣಿಸುತ್ತಾರೆ. ಸಂತ ತುಕಾರಾಂ (1963) ಕಾವಲಿದ್ದ ಬೆಳೆಗೆ ಬೆಂಕಿ ಹಚ್ಚಿ ಅವನನ್ನು ಕಷ್ಟಕ್ಕೇ ಒಡ್ಡಲಾಗುತ್ತದೆ.

ದೇವರು ಭಕ್ತನನ್ನು ಪರೀಕ್ಷಿಸಲು ನೀಡುವ ಹಿಂಸೆ:

ಕೆಲವೊಂದು ಸಿನೆಮಾಗಳಲ್ಲಿ ಭಕ್ತರಿಗೆ ಕೇವಲ ಹೊರಗಿನ ಶಕ್ತಿಗಳಷ್ಟೇ ಅಲ್ಲ ಭಕ್ತರು ಆರಾಧಿಸುವ ದೇವರೇ ಸ್ವಯಂ ಪರೀಕ್ಷೆಗಳನ್ನು ಒಡ್ಡುತ್ತಾನೆ. ಶಿಕ್ಷೆಗಳನ್ನು ನಿರ್ಮಿಸುತ್ತಾನೆ. ದೈವವನ್ನು ಒಲಿಸಿಕೊಳ್ಳಲು ನಡೆಸುವ ಧ್ಯಾನ, ತಪಸ್ಸುಗಳಿಗೆ ದೇವರೇ ಭಂಗ ತರಲು ಪ್ರಯತ್ನಿಸುತ್ತಾನೆ. ಅವರಿಗೆ ಅಧಿಕಾರ, ಹಣದ ಅಧಿಕಾರವನ್ನೂ ಸಾವಿನ ಭಯವನ್ನೂ ತೋರಿಸಲಾಗುತ್ತದೆ. ಏಟು ಎದುರೇಟು (1981) ಚಿತ್ರದಲ್ಲಿ ಹನುಮನೇ ತನ್ನ ಭಕ್ತನ ದೃಢತೆಯನ್ನು ಪರೀಕ್ಷಿಸುವ ಸಲುವಾಗಿ ಹೆಣ್ಣಿನ ಆಸೆ ತೋರಿಸುತ್ತಾನೆ, ಭಕ್ತ ಪೂಜೆಗೆ ಕುಳಿತಿರುವ ಜಾಗದ ಸುತ್ತಲೂ ಬೆಂಕಿ ಹೊತ್ತಿಸುತ್ತಾನೆ, ಭೀತಿ ಹುಟ್ಟಿಸುತ್ತಾನೆ. ಪ್ರಚಂಡಕುಳ್ಳ (1984) ಸಿನೆಮಾದಲ್ಲಿ ಕುಳ್ಳನ ವಿಚಿತ್ರ ಶಿವಪೂಜೆಗೆ ದೇವಿ ಪಾರ್ವತಿ ಕಲ್ಲುಗಳೇ ಸಿಗದಂತೆ ಮಾಡುತ್ತಾಳೆ. ಕಲ್ಲುಗಳು ಮಾಯವಾಗುವುದನ್ನು ಕಂಡ ಭಕ್ತಕುಳ್ಳ ಬೃಹತ್ ಬಂಡೆಯನ್ನು ತನ್ನ ತಲೆಯಿಂದಲೇ ಗುದ್ದಿ ಚೂರು ಮಾಡಿ ಶಿವಪೂಜೆಗೆ ಕಲ್ಲುಹೊಂದಿಸಲು ಪ್ರಯತ್ನಿಸಿದರೆ, ಕಿಂಕಿಣೀ ಶರ್ಮನೆಂಬ ಮಾಂತ್ರಿಕ ಮುನಿದ ದುರ್ಗೆಯನ್ನು ಒಲಿಸಿಕೊಳ್ಳಲು ತನ್ನ ಶಿರವನ್ನು ಕಡಿದುಕೊಂಡು ಬರೀ ಮುಂಡದಿಂದಲೇ ಪೂಜಿಸತೊಡಗುತ್ತಾನೆ.

ನಿಷ್ಠಭಕ್ತಿಯ ಪಾಲನೆಗಾಗಿ ಸ್ವಯಂ ಭಕ್ತರೇ ತಂದುಕೊಳ್ಳುವ ಹಿಂಸೆ:

ಭಕ್ತಿಸಿನೆಮಾಗಳ ಭಕ್ತರು ತಮ್ಮದೇ ಆದ ಕೆಲವೊಂದು ಆಚರಣೆಗಳನ್ನು ನಡೆಸುತ್ತಾ ಬರುತ್ತಿರುತ್ತಾರೆ. ಅದನ್ನು ಯಾವುದೇ ಕಾರಣಕ್ಕೂ ತಪ್ಪಿ ನಡೆಯಲಾರರು. ಇವೆಲ್ಲವೂ ಪೂರ್ವ ವಿವೇಚನೆ ಇಲ್ಲದೆ ಕೈಗೊಂಡ ಅಂಧ ನಿರ್ಧಾರಗಳೆಂದು ಕೊನೆಗೆ ದೇವರೇ ಬಂದು ಹೇಳಬೇಕಾಗುತ್ತದೆ! ಭಕ್ತಸಿರಿಯಾಳ (1980) ಸಿನೆಮಾದ ಸಿರಿಯಾಳ ದಂಪತಿ ಪ್ರತಿದಿನ ಒಬ್ಬೊಬ್ಬ ಅತಿಥಿಗೆ ಪ್ರಸಾದ ನೀಡಿಯೇ ತಮ್ಮ ಊಟವನ್ನು ಮಾಡುವ ವ್ರತ ಕೈಗೊಂಡಿರುತ್ತಾರೆ. ಈ ವ್ರತವನ್ನು ಪರೀಕ್ಷಿಸಲು ಸಾಕ್ಷಾತ್ ಶಿವನೇ ಜಂಗಮನೊಬ್ಬನ ವೇಶದಲ್ಲಿ ಬಂದು ಅವರ ಮಗನ ತಲೆಯ ಮಾಂಸದ ಊಟವನ್ನು ಬೇಡುತ್ತಾನೆ. ತಮ್ಮ ವ್ರತನಿಷ್ಠೆಗಾಗಿ ಮಗನ ತಲೆಯನ್ನು ಕತ್ತರಿಸಿ ಜಂಗಮನಿಗೆ ಊಟ ಮಾಡಿ ಬಡಿಸುತ್ತಾರೆ.

ಪಿತೃಭಕ್ತಿಯ ಪರಾಕಾಷ್ಠೆಯಲ್ಲಿ ಪರಶುರಾಮನು (ಶ್ರೀ ರೇಣುಕಾದೇವಿ-2004) ತಾಯಿಯ ತಲೆ ಕತ್ತರಿಸಬೇಕಾಗುತ್ತದೆ. ಭಕ್ತಕುಂಬಾರ(1974) ಸಿನೆಮಾದಲ್ಲಿ ಭಕ್ತಗೋರ ತನ್ನ “ಹೆಂಡತಿಯನ್ನು ಸ್ಪರ್ಶಿಸುವುದಿಲ್ಲ” ಎಂಬ ಪ್ರಮಾಣ ಮಾಡುತ್ತಾನೆ. ನಿದ್ದೆಯಲ್ಲಿ ಹೆಂಡತಿಯನ್ನು ಸ್ಪರ್ಶ ಮಾಡಿದ ತಪ್ಪಿಗೆ ಎರಡೂ ಕೈಗಳನ್ನು ಕತ್ತರಿಸಿಕೊಳ್ಳುತ್ತಾನೆ. ಮಡಿಕೆ ಮಾಡಲು ಮಣ್ಣನ್ನು ಹದ ಮಾಡುತ್ತಾ ದೈವ ನಾಮದ ಸ್ಮರಣೆಯಲ್ಲಿ ತಲ್ಲೀನನಾಗಿ ತನ್ನ ಏಕೈಕ ಪುತ್ರನನ್ನು ಅದೇ ಮಣ್ಣಿನಲ್ಲಿ ತುಳಿದು ಕೊಲ್ಲುತ್ತಾನೆ. ಭಕ್ತಿಯ ನೆಪದಲ್ಲಿ ತಂದೆಯೊಬ್ಬ ಮಗುವನ್ನು ತುಳಿದು ಕೊಲ್ಲುವ ಘೋರವನ್ನು ಪ್ರೇಕ್ಷಕ ವಿಠಲನಾಮ ಸ್ಮರಣೆಯೊಂದಿಗೇ ಎದುರಿಸಬೇಕಾಗುತ್ತದೆ.

ಹಿಂಸೆಯ ಪ್ರದರ್ಶನ ಕೇವಲ ಕನ್ನಡ ಭಕ್ತಿಸಿನೆಮಾಗಳಲ್ಲಿ ಮಾತ್ರವಲ್ಲ ಇಡೀ ಭಾರತೀಯ ಪೌರಾಣಿಕ/ಭಕ್ತಿಸಿನೆಮಾಗಳಲ್ಲಿ ಬೆರೆತು ಹೋಗಿದೆ. ಹಿಂಸೆಯಿರದೆ ಭಕ್ತಿಕಥನಗಳನ್ನ ತೋರಿಸಲಾರದ ವಾತಾವರಣವು ಸಿನೆಮಾ ಲೋಕದಲ್ಲಿ ನಿರ್ಮಿತಿಯಾಗಿದೆ. ದಕ್ಷಿಣ ಭಾರತೀಯ ಭಕ್ತಿಸಿನೆಮಾಗಳಲ್ಲಿ ಅದರಲ್ಲೂ ಕನ್ನಡ, ತೆಲುಗು, ಮತ್ತು ತಮಿಳು ಭಾಷಾ ಭಕ್ತಿಸಿನೆಮಾಗಳಲ್ಲಿ ಹಿಂಸೆಯ ವೈಭವೀಕರಣವು ಢಾಳಾಗಿ ಕಂಡುಬರುತ್ತವೆ. ಶ್ರೋತೃಗಳ ಭಾವನೆಗಳನ್ನು ರೂಪಿಸುವ ಮತ್ತು ನಿಯಂತ್ರಿಸುವ ಸಿನೆಮಾದ ಕಲೆಯು ದಕ್ಷಿಣದ ಜನರನ್ನು ತೀವ್ರವಾಗಿ ಪ್ರಭಾವಿಸಿದೆ. “ಜನಪ್ರಿಯ ನಟರನ್ನು ಸೃಷ್ಟಿ ಮಾಡುವುದಕ್ಕೋಸ್ಕರ ಮತ್ತು ಅವರ ಮೂಲಕ ಸಾರ್ವಜನಿಕರ ಮನಸ್ಸಿನ ಮೇಲೆ ಬಲವಾದ ಪ್ರಭಾವನ್ನು ಬೀರುವುದಕ್ಕೋಸ್ಕರ ಸಿನೆಮಾ ನಿರ್ಮಾಪಕರು ಮತ್ತು ನಟರು ಒಟ್ಟಿಗೆ ಸೇರಿ ಸಿನೆಮಾದ ತಾಂತ್ರಿಕತೆಯ ಶಕ್ತಿಯನ್ನು ಬಳಸಿಕೊಳ್ಳುತ್ತಾರೆ” [ಲೋಕಜ್ಞಾನ, ಸಂ: ಡಾ.ನಿತ್ಯಾನಂದ ಬಿ.ಶೆಟ್ಟಿ].

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕಗಳಲ್ಲಿ ಸಿನೆಮಾ ನಾಯಕ-ನಾಯಕಿಯರು ಪರದೆಯ ಮೇಲೆ ದೇವರ-ಭಕ್ತರ ಪಾತ್ರಗಳನ್ನು ನಿರ್ವಹಿಸುತ್ತಲೇ ಪ್ರಚಂಡ ಜನಬೆಂಬಲವನ್ನು ಸೃಷ್ಟಿಸಿಕೊಂಡರು. ರಾಜಕುಮಾರ್ ಕನ್ನಡ ಸಿನೆಮಾ ರಂಗದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದು

ಭಕ್ತ ‘ಬೇಡರಕಣ್ಣಪ್ಪ’ನ ಪಾತ್ರವನ್ನು ಹೊರುವ ಮೂಲಕ, ತೆಲುಗಿನಲ್ಲಿ ಎನ್.ಟಿ.ರಾಮರಾವ್ ಅವರನ್ನು ಜನ ಮೆಚ್ಚಿದ್ದು ರಾಮ ಮತ್ತು ಕೃಷ್ಣನ ಪಾತ್ರಗಳ ಮೂಲಕವೇ ಆಗಿದೆ. ಹೀಗೆ ಪೌರಾಣಿಕ/ಭಕ್ತಿಸಿನೆಮಾಗಳು ಹಾಕಿಕೊಟ್ಟ ನಾಯಕ-ನಾಯಕಿಯರನ್ನು ಹಿಂಸೆಗೆ ಗುರಿಪಡಿಸಿ ಸಿನೆಮಾವನ್ನು ಗೆಲ್ಲಿಸುವ ತಂತ್ರವನ್ನು ಎಲ್ಲಾ ಮಾದರಿಯ ಜನಪ್ರಿಯ ಸಿನೆಮಾಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತಿದೆ.

Leave a Reply

Your email address will not be published.