ಕನ್ನಡ ಮತ್ತೆ ತಲೆ ಎತ್ತುವ ಬಗೆ

ಈವರೆಗೂ ರಾಷ್ಟ್ರೀಯ ಭಾಷಾ ನೀತಿ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸದೆ ಎಲ್ಲ ದೇಶಿ ಭಾಷೆಗಳು ಇಂಗ್ಲಿಷ್ ಭಾಷೆ ಅಡಿ ನಲುಗುವಂತಾಗಿದೆ. ಆಗಾಗ ಹಿಂದಿ ಗುಮ್ಮನ ಬೆದರಿಕೆ ಬೇರೆ. ಭಾರತದ ಸಂವಿಧಾನದಲ್ಲಿ ಒಳಗೊಂಡ ಎಲ್ಲ ಭಾಷೆಗಳೂ ಪ್ರಭುದ್ಧ ಭಾಷೆಗಳಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇಂದ್ರ/ರಾಜ್ಯ ಸರಕಾರಗಳ ಮೇಲಿದೆ.

ಕನ್ನಡ ತೇರನ್ನು ಎಳೆಯಲು ಹೊಸ ತಲೆಮಾರಿನ ಯುವಕರು ವಿಭಿನ್ನ ಬಗೆಯ ಆಲೋಚನೆಗಳಿಂದ ಕಾರ್ಯಪ್ರವರ್ತರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ತಮ್ಮ ಕೆಲಸ ಕಾರ್ಯಗಳೊಂದಿಗೆ ಇವರು ತಾಯ್ನುಡಿಯ ಮೇಲಿನ ಪ್ರೀತಿ, ಕಳಕಳಿಯಿಂದಾಗಿ ಹೊಸದಾದ ತಾಂತ್ರಿಕ ಕೌಶಲಗಳು, ಪರಿಕರಗಳು, ನಿಪುಣತೆಗಳ ಮೂಲಕ ಕನ್ನಡ ಕಲಿಕೆಯನ್ನು ಹೆಚ್ಚು ಮಕ್ಕಳ ಸ್ನೇಹಿಯಾಗಿಸಲು ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆಯ ಅವಶ್ಯಕತೆಯನ್ನು ಮನಗಾಣಿಸಲು ಯತ್ನಿಸುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ. ವಿವಿಧ ಮಾಧ್ಯಮಗಳಲ್ಲಿ ಇವರು ಕನ್ನಡದ ದ್ವನಿಯಾಗಿ ಸಕ್ರಿಯವಾಗಿ ನುಡಿ ಸೇವೆ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಸರಕಾರ ಪ್ರಾಥಮಿಕ ಹಂತದ ಕಲಿಕೆಯಲ್ಲಿ ಹಲವಾರು ಬದಲಾವಣೆÉಗಳನ್ನು ತರುವ ಬಗ್ಗೆ ಚಿಂತಿಸಬೇಕು.

ಪ್ರಶಸ್ತಿ, ಮಾನ ಸನ್ಮಾನಗಳ ಭಾರದಲ್ಲಿ ನಲುಗಿ ಹೋಗಿರುವ ಕನ್ನಡದ ಹಿರಿಯ ಸಾಹಿತಿಗಳು, ವಿದ್ವಾಂಸರು ಕನ್ನಡ ಭಾಷೆಗೆ ಎದುರಾಗಿರುವ ಈ ಸಂಕಟ ಸಮಯದಲ್ಲಿ ಸರಕಾರದ ವಿರುದ್ಧ ಧ್ವನಿ ಕೂಡ ಎತ್ತಲಾರದಷ್ಟು ದಣಿದಿದ್ದಾರೆ. ಇನ್ನು ಕನ್ನಡದ ಏಳ್ಗೆಗಾಗಿಯೆ ಹುಟ್ಟಿಕೊಂಡಿರುವ ಕಸಾಪ ದಂತಹ ಸಂಸ್ಥೆಗಳು ವಾರ್ಷಿಕ ಸಮ್ಮೇಳನಗಳನ್ನು ನಡೆಸುವುದೇ ದೊಡ್ಡ ಸಾಧನೆಯಾಗುತ್ತದೆ. ಕನ್ನಡಕ್ಕೆ ಬಂದಿರುವ ಆಪತ್ತು ಕುರಿತು ಕಸಾಪಕ್ಕೆ ಆತಂಕವಿಲ್ಲ. ಸಮ್ಮೇಳನಗಳಿಂದ ಕನ್ನಡದ ಯಾವ ಉದ್ದೇಶವು ಈಡೇರುತ್ತಿಲ್ಲ. ಸಮ್ಮೇಳನದ ನಿರ್ಣಯಗಳಿಗೆ ಸರಕಾರ ಕವಡೆ ಕಿಮ್ಮತ್ತನ್ನೂ ನೀಡುತ್ತಿಲ್ಲ.

ಧಾರವಾಡ ಸಮ್ಮೇಳನದ ನಿರ್ಣಯದ ನಂತರವೂ ಯಾವುದೇ ಚರ್ಚೆ, ಚಿಂತನೆಗಳಿಲ್ಲದೆ ಸರಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಿತು. ಸರಕಾರದ ದಾಷ್ಟ್ರ್ಯದ ನಡೆ ವಿರುದ್ಧ ಕಸಾಪ ಹಿರಿಯ ಸಾಹಿತಿಗಳನ್ನು ಕಟ್ಟಿಕೊಂಡು ಒಂದು ಸಾಂಕೇತಿಕ ಪ್ರತಿಭಟನೆಯನ್ನೂ ಕೂಡ ನಡೆಸಲಿಲ್ಲ. ಕಸಾಪ, ಕಸಾಅ, ಕಅಪ್ರಾ, ಕವಿವಸಂ ದಂತಹ ಸಂಸ್ಥೆಗಳು ಸರಕಾರದ ಅಂಗ ಸಂಸ್ಥೆಗಳ ಮಟ್ಟಕ್ಕೆ ಇಳಿದುಬಿಟ್ಟಿವೆ. ಕನ್ನಡಕ್ಕಿಂತ ಆ ಸಂಸ್ಥೆಗಳ ಅಧ್ಯಕ್ಷಗಿರಿಯ ಮೋಹವೇ ಹೆಚ್ಚಾಗಿದೆ. ‘ಮಾತೃಭೂಮಿಯನ್ನೇ ಮಾರ್ಕಂಡು ತಿನ್ನವರಿಗೆ ಮಾತೃಭಾಷೆ ಯಾವ ಲೆಕ್ಕ’ ಅನ್ನುವ ವಾತಾವರಣದಲ್ಲಿ ಕನ್ನಡ ಕಟ್ಟುವ/ಕಾಯುವ ಕಾಯಕಕ್ಕೆ ಹೊಸ ತಲೆಮಾರಿನ, ಹೊಸ ಚಿಂತನೆಗಳ ಕಟ್ಟಾಳುಗಳು ಸಕ್ರಿಯವಾಗಿರುವ ಅವಶ್ಯಕತೆ ಇದೆ.

ಉಳ್ಳವರು, ಬಡವರ ನಡುವೆ ಶೈಕ್ಷಣಿಕ ತಾರತಮ್ಯವನ್ನು ಉಂಟು ಮಾಡಿ, ಸಮಾನ ಶಿಕ್ಷಣ, ಸಮಾನ ಶಾಲಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತ ಬಂದ ಸರಕಾರಗಳು, ಆಂಗ್ಲ ಮಾಧ್ಯಮ, ಗುಣಮಟ್ಟದ ಶಿಕ್ಷಣಕ್ಕೆ ಪರ್ಯಾಯವೆಂಬ ನಿಲುವು ತಳೆದದ್ದು ವಿವೇಚನೆರಹಿತ ಕ್ರಮವಾಗಿದೆ.

ಜನಕ್ಕೆ ಇಂಗ್ಲಿಷ್ ಬೇಕು, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಅಂತ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿರುವದಾಗಿ ಸರಕಾರ ಹೇಳುತ್ತದೆ. ಕನ್ನಡ ನಾಡು ನುಡಿಯ ಅಭಿವೃದ್ಧಿಗಾಗಿ ರಚನೆಗೊಂಡಿರುವ ಸರಕಾರದ ಹೇಳಿಕೆ ಇದು. ತನ್ನ ಕ್ರಮದ ದೀರ್ಘಕಾಲೀನ ಸಾಧಕಬಾಧಕಗಳ ಅರಿವೇ ಸರಕಾರಕ್ಕಿಲ್ಲದಿರುವುದು ನಾಡಿನ ದುರಂತ. ಕನ್ನಡ ನಾಡನುಡಿ ಹಿತಾಸಕ್ತಿ ಕಾಯಲು ಸರಕಾರ ಬದ್ಧ ಎಂದು ಹೇಳುತ್ತಲೇ ಎಲ್ಲ ಸರಕಾರಗಳು ಅದಕ್ಕೆ ತದ್ವಿರುದ್ಧ ಕೆಲಸ ಮಾಡುತ್ತಲೇ ಬಂದಿವೆ. ಉಳ್ಳವರು, ಬಡವರ ನಡುವೆ ಶೈಕ್ಷಣಿಕ ತಾರತಮ್ಯವನ್ನು ಉಂಟು ಮಾಡಿ, ಸಮಾನ ಶಿಕ್ಷಣ, ಸಮಾನ ಶಾಲಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತ ಬಂದ ಸರಕಾರಗಳು, ಆಂಗ್ಲ ಮಾಧ್ಯಮ, ಗುಣಮಟ್ಟದ ಶಿಕ್ಷಣಕ್ಕೆ ಪರ್ಯಾಯವೆಂಬ ನಿಲುವು ತಳೆದದ್ದು ವಿವೇಚನೆರಹಿತ ಕ್ರಮವಾಗಿದೆ. ಕನ್ನಡ ಶಾಲೆಗಳನ್ನು ಅಧೋಗತಿಗಿಳಿಯಲು ಬಿಟ್ಟು, ಖಾಸಗಿ ಶಾಲೆಗಳನ್ನು ಆರ್.ಟಿ.ಇ. ಮುಂತಾದ ಕ್ರಮಗಳ ಮೂಲಕ ಬಲಪಡಿಸುತ್ತ ಸರಕಾರ ಗ್ರಾಮೀಣ ಮಕ್ಕಳ ಶಿಕ್ಷಣದೊಂದಿಗೆ ಆಟವಾಡುತ್ತ ಬಂದಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯ ಕುರಿತು ಪರ್ಯಾಯ ಶಾಲೆಗಳ ಹುಡುಕಾಟದಲ್ಲಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಪ್ರತಿವರ್ಷ ಮಕ್ಕಳು ಸರಕಾರಿ ಶಾಲೆ ತೊರೆಯುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲೇ ಗುಣಮಟ್ಟದ ಶಿಕ್ಷಣ ನೀಡಲಾಗದ ಸರಕಾರ ಆಂಗ್ಲ ಮಾಧ್ಯಮಕ್ಕೆ ಕೈ ಹಾಕಿ ಮಕ್ಕಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದೆ. ಮೊದಲೇ ಸರಕಾರಿ ಶಾಲೆಗಳಲ್ಲಿ ಕ್ಷೀಣಿಸುತ್ತಿದ್ದ ಮಕ್ಕಳ ಸಂಖ್ಯೆ ಈ ಕ್ರಮದಿಂದಾಗಿ ಇನ್ನೂ ತ್ವರಿತಗೊಂಡು, ಬರುವ 10-15 ವರ್ಷಗಳಲ್ಲಿ ಸರಕಾರಿ ಶಾಲೆಗಳು ಮುಚ್ಚಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ಹುಡುಕಿಕೊಂಡು ಹೋಗಬೇಕು. ಶಾಲೆಗಳಲ್ಲಿಯೇ ಕನ್ನಡ ಕಲಿಕೆ ಇಳಿಮುಖವಾದರೆ ಇನ್ನು ಕನ್ನಡಕ್ಕೆ ಉಳಿಗಾಲ ಎಲ್ಲಿ. ಈ ದೆಶೆಯಲ್ಲೂ ಯುವ ಪೀಳಿಗೆ ತಾವೆ ಮಾದರಿಯಾಗುವ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕುತ್ತಿದ್ದಾರೆ.

ಕನ್ನಡ ಮಾಧ್ಯಮ ಶಾಲೆಗಳ ಕುರಿತು ಸರಕಾರದ ನಡೆ ಜವಾಬ್ದಾರಿಯುತವಾಗಿಲ್ಲ. ಸರಕಾರಿ ಶಾಲೆಗಳ ಸುಧಾರಣೆ ಆಗದೇ ಕನ್ನಡಕ್ಕೆ ಉಳಿಗಾಲವಿಲ್ಲ. ಹಾಗಾದರೆ ಕನ್ನಡದ ಉಳಿವಿಗೆ ಸರಕಾರಿ ಶಾಲೆಗಳು ಮಾತ್ರ ಹೊಣೆಗಾರ ಆಗಬೇಕೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಕನ್ನಡ ಅನ್ನದ ಭಾಷೆಯಾಗಬೇಕು, ಹಾಗಾದಾಗ ಮಾತ್ರ ಇಂಗ್ಲಿಷ್ ಮೋಹ ಕಡಿಮೆ ಆಗಬಹುದೆಂಬ ಮಾತು ಕೇಳಿಬರುತ್ತವೆ. ಈಗ ಆಂಗ್ಲ ಮಾಧ್ಯದಲ್ಲಿ ಓದಿ, ಉಚ್ಚ ಶಿಕ್ಷಣ ಹೊಂದಿದವರೆಲ್ಲ ಇಚ್ಚಿತ ಉದ್ಯೋಗ ಪಡೆದು ನಿರುಮ್ಮಳವಾಗಿದ್ದಾರೆಯೆ ಎಂದರೆ ಹಾಗೂ ಇಲ್ಲ. ಇಂಗ್ಲಿಷ್ ಬೇಕು, ಯಾವಾಗ, ಯಾರಿಗೆ, ಎಷ್ಟು ಬೇಕು, ಅದನ್ನು ಕಲಿಸುವ ಬಗೆ ಹೇಗೆ ಎಂಬ ಚಿಂತನೆ ಬೇಕು. ಕನ್ನಡವನ್ನು ಕನಿಷ್ಟ ಕರ್ನಾಟಕದಲ್ಲಾದರು ಅನ್ನದ ಭಾಷೆಯನ್ನಾಗಿ ಮಾಡಬಹುದಲ್ಲವೆ. ಅದು ನಮ್ಮ ಸರಕಾರದ ಕೈಯಲ್ಲಿಯೇ ಇದೆ.

ಕನ್ನಡ ಭಾಷೆಯ ಒಂದು ಮಟ್ಟದ ತಿಳಿವಳಿಕೆಯ ಅಗತ್ಯ ಈಗ ಸರಕಾರಿ ಸೇವೆಗೆ ಇದೆ. ಆದರೆ ಅದು ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಎಲ್ಲ ಸೇವೆಗಳಿಗೆ ಹತ್ತನೆಯ ತರಗತಿವರೆಗೆ ಕನ್ನಡ ಮಾಧ್ಯಮದ ಓದು ಕಡ್ಡಾಯವಾದರೆ ಕೊನೆ ಪಕ್ಷ ಕರ್ನಾಟಕದಲ್ಲಾದರು ಕನ್ನಡ ಅನ್ನದ ಭಾಷೆ ಆಗುತ್ತದೆ.

ಸಿಪಾಯಿಯಿಂದ ಮೊದಲ್ಗೊಂಡು ರಾಜ್ಯ ಸರಕಾರದ ಎಲ್ಲ ಸಣ್ಣದೊಡ್ಡ ಹುದ್ದೆಗಳ ಆಯ್ಕೆಗೆ ಒಂದರಿಂದ ಹತ್ತನೆಯ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದನ್ನು ಕಡ್ಡಾಯಗೊಳಿಸುವದು. ಕರ್ನಾಟಕ ಸರಕಾರದ ಸೇವೆಗೆ ಸೇರುವವರು ಕನ್ನಡ ಜನರ ಸೇವೆ ಮಾಡಬೇಕಿರುವುದರಿಂದ ಸೇವೆಗೆ ಅಗತ್ಯವಾಗಿ ಕನ್ನಡ ಚನ್ನಾಗಿ ಬರಬೇಕು. ಉನ್ನತ ಹುದ್ದೆಗಳಿಗೆ ಇನ್ನೂ ಹೆಚ್ಚಿನ ಕನ್ನಡದ ಪ್ರಾವೀಣ್ಯ ನಿಗದಿ ಮಾಡಬೇಕು. ಆಂಗ್ಲ ಮಾಧ್ಯಮದಲ್ಲಿ ಓದಿದವರು, ಹೆಚ್ಚಿನ ಆಸೆ ಆಕಾಂಕ್ಷೆ ಉಳ್ಳವರು ರಾಜ್ಯದ ಒಳಗೋ ಹೊರಗೋ ತಮ್ಮ ದಾರಿಯನ್ನು ತಾವು ಕಂಡುಕೊಳ್ಳುತ್ತಾರೆ. ಕನ್ನಡ ಭಾಷೆಯ ಒಂದು ಮಟ್ಟದ ತಿಳಿವಳಿಕೆಯ ಅಗತ್ಯ ಈಗ ಸರಕಾರಿ ಸೇವೆಗೆ ಇದೆ. ಆದರೆ ಅದು ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಎಲ್ಲ ಸೇವೆಗಳಿಗೆ ಹತ್ತನೆಯ ತರಗತಿವರೆಗೆ ಕನ್ನಡ ಮಾಧ್ಯಮದ ಓದು ಕಡ್ಡಾಯವಾದರೆ ಕೊನೆ ಪಕ್ಷ ಕರ್ನಾಟಕದಲ್ಲಾದರು ಕನ್ನಡ ಅನ್ನದ ಭಾಷೆ ಆಗುತ್ತದೆ. ನಮ್ಮ ಭಾಷೆಯನ್ನೇ ನಮ್ಮ ನಾಡಲ್ಲಿ ಅನ್ನದ ಭಾಷೆಯನ್ನಾಗಿಸದಿದ್ದರೆ ಅದು ಇನ್ನೆಲ್ಲಿ ಸಾಧ್ಯ. ಹಾಗಾದಲ್ಲಿ ಕನ್ನಡ ಕಲಿಕೆಗೆ ತಂತಾನೆ ಇಂಬು ಸಿಗುತ್ತದೆ. ಅದರೊಂದಿಗೆ ಕನ್ನಡ ಶಾಲೆಗಳ ಸುಧಾರಣೆಯೂ ಸಾಧ್ಯವಾಗಬಹುದು.

ಈ ಕುರಿತು ಬರಬಹುದಾದ ಕಾನೂನು ತೊಡಕುಗಳನ್ನು ಸರಕಾರ ದೃಢವಾಗಿ ನಿಭಾಯಿಸಬೇಕು. ಈಗ ಸರಕಾರದ ಅನೇಕ ಇಲಾಖೆಗಳಲ್ಲಿ, ಸ್ಥಳಿಯ ಸಂಸ್ಥೆಗಳಲ್ಲಿ ಅರ್ಧಕ್ಕೂ ಹೆಚ್ಚು ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಜನರಿಗೆ ಇದರಿಂದಾಗಿ ಸಮರ್ಪಕ ಸೇವೆ ಸಿಗುತ್ತಿಲ್ಲ, ಹಣ ಇದ್ದರೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಹುದ್ದೆಗಳು ಖಾಲಿಯಾಗುತ್ತಿದ್ದಂತೆ ತುಂಬುವ ಕ್ರಮ ಆಗಬೇಕು. ಈಗ ಸರಕಾರದ ಹುದ್ದೆಗಳನ್ನು ತುಂಬುವ ವಿಧಾನ ಮತ್ತು ಕಾಲಕ್ರಮದಲ್ಲಿ ಜನ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಸರಕಾರ ಸಕಾಲಿಕ ಸಕಾರಾತ್ಮಕ ಕ್ರಮಗಳ ಮೂಲಕ ಕನ್ನಡವನ್ನು ಮತ್ತೆ ಮುನ್ನೆಲೆಗೆ ತರಬೇಕಿದೆ. ಖಾಸಗಿ ವಲಯಗಳಲ್ಲಿ ಕೂಡ ಸ್ಥಳೀಯರಿಗೆ ಆದ್ಯತೆ ಕುರಿತು ಸರಕಾರ/ಯುವಕರು ನಿಗಾ ವಹಿಸಬೇಕು.

ಹಾಗೆಯೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರದ ಕಚೇರಿಗಳು, ಬ್ಯಾಂಕು, ಅಂಚೆಕಚೇರಿ ಮುಂತಾದವುಗಳಲ್ಲಿ ಕೆಳ ದರ್ಜೆಯಲ್ಲಿ ಕಾರ್ಯ ನಿರ್ವಹಿಸುವ ಕಚೇರಿ ಸಿಬ್ಬಂದಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಯ ಹತ್ತನೆಯ ತರಗತಿ ಮಟ್ಟದ ಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ದೇಶಿ ಭಾಷೆಗಳ ಮಹತ್ವವನ್ನು ಕೇಂದ್ರ ಸರಕಾರ ಸುನಿಶ್ಚಿತಗೊಳಿಸಬಹುದಾಗಿದೆ.. ಎಲ್ಲ ರಾಜ್ಯಗಳು ಸೇರಿ ಈ ಕುರಿತು ಕೇಂದ್ರವನ್ನು ಒತ್ತಾಯಿಸಬೇಕು.

ಸಾಂವಿಧಾನಿಕವಾಗಿ ಕೂಡ ಸರಿಯಾದ ಕ್ರಮ. ಭಾಷಾವಾರು ಪ್ರಾಂತ ರಚನೆಗೆ ಅನುಗುಣವಾದದ್ದು. ಈ ಕುರಿತು ಯುವ ಪೀಳಿಗೆ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸಬೇಕು.

ಎರಡನೆಯದಾಗಿ ಈಗ ಆಂಗ್ಲ ಭಾಷೆಯತ್ತ ಓಡುತ್ತಿರುವ ಮಕ್ಕಳೆಲ್ಲ ಹೆಚ್ಚಾಗಿ ಕನ್ನಡ ಪಾಲಕರ ಮಕ್ಕಳು. ಈಗ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ದ್ವಿತಿಯ ಭಾಷೆಯಾಗಿಯೊ, ತೃತಿಯ ಭಾಷೆಯಾಗಿಯೊ ಕಲಿಯಲು ಸರಕಾರ ಆದೇಶಿಸಿದೆ. ಆದರೆ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ದ್ವಿತಿಯ ತೃತಿಯ ಭಾಷೆಯಾಗಿ ಕಲಿಯುವ ಕನ್ನಡ ಕಾಟಾಚಾರದ ಕನ್ನಡವಾಗಿದೆ. ಅದು ಮಕ್ಕಳಲ್ಲಿ ಭಾಷೆ ಕುರಿತು ಪ್ರೀತಿ ಅಭಿಮಾನವನ್ನು ಹುಟ್ಟಿಸುತ್ತಿಲ್ಲ. ಆದ್ದರಿಂದ ರಾಜ್ಯದ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ಬೋಧಿಸಬೇಕು. ಇದು ಸಾಂವಿಧಾನಿಕವಾಗಿ ಕೂಡ ಸರಿಯಾದ ಕ್ರಮ. ಭಾಷಾವಾರು ಪ್ರಾಂತ ರಚನೆಗೆ ಅನುಗುಣವಾದದ್ದು. ಈ ಕುರಿತು ಯುವ ಪೀಳಿಗೆ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸಬೇಕು.

ಮೇಲಿನ ಎರಡು ಕ್ರಮಗಳೊಂದಿಗೆ ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಎಲ್ಲ ಶಾಲೆಗಳಲ್ಲಿ ಸಮರ್ಪಕವಾಗಿ ಕಲಿಸುವ ವ್ಯವಸ್ಥೆ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈವರೆಗೂ ರಾಷ್ಟ್ರೀಯ ಭಾಷಾ ನೀತಿ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸದೆ ಎಲ್ಲ ದೇಶಿ ಭಾಷೆಗಳು ಇಂಗ್ಲಿಷ್ ಭಾಷೆ ಅಡಿ ನಲುಗುವಂತಾಗಿದೆ. ಆಗಾಗ ಹಿಂದಿ ಗುಮ್ಮನ ಬೆದರಿಕೆ ಬೇರೆ. ಭಾರತದ ಸಂವಿಧಾನದಲ್ಲಿ ಒಳಗೊಂಡ ಎಲ್ಲ ಭಾಷೆಗಳೂ ಪ್ರಭುದ್ಧ ಭಾಷೆಗಳಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇಂದ್ರ/ರಾಜ್ಯ ಸರಕಾರಗಳ ಮೇಲಿದೆ. ಆದರೆ ಸರಕಾರಗಳನ್ನು ವಿವಿಧ ಮಾಧ್ಯಮಗಳ ಮೂಲಕ ಎಚ್ಚರಿಸುವ ಕೆಲಸವನ್ನು ಯುವಕರು ಮಾಡಬೇಕು. ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿ, ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಚಿಂತಿಸಬೇಕು. ಈ ವಿಷಯಗಳ ಕುರಿತು ನೀತಿನಿರೂಪಣೆಗಾಗಿ ಪರಮಾಧಿಕಾರವುಳ್ಳ ರಾಷ್ಟ್ರಮಟ್ಟದ ಒಂದು ಶಾಶ್ವತ ಸಂಸ್ಥೆ/ವ್ಯವಸ್ಥೆ ಬೇಕು. ದೇಶಿ ಭಾಷೆಗಳು, ಸಂಸ್ಕ್ರತಿ, ಪರಂಪರೆಯ ರಕ್ಷಣೆಯ ಹೊಣೆ ಆ ಸಂಸ್ಥೆಗಿರಬೇಕು. ಆಗ ದೇಶಿ ಭಾಷೆಗಳು ಎದುರಿಸುತ್ತಿರುವ ಆತಂಕ ದೂರವಾಗಬಹುದು.

*ಲೇಖಕರು ನಿವೃತ್ತ ಕೆಎಎಸ್ ಅಧಿಕಾರಿ. ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವು ವರ್ಷ ಶಿಕ್ಷಣ ಇಲಾಖೆಯಲ್ಲಿ ಅಪರ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Leave a Reply

Your email address will not be published.