‘ಕನ್ನಡ ಮಹಾಭಾರತ’ದಲ್ಲಿ ರಣರಂಗದ ವರ್ಣನೆ

ಸೈನಿಕರು ಕೇವಲ ಸರಕುಗಳಾಗಿ ಪೇಟೆಯಲ್ಲಿ ಮಾರಲ್ಪಡುವ ಸನ್ನಿವೇಶವೊಂದು ಮನುಷ್ಯ ಸಂಬಂಧಗಳ ಅವನತಿಯನ್ನು ಸೂಚಿಸುತ್ತದೆ. ಯುದ್ಧದಲ್ಲಿ ‘ಮನುಷ್ಯ’ ಮುಖ್ಯವಾಗುವುದಿಲ್ಲ. ಆತ ‘ಸರಕು’ ಮಾತ್ರವಾಗುತ್ತಾನೆಂಬ ಧ್ವನಿ ಹೊರಡಿಸುವ ಕುಮಾರವ್ಯಾಸನ ರೂಪಕ ಅನನ್ಯವಾದುದು. ಇದೇ ರೀತಿಯಾಗಿ ವರ್ತಮಾನದಲ್ಲಿ ಯುದ್ಧ ಬಹುದೊಡ್ಡ ವ್ಯಾಪಾರಕ್ಕೆ ಕಾರಣವಾಗಿದೆ.

ಕುರುಕ್ಷೇತ್ರದ ಹೆಸರು ಕೇಳುತ್ತಿದ್ದಂತೆಯೇ ಮಹಾಭಾರತ ಯುದ್ಧದ ಕತೆ ನೆನಪಾಗುತ್ತದೆ. ಇಲ್ಲಿನ ಸಮಾನ ಹಿತಾಸಕ್ತಿಗಳನ್ನು ಹೊಂದಿದ ಕೌರವ-ಪಾಂಡವರೆಂಬ ಎರಡು ಪ್ರಬಲ ಗುಂಪುಗಳು ಮಾಡಿದ ಧರ್ಮಯುದ್ಧಕ್ಕೆ ರಣಕ್ಷೇತ್ರವಾಗಿದೆ. ಅಂದರೆ ಯುದ್ಧ ಸ್ವರೂಪಗಳನ್ನು ಆಧರಿಸಿ ‘ವಿಶಸನರಂಗ’ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿಯಾಗಿ ಯುದ್ಧಕಣಗಳನ್ನು ಮೊದಲೇ ನಿರ್ಧರಿಸುವುದು ಯುದ್ಧನೀತಿಯ ಭಾಗವಾಗಿಯೇ ಕಂಡುಬರುತ್ತದೆ. ಪ್ರಸ್ತುತದಲ್ಲಿ ಹೀಗಿಲ್ಲ. ರಾಷ್ಟ್ರದ ಗಡಿಯ ಯಾವುದೇ ಭಾಗವು ಕದನ ಭೂಮಿಯಾಗುತ್ತದೆ. ಆದರೆ ಶಾಂತಿಕಾಲದಲ್ಲಿ ಎರಡು ರಾಷ್ಟ್ರಗಳ ವಿವಿಧ ಸೇನಾಪಡೆಗಳು ಜಂಟಿಯಾಗಿ ಸಮರಾಭ್ಯಾಸ ಮಾಡಲು ನಿರ್ದಿಷ್ಟ ಭೂಪ್ರದೇಶವನ್ನು ಆಯ್ಕೆಮಾಡಿಕೊಳ್ಳುವುದನ್ನು ಗಮನಿಸಬೇಕು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಾಭಾರತ ಮಹಾಕಾವ್ಯಗಳ ರಚನೆ ಹೆಚ್ಚಾಗಿಯೇ ನಡೆದಿದೆ. ಈ ಬರಹವು ಪಂಪನ ‘ವಿಕ್ರಮಾರ್ಜುನ ವಿಜಯಂ’, ರನ್ನನ ‘ಸಾಹಸಭೀಮ ವಿಜಯಂ’, ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಹಾಗೂ ಪಿ.ಕೆ.ರಾಜಶೇಖರ ಸಂಪಾದನೆಯ ‘ಜನಪದ ಮಹಾಭಾರತ’ ಕೃತಿಗಳನ್ನು ಮುಖ್ಯವಾಗಿರಿಸಿಕೊಂಡಿದೆ. ಲೇಖನದಲ್ಲಿ ಈ ನಾಲ್ಕು ಕಾವ್ಯಗಳನ್ನೇ ಒಟ್ಟಾರೆಯಾಗಿ ‘ಕನ್ನಡ ಮಹಾಭಾರತ’ಗಳೆಂದು ಹೆಸರಿಸಿಕೊಳ್ಳಲಾಗಿದೆ. ಈ ಭಾರತ ಕಾವ್ಯಗಳಲ್ಲಿ ನಿರೂಪಣೆಗೊಂಡಿರುವ ಯುದ್ಧಪೂರ್ವ ಮತ್ತು ನಂತರದ ರಣರಂಗವನ್ನು ಅವಲೋಕಿಸುವುದು ಇಲ್ಲಿನ ಉದ್ದೇಶವಾಗಿದೆ. ಆ ಮೂಲಕ ಕಾವ್ಯಗಳು ರಣರಂಗದ ಹಿನ್ನೆಲೆಯಲ್ಲಿ ತಾಳಿರುವ ನಿಲುವುಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.

ಕನ್ನಡ ಮಹಾಭಾರತ ಕಾವ್ಯಗಳಲ್ಲಿನ ಹಲವಾರು ‘ವಿಸಸನ’ಗಳಿಗೆ ಕುರುಕ್ಷೇತ್ರ ಜನ್ಮನೀಡಿದೆ. ಪರಶುರಾಮನು ‘ನಾಲ್ವತ್ತೆಣ್ಗಾವುದ ಪರಿಪ್ರಮಾಣ’ದ ಕುರುಕ್ಷೇತ್ರ ರಣರಂಗದಲ್ಲಿಯೇ ಭೂಮಂಡಲದ ಕ್ಷತ್ರಿಯರನ್ನೆಲ್ಲಾ ಇಪ್ಪತ್ತೊಂದು ಸರ್ತಿ ಕೊಂದಿದ್ದನು. ಆ ಕ್ಷತ್ರಿಯರ ನೊರೆಸಹಿತವಾದ ರಕ್ತದಿಂದ ತನ್ನ ತಾಯಿಗೆ ಸೂತಕ ಸ್ನಾನ ಮಾಡಲು, ತಂದೆಗೆ ತರ್ಪಣಬಿಡಲು ರಣರಂಗದ ಒಂದು ಬದಿಯಲ್ಲಿದ್ದ ‘ಸಮಂತ-ಪಂಚಕ’ ಎಂದು ಕರೆಯಲಾಗುತ್ತಿದ್ದ ಐದು ಕೊಳಗಳನ್ನು ನಿರ್ಮಿಸಿದ್ದನಂತೆ. ಇಂತಹ ಘೋರವಾದ ಕುರುಕ್ಷೇತ್ರ ‘ಧರ್ಮಕ್ಷೇತ್ರ’ ಎಂದು ಕರೆಯಲ್ಪಟ್ಟಿದೆ. ಈ ರಣರಂಗದಲ್ಲಿ ಯುದ್ಧವನ್ನು ಮಾಡಿದರೆ ಧರ್ಮ ಉಳಿಯುತ್ತದೆಂಬ ನಿಲುವು ಇರಬಹುದು. ಹಾಗೆಯೇ ಯುದ್ಧದ ಮೂಲಕವೇ ಧರ್ಮ ಉಳಿಯಬೇಕೆಂಬ ಆಶಯವು ಇದ್ದಂತೆ ಕಾಣುತ್ತದೆ.

ಸುದ್ದಿ ಮಾಧ್ಯಮಗಳಲ್ಲಿ ಯುದ್ಧ

ಈಗಾಗಲೇ ಪ್ರಾಚೀನ ಆಯುಧಗಳಿಂದ ನಡೆಯುತ್ತಿದ್ದ ಯುದ್ಧಗಳನ್ನು, ಅವುಗಳಿಗಾಗಿ ಮಾಡಿಕೊಳ್ಳಲಾಗುತ್ತಿದ್ದ ರಣರಂಗಗಳನ್ನು ದಾಟಿದ್ದೇವೆ. ಅದರಂತೆ ಆಧುನಿಕ ಜಗತ್ತಿನಲ್ಲಿ ಹಿಂದುಳಿದ ರಾಷ್ಟ್ರಗಳನ್ನು ಬಂಡವಾಳಶಾಹಿಯ ಮುಂದುವರೆದ ರೂಪವಾದ ಜಾಗತೀಕರಣವು ರಣರಂಗವನ್ನಾಗಿ ಮಾಡಿಕೊಂಡಿದೆ. ಜಾಗತೀಕರಣದ ಹೆಸರಿನಲ್ಲಿ ಬಡರಾಷ್ಟ್ರಗಳ ಮೇಲೆ ಯುದ್ಧ ನಿರಂತರವಾಗಿಯೇ ಸಾಗುತ್ತಿದೆ. ಈ ಯುದ್ಧವು ಸೈನ್ಯಗಳು ಮಾಡುವಂತೆ ಇರುವುದಿಲ್ಲ. ಹಾಗಾಗಿ ಇದನ್ನು ಶಬ್ದವಿಲ್ಲದ ಯುದ್ಧವೆಂದು ಕರೆದುಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಪ್ರಪಂಚದ ಯಾವುದೇ ಪ್ರದೇಶಗಳು ಜಾಗತೀಕರಣದೊಂದಿಗೆ, ‘ಬಯೋವಾರ್’ ಹಾಗೂ ‘ಸೈಬರ್‍ವಾರ್’ಗಳಿಂದಲೂ ದಿನದಿನಕ್ಕೂ ನಲುಗುತ್ತಿವೆ. ಒಟ್ಟಾರೆ ಪ್ರಭುತ್ವಗಳು ಇಡೀ ಭೂಮಿಯನ್ನೇ ರಣರಂಗವನ್ನಾಗಿ ಮಾಡಿಕೊಂಡಿವೆ. ಇಂದಿನ ಮಾಧ್ಯಗಳು ಸಹ ಚುನಾವಣೆ, ಕ್ರೀಡೆ, ಪ್ರಾಕೃತಿಕ ವೈಪರೀತ್ಯ- ಇಂತಹ ಅನೇಕ ವಿಷಯಗಳನ್ನು ಯುದ್ಧದ ಪರಿಭಾಷೆಯಲ್ಲಿಯೇ ಅಭಿವ್ಯಕ್ತಿಸುತ್ತವೆ. ರಣರಂಗವನ್ನು ಮುಲಾಜಿಲ್ಲದೆ ಈ ವಿಷಯಗಳಿಗೂ ಹೋಲಿಸುತ್ತವೆ. ಹೀಗೆ ಮಾಧ್ಯಮಗಳು ತಮ್ಮ ಸುದ್ದಿಗಳನ್ನು ಮಾರಲು ಯುದ್ಧದ ಭಾಷೆಯನ್ನು ಬಳಸುವ ಮೂಲಕ ರಣರಂಗವನ್ನು ವ್ಯಾಪಾರ ಕೇಂದ್ರವನ್ನಾಗಿಯೇ ಬಳಸುತ್ತಿವೆ.

ಭಾರತಯುದ್ಧಕ್ಕೂ ಮೊದಲು ಚಿತ್ರಾಂಗದನು ಒಬ್ಬ ಗಂಧರ್ವನೊಂದಿಗೆ ದ್ವಂದ್ವಯುದ್ಧ ಮಾಡಲು ಕರುಕ್ಷೇತ್ರವನ್ನು ರಣಭೂಮಿಯನ್ನಾಗಿ ಮಾಡಿಕೊಂಡು ಯುದ್ಧ ಮಾಡಿದ್ದನು. ನಂತರದಲ್ಲಿ ಭೀಷ್ಮ ಮತ್ತು ಪರಶುರಾಮರು ಅಂಬೆ ವಿವಾಹ ಪ್ರಸಂಗದಲ್ಲಿ ‘ಕುರುಕ್ಷೇತ್ರಮಂ ಕಳವೇ¿್ದು’ ಯುದ್ಧ ಮಾಡಿದ್ದಾರೆ. ಪಾಂಡವ-ಕೌರವರ ಹದಿನೆಂಟು ಅಕ್ಷೋಹಿಣೀ ಸೇನೆ ಯುದ್ಧ ಹೂಡಿದ್ದು ಕುರುಕ್ಷೇತ್ರವೆಂಬ ರಣರಂಗದಲ್ಲಿ. ಕನ್ನಡ ಮಹಾಭಾರತ ಕಾವ್ಯಗಳು ಸೇನೆ ರಣರಂಗಕ್ಕೆ ಬಂದು ಬೀಡು ಬಿಟ್ಟದನ್ನು, ರಣರಂಗದಲ್ಲಿ ಆದ ಯುದ್ಧ ಸಿದ್ಧತೆಗಳನ್ನು, ಯುದ್ಧ ನಡೆಯುತ್ತಿರುವಾಗ ರಣರಂಗದ ಬಗೆಯನ್ನು ಹಾಗೂ ಕದನದ ಕೊನೆಯಲ್ಲಿ ರಣರಂಗದಲ್ಲಿ ಉಂಟಾದ ಭಯಾನಕ ಚಿತ್ರಗಳನ್ನು ನಿರೂಪಿಸಿವೆ. ಆ ಮೂಲಕ ರಣರಂಗದ ಹಲವು ಮುಖಗಳನ್ನು ಪರಿಚಯಿಸಿವೆ.

ರಾಜನೀತಿಗಳಿಗೆ ಅನುಸಾರವಾಗಿ ಯುದ್ಧವನ್ನು ಎರಡೂ ಪಡೆಯ ರಾಜರು ನಿರ್ಧರಿಸುತ್ತಿದ್ದರು. ಜೊತೆಗೆ ಎಷ್ಟು ದಿನಗಳವರೆಗೆ ಯುದ್ಧ ಮಾಡಬೇಕೆನ್ನುವುದನ್ನೂ ಮೊದಲೇ ತೀರ್ಮಾನಿಸುತ್ತಿದ್ದರು. ಅದರಂತೆ ಸೂಕ್ತ ರಣರಂಗವನ್ನು ಆಯ್ಕೆ ಮಾಡಲಾಗುತ್ತಿತ್ತು. ನಂತರ ಸಾಕಷ್ಟು ಸಿದ್ಧತೆಗಳೊಂದಿಗೆ ನಿಶ್ಚಯ ಪಡಿಸಿದ ರಣಕಣದತ್ತ, ಸೈನ್ಯ ಸಮೇತರಾಗಿ ಸಾಗುತ್ತಿದ್ದರು. ಇದರಂತೆ ಸಕಲ ರೀತಿಯಿಂದಲೂ ಸಿದ್ಧಗೊಂಡ ಪಾಂಡವರ ಏಳಕ್ಷೋಹಿಣೀ ಸೈನ್ಯ ಕುರುಕ್ಷೇತ್ರದ ಪಶ್ಚಿಮ ದಿಕ್ಕಿಗೆ ಬಂದು ತಲುಪಿತು. ಪಾಂಡವರ ಏಳು ಅಕ್ಷೋಹಿಣಿ ಬಲದ ಸೇನಾದಳಗಳ ಮೂಲ ಸೌಕರ್ಯಗಳಿಗಾಗಿ ಆ ರಣಭೂಮಿಯ ಸುತ್ತಮುತ್ತಲಿನ ಕಲ್ಲುಗಳಿಂದ ಒಲೆಗಳನ್ನು, ಹಿರಿಯ ಕಾಡುಗಳನ್ನು ಕಡಿದು ಬಾವುಟಗಳ ಗೂಟ/ಗೂಡಾರದ ಗೂಟಕ್ಕೆ ಗಳಗಳನ್ನು, ಬಿದರ ಕಾಡುಗಳನ್ನು ಕಡಿದು ಪಲ್ಲಕ್ಕಿಗಳನ್ನು, ದೊಡ್ಡ ಮರಗಳಿಂದ ಆನೆಯನ್ನು ಕಟ್ಟುವ ಕಂಬಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆ ಏಳಕ್ಷೋಹಿಣೀ ಸೈನ್ಯಕ್ಕೆ ಇವೆನೆಲ್ಲಾ ಮಾಡಲು ನೆಲ, ಪರ್ವತಗಳು, ಕಾಡುಗಳು ಸಾಲದಾದವು ಎಂದು ‘ಪಂಪಭಾರತ’ವು ವರ್ಣಿಸಿದೆ. ಯುದ್ಧವೆಂದರೆ ಕೇವಲ ಕಾದಾಟವಲ್ಲ; ಅದರ ಹಿಂದೆ ಈ ರೀತಿಯ ಸಿದ್ಧತೆಗಳಿರುತ್ತವೆ. ಆ ಸಿದ್ಧತೆಗಳೊಂದಿಗೆ ಪ್ರಕೃತಿಯ ನಾಶವೂ ಅಡಗಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಹೀಗೆ ಉಭಯ ಸೇನೆಗಳು ಯುದ್ಧಭೂಮಿಯನ್ನು ಸೇರಿದ ತರುವಾಯದಲ್ಲಿ, ಯುದ್ಧ ಮಾಡಲು ತೀರ್ಮಾನಿಸಿದ ರಾಜನು ಶತ್ರುಪಡೆಯವರಿಗೆ ದೂತನನ್ನು ಕಳುಹಿಸಿ ಯುದ್ಧಕ್ಕೆ ಆಹ್ವಾನ ನೀಡುತ್ತಿದ್ದನು. ಈ ನೀತಿಯಂತೆ ದುರ್ಯೋಧನ ತನ್ನ ಸಮಸ್ತ ಸೇನೆಯನ್ನು ಕುರುಕ್ಷೇತ್ರ ಸಂಗ್ರಾಮಭೂಮಿಯ ಪೂರ್ವದಿಕ್ಕಿನಲ್ಲಿ ಬೀಡುಬಿಟ್ಟು, ಉಲೂಕನೆಂಬ ದೂತನ ಮೂಲಕ ಧರ್ಮಪುತ್ರನಿಗೆ ಆಹ್ವಾನ ಕಳುಹಿಸಿದನು. ಆ ದೂತನು ಧರ್ಮಪುತ್ರನಲ್ಲಿ ಬಂದು:

ಮಸೆಯಿಸುಗುಳ್ಳ ಕೆಯ್ದುಗಳನರ್ಚಿಸುಗಾನೆಗಳಂ ತಗುಳ್ದು ಪೂ
ಜಿಸುಗೆ ವಿಶುದ್ಧ ವಾಜಿಗಳನಾಜಿಗೆ ಜೆಟ್ಟಿಗರಾಗಿ ಕೊಳ್ಳಿವೀ
ಸೀಸುಗೆ ನಿರಂತರಂ ರವಳಿ ಘೋಷಿಸುಗಿಂದೆ ಕಡಂಗಿ ಸಾರ್ಚಿ ಬಿ
ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ

ಎಂದು ಮೂದಲಿಕೆಯ ಮಾತುಗಳಲ್ಲಿ ಪಾಂಡವರನ್ನು ಇರಿಯುತ್ತಾನೆ. ವೈರಿಯ ಮೇಲೆ ಇದ್ದಕ್ಕಿದ್ದಂತೆ ಯುದ್ಧವನ್ನು ಸಾರುವಂತಿರಲಿಲ್ಲ. ಜೊತೆಗೆ ಸಿದ್ಧರಾಗಿ ಬಂದ ಶತ್ರುಪಡೆಯ ಮೇಲೆಯೇ ಯುದ್ಧ ಮಾಡಬೇಕಾದ ನಿಯಮವೂ ಇದ್ದಿರಬೇಕು. ಹಾಗಾಗಿ ದೂತರನ್ನು ಕಳುಹಿಸಿ, ತಿಳಿಸಲಾಗುತ್ತಿದ್ದಂತೆ ಕಾಣುತ್ತದೆ.

ಉಭಯ ಪಡೆಗಳು ಯುದ್ಧರಂಗದಲ್ಲಿ ರಣಗಂಬವನ್ನು ನೆಡುತ್ತಿದ್ದರು. ಯುದ್ಧದ ಹಿಂದಿನ ದಿವಸ ‘ರಣಗಂಬಕ್ಕೆ ಪೂಜೆಯ/ ನಾಳೆ ಜಿವ್ಸ ಮಾಡಿ/ ರಣಗಂಬಕ್ಕೆ ಬಲಿಕೊಟ್ಟು/ ಗೆಲುವು ನಮಗಾಗ್ಲಿ ಅಂತ’ ಬೇಡಿಕೊಂಡಿವೆ. ಯುದ್ಧದ ದಿನದಂದು ‘ರಣಗಂಬಕ್ಕೆ ಬಾವುಟವನ್ನೇರಿಸಿ/ ನೂರೊಂದು ಈಡುಗಾಯನ್ನು ಒಡುದು/ ಕಾಯೊಡ್ಡು ಹಣ್‍ಮುರ್ದು ಕಡ್ಡಿಕಲ್ಪುರ ಬೆಳಗಿ/ ಘನವಾದ ಪೂಜೆ ಮಾಡಿ/ ಅರಿಸಿನ ಕೂಕುಮ ಗಂಧ ಅಕ್ಷತೆಗಳನ್ನು ಇಟ್ಟು/ ಮಂಗ್ಳಾರ್ತಿ..’ ಮಾಡಿ ಪೂಜಿಸುತ್ತಿದ್ದವು. ಹೀಗೆ ನೆಟ್ಟಿದ್ದ ರಣಗಂಬವನ್ನು ಕಿತ್ತರೆ ಅಪಜಯವಾಗುತ್ತದೆಂದು ನಂಬಲಾಗಿದೆ. ‘ಜನಪದ ಮಹಾಭಾರತ’ ಮಾತ್ರ ಈ ರಣಗಂಬದ ಪ್ರಸ್ತಾಪವನ್ನು ಮಾಡಿದೆ. ಬಹುಶಃ ಶಿಷ್ಟ ಕನ್ನಡ ಮಹಾಭಾರತ ಕಾವ್ಯಗಳ ಸಮಕಾಲೀನದಲ್ಲಿ ರಣಗಂಬವನ್ನು ನೆಡುವ ಸಂಪ್ರದಾಯ ಇರಲಿಲ್ಲವೇನೊ? ಇದಿಷ್ಟು ಯುದ್ಧಪೂರ್ವದ ರಣಭೂಮಿಯ ಚಿತ್ರಗಳಾಗಿವೆ. ಇಲ್ಲಿ ಜೀವಂತ ಸೈನಿಕರು, ಯುದ್ಧಾಶ್ವಗಳು, ಆನೆಗಳು ಕಾಣಸಿಗುತ್ತವೆ. ಅದೇ ಯುದ್ಧಾನಂತರದ ರಣರಂಗವು ಬೀಭತ್ಸವಾಗಿ ನಿರೂಪಣೆಗೊಂಡಿದೆ. ಯುದ್ಧ ಮತ್ತು ಸಮರಭೂಮಿಯ ಇನ್ನೊಂದು ಮುಖವು ಚಿತ್ರಣಗೊಂಡಿದೆ.

ದುರ್ಯೋಧನನು ಭೀಷ್ಮರ ಸಲಹೆಯಂತೆ ಜಲಮಂತ್ರದ ಸಹಾಯದಿಂದ ವೈಶಂಪಾಯ ಸರೋವರವನ್ನು ಹೊಕ್ಕುತ್ತಾನೆ. ಎಲ್ಲಿಯೂ ಅವನನ್ನು ಕಾಣದ ಭೀಮನು ಕುರುಕ್ಷೇತ್ರ ರಣರಂಗದಲ್ಲಿ ಹುಡುಕುತ್ತಾನೆ. ಭೀಮನ ಆ ಕ್ರಿಯೆಯಲ್ಲಿ ಯುದ್ಧಾನಂತರದ ರಣರಂಗದ ವರ್ಣನೆಯಿದೆ: ‘ಕುರುಕ್ಷೇತ್ರದಲ್ಲಿ ವಜ್ರಾಯುಧದ ಪ್ರಹಾರದಿಂದ ರೆಕ್ಕೆಸಹಿತವಾಗಿ ಮುರಿದುಬಿದ್ದ ಪರ್ವತಗಳಂತೆ ಲೋಹದ ಮೈಗವಚ ಸಹಿತವಾಗಿ ಕೋರೆ ಊರಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದ ಮತ್ತಗಂಧಗಜಗಳ… ಗದಾಪ್ರಹಾರದಿಂದ ನೊಗಹರಿದುಕೊಂಡು ತುಂಡುತುಂಡಾಗಿ ಬಿದ್ದ ಕಾಂಭೋಜಿ ಕುದುರೆಗಳ, ತರುಷ್ಕ ಕುದುರೆಗಳ… ಹರಿತವಾದ ಬಾಣಗಳ ಹೊಡೆತಕ್ಕೆ ಈಡಾಗಿ ಮುಂದೆ ಕುಸಿದು ಮುರಿದುಬಿದ್ದ ರಥಗಳ ಹಲಗೆಗಳ… ಕಠೋರವಾದ ಒದೆತಗಳಿಂದ ಅಸ್ತವ್ಯಸ್ತವಾಗಿ ಬಿದ್ದಿರುವ ವೀರಸೈನಿಕರ ಕಿರೀಟಗಳ ರಾಶಿ… ರಕ್ತದ ಪ್ರವಾಹ… ನೆಣದ ಬಣವೆಗಳ… ಮಾಂಸದ ರಾಶಿಗಳ… ನರಗಳ ಸಮೂಹ… ಮೂಳೆಯ ದಿಣ್ಣೆಗಳ… ಮಿದುಳುಗಳ ದಟ್ಟವಾದ ಕೆಸರಿನಲ್ಲಿ… ಕರುಳುಗಳ ಮೆದೆಯನ್ನು… ಹಲ್ಲುಗಳ ಬಣವೆಗಳ… ಅಟ್ಟೆಗಳ (ರುಂಡವಿಲ್ಲದ ದೇಹಗಳ) ಬೆಟ್ಟ ಸಾಲುಗಳು…’ ಆ ‘ಹದಿನೆಂಟು ದಿನಗಳು/ ಕುರುಕ್ಷೇತ್ರ ಯುದ್ಧದಲ್ಲಿ/ ಹದಿನೆಂಟು ಚೋಣಿ ಸೇನ್ಯ/ ನಾಶನವಾಯಿತು/ ರಣದಲ್ಲಿ ಹರಿದಂತ/ ಸೈನ್ಯದ ರಕ್ತವು/ ಮಡುವಾಗಿ ಹೊಳೆಯಾಗಿ/ ರಕ್ತದ ಹೆಪ್ಪೆಪ್ಪು/ ತೇಲುತ ತೇಲುತ/ ಭೋರ್ಗರೆದು ಹರಿವಂತ/ ರಕುತಾದ ಹೊಳೆಯು/ ಕಾಡು ಕಾಡನೆಲ್ಲ/ ಬೆಟ್ಟಗುಡ್ಡನೆಲ್ಲ/ ಮುಳುಕೀಸಿ ಬರುತಿತ್ತು.’ ಅದು ‘ಕಾಲನ ಬನಕೆ ರಕುತದ ಕೆರೆಯ ತೂಬೆತ್ತಿ’ ಬಿಟ್ಟಂತೆ ಕಾಣುತ್ತಿದ್ದಾಗಿ ಕುಮಾರವ್ಯಾಸ ರೂಪಕದಲ್ಲಿ ವರ್ಣಿಸಿದ್ದಾನೆ. ಹೀಗೆ ಕುರುಕ್ಷೇತ್ರ ಯುದ್ಧಭೂಮಿಯು ‘ಜೀರಿಗೆಯೊಕ್ಕಲ್ಗೆಣೆಯಾಗಿ’ತ್ತು ಕಾಣುತ್ತಿತ್ತು. ಜೀರಿಗೆ ಜಜ್ಜಿದಂತೆ ಎತ್ತೆತ್ತಲೂ ಬಿದ್ದಿದ್ದ ಸೈನ್ಯದ ಆನೆಗಳ, ಕುದುರೆಗಳ, ಯೋಧರ ಮೃತದೇಹಗಳು ‘ಜವನುಂಡು ಕಾ¾Âದವೋಲ್’ ಕಾಣುತ್ತಿದ್ದವು. ಅವುಗಳನ್ನು:

ಸಿಡಿದ ಕಣ್ಣಾಲಿಗಳನಾಯಿದು
ಕುಡುಕುಗೊಂಡವು ಕಾಗೆಗಳು ಹಿ
ಮ್ಮಡಿಯ ಹೊರಳಿಯ ನರವ ಸೆಳೆದವು ಜಂಬುಕಾದಿಗಳು
ಅಡಗ ಕದುಕಿರಿದೊರಲಿ ಕರೆದವು
ಗಡಣವನು ಗೂಗೆಗಳು ರಕುತದ
ಕಡಲಲೋಕುಳಿಯಾಡಿದವು ಭೇತಾಳ ಕಾಳಿಯರು

ಇವುಗಳಿಂದ ಕೂಡಿದ ಒಟ್ಟು ರಣರಂಗವೇ ‘ಭೂತಸದನ’ ವಾಗಿತ್ತು. ಯುದ್ಧಪೂರ್ವದ ರಣರಂಗ ಪುರುಷನ ಅಹಂಮಿನ ‘ಸಮರವ್ಯಾಪಾರ’ದ ಕೇಂದ್ರವಾಗಿದ್ದನ್ನು ರನ್ನ ಗಾಂಧಾರಿಯ ಮೂಲಕ ಸೂಕ್ಷ್ಮವಾಗಿ ಹೇಳಿಸಿದ್ದಾನೆ. ಅದೇ ರಣರಂಗವನ್ನು ಯುದ್ಧಾನಂತರದಲ್ಲಿ ದೆವ್ವಗಳು ಮೃತದೇಹಗಳನ್ನು ಮಾರುವ ವ್ಯಾಪಾರಕೇಂದ್ರವನ್ನಾಗಿ ಮಾಡಿಕೊಂಡಿವೆ. ಈ ಸಮರವ್ಯಾಪಾರದ ಕೇಂದ್ರವಾದ ರಣರಂಗದಲ್ಲಿ ಯುದ್ಧ ಆಗುವಾಗ ಸಾಮಾನ್ಯರ ಜೀವ ಮತ್ತು ಕದನವಾದ ಮೇಲೆ ದೇಹಗಳು ಸರಕಾಗಿರುವುದನ್ನು ಕಾಣಬಹುದು. ಅದಕ್ಕಾಗಿಯೇ ವ್ಯಾಪಾರ ಸಂಬಂಧಿ ಭಾಷೆ ಬಳಕೆಗೊಂಡಿದೆ. ಹಾಗೆಯೇ ವ್ಯಾಪಾರದಲ್ಲಿ ಕರುಣೆಯಿರುವುದಿಲ್ಲ. ಕೇವಲ ಲಾಭ-ನಷ್ಟಗಳ ಲೆಕ್ಕಾಚಾರ ಮಾತ್ರ ಮುಖ್ಯವಾಗಿರುತ್ತದೆ. ಕವಿ ಹೆಣ್ಣಿನ ಮೂಲಕ ವ್ಯಾಪಾರಿ ಮನೋಧರ್ಮ ಹಾಗೂ ಯುದ್ಧ ಎರಡಕ್ಕೂ ಪ್ರತಿಕ್ರಿಯೆ ನೀಡುತ್ತಾ, ವಿರೋಧಿಸುತ್ತಿದ್ದಾನೆ.

ಕುಮಾರವ್ಯಾಸನು ಸಹ ‘ಉರಿಯ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ’ ಎಂಬ ರೂಪಕದ ಪ್ರಶ್ನೆಯಲ್ಲಿ ಕರ್ಣನ ಮೇಲೆ ಪಾಂಡವರ ಸೈನ್ಯಸಮೂಹ ಎರಗಿದ ಸಂದರ್ಭವನ್ನು ವ್ಯಾಪಾರಿ ಪರಿಭಾಷೆಯಲ್ಲಿಯೇ ನಿರೂಪಿಸಿದ್ದಾನೆ. ಇಲ್ಲಿ ಕರ್ಣನ ಮೇಲೆ ಬಿದ್ದ ಸೈನ್ಯವೇ ಪತಂಗ. ಇದು ಉರಿಗೆ ಸಿಕ್ಕಿ ನಾಶವಾಗದೆ ಇರುತ್ತದೆಯೇ ಎಂಬುದು ಇಲ್ಲಿನ ಅರ್ಥ. ಆದರೆ ಈ ಸಾಲುಗಳ ಅರ್ಥ ಇಲ್ಲಿಗೇ ನಿಲ್ಲುವುದಿಲ್ಲ. ಪೇಟೆ, ಸರಕು, ಮಾರು- ಈ ಪದಗಳು ವ್ಯಾಪಾರದ ಪರಿಭಾಷೆಗೆ ಸೇರಿವೆ. ಇಲ್ಲಿ ಸೈನಿಕಪತಂಗಗಳು ಕೇವಲ ‘ಸರಕು’. ಅವು ಇಲ್ಲಿ ಮಾರಲ್ಪಡುತ್ತವೆ. ಮಾರಲ್ಪಡುವುದು ‘ಉರಿಯ ಪೇಟೆಗಳಲಿ’. ಅಂದರೆ ಯುದ್ಧದ ಉತ್ಕಟ ಸಂದರ್ಭದಲ್ಲಿ ವ್ಯಾಪಾರದ ಪರಿಭಾಷೆಯನ್ನು ಬಳಸುವ ಮೂಲಕ ಕುಮಾರವ್ಯಾಸ ಕವಿ ಯುದ್ಧ ವ್ಯಾವಹಾರಿಕ ನೆಲೆಯನ್ನು ಸೂಕ್ಷ್ಮವಾಗಿ ಹೇಳುತ್ತಿದ್ದಾನೆ. ಸೈನಿಕರು ಕೇವಲ ಸರಕುಗಳಾಗಿ ಪೇಟೆಯಲ್ಲಿ ಮಾರಲ್ಪಡುವ ಸನ್ನಿವೇಶವೊಂದು ಮನುಷ್ಯ ಸಂಬಂಧಗಳ ಅವನತಿಯನ್ನು ಸೂಚಿಸುತ್ತದೆ. ಯುದ್ಧದಲ್ಲಿ ‘ಮನುಷ್ಯ’ ಮುಖ್ಯವಾಗುವುದಿಲ್ಲ. ಆತ ‘ಸರಕು’ ಮಾತ್ರವಾಗುತ್ತಾನೆಂಬ ಧ್ವನಿ ಹೊರಡಿಸುವ ಈ ರೂಪಕ ಅನನ್ಯವಾದುದು.’ ಇದೇ ರೀತಿಯಾಗಿ ವರ್ತಮಾನದಲ್ಲಿ ಯುದ್ಧ ಬಹುದೊಡ್ಡ ವ್ಯಾಪಾರಕ್ಕೆ ಕಾರಣವಾಗಿದೆ.

ಹೀಗೆ ಕಾವ್ಯಗಳು ರಣರಂಗವನ್ನು ವರ್ಣಿಸುವಾಗ ಬೀಭತ್ಸರಸವನ್ನು ಬಳಸಿಕೊಂಡು, ಯುದ್ಧದ ಭೀಕರ ಪರಿಣಾಮಗಳನ್ನು ಚಿತ್ರಿಸಿವೆ. ಅವು ಯುದ್ಧ ವಿರೋಧಿ ಭಾವನೆಗಳನ್ನೇ ಹೊಮ್ಮಿಸುತ್ತವೆ. ಯುದ್ಧರಂಗದಲ್ಲಿ ‘ಜವನುಂಡು ಕಾದವೋಲ್’ ಸತ್ತು ಬೀಳುವುದು ಸೈನಿಕರ ಧರ್ಮವನ್ನಾಗಿಸಿದ ಪ್ರಭುತ್ವವನ್ನು ಪರೋಕ್ಷವಾಗಿ ಟೀಕಿಸಿವೆ. ‘ಕುರುಕ್ಷೇತ್ರ’ದಂತಹ ಭೂತಸದನದ ಮೇಲೆ ಕಟ್ಟಿದ ರಾಜಸತ್ತೆಯನ್ನು ಸೂಕ್ಷ್ಮವಾಗಿ ವಿರೋಧಿಸುತ್ತವೆ.

*ಲೇಖಕರು ಸಂಶೋಧನಾ ವಿದ್ಯಾರ್ಥಿ, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ.

Leave a Reply

Your email address will not be published.