ಕನ್ನಡ ಮಾಧ್ಯಮದ ಐಎಎಸ್ ಅಧಿಕಾರಿ ಉಷಾ ಪಾಡಿ

ಬಳ್ಳಾರಿ ಜಿಲ್ಲೆ ಹೊಸಪೇಟೆಯ ಉಷಾ ಪಾಡಿ ಕನ್ನಡ ಮಾಧ್ಯಮದಲ್ಲಿ ಓದಿ ಐಎಎಸ್ ಮಾಡಿದ್ದಾರೆ. ಈಗ ಕೇಂದ್ರ ವಿಮಾನಯಾನ ಇಲಾಖೆಯ ಜಂಟಿಕಾರ್ಯದರ್ಶಿ. ಜನಸಾಮಾನ್ಯರೂ ವಿಮಾನದಲ್ಲಿ ಸಂಚರಿಸುವಂತಾಗಬೇಕೆಂದು ಇವರು ರೂಪಿಸಿದ `ಉಡಾನ್’ ಯೋಜನೆ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ತಾಂತ್ರಿಕ ವಿದ್ಯಾರ್ಥಿಗಳಿಗೆ ನಾಗರಿಕ ಸೇವೆಯಲ್ಲಿ ಅವಕಾಶಗಳು’ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಷಾ ಪಾಡಿ ಅವರು ಆಡಿದ ಮಾತುಗಳು ಸ್ಪರ್ಧಾರ್ಥಿಗಳಿಗೆ ದಾರಿದೀಪದಂತಿವೆ.

ಐಎಎಸ್ ಪರೀಕ್ಷೆಗೆ ಯಾವ ವಿಷಯ ಆಯ್ದುಕೊಳ್ಳಬೇಕು?

ಯಾರೋ ಒಬ್ಬರು ಒಂದು ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ ಎಂದು ಆ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬೇಡಿರಿ. ನೀವು ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಸಮಗ್ರ ಪರಿಣತಿ ಗಳಿಸುವುದು ಬಹುಮುಖ್ಯ. ಸಾಮಾನ್ಯ ವಿಷಯಗಳಲ್ಲಿ ವಿಷಯದ ಉದ್ದಗಲ ಮುಖ್ಯವಾಗುತ್ತದೆ. ಆದರೆ ಐಚ್ಚಿಕ ವಿಷಯಗಳಲ್ಲಿ ಪರಿಣತಿ ಇರಲೇಬೇಕು. ಅದ್ದರಿಂದ ನಿಮ್ಮ ಹೃದಯಕ್ಕೆ ಹತ್ತಿರವಾದ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳಿ. ಐಎಎಸ್ ಪರೀಕ್ಷೆಗಳಲ್ಲಿ ತೀವ್ರ ಸ್ಪರ್ಧೆ ಇರುತ್ತದೆ. ಸುಮಾರು ಏಳು ಲಕ್ಷ ವಿದ್ಯಾರ್ಥಿಗಳು ಆಕಾಂಕ್ಷಿಗಳಾಗಿರುತ್ತಾರೆ. ಆದರೆ ಕೇವಲ ಸುಮಾರು ಏಳುನೂರು ಹುದ್ದೆಗಳು ಇರುತ್ತವೆ. ಈ ಪರೀಕ್ಷೆಯಲ್ಲಿ ವಿಫಲರಾದರೆ ಅದು ಬದುಕಿನ ಕೊನೆ ಎಂದು ಯಾರೂ ಭಾವಿಸಬಾರದು. ಈ ಪರೀಕ್ಷೆಗೆ ತಯಾರಿಯಾಗುವ ಪ್ರಕ್ರಿಯೆಯಲ್ಲಿ ನೀವು ನಿಮ್ಮನ್ನು ಉತ್ತಮಗೊಳಿಸಿಕೊಳ್ಳುತ್ತೀರಿ. ಅದು ನಿಮ್ಮನ್ನು ಉತ್ತಮ ಮಾಹಿತಿ ಹೊಂದಿದ ಜ್ಞಾನದ ಕಣಜ ಹೊಂದಿದ ವ್ಯಕ್ತಿಯಾಗಿ ರೂಪುಗೊಳಿಸುತ್ತದೆ.

ನಿರಂತರ ಪರಿಶ್ರಮ ಬೇಕು

ರಾಷ್ಟ್ರ ಹಾಗೂ ವಿಶ್ವದ ಆಗುಹೋಗುಗಳ ಬಗ್ಗೆ ಮಾಹಿತಿ ತಿಳಿಯಲು ಒಂದೆರಡು ದಿನಪತ್ರಿಕೆಗಳನ್ನು ಪ್ರತಿದಿನವೂ ಓದುವ ಅಭ್ಯಾಸ ಮಾಡಿಕೊಳ್ಳಿ. ಪತ್ರಿಕೆಗಳ ಸಂಪಾದಕೀಯ ಪುಟಗಳನ್ನು ತಪ್ಪದೆ ಓದಿರಿ. ಯೋಜನಾ ಹಾಗೂ ಕುರುಕ್ಷೇತ್ರ ಪತ್ರಿಕೆಗಳು ಐಎಎಸ್ ಆಕಾಂಕ್ಷಿಗಳಿಗೆ ತುಂಬಾ ಉಪಯುಕ್ತವಾದವು. ಲೋಕಸಭಾ ಮತ್ತು ರಾಜ್ಯಸಭಾ ಟಿವಿ ಚಾನಲ್‍ಗಳನ್ನು ನೋಡಿ. ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ವಿಶ್ಲೇಷಣಾ ಸಾಮಥ್ರ್ಯ ಇರುತ್ತದೆಯಾದ್ದರಿಂದ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಅವರದೇ ಮೇಲುಗೈಯಾಗುತ್ತಿದೆ.

ಐಎಎಸ್ ಪರೀಕ್ಷೆಯ ಯಶಸ್ಸು ಕೇವಲ ಆರು ತಿಂಗಳ ಸಿದ್ಧತೆಯ ಪ್ರಕ್ರಿಯೆಯಿಂದ ಸಾಧ್ಯವಾಗುವುದು ಅಲ್ಲವೇ ಅಲ್ಲ. ನಿರಂತರ ಪರಿಶ್ರಮ ತನ್ಮಯತೆ ಹಾಗೂ ಸಮರ್ಪಣಾ ಮನೋಭಾವಗಳಿಂದ ಗಳಿಸಿದ ಜ್ಞಾನದ ಭಾಂಡಾರ ಮಾತ್ರ ನಿಮಗೆ ಯಶಸ್ಸು ತರಬಲ್ಲದು.

ಸ್ಫೂರ್ತಿದಾಯಕ ಭಾಷಣಕಾರ ಆಗುವುದು ಹೇಗೆ?

ನಾನು ಕಂಡ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ಎಂದರೆ ಅದು ಅಬ್ದುಲ್ ಕಲಾಂ. ಅವರೊಂದಿಗೆ ನಾನು ಅನೇಕ ಅತ್ಯುತ್ತಮ ಕ್ಷಣಗಳನ್ನು ಕಳೆದಿದ್ದೇನೆ. ಅವರ ಜೊತೆ ಇದ್ದ ಕ್ಷಣಗಳು ನಾನು ಐಎಎಸ್ ಮಾಡಲು ಪಟ್ಟ ಪರಿಶ್ರಮದಿಂದ ಸಾರ್ಥಕವಾಯಿತು ಎಂದು ಭಾವಿಸಿದೆ. ಆದರೆ ಕಲಾಂ ಅವರು ಎಂದೂ ತಮ್ಮನ್ನು ಸ್ಫೂರ್ತಿದಾಯಕ ಭಾಷಣಕಾರ ಎಂದು ಭಾವಿಸಿರಲಿಲ್ಲ. ಆದರೆ, ಅವರ ಪ್ರತಿ ನಡೆ-ನುಡಿ ನನಗೆ ಸ್ಫೂರ್ತಿ ನೀಡುತ್ತಿದ್ದವು. ಮಹಾತ್ಮಾಗಾಂಧಿಯೂ ಅಷ್ಟೇ; ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ನನ್ನ ಬದುಕೇ ನನ್ನ ಸಂದೇಶ ಎಂದು ಅವರು ಹೇಳಿದರು. ಸ್ಫೂರ್ತಿದಾಯಕ ಭಾಷಣಕಾರನಾಗಲು ಸ್ಫೂರ್ತಿದಾಯಕ ಬದುಕು ರೂಪಿಸಿಕೊಳ್ಳುವುದು ಮುಖ್ಯ ಎಂಬುದು ನನ್ನ ಅಭಿಪ್ರಾಯ. ಇಲ್ಲವಾದರೆ ಅದು ಕೇವಲ ಭಾಷಣವಾಗುತ್ತದೆ. ನಮ್ಮ ಜೀವನವೇ ಇತರರಿಗೆ ಸ್ಫೂರ್ತಿಯಾದಾಗ ನಮ್ಮ ಮಾತಿಗೆ ಮೌಲ್ಯ ಸಿಗುತ್ತದೆ; ಮಾತು ಇತರರಿಗೆ ಸ್ಫೂರ್ತಿ ನೀಡುತ್ತದೆ. ಬೀದಿಯಲ್ಲಿ ಕಸಗುಡಿಸುವ ವ್ಯಕ್ತಿ ಕೂಡ ನಮಗೆ ಸ್ಫೂರ್ತಿ ಆಗಬಹುದು.

ಉತ್ತರ ಭಾರತದ ವಿದ್ಯಾರ್ಥಿಗಳೇ ಹೆಚ್ಚಾಗಿ ಐಎಎಸ್ ಮಾಡುತ್ತಾರೆ?

ಉತ್ತರ ಭಾರತದ ಬಿಹಾರ, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಔದ್ಯಮೀಕರಣದ ಕೊರತೆಯಿಂದಾಗಿ ಅಲ್ಲಿನ ಯುವಜನತೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಐಟಿ ಉದ್ಯಮವೂ ಅಲ್ಲಿ ಬೆಳೆದಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆಗಳು ಮಾತ್ರ ಕಣ್ಣಿಗೆ ಕಾಣುತ್ತವೆ. ಸರ್ಕಾರಿ ಹುದ್ದೆಗಳು ಅವರ ಬದುಕಿನ ಆಕಾಂಕ್ಷೆ ಆಗುತ್ತವೆ. ಆದ್ದರಿಂದ, ಅಲ್ಲಿನ ಸಂಕಷ್ಟಗಳೇ ಅವರಿಗೆ ಐಎಎಸ್ ಮಾಡಲು ಪ್ರೇರಣೆಯಾಗಿವೆ ಎಂದು ನಾನು ಭಾವಿಸಿದ್ದೇನೆ.

ಐಎಎಸ್ ಪರೀಕ್ಷೆಗೆ ಯಾವ ಪುಸ್ತಕ, ಸಂಪನ್ಮೂಲ ಅಗತ್ಯ?

ನಾನು ಐಎಎಸ್ ಪರೀಕ್ಷೆಗೆ ವೆಚ್ಚ ಮಾಡಿದ್ದು ಕೇವಲ ಒಂದು ಸಾವಿರ ರೂಪಾಯಿಗಳು. ಹೊಸಪೇಟೆಯಿಂದ ನವದೆಹಲಿಗೆ ಹೋಗಿ ಬರುವ ರೈಲು ವೆಚ್ಚವನ್ನು ಯುಪಿಎಸ್ಸಿಯವರೇ ನೀಡಿದರು. ಪರೀಕ್ಷೆಯ ತಯಾರಿಗಾಗಿ ನಾನು ಯಾವುದೇ ಕೋಚಿಂಗ್ ಕೇಂದ್ರದ ನೆರವು ಪಡೆಯಲಿಲ್ಲ. ಆದರೆ ಈಗ ಅತ್ಯುತ್ತಮ ಸಂಪನ್ಮೂಲಗಳು ಇಂಟರ್ನೆಟ್ ಮೂಲಕ ಲಭ್ಯವಾಗುತ್ತಿವೆ. ಬಡ ವಿದ್ಯಾರ್ಥಿಗಳಿಗಾಗಿ ಐಎಎಸ್ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಕರ್ನಾಟಕ ಸರ್ಕಾರ ನೆರವು ನೀಡುತ್ತಿದೆ. ಅರ್ಹರನ್ನು ಗುರುತಿಸಿ ನವದೆಹಲಿಯಲ್ಲಿ ಕೋಚಿಂಗ್ ನೀಡುವ ಯೋಜನೆಯೂ ಇದೆ.

ಸಾಮಾನ್ಯರೂ ಸಾಧಿಸಲು ಸಾಧ್ಯ; ನಾನೇ ನಿದರ್ಶನ

ಹೊಸಪೇಟೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಮಾಡಿ ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದೆ. ವಿದ್ಯಾಭ್ಯಾಸದ ಸಮಯದಲ್ಲಿ ಕೊನೆಯ ಬೆಂಚಿನಲ್ಲಿ ಕೂಡುವ ವಿದ್ಯಾರ್ಥಿನಿಯಾಗಿದ್ದ ನಾನು ತೀವ್ರ ಸಂಕೋಚದ ವ್ಯಕ್ತಿಯಾಗಿದ್ದೆ. ಅಧ್ಯಾಪಕರು ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಹೇಳಲಾಗದಷ್ಟು ನಾಚಿಕೆಯ ಸ್ವಭಾವ ಹೊಂದಿದ್ದೆ. ನನ್ನ ಇಂಗ್ಲಿಷ್ ತಪ್ಪು ಆಗಬಹುದು ಎಂಬ ಕೀಳರಿಮೆ ಕಾಡುತ್ತಿತ್ತು.

ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಐಎಎಸ್ ನಲ್ಲಿಯೂ ಕನ್ನಡ ಭಾಷೆಯನ್ನು ಮುಖ್ಯ ವಿಷಯವಾಗಿ ಆರಿಸಿಕೊಂಡು ಯಶಸ್ವಿಯಾದೆನು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿ ಇರುವ ಕೀಳರಿಮೆಯನ್ನು ತೊಡೆಯಬೇಕು. ನಿಮ್ಮೊಳಗೆ ಕನಸುಗಳಿವೆ ಎಂದರೆ ಅವುಗಳನ್ನು ಸಾಧಿಸುವ ಸಾಮಥ್ರ್ಯವೂ ನಿಮ್ಮೊಳಗೆ ಇದ್ದೇ ಇರುತ್ತದೆ. ನಿಮ್ಮೆಲ್ಲರಿಗೂ ಯಶಸ್ಸು ಸಾಧಿಸುವ ಶಕ್ತಿ ಇದೆ. ಆ ಆತ್ಮವಿಶ್ವಾಸವನ್ನು ನೀವು ಇಟ್ಟುಕೊಳ್ಳಿರಿ. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಸಾಮಾನ್ಯ ವಿದ್ಯಾರ್ಥಿನಿಯಾದ ನಾನು ತರಗತಿಯ ಕೊನೆಯ ಬೆಂಚಿನಿಂದ ಹೀಗೆ ವೇದಿಕೆಯ ಮೇಲೆ ಬರಲು ನನಗೆ ಸಾಧ್ಯವಾಗುವುದಾದರೆ ನಿಮಗೂ ಸಾಧ್ಯ. ಇದಕ್ಕೆ ನಾನೇ ಉದಾಹರಣೆ. ನಿಮ್ಮ ಬದುಕಿನ ಆಕಾಂಕ್ಷೆಯನ್ನು ಸಾಧಿಸಲು ಪ್ರಯತ್ನಿಸಿರಿ. ಇಲ್ಲವಾದಲ್ಲಿ ಜೀವನ ಏನು ಕೊಡುತ್ತದೆಯೋ ಅದನ್ನೇ ಒಪ್ಪಿಕೊಳ್ಳಬೇಕಾಗುತ್ತದೆ.

ಬದುಕಿನಲ್ಲಿ ಯಶಸ್ಸು ಗಳಿಸುವುದು ಹೇಗೆ?

‘ಯಶಸ್ಸು’ ಎಂಬ ಪದದ ಅರ್ಥ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಒಳ್ಳೆಯ ಉದ್ಯೋಗ, ಹಣ, ಅಂತಸ್ತುಗಳೇ ಯಶಸ್ಸು ಎಂದು ಕೆಲವರು ಭಾವಿಸುತ್ತಾರೆ. ಆದರೆ ನಿಮ್ಮ ಬದುಕಿನ ಮಹತ್ವದ ಉದ್ದೇಶವನ್ನು ನಿಮ್ಮೊಳಗೆ ಕಂಡುಕೊಳ್ಳುವುದೇ ಯಶಸ್ಸು ಎಂದು ನಾನು ಭಾವಿಸುತ್ತೇನೆ. ಯಶಸ್ಸು ಗಳಿಸಲು ಯಾವುದೇ ಸಿದ್ಧಸೂತ್ರಗಳಿಲ್ಲ. ನಿಮ್ಮ ಯೋಚನೆಗಳು, ಯೋಜನೆಗಳು ನಿಮ್ಮ ಗಮ್ಯದೆಡೆಗೆ ಸದಾ ತುಡಿಯುತ್ತಿರಲಿ. ನಿಮ್ಮ ಬಗ್ಗೆ ನಿಮ್ಮಲ್ಲಿ ಅಪಾರವಾದ ಆತ್ಮವಿಶ್ವಾಸವಿರಲಿ. ಆಗ ಯಶಸ್ಸು ನಿಮ್ಮದಾಗುತ್ತದೆ.

ದೈನಂದಿನ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ? ಭ್ರಷ್ಟ ವ್ಯವಸ್ಥೆಯನ್ನು ಹೇಗೆ ಎದುರಿಸುತ್ತೀರಿ?

ನಾವೆಲ್ಲರೂ ಒಂದೇ ಸಮಾಜದಿಂದ ಬಂದವರು. ಆದರೆ ನಮ್ಮೆಲ್ಲರ ಹಿನ್ನೆಲೆಗಳು ವಿಭಿನ್ನವಾಗಿರುತ್ತದೆ. ಇನ್ನೊಬ್ಬರನ್ನು ಟೀಕಿಸುವುದಕ್ಕಿಂತ, ನಾವು ಏನು ಮಾಡಬಹುದು ಅದನ್ನು ಮಾಡುವುದು ಮುಖ್ಯವಾಗುತ್ತದೆ. ನಾನು ನನ್ನ ಕಡೆಯಿಂದ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ನನ್ನ ಸುತ್ತ ಭ್ರಷ್ಟಾಚಾರ ನಡೆಯಲು ಬಿಡುವುದಿಲ್ಲ ಎಂದು ನಿರ್ಧರಿಸಬೇಕು, ಪಾಲಿಸಬೇಕು.

ರಾಜಕಾರಣಿಗಳನ್ನು ಎದುರು ಹಾಕಿಕೊಂಡರೆ ಸಾರ್ವಜನಿಕವಾಗಿ ಪ್ರಶಂಸೆ ಪಡೆಯಬಹುದು ಎಂದು ಆಡಳಿತ ಸೇವೆಯ ಕೆಲವು ಅಧಿಕಾರಿಗಳು ಭಾವಿಸುತ್ತಾರೆ. ಆದರೆ ಜನಸಾಮಾನ್ಯರ ಹಣದಿಂದ ವೇತನ ಪಡೆಯುವ ನಾವು ಜನಸಾಮಾನ್ಯರಿಗೆ ಉತ್ತರದಾಯಿತ್ವವನ್ನು ಹೊಂದಿದ್ದೇವೆ. ಜನಪ್ರತಿನಿಧಿಗಳು ಜನಸಾಮಾನ್ಯರ ಹಿತಕ್ಕಾಗಿ ದುಡಿಯುವಂತೆ, ಕೆಲಸ ಮಾಡುವಂತೆ ಪ್ರೇರೇಪಿಸುವ ಸಾಮಥ್ರ್ಯ, ಅವಕಾಶ ಆಡಳಿತ ಸೇವಾ ಅಧಿಕಾರಿಗಳಲ್ಲಿ ಇರುತ್ತದೆ. ಒಳ್ಳೆಯ ಕೆಲಸಕ್ಕಾಗಿ ಜನಪ್ರತಿನಿಧಿಗಳೊಂದಿಗೆ ಹಠ ಹಿಡಿದು ಕೆಲಸ ಮಾಡಿದಾಗ ಅವರಿಗೆ ಅದು ಇಷ್ಟವಾಗದಿದ್ದರೂ ನನ್ನನ್ನು ಗೌರವಿಸಿದ ಉದಾಹರಣೆಗಳಿವೆ. ಜನಪ್ರತಿನಿಧಿಗಳು ದುಷ್ಟರು ಎಂದು ಭಾವಿಸಿದರೆ ಅದು ಜನತೆಯನ್ನು ಅಗೌರವಿಸಿದಂತೆ ಆಗುತ್ತದೆ. ನಾವು ನಮ್ಮ ಪ್ರಜಾಪ್ರಭುತ್ವವನ್ನು ಅದರ ಮೌಲ್ಯಗಳನ್ನು ಗೌರವಿಸಬೇಕು.

ಅಧಿಕಾರಿಯಾಗಿ ನನ್ನೆದುರು ಕೇವಲ ಎರಡು ಆಯ್ಕೆಗಳಿರುತ್ತವೆ. ಒಂದು, ಎಲ್ಲರನ್ನೂ ಶಪಿಸುತ್ತಾ ಇರುವುದು. ಇನ್ನೊಂದು ನಾನು ನನ್ನ ಸುತ್ತಣ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತ ಹೋಗುವುದು. ನನ್ನಂಥ ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳು ನೀತಿ ನಿರೂಪಕಿಯಾಗಿ ಬೆಳೆಯಲು ಅವಕಾಶ ನೀಡಿದೆ ಎಂಬುದು ಈ ದೇಶದ, ಈ ನೆಲದ ಬಹುದೊಡ್ಡ ಅಂತಃಸತ್ವ.

ನಿಮ್ಮ ತೀವ್ರ ಆಸಕ್ತಿಯ ಕ್ಷೇತ್ರವನ್ನೇ ನಿಮ್ಮ ವೃತ್ತಿಯಾಗಿ ಆಯ್ದುಕೊಳ್ಳಿರಿ. ಆಸಕ್ತಿ ಹಾಗೂ ವೃತ್ತಿ ಒಂದೇ ಆದಾಗ ನಿಮ್ಮ ಕೆಲಸವೇ ನಿಮ್ಮಲ್ಲಿ ಉತ್ಸಾಹವನ್ನು ತುಂಬುತ್ತದೆ. ನಿಮ್ಮ ದೈನಂದಿನ ಕೆಲಸಗಳು ಒತ್ತಡ ಉಂಟು ಮಾಡುವುದಿಲ್ಲ. ಅನಿವಾರ್ಯತೆಯಿಂದ ಕೆಲಸ ಮಾಡದೇ, ನಿಮ್ಮ ಹಂಬಲವನ್ನು ಗುರುತಿಸಿ ವೃತ್ತಿಯನ್ನು ಆಯ್ದುಕೊಳ್ಳಿ.

Leave a Reply

Your email address will not be published.