ಕನ್ನಡ ಲಿಪಿಯನ್ನು ತರ್ಕಬದ್ದಗೊಳಿಸುವ ಯತ್ನ

ಲೇಖಕರ ವಿವರಣೆ :

‘ಸಮಾಜಮುಖಿ’ಯ 2018ರ ಜುಲೈ, ನವೆಂಬರ್ ಮತ್ತು ಡಿಸೆಂಬರ್ ಸಂಚಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿದ್ದವು. ಅವುಗಳಲ್ಲಿ ಲಿಪಿ ಸುಧಾರಣೆಯ ಭಾಗವಾಗಿ ಕನ್ನಡದಲ್ಲಿ ನಡೆಯುತ್ತಿರುವ ಚಿಂತನೆಗಳನ್ನು ಅನುಸರಿಸುತ್ತ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಬರೆಹವನ್ನು ಮಾಡಿದ್ದೆ. ಅವುಗಳಲ್ಲಿ ‘ಷ’ ಬದಲಾಗಿ ‘ಶ’ವನ್ನು, ರ್‘’ ಅರ್ಕಾವೊತ್ತಿಗೆ ಬದಲಾಗಿ ಸೂರ್ಯ, ವರ್ಗ, ವರ್ಣ ಹೀಗೆ ಬಳಸಲಾಗಿತ್ತು. ಇದರ ಬಗೆಗೆ ಹಿರಿಯರೂ, ಪರಿಚಿತರೂ ಮತ್ತು ಕನ್ನಡ ಸಾಹಿತ್ಯದ ಗಂಭೀರ ಓದುಗರೂ ಆದ ಚಿಕ್ಕತಿಮ್ಮಯ್ಯನವರು ಸ್ಪಶ್ಟನೆ ಬಯಸಿದ್ದಾರೆ. ಹಾಗಾಗಿ ಇಲ್ಲಿ ನನ್ನ ಅಭಿಪ್ರಾಯವನ್ನು ದಾಖಲಿಸುತ್ತಿದ್ದೇನೆ. ಮತ್ತೆ ಇದು ಚರ್ಚೆ ಆಗಬೇಕಾದ ವಿಚಾರವೂ ಕೂಡ ಆಗಿದೆ. ಇಂತಹದ್ದೇ ಪ್ರಸಂಗ ‘ನ್ಯಾಯಪಥ’ ಪತ್ರಿಕೆಯಲ್ಲಿಯೂ ಉಂಟಾಗಿದೆ. ಅಲ್ಲಿ ಗೆಳೆಯರಾದ ಶ್ರೀಪಾದ್ ಬಟ್ ಅವರು ‘ಷ’ ಬದಲಿಗೆ ‘ಶ’ ಬಳಸಿದ್ದಕ್ಕೆ ಅನೇಕ ಓದುಗರು ಗೊಂದಲಗೊಂಡು ಕರಡು ತಿದ್ದುವಲ್ಲಿ ಎಡವಟ್ಟಾಗಿರಬೇಕೆಂದು ಪ್ರಶ್ನಿಸಿದ್ದಾರೆ. ಅಲ್ಲಿಯೂ ಅದರ ಸಂಪಾದಕರು ಇಂತಹದ್ದೇ ಸ್ಪಶ್ಟನೆ ಕೊಡುವ ಕೆಲಸ ಮಾಡಿದ್ದಾರೆ.

ಯಾಕೆ ಹೀಗೆ?

ಮೊದಲಿಗೆ ‘ಷ’ ಬದಲಿಗೆ ‘ಶ’ ಬಳಸುತ್ತಿರುವವರಲ್ಲಿ ನಾನು ಮೊದಲಿಗನಲ್ಲ. ಇಂದು ಅನೇಕ ಕನ್ನಡ ಲೇಖಕರು ಇದನ್ನು ಬಳಸುತ್ತಿದ್ದಾರೆ. ಇದನ್ನು ಕನ್ನಡದಲ್ಲಿ ಮೊದಲು ಆರಂಭಿಸಿದವರು ಡಿ. ಎನ್. ಶಂಕರ ಬಟ್. ಅವರು ‘ಹೊಸಬರಹ’ ಎಂಬ ಹೆಸರಿನಲ್ಲಿಯೇ ತಮ್ಮ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ಅವರನ್ನು ಈ ಕಾರಣಕ್ಕಾಗಿಯೇ ಗೇಲಿ ಮಾಡುವವರು ಸಾಕಶ್ಟು ಹುಟ್ಟಿಕೊಂಡಿದ್ದಾರೆ. ಇವರನ್ನು ಅನುಸರಿಸುವ ಅಂದರೆ ಅವರ ನುಡಿಚಿಂತನೆಗಳನ್ನು ಒಪ್ಪುವ ಅನೇಕರು ಇಂದು ‘ಷ’ಕಾರವನ್ನು, ಅರ್ಕಾವೊತ್ತನ್ನು ಬಿಟ್ಟು ಬರೆಯುತ್ತಿದ್ದಾರೆ. ಹಾಗೆಯೇ ಅನೇಕ ಸುಧಾರಣೆಗಳನ್ನು ಲಿಪಿಯಲ್ಲಿ ಮಾಡಿಕೊಂಡಿದ್ದಾರೆ. ಹೀಗೆ ಬಳಸುವವರ್ಯಾರು ಕನ್ನಡ ಗೊತ್ತಿಲ್ಲದವರಲ್ಲ. ಅವರೆಲ್ಲ ಕನ್ನಡ ನುಡಿಯ ಬಗೆಗೆ ಕನ್ನಡ ನುಡಿಯರಿಮೆಯ ವಲಯದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವವರು. ತಮ್ಮ ನುಡಿ ಅರಿಮೆಯ ಮತ್ತು ಕನ್ನಡ ನುಡಿರಚನೆಯ ತಿಳುವಳಿಕೆಯನ್ನು ಬೆಳೆಸುವುದರ ಭಾಗವಾಗಿಯೇ ಇಂತಹ ಮಾರ್ಪಾಟುಗಳನ್ನು ಮಾಡಿಕೊಂಡು ಬಳಸುತ್ತಿದ್ದಾರೆ. ಇದು ಚಿಕ್ಕತಿಮ್ಮಯ್ಯನವರಲ್ಲಿ ಗೊಂದಲಗಳನ್ನು ಹುಟ್ಟುಹಾಕಿದಂತೆ ಕನ್ನಡ ಓದಲು ಬರೆಯಲು ಬಲ್ಲ ಲಕ್ಶಾಂತರ ಜನರಲ್ಲಿ ಇಂತಹ ಗೊಂದಲವನ್ನು ಮೂಡಿಸುವುದು ಸಹಜವೇ ಆಗಿದೆ. ಇಂತಹ ಗೊಂದಲವನ್ನು ನಿವಾರಿಸುವುದು ನಮ್ಮ ಹೊಣೆ ಕೂಡ.

ಯಾಕೆಂದರೆ ಇದುವರೆಗೂ ನಮಗೆ ಕಲಿಸಿಕೊಟ್ಟಿರುವ ಕನ್ನಡ ಬರೆಹವೇ ಅಂತಹ ಗೊಂದಲವನ್ನು ಮೂಡಿಸುತ್ತದೆ. ನಮಗೆ ಇದುವರೆಗೂ ಕನ್ನಡ ನುಡಿ ರಚನೆ ಬಗೆಗೆ ಕಲಿಸಿಕೊಟ್ಟಿರುವ ವಿಚಾರಗಳಲ್ಲಿಯೇ ಅಂತಹ ಗೊಂದಲಗಳಿವೆ. ಹಾಗಾಗಿ ಅಂತಹ ಗೊಂದಲಗಳನ್ನು ನಿವಾರಿಸಿಕೊಂಡು ಮುಂದೆ ಸಾಗಲು ಮಾಡುವ ಪ್ರಯತ್ನಗಳು ಗೊಂದಲ ಹುಟ್ಟಿಸುವಂತೆ ಕಾಣಿಸುತ್ತಿರುವುದೇ ಅಚ್ಚರಿಯ ಸಂಗತಿ. ಅಂದರೆ ಒಮ್ಮೆ ತಪ್ಪನ್ನೇ ‘ಸರಿ’ಯೆಂದು ಕಲಿತರೆ ಕಲಿಸಿದರೆ ಅದನ್ನೇ ನಂಬಿಕೊಂಡು ದಿಟವೆಂದು ವಾದಿಸುವುದು ಸಹಜವೆಂಬಂತೆ ಕಾಣುತ್ತದೆ. ಇರಲಿ ಇದು ಹೆಚ್ಚು ಚರ್ಚೆ ಬೇಡುವ ಸಂಗತಿ.

‘ಷ’ ಮತ್ತು ಶ’ಗಳ ಸಮಸ್ಯೆ ಕಣ್ಣಿನದು ಅಲ್ಲವೇ ಅಲ್ಲ. ನುಡಿ ಎನ್ನುವುದನ್ನು ಲಿಪಿ ನೋಡಿ ಅರಿಯಲು ಸಾಧ್ಯವಿಲ್ಲ. ಯಾವುದೇ ಒಂದು ನುಡಿಯನ್ನು ಆ ನುಡಿಯನ್ನಾಡುವ ಜನರು ಹೇಗೆ ನುಡಿಯುತ್ತಿದ್ದಾರೆ ಎಂಬುದನ್ನು ಆಧರಿಸಿ ಆಯಾ ಭಾಶೆಯ ವಿನ್ಯಾಸವನ್ನು ಅರಿಯಲಾಗುತ್ತದೆ.

ಚಿಕ್ಕ ತಿಮ್ಮಯ್ಯನವರು ಕೇಳಿರುವಂತೆ ಷ ಬದಲಿಗೆ ಶ ಬಳಸಿದರೆ ಅರ್ಕಾವೊತ್ತನ್ನು ಬೇರೆ ರೂಪದಲ್ಲಿ ಬರೆದರೆ ನಿರರ್ಗಳ ಓದಿಗೆ ತೊಡಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಅಂದರೆ ಕಣ್ಣಿಗೆ ತೊಡಕಾಗುವುದನ್ನು ತಿಳಿಸಿದ್ದಾರೆ. ‘ಷ’ ಮತ್ತು ಶ’ಗಳ ಸಮಸ್ಯೆ ಕಣ್ಣಿನದು ಅಲ್ಲವೇ ಅಲ್ಲ. ನುಡಿ ಎನ್ನುವುದನ್ನು ಲಿಪಿ ನೋಡಿ ಅರಿಯಲು ಸಾಧ್ಯವಿಲ್ಲ. ಯಾವುದೇ ಒಂದು ನುಡಿಯನ್ನು ಆ ನುಡಿಯನ್ನಾಡುವ ಜನರು ಹೇಗೆ ನುಡಿಯುತ್ತಿದ್ದಾರೆ ಎಂಬುದನ್ನು ಆಧರಿಸಿ ಆಯಾ ಭಾಶೆಯ ವಿನ್ಯಾಸವನ್ನು ಅರಿಯಲಾಗುತ್ತದೆ. ಕನ್ನಡದಲ್ಲಿ ‘ಷ’ಕಾರ ಉಚ್ಚಾರಣೆಯೇ ಬಳಕೆಯಲ್ಲಿ ಇಲ್ಲ. ಶ ಮತ್ತು ಷ ಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ ಉಚ್ಚರಿಸುವವರು ಇಲ್ಲವೇ ಇಲ್ಲ. ಯಾರೋ ಕೆಲವು ಪಂಡಿತರು ಉದ್ದೇಶಪೂರಕವಾಗಿ ಉಸಿರುಗಟ್ಟಿ ಪ್ರಯತ್ನಿಸಿದರೆ ಮಾತ್ರ ಷ ಉಚ್ಚರಿಸಬಹದು. ಅದನ್ನು ಬಿಟ್ಟರೆ ಷಕಾರವನ್ನು ರೂಢಿಗತವಾಗಿ ಬಳಸಲಾಗುತ್ತಿದೆ ಬಿಟ್ಟರೆ ಉಳಿದಂತೆ ಅದಕ್ಕೆ ಯಾವ ತಳಹದಿಯೂ ಇಲ್ಲ. ‘ಷ’ವನ್ನು ಮೂರ್ಧನ್ಯ ಧ್ವನಿಗಳಂತೆ ಉಚ್ಚರಿಸಬೇಕು. ನಾಲಿಗೆ ಹಿಂದಕ್ಕೆ ಮಡಿಚಿ ನಾಲಿಗೆ ತುದಿಯನ್ನು ಬಾಯಿಯ ಕಮಾನಿನಂತಿರುವ ಜಾಗದ ನಡುಭಾಗದಲ್ಲಿ ಅದರ ತುದಿಯನ್ನು ತಾಕಿಸಿ ಉಚ್ಚರಿಸಬೇಕು. ಅದನ್ನು ಕನ್ನಡದಲ್ಲಿ ಯಾರು ಮಾಡುತ್ತಿದ್ದಾರೆ?

ಹಾಗೆ ಕನ್ನಡದಲ್ಲಿ ಉಚ್ಚರಿಸಲು ಸಾಧ್ಯವೂ ಇಲ್ಲ. ಯಾಕೆಂದರೆ ಮೂಲದಲ್ಲಿ ‘ಷ’ ಕನ್ನಡದ ಧ್ವನಿಯಲ್ಲ. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಧ್ವನಿ. ಯಾವುದೇ ಕನ್ನಡ ಪದದಲ್ಲಿ ಅದು ಬಳಕೆಯಾಗುವುದಿಲ್ಲ. ಕನ್ನಡ ಬರೆಹದಲ್ಲಿ ಎಲ್ಲೆಲ್ಲಿ ಸಂಸ್ಕೃತ ಇಲ್ಲವೇ ಅನ್ಯದೇಶ್ಯ ಪದಗಳು ಬಳಕೆಯಾಗುತ್ತವೆಯೋ ಅಲ್ಲಿ ಮಾತ್ರವೇ ಇದು ಬಳಕೆಯಾಗುತ್ತದೆ. ಹಾಗೆ ಬಂದು ಕನ್ನಡದಲ್ಲಿ ಬಳಕೆಯಾದರೂ ಸಂಸ್ಕದಲ್ಲಿ ಉಚ್ಚಾರಣೆಗೊಂಡಂತೆ ಕನ್ನಡದಲ್ಲಿ ಬಳಕೆಯಾಗುವುದಿಲ್ಲ. ಕನ್ನಡಿಗರು ತಮ್ಮ ಧ್ವನಿಗಳ ಉಚ್ಚಾರಣೆಯ ಜಾಯಮಾನಕ್ಕೆ ತಕ್ಕಂತೆ ಅದನ್ನು ಬದಲಿಸಿಕೊಂಡು ಉಚ್ಚರಿಸುತ್ತಾರೆ ಇಲ್ಲವೇ ಓದುತ್ತಾರೆ. ಯಾರೂ ಕೂಡ ಅದನ್ನು ಮೂಲದಲ್ಲಿರುವಂತೆ ಅದನ್ನು ಬಳಸುವುದಿಲ್ಲ.

ಹಾಗಾಗಿ ಅದನ್ನು ಕಣ್ಣಿಗಾಗಿ ಕನ್ನಡದಲ್ಲಿ ಇಟ್ಟುಕೊಳ್ಳಬೇಕೆ? ನುಡಿ ರಚನೆ ಎನ್ನುವುದು ಅತಾರ್ಕಿಕ ಚಿಂತನೆಗಳ ಕಂತೆಯಲ್ಲ. ಅದು ಒಂದು ವಿಜ್ಞಾನ. ಅದನ್ನು ಅದರ ನಿಜದ ಅರಿವಿನ ಮೇಲೆ ಕಟ್ಟಿಕೊಳ್ಳಬೇಕು. ಅಂತಹ ನಿಜದ ಅರಿವಿನ ಮೇಲೆ ಕನ್ನಡವನ್ನು ಕಟ್ಟಿಕೊಳ್ಳುವ ಮತ್ತು ಅದನ್ನು ನಿಧಾನವಾಗಿ ಕನ್ನಡ ಜಾಯಮಾನಕ್ಕೆ ಬದಲಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಷ ಬದಲಿಗೆ ಶ ವನ್ನು ಬಳಸಲಾಗುತ್ತಿದೆ. ಕನ್ನಡಿಗರಲ್ಲಿ ಗೊಂದಲ ಹುಟ್ಟಿಸುವುದು ಇಲ್ಲಿನ ಉದ್ದೇಶ ಅಲ್ಲವೇ ಅಲ್ಲ. ಇದುವರೆಗೂ ಷ ಬಳಕೆಯಾಗಿರುವ ಕಡೆ ಅದನ್ನು ನೋಡಿ ನೋಡಿ ಈಗ ಅಲ್ಲಿ ಶ ಕಂಡರೆ ಮೊದಲಿಗೆ ಕಿರಿಕಿರಿ ಎನ್ನಿಸಬಹುದು. ನಿಧಾನವಾಗಿ ಷ ದಂತೆ ಶ ಕೂಡ ಕಣ್ಣಿಗೆ ಪರಿಚಯವಾಗುತ್ತ ಹೋದರೆ ಸಮಸ್ಯೆ ಬಗೆಹರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ಈ ಬಗೆಗೆ ಯಾರಿಗೂ ಆತಂಕ ಬೇಡ. ಅಲ್ಲದೇ ಷ ಕಳೆದು ಹೋಗಿಬಿಡುವುದಲ್ಲ ಎಂಬ ಸಂಕಟವೂ ಬೇಡ. ಇಂತಹ ಎಶ್ಟೋ ಧ್ವನಿಗಳು ಕಾಲಕಾಲಕ್ಕೆ ಕನ್ನಡದಲ್ಲಿ ಬಂದು ಮರೆಯಾಗಿಹೋಗಿವೆ. ಮೂಲದ್ರಾವಿಡದಿಂದ ಕವಲೊಡೆದು ಇಲ್ಲಿವರೆಗೂ ಉಳಿದು ಬೆಳೆದು ಬಂದಿರುವ ಕನ್ನಡದಲ್ಲಿ ಇಂತಹ ಎಶ್ಟೋ ಧ್ವನಿಗಳು ಬಂದು ಮರೆಯಾಗಿವೆ. ಮುಂದೆಯೂ ಆಗುತ್ತಲೇ ಇರುತ್ತವೆ. ಇದೂ ಯಾರ ನಿಯಂತ್ರಣದಲ್ಲಿಯೂ ಇರುವುದಿಲ್ಲ. ಇಂತಹ ಬದಲಾವಣೆಯನ್ನು ಆಯಾ ಕಾಲದ ಬರೆಹದಲ್ಲಿ ತಂದುಕೊಳ್ಳುವುದು ನಮ್ಮ ಕೆಲಸವಶ್ಟೇ. ಇದನ್ನು 13ನೆಯ ಶತಮಾನದಲ್ಲಿ ಹರಿಹರನೂ ಮಾಡಿದ್ದ ಕತೆ ನಮಗೆಲ್ಲಾ ತಿಳಿದೇ ಇದೆ.

ಈ ಗೊಂದಲವನ್ನು ಸರಿಮಾಡಿಕೊಂಡು ಕನ್ನಡ ಲಿಪಿಯನ್ನು ತರ್ಕಬದ್ದಗೊಳಿಸಿಕೊಳ್ಳುವ ಅಗತ್ಯವಿದೆಯಲ್ಲವೇ? ಇದನ್ನು ಬಗೆಹರಿಸಿಕೊಳ್ಳುವುದರಿಂದ ಕನ್ನಡವನ್ನು ತಂತ್ರಜ್ಞಾನಕ್ಕೆ ಕಂಪ್ಯೂಟರ್ ಕೀಲಿಮಣೆಗೆ ಅಳವಡಿಸಿಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ.

ಇನ್ನು ಅರ್ಕಾವೊತ್ತಿನದೂ ಇದೇ ಕತೆ. ಉದಾಹರಣೆಗೆ. ಸೂರ್ಯ ಎಂಬ ಪದದಲ್ಲಿ ಸ್+ಊ+ರ್+ಯ ಎಂಬ ನಾಲ್ಕು ಧ್ವನಿಗಳು ಕೂಡಿ ಸೂರ್ಯ ಆಗುತ್ತದೆ. ಆ ಪದವನ್ನು ಉಚ್ಚರಿಸುವುದಕ್ಕೂ ಅದನ್ನು ಬರೆಯುವುದಕ್ಕೂ ಸರಿಯಾಗುತ್ತದೆ. ಆದರೆ ಸೂರ್ಯ ಎಂದು ಬರೆದಾಗ ಸ್+ಊ+ಯ್+ಅ+ರ್=ಸೂಯರ್ ಕ್ರಮದಲ್ಲಿ ಬರೆದು ಅದನ್ನು ಸೂರ್ಯ ಎಂಬಂತೆ ಓದಲಾಗುತ್ತಿದೆ. ಇಲ್ಲಿ ಬರೆಹ ಮತ್ತು ಓದಿನ ನಡುವೆ ವ್ಯತ್ಯಾಸಗಳಿವೆ. ಇದು ನಿಜಕ್ಕೂ ಬರೆಹ ಮತ್ತು ಮಾತಿನ ನಡುವೆ ಇರುವ ಗೊಂದಲ. ಈ ಗೊಂದಲವನ್ನು ಸರಿಮಾಡಿಕೊಂಡು ಕನ್ನಡ ಲಿಪಿಯನ್ನು ತರ್ಕಬದ್ದಗೊಳಿಸಿಕೊಳ್ಳುವ ಅಗತ್ಯವಿದೆಯಲ್ಲವೇ? ಇದನ್ನು ಬಗೆಹರಿಸಿಕೊಳ್ಳುವುದರಿಂದ ಕನ್ನಡವನ್ನು ತಂತ್ರಜ್ಞಾನಕ್ಕೆ ಕಂಪ್ಯೂಟರ್ ಕೀಲಿಮಣೆಗೆ ಅಳವಡಿಸಿಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ. ಹಾಗೆ ಮಾಡಿಕೊಳ್ಳದ ಕಾರಣಕ್ಕಾಗಿಯೇ ಅನೇಕ ಸಮಸ್ಯೆಗಳನ್ನು ಇಂದು ಎದುರಿಸಬೇಕಾಗಿದೆ.

ಇದು ಕೇವಲ ಷ ಮತ್ತು ರ್‘’ ಅರ್ಕಾವೊತ್ತಿನ ಪ್ರಶ್ನೆ ಮಾತ್ರವಲ್ಲ. ಕನ್ನಡ ನುಡಿಯ ಬರೆಹ ಮತ್ತು ಅದರ ಆಡುನುಡಿಗಳ ನಡುವೆ ಇರುವ ಅಂತಹಗಳನ್ನು ತಗ್ಗಿಸಿಕೊಂಡು ಜನರ ನುಡಿಯನ್ನು ಹೆಚ್ಚು ಹೆಚ್ಚಾಗಿ ಕನ್ನಡದ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವ ಉದ್ದೇಶದಿಂದ ಇಂತಹ ಸುಧಾರಣೆಗಳ ಅಗತ್ಯವಿದೆ. ಮತ್ತು ಇಂತಹ ಬದಲಾವಣೆಗಳು ತರ್ಕಬದ್ಧ ಮತ್ತು ವೈಜ್ಞಾನಿಕ ಎನ್ನಿಸಿದ ಕಾರಣಕ್ಕಾಗಿ ಮಾತ್ರ ಬಳಸಲಾಗಿದೆಯೇ ಹೊರತು ಬೇರೆ ಯಾವುದೇ ಉದ್ದೇಶಗಳಿಲ್ಲ. ಇಂತಹ ಎಶ್ಟೋ ಬದಲಾವಣೆಗಳು ಕನ್ನಡ ಬರೆಹದಲ್ಲಿ ಆಗಬೇಕಿದೆ. ಅವೆಲ್ಲವನ್ನೂ ಒಮ್ಮೆಗೆ ತಂದರೆ ಕನ್ನಡಿಗರು ನಿಜಕ್ಕೂ ಶಾಕ್ ಆಗುತ್ತಾರೆ ಇಲ್ಲವೇ ಬದಲಾವಣೆಯನ್ನು ಒಪ್ಪಿಕೊಳ್ಳದೇ ಅದನ್ನು ಮೂಲೆಗುಂಪು ಮಾಡಿಬಿಡುತ್ತಾರೆ. ಕಾರಣ ಈಗಾಗಲೇ ರೂಢಿಯಾಗಿರುವ ಬರೆಹ ಮತ್ತು ಚಿಂತನೆಗಳ ಪ್ರಾಬಲ್ಯ ಹೊಸದನ್ನು ಅಶ್ಟು ಸುಲಭವಾಗಿ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ನಿಧಾನವಾಗಿ ಕನ್ನಡ ಬರೆಹದ ಬದಲಾವಣೆಯ ಪ್ರಯತ್ನಗಳನ್ನು ನಾವೆಲ್ಲೂ ಮಾಡಲೇಬೇಕಿದೆ.

-ರಂಗನಾಥ ಕಂಟನಕುಂಟೆ, ಹೊನ್ನಾವರ.

Leave a Reply

Your email address will not be published.