ಕನ್ನಡ ವಿದ್ವತ್ತಿಗೆ ಭದ್ರ ಬುನಾದಿ ಹಾಕಿದ ಡಾ.ಫರ್ಡಿನಾಂಡ್ ಕಿಟೆಲ್

ಕನ್ನಡಕ್ಕೆ ದುಡಿದ ಕ್ರೈಸ್ತ ವಿದ್ವಾಂಸರು ಎಂದಾಕ್ಷಣ ಮೊದಲು ನೆನಪಾಗುವವರು ಕಿಟೆಲ್. ಕನ್ನಡಕ್ಕೆ ಕ್ರೈಸ್ತರ ಸಾಹಿತ್ಯಿಕ ಕೊಡುಗೆ ಎಂದಾಕ್ಷಣ ಮೊದಲು ನೆನಪಾಗುವುದು ಕಿಟೆಲ್ ಕೋಶ. ಹೀಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವ್ಯಕ್ತಿ ಕೃತಿ ದೃಷ್ಟಿಯಿಂದ ಮಹತ್ವದ ಪಾಶ್ಚಾತ್ಯ ವಿದ್ವಾಂಸರೆನಿಸಿದ್ದಾರೆ ಡಾ.ಫರ್ಡಿನಾಂಡ್ ಕಿಟೆಲ್. ಎಪ್ರಿಲ್ 7, ಅವರ ಜನ್ಮದಿನ.

ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪಾಶ್ಚಿಮಾತ್ಯರು ರಾಜಕೀಯ ಚಟುವಟಿಕೆಗಳನ್ನು ವಿಸ್ತರಿಸುವದರೊಂದಿಗೆ ಧಾರ್ಮಿಕ ಚಟುವಟಿಕೆಗಳನ್ನೂ ಪ್ರಾರಂಭಿಸಿದರು. ಧಾರ್ಮಿಕ ಶ್ರದ್ಧೆಯ ಕ್ರೈಸ್ತ ಪಾದ್ರಿಗಳು ಮತಪ್ರಸಾರಕ್ಕೆ ಮಾತ್ರ ಸೀಮಿತಗೊಳ್ಳದೆ, ಅನ್ಯ ಕ್ಷೇತ್ರಗಳನ್ನೂ ಆವರಿಸಿದರು. ಇದಕ್ಕೆ ಕಾರಣ ಕ್ರೈಸ್ತಧರ್ಮ ಕೇವಲ ವ್ಯಕ್ತಿಕೇಂದ್ರಿತವಾಗಿರದೆ, ಸಮಾಜಕೇಂದ್ರಿತವೂ ಆಗಿರುವುದು. ಹೀಗಾಗಿ ಧಾರ್ಮಿಕ ಮಧ್ಯಬಿಂದುವಿನಲ್ಲಿ ನಿಂತು ಸಮಾಜದ ಎಲ್ಲ ಆಯಾಮಗಳಲ್ಲಿ ಚಾಚಿಕೊಂಡ ಅವರು, ಶಿಕ್ಷಣ-ಸಾಹಿತ್ಯಗಳಲ್ಲಿಯೂ ಬಿಚ್ಚಿಕೊಂಡುದು ಸಹಜವೇ ಆಗಿದೆ.

ಸಾಹಿತ್ಯಕ್ಕೆ ಬಂದರೆ ಹೆಜ್ಜೆ ಇಟ್ಟಲ್ಲೆಲ್ಲ ಗುರುತುಗಳನ್ನು ಮೂಡಿಸಿದ ಈ ಕ್ರೈಸ್ತ ಬರಹಗಾರರಲ್ಲಿ ಕಿಟೆಲ್ ಹೆಜ್ಜೆ ವಾಮನನಂತೆ ಮೂರು ನೆಲೆಗಳನ್ನು ವ್ಯಾಪಿಸಿದೆ. ಭಾಷೆ, ಸಾಹಿತ್ಯ ಮತ್ತು ಧರ್ಮ. ಈ ನೆಲೆಗಳ ಫಲಿತವನ್ನು ಅವರು ಗ್ರಂಥ ಲೇಖನಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಕಿಟೆಲರು ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ 7ನೆಯ ಎಪ್ರಿಲ್ 1832 ರಂದು ಜನಿಸಿದರು. ಅವರದು ಸನಾತನ ದೈವಭಕ್ತ ಮನೆತನ. ತಂದೆ ಗಾಟ್‍ಫ್ರೀಡ್ ಕ್ರಿಶ್ಚಿಯನ್ ಕಿಟೆಲ್. ತಾಯಿ ಹೆಲನ್. ಈ ದಂಪತಿಯ ಆರು ಜನ ಮಕ್ಕಳಲ್ಲಿ ಫರ್ಡಿನಾಂಡ್ ಕಿಟೆಲ್ ಮೊದಲನೆಯವರು.

ಕಿಟೆಲರ ಪ್ರಾಥಮಿಕ ವಿದ್ಯಾಭ್ಯಾಸ ರಾಸ್ಟರಾಫೆಯಲ್ಲಿ ನಡೆಯಿತು. ಮುಂದೆ ಅವರು ತನ್ನ ಅಜ್ಜನ ಊರಾದ ಔರಿಕ್ ನಗರದಲ್ಲಿ ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿದ್ದರು. ತುಂಬಾ ಬುದ್ಧಿವಂತರೂ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದವರೂ ಆಗಿದ್ದ ಇವರು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ದೈವಿಕ ವಿಷಯದಲ್ಲಿ ಕವಿತೆ ರಚಿಸಿ ಸ್ನೇಹಿತರ ಮುಂದೆ ಹಾಡುತ್ತಿದ್ದರಂತೆ. ದೈವಿಕ ಒಲವಿಗೆ ಕಾರಣ ಅವರ ತಂದೆಯವರು. ಅವರೂ ಒಬ್ಬ ಮತೋಪದೇಶಕರಾಗಿದ್ದರು. ಕಿಟೆಲರ ಆಧ್ಯಾತ್ಮಿಕ ಒಲವನ್ನು ಕಂಡು ಅವರ ತಂದೆಯವರು ಅವರನ್ನು ದೈವಶಾಸ್ತ್ರ ಅಧ್ಯಯನಕ್ಕೆ ಕಳುಹಿಸಲು ನಿರ್ಧರಿಸಿದರು. ಇದಕ್ಕಾಗಿ 16ನೇ ಜನವರಿ 1850ರಲ್ಲಿ ಅವರನ್ನು ಬಾಸೆಲ್ ನಲ್ಲಿರುವ ಮಿಷನ್ ಶಿಕ್ಷಣ ಸಂಸ್ಥೆಗೆ ಸೇರಿಸಲಾಯಿತು.

ಕಿಟೆಲರಲ್ಲಿದ್ದ ಮಿಷನರಿಯಾಗುವ ಆಸಕ್ತಿಯನ್ನು ಗುರುತಿಸಿದ ಅಧಿಕಾರಿವರ್ಗದವರು ಅವರನ್ನು ಭಾರತಕ್ಕೆ ಕಳುಹಿಸಬೇಕೆಂದು ತೀರ್ಮಾನಿಸಿದರು. ಅಕ್ಟೋಬರ್ 16, 1853ರಲ್ಲಿ ಸ್ಟುಟೆಗಾರ್ಟದ ಯೇಸುನಾಮ ದೇವಾಲಯದಲ್ಲಿ ಗುರುದೀಕ್ಷೆಯನ್ನು ಪಡೆದು ಮುಂದಿನ ಕೆಲವು ವಾರಗಳಲ್ಲಿ ಭಾರತದ ಕಡಲತಡಿ ಮಂಗಳೂರಿಗೆ ಆಗಮಿಸಿದರು.

ಮಂಗಳೂರಿಗೆ ಬಂದ ಆರಂಭದಲ್ಲಿ ವಂದನೀಯ ಮೊಗ್ಲಿಂಗ್ (ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ ಪತ್ರಿಕೆ’ಯ ಸಂಪಾದಕ) ಅವರಿಗೆ ಮತ ಪ್ರವಚನ ಮಾಡಲು ಸಹಕರಿಸುತ್ತಿದ್ದರು. ನಂತರ ಅವರನ್ನು ಧಾರವಾಡಕ್ಕೆ ಕಳಿಸಲಾಯಿತು. ಅಲ್ಲಿ ಅವರು ರೆ.ವೈಗಲ್‍ರ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಅಭ್ಯಸಿಸಿದರು. ಕೇವಲ ಒಂದೇ ವರ್ಷದಲ್ಲಿ ಕಿಟೆಲರು ಕನ್ನಡ ಭಾಷೆಯನ್ನು ಅರಗಿಸಿಕೊಂಡಿದ್ದರು.

ಕಿಟೆಲರ ಮೊದಲ ಮಿಶನರಿ ಕಾರ್ಯಸ್ಥಳ ನೀಲಗಿರಿ. ಅಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿಯಾದ ಮೇಲೆ ಅವರನ್ನು ಪುನಃ ಧಾರವಾಡಕ್ಕೆ ಕಳುಹಿಸಿ ಅಲ್ಲಿಯ ಇಂಗ್ಲಿಷ್ ಸ್ಕೂಲಿನಲ್ಲಿ ಶಿಕ್ಷಕರಾಗಿ 1860ರ ವರೆಗೆ ಸೇವೆ ಸಲ್ಲಿಸಿದರು. ಇದೇ ಸಮಯದಲ್ಲಿ ಅವರು ಪೌಲಿನ್ ಎಫ್ ಐಥಳನ್ನು ಮದುವೆಯಾದರು. ಮುಂದೆ ಅವರು 1860-66ರ ವರೆಗೆ ಮಂಗಳೂರಿನ ದೈವಶಾಸ್ತ್ರ ಬೋಧಿಸುವ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಅವರು ಹಳಗನ್ನಡ, ಮತ್ತು ನಡುಗನ್ನಡ ಕಾವ್ಯಗಳ ಅಭ್ಯಾಸ ನಡೆಸಿದರು. ಆಗ ಕಾವ್ಯಗಳ ಮುದ್ರಣ ಪ್ರತಿಗಳು ದೊರಕುತ್ತಿರಲಿಲ್ಲ. ತಾವೇ ಸ್ವತಃ ತಾಳೆಗರಿ, ಕೋರಿಕಾಗದದ ಹಸ್ತಪ್ರತಿಗಳನ್ನು ಓದಿ ಶುದ್ಧ ಪ್ರತಿಗಳನ್ನು ಸಿದ್ಧಪಡಿಸುತ್ತಿದ್ದರು. ಈ ಪರಿಶ್ರಮದ ಫಲವಾಗಿ ಕೇಶಿರಾಜನ ‘ಶಬ್ದಮಣಿದರ್ಪಣ’ ಹಾಗೂ ನಾಗವರ್ಮನ ಛಂದೋಂಬುಧಿಯನ್ನು ‘ನಾಗವರ್ಮನ ಕನ್ನಡ ಛಂದಸ್ಸು’ ಎಂದು ಸಂಪಾದಿಸಿದ್ದಾರೆ.

ಕಿಟೆಲರ ಧಾರ್ಮಿಕ ಕೃತಿಗಳಲ್ಲಿ ಮುಖ್ಯವಾದವು: ‘ಕಥಾಮಾಲೆ’ (ಷಟ್ಪದಿ. ಕೀರ್ತನೆಗಳ ಛಂದೋರೂಪದಲ್ಲಿ ಕ್ರಿಸ್ತನನ್ನು ಭಜಿಸುವ ಹಾಡುಗಳುಳ್ಳದ್ದು.), ಪರಮಾತ್ಮಜ್ಞಾನ (ಮತ ಟೀಕಾ ಗ್ರಂಥ), ಯೇಸುಕ್ರಿಸ್ತನ ಶ್ರಮೇ ಚರಿತ್ರೆ (ಯೇಸುವಿನ ಜೀವನ ವೃತ್ತಾಂತ), ಕ್ರೈಸ್ತ ಸಭಾ ಚರಿತ್ರೆ (ಚರ್ಚಿನ ಉಗಮ ಮತ್ತು ವಿಕಾಸ), ಯಜ್ಞಸುಧಾನಿಧಿ (ಯಜ್ಞಕ್ರಿಯೆಯ ಉಗಮ-ಉದ್ದೇಶ), ಭಾರತದ ಲಿಂಗಾರಾಧನೆ.

 

 

ಕಿಟೆಲರು ಕೆಲವು ಪಠ್ಯ ಪುಸ್ತಕಗಳನ್ನು ಶಾಲೆಗಳ ಅಗತ್ಯಕ್ಕಾಗಿ ರಚಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ‘ಸಂಣ ಕರ್ನಾಟಕ ಕಾವ್ಯಮಾಲೆ’ ಮತ್ತು ‘ಹಿಂದೂ ದೇಶದ ಚರಿತ್ರೆ’ ಮುಂತಾದವು. ಶಬ್ದಮಣಿದರ್ಪಣವನ್ನು ಆಧಾರವಾಗಿಟ್ಟುಕೊಂಡು ‘ಹಳಗನ್ನಡ ಸಂಕ್ಷೇಪ ವ್ಯಾಕರಣ ಸೂತ್ರಗಳು’ ಎಂಬ ಕೃತಿಯನ್ನೂ ಹೊರತಂದಿದ್ದರು. ಅಲ್ಲದೆ ಕನ್ನಡ ವ್ಯಾಕರಣದ ಕುರಿತು ಇಂಗ್ಲಿಷಿನಲ್ಲೂ ಒಂದು ಗ್ರಂಥ ರಚಿಸಿದ್ದಾರೆ. ಕಿಟೆಲರಿಗೆ ಸಂಶೋಧನೆಯ ಬಗೆಗೂ ಒಲವು ಇದ್ದಿತು. ಮದರಾಸಿನಿಂದ ಪ್ರಕಟವಾಗುತ್ತಿದ್ದ ಇಂಡಿಯನ್ ಏಂಟಿಕ್ವೆರಿ ಮಾಸಿಕದಲ್ಲಿ ಸುಮಾರು 17 ಲೇಖನಗಳನ್ನು ಬರೆದಿದ್ದಾರೆ.

ಕಿಟೆಲರಿಗೆ ಬಾಸೆಲ್ ಮಿಶನಿನವರು 1872ರ ಸುಮಾರಿಗೆ ಕನ್ನಡ-ಇಂಗ್ಲಿಷ್ ನಿಘಂಟು ರಚಿಸುವ ಕಾರ್ಯವನ್ನು ವಹಿಸಿಕೊಟ್ಟರು. 15 ವರ್ಷಗಳಷ್ಟು ಕಾಲ ನಿರಂತರವಾಗಿ ಈ ನಿಘಂಟಿಗಾಗಿ ದುಡಿದರು. ಹೀಗೆ ನಿರಂತರವಾಗಿ ದುಡಿಯುತ್ತಿದ್ದುದರಿಂದ ಅವರ ಕಣ್ಣಿನ ನರಗಳ ಶಕ್ತಿ ಕ್ಷೀಣಿಸತೊಡಗಿತು. 1892ರಲ್ಲಿ ಅವರು ಭಾರತವನ್ನು ಬಿಟ್ಟು ಜರ್ಮನಿಯ ಟ್ಯುಬೆಂಗನ್ ಎಂಬ ಊರಿನಲ್ಲಿ ನೆಲೆಸಿದರು. ತಮ್ಮ ದೀರ್ಘಕಾಲದ ವ್ಯಾಸಂಗದಲ್ಲಿ ಸಂಪಾದಿಸಿದ್ದ ನಿಘಂಟಿನ ಸಾಮಗ್ರಿಗಳನ್ನೆಲ್ಲ ಟ್ಯುಬೆಂಗನ್ನಲ್ಲಿ ಕುಳಿತು ಪರಿಷ್ಕರಿಸಿದರು. 1894ರಲ್ಲಿ ಅವರ ಜೀವನಾಭ್ಯಾಸದ ಸಾರಸರ್ವಸ್ವವಾದ ಕನ್ನಡ-ಇಂಗ್ಲಿಷ್ ನಿಘಂಟು ಪ್ರಕಟವಾಯಿತು. ಈ ಮಹಾಕೋಶದ ರಚನೆಯನ್ನು ಮೆಚ್ಚಿ ಅವರಿಗೆ ಟ್ಯುಬೆಂಗನ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರಶಸ್ತಿಯನ್ನು ಕೊಟ್ಟು 1895ರಲ್ಲಿ ಗೌರವಿಸಿತು. ಡಾ.ಕಿಟೆಲರು ತಮ್ಮ 72ನೆಯ ವಯಸ್ಸಿನಲ್ಲಿ ಡಿಸೆಂಬರ್ 19, 1903 ರಲ್ಲಿ ನಿಧನರಾದರು.

ಹೀಗೆ ಸುಮಾರು 40 ವರ್ಷಗಳ ಕಾಲ ದುಡಿದು, ಕನ್ನಡ ವಿದ್ವತ್ತಿಗೆ ಭದ್ರವಾದ ತಳಹದಿಯನ್ನು ಹಾಕಿದ ಇವರು 19ನೆಯ ಶತಮಾನದ ಭಾರತೀಯ ವಿದ್ವಾಂಸರಲ್ಲಿ ಪ್ರಮುಖರಾಗಿದ್ದಾರೆಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ

*ಲೇಖಕರು ಮೂಲತಃ ದಕ್ಷಿಣ ಕನ್ನಡದ ಕಡಬ ಗ್ರಾಮದವರು. ರೆವೆರೆಂಡ್ ಕಿಟ್ಟೆಲ್ ಕುರಿತ ಮಹಾಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು, ಪ್ರಸ್ತುತ ಬೆಂಗಳೂರಿನ ಸಂತ ಜೋಸೆಫರ ಸಂಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.

Leave a Reply

Your email address will not be published.