ಕನ್ನಡ ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ

ಖ್ಯಾತ ಕ್ರೀಡಾ ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ ಅವರು ಕರ್ನಾಟಕ ವಿವಿಯಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. ಅವರಿಗೆ ಎಲ್ಲಾ ಆಟಗಳಲ್ಲಿ ಆಸಕ್ತಿಯಿದ್ದರೂ ಕ್ರಿಕೆಟ್ ಆಟದ ಮೇಲಿನ ವ್ಯಾಮೋಹ ಒಂದು ಮುಷ್ಟಿ ಹೆಚ್ಚು; ಆ ಆಸಕ್ತಿ ಮುಂದಿನ ಎರಡು ದಶಕ ಅವರ ಬದುಕಾಗುತ್ತದೆ. 15 ವರ್ಷ ಫಸ್ಟ್ ಡಿವಿಷನ್ ಕ್ರಿಕೆಟ್ ಆಡಿ, ಮೂರು ವರ್ಷ ಕರ್ನಾಟಕ ಯೂನಿವರ್ಸಿಟಿಯನ್ನು ಮತ್ತು ಒಂದು ವರ್ಷ ಸ್ಟೇಟ್ ಜೂನಿಯರ್ ಟೀಮ್ ಪ್ರತಿನಿಧಿಸಿದ್ದಾರೆ. 1991ರಲ್ಲೇ ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟರಿ ಕೊಡಲು ಆರಂಭಿಸಿದರು. ಅಂದಹಾಗೆ ಇವರು ಕವಿ ದಂಪತಿ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿಯವರ ಪುತ್ರ.

ವಿಜ್ಞಾನದ ವಿದ್ಯಾರ್ಥಿಯಾಗಿ, ಕ್ರಿಕೆಟ್ ಆಡಿ, ಕನ್ನಡ ವೀಕ್ಷಕ ವಿವರಣೆ ಕ್ಷೇತ್ರ ಆಯ್ದುಕೊಳ್ಳಲು ಕಾರಣವೇನು?

ಕರ್ನಾಟಕ ಯೂನಿವರ್ಸಿಟಿಯಲ್ಲಿ ಕ್ರೀಡೆಗೆ ಬಹಳ ಯೋಗ್ಯ ಪರಿಸರವಿತ್ತು. ಕ್ರಿಕೆಟ್ ಅಂತಲ್ಲ, ಬ್ಯಾಂಡ್ಮಿಟನ್, ಟೆನ್ನಿಸ್ ಹೀಗೆ ಯಾವುದೇ ಆಟವಿದ್ದರೂ ಅದಕ್ಕೆ ಬೇಕಾದ ಪರಿಕರಗಳು ಮತ್ತು ವಾತಾವರಣ ಅಲ್ಲಿತ್ತು. ವಯೋಸಹಜವಾದ ಹುಮ್ಮಸ್ಸು ಆಟ ಆಡಲು ಪ್ರೇರಣೆ. ಎಲ್ಲಾ ಆಟಗಳೂ ಇಷ್ಟ. ಆದರೆ ಕ್ರಿಕೆಟ್ ಅಂದರೆ ಒಂದಷ್ಟು ಹೆಚ್ಚು ಇಷ್ಟ. ಈ ಆಟದ ಸಲುವಾಗಿ ಎಂಎಸ್ಸಿ ಮಾಡಲಿಲ್ಲ. ಬರಿ ಓದು ಎಂದ್ಕೊಂಡು ಹೋಗಿದ್ದರೆ ಪಿ.ಎಚ್.ಡಿ. ಅಥವಾ ಇನ್ನೇನು ಆಗಿರುತ್ತಿದ್ದೆನೋ ಗೊತ್ತಿಲ್ಲ. ವೀಕ್ಷಕ ವಿವರಣೆಗೆ ಬರಲೇಬೇಕು ಅಂತ ಪ್ಲಾನ್ ಮಾಡಿಕೊಂಡು ಬರಲಿಲ್ಲ. ಆಗಿನ್ನೂ ಆಟಗಾರನಾಗಿ ಆಡುತ್ತಿದ್ದ ಸಮಯ; ಅವಕಾಶ ಒದಗಿಬಂತು, ಬಳಸಿಕೊಂಡೆ ಅಷ್ಟೇ.

ಕನ್ನಡ ವೀಕ್ಷಕ ವಿವರಣೆ ನೀಡಬೇಕೆಂದು ಅನ್ನಿಸಿದ್ದು ಏಕೆ? ಯಾವಾಗ?

ನಾನು ಮೊದಲೇ ಹೇಳಿದಂತೆ ವೀಕ್ಷಕ ವಿವರಣೆಯನ್ನು ಕೊಡಲೇಬೇಕು ಎಂದು ಆಯ್ಕೆ ಮಾಡಿಕೊಳಲಿಲ್ಲ. ಅದು ಅದಾಗೇ ಒದಗಿಬಂದ ಅವಕಾಶ. ಕನ್ನಡ ವೀಕ್ಷಕ ವಿವರಣೆ ಹೊಸದೇನಲ್ಲ. ಇತ್ತೀಚೆಗೆ ಅದು ಬಹಳಷ್ಟು ಪ್ರಚಾರ ಮತ್ತು ಜನಪ್ರಿಯತೆ ಪಡೆದುಕೊಂಡಿದೆ. ಅದನ್ನು 1991ರಿಂದ ದೂರದರ್ಶನದಲ್ಲಿ ಮಾಡುತ್ತಾ ಬಂದಿದ್ದೇವೆ. ಆಕಾಶವಾಣಿಯಲ್ಲಿ ಸಹ ಇಂತಹ ಕಾರ್ಯಕ್ರಮಗಳು ಅಂದಿನಿಂದಲೇ ಶುರುವಾಗಿವೆ. ಹೀಗಾಗಿ ಇದನ್ನು 1991ರಿಂದ ಮಾಡಿಕೊಂಡು ಬಂದ ಕೆಲವೇ ಕೆಲವರಲ್ಲಿ ನಾನು ಒಬ್ಬ.

ವಿದ್ಯಾಭ್ಯಾಸ ಮತ್ತು ವೃತ್ತಿ ಕಾರಣಗಳಿಂದ ಹೆಚ್ಚಾಗಿ ಇಂಗ್ಲಿಷ್ ವಾತಾವರಣ ಇರುತ್ತದೆ. ಇದರ ಮಧ್ಯೆ ನಿಮ್ಮೊಳಗಿನ ಕನ್ನಡವನ್ನು ಹೇಗೆ ಕಾಯ್ದಿಟ್ಟುಕೊಂಡಿರಿ?

ನಮ್ಮ ಮನೆಯ ವಾತಾವರಣ ಕನ್ನಡಮಯ. ನಮ್ಮ ತಂದೆಯವರು ಮನೆಯಲ್ಲಿ 15 ಸಾವಿರಕ್ಕೂ ಹೆಚ್ಚು ಪುಸ್ತಕವುಳ್ಳ ಗ್ರಂಥಾಲಯ ಹೊಂದಿದ್ದರು. ಸಹಜವಾಗೇ ಬಾಲ್ಯದಿಂದ ಕನ್ನಡದ ಮೇಲೆ ಅಕ್ಕರೆ. ಅಲ್ಲದೆ ಏಳನೇ ತರಗತಿಯವರೆಗೆ ಓದಿದ್ದು ಕನ್ನಡ ಮಾಧ್ಯಮದಲ್ಲಿ. ನನ್ನ ಪ್ರಕಾರ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ಇಲ್ಲಿಯವರೆಗೆ ಕನ್ನಡವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಲು ಬಹುದೊಡ್ಡ ಕಾಣಿಕೆ ನೀಡಿದೆ. ಒಮ್ಮೆ ಒಂದು ಗಟ್ಟಿ ಅಡಿಪಾಯ ಸಿಕ್ಕುಬಿಟ್ಟರೆ ನಂತರ ನಾವು ಯಾರ ಮಧ್ಯೆ ಇದ್ದರೂ, ಎಷ್ಟೇ ಭಾಷೆ ಕಲಿತರೂ ನಮ್ಮ ಮೂಲ ಭಾಷೆಯನ್ನು ಮರೆಯುವುದಿಲ್ಲ.

ಈ ಪ್ರಶ್ನೆ ಹೇಗೆ ಕೇಳುವುದು ಗೊತ್ತಾಗ್ತಾ ಇಲ್ಲ… ನೀವು ಕನ್ನಡ ಸಾಹಿತ್ಯ ಮತ್ತು ಕನ್ನಡ ಪತ್ರಿಕೆಗಳನ್ನು ಓದುತ್ತೀರಾ?

ನಮ್ಮ ಮನೆಯಲ್ಲಿ ಸಾಹಿತ್ಯದ ವಾತಾವರಣವಿತ್ತು. ಅದು ಸಹಜವಾಗೇ ನಮ್ಮಲ್ಲಿ ಕೂಡ ಒಂದಷ್ಟು ಆಸಕ್ತಿಯನ್ನು ಬೆಳೆಸಿತ್ತು. ಹಿಂದೆಲ್ಲ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ದಿಪತ್ರಿಕೆ ಬರುವುದನ್ನು ಕಾಯುತ್ತಿದ್ದೆವು. ಬಹಳ ಶ್ರದ್ದೆಯಿಂದ ಓದುತ್ತಿದ್ದೆವು. ಇಂದಿಗೂ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸವಿದೆ. ಸಾಹಿತ್ಯ ಓದುವುದು ಒಂದಷ್ಟು ಕಡಿಮೆಯಾಗಿದೆ. ಇದಕ್ಕೆ ಮೂರ್ಖರ ಪೆಟ್ಟಿಗೆ ಮತ್ತು ಸಮಯದ ಅಭಾವ ಎರಡನ್ನೂ ಕಾರಣ ಎನ್ನಬಹುದು. ಬರೀ ಓದುವುದಷ್ಟೇ ಅಲ್ಲ ಬರೆಯುವುದು ಕೂಡ ನನಗೆ ಬಹಳ ಇಷ್ಟವಾದ ಹವ್ಯಾಸ. ಸರಿಸುಮಾರು 300 ಪ್ರಕಟಿತ ಬರಹಗಳು ನನ್ನ ಹೆಸರಲ್ಲಿವೆ.

ಮಾಜಿ ಆಟಗಾರರು ಮತ್ತು ವೃತ್ತಿನಿರತ ವೀಕ್ಷಕ ವಿವರಣೆ ನೀಡುವರ ನಡುವೆ ವ್ಯತ್ಯಾಸವೇನು? ನಿಮ್ಮನ್ನು ಹೇಗೆ ಗುರುತಿಸಿಕೊಳ್ಳುವಿರಿ?

ವೀಕ್ಷಕ ವಿವರಣೆ ಎನ್ನುವುದು ಸಾಮಾನ್ಯ ಜ್ಞಾನ ಬಯಸುವ, ಸದಾ ಜಾಗೃತರಾಗಿ ಸಮಯಪ್ರಜ್ಞೆ ಇರಲೇಬೇಕಾದ ಕೆಲಸ. ಮಾಜಿ ಆಟಗಾರರಿಗೆ ಅನುಭವದ ಬೆಂಬಲ ಇರುತ್ತದೆ. ಆಯಾ ಸಮಯಕ್ಕೆ ಬೇಕಾದ ಯಾವುದಾದರೂ ಒಂದು ಘಟನೆ ಹೇಳಿ ಜನಮೆಚ್ಚುಗೆ ಗಳಿಸಬಹದು. ವೃತ್ತಿನಿರತ ವೀಕ್ಷಕ ವಿವರಣೆಗಾರರು ಸಾಕಷ್ಟು ಸಿದ್ಧತೆ ಮಾಡಿಕೊಂಡಿರಬೇಕು. ನನ್ನ ಎರಡು ದಶಕ ಆಟ ಆಡಿದ ಅನುಭವದ ಜೊತೆಗೆ ವೀಕ್ಷಕ ವಿವರಣೆಕಾರರು ಮತ್ತು ಆಟಗಾರರ ನಡುವಿನ ಓಡಾಟ, ಒಡನಾಟ ಒಂದು ಹಂತದ ಆತ್ಮೀಯತೆ ಸೃಷ್ಟಿಸುತ್ತದೆ. ಹೀಗಾಗಿ ನನ್ನ, ಅವರ ನಡುವೆ ಗುರುತಿಸಿಕೊಳ್ಳುವ ಕಷ್ಟ ಎದುರಾಗಲೇ ಇಲ್ಲ. ಅದೊಂದು ಸಹಜವಾಗಿ ಆದ ಕ್ರಿಯೆಯಾಗಿತ್ತು ಅಷ್ಟೇ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಾನು ಮಾತ್ರ ಪ್ರತಿ ವೀಕ್ಷಕ ವಿವರಣೆಗೆ ಮುಂಚೆ ಸಾಕಷ್ಟು ಗಂಟೆಗಳ ಸಿದ್ಧತೆ ಮಾಡಿಕೊಳ್ಳುತ್ತೇನೆ. ಇದುವರೆಗೆ ಸಿದ್ಧತೆಯಿಲ್ಲದೆ ವೀಕ್ಷಕ ವಿವರಣೆ ನೀಡಿಯೇ ಇಲ್ಲ.

ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಹೋಲಿಸಿದರೆ ಕನ್ನಡ ಭಾಷೆ ವೀಕ್ಷಕ ವಿವರಣೆಗೆ ಎಷ್ಟು ಸೂಕ್ತ? ಕನ್ನಡ ಭಾಷೆಗೆ ಇರುವ ಮಿತಿ, ಶಕ್ತಿ ಏನು?

ಇಂದು ವೀಕ್ಷಕವಿವರಣೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮೀರಿ ಎಲ್ಲಾ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿದೆ. ವೀಕ್ಷಕ ವಿವರಣೆ ಎಂದ ಮಾತ್ರಕ್ಕೆ ಅದು ಕೇವಲ ಕ್ರಿಕೆಟ್ ಆಗಿರಬೇಕೆಂದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಕಬಡ್ಡಿ ಅತ್ಯಂತ ಹೆಚ್ಚು ಜನಪ್ರಿಯವಾಗುತ್ತಿದೆ. ಕಬಡ್ಡಿ ಕನ್ನಡ ವೀಕ್ಷಕ ವಿವರಣೆ ರೂರಲ್ ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾಗಿದೆ. ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಿದಾಗ ನಮ್ಮ ಭಾಷೆ ಎನ್ನುವುದು ಕನೆಕ್ಟಿಂಗ್ ಫ್ಯಾಕ್ಟರ್ ಆಗಿ ಕೆಲಸ ಮಾಡುತ್ತದೆ. ಬಹಳಷ್ಟು ಬಾರಿ ಹಿಂದಿ ಮತ್ತು ಇಂಗ್ಲಿಷ್ ಗಿಂತ ಕನ್ನಡ ಅಥವಾ ಪ್ರಾದೇಶಿಕ ಭಾಷೆಯಲ್ಲಿ ನೋಡುಗರ ಸಂಖ್ಯೆ ಹೆಚ್ಚಾಗಿದ್ದ ಉದಾಹರಣೆ ನಾವು ಕಂಡಿದ್ದೇವೆ. ಹೀಗಾಗಿ ಹೆಚ್ಚು ಜನರಿಗೆ ಅರ್ಥ ಆಗುವ ಭಾಷೆ ವೀಕ್ಷಕ ವಿವರಣೆಗೆ ಸೂಕ್ತವಾಗಿದೆ. ಅದರಲ್ಲಿ ಸಂದೇಹ ಬೇಡ. ಆರು ಕೋಟಿ ಕನ್ನಡಿಗರಲ್ಲಿ ಅರ್ಧ ವೀಕ್ಷಣೆ ಮಾಡಿದರೂ ಅದರ ಶಕ್ತಿ ಮತ್ತು ಅಗಾಧತೆ ಬಹು ದೊಡ್ಡದು. ಕನ್ನಡ ಭಾಷೆಗೆ ಇರುವ ಮಿತಿಗಿಂತ ಅದರ ಶಕ್ತಿ ದೊಡ್ಡದು. ಎಲ್ಲಾ ಕ್ರೀಡೆಗಳ ವೀಕ್ಷಕ ವಿವರಣೆಗೆ ಇಂದು ಕನ್ನಡದಲ್ಲಿ ಬೇಡಿಕೆಯಿದೆ .

ಕನ್ನಡ ವೀಕ್ಷಕವಿವರಣೆಗೆ ನೀವು ಮಾಡಿಕೊಳ್ಳುವ ಸಿದ್ಧತೆಗಳೇನು?

ಕಬಡ್ಡಿ ವೀಕ್ಷಕವಿವರಣೆ ಎರಡೂವರೆ ಗಂಟೆಯಲ್ಲಿ ಮುಗಿದುಹೋಗುತ್ತದೆ. ಆದರೆ ಅದಕ್ಕೆ ಎರಡೂವರೆ ಗಂಟೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಅದರಲ್ಲಿ ಪಾಲ್ಗೊಳ್ಳುವ ಆಟಗಾರರಿಂದ ಹಿಡಿದು ರೆಫರಿವರೆಗೆ ಎಲ್ಲರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಅದು ಟೂರ್ನಮೆಂಟ್ ಆಗಿದ್ದರೆ ಹಿಂದಿನ ಪಂದ್ಯ, ಮುಂದಿನ ಪಂದ್ಯದ ಬಗ್ಗೆ ಹೀಗೆ ಬಹಳಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕ್ರಿಕೆಟ್ ಆಗಿದ್ದರೆ ಸಿದ್ಧತೆಗೆ ಹಿಡಿಯುವ ಸಮಯ ಇನ್ನಷ್ಟು ಹೆಚ್ಚಾಗುತ್ತದೆ. ಸಿದ್ಧತೆ ಮತ್ತು ಬದ್ಧತೆಯಿಲ್ಲದೆ ವೀಕ್ಷಕ ವಿವರಣೆ ಕಷ್ಟಸಾಧ್ಯ.

ವೀಕ್ಷಕವಿವರಣೆ ಕನ್ನಡದಲ್ಲಿ ಬೇಕಿತ್ತೆ? ಕನ್ನಡ ವೀಕ್ಷಕವಿವರಣಾಕಾರರಿಗೆ ಆ ಸಾಮಥ್ರ್ಯವಿದೆಯೇ? ಅವರನ್ನು ಸಮಾಜ ಒಪ್ಪಿಕೊಂಡಿದೆಯೇ?

ಇಂದು ಕನ್ನಡವೀಕ್ಷಕ ವಿವರಣೆಗೆ ಸಿಕ್ಕಿರುವ ಯಶಸ್ಸು, ಬೆಂಬಲ ಅದು ಬೇಕಿತ್ತು ಎನ್ನುವುದನ್ನ ಸಾಬೀತು ಮಾಡಿದೆ. ಇನ್ನು ಎಷ್ಟೋ ಬಾರಿ ನಾನು ಆಟೋದಲ್ಲಿ ಅಥವಾ ಕ್ಯಾಬ್ ನಲ್ಲಿ ಪ್ರಯಾಣಿಸಿದಾಗ ಡ್ರೈವರ್ ಗಳು ನನ್ನನ್ನು ಗುರುತಿಸಿ ಮಾತಾಡುವುದು, ಸೆಲ್ಫಿ ತೆಗೆಸಿಕೊಳ್ಳುವುದು ಮಾಡುತ್ತಾರೆ. ಎಷ್ಟೋ ಜನ ಒತ್ತಾಯ ಮಾಡಿದರೂ ಹಣ ತೆಗೆದುಕೊಳ್ಳದೆ ಡ್ರಾಪ್ ಕೊಟ್ಟಿದ್ದಾರೆ. ಮೊದಲೇ ಹೇಳಿದಂತೆ ಇದು ಒಂದಷ್ಟು ಸಾಮಾನ್ಯಜ್ಞಾನ ಬೇಡುವ ಕೆಲಸ, ಜೊತೆಗೆ ಒಂದಷ್ಟು ಸಿದ್ಧತೆ ಇದ್ದರೆ ಸಾಕು; ಸಾಮಥ್ರ್ಯ ಬರುತ್ತದೆ, ಜನ ಒಪ್ಪಿಕೊಳ್ಳುತ್ತಾರೆ. ಜನರ ಮೆಚ್ಚುಗೆ ಇದುವರೆಗೆ ನನಗೆ ಸಿಕ್ಕಿರುವ ಅತಿ ದೊಡ್ಡ ಪ್ರಮಾಣಪತ್ರ.

ನಿಮ್ಮ ಮೆಚ್ಚಿನ ವೀಕ್ಷಕವಿವರಣೆಗಾರರಾರು?

ಅಲನ್ ಮ್ಯಾಗಿವಲ್ರಿ, ಬ್ರಿಯಾನ್ ಜಾನ್ಸ್ಟಾನ್, ಕೃಷ್ಣಮೂರ್ತಿ, ಗವಾಸ್ಕರ್, ಜಾನ್ ಅರ್ಲೊಟ್, ಅಲನ್ ಮಿಲ್ಕಿನ್ಸ್, ಇಯಾನ್ ಚಾಪೆಲ್ ನನಗೆ ಅತ್ಯಂತ ಇಷ್ಟವಾದ ವೀಕ್ಷಕ ವಿವರಣೆಕಾರರು. ಕೃಷ್ಣಮೂರ್ತಿಯವರು ಮೈಸೂರು ಸಂಸ್ಥಾನದ ಕ್ಯಾಪ್ಟನ್ ಆಗಿ ಕೂಡ ಆಡಿದ್ದವರು. ಕಂಚಿನ ಕಂಠದಲ್ಲಿ ಅವರ ವೀಕ್ಷಕ ವಿವರಣೆ ಕೇಳುವುದು ಸೌಭಾಗ್ಯದ ವಿಷಯವಾಗಿತ್ತು.

ವೀಕ್ಷಕ ವಿವರಣೆಯನ್ನು ವೃತ್ತಿಯಾಗಿ ಆರಿಸಿಕೊಳ್ಳಲು ಅವಕಾಶವಿರಂಗಸ್ವಾಮಿ ಮೂಕನಹಳ್ಳಿದೆಯೇ? ಸಂಭಾವನೆ ಆಕರ್ಷಕವಾಗಿದೆಯೇ? ತರಬೇತಿ ನೀಡುವ ಸಂಸ್ಥೆಗಳಿವೆಯೇ?

ವೀಕ್ಷಕವಿವರಣೆ ನೀಡಲು ಎಷ್ಟು ಜನ ಬೇಕಾಗಬಹುದು? ಇದೊಂದು ಅತ್ಯಂತ ಕಡಿಮೆ ಸಂಖ್ಯೆ ಜನರಿಗೆ ಅವಕಾಶ ಕಲ್ಪಿಸುವ ವೃತ್ತಿ. ಹೀಗಾಗಿ ಇದನ್ನೇ ವೃತ್ತಿ ಮಾಡಿಕೊಂಡು ಬದುಕು ಸಾಗಿಸಬೇಕು ಎಂದು ಆಯ್ಕೆ ಮಾಡಿಕೊಳ್ಳುವುದು ಅಷ್ಟೇನೂ ಆಕರ್ಷಕವಲ್ಲ. ಉಳಿದಂತೆ ಪ್ರಾರಂಭಿಕ ಹಂತದಲ್ಲಿ ಇದರಿಂದ ಸಿಗುವ ಸಂಭಾವನೆ ಕೂಡ ಅಷ್ಟಕಷ್ಟೇ. ಆದರೆ ಒಂದು ಹಂತ ತಲುಪಿದ ನಂತರ ಇದರಿಂದ ಬರುವ ಆದಾಯ ಖಂಡಿತ ಆಕರ್ಷಕವಾಗಿರುತ್ತದೆ. ತರಬೇತಿ ನೀಡಲು ಸದ್ಯಕ್ಕಂತೂ ಯಾವುದೇ ತರಬೇತಿ ಸಂಸ್ಥೆಗಳು ಇಲ್ಲ. ಇದನ್ನು ಹೊಸದಾಗಿ ವೃತ್ತಿಯನ್ನಾಗಿ ತೆಗೆದುಕೊಳ್ಳಲು ಬಂದವರಿಗೆ ಸಾಕಷ್ಟು ಸವಾಲುಗಳಿರುತ್ತವೆ. ಇದಕ್ಕೆ ಮಾನಸಿಕವಾಗಿ ಸಿದ್ಧವಾಗಿರಬೇಕಿದೆ. ಯೋಗ ಮತ್ತು ಪ್ರಾಣಾಯಾಮ ಕೂಡ ಸಿದ್ಧತೆಯಲ್ಲಿ ಬಹುದೊಡ್ಡ ಕೊಡಿಗೆಯನ್ನು ಕೊಟ್ಟಿದೆ.

ಪ್ರಾದೇಶಿಕ ಭಾಷೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಿಂದ ಅಪಾಯ ಎನ್ನುವ ಈ ಸಂದರ್ಭದಲ್ಲಿ ಕನ್ನಡ ವೀಕ್ಷಕವಿವರಣೆಯ ಭವಿಷ್ಯವೇನು?

ವೀಕ್ಷಕವಿವರಣೆ ಎಂದರೆ ಅದು ಕೇವಲ ಕ್ರಿಕೆಟ್ ಎಂದಲ್ಲ; ಕಬ್ಬಡ್ಡಿ, ಬ್ಯಾಂಡ್ಮಿಟನ್ ಮತ್ತು ಟೆನ್ನಿಸ್ ಕ್ರೀಡೆಗಳ ವೀಕ್ಷಕವಿವರಣೆ ಕೂಡ ಸೇರಿಕೊಳ್ಳುತ್ತದೆ. ಜೊತೆಗೆ ಫುಟ್‍ಬಾಲ್ ಬಹಳಷ್ಟು ಬೇಡಿಕೆ ಕಂಡುಕೊಳ್ಳುತ್ತಿದೆ. ಇವೆಲ್ಲವುಗಳ ಜೊತೆಗೆ ಒಲಿಂಪಿಕ್ಸ್, ಕಾಮನ್ ವೆಲ್ತ್ ಹೀಗೆ ಎಲ್ಲಾ ಕ್ರೀಡಾಕೂಟಗಳ ವೀಕ್ಷಕವಿವರಣೆ ಈಗ ಕನ್ನಡಲ್ಲಿ ಲಭ್ಯವಿದೆ. ಇವೆಲ್ಲವನ್ನು ಒಟ್ಟು ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ ಕನ್ನಡ ವೀಕ್ಷಕವಿವರಣೆಗೆ ಉಜ್ವಲ ಭವಿಷ್ಯವಿದೆ ಎಂದು ಧಾರಾಳಾವಾಗಿ ಹೇಳಬಹುದು.

Leave a Reply

Your email address will not be published.