ಕನ್ನಡ ಸೊಗಡಿನ ‘ಸಿನಿಮಾ ಬಂಡಿ’

ನೆಟ್ಪ್ಲಿಕ್ಸ್ನಲ್ಲಿ ಬಿಡುಗಡೆಯಾದಸಿನಿಮಾ ಬಂಡಿ‘ (ತೆಲುಗು) ಎರಡು ಕಾರಣಕ್ಕೆ ಕನ್ನಡಿಗರಿಗೂ ಮೆಚ್ಚುಗೆಯಾಗಿದೆ. ಒಂದು: ಕನ್ನಡ ಪದಗಳು ಮಿಶ್ರಿತ ಕೋಲಾರ ಭಾಗದ ತೆಲುಗು ಭಾಷೆಯ ಬಳಕೆ. ಎರಡು: ಇಡೀ ಸಿನಿಮಾದಲ್ಲಿ ಆರಂಭದಿಂದ ಕೊನೆಯವರೆಗೆ ಹರಿದಿರುವ ಪಾತ್ರಗಳ ಮುಗ್ಧತೆ.

ಮುದ್ದುಪ್ರಿಯ

ವರನಟ ಡಾ.ರಾಜ್‍ಕುಮಾರ್ ಅವರಲ್ಲಿಗೆ ಒಬ್ಬಾತ ಕಥೆ ಹೇಳಲು ಬಂದ ಪ್ರಸಂಗವನ್ನು ಸಿನಿಮಾ ಬರಹಗಾರರೊಬ್ಬರು ಹಿಂದೊಮ್ಮೆ ನೆನಪಿಸಿದುಂಟು. “ಕಥೆ ಹೇಳಲು ಬಂದವನ ಮಾತುಗಳನ್ನು ಕೊನೆಯವರೆಗೂ ತಾಳ್ಮೆಯಿಂದ ಕೇಳಿದ ಅಣ್ಣಾವ್ರು, ಈ ಕಥೆಯಲ್ಲಿ ಅಭಿನಯಿಸಲು ನನಗೆ ಆಗಲ್ಲ, ಈ ಕಥೆಗೆ ಸೂಕ್ತವಾದವರನ್ನು ಸೂಚಿಸುತ್ತೇನೆ” ಎಂದು ಒಬ್ಬರನ್ನು ಸಜೆಸ್ಟ್ ಮಾಡಿ ಕಳುಹಿಸಿದರಂತೆ. ಡಾ.ರಾಜ್ ಅವರ ಬಳಿ ಇದ್ದವರು, “ನೀವ್ಯಾಕೆ ಆ ಕಥೆಯನ್ನು ಒಪ್ಪಿಕೊಳ್ಳಲಿಲ್ಲ?” ಎಂದು ಕೇಳಿದಾಗ, “ಇವರ ಕಥೆಯಲ್ಲಿ ಬರುವ ಹೀರೋ ಎಲ್ಲೂ ಎಡವುದಿಲ್ಲ. ಬಹಳ ಬುದ್ಧಿವಂತ. ಎಲ್ಲ ಸಮಸ್ಯೆಯನ್ನು ಪರಿಹರಿಸುತ್ತಾ ಹೋಗುತ್ತಾನೆ. ಎಲ್ಲಾದರೂ ಮನುಷ್ಯ ಹಾಗೇ ಇರಲು ಸಾಧ್ಯವೇ? ಒಂದಿಷ್ಟು ತಮಾಷೆ, ತುಂಟತನ, ಪೆದ್ದುತನ ಇಲ್ಲದ ಪಾತ್ರವನ್ನು ನನ್ನಿಂದ ನಿಭಾಯಿಸುವುದು ಕಷ್ಟ” ಎಂದು ಉತ್ತರ ಕೊಟ್ಟರಂತೆ.

ಕಲಾಕೃತಿಯೊಂದು ತನ್ನ ಒಡಲಲ್ಲಿ ಇಟ್ಟುಕೊಳ್ಳಬೇಕಾದ ತುಂಟತನ ಹಾಗೂ ಮುಗ್ಧತೆಯ ಕುರಿತು ಮೇರು ನಟ ಡಾ.ರಾಜ್ ಅವರಿಗೆ ಇದ್ದ ಈ ಗ್ರಹಿಕೆಯ ಕಾರಣಕ್ಕೆ ಅವರು, ಪೋಷಿಸಿದ ಪಾತ್ರಗಳು ನಮ್ಮನ್ನು ಆದ್ರ್ರಗೊಳಿಸಿದವು, ದಟ್ಟ ಅನುಭೂತಿಯನ್ನು ನೀಡಿದವು. ತೆಲುಗಿನಲ್ಲಿ ಮೂಡಿಬಂದ ‘ಸಿನಿಮಾ ಬಂಡಿ’ ಕುರಿತು ಬರೆಯಲು ಹೊರಟಾಗ ಡಾ.ರಾಜ್‍ಕುಮಾರ್ ಅವರ ಈ ಪ್ರಸಂಗ ಕಾಕತಾಳೀಯವೆಂಬಂತೆ ನೆನಪಾಯಿತು.

ನೆಟ್‍ಪ್ಲಿಕ್ಸ್‍ನಲ್ಲಿ ಬಿಡುಗಡೆಯಾದ ‘ಸಿನಿಮಾ ಬಂಡಿ’ (ತೆಲುಗು) ಎರಡು ಕಾರಣಕ್ಕೆ ಕನ್ನಡಿಗರಿಗೂ ಮೆಚ್ಚುಗೆಯಾಗಿದೆ. ಒಂದು: ಕನ್ನಡ ಪದಗಳು ಮಿಶ್ರಿತ ಕೋಲಾರ ಭಾಗದ ತೆಲುಗು ಭಾಷೆಯ ಬಳಕೆ. ಎರಡು: ಇಡೀ ಸಿನಿಮಾದಲ್ಲಿ ಆರಂಭದಿಂದ ಕೊನೆಯವರೆಗೆ ಹರಿದಿರುವ ಪಾತ್ರಗಳ ಮುಗ್ಧತೆ. ಇವು ಪ್ರಮುಖ ಕಾರಣವಾದರೂ ಇಡೀ ಸಿನಿಮಾ ಶಕ್ತಿ ಎಂದರೆ ಚಿತ್ರಕಥೆ, ಕಥೆ ಹಾಗೂ ಕೇವಲ ಸಂಭಾಷಣೆಯಲ್ಲಿ ವ್ಯಕ್ತವಾಗದ ಹಾಸ್ಯ.

ನಿಮ್ಮ ಊರಿನಲ್ಲೂ ಒಬ್ಬಾತ ಇರಬಹುದು. ಆತನಿಗೂ ಸಿನಿಮಾ ಮಾಡುವ ಹುಚ್ಚು ಯಾವುದೋ ಸಂದರ್ಭದಲ್ಲಿ ಮೂಡಿರಬಹುದು. ನೀವೂ ಆತನನ್ನು ಡೈರೆಕ್ಟ್ರೇ ಅನ್ನುತ್ತಿರಲೂಬಹುದು. ಅಂತೂ ಸಿನಿಮಾ ಕುರಿತು ಅಪಾರ ಆಸಕ್ತಿ ತಳೆದ ಒಬ್ಬಾತ ನಿಮ್ಮೆದುರಿಗೆ ಇರಬಹುದು. ನಿಮ್ಮೊಳಗೂ ಒಬ್ಬ ಕಥೆಗಾರ, ಸಿನಿಮಾ ನಿರ್ದೇಶಕ ಇರಬಹುದು. ‘ಎಲ್ಲರೊಳಗೂ ಒಬ್ಬ ಚಿತ್ರಕರ್ಮಿ (ಫಿಲ್ಮ್‍ಮೇಕರ್) ಇದ್ದಾನೆ’ ಎಂಬುದು ‘ಸಿನಿಮಾ ಬಂಡಿ’ಯ ಟ್ಯಾಗ್‍ಲೈನ್.

 ಆಟೋವೊಂದನ್ನು ಸಾಲದಲ್ಲಿ ಕೊಂಡಿರುವ ವೀರಬಾಬು ಬಡವ. ಸುಣ್ಣ, ಬಣ್ಣ ಕಾಣದ ಮನೆ; ಪ್ರೀತಿಯ ಮಡದಿ, ಮಗು. ಸಾಲ ತೀರಿಸಿ, ಬದುಕನ್ನು ಕಟ್ಟಿಕೊಳ್ಳುವ ಆಸೆ. ಹೀಗಿರುವ ಆತನಿಗೆ ಒಂದು ಬೆಲೆಬಾಳುವ ಕ್ಯಾಮೆರಾ ಸಿಗುತ್ತದೆ. ಆಟೋದಲ್ಲಿ ಬಾಡಿಗೆ ಬಂದವರು ಬಿಟ್ಟು ಹೋಗಿದ್ದಾರೆ. ಅದು ಯಾರೆಂಬುದು ವೀರಬಾಬುವಿಗೂ ಗೊತ್ತಿಲ್ಲ. ಇದೇ ಸಂದರ್ಭಕ್ಕೆ ಸಿನಿಮಾವೊಂದು ಲಾಭ ಮಾಡಿದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡುತ್ತಾನೆ. ತಾನೂ ಸಿನಿಮಾ ಮಾಡಿದರೆ, ನನ್ನೆಲ್ಲ ಕಷ್ಟಗಳು ನೀಗುತ್ತವೆ ಎಂದು ಹೊರಡುವ ವೀರಬಾಬು ಮುಂದೆ ಏನು ಮಾಡುತ್ತಾನೆ ಎಂಬುದು ‘ಸಿನಿಮಾ ಬಂಡಿ’ಯ ಸ್ವಾರಸ್ಯ.

ಊರಿನಲ್ಲಿ ಮದುವೆ, ಪ್ರೀವೆಡ್ಡಿಂಗ್ ಶೂಟ್, ಇತ್ಯಾದಿ ಶಾಸ್ತ್ರಗಳ ಫೋಟೋ ತೆಗೆದುಕೊಂಡಿದ್ದ ಗಣಪತಿ (ವೀರಬಾಬು ಗೆಳೆಯ ಗನ)ಯೇ, ವೀರಬಾಬು ತೆಗೆಯಲು ಹೊರಟಿರುವ ಸಿನಿಮಾದ ಕ್ಯಾಮೆರಾ ಮ್ಯಾನ್. ಮಾಡುವ ಕೆಲಸ ಬಿಟ್ಟು ವೀರಬಾಬು ಮತ್ತು ಗಣಪತಿ ಸಿನಿಮಾ ಮಾಡಲು ಹೊರಟಿದ್ದಾರೆ. ಕೊನೆಯ ದೃಶ್ಯದವರೆಗೂ ಒಂದೂ ಮಾತನಾಡದ ಅಜ್ಜ ಬರೆದಿದ್ದಾನೆ ಎನ್ನಲಾದ ಕಥೆಯ ಮಾಸಲು ಪುಟಗಳನ್ನು ಹಿಡಿದು, ಆ ತಾತನನ್ನು ಜೊತೆಯಲ್ಲೇ ಕರೆದುಕೊಂಡು ತಿರುಗುವ ಗೆಳೆಯರಿಗೆ ಸದ್ಯಕ್ಕೆ ಪ್ರೇಮಿಗಳ ಪಾತ್ರದಲ್ಲಿ ಅಭಿನಯಿಸಲು ಒಬ್ಬ ಹುಡುಗ, ಒಬ್ಬ ಹುಡುಗಿ ಬೇಕಾಗಿದ್ದಾರೆ.

ತಾನು ತೆಗೆದ ಮದುವೆಗಳ ಫೆÇೀಟೋಗಳನ್ನು ತೆರೆದು, ದಂಪತಿಯನ್ನು ಆಯ್ಕೆ ಮಾಡುವ ಗನ ಹಾಗೂ ವೀರಬಾಬು ಆ ದಂಪತಿಯ ಮನೆಗೆ ಹೋದರೆ, ಬಸುರಿ ಹೆಂಗಸು ಹೊರಗೆ ಬರುತ್ತಾಳೆ. ಹೀಗೆ ಹೊಟ್ಟೆ ಹುಣ್ಣಾಗಿಸುವ ಸಾಕಷ್ಟು ದೃಶ್ಯಗಳು ಈ ಸಿನಿಮಾದಲ್ಲಿವೆ. ಕೊನೆಗೆ ಕ್ಷೌರಿಕ ವೃತ್ತಿ ಮಾಡಿಕೊಂಡಿರುವ ಮರಿಡಯ್ಯ (ಮರಿಡೇಶ್ ಬಾಬು ಎಂದು ಕರೆಸಿಕೊಳ್ಳಲು ಆಸೆ ಹೊತ್ತವನು) ಕಣ್ಣಿಗೆ ಬೀಳುತ್ತಾನೆ. ಆತನಿಗೆ ಕ್ಯಾಮೆರಾ ತೋರಿಸಿ, ಹೀರೋ ಆಗಲು ಒಪ್ಪಿಸುತ್ತಾರೆ. ಮರಿಡೇಶ್ ಬಾಬುಗೆ ಹಿರೋಯಿನ್ ಯಾರೆಂಬ ಕುತೂಹಲ. ಆತ ಇಷ್ಟಪಡುತ್ತಿರುವ ಮಂಗಾ (ತರಕಾರಿ ಮಾರುವವಳು) ತನ್ನೊಂದಿಗೆ ನಟಿಸಬೇಕೆಂಬುದು ಅವನ ಆಸೆ. ಮುಂಗೋಪಿ ಮಂಗಾ ಎಲ್ಲರನ್ನೂ ಬೈದು ಕಳಿಸುತ್ತಾಳೆ. ಮುಂದೆ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆಸಿ, ಕಾಲೇಜು ಹುಡುಗಿಯೊಬ್ಬಳನ್ನು ಅವರ ಮನೆಯವರ ನಿರಾಕರಣೆಯ ವಿರುದ್ಧವಾಗಿ ತಮ್ಮ ಸಿನಿಮಾಕ್ಕೆ ಕರೆತರುತ್ತಾರೆ. ಪುಟ್ಟ ಪೋರನೊಬ್ಬ ಇವರ ಜೊತೆಯಾಗುತ್ತಾನೆ. ಅವರು ಸಿನಿಮಾ ದೃಶ್ಯೀಕರಿಸಲು ಹೊರಟಾಗ ಇಡುವ ಕ್ಯಾಮೆರಾ ಫ್ರೇಮ್, ಅಭಿನಯ ಎಲ್ಲವೂ ಕಚಗುಳಿ ಇಡುತ್ತವೆ. ಇತ್ತ ಸಾಲಗಾರ ಕರೆ ಮಾಡುತ್ತಾ ವೀರಬಾಬುನಿಗೆ ವಾರ್ನಿಂಗ್ ಕೊಡುತ್ತಾ ಇರುತ್ತಾನೆ.

ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲೂ ಸರಿಯಾಗಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಕೋಳಿ ಫಾರಂನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು, ವೀರಬಾಬು ಬದಲಾವಣೆಯ ಮಾತುಗಳನ್ನು ಆಡುವಾಗ ಗಣಪತಿ ಅವನದೇ ಲೋಕದಲ್ಲಿರುವುದು ಮುಗ್ಧವೆನಿಸಿದರೂ ಹಾಸ್ಯವನ್ನು ಹೊತ್ತು ಸಾಗುತ್ತಿರುವ ಕಥೆಯೊಳಗೆ ಪ್ರವಹಿಸುವ ಸಣ್ಣಸಣ್ಣ ಗಂಭೀರ ವಿಚಾರಗಳಾಗಿವೆ. ವೀರಬಾಬುನ ಹೆಂಡತಿ, ತನ್ನ ಗಂಡನ ಸಿನಿಮಾ ಹುಚ್ಚಿನ ಕುರಿತು ಮೊದಮೊದಲು ನಿರಾಸಕ್ತಿ ತೋರಿದರೂ ನಂತರದಲ್ಲಿ ಗಂಡನ ಸಾಹಸಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ತಾನು ಕೂಲಿ ಮಾಡಿ ತಂದ ಹಣವನ್ನು ಗಂಡನ ಅಂಗಿ ಜೇಬಿನಲ್ಲಿ ಇಟ್ಟು, ಅವನ ಆಸೆಗೆ ಪೂರಕವಾಗಿ ಪ್ರೀತಿಯನ್ನು ಧಾರೆ ಎರೆಯುವುದು ಮತ್ತೊಂದು ಮುಗ್ಧತೆ.

ಸಿನಿಮಾಕ್ಕೆ ಅಭಿನಯಿಸಲು ಬರುತ್ತಿದ್ದ ಹುಡುಗಿ ತನ್ನ ಪ್ರಿಯಕರನೊಂದಿಗೆ ಓಡಿ ಹೋದ ಮೇಲೆ ವೀರಬಾಬುವಿನ ಸಿನಿಮಾ ಬಂಡಿ ನಿಂತು ಬಿಡುತ್ತದೆ. ಆಗ ರೀ ಎಂಟ್ರಿ ಕೊಡುವ ಮಂಗಾ ಕಥೆಗೆ ಮತ್ತೊಂದು ಚಲನೆ ತರುತ್ತಾಳೆ. ಊರಿನ ಜನರೆಲ್ಲ ಒಬ್ಬೊಬ್ಬರಿಗಾಗಿ ಮುಂದೆಬಂದು ವೀರಬಾಬುವಿನ ಸಾಹಸಕ್ಕೆ ಕೈಜೋಡಿಸುತ್ತಾ ಹೋಗುವ ಪರಿಯನ್ನು ನಿರ್ದೇಶಕ ಪ್ರವೀಣ್ ಕಂಡ್ರೇಗುಲ ಚಿತ್ರಕಥೆಯಲ್ಲಿ ಕಟ್ಟಿಕೊಟ್ಟಿರುವ ಪರಿಯನ್ನು ನೋಡಿಯೇ ಸವಿಯಬೇಕು.

ಇತ್ತ ತನ್ನ ಕ್ಯಾಮೆರಾವನ್ನು ಅರಸಿ, ಹುಡುಕಾಟ ನಡೆಸುತ್ತಿರುವ ಕ್ಯಾಮೆರಾ ಓನರ್, ಸಿಂಧು ತನ್ನ ಗೆಳೆಯನೊಂದಿಗೆ ಗ್ರಾಮದತ್ತ ಬರುತ್ತಾಳೆ. ಊರಿಗೆ ಹತ್ತಿರವಿರುವ ಪಟ್ಟಣವೊಂದರ ಫೋಟೋ ಸ್ಟೂಡಿಯೋಕ್ಕೆ ಹೋಗಿ ಯಾರಾದರೂ ಕ್ಯಾಮೆರಾ ಮಾರಲು ಬಂದಿದ್ದರಾ ಎಂದು ವಿಚಾರಿಸುತ್ತಾಳೆ. ಯಾರಾದರೂ ಕ್ಯಾಮೆರಾ ತಂದರೆ ಗಮನಕ್ಕೆ ತನ್ನಿ ಎಂದು ಮೊಬೈಲ್ ನಂಬರ್ ಕೊಟ್ಟು ಹೋಗುತ್ತಾಳೆ.

ಎಲ್ಲರೂ ಒಗ್ಗಟ್ಟಿನಿಂದ ಸಿನಿಮಾ ಮಾಡುವಾಗ, ಮರದ ಮೇಲಿನಿಂದ ಚಿತ್ರೀಕರಣ ಮಾಡಲು ಹೋದ ಗಾನಾ ಕ್ಯಾಮೆರಾವನ್ನು ಕೆಳಗೆ ಬೀಳಿಸಿ, ವೀರಬಾಬುನ ಆಸೆಗೆ ತಣ್ಣೀರೆರಚುತ್ತಾನೆ. ಕ್ಯಾಮೆರಾ ಸರಿಪಡಿಸಲು ಸ್ಟೂಡಿಯೋಗೆ ಹೋದಾಗ ಕ್ಯಾಮೆರಾ ಮಾಲೀಕಳ ಕೈಗೆ ಸಿಲುಕಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಈ ಸಂದರ್ಭದಲ್ಲಿ ಬರುವ ಮಳೆಯು ನೋಡುಗರನ್ನು ಆದ್ರ್ರಗೊಳಿಸುತ್ತದೆ. ಏಕೆಂದರೆ ಮಳೆಯಲ್ಲಿ ಶೂಟಿಂಗ್ ಮಾಡುವ ಆಸೆ ವೀರಬಾಬು, ಗಣಪತಿ ಹಾಗೂ ಇಡೀ ತಂಡಕ್ಕೆ ಇರುತ್ತದೆ. ಚಿತ್ರೀಕರಣ ವೇಳೆ ಬಾರದ ಮಳೆ, ಚಿತ್ರೀಕರಣ ಸ್ತಬ್ಧವಾದ ಮೇಲೆ ಬರುವುದು ಸಂಕಟವಾಗಿ ತೋರುತ್ತದೆ.

ಕ್ಯಾಮೆರಾ ಕೊಂಡೊಯ್ದ ಮಾಲೀಕಳು ಮೆಮೊರಿ ಕಾರ್ಡ್ ಪರಿಶೀಲಿಸಿದಾಗ ಅಲ್ಲಿ ಸೆರೆಯಾಗಿರುವ ದೃಶ್ಯಗಳು ಅವಳ ಕುತೂಹಲವನ್ನು ಕೆರಳಿಸಿ, ಜನರ ಮುಗ್ಧತೆಗೆ ಮನಸೋಳುತ್ತಾಳೆ. ವೀರಬಾಬುನ ಸಿನಿಮಾವನ್ನು ಎಡಿಟ್ ಮಾಡಿ, ‘ತಾತನ ಟೈಟಾನಿಕ್’ ಎಂದು ಹೆಸರಿಸಿ ಗ್ರಾಮದಲ್ಲಿ ಪ್ರದರ್ಶಿಸಿದಾಗ ವೀರಬಾಬು ಹಾಗೂ ಇಡೀ ಗ್ರಾಮದ ಖುಷಿಗೆ ಪಾರವೇ ಇಲ್ಲ. ಸಿನಿಮಾ ಮುಗಿಯುವುದು ತಾತನ ಒಂದೇ ಒಂದು ಡೈಲಾಗ್ ಮೂಲಕ. ಆ ಡೈಲಾಗ್ ಕೂಡ ನಮ್ಮನ್ನು ಹೊಟ್ಟೆ ಹುಣ್ಣಾಗಿಸುತ್ತದೆ.

*

ಕೋಲಾರ ಭಾಗದ ಕನ್ನಡ ಪದಗಳಿರುವ ತೆಲುಗು ಭಾಷೆಯನ್ನು ಸಿನಿಮಾದಲ್ಲಿ ಬಳಸಲಾಗಿದೆ. ಕನ್ನಡದ ಸೃಜನಶೀಲ ಲೇಖಕ ಮಂಸೋರೆ ಸಿನಿಮಾ ಬಂಡಿ ಕುರಿತು ಬರೆಯುತ್ತಾ, “ಈ ಸಿನೆಮಾದ ವಿಶೇಷತೆ ಇದರಲ್ಲಿ ಬಳಸಿರುವುದು ನಮ್ಮ ಜಿಲ್ಲೆಯ ಕನ್ತೆಲುಗು (ಕನ್ನಡದ ಪದಗಳಿರುವ ತೆಲುಗು). ಕೋಲಾರದ ವಿಶೇಷತೆಯೇ ಇದು. ಇಲ್ಲಿ ಕನ್ನಡವಿದೆ, ತೆಲುಗು ಇದೆ, ತಮಿಳು ಇದೆ, ಉರ್ದು ಇದೆ, ಜೊತೆಗೆ ತೆಲುಗನ್ನಡವಿದೆ, ಕನ್ತೆಲುಗು ಇದೆ, ತಮಿಳ್ಗನ್ನಡದ ಜೊತೆಗೆ ಕನ್ತಮಿಳು ಇದೆ, ಉರ್ದು ಮಿಶ್ರಿತ ಕನ್ನಡ, ತೆಲುಗೂ ಇದೆ. ಇದು ನೂರಾರು ವರ್ಷಗಳಿಂದ ಈ ಜಿಲ್ಲೆಯ ಜನರು ತಮ್ಮ ಬದುಕಿನೊಂದಿಗೆ ಬಳಸಿ ಉಳಿಸಿಕೊಂಡಿರುವ ಸೊಗಡಿನ ಹಿನ್ನೆಲೆಯ ಮೊದಲ ತೆಲುಗು ಸಿನೆಮಾ ಈ ‘ಸಿನೆಮಾ ಬಂಡಿ’. ಈ ಸಿನಿಮಾದಲ್ಲಿ ಕೋಲಾರ ಜಿಲ್ಲೆ ಎಂದು ಎಲ್ಲೂ ಉಲ್ಲೇಖಿಸದೇ ಇರುವುದರಿಂದ, ಇದು ನಮ್ಮ ಜಿಲ್ಲೆಯ ಜನರ ಸಿನೆಮಾ ಪ್ರೀತಿಯನ್ನು ಸಮಗ್ರವಾಗಿ ಸೆರೆಹಿಡಿದಿಲ್ಲವಾದರೂ, ಸಿನೆಮಾದೊಳಗಿನ ಮುಗ್ಧತೆ ನನಗೆ ಹೆಚ್ಚು ಇಷ್ಟವಾಯಿತು” ಎಂದಿದ್ದಾರೆ. ಇದೇ ಮಾತನ್ನು ಬಹುತೇಕರು ಆಡಿದ್ದಾರೆ.

ಸಿನಿಮಾ ಬಂಡಿಯ ನಿರ್ದೇಶಕ ಪ್ರವೀಣ್ ಕಂಡ್ರೇಗುಲ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಈವರೆಗೆ ಕೋಲಾರದ ಭಾಗದ ತೆಲುಗನ್ನು ಯಾವುದೇ ಸಿನಿಮಾದಲ್ಲಿ ಬಳಸದೆ ಇದ್ದದ್ದು ನನ್ನ ಗಮನಕ್ಕೆ ಬಂತು. ಅಲ್ಲದೆ ಆ ಭಾಷೆ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ ಆ ಭಾಷೆಯಲ್ಲಿಯೇ ಸಿನಿಮಾ ಮಾಡಿ, ಅಲ್ಲಿನ ಪರಿಸರದಲ್ಲೇ ಚಿತ್ರೀಕರಣ ಮಾಡಿದೆವು” ಎಂದಿದ್ದಾರೆ. ತೆಲುಗು ಚಿತ್ರರಂಗದ ದಿಗ್ಗಜರು ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. “ಕನ್ನಡದ ‘ತಿಥಿ’ ಸಿನಿಮಾದಿಂದ ಪ್ರೇರೇಪಿತನಾಗಿ ಈ ಸಿನಿಮಾ ಮಾಡಿದ್ದೇನೆ” ಎಂದಿದ್ದಾರೆ ನಿರ್ದೇಶಕರು. ತಿಥಿಯ ಕಥನ ಬೇರೆಯಾದರೂ ಪಾತ್ರಗಳ ಆಯ್ಕೆ ಮತ್ತು ಪೋಷಣೆಯಲ್ಲಿ ಸಿನಿಮಾ ಬಂಡಿ ಕೊಂಚವಾದರೂ ತಿಥಿಯ ಛಾಯೆಯನ್ನು ಹೊಂದಿದೆ ಎಂಬುದು ಸತ್ಯ.

ಈ ಸಿನಿಮಾದಲ್ಲಿ ಮುಖ್ಯಪಾತ್ರಗಳಲ್ಲಿ ಅಭಿನಯಿಸಿರುವ ವಿಕಾಸ್ ವಸಿಷ್ಠ (ವೀರಬಾಬು), ಉಮಾ ವೈ.ಜಿ. (ಮಂಗಾ) ಅಪ್ಪಟ ಕನ್ನಡ ಪ್ರತಿಭೆಗಳು. ರಂಗಭೂಮಿ, ಜಾನಪದ ಹಿನ್ನೆಲೆಯಿಂದ ಬಂದ ಉಮಾ ಅವರು ಇಡೀ ಪಾತ್ರವನ್ನು ಧ್ಯಾನಿಸಿದ್ದಾರೆ. “ಚಿಕ್ಕಂದಿನಿಂದಲೂ ತರಕಾರಿ ಮಾರುವ ಹೆಂಗಸರ ಚಾಕಚಕ್ಯತೆ, ವ್ಯಾವಹಾರಿಕ ಬುದ್ಧಿವಂತಿಕೆಯನ್ನು ನೋಡಿದ್ದರಿಂದ ಈ ಪಾತ್ರವನ್ನು ಸಲೀಸಾಗಿ ಮಾಡಲು ಸಾಧ್ಯವಾಯಿತು” ಎಂದಿದ್ದಾರೆ.

ಕಿರುತೆರೆ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟ ಬಂಗಾರಪೇಟೆಯ ವಿಕಾಸ್ ವಸಿಷ್ಠ ಅವರು ತಮ್ಮ ಪಾತ್ರದ ನಾಡಿ ಹಿಡಿದು ಅಭಿನಯಿಸಿ, ನಮ್ಮನ್ನೆಲ್ಲ, ನಗಿಸುತ್ತಾರೆ, ಅಳಿಸುತ್ತಾರೆ. ಇವರಷ್ಟೇ ಅಲ್ಲ ಎಲ್ಲ ನಟರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಹಾಡುಗಳೂ ಮುದನೀಡುತ್ತವೆ. ಹಿನ್ನೆಲೆ ಸಂಗೀತವಂತೂ ಅದ್ಭುತವಾಗಿದೆ. ಅಂದಹಾಗೆ ಈ ಸಿನಿಮಾದ ನಿರ್ಮಾಪಕರು ಫ್ಯಾಮಿಲಿ ಮ್ಯಾನ್ ಸೀರೀಸ್ ಖ್ಯಾತಿಯ ರಾಜ್ ಮತ್ತು ಡಿ.ಕೆ.

Leave a Reply

Your email address will not be published.