ಕಬಡ್ಡಿ ಎಂಬ ದೈಹಿಕ ಕಸರತ್ತಿನ ಆಟ

ಕಬಡ್ಡಿ ಪ್ರಸಕ್ತ ವಿಶ್ವಕಪ್ ಮಟ್ಟದಲ್ಲಿ ನಡೆಯುವಷ್ಟರಮಟ್ಟಿಗೆ ಖ್ಯಾತಿ ಪಡೆದಿದೆ. ಏಷ್ಯಾಕಪ್ ಜೊತೆಗೆ ವಿಶ್ವಕಪ್‍ನಲ್ಲಿಯೂ ಭಾರತವೇ ಫೇವರೇಟ್ ಎನ್ನುವುದು ನಮ್ಮವರ ಪ್ರಬಲತೆಗೆ ಹಿಡಿದ ಕೈಗನ್ನಡಿ.

ಹೌದು ಕಬಡ್ಡಿ ನಿಜಕ್ಕೂ ದೈಹಿಕ ಕಸರತ್ತಿನ ಗೇಮ್. ಯಾವ ವಯಸ್ಸಿನವರು ಬೇಕಿದ್ದರೂ ಆಡಬಹುದಾದ ಈ ಆಟ ಅಪ್ಪಟ ಗ್ರಾಮೀಣ ಕ್ರೀಡೆ ಎನ್ನುವುದು ನಿಸ್ಸಂಶಯ. ಈವತ್ತಿಗೆ ಈ ಕ್ರೀಡೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದರೆ ಅದು ಭಾರತೀಯರ ಹೆಮ್ಮೆ. ಇತ್ತೀಚೆಗೆ ಹೊನಲುಬೆಳಕಿನಲ್ಲಿ ಆಡುವ ಕಬಡ್ಡಿ ಮತ್ತಷ್ಟು ಪ್ರಖ್ಯಾತಿ ಪಡೆದಿದೆ. ಇದು ಎಷ್ಟು ರೋಚಕವೋ ಅಷ್ಟೇ ಶ್ರಮದಾಯಕವೂ ಹೌದು.

ರಾಜಾಶ್ರಯದ ಕ್ರೀಡೆ

ಕಬಡ್ಡಿ ಹುಟ್ಟಿನ ಬಗ್ಗೆ ಹಲವು ಉಲ್ಲೇಖಗಳಿವೆ. ಎಲ್ಲದರ ಸಂಶೋಧನೆಯ ಫಲಿತಾಂಶ ಮಾತ್ರ ಭಾರತದ ಪರವಾಗಿರುವುದು ವಿಶೇಷ. ಈ ಆಟ ಇಂದಿಗೂ ತನ್ನತನ ಮತ್ತು ಮನರಂಜನೆಯ ಗೇಮ್ ಆಗಿಯೇ ಉಳಿದುಕೊಂಡಿದೆ. ಇದರ ಕಲಿಕೆಯೂ ತ್ರಾಸದಾಯಕವೇ. ಶಾಲಾ ದಿನಗಳಲ್ಲಿಯೇ ನಾವೆಲ್ಲರೂ ಆಡಿರುವ ನೆನಪು ಇಂದಿಗೂ ಮಾಸಿಲ್ಲ. ಆದರೆ ಇದನ್ನೇ ವೃತ್ತಿಪರವಾಗಿ ಮಾಡಿಕೊಂಡವರು ಮಾತ್ರ ಉತ್ತಮ ಹೆಸರು ಮಾಡಿದ್ದಷ್ಟೇ ಆಲ್ಲ ದೇಶದ ಕೀರ್ತಿಯನ್ನೂ ಉತ್ತುಂಗಕ್ಕೇರಿಸಿದ್ದಾರೆ.

ಕಬಡ್ಡಿ ಆಟ ರಾಜರ ಆಳ್ವಿಕೆ ಕಾಲದಲ್ಲಿಯೂ ಚಾಲ್ತಿಯಲ್ಲಿತ್ತು. ಸಂಜೆ ವೇಳೆ ಆಸ್ಥಾನದ ಸೈನಿಕರಿಗೂ ಕಬಡ್ಡಿ ಆಟದಲ್ಲಿ ಪಾಲ್ಗೊಳ್ಳವುದು ಕಡ್ಡಾಯವಾಗಿತ್ತು. ಈ ಆಟ ಕೇವಲ ಮನರಂಜನೆ ಅಷ್ಟೇ ಅಲ್ಲದೆ ದೈಹಿಕವಾಗಿಯೂ ಬಲಿಷ್ಟರಾಗಲು ಸಹಕಾರಿಯಾಗಿದೆ. ಜೊತೆಗೆ ಸೈನಿಕರಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ತುಂಬಲು ಕಬಡ್ಡಿ ಹೆಚ್ಚು ಅನುಕೂಲವಾಗಿತ್ತು. ಇದನ್ನು ಮನಗಂಡು ಸೈನಿಕರ ನಡುವೆಯೇ ಪಂದ್ಯಾವಳಿ ಏರ್ಪಡಿಸಿ ಗೆದ್ದವರಿಗೆ ಬಹುಮಾನ ನೀಡುವ ಮೂಲಕ ಅವರನ್ನು ಹುರಿದುಂಬಿಸುವ ಕೆಲಸ ಇತಿಹಾಸದಲ್ಲಿ ಕಾಣಸಿಗುತ್ತದೆ.

ಮೂಲ ನಮ್ಮದೇ

ಭಾರತವೇ ಕಬಡ್ಡಿಯ ಮೂಲಕೇಂದ್ರ. ಮೊದಲಿಗೆ ರಾಜಾಸ್ಥಾನದ ಜೈಪುರ ಅರಸರು ಕಬಡ್ಡಿಯನ್ನು ಪರಿಚಯಿಸಿದರು ಎನ್ನುವುದು ಐತಿಹ್ಯವಾದರೂ ತಮಿಳುನಾಡು ಕೂಡಾ ಕಬಡ್ಡಿಯನ್ನು ನಾವೇ ಸಂಶೋಧಿಸಿದ್ದು ಎಂದು ಹೇಳಿಕೊಂಡಿದೆ. ಆದರೆ ವಾಸ್ತವವಾಗಿ ಇದು ನಮ್ಮ ಭರತಭೂಮಿಯ ಸಾಂಪ್ರದಾಯಿಕ ಕ್ರೀಡೆ ಎನ್ನುವುದೇ ನಮ್ಮ ಹೆಮ್ಮೆ. ಪ್ರಸ್ತುತ ಈ ಕ್ರೀಡೆ ವಿಶ್ವಮಟ್ಟದಲ್ಲಿಯೂ ಹೆಸರುವಾಸಿ. ದೇಶ ದೇಶಗಳ ನಡುವೆ ನಡೆಯುವ ಜಿದ್ದಾಜಿದ್ದಿನ ಕಬಡ್ಡಿಯನ್ನು ವೀಕ್ಷಿಸುವುದೇ ಸಂಭ್ರಮದ ವಿಷಯ. ಪುರುಷ-ಮಹಿಳೆ ಎರಡೂ ವಿಭಾಗಗಳಲ್ಲಿ ಈ ಕಬಡ್ಡಿ ಫೇವರೇಟ್ ಗೇಮ್.

ಕಬಡ್ಡಿ ಪ್ರಸಕ್ತ ವಿಶ್ವಕಪ್ ಮಟ್ಟದಲ್ಲಿ ನಡೆಯುವಷ್ಟರಮಟ್ಟಿಗೆ ಖ್ಯಾತಿ ಪಡೆದಿದೆ. ಏಷ್ಯಾಕಪ್ ಜೊತೆಗೆ ವಿಶ್ವಕಪ್‍ನಲ್ಲಿಯೂ ಭಾರತವೇ  ಫೇವರೇಟ್ ಎನ್ನುವುದು ನಮ್ಮವರ ಪ್ರಬಲತೆಗೆ ಹಿಡಿದ ಕೈಗನ್ನಡಿ.

ಔಷಧ ಗುಣದ ಆಟ

ಶಾಲಾ-ಕಾಲೇಜುಗಳಲ್ಲಿ ಇಂದಿಗೂ ಕಬಡ್ಡಿ ಎಂದರೆ ಅದೊಂದು ಸಮರಕಲೆ. ದೈಹಿಕವಾಗಿ ಸದೃಢತೆ ಸಾಧಿಸುವುದು ಮತ್ತು ಎದುರಾಳಿಯ ವಿರುದ್ಧ ದಾಳಿ ನಡೆಸುವುದು ಮತ್ತು ಆತ್ಮರಕ್ಷಣೆಯ ಕಲೆಯೂ ಇದರಲ್ಲಿದೆ. ಜೊತೆಗೆ ಸ್ವರದ ಸ್ವಚ್ಚತೆಗೂ ಈ ಕಬಡ್ಡಿಯ ಧ್ವನಿ ಸಹಕಾರಿ. ಎದುರಾಳಿ ತಂಡದ ಮೇಲೆ ದಾಳಿ ನಡೆಸುವಾಗ ಉಚ್ಚರಿಸುವ ಕಬಡ್ಡಿ ಎಂಬ ಪದ ಗಂಟಲಿಗೆ ಔಷಧವಿದ್ದಂತೆ. ಅದರಲ್ಲಿಯೂ ಒಮ್ಮೆಯೂ ಸ್ವರ ಬಿಡದೆ ನಿರಂತರವಾಗಿ ಉಚ್ಚರಿಸುವುದು ಆತನ ದೈಹಿಕ ಕ್ಷಮತೆಗೆ ಸಾಕ್ಷಿ. ಜೊತೆಗೆ ಕೆಲವು ಆಟಗಾರರು ನಿರ್ದಿಷ್ಟ ಸ್ಥಳದಲ್ಲಿ ಪರಿಣತಿ ಪಡೆದು ಆಡುವುದಿದೆ. ಇದರಲ್ಲಿ ದಾಳಿಕಾರರೇ ಹೆಚ್ಚು ಪ್ರಬಲ. ಒಮ್ಮೆ  ಎದುರಾಳಿ ಅಂಗಳಕ್ಕೆ ಹೊಕ್ಕರೆ ಎಷ್ಟು ಮಂದಿಯನ್ನು ಔಟ್ ಮಾಡುತ್ತಾನೆ ಎನ್ನುವುದರ ಮೇಲೆ ಆತನ ಮೌಲ್ಯ ನಿರ್ಧಾರವಾಗುತ್ತದೆ. ಜೊತೆಗೆ ಆತ ಎದುರಾಳಿಗಳ ಹಿಡಿತದಿಂದ ತಪ್ಪಿಸಿಕೊಂಡು ಯಶಸ್ವಿಯಾಗಿ ಲೈನ್ ಟಚ್ ಮಾಡಿದರೆ ಅದು ಆತನ ಸಕ್ಸೆಸ್.

ಲೀಗ್ ಟೂರ್ನಿಗಳ ಲಗ್ಗೆ

ದೇಶೀಯ ಆಟ ಕಬಡ್ಡಿಯನ್ನು ಉತ್ತೇಜಿಸಲೆಂದೇ ಹುಟ್ಟಿಕೊಂಡಿದ್ದು ಪ್ರೋ ಲೀಗ್ ಕಬಡ್ಡಿ. ಆರಂಭದಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ಕ್ರಮೇಣ ನೋಡುಗರನ್ನಷ್ಟೇ ಅಲ್ಲ ಕಮರ್ಷಿಯಲ್ ಆಗಿಯೂ ದೊಡ್ಡಮಟ್ಟಕ್ಕೆ ಬೆಳೆದಿದೆ. ಇದೀಗ ಪ್ರೋ ಲೀಗ್‍ನಲ್ಲಿ ಆಡುವುದೇ ಆಟಗಾರರಿಗೆ ಹೆಮ್ಮೆಯ ವಿಷಯವಾಗಿದೆ. ಮತ್ತೊಂದೆಡೆ ಇದು ಪ್ರತಿಭೆ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿದ್ದು ದೇಶವಿದೇಶ ಮಟ್ಟದಲ್ಲಿ ಹೆಸರು ಮಾಡುವುದಕ್ಕೂ ಸಹಕಾರಿಯಾಗಿದೆ.

ಆರಂಭದಲ್ಲಿ ಒಂದು ಲಕ್ಷಕ್ಕೆ ಒಬ್ಬ ಆಟಗಾರ ಪ್ರಾಂಚೈಸಿಗಳಿಗೆ ಬಿಕರಿಯಾದರೆ ಅದೇ ದೊಡ್ಡ ಸಂಗತಿಯಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಗರಿಷ್ಠ ಐದಾರು ಲಕ್ಷ ತಲುಪಿದರೂ ಅತಿಶಯೋಕ್ತಿ ಎನಿಸದು. ಮಹಿಳಾ ವಿಭಾಗದಲ್ಲೂ ಲೀಗ್ ಮತ್ತು ಅಂತಾರಾಷ್ಟ್ರೀಯ ಟೂರ್ನಿಗಳು ನಡೆಯುತ್ತಿದೆ. ನಮ್ಮವರೇ ಅಲ್ಲಿಯೂ ಹೆಸರು ಮಾಡಿದ್ದಾರೆ. ಹಾಗಾಗಿ ಕಬಡ್ಡಿ ಎನ್ನುವುದು ಭಾರತದ್ದಾದರೂ ಜಗತ್ತಿನ ಹಲವು ದೇಶಗಳು ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿರುವುದು ಕ್ರೀಡಾ ಬೆಳವಣಿಗೆ ದೃಷ್ಟಿಯಿಂದ ಮಾತ್ರ ಮೆಚ್ಚುವಂತಾದ್ದು.

ಶಾಲೆಗಳೇ ತವರು

ಇನ್ನು ಎದುರಾಳಿ ಆಟಗಾರ ತಮ್ಮ ಅಂಗಳಕ್ಕೆ ಬಂದಾಗ ಎಷ್ಟು ಚಾಕಚಕ್ಯತೆ ತೋರಿ ಆತನನ್ನು ಹಿಡಿದು ಪಳಗಿಸುವುದು ಕೂಡಾ ಕಬ್ಬಡ್ಡಿಯ ಅತ್ಯುತ್ತಮ ಕಲೆ. ಇದು ನಿಜಕ್ಕೂ ಶ್ರಮದಾಯಕ ಆಟ. ನಡೆಯುವ ಬೆಸ್ಟ್ ಆಫ್ ತ್ರಿ ಅಥವಾ ಬೆಸ್ಟ್ ಆಫ್ ಫೈ ಮ್ಯಾಚ್‍ಗಳಲ್ಲಿ ಆಟಗಾರರು ಬದಲಾದರೂ ಶ್ರಮ ಮಾತ್ರ ಅಧಿಕ. ಗ್ರಾಮಮಟ್ಟದಲ್ಲಿ ಈ ಆಟ ಇಂದಿಗೂ ಫೇಮಸ್. ಶಾಲೆಗಳಲ್ಲಿ ಇದು ವಲಯ, ಜಿಲ್ಲಾ, ಅಂತರ್ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಡೆಯುತ್ತಿರುವುದು ಉದಯೋನ್ಮುಖ ಆಟಗಾರರ ಹುಟ್ಟುವಿಕೆಗೆ ಸಾಕ್ಷಿಯಾಗಿದೆ. ದೇಶದ ಮಟ್ಟದಲ್ಲಿ ಇಂದಿಗೂ ಕ್ರಿಕೆಟ್‍ಗೆ ಇದ್ದಂತೆ ಭಾರತ-ಪಾಕಿಸ್ತಾನ ಕಬಡ್ಡಿ ಪಂದ್ಯವೆಂದರೆ ಎಲ್ಲಿಲ್ಲದ ಗಮ್ಮತ್ತು. ಈ ಅಪ್ಪಟ ಗ್ರಾಮ್ಯಕ್ರೀಡೆ ಜಾಗತಿಕ ಕ್ರೀಡೆಯಾಗಿ ರೂಪುಗೊಂಡಿರುವುದು ಮಾತ್ರ ನಿಜಕ್ಕೂ ಉತ್ತಮ ಭವಿಷ್ಯದ ಸಂಕೇತ. 

Leave a Reply

Your email address will not be published.