ಕಮಲೇಂದ್ರನ ಹಲವು ಅವತಾರ!

ಐದನೇ ಕಮಲೇಂದ್ರ ಕೆಲವರನ್ನು ಗುರುತು ಹಿಡಿದ: ಕೀರ್ತಿಶೇಷ ಸರ್ದಾರ್ ಸುಂದ್ರಬಾಬು ನಾಯ್ಡು, ಸಮರಸಿಂಹ ಗೌಡೇಂದ್ರ, ವೀರಮಾತಾ ಬ್ಯಾನರ್ಜಿ, ಮಾಯಾ ಯುದ್ಧವತೀ…. ಇವರೊಡನೆ ಬೆರಳು ಚೀಪುತ್ತಾ ನಿಂತಿದ್ದ ರಾವುಲೇಶ್ವರ!

ಐತಿಹಾಸಿಕ ಕುರುಕ್ಷೇತ್ರ ಕದನ ನಡೆದು ಅಕ್ಷೋಹಿಣಿ ಸೈನ್ಯಗಳು ಧ್ವಂಸವಾದ ಮೂರು ದಿನಗಳ ಬಳಿಕ, ದೆಹಲಿಯ ಶೆಖೆಯಲ್ಲಿ ಇಳಿಯುತ್ತಿದ್ದ ಬೆವರನ್ನೂ ಲೆಕ್ಕಿಸದೆ ರಾಜಭವನವೊಂದರ ಮುಂದೆ ಮೈಲಿಯುದ್ದದ ಸಾಲೊಂದು ನಿಂತಿತ್ತು.

ಆಂಧ್ರಾಧೀಶ ಸರ್ದಾರ್ ಸುಂದ್ರಬಾಬುನಾಯ್ಡು, ವಂಗದ ವೀರಮಾತಾ ಬ್ಯಾನರ್ಜಿ, ಉತ್ತರದೇಶದ ಮುಲಾಮುಸಿಂಹ ಮತ್ತು ಮಾಯಾಯುದ್ಧವತಿ, ಕಾಶ್ಮೀರದೇಶದ ಅಬುದುಲ್ಲಾ ಮುಂತಾದವರೊಡನೆ ಕರುನಾಡಿನ ಸಮರಸಿಂಹ ಗೌಡೇಂದ್ರರು ಸಪರಿವಾರ ಆಗಮಿಸಿದ್ದರು. ಭವನದ ಹೊರಬಾಗದಲ್ಲೇ ಪೀಠ ಅಲಂಕರಿಸಿದ್ದ ಕೀರ್ತಿಶೇಷರುಗಳಾದ ನೆಹರೂ, ಇಂದಿರಾ, ರಾಜೀವ್ ಮುಂತಾದವರ ಪಾದುಕೆಗಳ ಧೂಳನ್ನು ಸ್ವೀಕರಿಸಿ ಒಳಸಾಗಿದರು.

ರಾಜಮಾತೆ ಸಾನಿಯಾದೇವಿ ಆಗಮಿಸಿದೊಡನೇ ವೀರಾಗ್ರಣಿಗಳು ತಮ್ಮ ಆಯುಧಗಳನ್ನು ನೆಲಕ್ಕೆತಾಗಿಸಿ ಜಯಘೋಷ ಮಾಡಿ ಕುಳಿತುಕೊಂಡರು. ಹಿರಿಯರನ್ನು ಉಪೇಕ್ಷೆಯಿಂದಲೂ, ಕಿರಿಯರನ್ನು ಉದಾಸೀನದಿಂದಲೂ, ಸಮಾನ ವಯಸ್ಕರನ್ನು ಅಸಡ್ಡೆಯಿಂದಲೂ ಉಪಚರಿಸಿದ ರಾಜಮಾತೆ ಗೌಡೇಂದ್ರರನ್ನು ನೋಡಿದೊಡನೇ ಕುಲೋದ್ದಾರಕ ರಾಹುಲೇಶ್ವರನನ್ನು ಕರೆದಳು.ರಾಹುಲೇಶ್ವರ ಬಾಲಲೀಲೆಗಳೊಡನೆ ಬಂದು ನಿಂತನು.

ನಿಮ್ಮ ರಾಜಕೀಯ ಕುತಂತ್ರಜ್ಞಾನದಲ್ಲಿ ಸಾಸುವೆಕಾಳು ಮಗನಿಗೆ ಬರುವಂತೆ ಆಶೀರ್ವದಿಸಿ ಎಂದಳು.

ರಾಹುಲನು ಕೂಡಲೇ ತನ್ನ ಹರಿದ ಜುಬ್ಬಾ ಬಿಚ್ಚಿ ಸೊಂಟಕ್ಕೆ ಕಟ್ಟಿಕೊಂಡು ಕೈಗಳನ್ನು ಕಿವಿಗೆ ಮುಡಿಸಿ ನಮಸ್ಕರಿಸಿದನು. ರಾಜಮಾತೆ ಹುಸಿಮುನಿಸಿನಿಂದ, “ಚುನಾವಣೆ ಮುಗಿಯಿತು ಮಗೂ ಮೊದಲು ಆ ಜನಿವಾರ ಕಿತ್ತೆಸೆದು ಬೇರೆ ಜುಬ್ಬಾತೊಟ್ಟು ಬಾ” ಎಂದು ಗದರಿದರು.

ಮಂತ್ರಾಲೋಚನೆ ಪ್ರಾರಂಭವಾಯ್ತು. ರಾಜರು ತಮ್ಮ ಪ್ರತಾಪವನ್ನು ಕೊಚ್ಚಿಕೊಳ್ಳಲಾರಂಭಿಸಿದರು.

ಸರ್ದಾರ್ ಸುಂದ್ರಬಾಬುನಾಯ್ಡು ತನ್ನ ಬಂದೂಕನ್ನು ಮೇಲಕ್ಕೆತ್ತಿ,‘ನೇನು ಪ್ರಧಾನಿ ಮಂತ್ರ ಆವಾಲಿ’ ಹೇಳಿ ಕುಳಿತುಕೊಂಡನು. ಮುಲಾಮಸಿಂಹ ತಮ್ಮ ಮಗನೊಡನೆ ಎದ್ದು ನಿಂತು, ‘ಮೇರೆ ಕೋ ಪೀಯೆಂ ಹೋನಾ ಚಾಹಿಯೇ’ ಎಂದರು. ಮಾಯಾವತಿ ಎದ್ದು ನಿಂತು,‘ಮೈ ಪರದಾನ್ಮಂತರೀ ಬನ್ನೇಕೋ ಕೋಯಿ ನೈರೋಕಸಕ್ತಾ’ ಎಂದಳು.ವೀರಮಾತಾ ಬ್ಯಾನರ್ಜಿ,‘ಮೋಯ್ಬೀ ಪೋರ್ದಾನ್ ಮೊಂತ್ರಿ ಬೊನ್ನಾ ಹೇ’ ಎಂದು ಅಬ್ಬರಿಸಿ ಕುಳಿತುಕೊಂಡಳು.

ಗಂಭೀರ ಧ್ವನಿಯಿಂದ ರಾಜಮಾತೆ ಮಾತನಾಡಲಾರಂಭಿಸಿ,‘ಸಾಮಂತರೇ, ಕುರುಕ್ಷೇತ್ರ ಕದನದಲ್ಲಿ ಹೋರಾಡಿ ವಿಶ್ರಾಂತಿಯಿಲ್ಲದೇ ಬಳಲಿದ್ದೀರಿ. ಫಲಿತಾಂಶದವರೆಗೂ ಸಭೆಯನ್ನು ಮುಂದೂಡೋಣ’ ಎಂದರು.

ಸಭೆಯು ಅಸಮ್ಮತಿಯನ್ನು ಸೂಚಿಸಿತು.‘ಪ್ರಧಾನಿ ಯಾರೆಂದು ಈಗಲೇ ತೀರ್ಮಾನವಾಗಲಿ’ ಎಂಬ ನುಡಿಯೊಂದು ಹೊರಬಿತ್ತು. ಧ್ವನಿ ಕಡೆ ಎಲ್ಲರೂ ತಿರುಗಿದಾಗ, ಮುಸುಕು ಹಾಕಿದ ವ್ಯಕ್ತಿಯೊಬ್ಬ ಕೆಮ್ಮುತ್ತಾ ಪೊರಕೆ ಹಿಡಿದು ನಿಂತಿದ್ದನು.

ಆಲೋಚಿಸಿದ ರಾಜಮಾತೆ ಸೇವಕರಾದ ವಿಜಯಸಿಂಹ ಮತ್ತು ಮೋಹನಸಿಂಹರನ್ನು ಬಳಿ ಕರೆದಳು. ಅವರಿಬ್ಬರೂ ಕೀರ್ತಿಪ್ರಚಂಡರಾದ ರಾಹುಲೇಶ್ವರ ಪಟ್ಟಾಭಿಷೇಕಕ್ಕೆ ತಾವೆಲ್ಲರೂ ಬೆಂಬಲಿಸಬೇಕು ಎಂಬ ಮಾತುಮುಗಿಸುವಷ್ಟರಲ್ಲಿ ಖುರಪುಟಗಳ ಸದ್ದಾಯ್ತು. ಹಲವಾರು ಜನ ಒಳಬಂದರು, ಬೇಹುಗಾರರು ಮುನ್ಸೂಚನೆಯನ್ನು ಹೊತ್ತುತಂದಿದ್ದರು. ಸನ್ನಿವೇಶ ನಿಮಿಷಾರ್ಧದಲ್ಲಿ ಬಿಸಿಯೇರಿತು. ಪರಿಸ್ಥಿತಿ ತಾರಕಕ್ಕೇರಿದಾಗ ಬ್ಯಾನರ್ಜಿಯ ಚಪ್ಪಲಿ ಮುಲಾಮಸಿಂಹ ಯಾದವರ ಜೇಬಿನಲ್ಲಿತ್ತು. ಮಾಯಾವತಿಯ ಮೇಲ್ವಸ್ತ್ರ ಬಕುಲೇಶನ ಕುತ್ತಿಗೆ ಬಿಗಿಯಲ್ಪಟ್ಟಿತ್ತು. ಪೊರಕೆಯ ಹಿಡಿಯ ಅಚ್ಚು ಎಲ್ಲರ ಆಸನಗಳ ಮೇಲೆ! ಅನಿರೀಕ್ಷಿತ ವರ್ತನೆಯಿಂದ ಕಂಗೆಟ್ಟಿದ್ದ ರಾಜಮಾತೆ ತಲೆಯೆತ್ತಿ ನೋಡಿದರೆ ಗೌಡೇಂದ್ರರು ಸಪರಿವಾರ ಸಮೇತರಾಗಿ ಕೈಮುಗಿದು ನಿಂತಿದ್ದಾರೆ.

ಗೌಡೇಂದ್ರರು ಇದೇ ತಮ್ಮ ಕಡೆಯ ಯುದ್ಧ ಎಂದು ಪ್ರಮಾಣ ಮಾಡಿ, ಹಿಂದಿನಿಂದಲೂ ತಮ್ಮ ಕುಟುಂಬವು ನಿಷ್ಠ ಎಂದು ನೆನಪಿಸಿದರು.ಮೂರು ಸಂಸ್ಥಾನಗಳ ಬಡ ಮಾಂಡಲೀಕನಾದ ತನಗೆ ಚಕ್ರವರ್ತಿಯಾಗುವ ಆಸೆಯಿಲ್ಲ ಎಂದು ಹೇಳಿ ರಾಜಮಾತೆಯನ್ನು ಮೂಕಮುಗ್ಧರನ್ನಾಗಿಸಿದರು.

ಮತ್ತೇನು ಬೇಕು ಹೇಳಿ? ಎಂದು ಒತ್ತಾಯಿಸಿದಾಗ ತಮ್ಮ ದಯದಿಂದ ಕುಟುಂಬದವರೆಲ್ಲಾ ಕ್ಷೇಮವಾಗಿದ್ದಾರೆ. ನನಗೆ ಹಿರಿಮಗನದೇ ಚಿಂತೆ. ನಿಮ್ಮ ಮಗನೆಂದೇ ಭಾವಿಸಿ….

‘ಭಾವಿಸಿ?’ರಾಜಮಾತೆ ಅನುಮಾನದಿಂದ ಪ್ರಶ್ನಿಸಿದಳು.
‘ಕರುನಾಡ ಸೇವೆಗಾಗಿ ರೇವೇಶ್ವರನನ್ನುಉಪಪ್ರ..ಧಾನಿ…’ಎಂದು ಒದರುತ್ತಿದ್ದಂತೆಯೇ….

ಕೆಲವೇ ಕ್ಷಣಗಳಲ್ಲಿ ಗೌಡೇಂದ್ರರು ಗುದ್ದಾಡುತ್ತಿದ್ದ ಗುಂಪಿನ ಸಹಿತ ನಿರ್ದಾಕ್ಷಿಣ್ಯವಾಗಿ ಭವನದ ದ್ವಾರದ ಮೂಲಕ ಚೆಂಡಿನಂತೆ ಹೊರಗೆ ಎಸೆಯಲ್ಪಟ್ಟರು. ಕ್ರೋಧಾಪಮಾನಿತರಾದ ಗೌಡೇಂದ್ರರು ನಾಲ್ಕು ನಿಂಬೆಹಣ್ಣುಗಳನ್ನು ಕುಂಕುಮದೊಡನೆ ಅಭಿಮಂತ್ರಿಸಿ ಭವನದೆಡೆಗೆ ಎಸೆದು ಧೂಮಕೇತುವಿನಂತೆ ಕೇರಳಾಭಿಮುಖವಾಗಿ ಸಾಗಿದರು.

ವೈಶಾಖ ಬಹುಳತದಿಗೆ ಮಧ್ಯರಾತ್ರಿ. ಸ್ಮಶಾನದಲ್ಲಿ ಬೆಂಕಿ ಉರಿಯುತ್ತಿತ್ತು.ಯುದ್ಧರಂಗದಲ್ಲಿ ಜಯಮಾಲೆ ಒಲಿದವರು ಮತ್ತು ಸೋತವರ ಹಣೆಬರಹ ನಿರ್ಧಾರವಾಗಲು ಇನ್ನು ಕೇವಲ ಮೂರು ದಿನ ಉಳಿದಿತ್ತು.

ಸಮರಸಿಂಹ ಗೌಡೇಂದ್ರ, ಬಿಸ್ಕೆಟ್‍ ರೇವೆಶ್ವರ, ಅಶ್ರುವಿದ್ಯಾನಿಪುಣಕಂಠೀರವ, ಚಿರಂಜೀವಿಗಳಾದ ಉಜ್ವಲೇಶ್ವರ, ಎಲ್ಲಿದ್ಯಪ್ಪಾ ನಿಖಿಲೇಶ್ವರಕುಮಾರರು ನಿಂತಿದ್ದರು. ಬ್ರಾಹ್ಮೀಮುಹೂರ್ತದಲ್ಲಿ ವಿಧಿ,ಬಲಿ, ತರ್ಪಣಗಳು ನಡೆದವು. ಅಲ್ಲಿ ಚೆಲ್ಲಾಡಿದ್ದ ರುಧಿರವೇ ಸುರಿಯಿತೋ ಎಂಬಂತೆ ಪೂರ್ವದಲ್ಲಿ ವರ್ಣಶೇಣಿ ಗೋಚರವಾಯ್ತು.

ಐವರೂ ತಂತ್ರಾಲೋಚನೆಯಲ್ಲಿ ತಲ್ಲೀನರಾದರು. ಕುಮಾರರನ್ನು ತಕ್ಷಣವೇ ಪೂಜಾರ್ಥವಾಗಿ ಶೃಂಗೇರಿ, ಕೊಲ್ಲೂರಿಗೆ ಕಳುಹಿಸಲಾಯ್ತು. ರೇವೇಶ್ವರನನ್ನು ಅಹಿಂದವರ್ಮನ ಮೂಲಕ ರಾವುಲೇಶ್ವರನನ್ನು ಓಲೈಸುವಂತೆ ಆಜ್ಞಾಪಿಸಿದೊಡನೆ ವಾಯುವೇಗದಿಂದ ಹೊರಬಿದ್ದ. ಸಮರಸಿಂಹರು ‘ಕುಮಾರ, ನಾನು ನೀಡುವ ನಿರೂಪವನ್ನು ಖುದ್ದಾಗಿ ಚಕ್ರವರ್ತಿ ಕಮಲೇಂದ್ರ, ಅಮಾತ್ಯ ಅಮಿತೇಂದ್ರ ಶಾರ್ದೂಲರರಿಗೆ ತಲ್ಪಿಸಿ ಕೂಡಲೇ ಮಾರುತ್ತರವನ್ನು ತರುವನಂಥವನಾಗು’ಎಂದು ಪತ್ರವನ್ನು ಬರೆದರು.

ಮಗನೇ ಮೈತ್ರಿದೊರೆಯಾಗಿರಲು,
ಮೋಸ ಮಾಡಲೇ ಕಾಂಗಿಗಳು,
ಕೈಪಿಡಿಯಲು ಅತಿ ಗೌರವದಿ ಕಮಲೇಂದ್ರ
ಸಿದ್ದ ಬೆನ್ನಿಗೇ ಚೂರಿ ಹಾಕಲು ಕಾಯುತಿರ್ಪ
ಶತ್ರುಗಳಂ ಸಾಧಿಸಿ
ಉಪಾಯವಾಗಿ ಮೋಸಗೈದು
ನಿಮಗೆ ಬಂದೊದಗುವೆವು.

ಕಂಠೀರವನು ಸಂಶಯದಿಂದ… ಅಪ್ಪಾಜಿ, ಗೂಢಚಾರರ ಕಣ್ತಪ್ಪಿಸಿ ಇದನ್ನು ಒಯ್ಯುವುದು ಹೇಗೆಂದು ಕೇಳಲು ಸಮರಸಿಂಹರು ನಗುತ್ತಾ, ‘ಮಗನೇ, ಇದನ್ನು ಸಾನಿಯಾದೇವಿಯವರ ಮುಂದೆ ಓದಿದರೂ ತೊಂದರೆಯಿಲ್ಲ ಎಂದು ಅದೇ ಪತ್ರವನ್ನು ಮತ್ತೊಮ್ಮೆ ತೋರಿಸಿದರು.

ಮಗನೇ ಮೈತ್ರಿ ದೊರೆಯಾಗಿರಲು ಮೋಸ ಮಾಡಲೇ?
ಕಾಂಗಿಗಳು ಕೈಪಿಡಿಯಲು ಅತಿ ಗೌರವದಿ.
ಕಮಲೇಂದ್ರ ಸಿದ್ದ ಬೆನ್ನಿಗೇ ಚೂರಿ ಹಾಕಲು
ಕಾಯುತಿರ್ಪ ಶತ್ರುಗಳಂ ಸಾಧಿಸಿ
ಉಪಾಯವಾಗಿ ಮೋಸಗೈದು
ನಿಮಗೆ ಬಂದೊದಗುವೆವು
ಗೌರವಾಶ್ಚರ್ಯಗಳಿಂದ ಕಂಠೀರವನು ಬೀಳ್ಕೊಂಡನು.

ಕತ್ತಲೆ ತುಂಬಿದ ಆಕಾಶ. ನಿರ್ಮಾನುಷ! ಕತ್ತು ಹಿಸುಕುವಂತೆ ಆಗಾಗ್ಗೆ ಸುಯ್ಗಾಳಿ ಘೀಳಿಡುತ್ತಿದೆ.ವಿಪರೀತ ದಾಹ! ಆದರೆ ಕುಡಿಯಲು ನೀರಿಲ್ಲ.ಸಹಿಸಲಾರದಷ್ಟು ಹಸಿವು, ಎಲ್ಲೂ ಹಸಿರಿನ ಸುಳಿವಿಲ್ಲ. ಬಳಲಿ ಸಾಯಬೇಕೆನ್ನುವಷ್ಟರಲ್ಲಿ ದೇವತೆಗಳು ಪ್ರತ್ಯಕ್ಷರಾಗುತ್ತಾರೆ. ನಸುನಗುತ್ತಾ ಅಮೃತ ಕಲಶವನ್ನು ಕೈಗೆ ಬಗ್ಗಿಸುತ್ತಾರೆ.

ಕುಡಿಯಲು ನೋಡಿದರೆ ಅದು ಅಮೃತವಲ್ಲ! ಬಿಸಿಯಾದ ಕಂಬನಿ! ರೈತನರಕ್ತ! ಬಡವನ ಬೆವರು!

ತಲೆಯೆತ್ತಿ ನೋಡಿದರೆ ಬುದ್ಧ,ಗಾಂಧಿ, ಬಸವಣ್ಣ,ಅಂಬೇಡ್ಕರ್ ದೇವತೆಗಳಂತೆ ನಗುತ್ತಿದ್ದಾರೆ. ಆ ನಗು ಅಗ್ನಿರೂಪ ತಾಳಿ ದಹಿಸಲು ಬರುತ್ತಿದೆ.ಅಹಿಂದವರ್ಮ ಕಿಟಾರೆಂದು ಕಿರುಚುತ್ತಾ ಎಚ್ಚೆತ್ತ. ತಕ್ಷಣ ಸೇವಕರು ಬಂದು ಸಮಾಧಾನಪಡಿಸಿ ಅರುಹಿದರು.

‘ಪ್ರಭೂ, ರೇವೇಶ್ವರರು ಬಂದು ಕಾಯುತ್ತಿದ್ದಾರೆ’
ನಿರುತ್ಸಾಹದಿಂದ ಅಹಿಂದವರ್ಮ ನಿದ್ದೆಗಣ್ಣಿನಲ್ಲೇ ಹೋಗಿ ಕುಳಿತು, ‘ಏನು ಜಂಬರರೇವೇಶಾ?’ ಆಕಳಿಸುತ್ತಾ ಕೇಳಿದ.

ಅಪ್ಪಾಜಿಯವರ ಚರಣದಾಜ್ಞೆಯಂತೆ ಬಂದೆ …ನಿನ್ನ ಕಾಲಿಗೆ ಬಿದ್ದೆವು. ಅಪ್ಪಾಜಿಯವರು ಒಮ್ಮೆ …ಒಂದೇ ಒಂದು ಬಾರಿ ಪ್ರಧಾನಿಯಾಗಲು ಒಡಂಬಡಿಸು. ಕರುನಾಡ ಸೇವೆಗೆ ಜೀವನ ಮುಡಿಪಾಗಲಿ.

‘ನಿಮ್ಮಪ್ಪನಾಣೆ ಆಗಲ್ಲ!’
‘ಏನಿದು ಮಾತು ಕಲಿವೀರಾ? ಹೋಗಲಿ ಬಿಡು…ಕಂಠೀರವನ ಆಡಳಿತ ನಿಷ್ಕಂಟಕವಾಗುವಂತೆಯಾದರೂ ಅನುಗ್ರಹಿಸು.’

‘ಅವನಪ್ಪನಾಣೆ ಮತ್ತವನು ರಾಜನಾಗೋಲ್ಲ.’
ಸೌಜನ್ಯ ತೋರುತ್ತಿದ್ದ ರೇವೇಶ್ವರನಿಗೆ ಬ್ರಹ್ಮೇತಿ ಸಿಟ್ಟುಬಂತು, `ನಮ್ಮನ್ನು ತುಳಿದು ನೀನೇ ಪಟ್ಟಕ್ಕೇರುವ ಆಸೆಯೇ?’

‘ನಮ್ಮಪ್ಪನಾಣೆ ನಾನೂ ಆಗೋಲ್ಲ!’ಎನ್ನುತ್ತಾ ಗಹಗಹಿಸಿದ ಅಹಿಂದವರ್ಮ.

ರೇವೇಶ್ವರನಿಗೆ ಅನುಮಾನವಾಯ್ತು…ಮೆಲ್ಲನೆ‘ ಅಹಿಂದೂ…’ಎಂದುಕರೆದ.

ಅಹಿಂದವರ್ಮನು ವಿಕಟವಾಗಿ ಕಣ್ಣರಳಿಸುತ್ತಾ… ಬಟ್ಟೆಗಳನ್ನು ಹರಿದುಕೊಳ್ಳುತ್ತಾ, ಕಟವಾಯಿಂದಜೊಲ್ಲು ಸುರಿಸುತ್ತಾ ರೇವೇಶ್ವರನ ಬಳಿಸಾರಿ ಪರಚಲಾರಂಭಿಸಿದ.ರೇವೇಶ್ವರನು ಈ ವಿಪರೀತಾವತಾರ ಕಂಡು ಓಡಿಹೋದ.

ಸುಂದ್ರಬಾಬುನಾಯ್ಡು ತಂದಿದ್ದ ಆಹ್ವಾನವನ್ನು ತಿರಸ್ಕರಿಸಿ ಹೊರಗಟ್ಟಿದ್ದ ಗೌಡೇಂದ್ರರಿಗೆ ಜ್ಯೇಷ್ಠಪುತ್ರನಿಂದ ಅಹಿಂದವರ್ಮನಿಗೆ ಮತಿಭ್ರಾಂತಿಯಾದ ಸುದ್ದಿ ಕೇಳಿ ನಿರಾಶೆಯಾಯ್ತು.

ಅಷ್ಟರಲ್ಲೇ ಕಂಠೀರವನು ಕಮಲೇಂದ್ರ ಚಕ್ರವರ್ತಿಯ ಮಾರುತ್ತರತಂದ. ಗೌಡೇಂದ್ರರಲ್ಲಿ ಜೀವನೋತ್ಸಾಹ ಗರಿಗೆದರಿತು. ಎಲ್ಲರ ರೂಬು ನಿರೂಪವನ್ನೊಡೆದು ಓದಲು ಹೇಳಿದರು.

‘ಸೂತ್ರಧಾರಿ, ಕರುನಾಡಿನ ಆ
ರ್ಯಕುಲೋದ್ದಾರಕರಾದ
ನಿಮಗಲ್ಲದೇ, ನಾವು ಇನ್ಯಾರಿ
ಗೇ ಮಣಿಯಲು ಸಾಧ್ಯ?
ಟಾಕುಠೀಕು ವಿಷಯ ನಾವು ಚ
ರ್ಚಾ ಮಾಡಲು ಸದಾ ಸಿದ್ಧ.

ಗೌಡೇಂದ್ರರು ಹರ್ಷದಿಂದ ಉಬ್ಬುತ್ತಿದ್ದಂತೆಯೇ ಕುಮಾರನು ಅಪ್ಪಾಜಿ ಕಮಲೇಂದ್ರರು ಮುದ್ರೆ ಹಾಕುವಾಗ ನಕ್ಕಂತೆ ಭಾಸವಾಯ್ತು ಎಂದು ಅರುಹಿದೊಡನೇ ಗೌಡೇಂದ್ರರಿಗೆ ಸಂಶಯವಾಯ್ತು. ಮುದ್ರೆಯನ್ನು ಪರೀಕ್ಷಿಸಿದಾಗ ಮುದ್ರೆಯಲ್ಲಿರುವ ಕಮಲದಲ್ಲಿ ಮೊದಲ ದಳ ಮಾತ್ರ ಸ್ಪಷ್ಟವಾಗಿ ಅಚ್ಚೊತ್ತಿತ್ತು. ಕಂಠೀರವನನ್ನು ಪತ್ರದ ಸಾಲುಗಳಲ್ಲಿ ಮೊದಲ ಅಕ್ಷರ ಮಾತ್ರ ಓದುವಂತೆ ಆಜ್ಞಾಪಿಸಿದರು.

ಅದನ್ನೋದುತ್ತಿದ್ದಂತೆಯೇ ಕುಮಾರ ಕಂಠೀರವನು ವಿಕ್ಸ್ ಹಚ್ಚಿಕೊಳ್ಳದೆಯೇ ಕಣ್ಣಲ್ಲಿ ನೀರು ಸುರುಸುತ್ತಾ ಹೃದಯ ವಿದ್ರಾವಕ ಗೋಳಾಡಲಾರಂಭಿಸಿದ.

ಹಲವು ದಶಕಗಳ ನಂತರ…
ಭಾರತ ಅಮರಾವತಿಯಂತೆ ಕಂಗೊಳಿಸುತ್ತಿದೆ. ನೋಡಿದೆಡೆಯೆಲ್ಲಾ ನಂದಗೋಕುಲ. ತುರುಕರುಗಳ ಮಂದೆಗಳು ಸಸ್ಯಶಾಲಿನಿಯಾದ ನಿರ್ಭಯವಾಗಿ ಸಂಚರಿಸುತ್ತಾ ಸುಭಿಕ್ಷತೆಯ ಪ್ರತೀಕದಂತೆ ರಾರಾಜಿಸುತ್ತಿದೆ. ಭಾರತದಿಂದ ಡೆನ್ಮಾರ್ಕಿಗೆ ಹಾಲು, ಮೊಸರು, ಬೆಣ್ಣೆ, ಸರಬರಾಜಾಗುತ್ತದೆ.

ವಿಶ್ವದೆಲ್ಲಾ ರಾಷ್ಟ್ರಗಳೂ ಭಾರತದ ಮುಂದೆ ಮಂಡಿಯೂರಿ ವಿಶ್ವಗುರುವೇ ಮೊರೆಯಿಡುತ್ತಾರೆ. ಒಂದು ಕಾಲದಲ್ಲಿ ಬಲಿಷ್ಠ ರಾಷ್ಟ್ರಗಳೆನಿಸಿದ್ದ ದೊಡ್ಡಣ್ಣಗಳ ಮಗ್ಗುಲು ಮುರಿದು ಅಗ್ರಮಾನ್ಯವಾಗಿರುವ ಭಾರತದ ಬೀದಿಗಳಲ್ಲಿ ಹಲವು ರಾಷ್ಟ್ರಗಳಿಂದ ಧನಿಕರು, ವಿದ್ಯಾರ್ಥಿಗಳು, ಜ್ಞಾನಾರ್ಥಿಗಳು ಬಂದುತುಂಬಿದ್ದಾರೆ.

ಆಶ್ರಮಗಳಲ್ಲಿ ಪ್ರಜಾಜನರ ಕ್ಷೇಮಾಭಿವೃದ್ಧಿಗಾಗಿ ನಿರಂತರ ಯಾಗಾದಿಗಳು ನಡೆಯುತ್ತಿರುತ್ತವೆ. ಬೀದಿ ಬೀದಿಗಳಲ್ಲಿ ಮಂದಿರಗಳು. ಎಲ್ಲಿ ಆಲಿಸಿದರೂ ಒಂದೇ ಭಾಷೆ, ಒಂದೇ ಬಣ್ಣ. ಕೊರಳಲ್ಲಿ ಪುಷ್ಪಹಾರಗಳನ್ನು ಧರಿಸಿ, ಏಕತಾರಿ ಮೀಟುತ್ತಾ, ಬುಸಬುಸನೆ ಗಾಂಜಾ ಹೊಗೆಯನ್ನು ಚೆಲ್ಲುತ್ತಾ ಭಗವನ್ನಾಮ ಸಂಕೀರ್ತನೆಯನ್ನು ಮಾಡುತ್ತಾ ಸಾಗುವ ಸಾಧುಸಂತರ ದಂಡು. ದೇಶದಲ್ಲಿ ಎಲ್ಲೂ ಭಿಕ್ಷುಕರೇ ಇಲ್ಲ. ವಯಸ್ಸಾದ, ಕೈಲಾಗದ ಮಂದಿಯೂ ಸಹ ದೇಶೀ ತುಪ್ಪದಲ್ಲಿ ಮಾಡಿದ ಕೇಸರಿಭಾತ್‍ ತಿನ್ನುತ್ತಾ ಹಾಯಾಗಿದ್ದಾರೆ.

ಅರಿಭಯಂಕರ, ಕಲಿಯುಗ ವಿಪರೀತ ಐದನೇ ಕಮಲೇಂದ್ರ ಚಕ್ರವರ್ತಿಯ ಆಳ್ವಿಕೆ. ಎಷ್ಟೋ ದಶಕಗಳ ಹಿಂದೆ ವೈರಿಗಳಿಗೆ ಸಿಂಹಸ್ವಪ್ನವಾಗಿದ್ದ ಮೂಲಪುರುಷ ಕಮಲೇಂದ್ರನ ಹೆಸರನ್ನೇ ಸಿಂಹಾಸನವನ್ನೇರುವ ಪ್ರತೀ ದೊರೆಯೂ ಇಟ್ಟುಕೊಳ್ಳಬೇಕು ಎಂದು ಶಾಸನ ಜಾರಿಯಾಗಿದೆ. ಹಾಗೆಯೇ ಈ ದೊರೆ ಮನೋಲ್ಲಾಸವುಂಟಾದಾಗ ತನ್ನ ಹೆಸರಿನ ಮುಂದೆ ಬಿರುದಾವಳಿಗಳನ್ನು ಸೇರಿಸಿಕೊಂಡರೆ ಪ್ರಜೆಗಳೂ ಅದನ್ನು ತಮ್ಮ ಹೆಸರಿನೊಡನೆ ಸೇರಿಸಿಕೊಂಡು ಸಂಭ್ರಮಿಸುತ್ತಾರೆ. ಸಂಭ್ರಮಿಸದವರು ನಿಗೂಢವಾಗಿ ಕಣ್ಮರೆಯಾಗಿಬಿಡುತ್ತಾರೆ. ದಶಹರದೀಪಾವಳಿಗಳಿಗೊಮ್ಮೆ ಗಡಿಯಲ್ಲಿ ನುಗ್ಗಿಬರುವ ದಸ್ಯುಗಳನ್ನು ಸಂಹರಿಸಲು ಸೈನ್ಯಕ್ಕೆ ಆಜ್ಞಾಪಿಸುತ್ತಾನೆ. ಸೈನ್ಯವು ನೆತ್ತರುಸುರಿಸಿ ಪರಾಕ್ರಮವನ್ನು ಮೆರೆದು ಜಯವನ್ನು ತರುತ್ತದೆ. ಕಮಲೇಂದ್ರನ ಆಸ್ಥಾನ ಕವಿಗಳು ವಾಗ್ವಿಲಾಸ ಮೆರೆಸಿ ಕಾವ್ಯ ಬರೆಯುತ್ತಾರೆ. ಆ ಗೀತೆಗಳು ಎಷ್ಟೋ ವರ್ಷಗಳವರೆಗೂ ಜನಪದರ ಬಾಯಲ್ಲಿ ರಾಜನ ಶೌರ್ಯವನ್ನು ಹೊಗಳುತ್ತಾ ನಲಿದಾಡುತ್ತವೆ.

ದೇಶದಲ್ಲೆಲ್ಲೂ ಭಿನ್ನಾಭಿಪ್ರಾಯ,ವಿರೋಧಗಳ ಸುಳಿವೇ ಇಲ್ಲ. ವಸುದೈವಕುಟುಂಬಕಂ ಎಂಬಂತೆ ಒಂದು ಕುಟುಂಬದಂತೆ ಇದ್ದಾರೆ. ಪ್ರತಿಯೊಬ್ಬ ಪ್ರಜೆಗೂ ರಾಜನು ತಂದೆಯಂತೆ ಪಾಲಿಸಿ ಪೋಷಿಸುತ್ತಾನೆ. ಆದರೆ ದೇಶಭಕ್ತಿಯ ವಿಷಯ ಬಂದರೆ, ಪುತ್ರವಾತ್ಸಲ್ಯವನ್ನೂ ಮರೆತು ಸುಳಿವು ಸಿಗುವ ಮೊದಲೇ ಶಿರಚ್ಛೇದನ ಮಾಡಿಸಿಬಿಡುತ್ತಾನೆ. ಹೀಗಾಗಿ ರಾಜನ ಮಾತಿಗೆ ಎದುರಾಡಿದರೆ ದೇಶದ್ರೋಹದ ಅಪವಾದ ಎದುರಿಸಬೇಕಾಗಿರುವುದು ಈ ದೇಶದಲ್ಲಿ ಸಾಮಾನ್ಯ. ಮೊದಲನೇ ಕಮಲೇಂದ್ರ ವರ್ಮನ ಕಾಲದಲ್ಲಿ ಸರ್ವಜನಾಂಗದ ಹಿಂಸೆಯ ನೋಟ ಕಾಣಿಸುತ್ತಿತ್ತಂತೆ. ಇಂದು ಅದೇದೇಶ ಹಲವಾರು ಕಮಲೇಂದ್ರರ ಕೊಡುಗೆಯಿಂದ ಏಕ ಜನಾಂಗದ ಶಾಂತಿಯ ತೋಟವಾಗಿದೆ.

ಸಹನಾ ಭವತು ಸಹನೌ ಭುನಕ್ತು ಸಹವೀರ್ಯಂಕರವಾವಹೈ…ಎಂಬುದು ದೇಶದ ರಾಷ್ಟ್ರಗೀತೆ.

ಇದಕ್ಕೆಲ್ಲಾ ಅಡಿಪಾಯ ಹಾಕಿದ ಮೊದಲನೇ ಕಮಲೇಂದ್ರ ವರ್ಮನ ಹತ್ತು ಸಾವಿರ ಅಡಿ ಎತ್ತರದ ವಿಶ್ವದಲ್ಲೇ ಅತೀ ಎತ್ತರವಾದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಪ್ರವಾಸಪ್ರಿಯನಾದ ಐದನೇ ಕಮಲೇಂದ್ರವರ್ಮ ಮೊನ್ನೆ ತಾನೇ ಶುಕ್ರಗ್ರಹಕ್ಕೆ ಭೇಟಿಯಿತ್ತಾಗ ಅಲ್ಲಿಂದಲೂ ಈ ಪ್ರತಿಮೆ ಕಾಣುತ್ತಿತ್ತಂತೆ.

ಎಲ್ಲಾ ಕಮಲೇಂದ್ರರೂ ಒಬ್ಬನೇ!. ಸತ್ಯಯುಗದ ಪರಶುರಾಮ,ತ್ರೇತಾಯುಗದ ಶ್ರೀರಾಮ, ದ್ವಾಪರಯುಗದ ಬಲರಾಮ ಮತ್ತು ಕಲಿಯುಗದ ನಾಥೂರಾಮ ಪುನರಾವತಾರಗಳೆಂದು ಜನ ನಂಬುತ್ತಾರೆ.ದುಷ್ಟಶಿಷ್ಟರ ರಕ್ಷಣೆಸಂಹಾರಕ್ಕಾಗಿ ಸಂಭವಾಮಿ ಯುಗೇ ಯುಗೇ ಎಂಬ ಗೀತಾ ವಾಕ್ಯ ಉದ್ಗರಿಸುತ್ತಾರೆ.

ಚತುರಾಮಾವತಾರಿ ಆಗಿರುವಂತಹ ಐದನೇ ಕಮಲೇಂದ್ರ ಅಯೋಧ್ಯೆಯ ರಾಮಮಂದಿರಕ್ಕಾಗಿ ಪ್ರತೀ ಜನ್ಮಗಳಲ್ಲೂ ಶ್ರಮಿಸುತ್ತಾನೆ. ಕಲಿಯುಗಾಂತ್ಯದ ನಂತರ ದೇವಶಿಲ್ಪಿಗಳಾದ ಮಯ ನಳರನ್ನು ಕರೆಸಿ ಕಮಲೇಂದ್ರನು ಮಂದಿರ ನಿರ್ಮಿಸಬಹುದೆಂದು ಜನರು ಭಯ ಭಕ್ತಿಗಳಿಂದ ಉಸುರುತ್ತಾರೆ.

ಸುರಾಸುರರ ಮಧ್ಯೆಯುದ್ಧವಾಗುವಂತೆ ಆಗಾಗ್ಯೆ ಪಾಕಾವರ್ತಕ್ಕೂ ಆರ್ಯಾವರ್ತಕ್ಕೂ ಕದನವುಂಟಾಗುತ್ತದೆ. ಕೆಣಕಿ ಬಂದ ಪಾಕಾವರ್ತದ ಪಾಪಿಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಐದನೇ ನರೇಂದ್ರವರ್ಮ ಮಾಡುತ್ತಾನೆ. ಶತ್ರುಗಳ ಹುಟ್ಟಡಗಿಸಿ, ಶಾಶ್ವತ ಶಾಂತಿಸ್ಥಾಪನೆ ಮಾಡುವ ಕಾರ್ಯವನ್ನು ಇಪ್ಪತ್ತಮೂರನೇ  ಕಮಲೇಂದ್ರನಿಗೆ ಭವಿಷ್ಯದಲ್ಲಿ ವಹಿಸಲಾಗಿದೆ.

ರಾಜಧರ್ಮ, ಆಡಳಿತ, ನ್ಯಾಯಾಂಗ ನೋಡಿಕೊಳ್ಳುವುದು ಬಲಗೈ ಭಂಟನಾದ ಮಿತವಲ್ಲಭನ ಕೆಲಸ. ಈತ ಸಾಕ್ಷಾತ್ ಮಹಾಮಾತ್ಯ ಅಮಿತೇಂದ್ರ ಶಾರ್ದೂಲನ ಪುನರ್ಜನ್ಮವಂತೆ.

ಐದನೇ ಕಮಲೇಂದ್ರ ಮತ್ತು ಮಿತವಲ್ಲಭ ಇಬ್ಬರೂ ಒಟ್ಟಾಗಿ ಆಗಾಗ್ಗೆ ಅಂಗ, ವಂಗ, ಕಳಿಂಗ,ಕಾಶ್ಮೀರ, ದೇಶಗಳ ಪುರಾತನ ಸಂಗ್ರಹಾಲಯಗಳಿಗೆ ತೆರಳಿ ಪ್ರಾದೇಶಿಕ ಪಕ್ಷಗಳ ಪಳೆಯುಳಿಕೆಗಳನ್ನು ನೋಡಿ ಖುಷಿಪಡುತ್ತಾರೆ.

ಹೀಗೆ ಒಮ್ಮೆ ಪ್ರಾಚೀನ ಸಂಗ್ರಹಾಲಯದ ಪ್ರಾಕ್ತನ ಕೋಣೆಯಲ್ಲಿದ್ದ ಇಪ್ಪತ್ತೊಂದನೇ ಶತಮಾನದ ಪ್ರಾದೇಶಿಕ ಪಕ್ಷದ ಸಾಮಂತರ ಚಿತ್ರಗಳನ್ನು ನೋಡುತ್ತಾ ಐದನೇ ಕಮಲೇಂದ್ರ ನಿಂತಿದ್ದ. ಮಿತವಲ್ಲಭನು ಆಯುಧಪಾಣಿಯಾಗಿ ಕೋಣೆಯೊಳಗೆ ನುಗ್ಗಲೆಣೆಸುವ ನೊಣಗಳನ್ನು ಖಡ್ಗದಿಂದ ಓಡಿಸುತ್ತಾ ಹೊರಗೆ ಕಾದಿದ್ದ.

ಕಮಲೇಂದ್ರನು ಯಾವುದೋ ತೈಲಚಿತ್ರದ ಒಳಹೊಕ್ಕು ಗಂಭೀರವಾಗಿ ವೀಕ್ಷಿಸುತ್ತಿದ್ದಂತೆಯೇ ಸುತ್ತಲಿನ ವಾತಾವರಣ ಸಣ್ಣಗೆ ಪರಿಮಳಯುಕ್ತ ಹೊಗೆಯಿಂದ ತುಂಬಿತು. ಚಿತ್ರ ಶಾಸನಗಳಿಂದ,ಕಲ್ಲು ತಾಮ್ರಪತ್ರಗಳಿಂದ ನಿಧಾನವಾಗಿ ಒಂದೊಂದೇ ವ್ಯಕ್ತಿಗಳು ಎದ್ದುಬಂದಂತೆ ಭಾಸವಾಯ್ತು.

ವರ್ಷಾನುಗಟ್ಟಲೆ ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದು, ಸುಟ್ಟು ಶುದ್ಧವಾಗಿ ನಿರ್ವಾಜ್ಯ ಪ್ರೇಮದಿಂದ ನೋಡುತ್ತಾ ನಿಂತರು.ಐದನೇ ಕಮಲೇಂದ್ರ ಅವರನ್ನು ನೋಡಿ ಕೆಲವರನ್ನು ಗುರುತು ಹಿಡಿದ. ಕೀರ್ತಿಶೇಷ ಸರ್ದಾರ್ ಸುಂದ್ರಬಾಬುನಾಯ್ಡು, ಸಮರಸಿಂಹ ಗೌಡೇಂದ್ರ, ವೀರಮಾತಾ ಬ್ಯಾನರ್ಜಿ, ಮಾಯಾಯುದ್ಧವತೀ…ಇವರೊಡನೆ ಬೆರಳು ಚೀಪುತ್ತಾ ನಿಂತಿದ್ದರಾವುಲೇಶ್ವರ!

ರಾವುಲೇಶ್ವರನು ನಗುತ್ತಾ ಬಂದು ಕಚಗುಳಿಯಿಟ್ಟ…ವಿಸ್ಮಯಭರಿತನಾಗಿ ನಿಂತಿದ್ದ ಐದನೇ ಕಮಲೇಂದ್ರವರ್ಮ ಗೊಳ್ಳನೆ ನಕ್ಕ. ಮತ್ತೂ ಕಚಗುಳಿಯಿಡುತ್ತಿದ್ದಂತೆ ಐದನೇ ಕಮಲೇಂದ್ರನಿಗೆ ನಗುನಗುತ್ತಾ ಉಸಿರೆಳೆದುಕೊಳ್ಳಲು ಪ್ರಯಾಸವಾಗತೊಡಗಿತು. ಸುಸ್ತಾಗಿ ಇನ್ನು ನಗಲಾರೆ ಎಂಬಂತೆ ರಾವುಲೇಶ್ವರನಿಗೆ ಕೆನ್ನೆಗೆ ಬಾರಿಸಿ ದೂರತಳ್ಳಿದ.

‘ಪ್ರಭೂ! ಏನಿದು ಏನಾಯಿತು ನಿಮಗೆ…ಬಹಿರ್ಮುಖರಾಗಿ!’
ಗುಹೆಯೊಳಗೆ ಧ್ಯಾನ ಮಾಡುತ್ತಿದ್ದ ಕಮಲೇಂದ್ರವರ್ಮ ಕಣ್ಣು ಬಿಟ್ಟಾಗ ಎದುರಿಗೆ ಅಮಿತೇಂದ್ರ ಕೆನ್ನೆಯುಜ್ಜಿಕೊಳ್ಳುತ್ತಾ ನಿಂತಿದ್ದ. ಕಮಲೇಂದ್ರನಿಗೆ ನಿಧಾನವಾಗಿ ಪರಿಸ್ಥಿತಿಯ ಅರಿವಾಯ್ತು. ಧ್ಯಾನದಲ್ಲಿ ಕಂಡ ಭವಿಷ್ಯದ ಕಾಣ್ಕೆಯನ್ನು ನೆನೆದು ಹಿಗ್ಗಿದ. ತಾನು ದೈವಾಂಶಸಂಭೂತನೆಂಬುದು ಖಚಿತವಾಯ್ತು. ಪೂರ್ವಜನ್ಮದ ವಿನಾಯಕ ಈ ಜನ್ಮದಲ್ಲಿ ಅಮಿತೇಂದ್ರನಾಗಿ ತನ್ನ ನೆರಳು ಕಾಯುತ್ತಿದ್ದಾನೆಂಬ ಅಭಿಮಾನವುಕ್ಕಿತು.

ಗುಹೆಯಿಂದ ಹೊರಬಂದು ಸೂರ್ಯಾಸ್ತದ ಹಿತವಾದ ಬಿಸಿಲಿಗೆ ಮೈಯೊಡ್ಡುತ್ತಾ ಕಮಲೇಂದ್ರನು ಪಹರೆ ಸೈನ್ಯವನ್ನು ನೋಡುತ್ತಾ ನಿಂತ.

ಅಮಿತೇಂದ್ರ ಶಾರ್ದೂಲನು, ‘ಪ್ರಭೂ! ಯುದ್ಧದಲ್ಲಿ ಅಪೂರ್ವ ಜಯವಾಯಿತು.ಮತ್ತೈದು ವರ್ಷ ಸಿಂಹಾಸನ ನಿಷ್ಕಂಟಕವಾಯ್ತು. ವಿಶ್ವಗುರುವಿನ ಮಾರ್ಗ ಸರಳವಾಯ್ತು. ಮುಂದೆ ವಿರೋಧಿಗಳನ್ನು ಬಂಧಿಸಿ ಒಳಗಟ್ಟಿಬಿಡೋಣ’ಎಂದು ಅಮಿತಾನಂದದಿಂದ ಸುದ್ದಿಯೊಪ್ಪಿಸಿದ.

ಇನ್ನೂ ಧ್ಯಾನದಲ್ಲಿ ಕಂಡ ಜನ್ಮಾಂತರಗಳ ಗುಂಗಿನಲ್ಲೇ ಇದ್ದ ಕಮಲೇಂದ್ರವರ್ಮ, ‘ಆದರೆ ಯಾರೂ ವಿರೋಧಿಗಳೇ ಇಲ್ಲವಲ್ಲ’ ಎಂದು ನೋವಿನಿಂದ ಉತ್ತರಿಸಿದ.

ಸಂಜೆಯ ಸೂರ್ಯ ಪಹರೆಗೆ ನಿಂತ ಸೈನಿಕರನ್ನೂ ಹಾದು ಬೆಟ್ಟದ ಹಿಂದೆ ಹೋಗಿ ಬಚ್ಚಿಟ್ಟುಕೊಳ್ಳುತ್ತಿತ್ತು.

Leave a Reply

Your email address will not be published.