ಕಮಿಷನ್ ದಂಧೆ ಅಧಿಕಾರಸ್ಥರ ಲೂಟಿಗೆ ಅಧಿಕೃತ ಮುದ್ರೆ!

ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ, ಯಾರೇ ಮುಖ್ಯಮಂತ್ರಿ ಆಗಲಿ, ಯಾವುದೇ ಅಧಿಕಾರಿಯಿರಲಿ; ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಸಂಹಿತೆಯಂತೆ ಪಾಲಿಸಲ್ಪಡುವ ಕಮಿಷನ್ ದಂಧೆ ನಿರಾತಂಕವಾಗಿ ಸಾಗುತ್ತದೆ.

ಕರ್ನಾಟಕ ರಾಜ್ಯವನ್ನು 34 ತಿಂಗಳ ಕಾಲ ಆಳ್ವಿಕೆ ಮಾಡಿದ ಮಾಜಿ ಮುಖ್ಯಮಂತ್ರಿಯೊಬ್ಬರು ತುಂಬಿದ ವಿಧಾನಸಭೆಯಲ್ಲಿ ಅನೇಕ ಸಲ ಸರ್ಕಾರದ ಮಟ್ಟದಲ್ಲಿ ನಡೆಯುವ ಕಮಿಷನ್ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ರಾಜಕಾರಣಿಗಳ ಆತ್ಮಸಾಕ್ಷಿಯನ್ನು ಪ್ರಶ್ನಿಸಿದ ಮತ್ತು ಕಮಿಷನ್ ಹೆಸರಿನ ವ್ಯವಸ್ಥಿತ ಭ್ರಷ್ಟಾಚಾರದಲ್ಲಿ ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗಿ ಅದು ಎಲ್ಲೆಲ್ಲಿಗೆ ಹರಿದು ಕೊನೆಗೆ ಯಾವ ಗಮ್ಯಸ್ಥಾನ ಮುಟ್ಟುತ್ತದೆ ಎಂಬುದರ ಬಗೆಗಿನ ಆತ್ಮಾವಲೋಕನಕ್ಕೆ ಜಾರಿದ್ದನ್ನು ಎಲ್ಲರೂ ನೋಡಿದ್ದೇವೆ. ಇದೇ ನಾಯಕರು ಅಧಿಕಾರದಿಂದ ಹೊರಗುಳಿದಾಗ ಜನಸಭೆಗಳಲ್ಲಿ ಕರುನಾಡು ಎಷ್ಟು ಸಮೃದ್ಧ ಹಾಗೂ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಎಷ್ಟು ಸ್ವಾವಲಂಬಿ ಎಂಬ ವಾಸ್ತವದ ಮೇಲೆ ಕನ್ನಡಿ ಹಿಡಿದಿದ್ದನ್ನೂ ಕಂಡಿದ್ದೇವೆ. ಅಧಿಕಾರವಿಲ್ಲದಾಗ ಹತಾಶೆಗೋ ಅಥವಾ ನಾಡಿನ ಬಗೆಗಿನ ಪ್ರಾಮಾಣಿಕ ಕಾಳಜಿಗೋ ಏನೇ ಇರಲಿ, ರಾಜ್ಯದ ಚುಕ್ಕಾಣಿ ಹಿಡಿದವರ ಪೈಕಿ ಪ್ರಜ್ಞಾಪೂರ್ವಕವಾಗಿಯೇ ಇಂತಹ ವಸ್ತುನಿಷ್ಠ ವಿಚಾರಗಳನ್ನು ಹೊರಹಾಕಿದ್ದು ಅವರೊಬ್ಬರೇ ಇರಬೇಕು.

ಅವರ ಮಾತು ಹೊರಗಿಟ್ಟು ನೋಡುವುದಾದರೂ; ಇಷ್ಟು ಸಂಪದ್ಭರಿತ ನಾಡಿನ ಬಹುಪಾಲು ಭಾಗ ಅಭಿವೃದ್ಧಿಯಿಂದ ಹೊರಗುಳಿದಿರುವ ಬಗ್ಗೆ, ಯೋಜನೆಗಳಿಗೆ ಸಂಪನ್ಮೂಲ ಹೊಂದಿಸಲು ಲಕ್ಷಾಂತರ ಕೋಟಿ ಸಾಲ ಎತ್ತುವಳಿಯಾಗಿರುವುದರ ಕುರಿತು ಅನೇಕರು ತಲೆ ಕೆಡಿಸಿಕೊಂಡಿರಲಿಕ್ಕೂ ಸಾಕು. ಹಾಗಾದರೇ ಎಲ್ಲಿಗೆ ಹೋಗುತ್ತದೆ ರಾಜ್ಯದ ಅಪಾರ ಆದಾಯ? ಜಿಡಿಪಿಗೆ ಸರಿಸುಮಾರು ಶೇ. 8ರಷ್ಟು ಕೊಡುಗೆ ನೀಡುವ ಮೂಲಕ ಆರ್ಥಿಕತೆಯಲ್ಲಿ ಮೊದಲ ಸಾಲಿನಲ್ಲಿರುವ ಕರ್ನಾಟಕಕ್ಕೆ ಅಬಕಾರಿ ಆದಾಯ ನೆಚ್ಚದೆ ಕನಿಷ್ಠ ಮರ‍್ನಾಲ್ಕು ಮಾಸ ಮುನ್ನೆಡೆಯುವ ಶಕ್ತಿಯೂ ಇಲ್ಲವೇ? ದಶಕಗಳ ಕಾಲದಿಂದ ನೆನಗುದಿಗೆ ಬಿದ್ದ ನೀರಾವರಿ, ಮೂಲಸೌಕರ್ಯ ಯೋಜನೆಗಳಿಗೆ ಮುಕ್ತಿ ಕೊಡುವ ಸಾಮರ್ಥ್ಯವಿಲ್ಲವೇ? ಏನಾಗುತ್ತದೆ ಪ್ರವಾಹದಂತೆ ಬೊಕ್ಕಸಕ್ಕೆ ಹರಿದುಬರುವ ಹಣ? ಖಜಾನೆಯ ತಳಕ್ಕೇ ಗುನ್ನ ಇಡಲಾಗಿದೆಯೇ? ಇಂತಹ ಪ್ರಶ್ನೆಗಳಿಗೆ ಜವಾಬು ಹುಡುಕಲು ಹೊರಟರೆ ಮಾಜಿ ಮುಖ್ಯಮಂತ್ರಿಯವರ ಮಾತುಗಳಲ್ಲಿರುವ ಸತ್ಯದ ಅನಾವರಣವಾಗುತ್ತದೆ. ಕಳೆದ 2018ರ ವಿಧಾನಸಭೆಯ ಚುನಾವಣೆ ಅಖಾಡದಲ್ಲಿ ರಾಷ್ಟ್ರೀಯ ಪಕ್ಷಗಳ ಮಹಾನಾಯಕರ ನಡುವೆ ನಡೆದ “ಕಮಿಷನ್” ಆರೋಪದ ಕೆಸರೆರಚಾಟದಲ್ಲಿದ್ದ ಅಸಲಿ ನಿಜವೂ ಇದೇ ಎಂಬುದು ನೆನಪಾಗುತ್ತದೆ.

ಹೌದು. ಕಳೆದ ಎರಡೂವರೆ ದಶಕಗಳಿಂದ ಕರ್ನಾಟಕವನ್ನು ಆಳಿದ ಎಲ್ಲಾ ರಾಜಕೀಯ ಪಕ್ಷಗಳೂ ಕಮಿಷನ್ ವ್ಯವಹಾರವನ್ನು ಪೋಷಿಸಿ ರಾಜ್ಯದ ಖಜಾನೆಯ ಸಂಪನ್ಮೂಲವನ್ನು ಬಸಿಯುವ ಹೀನ ವ್ಯವಸ್ಥೆಯನ್ನು ಸೃಷ್ಟಿಸಿರುವುದು ಅಕ್ಷರಶಃ ಸತ್ಯ. ದೆಹಲಿ ದೊರೆಗಳ ಪಾಲಿನ `ಕರ್‌ನಾಟಕ್’ ಕಾಲ ಕಾಲಕ್ಕೆ ಕಪ್ಪ ಸಂಗ್ರಹಿಸುವ ಸಾಮಂತ ರಾಜ್ಯವಾಗಿ ಹೋಗಿದೆ. ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳಿಗೆ ಕಾಮಧೇನು. ಆಧಿಕಾರ ಹಿಡಿದ ಪ್ರತಿ ನಾಯಕರೂ ವಿಶೇಷ ವಿಮಾನಗಳಲ್ಲಿ ಕಪ್ಪ ಹೇರಿಕೊಂಡು ಹೋಗಿ ದೊರೆಗಳನ್ನು ಸಂತುಷ್ಟಗೊಳಿಸಿ ಬಂದವರೇ. ಕಪ್ಪ ಸಂಗ್ರಹಣೆ ನೆಪದಲ್ಲಿ ಲೂಟಿ ಮಾಡಿ ತಮ್ಮ ಖಾಸಗಿ ತಿಜೋರಿಗಳನ್ನು ತುಂಬಿಸಿಕೊಂಡವರೇ. ಇಲ್ಲಿ ಅಧಿಕಾರ ಹಿಡಿಯಲು ಭಾರಿ ಹೂಡಿಕೆಯಾಗುತ್ತದೆ. ಪವರ್ ಬಂದ ನಂತರ ಬಂಡವಾಳ ಹಿಂತೆಗೆತ ಆರಂಭವಾಗುತ್ತದೆ. ಪ್ರತಿ ಹಂತದಲ್ಲೂ ಹಾಸು ಹೊಕ್ಕಾಗಿರುವ ಕಮಿಷನ್ ದಂಧೆಯ ಭ್ರಷ್ಟಾಚಾರ ರಾಜ್ಯವನ್ನೂ ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ. ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಿ ಆರ್ಥಿಕತೆಯನ್ನು ಅಡ್ಡದಾರಿ ಹಿಡಿಸಿದೆ. ಈ ಕಮಿಷನ್ ಹೊಡೆಯುವ ದಂಧೆಯ ಪಾಪದ ಫಲವೇ ಕೊರೊನಾ ಉಪಕರಣ ಖರೀದಿ ಹಗರಣ.

“ಬಡವರಲ್ಲದ ಎಲ್ಲರೂ ಬರಗಾಲವನ್ನು ಇಷ್ಟ ಪಡುತ್ತಾರೆ” ಎಂಬ ಉಕ್ತಿಯನ್ನು ಕೇಳಿರಬಹುದು. ತಮ್ಮದೇ ಕಷ್ಟ ನಷ್ಟಗಳಲ್ಲಿ ಕರಗಿ ನಿಶ್ಯಕ್ತರಾದ ಸಾಮಾನ್ಯ ಜನತೆಗೆ ಬರಗಾಲ ಪರಿಹಾರ ಕಾರ್ಯಗಳಲ್ಲಿ ನಡೆಯುವ ಅವ್ಯವಹಾರ ಗಮನಿಸುವ ವ್ಯವಧಾನವೇ ಇರುವುದಿಲ್ಲ. ಹೀಗಾಗಿ ಆಡಳಿತ ವ್ಯವಸ್ಥೆಯ ಮೇಲಿನಿಂದ ತಳದವರೆಗೂ ಇರುವ ರಾಜಕಾರಣಿ, ಅಧಿಕಾರಿಗಳಿಗೆ ಸುಗ್ಗಿ ಎಂಬ ಮಾತಿತ್ತು. ಆದರೆ ಕರಾಳ ಮಹಾಮಾರಿ ಆವರಿಸಿ ಜನರ ಜೀವ ಹಿಂಡುತ್ತಿರುವಾಗಲೂ ಅಧಿಕಾರದಲ್ಲಿರುವವರು ಅಮಾನವೀಯವಾಗಿ ಹಣ ಹೊಡೆಯುವುದು ಹೇಗೆ  ಎಂದೇ ಯೋಚಿಸುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಈ ಕಲ್ಪನೆಗೂ ಮೀರಿದ ಹೀನಕೃತ್ಯ ಸಂಭವಿಸಿ ಕೋವಿಡ್-19 ನಿರ್ವಹಣೆ ಹೆಸರಿನಲ್ಲಿ ಸರ್ಕಾರ ಮಾಡಿರುವ ಪ್ರತಿ ಖರೀದಿ, ಖರ್ಚು ವೆಚ್ಚಗಳಲ್ಲೂ  ಕಮಿಷನ್ ದಂಧೆಯ ಕಮಟು ವಾಸನೆ ವಿಧಾನಸೌಧ ಕಾರಿಡಾರ್ ಗಳಲ್ಲಿ ಅಡರಿ ಮೂರನೇ ಮಹಡಿಯವರೆಗೆ ಹಬ್ಬಿದೆ. ಇಡೀ ದೇಶವೇ ಕೊರೊನಾ ವಿರುದ್ಧ ಬಡಿದಾಡುತ್ತಿರುವಾಗ ಕರ್ನಾಟಕ ಸರ್ಕಾರ ಅಕ್ರಮ, ಹಗರಣದ ಸುಳಿಗೆ ಸಿಲುಕಿದೆ. ಜನತೆ ಕಷ್ಟ-ನಷ್ಟ, ಸಾವಿನ ದವಡೆಗೆ ಸಿಲುಕಿ ವಿಲವಿಲ ಒದ್ದಾಡುವಂತಾಗಿದೆ.

ಅಕ್ರಮ ಮುಚ್ಚಿಡಲು ಸ್ಪೀಕರ್ ಚಾಣಾಕ್ಷ ನಡೆ‘?

ಕೊರೊನಾ ನಿಯಂತ್ರಣ ಪರಿಕರಗಳ ಖರೀದಿಯಲ್ಲಿ ಅಪಾರ ಮೊತ್ತದ ವ್ಯವಹಾರ ನಡೆದಿದೆ. ಕಳಪೆ ಗುಣಮಟ್ಟದ ಸಾಮಗ್ರಿ ಖರೀದಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿ ಲೂಟಿ ಮಾಡಲಾಗಿದೆ ಎಂಬ ಬಾಂಬ್ ಸಿಡಿದಿದ್ದು ಮೇ ತಿಂಗಳ ಮಧ್ಯಭಾಗದಲ್ಲಿ. ಕರ್ನಾಟಕ ರಾಷ್ಟ್ರ ಸಮಿತಿ ಈ ಸಂಬಂಧ ವಿಧಾನಮಂಡಲ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿತು. ಅವ್ಯವಹಾರದ ದಾಖಲೆಗಳು ಸರ್ಕಾರದ ಮಟ್ಟದಲ್ಲೇ ಸೋರಿಕೆಯಾಗಿದ್ದವು. ಅದಕ್ಕೆ ಬಿಜೆಪಿಯೊಳಗಿನ ಅತೃಪ್ತ ಆತ್ಮಗಳ ಚಿತಾವಣೆ ಇತ್ತು. ಯಾವಾಗ ತಿನ್ನಬಾರದ ಜಾಗದಲ್ಲಿ ಭರ್ತಿ ತಿಂದು ಎರಡು ಮೂರು ಪಟ್ಟು ಕಮಿಷನ್ ದೋಚಿರುವ ದಾಖಲೆಗಳು, ದೂರು ಬಂದೀತೋ ಪಿಎಸಿ ತನಿಖೆಗೆ ಮುಂದಾಗಿ ಬಿಟ್ಟಿತು.

ಅಚ್ಚರಿ ಮತ್ತು ಅಘಾತಕಾರಿ ಎಂದರೆ ಈ ಸಮಿತಿಯಲ್ಲೇ ಸ್ವಹಿತಾಸಕ್ತಿಯ ಕೆಲವು ಶಾಸಕರಿದ್ದರು. ಆಯಾಚಿತವಾಗಿ ಅಕ್ರಮದ ದೂರು ಸಮಿತಿ ಮುಂದೆ ಬಂದಿದ್ದು ಇಂತವರಿಗೆ ಹಾಲು ಕುಡಿದಷ್ಟು ಆನಂದ ತಂದಿತು.  ಇದೇ ವಿಚಾರವನ್ನು ಹಿಗ್ಗಿಸಿ ತಮಗೆ ಬೇಕಾದವರನ್ನು ಬಗ್ಗಿಸಿಕೊಂಡು ಸ್ವಕಾರ್ಯಗಳನ್ನು ಸಾಧಿಸುವ ಅವಕಾಶ ಅವರಿಗೆ ದೊರಕಿತ್ತು. ಇಂತಹವರ ಪೈಕಿ ಒಬ್ಬರಾದ ಬಿಜೆಪಿ ಶಾಸಕ, ಸಕ್ಕರೆ ಸಾಮ್ರಾಜ್ಯದ ಕುಳ ಮುರುಗೇಶ್ ನಿರಾಣಿಯವರಂತೂ ಸಭೆಯಲ್ಲಿ ತಮ್ಮದೇ ಸರ್ಕಾರದ ಲೂಟಿಯ ಬಗ್ಗೆ ಜಾಡಿಸಿ ಕೊಡವಿ ಬಿಟ್ಟರಲ್ಲದೆ ತಮ್ಮ ಬಳಿ ಕೋವಿಡ್ ಹಗರಣದ 125 ಪುಟಗಳ ದಾಖಲೆ ಇರುವುದಾಗಿ ಹೇಳಿ, ಅದನ್ನು ಸಮಿತಿ ಮುಂದಿಡುತ್ತೇನೆ ಅಂದು ಬಿಟ್ಟರು. ಇತರೆ ಸದಸ್ಯರೂ ಲೂಟಿಯ ಬಗ್ಗೆ ಧ್ವನಿ ಎತ್ತಿ ತನಿಖೆಗೆ ಸರ್ವಾನುಮತದ ನಿರ್ಣಯ ಕೈಗೊಂಡುಬಿಟ್ಟರು.

ಸಮಿತಿಯಲ್ಲಿದ್ದ ನಿರಾಣಿಯಂತವರ ಬಾಣ ಮುಟ್ಟಬೇಕಾದ ಗುರಿ ಮುಟ್ಟಿ ಬಯಸಿದ ಭಾಗ್ಯ ದೊರಕಿಸಿಕೊಟ್ಟಿತು. ನಿರಾಣಿ ಅಕ್ರಮದ ದಾಖಲೆಗಳನ್ನೇ ಗುರಾಣಿ ಮಾಡಿಕೊಂಡು ಠೇಂಕರಿಸಿದ ನಂತರ ಅವರು ಬಯಸಿದ್ದ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಅವರಿಗೇ ಮಾರಿಬಿಟ್ಟಿತು. ಕಡುಬು ನುಂಗಿದ ನಿರಾಣಿ ಬಾಯಿಕಟ್ಟಿತು. ರಾತ್ರೋರಾತ್ರಿ ಅವರ ಜತೆ ಬಿಜೆಪಿಯ ಇತರೆ ಶಾಸಕರ ಬಾಯಿಮುಚ್ಚಿಸುವ ವ್ಯವಸ್ಥೆ ಮಾಡಲಾಯಿತು. ಆದರೆ ಸಮಿತಿ ಅಧ್ಯಕ್ಷರಾದ ಹಿರಿಯ ಕಾಂಗ್ರೆಸಿಗ ಹೆಚ್.ಕೆ.ಪಾಟೀಲ್ ಹಿಂದಿನ ಸಭೆಯ ನಿರ್ಣಯದಂತೆ ಮುಂದುವರೆಯುವ ನಿಲುವು ತಾಳಿದರು.

ದಾಖಲೆ ಮತ್ತು ಸ್ಥಳ ಪರಿಶೀಲನೆ ಮೂಲಕ ತನಿಖೆ ಆರಂಭಿಸಲು ಮುಂದಾಗುತ್ತಿದ್ದಂತೆಯೇ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ರಂಗಪ್ರವೇಶವಾಯಿತು. ಸಮಿತಿ ತನಿಖೆಗೆ ಅವರು ತಡೆಯಾಜ್ಞೆ ಕೊಟ್ಟುಬಿಟ್ಟರು. ಪರಿಶೀಲನೆ ವೇಳೆ ಸಮಿತಿ ಸದಸ್ಯರಿಗೆ ಕೊರೊನಾ ಸೋಂಕು ತಗುಲದಿರಲಿ ಎಂಬ ‘ಕಾಳಜಿ’ ಯೇ ಸ್ಪೀಕರ್ ತಡೆಗೆ ಕಾರಣವಾಗಿತ್ತು. ಅವರ ಈ ಕಾಳಜಿಗೆ “ಭ್ರಷ್ಟರನ್ನು ರಕ್ಷಿಸಲು ಆಳುವವರ ಒತ್ತಡಕ್ಕೆ ಮಣಿದು ಮಾಡಿದ ಸಂವಿಧಾನಬಾಹಿರ ಕೃತ್ಯ” ಎಂಬ ವ್ಯಾಖ್ಯಾನ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ, ಕಾಗೇರಿಯವರು ಸಾಂವಿಧಾನಿಕ ಹುದ್ದೆಯ ಘನತೆ ಮಣ್ಣು ಪಾಲು ಮಾಡಿದ್ದನ್ನು ಖಂಡಿಸಿತು. “ಭ್ರಷ್ಟರ ರಕ್ಷಣೆಗೆ ನಿಂತಿಲ್ಲವೆಂದು ನೀವು ನಂಬುವ ಶಿರಸಿಯ ಮಾರಿಕಾಂಬೆ ಮುಂದೆ ಪ್ರಮಾಣ ಮಾಡಿ” ಎಂಬ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ಸವಾಲಿಗೆ ಸ್ಪೀಕರ್ ಕಡೆಯಿಂದ ಪ್ರತಿಕ್ರಿಯೆ ದೊರೆಯಲಿಲ್ಲ. ಮೇಲಿನಿಂದ ಬಂದ ಆದೇಶವನ್ನು ಶಿರಸಾವಹಿಸಿ ಪಾಲಿಸಿ ಕಾಗೇರಿಯವರು ಗುರು ಹಿರಿಯರ ಕೃಪೆಗೆ ಪಾತ್ರರಾದರು ಎಂಬ ಟೀಕೆಗಳು ಅನುರಣಿಸಿದವು.

ಪಿಎಸಿಗೆ ಕಡಿವಾಣ ಹಾಕಿದ ಸ್ಪೀಕರ್ ಹೊರಬೀಳಲಿದ್ದ ಮಹಾ ಹಗರಣವನ್ನು ಮೊಳಕೆಯಲ್ಲಿ ಚಿವುಟುವ ಯತ್ನಕ್ಕೆ ಕೈಹಾಕಿದರೇ? ಎಂಬ ಪ್ರಶ್ನೆ ಮೂಡಿ ಕಳಂಕ ಹೊರಬೇಕಾಯಿತು.

ಕಮಿಷನ್ ‘ವ್ಯವಸ್ಥೆ’ಯ ಕರಾಳ ಮುಖ

ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ. ಯಾರೇ ಮುಖ್ಯಮಂತ್ರಿ ಆಗಲಿ, ಮಂತ್ರಿಗಳಾಗಲಿ, ಅಧಿಕಾರಿಗಳಿರಲಿ; ಇಳಿದು ಹೋಗಲಿ, ಸರ್ಕಾರದ ಮಟ್ಟದಲ್ಲಿ ರಚನೆಯಾಗಿ ಬುಡದಿಂದ ಕೊನೆಯವರೆಗೂ ಭ್ರಷ್ಟಾಚಾರ ಸಂಹಿತೆಯಂತೆ ಜಾರಿಯಾಗಿ ಪಾಲಿಸಲ್ಪಡುತ್ತಿರುವ ಕಮಿಷನ್ ದಂಧೆ ನಿರಾತಂಕವಾಗಿ ಸಾಗಿಹೋಗುತ್ತಲೇ ಇರುತ್ತದೆ. ಭ್ರಷ್ಟಾಚಾರ, ಲೂಟಿಗೆ ಅಧಿಕೃತ ಮುದ್ರೆ ಬಿದ್ದಂತೆ ಚಾಲ್ತಿಯಲ್ಲಿರುತ್ತದೆ.

ಅಧಿಕಾರದಲ್ಲಿರುವವರು ಕೈ ಹೊಲಸು ಮಾಡಿಕೊಳ್ಳಬಾರದೆಂದು ನಿರ್ಧರಿಸಿದರೂ ಕಮಿಷನ್ ರೂಪದಲ್ಲಿ ಶುದ್ಧ ಮಾರ್ಗದಲ್ಲಿ ಬರುವ ಹಣವೇ ಅವರ ತಿಜೋರಿ ತುಂಬಿಸಿಬಿಡಬಲ್ಲದು. ಸರ್ಕಾರದ ಯೋಜನೆಗಳಿಗೆ ಬಿಡುಗಡೆಯಾಗುವ ಪ್ರತಿ ಅನುದಾನದಲ್ಲೂ ನಿಗದಿಪಡಿಸಿದ ಕಮಿಷನ್ ಹಣ ಸಲ್ಲಬೇಕಾದವರಿಗೆ ಸಲ್ಲುತ್ತ ಹೋಗುತ್ತದೆ. ಧಾರೆ ಧಾರೆಯಾಗಿ ಹರಿದುಬರುವ ಇಂತಹ ‘ಪರಿಶುದ್ಧ’ ಸಂಪನ್ಮೂಲದ ಸಂಗ್ರಹಣೆ, ನಿರ್ವಹಣೆ, ಹಂಚಿಕೆಗೂ ವ್ಯವಸ್ಥೆಯೊಂದು ಸೃಷ್ಟಿಯಾಗಿರುತ್ತದೆ. ವ್ಯಕ್ತಿಗಳು ಬದಲಾದರೂ ವ್ಯವಸ್ಥೆ ಬದಲಾಗದೇ ಮುಂದುವರೆಯುತ್ತದೆ. ಖಜಾನೆಯ ಹಣದ ಹರಿವಿಗೆ ಪರ್ಯಾಯ ಎಂಬಂತೆ ಹರಿದು ಸೇರಬೇಕಾದ ಜಾಗಗಳಿಗೆ ಸೇರುತ್ತದೆ. ಯೋಜನೇತರ ವೆಚ್ಚ ಹೊರತುಪಡಿಸಿ ಉಳಿದೆಲ್ಲ ಯೋಜನಾ ವೆಚ್ಚಗಳಲ್ಲಿ ಕಮಿಷನ್ ಎತ್ತುವಳಿ ಮಾಡಿಯೇ ಖಜಾನೆಯನ್ನು ಲೂಟಿ ಮಾಡಲಾಗುತ್ತದೆ.

ಅಧಿಕಾರ ಹಿಡಿಯಲು, ಉಳಿಯಲು, ಹೈಕಮಾಂಡಿನ ಆಣತಿಯಂತೆ ಇತರೆ ರಾಜ್ಯದ ಚುನಾವಣೆಗಳು, ಇತರೆ ಪಕ್ಷದ ವೆಚ್ಚಗಳಿಗೆ ಸರಬರಾಜು ಮಾಡಲು, ದೆಹಲಿ ದೊರೆಗಳ ಸಂತೃಪ್ತಗೊಳಿಸಲು, ತಮ್ಮ ಆಸ್ತಿಯನ್ನು ರಾಕೆಟ್ ನಂತೆ ಮೇಲೆರೆಸಲು… ಹೀಗೆ ಸಕಲಕ್ಕೂ ಕಮಿಷನ್ ಲೂಟಿ ಹಣವೇ ಮದ್ದು.

ಆದರೆ ಈ ಕಮಿಷನ್ ಗೆ ಒಂದು ಗೆರೆ ಇರುತ್ತದೆ. ಅದನ್ನು ದಾಟಿ ನಿಗದಿಪಡಿಸಿದ ಕಮಿಷನ್ ಪ್ರಮಾಣಕ್ಕಿಂತ ಮೂರ್ನಾಲ್ಕು ಪಟ್ಟು ಬಾಚಲು ಹೋದಾಗ ಹಗರಣಗಳು ಭಗ್ಗನೆ ಬಾಯ್ತೆರೆದುಕೊಳ್ಳುತ್ತವೆ.

ಅಂತಹ ಅಪರೂಪದ ಸಂದರ್ಭದಲ್ಲಿ ಮಾತ್ರ ಮುಖ್ಯಮಂತ್ರಿಯೋ, ಸಚಿವರೋ, ಶಾಸಕರೋ, ಹಿರಿಯ ಅಧಿಕಾರಿಯೋ,  ಮಗದೊಬ್ಬರೋ, ಅಕ್ರಮದ ಪ್ರಮಾಣಕ್ಕೆ ಅನುಸಾರವಾಗಿ ಸಂಬಂಧಪಟ್ಟವರು ಮಧ್ಯೆ ಪ್ರವೇಶ ಮಾಡಿ ಅತಿ ಭಾರದ ಕಮಿಷನ್ ವ್ಯವಹಾರದಿಂದ ಆದ ಲೋಪಕ್ಕೆ ಡ್ಯಾಮೇಜ್ ಕಂಟ್ರೋಲ್ ಮಾಡುತ್ತಾರೆ. ಎಲ್ಲವನ್ನೂ ಮೀರಿದಾಗ ಆಕಸ್ಮಿಕ ಸಂದರ್ಭದಲ್ಲಿ ಹರಕೆ ಕುರಿಗಳ ಬಲಿಯಾಗುತ್ತದೆ. ದೊಡ್ಡವರೂ ಕಂಬಿ ಎಣಿಸಬೇಕಾಗಿ ಬರುತ್ತದೆ.

ರಹಸ್ಯವಾಗಿಯೇ ಉಳಿದ ರೂವಾರಿ!

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾದ ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ, ಪರಿಕರ ಖರೀದಿಯಲ್ಲಿ ಶೇ. 60 ಕ್ಕೆ ಮೀರಿದ ಕಮಿಷನ್ ಹೊಡೆಯುವ ದುಸ್ಸಾಹಸ ನಡೆಯಿತು. ಪ್ರತಿ ಹಾಸಿಗೆಗೆ ದಿನವೊಂದಕ್ಕೆ ರೂ. 800 ಬಾಡಿಗೆ ನೀಡುವ ಕಳ್ಳಲೆಕ್ಕ ಫಿಕ್ಸ್ ಆಗಿತ್ತು. ಒಂದು ಹಾಸಿಗೆ ದರವೇ ಮಾರುಕಟ್ಟೆಯಲ್ಲಿ 2-3 ಸಾವಿರ ಇರುವಾಗ ದಿನವೊಂದಕ್ಕೆ 800 ರೂ.ನೀಡಿದರೆ ತಿಂಗಳೊಂದಕ್ಕೆ 24 ಸಾವಿರ ರೂ. ಆಗಿಬಿಡುತ್ತದೆ. 10100 ಹಾಸಿಗೆ ಎಂದರೇ ಅದು ಕೋಟಿಗಳ ಬಾಬತ್ತು. ಇತರೆ ಪರಿಕರಗಳ ಬಾಡಿಗೆಯೂ ಇದೇ ರೀತಿ ಏರಾಪೇರಿಯಾಗಿ ಬಾಡಿಗೆ ನಿಗದಿಪಡಿಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮತ್ತು ಅದರಲ್ಲಿ ನೂರಾರು ಕೋಟಿ ರೂ. ಲೂಟಿಗೆ ಸ್ಕೆಚ್ಚು ಸಿದ್ಧವಾಗಿತ್ತು.

ಈ ಲೂಟಿಯ ವಿಚಾರ ಹೊರಬೀಳುತ್ತಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೌಹಾರಿಹೋದರು.

ಅಂತಹ ರಿಸ್ಕಿ ಲೂಟಿಗೆ ಅಪ್ಪಣೆ ಕೊಟ್ಟವರ್ಯಾರು ತಿಳಿದಿಲ್ಲವಾದರೂ ಸಭೆಯಲ್ಲಿ ಸಿಎಂ ಉರಿದುಬಿದ್ದು ರೇಗಾಡತೊಡಗಿ ಯಾರು ಈ ಇಂತಹ ಮಹಾತ್ಕಾರ್ಯದ ರೂವಾರಿ ಎಂದು ಪ್ರಶ್ನಿಸಿತೊಡಗಿದರು. ಕೊರೊನಾದಿಂದ ಬೆಂಗಳೂರು ರಕ್ಷಿಸಲು ಖಡ್ಗ ಹಿಡಿದು ನಿಂತ ವಿರಾಗ್ರಣಿ ಅಷ್ಟದಿಕ್ಪಾಲಕ ಸಚಿವರು ಮುಖ ಮುಖ ನೋಡಿಕೊಂಡು ಜೋಲು ಮೊರೆ ಹಾಕಿದರೆ ಹೊರತು ರಾಜ್ಯದ ಕಮಿಷನ್ ದಾಖಲೆ ಮುರಿಯುವ ಮಹಾ ಐಡಿಯಾ ಕೊಟ್ಟ ಮಹಾತ್ಮರ ಹೆಸರು ಹೇಳಲಿಲ್ಲ. ಆದರೆ ತಿನ್ನುವ ಕೈಗಳು ಹೆಚ್ಚಾದಾಗ ಕಮಿಷನ್ ಕಟಾವು ಯಾವ ಮಟ್ಟಕ್ಕೆ ಮುಟ್ಟುತ್ತದೆ ಎಂಬುದಕ್ಕೆ ಈ ಪ್ರಹಸನ ಸಾಕ್ಷಿಯಾಯಿತು.

 

ಅಖಾಡಕ್ಕಿಳಿದ ಕೈಪಡೆ

ಮೇ. 27ರಂದು ಪಿಎಸಿ ತನಿಖೆಗೆ ಸ್ಪೀಕರ್ ತಡೆ ನೀಡಿದ ನಂತರ ಕೊರೊನಾ ಹಗರಣದ ಕಂತೆ ಕಂತೆ ದಾಖಲೆಗಳು ಕಾಂಗ್ರೆಸ್ ಪಡೆ ಕೈಗೆ ತಲುಪಿಬಿಟ್ಟವು. ಪಿಎಸಿ ಮುಂದೆ ಬಂದಿದ್ದ ದೂರಿನಲ್ಲಿದ್ದ ಅಂಕಿ ಅಂಶ ಲೂಟಿ ವಿವರಗಳೇ ಯಕಃಶ್ಚಿತ್ ಎಂಬಂತೆ ಅವ್ಯವಹಾರ, ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊಂಡ ಮಹಾಹಗರಣದ ರೂಪ ತಾಳಿಬಿಟ್ಟಿತು. ಕೋವಿಡ್ ಪರಿಕರ ಖರೀದಿಸಿದ ಕರ್ನಾಟಕ ರಾಜ್ಯ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸಂಸ್ಥೆ (ಕೆ.ಎಸ್.ಡಿ.ಎಲ್.ಡಬ್ಲ್ಯೂ.ಎಸ್.) ನಡೆಸಿರುವ ಅವ್ಯಾಹತ ಅಕ್ರಮ ಬಾಯ್ತೆರೆದುಕೊಂಡಿತು. ಮಾಸ್ಕ್ ನಿಂದ ಪಿಪಿಇ ಕಿಟ್ ವರೆಗೆ, ಸ್ಯಾನಿಟೈಸರ್ ನಿಂದ ವೆಂಟಿಲೇಟರ್ ವರೆಗೆ ಪ್ರತಿ ಪರಿಕರದ ಖರೀದಿಯಲ್ಲಿ ಅಡಿಗಡಿಗೆ ಲೂಟಿ ನಡೆದಿರುವ, ಶೇ.50 ವರೆಗೂ ಕಮಿಷನ್ ಇಟ್ಟುಕೊಂಡು ದೋಚಿರುವ ದಾಖಲೆಗಳೊಂದಿಗೆ ಕಾಂಗ್ರೆಸ್ ನಾಯಕರು ಅಖಾಡಕ್ಕಿಳಿದುಬಿಟ್ಟರು.

ಕೆಲದಿನಗಳ ಕಾಲ ಅರೆಮನಸ್ಸಿನಿಂದ ಆರೋಪ ಮಾಡುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಾಖಲೆಗಳಲ್ಲಿ ವಿಶ್ವಾಸಾರ್ಹತೆ ಕಾಣುತ್ತಲೇ ಸರ್ಕಾರದ ಮಾನ ಹರಾಜಾಕತೊಡಗಿದರು. ಕೊರೊನಾ ಕಾಲದ ಆರಂಭದಿAದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ಮೃದುವಾಗಿಯೇ ಇದ್ದ ಸಿದ್ದರಾಮಯ್ಯ ಯಾವಾಗ ಹಗರಣದಲ್ಲಿ ಸಿಎಂ ಹೊರತಾದ ಬಿಜೆಪಿಯ ದೊಡ್ಡ ದೊಡ್ಡ ಕೈಗಳಿವೆ, ಪಾಲು ಪಡೆಯುವ ಕೈಗಳು ಹೆಚ್ಚಿದಂತೆ ಕಮಿಷನ್ ಪ್ರಮಾಣವೂ ಏರಿಕೆ ಆಗಿ ಸಾಮಾನ್ಯ ನಿಗದಿಗಿಂತ ಎರಡು ಮೂರು ಪಟ್ಟು ಹೆಚ್ಚಿ ಖರೀದಿ ದರಕ್ಕಿಂತ  ಕಮಿಷನ್ ಹೇರಿಕೆ ಅತಿಯಾಗಿದೆ ಎಂಬ ಖಚಿತ ಮಾಹಿತಿ ದೊರೆಯಿತೋ ಆಗ ಗುಟುರು ಹಾಕತೊಡಗಿದರು.

ಹೊರಬಿದ್ದ ದಾಖಲೆಗಳ ಪ್ರಕಾರ ಕೊರೊನಾ ಹಗರಣದ ಲೂಟಿ 2 ಸಾವಿರ ಕೋಟಿ ರೂಪಾಯಿ!

ಅಧಿಕೃತ ಮಾಹಿತಿ ಪ್ರಕಾರ ವಿವಿಧ ಇಲಾಖೆಗಳಲ್ಲಿ 4167 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜತೆಗೆ ಖರೀದಿ ಆದೇಶಗಳನ್ನು ಮಾಡಿ ಹಣ ಪಾವತಿಸಬೇಕಾದ ಮೊತ್ತ, ಕ್ವಾರಂಟೈನ್ ಕೇಂದ್ರಗಳು, ಆಂಬುಲೆನ್ಸ್ ಗಳು, ಪೌಷ್ಟಿಕ ಆಹಾರ, ಪರೀಕ್ಷೆ, ರೋಗ ಪತ್ತೆ… ಹೀಗೆ ಹಲವು ಲೆಕ್ಕ ಮುಚ್ಚಿಡಲಾಗಿದೆ ಎಂಬುದು ಕಾಂಗ್ರೆಸ್ ಆರೋಪ.

ವೆಂಟಿಲೇಟರ್, ಪಿಪಿಇ ಕಿಟ್, ಕಳಪೆ ಮಾಸ್ಕ್, ದುಬಾರಿ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಆಕ್ಸಿಜನ್.. ಹೀಗೆ ಪ್ರತಿ ಖರೀದಿಯಲ್ಲೂ ದೋಖಾ ನಡೆದಿದೆ.

ಆರೋಗ್ಯ ಇಲಾಖೆಯಲ್ಲಿ 700 ಕೋಟಿ, ಬಿಬಿಎಂಪಿ 200 ಕೋ., ಜಿಲ್ಲಾಡಳಿತಗಳ ನಿಧಿ ಮೂಲಕ 742 ಕೋ., ಕಾರ್ಮಿಕ ಇಲಾಖೆಯಲ್ಲಿ 1 ಸಾವಿರ ಕೋ., ಸಮಾಜ ಕಲ್ಯಾಣ ಇಲಾಖೆ 500 ಕೋ., ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆಗೆ 160 ಕೋ., ಕೇಂದ್ರ ಸರ್ಕಾರದಿಂದ ನಡೆಸಿದ ಖರೀದಿಗೆ 500 ಕೋಟಿ… ಹೀಗೆ 4167 ಕೋಟಿ ರೂ. ವೆಚ್ಚ ಮಾಡಿ ಇದರಲ್ಲಿ 2 ಸಾವಿರ ಕೋಟಿ ಹಗರಣ ನಡೆಸಲಾಗಿದೆ. ತಮಿಳುನಾಡು 4.78 ಲಕ್ಷಕ್ಕೆ ಖರೀದಿಸಿದ ವೆಂಟಿಲೇಟರ್ ಅನ್ನು ರಾಜ್ಯದಲ್ಲಿ 5.6 ಲಕ್ಷದಿಂದ 18.20 ಲಕ್ಷ ರೂ. ಕೊಟ್ಟು ಖರೀದಿ ಮಾಡಲಾಗಿದೆ. ಚೀನಾ ಮೂಲದ ಕಂಪನಿಯಿAದ 330 ರೂ. ನ ಪಿಪಿಇ ಕಿಟ್ ಗೆ 2117 ರೂ. ಕೊಟ್ಟು ಖರೀದಿಸಲಾಗಿದೆ.  50 ರೂ. ಮಾಸ್ಕ್ ಗೆ 150 ರೂ., 80 ರೂ. ಸ್ಯಾನಿಟೈಸರ್ ಗೆ 250 ರಿಂದ 600 ರೂ. ರವರೆಗೂ ನೀಡಿ ಖರೀದಿಸಲಾಗಿದೆ ಎಂಬುದು ಕಾಂಗ್ರೆಸ್ ಬಿಡುಗಡೆ ಮಾಡಿರುವ ದಾಖಲೆಗಳ ಸಾರ.

ಆದರೆ ಇದನ್ನು ಸರ್ಕಾರ ಅಲ್ಲಗಳೆದು ಕೋವಿಡ್ ನಿರ್ವಹಣೆಯಲ್ಲಿ ಅವ್ಯವಹಾರವೇ ನಡೆದಿಲ್ಲ ಎನ್ನುತ್ತಿದೆ. ಸಂಪುಟದ ಸಚಿವರು ಸಾಲಿನಲ್ಲಿ ಕುಳಿತು ತಮ್ಮ ಬುದ್ಧಿಮತ್ತೆಯನ್ನೆಲ್ಲ ಬಳಸಿ ಎದೆ ತಟ್ಟಿಕೊಂಡು ನಾವು ಪ್ರಾಮಾಣಿಕರು ಅಂದಿದ್ದಾರೆ. ಆದರೆ ತನಿಖೆ ಮಾತ್ರ ಸಾಧ್ಯವಿಲ್ಲ; ಅಧಿಕಾರದಲ್ಲಿದ್ದಾಗ ನೀವು ಹಣ ಹೊಡೆದಿಲ್ಲವೇ ಎನ್ನುತ್ತ ಹಳೆಯ ವೆಂಟಿಲೇಟರ್ ಖರೀದಿಯೊಂದನ್ನು ಪ್ರಸ್ತಾಪಿಸಿದ್ದಾರೆ. ಯಾವ ಸರ್ಕಾರ ಬಂದರೂ ಕಮಿಷನ್ ಮಾಮೂಲು ಅಲ್ಲವೇ ನಮ್ಮನೇಕೆ ಪ್ರಶ್ನಿಸಿ ಬೊಬ್ಬೆ ಹಾಕುತ್ತೀರಿ ಎಂಬ ಅಸಮಾಧಾನ ಅವರ ಮಾತಿನಲ್ಲಿ ಅಡಗಿರುವುದು ಕಂಡಿದೆ.

ತನಿಖೆ ನಡೆದು ಸತ್ಯ ಹೊರಬರುವುದೋ ಬಿಡುವುದೋ ಅಥವಾ ರಾಜಕೀಯ ಕೆಸರೆರಚಾಟಕ್ಕೆ ಮಾತ್ರ ಸೀಮಿತವಾಗಿ ರಾಜಕೀಯ ಪಕ್ಷಗಳ ಮ್ಯಾಚ್ ಫಿಕ್ಸಿಂಗ್ ನಲ್ಲಿ ಮುಚ್ಚಿಹೋಗುತ್ತದೆಯೋ ತಿಳಿಯದು. ಆದರೆ  ಸೋಂಕು ರೋಗ ಕೊರೊನಾ ಕಾಲದ ಈ ಭ್ರಷ್ಟಾಚಾರ ಕರ್ನಾಟಕದ ಇತಿಹಾಸ ಪುಟದಲ್ಲಿ ಕಪ್ಪು ಬಣ್ಣ ಬಳಿದುಕೊಂಡು ಶಾಶ್ವತವಾಗಿ ಉಳಿಯಲಿದೆ.

 

 

Leave a Reply

Your email address will not be published.