ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು?

ಸಮಾಜಮುಖಿ ಅಕ್ಟೋಬರ್ ಸಂಚಿಕೆಯಲ್ಲಿನ ಮುಖ್ಯಚರ್ಚೆ, ನವೆಂಬರ್ ಸಂಚಿಕೆಯ ಮುಂದುವರೆದ ಚರ್ಚೆಗಳನ್ನು ಓದಿದ ಮೇಲೆ ಚರ್ಚೆಗೆ ನನ್ನ ಅಭಿಪ್ರಾಯ ಸೇರಿಸಲೇಬೇಕಿನ್ನಿಸಿದ್ದರಿಂದ ಈ ಲೇಖನ.

– ಸಂಜೀವ ಜಿ.ಗದಗ (ರಾಜು)

ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳನ್ನು ಅರ್ಥಮಾಡಿಕೊಳ್ಳುವ ಮುನ್ನ ಈ ಜೋಕ್ ಓದಿ:

ಒಬ್ಬಾತ ಡಾಕ್ಟರ ಬಳಿಗೆ ಹೋದ. ಅವನ ತೊಂದರೆಯೆಂದರೆ, ಮೈತುಂಬಾ ನೋವು. ತೋರುಬೆರಳಿಂದ ವೈದ್ಯರಿಗೆ ತೋರಿಸುತ್ತ ಹಣೆ ಒತ್ತಿಕೊಂಡು ಇಲ್ಲಿ ನೋಯುತ್ತೆ, ಕುತ್ತಿಗೆ ಒತ್ತಿಕೊಂಡು ಕುತ್ತಿಗೆ ನೋಯುತ್ತೆ, ಎದೆ ನೋಯುತ್ತೆ, ಹೊಟ್ಟೆ ನೋಯುತ್ತೆ, ಕಾಲು ನೋಯುತ್ತೆ ಕೊನೆಗೆ ಪಾದವನ್ನೂ ಒತ್ತಿಕೊಂಡು ಹಾ! ಇಲ್ಲಿಯೂ ನೋಯುತ್ತೆ ಅಂದ… ಆತಂಕದಿಂದ.

ವೈದ್ಯರು ಪರೀಕ್ಷಿಸಿ, ನಿಮಗೇನೂ ಆಗಿಲ್ಲ. ನಿಮ್ಮ ತೋರುಬೆರಳಿನ ಎಲುಬಿಗೆ ಪೆಟ್ಟಾಗಿದೆ. ತೋರುಬೆರಳಿಗೆ ಚಿಕಿತ್ಸೆ ಬೇಕಲ್ಲದೆ, ಇಡೀ ದೇಹಕ್ಕಲ್ಲ ಎಂದರು!

ಇದೇ ಜೋಕು, ಈ ಚರ್ಚೆಗೆ 100% ಅನ್ವಯ ಆಗುತ್ತದೆ. ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳಿಗೆ ಕಾರಣವೇ ಬೇರೆ, ನಾವು ಚರ್ಚಿಸುತ್ತಿರುವ ವಿಷಯಗಳೇ ಬೇರೆ ಎಂದು ನನ್ನ ಅಭಿಪ್ರಾಯ.

ಮೊದಲು ಕರ್ನಾಟಕದಲ್ಲಿನ ಉದ್ಯಮಶೀಲತೆಗೆ ಸಂಬಂಧಿಸಿದ ಕೆಲ ಅಂಶಗಳನ್ನು ಅವಲೋಕಿಸೋಣ.

1. ‘ರಯೀಸ್’ ಹಿಂದಿ ಚಲನಚಿತ್ರದಲ್ಲಿ ಶಾರೂಖ್ ಖಾನ್ ಒಂದು ಡೈಲಾಗ್ ಹೇಳುತ್ತಾನೆ (ಆ ಚಿತ್ರದಲ್ಲಿ ಆತ ಗುಜರಾತ್ ನಿವಾಸಿ). ‘‘ಗುಜರಾತ್ ಕೀ ಹವಾ ಮೆ ವ್ಯಾಪಾರ್ ಹೈ ಸಾಹೀಬ್…’’ ನಮ್ಮ ಕರ್ನಾಟಕದ ಬಗ್ಗೆ ಹೇಳುವುದಾದರೆ ‘‘ಕರ್ನಾಟಕದ ಕಣಕಣದಲ್ಲಿ ಒಕ್ಕಲುತನ ಇದೆ’’

(ಭೌಗೋಳಿಕ ಪ್ರದೇಶದ 64.6% ಅಂದರೆ 1,23,100 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ಒಟ್ಟು ಜನಸಂಖ್ಯೆಯ 23.6% ಜನ ರೈತರು 25.7% ಜನ ಕೃಷಿಕಾರ್ಮಿಕರೂ ಇದ್ದು ಇದು ಒಟ್ಟು ಅಂದಾಜು 50% ಮಿಕ್ಕುತ್ತದೆ. ಇದು 2011ರ ಜನಗಣತಿಯ ಅಂಕಿ ಅಂಶ)

ಅಲ್ಲಿಗೆ ನಮ್ಮಲ್ಲಿ ಒಕ್ಕಲುತನ ಇದೆ; ವ್ಯಾಪಾರ, ಉದ್ಯಮಶೀಲತೆ ಇಲ್ಲ. ಒಕ್ಕಲುತನದ ಜನರಲ್ಲಿ ಮುಗ್ಧತೆ ಜಾಸ್ತಿ! ಇದು ಉದ್ಯಮಶೀಲತೆಯಲ್ಲಿನ ಮುಖ್ಯ ತೊಡಕು.

ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವವರು. ಈಗಲೂ ಬಹಳಷ್ಟು ಮನೆಗಳಲ್ಲಿ ಹಿರಿಯರು ಮಕ್ಕಳಿಗೆ ಸ್ವಉದ್ಯೋಗದ ವಿಷಯದಲ್ಲಿ ಪೂತ್ಕರಿಸುವುದೇನು ಗೋತ್ತಾ? ‘ಎಲ್ಲಿಯ ವ್ಯವಹಾರ, ಉದ್ಯಮ?

2. ನಮ್ಮ ಜನರಲ್ಲಿ ಅಲ್ಪತೃಪ್ತಿ ಸ್ವಭಾವ ಜಾಸ್ತಿ. ಮಹತ್ವಾಕಾಂಕ್ಷೆ ಕಡಿಮೆ. ಇದ್ದುದರಲ್ಲಿಯೇ ಊಟಮಾಡಿ ಎಲೆಅಡಿಕೆ ಹಾಕಿಕೊಂಡು, ಎಲ್ಲಾ ದೇವರ ಆಟ, ಅವನ ಮರ್ಜಿ ಎಂದು ಗುಡಿ-ಗುಂಡಾರಗಳಲ್ಲಿ ಕುಳಿತು ಹರಟೆ ಹೊಡೆಯುತ್ತ ಕಾಲಕ್ಷೇಪ ಮಾಡುವವರು. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವವರು. ಈಗಲೂ ಬಹಳಷ್ಟು ಮನೆಗಳಲ್ಲಿ ಹಿರಿಯರು ಮಕ್ಕಳಿಗೆ ಸ್ವಉದ್ಯೋಗದ ವಿಷಯದಲ್ಲಿ ಪೂತ್ಕರಿಸುವುದೇನು ಗೋತ್ತಾ? ‘ಎಲ್ಲಿಯ ವ್ಯವಹಾರ, ಉದ್ಯಮ? ಲುಕ್ಸಾನು ಆದರೆ ಮನೆಮಠ ಮಾರಬೇಕಾದಿತು. ಅವರ ಪೆನ್ನು, ಹಾಳೆ, ಫ್ಯಾನ್ ಕೆಳಗೆ ಕುರ್ಚಿ ಮೇಲೆ ಕುಂತು ಬರೆದು ಬರಬಾರದೆ? ಯಾಕೆ ಇಲ್ಲದ ಉಸಾಬರಿ?’ ಇದನ್ನು ಕೇಳಿದ ಮಕ್ಕಳು (ಮಗ/ಮಗಳು) ಎಲ್ಲಿಯಾದರು ತಿಂಗಳಿಗೆ 5-6 ಸಾವಿರ ಸಂಬಳ ಸಿಕ್ಕರೂ ಅವಕಾಶಕ್ಕೆ ಕೈಕೊಡುತ್ತಾರೆ. ಆಸೆ ದುಃಖಕ್ಕೆ ಕಾರಣ ಎಂಬುದು ಅವರ ವಾದ. ಎಲ್ಲಿ ಬರಬೇಕು ಸ್ವಾಮಿ ಉದ್ಯಮ?

3. ಇನ್ನು ಶಿಕ್ಷಣ… ನಮ್ಮ ಯಾವುದೇ ಶಿಕ್ಷಣ ಪದ್ಧತಿಯಲ್ಲಿ (ಕಲೆ, ವಾಣಿಜ್ಯ, ವಿಜ್ಞಾನ, ವೈದ್ಯ, ಔಷಧಿ ಇತ್ಯಾದಿ) ಉದ್ಯಮಶೀಲತೆಗೆ ಜಾಗವೇ ಇಲ್ಲ. ಬಿಕಾಂ, ಬಿ.ಬಿ.ಎ, ಎಂ.ಬಿ.ಎ ಇತ್ಯಾದಿ ಪ್ರಮುಖ ವ್ಯವಹಾರ ಅಧ್ಯಯನಗಳ ಸಿಲೇಬಸ್ ತೆಗೆದುನೋಡಿ. ಅಲ್ಲಿ ಉದ್ಯಮಶೀಲತಾ ಅಭಿವೃದ್ಧಿಗೆ 10% ಕೂಡಾ ಜಾಗವಿಲ್ಲ. ಅಲ್ಲಿನ ಬಹಳಷ್ಟು ಪ್ರಾಧ್ಯಾಪಕರು ಕೇವಲ ಎಂಬಿಎ ಮಾಡಿದವರಿದ್ದು, ಹೆಚ್ಚುಕಡಿಮೆ ಯಾರೂ ಉದ್ದಿಮೆಗಳಲ್ಲಿ ಕೆಲಸ ಮಾಡಿಲ್ಲ. ಅಂದರೆ ‘ಈಜು ಗೊತ್ತಿಲ್ಲದವನು, ಕ್ಲಾಸ್‍ರೂಂನಲ್ಲಿ ಈಜು ಕಲಿಸುತ್ತಿದ್ದಾನೆ!’

ಅಲ್ಲಿಂದ ಪಾಸಾಗಿ ಬರುವವರ ಗುಣಮಟ್ಟವೋ.. ಹಾರಿಬಲ್. ನೆಟ್ಟಗೆ ಅರ್ಜಿ ಬರೆಯುವುದೂ ಗೊತ್ತಿರುವುದಿಲ್ಲ. ಜೆರಾಕ್ಸ್ ಅಂಗಡಿಯಲ್ಲಿ 2ರೂ ಕೊಟ್ಟು, ಅರ್ಜಿ ನಮೂನೆ ಖರೀದಿಸಿ, ಅಭ್ಯರ್ಥಿಯ ಸಹಿ ಎಂದು ಇದ್ದಲ್ಲಿ, ಮೇಲೆ ಸಹಿ ಮಾಡಬೇಕೋ, ಕೆಳಗೆ ಮಾಡಬೇಕೋ ಎಂಬುವುದರ ಪರಿಜ್ಞಾನವೂ ಅವರಿಗಿರುವುದಿಲ್ಲ (ನನ್ನ ಬಳಿ ದಾಖಲೆಗಳಿವೆ). ಇಂತಹವರಿಂದ ಉದ್ಯಮಶೀಲತೆ ಅಭಿವೃದ್ಧಿ ಎಲ್ಲಿ ಬಂತು? ಅಲ್ಲಿಗೆ ತೊಡಕು ಶಿಕ್ಷಣದಲ್ಲೂ ಇದೆ.

4. ಇನ್ನು ಸರ್ಕಾರ: ಒಬ್ಬ ಭಾವೀ ಉದ್ಯಮಿ ಅಲಭ್ಯ ಕೈಗಾರಿಕೆ ಜಮೀನು, ಎಗ್ಗಿಲ್ಲದ ಭ್ರಷ್ಟಾಚಾರ, ಸರ್ಕಾರಗಳ ನಿರ್ಲಕ್ಷ್ಯ, ಅನುಮತಿ, ನಿರಾಕ್ಷೇಪಣಾ ಪತ್ರದ ತೊಂದರೆ, ಎನ್ನುತ್ತ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾನೆ. ಎಂದರೆ ಬೋಗಸ್ ಕಾರಣ ಕೊಡುತ್ತಿದ್ದಾನೆಂದೇ ಅರ್ಥ. ಅವನಿಗೆ ನೆಪ ಬೇಕು. ನಿಜ ಹೇಳಬೇಕೆಂದರೆ, ಇಂದು ಸರ್ಕಾರದ ಕೈಗಾರಿಕಾ ಇಲಾಖೆಯ ಯಾವುದಾದರೂ ಕಛೇರಿಗೆ ಪ್ರಸ್ತಾವದೊಂದಿಗೆ ಕಾಲಿಟ್ಟರೆ, ಅಲ್ಲಿನ ಸಿಬ್ಬಂದಿ ನಿಮ್ಮನ್ನು ತಲೆಮೇಲಿಟ್ಟುಕೊಂಡು ಕುಣಿಯುತ್ತಾರೆ. ಯಾಕೆ ಗೊತ್ತಾ? ನಿಮ್ಮ ಚಟುವಟಿಕೆಯಿಂದ ತಾನೇ ಅವರ ನೌಕರಿ ಉಳಿಯೋದು?

ಉದ್ಯಮಶೀಲತೆ ಅನ್ನೋದು ಸಾಮಾನ್ಯ ಅಲ್ಲ; ಅದು ವಿಶೇಷವಾದದ್ದು, ವಿಶಿಷ್ಟವಾದದ್ದು. ಆ ದಾರಿ ಸುಲಭವಲ್ಲ. ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಅವುಗಳನ್ನು ಯಶಸ್ವಿಯಾಗಿ ದಾಟಿ, ನೆಲದ ಕಾನೂನುಗಳನ್ನು ಪಾಲಿಸಿದರಷ್ಟೇ ಆತ ಉದ್ದಿಮೆದಾರನಾಗಲು ಸಾಧ್ಯ. ಕೃಷಿಯೇತರ ಭೂಮಿ, ಅನುಮತಿ, ಪರವಾನಗಿ, ನಿರಾಕ್ಷೇಪಣಾ ಪತ್ರ ಇವೆಲ್ಲ ದೇಶದ ಕಾನೂನುಗಳು. ಅವೇ ತೊಡಕುಗಳೆಂದರೆ…?

ಮೊಬೈಲ್ ಈಗ ಇಂತಹ ಕಂಪನಿಗಳನ್ನು ಕಬಳಿಸಿದೆ. ಐಸ್‍ಕ್ಯಾಂಡಿ ಮಾರುವವನ ದೂರಾಲೋಚನೆ ಈ ಕಂಪನಿಗಳಿಗಿದ್ದಿದ್ದರೆ, ಈ ಪರಿಸ್ಥಿತಿ ಅವುಗಳಿಗೆ ಬರುತ್ತಿರಲಿಲ್ಲ.

‘ಬೆಂಗಳೂರಿನಲ್ಲಿ ಜಾಗೆ ಬೇಕು ಎಂದರೆ ಧಾರವಾಡ, ರಾಯಚೂರಿಗೆ ಹೋಗಿ’ ಎನ್ನುತ್ತಾರೆ ಎನ್ನುವುದು ಸರ್ಕಾರದ ಮೇಲಿನ ದೊಡ್ಡ ಆರೋಪ. ಹೀಗೆ ದೂರುವವರಿಗೆ ನಾನು ಕೇಳುವುದಿಷ್ಟೇ, ‘ಒಂದು ಗ್ಲಾಸ್‍ನಲ್ಲಿ ಜಾಗ ಇರುವಷ್ಟು ನೀರು ತುಂಬಬಹುದು, ಅದಕ್ಕಿಂತ ಹೆಚ್ಚು ತುಂಬಲು ಸಾಧ್ಯವೇ?’ ಬೆಂಗಳೂರು ತುಂಬಿರುವುದರಿಂದ ಬೆಂಗಳೂರಿನಲ್ಲಿ ಸರ್ಕಾರ ಜಾಗೆ ಎಲ್ಲಿಂದ ಕೊಡಬೇಕು?

ಉದ್ದಿಮೆ ಸ್ಥಾಪನೆಗೆ ಯೋಜನಾ ವರದಿಯೇ ತಳಪಾಯ. ನಾನು ಗಮನಿಸಿದಂತೆ ಬಹಳಷ್ಟು ಜನ ಒಬ್ಬ ಅಕೌಂಟಂಟ್‍ಗೆ ರೂ.2000-20,000 ತೆತ್ತು ರೆಡಿಮೇಡ್ ಯೋಜನಾವರದಿ ತರುವವರೇ! ಕೊನೇಪಕ್ಷ ಅದನ್ನು ತಿಳಿದುಕೊಳ್ಳುವ ಗೋಜಿಗೆ ಖಂಡಿತಾ ಹೊಗುವುದಿಲ್ಲ್ಲ. ಅವರ ಫೋಕಸ್ ಬರೀ ‘ಸಾಲ’ ಯಾವಾಗ ಬರುತ್ತೆ ಎಂಬುದರ ಮೇಲೆ. ಹೇಗೋ ಸಾಲ ಸಿಕ್ಕವರಲ್ಲಿ ಹಲವರು ಖಾಸಗಿ ಖರ್ಚಿಗೋ, ಮನೆ ಕಟ್ಟಲೋ ಬಳಸುವುದು ಹೆಚ್ಚು. ಅಸಲು-ಬಡ್ಡಿಗಳ ಲೆಕ್ಕಾಚಾರವೇ ಗೊತ್ತಿಲ್ಲ. ಇಲ್ಲಿ ಉದ್ಯಮಶೀಲತೆಯಲ್ಲಿ ತೊಡಕೋ, ತೊಡಕಿನಲ್ಲಿ ಉದ್ಯಮಶೀಲತೆಯೋ? ಕಷ್ಟ ಕಷ್ಟ.

ಅಕ್ಟೋಬರ್ ಸಂಚಿಕೆಯಲ್ಲಿ ಓಉಇಈ,NGEF, ITI, HMT, King Fisher,Decan Aviation, Coffee dayಇತ್ಯಾದಿ ಮುಳುಗಿದ ಕಂಪನಿಗಳ ಪ್ರಸ್ತಾವವಿದೆ. ನಿಜ ಸ್ವಾಮಿ, ಕಾಲಕ್ಕೆ ತಕ್ಕಂತೆ ಉದ್ದಿಮೆಯ ಸ್ವರೂಪ ಬದಲಾಗದಿದ್ದರೆ ಅನಾಹುತ ಖಂಡಿತ.

ಬೇಸಿಗೆಯಲ್ಲಿ ಐಸ್‍ಕ್ಯಾಂಡಿ ಮಾರುವವನೊಬ್ಬ, ಮಳೆಗಾಲದಲ್ಲಿ/ಚಳಿಗಾಲದಲ್ಲಿ ಶೇಂಗಾ, ಕಡಲೆ, ಗೋವಿನ ಜೋಳದ ತೆನೆ ಮಾರುತ್ತಾನೆ. ಮೇಲೆ ಉಲ್ಲೇಖಿಸಿದ ಈಗ ಮುಚ್ಚಿದ ಗಡಿಯಾರ, ವಾಚ್, ಕ್ಯಾಮೆರಾ ಕಂಪನಿಗಳು, ಅಂಚೆ ಇಲಾಖೆ ಮೊಬೈಲ್ ಬಂದಾಗಲೇ ಎಚ್ಚರವಾಗಬೇಕಿತ್ತು. ಮೊಬೈಲ್ ಈಗ ಇಂತಹ ಕಂಪನಿಗಳನ್ನು ಕಬಳಿಸಿದೆ. ಐಸ್‍ಕ್ಯಾಂಡಿ ಮಾರುವವನ ದೂರಾಲೋಚನೆ ಈ ಕಂಪನಿಗಳಿಗಿದ್ದಿದ್ದರೆ, ಈ ಪರಿಸ್ಥಿತಿ ಅವುಗಳಿಗೆ ಬರುತ್ತಿರಲಿಲ್ಲ.

ಸರ್ಕಾರ ಏನು ಮಾಡಬೇಕು? ನೀವೇ ಹೇಳಿ. ಜನರಲ್ಲಿರುವ ದುಡಿಮೆಶೀಲತೆಯ ಕೊರತೆ, ದೊಡ್ಡತನದ ಉಡಾಫೆಯ ನಡತೆ, ಅಂಕಿಗಳ ಲೆಕ್ಕಾಚಾರದ ವಿನಾಕಾರಣ ಭಯ, ತಿಳಿಯದಿರುವುದು-ತಿಳಿದವರಿಂದ ಕೇಳಲು ಸಂಕೋಚ ಇವೆಲ್ಲ ಉದ್ಯಮಶೀಲತೆಯ ತೊಡಕುಗಳು. ಉದ್ಯಮಶೀಲತೆಗೆ ಅಸಲು ತೊಡಕುಗಳೇ ಇಲ್ಲ; ತೊಡಕು ಎಂದುಕೊಳ್ಳುವದೆಲ್ಲವನ್ನೂ ಮೊದಲೇ ಯೋಜನಾ ವರದಿಯಲ್ಲಿ ವಿಶ್ಲೇಷಿಸಿದ್ದರೆ ಆ ತೊಡಕು ಸಾಮಾನ್ಯ ಆಗಿಬಿಡುತ್ತದೆ, ಅನಿರೀಕ್ಷತ ಎನ್ನಿಸುವುದಿಲ್ಲ.

ಉದ್ದಿಮೆ ಎಂದರೆ ಕೇವಲ ಎಚ್.ಎ.ಎಲ್., ಇನ್‍ಫೋಸಿಸ್, ಸ್ನಾಪಡೀಲ್, ರಿಲಾಯನ್ಸ್, ಟಾಟಾ ಬಿರ್ಲಾ ಎಂದು ಯುವಜನತೆಗೆ ತಲೆಯಲ್ಲಿ ತುಂಬಬಾರದು. ಒಂದು ಚಹಾದಂಗಡಿ, ಝರಾಕ್ಸ್ ಅಂಗಡಿ, ಆಟೋ ನಡೆಸುವುದು ಎಲ್ಲವೂ ಉದ್ಯಮಗಳೇ. ಕಾಂಪ್ಲೆಕ್ಸ್‍ಗಳಲ್ಲಿ ಆಫೀಸುಗಳಿಗೆ ಚಹಾ ಮಾರುವ ಹುಡುಗ ಕಾಲಾಂತರದಲ್ಲಿ ಹೋಟಲ್ ಮಾಲೀಕನಾಗಿದ್ದು, ಝರಾಕ್ಸ್ ಅಂಗಡಿಯವ ಹತ್ತಾರು ಹುಡುಗರನ್ನು ಕೆಲಸಕ್ಕಿಟ್ಟುಕೊಂಡು ಟೈಪಿಂಗ್, ಝರಾಕ್ಸ್, ಆನ್‍ಲೈನ್ ಅರ್ಜಿ ಇತ್ಯಾದಿ ಸೇವೆ ಸಲ್ಲಿಸುತ್ತಿದ್ದು, ಒಬ್ಬ ಸಾಧಾರಣ ಹೇರ್ ಕಟಿಂಗ್ ಮಾಡುವವ ಬ್ಯೂಟಿ ಸಲೂನ್ ಮಾಲೀಕನಾಗಿದ್ದು, ಒಂದು ಆಟೋ ಪ್ರಾರಂಭಿಸಿ ಹತ್ತಾರು ಆಟೋ ಮಾಡಿ, ಟ್ಯಾಕ್ಸಿ ಇಟ್ಟು ಟೂರಿಸ್ಟ್ ಕಾರ್ಪೋರೇಶನ್ ಮಾಲೀಕರಾಗಿದ್ದು, ಒಂದು ಸೆಕ್ಯುರಿಟಿ ಏಜೆನ್ಸಿ ಚಾಲೂ ಮಾಡಿ ಹತ್ತಾರು ಕೋಟಿ ಮಾಲೀಕರಾದ ಉದಾಹರಣೆಗಳು ನನ್ನ ಮುಂದಿವೆ.

ಈ ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಇಬ್ಬರ ವಾದವನ್ನು ನಾನು ಬಿಲ್‍ಕುಲ್ ಒಪ್ಪುವುದಿಲ್ಲ. ಒಂದು ಕಡೆ ರವೀಶ್ ಹೆಗಡೆಯವರು, ಖಾಸಗಿ ವಲಯದವರು ತೆರಿಗೆ ವಂಚನೆ ಮಾಡುವವರು, ಕಳ್ಳಸಾಗಾಣಿಕೆ ಮಾಡುವವರು ಹಾಗೂ ಸಹಕಾರಿ ಸಂಸ್ಥೆಗಳು 100% ಸಾಚಾ ಎನ್ನುತ್ತಾರೆ. ನಾನಿದನ್ನು ಖಂಡಿಸುತ್ತೇನೆ. ಸಹಕಾರಿ ಸಂಘಗಳು ಕಾನೂನುಬಾಹಿರವಾಗಿ ನಡೆದು ಕೊನೆಯಾದ ನೂರಾರು ಸಂಸ್ಥೆಗಳ ಹೆಸರು ಹೇಳಬಲ್ಲೆ. ವಿಷಯಾಂತರವಾಗುತ್ತದೆ ಎಂದು ಅದರ ಬಗ್ಗೆ ಮಾತನಾಡುವುದಿಲ್ಲ.

ನಾನು ಹೇಳುವುದಿಷ್ಟೆ- ಉದ್ಯಮಶೀಲರಾಗಿ. ತೊಡಕುಗಳು ಎನ್ನುವುದೆಲ್ಲ ನೆಪ ಅಷ್ಟೇ.

*ಲೇಖಕರು, ಉದ್ಯಮಶೀಲತಾ ಅಭಿವೃದ್ಧಿ ಸಂಪನ್ಮೂಲ ವ್ಯಕ್ತಿಗಳು, ಹುಬ್ಬಳ್ಳಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯ & ಆಸ್ಪತ್ರೆಯ ಹಾಲಿ ಆಡಳಿತಾಧಿಕರಿಗಳು, ‘ಲೆಕ್ಕಾ ಬಿಟ್ಟಾ ಲೋಕಾ ಬಿಟ್ಟಾ’ ಎಂಬ ಪುಸ್ತಕ ಬರೆದಿದ್ದಾರೆ.

One Response to " ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು?

-ಸಂಜೀವ ಜಿ.ಗದಗ (ರಾಜು)

"

Leave a Reply

Your email address will not be published.