ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಅಘೋಷಿತ ‘ಮೈತ್ರಿ ಸರ್ಕಾರ!’

ಕೊರೊನಾ ಕಾಲದಲ್ಲಿ ಕರ್ನಾಟಕ ರಾಜ್ಯದ ಆಡಳಿತ ನಡೆಸುತ್ತಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರವಲ್ಲ. ಬದಲಿಗೆ ವಿರೋಧ ಪಕ್ಷಗಳ ನಾಯಕರು, ಆಪರೇಷನ್ ಕಮಲದಿಂದ ಸಚಿವರಾದವರನ್ನು ಒಳಗೊಂಡ ಯಡಿಯೂರಪ್ಪನವರ ನೇತೃತ್ವದ ‘ಒಳಮೈತ್ರಿ ಸರ್ಕಾರ!’.

ಕೊರೊನಾ ಕಾಲದ ಕರ್ನಾಟಕ ರಾಜ್ಯ ರಾಜಕಾರಣ ವಿಚಿತ್ರವೂ, ವಿಪರ್ಯಾಸಕರವೂ ಆದ ಹಾದಿಯಲ್ಲಿ ಸಾಗುತ್ತ ಕುತೂಹಲದ ಅಲೆ ಎಬ್ಬಿಸಿದೆ.

ಸೂಕ್ಷ್ಮವಾಗಿ ಗಮನಿಸಿ. ಕೋವಿಡ್-19 ವೈರಸ್ ಸೋಂಕು ತಡೆಗೆ ಯುಗಾದಿ ಮುನ್ನಾ ದಿನ ದೇಶದಲ್ಲಿ ಲಾಕ್ ಡೌನ್ ಜಾರಿಯಾಯಿತು. ರಾಜ್ಯವೂ ಸ್ತಬ್ಧವಾಯಿತು. ರಾಜಕೀಯ ಪಕ್ಷಗಳು ಗರ ಬಡಿದಂತೆ ಮೌನಕ್ಕೆ ಶರಣಾದವು. ವಯಸ್ಸಿನ ಅಂತರವಿಲ್ಲದೆ ಹಿರಿ-ಕಿರಿ ರಾಜಕಾರಣಿಗಳು, ಅದರಲ್ಲೂ ರಾಜ್ಯ ಸಂಪುಟದ ಮುಕ್ಕಾಲು ಪಾಲು ಮಂತ್ರಿಗಳು ವೈರಸ್ ಭಯದಲ್ಲಿ ಆಳೆತ್ತರದ ತಂತಿಬೇಲಿಯ ಫಾರ್ಮ್ ಹೌಸ್‌ಗಳು, ಬಂಗಲೆಗಳ ಬಿಲ ಸೇರಿಕೊಂಡರು.

ಆರೂವರೆ ಕೋಟಿ ಜನರ ಆರೋಗ್ಯ ವ್ಯವಸ್ಥೆಯ ಲಗಾಮು ಹಿಡಿದಿದ್ದ ಸಚಿವರ ನಡುವೆ ಪ್ರಚಾರಕ್ಕಾಗಿ ಮುಸುಕಿನ ಗುದ್ದಾಟ ನಡೆದು ಹಾದಿ ಬೀದಿ ರಂಪವಾಗುವ ಹಂತ ಮುಟ್ಟಿತು. ವೈರಸ್ ಹರಡುವಿಕೆ, ಅದರ ಪ್ರಾಥಮಿಕ ವರ್ತನೆಯ ಬಗ್ಗೆ ಯಾರೊಬ್ಬರಿಗೂ ಲವಲೇಶದ ಅರಿವಿರದ ಸಮಯವದು. ಮದ್ದಿಲ್ಲದ ಸಾಂಕ್ರಾಮಿಕ ಮಹಾಮಾರಿ ವಿರುದ್ಧ ಸೆಣಸಾಡಿದ ಅನುಭವವಿಲ್ಲದ ಆರೋಗ್ಯ ಇಲಾಖೆ ವಿಚಲಿತವಾಯಿತು. ನಿರ್ದೇಶನ ಜಾರಿ ಮಾಡಬೇಕಿದ್ದ ಸರ್ಕಾರದ ಆಯಕಟ್ಟಿನ ಜಾಗದಲ್ಲಿದ್ದ ಜನ ಪ್ರತಿಷ್ಠೆಗೆ ಬಿದ್ದು ಕಚ್ಚಾಡತೊಡಗಿದ್ದರು. ಮತ್ತೊಂದು ಕಡೆ ಲಾಕ್‌ಡೌನ್ ಬೀಗ ಬಿದ್ದ ಕೂಡಲೇ ಜನರ ಅಸಹಾಯಕತೆಯನ್ನು ಬಳಸಿ ಅವರ ಕಣ್ಣಲ್ಲಿ ಅಪದ್ಬಾಂಧವರಾಗಲು ಕೆಲವರು ಕ್ಷಿಪ್ರ ಗತಿಯಲ್ಲಿ ಅಖಾಡಕ್ಕಿಳಿದರು. ಮನೆ ಮನೆಗೆ ಉಚಿತ ಆಹಾರ ಸಾಮಗ್ರಿ ವಿತರಿಸುತ್ತ ಜನರ ಮನದಲ್ಲಿ ದೀರ್ಘಕಾಲ ಮಾಸದ ಋಣಭಾರದ ಮುದ್ರೆಯುತ್ತಲು ಸಂಘಟನೆಯೊಂದು ಮೆತ್ತಗೆ ಕಾರ್ಯಪ್ರವೃತ್ತವಾಯಿತು. ಕೆಲ ದಿನ ಎಲ್ಲವೂ ಅಯೋಮಯ, ಗೊಂದಲ.

ಸರ್ಕಾರ, ಆಡಳಿತ ವ್ಯವಸ್ಥೆ, ತುರ್ತು ಪರಿಸ್ಥಿತಿ ಸನ್ನಿವೇಶ ನಿರ್ವಹಿಸಿ ಗೆಲ್ಲುವ ಸವಾಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿತ್ತು. ಅವರೇ ದಾರಿ ತೋರಬೇಕಿತ್ತು.  ಕೊರೊನಾ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧಿಕಾರ ಕಸಿದೇ ತೀರೀತು ಅಂದುಕೊಂಡ ಪಕ್ಷದೊಳಗಿನ ವಿರೋಧಿಗಳು ಮಸೆದ ಕತ್ತಿಗಳನ್ನು ಹುಡುಕತೊಡಗಿದರು.

ಬಿಎಸ್‌ವೈ ಪೀಠಾರೋಹಣ ನಡೆದಾಗಿನಿಂದಲೂ ದೆಹಲಿಯಲ್ಲಿ ತಮಗೆ ಸಿಕ್ಕ ಮನೆಯಲ್ಲಿ ಅ’ಸಂತೋಷ’ದಿಂದಲೇ ಶತಪಥ ಹಾಕುತ್ತ ಸಿಎಂ ಪದಚ್ಯುತಗೊಳಿಸಲು ತಮ್ಮದೇ ಆದ ಗುಂಪು ರಚನೆಯಲ್ಲಿ ತೊಡಗಿರುವ ‘ಸಂಘಟನಾ’ ನಿಪುಣ ನಾಯಕರೊಬ್ಬರು ನಿರಂತರ ಸಂದೇಶಗಳನ್ನು ತಮ್ಮ ಪಡೆಗೆ ರವಾನಿಸತೊಡಗಿದರು. ಅಸಹಕಾರ ಆರಂಭಿಸುವಂತೆ, ಕೊರೊನಾ ನಿರ್ವಹಣೆಯಲ್ಲಿ ಪರಿಣಾಮಕಾರಿ ಫಲಿತಾಂಶ ಬರದಂತೆ ತಡೆಯುವ ಮೂಲಕ ಆದರ ಸಂಪೂರ್ಣ ವೈಫಲ್ಯ ಮುಖ್ಯಮಂತ್ರಿ ತಲೆಗೆ ಕಟ್ಟುವ ಕಾರ್ಯಕ್ಕೆ ವೇದಿಕೆ ಸಿದ್ದಪಡಿಸುವಂತೆ ಗುಪ್ತ ಸೂಚನೆಗಳು ಜಾರಿಯಾದವು.

ಕೊರೊನಾ ಲಾಕ್ ಡೌನ್ ಮುಗಿಯುವುದೋ ಬಿಡುವುದೋ ಯಡಿಯೂರಪ್ಪ ಮಾತ್ರ ಈ ಕಾಲದೊಳಗೆ ಪಟ್ಟ ಕಳೆದುಕೊಂಡು ಮನೆ ಸೇರಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲಿ ಖಾಲಿಯಾಗುವ ಪಟ್ಟಕ್ಕೆ 2001ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದ ಮಾದರಿಯಲ್ಲಿಯೇ ನಮ್ಮ ನಾಯಕರೂ ಹೈಕಮಾಂಡ್ ಅಂಕಿತದೊಂದಿಗೆ ಪ್ರತಿಷ್ಟಾಪನೆಯಾಗಬೇಕು ಎಂಬ ಮಹಾದಾಸೆಯೊಂದಿಗೆ ಸಂಘಟನಾ ಚತುರ ರಾಷ್ಟಿçÃಯ ಮುಖಂಡರ ಆಪ್ತರು ರಹಸ್ಯ ವ್ಯೂಹ ರಚಿಸತೊಡಗಿದರು.

ಆದರೆ ಆದದ್ದೇ ಬೇರೆ!

ಷಡ್ಯಂತ್ರದ ಸುಳಿವರಿತ ಛಲದಂಕಮಲ್ಲ ಯಡಿಯೂರಪ್ಪ ಹೊಸ ರಾಜಕೀಯ ಆಟವನ್ನೇ ಕಟ್ಟಿ ನಿಲ್ಲಿಸಿದರು. ಕೊರೊನಾ ಗೊಂದಲಗಳಿಗೆ ತೆರೆ ಎಳೆಯಲು ಇಳಿವಯಸ್ಸಿನ ಮಿತಿಯನ್ನು ದಾಟಿದರಷ್ಟೇ ಅಲ್ಲ. ಹೊಸ ಶಕ್ತಿಸಂಚಯವಾದಂತೆ ಬಿಸಿರಕ್ತದ ಯುವಕನಂತೆ ಅಡ್ಡಾಡುತ್ತ ಇಡೀ ಕೊರೊನಾ ನಿರ್ವಹಣೆ ಹೊಣೆಯನ್ನೇ ಎತ್ತಿ ಹೆಗಲಿಗೇರಿಸಿಕೊಂಡುಬಿಟ್ಟರು. ಆಪ್ತ, ನಂಬುಗೆಯ ಬೆರಳೆಣಿಕೆ ಸಚಿವರ ಸಾಥ್ ಜೊತೆಗೆ ನೇರ ತಾವೇ ಸಮರಕ್ಕಿಳಿದುಬಿಟ್ಟರು. ತಮ್ಮದೇ ರಾಜಕೀಯ ಪಟ್ಟುಗಳನ್ನು ಹಾಕಿ ವಿರೋಧಿಗಳ ವ್ಯೂಹ ನುಚ್ಚುನೂರು ಮಾಡಿದರು.

ಯಡಿಯೂರಪ್ಪ ಬಿಗಿಪಟ್ಟಿಗೆ ಕೊರೊನಾ ಕಾಲದ ಕರ್ನಾಟಕ ರಾಜಕಾರಣ ವಿಚಿತ್ರ ತಿರುವು ಪಡೆಯಿತು. ರಾಜಕೀಯ ತಜ್ಞರು, ಪವರ್ ಕಾರಿಡಾರ್ ಕಟ್ಟಾಳುಗಳಿಗೆ ಈ ಕೊರೊನಾ ಕಾಲದಲ್ಲಿ ರಾಜ್ಯದಲ್ಲಿ ಕಂಡಿದ್ದು ಭಾರತೀಯ ಜನತಾ ಪಕ್ಷದ ಸರ್ಕಾರವಲ್ಲ. ಬದಲಿಗೆ ವಿರೋಧ ಪಕ್ಷಗಳ ನಾಯಕರು, ಆಪರೇಷನ್ ಕಮಲದಿಂದ ಸಚಿವರಾದವರನ್ನು ಒಳಗೊಂಡ ಯಡಿಯೂರಪ್ಪನವರ ನೇತೃತ್ವದ ಅಘೋಷಿತ ‘ಮೈತ್ರಿ ಸರ್ಕಾರ’.

ಹೌದು!

ಕೊರೊನಾ ಲಾಕ್ ಡೌನ್ ಆರಂಭವಾದ ದಿನದಿಂದ ನಿತ್ಯ ಆಗುತ್ತಿದ್ದ ಯಡವಟ್ಟುಗಳನ್ನು ವಿರೋಧ ಪಕ್ಷದ ನಾಯಕರು ಅಚ್ಚುಕಟ್ಟಾಗಿ ಯಡಿಯೂರಪ್ಪ ಕಿವಿಗೆ ನೇರವಾಗಿ ತಲುಪಿಸಿ ಅವುಗಳಿಗೆ ಪರಿಹಾರ ಕೊಡಿಸುತ್ತ ಸಾಗಿದರು. ಒಂದು ರೀತಿಯಲ್ಲಿ ವಿಪಕ್ಷಗಳು ಅಘೋಷಿತ ಮೈತ್ರಿ ಸರ್ಕಾರದ ಸಂಪುಟ ಸಹೋದ್ಯೋಗಿಗಳ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿದವು. ಇದಕ್ಕೆ ಕಾರಣ ಬಿಎಸ್‌ವೈ ಜತೆಗಿನ ಬಾಂಧವ್ಯ.

ಮತ್ತೊಂದು ಕಡೆ ಆಪರೇಷನ್ ಕಮಲದಿಂದ ಸಚಿವರಾಗಿ ಬಿ.ಎಸ್.ವೈ. ಆಪ್ತ ಬಣ ಸೇರಿರುವ ಸಚಿವರ ಗುಂಪು ಮುಖ್ಯಮಂತ್ರಿ ಬೆನ್ನಿಗೆ ಬಲವಾಗಿ ಸಾಥ್ ನೀಡಿತು. ಮಾಯವಾಗಿದ್ದ ಮೂಲ ಬಿಜೆಪಿಯ ಸಂಪುಟ ಸಚಿವರನ್ನು ಮೂಲೆಗುಂಪು ಮಾಡಿ ಮಿಂಚಿತು.

ಬಿಜೆಪಿಯ ಒಂದು ಗುಂಪು ಕೊರೊನಾ ವೈರಸ್ ಹಬ್ಬಲು ಒಂದು ನಿರ್ದಿಷ್ಟ ಸಮುದಾಯ ಕಾರಣ ಎಂದು ಬೊಟ್ಟು ಮಾಡುತ್ತ ಇಡೀ ಸಮುದಾಯವೇ ಇದರ ಹೊಣೆ ಹೊರಬೇಕೆಂಬ ಕೂಗು ಹಾಕತೊಡಗಿತು. ಬಲಪಂಥದ ಜತೆ ನೇರ ಗುರುತಿಸಿಕೊಂಡ ಕೆಲ ಮಾಧ್ಯಮಗಳು ಈ ಧ್ವನಿಗೆ ತಾಳ ಹಾಕುತ್ತ ತಂಬೂರಿ ಮೀಟತೊಡಗಿದವು. ಯಡಿಯೂರಪ್ಪ ನೇರವಾಗಿ ಎಚ್ಚರಿಕೆ ಧಾಟಿಯಲ್ಲಿ ಇದನ್ನು ಖಂಡಿಸಿ ‘ಅಲ್ಪಸಂಖ್ಯಾತ ಬಂಧುಗಳ ಬಗ್ಗೆ ಒಂದೇ ಒಂದು ಮಾತನಾಡಿದರೂ ಸಹಿಸಲ್ಲ’ ಎಂದು ಗುಡುಗುವ ಮೂಲಕ ತಮ್ಮ ಹೆಸರಿಗೆ ಮಸಿ ಬಳಿಯಲು ಹೊರಟವರಿಗೆ ಮೊದಲ ಬರೆ ಹಾಕಿದರು. ತಮ್ಮ ಜಾತ್ಯತೀತ ಐಡೆಂಟಿಟಿ ರಕ್ಷಿಸಿಕೊಳ್ಳುವುದರ ಜತೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ತಾವು ಸರ್ವಧರ್ಮ ಹಿತರಕ್ಷಕರಾಗಿಯೇ ಉಳಿದಿರುವ ಸಂದೇಶ ಸಾರುವ ಅವಕಾಶವನ್ನಾಗಿ ಯಡಿಯೂರಪ್ಪ ಆ ಸಂದರ್ಭವನ್ನು ಬಳಸಿಕೊಂಡರು.

ಮುಖ್ಯಮಂತ್ರಿ ಮಾತು ಅವರ ಕೊರೊನಾ ಕಾಲಘಟ್ಟದ ಮೈತ್ರಿ ಸರ್ಕಾರದ ಅಗೋಚರ ಮಿತ್ರರಿಗೆ ಹಿತಕಾರಿಯಾಗಿತ್ತು. ಆ ಮಾತುಗಳು ಅವರ ಬಾಯಿಂದ ಹೊರಬೀಳಲು ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಿವಿಮಾತುಗಳೂ ಕೆಲಸ ಮಾಡಿವೆ ಎಂಬ ವದಂತಿಗಳು ಬಿಜೆಪಿ ಪಾಳೆಯದಲ್ಲೇ ಹರಿದಾಡಿದವು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಲಾಕ್‌ಡೌನ್ ಸಂಬಂಧಿತ ಉನ್ನತ ಮಟ್ಟದ ಸಭೆಯೊಂದರಲ್ಲಿ ಮಹಾನಗರದ ಪೊಲೀಸ್ ವರಿಷ್ಠರ ಮೇಲೆ ಉಪಮುಖ್ಯಮಂತ್ರಿಯೊಬ್ಬರು ಏಕಾಏಕಿ ಲಂಚದ ಆರೋಪ ಹೊರಿಸಿ ಕೂಗಾಡತೊಡಗಿದರು. ಖಾಕಿಪಡೆಗೆ ನೈತಿಕ ಬೆಂಬಲ ಸಿಗಬೇಕಿದ್ದ ಸಂದರ್ಭವದು. ಲಾಕ್ ಡೌನ್ ಜಾರಿಯಾಗಿದ್ದ ಆರಂಭದ ಸೂಕ್ಷ್ಮ ಸನ್ನವೇಶ; ಪೊಲೀಸ್ ಆಯುಕ್ತರು ವಿಚಲಿತರಾದರು. ತಮ್ಮ ಹುದ್ದೆಗೇ ರಾಜೀನಾಮೆ ನೀಡುವ ಪಟ್ಟು ಹಿಡಿದರು. ಯಡಿಯೂರಪ್ಪನವರು ಸಮಯೋಚಿತವಾಗಿ ವರ್ತಿಸಿ, ಅವರನ್ನು ಸಮಾಧಾನಪಡಿಸಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದರು. ಪೊಲೀಸ್ ಇಲಾಖೆಯ ನೈತಿಕ ಸ್ಥೆöÊರ್ಯ ಕದಡುವ ಸಲುವಾಗಿ ಗಂಭೀರ ಆರೋಪ ಮಾಡಲಾಗಿತ್ತು. ಇಲಾಖೆಯ ನಾಯಕನಿಗಾದ ಬೇಸರದ ಪರಿಣಾಮ ಇಡೀ ಖಾಕಿ ಪಡೆಯ ಮೇಲೂ ಆಗಿ ಲಾಕ್‌ಡೌನ್ ವಿಫಲವಾದರೆ ಅದನ್ನು ಮುಖ್ಯಮಂತ್ರಿ ತಲೆಗೆ ಕಟ್ಟುವ ಹುನ್ನಾರವಿದೆಂದು ವಿಶ್ಲೇಷಣೆಗಳು ತೇಲಿಬಂದವು.

ರಾಜ್ಯದ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳಿಸಲು ನಿರ್ಧರಿಸಿದಾಗ ಬಸ್ ಪ್ರಯಾಣ ದರ ಎರಡು ಪಟ್ಟು ಹೆಚ್ಚಿಸಿ ಆದೇಶ ಹೊರಡಿಸಲಾಯಿತು. ಜನವಿರೋಧಿಯಾಗಿದ್ದ ಈ ನಿರ್ಣಯ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆಬ್ಬಿಸಲು ಮಾಡಿದ ಪ್ರಯತ್ನದಂತೆ ಗೋಚರಿಸಿತು. ಈ ನಿರ್ಧಾರದ ಹಿಂದಿದ್ದದ್ದು ಮತ್ತೊಬ್ಬ ಡಿಸಿಎಂ. ಯಾವಾಗ ಡಿ.ಕೆ.ಶಿವಕುಮಾರ್ ಈ ಬಗ್ಗೆ ಧ್ವನಿ ಎತ್ತಿದರೋ ಆವಾಗ ಪ್ರಯಾಣ ದರ ಕೆಳಗೆ ಇಳಿಯಿತು. ಕೆಪಿಸಿಸಿ ಇಂದಲೇ ಬಸ್ ಚಾರ್ಜ್ ಭರಿಸುವ ಚೆಕ್ ಸಾರಿಗೆ ಸಂಸ್ಥೆಗೆ ರವಾನೆಯಾಗುತ್ತಲೇ ಡಿಸಿಎಂ ಕಕ್ಕಾಬಿಕ್ಕಿಯಾದರು. ಮುಖ್ಯಮಂತ್ರಿ ಮತ್ತೆ ವಿಪಕ್ಷಗಳ ಮಾತಿಗೆ ಮಣೆ ಹಾಕಿದರು. ಉಚಿತವಾಗಿ ಬಸ್ ಪ್ರಯಾಣ ಲಭ್ಯವಾಯಿತು.

ಅಂತರರಾಜ್ಯ ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸದಂತೆ ಬಿಲ್ಡರುಗಳು ಒತ್ತಡ ಹಾಕಿದಾಗ, ತಮ್ಮ ಮಂತ್ರಿಮಂಡಲದ ಸಚಿವರು ಅದಕ್ಕೆ ಬೆಂಬಲ ಕೊಟ್ಟಾಗಲೂ ಬಿಎಸ್‌ವೈಗೆ ಆಪ್ಯಾಯಮಾನವಾಗಿ ಕಂಡಿದ್ದು ವಿಪಕ್ಷದವರ ಸಲಹೆಯೇ. ಇನ್ನು ಎಪಿಎಂಸಿ ಕಾಯ್ದೆ ವಿಚಾರದಲ್ಲಿ ದೊಡ್ಡಮಟ್ಟದ ಕೂಗೆಬ್ಬಿಸಲು ಮುಂದಾಗಿದ್ದ ಕಾಂಗ್ರೆಸ್, ಜೆಡಿಎಸ್ ಯಡಿಯೂರಪ್ಪನವರ ಒಂದು ಫೋನ್ ಕರೆಗೆ ಮೌನವಾಗಿಬಿಟ್ಟವು.

ಈ ಎಲ್ಲ ಸಂದರ್ಭಗಳಲ್ಲೂ ಢಾಳವಾಗಿ ಅಡಿಗಡಿಗೆ ಗೋಚರವಾಗಿದ್ದು ರಾಜ್ಯದಲ್ಲಿ ವಿಪಕ್ಷ ನಾಯಕರ ಬೆಂಬಲದ ಯಡಿಯೂರಪ್ಪ ನೇತೃತ್ವದ ‘ಮೈತ್ರಿ ಸರ್ಕಾರ’ದ ಕುರುಹು.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆಗಾಗ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದರೂ ಪರ್ಯಾಯ ಸರ್ಕಾರದ ವಿರುದ್ಧ ಗುಡುಗುವ ಗೋಜಿಗೆ ಹೋಗಲಿಲ್ಲ. ಇನ್ನು ಕೊರೊನಾ ನಿಯಂತ್ರಣ ವಿಚಾರದಲ್ಲಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಸವಾಲು ಸ್ವೀಕರಿಸಿದವರಂತೆ ಕೆಲಸ ಮಾಡಿದರು.  ಗೋಪಾಲಯ್ಯ, ಬಿ.ಸಿ.ಪಾಟೀಲ, ಎಸ್.ಟಿ.ಸೋಮಶೇಖರ್ ಕೂಡಾ ಆರಂಭದಿಂದಲೂ ಸಿಎಂ ಜತೆಗಿದ್ದರು.

‘ಅಘೋಷಿತ ಮೈತ್ರಿ ಸರ್ಕಾರ’ ದ ನಾಯಕ ಯಡಿಯೂರಪ್ಪ ಕೆಲವು ಆಪ್ತ ಸಚಿವರನ್ನು ಬಿಟ್ಟರೆ ಕೊರೊನಾ ಕಾಲದಲ್ಲಿ ಹೆಚ್ಚು ನಂಬಿದ್ದು ವಿಪಕ್ಷ ನಾಯಕರನ್ನು ಮಾತ್ರ. ಡಿ.ಕೆ.ಶಿವಕುಮಾರ್, ಸಿದ್ಧರಾಮಯ್ಯ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವುದು, ಅದಕ್ಕೆ ಬಿಜೆಪಿ ಕಡೆಯಿಂದ ಎದುರೇಟು ಕೊಡುವುದು ನಡೆದರೂ ಮುಖ್ಯಮಂತ್ರಿ ಆಗಾಗ ಪ್ರತಿಪಕ್ಷದವರು ಪ್ರಸ್ತಾಪಿಸುವ ವಿಚಾರಗಳನ್ನು ತಾವೇ ಮಧ್ಯಪ್ರವೇಶಿಸಿ ಬಗೆಹರಿಸಿ ಕದನೋತ್ಸಾಹದಲ್ಲಿರುತ್ತಿದ್ದ  ಸ್ವಪಕ್ಷದವರಿಗೇ ಚೆಕ್ ಮೇಟ್ ಕೊಡುತ್ತ ಸಾಗಿದ್ದು ಕುತೂಹಲಕಾರಿಯಾಗಿ ಕಾಣುತ್ತಿತ್ತು. ಯಡಿಯೂರಪ್ಪ ನಿಲುವುಗಳಿಗೆ ಪ್ರತ್ಯುತ್ತರ ಕೊಡಲಾಗದ ಸಂದಿಗ್ಧಕ್ಕೆ ಅವರ ಸಂಪುಟದ ಕೆಲ ಸಚಿವರೇ ಸಿಲುಕಿ ಕೈ ಕೈ ಹಿಸುಕಿಕೊಂಡಿದ್ದೂ ಸಿಎಂ ರಾಜಕೀಯ ಚದುರಂಗದಾಟದ ಹೈಲೈಟ್ ಆಗಿತ್ತು.

ಯಡಿಯೂರಪ್ಪ ಅವರು ಕೊರೊನಾ ಕಾಲದಲ್ಲಿ ಕಟ್ಟಿದ ರಾಜಕೀಯ ಆಟ, ಅದಕ್ಕೆ ಪೂರಕವಾಗಿ ವರ್ತಿಸಿದ ವಿಪಕ್ಷ ನಾಯಕರು ಮತ್ತು ಅವರ ಮಾಜಿ ಶಿಷ್ಯಗಣದ ಹಾಲಿ ಸಚಿವರ ನಡೆ ರಾಜ್ಯ ರಾಜಕೀಯಕ್ಕೆ ಹೊಸ ಮುನ್ನುಡಿ ಬರೆಯಲಿದೆಯೇ?

ಸಿದ್ಧರಾಮಯ್ಯ-ಯಡಿಯೂರಪ್ಪ ಅವರ ನಡುವೆ ಕುದುರಿರುವ ಒಳಬಾಂಧವ್ಯ ಹೊಸ ರಾಜಕೀಯ ಸಮೀಕರಣಕ್ಕೆ ಕಾರಣವಾಗಲಿದೆಯೇ? ಕೊರೊನಾ ಕಾಲದ ಅಘೋಷಿತ ‘ಮೈತ್ರಿ ಸರ್ಕಾರ’ದ ನಂಟು ಯಡಿಯೂರಪ್ಪ ಅವರನ್ನು ಮತ್ತಷ್ಟು ಬಲಿಷ್ಟರನ್ನಾಗಿ ಮಾಡುವುದೇ? ಅನುದಾನ ತಾರತಮ್ಯ, ರಾಜ್ಯದ ಅಸ್ಮಿತೆ ರಕ್ಷಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಗೇ ಸೆಡ್ಡು ಹೊಡೆದು ನಿಂತ ನಾಯಕನಿಗೆ ಶಕ್ತಿ ತುಂಬಲಿದೆಯೇ? ಕೊರೊನಾ ನಿರ್ವಹಣೆಯಲ್ಲಿ ಗೆದ್ದ ಬಿ.ಎಸ್.ವೈ. ಕಟ್ಟಿಹಾಕಲು ಹೈಕಮಾಂಡ್ ಬೆಂಬಲಿತ ನಾಯಕರು ಉರುಳಿಸುವ ಹೊಸ ದಾಳಗಳೇನು? ಇಂತಹ ಹತ್ತಾರು ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.

Leave a Reply

Your email address will not be published.