ಕರ್ನಾಟಕದಲ್ಲಿ ಸಂಗೀತ: ಹೊಸತೇನು.? ಹೊಸಬರಾರು..?

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಅನನ್ಯ ಸ್ಥಾನವಿದೆ. ಕರ್ನಾಟಕದಲ್ಲಿ ಮಾತ್ರ ಹಿಂದೂಸ್ತಾನಿ ಮತ್ತು ಕರ್ನಾಟಕಿ ಪದ್ಧತಿಗಳೆರೆಡೂ ಸರಿಸಮಾನವಾಗಿ ಮೇಳೈಸಿವೆ. ಬೇರೆಲ್ಲಿಗಿಂತ ಇಲ್ಲಿ ಅತ್ಯಂತ ವೈವಿಧ್ಯಮಯ ಜನಪದ ಮತ್ತು ಲಘು ಸಂಗೀತ ಪರಂಪರೆಗಳು ತಮ್ಮ ಶ್ರೀಮಂತಿಕೆಯನ್ನು ಮೆರೆದಿವೆ. ಬೆಂಗಳೂರಿನ ಪರಿಸರ ಪಾಶ್ಚಾತ್ಯ ಜಾಝ್, ರಾಕ್ ಮತ್ತು ರ್ಯಾಪ್ ಸಂಗೀತಗಳಿಗೂ ಆಸರೆ ನೀಡಿದೆ. ಕನ್ನಡದ ಸಿನಿಮಾ ಸಂಗೀತವೂ ತನ್ನ ನಾದಲಯಗಳಿಗೆ ಹೆಸರು ಮಾಡಿದೆ.

ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ಸಂಗೀತ ಕ್ಷೇತ್ರ ಬದಲಾವಣೆ ಕಂಡಿದೆ. ಮಲ್ಲಿಕಾರ್ಜುನ ಮನ್ಸೂರ್-ಭೀಮಸೇನ ಜೋಷಿ ಪೀಳಿಗೆಯ ಹೆಸರಾಂತ ಹಿಂದೂಸ್ತಾನಿ-ಕರ್ನಾಟಕಿ ದಿಗ್ಗಜರೆಲ್ಲರೂ ಕಣ್ಮರೆಯಾಗಿದ್ದಾರೆ. ಆದರೆ ಹೊಸ ಪೀಳಿಗೆಯ ಅಷ್ಟೇ ಸಮರ್ಥ ಶಾಸ್ತ್ರೀಯ ಹಾಡುಗಾರ-ವಾದ್ಯಗಾರರನ್ನು ಗುರುತಿಸಿ ಬೆನ್ನುತಟ್ಟುವಲ್ಲಿ ನಾವು ಹಿಂಜರಿದಂತೆ ಕಾಣುತ್ತಿದೆ. ಹೊಸ ಸಂಗೀತ-ಸಂಗೀತಗಾರರನ್ನು ಮತ್ತು ಹೊಸ ಪ್ರಯೋಗಗಳನ್ನು ಮೆಚ್ಚಿ ಭೇಷ್ ಎನ್ನುವ ಅಗತ್ಯ ಕೆಲಸದಲ್ಲಿ ನಾವು ಹಿಂದೆ ಬಿದ್ದಂತೆ ಕಾಣುತ್ತಿದೆ. ಶಾಸ್ತ್ರೀಯ ಸಂಗೀತ ಕಲಿಕೆಯಲ್ಲಿಯೂ ನಾವು ಚೆನ್ನೈ ಹಾಗೂ ಕೊಲ್ಕತ್ತಗಳಲ್ಲಿನ ಸೌಲಭ್ಯ ಮತ್ತು ವಾತಾವರಣ ಸೃಷ್ಟಿಸುವಲ್ಲಿ ಹಿಂದೆ ಬಿದ್ದಿರುವಂತೆ ತೋರುತ್ತಿದೆ.

ಸಂಗೀತ ಹಾಗೂ ಸಂಗೀತಗಾರರ ಕುರಿತು ಕನ್ನಡದಲ್ಲಿ ಸಾಹಿತ್ಯ ಹಾಗೂ ಸಂಶೋಧನೆಗಳೂ ಆಗಬೇಕಿದೆ. ಕನ್ನಡದ ಲಘು ಶಾಸ್ತ್ರೀಯ ಹಾಡುಗಾರಿಕೆ ಹೆಸರು ಪಡೆದಿದ್ದರೂ ಚಂದನವನದ ಸಂಗೀತ ಹಿಂದಿ-ತಮಿಳು ಸಿನಿಮಾ ಸಂಗೀತದ ವೈವಿಧ್ಯ-ಹಿರಿವಂತಿಕೆಯಿಂದ ಬಹಳಷ್ಟು ಹಿಂದಿದೆ. ಬೇರೆ ಭಾಷೆಗಳ ಟೆಲಿವಿಶನ್ ಸ್ಪರ್ಧೆಗಳಲ್ಲಿ ಕಂಡುಬರುವಷ್ಟು ಪ್ರತಿಭೆ ಕನ್ನಡದ ಚಾನೆಲ್‍ಗಳಲ್ಲಿ ಅಪರೂಪವಾಗಿದೆ.

ಇದು ಹೌದೆ..? ಇಲ್ಲವೆ..? ಇದಕ್ಕೆ ಕಾರಣಗಳೇನು..? ಈ ಪ್ರಶ್ನೆಗಳ ಜೊತೆಗೆ ಸಂಗೀತ ಕ್ಷೇತ್ರದಲ್ಲಿನ ಹೊಸತು ಮತ್ತು ಹೊಸಬರನ್ನು ಗುರುತಿಸುವ ಕೆಲಸವನ್ನೂ ಮಾಡಬೇಕಿದೆ. ಸಂಗೀತ ಕ್ಷೇತ್ರದ ಅಲಕ್ಷಿತ ವಿಷಯಗಳನ್ನೂ ನಾವು ಎತ್ತಬೇಕಿದೆ.

ಕಳೆದ ಎರಡು ದಶಕಗಳಲ್ಲಿ ಕರ್ನಾಟಕದಲ್ಲಿನ ಸಂಗೀತ ಕ್ಷೇತ್ರದ ಬದಲಾವಣೆಗಳನ್ನು ದಾಖಲಿಸುವ ಪ್ರಯತ್ನವಿದು.

 

 

ಕರ್ನಾಟಕದಲ್ಲಿ ಸಂಗೀತ:

ಹೊಸತೇನು.? ಹೊಸಬರಾರು..?

ಕರ್ನಾಟಕದ ಸಂಗೀತದಲ್ಲಿ ಇಂದು ಹೊಸತನವು ಒಂದು ಹೊಸ ಜಾಡಿನಲ್ಲಿ ಬೆಳೆದು ಸಾಗುತ್ತಿದೆ. ಈ ಜಾಡಿನ ದಿಕ್ಕು ದೆಸೆಗಳು ಇನ್ನೂ ಸ್ಪಷ್ಟಗೊಂಡಿಲ್ಲ ಅಷ್ಟೆ.  ಜಾಗತಿಕಯುಗದ ಸಮಾಜವು ಅಪೇಕ್ಷಿಸುವ ಎಲ್ಲ ಸವಲತ್ತುಗಳನ್ನೂ ಕರ್ನಾಟಕದ ಸಂಗೀತವೂ ಕಲೆಗಾರರೂ ಒಳಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

-ಡಾ.ರಾ.ಸ.ನಂದಕುಮಾರ್

ಭಾರತೀಯ ಸಂಗೀತವೂ ವಿಶ್ವದ ಸಂಗೀತವೂ ಯಾವತ್ತೂ ಹೊಸತರ ಅನ್ವೇಷಣೆಯಲ್ಲೇ ಇರುತ್ತದೆ, ಏಕೆಂದರೆ ಸಂಗೀತದ ಗುಣವೇ ಸೃಜನಾತ್ಮಕವಾದದ್ದು.  ನವೋನ್ಮೇಷವು ಅದರ ಹುಟ್ಟುಗುಣ, ಹೊಸತಿನ-ಹೊಸತರ ಅನ್ವೇಷಣೆಯು ಸಂಗೀತದ, ಕ್ಷೇತ್ರದ, ಸಹೃದಯರ ಸಹಜಸ್ವಭಾವ. 

ಈವತ್ತು ಇದ್ದದ್ದು ನಾಳೆಗೆ (ಮಾನ್ಯವೋ ಅಮಾನ್ಯವೋ) ಹಳೆಯದು. ಹಳೆಯದು ನಾಳೆಗೆ ಪ್ರಿಯವಾದರೂ ಅಲ್ಲಿಂದ ಮುಂದೆ ಅದು ಕೇವಲ ‘ಅದೇತನ’ ಮಾತ್ರ ಎಂದುಕೊಳ್ಳುತ್ತಾರೆ ಸಹೃದಯರು. ಹೊಸತನ್ನು ಅನುಭವಿಸಲು ಇಚ್ಛಿಸುತ್ತಾರೆ. ಆದರೆ ಸಂಗೀತದಲ್ಲಿರುವುದು ನಾದ-ಲಯ ಮಾತ್ರ ಅಲ್ಲವೇ! ಸಂಗೀತನಾದವು ಸಪ್ತಸ್ವರವಾಗಿ ಮೂಡಿದ್ದು ಕಾಲಪ್ರಮಾಣವೆಂಬ ಲಯದ ಹಂದರದಲ್ಲೇ ಅಲ್ಲವೇ! ಇವೆರೆಡನ್ನು ಬಳಸಿಕೊಂಡು ಗಾಯನ-ವಾದನವಾಗುವುದು ಸಂಗೀತಕೃತಿ. ಈ ಕೃತಿಗಳಲ್ಲೇ ಅದೇತನ ಉಂಟಾದಾಗ ಕೇಳುಗರು ಮತ್ತೇನನ್ನೋ ಹುಡುಕುತ್ತಾರೆ:

ಶ್ರಾವ್ಯತೆಯ ಜೊತೆಗೆ ದೃಶ್ಯವೂ ಬೇಕಾಗುತ್ತದೆ. ದೃಶ್ಯದಲ್ಲಿ ಶ್ರಾವ್ಯತೆಯು ಕಥೆಯನ್ನು ಹೇಳಿ ಮನಕ್ಕೆ ಮುದನೀಡಿ ಸವಿಯಾದ ನೆನಪನ್ನು ಶ್ರೋತೃಗಳಲ್ಲಿ ಉಳಿಸಬೇಕಾಗುತ್ತದೆ. ಇದರಲ್ಲಿ ಆವೇಶವೋ ಉದ್ರೇಕವೋ ಅಥವಾ ಶಾಂತ-ಕಾಂತಿಗಳೋ ದೊರಕಿದಾಗ ಅಲ್ಲಿ ‘ಸಂಗೀತವು’ ಗೆಲ್ಲುತ್ತದೆ! ಇಂತಹವು ಅತಿರೇಕಕ್ಕೆ ಹೋದದ್ದನ್ನು ಸಹ ನಾವು ನೋಡಿದ್ದೇವೆ.

ಸಂಗೀತದ ಸೃಜನಾತ್ಮಕತೆಯ ಪ್ರಭಾವವು ಸಂಗೀತಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದು ತಾನು ಹುಟ್ಟಿ-ಬೆಳೆದು-ನೆಲೆಯೂರಿನಿಂತು ಗೆಲ್ಲುತ್ತಿರುವ ನೆಲವನ್ನೂ ಪ್ರಭಾವಿಸುತ್ತದೆ. ಒಂದು ಜನಾಂಗದ ನಡೆವಳಿಕೆಯನ್ನೇ ಅದು ತಿರುಗಿಸಬಹುದು. ಒಂದು ರಾಷ್ಟ್ರದ ಸಂಸ್ಕೃತಿಯನ್ನೆ ಅದು ಪ್ರಭಾವಗೊಳಿಸಬಹುದು. ಜನತೆಯ ಭಾವ-ಭಾವುಕತೆಗಳನ್ನೇ ಅದು ಆಕ್ರಮಣ ಮಾಡಿಬಿಡಬಹುದು. ಇದು ನಡೆದುದರ ಸಾಕ್ಷಿಗಳು ನಮ್ಮ ರಾಷ್ಟ್ರದ ಸಂಗೀತೇತಿಹಾಸದಲ್ಲೇ ನಾವು ಹಲವು ಬಾರಿ ಕಾಣಬಹುದು.  

ಕರ್ನಾಟಕದ ಸಂಗೀತದಲ್ಲಿ ಇಂದು ಹೊಸತನವು ಒಂದು ಹೊಸ ಜಾಡಿನಲ್ಲಿ ಬೆಳೆದು ಸಾಗುತ್ತಿದೆ. ಈ ಜಾಡಿನ ದಿಕ್ಕು ದೆಸೆಗಳು ಇನ್ನೂ ಸ್ಪಷ್ಟಗೊಂಡಿಲ್ಲ ಅಷ್ಟೆ.  ಜಾಗತಿಕಯುಗದ ಸಮಾಜವು ಅಪೇಕ್ಷಿಸುವ ಎಲ್ಲ ಸವಲತ್ತುಗಳನ್ನೂ ಕರ್ನಾಟಕದ ಸಂಗೀತವೂ ಕಲೆಗಾರರೂ ಒಳಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.  ಈ ಸಾಹಸದ ಪ್ರಯತ್ನವು ಕೇವಲ ಕಾಸುಮಾಡಲಿಕ್ಕೆ ಮಾತ್ರ ಎಂದುಕೊಳ್ಳಬಾರದು. ಇದೊಂದು ಸೈದ್ಧಾಂತಿಕ ನಿಲುವು ಎಂಬಂತೆ ಸಮಾಜಮುಖಿಯಾಗಿದೆ ಈ ಪ್ರಯತ್ನ. 1960-70ರ ದಶಕಗಳಲ್ಲಿ ಸಂಗೀತವು ತಾಂತ್ರಿಕತೆಯನ್ನು ಹೆಚ್ಚು ಅಪೇಕ್ಷಿಸುತ್ತಿರಲಿಲ್ಲ, ಇದೊಂದು ಅಭಾವ ವೈರಾಗ್ಯವೂ ಆಗಿತ್ತು ನಿಜ.

90ರ ದಶಕಗಳ ಅನಂತರ ಮೈಕು-ಲೈಟು-ಮೈಮಾಟ-ಹಾವಭಾವ-ಆಹಾರ್ಯ-ಅಲಂಕಾರ ಇತ್ಯಾದಿಗಳ ‘ಹೊಸತನಗಳು’ ತಲೆದೋರಿದವು. ಇವುಗಳ ಜೊತೆಗೆ ಇದೊಂದು ದುಡ್ಡುಸುರಿದು-ದುಡ್ಡುಮಾಡುವ ಏರ್ಪಾಡಾಗಬಹುದು ಎಂಬ ಆಶಾಭಾವನೆ ತಲೆದೋರಿತು.  ಸಭಾಂಗಣವು ಎಲ್ಲ ರೀತಿಯ ಶ್ರೋತೃಗಳಿಂದ ಕಿಕ್ಕಿರಿದು ಸಮಾಜದ ನಾಯಕರು, ಕಲಾಶ್ರೀಮಂತರು, ಪ್ರತಿಷ್ಠಿತರು ಬರುವಂತಾಗಲು ಈ ಎಲ್ಲ ಪ್ರಯತ್ನಗಳೂ ನಡೆದವು. ಪ್ರಿಂಟ್ ಮೀಡಿಯಾಗಳು ಈ ಸಂದರ್ಭಗಳಲ್ಲಿ ಅಪೇಕ್ಷಣೀಯವಾದವು. ಸಂಗೀತದ ವಿಮರ್ಶೆಗಳು ಹಲವು ರಂಗುಗಳಲ್ಲಿ ಮೂಡಿಬಂದವು.

20ನೆಯ ಶತಮಾನದ ಅಂತ್ಯದ ವೇಳೆಗೆ ಕಾರ್ಪೋರೇಟ್‍ಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಸೋಗಿನಲ್ಲಿ (ಸೊಸೈಟಲ್ ರೆಸ್ಪಾನ್ಸಿಬಿಲಿಟಿ) ಹಲವು ಯೋಜನೆಗಳಡಿ ಸಹಾಯವನ್ನು ನೀಡಿದರೂ ಅದು ಕೇವಲ ಪ್ರಸಿದ್ಧ ಸಂಗೀತಗಾರರ, ಚಿತ್ರಗಾರರ, ಕಲೆಗಾರರ ಉಪಯೋಗಕ್ಕೆ ಮಾತ್ರ ಮತ್ತು ಅವರಿಂದಾದ ಜಾಹೀರಾತುಗಳಿಗೆ ಮಾತ್ರ ಸೀಮಿತವಾಯಿತು.

ಕರ್ನಾಟಕದ ಸಂಗೀತದಲ್ಲಿ ಹೊಸತೇನಿದೆ?

ತಟ್ಟನೇ ಹೇಳಬಹುದಾದ ವಿಷಯವೆಂದರೆ, ತನ್ನ ನೆಲಗಟ್ಟನ್ನು ಬಿಟ್ಟುಕೊಡದೆ ಅನ್ಯೇತರ ಶೈಲಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ರಾಜಿಮಾಡಿಕೊಂಡು ತನ್ನದೇ ಈ ಶೈಲಿಸಂಗೀತ ಎಂಬಷ್ಟರ ಮಟ್ಟಕ್ಕೆ ಇದ್ದುಬಿಟ್ಟಿದೆ ಕರ್ನಾಟಕದ ಸಂಗೀತ ಪ್ರಕಾರಗಳು. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಕರ್ನಾಟಕದ ಸುಗಮಸಂಗೀತ ಮತ್ತು ಸ್ವಲ್ಪಮಟ್ಟಿಗೆ, ಸಿನೆಮಾ ಸಂಗೀತ. ನೆರೆನಾಡಿನ ಸಂಗೀತದ ಹಾಡುಗಳ ಶೈಲಿಯನ್ನು ಅಳವಡಿಸಿಕೊಳ್ಳುವುದೋ ಸಾರಾಸಗಟಾಗಿ ಅನುಕರಿಸುವುದೋ (ಕೆಲವೆಡೆ ಕದ್ದುಬಿಡುವುದೋ) ಮಾಡಿದರೂ ನಮ್ಮ ಸಿನೆಮಾ ಸಂಗೀತದಲ್ಲಿ ಕನ್ನಡತನ ಇದ್ದೇ ಇರುತ್ತದೆ.  ಹೆಚ್ಚೇಕೆ, ಆಂಗ್ಲಭಾಷೆಯ ತುಣುಕುಗಳನ್ನು ಉಚ್ಛಾರಣಾ ವಕ್ರತೆಗಳನ್ನು ಮೈನವಿರೇಳಿಸುವಂತೆ, ಮೈನೀರಿಳಿಸುವಂತೆ ಅಳವಡಿಸಿಕೊಳ್ಳುವುದರ ಪರಿಣಾಮವಾಗಿ ಜನಜನಿತಭಾಷೆಗಳಲ್ಲಿ ಈ ಶೈಲಿಯನ್ನು ಸೋರಿನಿಲ್ಲಿಸಿಬಿಟ್ಟಿವೆ.

ಸುಗಮಸಂಗೀತದಲ್ಲಂತೂ ಕರ್ನಾಟಕ ಸಂಗೀತದ (ರಂಗಸಂಗೀತದ ಪ್ರಭಾವ-ಪರಿಣಾಮ ಇದು) ಹಿಂದೂಸ್ಥಾನೀ ಸಂಗೀತದ ರಾಗತಾಳಗಾಯನವಾದನ ಪ್ರಮೇಯಗಳು ವಿಪುಲವಾಗಿ ಉಳಿದು ನಿಂತರೂ ತನ್ನದೇ ಆದ ಶೈಲಿಯನ್ನು ಹೊಸಹೊಸದಾಗಿ ಕಂಡುಕೊಳ್ಳುತ್ತಿವೆ. ನೆನ್ನೆಯ ಕವಿತೆಗಳ ಛಂದಸ್ಸಿಗೆ, ಸಾಲಿನದೀರ್ಘತೆಗಳ ಕಾಲಪ್ರಮಾಣಕ್ಕೆ ಸುಗಮವು ಸಂಗೀತಗೊಳಿಸಿಕೊಂಡಿತು, ಅಷ್ಟೇ ಯಶಸ್ವಿಯಾಗಿ ಇಂದಿನ ಛಂದೋರಹಿತ, ಸರಳಜಾಡಿನ (ಜಾಳಿನ?) ಸಾಹಿತ್ಯದ ಕವಿತೆಗಳಿಗೂ ರಾಗತಾಳಮಾತುಧಾತು ಸಮನ್ವಯಮಾಡಿದೆ.  ಅಷ್ಟೇ ಅಲ್ಲ, ಅಮೆರಿಕಾ, ಐರೋಪ್ಯ ಸಂಗೀತಗಳಲ್ಲಿನ ‘ಟಾಕಿಂಗ್‍ಹೆಡ್ಸ್’ ನಂತೆ ನಮ್ಮ ಸುಗಮದಲ್ಲೂ ಮಾತುಕತೆಗಳು ನಡೆದಿವೆ. 

ಇನ್ನು ಸಿನೆಮಾರಂಗದಲ್ಲಂತೂ ಹೊಸತನವು ಒಂದು ಅಪೇಕ್ಷೆ ಅಷ್ಟೇ ಅಲ್ಲ, ಅದೊಂದು ಗೀಳು. ಜನಪ್ರಿಯವಾಗಿರಬೇಕು ಎಂಬ ಹಂಬಲದಲ್ಲಿ ಸಿನೆಮಾಸಂಗೀತವು ಸಂಗೀತದ ಎಲ್ಲೆ ಸಹ ಮೀರಿ ತನ್ನ ಹಾಡುಗಳನ್ನು ಆಡುತ್ತಲಿವೆ.

ಜನಪದ ಸಂಗೀತದಲ್ಲೂ ಬುಡಕಟ್ಟುಸಂಗೀತದಲ್ಲೂ ಆನುವಂಶಿಕ ಸಂಗೀತದಲ್ಲೂ ಈ ‘ಹೊಸತನವು’ ನುಸುಳಿ ಹೆಚ್ಚು ಜನಪ್ರಿಯ ಮನ್ನಣೆಗಳ ಜೊತೆಗೆ ಕಾಸುಗಳಿಸುವ ಹುನ್ನಾರಗಳನ್ನು ಮಾಡುತ್ತಿದ್ದರೂ ಕರ್ನಾಟಕದ ಈ ಕಲೆಗಳ ಆಂತರ್ಯ-ಆತ್ಮಗಳು ಗಟ್ಟಿಯಾಗಿರುವುದರ ಕಾರಣ ಇವು ಅತಿರೇಕಕ್ಕೆ ಹೋಗಿಬಿಟ್ಟು ತನ್ನತನವನ್ನೇ ಕಳೆದುಕೊಳ್ಳುವ ದುರ್ಧರಪರಿಸ್ಥಿತಿ ಇನ್ನೂ ಬಂದಿಲ್ಲ.

ಇನ್ನುಳಿದಿರುವುದು ಕರ್ನಾಟಕ (ಶಾಸ್ತ್ರೀಯ) ಸಂಗೀತ ಮತ್ತು ಹಿಂದೂಸ್ಥಾನೀ (ಶಾಸ್ತ್ರೀಯ) ಸಂಗೀತ.

ಈವೆರಡೂ ಸಂಗೀತಪದ್ಧತಿಗಳು ಕಾಲದಿಂದ ಕಾಲಕ್ಕೆ ಹೊಸತನಗಳನ್ನು ಹುಡುಕಿ, ಅಳವಡಿಸಿಕೊಂಡು, ತಮ್ಮ ಕ್ಷೇತ್ರಗಳಲ್ಲಿ ರೂಢಿಸಿಕೊಳ್ಳುತ್ತ, ಕಾಲದ ಸಂಯಮಗಳನ್ನು ಮೀರದಂತೆ ಕಾಪಾಡಿಕೊಳ್ಳುತ್ತಿವೆ. ಇಲ್ಲಿಯೂ ಅತಿರೇಕಗಳು ಇವೆ. ಅತಿರೇಕಗಳ ರೂವಾರಿ ತಾನಾಗಬೇಕೆಂಬ ಹಂಬಲದ ಕಲೆಗಾರರು ಇಲ್ಲಿಯೂ ಹೇರಳವಾಗಿದ್ದಾರೆ. ಎಳೆವಯಸ್ಸಿನಲ್ಲೇ ‘ತಾರಾ’ ಪಟ್ಟವನ್ನು ಅತಿಶೀಘ್ರವಾಗಿ ಅಲಂಕರಿಸಬೇಕೆಂಬ ಮಕ್ಕಳಕೂಟವು ಒಂದೆಡೆಯಾಗಿದ್ದರೆ, ಇನ್ನೊಂದೆಡೆ ತಮ್ಮ ಶಾಸ್ತ್ರೀಯ ಸಂಗೀತವು ವಿಶ್ವದ ಮಟ್ಟದ್ದು ಎಂದು ಆವೇಶಗೊಂಡು ಅದರಂತೆ ತಮ್ಮ ವೇಶಭೂಷಣಗಳನ್ನೂ ಹಾವಭಾವಗಳನ್ನೂ ಗಾಯನವಾದನ ತಾಂತ್ರಿಕತೆಗಳನ್ನೂ ಬದಲುಮಾಡಿಕೊಳ್ಳುತ್ತಿರುವ ಜಾಗತಿಕ ಯುವ ’ವಿದ್ವಾಂಸರ’ ದಂಡು ನಮಗಿಂದು ಕಾಣುತ್ತಿದೆ. 

ನಮ್ಮ ಹಿಂದಿನ ಪೀಳಿಗೆಯ ಸಂಗೀತವಿದ್ವಾಂಸರು ತಮ್ಮ ಸಂಗೀತವನ್ನು ಜೀವನದುದ್ದಕ್ಕೂ ಸಾಧಿಸುತ್ತಿದ್ದುದು ಅದನ್ನು ಉಳಿಸಿ, ಬೆಳಸಿ, ಅದರ ಎಲ್ಲೆಗಳನ್ನು ಹಿಗ್ಗಿಸಿ ಕಡೆಗೆ ಅದರ ಜಳ್ಳಾದ ಅದೇತನಗಳನ್ನು ಮುರಿದುಹಾಕಲಿಕ್ಕಾಗಿ. ಆದರೆ ನಮ್ಮ ಕೆಲವು ಯುವವಿದ್ವಾಂಸರಲ್ಲಿ ಇಷ್ಟೊಂದು ಸಂಯಮ ಇಲ್ಲ. ಅವರು ನೇರ ದೊರಕಿದ ಸಂಗೀತಶೈಲಿ-ಪದ್ಧತಿಗಳನ್ನು ಯಕ್ಕಾಮುಕ್ಕಾಗಿ ಮುರಿದುಹಾಕಿದ್ದೇ ತಮ್ಮ ಮಹೋನ್ನತ ಕೊಡುಗೆ ಅಂದುಕೊಂಡಿದ್ದನ್ನು ನಾವು ಕಾಣಬಹುದು. ಕರ್ನಾಟಕದ ಹಿಂದೂಸ್ಥಾನೀ ಶೈಲಿಯಲ್ಲಿ ತಮ್ಮ ಸಂಗೀತದ ಪರಿಭಾಷೆಗಳನ್ನು ತಮ್ಮ ಗುರುಕುಲದ ಪದ್ಧತಿಯಂತೆಯೇ ಉಳಿಸಿಕೊಂಡಿರುವುದನ್ನು ಇಲ್ಲಿ ಮೆಚ್ಚಬೇಕು. ಆದರೆ ಕರ್ನಾಟಕ ಸಂಗೀತ ಪದ್ಧತಿಯವರು ಕರ್ನಾಟಕದಲ್ಲೇ ಇದ್ದುಕೊಂಡು ಪರಪಾಂಡಿತ್ಯದ ಮೆಚ್ಚುಗೆಯ ಸೋಗಿನಲ್ಲಿ ‘ಕಾರ್ನಾಟಿಕ್’ ಎಂಬಂತೆ ಅದರ ಹೆಸರನ್ನೇ ಬದಲಾಯಿಸಿಕೊಂಡು ಇಂದಿಗೂ ಬಳಸುತ್ತಿರುವುದು ವಿಷಾದನೀಯವಾದದ್ದು. 

ದಕ್ಷಿಣಭಾರತದ ಸಂಗೀತಕ್ಕೆ ಕರ್ನಾಟಕವು ನೀಡಿದ ಕೊಡುಗೆಗಳಿಂದಲೂ ದಷ್ಟಪುಷ್ಟವಾಗಿ ಬೆಳೆಸಿ ನಿಲ್ಲಿಸಿದ ಪದ್ಧತಿಗಳಿಂದಲೂ ಈ ಸಂಗೀತಕ್ಕೆ ಕರ್ನಾಟಕದ ಹೆಸರೇ ವಿಶೇಷಣವಾಯಿತು. ಆದರೆ ಸುಮಾರು 1970ರ ದಶಕದಿಂದ ನೆರೆನಾಡಿನ ಸಂಗೀತವಿದ್ವಾಂಸರ ಸಾಧನೆಗಳಿಂದ ಮೂಡಿಬಂದ ನಾದಲಹರಿಗೆ ಮಾರುಹೋಗಿ, ಅಷ್ಟೇ ಅಲ್ಲದೆ ಅವರ ಸ್ವಾಂತಮಹಿಮೆಯ ತುತ್ತೂರಿಗೆ ತಲೆದೂಗುತ್ತ, ನಮ್ಮ ಕನ್ನಡಿಗ ವಿದ್ವಾಂಸರ ಕಲೆಗಾರಿಕೆಯನ್ನು ತಾರ್ಕಣೆಹಾಕಿ ವಿಡಂಬನೆಮಾಡುತ್ತ ಹೀಗಳೆದ ದುರದೃಷ್ಟಕರ ನಡೆವಳಿಕೆಯೂ ಇದಕ್ಕೆ ಕಾರಣವಾಯಿತು. ನಮ್ಮ ಸಂಗೀತಗಾರರೂ ಸಹ ಈ ವಿಷವರ್ತುಲದಲ್ಲಿ ಸಿಕ್ಕುಹಾಕಿಕೊಂಡರು.

ಕರ್ನಾಟಕದಲ್ಲಿ ಸಂಗೀತವು ‘ಕಾರ್ನಾಟಿಕ್’ ಅದರೆ ಮಾತ್ರ ಅದು ಶಾಸ್ತ್ರೀಯ ಎಂಬಷ್ಟರ ಮಟ್ಟಕ್ಕೆ ಇದು ಹಾಸ್ಯಾಸ್ಪದವಾಯಿತು. ಆದರೆ ಇದನ್ನು ನಮ್ಮ ಇಂದಿನ ಕೆಲವು ಪ್ರತಿಭಾವಂತ ಯುವವಿದ್ವಾಂಸರೂ ಹಾಗೂ ಅವರ ಹಿಂದಿನ (ಗುರು) ತಲೆಮಾರಿನ ವಿದ್ವಾಂಸರ ತಪಸ್ಸು ಮತ್ತು ಅನವರತ ಸಂಗೀತಶ್ರದ್ಧೆಯು ಮೆಟ್ಟಿಮೀರಿನಿಂತಿದೆ. ಇಂತಹ ವಿದ್ವಾಂಸರು ಇಂದು ವಿಶ್ವದ ಮಟ್ಟದಲ್ಲಿ ಕರ್ನಾಟಕದ್ದೇ ಏನು ಭಾರತೀಯ ಸಂಗೀತಕ್ಕೇ ಒಂದು ಮೆರುಗಿನ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇಂತಹವರಿಗೆ ಕರ್ನಾಟಕದ ಜನತೆಯೂ ಸರ್ಕಾರಗಳೂ ಸರ್ಕಾರೀ ನಾಯಕರೂ ನೀಡಿರುವ ಪೋಷಣೆ ಒತ್ತಾಸೆಗಳು ಅಸಮರ್ಪಕವೇ ಆಗಿದೆ. 

ಉದಾಹರಣೆ, ಕನ್ನಡದ ಕರ್ನಾಟಕದ ವಾಗ್ಗೇಯಕಾರರ ಬಗ್ಗೆ ಕೆಲವು ವರ್ಷಗಳ ಹಿಂದೆ ಒಂದು ದಿವ್ಯನಿರ್ಲಕ್ಷ್ಯಗಳನ್ನು ನಮ್ಮ ಜನರೂ ಸರ್ಕಾರದ ಸಂಸ್ಕøತಿ ವಿಭಾಗಗಳೂ ತಾಳಿದ್ದವು. ಕರ್ನಾಟಕದಲ್ಲಿ ಕನ್ನಡಿಗ ವಿದ್ವಾಂಸರಿಗೇ ಮೊದಲ ಮನ್ನಣೆ, ಕರ್ನಾಟಕದ ವಾಗ್ಗೇಯಕಾರರಿಗೇ ಮೊದಲ ಆದ್ಯತೆ, ಕನ್ನಡಭಾಷೆಗೇ ಮುಖ್ಯ ಆದರ, ಕನ್ನಡನಾಡಿನಲ್ಲಿ ರೂಢಿಸಿ ಜನಜನಿತವಾದ ಕಲೆಗಳಿಗೇ ಮೊದಲ ಆದ್ಯತೆ, ಸಂಪನ್ನತೆ, ಪೋಷಣೆ, ಕಾಸುಜಮಾವಣೆ ಇತ್ಯಾದಿಗಳ ಕೂಗು ಇತ್ತೀಚಿಗಷ್ಟೇ ಗಟ್ಟಿಯಾಗಿ ಕೇಳಿಬರುತ್ತಿದೆ. ಕರ್ನಾಟಕದ ಕಲೆಗಾರರನ್ನು ಒಟ್ಟಾಗಿ ನೋಡುವ, ಅವರನ್ನು ಏಕೀಕೃತ ಸಮಾನಪ್ರಭಾವ-ಮಾನ್ಯತೆಯ ಕಲಾವಿದ ಜನಾಂಗ ಎಂದು ನೋಡುವ, ಕರ್ನಾಟಕದ (ರಾಜಕೀಯ) ಏಕೀಕರಣವಾದಂತೆ ಕಲಾವಲಯ ಏಕೀಕರಣ ಮಾಡಿಕೊಳ್ಳುವ ಆದರೆ ಆಯಾ ವಲಯಗಳ ವಿಶೇಷಣಗಳಾದ ಕಲೆಗಳನ್ನು ಅಲ್ಲಲ್ಲೇ ಗುರುತಿಸಿ ಪ್ರಥಮ ಆದ್ಯತೆಗಳನ್ನು ನೀಡಿ ಕರ್ನಾಟಕದ ಮಿಕ್ಕ ಪ್ರಾಂತ್ಯಗಳಲ್ಲಿ ಅವುಗಳ ಸೊಗಡನ್ನು ಅಷ್ಟೇ ಕಾಪಾಡಿಟ್ಟು ತೋರಿಸುವ ಪ್ರಯತ್ನವು ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ.

ಇಷ್ಟೆಲ್ಲಾ ಸವಾಲುಗಳು ನಮ್ಮ ಮುಂದಿರುವುದಕ್ಕೆ ಹಲವಾರು ಕಾರಣಗಳಿವೆ.  ಜನಪದ, ಬುಡಕಟ್ಟು ಮತ್ತು ಆನುವಂಶೀಯ ಸಂಗೀತಕಲೆಗಳು ತನ್ನತನಗಳನ್ನು ಈ ಜಾಗತಿಕವಿಶ್ವದಲ್ಲಿ ಸೊಗಡುತನದಿಂದ ಉಳಿಸಿಕೊಳ್ಳುವುದು, ತನ್ಮೂಲಕ ವಂಶಪರಂಪರೆಯಲ್ಲಿ ಶಿಷ್ಯಪರಂಪರೆಯಲ್ಲಿ ಕಲೆಯನ್ನು ಜೀವಂತವಾಗಿಡುವುದು ಒಂದು ದೊಡ್ಡ ಸವಾಲಾಗಿದೆ. ಸುಗಮಸಂಗೀತ ವಲಯದಲ್ಲಿ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಹಲವಾರು ಸವಾಲುಗಳಿವೆ. ನಮ್ಮ ಕಾಲದ ಹಾಡಿನಜಾಡಿಗೆ ಇದು ತನ್ನ ಸಂಗೀತಲಹರಿಯನ್ನು ಜಾಲಿಸಿ ಲಾಲಿಸಬೇಕಾಗಿದೆ. ಅಷ್ಟೇ ಅಲ್ಲದೆ ಸುಗಮಸಂಗೀತವು ಪ್ರಸಂಗಭೂಯಿಷ್ಟವಾದುದು, ಎಂದರೆ ಅದು ಮಾನವ ಪ್ರೇಮವನ್ನೋ ಸಂಬಂಧಗಳ ಸಿಕ್ಕುಗಳ ಲಹರಿಗಳನ್ನೋ ತನ್ನ ಸಾಹಿತ್ಯದ ಪ್ರಸಂಗಗಳಲ್ಲಿ ಹೆಣೆದುಕೊಂಡು ಅದನ್ನು ಸಂಗೀತದ ಭಾವುಕತೆಯಲ್ಲಿ ನಮ್ಮಕಾಲದ ನಡೆವಳಿಕೆಗೆ ಅಳವಡಿಸಬೇಕಾಗಿದೆ. ಇದನ್ನು ಸಾಧಿಸಲು ಅದು ಸಹವಾದನದ ಸಹವಾದಕರ ಜೊತೆಗಾರಿಕೆಗಾಗಿ ಬಹಳ ಹಣವನ್ನೂ ಸವಲತ್ತುಗಳನ್ನೂ ಮಾಡಿಕೊಳ್ಳಬೇಕಾಗಿದೆ. 

ಸಿನೆಮಾ ಇತ್ಯಾದಿ ಜನಪ್ರಿಯ ಇನ್ನಿತರ ಸಂಗೀತದ ಪ್ರಭಾವಗಳ ಜಾಲದಲ್ಲಿ ಈ ಕಾಸುಗಳಿಕೆಯು ಹಲವು ಬಾರಿ ದುರ್ಧರಪ್ರಯತ್ನಗಳೇ ಆಗಿರುತ್ತದೆ. ಸಿನೆಮಾ ಸಂಗೀತವು ಇಂದು ಹಳೆಯ ಕಾಲದಂತಿಲ್ಲ. ಇಲ್ಲಿ ಸಿನೆಮಾ ಗೆದ್ದರೆ ಮಾತ್ರ ಅದರ ಸಂಗೀತವು ಕಾಸುಗಳಿಸುತ್ತದೆ. ಸಿನೆಮಾ ಕಥೆಯಿಂದಾಗಿ ಸೋತರೆ ಸಂಗೀತವು ಶ್ರೇಷ್ಠಮಟ್ಟದ್ದಾಗಿದ್ದರೂ ಅದು ಕಾಸುಗಳಿಸುವುದಿಲ್ಲ. ಅಲ್ಲದೆ ಇಂದಿನ ಸಿನೆಮಾಸಂಗೀತದ ಪದ್ಧತಿಯಲ್ಲಿ ಏಕರೂಪಶೈಲಿಯು ಸಾಧ್ಯವಿಲ್ಲ. ತಕ್ಷಣದಲ್ಲಿ ‘ಯಶಸ್ವಿ’ಯಾಗಿರುವ ಯಾವುದೇ ವಾದ್ಯ, ಟ್ಯೂನ್, ಗಾಯಕ, ನಿರ್ದೇಶಕ ಇತ್ಯಾದಿಗಳ ಮಜಲುಗಳನ್ನು ಅದು ಭರಿಸಬೇಕಾಗುತ್ತದೆ. ಇದರಿಂದ ಗೆದ್ದೇಗೆಲ್ಲುತ್ತೆ, ಕಾಸುಗಳಿಸುತ್ತೆ ಹೊಸತನದ ಛಾಪುಮೂಡುತ್ತೆ ನಿಲ್ಲುತ್ತೆ ಎಂಬ ಭರವಸೆಯು ಹಲವುಬಾರಿ ಭ್ರಮನಿರಸನವೇ ಆಗುತ್ತದೆ!

ಹೊಸಗಾಯಕರು ಪಾಪ್ಯುಲರ್ ವೇದಿಕೆಗಳಿಂದ ಆದ ಜನಪ್ರಿಯತೆಯ ಪರಿಣಾಮವಾಗಿ (ಅದೇ ಹಿಂದಿನ ಸಿನಿಮಾ ಹಾಡುಗಳನ್ನೇ ಹಾಡಿ ಲೈಟುಮೈಕು ಕಾಸ್ಟ್ಯೂಮುಗಳ ಪರಿಣಾಮವಾಗಷ್ಟೆ) ಇಲ್ಲಿಗೆ ನೇರವಾಗಿ ಹಾರಿಬಂದಿರುತ್ತಾರೆ. ಅವರಲ್ಲಿ ಬಹುತೇಕ ಸಂಗೀತಕಲಿಕೆಯಿಂದಲೂ ಶ್ರದ್ಧೆಗಳಿಂದಲೂ ಪ್ರತಿಭೆಗಳಿಂದಲೂ ಪಕ್ವಗೊಂಡು ಬಂದವರಾಗಿರುವುದಿಲ್ಲ. ಹೀಗಾಗಿ ಇಂತಹ ಹೊಸಗಾಯಕರು ಬಹಳ ಬೇಗ ಹಳಬರಾಗಿಬಿಡುತ್ತಾರೆ.   

ಶಾಸ್ತ್ರೀಯ ಕಲೆಗಳಲ್ಲಂತೂ ಕಲೆಗಾರರಾಗಿ ಉಳಿದು ಬೆಳೆದು ಜೀವನಮಾಡುವ ಮಾರ್ಗವು ಮುಖ್ಯವಾಗಿ ಎರಡೇ ಬಗೆಯದ್ದು: ಒಂದು ಗುರುವಾಗಿ ನಿಂತು ಸಂಗೀತಪಾಠಮಾಡಿ ಗುರುಕುಲಬೆಳೆಸಿ ಮಾನ್ಯತೆ ಪಡೆಯುವುದು, ಇನ್ನೊಂದು ಕೇವಲ ಸಂಗೀತಕಛೇರಿಗಳನ್ನೇ ಮಾಡಿ ಅದರ ಗಳಿಕೆಯಿಂದ ಜೀವನ ನಡೆಸುವುದು.  ಇವೆರೆಡರ ಮಧ್ಯಂತರದಲ್ಲೂ ಕಲೆಗಾರರಿದ್ದಾರೆ, ಆದರೂ ಈ ಎರಡು ಕೊನೆಗಳೇ ಇಲ್ಲಿಯ ಮುಖ್ಯಸಾಧನೆಗಳು.

ಶಾಸ್ತ್ರೀಯಸಂಗೀತದಲ್ಲಿ ಹೊಸತನ ಪ್ರಯೋಗಗಳು ಮತ್ತು ಸಂಪ್ರದಾಯಶರಣತೆಯ ನಡುವೆಯೂ ಹೊಸಪೀಳಿಗೆಯ ನಿರ್ಮಾಣಕಾರ್ಯವು ನಿರಂತರವಾಗಿ ನಡೆಯುತ್ತಿರಬೇಕಾದ ಕೆಲಸ. ತಮ್ಮ ಸಂಗೀತದಲ್ಲಿ ಒಂದು ಹೊಸತಿರುವನ್ನು ತೆಗೆದುಕೊಳ್ಳಬೇಕಾದಾಗ ಸಂಗೀತಗಾರರು ಬಹಳ ಸಂಯಮದಲ್ಲಿರಬೇಕಾಗುತ್ತದೆ. ತಕ್ಷಣವೇ ತಮ್ಮ ಹಿಂದಿನ ಶೈಲಿಯನ್ನು ಮುರಿದುಹಾಕಿ ಸಂಗೀತಪದ್ಧತಿಯನ್ನು ತಿರುಗುಮುರುಗು ಮಾಡಿಕೊಳ್ಳುವ ಸ್ವಾತಂತ್ರ್ಯ ಇಲ್ಲಿ ಹೆಚ್ಚಾಗಿಲ್ಲ. ಆದರೆ ಆಂದೋಲನವು ಮೂರೂ ಕಾಲಕ್ಕೆ (ಅಂದು, ಇಂದು, ಮುಂದು) ನಿಲ್ಲುವಂತೆ ವಿವೇಕಯುತವಾಗಿ ನಡೆಯುತ್ತೆ. ಏಕೆಂದರೆ, ತಕ್ಷಣದ ಮಜಲು ಆಕ್ಷಣಕ್ಕೆ ಮೆರುಗಿದರೂ ಕ್ಷಿಪ್ರವಾಗಿ ಕುಸಿದುಬೀಳುತ್ತೆ ಅದು. ‘ಶಾಸ್ತ್ರೀಯ’ ಸಂಗೀತಪದ್ಧತಿಯು ಮೂರ್ಕಾಲಕ್ಕೆ ಉಳಿದುನಿಂತರೇ ಅದೊಂದು ಸಂಗೀತವಾಗಿ ಉಳಿಯುತ್ತೆ, ಇಲ್ಲದಿದ್ದರೆ, ತನ್ನ ಹೆಸರೇ ಬದಲಾಯಿಸಿಕೊಂಡು ಕವಲೊಡೆದು ಹರಿದುಹೋಗುತ್ತದೆ. ನಮ್ಮ ಸಂಗೀತ ಇತಿಹಾಸದಲ್ಲಿ ಇಂತಹ ಕವಲುಗಳು ಟಿಸಿಲುಗಳು ವೈಭವವಾಗಿ ಅಬ್ಬರಿಸಿ ಎದ್ದುನಿಂತು ರಾಜಾಶ್ರಯವಿದ್ದೂ ಸಹ ಸ್ವಲ್ಪಕಾಲದಲ್ಲೇ ಕ್ಷೀಣಿಸಿಹೋಗಿ ಕಾಲಗರ್ಭವನ್ನು ಸೇರಿಬಿಟ್ಟಿರುವುದನ್ನು ಕಾಣಬಹುದು.

ಸಂಗೀತ ಶಿಕ್ಷಣದ ಸವಾಲು

ಎಲ್ಲ ಕಲಾಪ್ರಕಾರಗಳಲ್ಲಿಯೂ ಮುಖ್ಯವಾಗಿ ಸಂಗೀತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಇಂದು ಎದ್ದುನಿಂತ ಸವಾಲೆಂದರೆ, ಅದು ಸಂಗೀತಶಿಕ್ಷಣ. ಹಿಂದೆಂದೂ ಪ್ರಶ್ನಿಸಿರದ ಸವಾಲುಗಳು ಇದರಲ್ಲಿ ಎದುರಾಗಿವೆ, ಹಿಂದೆಂದೂ ಕಾಣದ ಜವಾಬುದಾರಿಗಳು ಇಂದು ಸಂಗೀತಶಿಕ್ಷಕರಿಗೆ ಎದುರಾಗಿದೆ, ಹೊಸಯುಗದ ಪೀಳಿಗೆಯಾಗಿ ಹುಟ್ಟಿ ಜಾಗತಿಕಸಮಾಜದ ಕೂಸುಗಳಾಗಿದ್ದೂ ಸ್ವಲ್ಪ ಹಿಂದಿನ ತಲೆಮಾರಿನ ಆಲೋಚನೆಗಳನ್ನೇ ಹಿಡಿದಿಟ್ಟುಕೊಂಡ ಈ ಹೊಸಕೂಸುಗಳ ತಂದೆತಾಯಿಯರ ಮಾರ್ಗದರ್ಶನಕ್ಕೋ ಒತ್ತಾಸೆಗೋ ಮಣಿದು ಸಂಗೀತ ಕಲಿಯಲು ಬಂದ ಶಿಷ್ಯರಲ್ಲಿ ಸಂಗೀತವಿದ್ಯೆಯಲ್ಲಿ ಒಂದು ಮೌಲ್ಯವನ್ನು ಕಂಡುಹಿಡಿಯಲಾರದ ಸವಾಲು ಎದುರಾಗಿದೆ.

ಕರ್ನಾಟಕದ ಸಂಗೀತಕ್ಷೇತ್ರದ ಶಿಕ್ಷಣಪದ್ಧತಿಗಾಗಿ ರೂಪಿಸಿಕೊಂಡಿರುವ ಪಠ್ಯವೂ ಪುಸ್ತಕವೂ ಕರ್ನಾಟಕ ಸಂಗೀತವನ್ನು ಬೋಧಿಸಲು, ಕಲಿಯಲು ಮತ್ತು ಪರೀಕ್ಷೆಗಳಲ್ಲಿ ಪಾಸಾಗಲು ತುಂಬ ಸಹಕಾರಿಯಾಗಿದ್ದರೂ, ಅವು ಓರ್ವ ಯಶಸ್ವೀ ಸಂಗೀತಗಾರರಾಗಲು ಅಷ್ಟೇನೂ ಸಹಕಾರಿಯಾಗಿಲ್ಲ. ಅಷ್ಟೇ ಏಕೆ, ಕರ್ನಾಟಕದ ಉದ್ದಕ್ಕೂ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿತವಾಗಿರುವ ಸಂಗೀತವಿಭಾಗಗಳಿಂದಲೂ, ಸಂಗೀತ ವಿಶ್ವವಿದ್ಯಾಲಯದಿಂದಲೂ ಯಾವ ಹೆಸರು ಮಾಡಿದ ಯಶಸ್ವೀ ಕಲೆಗಾರರು ಸಂಗೀತಗಾರರು ಮೂಡಿಬರುತ್ತಿಲ್ಲ. ಮೌಲ್ಯಮಾಪನದ ಸವಾಲಿಗಷ್ಟೇ ಸಂಗೀತಪದ್ಧತಿಗಳನ್ನು ಪಠ್ಯಗಳನ್ನು ರೂಪಿಸಿಕೊಂಡು ಸೆಮಿಸ್ಟರ್ ಪದ್ಧತಿಯ ನಿಯಮಿತ ಕಾಲಾವಕಾಶಕ್ಕಷ್ಟೆ ಬೋಧನಸಾಧನಗಳನ್ನು ಏರ್ಪಡಿಸಿಕೊಂಡರೆ ಕಲೆಯು ಅರಳಿ ಫಲಕೊಟ್ಟು ಸಂಗೀತವಿದ್ವಾಂಸರು ಮೂಡಿಬರುತ್ತಾರೆ ಎಂದಾಗುವುದಿಲ್ಲ. 

ಗುರುಕುಲ ಪದ್ಧತಿಯಲ್ಲಿ ಗುರುಶಿಷ್ಯರು ಮುಖಾಮುಖಿಯಾಗಿ ಅವಶ್ಯಕವಿದ್ದಷ್ಟು ಕಾಲವನ್ನು ತಾವೇ ನಿರ್ಧರಿಸಿ ಅದರೊಳಗೆ ಬೋಧನ ಸಾಧನೆಗಳನ್ನು ಮಾಡಿದರೆ ಆಗ ಸಂಗೀತವು ಕಲೆಯಾಗಿ ಉಳಿಯುತ್ತದೆ ಎಂಬುದಕ್ಕೆ ಕರ್ನಾಟಕದ ಹಲವಾರು ಸಂಗೀತಗುರುಕುಲಗಳೇ ಸಾಕ್ಷಿಯಾಗಿವೆ. ಇಂತಹ ಗುರುಕುಲಗಳಿಂದ ಮೂಡಿಬಂದ ಸಂಗೀತಗಾರರು ಇಂದು ವಿಶ್ವಮಾನ್ಯರಾಗಿದ್ದಾರೆ ಕೂಡ. ಹೀಗೆ ಶೈಕ್ಷಣಿಕ ಮತ್ತು ಗುರುಕುಲಗಳ ಎಲ್ಲ ಸವಲತ್ತುಗಳನ್ನೂ ಸತ್ವಗಳನ್ನೂ ಒಳಕೊಂಡ ಒಂದು ಪದ್ಧತಿಯ ಹೊಸ ಆವಿಷ್ಕಾರವು ಕರ್ನಾಟಕದಲ್ಲೇ ಆಗಬೇಕಾಗಿದೆ. ಈ ಸವಾಲನ್ನು ಕರ್ನಾಟಕವೇ ಎದುರಿಸಬೇಕಾಗಿದೆ.

ಪರಿಹಾರಸೂತ್ರ

  1. ಕರ್ನಾಟಕದ ಕಲೆಗಾರರು ತಮ್ಮ ಕಲೆಯನ್ನು ಸ್ವಾಭಿಮಾನದಿಂದ ಒಪ್ಪಿಕೊಳ್ಳಬೇಕು (ಕಾರ್ನಾಟಿಕ್ ಎಂದುಕೊಳ್ಳಬಾರದೆಂಬುದು ಇದರ ಒಂದು ಉದಾಹರಣೆಯಷ್ಟೆ). ಪರಂಪರೆಯಲ್ಲಿ ಕಲಿತದ್ದಾಗಲೀ ಸಂಪ್ರದಾಯಶರಣತೆಯಲ್ಲಿ ಕಲಿತದ್ದಾಗಲೀ ಅದನ್ನು ಸಾಧಿಸಿ ರೂಢಿಸಿಕೊಂಡಮೇಲೆ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾ ಜಡ್ಡಾಗಿ ಜಳ್ಳಾಗಿ ನಿಂತ ಆಚರಣೆಗಳೆಂಬ ಅಡಚಣೆಗಳನ್ನು ಮುರಿದು ಕರ್ನಾಟಕ ಸಂಗೀತವಾಹಿನಿಯ ಇಕ್ಕೆಲದಡಗಳನ್ನು ತಮ್ಮ ಸಂಗೀತಗುರುಕುಲ, ಶಿಷ್ಯಪ್ರಶಿಷ್ಯ ಮತ್ತು ಶ್ರೋತೃವರ್ಗಗಳಿಂದ ತುಂಬಿಬಿಡಬೇಕು. ಇದಕ್ಕೆಲ್ಲ ಸ್ವಾಭಿಮಾನ-ಸ್ವನಿಷ್ಠೆಗಳೇ ಮುಖ್ಯಸಾಧನೆಗಳು.
  2. ಸಂಗೀತ ಶಿಕ್ಷಣ ಪದ್ಧತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕಲಿತುಕೊಳ್ಳುವವವರ ಯೋಗ್ಯತಾನುಸಾರ ಸಂಗೀತದ ಪ್ರಥಮ ಅಭ್ಯಾಸ ಪಾಠಗಳನ್ನು ರೂಪಿಸಿಕೊಳ್ಳಬೇಕು. ಇಂದು ಶಿಷ್ಯರಲ್ಲಿ ಶ್ರುತಿಸೇರಿಸಿ ಅಭ್ಯಾಸಮಾಡಲು, ಲಯಬದ್ಧವಾಗಿ ವಿನ್ಯಾಸ ಮಾಡಿಕೊಳ್ಳಲು ವಿಶೇಷವಾದ ಹೊಸ ಸಲಕರಣೆಗಳು ದೊರೆತಿವೆ. ಇವುಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಬೇಕು.
  3. ಸಂಗೀತವು ಕೇವಲ ತಾಂತ್ರಿಕತೆಯ ಶುಷ್ಕಪಾಂಡಿತ್ಯದ ಗೊಂದಲಗಳಾಗದೆ, ಹೃದ್ಯವಾದ ಭಾವುಕ ಸಂವಾದವಾಗಬೇಕು. ನೋಡಿ, ಗಣಿತ-ವಿಜ್ಞಾನಗಳಂತಹ ಶುಷ್ಕವಿದ್ಯೆಗಳನ್ನೇ ಇಂದು ಕ್ರೀಡಾವಿನೋದದಂತೆ ಪಾಠಮಾಡಿ ಮನದಟ್ಟುಮಾಡುತ್ತಿರುವ ಈ ನಮ್ಮ ಕಾಲದಲ್ಲಿ, ಮೂಲತಃ ಹೃದಯದ ಭಾವುಕವಾದ ಸ್ವಭಾವಮಧುರವಾದ ಸಂಗೀತವನ್ನು ಈ ಎಲ್ಲ ಹೃದಯವಂತಿಕೆಯನ್ನೂ ಒಳಕೊಂಡಂತಿರುವ ಶಿಕ್ಷಣಪದ್ಧತಿಯನ್ನು ರೂಪಿಸಲಾಗುವುದಿಲ್ಲವೇ! ಇದು ಸಾಧ್ಯ ಮಾತ್ರವಲ್ಲ, ಅತಿ ಅವಶ್ಯಕ ಕೂಡ.
  4. ಸಂಗೀತಕಛೇರಿ ಪದ್ಧತಿಯಲ್ಲಿ ಹಲವಾರು ಬದಲಾವಣೆಗಳು ಆಗಬೇಕು. ಶ್ರೋತೃಗಳೊಡನೆ ನೇರ ಸಂವಾದವಾಗಬೇಕಾಗಿದೆ. ಸಂಗೀತವು ನಮ್ಮ ದೇಶದ ಸಂಸ್ಕೃತಿಯನ್ನೂ ವಿವೇಕವನ್ನೂ ನಡೆವಳಿಕೆಯನ್ನೂ ಪ್ರತಿಬಿಂಬಿಸುತ್ತದೆ. ಈ ಸಾಂಸ್ಕೃತಿಕ ಪ್ರತಿಬಿಂಬದಂತಿರಬೇಕು ನಮ್ಮ ಕಲಾವಿದರು. ಹಿಂದಿನ ಪೂರ್ವಾಚಾರ್ಯರೆಲ್ಲ ಹೀಗೆ ಸಂಗೀತ ಸಾಂಸ್ಕೃತಿಕತೆಗೆ ಒಂದು ಗುರುತಾಗಿ ಕಾಣಿಸುತ್ತಿದ್ದರು.  ಅವರ ವೇಶಭೂಷಣಗಳಿಂದ ನಡೆವಳಿಕೆಯಿಂದ ಹಾಗೂ ಜೀವನಶೈಲಿಯಿಂದ ಈ ಸಂಸ್ಕೃತಿಯನ್ನು ಎತ್ತಿಹಿಡಿದರು. ಆದರೆ ಇಂದು ನಮ್ಮ ಸಂಗೀತವು ಒಂದು ಮಜಲಾಗಿ ಉಳಿಯುತ್ತಿರುವುದು, ಯಥೇಚ್ಛವಾಗಿ ಕಾಸುಮಾಡಲಿಕ್ಕೆ, ತಕ್ಷಣದ ಪ್ರಸಿದ್ಧಿಯನ್ನು ಟೀವಿಚ್ಯಾನೆಲ್‍ಗಳಲ್ಲಿ ಪಡೆಯುವುದಕ್ಕೆ, ರಂಗುರಂಗಿನ ಪೋಷಾಕುಗಳನ್ನು ಧರಿಸಿ ಹೀರೋಹೀರೋಯಿನ್‍ಗಳಂತೆ ವರ್ತಿಸುವುದಕ್ಕೆ ಮಾತ್ರ ಬಳಕೆಯಾಗುತ್ತಿರುವುದು ವಿಷಾದನೀಯವಾದದ್ದು. ಇವೆಲ್ಲ ಇದ್ದೂ ಉತ್ತಮ ಸಂಗೀತವನ್ನು ನೀಡಿದರೆ ಆಗ ಸಾರ್ಥಕವಾಗುವುದು. ಹೊಸಪೀಳಿಗೆಯ ಹೊಸಆವಿಷ್ಕಾರಗಳಿಗೆ ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತು ಸ್ಫೂರ್ತಿದಾಯಕವಾಗಬೇಕು. ಗುರುಶಿಷ್ಯರ ನಡುವೆ ಇಂತಹ ವಿವೇಕದ ಸಂಸ್ಕೃತಿ ಸಂವಾದಗಳು ಆಗಬೇಕು. ಕೇವಲ ಸಂಗೀತದ ಸರಿಗಮಗಳನ್ನಷ್ಟೇ ತಾಳವನ್ನು ತೊಡೆಯಮೇಲೆ ಕೆಲಕಾಲ ತಟ್ಟುವಷ್ಟರ ಮಟ್ಟಕ್ಕೆ ನಮ್ಮ ಸಂಗೀತಶಿಕ್ಷಣ ನಿಲ್ಲಬಾರದು. 

*ಲೇಖಕರು ಹೆಸರಾಂತ ಸಂಗೀತಮನೆತನಕ್ಕೆ ಸೇರಿದವರು; ಪದ್ಮಶ್ರೀ ಪುರಸ್ಕೃತ ಡಾ.ರಾ.ಸತ್ಯನಾರಾಯಣರ ಮಗ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ ಪುರಸ್ಕೃತರು. ಹಲವಾರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಂಘಸಂಸ್ಥೆಗಳಲ್ಲಿ ತಮ್ಮ ಸಂಗೀತ-ಶಾಸ್ತ್ರ ಸೇವೆಯನ್ನು ಸಲ್ಲಿಸಿದ್ದಾರೆ.

ಮೇಲಿನ ಲೇಖನದ ಬಾಕ್ಸ್

ಶಾಸ್ತ್ರೀಯ ಸಂಗೀತದಲ್ಲಿನ ಹೊಸ ಪ್ರಯೋಗಗಳು

ನಮ್ಮ ಕಾಲದ ಶಾಸ್ತ್ರೀಯ ಸಂಗೀತದಲ್ಲಿನ ಹೊಸಪ್ರಯೋಗಗಳನ್ನು ನಾವು ಗುರುತಿಸಿ ಪಟ್ಟಿಮಾಡಿಟ್ಟರೆ ಪ್ರಸ್ತುತ ಲೇಖನವು ಒಂದು ಗ್ರಂಥವಿಸ್ತಾರವಾಗಿಬಿಡಬಹುದು. ಹೀಗಾಗಿ ತೀರಾ ಇತ್ತೀಚಿನ ಕೆಲವು ಹೊಸಯಶಸ್ವೀ ಪ್ರಯೋಗಗಳನ್ನು ಗುರುತಿಸಬಹುದು. ಸುಮಾರು 8 ವರ್ಷಗಳಿಂದೀಚೆಗೆ ಕರ್ನಾಟಕದ ಶಿವಮೊಗ್ಗೆಯಲ್ಲಿ ಮೂಡಿಬಂದ ಒಂದು ಹೊಸ ಸಂಗೀತಪ್ರಯೋಗವೆಂದರೆ ‘ಏಕವ್ಯಕ್ತಿ ಮನೋಧರ್ಮ ಸಂಗೀತಕಛೇರಿಗಳು.  ಇದರ ರೂವಾರಿ ಮಲೆನಾಡಿನ ಸಂಗೀತಾಚಾರ್ಯ ವಿದ್ವಾನ್ ಎಚ್.ಎಸ್.ನಾಗರಾಜ್. 

ಸಂಗೀತಕಛೇರಿಗಳು ತನ್ನ ಸತ್ವದಲ್ಲಿ ಸಾತ್ವಿಕತೆಯಲ್ಲೇ ಮುಖ್ಯಗಾಯಕ-ವಾದಕರ ಮನೋಧರ್ಮದೊಳಗೆ ಇದ್ದಿರಬೇಕು ಎಂಬ ಅಪೇಕ್ಷೆಯಿಂದ ನಾಗರಾಜ್ ರೂಪಿಸಿದರು ಇದನ್ನು. ಕರ್ನಾಟಕ ಸಂಗೀತಕಛೇರಿಯಲ್ಲಿ ಅತ್ಯಾವಶ್ಯಕವೆಂದುಕೊಂಡಿದ್ದ ಸಹವಾದನಗಳು (ಪಿಟೀಲು, ಮೃದಂಗ ಮತ್ತು ಉಪವಾದ್ಯಗಳು) ಅವುಗಳನ್ನು ನುಡಿಸುವವರ ಮನೋಧರ್ಮವನ್ನವಲಂಬಿಸಿ ಮುಖ್ಯ ಗಾಯಕವಾದಕರನ್ನು ಪ್ರಭಾವಗೊಳಿಸುತ್ತದೆ ಎಂದು ಮನಗಂಡರು ನಾಗರಾಜ್. ಹೀಗಾಗಿ ಹಲವರ ಮನೋಧರ್ಮಗಳು ಒಂದಾದರೆ ಸರಿ, ಇಲ್ಲವಾದರೆ ಕಛೇರಿಯು ಅಬ್ಬರ ಆವುಟದ ಗೋಜಲಾಗಿಬಿಡುತ್ತದೆ ಎಂಬ ಸತ್ಯಕ್ಕೆ ಸವಾಲಾಗಿ ಈ ಏಕವ್ಯಕ್ತಿ ಮನೋಧರ್ಮ ಕಛೇರಿಗಳನ್ನು ಆರಂಭಿಸಿದರು.

ಇದರಲ್ಲಿ ಒಬ್ಬರೇ ವಾದಕ ಅಥವಾ ಗಾಯಕ ಕುಳಿತು ತಮಗಿಷ್ಟವಾದ ಮತ್ತು ಶ್ರೋತೃಗಳು ಅಪೇಕ್ಷಿಸುವ ಸಂಗೀತರಾಗತಾಳಕೃತಿಗಳನ್ನು ಹಿಡಿದು ಸಂಗೀತಕಛೇರಿಯನ್ನು ನೀಡಬೇಕು. ಇದರಲ್ಲಿ ಯಾವುದೇ ರೀತಿಯ ಅವಸರಗಳು ಕಳವಳಗಳು ಇರಬಾರದು. ಈ ಎರಡು ವರ್ಷಗಳ ಲಾಕ್‍ಡೌನ್ ಅಂತರ್ಜಾಲ ಸಾಮಾಜಿಕತಾಣಗಳಲ್ಲಿನ ಕಛೇರಿಗಳಲ್ಲಿ ಪ್ರತಿಶತ 90ರಷ್ಟು ಇಂತಹ ಏಕವ್ಯಕ್ತಿ ಮನೋಧರ್ಮ ಸಂಗೀತಕಛೇರಿಗಳೇ ಎಂದು ಗಮನಿಸಿದಾಗ ನಾಗರಾಜ್‍ರವರ ಈ ಪ್ರಯೋಗ ಎಷ್ಟೊಂದು ಮಹತ್ವದ್ದು ಎಂದು ತಿಳಿಯುತ್ತದೆ.

ಇದಲ್ಲದೆ, ಮೈಸೂರು, ಹುಬ್ಬಳ್ಳಿ, ಮಲೆನಾಡಿನ ಕೆಲವೆಡೆ ಮನೆಮನೆಗಳ ಪಡಸಾಲೆಗಳಲ್ಲಿ ಮತ್ತು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಮೈಕು ಲೈಟುಗಳಿಲ್ಲದ ಆದರೆ ಪಕ್ಕವಾದ್ಯಗಳ ಜೊತೆಗೆ ಸಂಗೀತಕಛೇರಿಗಳನ್ನು ಹಲವಾರು ಸಂಗೀತಗಾರರೇ ಏರ್ಪಡಿಸಿನೋಡಿದ್ದರು. ಇಂತಹ ಪ್ರಯೋಗವನ್ನು ಸಂಗೀತವಿದುಷಿ ಡಾ.ಆರ್.ಎನ್.ಶ್ರೀಲತಾರವರು ತಮ್ಮ ಸ್ವಗೃಹದಲ್ಲೇ ನೂರಾರು ಪ್ರಸಂಗಗಳಾಗಿ ಏರ್ಪಡಿಸಿದ್ದರು.  ಇವೆಲ್ಲವೂ ಯಶಸ್ಸನ್ನು ಕಂಡಿದ್ದು ಅದರ ಅಂತಸ್ಸತ್ವಕ್ಕೆ ಸಾಕ್ಷಿಯಾಗಿದೆ. ಮೈಸೂರಿನ ಶ್ರೀತ್ಯಾಗರಾಜ ಸಂಗೀತಸಭೆಯೂ ಸೇರಿದಂತೆ ಕರ್ನಾಟಕದಾದ್ಯಂತವೂ ಹಲವಾರು ಸಂಗೀತಸಭೆಗಳ ಆಶ್ರಯದಲ್ಲಿ ಯುವಜನಸಂಗೀತೋತ್ಸವಗಳು ನಡೆದಿದ್ದು ಇಂದು ಕರ್ನಾಟಕದ ಸಂಗೀತಕ್ಷೇತ್ರದಲ್ಲಿ ಯುವಕರು ತಮ್ಮ ಸಾಧನೆಯಲ್ಲಿ ಹೊಸತನವನ್ನು ತಂದಿಟ್ಟು ಸಂಗೀತವಿದ್ವಾಂಸರಾಗಿ ಸಾಮಾಜಿಕತಾಣಗಳಲ್ಲಿ ಮಿಂಚುತ್ತಿರುವುದಕ್ಕೆ ಕಾರಣವಾಗಿದೆ.

ಇದಲ್ಲದೆ, ಡಾ.ಶ್ರೀಕಾಂತಂ ನಾಗೇಂದ್ರಶಾಸ್ತ್ರೀಯವರ ‘ಶತಕಂಠಗಾಯನ (ಕರ್ನಾಟಕದ ವಾಗ್ಗೇಯಕಾರರ ಕೃತಿಗಳನ್ನಾಧರಿಸಿ), ನಗರಸಂಕೀರ್ತನೆಗಳು, ತ್ಯಾಗರಾಜ ಉತ್ಸವಗಳಲ್ಲಿ ‘ಊಂಛವೃತ್ತಿಗಳು (ಸಂಗೀತಗಾರರಲ್ಲಿ ವೃದ್ಧರು ಅಥವಾ ಶ್ರದ್ಧಾಳುಗಳಲ್ಲೊಬ್ಬರು ದಾಸರಪೋಷಾಕನ್ನು ಧರಿಸಿ ಉತ್ಸವದ ಸಭಾಂಗಣದ ಸುತ್ತಲಿರುವ ರಸ್ತೆಗಳಲ್ಲಿ ‘ಭಕ್ತಿ ಎಂಬ ಭಿಕ್ಷೆಯನ್ನು ನೀಡಿ ಎಂಬ ಕೋರಿಕೆಯೊಂದಿಗೆ ದಾಸರ, ತ್ಯಾಗರಾಜರ ಕೃತಿಗಳನ್ನು ಇತರರೊಡಗೂಡಿ ಹಾಡುತ್ತಾ ಸಂಚರಿಸಿ ಬರುವುದಕ್ಕೆ ಊಂಛವೃತ್ತಿ ಎಂದು ಹೆಸರಾಗಿದೆ), ಹಿಂದೂಸ್ಥಾನೀ ಸಂಗೀತದಲ್ಲಿ ‘ವಚನಕಛೇರಿಗಳನ್ನು ಮಾಡುವ ಹೊಸಪರಿ, ಮಹಿಳಾಸಂಗೀತವಿದುಷಿಯರೇ ಗಾಯಕ-ವಾದಕ-ಪಕ್ಕವಾದ್ಯಗಾರರಾಗಿ ನಡೆಸಿಕೊಡುವ ಕಛೇರಿಗಳು, ಏಕರಾಗನಿವೇಶಿತ ಸಂಗೀತಕಛೇರಿಗಳು, ಡಾ.ಮೈಸೂರು ಎಂ.ಮಂಜುನಾಥ್‍ರವರು ಯಶಸ್ವಿಯಾಗಿ ಪಾಶ್ಚಾತ್ಯ ಸಂಗೀತಗಾರ ವಾದ್ಯವೃಂದದ ಜೊತೆಗೆ ತಮ್ಮ ಕರ್ನಾಟಕ ಸಂಗೀತ ರಾಗತಾಳಯುಕ್ತ ಸಂಗೀತ ಯುಗಳಬಂದಿಗಳು, ಇತ್ಯಾದಿಗಳು ನಮ್ಮ ಕಾಲದ ಸಂಗೀತದ ಹೊಸತನಗಳಿಗೆ ಸಾಕ್ಷಿಯಾಗಿವೆ.

Leave a Reply

Your email address will not be published.