ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ

ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯ ಪರಂಪರೆಯ ಶಿಥಿಲತೆ.

-ಡಾ.ಹರೀಶ ಹೆಗಡೆ

ಜಗತ್ತಿನ ಬೇರಾವ ದೇಶದಲ್ಲಿಯೂ ಭಾರತೀಯ ಸಂಗೀತದಷ್ಟು ವೈವಿಧ್ಯಮಯ ಸಂಗೀತ ಕಂಡುಬರುವುದಿಲ್ಲ. ಅಂತೆಯೇ ಒಂದೇ ದೇಶದಲ್ಲಿ ಎರಡು ಶಾಸ್ತ್ರೀಯ ಸಂಗೀತಗಳಿರುವುದು ಅತಿ ವಿರಳವೇ. ಭಾರತೀಯ ಸಂಗೀತವು ಸುಮಾರು 13ನೇ ಶತಮಾನದಿಂದ ಶಾಸ್ತ್ರೀಯ ಸಂಗೀತದ ಎರಡು ಕವಲುಗಳಾಗಿ ಬೆಳೆದುಬಂದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ, ಉತ್ತರ ಭಾರತದಲ್ಲಿ ಹಿಂದುಸ್ಥಾನಿ ಸಂಗೀತ ಎಂದು ಪ್ರಾದೇಶಿಕವಾಗಿ ವಿಭಜನೆಗೊಂಡರೂ, ಕರ್ನಾಟಕದಲ್ಲಿ ಮಾತ್ರ ಇವೆರಡೂ ಸಮಾನ ಸ್ಥಾನಮಾನಗಳನ್ನು ಹೊಂದಿವೆ.

ಪುರಂದರದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಎಂ.ಎಸ್.ಸುಬ್ಬುಲಕ್ಷ್ಮಿ, ಬಾಲಮುರಲೀಕೃಷ್ಣ ಮುಂತಾದ ಶ್ರೇಷ್ಠ ಸಂಗೀತ ಕಲಾವಿದರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀಮಂತಗೊಳಿಸಿದರೆ, ಹಿಂದುಸ್ಥಾನಿ ಸಂಗೀತವನ್ನು ತಾನಸೇನ್, ಸ್ವಾಮಿ ಹರಿದಾಸ, ಗೋಪಾಲ ನಾಯಕರಾದಿಯಾಗಿ ಇತ್ತೀಚಿನ ಪಂ.ಭೀಮಸೇನ್ ಜೋಶಿ, ಡಾ.ಗಂಗೂಬಾಯಿ ಹಾನಗಲ್, ಪಂ.ಮಲ್ಲಿಕಾರ್ಜುನ ಮನ್ಸೂರ್, ಪಂ.ಬಸವರಾಜ ರಾಜಗುರು, ಪಂ.ಕುಮಾರ ಗಂಧರ್ವ, ಪಂ.ಜಸ್‍ರಾಜ, ಪಂ.ಅಜಯ್ ಚಕ್ರವರ್ತಿ, ವಿದುಷಿ ಕಿಶೋರಿ ಅಮೋಣಕರ್ ಮುಂತಾದ ಕಲಾವಿದರು ಉತ್ತುಂಗಕ್ಕೇರಿಸಿದ್ದಾರೆ.

ಕರ್ನಾಟಕದಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತವು ಹೆಮ್ಮರಾಗಿ ಬೆಳೆಯಲು ಮುಖ್ಯ ರೂವಾರಿಗಳು – ಪೂಜ್ಯ ಪಂಚಾಕ್ಷರ ಗವಾಯಿಗಳು, ಪೂಜ್ಯ ಪುಟ್ಟರಾಜ ಗವಾಯಿಗಳು. ಅನಂತರದಲ್ಲಿ ಬಂದ ಪಂ.ಭೀಮಸೇನ್ ಜೋಶಿ,  ಡಾ.ಗಂಗೂಬಾಯಿ ಹಾನಗಲ್, ಪಂ.ಮಲ್ಲಿಕಾರ್ಜುನ ಮನ್ಸೂರ್, ಪಂ.ಬಸವರಾಜ ರಾಜಗುರು, ಪಂ.ಕುಮಾರ ಗಂಧರ್ವ ಮುಂತಾದವರು. ಇವರು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಜರಾಮರವಾಗಿಸಿದವರು.

ಇವರ ಬಳಿಕ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಪ್ರತಿನಿಧಿಸುವ ಕಲಾವಿದರು ಅಧಿಕವಾಗಿ ರೂಪುಗೊಂಡರೂ, ಇವರಂತೆ ಹೆಸರನ್ನು ಚಿರಸ್ಥಾಯಿಯಾಗಿಸಿಕೊಂಡ ಕಲಾವಿದರು ಆಗಲೇ ಇಲ್ಲ. ಇದಕ್ಕೆ ಸಾಧಕರಲ್ಲಾದ ಬದಲಾವಣೆಯೂ, ಅವಸರವೂ, ಸಂಗೀತದ ಪಾರಂಪರಿಕ ಕೆಲವು ಪದ್ಧತಿಗಳ ಅವನತಿಯೂ ಕಾರಣವಾಗಿದೆ. ಘರಾಣಾ ಸಂಗೀತವು ಈಗ ಇಲ್ಲದಿರುವುದೂ ಸಂಗೀತದ ಶಿಸ್ತನ್ನು ಹಾಳುಗೆಡವಿದೆ.

ಒಂದು ಸಮಯದಲ್ಲಿ ಘರಾಣಾ ಎಷ್ಟು ಶಿಸ್ತಿನಿಂದ ಕೂಡಿತ್ತೆಂದರೆ ಕಲಾವಿದ ತಾನು ಕಲಿತ ಘರಾಣೆಯ ಸಂಗೀತದ ಮೇಲೆ ಬೇರಾವ ಸಂಗೀತದ ಪರಿಣಾಮವಾಗದಂತೆ ಜಾಗ್ರತೆ ವಹಿಸುತ್ತಿದ್ದ. ಆದರೆ ಇಂದು ಯೂ-ಟ್ಯೂಬ್, ಮೊಬೈಲ್‍ಗಳಲ್ಲಿ ಬೆರಳ ತುದಿಯಲ್ಲಿಯೇ ಹೇರಳವಾಗಿ ಸಂಗೀತವು ಸಿಗುತ್ತಿರುವುದರಿಂದ ಸಂಗೀತದ ವಿದ್ಯಾರ್ಥಿಯು ಎಲ್ಲವನ್ನೂ ಕಲಿಯಲು ಪ್ರಯತ್ನಿಸಿ, ಕೊನೆಗೆ ಯಾವುದೇ ಒಂದು ನಿಲುವಿಗೆ ಬಾರದೆ ಅತಂತ್ರ ಸ್ಥಿತಿಯಲ್ಲಿರುವಂತಹ ಪರಿಸ್ಥಿತಿಯೇ ಅಧಿಕವಾಗಿದೆ.  

ಪ್ರತಿಭೆ ಮತ್ತು ಚಂಚಲತೆ

ಇಂದಿನ ವೇಗದ ಮತ್ತು ಮುಂದುವರೆಯುತ್ತಿರುವ ಸಮಾಜದಲ್ಲಿ ಪ್ರತಿಭೆಗಳು ಸಾಕಷ್ಟು ಕಂಡರೂ ಆ ಪ್ರತಿಭೆಗಳು ಸಾಧನೆಯ ಹಾದಿ ಹಿಡಿದಿರುವುದು ಚಂಚಲವಾದ ಮನಸ್ಸಿನಿಂದ. ಸಾಧನೆಗೆ ಏಕಾಗ್ರತೆ ಇಲ್ಲದಿದ್ದರೆ ಅದು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ. ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯಪರಂಪರೆಯ ಶಿಥಿಲತೆ. ಸಿದ್ಧಿಗಿಂತ ಪ್ರಸಿದ್ಧಿಯ ತುಡಿತ, ಸಾಧನೆಯಲ್ಲಿ ಇರದ ನಿರಂತರತೆ, ಮೊಬೈಲ್ ಮಾಯೆ, ಜೀವನ ಸಾಗುವುದಿಲ್ಲವೆಂಬ ಭಾವ, ಶಿಸ್ತುಬದ್ಧ ಕಲಿಕೆಯ ಅಭಾವ ಮೊದಲಾದ ಕಾರಣಗಳಿಂದ ಸಂಗೀತಗಾರ ಬದಲಾಗಿದ್ದಾನೆ; ಅವನ ಸಂಗೀತದ ಗಟ್ಟಿತನವೂ ಕಳೆದು ಹೋಗಿದೆ.

ಮುಖ್ಯವಾಗಿ ಸಂಗೀತ ಕಲಿಯ ಬಯಸುವ ವಿದ್ಯಾರ್ಥಿಯು ತಾನು ಯಾವ ಸಂಗೀತವನ್ನು ಅಥವಾ ಸಂಗೀತದ ಪ್ರಕಾರವನ್ನು ಕಲಿಯಬೇಕು? ತನ್ನ ಕಂಠಕ್ಕೆ ಮತ್ತು ಮನಸ್ಸಿಗೆ ಯಾವ ಸಂಗೀತ ಒಗ್ಗುತ್ತದೆ? ಎಂಬುದನ್ನು ತುಂಬಾ ಯೋಚಿಸಿ ನಿರ್ಧರಿಸಬೇಕು. ಕೆಲವರ ಕಂಠ ಗಝಲ್‍ಗಳಿಗೆ, ಕೆಲವರದು ಶಾಸ್ತ್ರೀಯ ಸಂಗೀತಕ್ಕೆ, ಇನ್ನು ಕೆಲವರು ಚಲನಚಿತ್ರ ಸಂಗೀತಕ್ಕೆ ಸರಿಹೊಂದುವ ಕಂಠವಾಗಿರುತ್ತದೆ. ಅವರು ಆಯಾ ಕ್ಷೇತ್ರದಲ್ಲಿಯೇ ಸಾಧಿಸಬೇಕು. ಆದರೆ ಇವೆಲ್ಲಕ್ಕೂ ಶಾಸ್ತ್ರೀಯ ತಳಹದಿ ಗಟ್ಟಿಯಾಗಿರಬೇಕು.

ಒಮ್ಮೆ ಡಾ.ಗಂಗೂಬಾಯಿ ಹಾನಗಲ್‍ರಲ್ಲಿ ಒಬ್ಬರು ಕೇಳಿದರಂತೆ- “ನೀವು ಯಾಕೆ ಭಕ್ತಿಗೀತೆ ಹಾಡುವುದಿಲ್ಲ” ಎಂದು. ಆಗ ಅವರು, “ನಾನು ರಾಗಗಳನ್ನೆಲ್ಲ ಭಕ್ತಿಯಿಂದಲೇ ಹಾಡಿದ್ದೇನೆ” ಎಂದರಂತೆ. ಅದರರ್ಥ ಇಷ್ಟೆ ಅವರ ಕಂಠ ಶಾಸ್ತ್ರೀಯ ಸಂಗೀತಕ್ಕೆ ಸರಿಹೊಂದುತ್ತಿತ್ತು. ಅದಕ್ಕಾಗಿ ಅವರು ಉಳಿದ ಕಡೆ ತಮ್ಮ ಮನಸ್ಸನ್ನು ಹರಿಬಿಡಲಿಲ್ಲ. ಉತ್ತಮ ಗುರುವನ್ನು ಆಯ್ಕೆ ಮಾಡಿಕೊಂಡು ಕನಿಷ್ಠ ಹತ್ತು ವರ್ಷವಾದರೂ ಸಂಗೀತ ಕಲಿತು ಅನಂತರ ಸಿನೆಮಾ ಸಂಗೀತ, ಗಝಲ್ ಮುಂತಾದ ಸಂಗೀತದ ಯಾವದೇ ಕ್ಷೇತ್ರದಲ್ಲಿ ತೊಡಗಿಕೊಂಡರೂ ಯಶಸ್ಸನ್ನು ಗಳಿಸಬಹುದು.

ಕಾಲದ ಜೊತೆ ಕಲೆಯಲ್ಲಿಯೂ ಬದಲಾವಣೆ

ಇಂದು ಹಿಂದಿನಂತಲ್ಲ. ಅವಕಾಶಗಳು ಹೇರಳವಾಗಿವೆ. ಕಲೆಯನ್ನು ಪೋಷಿಸುವ, ಕಲಾವಿದರನ್ನು ಪ್ರೋತ್ಸಾಹಿಸುವ ಸಂಘಟನೆಗಳ ಕೊರತೆಯಾಗಲೀ, ಆರ್ಥಿಕ ತೊಂದರೆಯಾಗಲೀ ಇಲ್ಲ. ಆದರೆ ಸತ್ತ್ವ್ವಯುತ ಕಲಾವಿದ ಮಾತ್ರ ಸಿಗುತ್ತಿಲ್ಲ. ಶಾಸ್ತ್ರೀಯ ಸಂಗೀತ ಸಿದ್ಧಿಸಬೇಕೆಂದರೆ 10-12ವರ್ಷಗಳ ಕಾಲ ಗುರುಚರಣದಡಿಯಲ್ಲಿ ಪಳಗಲೇಬೇಕು. ಆದರೆ ಇಂದು ಬಹುತೇಕ ಗುರುಗಳಿಗೆ ಶಿಷ್ಯರೇ ಪ್ರತಿಸ್ಪರ್ಧಿಗಳಾಗಿದ್ದಾರೆ. ಅನೇಕ ರಿಯಾಲಿಟಿ ಶೋಗಳು ಮೇಲ್ನೋಟಕ್ಕೆ ಸಂಗೀತವಾತಾವರಣವನ್ನು ಬಿಂಬಿಸಿದರೂ ಪರೋಕ್ಷವಾಗಿ ಶಾಸ್ತ್ರೀಯ ಸಂಗೀತವನ್ನು, ಸಂಗೀತದ ಶಾಸ್ತ್ರೀಯತೆಯನ್ನು ಹಾಗೂ ಉತ್ತಮ ಪ್ರತಿಭೆಗಳನ್ನು ಮೊಟಕುಗೊಳಿಸುತ್ತ್ತಿವೆ. ಅನೇಕ ಪ್ರತಿಭೆಗಳು 5-6 ಹಾಡುಗಳಿಗಷ್ಟೇ ಸೀಮಿತವಾಗಿ, ಶಾಸ್ತ್ರೀಯ ಸಂಗೀತ ಕಲಿಕೆಯ ತಳಹದಿ ಗಟ್ಟಿಯಿಲ್ಲದೆ ಸಂಗೀತ ಲೋಕದಿಂದಲೇ ಮರೆಯಾಗುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ಸಂಗೀತ ಕಲಿಯದೇ, ಸಾಧಿಸದೇ ವೇದಿಕೆಯನ್ನೇರುವುದು ಸಾಮಾನ್ಯವಾಗಿದ್ದರಿಂದ ಅವುಗಳ ಗುಣಮಟ್ಟ ಕಡಿಮೆಯಾಗಿದೆ. ಕರೋಕೆ ಸಂಗೀತವು ಬಹುತೇಕ ಎಲ್ಲರನ್ನೂ ಗಾಯಕ ಅಥವಾ ಗಾಯಕಿಯರನ್ನಾಗಿಸಿದೆ. ಧ್ವನಿವರ್ಧಕವನ್ನೇ ಅವಲಂಬಿಸಿರುವ ಈ ಪದ್ಧತಿಯು ಬಹುತೇಕರ ಶ್ರುತಿ-ಲಯಗಳೆಲ್ಲವನ್ನೂ ಮರೆಮಾಚಿ ಸಂಗೀತವನ್ನೋ ಸಂಗೀತದ ಆಭಾಸವನ್ನೋ ಜನರಿಗೆ ಉಣಬಡಿಸುತ್ತಿದೆ.

ತಂಬೂರಿಯನ್ನು ಹಿಡಿದು ಗಂಟೆಗಟ್ಟಲೇ ಅಭ್ಯಾಸವನ್ನು ಮಾಡುವ ಸಹನೆ-ಸಮಾಧಾನ ಎರಡೂ ಇಂದಿನ ಯುವಪೀಳಿಗೆಯಲ್ಲಿ ಇಲ್ಲದೇ ಇರುವುದು ಸಂಗೀತದ ಸತ್ತ್ವ್ವ ಕುಂದಲು ಕಾರಣವಾಗಿದೆ. ಹಿಂದೆ ಗುರುಕುಲ ಪದ್ಧತಿಯಲ್ಲಿ ಗುರುವಿನ ಹೃದಯದ ಸಂಗೀತವು ಶಿಷ್ಯನಿಗೆ ಸಿಗುತ್ತಿತ್ತು. ಆದರೆ ಇಂದು ಶಿಷ್ಯನ ಹಣಕ್ಕೆ ಸರಿಯಾಗುವಷ್ಟು ಸಂಗೀತವು ಸಿಗುತ್ತದೆ. ಭಾವನಾತ್ಮಕವಾಗಿದ್ದ ಸಂಗೀತ ವ್ಯಾಪಾರೀಕರಣದತ್ತ ಮುಖಮಾಡಿ ನಿಂತಿರುವುದು ವಿಷಾದನೀಯ.

ಹೊರರಾಜ್ಯದ ಕಲಾವಿದರಿಗೆ ಮಣೆ

ಕರ್ನಾಟಕದಲ್ಲಿ ಮೊದಲಿನಿಂದಲೂ ನಮ್ಮಲ್ಲಿ ಇರುವ ಸಂಗೀತ ಕಲಾವಿದರನ್ನು ಗುರುತಿಸುವುದನ್ನು ಬಿಟ್ಟು ಬೇರೆ ರಾಜ್ಯದ ಕಲಾವಿದರನ್ನು ಕರೆದು ಅವಕಾಶ ನೀಡುವ ಪದ್ಧತಿ ರೂಢಿಯಲ್ಲಿದೆ. ಇದು ಬಹುತೇಕ ಸಂಗೀತ ಕಲಾವಿದರ ಹಾಗೂ ಸಾಧಕರ ಹತಾಶೆ-ನಿರಾಸೆಗಳಿಗೆ ಕಾರಣವಾಗಿದೆ. ಕರ್ನಾಟಕದ ಕಲಾವಿದರು ಬೇರೆ ರಾಜ್ಯದಲ್ಲಿ ಹಾಡುವುದು, ಅವಕಾಶ ಗಿಟ್ಟಿಸಿಕೊಳ್ಳುವುದು ಕೆಲವೇ ಕಲಾವಿದರಿಗೆ ಸಾಧ್ಯವಾಗಿದೆ. ಇದು ಕಡಿಮೆಯಾಗಬೇಕು. ಮೊದಲು ನಮ್ಮವರನ್ನು ಬೆಳೆಸಬೇಕು; ಅನಂತರ ಹೊರಗಿನವರನ್ನು ಆಹ್ವಾನಿಸಬೇಕು.

ಇದು ಶಾಸ್ತ್ರೀಯ ಸಂಗೀತ, ಸಿನೆಮಾ ಸಂಗೀತ, ನೃತ್ಯ ಹೀಗೆ ಬಹುತೇಕ ಕಲಾಪ್ರಕಾರಗಳಲ್ಲೂ ಕಂಡುಬರುತ್ತ್ತಿದೆ. ಪಂ.ಭೀಮಸೇನ ಜೋಶಿಯವರಂತಹ ಕಲಾವಿದರನ್ನು ನಾವು ಕರ್ನಾಟಕದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿರುವುದನ್ನು ಬಹಳ ಗಂಭೀರವಾಗಿ ಯಾರೂ ತೆಗೆದುಕೊಂಡಿಲ್ಲ. ಇನ್ನು ಮುಂದಾದರೂ ನಮ್ಮ ಸಂಗೀತಗಾರರು ನಮ್ಮಲ್ಲಿಯೇ ಇರುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಸಮಾಜದ್ದು, ಸಂಘಟಕರದ್ದು ಮತ್ತು ಸರ್ಕಾರದ್ದು.

ಯುವ ಕಲಾವಿದರಿಗೊಂದು ಪ್ರತ್ಯೇಕ ವೇದಿಕೆ ಸುವ್ಯವಸ್ಥಿತವಾಗಿ ನಿರ್ಮಾಣಗೊಳ್ಳಬೇಕಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಸಂಗೀತ ಕಲಾವಿದರಿಗೆ ನೀಡಿದೆಯಾದರೂ ಅವುಗಳನ್ನು ಸಮರ್ಪಕವಾಗಿ ಆಯೋಜಿಸುವಲ್ಲಿ ವಿಫಲವಾಗಿದೆ. ಉದಾ:  ಯುವ ಸೌರಭ ಎಂಬ ಕಾರ್ಯಕ್ರವನ್ನು ಪ್ರತಿ ಜಿಲ್ಲೆಯ ಯುವ ಸಂಗೀತ ಕಲಾವಿದರಿಗೆ ಏರ್ಪಡಿಸುತ್ತದೆ. ಆದರೆ ಕಲಾವಿದರ ಆಯ್ಕೆ, ಅವಕಾಶ ಎಲ್ಲವೂ ಕಾಟಾಚಾರಕ್ಕೆ. ಅಲ್ಲಿ ನಿಜವಾದ ಸಾಧಕರು ಭಾಗವಹಿಸದೇ ಇರುವುದು ಆತಂಕಕಾರಿಯಾದ ವಿಚಾರ.

ರಿಯಾಲಿಟಿ ಶೋ ಅಥವಾ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಲು ಕಲಾವಿದನಿಗೊಂದು ನಿರ್ದಿಷ್ಟವಾದ ಮಾನದಂಡವನ್ನು ನಿಗದಿಗೊಳಿಸಬೇಕು. ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು ಸಂಗೀತಕಲಾವಿದರನ್ನು ಗುರುತಿಸಿ ಸೂಕ್ತವಾದ ಅವಕಾಶವನ್ನು ನೀಡಬೇಕು. ಇದರಿಂದ ಕಲಿಯುವ ಸಂಗೀತ ವಿದ್ಯಾರ್ಥಿಗಳಿಗೆ ಮಾದರಿ ಕಲಾವಿದರನ್ನು ತೋರಿಸಿದಂತಾಗುತ್ತದೆ. ವಿಶ್ವವಿದ್ಯಾಲಯದ ಸಂಗೀತ ವಿಭಾಗಗಳು ಕರ್ನಾಟಕದ ಹೆಸರುವಾಸಿಯಾದ ಕಲಾವಿದರ ಕುರಿತಾದ ಸಾಕ್ಷ್ಯಚಿತ್ರಗಳು, ಸಂಶೋಧನಾ ಕೃತಿಗಳು, ಸಾಧನೆಯ ಕಠಿಣ ಹಾದಿಯನ್ನು ಸವೆಸಿದ ಪರಿಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತ್ವದ ಕಾರ್ಯವನ್ನು ಮಾಡಬೇಕಿದೆ. ಆಯಾ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಗಳು ಅಲ್ಲಿಯ ಕಲಾವಿದರ ಕುರಿತು ಅಧ್ಯ ಯನ ನಡೆಸಬೇಕೆಂಬ ನಿಯಮವನ್ನು ಮಾಡಿದರಷ್ಟೇ ಇದು ಸಾಧ್ಯವಿದೆ.

ವಿಜ್ಞಾನ ನಿಕಾಯದಡಿಯಲ್ಲಿ ಸಂಗೀತ

ಸಂಗೀತ ಎಲ್ಲರಿಗೂ ಬೇಕು. ತಮ್ಮ ಮಕ್ಕಳು ಸಂಗೀತ ಕಲಾವಿದನಾಗುವುದು ಮಾತ್ರ ಯಾವ ತಂದೆತಾಯಿಗಳಿಗೂ ಬೇಡ. ಅದೊಂದು ಕೀಳು ವಿದ್ಯೆ ಎಂಬ ಭಾವ ಇಂದಿಗೂ ಇದೆ. ಆದರೆ ಸಂಗೀತವನ್ನು ವಿಜ್ಞಾನ ವಿಷಯವೆಂದು ಪರಿಗಣಿಸಿದಲ್ಲಿ ಈ ಮನಃಸ್ಥಿತಿಯು ಬದಲಾಗಬಹುದು. ಸಂಗೀತದಲ್ಲಿ ಧ್ವನಿಶಾಸ್ತ್ರ, ಭೌತಶಾಸ್ತ್ರ ಮುಂತಾದ ಎಲ್ಲ ವಿಜ್ಞಾನ ವಿಷಯಗಳು ಅಡಕವಾಗಿರುವುದರಿಂದ ಇದೊಂದು ವಿಜ್ಞಾನದ ವಿಷಯವೇ ಆಗಿದೆ. ಆದರೆ ಯಾವುದನ್ನೂ ಕಲಿಯಲು ಅಸಮರ್ಥನಾದವನನ್ನು, ಫ್ಯಾಷನ್‍ಗಾಗಿ, ಪ್ರಮಾಣಪತ್ರಗಳಿಗಾಗಿ ತನ್ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸಂಗೀತ ಕಲಿಯಲು ಕಳುಹಿಸುತ್ತಿರುವುದು ಸಂಗೀತ ಕ್ಷೇತ್ರದ ದುರ್ದೈವ!

ಇತ್ತೀಚೆಗೆ ಅಮೆರಿಕಾದಲ್ಲಿ ಜಗತ್ತಿನ ಬುದ್ಧಿವಂತರು ಯಾರೆಂಬ ಸಂಶೋಧನೆಗೆ ಸಿಕ್ಕ ಉತ್ತರ ‘ಕಲಾವಿದರು’ ಎಂಬುದು ಹರ್ಷದಾಯಕವಾಗಿದೆ.  ಪೋಷಕರು ತಮ್ಮ ಮಗುವನ್ನು ಡಾಕ್ಟರ್, ಇಂಜಿನಿಯರ್ ಮಾಡಲು ಎಷ್ಟು ಕಷ್ಟಪಡುತ್ತಾರೋ ಅದರ ಅರ್ಧದಷ್ಟು ಕಷ್ಟಪಟ್ಟರೆ ಹತ್ತಾರು ಉತ್ತಮ ಕಲಾವಿದರು ಹುಟ್ಟಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಪರಿಹಾರಗಳೇನು?

ಗುರು-ಶಿಷ್ಯ ಪರಂಪರೆಯಲ್ಲಿ ಕನಿಷ್ಠ ಹತ್ತು ವರ್ಷವಾದರೂ ಸಂಗೀತ ಕಲಿಕೆಯನ್ನು ಕಡ್ಡಾಯಗೊಳಿಸುವ ವ್ಯವಸ್ಥೆಯು ಶಿಸ್ತಿನಿಂದ ಮುಂದುವರಿಯಬೇಕು. ಆಗ ರಾಗದ ಸಂಪೂರ್ಣ ವಿಸ್ತಾರತೆಯನ್ನು ಶಾಸ್ತ್ರೋಕ್ತವಾಗಿ ತಿಳಿಯಬಹುದು. ಸಂಗೀತವನ್ನು ಜೀವನವಾಗಿಸಿಕೊಂಡು ಪ್ರಬುದ್ಧ ಕಲಾವಿದನಾಗಿ ಹೊರಹೊಮ್ಮುವವರೆಗೆ ಆತನ ಜೀವನೋಪಾಯಕ್ಕೆ ಆರ್ಥಿಕ ಸಹಾಯವನ್ನು ನೀಡಬೇಕು.

ಸಂಗೀತವನ್ನು ಕಲಿತ ಯುವಕಲಾವಿದರು ಅವಕಾಶವಂಚಿತರಾಗದಂತೆ ನೋಡಿಕೊಳ್ಳಬೇಕು. ಅಂತಹ ಕಲಾವಿದರಿಗೆ ಯೋಗ್ಯ ಉದ್ಯೋಗವೂ, ವೇದಿಕೆಯೋ ಏನಾದರೊಂದು ಆರ್ಥಿಕ ಭದ್ರತೆ ಒದಗಿಸಬೇಕು.

ಮುಖ್ಯವಾಗಿ ಒಬ್ಬ ಗಟ್ಟಿ ಕಲಾವಿದನಾಗಿ ರೂಪುಗೊಳ್ಳಲು ವಿಮರ್ಶೆಯು ಅತ್ಯವಶ್ಯವಾಗಿದೆ. ವರ್ತಮಾನದಲ್ಲಿ ಶಾಸ್ತ್ರೋಕ್ತವಾಗಿ ಗಾಯನವನ್ನು ವಿಮರ್ಶಿಸುವವರ ಅಭಾವವಿದೆ. ಆದ್ದರಿಂದ ನೇರ ಮತ್ತು ದಿಟ್ಟತನದಿಂದ ವಿಮರ್ಶೆ ಮಾಡುವ ವಿಮರ್ಶಕರೂ ರೂಪುಗೊಳ್ಳಬೇಕಿದೆ.

ಸಂಗೀತ ಕಲಿಸುವಂತಹ ಗುರುಗಳಿಗೂ ವಿಶೇಷವಾದಂತಹ ಮಾನದಂಡವನ್ನು ನಿಗದಿಗೊಳ್ಳುವಂತಹ ಕ್ರಮಗಳು ಜಾರಿಯಾಗಬೇಕು. ಸಂಗೀತ ಹೊರತಾದ ವಿಷಯಗಳಲ್ಲಿ ಏಕರೂಪವಾದ ಬೋಧನೆಯು ಕಂಡುಬಂದಂತೆಯೇ ಸಂಗೀತ ಕಲಿಸುವಾಗಲೂ ಏಕರೂಪವಾದ, ಶಿಸ್ತುಬದ್ಧವಾದ ಕ್ರಮವು ಜಾರಿಗೆ ಬರಬೇಕು.

*ಲೇಖಕರು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಸಂಗೀತ ಉಪನ್ಯಾಸಕರು.

Leave a Reply

Your email address will not be published.