“ಕರ್ನಾಟಕದಿಂದ ಹೊರಹೋದವರು ಗೆದ್ರು!”

ಸಂದರ್ಶನ: ಜಿ.ಪಿ.ಬಸವರಾಜು

ಪಂ.ರಾಜೀವ ತಾರಾನಾಥ್, 88. ನೇರ, ಹರಿತ, ಚೂಪು, ಮಾತು, ಆಳ ಚಿಂತನೆ. ಅಪರೂಪದ ಒಳನೋಟ. ಅದ್ಭುತ ಎನಿಸುವ ನೆನಪಿನ ಶಕ್ತಿ. ಕೇಳುಗರನ್ನು ಹಿಡಿದಿಡಬಲ್ಲ ಮಾತಿನ ಕಲೆ. ಎಂದೋ ಆಗಿ ಹೋದ ಘಟನೆಗಳಿಗೆ ಜೀವತುಂಬಿ ಇದೀಗ ನಡೆಯುವಂತೆ ಕಣ್ಮುಂದೆ ತರಬಲ್ಲ ಮೋಡಿ. ಗುಂಡು ಹೊಡೆದಂತೆ ಖುಲ್ಲಂ ಖುಲ್ಲಾ ಎಲ್ಲವನ್ನು ಹೇಳಿ ಎದುರಾಳಿಯ ಎದೆ ನಡುಗಿಸಬಲ್ಲ ದಿಟ್ಟತನ. ಸಂಗೀತದ ಆಳ ಅಗಲಗಳನ್ನು ಕಂಡು, ನಿಖರವಾಗಿ ತೂಗಿ, ಬೆಲೆಕಟ್ಟಬಲ್ಲ ಸಾಮಥ್ರ್ಯ. ತಮ್ಮ ಗುರುವನ್ನು ದೇವರೆಂದು ಕಂಡ, ನಿತ್ಯವೂ ಕಾಣುತ್ತಿರುವ ಭಕ್ತಭಾವ. ಪ್ರತಿಭೆ-ಪರಿಶ್ರಮಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಕಟ್ಟಿಕೊಂಡ ವ್ಯಕ್ತಿತ್ವ ಈಗಲೂ ರಾಜೀವ್ ಅವರನ್ನು ಎತ್ತರದ ಜಾಗದಲ್ಲಿ ನಿಲ್ಲಿಸಿದೆ. ಅವರ ಸಾಹಿತ್ಯದ ಅರಿವು, ವಿಮರ್ಶೆ ಅಪರೂಪದವು. ಆದರೂ, ತಮ್ಮ ಅಖಾಡ ಸಂಗೀತವೇ ಎಂದು ಹೇಳುತ್ತಿರುವ ರಾಜೀವ್ ಅವರ ಸರೋದ್ ವಾದನವೆಂದರೆ ಸದ್ಯ ಸರಿಸಾಟಿಯಿಲ್ಲದ್ದು. ಅವರೊಂದಿಗೆ ನಡೆಸಿದ ಮಾತುಕತೆಯ ಯಥಾವತ್ ರೂಪ ಇಲ್ಲಿದೆ:

ಪ್ರಶ್ನೆಗಳು ಇಲ್ಲಿದ್ದರೂ, ಇದು ಪ್ರಶ್ನೋತ್ತರಗಳ ಧಾಟಿಯ ಸಂದರ್ಶನ ಅಲ್ಲ; ಇದು ರಾಜೀವ ದರ್ಶನ.

ಭಾರತೀಯ ಸಂಗೀತ ಕ್ಷೇತ್ರಕ್ಕೆ ಕರ್ನಾಟಕ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಭೀಮಸೇನ ಜೋಶಿ, ಕುಮಾರ ಗಂಧರ್ವ, ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮೊದಲಾದ ಲೆಜೆಂಡ್‍ಗಳನ್ನು ಕೊಟ್ಟಿದ್ದರೂ, ಹೊಸ ತಲೆಮಾರಿನಲ್ಲಿ ಆ ಪ್ರಖರತೆ ಕಾಣುತ್ತಿಲ್ಲ. ಪ್ರತಿಭೆ ಇದ್ದರೂ ಪ್ರೋತ್ಸಾಹ ಇದ್ದಂತಿಲ್ಲ. ಇದನ್ನು ನೀವು ಹೇಗೆ ನೋಡುವಿರಿ?

ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಬೆಳವಣಿಗೆ ಬಗ್ಗೆ ಮಾತನಾಡಬೇಕಂದ್ರೆ, ನನಗೆ ತಿಳಿದ ಮಟ್ಟಿಗೆ, ಕೆಲವು ಹೆಸರು ಹೇಳಬಹುದು. ಒಂದು ಪಿತ್ರೆ ವಕೀಲರು ಅಂತ. ಅವರು ಮರಾಠಿಯವರು. ಕರ್ನಾಟಕದಲ್ಲಿ ಅವಾಗೆಲ್ಲ ಒಂದೇ ಪ್ರೆಸಿಡೆನ್ಸಿ ಇರಲಿಲ್ಲ. ಇವಾಗ ನಾವು ಏನ್ ಉತ್ತರ ಕರ್ನಾಟಕ ಅಂತೀವೊ ಅದು ಬಾಂಬೆ ಪ್ರೆಸಿಡೆನ್ಸಿಯಲ್ಲಿತ್ತು. ಆದ್ರಿಂದ ಅನೇಕ ಮರಾಠಿಗರು ಅಲ್ಲಿದ್ದರು. ಮ್ಯಾಲೆ ಅವರು ಸಂಸ್ಕೃತಿಗೆ ಒಂದು ಪುಷ್ಟಿ ಒದಗಿಸಿದರು. ಅದರ ನೆಗೆಟಿವ್ಸ್ ಬ್ಯಾರೆ ಇರಬಹುದು. ಆದ್ರೆ ಸಂಗೀತದ ಮಟ್ಟಿಗೆ ಪಿತ್ರೆ ವಕೀಲರು ಇದ್ದರು. ಭಾಸ್ಕರ ಬುವಾ ಬಖಲೆ ಇದ್ದರು. ಬಖಲೆ ಸ್ಕೂಲ್ ಇನ್ಸ್ಪೆಕ್ಟರೊ ಏನೋ, ಆ ಥರ, ಧಾರವಾಡದಲ್ಲಿ ಬಿ.ಎಡ್. ಕಾಲೇಜಿದೆಯಲ್ಲ, ಅಲ್ಲಿ ಅವರ ಹುದ್ದೆಯಿತ್ತು. ಅವರಿಂದ ಕಲಿತವರು, ಹಿಂಗೆ ಹಿಂದೂಸ್ತಾನಿ ಸಂಗೀತ ಮುಂದೆ ಬೆಳೀತು.

ಇನ್ನೂ ಒಂದು ಬಹಳ ಇಂಟರೆಸ್ಟಿಂಗ್ ಏನಪಾ ಅಂದ್ರೆ, ಇಲ್ಲಿ ನಮ್ಮ ಶ್ರೀಮನ್‍ಮಹಾರಾಜರು ಕೃಷ್ಣರಾಜ ಒಡೆಯರ್, ಮೂವತ್ತರ ದಶಕ, ಎಲ್ಲಾ ಸಂಗೀತಗಳಿಗೂ ಬಹಳ ಪ್ರೋತ್ಸಾಹ ಕೊಟ್ಟರು. ಇದರಲ್ಲಿ ಉತ್ತರ ಹಿಂದೂಸ್ತಾನದಿಂದ ದೊಡ್ಡ ದೊಡ್ಡ ಸಂಗೀತಗಾರರನ್ನು ಮೈಸೂರು ಆಸ್ಥಾನಕ್ಕೆ ಕರೆಸ್ತಾ ಇದ್ದರು. ಅವರು ಬರ್ತಿದ್ರು. ಇರ್ತಿದ್ರು. ಇರಲಿಕ್ಕೆ ಬಹಳ ಸೌಲಭ್ಯ ಮಾಡಿಕೊಟ್ರು. ಸಣ್ಣ ಸಣ್ಣ ಮನೆಗಳು ಮಾಡಿಕೊಟ್ರು. ಸೌಖ್ಯವನ್ನೆಲ್ಲ ನೋಡಿಕೊಂಡ್ರು. ಅವರು ಒಂದೆರಡು ದಿನ ಇದ್ದು ಹೋಗೋರಲ್ಲ. ಒಂದು ತಿಂಗಳೊ ಎರಡು ತಿಂಗಳೋ ಇದ್ದು ಹೋಗ್ತಿದ್ರು. ಪ್ರಸಿದ್ಧ ಹೆಸರಿನವರು. ಉಸ್ತಾದ್ ಫಯ್ಯಾಜ್‍ಖಾನ್ ಆಗ್ರಾ ಘರಾಣೆ, ಉಸ್ತಾದ್ ಅಬ್ದುಲ್‍ಕರೀಂ ಖಾನ್‍ಕಿರಾಣ ಘರಾಣ, ಇವರಿಬ್ಬರ್ದೂ ನಾನು ಹೇಳಿದೀನಿ, ನೀವು ಬಲ್ರೀ. ಉಸ್ತಾದ್ ಬರ್ಖತುಲ್ಲಾ ಖಾನ್ ಅಂತ ಸಿತಾರ್ ನವಾಜ್ ಇದ್ರು, ದೊಡ್ಡವರು ಅವರು. ಮ್ಯಾಲೆ ಎಷ್ಟೋ ಮಂದಿ ಇತರರೂ ಬರ್ತಿದ್ರು.

ಬಹಳ ಬೇಜಾರು ನನಗೆ ಅದ್ರ ಬಗ್ಗೆ ಮಾತಾಡ್ಲಿಕ್ಕೆ. ನಮ್ಮ ಮೈಸೂರಿನವರು ಅವರನ್ನುಪಯೋಗಿಸಿಕೊಳ್ಳಲಿಲ್ಲ. ಅವರಲ್ಲಿ ಕಲೀಲಿಲ್ಲ. ಕಲ್ತಿವೀ ಅಂತ ಬುರುಡೆ ಹೋಡೆಯೋರಿದ್ದರು. ಆದ್ರೆ ಕಲೀಲಿಲ್ಲ. ಅವರು ರೈಲಿನಲ್ಲಿ ಬರ್ತಾ ಹೋಗ್ತಾ ಇದ್ರು. ಹುಬ್ಬಳ್ಳಿ ಒಳಗೆ ಆ ಹುಬ್ಬಳ್ಳಿ, ಧಾರವಾಡದ ಜನ ಅವರನ್ನ ಇಳಿಸ್ಕೋಂಡು ಅವರತ್ರ ಕಲ್ತ್ರು. ನೋಡಿ ನಮ್ಮ ಮೈಸೂರ್ನೋರು, ಆತಿಥೇಯರು, ಅವರಿಂದ ಏನೂ ಕಲೀಲಿಲ್ಲ. ಹುಬ್ಬಳ್ಳಿ ಧಾರವಾಡದಲ್ಲಿ ಹಿಂದೂಸ್ತಾನಿ ಸಂಗೀತ ಇವರಿಂದ ಬೆಳೀತು, ಗೊಬ್ಬರ ಹಾಕಿದಂಗಾಯ್ತು. ಅದರಲ್ಲಿ ಸ್ಪೆಷಲೀ, ಅಬ್ದುಲ್ ಕರೀಂ ಸಾಬ್ರಂತೂ ಮನೆಮಾತಾಗಿಬಿಟ್ರು. ಈಗ್ಯೂ ಅವರಲ್ಲಿ ಕಿರಾಣ ಘರಾಣ, ಅವರ ಶೈಲಿಯ ಕಿರಾಣ ಘರಾಣ ಉಳೀತು.

ಇನ್ನೂ ಒಂದಿದೆ- ಅಮೀರ್ ಖಾನ್ ಸಾಬ್ರುದು; ಅಬ್ದುಲ್ ಕರೀಂ ಖಾನ್ ಸಾಬ್ರ ಮಗಳು ಹೀರಾಬಾಯಿ ಬಡೋದೇಕರ್ವಾಹಿದ್ ಹುಸೇನ್ ಖಾನ್ ಅವರಲ್ಲಿ ಕಲಿತ್ಲು. ಅದು ಕಿರಾಣಾ ಘರಾಣದ ಇನ್ನೊಂದು ಕೊಂಬೆ. ಅಂದ್ರೆ ಅಬ್ದುಲ್ ಕರೀಂ ಖಾನ್ ಸಾಬ್ರಲ್ಲೇ ಕಲಿತೋರು ಸವಾಯಿ ಗಂಧರ್ವರು, ಕುಂದಗೋಳ್ದವರು. ಕುಂದಗೋಳ್‍ದಲ್ಲಿ ಅಭ್ಯಾಸ ಮಾಡಲಿಕ್ಕೆ ವಾಡೆಯಲ್ಲಿ ಅನುವು ಮಾಡಿಕೊಟ್ರು. ಸವಾಯಿ ಗಂಧರ್ವರ ಉತ್ಸವ ಅಲ್ಲಿ ನಡೀತದೆ. ದೊಡ್ಡ ಉತ್ಸವ ಪುಣೆದಲ್ಲಿ ನಡೀತದೆ, ಅದು ನಿಮಗೆ ಗೊತ್ತು. ಅದು ಭೀಮಸೇನ ಜೋಶಿ ನಡೆಸ್ತಿದ್ರು. ಇಲ್ಲಿ ಕುಂದಗೋಳದಲ್ಲಿ ಗಂಗೂಬಾಯಿ ಅಕ್ಕ ನಡೆಸ್ತಿದ್ರು. ಸವಾಯಿ ಗಂಧರ್ವರ ಹಿರಿಯ ಶಿಷ್ಯೆ ಆಕೆ. ಭೀಮಸೇನ ಜೋಶಿಯು ಹಾಗೆ, ಕಿರಿಯ ಶಿಷ್ಯ. ಈ ಉತ್ಸವದಲ್ಲಿ ಎರಡು ಮೂರು ಸರ್ತಿ ನುಡಿಸೋ ಸುಯೋಗ ನನಗೆ ಸಿಕ್ಕಿತ್ತು. ಅದೊಂದು ಯುನೀಕ್ ಅನುಭವ. ಅದೊಂದು ಬ್ಯಾರೇ ಕತೆ. ಸಣ್ಣ ಹಳ್ಳಿ, ಸಣ್ಣ ಊರು. ಒಂದು ವಾಡೆ ಅಂದ್ರೆ ದೊಡ್ಡ ಕೋಟೆ ಇದ್ದಾಂಗ. ಆ ಊರಿನ ಜನವೆಲ್ಲ ಅದರಲ್ಲಿ ಹಿಡಿಸ್ತಾರೆ. ಹಾಡೋರು ಹಾಡ್ತಾರೆ. ಇಡೀ ರಾತ್ರಿ ನಡೀತದೆ. ಇದು ಬಹಳ ಸಂಕ್ಷೇಪದಲ್ಲಿ.

ಹಿಂದೂಸ್ತಾನಿ ಸಂಗೀತ ಕರ್ನಾಟಕದಲ್ಲಿ ಈಗ ಏನಾಗಿದೆ?

ಕರ್ನಾಟಕದಲ್ಲಿ ಅದಕ್ಕೆ, ಆ ಕಲಿಕೆಗೆ, ಆ ಪಾಂಡಿತ್ಯಕ್ಕೆ, ಆ ಸಾಧನೆಗೆ ಎಷ್ಟು ಮನ್ನಣೆ, ಗೌರವ ಕೊಡ್ತೀವಿ. ಸುಮ್ನೆ ಮಾತನಾಡಿದ್ರೆ ಆಗಲ್ಲ. ಭೀಮಸೇನ ಜೋಶಿ ಪುಣೆಕ್ಕೆ ಹೋದರು, ಅಲ್ಲಿ ಅವರು ದೇವರಾದ್ರು. ಒಮ್ಮೆ ನಾನು ಪುಣೇದಲ್ಲಿ ಅವರ ಮನೆಗೆ ಹೋದೆ. ಅಲ್ಲಿ ಅವ್ರು ಹೊರಗೆ ಕಾಯ್ತಾ ಇದ್ರು. ಅವ್ರ ಕಾಲಿಗೆ ಬಿದ್ದೆ ನಾನು, ಬೀಳ್ಬೇಕು.  ಆ ಆಟೋದವನೂ ಅವ್ರ ಕಾಲಿಗೆ ಬಿದ್ದ. ಆಮೇಲೆ `ಬಾಡಿಗೆ ಏನಾಯ್ತಪ್ಪ’ ಅಂತ ಕೇಳ್ದೆ.  ಅವನು, `ಏ ನಿನ್ಗೆ ನಾಚ್ಕೆ ಇಲ್ಲೇನು, ಇವ್ರು ನಮ್ ದೇವ್ರು’ ಅಂತಂದು ಹೊರಟು ಹೋಗ್ಬಿಟ್ಟ. ಅದು ಪುಣೆನಲ್ಲಿ ಭೀಮಸೇನ ಜೋಶಿ! ಆ ನಾಚ್ಗೀನ ಇಲ್ಲೀವರ್ಗೂ ಹೊತ್ಕಂಡ್ ತಿರಗತಾ ಇದೀನಿ.

ಮುಂದ ಕುಮಾರ ಗಂಧರ್ವರು ದೇವಾಸಕ್ಕೆ ಹೋಗಿಬಿಟ್ರು. ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ ನನಗೆ. ಮಲ್ಲಿಕಾರ್ಜುನ ಮನ್ಸೂರು ಧಾರವಾಡಕ್ಕೇ ಇದ್ರು. ನಾನು ಇಸ್ವಿ 64-65ದಲ್ಲಿ ಧಾರವಾಡದಲ್ಲಿದ್ದೆ. ಇಂಗ್ಲಿಷ್ ಮಾಸ್ತರಿಕೆ ಮಾಡ್ತಿದ್ದೆ. ಆಗ ಮಲ್ಲಿಕಾರ್ಜುನ ಮನಸೂರು ಮತ್ತು ನಾನು; ನಮ್ಮಿಬ್ಬರದೂ ಅಕೌಂಟ್ ಒಂದೇ ಸಿಂಡಿಕೇಟ್ ಬ್ಯಾಂಕ್‍ನಲ್ಲಿತ್ತು. ನಾನೂ ಒಂದು ಸಣ್ಣ ರಕಮು ತಗೋತಿದ್ದೆ. ಪಗಾರನೂ ಕಡಿಮೆ. ಎರಡಂಕಿ ದಾಟಿರಲಿಲ್ಲ. ಅವ್ರೂ ಸಣ್ಣ ರಕಮು ತಗೋತಿದ್ರು ಪಾಪ! ಎಂಥ ಉದ್ದಾಮ ಪಂಡಿತರು ಅವರು. ಬಹಳ ಕಷ್ಟವಾದ ರಾಗಗಳ ಮೇಲೆ ಅವರ ಪಾಂಡಿತ್ಯ ಹೇಗಿತ್ತು, ಅವರ ಪ್ರಭುತ್ವ ಹೇಗಿತ್ತು! ಅಂಥ ಬ್ಯಾರೆ ಯಾರ್ನೂ ನಾನು ನೋಡಿಲ್ಲ. ಒಂದು ಕಷ್ಟವಾದ ರಾಗವನ್ನು ಹಾಗೆ ಸಂಭಾಳ್ಸೋದು ಮನ್ಸೂರು ಅಣ್ಣಾವ್ರು ಮಾಡಿದಾರೆ.

ಭೂಪಾಲದ ಭಾರತ ಭವನದ ಡೈರೆಕ್ಟರೊಬ್ಬ ಅಶೋಕ ಬಾಜಪಾಯಿ ಅಂತಿದ್ದ. ಅವ ಒಳ್ಳೇ ಸಂವೇದಿ ಮನುಷ್ಯ. ಒಳ್ಳೆ ಸಾಹಿತಿ, ಒಳ್ಳೆ ಕವಿ, ಸಂಗೀತದಲ್ಲಿಯೂ ರುಚಿ, ಓದಿದವ, ಸು-ರುಚಿ. ಅವ ಇವ್ರನ್ನ ಕೇಳಿ ತಗೊಂಡು ಇವ್ರ ಕಚೇರಿಗಳನ್ನ ಎಲ್ಲೆಲ್ಲಿ ಇಡಸಬೇಕೋ ಅಲ್ಲಲ್ಲಿ ಇಡಿಸಿ, ಅವ್ರ ಸಾಂಸ್ಕೃತಿಕ ಮುಖ್ಯತೆಯನ್ನ ಸ್ಥಿರಗಾಗಿ ನಾಟಿದ-ಈ ದೇಶದ ಮನಸ್ಸಿನಲ್ಲಿ; ಈ ದೇಶವನ್ನು ಯಾರು ಆಳ್ತಾರೊ-ದಿಲ್ಲಿ ಮಂದಿ, ಅಂಥವರ ಮನಸ್ಸಿನಲ್ಲಿ. ಹಿಂದೂಸ್ತಾನಿ ಸಂಗೀತವೆಂದರೆ ಬರಿ ಉತ್ತರ ಹಿಂದೂಸ್ತಾನ ಅಲ್ಲ ಅಂತ ಆತ ತೋರಿಸಿಕೊಟ್ಟ. ಆಮೇಲೆ ಅವರಿಗೆ ಬೆಲೆ ಬಂತು, ಬಹಳ ದೊಡ್ಡವರು. ಅಂದ್ರೆ ಅಲ್ಲೀ ತಂಕ ನಾವೇನ್ ಮಾಡ್ತಿದ್ವಿ? ಅವರು ಎಷ್ಟು ಚೆನ್ನಾಗಿ ಹಾಡ್ತಾರೆ ಅಲ್ವೇ ಅಂದು ಎದ್ದು ಹೋದ್ವೀ.

ನಮ್ಮ ಈ ಕರ್ನಾಟಕದಲ್ಲಿ ನೊಡ್ರೀ, ಕರ್ನಾಟಕ, ನಾನು ಕರ್ನಾಟಕದವನೇ. ಬಾಳ ಬೈತೀನಿ. ಬಾಳ ಬ್ಯಾಸರ್ಕಿ ಬರ್ತದ. ಇದರ ಅರಿವೂ ಇದೆ. ಕರ್ನಾಟಕದಲ್ಲಿ ಟ್ಯಾಲೆಂಟ್ ಇದೆ. ಅಪರೂಪದ ಟ್ಯಾಲೆಂಟ್ ಸಿಗತದ್ರೀ, ಈ ದೇಶದ ಎಲ್ಲಿಯೂ ಇಲ್ಲ, ಯಾವ ಕಡೆಯೂ ಅಂತದ್ದಿಲ್ಲ, ಅನ್ನೋವಷ್ಟು ಸಿಗತದ ನೋಡ್ರಿ. ಹೊಸದಲ್ಲ, ಹಳೆದಲ್ಲ, ಎಲ್ಲ ತಲೆಮಾರು. ನಾವು ಅದ್ನ ಗುರುತಿಸಿಲ್ಲ. ಇಂಗ್ಲಿಷ್‍ನಲ್ಲಿ `ಕ್ಯಾಚ್22’ ಅನ್ತಾರೆ. ನಮ್ಮಲ್ಲಿ ಅಂಥ ಪ್ರೋತ್ಸಾಹ ಇಲ್ಲ. ಎಲ್ಲವನ್ನೂ ಸಾಧಾರಣ ಮಾಡಿಬಿಡ್ತೀವಿ. `ಲೇ ಅವ್ನ ತಂದೆ ನಮಗೆ ಗೊರ್ತು, ಅವ್ನ ಷಡ್ಡಕ ನಮಗೆ ಗೊರ್ತು’- ಹಿಂಗ್ ಮಾತಾಡಕ್ಕೆ ಷುರುಮಾಡ್ತೀವಿ. ಆತನ ಬೆಲೆ ಎಷ್ಟು ದೊಡ್ಡದು ಎಂದು ನಾವು ಎಂದೂ ಗುರ್ತುಸೋದಿಲ್ಲ. ಕೆಲವರಿಗೆ ಅದು ಗೊರ್ತಾದ್ರೂ ಹೇಳೋದಿಲ್ಲ. ಅವರೂ ನಮ್ಮ ಕನ್ನಡಿಗರೇ. ಅದು ಹೊಟ್ಟೆಕಿಚ್ಚು ಅನ್ನೋಣವೇ? ಮಾತ್ಸರ್ಯ ಅನ್ನೋದು ಹುಟ್ಟುಗುಣ, ಆಂ! ಕನ್ನಡದ ಜೊತೆಗೆ ತಾಯಿ ಹಾಲಿನಲ್ಲಿ ಮಾತ್ಸರ್ಯವನ್ನೂ ಕುಡೀತೀವೊ…

ಅದೇ ನೋಡ್ರೀ, ಮಹಾರಾಷ್ಟ್ರದಲ್ಲಿ, ತಮಿಳ್ನಾಡಿನಲ್ಲಿ ಬೆಂಗಾಳದಲ್ಲಿ ಸ್ವಲ್ಪಮಟ್ಟಿಗೆ ಒಂದು ಸಣ್ಣ ಟ್ಯಾಲೆಂಟ್ ಮ್ಯಾಲೆ ಬಂತಂದ್ರೆ ಅದು ಎಷ್ಟು ರೀತಿಯಿಂದ ಯಾರ್ಯಾರು ಪ್ರೋತ್ಸಾಹ. ಇವತ್ತು ನೋಡ್ರಿ, ಈಗ ಈಗ ನನಗಾಗ್ತಿರೊ ಒಂದು ಘಟನೆ ಅನ್ನಬಹುದು, ಅರ್ಧ ಘಟನೆ. ಪಂಜಾಬಿ ಹುಡುಗ ಸರೋದ್ ಬಾರಿಸ್ತಾನೆ. ಅವನು ಒಳ್ಳೇ ಸ್ವರಬದ್ಧವಾಗಿ ಸರೋದು ಬಾರಿಸ್ತಾನೆ. ಸರೋದ್‍ನಲ್ಲಿ ಸುಸ್ವರ ಬರೋದು ಕಷ್ಟ, ಅಪಸ್ವರವೇ ಜಾಸ್ತಿ. ಯಾಕಂದ್ರೆ ಅದಕ್ಕೆ ಮನೆಗಳಿಲ್ಲ. ಅವನು ಬಾರಿಸಿದ್ದು ಒಂದು ಸಣ್ಣ ಪೀಸ್ ಕಳಿಸಿದ್ರು, ಕೇಳ್ರಿ ಅಂತ.. ಅವ 22 ವರ್ಷದ ಹುಡುಗ. ಯಾರಪ್ಪ ಇವನ ಪ್ರೊತ್ಸಾಹಿಸತ್ತಾರೆ ಅಂದ್ರೆ ಗುಜರಾತ್‍ದವರು, ಸೂರತ್‍ದ ಒಬ್ಬರು. ಅವರು ಎಲ್ಲೆಲ್ಲೊ ಸರೋದವರತ್ರೆಲ್ಲ ಮಾತ್ನಾಡಿ, ಇವನು ಎಲ್ಲಿ ಕಲೀಬೇಕು ಅಂತ ವಿಚಾರ ಮಾಡಿದ್ರು. ಕೊನೆಗೆ ರೋಣು ಮಜುಂದಾರ್ಹೇಳಿದ್ನಂತೆ, ತಾರಾನಾಥ್ ಹತ್ರ ಕಳ್ಸಿ, ಅವರಂಥ ಟೀಚರ್ಸಿಗೋದಿಲ್ಲ ಅಂತ.

ಅವರು ಬಂದು ಮಾತಾಡಿದ್ರು. ನಾನಂದೆ, `ನೋಡ್ರಿ, ನನಗೆ ವೈಸಾಯ್ತು. ಹಿಂಗೆ ಟ್ಯೂಷನ್ ಅಂತ..’, `ಅದಲ್ರೀ, ನಿಮಗೆ ಯಾವಾಗ ಮನಸ್ ಬರ್ತೊ ಆಗ’ ಅಂದ್ರು. ಕಡೇನಲ್ಲಿ ಈ ಕೋವಿಡ್ ಕೃಪೆ ಮುಗದ್ ಮ್ಯಾಲೆ ಅವನಿಗೆ ಈ ಊರಲ್ಲಿ ಇಡತಾರೆ ಅವರು. ಮನೆ ತಗೊಂಡು, ಊಟಗೀಟ ಎಲ್ಲದರ ಬಂದೊಬಸ್ತು ಗುಜರಾತಿನವರು ಮಾಡ್ತಾರೆ, ಅಂವ ಪಂಜಾಬ್‍ದವ. ಈ ಕನ್ನಡದವನ ಹತ್ರ ಸರೋದ್ ಕಲೀಲಿಕ್ಕೆ ಬರ್ತಾನೆ. ಕನ್ನಡಿಗರಲ್ಲ. ನೋಡಿ ಯಾರೋ ಹುಡುಗ ಅವ್ನು ಬಡವ, ಈಗ ಸದ್ಯ ನಡೀತಾ ಇರೋದು, ಉದಾಹರಣೆ ಕೊಟ್ಟೆ.

ನಮ್ಮಲ್ಲಿದೆಯಾ ಇದು? ಇದು ಬಹಳ ದೊಡ್ಡ ಸಾಂಸ್ಕೃತಿಕ ನ್ಯೂನತೆ. ಅದಕ್ಕೇ ಇವತ್ತಿನ ದಿವಸ ಈ ನಮ್ಮ ಕನ್ನಡ ನಾಡು ಅಂತಂದ್ರೆ ಸಾಂಸ್ಕೃತಿಕವಾಗಿ ಯಾರೂ ಸೀರಿಯಸ್ಸಾಗಿ ತಗೋಳ್ಳೋದಿಲ್ಲ. ಮ್ಯಾಲೆ ನಮ್ಮಲ್ಲಿ ದಿವಂಗತ ದೊಡ್ಡ ದೊಡ್ಡ ಬರಹಗಾರರು, ವಿಮರ್ಶಾಕಾರರು ಎಲ್ಲ ಹೋಗಿಬಿಟ್ರು. ಸುಮಾರು 80 ರ ಮತ್ತು 90ರ ದಶಕದಲ್ಲಿ ಅವರೆಲ್ಲ ನನಗೆ ಗೊತ್ತು, ಬೆಂಗಳೂರುನಲ್ಲಿ. ಕನ್ನಡದ ಸಂಗೀತ, ನಾಟ್ಯ ಎಲ್ಲದರ ಇನ್‍ಚಾರ್ಜ್ ಅವರು. ರಾಮಕೃಷ್ಣ ಹೆಗಡೆ ಅವರಿಗೆ ಕೊಟ್ಟುಬಿಟ್ಟಿದ್ದ. ಅವರು ಏನಯ್ಯಾ ಗುರುತಿಸಿದರು ಅಂದರೆ ಡೊಳ್ಳು ಕುಣಿತ, ಪಟಾ ಕುಣಿತ. ಇದನ್ನ ಹೇಳಿ ಒಬ್ಬನೇ ಸಂಗೀತಗಾರನ ಹೆಸರು ತಗೋಳ್ತಾ ಇದ್ರು. ಯಾರಪ್ಪ ಅಂತಂದ್ರೆ ಮಲ್ಲಿಕಾರ್ಜುನ ಮನ್ಸೂರ್, ಇಲ್ಲ, ಗಂಗೂಬಾಯಿ ಹಾನಗಲ್. ಉಳಿಕಿ ಎಲ್ಲ ಸೌತ್ ಅಂತ ಅಂದ್ರೆ ಮದರಾಸ್. ಇಲ್ಲೇ ಒಳ್ಳೇ ಹಿಂದೂಸ್ತಾನಿ ಸಂಗೀತಗಾರರಿದ್ದಾರೆ. ಆ ಕಡೆ ನೋಡಲೇ ಇಲ್ಲ. ಆಗ ನಾನು ಅವರ ಜೊತೆಗೆ ಹೊಡೆದಾಡಿದ್ದು ಉಂಟು. ನಾನೂ ಈ ಸರ್ಕಾರಕ್ಕೆ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಅಸೋಸಿಯೇಟ್ ಆಗಿದ್ದೆ. ಅವಾಗ. ಇದು ಹೀಗಲ್ಲ, ಕಾಡಲ್ಲ ಇದು. ಇಲ್ಲಿಯೂ ಅಪನಾ ಸಂಸ್ಕೃತಿ, ದೊಡ್ಡ ಸಂಸ್ಕೃತಿ ಇದೆ. ದೊಡ್ಡ ದೊಡ್ಡ ಸಂಗೀತಗಾರರು ಆಗಿಹೋದ್ರು. ಸಂಗೀತ ಗುರುಗಳು ಆಗಿಹೋದ್ರು. ಪಂಚಾಕ್ಷರಿ ಬುವಾ, ಗದಗು. ಎಂಥ ಗುರುಗಳು.

ಮ್ಯಾಲೆ ನಮ್ಮ ಗಂಗೂಬಾಯಿ ಮ್ಯೂಸಿಕ್ ಯೂನಿವರ್ಸಿಟಿ ಮೈಸೂರ್ನಲ್ಲಿ, ನಡೀತಾ ಇದೆ. ಅದರ ಬಗ್ಗೆ ನಾನು ಏನೂ ಹೇಳೋದಿಲ್ಲ,. ನೀವೇ ತಿಳಕೊಳ್ರೀ, ನಿಮಗೆ ಗೊತ್ತಿರತದೆ ಇದು. ಹೀಗಾಗಿ ನಮ್ಮಲ್ಲಿಯ ಟ್ಯಾಲೆಂಟನ್ನು ನಾವೇ ಕಳಕೊಳ್ತೀವಿ. ಇದು ದುಃಖದ ಸಮಾಚಾರ. ಮ್ಯಾಲೆ ಅಲ್ಲಿಂದ ಹೊರಗೆ ಪ್ರಯತ್ನ ಇಲ್ಲ. ಮೊನ್ನೆ ಮೊನ್ನೆ ನಾನು ಒಬ್ರು ಅಸೆಂಬ್ಲಿ ಮೆಂಬರ್ಜೊತೆಗೆ ಮಾತಾಡ್ದೆ. ಏನ್ ಹೀಗಾಗ್ತಿದೆ ಎಂದೆ. ನೀವೊಂದು ನೋಟ್‍ಕೊಡಿ ಸಾರ್, ನಾನು ಅಸೆಂಬ್ಲಿ ಒಳಗೆ ಎತ್ತೀನಿ ಅಂದ್ರು. ಅದಕ್ಕೆ ಸಂಬಂಧಪಟ್ಟವರು, ಇಲ್ಲಿ ಮೈಸೂರಲ್ಲಿ ಬಹಳ ದೊಡ್ಡವರು ಅಂತ ಕೇಳಿದೆ. ಯಾಕಂದ್ರೆ ನನಗೆ ಡೀಟೇಲ್ಸ್ ಗೊತ್ತಿಲ್ಲ. `ಓ ಬಂದ್ಬಿಡ್ತೀನಿ ಸಾರ್ ನಾಳೆ’ ಅಂದ್ರು. ಇಲ್ಲೀವರೆಗೆ ಬಂದಿಲ್ಲ. Iಜಿ ತಿe ಜoಟಿ’ಣ ಛಿಚಿಡಿe ಜಿoಡಿ ouಡಿseಟves ತಿho ತಿiಟಟ? ಅಷ್ಟೆ.

ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಿಲ್ಲವೇ?

ಈಗ ಮಾಡ್ತಾ ಇರೂದು, ನಾನು ಮಾಡ್ತೀನಿ. ನಾನು ಸರೋದ್ ಬಾರಿಸೋ ಪ್ರಯತ್ನ ಮಾಡ್ತೀನಿ. ಮಂದಿ ಹೌದಪ್ಪಾ ಅನ್ತಾರೆ. ಕರ್ನಾಟಕದಲ್ಲಿ ಎಷ್ಟೋ ವರ್ಷ ದುಡಿದೆ. ಜನ ಒಪ್ಲಿಲ್ಲ. ಮುಂದೆ ನಾನು ಅಮೆರಿಕಾ, ಆಸ್ಟ್ರೇಲಿಯಾ ಹೋಗಿ ಅಲ್ಲಿ ಇಲ್ಲಿ ಬಾರಿಸಿಕೊಂಡು ಬಂದೆ. ಈಗ ಬಾಳ ಇಂಪಾರ್ಟೆನ್ಸ್ ಬಂದುಬಿಡ್ತು ನನಗೆ. ತಾರಾನಾಥರು ಅಂತರಾಷ್ಟ್ರೀಯ ಕಲಾವಿದರು ಅಂತ. ಅರ್ಥ ಇಲ್ಲದ ಮಾತು ಇದು. ನಗು ಬರ್ತದೆ. ಸುಮ್ಮನೆ ಒಂದು ಸಂಸ್ಕೃತ ಹಾಕಿಬಿಡದು. ಒಂದು ವ್ಯಂಜನದ ಔತಣ. ಈಗ ಅದರಿಂದ ಹೊರಗೆ ಬರಬೇಕು ಅಂದ್ರೆ? ಕುಮಾರ ಗಂಧರ್ವ ದೇವಾಸಿಗೆ ಹೋದರು. ಭೀಮಸೇನ ಜೋಶಿ ಪುಣೆಗೆ. ಮನ್ಸೂರರನ್ನ ಭೂಪಾಲ ಗುರುತಿಸ್ತು. ಬಸವರಾಜ ರಾಜಗುರು ಒಬ್ರೇ. ಉತ್ತಮ ಸಂಗೀತಗಾರರು. ಬ್ಯಾರೆಯವರ ಹೆಸರು ನಾನು ಹೇಳೋದಿಲ್ಲ. ರಾಜಗುರು ಟ್ಯಾಲೆಂಟ್ ಹೇಗಪ್ಪಾ ಅಂದ್ರೆ ಕರ್ನಾಟಕದ ಎಲ್ಲರಿಗೂ ಮ್ಯಾಲೆ ಕೂಡುವಂಥ ಕಲೆ ಅವರ್ದು. ಅಂಥ ಸುರೇಲಿ, ಅಂಥ ತಯ್ಯಾರಿ. ಅವರು ಕರ್ನಾಟಕದಲ್ಲೇ ಉಳಿದ್ರು. ಅಲ್ಲಿಗೇ ಮುಗೀತು ಅವರದು. ಅವರ ಪ್ರಭಾವ ಎಷ್ಟು? ಇಡೀ ಇಂಡಿಯಾ, ಇಡೀ ಜಗತ್ತಿನಲ್ಲಿ ಹರಡಬೇಕಿತ್ತು ಇವತ್ತು ಯಾರಪ್ಪ ಬಸವರಾಜ ಅಂತ ಕೇಳ್ತಾರೆ.

ಹೊರಗೆ ಹೋದವರು ಗೆದ್ರು. ನಾನೂ ಸ್ವಲ್ಪಮಟ್ಟಿಗೆ ಗೆದ್ದೆ. ಯಾಕೆ ಅಂದ್ರೆ ಅಮೆರಿಕಕ್ಕೆ ಹೋದೆ ಅಂತ. ಇಲ್ಲೇ ಒಂಟಿಕೊಪ್ಪಲಿನಲ್ಲಿದ್ದಿದ್ರೆ ಆಗ್ತಿರಲಿಲ್ಲ. ಸೋ, ಇದೊಂದು ಚಿಕಿತ್ಸೆ, ಔಷಧ. ಯಾರು ಸೀರಿಯಸ್ಸಾಗಿ ಮಾಡಬೇಕಂತ ಇದ್ದಾರೋ ಅವರು ಇಲ್ಲಿಂದ ಬಿಟ್ಟುಹೋಗಬೇಕು. ನಮ್ಮ ದೊರೆಸ್ವಾಮಯ್ಯಂಗಾರ್ರು, ಚಿತ್ರವೀಣೆಯ ರವಿಕಿರಣ್, ಹೆಂಗೆ ಹೊರಗೆ ಹೋದ್ರು; ದೊಡ್ಡ ಹೆಸರು. ಈಗ ಸಮಾಜದಲ್ಲಿ ಅದನ್ನ ಮುಂದ ತರಬೇಕಂದ್ರೆ ನನ್ನ ಹಾಗೆ ಮಾತನಾಡೋರು ಇನ್ನು ಹತ್ತು ಮಂದಿಯಾದ್ರೂ ಬೇಕು, ಜನರನ್ನ ಹೊಡೆದೆಬ್ಬಿಸೋರು. ಇಲ್ಲಿ ನಮ್ಜನ ಎಷ್ಟು ಹೊಡದ್ರೂ ಏಳೋದಿಲ್ಲ. `ಅಯ್ಯೋ, ಅದು ಹಾಗೇನೇ ಸಾರ್’ ಅಂತಾರೆ. ಇಲ್ಲಿ ಎದುರಿನಲ್ಲಿ ಕೆಟ್ಟು ಹೋಗಿರೋದು ನಡೀತಿದ್ರೆ. ದರಿದ್ರವಾಗಿ ನಡೀತಿದೆ. ಹಳಸಲು. `ಅಯ್ಯೋ, ಏನೋ ನಡೀತಿದೆ’ ಅಂತ ನಮ್ಮವರು ತೃಪ್ತರು. ಎರಡು ಮಾತು ಬೈಗುಳ ಬೈದು ಮತ್ತೆ ಸೆಟ್‍ದೋಸೆ; ಅದಕ್ಕೆ ತಿರುಗಿದರೆ ಆರಾಮಾಗಿರ್ತಾರೆ ಅವರು.

ಈಗ ಸಾಮಾಜಿಕವಾಗಿ, ಒಂದು ಜನಾಂಗವೇ ಒಂದು ಹೆಮ್ಮೆ. ಈವಾಗ ಹೆಮ್ಮೆ ತೋರಿಸ್ತಾ ಇರೋದು ಸಾಂಸ್ಕೃತಿಕ ಬಿಡುಗಡೆ ಅಲ್ಲ. ಸಂಸ್ಕೃತಿ ಅಂತ ಸುಳ್ಳು ಹೇಳಿಕೊಂಡು ಜಗಳ ಖೂನಿ, ಅತ್ಯಾಚಾರ ಒಂದು ಮುದ್ದೆ ನಾವೇ ಮಾಡಿ.. ಹೆಸರ್ಸೋಕೆ ನನಗೆ ಇಷ್ಟವಿಲ್ಲ. ಅದಕ್ಕೆ ದೊಡ್ಡ ಪೊಲಿಟಿಕಲ್ ಪಾರ್ಟಿಗಳು ಪ್ರೋತ್ಸಾಹ, ಉತ್ಸಾಹ ಎಲ್ಲ ಕೊಡ್ತವೆ. ಅದರಲ್ಲಿ ನಾವು ತೊಡಗಿದ್ದೇವೆ. ಸ್ವಲ್ಪ ಮಟ್ಟಿಗೆ ನಮ್ಮ ಸಾಹಿತಿಗಳಿಗೆ ರಾಮಕೃಷ್ಣ ಹೆಗಡೆ ಮಿನಿಸ್ಟ್ರಾದಾಗಿನಿಂದ ಪ್ರೋತ್ಸಾಹ ಸಿಕ್ಕಿತ್ತು. ಅದರ ಮೊದಲು ಅದೂ ಇಲ್ಲ. ಕನ್ನಡದಲ್ಲಿ ಸಾಹಿತಿಗಳು ಬರದ್ರು, ಬರೀತಾ ಇದ್ದಾರೆ, ಅದು ಅವರಿಗೆ ಸಿಗುತ್ತೆ. ಆದರೆ ನಮ್ಮಲ್ಲಿರುವ ಸಂಗೀತಗಾರರು, ನೃತ್ಯಪಟುಗಳನ್ನ ಯಾರು ನೋಡ್ತಾರೆ? ಇದೇ ಊರಲ್ಲಿ ಒಬ್ಬರು ದೊಡ್ಡ ಭರತನಾಟ್ಯ ನೃತ್ಯಗಾತಿ ಇದ್ದಾರೆ, ವಸುಂಧರಾ ದೊರೆಸ್ವಾಮಿ, ಯಾರು ನೋಡ್ತಾರೆ? ಮದ್ರಾಸ್‍ನಲ್ಲಿದ್ದಿದ್ದರೆ ಆ ಕತೆನೇ ಬ್ಯಾರೆ ಇತ್ತು.

ಮ್ಯಾಲೆ ನಮ್ಮ ವಿಮರ್ಶಕರು- ಕ್ರಿಟಿಕ್ಸ್ ಅಡ್ಡಮಾತಾಡ್ತಾರೆ. ಸಾಕಷ್ಟು ತಿಳಕೊಳ್ಳೋದಿಲ್ಲ, ಏನೋ ಗೊತ್ತು ಅಂತ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡ್ತಾರೆ. ಅದು ಪಾಂಡಿತ್ಯವೂ ಅಲ್ಲ ಮಣ್ಣಾಂಗಟ್ಟಿಯೂ ಅಲ್ಲ. ನಮ್ಮ ಆರ್ಟಿಸ್ಟ್‍ಗಳನ್ನು ಬೇರೆ ಪ್ರಾಂತಗಳಲ್ಲಿ ಮೊದ್ಲು ಇಟ್ಟು ಮುಂದೆ ಇಂಟರ್ ನ್ಯಾಷನಲ್ ಇಡಬೇಕು. ಅದು ಸರ್ಕಾರದ ಕೆಲಸ, ಸರ್ಕಾರ ಮಾಡುತ್ತೆ. ಆದರೆ ಸರ್ಕಾರ ಇಂಪರ್ಸನಲ್ ಆಗಿಬಿಡುತ್ತೆ. ಯಾರ್ನೋ ಕಳ್ಸು, ಯಾರ್ನೊ ಕರೀ ಅಂತ. ನಮ್ಮ ಸರ್ಕಾರಗಳು ಹೆಂಗಿರ್ತವೆ ಅಂದ್ರೆ: ಒಮ್ಮೆ ಐಸಿಸಿಆರ್ ತರಫ್‍ದಿಂದ ನಾನು, ನಯನ ಘೋಷ್ ಒಂದು ದೇಶಕ್ಕೆ ಪರ್ಫಾರ್ಮೆನ್ಸಗೆ ಅಂತ ಹೋದ್ವಿ. ಜೂರಿಕ್ ಏರ್ಪೋರ್ಟರ್ನಲ್ಲಿ ವಿಮಾನ ಬದಲಾಯಿಸಲು ಇದ್ವಿ. ಬಟನ್‍ಒತ್ತಿ ನಿಮಗೆ ಊಟ ಎಲ್ಲ ಬರುತ್ತೆ ಅಂದ್ರು ನಮ್ಮ ಅಂಬಾಸಿಡರ್. ನಾವು ಒತ್ತಿದ್ದೇ ಒತ್ತಿದ್ದು. ಏನೂ ಬರ್ಲಿಲ್ಲ. ನೀರು ಕುಡುಕೊಂಡೀ ಇದ್ವಿ. ಯಾಕಂದ್ರೆ ನಮ್ಮ ದುಡ್ಡು ಅಲ್ಲಿ ಚಾಲ್ತಿಇರಲ್ಲ. ಹಾಸ್ಯಾಸ್ಪದ. ಅಂಬಾಸಡರ್ಗೆ ಹೋಗಿ ಹೇಳಿದರೆ, ಎಲ್ಲ ಸರಿಮಾಡ್ತೀನಿ ಅಂದ. ಮತ್ತೆ ಅದೇ ಆಯ್ತು.

ಸರ್ಕಾರ ಪ್ರೋತ್ಸಾಹ ಇರಬೇಕು. ಆದ್ರೆ ಜನ ತಗೋ ಬೇಕು. ನಂದೇ ಕೇಸ್‍ಹೇಳ್ತೀನಿ. ಬ್ಯಾರೆ ಕಡೆ ಬಾರ್ಸಿದ್ರೆ ನಾನು ಎರಡು ಲಕ್ಷ. ಒಂದೊಂದು ಕಡೆ ಮೂರು ಲಕ್ಷ. ಕೊಡ್ತಾರವ್ರು. ಇನ್ನೂ ಕೆಲವರು, ದೊಡ್ಡವರು 15-20 ಲಕ್ಷದವರೆಗೆ ತಗೋತಾರೆ. ಪಂಡಿತ್ ರವಿಶಂಕರಲ್ಲೀವರೆಗೆ ಹೋಗಿದ್ರು. ಅಭ್ಯಂತರವೇನೂ ಇಲ್ಲ. ಅವರು ಬಹಳ ದೊಡ್ಡವರು. ದೈವೀ ವ್ಯಕ್ತಿ. ಇಲ್ಲಿ 25,000 ರೂಪಾಯಿ ಕೊಡಲಿಕ್ಕೆ ಹೇಳ್ತರೆ. ಅಷ್ಟು ಯಾಕೆ ಕೊಡಬೇಕು ಅನ್ತಾರೆ. ಒಬ್ಬ ದೊಡ್ಡವರು ಇಲ್ಲೇ ಸಂಗಿತ ಸಭೆಯಲ್ಲಿದ್ದವರು, ದೊಡ್ಡ ಹುದ್ದೆಯಲ್ಲಿ `ನೋ, ಮೃದಂಗಂ ಪ್ಲೇಯರ್ಸ್ ಷುಡ್‍ಬಿ ಗಿವನ್ ಮೋರ್ದ್ಯಾನ್ 500 ರುಪೀಸ್’ ಅಂತ ಅಂದ್ರಂತೆ. ಈ ಧೋರಣೆ ನಮ್ಮಲ್ಲಿದ್ರೆ, ಅದೆಂಗ್‍ರೀ ಬರುತ್ತೆ? ಬಿಟ್ಟು ಹೋಗ್ತಾರೆ. ನಾವು `ಗೆಟೌಟ್’ ಅಂತ ಪ್ರೋತ್ಸಾಹ ಕೊಡ್ತಿದ್ದೀವಿ. ಸುಮ್ಮನೆ ಮಾತಾಡಿದ್ರೆ ಬರಲ್ಲ.

ಶಾಸ್ತ್ರೀಯ ಸಂಗೀತದಲ್ಲಿರುವಂತೆ ಸುಗಮ ಸಂಗೀತದಲ್ಲಿ ನಮ್ಮಲ್ಲಿ ಬಹಳ ಪ್ರತಿಭಾವಂತರು ಇದ್ದಾರೆ. ಆದರೆ ತಮಿಳು, ಹಿಂದಿ ಈ ಸಿನಿಮಾ ಸಂಗಿತದಲ್ಲಿ ಬಹಳ ಜೋರಾದ ಪ್ರಯೋಗಗಳು ನಡೀತಿವೆ. ಕನ್ನಡದಲ್ಲಿ ಯಾಕೆ ಸಾಧ್ಯವಾಗಿಲ್ಲ?

ಸಿನಿಮಾದಲ್ಲಿ ನಾನು ಸಂಗೀತ ನೀಡಿದೆ. ಕನ್ನಡದಲ್ಲಿ ನನಗೆ ತೃಪ್ತಿ ಸಿಗಲಿಲ್ಲ. ಅವರಿಗೂ ತೃಪ್ತಿ ಸಿಗಲಿಲ್ಲ ಅಂತ ಕಾಣ್ತದೆ. ಆದ್ರೂ ಮೊನ್ನೆ ಸುಮ್ಮೆ ಹಿಂಗೇ ಯೂಟ್ಯೂಬ್ ನೋಡ್ತಿದ್ದೆ. ಬಿ.ಆರ್.ಛಾಯಾ ಬೆಂಗಳೂರಿನಲ್ಲಿ ಇದಾರಲ್ಲ, ಆಕೆ ನನ್ನದೊಂದು ಹಾಡು  ಹಾಡಿದಳು. `ಬಂತಿದೋ ಶೃಂಗಾರ ಮಾಸ’; ಬೇಂದ್ರೆಯವರದು. ತಾರಾನಾಥ್ ಮ್ಯೂಸಿಕ್ ಮಾಡಿದಾರೆ ಅಂತ ಆಕೆ ಹಾಡಿದ್ಲು. ಅಡ್ಡಿ ಇಲ್ಲಪ್ಪ, ಒಬ್ಬರಾದ್ರೂ ಒಪ್ತಾರೆ ಅಂತ ಅನಿಸ್ತು ನನಗೆ. ಬಿಡ್ರಿ ಅದು ನನ್ ಕತಿ ಅಲ್ಲ.

ತಮಿಳಿನಲ್ಲಿ ಇಳೆಯರಾಜ. ಎ.ಆರ್.ರೆಹಮಾನ್. ರೆಹಮಾನ್ ದೈತ್ಯಾಕಾರದ ಪ್ರತಿಭೆ. ಅಂದ್ರೆ ಪ್ರತಿಯೊಂದು ವಾದ್ಯದ ಸಂಪೂರ್ಣ ಸಾಧ್ಯತೆ ಅವನಿಗೆ ಗೊತ್ತು. ಪಲ್ಲವಿ ಅನುಪಲ್ಲವಿ ಹಾಡಲಿಕ್ಕೆ ಇಲ್ಲ ಅವನು. ಒಂದು ರಾಗದ ಎಲ್ಲ ಸಾಧ್ಯತೆಗಳನ್ನು ಹಾಗೆ ಹಿಡಿದುಕೊಂಡು ಬಿಡ್ತಾನೆ, ತನ್ನದೇ ಆದ ಸೌಂದರ್ಯ ಹಾಕ್ತಾನೆ. ಇಂಥದು ಮಾಡಕೆ ಅಲ್ಲಿ ಆಸ್ಪದ ಇದೆ. ಇಲ್ಲಿ? ಇವಾಗ ನನ್ನದೊಂದು `ಬಂತಿದೋ ಶೃಂಗಾರ ಮಾಸ’. ಅದೆಷ್ಟು ದೊಡ್ಡದೊ, ಸಣ್ಣದೊ ಗೊತ್ತಿಲ್ಲ. ಇಲ್ಲೀವರ್ಗೆ ಛಾಯಾ ಅಂತವರು ಹಾಡಿದ್ರು. ಅಷ್ಟೆ. ಇರಲಿ ಬಿಡ್ರಿ ನಾನೇ ಸುಗಮ ಸಂಗೀತಕ್ಕೆ ಹೊಗಲಿಲ್ಲ. ನಾನಾಯ್ತು ನನ್ನ ಸರೋದು ಆಯ್ತು. ಒಬ್ಬರಿಗೊಬ್ಬರು ನಿಷ್ಠಯಿಂದ ಇದ್ವೀವಿ ನಾವು.

ನಮ್ಮ ಸಂಗೀತಗಾರರು ಕಂಪೋಸರ್ರು ಡೈರೆಕ್ಟರ್ಸುನ ಕೆಲವರನ್ನು ಭೆಟ್ಟಿಯಾಗಿದ್ದೀನಿ ನಾನು. ಒಂದು ದೊಡ್ಡ ಮಿಂಚಿನಂಥಾ ಪ್ರತಿಭೆ ಇಲ್ಲ, ಕ್ಲೀಷೆ ಅಂತಾರ್ನೋಡ್ರಿ, ಕನ್ನಡದಲ್ಲಿ ಒಂದು ಕಾಲದಲ್ಲಿ ಎಲ್ಲರೂ ಕ್ಲೀಷಾವೃತ್ತಿ ಮಾಡೊರು. ಆ ಥರದ ಮೈಂಡ್ ಅದು. ಚರ್ವಿತ ಚರ್ವಣ. ಅದು ಹಾಕಬಾರದು ಅಂತ ಅಲ್ಲ. ಯಾಕೆಂದ್ರೆ ನಮ್ಮಲ್ಲಿ ಮೌಲ್ಯಗಳು ಇರ್ತಾವಲ್ಲ, ಕಲಾ ಮೌಲ್ಯಗಳು. ಅದರಲ್ಲಿ ಒರಿಜಿನಾಲಿಟಿ ಅನ್ನೊದು ಹೊಸದು ಅಲ್ಲವಾ. ಪಾಶ್ಚಾತ್ಯ ದೇಶದಲ್ಲಿ 300 ವರ್ಷ ಆಗಿದೆ, ಅದೂ ಆಗಿಲ್ವಾ. ಶೇಕ್ಸ್‍ಪಿಯರ್ಕಾಲದಲ್ಲಿ ಒರಿಜಿನಾಲಿಟಿ ಅಂತ ಯಾರೂ ನೋಡಲಿಲ್ಲ. ರೊಮ್ಯಾಂಟಿಕ್ ಇಲ್ಲಿ ನಾವು ಒಹೋ ಅಂತೀವಿ. ನಮ್ಮಲ್ಲೇ ಉತ್ತಮವಾದುದು ಇದೆ. `ಅನ್ಯರು ಒರೆದುದನೇ‘ ಅದನ್ನು ನಾನು ಒಪ್ಪೋದಿಲ್ಲ. ತಿಳಿವಳಿಕೆ ಇಲ್ಲದ ಒಂದು ಮಾತು. ಅಡಿಗರು ಅಡಿಗರೇ ಇರಬಹುದು. ಅವರ ಬಗ್ಗೆ ಬಹಳ ಗೌರವ ಇದೆ. ಇಂಥದು ಸುಮ್ನೆ ಆಂಗ್ರೇಜಿ ಟ್ರಾನ್ಸ್ ಲೇಷನ್ನು. `ಬಿನ್ನಗಾಗಿದೆ ಮನವು’, ಯಾಕೆ ಬಿನ್ನಗಾಗಬೇಕು, ಇನ್ನೂ ಸ್ವಲ್ಪ ಸಂಗೀತ ಕೇಳ್ರಿ, ಗೊತ್ತಾಗ್ತದೆ. ಹೌದಾ. ನಮ್ಮಲ್ಲಿ ಆ ಥರಹದ ಒಂದು ಎನರ್ಜಿ, ಕಲ್ಪನೆಯ ಎನರ್ಜಿಯನ್ನು ನಾವು ಇನ್‍ವೆಸ್ಟ್ ಮಾಡಿಲ್ಲ. ಮಾಡುವಂಥವರು ಕೂಡಾ ಸಂಗೀತಕ್ಕೆ ಹೋಗಿಲ್ಲ, ಕಂಪ್ಯೂಟರ್ಗೆ ಹೋಗಿಬಿಟ್ರು. ಕನ್ನಡದಲ್ಲಿ ಇಲ್ಲ, ನನಗೆ ತಿಳಿದ ಮಟ್ಟಿಗೆ.

ಈ ಸುಗಮ ಸಂಗೀತದ ಒಂದು ಘಟನೆ ಕೇಳ್ರೀ. ಸುಗಮ ಸಂಗೀತದ ಮಾತು ಸರ್ಕಾರದ ಕಮಿಟಿಯಲ್ಲಿ ಬಂತು. ಆಗ ಸರ್ಕಾರದ ಜೊತೆಗೆ ಅಸೋಸಿಯೇಷನ್ ಇತ್ತು ನನಗೆ. ಆ ಮೀಟಿಂಗ್‍ದಲ್ಲಿ ನಾನೂ ಕೂಡ್ತಿದ್ದೆ. ಯಾರೋ ಇಬ್ಬರು ಹೆಸರಾಂತ ಸುಗಮಿಗಳು, `ಸಾರ್ ಸುಗಮ್ ಸಂಗಿತ ಬಾಳ..’  ಎಂದೇನೋ ಸುರುಮಾಡಿದರು. ಬಸವರಾಜರೂ (ರಾಜಗುರು) ಇದ್ರು. ಅವರೂ ಆ ಕಮಿಟಿ ಮೆಂಬರ್ರು. `ಏನಪಾ, ಅದೇನು ಹೇಳು, ಸುಗಮ ಸಂಗಿತ, ನಾನೂ ನೋಡ್ತೀನಿ’ ಅಂತ ಎದ್ದು ಕಚ್ಚೆ ಸರಿಮಾಡಿಕೊಂಡು ಮುಂದಕ್ಕೆ ನಡೆದ್ರು,

ಅವರಿಬ್ಬರೂ, ಸುಗಮಿಗಳು ಓಡಿಹೋಗಿಬಿಟ್ರು ಹಾಲ್‍ಬಿಟ್ಟು. ಇದು ಆದ ಒಂದು ಘಟನೆ. ನಾನು ನೋಡಿ ಬಹಳ ತೃಪ್ತನಾದೆ.

*ಸಂದರ್ಶಕರು ಮೂಲತಃ ಪತ್ರಕರ್ತರು; ಸಾಹಿತ್ಯ, ಸಂಗೀತ, ಫೋಟೊಗ್ರಫಿಯಲ್ಲಿ ತೀವ್ರ ಆಸಕ್ತಿ. ಕವಿತೆ, ಕತೆ, ಪ್ರವಾಸ ಕೃತಿಗಳಿಗಾಗಿ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ  ಪುಸ್ತಕ ಪ್ರಶಸ್ತಿ ಪುರಸ್ಕøತರು.

Leave a Reply

Your email address will not be published.