ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

ನಾವು ಚಾಪೆಯ ಕೆಳಗೆ ತಳ್ಳಿ ಗಡದ್ದಾಗಿ ನಿದ್ರೆ ಮಾಡುತ್ತಾ ನಿರ್ಲಕ್ಷಿಸಿರುವ ಹಲವು ವಿಷಯಗಳಲ್ಲಿ ಈ ಮುಖ್ಯವಿಷಯವೂ ಒಂದಾಗಿದೆ. ತಂದೆ-ತಾಯಿ-ಪೋಷಕರಾಗಲಿ ಅಥವಾ ವಾರಸುದಾರರಾಗಲಿ ಇರದ ಈ ಸಮಸ್ಯೆಯನ್ನು ನಾವು ಎತ್ತಿ ಹೇಳಲೇಬೇಕಾಗಿತ್ತು. ಏಕೆಂದರೆ ಈ ವಿಷಯ ಕಾಡಂಚಿನಲ್ಲಿ ವಾಸಮಾಡುತ್ತಿರುವ ನಿವಾಸಿಗಳ ಹಾಗೂ ಸಾಮಾನ್ಯ ರೈತರ ಬದುಕನ್ನು ಮೂರಾಪಾಲಾಗಿ ಮಾಡಹೊರಟಿದೆ.

-ಮೋಹನದಾಸ್.

ನಮ್ಮ ದೇಶದ ಹಲವು ಹೋಲಿ ಕೌ (ಪವಿತ್ರ ಅಸ್ಪೃಶ್ಯತೆ) ವಿಷಯಗಳಲ್ಲಿ ಅರಣ್ಯಗಳು ಹಾಗೂ ಅಲ್ಲಿನ ವನ್ಯಜೀವಿಗಳು ಕೂಡಾ ಸೇರಿವೆ. ಈ ತೆರನಾದ ವಿಷಯಗಳಲ್ಲಿನ ನಮ್ಮ ದ್ವಂದ್ವ ನಡವಳಿಕೆ ಈ ಸೂಕ್ಷ್ಮ ವಿಷಯಕ್ಕೂ ಅನ್ವಯವಾಗುತ್ತದೆ. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಬರೆಯಲಾಗುವ ಹಾಗೂ ಮಾಧ್ಯಮಗಳಲ್ಲಿ ಹೇಳಲಾಗುವ ಒಟ್ಟು ಚರ್ಚೆಯನ್ನು ಗಮನಿಸಿದರೆ ಶೇಕಡಾ 95ರಷ್ಟು ಮಾತುಗಳು ಕಾಡನ್ನು ಉಳಿಸಬೇಕು ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಬೇಕು ಎಂಬ ಒಟ್ಟು ತಾತ್ಪರ್ಯದ ಮಾತುಗಳೇ ಆಗಿರುತ್ತವೆ. ಆದರೆ ಹೇಗೆ ಅರಣ್ಯವನ್ನು ಕಾಪಾಡಬೇಕು, ನಮ್ಮ ಅರಣ್ಯಗಳ ಈಗಿನ ಸ್ಥಿತಿಯೇನಾಗಿದೆ, ಅಲ್ಲಿನ ವನ್ಯಜೀವಿಗಳ ಪಾಡೇನಾಗಿದೆ ಮತ್ತು ಕಾಡಿನ ನಿವಾಸಿಗಳ ಬದುಕು ಏನಾಗಿದೆ ಎಂಬ ಅಂಕಿಅಂಶ ಸಹಿತವಾದ ಸಂಶೋಧನಾ ಲೇಖನಗಳು ನಿಮಗೆ ಕಾಣಸಿಗುವುದಿಲ್ಲ.

ಕೃಪಾಕರ-ಸೇನಾನಿ, ಉಲ್ಲಾಸ್ ಕಾರಂತ, ಸಂಜಯ್ ಗುಬ್ಬಿ ಮತ್ತಿತರರ ಪ್ರತ್ಯಕ್ಷದರ್ಶಿ ವಿವರಣೆಗಳನ್ನು ಹೊರತುಪಡಿಸಿದರೆ ಈ ವಿಷಯದಲ್ಲಿ ಯಾವುದೇ ಮಹತ್ವದ ಅಧ್ಯಯನ ಹಾಗೂ ವಿಶ್ಲೇಷಕ ವರದಿಯೂ ನಿಮಗೆ ಸಿಗುವುದಿಲ್ಲ. ಆದರೂ ಕೂಡ ಎಂದಿನಂತೆ ಈ ವಿಷಯ ‘ಯಾರೂ ಮುಟ್ಟಿಸಿಕೊಳ್ಳದ’ ಹಾಗೂ ಆದಷ್ಟು ಸತ್ಯವನ್ನು ಮರೆಮಾಚಿ ವರ್ಣರಂಜಿತವಾಗಿ ವೈಭವೀಕರಿಸುವ ಸಾದೃಶ್ಯಗಳಿಗೆ ಬಂದು ನಿಂತಿದೆ.

ಇಂದಿನ ಕರ್ನಾಟಕದ ಕಾಡುಗಳ ಪ್ರಸ್ತುತ ಸ್ಥಿತಿಯನ್ನೇ ಅವಲೋಕಿಸೋಣ. ಬಂಡೀಪುರ ಸೇರಿದಂತೆ ಹಲವೆಡೆ ಕೇವಲ ಲಾಂಟಾನ ಬೆಳೆದು ನಿಂತಿದೆ. ಹಲವೆಡೆ ಎಕರೆಗಳಷ್ಟು ಪ್ರದೇಶಗಳಲ್ಲಿ ಒಂದೇ ಒಂದು ದೊಡ್ಡಮರವೂ ಕಾಣಸಿಗುವುದಿಲ್ಲ. ಈ ಕಾಡುಗಳಲ್ಲಿ ಸಸ್ಯಾಹಾರಿ ಪ್ರಾಣಿಗಳ ಮೇವಿನ ಅತೀವ ಕೊರತೆ ಇರುವಂತೆಯೂ ಕಾಣುತ್ತದೆ. ಬಿದಿರು ಮೆಳೆಗಳು ಬಲಿತು ಆಯುಷ್ಯ ಮುಗಿಸಿ ನಶ್ವರವಾಗುತ್ತಿರುವ ವರದಿಗಳನ್ನೂ ನೀವು ಓದಿರುತ್ತೀರಿ. ಬೇಸಿಗೆಯ ದಿನಗಳಲ್ಲಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆಯನ್ನೂ ನೀವು ಕೇಳಿರುತ್ತೀರಿ.

ಮೇಲಿನ ಈ ಎಲ್ಲ ದೂರುಗಳ ಬಗ್ಗೆ ಸಹಾ ಯಾವುದೇ ಅಂಕಿ ಅಂಶಗಳಿಲ್ಲ. ಈ ತೆರನಾದ ಮಾಹಿತಿ ಖಾಸಗಿಯಾಗಿ ಸಿಗುವುದೂ ಸಾಧ್ಯವಿಲ್ಲ. ಕಾಡಿನೊಳಗೆ ಪ್ರವೇಶಿಸುವುದೇ ಅಲಭ್ಯವಾದ ಕಾರಣ ಪ್ರತ್ಯಕ್ಷದರ್ಶಿಗಳ ಸೂಕ್ಷ್ಮ ವಿವರಗಳು ಕೂಡಾ ಕಡಿಮೆಯೇ. ಈ ಎಲ್ಲಾ ವಿವರ-ಸಂಖ್ಯೆ-ಮಾಹಿತಿ-ವರದಿಗಳನ್ನು ನಮ್ಮ ಅರಣ್ಯ ಇಲಾಖೆಯೇ ನೀಡಬೇಕು. ಆದರೆ ತಮ್ಮ ಅದಕ್ಷತೆ ಹಾಗೂ ನಿರ್ಲಜ್ಜತನವನ್ನು ಮರೆಮಾಚಬಯಸುವ ಅರಣ್ಯ ಇಲಾಖೆಯಿಂದ ಈ ಮಾಹಿತಿ ಬಯಸುವುದು ‘ಬೆಕ್ಕಿಗೆ ಗಂಟೆ ಕಟ್ಟಿಕೊಳ್ಳುವ’ ಕೋರಿಕೆಯಷ್ಟೇ ಸತ್ಯವಾಗಿದೆ. ಹೊಸಪೇಟೆಯ ಗಣಿಧಣಿ ಆನಂದಸಿಂಗ್ ನಮ್ಮ ಅರಣ್ಯ ಮಂತ್ರಿಯೆಂದು ನಾವು ಒಪ್ಪಿಕೊಂಡ ಮೇಲೆ ಈ ವಿಷಯದಲ್ಲಿ ಚರ್ಚೆ ಮುಂದುವರೆಸುವ ಅಗತ್ಯವೆಲ್ಲಿದೆ..?

ನಮ್ಮ ಅರಣ್ಯಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಈ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ (ಕ್ಯಾರಿಯಿಂಗ್ ಕೆಪಾಸಿಟಿ) ವಿಸ್ತೃತ ಮತ್ತು ಕೂಲಂಕಷ ಅಧ್ಯಯನದ ತುರ್ತು ಅಗತ್ಯವಿದೆ. ಕಳೆದ ಕೆಲವಾರು ದಶಕಗಳಲ್ಲಿ ನಾವು ಕಂಡಂತೆ ಈ ವಿಷಯದಲ್ಲಿ ಯಾವುದೇ ಅಧ್ಯಯನವಾಗಿರುವ ಮಾಹಿತಿ ನಮ್ಮ ಬಳಿಯಿಲ್ಲ. ಅರಣ್ಯ ಇಲಾಖೆಯು ಇದುವರೆಗೆ ಈ ದಿಕ್ಕಿನಲ್ಲಿ ನಡೆಸಿರುವ ಯಾವುದೇ ಅಧ್ಯಯನ ವರದಿಯೂ ಸಾರ್ವಜನಿಕ ವಲಯದಲ್ಲಿ ಬಿಡುಗಡೆಯಾಗಿಲ್ಲ. ಅರಣ್ಯ ಸಂಬಂಧಿತ ಯಾವುದೇ ಸಮಸ್ಯೆಗಳ ಚರ್ಚೆಯಾಗಲಿ ಅಥವಾ ಪರಿಹಾರಪೂರಕ ಮಾತುಕತೆಯಾಗಲಿ ನಡೆದ ವರದಿಯೂ ಲಭ್ಯವಿಲ್ಲ.

ಸಮಾಜಮುಖಿಯ ಈ ಸಂಚಿಕೆಯ ಮುಖ್ಯಚರ್ಚೆಯ ವಿಷಯಕ್ಕೆ ಬರುವ ಮೊದಲು ಈ ಪೀಠಿಕೆಯ ಆವಶ್ಯಕತೆಯಿತ್ತು. ನಾವು ಚಾಪೆಯ ಕೆಳಗೆ ತಳ್ಳಿ ಗಡದ್ದಾಗಿ ನಿದ್ರೆ ಮಾಡುತ್ತಾ ನಿರ್ಲಕ್ಷಿಸಿರುವ ಹಲವು ವಿಷಯಗಳಲ್ಲಿ ಈ ಮುಖ್ಯವಿಷಯವೂ ಒಂದಾಗಿದೆ. ತಂದೆ-ತಾಯಿ-ಪೋಷಕರಾಗಲಿ ಅಥವಾ ವಾರಸುದಾರರಾಗಲಿ ಇರದ ಈ ಸಮಸ್ಯೆಯನ್ನು ನಾವು ಎತ್ತಿ ಹೇಳಲೇಬೇಕಾಗಿತ್ತು. ಏಕೆಂದರೆ ಈ ವಿಷಯ ಕಾಡಂಚಿನಲ್ಲಿ ವಾಸಮಾಡುತ್ತಿರುವ ನಿವಾಸಿಗಳ ಹಾಗೂ ಸಾಮಾನ್ಯ ರೈತರ ಬದುಕನ್ನು ಮೂರಾಪಾಲಾಗಿ ಮಾಡಹೊರಟಿದೆ. ಕಾಡಿನ ಚಿಂತೆ ನಮಗೇಕೆ ಎಂದಿದ್ದ ನಮ್ಮ ಬಾಗಿಲನ್ನು ಅಕ್ಷರಶಃ ತಟ್ಟುತ್ತಿದೆ. ಐದಾರು ಜಿಲ್ಲೆಗಳ ಹತ್ತಾರು ತಾಲ್ಲೂಕುಗಳ ರೈತರ ಬಾಳನ್ನು ಹೈರಾಣಾಗಿಸಿದೆ. ಹೊಲ-ತೋಟ ಮಾಡಿ ಜೀವನದ ಅಗತ್ಯವನ್ನು ಸಂಪಾದಿಸುವುದಿರಲಿ, ಈ ತಾಲ್ಲೂಕುಗಳ ರೈತರು ಮನೆಯಿಂದ ಆಚೆ ಬರಲೇ ಹೆದರುವಂತೆ ಆಗಿದೆ.

ರಾಗಿಣಿ-ಸಂಜನಾರ ಹಾಗೂ ಚೀನಾ-ಕೊರೋನಾ ಗಲಾಟೆಯಲ್ಲಿ ಈ ಕಾಡಂಚಿನ ಜಿಲ್ಲೆಗಳ ವರದಿ ಬೆಂಗಳೂರಿನ ಪತ್ರಿಕೆಗಳಲ್ಲಿ ಹಾಗೂ ಬೆಂಗಳೂರಿನ ಮಾಧ್ಯಮಗಳಲ್ಲಿ ಕಣ್ಮರೆಯಾಗಿದೆ. ಆದರೆ ಈ ಜಿಲ್ಲೆಗಳ ಸ್ಥಳೀಯ ಪತ್ರಿಕೆಗಳಲ್ಲಿ ನಿಮಗೆ ಮಾನವ-ವನ್ಯಜೀವಿ ಸಂಘರ್ಷದ ದಾರುಣ ವರದಿಗಳು ಹೇರಳವಾಗಿ ಸಿಗುತ್ತವೆ. ಈ ವರದಿಗಳನ್ನು ಉಲ್ಲೇಖಿಸುವ ಮಟ್ಟದ ಸ್ಥಳಾವಕಾಶ ಈ ಪತ್ರಿಕೆಗೂ ಕಷ್ಟವಾಗಿದೆ. ಈ ಘಟನೆಗಳನ್ನು ಒಂದೆಡೆ ಕ್ರೋಡೀಕರಿಸುವ ಪ್ರಯತ್ನವೂ ಖಾಸಗಿಯಾಗಿ ಸಾಧ್ಯವಿಲ್ಲ. ಆದಕಾರಣ, ಸದ್ಯಕ್ಕೆ ಸರ್ಕಾರಿ ಅಂಕಿಅಂಶಗಳನ್ನೇ ಪರಿಗಣಿಸೋಣ. ಕೇವಲ ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ‘ದಾಖಲಾದ’ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ಈ ಕೆಳಕಂಡಂತಿವೆ.

ವರ್ಷ ಪ್ರಕರಣಗಳು
2016-17 2,831
2017-18 1,742
2018-19 3,915
2019-20 3,703
2020-21 (ಆಗಸ್ಟ್ ವರೆಗೆ) 1,174

ಮೇಲಿನ ಕೇವಲ ಕೊಡಗು ಜಿಲ್ಲೆಯ ವರದಿಯೇ ನಿಮ್ಮನ್ನು ಬೆಚ್ಚಿಬೀಳಿಸಬಹುದು. ಈ ಅಂಕಿಅಂಶಗಳಲ್ಲಿ ದೈನಂದಿನ ಘಟನೆಯಂತೆ ಆನೆಗಳನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಿಸುವ ಪ್ರಕರಣಗಳು ದಾಖಲಾಗುವುದಿಲ್ಲ. ಅಂತೆಯೇ ಜನವಸತಿ ಮತ್ತು ಕೃಷಿಯ ಮೇಲೆ ಬಿದ್ದಿರುವ ದೀರ್ಘಕಾಲೀನ ಪರಿಣಾಮಗಳು ಸಹಾ ಗಣನೆಗೆ ಬರುವುದಿಲ್ಲ.

ವನ್ಯಗಡಿ ಜಿಲ್ಲೆಗಳ ಹದಿನೈದು-ಇಪ್ಪತ್ತು ತಾಲ್ಲೂಕುಗಳ ರೈತರ ಬವಣೆ ಹೇಳತೀರದಾಗಿದೆ. ಕೃಷಿ – ತೋಟಗಾರಿಕೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡಿದೆ. ವನ್ಯಜೀವಿಗಳ ಉಪಟಳದಲ್ಲಿ ಈ ತಾಲ್ಲೂಕುಗಳಲ್ಲಿ ಕೆಲಸಗಾರರು ಸಹಾ ಸಿಗುತ್ತಿಲ್ಲ. ಹೊರಗಿನ ಸಹಾಯಕರಿಲ್ಲದೆ ಯಾವುದೇ

ತೋಟಗಾರಿಕೆ ಮಾಡುವಂತಿಲ್ಲ. ಭತ್ತ, ಕಬ್ಬು ಮತ್ತು ಬಾಳೆಯನ್ನಂತೂ ಬೆಳೆಯುವಂತೆಯೇ ಇಲ್ಲ. ಜಾನುವಾರುಗಳನ್ನು ಸಾಕುವಂತಿಲ್ಲ. ಇವರ ಗೋಳನ್ನು ಕೇಳುವವರು ಯಾರೂ ಇಲ್ಲ. ಪರಿಹಾರವಂತೂ ಮರೀಚಿಕೆಯಾಗಿದೆ.

ಅರಣ್ಯ ಇಲಾಖೆಯ ಮೂಲ ಉದ್ದೇಶ ಅರಣ್ಯ ಬೆಳೆಸುವುದು ಮತ್ತು ವನ್ಯಜೀವಿಗಳ ರಕ್ಷಣೆ ಮಾಡುವುದು. ಆದರೆ ಈ ವನ್ಯಜೀವಿಗಳು ಕಳಪೆ ಗುಣಮಟ್ಟದ ಅರಣ್ಯವನ್ನು ತೊರೆದು ಕೃಷಿ-ತೋಟಗಾರಿಕೆಯ ಜಮೀನಿಗೆ ದಾಳಿಯಿಟ್ಟರೆ ಅದಕ್ಕೆ ಯಾರು ಹೊಣೆ ಹಾಗೂ ಹೇಗೆ ಪರಿಹಾರವೆನ್ನುವುದು ಇನ್ನೂ ನಿರ್ಧಾರವಾಗಬೇಕಿದೆ. ಅರಣ್ಯ ಇಲಾಖೆ ಅಲ್ಲಿಂದಿಲ್ಲಿಗೆ ಆನೆಗಳನ್ನು ಓಡಿಸುವುದು ಹಾಗೂ ಚಿರತೆಗಳನ್ನು ಹಿಡಿಯುವ ಕೆಲಸ ಮಾಡುತ್ತಿದೆ. ಆದರೆ ಈ ಆನೆ-ಚಿರತೆಗಳ ಸಂಖ್ಯೆ ಅರಣ್ಯ ಇಲಾಖೆಯ ಸೀಮಿತ ಸಾಧನಗಳನ್ನು ಮೀರಿದೆ. ಕರ್ನಾಟಕದ ಘೋಷಿತ ಅರಣ್ಯಗಳಿಂದಾಚೆಗೆ 500 ರಿಂದ 600ರಷ್ಟು ಆನೆಗಳು ಅಲೆದಾಡುತ್ತಿವೆ. ಇವು ಈ ನಾಡಿನ ಪ್ರದೇಶಕ್ಕೆ ಒಗ್ಗಿಕೊಂಡಿವೆ. ಇವು ಯಾವುದೇ ಪಟಾಕಿ ಶಬ್ದಕ್ಕೆ ಬೆದರುವ ಸಮಯ ಮೀರಿಹೋಗಿದೆ. ಅರಣ್ಯ ಇಲಾಖೆಯ ನಾಲ್ಕಾರು ಸಿಬ್ಬಂದಿ ಈ ಆನೆಗಳನ್ನು ಬೆದರಿಸಿ ಓಡಿಸುವ ಕಾಲವೂ ಮಿಂಚಿದೆ.

ಅರಣ್ಯ ಹಾಗೂ ವನ್ಯಜೀವಿಗಳ ಮೇಲಿನ ಕಾಳಜಿಯ ಮಾತುಗಳಲ್ಲಿ ಈ ಹದಿನೈದು-ಇಪ್ಪತ್ತು ತಾಲ್ಲೂಕುಗಳ ರೈತರ ಬವಣೆ ಕಾಡಿನ ರೋದನವಾಗಿದೆ. ಸ್ಥಳೀಯ ರೈತ ಸಂಘಟನೆಗಳು ಆಗಾಗ್ಗೆ ಪ್ರತಿಭಟನೆ ಮಾಡಿದರೂ ಈ ಹೋರಾಟಗಳಿಗೆ ರಾಜ್ಯ ಮಟ್ಟದ ಮಾನ್ಯತೆ ಸಿಕ್ಕಿಲ್ಲ. ನಗರದ ಬುದ್ಧಿಜೀವಿ-ಪರಿಸರವಾದಿಗಳ ಬೆಂಬಲವಂತೂ ಸಾಧ್ಯವೇ ಇಲ್ಲ. ಸರ್ಕಾರಗಳಿಗೆ ಈ ರೈತರ ರೋದನ ಕೇಳುತ್ತಿಲ್ಲ ಅರಣ್ಯ ಇಲಾಖೆಯಿಂದ ಪರಿಹಾರ ಸಾಧ್ಯವಿಲ್ಲ. ಹಾಗಾದರೆ ಈ ತಾಲ್ಲೂಕುಗಳ ರೈತರೇನು ಮಾಡಬೇಕು..?

ಮೊದಲನೆಯದಾಗಿ ಕರ್ನಾಟಕದ ಸರ್ಕಾರ ಮತ್ತು ಜನತೆ ಈ ವನ್ಯಜೀವ-ಮಾನವ ಸಂಘರ್ಷಕ್ಕೆ ತಾವೆಲ್ಲರೂ ಕಾರಣರು ಎಂದು ಒಪ್ಪಿಕೊಳ್ಳಬೇಕು. ನಿರಾಧಾರವಾಗಿ ಈ ಸಂಘರ್ಷಕ್ಕೆ ರೈತರನ್ನು, ರೆಸಾರ್ಟ್ ಮಾಲೀಕರನ್ನು, ವಾಹನ ಸಂಚಾರವನ್ನು ದೂರುವುದನ್ನು ಬಿಡಬೇಕು. ಈ ಸಂಘರ್ಷಕ್ಕೆ ಮೂಲಕಾರಣ ನಮ್ಮ ಕಾಡುಗಳ ದುಃಸ್ಥಿತಿ ಹಾಗೂ ಮಿತಿಮೀರಿದ ಸಂಖ್ಯೆಯ ವನ್ಯಜೀವಿಗಳು ಎನ್ನುವ ಸಾಧ್ಯತೆಯನ್ನು ಒಪ್ಪಬೇಕು. ಈ ವಿಷಯದಲ್ಲಿ ಬೇಕಿರುವ ಕೂಲಂಕಷ ಮತ್ತು ವಿಸ್ತೃತ ಅಧ್ಯಯನಕ್ಕೆ ಮುಂದಾಗಬೇಕು.

ಕರ್ನಾಟಕದಲ್ಲಿರುವ ಕಾಡಿನ ವ್ಯಾಪ್ತಿಯಲ್ಲಿ ಎಷ್ಟು ವನ್ಯಜೀವಿಗಳನ್ನು ಪ್ರೋತ್ಸಾಹಿಸಬಹುದು ಎಂಬ ಅಂದಾಜಿನ ಎಣಿಕೆಯನ್ನಾದರೂ ಪಡೆಯುವ ನಿಟ್ಟಿನಲ್ಲಿ ಸಂಶೋಧನೆ ನಡೆಸಬೇಕು. ನಮ್ಮ ಕಾಡುಗಳ ವನ್ಯಜೀವಿ ಆಶ್ರಯ ಸಾಮರ್ಥ್ಯ ಮೀರಿದ ವನ್ಯಜೀವಿಗಳನ್ನು ಹೇಗೆ-ಎಲ್ಲಿ ಪೋಷಿಸಬೇಕು ಹಾಗೂ ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ನೀತಿ ನಿರೂಪಣೆಯೂ ಬೇಕು. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಕೇವಲ ಕಾಳಜಿ ವ್ಯಕ್ತಪಡಿಸಿದರೆ ಸಾಲದು ಹಾಗೂ ದೀರ್ಘಕಾಲೀನ ಪರಿಹಾರಕ್ಕೆ ಬೇಕಿರುವ ಮನಸ್ಥಿತಿ, ಸಿದ್ಧತೆ, ಸಂಪನ್ಮೂಲ ಹಾಗೂ ಯೋಜನೆಗೆ ಈಗಿಂದಲೇ ಕಾರ್ಯಪ್ರವೃತ್ತರಾಗಬೇಕು.

ಈ ಸಮಸ್ಯೆ ಕೇವಲ ಭಾರತ ಮತ್ತು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಆಫ್ರಿಕಾದ ಹಲವು ದೇಶಗಳಲ್ಲಿ ಹಾಗೂ ಆಸ್ಟ್ರೇಲಿಯಾ ಖಂಡದಲ್ಲಿ ಕೂಡಾ ಈ ಸಮಸ್ಯೆ ಕಾಡಿದೆ. ಈ ದೇಶಗಳಲ್ಲಿ ಅಳವಡಿಸಿಕೊಂಡಿರುವ ಪರಿಹಾರ ಕಾರ್ಯಗಳನ್ನು ಸಹಾ ಅಧ್ಯಯನ ಮಾಡಬೇಕಾಗಬಹುದು. ಅಲ್ಲಿನ ಅತ್ಯುತ್ತಮ ಪದ್ಧತಿಗಳನ್ನು ಸೂಕ್ತ ಮಾರ್ಪಡಿನೊಂದಿಗೆ ನಮ್ಮಲ್ಲಿಯೂ ಎರವಲು ಪಡೆಯಬಹುದು.

ಈ ವನ್ಯಜೀವಿ-ಮಾನವ ಸಂಘರ್ಷ ತಂದೊಡ್ಡಿರುವ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಿ ಬಯಲು ಮೃಗಾಲಯ, ವನ್ಯಜೀವಿ ಧಾಮ, ಅಶಕ್ತ ಪ್ರಾಣಿಗಳ ನರ್ಸರಿ ಮತ್ತಿತರ ರೂಪದಲ್ಲಿ ಪ್ರವಾಸಿ ಉದ್ಯಮಗಳನ್ನಾಗಿಯೂ ಮಾರ್ಪಾಡು ಮಾಡಬಹುದು. ಆದರೆ ಇವೆಲ್ಲಕ್ಕೂ ಮೊದಲು ಈ ಸಮಸ್ಯೆಯ ಆಳ-ಅಗಲಗಳನ್ನು ಅರಿಯುವ ಮುಕ್ತ ಮನಸ್ಥಿತಿ ಹಾಗೂ ಪೂರ್ವಗ್ರಹರಹಿತ ಚಿಂತನಕ್ರಮ ರೂಢಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಕಾಡಿಗೆ ಬೇಲಿಯೋ.. ನಾಡಿಗೆ ಪಂಜರವೋ..?

ಕರ್ನಾಟಕದ ಅರಣ್ಯದುದ್ದಕ್ಕೂ ಬೇಲಿ ಹಾಕಬೇಕೆಂಬ ಕೂಗು ಸಹಾ ಕೇಳಿಬಂದಿದೆ. ಸಾವಿರಾರು ಕಿಲೋಮೀಟರುಗಳ ಈ ಯೋಜನೆಯ ಆರ್ಥಿಕ ಹೊರೆಯಿನ್ನೂ ಅಳೆಯಬೇಕಿದೆ. ಈ ಮಧ್ಯೆ ಅಲ್ಲಲ್ಲಿ ಆನೆ ಕಂದಕಗಳನ್ನು ಅಗೆಯುವ, ಸೋಲಾರ್ ತಂತಿಬೇಲಿಯನ್ನು ಹಾಕುವ, ರೈಲ್ವೆ ಹಳಿಯ ತಡೆಗೋಡೆಗಳನ್ನು ಹಾಕುವ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ ಜಾಣ ಆನೆಗಳು ಕಾಡನ್ನು ತೊರೆದು ನಾಡಿನಲ್ಲಿಯೇ ಬಂದು ಸೇರಿಕೊಂಡಿವೆ. ಕಾಡಿಗೆ ಬೇಲಿ ಹಾಕುವ ಬದಲು ನಾಡಿಗೆ ಪಂಜರ ನಿರ್ಮಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ರೈತ ಸಂಘವೇಕೆ ಮೌನವಾಗಿದೆ..?

ಎಪಿಎಂಸಿ ದಲ್ಲಾಳಿಗಳ ಪರವಾಗಿ ಹಾಗೂ ಸೋಮಾರಿ ಕಬ್ಬು ಬೆಳೆಗಾರರ ಪರವಾಗಿ ಚಳವಳಿ ಮಾಡುವ ನಮ್ಮ ರೈತ ಸಂಘಟನೆಗಳು ಕಾಡಿನಂಚಿನ ತಾಲ್ಲೂಕುಗಳ ರೈತರ ಬವಣೆಗೆ ಕಿವುಡು-ಕುರುಡಾಗಿವೆ. ಈ ರೈತರ ಸಂಕಟ ಶಮನಕ್ಕೆ ರಾಜ್ಯಮಟ್ಟದಲ್ಲಿ ಇದುವರೆಗೂ ಯಾವುದೇ ಚಳವಳಿ ನಡೆದ ಉದಾಹರಣೆಗಳಿಲ್ಲ. ಕಾಡಿನಂಚಿನ ಈ ರೈತರ ಗೋಳು ಅಕ್ಷರಶಃ ಅರಣ್ಯರೋದನವಾಗಿದೆ. ಈ ‘ರಾಜ್ಯಮಟ್ಟದ’ ರೈತ ಸಂಘಟನೆಗಳನ್ನು ಬಹಿಷ್ಕರಿಸಿ ಕಾಡಿನಂಚಿನ ತಾಲ್ಲೂಕುಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷದಿಂದ ಹೈರಾಣಾಗಿರುವ ರೈತರು ತಮ್ಮದೇ ಆದ ‘ರಾಜ್ಯ ಮಲೆನಾಡು ರೈತ ಸಂಘ’ವೊಂದನ್ನು ಕಟ್ಟಿಕೊಳ್ಳುವುದು ಒಳ್ಳೆಯದೇನೋ.

ಆನೆ ಕಾರಿಡಾರ್

ಕರ್ನಾಟಕದ ಪಶ್ಚಿಮ ಘಟ್ಟಗಳು ಉತ್ತರ ಕನ್ನಡ ಜಿಲ್ಲೆಯಿಂದ ಹಿಡಿದು ಬೆಂಗಳೂರು ಬಳಿಯ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯವರೆಗೆ ಹಬ್ಬಿವೆ. ಈ ಅರಣ್ಯ ಪ್ರದೇಶದಲ್ಲಿ ಮುಕ್ತವಾಗಿ ಸಂಚರಿಸಲು ಹಾಗೂ ಆಹಾರ-ಸಂಗಾತಿ ಹುಡುಕಲು ಆನೆಗಳಿಗೆ ಕಾರಿಡಾರ್ ನಿರ್ಮಿಸಬೇಕೆನ್ನುವ ಯೋಜನೆಯೂ ಅರಣ್ಯ ಇಲಾಖೆಯ ಮುಂದಿದೆ. ಆದರೆ ಈ ಅರಣ್ಯಗಳ ನಡುವೆ ಹಾದುಹೋಗುವ ಹಲವಾರು

ರಸ್ತೆ ಮತ್ತು ಮೂಲಸೌಲಭ್ಯ ವ್ಯವಸ್ಥೆಗಳಿವೆ. ಈ ರಸ್ತೆ-ಸೌಲಭ್ಯ ಜಾಲಗಳನ್ನು ವೈಜ್ಞಾನಿಕವಾಗಿ ರೂಪಿಸಿ ಆನೆ ಕಾರಿಡಾರ್‌ಗೆ ಎಡೆ ಮಾಡಿಕೊಡಬಹುದು.

ಈ ನಿಟ್ಟಿನಲ್ಲಿ ಎರಡು-ಮೂರು ಕಿಲೋಮೀಟರುಗಳ ಎಲಿವೇಟೆಡ್ ರಸ್ತೆಗಳು, ಎಲಿವೇಟೆಡ್ ರೈಲ್ವೆ ಹಳಿಗಳನ್ನು ನಿರ್ಮಿಸಲು ಸಾಧ್ಯ. ಆದರೆ ಕೆಲವು ಪರಿಸರವಾದಿಗಳು ಯಾವುದೇ ವೈಜ್ಞಾನಿಕ-ಶಾಶ್ವತ ಪರಿಹಾರಕ್ಕೆ ವಿರೋಧ ವ್ಯಕ್ತಪಡಿಸುವ ಚಾಳಿ ಬೆಳೆಸಿಕೊಂಡಿದ್ದಾರೆ. ಸರ್ಕಾರವು ಈ ದಿಕ್ಕಿನಲ್ಲಿ ಸೂಕ್ತ ಅಧ್ಯಯನದ ಆಧಾರದ ಮೇಲೆ

ತನ್ನ ಬದ್ಧತೆ ಹಾಗೂ ಪ್ರೌಢತೆ ತೋರಬೇಕು. ಇಲ್ಲಸಲ್ಲದ ಆಪಾದನೆಗಳನ್ನು ವೈಜ್ಞಾನಿಕವಾಗಿ ಬದಿಗೆ ಸರಿಸಿ ಶಾಶ್ವತ ಪರಿಹಾರದೆಡೆಗೆ ಸಾಗಬೇಕಿದೆ.

 

 

Leave a Reply

Your email address will not be published.