ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

ಬೆಂಗಳೂರಿನ ವೃತ್ತಪತ್ರಿಕೆಗಳಲ್ಲಿ ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನೀವು ಓದಿರುತ್ತೀರಿ. ಆದರೆ ಮಲೆನಾಡು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸ್ಥಳೀಯ ವೃತ್ತಪತ್ರಿಕೆಗಳಲ್ಲಿ ಸರಿಸುಮಾರು ಪ್ರತಿದಿನವೂ ಈ ಕಾಡು-ನಾಡು ವೈಮನಸ್ಸಿನ ವರದಿಗಳನ್ನು ಓದಬೇಕಾಗುತ್ತದೆ. ಅಲ್ಲಲ್ಲಿ ಹುಲಿ-ಚಿರತೆಗಳ ಹಾವಳಿಯನ್ನು ನೀವು ಗಮನಿಸಿದ್ದರೆ ಇಲ್ಲಿ ದೈನಂದಿನ ಉಪಟಳವಾಗಿ ಕಾಡಾನೆಗಳ ದಾಂಧಲೆ ಕಾಣಿಸುತ್ತದೆ. ಪ್ರಾಣಭೀತಿ, ಬೆಳೆನಷ್ಟ ಹಾಗೂ ಕೆಲಸಗಾರರ ಪಲಾಯನದೊಂದಿಗೆ ಈ ಜಿಲ್ಲೆಗಳ ವನ್ಯಗಡಿ ತಾಲ್ಲೂಕುಗಳ ಕೃಷಿ ಆಧಾರಿತ ಬದುಕು ಡೋಲಾಯಮಾನವಾಗಿದೆ.

ಇದೇಕೆ ಹೀಗೆ..?

ಈ ತಾಲ್ಲೂಕುಗಳ ರೈತರು ನೂರಾರು ವರ್ಷಗಳಿಂದ ಬೇಸಾಯ-ತೋಟಗಾರಿಕೆ ಮಾಡಿದ ಜಮೀನುಗಳಲ್ಲಿಯೇ ಇಂದೂ ಕೂಡಾ ಕೃಷಿ ಮಾಡುತ್ತಿದ್ದಾರೆ. ಕಾಡಿನಲ್ಲಿ ನಡೆದಿರಬಹುದಾದ ಯಾವುದೇ ಆಗುಹೋಗುಗಳಿಗೂ ಇವರು ಕಾರಣರಲ್ಲ. ಇವರ ಊರುಗಳಲ್ಲಿನ ಜನಸಂಖ್ಯೆ-ಕೃಷಿಭೂಮಿಯೂ ಗಣನೀಯವಾಗಿ ಬದಲಾಗಿಲ್ಲ. ಆದರೆ ವನ್ಯಜೀವಿಗಳು ಇವರ ಊರು-ಜಮೀನುಗಳ ಮೇಲೆ ದಾಳಿಯಿಟ್ಟರೆ ಈ ಅಮಾಯಕ ರೈತರ ಜೀವನಕ್ಕೆ ಆಸರೆಯೇನು..? ಅರಣ್ಯ ಇಲಾಖೆಯು ಪಟಾಕಿ ಹೊಡೆದು ಅಲ್ಲಿಂದಿಲ್ಲಿಗೆ ಆನೆಗಳನ್ನು ಓಡಿಸುವುದನ್ನು ಬಿಟ್ಟರೆ ಯಾವುದೇ ಶಾಶ್ವತ ಪರಿಹಾರ ನೀಡದೆ ಈ ವನ್ಯಜೀವಿ-ಮಾನವ ಸಂಘರ್ಷ ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಹೀಗೆಯೇ ಮುಂದುವರೆದರೆ ಈ ಗಡಿ ತಾಲ್ಲೂಕುಗಳ ರೈತರು ಊರು ಬಿಟ್ಟು ಹೊರಡಬೇಕಾದ ಪರಿಸ್ಥಿತಿ ಎದುರಾಗುವುದಲ್ಲದೆ ನಿಧಾನವಾಗಿ ಪಕ್ಕದ ತಾಲ್ಲೂಕುಗಳಲ್ಲಿಯೂ ಈ ಸಂಘರ್ಷದ ಕರಿನೆರಳು ವ್ಯಾಪಿಸಿಕೊಳ್ಳುವ ಸಾಧ್ಯತೆಯಿದೆ.

2012ರ ಗಣತಿಯಂತೆ ಕರ್ನಾಟಕದಲ್ಲಿ 6,049 ಆನೆಗಳಿದ್ದರೆ ಈಗ ಅವುಗಳ ಸಂಖ್ಯೆ ಸುಮಾರು 7,000 ರಿಂದ 7,200 ರವರೆಗೆ ಇರಬಹುದು. ಯಾವುದೇ ಕಳ್ಳಬೇಟೆಯಿರದ ಆರೋಗ್ಯಕರ ಪರಿಸ್ಥಿತಿಯಲ್ಲಿ ಹುಲಿ, ಚಿರತೆ, ಆನೆಗಳ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿದ ಸಂಖ್ಯೆಯ ಈ ವನ್ಯಜೀವಿಗಳಿಗೆ ಬೇಕಿರುವ ಹೆಚ್ಚುವರಿ ಅರಣ್ಯ ಲಭ್ಯವಿಲ್ಲ. ಬಂಡೀಪುರ ಮತ್ತಿತರ ಅರಣ್ಯಗಳಲ್ಲಿ ಲಾಂಟಾನದ ಹಾವಳಿಯೂ ಹೆಚ್ಚಾಗಿದೆ. ಈ ಅಮಾಯಕ ವನ್ಯಜೀವಿಗಳು ಆಹಾರ ಹಾಗೂ ಸುರಕ್ಷಿತ ಆಶ್ರಯತಾಣ ಹುಡುಕಿಕೊಂಡು ನಾಡಿಗೆ ದಾಳಿಯಿಟ್ಟಿವೆ. ಕೆಲವು ಆನೆಗಳು ಕಬ್ಬು, ಭತ್ತ, ಬಾಳೆಗಳ ಪೌಷ್ಟಿಕ ಆಹಾರಕ್ಕೆ ಹೊಂದಿಕೊಂಡು ಕಾಡಿಗೆ ಹಿಂದಿರುಗುವ ದಾರಿಯನ್ನೇ ಮರೆತಿವೆ. ನಾಡಿನ ಮಧ್ಯದಲ್ಲಿಯೇ ಹುಟ್ಟಿ ಬೆಳೆದಿರುವ ಕೆಲ ಆನೆ ಸಂತತಿಗೆ ಕಾಡಿನ ಪರಿಚಯವೇ ಇಲ್ಲದಂತಾಗಿದೆ. ರೈತರ ಹೊಲ ತೋಟಗಳಲ್ಲಿಯೇ ಅವು ಮನೆ ಮಾಡಿಕೊಂಡಿದ್ದಾಗಿದೆ. ಈ ರೀತಿಯ ಹಲವು ಆಯಾಮಗಳ ಈ ವನ್ಯಜೀವಿ-ಮಾನವ ಸಂಘರ್ಷವನ್ನು ಈ ಕೆಲವು ಪ್ರಶ್ನೆಗಳಲ್ಲಿ ನಿಮ್ಮ ಮುಂದೆ ಇಡಲಾಗಿದೆ.

  • ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣರೆಂದು ಕರ್ನಾಟಕದ ಸರ್ಕಾರ ಮತ್ತು ಜನತೆಯೆಲ್ಲರೂ ಒಪ್ಪಬೇಕಿದೆಯೇ..?
  • ಏನು ಕಾರಣ, ಯಾರು ಕಾರಣರೆಂದು ಹುಡುಕುವ ಕಾಲ ಮುಗಿದು ಕೇವಲ ಶಾಶ್ವತ ಪರಿಹಾರ ಹುಡುಕುವ ಅಗತ್ಯವಿದೆಯೇ..?
  • ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನದ ತುರ್ತು ಅಗತ್ಯವಿದೆಯೇ..? ಈ ಅಧ್ಯಯನದಂತೆ ವನ್ಯಜೀವಿಗಳ ಸಂಖ್ಯೆ ಸೀಮಿತಗೊಳಿಸಬೇಕೇ..?
  • ಈ ಅಧ್ಯಯನದ ಮೊದಲು ಅಥವಾ ನಂತರದಲ್ಲಿ ನಾವು ಅನಪೇಕ್ಷಿತ ಹೆಚ್ಚುವರಿಯೆಂದು ಪರಿಗಣಿಸಬೇಕಾದ ವನ್ಯಜೀವಿಗಳನ್ನು ಏನು ಮಾಡಬೇಕು..? ಹಿಡಿದು ಕೂಡಿಡಬೇಕೇ..? ಸಂತಾನಹರಣ ಚಿಕಿತ್ಸೆ ಮಾಡಿಸಬೇಕೇ..? ಕೊಲ್ಲಬೇಕೇ..?
  • ಅಥವಾ ಈ ಐದಾರು ಜಿಲ್ಲೆಗಳಲ್ಲಿ ಜನವಸತಿ ತೆರವು ಮಾಡಿ ನಿರಾಶ್ರಿತರಿಗೆ ಪರ್ಯಾಯ ವಸತಿ-ಜೀವನ ಸೌಕರ್ಯ ಒದಗಿಸಬೇಕೇ..?

ಸ್ಥಳೀಯವಾಗಿ ರೈತ ಸಂಘಟನೆಗಳು ಹೋರಾಡುತ್ತಿದ್ದರೂ ರಾಜ್ಯ ಮಟ್ಟದಲ್ಲಿ ರೈತ ಸಂಘಟನೆಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ. ಒಂದು ಕಡೆ ಅಮಾಯಕ ರೈತರು ಹಾಗೂ ಮತ್ತೊಂದೆಡೆ ಮೂಕಪ್ರಾಣಿಗಳ ನಡುವಿನ ಈ ಸಂಘರ್ಷ ಪ್ರಕೃತಿ-ನಾಗರಿಕತೆಗಳ ನಡುವಣ ದೈತ್ಯ ಪ್ರಶ್ನೆಯಾಗಿ ಶಾಶ್ವತ ಪರಿಹಾರಕ್ಕೆ ಕಾದು ಕೂತಿದೆ.

ಈ ಕುರಿತ ವಿಷಯ ಪರಿಣತರ ಆಲೋಚನೆ, ಅಭಿಪ್ರಾಯಗಳನ್ನು ಈ ಬಾರಿಯ ಮುಖ್ಯಚರ್ಚೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published.