ಕರ್ನಾಟಕದ ಪ್ರಸಕ್ತ ಆರ್ಥಿಕ ಸ್ಥಿತಿ ಭವಿಷ್ಯದ ದಾರಿ

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಿಎಸ್ಡಿಪಿ ದರವನ್ನು ಪ್ರಕಟಿಸುವ ಜೊತೆಗೆ ನಿಗದಿಯಾದ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣ ಎಷ್ಟು? ಖರ್ಚಾದ ಹಣ ಎಷ್ಟು? ಹಾಗೂ ಅದರಿಂದ ಆದ ಪರಿಣಾಮ/ ಪಲಾನುಭವಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ವಿಧಾನಸಭೆಯಲ್ಲಿ ಮಂಡಿಸಬೇಕು, ಚರ್ಚೆಯಾಗಬೇಕು. ಆಗ ಉತ್ತಮ ಅಂಶಗಳಿಂದ ಕೂಡಿದ ಕಾರ್ಯಕ್ರಮಗಳು ವಿಫಲವಾಗುವುದನ್ನು ತಪ್ಪಿಸಬಹುದು.

-ಡಾ.ಎಸ್.ಆರ್.ಕೇಶವ

ಗಾಂಧೀಜಿ ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಪ್ರಾಂತ್ಯದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ನೋಡಿ ಅದನ್ನು ರಾಮರಾಜ್ಯವೆಂದು ಪ್ರಶಂಸಿದರು. ಸ್ವಾತಂತ್ರ್ಯಾನಂತರದ ಏಕೀಕರಣದ ಸಮಯದಲ್ಲಿ ಬಾಂಬೆ, ಮದ್ರಾಸ್, ಹೈದ್ರಾಬಾದ್ ಕರ್ನಾಟಕ ಹಾಗೂ ಕೊಡಗನ್ನು ಒಳಗೊಂಡ ಸಮಗ್ರ ಕರ್ನಾಟಕ ಉದಯವಾಯಿತು. ತದನಂತರ ಭಾರತದ ಆಯ್ದ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿ ಕರ್ನಾಟಕ ಬೆಳೆದಿದೆ. ಅದರೆ ಸ್ವಾತಂತ್ರ್ಯಪೂರ್ವದಲ್ಲಿ ಅಭಿವೃದ್ಧಿ ಹೊಂದಿದ ಪ್ರದೇಶಗಳು ಈಗಲೂ ಅಭಿವೃದ್ಧಿಯಲ್ಲಿ ಮುಂದಿದ್ದರೆ, ಆಗ ಅಭಿವೃದ್ಧಿಯಾಗದ ಪ್ರದೇಶಗಳು ಈಗಲೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ.

ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಪ್ರತಿಯೊಬ್ಬರ ಮೇಲೆ ಎಲ್ಲರನ್ನು ಒಳಗೊಂಡ, ಎಲ್ಲಾ ಪ್ರದೇಶಗಳಾಭಿವೃದ್ಧಿ ಮಾಡುವ ಗುರುತರ ಜವಾಬ್ದಾರಿ ಇರುತ್ತದೆ, ಅದರ ಜೊತೆಗೆ ಕಾಲದಿಂದ ಕಾಲಕ್ಕೆ ಎದುರಾಗುವ ಸಮಸ್ಯೆಗಳನ್ನು ದಿಟ್ಟದಾಗಿ ಎದುರಿಸಿ, ರಾಜ್ಯದ ಜನರ ಬದುಕನ್ನು ಹಸನುಗೊಳಿಸುವ ಜವಾಬ್ದಾರಿಯು ಅವರ ಮೇಲೆ ಇರುತ್ತದೆ. ತೆರಿಗೆಯ ಭಾರವನ್ನು ಹೆಚ್ಚಿಸದೆ, ತೆರಿಗೆಯ ತಳವನ್ನು ಹೆಚ್ಚುಮಾಡಿ, ಅನುತ್ಪಾದಕ ಖರ್ಚನ್ನು ಕಡಿಮೆ ಮಾಡಿ, ಅಭಿವೃದ್ಧಿಯನ್ನು ಹೆಚ್ಚು ಮಾಡುವ ಕಡೆಗೆ ಗಮನ ಕೊಡುವುದು ಸಹಾ ಪ್ರಮುಖವಾಗುತ್ತದೆ.

ಅತಿ ಹೆಚ್ಚು ತೊಂದರೆಗಳಿರುವ ಸಂದರ್ಭದಲ್ಲಿ ಬಿಕ್ಕಟ್ಟನ್ನು ಅವಕಾಶವಾಗಿ ಮಾರ್ಪಾಡು ಮಾಡಿಕೊಂಡಲ್ಲಿ ಅಂತಹ ನಾಯಕನ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಯಡಿಯೂರಪ್ಪ ಅವರು ರಾಜ್ಯದಲ್ಲಿ ನಾಲ್ಕನೆಯ ಬಾರಿಗೆ ಮುಖ್ಯ ಮಂತ್ರಿಯಾಗಿ ಜುಲೈ 2019ರಲ್ಲಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡಾಗಿನಿಂದ ರಾಜಕೀಯ ಸಮಸ್ಯೆಗಳ ಜೊತೆಗೆ ಆರ್ಥಿಕವಾಗಿ ಬಹಳ ಪರಿಣಾಮ ಬೀರಿದ ಅತಿವೃಷ್ಟಿ, ಅನಾವೃಷ್ಟಿ, ಜಾಗತಿಕ ಹಿಂಜರಿತ ಕೋವಿಡ್ ಸಮಸ್ಯೆಗಳು ಎದುರಾಗಿವೆ. ಈ ಸಮಸ್ಯೆಗಳನ್ನು ಮೆಟ್ಟಿ ಅವರು ಯಶಸ್ಸು ಗಳಿಸಿದ್ದಾರೆಯೇ ಎಂಬುದನ್ನು ವಿಶ್ಲೇಷಿಸಬೇಕು. ಹಾಗೆಯೇ ಮುಂದಿನ ವರ್ಷಗಳಲ್ಲಿ ರಾಜ್ಯವನ್ನು ಸದೃಢ ಅಭಿವೃದ್ಧಿಯುತ್ತ ಕೊಂಡೊಯ್ಯಲು ಇನ್ನೂ ಏನೆಲ್ಲಾ ಮಾಡಬೇಕು ಎಂಬುದರತ್ತ ಒಂದು ಪಕ್ಷಿ ನೋಟ ಬೀರೋಣ.

ಕರ್ನಾಟಕದ ಆರ್ಥಿಕ ಸೂಚಕಗಳು ಮತ್ತು ಕೋವಿಡ್

ಕರ್ನಾಟಕವು ರಾಷ್ಟ್ರದ ಒಟ್ಟು ಜಿ.ಡಿ.ಪಿ.ಗೆ ಸರಾಸರಿ ಶೇಕಡಾ 8 ರಿಂದ ಶೇಕಡಾ 9 ರವರೆಗೂ ಕೊಡುಗೆ ನೀಡುತ್ತಿದೆ. ಸಾಮಾನ್ಯವಾಗಿ ರಾಜ್ಯದ ಅಭಿವೃದ್ಧಿ ದರವು ರಾಷ್ಟ್ರದ ಅಭಿವೃದ್ಧಿ ದರಕ್ಕಿಂತ ಹೆಚ್ಚಾಗಿದೆ.

ಕೋಷ್ಟಕ 1

ಮೂಲ ಸ್ಥಿರದಲ್ಲಿ (2011-12) ಜಿಎಸ್‍ಡಿಪಿ ವಲಯದ ಬೆಳವಣಿಗೆಯ ದರಗಳು:

ವರ್ಷ     ಕೃಷಿ       ಉದ್ಯಮ                ಸೇವೆಗಳು               ಕರ್ನಾಟಕ ಜಿಎಸ್ಡಿಪಿ ಬೆಳವಣಿಗೆ       ಭಾರತದ ಜಿಡಿಪಿ ಬೆಳವಣಿಗೆ

2016-17 5.7          3.7          8.9          13.3        8.2

2017-18 14.2        4.7          12.2        10.8        7.2

2018-19 -1.6         5.6          9.8          7.8          6.8

2019-20 3.9          4.8          7.9          6.8          4.2

2020-21 6.4          -5.1         -3.1         -2.6         -7.7

ಮೂಲ: ಆರ್ಥಿಕ ಸಮೀಕ್ಷೆ, ಕರ್ನಾಟಕ ಸರ್ಕಾರ ಮತ್ತು ಬಜೆಟ್ ದಾಖಲೆಗಳು

ಕೃಷಿಯ ಬೆಳವಣೆಗೆಯ ದರವು 2018-19ರಲ್ಲಿ ಸಕಾರಾತ್ಮಕವಾಗಿ ಇದ್ದರೂ, ಉಳಿದಂತೆ ಕೃಷಿ ಬೆಳವಣಿಗೆ ಸಾಕಷ್ಟು ಏರಿಳಿಕೆಯಿಂದ ಕೂಡಿದೆ. ಉದ್ಯಮದ ಬೆಳೆವಣಿಗೆಯ ದರವು ಕೋವಿಡ್-19 ಹೊಡೆತಕ್ಕೆ ಸಾಕಷ್ಟು ನಲುಗಿದೆ. ಇದಕ್ಕೆ ಸೇವಾ ವಲಯವು ಹೊರತಾಗಿಲ್ಲ. ಭಾರತದ ಜಿ.ಡಿ.ಪಿ ಬೆಳೆವಣಿಗೆಯು 2020-21ರಲ್ಲಿ 7.7% ರಷ್ಟು ಸಂಕುಚಿತಗೊಂಡಿದೆ. ಹಾಗೆಯೇ ಕರ್ನಾಟಕದ ಬೆಳೆವಣೆಗೆಯ ದರವು ಶೇ 2.6.ರಷ್ಟು ಸಂಕುಚಿತಗೊಂಡಿದೆ. ಕರ್ನಾಟಕದ ರಾಜ್ಯ ದೇಶಿಯ ಉತ್ಪನ್ನ (ಜಿ.ಎಸ್.ಡಿ.ಪಿ) 2020-21 ಆರಂಭಿಕ ಅಂದಾಜಿನ ಪ್ರಕಾರ ನಿಗದಿತ ಬೆಲೆಗಳಲ್ಲಿ ಶೇ.2.6. ಸಂಕುಚಿತಗೊಂಡಿದೆ. ಇದರ ಅರ್ಥ ಕರ್ನಾಟಕವು ಪ್ರತಿ ವರ್ಷ ಕಾಣುತ್ತಿದ್ದ ಬೆಳವಣಿಗೆಯ ದರದ ಹೊರತಾಗಿಯೂ 2011-12ರ ತಟಸ್ಥ ಬೆಲೆಗಳಲ್ಲಿ ರೂ.31227.19 ಕೋಟಿಯಷ್ಟು ನಷ್ಟ ಹೊಂದಿದೆ.

ಹಾಗಾಗಿ ಸರ್ಕಾರದ ಮೊದಲ ಆದ್ಯತೆಯು ಉದ್ಯಮ ಹಾಗೂ ಸೇವೆ ವಲಯಗಳ ಪುನಶ್ಚೇತನಕ್ಕೆ ಒತ್ತು ನೀಡುವುದು ಪ್ರಮುಖವಾಗಿದೆ. 2021-22ರ ಆಯವ್ಯಯದಲ್ಲಿ ಯಡಿಯೂರಪ್ಪನವರು ಮಹಿಳೆ, ಮೂಲಸೌಕರ್ಯ, ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಕೊಟ್ಟರು. ಕೈಗಾರಿಕೆ ಅಭಿವೃದ್ಧಿಗೆ ಮತ್ತಷ್ಟು ಗಮನ ನೀಡಬೇಕು

ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದ ಕ್ರಮಗಳ ಹೊರತಾಗಿ ರೂ.1610 ಕೋಟಿ ಕೋವಿಡ್-19 ಲಾಕ್‍ಡೌನ್ ಪರಿಹಾರ ಪ್ಯಾಕೇಜ್ ಘೋಷಿಸಿತು. ಬಹುಶಃ ಇದನ್ನು ಪರಿಣಾಮಕಾರಿಯಾಗಿ ಜಾರಿಮಾಡಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸಿದ್ದರೆ, ಜನರ ಸಂಕಷ್ಟ ಮತ್ತಷ್ಟು ನೀಗುತ್ತಿತ್ತು.

ಸಂಪನ್ಮೂಲಗಳ ಮೇಲೆ ಪರಿಣಾಮ

2021-22ರ ಬಜೆಟ್ಟಿಗಾಗಿ ರಾಜ್ಯವು ಪಡೆಯುತ್ತಿರುವ ಸಂಪನ್ಮೂಲಗಳ ಮೇಲೆ ಕೋವಿಡ್19 ಮತ್ತು 15ನೇ ಹಣಕಾಸು ಆಯೋಗದ ಶಿಫಾರಸಿನ ಅನುಷ್ಠಾನವು ಪ್ರಭಾವಿಸುತ್ತದೆ. ಪ್ರತಿ ರೂಪಾಯಿಯಲ್ಲಿ ರಾಜ್ಯವು ತನ್ನ ಸ್ವಂತ ಆದಾಯದಿಂದ 50 ಪೈಸೆ ಪಡೆಯುತ್ತಿದೆ. ಇದು ಕಳೆದ ವರ್ಷದ ಬಜೆಟ್ ಅಂದಾಜುಗಳಲ್ಲಿ 54 ಪೈಸೆ ಕಡಿಮೆಯಾಗಿದೆ. ಅದೇ ರೀತಿ, ಕೇಂದ್ರ ತೆರಿಗೆಗಳ ಪಾಲು ಕಳೆದ ವರ್ಷದ ಬಜೆಟ್ ಅಂದಾಜುಗಳಲ್ಲಿ 12 ಪೈಸೆಗಳಿಂದ 10 ಪೈಸೆಗಳಿಗೆ ಇಳಿದಿದೆ; ಆದ್ದರಿಂದ ಕಳೆದ ವರ್ಷದ ಬಜೆಟ್ ಅಂದಾಜುಗಳಲ್ಲಿ 22 ಪೈಸೆಗಳಿಂದ ಈ ಬಜೆಟ್ಟಿನಲ್ಲಿ ಸಾಲಗಳನ್ನು 29 ಪೈಸೆಗಳಿಗೆ ಹೆಚ್ಚಿಸಲಾಗಿದೆ. ಪ್ರಮುಖ ಅಂಶವೆಂದರೆ ಜಿಎಸ್‍ಡಿಪಿಯ 5% ವರೆಗಿನ ಸಾಲಕ್ಕೆ ಹೋಗಲು ಈ ವರ್ಷ ಸರ್ಕಾರಕ್ಕೆ ಅನುಮತಿ ನೀಡಲಾಗಿದ್ದರೂ, ಸಾಲವನ್ನು ಜಿಎಸ್‍ಡಿಪಿಯ 4% ಗೆ ಸೀಮಿತಗೊಳಿಸಲು ಮುಖ್ಯಮಂತ್ರಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆಹೆಚ್ಚುತ್ತಿರುವ ಹಣಕಾಸಿನ ಕೊರತೆ

ಕರ್ನಾಟಕ ರಾಜ್ಯವು ವಿತ್ತೀಯ ಶಿಸ್ತಿಗೆ ಹೆಸರಾದ ರಾಜ್ಯ. ಇತ್ತೀಚಿನ ವರ್ಷಗಳಲ್ಲಿ ಹಣಕಾಸಿನ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದು ವಿತ್ತೀಯ ಶಿಸ್ತನ್ನು ಹದಗಡೆಸುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.

ನಿರುದ್ಯೋಗ ದರದ ಏರುಪೇರು

ಕರ್ನಾಟಕದ ನಿರುದ್ಯೋಗದ ದರ ಅತಿಹೆಚ್ಚು ಬದಲಾಗುತ್ತಿರುವುದು ಆತಂಕಕಾರಿಯಾಗಿದೆ. ಅಒIಇ ಪ್ರಕಾರ ಆಗಸ್ಟ್ 2019ರಲ್ಲಿ ಭಾರತದಲ್ಲೆ ಅತ್ಯಂತ ಕಡಿಮೆ ನಿರುದ್ಯೋಗದ ದರ ಕರ್ನಾಟಕದಲ್ಲಿ ದಾಖಲಾಗಿತ್ತು. ಭಾರತದ ಸರಾಸರಿ ನಿರುದ್ಯೋಗದ ದರವು 8.4% ರಷ್ಟಿದ್ದರೆ ಕರ್ನಾಟಕದ ನಿರುದ್ಯೋಗದರವು 1% ಗಿಂತ ಕಡಿಮೆ ಇತ್ತು. ಆದರೆ ಕೋವಿಡ್-19 ಪರಿಣಾಮವಾಗಿ ಏಪ್ರಿಲ್ 2020ರಲ್ಲಿ ಭಾರತದ ಸರಾಸರಿ ನಿರುದ್ಯೋಗದ ದರಕ್ಕಿಂತ ಹೆಚ್ಚಿನ ದರ ಕರ್ನಾಟಕದಲ್ಲಿ ದಾಖಲಾಗಿತ್ತು. ಭಾರತದ ಸರಾಸರಿ ನಿರುದ್ಯೋಗದ ದರವು 26.3% ಇದ್ದರೆ ಕರ್ನಾಟಕದಲ್ಲಿ ನಿರುದ್ಯೋಗ ದರವು 29.8% ಏರಿತು. ಫೆಬ್ರವರಿ 2021ರ ವೇಳೆಗೆ ರಾಷ್ಟ್ರದ ಸರಾಸರಿ ನಿರುದ್ಯೋಗದ ದರವು 7% ರಷ್ಟಿದ್ದರೆ ಕರ್ನಾಟಕದ ನಿರುದ್ಯೋಗದ ದರವು 3.6%ರಷ್ಟಿದೆ. ರಾಷ್ಟ್ರದಲ್ಲೆ ಅತ್ಯಂತ ಕಡಿಮೆ ನಿರುದ್ಯೋಗವಿರುವ ರಾಜ್ಯಗಳಲ್ಲಿ ಒಂದಾಗಿದೆ. ನಿರುದ್ಯೋಗದ ದರವು ಈ ಪ್ರಮಾಣದಲ್ಲಿ ಬೇರೆ ಯಾವ ರಾಜ್ಯಗಳಲ್ಲಿ ವ್ಯತ್ಯಾಸವಾಗುತ್ತಿಲ್ಲ. ಸರ್ಕಾರವು ಕಡಿಮೆ ನಿರುದ್ಯೋಗದ ಜೊತೆಗೆ ಅತ್ಯಂತ ಹೆಚ್ಚು ಏರಿಳಿತವಿರದ ಹಾಗೆ ನೋಡಿಕೊಳ್ಳುವ ಕಡೆಗೆ ಗಮನಕೊಡಬೇಕಾಗಿದೆ.

ಹೆಚ್ಚುತ್ತಿರುವ ಅಸಮಾನತೆ

1991ರ ಆರ್ಥಿಕ ಸುಧಾರಣೆಗಳ ನಂತರ ಭಾರತದಲ್ಲಿ ಅಸಮಾನತೆ ಹೆಚ್ಚಾಗಿದೆ. ಅದು 2000ರ ನಂತರ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಕರ್ನಾಟಕವು ಹೊರತಾಗಿಲ್ಲ. ಆರ್ಥಿಕ ಸುಧಾರಣೆಯ ಮೂಲ ಉದ್ದೇಶ ಮಾರುಕಟ್ಟೆ ಪರವಾದ ಸುಧಾರಣೆಯಾಗಿತ್ತು. ಅದರೆ ಅದು ವ್ಯವಹಾರ ಪರವಾದ ಸುಧಾರಣೆಯಾಗಿ ಮಾರ್ಪಟ್ಟಿದ್ದರಿಂದ ಅಸಮಾನತೆ ಹೆಚ್ಚಾಗಿದೆ. ಇದರಿಂದ ತಳವರ್ಗ ಸಮುದಾಯಗಳು, ರೈತರು ಹಾಗೂ ಬಡವರು ಹೆಚ್ಚು ತೊಂದರೆಗೀಡಾಗಿದ್ದಾರೆ.

ವಲಯ, ವರ್ಗ, ಜಾತಿ, ಗ್ರಾಮೀಣ-ನಗರ ಮಾಪನಗಳ ಆಧಾರದ ಮೇಲೆ ಅಸಮಾನತೆಯನ್ನು ನೋಡಬಹುದಾಗಿದೆ. ನಗರ ಮತ್ತು ಗ್ರಾಮೀಣ ಭಾಗದ ಮೇಲೆ, ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ ಮೂಲಸೌಕರ್ಯ, ಆರೋಗ್ಯ, ಸಾಲಸೌಲಭ್ಯಗಳು, ಗುಣಮಟ್ಟದ ಶಿಕ್ಷಣ, ಬಡತನ, ಉದ್ಯೋಗ, ಆದಾಯ ಉತ್ಪಾದನೆ ಹಾಗೂ ತಲಾ ಆದಾಯದಲ್ಲಿನ ಅಸಮಾನತೆ ಹೆಚ್ಚಾಗಿದೆ.

ಕರ್ನಾಟಕವು ತನ್ನ ಆರ್ಥಿಕತೆಯ ಬೆಳೆವಣಿಗೆಗೆ ಉತ್ಪಾದನೆ ಹಾಗೂ ಹೈಟೆಕ್ ಸೇವೆಗಳ ಮೇಲೆ ಅವಲಂಬಿಸಿದೆ; ಉದ್ಯೋಗಿಗಳ ಬಹುಪಾಲು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ ಎಂಬ ಅಂಶದ ಹೊರತಾಗಿಯೂ ಕೃಷಿಯ ಪಾಲು ಕೇವಲ ಶೇ. 12-15ಕ್ಕೆ ಇಳಿದಿದೆ.

ಕರ್ನಾಟಕವು ಒಟ್ಟಾರೆ ರಾಜ್ಯಮಟ್ಟದ ದೇಶಿಯ ಉತ್ಪನ್ನದ (ಜಿಎಸ್‍ಡಿಪಿ) ದೃಷ್ಟಿಯಿಂದ 2020-21 ಹೊರತುಪಡಿಸಿ ಉತ್ತಮ ಬೆಳೆವಣಿಗೆ ಹೊಂದಿದ್ದರೂ ಆ ಬೆಳೆವಣಿಗೆ ರಾಜ್ಯಾದ್ಯಂತ ಸಮವಾಗಿ ಹರಡಿಲ್ಲ. ಬೆಂಗಳೂರು ಕೇಂದ್ರಿತ ಅಭಿವೃದ್ಧಿಯಿಂದ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಮತ್ತಷ್ಟು ಹೆಚ್ಚಾಗುವ ಆತಂಕದಲ್ಲಿದೆ.

ಬೆಂಗಳೂರಿನ ಕೊಡುಗೆ 36.29%. ಇದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಾಲು 6.16% ಹಾಗೂ ಬೆಳಗಾವಿಯ ಪಾಲು 4.34% ರಷ್ಟಿದೆ. ಇನ್ನು ವಿಜಯಪುರ, ಉತ್ತರ ಕನ್ನಡ ಹಾಗೂ ಕೋಲಾರ ಜಿಲ್ಲೆಯ ಪಾಲು ಸರಿಸುಮಾರು 1.76% ರಷ್ಟು. ಜಿಎಸ್‍ಡಿಪಿ ಅತ್ಯಂತ ಕಡಿಮೆ ಪಾಲು ಇರುವ ಜಿಲ್ಲೆಗಳೆಂದರೆ ಕೊಡುಗು 0.58%, ಯಾದಗಿರಿ 1.06% ಹಾಗೂ ಗದಗ 1.11%. ಅಲ್ಲದೆ ಎನ್‍ಎಸ್‍ಡಿಪಿಯ ಜಿಲ್ಲಾವಾರು ಪಾಲಿನಲ್ಲೂ ಬೆಂಗಳೂರು ನಗರದ ಪಾಲು 1/3 ಕ್ಕಿಂತ ಹೆಚ್ಚಾಗಿದೆ.

ಭವಿಷ್ಯದ ದಾರಿ

ಕೃಷಿ, ಗುಡಿಕೈಗಾರಿಕೆ, ಗ್ರಾಮೀಣ ಕೈಗಾರಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಮಾರುಕಟ್ಟೆ ಮಾಡಿ ಉತ್ತಮ ಆದಾಯ ಗಳಿಸಲು ಮಾರ್ಕೆಟಿಂಗ್ ಬುದ್ಧಿವಂತಿಕೆ ಘಟಕವನ್ನು ತಕ್ಷಣ ಸ್ಥಾಪನೆ ಮಾಡಬೇಕು.

ಎಂ.ಎಸ್.ಎಂ.ಇ. ಮತ್ತು ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚು ಒತ್ತು ಬೇಕಿದೆ. ಕರ್ನಾಟಕದ ಸುಮಾರು 6.6 ಲಕ್ಷ ಕೈಗಾರಿಕೆಗಳಲ್ಲಿ ಸುಮಾರು 6.2 ಲಕ್ಷ ಕೈಗಾರಿಕೆಗಳು (94%) ಆಗಸ್ಟ್ 2020ರ ವೇಳೆಗೆ ಕಾರ್ಯ ನಿರ್ವಹಿಸುತ್ತಿದ್ದು ಆರ್ಥಿಕತೆಯ ಪುನರುಜ್ಜೀವನಗೊಳ್ಳಲು ಸಿದ್ಧವಾಗಿವೆ. ಇದನ್ನು ಸದುಪಯೋಗ ಪಡಿಸಿಕೊಂಡು ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡುವುದು ಇಗಿನ ಪ್ರಮುಖ ಆದ್ಯತೆಯಾಗಿರಬೇಕಿದೆ. ಎನ್.ಐ.ಟಿ.ಐ. ಆಯೋಗ ಸಿದ್ಧಪಡಿಸುವ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ಸತತ ಎರಡನೆಯ ವರ್ಷವು ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಹಾಗಾಗಿ ಕರ್ನಾಟಕದಲ್ಲಿ ಸಾಹಸೋದ್ಯಮ ಬಂಡವಾಳ, ಬಂಡವಾಳ ವ್ಯವಹಾರ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳಿಗೆ ಇನ್ನಷ್ಟು ಪೋತ್ಸಾಹ ಕೊಟ್ಟು ಮೊದಲ ಸ್ಥಾನವನ್ನು ಕಾಯ್ದಕೊಳ್ಳಬೇಕಿದೆ.

ಆತ್ಮನಿರ್ಭರ ಭಾರತ ಕಾರ್ಯಕ್ರಮವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಕಷ್ಟು ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಹಾಗೂ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವುದು ಬಹುಮುಖ್ಯ.

ಭಾರತ ಭ್ರಷ್ಟಾಚಾರ ಸಮೀಕ್ಷೆ 2019ರ ಪ್ರಕಾರ ಕರ್ನಾಟಕದಲ್ಲಿ ಶೇ.40 ರಷ್ಟು ಜನರು ಆಸ್ತಿ ನೋಂದಣಿ ಮತ್ತು ಭೂಸಮಸ್ಯೆಗಳಿಗೆ ಸಂಬಂಧಿಸಿರುವ ಕಾರ್ಯಗಳಿಗೆ ಲಂಚ ನೀಡಿದರೆ ಶೇ.2.3ರಷ್ಟು ಜನರು ಪೊಲೀಸರಿಗೆ ಲಂಚ ಕೊಟ್ಟಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಲಂಚಮುಕ್ತ ಕರ್ನಾಟಕ ಮಾಡುವತ್ತ ಸರ್ಕಾರ ಶ್ರಮಿಸಬೇಕು.

2015-16ರ ರಾಷ್ಟ್ರೀಯ ಕುಟುಂಬ ಸಮೀಕ್ಷೆಯ ಪ್ರಕಾರ ಕರ್ನಾಟಕದ ಮಕ್ಕಳಲ್ಲಿ ಎತ್ತರಕ್ಕೆ ತಕ್ಕ ತೂಕವಿರದ ಮಕ್ಕಳ ಸಂಖ್ಯೆ ಶೇ.21ರಷ್ಟಿದ್ದು, ಅದು ಭಾರತದ ಸರಾಸರಿಗಿಂತ ಹೆಚ್ಚಾಗಿದೆ. ಹಾಗಾಗಿ ಸರ್ಕಾರವು ಮಕ್ಕಳ ಆರೋಗ್ಯಕ್ಕಾಗಿ ಹೆಚ್ಚು ಪೌಷ್ಟಿಕಾಂಶವನ್ನು ಒದಗಿಸುವ ಸಲುವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು.

ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಒತ್ತು ನೀಡಬೇಕು. ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಪ್ರತಿ ರೂಪಾಯಿ ಒಂದೇ ವರ್ಷದಲ್ಲಿ ಎರಡು ರೂಪಾಯಿ ಐವತ್ತು ಪೈಸೆಗಳಾಗಿ ಗುಣಿಸುತ್ತದೆ. ಅನುತ್ಪಾದಕ ಖರ್ಚುಗಳನ್ನು ಕಡಿಮೆ ಮಾಡಿ ಅಭಿವೃದ್ಧಿ ವೆಚ್ಚವನ್ನು ಹೆಚ್ಚು ಮಾಡುವುದು ಒಳಿತು. ಜಾತಿ ಆಧಾರಿತ ನಿಗಮ, ಮಂಡಳಿಗಳು, ಮಠ, ಮಸೀದಿ, ಚರ್ಚುಗಳಿಗೆ ಆಯವ್ಯಯದಿಂದ ಹಣ ಒದಗಿಸುವುದನ್ನು ಪುನರ್ ಪರಿಶೀಲಿಸುವುದು ಒಳಿತು.

ಉಪ ಸಂಹಾರ

ಸರ್ಕಾರವು ಆಯವ್ಯಯದಲ್ಲಿ ಮಂಡಿಸಿರುವ ಕಾರ್ಯಕ್ರಮಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಿರುವ ಆರ್ಥಿಕ ಕಾರ್ಯಕ್ರಮಗಳ ಸರಿಯಾದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಿಎಸ್‍ಡಿಪಿ ದರವನ್ನು ಪ್ರಕಟಿಸುವ ಜೊತೆಗೆ ನಿಗದಿಯಾದ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣ ಎಷ್ಟು? ಖರ್ಚಾದ ಹಣ ಎಷ್ಟು? ಹಾಗೂ ಅದರಿಂದ ಆದ ಪರಿಣಾಮ/ ಪಲಾನುಭವಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ವಿಧಾನಸಭೆಯಲ್ಲಿ ಮಂಡಿಸಬೇಕು ಹಾಗೂ ಚರ್ಚೆಯಾಗಬೇಕು. ಬಹುಶಃ ಆಗ ಉತ್ತಮ ಅಂಶಗಳಿಂದ ಕೂಡಿದ ಕಾರ್ಯಕ್ರಮಗಳು ವಿಫಲವಾಗುವುದನ್ನು ತಪ್ಪಿಸಬಹುದು.

*ಲೇಖಕರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಆಯವ್ಯಯ ವಿಶ್ಲೇಷಣೆಯಲ್ಲಿ ಪರಿಣತರು, ಸುದ್ದಿವಾಹಿನಿಗಳ ಆರ್ಥಿಕ ವಿಷಯಗಳ ಚರ್ಚೆಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published.