ಕರ್ನಾಟಕದ ಮೀಸಲಾತಿ ಹೋರಾಟ: ಯಾರ ಪರ? ಯಾರ ವಿರುದ್ಧ?

-ಪದ್ಮರಾಜ ದಂಡಾವತಿ

ಕರ್ನಾಟಕದ ರಾಜಕೀಯವನ್ನು ಅನೇಕ ವರ್ಷ ಆಳಿದ ಲಿಂಗಾಯತ ಸಮುದಾಯವನ್ನು ಒಳಗಿಂದ ಒಳಗೇ ಗೆದ್ದಲು ಹಿಡಿಸಿ ದುರ್ಬಲಗೊಳಿಸುವ ಹುನ್ನಾರ ಪಂಚಮಸಾಲಿ ಚಳವಳಿಯ ಹಿಂದೆ ಇದೆಯೇ? ಇದು ಲಿಂಗಾಯತರನ್ನು ದುರ್ಬಲಗೊಳಿಸುವ ಹುನ್ನಾರವೇ ಅಥವಾ ಲಿಂಗಾಯತರ ಪ್ರಶ್ನಾತೀತ ನಾಯಕ ಎಂದೆನಿಸಿರುವ ಯಡಿಯೂರಪ್ಪ ಅವರನ್ನು ‘ಅಳತೆಗೆ ಇಳಿಸುವ ಹತ್ಯಾರವೇ? ಹಾಗಾದರೆ ಅದರ ಹಿಂದೆ ಯಾರಿದ್ದಾರೆ? ಉತ್ತರಕ್ಕೆ ಬಹಳ ತಡಕಾಡಬೇಕಿಲ್ಲ!

ಅದು 1978ನೇ ಇಸವಿ. ದೇವರಾಜ ಅರಸು ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆ ವೇಳೆಗಾಗಲೇ ಅವರು ಪ್ರಖ್ಯಾತ ನ್ಯಾಯವಾದಿ ಎಲ್.ಜಿ.ಹಾವನೂರರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಜಾರಿಗೆ ತಂದು ಕರ್ನಾಟಕದಲ್ಲಿ ಮೊದಲ ಬಾರಿಗೆ ಐಡೆಂಟಿಟಿ ರಾಜಕಾರಣಕ್ಕೆ ಚಾಲನೆ ಕೊಟ್ಟಿದ್ದರು. ಹಾವನೂರ್ ಆಯೋಗದ ನೇಮಕದ ಹಿಂದೆ, `ಕರ್ನಾಟಕದ ಹಿಂದುಳಿದ ವರ್ಗಗಳಿಗೆ ದನಿ ಕೊಡುವ ಸದುದ್ದೇಶ ಇದ್ದ ಹಾಗೆಯೇ ರಾಜಕೀಯದಲ್ಲಿ ಪ್ರಬಲ ಜಾತಿಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಹುನ್ನಾರವೂ ಇತ್ತು’ ಎಂಬ ಆರೋಪ ಆಗಲೇ ಕೇಳಿ ಬಂದಿತ್ತು.

ಅರಸು ಸರ್ಕಾರ ಮಂಡಿಸಿದ್ದ ಬಜೆಟ್ ಮೇಲೆ ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಆ ಚರ್ಚೆಯಲ್ಲಿ, ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಿಂದ ಬ್ರಹ್ಮಾನಂದ ರೆಡ್ಡಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿ ಬಂದಿದ್ದ, ಭೀಮಣ್ಣ ಖಂಡ್ರೆ ಭಾಗವಹಿಸಿದ್ದರು. ಅವರಿಗೆ ಎಷ್ಟು ಸಿಟ್ಟು ಬಂದಿತ್ತು ಎಂದರೆ ಹಾವನೂರ್ ಆಯೋಗದ ವರದಿಯನ್ನು ಕೈಯಲ್ಲಿ ಹಿಡಿದವರೇ ಅದಕ್ಕೆ ಬೆಂಕಿ ಹಚ್ಚಿ ಆರ್ಭಟಿಸಿದರು. ಅದು ಆಯೋಗದ ವರದಿ ವಿರುದ್ಧದ ಖಂಡ್ರೆಯವರ ಸಿಟ್ಟು ಮಾತ್ರ ಆಗಿರಲಿಲ್ಲ. ಇಡೀ ಲಿಂಗಾಯತ ಸಮುದಾಯದ ಹೊಟ್ಟೆಯುರಿಯ ಪ್ರತೀಕವೂ ಆಗಿತ್ತು. ಆ ಘಟನೆ ನಡೆದು ನಾಲ್ಕು ದಶಕಗಳು ಕಳೆದು ಹೋದರೂ ಆ ಹೊಟ್ಟೆಯುರಿ ಈಗಲೂ ಆರಿಲ್ಲ ಎಂಬುದಕ್ಕೆ ಈಗ ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳು ಸಾಕ್ಷಿ ನುಡಿಯುತ್ತಿವೆ.

ಹಾವನೂರ್ ಆಯೋಗ ಎಷ್ಟು ಚೆನ್ನಾಗಿ ತನ್ನ ವರದಿಯನ್ನು ತಯಾರಿಸಿತ್ತು ಎಂದರೆ ಮುಂದೆ ಅದು ದೇಶದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿರ್ಧರಿಸುವ ಮಂಡಲ್ ಆಯೋಗಕ್ಕೆ ಮಾದರಿ ಎಂದು ಹೆಸರು ಗಳಿಸಿತು. ಆದರೆ, ಹಾಗೆಂದು ಆ ವರದಿಗೆ ಆಕ್ಷೇಪಗಳು ಕಡಿಮೆ ಇರಲಿಲ್ಲ. ಮಂಡಲ್ ವರದಿ ಕೂಡ ದೇಶದಲ್ಲಿ ಹುಟ್ಟಿಸಿದ್ದ ಉದ್ವಿಗ್ನತೆಯನ್ನು ವಿದ್ಯಾರ್ಥಿಯೊಬ್ಬ ತನ್ನ ಮೈಗೆ ಬೆಂಕಿ ಹಚ್ಚಿಕೊಳ್ಳುವ ಮೂಲಕ ವ್ಯಕ್ತ ಮಾಡಿದ್ದ.

ನಮ್ಮದು ಅಸಮಾನ ಸಮಾಜ. ಈ ಅಸಮಾನ ಸಮಾಜವನ್ನು ಸಮಾನ ನೆಲೆಗೆ ತರುವುದು ಸಂವಿಧಾನದ ಆಶಯ. ಈ ಆಶಯವನ್ನು ಜಾರಿಗೆ ತರುವುದರಲ್ಲಿ ರಾಜಕಾರಣವೂ ಇರುತ್ತದೆ. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮೊಟ್ಟ ಮೊದಲು ಇಂಥ ರಾಜಕಾರಣವನ್ನು ಮಾಡಿ ತೋರಿಸಿದರು. ಇಲ್ಲವಾದರೆ ಒಂದು ಅಸೆಂಬ್ಲಿ ಕ್ಷೇತ್ರದಲ್ಲಿ ಮೂರು ನಾಲ್ಕು ಮನೆಗಳೂ ಇಲ್ಲದ ರಜಪೂತ ಸಮುದಾಯದ ಧರ್ಮಸಿಂಗ್ ಅಂಥವರು, ಅಷ್ಟೇ ಹಿಂದುಳಿದ ಸಮುದಾಯಕ್ಕೆ ಸೇರಿದ ವೀರಪ್ಪ ಮೊಯಿಲಿ ಅವರಂಥವರು ರಾಜಕೀಯಕ್ಕೆ ಬರಲು ಮತ್ತು ಅನೇಕ ವರ್ಷಗಳ ಕಾಲ ಪ್ರಸ್ತುತವಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆ ನೋಡಿದರೆ ಇಬ್ಬರೂ ಮುಖ್ಯಮಂತ್ರಿ ಹುದ್ದೆಗೆ ಏರಿದರು.

ಆದರೆ, ಕರ್ನಾಟಕವು ಬಹಳ ಮುಖ್ಯವಾಗಿ ಲಿಂಗಾಯತರ ಪ್ರಾಬಲ್ಯದ ರಾಜ್ಯ. ಅವರನ್ನು ಬಿಟ್ಟರೆ ಒಕ್ಕಲಿಗರು ಪ್ರಬಲರು. ಈ ಎರಡು ಪ್ರಬಲ ಸಮುದಾಯಗಳನ್ನು ಬದಿಗೆ ಸರಿಸಿ ರಾಜಕಾರಣ ಮಾಡಬೇಕಾಗಿದ್ದ ಅರಸು ಅವರ ನೆರವಿಗೆ ಬಂದುದು ಹಾವನೂರ್ ಆಯೋಗದ ವರದಿ. ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣದ ಹಿಂದಿರುವುದು ಅರಸು ರಾಜಕೀಯದ ಇನ್ನೊಂದು ಮುಖ!

ಹಾವನೂರರು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಲಿಂಗಾಯತ ಸಮುದಾಯವನ್ನು ಮೀಸಲಾತಿಯಿಂದ ಹೊರಗೆ ಇಟ್ಟರೆ ಮುಂದೆ 1986ರಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ವರದಿ ಸಲ್ಲಿಸಿದ ನ್ಯಾಯಾಧೀಶ ಬಿ.ವೆಂಕಟಸ್ವಾಮಿ ಆಯೋಗವು ಒಕ್ಕಲಿಗರನ್ನು ಹೊರಗೆ ಇಟ್ಟಿತು. ಹಾವನೂರರಿಗಿಂತ ಹೆಚ್ಚು ಆಳವಾಗಿ ಅಧ್ಯಯನ ಮಾಡಿ ಸಲ್ಲಿಸಿದ ವರದಿ ಎಂದು ಅದಕ್ಕೆ ಖ್ಯಾತಿ ಇದೆ. ಆದರೆ, ಒಕ್ಕಲಿಗರನ್ನು ಹೊರಗೆ ಇಟ್ಟ ಸುದ್ದಿ ಹೇಗೋ ಆ ಸಮುದಾಯದ ಜನರಿಗೆ ತಲುಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಆರಂಭವಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ವಿರುದ್ಧ ಒಕ್ಕಲಿಗ ಸಮುದಾಯದ ಹೋರಾಟಗಾರರು ವಾಚಾಮಗೋಚರವಾದ ಅಸಭ್ಯ ಬರಹಗಳನ್ನು ಗೋಡೆಗಳ ಮೇಲೆ ಬರೆದರು. ಆಗ ಸಚಿವರಾಗಿದ್ದ ದೇವೇಗೌಡರು ಹೆಗಡೆಯವರನ್ನು ಮಂಡ್ಯದ ಸಭೆಯೊಂದಕ್ಕೆ ಕರೆದುಕೊಂಡು ಹೋಗಿ ತಮ್ಮ ಸಮುದಾಯದ ಪರವಾಗಿ ಕ್ಷಮೆ ಯಾಚಿಸಿದರು.

ಹಾಗೆಂದು ವೆಂಕಟಸ್ವಾಮಿ ಆಯೋಗದ ವರದಿ ಬೆಳಕನ್ನೇನೂ ಕಾಣಲಿಲ್ಲ. ಯಾವುದೋ ಉಗ್ರಾಣದಲ್ಲಿ ಈಗಲೂ ಅದು ಕೊಳೆಯುತ್ತ ಬಿದ್ದಿದೆ. ಮುಂದೆ ಇಂಥ ಅನೇಕ ಆಯೋಗಗಳು ರಚನೆಯಾದುವು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಡಾ.ಎಚ್.ಕಾಂತರಾಜ್ ನೇತೃತ್ವದಲ್ಲಿ ಜಾತಿ ಸಮೀಕ್ಷೆ ಮಾಡಲು ಒಂದು ಆಯೋಗ ರಚಿಸಿದರು. ಅದಕ್ಕಾಗಿ 186 ಕೋಟಿ ರೂಪಾಯಿಗಳನ್ನು ಬಜೆಟ್‍ನಲ್ಲಿ ಒದಗಿಸಿದರು. ಅದು ಸಿದ್ಧಪಡಿಸಿದ ವರದಿಯೂ ಬೆಳಕು ಕಾಣುವುದಿಲ್ಲ ಎಂದು ಯಾರು ಬೇಕಾದರೂ ಬರೆದು ಕೊಡಬಹುದು. ಏಕೆಂದರೆ ಅದರಲ್ಲಿನ ಜಾತಿ ಕುರಿತ ಅಂಕಿ ಅಂಶಗಳು ಇನ್ನೂ “ಸ್ಫೋಟಕ”ವಾಗಿವೆ ಎಂಬ ಮಾಹಿತಿ ಇದೆ.

ಇಂಥ ಆಯೋಗಗಳನ್ನು ನೇಮಿಸುವುದು ಸುಲಭ. ಅವು ಕೊಡುವ ವರದಿ ಎಷ್ಟೇ ಅಧ್ಯಯನ ಆಧಾರಿತವಾಗಿದ್ದರೂ ಅದನ್ನು ವಿಧಾನಸಭೆಯಲ್ಲಿ ಮಂಡಿಸುವ, ಅಂಗೀಕರಿಸುವ ಧೈರ್ಯ ಸರ್ಕಾರಕ್ಕೆ ಇರುವುದಿಲ್ಲ. ಹಾಗಾಗಿಯೇ ಈಗ ಕರ್ನಾಟಕದಲ್ಲಿ ಇಂಥ ಆಯೋಗಗಳು ಕೊಟ್ಟ ವರದಿಗಳ ಆಧಾರದ ಮೇಲೆ ಸರ್ಕಾರ ಸಿದ್ಧಪಡಿಸಿದ ಎಕ್ಸ್ಸಿಕ್ಯೂಟಿವ್ ಆದೇಶಗಳು ಜಾರಿಯಲ್ಲಿ ಇವೆ. ಇಂಥ ಆದೇಶಗಳಲ್ಲಿ ತಮಗೆ ಬೇಕಾದ ಸಮುದಾಯಗಳಿಗೆ ಬೇಕಾದಷ್ಟು ಮೀಸಲಾತಿ ನಿಗದಿ ಮಾಡಬಹುದು. ಹೆಗಡೆಯವರು ತಮ್ಮ ಕಾಲದಲ್ಲಿ ಶೇಕಡ 90ಕ್ಕಿಂತ ಹೆಚ್ಚು ಮೀಸಲಾತಿ ಕೊಟ್ಟು ಅದನ್ನು ಎಷ್ಟು ಅಳ್ಳಕ ಮಾಡಬಹುದೋ ಅಷ್ಟು ಮಾಡಿದ್ದರು. ಇವೆಲ್ಲ ನ್ಯಾಯಾಲಯದಲ್ಲಿ ಒಂದೋ ತಡೆ ಕಂಡಿದ್ದುವು, ಇಲ್ಲವೇ ಇನ್ನೊಮ್ಮೆ ಅಧ್ಯಯನ ಮಾಡಿ ಎಂಬ ನಿರ್ದೇಶನ ಪಡೆದಿದ್ದುವು. ಅದಕ್ಕಾಗಿಯೇ ಮುಂದೆ ‘ಕಾಯಂ ಹಿಂದುಳಿದ ವರ್ಗಗಳ ಆಯೋಗ’ ರಚನೆಗೂ ಹಾದಿ ಆಯಿತು.

ಹಾವನೂರರು 1970ರ ದಶಕದ ಮಧ್ಯಭಾಗದಲ್ಲಿ ಸಲ್ಲಿಸಿದ ವರದಿಯ ಪ್ರಕಾರ ಒಂದು ಸಮುದಾಯವನ್ನು ಮೀಸಲಾತಿಗೆ ಅರ್ಹ ಎಂದು ನಿರ್ಣಯಿಸುವಾಗ, “ನಿಮ್ಮ ಊರಿನಲ್ಲಿ ಎಷ್ಟು ಮಠ, ಧರ್ಮಶಾಲೆ ಅಥವಾ ವಿದ್ಯಾರ್ಥಿ ನಿಲಯ ನಡೆಸುವ ಧಾರ್ಮಿಕ ಸಂಸ್ಥೆಗಳು ಇವೆ, ಅವು ಯಾವ ಜಾತಿಗೆ ಸೇರಿವೆ ಮತ್ತು ಅವು ಹೊಂದಿರುವ ಆಸ್ತಿ ಎಷ್ಟು” ಎಂಬ ಪ್ರಶ್ನೆ ಕೇಳಿ ಸಮೀಕ್ಷೆ ಮಾಡಿತ್ತು. ಆ ಸಮೀಕ್ಷೆಯ ಪ್ರಕಾರ ಆಗಲೇ ಲಿಂಗಾಯತರು ಇಂಥ ಎಲ್ಲ ಬಹುತೇಕ ಮಠಗಳ, ಧರ್ಮಶಾಲೆಗಳ, ವಿದ್ಯಾರ್ಥಿ ನಿಲಯಗಳ ಮತ್ತು ಮುಂದುವರಿದು ಶಾಲೆಗಳ, ಕಾಲೇಜುಗಳ ಆಡಳಿತವನ್ನು ಹೊಂದಿದ್ದರು. ಅದಕ್ಕಾಗಿಯೇ ಅವರನ್ನು ಹಾವನೂರ್ ಆಯೋಗ ‘ಮುಂದುವರಿದವರು’ ಎಂದು ನಿರ್ಧರಿಸಿತ್ತು.

ಹಾಗೆ ನೋಡಿದರೆ ಕರ್ನಾಟಕದ ಒಟ್ಟು ಶಿಕ್ಷಣ ಸಂಸ್ಥೆಗಳನ್ನು ಲಿಂಗಾಯತರಿಗೆ ಸೇರಿದುವು ಮತ್ತು ಒಕ್ಕಲಿಗರಿಗೆ ಸೇರಿದುವು ಎಂದು ಪ್ರಧಾನವಾಗಿ ವಿಂಗಡಣೆ ಮಾಡಬಹುದು. ಎಲ್.ಕೆ.ಜಿ ಯಿಂದ ಹಿಡಿದು ವೈದ್ಯಕೀಯ ಶಿಕ್ಷಣದ ವರೆಗೆ ಇಂಥ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಲಿಂಗಾಯತರು ಮತ್ತು ಅವರ ಜೊತೆಗೆ ಈಗ ಒಕ್ಕಲಿಗರು ಹಿಂದುಳಿದ ವರ್ಗದ ಮೀಸಲಾತಿಯ ಆಸರೆ ಪಡೆಯಲು ಒತ್ತಡ ಹಾಕುತ್ತಿರುವುದು ಒಟ್ಟು ಮೀಸಲಾತಿ ವ್ಯವಸ್ಥೆಯ ದೊಡ್ಡ ಅಣಕದಂತೆ ಕಾಣುತ್ತದೆ.

ಇದೀಗ 700ಕ್ಕಿಂತ ಹೆಚ್ಚು ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಪಂಚಮಸಾಲಿ ಗುರುಗಳು ಈಗಲೂ ಸರದಿ ಉಪವಾಸ ಸತ್ಯಾಗ್ರಹ ಮಾಡುತ್ತ `80 ಲಕ್ಷದಷ್ಟು’ ಇರುವ ತಮ್ಮ ಸಮುದಾಯಕ್ಕೆ 2 ಎ ಮೀಸಲಾತಿ ಕೇಳುತ್ತಿದ್ದರೆ ಒಕ್ಕಲಿಗರ ಮಠದ ಸ್ವಾಮಿಗಳು ತಮ್ಮ ಸಮುದಾಯದ ಹಲವು ಸಚಿವರನ್ನು ತಮ್ಮ ಮಠಕ್ಕೇ ಕರೆಸಿ ತಮಗೂ ಮೀಸಲಾತಿ ಕೊಡಬೇಕು ಎಂದು ಮನವಿರೂಪದ ಆದೇಶ ಸಲ್ಲಿಸಿದ್ದಾರೆ. 2 ಎ ದಲ್ಲಿ ಇರುವ ಕುರುಬರು ಪರಿಶಿಷ್ಟ ಪಂಗಡದ ಮೀಸಲಾತಿ ಕೇಳುತ್ತಿರುವುದನ್ನು, ಪರಿಶಿಷ್ಟ ಜಾತಿಯಲ್ಲಿ ಇರುವ ಎಡಗೈ ಸಮುದಾಯದವರು ತಮ್ಮ ಜನಸಂಖ್ಯೆಗೆ ತಕ್ಕ ಒಳ ಮೀಸಲಾತಿಯನ್ನು, ಈಗಾಗಲೇ ವರದಿ ಕೊಟ್ಟಿರುವ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಅನುಸಾರ ಆಗ್ರಹಿಸುತ್ತಿರುವುದನ್ನು, ಪರಿಶಿಷ್ಟ ಪಂಗಡದಲ್ಲಿ ಇರುವ ನಾಯಕ ಸಮುದಾಯದವರು ನಾಗಮೋಹನದಾಸ್ ವರದಿ ಅನುಸಾರ ಮೀಸಲಾತಿಯಲ್ಲಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತಿರುವುದನ್ನು ಮತ್ತು ಭಟ್ಕಳದಲ್ಲಿ ಈಡಿಗ ಸಮುದಾಯದ ಸ್ವಾಮೀಜಿಯೊಬ್ಬರು ತಮ್ಮನ್ನು 2 ಎ ದಿಂದ ಕದಲಿಸಿ ನೋಡಿ ಎಂದು ಎಚ್ಚರಿಸುತ್ತಿರುವುದನ್ನು ನೋಡಿದರೆ ಇದನ್ನೆಲ್ಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಗೆ ನಿಭಾಯಿಸುತ್ತಾರೆ ಎಂದು ನಿಜಕ್ಕೂ ಆಶ್ಚರ್ಯವಾಗುತ್ತದೆ.

ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟವು ಇನ್ನೊಂದು ಅರ್ಥದಲ್ಲಿ ತನ್ನ ನಾಯಕನ ವಿರುದ್ಧವೇ ನಡೆದ ಹೋರಾಟವಾಗಿದೆ; ಹಾಗೂ ಅದರ ನೇತೃತ್ವದಲ್ಲಿ ಇರುವವರು ಬಳಸುವ ಭಾಷೆ ತನ್ನ ಸಮುದಾಯದ ನಾಯಕನಿಗೇ ಪಂಥಾಹ್ವಾನ ನೀಡುವಂತೆ ಇದೆ. ಕುರುಬ ಸಮುದಾಯದ ನಾಯಕತ್ವದಲ್ಲಿಯೂ ಆಡಳಿತ ಪಕ್ಷದವರೇ ಮುಂಚೂಣಿಯಲ್ಲಿ ಇದ್ದಾರೆ. ಒಂದು ವೇಳೆ ಒಕ್ಕಲಿಗರು ಬೀದಿಗೆ ಬಂದರೆ ಅದರ ನಾಯಕತ್ವವನ್ನು ಯಾರು ವಹಿಸುತ್ತಾರೆ ಎಂದು ನೋಡಬೇಕು. ಹಾಗೆ ನೋಡಿದರೆ, ಈ ವಿಚಾರದಲ್ಲಿ ವಿರೋಧ ಪಕ್ಷಗಳೇ ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿವೆ. ಇದು ಬೆಂಕಿಯೊಡನೆಯ ಸರಸ ಎಂದು ಅವುಗಳಿಗೆ ಅರ್ಥವಾದಂತಿದೆ.

ಸದ್ಯದ ಮಟ್ಟಿಗೆ ಪಂಚಮಸಾಲಿ ಹೋರಾಟವನ್ನು ಮುರಿದು ಹಾಕುವಲ್ಲಿ ಯಡಿಯೂರಪ್ಪ ತಕ್ಕಮಟ್ಟಿನ ಯಶಸ್ಸನ್ನು ಕಂಡಂತೆ ಕಾಣುತ್ತದೆ. ಯಾವುದೇ ಒಂದು ಹೋರಾಟದಲ್ಲಿ ಅಪಸ್ವರ ಹುಟ್ಟಿಸಿದರೆ ಸಾಕು ಅದು ಸಾಯದಿದ್ದರೂ ಕಾವು ಕಳೆದುಕೊಳ್ಳುತ್ತದೆ. ಯಡಿಯೂರಪ್ಪ ಅವರ ವಿರುದ್ಧ ವೈಯಕ್ತಿಕ ಮಟ್ಟದ ದಾಳಿ ನಡೆಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯ ಹೈಕಮಾಂಡ್ ಕೊನೆಗೂ ಗದರಿಸಿದಂತಿದೆ. ಕೂಡಿ ಹೋರಾಡಿದ್ದ ಪಂಚಮಸಾಲಿ ಮಠಗಳ ಇಬ್ಬರೂ ಗುರುಗಳ ನಡುವೆ ಬಿರುಕು ಬಿಟ್ಟಿದೆ. ಅದಕ್ಕೆ ಅನೇಕ ಕಾರಣಗಳು ಇರಬಹುದು, ಆಮಿಷಗಳು ಇರಬಹುದು; ಹುನ್ನಾರಗಳೂ ಇರಬಹುದು. ಅಂತೂ ಯಡಿಯೂರಪ್ಪ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ!

ಸೋಜಿಗ ಎಂದರೆ ಇಂಥ ಹೋರಾಟಗಳ ಮುಂಚೂಣಿಗೆ ಸ್ವಾಮೀಜಿಗಳು ಹೇಗೆ ಬಂದರು? ಮಠದ ನಾಲ್ಕು ಗೋಡೆಗಳ ನಡುವೆ `ಓಂ ನಮಃ ಶಿವಾಯ’ ಎನ್ನುತ್ತ ಕುಳಿತುಕೊಳ್ಳುವವರು ಲಕ್ಷಗಟ್ಟಲೆ ಜನರನ್ನು ಸೇರಿಸುವಷ್ಟರ ಮಟ್ಟಿಗೆ ಹೇಗೆ ಬೆಳೆದರು? ಈ ಬೆಳವಣಿಗೆಗೂ ಯಡಿಯೂರಪ್ಪನವರೇ ಪರೋಕ್ಷವಾಗಿ ಕಾರಣ. ಇದು ಒಂದು ರೀತಿ ಮೋಹಿನಿ ಭಸ್ಮಾಸುರನ ಕಥೆ! 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮಠಗಳಿಗೆ ಅನುದಾನ ಘೋóಷಿಸಿದರು. ಆಗ ಅದನ್ನು ಟೀಕಿಸಿದ್ದ ವಿರೋಧ ಪಕ್ಷಗಳು ನಂತರ ಅಧಿಕಾರಕ್ಕೆ ಬಂದರೂ ಈ ಅನುದಾನವನ್ನು ನಿಲ್ಲಿಸಲು ಆಗಲಿಲ್ಲ. ಅಂದರೆ ಯಡಿಯೂರಪ್ಪ ಮಾಡಿದ್ದು ಇನ್ನೊಂದು ರೀತಿಯ `ಐಡೆಂಟಿಟಿ ಪಾಲಿಟಿಕ್ಸ್’ ಆಗಿತ್ತು. ಅದರಿಂದಾಗಿ ಮಠಗಳು ಆಯಾ ಸಮುದಾಯಗಳ ಐಡೆಂಟಿಟಿಯಾಗಿ ಪರಿವರ್ತನೆಗೊಂಡುವು.

ಸರ್ಕಾರದಿಂದ ಹೀಗೆ ಒಂದೇ ಸಾರಿ ಕೋಟಿಗಟ್ಟಲೆ ಹಣ ಬಿಡುಗಡೆಯಾಗುತ್ತಿದ್ದಂತೆಯೇ ಮಠಗಳಲ್ಲಿ ಮಲಗಿದಂತೆ ಇದ್ದವರು ಧಿಗ್ಗನೆ ಎದ್ದು ಕುಳಿತರು, ಕುಳಿತವರು ಎದ್ದು ನಿಂತರು; ಎದ್ದು ನಿಂತವರು ಬೀದಿಗೇ ಬಂದರು ಮತ್ತು ಚಳವಳಿಯ ನೇತೃತ್ವ ವಹಿಸಿದರು. ನೀವು ಲಿಂಗಾಯತರ ಹೋರಾಟ ನೋಡಿ, ಕುರುಬರ ಹೋರಾಟ ನೋಡಿ, ನಾಯಕರ ಹೋರಾಟ ನೋಡಿ, ಮಾದಿಗರ ಹೋರಾಟ ನೋಡಿ… ಇದೀಗ ಒಕ್ಕಲಿಗರ ಹೋರಾಟ ನೋಡಿ. ಎಲ್ಲ ಕಡೆ ಮಠಾಧೀಶರೇ ನಾಯಕತ್ವ ವಹಿಸಿದ್ದಾರೆ. ಹಾಗೂ ಅವರಲ್ಲಿ ಕೆಲವರಾದರೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಕುರಿತು ಹೇಗೆ ಮಾತನಾಡಿದ್ದಾರೆ ಎನ್ನುವುದಕ್ಕೆ ಈಚಿನ ಇತಿಹಾಸದಲ್ಲಿ ಹಲವು ಉದಾಹರಣೆಗಳು ಇವೆ.

ಕರ್ನಾಟಕದ ರಾಜಕೀಯ ನಾಯಕತ್ವ ಖಾಕಿಧಾರಿಗಳಿಂದ ಕಾವಿಧಾರಿಗಳ ಕೈಗೆ ಹೇಗೆ ಹೋಗಿದೆ ಎಂಬುದಕ್ಕೆ ಈ ಎಲ್ಲ ಬೆಳವಣಿಗೆಗಳು ಸಾಕ್ಷ್ಯ ಹೇಳುವಂತಿದೆ. ಮತ್ತು ಇದನ್ನು ನಿಭಾಯಿಸುವುದು ಆಡಳಿತ ಪಕ್ಷಗಳಿಗೆ ಹೆಚ್ಚು ಹೆಚ್ಚು ಕಷ್ಟವಾಗುತ್ತ, ಕ್ಲಿಷ್ಟವಾಗುತ್ತ ಹೋಗುತ್ತಿದೆ. ಖಾಕಿಧಾರಿಗಳ ವಿರುದ್ಧ ಯಾವ ಭಾಷೆಯನ್ನು ಬೇಕಾದರೂ ಬಳಸಬಹುದು. ಅದೇ ಭಾಷೆಯನ್ನು ಕಾವಿಧಾರಿಗಳ ವಿರುದ್ಧ ಬಳಸಲು ಆಗುವುದಿಲ್ಲ. ಇಕ್ಕಟ್ಟು ಇರುವುದು ಇಲ್ಲಿ.

ಹಾಗೆಂದು ಕೇಳಿದವರಿಗೆಲ್ಲ ಅವರು ಕೇಳಿದ ಮೀಸಲಾತಿ ಕೊಡಲು ಆಗುತ್ತದೆಯೇ? ಇದು ಮಠಗಳಿಗೆ ಬಜೆಟ್ಟಿನಲ್ಲಿ ಹಣ ಬಿಡುಗಡೆ ಮಾಡಿದಷ್ಟು ಸುಲಭವಲ್ಲ. ಜಾತಿಗೊಂದು ನಿಗಮವನ್ನು ಸ್ಥಾಪನೆ ಮಾಡಿದಷ್ಟು ಸರಳವೂ ಅಲ್ಲ. ಒಂದೊಮ್ಮೆ ಒತ್ತಡಕ್ಕೆ ಮಣಿದು ಅಷ್ಟೇ ಸುಲಭವಾಗಿ, ಸರಳವಾಗಿ ಮೀಸಲಾತಿಯನ್ನು ಕೊಟ್ಟು ಬಿಡಬಹುದು ಎಂದುಕೊಳ್ಳೋಣ. ಆದರೆ, ಅದು ನೀರ ಮೇಲಿನ ಗುಳ್ಳೆಯ ಹಾಗೆ ಕ್ಷಣಿಕವಾಗಿರುತ್ತದೆ. ದುರಂತ ಎಂದರೆ ಹೀಗೆ ಮೀಸಲಾತಿಯ ಬೇಡಿಕೆ ಇಡುವ ಮಠಾಧೀಶರಿಗೆ, ಅವರ ಜೊತೆಗೆ ಹೆಜ್ಜೆ ಹಾಕುವ ರಾಜಕಾರಣಿಗಳಿಗೆ ಇದು ಗೊತ್ತಿದ್ದಂತೆ ಕಾಣುವುದಿಲ್ಲ. ಬೇಕಾಬಿಟ್ಟಿಯಾಗಿ ಮೀಸಲಾತಿ ನಿಗದಿ ಮಾಡಲು ಮುಖ್ಯವಾದ ಅಡ್ಡಿ ಇರುವುದು 1992ರಲ್ಲಿ ದೇಶದ ಸುಪ್ರೀಂ ಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳು ಕೊಟ್ಟ ತೀರ್ಪು. ಈ ತೀರ್ಪಿನ ಸಾರವನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ “ಮೀಸಲಾತಿ ಎನ್ನುವುದು ಶೇಕಡ 50 ರ ಗಡಿಯನ್ನು ಮೀರಬಾರದು.” ಗೋಡೆ ಮೇಲಿನ ಈ ಬರಹವನ್ನು ಯಾರೂ ಓದುತ್ತ ಇಲ್ಲ. ಓದುವುದು ಅವರಿಗೆ ಬೇಕಾದಂತೆಯೂ ಇಲ್ಲ.

ಈ ತೀರ್ಪನ್ನು ಬರೆದವರು ನ್ಯಾಯಮೂರ್ತಿ ಬಿ.ಪಿ.ಜೀವನರೆಡ್ಡಿಯವರು. ಅತ್ಯಂತ ಸುದೀರ್ಘವಾದ ಈ ತೀರ್ಪಿನ 696ನೇ ಪ್ಯಾರಾದ ನಂತರ “ಆದೇಶ” ಆರಂಭವಾಗುತ್ತದೆ. ಅದಕ್ಕೆ ಮುಂಚಿನ 695ನೇ ಪ್ಯಾರಾದಲ್ಲಿ “…ಆಯೋಗಗಳು ಕೇವಲ ಅಂಕಿ ಅಂಶಗಳ ಆಧಾರಗಳನ್ನು (ಮೀಸಲಾತಿಗೆ) ಕಂಡು ಹಿಡಿಯುವ ಸಂಸ್ಥೆಗಳು. ಸರ್ಕಾರದ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿ ಮಾಡುವ ಸಾಂವಿಧಾನಿಕ ಜವಾಬ್ದಾರಿ ಸರ್ಕಾರಗಳ ಮೇಲೆ ಇದೆ… ಆದರೆ, 1990 ಮತ್ತು `91 ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶ ಸಂವಿಧಾನಕ್ಕೆ ಬದ್ಧವೂ ಆಗಿಲ್ಲ. ಕನಿಷ್ಠ ಪಕ್ಷ ಅದು ಕಾನೂನು ಸಮ್ಮತವೂ ಆಗಿಲ್ಲ. ವಿಲಿಯಂ ಓ ಡಗ್ಲಾಸ್ ಅವರು ಹೇಳಿದಂತೆ `ಆಡಳಿತಾಂಗದ ಆತುರದ ನಿರ್ಧಾರವನ್ನು ಸಮಾಧಾನದಿಂದ ಮರು ವಿಮರ್ಶೆ ಮಾಡಲು ನ್ಯಾಯಾಂಗದ ಪರಾಮರ್ಶೆ ಅವಕಾಶ ಕೊಡುತ್ತದೆ.’ ”

ಸರ್ಕಾರಗಳು ರಾಜಕೀಯ ಒತ್ತಡಕ್ಕೆ ಮಣಿದು ಮಾಡುವ ಇಂಥ ಗಡಿಬಿಡಿಯ ಆದೇಶಗಳನ್ನು ನ್ಯಾಯದ ನಿಕಷಕ್ಕೆ ಒಡ್ಡುವ ಸಾಂವಿಧಾನಿಕ ಹೊಣೆಯನ್ನು ನ್ಯಾಯಾಲಯಗಳು ಹೊರುತ್ತವೆ ಎಂಬ ಎಚ್ಚರಿಕೆಯ ಕಿವಿ ಮಾತನ್ನೂ ಈ ತೀರ್ಪು ಸ್ಪಷ್ಟವಾಗಿ ಹೇಳುತ್ತದೆ. ಯಾವ ಸರ್ಕಾರಕ್ಕಾದರೂ ಈ ತೀರ್ಪು ಮೀರಿ ಆದೇಶ ಮಾಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿಯೇ ರಾಜ್ಯದ ಮೀಸಲಾತಿ ಹೋರಾಟಕ್ಕೆ ಮರಳುವುದಾದರೆ, ಪಂಚಮಸಾಲಿ ಸಮಾಜ ಕೇಳುತ್ತಿರುವ ಮೀಸಲಾತಿಯ ಬೇಡಿಕೆಯನ್ನು ಆಯೋಗದ ನಿಷ್ಕರ್ಷೆಗೆ ಕಳಿಸುವುದಾಗಿ ಸರ್ಕಾರ ಹೇಳಿದೆ.

‘ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಿರುವ’ ಒಂದು ಸಮುದಾಯ ಮೀಸಲಾತಿಯ ಮೆಟ್ಟಿಲಿನಲ್ಲಿ ಈಗ ಇರುವ ಮೇಲಿನ 3 ಬಿ ದಿಂದ ಕೆಳಗಿನ 2 ಎ ಗೆ ಹೋದರೆ ಏನಾಗುತ್ತದೆ? ಅದೇ ರೀತಿ ಮೇಲಿನ 2 ಎ ದಲ್ಲಿ ಇರುವ ಕುರುಬರು ಕೆಳಗಿನ ಪರಿಶಿಷ್ಟ ಪಂಗಡಕ್ಕೆ ಸೇರಿದರೆ ಏನಾಗುತ್ತದೆ? ಅತ್ಯಂತ ಸರಳವಾಗಿ ಹೇಳಬಹುದಾದರೆ, ಇದು ಅಸಮಾನ ಪೈಪೋಟಿಗೆ ಎಡೆ ಮಾಡಿಕೊಡುತ್ತದೆ. ಕರ್ನಾಟಕದ 2 ಎ ಪಟ್ಟಿಯಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ಸೇರಿವೆ. ಅಲ್ಲಿ ಮುಂದುವರಿದ ಪಂಚಮಸಾಲಿಗಳು ಬಂದರೆ ಎಲ್ಲ ಅವಕಾಶಗಳು ಪಂಚಮಸಾಲಿಗಳ ಪಾಲಾಗುತ್ತವೆ. ಈಗ ಆ ಪಟ್ಟಿಯಲ್ಲಿ ಇರುವ ನಿಜವಾಗಿಯೂ ಹಿಂದುಳಿದ ಸಮುದಾಯಗಳು ಇನ್ನೂ ಅವಕಾಶವಂಚಿತವಾಗಿಯೇ ಉಳಿಯುತ್ತವೆ. ಹಾಗೆ ನೋಡಿದರೆ ಹಿಂದುಳಿವ ವರ್ಗಗಳ ಪಟ್ಟಿಯಲ್ಲಿ ಇರುವ ಸಮುದಾಯಗಳ ಪ್ರಗತಿಯನ್ನು ಪ್ರತಿ ಹತು ವರ್ಷಕ್ಕೆ ಒಮ್ಮೆ ಪರಿಷ್ಕರಿಸಿ ಮೀಸಲಾತಿಯ ಲಾಭ ಪಡೆದ ಸಮುದಾಯಗಳನ್ನು ಹೊರಗೆ ಇರಿಸಬೇಕು ಎಂಬ ಪ್ರಮುಖ ಅಂಶವನ್ನು ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಮರೆತು ಬಿಟ್ಟಿದ್ದಾರೆ. ವಿಪರ್ಯಾಸ ಎಂದರೆ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಹೋಗುವ ಬದಲು ಅದರ ಒಳಗೆ ಬರಲು ಪ್ರಬಲ ಸಮುದಾಯಗಳಿಂದಲೇ ಪೈಪೋಟಿ ಶುರುವಾಗಿದೆ.

ಇದು ಬರೀ ಕರ್ನಾಟಕದ ಕಥೆಯಲ್ಲ. ದೇಶದ ಉದ್ದಗಲಕ್ಕೂ ಇಂಥ ಪ್ರಬಲ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸಿವೆ. ನೆರೆಯ ಮಹಾರಾಷ್ಟ್ರದಲ್ಲಿ ಮರಾಠರು ಅನೇಕ ದಿನಗಳ ಕಾಲ ಮೌನ ಪ್ರತಿಭಟನೆ ಮಾಡಿದರೆ ಗುಜರಾತಿನಲ್ಲಿ ಪಾಟೀದಾರ್ ಸಮುದಾಯ, ಉತ್ತರ ಪ್ರದೇಶದಲ್ಲಿ ರಜಪೂತರು, ಹರಿಯಾಣದಲ್ಲಿ ಜಾಟರು ಇದೇ ರೀತಿ ಉಗ್ರ ಹೋರಾಟ ಮಾಡಿದರು. ಇದು ಅವಕಾಶಗಳ ಬೆಟ್ಟದ ಚಿಕ್ಕ ತುದಿಯ ಮೇಲಿನ ಮೇಲೆ ಕುಳಿತುಕೊಳ್ಳಲು ನಡೆಸುತ್ತಿರುವ ಹೋರಾಟ. ಅಲ್ಲಿ ಜಾಗ ಇಲ್ಲ. ಆದರೆ, ಎಲ್ಲರಿಗೂ ಅಲ್ಲಿಯೇ ಕುಳಿತುಕೊಳ್ಳಬೇಕಾಗಿದೆ.

ಹಾಗೆಂದು ಎರಡು ಸಮುದಾಯಗಳನ್ನು ಒಂದೇ ಶ್ರೇಣಿಯಲ್ಲಿ ಇಟ್ಟರೆ ಎರಡೂ ಸಮುದಾಯಗಳಿಗೂ ಸಮಾನ ಸ್ಥಾನಮಾನ ಸಿಗುತ್ತದೆಯೇ? ಬಿಹಾರದಲ್ಲಿ ನಡೆದ ಒಂದು ಅಧ್ಯಯನ ಇದು ಎಂಥ ಹುಸಿ ಎಂಬುದನ್ನು ತೋರಿಸಿ ಕೊಟ್ಟಿದೆ. ಅಲ್ಲಿ ಧೋಬಿ ಮತ್ತು ಮುಷಹರ್ ಎಂಬ ಎರಡು ಸಮುದಾಯಗಳು ಪರಿಶಿಷ್ಟ ಜಾತಿಯಲ್ಲಿ ಸೇರಿವೆ. ಧೋಬಿಗಳಲ್ಲಿ ಶೇಕಡ 14 ರಷ್ಟು ಮಂದಿ ಹತ್ತು ವರ್ಷಗಳ ಕಾಲ ಸತತ ಶಿಕ್ಷಣ ಪಡೆದರೆ ಮುಷಹರ್ ಸಮುದಾಯದÀ ಶೇಕಡ ಒಂದರಷ್ಟು ಮಂದಿಗೆ ಮಾತ್ರ ಇದು ಸಾಧ್ಯವಾಗಿದೆ. ಇದನ್ನು ಇನ್ನೊಂದು ಅರ್ಥದಲ್ಲಿ ಹೇಳಬಹುದಾದರೆ, ನಾವು ಅಂದುಕೊಂಡಂತೆ, ಸಮಾಜದಲ್ಲಿ ಸಮಾನತೆ ತರಲು ಮೀಸಲಾತಿಗೆ ಸಾಧ್ಯವಾಗಿಲ್ಲ. ಮೀಸಲಾತಿಯ ಫಲಗಳು ಪ್ರಬಲರ ಪಾಲಾಗುವುದೇ ಹೆಚ್ಚು ಎಂಬುದಕ್ಕೆ ಕರ್ನಾಟಕವೂ ಹೊರತಲ್ಲ.

ಇದಕ್ಕೆ ಪೂರಕವಾಗಿಯೇ ಹೇಳುವುದಾದರೆ ಮೀಸಲಾತಿಗೆ ಹೋರಾಟ ಮಾಡುವವರು ಒಂದು ಸಂಗತಿಯನ್ನು ಮರೆಯುತ್ತಿರುವಂತೆ ಕಾಣುತ್ತಿದೆ. ಅವರಿಗೆ ಮೀಸಲಾತಿ ಬೇಕಿರುವುದು ಶಿಕ್ಷಣದಲ್ಲಿ ಸೀಟಿಗಾಗಿ ನಂತರ ನೌಕರಿಗಾಗಿ. ನೌಕರಿಗೆ ನೇಮಕಾತಿಯನ್ನು ಮಾಡುವುದು ಕರ್ನಾಟಕ ಲೋಕ ಸೇವಾ ಆಯೋಗ ಎಂಬ ಕುಲಗೆಟ್ಟ ಹಾಗೂ ಭ್ರಷ್ಟಾತಿಭ್ರಷ್ಟವಾದ ಸಂಸ್ಥೆ. ಈ ಆಯೋಗ ನೇಮಕ ಮಾಡುವ ಅತ್ಯುನ್ನತವಾದ ಸಹಾಯಕ ಕಮಿಷನರ್ ಆಗಲು ಎಷ್ಟು ಲಂಚ ಕೊಡಬೇಕು? ಕನಿಷ್ಠ ಎಂದರೂ ಒಂದು ಕೋಟಿ ರೂಪಾಯಿ. ಅಷ್ಟು ಹಣವನ್ನು ಕೊಡಲು ಎಷ್ಟು ಜನರಿಗೆ ಸಾಧ್ಯ? ಅಷ್ಟು ಹಣ ಕೊಡುವವರು ಬಡವರೇ ಹಾಗೂ ಆ ಸಮುದಾಯದಲ್ಲಿ ಮೀಸಲಾತಿಗೆ ಅರ್ಹರೇ? ಈ ಆಯೋಗ ಎಷ್ಟು ಅದಕ್ಷವಾಗಿದೆ ಎಂದರೆ ಅದಕ್ಕೆ ಪ್ರಥಮ ದರ್ಜೆ ಸಹಾಯಕರಂಥ ತೀರಾ ಕೆಳಹಂತದ ಹುದ್ದೆಗಳಿಗೂ ನೆಟ್ಟಗೆ ನೇಮಕಾತಿ ಮಾಡಲು ಆಗುತ್ತಿಲ್ಲ. ಆ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಈಚೆಗೆ ಲಕ್ಷಗಟ್ಟಲೆ ಮೊತ್ತಕ್ಕೆ ಮಾರಾಟವಾಗಿವೆ. ಕೆ.ಪಿ.ಎಸ್.ಸಿಯ ಈಗಿನ ಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳು ಹೊಣೆಯಾಗಿರುವುದು ನಮ್ಮ ಯುವಪೀಳಿಗೆಯ ಕರಾಳ ಭವಿಷ್ಯದ ದುರಂತ ಕಥನದಂತೆ ಕಾಣಿಸುತ್ತದೆ. ಇನ್ನೂ ದುರಂತ ಎಂದರೆ ಸರ್ಕಾರದಲ್ಲಿ ಎರಡು ಲಕ್ಷ ಹುದ್ದೆಗಳು ಖಾಲಿ ಇವೆ. ನಮ್ಮ ಮಠಾಧೀಶರು ಯಾವ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ, ಹಾರಾಡುತ್ತಿದ್ದಾರೆ?

ಹಾಗಾದರೆ ಈ ಹೋರಾಟಗಳ ಉದ್ದೇಶ ಏನು? ಅವು ಅವಕಾಶಗಳನ್ನು ನಿರ್ಮಿಸುತ್ತವೆಯೇ? ನಾಶ ಮಾಡುತ್ತವೆಯೇ? ಒಂದು ಸಮುದಾಯವನ್ನು ಒಗ್ಗೂಡಿಸುವ ಮೀಸಲಾತಿ ಚಳವಳಿ ತನ್ನದೇ ಸಮುದಾಯದ ಒಳಪಂಗಡಗಳ ಮೇಲೆ ಮಾಡುವ ಪರಿಣಾಮ ಎಂಥದು? ಬಲಿಷ್ಠವಾದ, ಕರ್ನಾಟಕದ ರಾಜಕೀಯವನ್ನು ಅನೇಕ ವರ್ಷ ಆಳಿದ ಲಿಂಗಾಯತ ಸಮುದಾಯವನ್ನು ಒಳಗಿಂದ ಒಳಗೇ ಗೆದ್ದಲು ಹಿಡಿಸಿ ದುರ್ಬಲಗೊಳಿಸುವ ಹುನ್ನಾರ ಪಂಚಮಸಾಲಿ ಚಳವಳಿಯ ಹಿಂದೆ ಇದೆಯೇ? ಇದು ಲಿಂಗಾಯತರನ್ನು ದುರ್ಬಲಗೊಳಿಸುವ ಹುನ್ನಾರವೇ ಅಥವಾ ಲಿಂಗಾಯತರ ಪ್ರಶ್ನಾತೀತ ನಾಯಕ ಎಂದೆನಿಸಿರುವ ಯಡಿಯೂರಪ್ಪ ಅವರನ್ನು ‘ಅಳತೆಗೆ ಇಳಿಸುವ’ ಹತ್ಯಾರವೇ?

 ಹಾಗಾದರೆ ಅದರ ಹಿಂದೆ ಯಾರಿದ್ದಾರೆ? ಉತ್ತರಕ್ಕೆ ಬಹಳ ತಡಕಾಡಬೇಕಿಲ್ಲ!

Leave a Reply

Your email address will not be published.