ಕರ್ನಾಟಕ ಆಯವ್ಯಯ ಜನಪರ-ಜನಪ್ರಿಯ ಮಿಶ್ರಣ

ಒಟ್ಟಾರೆಯಾಗಿ ಕೆಲವು ಪ್ರಸ್ತಾವನೆಗಳನ್ನು ಹೊರುತುಪಡಿಸಿದರೆ, good economics is good politics too ಎಂಬಂತೆ ಜನಪರ ಹಾಗೂ ಜನಪ್ರಿಯ ಅಂಶಗಳಿಂದ ಹದವಾಗಿ ಮಿಶ್ರಿತವಾದ ಆಯವ್ಯಯ ಇದಾಗಿದೆ.

ಕುಮಾರಸ್ವಾಮಿ ಅವರು ಮಂಡಿಸಿದ ಸಮ್ಮಿಶ್ರ ಸರ್ಕಾರದ ಎರಡನೇ ಆಯವ್ಯಯವು ಜನಪರ ಹಾಗೂ ಜನಪ್ರಿಯ ಅಂಶಗಳ ಹದವಾದ ಮಿಶ್ರಣವಾಗಿದೆ. ರಾಜಕೀಯ ಲೇಕ್ಕಚಾರದ ಜೊತೆಗೆ ಅಭಿವೃದ್ಧಿಯ ಗುರಿ ಹೊಂದಿರುವ 2,34,153 ಕೋಟಿ ರೂಪಾಯಿಯ ಆಯವ್ಯಯವು, ಕೃಷಿ, ಶಿಕ್ಷಣ, ಆರೋಗ್ಯ, ಇಂಧನ, ಗ್ರಾಮೀಣಾಭಿವೃದ್ಧಿ, ನಗರ ಅಭಿವೃದ್ಧಿ, ಜಲಸಂಪನ್ಮೂಲ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟಿರುವುದು ಆಯವ್ಯಯದ ಪ್ರಮುಖ ಸಾಧನವಾಗಿದೆ. ಆಯವ್ಯಯವನ್ನು ಪರಿಶೀಲಿಸುವ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ನೋಡೋಣ.

ಆರ್ಥಿಕ ಆರೋಗ್ಯದ ಸ್ಥಿತಿ

ರಾಜ್ಯದ ಆದಾಯ 2018-19ನೇ ಸಾಲಿನ ಮುನ್ಸೂಚನಾ ಅಂದಾಜುಗಳಂತೆ, 2011-12ರ ಸ್ಥಿರ ಬೆಲೆಗಳಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಶೇ.9.6 ಬೆಳವಣಿಗೆಯೊಂದಿಗೆ 10,82,534 ಕೋಟಿ ರೂಪಾಯಿಗಳಷ್ಟು ಆಗುವ ನಿರೀಕ್ಷೆ ಇದೆ. ಇದು ರಾಷ್ಟ್ರೀಯ ಆಂತರಿಕ ಉತ್ಪನ್ನದ ಬೆಳವಣಿಗೆಯ ಶೇ.7.2ಗಿಂತ ಉತ್ತಮವಾಗಿದೆ. ರಾಜ್ಯದಲ್ಲಿ 2018-19ನೇ ಸಾಲಿನ ಮುಂಗಾರು ಋತುವಿನಲ್ಲಿ 100 ತಾಲ್ಲೂಕುಗಳು ಹಾಗೂ ಹಿಂಗಾರು ಋತುವಿನಲ್ಲಿ 156 ತಾಲ್ಲೂಕುಗಳು ಬರಪೀಡಿತ ಪ್ರದೇಶವಾಗಿದ್ದರಿಂದ ಕೃಷಿ ವಲಯದ ಬೆಳವಣಿಗೆ 2018-19ರ ಸಾಲಿನಲ್ಲಿ ನಕಾರತ್ಮಕವಾದ ಬೆಳವಣಿಗೆ ಅಂದರೆ ಶೇ. -4.8ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಆಹಾರ ಧಾನ್ಯಗಳ ಉತ್ಪಾದನೆಯು 144 ಲಕ್ಷ ಟನ್ ಗಳಿಂದ 100 ಲಕ್ಷ ಟನ್ ಗಳಿಗೆ ಇಳಿಕೆಯಾಗಬಹುದು. 2018-19ನೇ ಸಾಲಿನಲ್ಲಿ ಕೈಗಾರಿಕಾ ಕ್ಷೇತ್ರದ ಶೇ.7.4 ಹಾಗೂ ಸೇವಾ ವಲಯದ ಶೇ.12.3 ಬೆಳವಣಿಗೆಯಿಂದ ಒಟ್ಟು ರಾಜ್ಯದ ಆಂತರಿಕ ಉತ್ಪನ್ನವು ಉತ್ತಮಗೊಂಡಿದ್ದರೂ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡುವ ಆಗತ್ಯವನ್ನು ತೋರಿಸುತ್ತದೆ.

ರಾಜಸ್ವ ಸ್ವೀಕೃತಿಯಲ್ಲಿ ರಾಜ್ಯ ತೆರಿಗೆ ಆದಾಯ ಅನುಪಾತವು ಕರ್ನಾಟಕವನ್ನು ಉತ್ತಮ ಸ್ಥಾನದಲ್ಲಿ ಇರಿಸಿದ್ದರೂ, ಒಟ್ಟು ರಾಜಸ್ವ ಜಮೆಯಲ್ಲಿ ಆಗುತ್ತಿರುವ ಹೆಚ್ಚಳಕ್ಕಿಂತ ಅಭಿವೃದ್ಧಿ ಮೇಲಿನ ವೆಚ್ಚವು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತದೆ.

ಕರ್ನಾಟಕದ ಆರ್ಥಿಕ ಸ್ಥಿತಿಯು ಉತ್ತಮವಾಗಿ ಮುಂದುವರೆದಿದೆ. ಇದಲ್ಲದೇ ವಿತ್ತೀಯ ಹೊಣೆಗಾರಿಕಾ ನಿಯಮಗಳ ಮಾನದಂಡಗಳಾದ ವಿತ್ತೀಯ ಕೊರತೆ, ಸಾಲದ ಮಿತಿ ನಿಯಮಗಳ ವ್ಯಾಪ್ತಿಯೊಳಗಿರುವುದು ಉತ್ತಮ ಅಂಶಗಾಳಾಗಿವೆ.

ರಾಜಸ್ವ ಸ್ವೀಕೃತಿಯಲ್ಲಿ ರಾಜ್ಯ ತೆರಿಗೆ ಆದಾಯ ಅನುಪಾತವು ಕರ್ನಾಟಕವನ್ನು ಉತ್ತಮ ಸ್ಥಾನದಲ್ಲಿ ಇರಿಸಿದ್ದರೂ, ಒಟ್ಟು ರಾಜಸ್ವ ಜಮೆಯಲ್ಲಿ ಆಗುತ್ತಿರುವ ಹೆಚ್ಚಳಕ್ಕಿಂತ ಅಭಿವೃದ್ಧಿ ಮೇಲಿನ ವೆಚ್ಚವು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತದೆ. 2018-19ರ ಆಭಿವೃದ್ಧಿ ವೆಚ್ಚವನ್ನು 2017-18ಕ್ಕೆ ಹೋಲಿಸಿದರೆ(ಆಯವ್ಯಯದ ಅಂದಾಜಿನಂತೆ) ಅದು ಶೇ.12.62ರಷ್ಟು ಏರಿಕೆಯಾಗಿದೆ. ಇದನ್ನು ತಲಾವಾರು ಅಭಿವೃದ್ಧಿ ವೆಚ್ಚದಲ್ಲಿ ನೋಡಿದಾಗ 2017-18ರಲ್ಲಿ ರಾಜ್ಯವು ರೂ.19820 ಅಭಿವೃದ್ಧಿ ವೆಚ್ಚ ಮಾಡಿದರೆ, ರಾಷ್ಟ್ರದ ಎಲ್ಲಾ ರಾಜ್ಯದ ಸರಾಸರಿ ಅಭಿವೃದ್ಧಿ ವೆಚ್ಚವು ಕೇವಲ ರೂ.15502 ಆಗಿದೆ. ರಾಜ್ಯವು ಈಗಾಗಲೇ ತನ್ನ ಸ್ವಂತ ಸಂಪನ್ಮೂಲಗಳ ಶೇ.81ನ್ನು ಅಭಿವೃದ್ಧಿ ವೆಚ್ಚಕ್ಕಾಗಿ ವಿನಿಯೋಗಿಸುತ್ತಿರುವುದು ಹೊಸ ಯೋಜನೆಗಳಿಗಿರುವ ಸೀಮಿತ ಮಿತಿಯನ್ನು ತೋರಿಸುತ್ತದೆ. ಇದು ಹೊಸ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದರ ಜೊತೆಗೆ ಪ್ರಸ್ತುತ ವಿವೇಚನಾ ವೆಚ್ಚವನ್ನು ಮಾಡುವುದು ಅನಿವಾರ್ಯವಾಗಿದೆ ಎಂಬುದನ್ನು ತೋರಿಸುತ್ತಿದೆ (ಆರ್ಥಿಕ ಸಮೀಕ್ಷೆ, 2018-19).

ಇದಲ್ಲದೆ 2018-19ರ ವೇಳೆಗೆ ಕರ್ನಾಟಕದ ಒಟ್ಟು ಸಾಲವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ(ಉSಆP) ಶೇಕಡಾ 19.64ರಷ್ಟು ತಲುಪಿರುವುದರಿಂದ ಇನ್ನು ಹೆಚ್ಚಿನ ಸಾಲವನ್ನು ಎಚ್ಚರಿಕೆಯಿಂದ (ಗರಿಷ್ಟ ಮಿತಿ ಶೇ.25) ಆಶ್ರಯಿಸಬೇಕು. ಚಾಲ್ತಿಯಲ್ಲಿರುವ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣವನ್ನು ಮುಂದುವರೆಸುವುದಲ್ಲದೇ, ರೈತರ ಸಾಲ ಮನ್ನಾಕ್ಕೆ ಹಣವನ್ನು ಒದಗಿಸಿ ಹೊಸ ಕಾರ್ಯಕ್ರಮಗಳನ್ನು ಘೋಷಿಸಿ ಅದಕ್ಕೆ ಹಣ ಒದಗಿಸುವುದು ದೊಡ್ಡ ಸವಾಲಾಗಿತ್ತು. ಈ ಸವಾಲಿನಲ್ಲಿ ಕುಮಾರಸ್ವಾಮಿಯವರು ಭಾಗಶಃ ಯಶಸ್ವಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಕೃಷಿಕರ ಆಭಿವೃದ್ಧಿ

ಒಂದು ವೇಳೆ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಬರ ಕಾಡದೇ ಇದ್ದಿದ್ದರೆ ರಾಜ್ಯದ ಬೆಳವಣಿಗೆಯ ದರ ಶೇ.9.6ಕ್ಕೆ ಬದಲಾಗಿ ಶೇ.10.4ರಷ್ಟು ಇರುತ್ತಿತ್ತು. ರೈತರು ಸಂಕಷ್ಟದಲ್ಲಿ ಸಿಲುಕಲು ಕೃಷಿ ಮೂಲಭೂತ ಸೌಕಾರ್ಯಗಳ ಕೊರತೆ ಪ್ರಮುಖ ಕಾರಣವಾಗಿದೆ. ರೈತನಿಗೆ ಕಾಲಕ್ಕೆ ಸರಿಯಾಗಿ ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ವರದಿ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ನೀರು, ವಿದ್ಯುತ್, ಸಾಲಸೌಲಭ್ಯ, ಯಾಂತ್ರೀಕರಣ ಸೌಲಭ್ಯ, ಬೆಳೆದ ಬೆಳೆಗೆ ಸರಿಯಾದ ಬೆಲೆ; ಅತಿವೃಷ್ಟಿ ಅನಾವೃಷ್ಟಿ ಇಲ್ಲವೇ ಇತರ ಅನಿವಾರ್ಯ ಸ್ಥಿತಿಗಳಲ್ಲಿ ರೈತರ ಬೆನ್ನಿಗೆ ನಿಲುವಂತಹ ಸ್ವಯಂಚಾಲಿತ ವ್ಯವಸ್ಥೆ ನಿರ್ಮಾಣ ಮಾಡಿಬಿಟ್ಟರೆ ಬಹುತೇಕ ಕೃಷಿ ಬಿಕ್ಕಟ್ಟು ಪರಿಹರಿಸಬಹುದು. ಅದರೆ ಇದು ಹೇಳಿದಷ್ಟು ಸರಳವಲ್ಲ, ಹಾಗೆಂದ ಮಾತ್ರಕ್ಕೆ ಮಾಡಲು ಅಸಾಧ್ಯವೇನಲ್ಲ. ಸರ್ಕಾರ, ಅಧಿಕಾರಶಾಹಿ, ಹಾಗೂ ಸಮಾಜದ ಇಚ್ಛಾಶಕ್ತಿ ಇದ್ದರೆ ಅದನ್ನು ಸಾಧಿಸಬಹುದು.

ಈ ಆಯವ್ಯಯದಲ್ಲಿ ಈ ನಿಟ್ಟಿನಲ್ಲಿ ಸಣ್ಣ ಮಟ್ಟದಲ್ಲಾದರೂ ದೊಡ್ಡದೊಂದು ಪ್ರಯತ್ನವನ್ನ ಮಾಡಲಾಗಿದೆ. ಕೃಷಿ ಮತ್ತು ಅದರ ಸಂಬಂಧಿತ ಚಟುವಟಿಕೆಗಳಿಗೆ ಈ ಆಯವ್ಯಯದಲ್ಲಿ ರೂ.46,853 ಕೋಟಿಯನ್ನು (ಶೇ.25) ಮೀಸಲಿಟ್ಟಿರುವುದು ಸರಿಯಾದ ಕ್ರಮವಾಗಿದೆ.

ಇತರೆಡೆ ಯಶಸ್ವಿ ಪ್ರಯೋಗಗಳಾದ ಶೂನ್ಯ ಬಂಡವಾಳ ಕೃಷಿ, ಇಸ್ರೇಲ್ ಮಾದರಿ ಕೃಷಿ, ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲು ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಹೆಕ್ಟೇರ್‍ಗೆ ರೂ.7500 ಪ್ರೋತ್ಸಾಹಧನ, ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ಉನ್ನತೀಕರಣ ಹಾಗೂ ರಾಜ್ಯ ಬೀಜ ನಿಗಮದ ಅಭಿವೃದ್ಧಿ ಕಾರ್ಯಕ್ರಮಗಳು ಗಮನಾರ್ಹ. ರಾಜ್ಯದ ಅತಿ ಹೆಚ್ಚು ಬರಪೀಡಿತ ಹಾಗೂ ಅಂರ್ತಜಲ ಮಟ್ಟ ಕುಸಿದಿರುವ 100 ತಾಲ್ಲೂಕುಗಳಲ್ಲಿ 2024ರವರೆಗೆ ಬರನಿರೋಧಕ ಜಲಾನಯನ ಚಟುವಟಿಕೆ ಕೈಗೊಳ್ಳಲು ಹಾಕಿಕೊಂಡಿರುವ ಕಾರ್ಯಕ್ರಮಗಳು ದೂರದೃಷ್ಟಿಯ ಯೋಜನೆಗಳು.

ಮುಂದಿನ ಆಯವ್ಯಯಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಬೆಳೆಯುವ ಒಂದು ಇಲ್ಲವೇ ಎರಡು ವಿಶಿಷ್ಟ ತೋಟಗಾರಿಕೆ ಬೆಳೆಗಳಿಗೆ ಆಯಾ ಜಿಲ್ಲೆಗಳಲ್ಲಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದರೆ ರೈತರ ಮೊಗದಲ್ಲಿ ಕಣ್ಣೀರ ಬದಲಾಗಿ ನಗು ಕಾಣಬಹುದು.

ಇದರ ಜೊತೆಗೆ ರಾಮನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಅಂತರರಾಷ್ಟ್ರಿಯ ಗುಣಮಟ್ಟದ ಮಾವು ಸಂಸ್ಕರಣ ಘಟಕ ಹಾಗೂ ಕೋಲಾರದಲ್ಲಿ ಟೋಮೆಟೋ ಉತ್ಪನ್ನಗಳ ಸಂಸ್ಕರಣ ಘಟಕ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಮುಂದಿನ ಆಯವ್ಯಯಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಬೆಳೆಯುವ ಒಂದು ಇಲ್ಲವೇ ಎರಡು ವಿಶಿಷ್ಟ ತೋಟಗಾರಿಕೆ ಬೆಳೆಗಳಿಗೆ ಆಯಾ ಜಿಲ್ಲೆಗಳಲ್ಲಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದರೆ ರೈತರ ಮೊಗದಲ್ಲಿ ಕಣ್ಣೀರ ಬದಲಾಗಿ ನಗು ಕಾಣಬಹುದು.

ದೇಶೀಯ ಕುರಿ ತಳಿಗಳ ಸಂತಾನೋತ್ಪತ್ತಿ ಅಭಿವೃದ್ಧಿ ಯೋಜನೆ, ನಾಟಿಕೋಳಿ ಸಾಕಾಣಿಕೆ ಹಾಗೂ ಜೇನು ಸಾಕಾಣಿಕೆಗೆ ಪ್ರೋತ್ಸಾಹ ಅನುದಾನ, ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ಅನುಕೂಲವಾಗುವುದಲ್ಲದೆ ಗ್ರಾಮೀಣ ಜೀವನ ಮಟ್ಟವು ಸುಧಾರಿಸುವುದು.

ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಒದಗಿಸಲು ಹಲವು ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ಘೋಷಿಸಲಾಗಿದ್ದು ಅವುಗಳಲ್ಲಿ ರೈತ ಕಣಜ, ಬೆಲೆ ಕೊರತೆ ಪಾವತಿ ಯೋಜನೆ, ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆ, ರಾಜ್ಯದ ಎಲ್ಲಾ 162 ಕೃಷಿ ಉತ್ಪನ್ನ ಮಾರುಕಟ್ಟೆ ಸ್ಮಾರ್ಟ್ ವೇಯಿಂಗ್ ಮಷಿನ್ ಪದ್ಧತಿಯ ಅಳವಡಿಕೆ, ರಾಜ್ಯದಲ್ಲಿ ಮುಂದಿನ 5 ವರ್ಷದಲ್ಲಿ ತಲಾ 1 ಕೋಟಿ ರೂ. ವೆಚ್ಚದಲ್ಲಿ 600 ಗ್ರಾಮೀಣ ಸಂತೆಗಳಿಗೆ ಮೂಲಸೌಲಭ್ಯ ಒದಗಿಸಿ, ಕಿರು ಮಾರುಕಟ್ಟೆಗಳಾಗಿ ಅಭಿವೃದ್ಧಿ ಮಾಡಿ ರೈತರಿಗೆ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸುವ ಯೋಜನೆಗಳು ಪ್ರಮುಖವಾದವು.

ಸಾಲ ಸೌಲಭ್ಯ

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುವ ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ, ಸಾಲ ಪರಿಹಾರ ಆಯೋಗದ ಸ್ಥಾಪನೆಯ ಪರಿಶೀಲನೆ ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿದಲ್ಲಿ ರೈತರಿಗೆ ಉಚಿತವಾಗಿ ಗರಿಷ್ಠ 8 ತಿಂಗಳ ವೈಜ್ಞಾನಿಕ ಸಂಗ್ರಹಣೆ ಸೌಲಭ್ಯ, ಅಡಮಾನ ಸಾಲದ ಮೇಲೆ ಭಾಗಶಃ ಬಡ್ಡಿ ಸಹಾಯಧನ ಹಾಗೂ ಕನಿಷ್ಠ ಸಾಗಾಣಿಕೆ ವೆಚ್ಚ ಒದಗಿಸಲು 200 ಕೋಟಿ ರೂ. ಅನುದಾನವನ್ನು ಒದಗಿಸಿರುವುದು ಉತ್ತಮ ಯೋಜನೆಗಳಾಗಿವೆ.

ಸಾಲ ಮನ್ನ

ಕುಮಾರಸ್ವಾಮಿಯವರು ರೈತರ 44,000 ಕೋಟಿ ರೂಪಾಯಿ ಸಾಲ ಮನ್ನಾವನ್ನು ಹಂತಹಂತವಾಗಿ ಮಾಡುವುದಾಗಿ ಘೋಷಿಸಿದ್ದರು. ಅವರು ಮೊದಲ ಆಯವ್ಯಯದಲ್ಲಿ ಅದಕ್ಕಾಗಿ 6150 ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಪ್ರಸ್ತುತ ಆಯವ್ಯಯದಲ್ಲಿ 12500 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಆರ್ಥಿಕತೆ ದೃಷ್ಟಿಯಿಂದ ಉತ್ತಮ ನಡೆ. ಒಂದು ವೇಳೆ ಅವರು ಉಳಿದ ಎಲ್ಲಾ ಸಾಲವನ್ನು ಒಮ್ಮೆಲೇ ಮನ್ನಾ ಮಾಡಿದ್ದರೆ ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣದ ಕೊರತೆ ಕಾಡುತ್ತಿತ್ತು.

 

ಶಿಕ್ಷಣ

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಒಂದು ಲಕ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 10 ದಿನಗಳ ತರಬೇತಿ, 1000 ಪಬ್ಲಿಕ್ ಶಾಲೆ ಸ್ಥಾಪನೆ, ಪ್ರತಿ ಜಿಲ್ಲೆಯಲ್ಲಿ 20 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿಶ್ವವಿದ್ಯಾನಿಲಯ ಹಾಗೂ ಕೈಗಾರಿಕೆಗಳ ನಡುವೆ ಸಹಭಾಗಿತ್ವದಲ್ಲಿ ಪಾಠ್ಯಕ್ರಮ, ಕಾಲೇಜು ಅಧ್ಯಾಪಕರ ತರಬೇತಿಗೆ ಒತ್ತು, ಬೆಂಗಳೂರಿನ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ‘ಹೊಸ ಪೀಳಿಗೆ ಉನ್ನತ ಶಿಕ್ಷಣ’ ಕಾರ್ಯಕ್ರಮದ ಮೂಲಕ ಉನ್ನತ ಶಿಕ್ಷಣದಲ್ಲಿ ಹೊಸ ಕಲಿಕೆಯ ವಿಧಾನಗಳ ಅಳವಡಿಕೆಗಾಗಿ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ರಚನೆ, ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಆಧಾರಿತ ಡಿಜಿಟಲ್ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳನ್ನು ಆನ್‍ಲೈನ್ ಮೂಲಕ ವಿತರಣೆ ಹಾಗೂ ದೃಢೀಕರಣ ವಿಧಾನ ಜಾರಿಗೆ ಅನುದಾನ ಬಿಡುಗಡೆ ಮಾಡಿರುವುದು ಮುಂದಿನ ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ತಳಹದಿಯನ್ನು ಹಾಕುತ್ತದೆ.

ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ, ಕಾರ್ಪೊರೆಷನ್‍ಗಳಿದ್ದಾಗ್ಯೂ ಉತ್ತಮ ಅನುದಾನದ ಹೊಳೆ ಹರಿದರೂ ಬೆಂಗಳೂರು ಮೂಲಭೂತ ಸೌಕರ್ಯದ ಕೊರತೆಯಿಂದ ನರಳುತ್ತಿದೆ.

ಬೆಂಗಳೂರಿನ ಅಭಿವೃದ್ಧಿ

ಬೆಂಗಳೂರು ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.45 ಕೊಡುಗೆ ನೀಡುತ್ತಿದೆ. ಗ್ರಾಮೀಣ ಪ್ರದೇಶವನ್ನು ಕಡೆಗಣಿಸದೆ ಬೆಂಗಳೂರಿನ ಮೂಲಭೂತ ಸೌರ್ಕಾಯದ ಅಭಿವೃದ್ಧಿಗಾಗಿ 1 ಲಕ್ಷದ 50 ಸಾವಿರ ಕೋಟಿ ಅನುದಾನ ಘೋಷಿಸಿದ್ದು ಸರಿಯಾದ ಕ್ರಮವಾಗಿದೆ. ಅದರಲ್ಲೂ ಪ್ರಮುಖವಾಗಿ ನೀರು ಸಂಸ್ಕರಣೆ ಮತ್ತು ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆ, ಪಾದಚಾರಿ ಮಾರ್ಗ ಅಭಿವೃದ್ಧಿ, ಆಟೋ ಟ್ಯಾಕ್ಸಿ ಚಾಲಕರಿಗೆ ಗುಂಪು ವಿಮೆ, ಅಂಡರ್ ಪಾಸ್‍ಗಳು, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕಾರ್ಯಗಳು ಶ್ಲಾಘನೀಯ. ಆದರೆ ಬೆಂಗಳೂರಿನ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ, ಕಾರ್ಪೊರೆಷನ್‍ಗಳಿದ್ದಾಗ್ಯೂ ಉತ್ತಮ ಅನುದಾನದ ಹೊಳೆ ಹರಿದರೂ ಬೆಂಗಳೂರು ಮೂಲಭೂತ ಸೌಕರ್ಯದ ಕೊರತೆಯಿಂದ ನರಳುತ್ತಿದೆ. ಈ ಆಯವ್ಯಯದ ಯೋಜನೆಗಳಾದರೂ ಸಮರ್ಥವಾಗಿ ಜಾರಿಯಾಗಲಿ ಎಂಬುದು ಆಶಯ.

ಒಳಗೊಳ್ಳುವ ಸದುದ್ದೇಶ

ಮೊದಲು ಆಯವ್ಯಯದಲ್ಲಿ ಕೇವಲ ಕೆಲವೇ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು. ಈ ಬಾರಿ ಬಹುತೇಕ ಎಲ್ಲಾ ಜಿಲ್ಲೆಗಳಿಗೂ, ಎಲ್ಲಾ ವಲಯಗಳಿಗೂ ಅನುದಾನ ನೀಡಿರುವುದು ಸ್ವಾಗತಾರ್ಹ. ಆದರೆ ಕೆಲವು ಜಿಲ್ಲೆಗಳಿಗೆ ಕೊಟ್ಟಿರುವ ಅನುದಾನ ಹೆಸರಿಗೆ ಮಾತ್ರ ಎಂಬಂತಿದೆ. ಇರುವ ಅಭಿವೃದ್ಧಿ ವೆಚ್ಚದಲ್ಲಿ ಎಲ್ಲಾ ಜಿಲ್ಲೆಗಳಿಗೆ ಸಮಾನವಾಗಿ ಅನುದಾನ ಕೊಡುವುದು ಕಷ್ಟಸಾದ್ಯವಾದರೂ, ಹಿಂದುಳಿದ ಜಿಲ್ಲೆಗಳಾದ ಯಾದಗಿರಿ, ಚಾಮರಾಜನಗರ ಮತ್ತು ಗದಗ ಜಿಲ್ಲೆಗಳ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನ ಸಿಗಬೇಕಿತ್ತು.

ವಿಟಿಯು ವಿಂಗಡಣೆ

ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಮರುವಿಂಗಡಣೆ ಮಾಡಿ, ಹಾಸನದಲ್ಲಿ ಒಂದು ಹೊಸ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾಪ ಸರಿಯಾದ ಕ್ರಮವಲ್ಲ. ತಾಂತ್ರಿಕ ಕಾಲೇಜುಗಳನ್ನು ಒಂದು ವಿಶ್ವವಿದ್ಯಾಲಯದ ಅಡಿಯಲ್ಲಿ ತಂದು, ವಿಶ್ವ ದರ್ಜೆಯ ಗುಣಮಟ್ಟದ ಶಿಕ್ಷಣ ನೀಡಲು ಆರಂಭಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಶಯಕ್ಕೆ ಇದು ಮಾರಕವಾಗಿದೆ.

ರೈಲು ಮಾರ್ಗ

ತುಮಕೂರು-ಸಿರಾ-ಚಿತ್ರದುರ್ಗ-ದಾವಣಗೆರೆ ಮಾರ್ಗವಾಗಿ ರೈಲು ಮಾರ್ಗಕ್ಕೆ ಏಳು ಬಾರಿ ಈಗಾಗಲೇ ಸರ್ವೆಯಾಗಿ, ಪ್ರಸ್ತುತ ಕೇಂದ್ರ ಆಯವ್ಯಯದಲ್ಲಿ ಇದರ ಆರಂಭಕ್ಕೆ ಹಣ ಒದಗಿಸಲಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಈ ರೈಲು ಮಾರ್ಗಕ್ಕೆ ಒದಗಿಸದೇ ಇರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಪೂರಕ ಆಯವ್ಯಯದಲ್ಲಿ ಇದಕ್ಕೆ ಅನುದಾನವನ್ನು ಒದಗಿಸಬೇಕು.

*ಲೇಖಕರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಆಯವ್ಯಯ ವಿಶ್ಲೇಷಣೆಯಲ್ಲಿ ಪರಿಣತರು, ಸುದ್ದಿವಾಹಿನಿಗಳ ಆರ್ಥಿಕ ವಿಷಯಗಳ ಚರ್ಚೆಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

 

ಆಯವ್ಯಯದ ಅವಗುಣಗಳು

ಮಠಮಾನ್ಯಗಳಿಗೆ, ಧರ್ಮ ಆಧಾರಿತ ಅನುದಾನ, ಜಾತಿಗೊಂದು ಪ್ರಭಾವಿ ಮಠಗಳನ್ನು ಗುರ್ತಿಸಿ, ಅವು ಪ್ರಭಾವಿಸಬಹುದಾದ ಜನಸಂಖ್ಯೆಗೆ ಅನುಗುಣವಾಗಿ ಅವುಗಳಿಗೆ ಕೋಟಿಗಳ ಅನುದಾನವನ್ನು ಕೊಟ್ಟಿದ್ದು ಸರಿಯಾದ ಕ್ರಮವಲ್ಲ. ಅದರ ಬದಲಾಗಿ ಆ ಹಣವನ್ನು ಯಾವುದೇ ಗ್ರೇಡೇಷನ್ ಇಲ್ಲದೇ ಏಕರೂಪವಾಗಿ ಹಣ ಬಿಡುಗಡೆ ಮಾಡಿ ಮಠಗಳಿಗೆ ಸಂಪರ್ಕ ಕಲ್ಪಸುವ ರಸ್ತೆಗಳನ್ನು ಉತ್ತಮಗೊಳಿಸಿ, ಆ ಊರಿನ ಬಸ್ ನಿಲ್ದಾಣವನ್ನು ಉನ್ನತೀಕರಿಸಿ, ಇನ್ನಷ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಿದ್ದರೆ ಆ ಊರುಗಳಿಗೆ ಬರುವ ಪ್ರವಾಸಿಗರು/ಭಕ್ತಾದಿಗಳ ಸಂಖ್ಯೆ ಅಧಿಕಗೊಂಡು ಅದು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ದಾರಿ ಮಾಡಿಕೊಡುತ್ತಿತ್ತು; ಸುತ್ತ-ಮುತ್ತಲಿನ ಹಳ್ಳಿಗರ ಜೀವನಮಟ್ಟ ಹೆಚ್ಚಾಗುತ್ತಿತ್ತು. ಹಿಂದಿನ ಸರ್ಕಾರವೂ ಹೀಗೆಯೇ ಹಣ ಕೊಟ್ಟಿತ್ತು. 2008-09ರಿಂದ 2011-12ರವರೆಗಿನ ಆಯವ್ಯಯದಲ್ಲಿ ಮಠಗಳಿಗೆ 500 ಕೋಟಿ ರೂಪಾಯಿ ಅನುದಾನ ನಿಡಲಾಗಿದೆ. ಹಾಗೆಯೇ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೊರತಾಗಿ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಕೊಟ್ಟಿರುವ ಕೋಟ್ಯಂತರ ರೂಪಾಯಿ ಸರಿಯಾದ ಕ್ರಮವಲ್ಲ.

 

Leave a Reply

Your email address will not be published.