ಕರ್ನಾಟಕ ಎಂದರೆ… ಆ ಮೂರು ಜಿಲ್ಲೆಗಳೇ?

ರಾಜ್ಯದಲ್ಲಿ ನಡೆಯುತ್ತಿರುವ ನೇಮಕಾತಿಗಳಲ್ಲಿ ಕೆಲವೊಂದು ಇಲಾಖೆಗಳು 371ಜೆ ಮೀಸಲಾತಿ ಕೈಬಿಟ್ಟು ಮುಂದುವರೆಯುತ್ತಿರುದರಿಂದ ಈ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡುತ್ತಿದೆ.

ಈಗಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ರಾಜ್ಯದ ಎಲ್ಲ ನಾಲ್ಕು ವಿಭಾಗಗಳಿಗೆ ಏಕಮುಖವಾದ ಅಭಿವೃದ್ಧಿ ಯೋಜನೆ ಜಾರಿ ಮಾಡುವ ಕುರಿತು ಸಾಕಷ್ಟು ಅನುಮಾನಗಳು ಕೇಳಿಬಂದಿವೆ ಮತ್ತು ಸರಕಾರ ಅದೇ ರೀತಿ ನಡೆದುಕೊಂಡು ಬಂದಿದೆ. ಕಳೆದ ಒಂದು ವರ್ಷದಲ್ಲಿ ಸರಕಾರ ಎರಡು ಬಜೆಟ್ ಮಂಡಿಸಿದೆ, ಎರಡೂ ಬಜೆಟ್‍ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಲ್ಲಿ ಮತ್ತು ಹಲವಾರು ಸರಕಾರದ ಆದೇಶಗಳನ್ನು ನೋಡಿದರೆ ಖಂಡಿತವಾಗಿಯೂ ಸರಕಾರ ಪ್ರಾದೇಶಿಕ ತಾರತಮ್ಯವಿಲ್ಲದೇ ನಡೆದುಕೊಂಡು ಬರುತ್ತಿದೆ ಎಂದು ಅನಿಸುವದಿಲ್ಲ.

ಈ ಮಾತಿಗೆ ಸಾಕಷ್ಟು ಪುರಾವೆಗಳು ಸಹ ಸಿಗುತ್ತಿವೆ. ಉದಾಹರಣೆಗೆ, ರಾಜ್ಯದಲ್ಲಿ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ಮತ್ತು ಸರಕಾರ ಎರಡೂ ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳ ಸ್ಥಿತಿಗತಿಯನ್ನು ಗಮನಿಸಬೇಕಿದೆ. 2018-19ನೇ ಸಾಲಿನ ಜುಲೈ ಬಜೆಟ್‍ನಲ್ಲಿ ಸರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಎರಡು ಯೋಜನೆಗಳು ಮತ್ತು ಕೆಲವು ವಿಶೇಷ ಸೌಲಭ್ಯಗಳನ್ನು ಘೋಷಿಸಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕೆಂದು, ಬೀದರ ಜಿಲ್ಲೆಯಲ್ಲಿ ಕೃಷಿ ಸಲಕರಣೆಗಳ ಉತ್ಪಾದನಾ ಕೈಗಾರಿಕೆ, ಕಲಬುರಗಿ ಜಿಲ್ಲೆಯಲ್ಲಿ ಸೌರವಿದ್ಯುತ್ ಉಪಕರಣಗಳ ಉತ್ಪಾದನಾ ಕೈಗಾರಿಕೆ, ಕೊಪ್ಪಳ ಜಿಲ್ಲೆಯಲ್ಲಿ ಗುಡಿ ಕೈಗಾರಿಕೆ ಉತ್ಪಾದನಾ ಕೈಗಾರಿಕೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಜೀನ್ಸ್ ಉತ್ಪಾದನಾ ಕೈಗಾರಿಕೆ ಸ್ಥಾಪಿಸುವದಾಗಿ ಸರಕಾರ ಹೇಳಿತ್ತು. ಅದರ ಮೂಲಕ ಪ್ರತಿಯೊಂದು ಜಿಲ್ಲೆಯಲ್ಲಿ 15 ಸಾವಿರಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ಒಂದು ವರ್ಷದಲ್ಲಿ ಈ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಗತಿ ಕಂಡಿರುವ ಸಣ್ಣ ಸುಳಿವು ಸಹ ಸಿಗುತ್ತಿಲ್ಲ.

ಅದೇ ರೀತಿ, ಹೆಚ್ಚಿನ ಪ್ರಮಾಣದ ಕೃಷಿಭೂಮಿ ಹೊಂದಿರುವ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಶೇ. 23ರಷ್ಟು ನೀರಾವರಿ ಭೂಮಿಯಿದ್ದು, ಉಳಿದ ಜಮೀನು ಮಳೆಯಾಶ್ರಿತ ಪ್ರದೇಶವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಸ್ರೆಲ್ ಮಾದರಿ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಸರಕಾರ ಕಳೆದ ಬಜೆಟ್‍ನಲ್ಲಿ ಘೋಷಿಸಿದೆ. ಆದರೆ, ಕಳೆದ ಒಂದು ವರ್ಷದಲ್ಲಿ ಇಸ್ರೆಲ್ ಮಾದರಿ ನೀರಾವರಿ ಯೋಜನೆ ಅನುಷ್ಠಾನ ಕನ್ನಡಿಯೊಳಗಿನ ಗಂಟಾಗಿದೆ. ವಿಶ್ವವಿಖ್ಯಾತ ಹಂಪಿಯಲ್ಲಿ ಸರಕಾರ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು, ಅದು ಕೂಡ ನೆನೆಗುದಿಗೆ ಬಿದ್ದಿದೆ.

ಕೇವಲ 1000 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ತಯಾರು ಮಾಡಿಕೊಂಡಿದೆ. ಸರಕಾರದ ಬಜೆಟ್‍ಗೂ ಅನುಷ್ಠಾನಕ್ಕೂ ಸಂಬಂಧವೇ ಇಲ್ಲವೆನ್ನುವ ರೀತಿ ಆಡಳಿತ ನಡೆಯುತ್ತಿದೆ.

ಇನ್ನು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2018-19ನೇ ಸಾಲಿನಲ್ಲಿ 1500 ಕೋಟಿ ರೂ. ಅನುದಾನ ಬಜೆಟ್‍ನಲ್ಲಿ ನಿಗದಿಗೊಳಿಸಿದ ಸರಕಾರ, ಮಂಡಳಿಯ ಕಾರ್ಯದರ್ಶಿಗೆ ಕೇವಲ 1000 ಕೋಟಿ ರೂಪಾಯಿಯ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದೆ. ಅದರಂತೆ, ಮಂಡಳಿಯೂ ಕೇವಲ 1000 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ತಯಾರು ಮಾಡಿಕೊಂಡಿದೆ. ಸರಕಾರದ ಬಜೆಟ್‍ಗೂ ಅನುಷ್ಠಾನಕ್ಕೂ ಸಂಬಂಧವೇ ಇಲ್ಲವೆನ್ನುವ ರೀತಿ ಆಡಳಿತ ನಡೆಯುತ್ತಿದೆ.

ಅದಲ್ಲದೇ, ಈ 1000 ಕೋಟಿ ರೂ. ಅನುದಾನದಲ್ಲಿ 217.50 ಕೋಟಿ ರೂ. ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿ ಯೋಜನೆಯ (SDP) ಅನುದಾನ, ಪರಿಶಿಷ್ಠ ಜಾತಿ ಉಪಯೋಜನೆಯ (SCP) 257.96 ಕೋಟಿ ರೂ. ಹಾಗೂ ಗಿರಿಜನ ಉಪಯೋಜನೆಯ (TSP) 104.54 ಕೋಟಿ ರೂ. ಅನುದಾನವನ್ನು ಸೇರಿಸಿ ಒಟ್ಟು 580 ಕೋಟಿ ರೂಪಾಯಿಯ ವಿವಿಧ ಯೋಜನೆಯ ಅನುದಾನವನ್ನು ಮಂಡಳಿಗೆ ಆಡಿಣ ಮಾಡಿದೆ. ಅಂದರೆ, ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ ರೂ.1500 ಕೋಟಿ ಘೋಷಣೆ ಮಾಡಿ, 1000 ಕೋಟಿ ರೂ. ಅನುದಾನ ನಿಗದಿಪಡಿಸಿ, ಅದರಲ್ಲಿ ಒಟ್ಟು 580.00 ಕೋಟಿ ರೂ. ಅನುದಾನವನ್ನು ವಿವಿಧ ಸಾಮಾನ್ಯ ಬಜೆಟ್ ಮೂಲಕ ಮಂಡಳಿಗೆ ಮಾಂಜೂರು ಮಾಡಿ ಕೇವಲ 420 ಕೋಟಿ ರೂ. ಮಾತ್ರ ಹೆಚ್ಚುವರಿಯಾಗಿ ಸರಕಾರ ಮಂಡಳಿಗೆ ಅನುದಾನ ನೀಡಿರುತ್ತದೆ.

ಆದರೆ ಸಂವಿಧಾನದ 371ಜೆ ಅಡಿಯಲ್ಲಿ ರಚಿಸಲಾದ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಾಮಾನ್ಯ ಬಜೆಟ್ ಮೂಲಕ ಬರುವ ಅನುದಾನ ಹೊರತುಪಡಿಸಿ ವಿಶೇಷ ಅನುದಾನ ನೀಡಬೇಕಿರುವ ಸರಕಾರವೇ ರಂಗೋಲಿ ಕೆಳಗೆ ನುಸುಳುವ ದಾರಿ ಕಂಡುಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ.

ಹೈದ್ರಾಬಾದ ಕರ್ನಾಟಕಕ್ಕೆ 2013ರಿಂದ ಸಂವಿಧಾನದ 371ಜೆ ಕಾನೂನು ಅನುಷ್ಠಾನವಾಗುತ್ತಿದೆ. ಈ ಕಾನೂನು ರಾಜ್ಯದಲ್ಲಿ ಹೊಸದಾಗಿ ಲಾಗೂ ಆಗಿರುವುದರಿಂದ ಸಮರ್ಪಕ ಅನುಷ್ಠಾನಕ್ಕೆ ಕಾಲಕಾಲಕ್ಕೆ ರಾಜ್ಯದ ಮುಖ್ಯಸ್ಥರು ಅನುಷ್ಠಾನ ಪರಿಶೀಲನೆ ಮಾಡಿ ಸೂಕ್ತ ನಿರ್ದೇಶನ ನೀಡುವುದರ ಮೂಲಕ ಜನರಲ್ಲಿ ಇರುವ ಗೊಂದಲ ನಿವಾರಿಸಬೇಕಿದೆ. ಆದರೆ, ಕುಮಾರಸ್ವಾಮಿಯವರು ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಪ್ರಗತಿ ಪರಿಶೀಲನೆ ನಡೆಸಿರುವದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನೇಮಕಾತಿಗಳಲ್ಲಿ ಕೆಲವೊಂದು ಇಲಾಖೆಗಳು 371ಜೆ ಮೀಸಲಾತಿ ಕೈಬಿಟ್ಟು ಮುಂದುವರೆಯುತ್ತಿರುದರಿಂದ ಈ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡುತ್ತಿದೆ.

ಉನ್ನತ ಶಿಕ್ಷಣ ಸಚಿವರು ದಕ್ಷಿಣ ಕರ್ನಾಟಕದ ಮೈಸೂರಿನವರು. ಹಾಗಾಗಿ ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗೆ ನಿಯೋಜನೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಕಾಲೇಜುಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರ ಸೇವೆಯಿಂದ.

ಕಳೆದ ಆರು ತಿಂಗಳಲ್ಲಿ ಸರಕಾರದ ಉನ್ನತ ಶಿಕ್ಷಣ ಇಲಾಖೆ ಸರಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರನ್ನು ನಿಯೋಜನೆಯ ಮೇರೆಗೆ ವರ್ಗಾವಣೆ ಮಾಡಿ ಮುಂದಿನ ಆದೇಶದವರೆಗೆ ಸದರಿ ನಿಯೋಜನೆ ಇರುವಂತೆ ಆದೇಶ ಮಾಡಿದೆ. ಒಟ್ಟು ಮೂರು ಆದೇಶಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 171 ಜನ ಪ್ರಾಧ್ಯಾಪಕರನ್ನು ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ನಿಯೋಜನೆ ಮೇರೆಗೆ ವರ್ಗಾಯಿಸಿದ್ದಾರೆ. ದಕ್ಷಿಣ ಕರ್ನಾಟಕವೆಂದರೆ ಕೇವಲ ಈ ಮೂರು ಜಿಲ್ಲೆಗಳು ಎಂದು ಸರಕಾರ ತಿಳಿದಂತಿದೆ.

ಇನ್ನೂ ವಿಶೇಷವೆಂದರೆ, ಉನ್ನತ ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆಗೆ ಕಾನೂನಿದ್ದು, ಎಲ್ಲ ರೀತಿಯ ವರ್ಗಾವಣೆಗಳನ್ನು ಜೂನ್ ತಿಂಗಳಲ್ಲಿ ಕೌನ್ಸಲಿಂಗ್ ಮೂಲಕವೇ ಮಾಡಬೇಕಿದೆ. ನಿಯೋಜನೆ ಮೇರೆಗೆ ವರ್ಗಾವಣೆ ಮಾಡಲು ನಿಯಮದಲ್ಲಿ ಅವಕಾಶವಿಲ್ಲದಿದ್ದರೂ, 171 ಜನ ಪ್ರಾಧ್ಯಾಪಕರ ನಿಯೋಜನೆಯ ವರ್ಗಾವಣೆ ಮಾಡಿದೆ. ಈ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರು ದಕ್ಷಿಣ ಕರ್ನಾಟಕದ ಮೈಸೂರಿನವರು. ಹಾಗಾಗಿ ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗೆ ನಿಯೋಜನೆ ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಕಾಲೇಜುಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರ ಸೇವೆಯಿಂದ. ಅಂತಹ ಕಾಲೇಜುಗಳಲ್ಲಿ ಇರುವ ಒಂದು-ಎರಡು ಖಾಯಂ ಪ್ರಾಧ್ಯಾಪಕರನ್ನು ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ನಿಯೋಜನೆ ಮಾಡಿರುವುದು ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮಾಡಿದಂತಿದೆ. ಈ ಕುರಿತು ಉತ್ತರ ಕರ್ನಾಟಕದ ಶಾಸಕರಾದ ಬಸವರಾಜ ಹೊರಟ್ಟಿ ಮತ್ತು ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಸರಕಾರದ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ.

2019-20ನೇ ಸಾಲಿನ ಬಜೆಟ್‍ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಬೇರ್ಪಡಿಸಿ ಹಾಸನದಲ್ಲಿ ಮತ್ತೊಂದು ತಾಂತ್ರಿಕ ವಿಶ್ವವಿದ್ಯಾಲಯ ಮಾಡಬೇಕೆಂದು ಘೋಷಿಸಿದೆ. ಕರ್ನಾಟಕದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದೇಶದಲ್ಲಿಯೇ ಅತ್ಯಂತ ವಿದ್ಯಾರ್ಥಿಸ್ನೇಹಿ ಮತ್ತು ಉತ್ತಮ ಶೈಕ್ಷಣಿಕ ಗುಣಮಟ್ಟ ಹೊಂದಿರುವ ವಿಶ್ವವಿದ್ಯಾಲಯವಾಗಿದೆ. ರಾಜ್ಯದ ಯಾವುದೇ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೂ ಹೆಮ್ಮೆಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯೆಂದು ಹೇಳಬಹುದು. ಅಂತಹ ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯವನ್ನು ಒಡೆದು ಎರಡು ಭಾಗ ಮಾಡಬೇಕೆನ್ನುವುದು ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದಲ್ಲಿ ಬಹುತೇಕ ವೃತ್ತಿಪರ ವಿಶ್ವವಿದ್ಯಾಲಯಗಳು ಒಂದೊಂದೇ ಇದ್ದು, ರಾಜ್ಯದ ಎಲ್ಲ ಭಾಗಗಳ ವಿದ್ಯಾರ್ಥಿಗಳು ಅದೇ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿರುವದರಿಂದ ಮೇಲುಕೀಳೆಂಬ ಭಾವನೆ ಬರುವುದಿಲ್ಲ.

ಹೈದ್ರಾಬಾದ ಕರ್ನಾಟಕದ ಕಲಬುರಗಿಗೆ ಸ್ಥಳಾಂತರಿಸಿರುವ ಕಛೇರಿಯು ಮಾಹಿತಿ ಹಕ್ಕು ಆಯುಕ್ತರ ಕಛೇರಿಯಾಗಿದೆ, ಈ ಕಛೇರಿಯಿಂದ ಹೈದ್ರಾಬಾದ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಉಪಯೋಗವಿರುವುದಿಲ್ಲ.

ಈ ಸರಕಾರದ ದಿನನಿತ್ಯದ ಆಡಳಿತ ಬಹುತೇಕ ಏಕಮುಖವಾಗಿದೆ. ಮುಖ್ಯಮಂತ್ರಿಯಾದವರು ಒಂದು ವರ್ಷದಲ್ಲಿ ಕನಿಷ್ಠ ಜಿಲ್ಲೆಗೆ ಒಮ್ಮೆಯಾದರೂ ಭೇಟಿ ನೀಡಿ ಅಭಿವೃದ್ಧಿಯ ಪ್ರಗತಿ ಪರಿಶೀಲನೆ ಮಾಡಿ ಆಡಳಿತ ಚುರುಕುಗೊಳಿಸಬಹುದಿತ್ತು. ಆದರೆ, ಕುಮಾರಸ್ವಾಮಿಯವರು ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಮಾತ್ರ ಹೆಚ್ಚು ಆಸಕ್ತಿಯಿಂದ ಭೇಟಿ ನೀಡುತ್ತಾರೆ. ಅವರು ಉತ್ತರ ಕರ್ನಾಟಕ ಅಂದರೆ ಕೇವಲ ಮುಂಬಯಿ ಕರ್ನಾಟಕದ ಹುಬ್ಬಳ್ಳಿ-ಬೆಳಗಾವಿ ಎಂದು ತಿಳಿದಿರುವ ಹಾಗಿದೆ.

ಸರಕಾರದ ವಿವಿಧ ಕಛೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತ ರಿಸಬೇಕೆಂದು ಮುಂಬಯಿ ಕರ್ನಾಟಕದ ಕೆಲವು ಸಂಘಟನೆಗಳು ಕೋರಿದ್ದರು. ಸರಕಾರ ಕಳೆದ ವರ್ಷ ಹತ್ತು ಕಛೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ನಿರ್ಣಯಿಸಿ, ಅವುಗಳಲ್ಲಿ ಒಂಬತ್ತು ಕಛೇರಿಗಳನ್ನು ಮುಬಯಿ ಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಸ್ಥಾಳಂತರಿಸಿ, ಒಂದು ಕಛೇರಿಯನ್ನು ಕಲಬುರಗಿ ಜಿಲ್ಲೆಗೆ ಸ್ಥಳಾಂತರಿಸಿದೆ. ಹೈದ್ರಾಬಾದ ಕರ್ನಾಟಕದ ಕಲಬುರಗಿಗೆ ಸ್ಥಳಾಂತರಿಸಿರುವ ಕಛೇರಿಯು ಮಾಹಿತಿ ಹಕ್ಕು ಆಯುಕ್ತರ ಕಛೇರಿಯಾಗಿದೆ, ಈ ಕಛೇರಿಯಿಂದ ಹೈದ್ರಾಬಾದ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಉಪಯೋಗವಿರುವುದಿಲ್ಲ.

2006ರಲ್ಲಿ ಕುಮಾರಸ್ವಾಮಿಯವರು ನಡೆಸಿದಂತಹ ಸರಕಾರ ಈಗಿಲ್ಲ ಎನ್ನುವ ವಿಚಾರ ಜನರಿಗೆ ತಿಳಿಯುತ್ತಿದೆ. ಅಂದು ಕುಮಾರಸ್ವಾಮಿಯವರು ಇಡೀ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿವಹಿಸಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎನಿಸಿದ್ದರು. ಆದರೆ, ಈಗ ಕುಮಾರಸ್ವಾಮಿಯವರು ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿದ್ದಾರೆ ಎನ್ನುವ ಭಾವನೆ ಬಂದಿದೆ. ಇತ್ತೀಚೆಗೆ ಉತ್ತರ ಕರ್ನಾಟಕದ ಸಾರ್ವಜನಿಕರಲ್ಲಿ ಮೂಡಿಬಂದಿರುವ ಸಂಶಯವೇನೆಂದರೆ, ಮೂರು-ನಾಲ್ಕು ತಿಂಗಳ ಹಿಂದೆ ಮಂಡ್ಯದಲ್ಲಿ ಒಂದು ಬಸ್ ದುರಂತದಲ್ಲಿ 30ಕ್ಕೂ ಹೆಚ್ಚು ಜನ ತೀರಿಕೊಂಡಿದ್ದರು. ತಕ್ಷಣ ಕುಮಾರಸ್ವಾಮಿಯವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಂಡು ಇಡೀ ರಾಜ್ಯದ ಜನರ ಮನ ಗೆದ್ದಿದ್ದರು. ಆದರೆ, ಕಳೆದ ತಿಂಗಳು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ನಡೆದ ಒಂದು ಕಟ್ಟಡ ದುರಂತದಲ್ಲಿ ಸಾಕಷ್ಟು ಜನ ತೀರಿ ಕೊಂಡರು. ಕುಮಾರಸ್ವಾಮಿಯವರು ರಾಜ್ಯದಲ್ಲಿ ಇದ್ದರೂ ಮೂರು ದಿನಗಳ ನಂತರ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿರುವುದು ಜನರ ಅನುಮಾನಕ್ಕೆ ನೀರೆರದಂತಾಗಿದೆ.

*ಲೇಖಕರು ಗುಲಬರ್ಗಾ ವಿವಿಯಿಂದ ಎಂ.ಎಸ್ಸಿ., ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಸಾಮಾಜಿಕ ಹೋರಾಟಗಾರರು. ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರು. ರಾಯಚೂರು ನಿವಾಸಿ. 

Leave a Reply

Your email address will not be published.