ಕರ್ನಾಟಕ ಕಂಡ ನಿಷ್ಕ್ರಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪನವರ 78ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಪೂರ್ಣಪುಟದ ಜಾಹೀರಾತಿನಲ್ಲಿಅಭಿವೃದ್ಧಿಯನ್ನು Àರೆಗಿಳಿಸಿದ ಧೀಮಂತ ನಾಯಕಎಂದು ಹಾಡಿಹೊಗಳಿದ ವಾಕ್ಯ ಶತಮಾನದ ಕ್ರೂರ ವ್ಯಂಗ್ಯ ಮತ್ತು ಹಾಸ್ಯದಂತೆ ನನಗೆ ಭಾಸವಾಯಿತು!

-ಡಾ.ಎನ್.ಜಗದೀಶ್ ಕೊಪ್ಪ

ಕರ್ನಾಟಕ ರಾಜ್ಯವು 1956ರಲ್ಲಿ ಉದಯವಾದ ನಂತರ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೆ, ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತವರರು ಡಿ.ದೇವರಾಜರಾಜ ಅರಸು ಮಾತ್ರ. ಉಳಿದವರಲ್ಲಿ ನೆನಪಾಗುವವರು ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪಗಪ್ಪ ಜೆ.ಹೆಚ್.ಪಟೇಲ್ ಮತ್ತು ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡ. ಮತ್ತು ಸಿದ್ಧರಾಮಯ್ಯ. ಇನ್ನು ಆರ್.ಗುಂಡೂರಾವ್, ವೀರಪ್ಪ ಮೋಯ್ಲಿ, ಧರ್ಮಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂzಗೌಡ ಇವರೆಲ್ಲಾ ದಾಖಲೆಯಲ್ಲಿ ಉಳಿಯುವ ಹೆಸರುಗಳು. ಇವರೆಲ್ಲರಿಗಿಂತ ಭಿನ್ನವಾಗಿ ಮುಖ್ಯಮಂತ್ರಿಯಾಗಿ ಜೈಲಿಗೆ ಹೋಗಿ ಪರಪ್ಪನ ಅಗ್ರಹಾರದಲ್ಲಿ ಹದಿನೈದು ದಿನಗಳ ಕಾಲ ಮುದ್ದೆ ಮುರಿದ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಮತ್ತು ಜಾತಿಕಾರಣಕ್ಕೆ ಹೆಸರಾಗಿ ದಾಖಲೆ ಸ್ಥಾಪಿಸಿದ್ದಾರೆ.

ಒಂದು ನಾಡಿನ ಮುಖ್ಯಮಂತ್ರಿಯಾಗಿ ನಾನು ಎಲ್ಲಾ ಜನಸಮುದಾಯದ ಪ್ರತಿನಿಧಿ. ನನ್ನ ಆಲೋಚನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಾರತಮ್ಯ ಇರಬಾರದು ಎಂಬ ಕನಿಷ್ಠ ಜ್ಞಾನವನ್ನು ಇಟ್ಟುಕೊಳ್ಳದ ಯಡಿಯೂರಪ್ಪನವರು ಜಾತಿಯತೆಯನ್ನು ಹಾಸಿ, ಹೊದ್ದು, ಅದನ್ನು ತಮ್ಮ ರಕ್ಷಣೆಗೆ ಗುರಾಣಿಯಾಗಿಸಿಕೊಂಡವರು. ಕರ್ನಾಟಕದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿ ಈ ರೀತಿ ತಾನು ಹುಟ್ಟಿದ ಜಾತಿ ಸಮುದಾಯದ ಪಕ್ಷಪಾತಿಯಾಗಿರಲಿಲ್ಲ. ದೇವೇಗೌಡ ಮತ್ತು ಸಿದ್ಧರಾಮಯ್ಯನವರಲ್ಲಿ ಇಂತಹ ದೌರ್ಬಲ್ಯಗಳಿದ್ದರೂ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಗಳ ಕುರಿತಂತೆ ಅವರಿಗೆ ಕಾಳಜಿ ಇತ್ತು.

ಬಿ.ಎಸ್.ಯಡಿಯೂರಪ್ಪ ಕರ್ನಾಟಕ ರಾಜಕಾರಣದಲ್ಲಿ ಸುದಿರ್ಘ ಎನ್ನಬಹುದಾದ ಐವತ್ತು ವರ್ಷಗಳನ್ನು ಕಳೆದು ಶಿಕಾರಿಪುರದ ಪುರಸಭೆಯ ಸದಸ್ಯ ಸ್ಥಾನದಿಂದ ಹಿಡಿದು, ಶಾಸಕ, ವಿರೋಧ ಪಕ್ಷದ ನಾಯಕ, ಲೋಕಸಭಾ ಸದಸ್ಯ ಹಾಗೂ ಮುಖ್ಯಮಂತ್ರಿಯ ಸ್ಥಾನಕ್ಕೇರಿದ ಅನುಭವೀ ರಾಜಕಾರಣಿ. ಈ ಕುರಿತು ಎರಡು ಮಾತಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ಪಕ್ಷದ ನಿಷ್ಠೆಯನ್ನು ಬದಲಾಯಿಸದ ಅವರು ವಿಧಾನಸಭೆಯಲ್ಲಿ ಕೇವಲ ಎರಡು ಅಥವಾ ನಾಲ್ಕು ಸಂಖ್ಯೆಗಳಿದ್ದ ಬಿ.ಜೆ.ಪಿ. ಸದಸ್ಯರ ಸ್ಥಾನವನ್ನು ಸರ್ಕಾರ ರಚಿಸಲು ಅಗತ್ಯವಿರುವÀಷ್ಟು ಬಹುಮತದವರೆಗೆ ಕೊಂಡೊಯ್ದ ಸಾಹಸಿ. ಆದರೆ, ಒಂದು ಸೈದ್ಧಾಂತಿಕ ಹೋರಾಟಕ್ಕೆ ಬೇಕಾದ ತತ್ವ, ಸಿದ್ಧಾಂತಗಳು ಹಾಗೂ ಸಾರ್ವಜನಿಕ ರಾಜಕೀಯ ಬದುಕಿಗೆ ಬೇಕಾದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಗಾಳಿಗೆ ತೂರಿಬಿಟ್ಟವರಲ್ಲಿ ಪ್ರಮುಖರು.

ಕರ್ನಾಟಕದ ಪ್ರಜ್ಞಾವಂತ ನಾಗರಿಕ ಅಥವಾ ರಾಜಕೀಯ ಸೂಕ್ಷ್ಮತೆ ಮತ್ತು ಸಾರ್ವಜನಿಕವಾಗಿ ನೈತಿಕತೆಯ ಬದುಕಿಗಾಗಿ ಹಂಬಲಿಸುವ ಯಾವೊಬ್ಬ ಸಾಮಾನ್ಯ ಪ್ರಜೆ ಯಡಿಯೂರಪ್ಪನವರು ನಡೆದು ಬಂದ ಹಾದಿಯನ್ನಾಗಲಿ ಅಥವಾ ಈಗ ಮುಖ್ಯಮಂತ್ರಿಯಾಗಿ ನಡೆಸುತ್ತಿರುವ ಆಡಳಿತವನ್ನಾಗಲಿ ಸಮರ್ಥಿಸಲಾರ. 1990ರ ದಶಕದಲ್ಲಿ ರೈತಸಂಘದ ಕಾರ್ಯಕರ್ತರ ಲಾಂಛನ ಎನ್ನಬಹುದಾದ ಹಸಿರು ಟವಲ್ ಅನ್ನು ಹೊದ್ದು, ಅದನ್ನು ಬಿ.ಜೆ.ಪಿ. ಕಾರ್ಯಕರ್ತರ ಹೆಗಲ ಮೇಲೆ ಹಾಕಿದ ಯಡಿಯೂರಪ್ಪ, “ಹಸಿರು ಟವಲ್ ನಿಮ್ಮ ಸ್ವತ್ತಲ್ಲ” ಎಂದು ರೈತಸಂಘಕ್ಕೆ ಹೇಳುವುದರ ಮೂಲಕ ತಾನೊಬ್ಬ ತತ್ವ ಹಾಗೂ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಾಯಕ ಎಂದು ಪ್ರತಿಬಿಂಬಿಸಿಕೊಂಡವÀರು. ಶಾಸಕರ ಪಕ್ಷಾಂತರ ಪಿಡುಗನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೆ ಬಂದ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅಣಕಿಸುವ ರೀತಿಯಲ್ಲಿ 2011ರಲ್ಲಿ ‘ಆಪರೇಷನ್ ಕಮಲ’ ಹೆಸರಿನಲ್ಲಿ ಗಣಿಮಾಲಿಕ ಜನಾರ್ಧನ ರೆಡ್ಡಿ ನೇತೃತ್ವದಲ್ಲಿ ಹಲವು ಪಕ್ಷಗಳ ಶಾಸಕರನ್ನು ರಾಜಿನಾಮೆ ಕೊಡಿಸಿ, ಗಣಿದೂಳಿನ ಅಕ್ರಮ ಹಣದಿಂದ ಗೆಲ್ಲಿಸಿಕೊಂಡು ಬಂದು ಮುಖ್ಯಮಂತ್ರಿಯಾಗಿದ್ದ ಇದೇ ಯಡಿಯೂರಪ್ಪ ಭ್ರಷ್ಚಾಚಾರ ಪ್ರಕರಣಕ್ಕೆ ಸಿಲುಕಿ 2011ರ ಅಕ್ಟೋಬರ್ 15ರಿಂದ ನವೆಂಬರ್ 8ರವರೆಗೆ ಜೈಲುವಾಸ ಅನುಭವಿಸಿದರು.

ಒಂದು ರೀತಿಯಲ್ಲಿ ಅತ್ಯಂತ ಅಪಮಾನಕಾರಿಯಾದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ್ದ ಬಿ.ಎಸ್.ಯಡಿಯೂರಪ್ಪನವರು ಪುನಃ 2018ರಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ರಾಜ್ಯಪಾಲರ ಮನವೊಲಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕೇವಲ ಎರಡು ದಿನದಲ್ಲಿ ಬಹುಮತ ಸಾಬೀತುಪಡಿಸಲಾಗದೆ ಅಧಿಕಾರದಿಂದ ನಿರ್ಗಮಿಸಿದರು. ಯಾವೊಂದು ಪಕ್ಷಕ್ಕೂ ಬಹುಮತ ಇಲ್ಲದಿದ್ದ ಸಮಯದಲ್ಲಿ ಯಡಿಯೂರಪ್ಪ ಅಧಿಕಾರಕ್ಕಾಗಿ ಪ್ರದರ್ಶಿಸಿದ ಹಪಾಹಪಿತನ ನಿಜಕ್ಕೂ ಅಸಹ್ಯಕರ ನಡವಳಿಕೆಯಾಗಿತ್ತು.

ನಂತರ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಮೈತ್ರಿಯಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಕೆಡವಿ ಪುನಃ ವಾಮಮಾರ್ಗದಲ್ಲಿ ಅಧಿಕಾರ ಹಿಡಿದ ಯಡಿಯೂರಪ್ಪ ತಮ್ಮ ರಾಜಕೀಯ ಹಾಗೂ ಬದುಕಿನ ಮುಸ್ಸಂಜೆಯ ದಿನಗಳಲ್ಲಿ ತಾನೊಬ್ಬ ನೈತಿಕವಾಗಿ ದಿವಾಳಿ ಎದ್ದ ವ್ಯಕ್ತಿ ಎಂದು ಪ್ರದರ್ಶಿಸಿಕೊಂಡರು. 2019ರ ಜುಲೈ ತಿಂಗಳÀಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ತಕ್ಷಣ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಯಾವುದೇ ಮುಜಗುರ ಅಥವಾ ಹಿಂಜರಿಕೆಯಿಲ್ಲದೆ ‘ಆಪರೇಷನ್ ಕಮಲ’ ಎಂಬ ಅನೈತಿಕ ಚಟುವಟಿಕೆಯನ್ನು ಸಮರ್ಥಿಸಿಕೊಂಡರು.

ಬಿ.ಜೆ.ಪಿ. ಪಕ್ಷದ ತತ್ವ ಅಥವಾ ಸಿದ್ಧಾಂತಗಳ ಕುರಿತಾಗಲಿ, ಪ್ರಣಾಳಿಕೆ ಕುರಿತಾಗಲಿ ಕಿಂಚಿತ್ತೂ ನಂಬಿಕೆಯಿಲ್ಲದ ಹಾಗೂ ಸಚಿವ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಪಕ್ಷಗಳ ಶಾಸಕರನ್ನು ರಾಜೀನಾಮೆ ಕೊಡಿಸಿ, ಅವರನ್ನು ಮುಂಬೈನಗರಕ್ಕೆ ಕರೆದೊಯ್ದು ಪಂಚತಾರಾ ಹೊಟೇಲ್‍ನಲ್ಲಿ ಕೂಡಿಟ್ಟು, ಮೈತ್ರಿ ಸರ್ಕಾರ ಪತನವಾಗುವಂತೆ ನೋಡಿಕೊಂಡರು. 19 ಶಾಸಕರ ಪೈಕಿ 17 ಶಾಸಕರನ್ನು ಉಪಚುನಾವಣೆಯಲ್ಲಿ ಹಣ, ಅಧಿಕಾರ ಹಾಗೂ ತೋಳ್ಬಲದ ಮೂಲಕ ಗೆಲ್ಲಿಸಿಕೊಂಡ ಇವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಗ್ರಾಮಪಂಚಾಯಿತಿಗೆ ಸದಸ್ಯರಾಗಲು ಯೋಗ್ಯರಲ್ಲದ ವ್ಯಕ್ತಿಗಳನ್ನು ತಮ್ಮ ಸಚಿವ ಸಂಪುಟದ ಮಂತ್ರಿಗಳನ್ನಾಗಿ ನೇಮಿಸಿಕೊಂಡರು.

ಇಷ್ಟು ಮಾತ್ರವಲ್ಲದೆ ಉಪಚುನಾವಣೆಯಲ್ಲಿ ಸೋತ ಹೆಚ್.ವಿಶ್ವನಾಥ್ ಮತ್ತು ಎಂ.ಬಿ.ಟಿ.ನಾಗರಾಜ್ ಹಾಗೂ ಆಪರೇಷನ್ ಕಮಲಕ್ಕೆ ದಳ್ಳಾಳಿಯಂತೆ ಕಾರ್ಯನಿರ್ವಹಿಸಿದ ಸಿ.ಪಿ.ಯೋಗೀಶ್ವರ್ ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವುದರ ಮೂಲಕ  ಜನತೆ ನೀಡಿದ ತೀರ್ಪಿಗೆ ತಿಲಾಂಜಲಿ ಇತ್ತರು. ಈ ಆಪರೇಷನ್ ಕಮಲ ಎಂಬ ನೀತಿಗೆಟ್ಟ ಪ್ರಹಸನಕ್ಕೆ ಮತ್ತು ಚುನಾವಣೆಗೆ ಕೋಟ್ಯಂತರ ರೂಪಾಯಿ ವೆಚ್ಚವಾಗಿದೆ ಎಂದು ಬಿ.ಜೆ.ಪಿ ಪಕ್ಷದ ನಿಷ್ಟಾವಂತ ನಾಯಕರು ಒಪ್ಪಿಕೊಳ್ಳುತ್ತಾರೆ. ಈ ಪ್ರಮಾಣದ ಹಣ ಎಲ್ಲಿಂದ ಬಂತು? ಈ ಕುರಿತು ಪಕ್ಷದ ಹೈಕಮಾಂಡ್ ಪ್ರಶ್ನಿಸಲಿಲ್ಲ. ಪಕ್ಷಕ್ಕೆ ನಿಷ್ಠೆ ಇಲ್ಲದವರು ಏಕೆ ಬೇಕು? ಈ ಬಗ್ಗೆಯೂ ಚಕಾರವೆತ್ತಲಿಲ್ಲ.

ಪ್ರತಿಕ್ಷಣದಲ್ಲಿ, ಪ್ರತಿಮಾತಿನಲ್ಲೂ ದೇಶಭಕ್ತಿ, ದೇಶಪ್ರೇಮ, ಧರ್ಮ, ಸಂಸ್ಕøತಿ ಮತ್ತು ನೈತಿಕತೆ ಕುರಿತು ನಿರರ್ಗಳವಾಗಿ ಮಾತನಾಡುವ ನಾಯಕರು ಹಾಗೂ ಸಂಘಪರಿವಾದ ವಂದಿಮಾಗಧÀರಾದ ವಿದ್ವಾಂಸರು, ಮೇಧಾವಿಗಳು ಈವರೆಗೆ ಯಡಿಯುರಪ್ಪ ತುಳಿದ ಮಾರ್ಗ ಅನೈತಿಕವಾದುದು ಎಂದು  ಎಲ್ಲಿಯೂ ಹೇಳಲಿಲ್ಲ. ಯಡಿಯೂರಪ್ಪನವರು ವಾಮಮಾರ್ಗದಲ್ಲಿ ತಂದುಕೊಟ್ಟ ಅಧಿಕಾರವನ್ನು ಮತ್ತು ತಮ್ಮ ಸಂಘಟನೆಗಳಿಗೆ ಮತ್ತು ಮಠಗಳಿಗೆ ನೀಡುವ ಹಣವನ್ನು ಪಡೆದು ಅನುಭವಿಸುವುದು ನಮ್ಮ ಆಜನ್ಮಸಿದ್ಧ ಹಕ್ಕು ಎಂದು ಎಲ್ಲರೂ ಭಾವಿಸಿದಂತಿದೆ.

2019ರ ಜುಲೈ ತಿಂಗಳಿನಲ್ಲಿ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿದ ಯಡಿಯೂರಪ್ಪ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ ಅಥವಾ ಕ್ರಿಯಾಶೀಲವಾಗಿದೆ ಎಂಬ ಭಾವನೆ ಯಾರಲ್ಲಿಯೂ ಇಲ್ಲ. ಒಕ್ಕೂಟ ಸರ್ಕಾರದ ತೆರಿಗೆ ಪಾಲಿನಲ್ಲಿ ಅಂದರೆ, ಜಿ.ಎಸ್.ಟಿ. ಪಾಲಿನಲ್ಲಿ ಕಳೆದ ವರ್ಷ ಬರಬೇಕಾದ ಹನ್ನೊಂದು ಸಾವಿರ ಕೋಟಿಯನ್ನು ಈವರೆಗೆ ಒಕ್ಕೂಟ ಸರ್ಕಾರ ನೀಡಲಿಲ್ಲ. ಬರಬೇಕಾದ ಕರ್ನಾಟಕದ ಪಾಲಿನ ಹಣವನ್ನು ಕೇಳಲಾರದೆ, ರಿಸರ್ವ್‍ಬ್ಯಾಂಕಿನಿಂದ ಬಡ್ಡಿಗೆ ಹಣವನ್ನು ತಂದಿರುವುದು ನಿಜಕ್ಕೂ ನಾಚಿಗೆಡಿನ ಸಂಗತಿ.

2018ರಲ್ಲಿ ಅತಿವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡವು. ಪರಿಹಾರಕ್ಕಾಗಿ ಒಕ್ಕೂಟ ಸರ್ಕಾರಕ್ಕೆ ಹತ್ತು ಸಾವಿರ ಕೋಟಿ ರೂಪಾಯಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಒಕ್ಕೂಟ ಸರ್ಕಾರ ನೀಡಿದ್ದು ಕೇವಲ ಎಂಟುನೂರು ಕೋಟಿ ರೂಪಾಯಿ ಮಾತ್ರ. ಈ ಕುರಿತು ಯಾವೊಬ್ಬ ಶಾಸಕನಾಗಲಿ ಅಥವಾ ಸಂಸದನಾಗಲಿ ಚಕಾರವೆತ್ತುವುದಿಲ್ಲ. ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಚುನಾವಣೆಯ ಕಾರಣಕ್ಕಾಗಿ ನೆರೆಯ ತಮಿಳುನಾಡಿಗೆ ಒಂದು ಲಕ್ಷದ ಮೂವತ್ತು ಕೋಟಿ ಹಾಗೂ ಪಶ್ಚಿಮ ಬಂಗಾಳಕ್ಕೆ ಅರುವತ್ತನಾಲ್ಕು ಸಾವಿರ ಕೋಟಿ ರೂಪಾಯಿ ಹಣ ಮೀಸಲಿಟ್ಟಿರುವ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಕೇವಲ ಹದಿನಾಲ್ಕು ಸಾವಿರ ಕೊಟಿ ಮಾತ್ರ ನೀಡಿದೆ. ಇದರಲ್ಲಿ ಹೆಚ್ಚಿನ ಅನುದಾನ ಬೆಂಗಳೂರು ಮೆಟ್ರೊ ಯೋಜನೆಗೆ ಮೀಸಲಾಗಿರಿಸಲಾಗಿದೆ. ಕರ್ನಾಟಕದ ಒಟ್ಟು 28 ಸಂಸದರಲ್ಲಿ 26 ಸಂಸದರು ಬಿ.ಜೆ.ಪಿ. ಪಕ್ಷದವರಾಗಿದ್ದು ಈವರೆಗೂ ಒಬ್ಬರೂ ತುಟಿ ಬಿಚ್ಚಿ ಮಾತನಾಡಿಲ್ಲ.

ಇನ್ನು ರಾಜ್ಯದಲ್ಲಿ ಒಕ್ಕೂಟ ಸರ್ಕಾರದ ಅನೇಕ ಅನುದಾನ ಯೋಜನೆಗಳು ಹಣವಿಲ್ಲದೆ ಸ್ಥಗಿತಗೊಂಡಿವೆ. ಈ ಮೊದಲು ನೀಡುತ್ತಿದ್ದ ಅನುದಾನಕ್ಕಿಂತ ಶೇಕಡ 17 ರಷ್ಟು ಕೊರತೆಯುಂಟಾಗಿದೆ. ಸ್ವಚ್ಚ ಭಾರತ, ಆಯುಷ್ಮಾನ್ ಭಾರತ, ವಸತಿ ಯೋಜನೆ, ಗ್ರಾಮೀಣ ರಸ್ತೆ, ಶಿಕ್ಷಣ ಅಭಿಯಾನ, ಗ್ರಾಮೀಣ ಉದ್ಯೋಗ ಯೋಜನೆ, ಆರೋಗ್ಯ -ಹೀಗೆ ಬಹುತೇಕ ಕ್ಷೇತ್ರಗಳು ಅಭಿವೃದ್ಧಿಯಿಂದ ವಂಚಿತವಾಗಿ ತೆವಳುತ್ತಾ ಸಾಗಿವೆ. ಒಕ್ಕೂಟ ಸರ್ಕಾರ ಯಾವ ನೆರವು ನೀಡದಿದ್ದರೂ ಸರಿಯೆ, ನನ್ನನ್ನು ಅಧಿಕಾರದಿಂದ ಇಳಿಸದಿದ್ದರೆ ಸಾಕು ಎಂಬ ನಿರ್ಣಯಕ್ಕೆ ಬಂದಿರುವ ಯಡಿಯೂರಪ್ಪ, ತಮ್ಮ ಸಚಿವ ಸಂಪುಟದ ಸದಸ್ಯರ ಮೇಲೆ ಅಧಿಕಾರ ಚಲಾಯಿಸುವ ನೈತಿಕತೆಯನ್ನು ಕಳೆದುಕೊಂಡು, ಧೃತರಾಷ್ಟ್ರನಂತೆ ರಾಜ್ಯಭಾರ ಮಾಡುತ್ತಿದ್ದಾರೆ.

ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರದಲ್ಲಿ ಇರುವ ಸಚಿವರ ಕಾರ್ಯದಕ್ಷತೆಯನ್ನು ವಿವೇಚಿಸುವುದಾದರೆ, ಇಂತಹ ಸರ್ಕಾರ ಮತ್ತು ಸಚಿವರು ಕರ್ನಾಟಕಕ್ಕೆ ಅವಶ್ಯಕತೆ ಇತ್ತಾ? ಎಂಬ ಪ್ರಶ್ನೆ ಮೂಡುತ್ತದೆ. ಆರ್.ಅಶೋಕ್, ಸುರೇಶ್ ಕುಮಾರ್, ಅಶ್ವತ್ಥನಾರಾಯಣ, ಸುಧಾಕರ್, ಬಸವರಾಜ ಬೊಮ್ಮಾಯಿ -ಹೀಗೆ ಮೂರು ನಾಲ್ಕು ಮಂದಿಯನ್ನು ಹೊರತುಪಡಿಸಿದರೆ, ಉಳಿದವರು ನಿಷ್ಕ್ರಿಯತೆಯಲ್ಲಿ ಮುಖ್ಯಮಂತ್ರಿಯನ್ನು ಮೀರಿಸುತ್ತಾರೆ. ಗ್ರಾಮೀಣಾಭಿವೃದ್ಧಿಯಂತಹ ಪ್ರಮುಖ ಖಾತೆ ಹೊಂದಿರುವ ಹಾಗೂ ಹರಕು ಬಾಯಿಯ ಕೆ.ಎಸ್.ಈಶ್ವರಪ್ಪ ಕಳೆದ 22 ತಿಂಗಳಲ್ಲಿ ಒಂದು ಸಭೆ ನಡೆಸಿ ಅಥವಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಕರ್ನಾಟಕದ ಗ್ರಾಮೀಣ ಜನತೆ ಅನುಭವಿಸುತ್ತಿರುವ ಕಷ್ಟ ಸುಖ ಏನೆಂದು ವಿಚಾರಿಸಲಿಲ್ಲ.

ಈ ಬಾರಿಯ ಬೇಸಿಗೆ ಕರ್ನಾಟಕದ ಗ್ರಾಮೀಣ ಭಾಗಕ್ಕೆ ನರಕವಾಗುತ್ತಿದೆ. ಜನರಿಂದ ಹಿಡಿದು ದನಕರುಗಳಿಗೆ ಕುಡಿಯುವ ನೀರಿಲ್ಲ. ಈ ಕುರಿತು ಯಾವುದೇ ಕ್ರಿಯಾಯೋಜನೆ ಈವರೆಗೆ ಪ್ರಸ್ತಾಪವಾಗಿಲ್ಲ. ಸಾರಿಗೆ ಖಾತೆ ಹೊತ್ತಿರುವ ಲಕ್ಷ್ಮಣ ಸವದಿ ಮತ್ತು ಪಡಿತರ ಖಾತೆಯ ಉಮೇಶ್ ಕತ್ತಿ ಎಂಬ ಮಹಾನುಭಾವರು ಬೆಳಗಾವಿ ಜಿಲ್ಲೆಯನ್ನು ಬಿಟ್ಟು ಬೆಂಗಳೂರು ನಗರಕ್ಕೆ ತಲೆ ಹಾಕುತ್ತಿಲ್ಲ. ಮೀಸಲಾತಿಗೆ ಆಗ್ರಹಿಸಿ ಪ್ರಬಲ ಸಮುದಾಯಗಳು ಸರ್ಕಾರದ ವಿರುದ್ಧ ಪ್ರತಿಭಟನೆ, ಪಾದಯಾತ್ರೆ ಹಾಗೂ ಸಮಾವೇಶ ನಡೆಸುತ್ತಿವೆ. ಕುರುಬರ ಪರವಾಗಿ ಕೆ.ಎಸ್.ಈಶ್ವರಪ್ಪ. ವಾಲ್ಮೀಕಿ ಜನಾಂಗದ ಪರವಾಗಿ ಶ್ರೀರಾಮುಲು, ಪಂಚಮಶಾಲಿ ಲಿಂಗಾಯತರ ಪರವಾಗಿ ಮುರುಗೇಶ ನಿರಾಣಿಯಂತಹವರು ಭಾಗವಹಿಸುತ್ತಾರೆ ಎಂದರೆ, ಮುಖ್ಯಮಂತ್ರಿ ಎಂತಹ ಪ್ರಭಾವಶಾಲಿ ಎಂಬುದು ಈಗಾಗಲೇ ಜನತೆಗೆ ಮನದಟ್ಟಾಗಿದೆ.

ಆಪರೇಷನ್ ಕಮಲದ ಮೂಲಕ ವಲಸೆ ಬಂದ ಶಾಸಕರ ಕಣ್ಮಣಿಯಾಗಿದ್ದ ರಮೇಶ್ ಜಾರಕಿಹೊಳಿ ಎಂಬ ಮಹಾಶಯ ಪಟ್ಟು ಹಿಡಿದು ಜಲಸಂಪನ್ಮೂಲ ಖಾತೆಯನ್ನು ಪಡೆದಿದ್ದನ್ನು ಯಾರೂ ಮರೆತಿಲ್ಲ. ಆದರೆ, ಈ ವ್ಯಕ್ತಿ ನದಿಗಳ ನಿರಾವರಿ ಯೋಜನೆಗಳೇನು? ಅಂತರಾಜ್ಯ ನದಿ ನೀರಿನ ವಿವಾದಗಳೇನು? ಎಂಬುದರ ಕುರಿತಾಗಿ ಒಮ್ಮೆಯೂ ಅಧಿಕಾರಿಗಳ ಜೊತೆ ಚರ್ಚಿಸಲಿಲ್ಲ. ಇದಕ್ಕೆ ಬದಲಾಗಿ ಬೆಳಗಾವಿ ಗ್ರಾಮಾಂತರ ಪ್ರದೇಶದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಹೆಣ್ಣುಮಗಳ ವಿರುದ್ಧ ತೊಡೆ ತಟ್ಟುವುದೇ ಪೌರುಷ ಎಂದು ತಿಳಿದು ಮಂತ್ರಿಗಿರಿಯನ್ನು ಅನುಭವಿಸಿದರು. ಇದೀಗ ಲೈಂಗಿಕ ಹಗರಣದಲ್ಲಿ ಸಿಲುಕಿ ಮನೆ ಸೇರಿದ್ದಾರೆ.

ಕರ್ನಾಟಕದಲ್ಲಿ ವಿದ್ಯುತ್ ಚಾಲಿತ ವಾಹನಗಳ ಕಾರ್ಖಾನೆ ಮುಂದಾಗಿದ್ದ ಎರಡು ಕಂಪನಿಗಳು (ಅಸ್ತೆರ್ ಮತ್ತು ಓಲಾ) ಈ ತಿಂಗಳ ಮೊದಲವಾರ ತಮ್ಮ ನಿರ್ಧಾರವನ್ನು ಬದಲಿಸಿ ನೆರೆಯ ತಮಿಳುನಾಡಿನಲ್ಲಿ ಕಾರ್ಖಾನೆ ಸ್ಥಾಪಿಸಲು ತೀರ್ಮಾನಿಸಿವೆ. ಆದರೆ.  ಈ ಕುರಿತು ಬೃಹತ್ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ಇಲ್ಲ. ಅತೃಪ್ತ ಶಾಸಕರ ಮನವೊಲಿಸಲು ರಾಜಕೀಯ ಕಾರ್ಯದರ್ಶಿ ಎಂಬ ಸಚಿಬ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ನೀಡಿ ಶಾಸಕರನ್ನು ನೇಮಿಸಿಕೊಳ್ಳಲಾಗಿದೆ. (ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಸಹ ಇಂತಹ 17 ಮಂದಿ ದಂಡ ಪಿಂಡಗಳ ನೇಮಕವಾಗಿತ್ತು) ಈ ರಾಜಕೀಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗೆ ಯಾವ ಘನಂದಾರಿ ಸಲಹೆ ನೀಡಿದ್ದಾರೆ ಎಂಬುದನ್ನು ಈವರೆಗೂ ತಿಳಿದವರಿಲ್ಲ.  ಅಧಿಕಾರ ಇರುವುದು ಜನ ಸೇವೆಗಾಗಿ ಅಲ್ಲ, ಅನುಭವಿಸುವುದಕ್ಕಾಗಿ ಎಂಬ ಭಂಡತನ ಈಗ ಎಲ್ಲರಲ್ಲೂ ಮನೆ ಮಾಡಿದೆ.

ಸರ್ಕಾರದ ಬೊಕ್ಕಸ ಖಾಲಿಯಾಗಿದ್ದರೂ ಸಾಲದ ಹಣ ತಂದು ಲಿಂಗಾಯತರ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ಧಿ ನಿಗಮ, ಬ್ರಾಹ್ಮಣರ ನಿಗಮ ಎಂಬ ಹೊಣೆಗೇಡಿತನ ನಿರ್ಧಾರಗಳಿಗೆ, ಅನುಭವ ಮಂಟಪ ಮತ್ತು ಪ್ರತಿಮೆಗಳೆಂಬ ವ್ಯರ್ಥ ಸ್ಥಾವರಗಳಿಗೆ ಹಣ ಸುರಿಯುತ್ತಿರುವ ಯಡಿಯೂರಪ್ಪನವರಿಗೆ ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಇಪ್ಪತ್ತೊಂದನೆಯ ಶತಮಾನದ ಬಸವಣ್ಣ ಎಂದು ಕರೆಯಿಸಿಕೊಳ್ಳುವ ಭ್ರಮೆ ಉಂಟಾಗಿದೆ.

ನಲವತ್ಮೂರು ಜಾತಿ ಮತ್ತು ಉಪಪಂಗಡಗಳಿರುವ ಅಲೆಮಾರಿ ಜನಾಂಗದ ಅಭಿವೃದ್ಧಿ ನಿಗಮಕ್ಕೆ ಈ ಬಾರಿಯ ಅನುದಾನದಲ್ಲಿ ಒಂದೇ ಒಂದು ರೂಪಾಯಿ ಹಣವನ್ನು ನೀಡಿಲ್ಲ. ದೊಂಬಿದಾಸರು, ಬುಡಬುಡಿಕೆ, ಕೋಲೆಬಸವ ಆಡಿಸುವವರು, ಹಕ್ಕಿಪಿಕ್ಕಿ ಜನಾಂಗ -ಹೀಗೆ ಅನೇಕ ಜನಾಂಗ ಒಂದೆಡೆ ಶಾಶ್ವತವಾಗಿ ನೆಲೆ ನಿಲ್ಲಲು ಈವರೆಗೆ ಸಾಧ್ಯವಾಗಿಲ್ಲ. ಅವರಿಗೆ ಆಧಾರ್ ಕಾರ್ಡ್, ಮತದಾನದ ಪತ್ರ ಇರದ ಕಾರಣ ಪಡಿತರ ಚೀಟಿಯಿಂದ ಹಿಡಿದು, ಉಚಿತ ಆರೋಗ್ಯ ಸೇವೆ ಹಾಗೂ ಇತರೆ ಎಲ್ಲಾ ಸೌಲತ್ತುಗಳಿಂದ ವಂಚಿತರಾಗಿ ತಬ್ಬಲಿಗಳಾಗಿ ಬದುಕುತ್ತಿದ್ದಾರೆ.

ಡಿ.ದೇವರಾಜ ಅರಸ್ ಅವರು ತಮ್ಮ  ಅಧಿಕಾರದ ಅವಧಿಯಲ್ಲಿ ಕಾರ್ಯದರ್ಶಿಗಳಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಸಿಖ್ ಜನಾಂಗದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದರು. ಅವರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಜೆ.ಸಿ.ಲೀನ್ ಒಂದು ಕಡೆ ಹೀಗೆ ಹೇಳಿದ್ದಾರೆ, “ಅರಸು ಅವರಿಗೆ ಕಾರಿನಲ್ಲಿ ಕುಳಿತರೂ ರಸ್ತೆಯ ಅಕ್ಕ-ಪಕ್ಕ ನೋಡುವುದು, ಹಸಿರು ಹೊಲಗದ್ದೆಗಳನ್ನು ವೀಕ್ಷಿಸುವುದು, ಕೆರೆಕಟ್ಟೆ ಮತ್ತು ನಾಲೆಗಳ ನೀರಿನ ಮಟ್ಟವನ್ನು ಗಮನಿಸುವುದು ಅವರ ಹವ್ಯಾಸವಾಗಿತ್ತು. ಹಾಗೆ ನೋಡುವ, ಕುತೂಹಲದ ಕಣ್ಣುಗಳ ರಾಜಕಾರಣಿಯನ್ನು ಮತ್ತು ಜನಸಾಮಾನ್ಯರ ಜೊತೆ ಬೆರೆತು ಹೋಗುತ್ತಿದ್ದ ಅವರ ವ್ಯಕ್ತಿತ್ವವನ್ನು ನಾನು ನನ್ನ ಸೇವೆಯ ಅವಧಿಯಲ್ಲಿ ಬೇರೊಬ್ಬರಲ್ಲಿ ಕಾಣಲು ಸಾಧ್ಯವಾಗಲಿಲ್ಲ”.

ಅರಸು ಅವರ ಕಾಲುಗಳು ಸದಾ ನೆಲದ ಮೇಲಿರುತ್ತಿದ್ದವು. ಹಾಗಾಗಿ ನೆಲಮೂಲ ಚಿಂತನೆ ಅವರ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿತ್ತು. ಸದಾ ಹೆಲಿಕಾಪ್ಟರ್‍ನಲ್ಲಿ ಹಾರಾಡುವ ಇಂದಿನ ಮುಖ್ಯಮಂತ್ರಿಗಳಿಗೆ ನೆಲದ ಜ್ವಲಂತ ಸಮಸ್ಯೆಗಳಾಗಲಿ ಅಥವಾ ಜನರ ಬವಣೆಗಳಾಗಲಿ ಅರ್ಥವಾಗಲು ಹೇಗೆ ಸಾಧ್ಯ? ಫೆಬ್ರವರಿ 27ರಂದು ಬಿ.ಎಸ್.ಯಡಿಯೂರಪ್ಪನವರ 78ನೇ ಜನ್ಮದಿನಾಚರಣೆಯ ಅಂಗವಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಪೂರ್ಣಪುಟದ ಜಾಹೀರಾತಿನಲ್ಲಿ ‘ಅಭಿವೃದ್ಧಿಯನ್ನು ಧÀರೆಗಿಳಿಸಿದ ಧೀಮಂತ ನಾಯಕ’ ಎಂದು ಹಾಡಿ ಹೊಗಳಿದ ವಾಕ್ಯ ಈ ಶತಮಾನದ ಕ್ರೂರ ವ್ಯಂಗ್ಯ ಮತ್ತು ಹಾಸ್ಯದಂತೆ ನನಗೆ ಭಾಸವಾಯಿತು.

*ಲೇಖಕರು ಮಂಡ್ಯ ಜಿಲ್ಲೆ ಕೊಪ್ಪ ಗ್ರಾಮದವರು; ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದ ಅನುಭವೀ ಪತ್ರಕರ್ತರು, ಮೈಸೂರಿನಲ್ಲಿ ವಾಸ.

 

Leave a Reply

Your email address will not be published.