ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ?

-ಪೃಥ್ವಿದತ್ತ ಚಂದ್ರಶೋಭಿ

ಅಧ್ಯಾಪಕ-ಸಂಶೋಧಕರನ್ನು ಸ್ವಾಯತ್ತ ಘಟಕವೆಂದು ಗುರುತಿಸುವ ಪ್ರಜಾಸತ್ತಾತ್ಮಕ ಸಂಸ್ಕೃತಿ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಬೇಕು. ಸ್ವಾಯತ್ತತೆ ಬೇಕಾಗಿರುವುದು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅದರಲ್ಲಿ ಕೆಲಸ ಮಾಡುವ ಅಧ್ಯಾಪಕ-ಸಂಶೋಧಕರಿಗೆ. ರಾಜಕೀಯ ಹಸ್ತಕ್ಷೇಪ ನಿಲ್ಲಬೇಕಿರುವುದು ಕುಲಪತಿಗಳು ಮತ್ತಿತರ ಅಧಿಕಾರವರ್ಗಗಳಿಗೆ ಮಾತ್ರವಲ್ಲ; ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು ಅಧ್ಯಾಪಕ-ಸಂಶೋಧಕರ ಕೆಲಸಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದೂ ನಿಲ್ಲಬೇಕು.

ವಿಪರ್ಯಾಸವೊಂದನ್ನು ಗಮನಿಸುವ ಮೂಲಕ ಈ ಬಾರಿಯ ಮುಖ್ಯ ಚರ್ಚೆಯನ್ನು ಪ್ರಾರಂಭಿಸಬಹುದು.

ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳನ್ನು ನಡೆಸಲು ಉತ್ಸುಕರಾಗಿರುವವರಿಗೆ 2020ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಂಪನ್ಮೂಲಗಳು ಲಭ್ಯವಿವೆ. ವಿದ್ಯಾರ್ಥಿ ವೇತನಗಳು ದೊರಕುತ್ತವೆ. ವಿಚಾರ ಸಂಕಿರಣಗಳನ್ನು ಆಯೋಜಿಸಲು ಮತ್ತು ಅವುಗಳಲ್ಲಿ ಭಾಗವಹಿಸಲು ಧನಸಹಾಯ ಸಿಗುತ್ತದೆ. ವಿದೇಶಗಳಲ್ಲಿ ಮಾತ್ರ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಕಷ್ಟವಲ್ಲ. ಮಾಡಿದ ಸಂಶೋಧನೆಗಳನ್ನು ಪ್ರಕಟಿಸಲು ಯಾವ ಸಮಸ್ಯೆಗಳೂ ಇಲ್ಲ. ಸಂಶೋಧನೆಗೆ ಅನುವು ಮಾಡಿಕೊಡುವ ವಿಶ್ವವಿದ್ಯಾನಿಲಯಗಳು, ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು, ಅಧಿಕೃತ ಮಾನ್ಯತೆ ಪಡೆದಿರುವ ಸಂಶೋಧನಾ ಸಂಸ್ಥೆಗಳು ಮತ್ತು ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿಯೆ ನೂರಾರು ಇವೆ.

ಈ ವಾಸ್ತವವನ್ನು ನೋಡಿದಾಗ, ಕರ್ನಾಟಕದ ಯಾವುದೆ ಮೂಲೆಯ ಕುಗ್ರಾಮದಿಂದಲೂ ನೂರು ಕಿಲೋಮೀಟರಿಗಿಂತ ಕಡಿಮೆ ದೂರದಲ್ಲಿ ಸಂಶೋಧನೆ ನಡೆಸಲು ಅವಕಾಶ ಸಿಗುವ ಯಾವುದಾದರೊಂದು ಅಧಿಕೃತ ಸಾರ್ವಜನಿಕ ವಿಶ್ವವಿದ್ಯಾನಿಲಯವೊಂದರಿಂದ ಮಾನ್ಯತೆ ಪಡೆದಿರುವ ಸಂಸ್ಥೆ ದೊರಕುತ್ತದೆ.

ಆದರೆ ಇಂದು ನಡೆಯುತ್ತಿರುವ ಸಂಶೋಧನೆಯ ಗುಣಮಟ್ಟ ಕಳಪೆಯೆನ್ನುವುದರ ಬಗ್ಗೆ ಹಾಗೂ ಅದರ ಉದ್ದೇಶರಾಹಿತ್ಯ ಸ್ವರೂಪದ ಬಗ್ಗೆ ಯಾವುದೆ ಅನುಮಾನಗಳು ಯಾರಲ್ಲಿಯೂ ಉಳಿದಿಲ್ಲ. ಕೆಲಸ ಗಳಿಸಲು, ಗಳಿಸಿದ ನಂತರ ವಾರ್ಷಿಕ ವರದಿಗಳನ್ನು ತುಂಬಿಸಲು ಹಾಗೂ ಬಡ್ತಿ ಪಡೆಯಲು ಅಗತ್ಯವಿರುವ ಸರ್ಕಸ್ ಮಾಡಲು ಸಂಶೋಧನೆಯ ಹೆಸರಿನ ಕೆಲಸಗಳು ನಡೆಯುತ್ತಿವೆ.

ಈ ಯಾವ ಕಾರ್ಯಚಟುವಟಿಕೆಗಳೂ ಸಹ ಯಾವ ಪುರುಷಾರ್ಥ ಸಾಧನೆಗೂ ಅಲ್ಲ ಎನ್ನುವ ಸ್ಪಷ್ಟ ಸಿನಿಕತನದ ಅಡಿಪಾಯವೊಂದು ಸಂಶೋಧನಾ ಸೌಧದ ಕಟ್ಟುವಿಕೆಯಲ್ಲಿ ಮುಖ್ಯವಾಗಿ ಗೋಚರಿಸುತ್ತದೆ. ಹಾಗಾಗಿ ಈ ಮೇಲಿನ ವಾಕ್ಯಗಳನ್ನು ಬರೆಯುವಾಗ, ‘ಬೀಟಿಂಗ್ ದ ಡೆಡ್ ಹಾರ್ಸ್’ (ಸತ್ತ ಕುದುರೆಯನ್ನು ಹೊಡೆಯುವುದು) ಎನ್ನುವ ನಮ್ಮ ಇಂದಿನ ಚರ್ಚೆಯ ನಿರರ್ಥಕತೆಯನ್ನು ನೆನಪಿಸುವ ಇಂಗ್ಲಿಷಿನ ನಾಣ್ಣುಡಿಯೊಂದು ಮನಸ್ಸಿನಲ್ಲಿ ಕಸಿವಿಸಿ ಮಾಡುತ್ತಲೆ ಇರುತ್ತದೆ.

ಈ ಪರಿಸ್ಥಿತಿಗೆ ಕಾರಣಗಳೇನು? ಪರಿಹಾರಗಳು ಏನಾದರೂ ಇವೆಯೆ? ಇಂತಹ ಸರಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಎರಡು ಸ್ಪಷ್ಟೀಕರಣಗಳನ್ನು ಕೊಟ್ಟುಕೊಳ್ಳಬೇಕು.

2

ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳ ಕಳಪೆ ಗುಣಮಟ್ಟವನ್ನು ಪ್ರಸ್ತಾಪಿಸಿದ ಮರುಕ್ಷಣದಲ್ಲಿಯೇ ವಿಶ್ವವಿದ್ಯಾನಿಲಯಗಳ ಸಾಂಸ್ಥಿಕ ನೆಲೆ ಮತ್ತು ಅವುಗಳ ಅಗತ್ಯಗಳನ್ನೆ ಪ್ರಶ್ನಿಸುವ ಮತ್ತೊಂದು ರೆಟಾರಿಕಲ್ ವಾದವನ್ನೂ ಕೆಲವರು ಮುಂದಿಡುತ್ತಾರೆ.

ಈ ವಿಷಯವನ್ನು ಪ್ರಾರಂಭದಲ್ಲಿಯೆ ಪ್ರಸ್ತಾಪಿಸುತ್ತಿರುವುದಕ್ಕೆ ಒಂದು ಕಾರಣವಿದೆ. ವಿಶ್ವವಿದ್ಯಾನಿಲಯಗಳು ದಂತ ಗೋಪುರಗಳು, ಜನಸಾಮಾನ್ಯರಿಂದ ದೂರವಿರುವ ಸಂಸ್ಥೆಗಳು ಎನ್ನುವ ಸಾಮಾನ್ಯ ಆಪಾದನೆ ಇದೆ. ಆಚರಣೆಯಲ್ಲಿ ವಿಶ್ವವಿದ್ಯಾನಿಲಯಗಳು ಈ ಆಪಾದನೆಯನ್ನು ಸರಿಯಿರಬೇಕು ಎನ್ನುವ ಅನುಮಾನ ಬರುವಂತೆ ನಡೆದುಕೊಂಡಿವೆ ಎನ್ನುವುದು ಸತ್ಯವೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಕೇಳಿಬರುವ ದೂರು.

ಈ ಆಪಾದನೆಯು ಒಂದೆಡೆ ಬೌದ್ಧಿಕತೆಯ ಬದುಕಿನ ಬಗ್ಗೆಯೆ ಅನುಮಾನಗಳನ್ನು ಹೊಂದಿರುವ ನೆಲೆಯಿಂದ ಹೊರಡುತ್ತದೆ. ಬೌದ್ಧಿಕತೆ ಅನುಪಯುಕ್ತ, ಸಮಾಜಮುಖಿ ಚಿಂತನೆ ಮತ್ತು ಸಂಶೋಧನೆಗಳು ಜನರ ಮಧ್ಯದಿಂದಲೆ ಮೂಡುತ್ತವೆ. ಈ ಕೆಲಸಕ್ಕೆ ವಿಶ್ವವಿದ್ಯಾನಿಲಯಗಳ ಅಗತ್ಯವಿಲ್ಲ. ವಿಶ್ವವಿದ್ಯಾನಿಲಯಗಳಿಗೂ ಅವುಗಳು ನೆಲೆಹೊಂದಿರುವ ಸಮಾಜಕ್ಕೂ ಯಾವುದೆ ಸಂಬಂಧವಿರುವುದಿಲ್ಲ. ಈ ಸಂಸ್ಥೆಗಳಿಂದ ಯಾವುದೆ ಉಪಯುಕ್ತವಾದ ಸೃಜನಾತ್ಮಕವಾದ ಮತ್ತು ತಾತ್ವಿಕವಾದ ಚಿಂತನೆಗಳು ಬರಲು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪುವುದು ಸ್ವಲ್ಪ ಕಷ್ಟವೆ.

ಸೋಜಿಗದ ವಿಷಯವೆಂದರೆ ಈ ಮೇಲಿನ ಆಪಾದನೆಗಳನ್ನು ಮಾಡುವವರು ಹೊರಗಿನವರಲ್ಲ. ಬದಲಿಗೆ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಮೂರು-ನಾಲ್ಕು ದಶಕಗಳ ಕಾಲ ನೌಕರಿ ಮಾಡಿ, ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಬದುಕುಗಳನ್ನು ಕಟ್ಟಿಕೊಂಡವರು. ಬೌದ್ಧಿಕ ಮತ್ತು ಸಂಶೋಧನಾ ಚಟುವಟಿಕೆಗಳು ಹಾಗೂ ವಿಶ್ವವಿದ್ಯಾನಿಲಯಗಳಂತಹ ಸಂಸ್ಥೆಗಳು ಅನುಪಯುಕ್ತವೆನ್ನುವ ಬಹುತೇಕ ಟೀಕಾಕಾರರು ಅವುಗಳಿಂದ ಹೊರಬಂದು ಪರ್ಯಾಯ ಚಿಂತನಾಕ್ರಮಗಳನ್ನು ರೂಪಿಸುವ ನೈತಿಕ ಧೈರ್ಯವನ್ನೇನು ತೋರಿಸಿಲ್ಲ.

ಈ ಅಂಶವನ್ನು ಇಲ್ಲಿ ಪ್ರಸ್ತಾಪಿಸಲು ಒಂದು ಸರಳ ಕಾರಣವಿದೆ. ಅದೇನೆಂದರೆ ವಿಶ್ವವಿದ್ಯಾನಿಲಯಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು ನಮ್ಮ ಸಮಾಜಕ್ಕೆ ಅಗತ್ಯವಾದ ಜ್ಞಾನ, ತಿಳಿವಳಿಕೆ ಮತ್ತು ಚಿಂತನೆಗಳನ್ನು ಒದಗಿಸುವ ರೀತಿಯಲ್ಲಿ ರೂಪುಗೊಳ್ಳಬಹುದು ಎನ್ನುವ ವೈಯಕ್ತಿಕ ನಂಬಿಕೆ ನನ್ನಲ್ಲಿದೆ. ಅದಿಲ್ಲದಿದ್ದರೆ ವಿದ್ಯಾರ್ಥಿ, ಸಂಶೋಧಕ ಮತ್ತು ಉಪನ್ಯಾಸಕನಾಗಿ ನನ್ನ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ನನಗಿರಲಿಲ್ಲ.

ವೈಯಕ್ತಿಕ ನೆಲೆಯ ನಂಬಿಕೆ ಒಂದೆಡೆ ಇರಲಿ. ಕಳೆದ ನೂರೈವತ್ತು ವರ್ಷಗಳ ಜಾಗತಿಕ ಇತಿಹಾಸವನ್ನು ಅವಲೋಕಿಸಿದರೆ, ವಿಶ್ವವಿದ್ಯಾನಿಲಯಗಳು ಹೊಸ ಜ್ಞಾನ, ತಿಳಿವಳಿಕೆ ಮತ್ತು ತಂತ್ರಜ್ಞಾನಗಳನ್ನು ಹುಟ್ಟುಹಾಕುವ ಬಹುಮುಖ್ಯ ಸಂಸ್ಥೆಗಳಾಗಿವೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾಗಿ, ವಿಶ್ವವಿದ್ಯಾನಿಲಯಗಳಾಗಲಿ, ಅವುಗಳಲ್ಲಿ ಸಂಶೋಧನಾ ಚಟುವಟಿಕೆಗಳಾಗಲಿ ಅನಗತ್ಯ ಎನ್ನುವ ವಾದವನ್ನು ನಾವು ಇಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ.

3

ನನ್ನ ಎರಡನೆಯ ಸ್ಪಷ್ಟೀಕರಣವು ನಮ್ಮಲ್ಲಿರಬೇಕಾದ ಬೌದ್ಧಿಕ ಮಹತ್ವಾಕಾಂಕ್ಷೆಗೆ ಸಂಬಂಧಿಸಿದುದು. ಅಂದರೆ ವಿಶ್ವವಿದ್ಯಾನಿಲಯಗಳಲ್ಲಿ ನಡೆಯಬೇಕಾದ ಸಂಶೋಧನೆಗಳು ಯಾವ ಪ್ರಶ್ನೆಗಳನ್ನು ಕೇಂದ್ರದಲ್ಲಿರಿಸಿಕೊಳ್ಳಬೇಕು, ಏನನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಎರಡು ಆಯಾಮಗಳನ್ನು ನಾವು ಗಮನಿಸಬೇಕು.

ಮೊದಲಿಗೆ, ಕನ್ನಡ ಮತ್ತು ಕರ್ನಾಟಕಗಳು ನಮ್ಮ ಬೌದ್ಧಿಕ ಮತ್ತು ಜ್ಞಾನಸೃಷ್ಟಿ ಚಟುವಟಿಕೆಗಳ ಕೇಂದ್ರದಲ್ಲಿ ನಿಸ್ಸಂದೇಹವಾಗಿ ಇರುತ್ತವೆ ಎನ್ನುವುದು ನಿಜ. ಹಾಗಾಗಿ, ನಾಡು-ನುಡಿಗಳ ಭೂತ, ವರ್ತಮಾನಗಳ ವಾಸ್ತವ ಹಾಗೂ ಭವಿಷ್ಯದ ಸಾಧ್ಯತೆಗಳ ಬಗ್ಗೆ ಸಂಶೋಧನೆ ಮತ್ತು ಚಿಂತನೆಗಳನ್ನು ನಡೆಸುವುದು ಅವಶ್ಯಕ. ಇಂತಹ ಸಂಶೋಧನಾ ಯೋಜನೆಗಳು ಹಲವು ವಿಧದವು ಆಗಬಹುದು. ಉದಾಹರಣೆಗೆ, ಶ್ರವಣಬೆಳಗೊಳದ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರಲಿ, ಬಳ್ಳಾರಿ ಜಿಲ್ಲೆಯ ಕರಡಿಗಳ ಅಧ್ಯಯನವಿರಲಿ, ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಬಗೆಗಿನ ತಿಳಿವಳಿಕೆಯಿರಲಿ, ಪಂಪನ ಕಾವ್ಯದ ಓದಿರಲಿ, ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಮಾದರಿಗಳಿರಲಿ – ಇವೆಲ್ಲವೂ ನಮಗೆ ಅವಶ್ಯಕವಾದವು.

ಇದರ ಜೊತೆಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಭಾಷೆ ಹೇಗೆ ಕೆಲಸ ಮಾಡುತ್ತದೆ? ನಾವಿರುವ ಬ್ರಹ್ಮಾಂಡದ ಸ್ವರೂಪವೇನು? ಸಮಾನತೆಯನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆ? ನಾನೊ ತಂತ್ರಜ್ಞಾನದ ಹೊಸ ಸಾಧ್ಯತೆಗಳು ಯಾವುವು? ಬಂಡವಾಳಶಾಹಿಯ ಗುಣಲಕ್ಷಣಗಳು ಏನು? ಇಂತಹ ಪ್ರಾಥಮಿಕ ಪ್ರಶ್ನೆಗಳಿಗೂ ನಾವು ಉತ್ತರ ಕಂಡುಕೊಳ್ಳುವ ದಾರ್ಷ್ಟ್ಯ ತೋರಿಸುವುದು ಅಗತ್ಯವಿದೆ. ಇಲ್ಲದಿದ್ದರೆ ಕರ್ನಾಟಕದಷ್ಟೆ ದೊಡ್ಡದಿರುವ ಫ಼್ರಾನ್ಸ್ ಅಥವಾ ಜರ್ಮನಿಯ ಚಿಂತಕರನ್ನು ಉಲ್ಲೇಖಿಸುತ್ತ ಮೂರನೆಯ ದರ್ಜೆಯ ಮನಸ್ಸುಗಳಾಗಿ ನಾವು ಉಳಿಯುತ್ತೇವೆ. ಸಮರ್ಥ ಸಮಾಜವಿಜ್ಞಾನಿಗಳಾಗುವುದು ಅಷ್ಟೇ ನಮ್ಮ ಗುರಿಯಾದರೆ ಸಾಲದು. ಬದಲಿಗೆ ಚಿಂತನೆಯ ಮೂಲಮಾದರಿಗಳನ್ನು ಸೃಜಿಸುವ ಸಾಮರ್ಥ್ಯ, ಮಹತ್ವಾಕಾಂಕ್ಷೆಗಳು ಸಹ ನಮ್ಮದಾಗಬೇಕು.

ಈ ನೆಲೆಯಿಂದ ನಮ್ಮ ಇಂದಿನ ವಾಸ್ತವವನ್ನು ಮಾತ್ರವಲ್ಲ, ಕರ್ನಾಟಕದ ವಿಶ್ವವಿದ್ಯಾನಿಲಯಗಳ ಸಾಧನೆಗಳನ್ನು ಪ್ರಾರಂಭದ ದಿನಗಳಿಂದ ಪರೀಕ್ಷಿಸಿಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಒಂದು ಅಂಶವು ಸ್ಪಷ್ಟವಾಗುತ್ತದೆ. ನಾವು ನೆನಪಿಸಿಕೊಳ್ಳುವಂತಹ ಅತ್ಯುತ್ತಮ ಮಟ್ಟದ ವಿದ್ವಾಂಸರು ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುತ್ತಿದ್ದಾಗಲೂ, ನಮ್ಮ ಗುಣಮಟ್ಟ ಸಮರ್ಥವಾಗಿತ್ತೆ ಹೊರತು ಜಾಗತಿಕ ಮಟ್ಟವನ್ನು ತಲುಪಿರಲಿಲ್ಲ. ಅಂದರೆ ಡಾ.ರಾಧಾಕೃಷ್ಣನ್, ತೀನಂಶ್ರೀ, ಭೌತಶಾಸ್ತ್ರಜ್ಞ ಶಿವರಾಮಕೃಷ್ಣ ಚಂದ್ರಶೇಖರ್, ತತ್ವಶಾಸ್ತ್ರಜ್ಞ ಕೆ.ಜೆ.ಷಾ, ಅರ್ಥಶಾಸ್ತ್ರಜ್ಞ ವೆಂಕಟಗಿರಿಗೌಡ ಮತ್ತು ಷ.ಶೆಟ್ಟರ್ ಮೊದಲಾದ ವಿದ್ವಾಂಸರು ಸಹ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಸಂಶೋಧನೆಯ ಸಂಸ್ಕೃತಿಯನ್ನು ಪಶ್ಚಿಮದ ಅತ್ಯುತ್ತಮ ಸಂಸ್ಥೆಗಳ ಮಟ್ಟವನ್ನು ತಲುಪುವಂತೆ ಮಾಡಲು ಆಗಿರಲಿಲ್ಲ.

ಆಗ ಸಹ ನಮ್ಮಲ್ಲಿ ನಡೆಯುತ್ತಿದ್ದ ಸಂಶೋಧನೆ ಸಮರ್ಥವಾಗಿತ್ತು. ಅಂದರೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದ್ದ ಸಂಶೋಧನೆಗಳಿಗೆ ಪ್ರತಿಕ್ರಿಯಿಸುವ, ಆ ಗುಣಮಟ್ಟದ ಕೆಲಸವನ್ನು ಇಲ್ಲಿ ಸ್ವತಃ ತಾವು ಮಾಡತಕ್ಕವರಾಗಿದ್ದರು. ಆದರೆ ಇಲ್ಲಿ ಜಗತ್ತೆ ನಮ್ಮತ್ತ ನೋಡುವಂತಹ ಹೊಸ ವಿಚಾರಗಳು ಹೊರಬರಲಿಲ್ಲ. ಯಾವುದೆ ಅಧ್ಯಯನ ಶಿಸ್ತಿಗೆ ಹೊಸತಿರುವನ್ನು ಕೊಡುವ ಚಿಂತನೆ, ಸಂಶೋಧನೆಗಳು ನಮ್ಮಲ್ಲಿ ಸೃಷ್ಟಿಯಾಗಲಿಲ್ಲ. ಅಂತಹ ಕೆಲಸ ನಡೆಯಲು ಅಗತ್ಯವಾದ ರೀತಿಯ ಸಂಸ್ಥೆಗಳನ್ನು, ಸಾಂಸ್ಥಿಕ ಸಂಸ್ಕೃತಿಗಳನ್ನು ನಾವು ಕಟ್ಟಿಕೊಳ್ಳಲಿಲ್ಲ.

ಅಂದರೆ ಸಂಶೋಧನೆಯ ನಮ್ಮ ಪರಂಪರೆ ಸಹ ಸಮರ್ಥವಾದುದು ಎನ್ನುವಾಗಲೂ ಸಹ, ಸಾಧಾರಣ ಗುಣಮಟ್ಟದ್ದು ಮಾತ್ರ. ಈ ಮಾತು ಕರ್ನಾಟಕ-ಕನ್ನಡಗಳ ಬಗೆಗಿನ ಸಂಶೋಧನೆಯ ಸಂದರ್ಭದಲ್ಲಿಯೂ ನಿಜ ಎನ್ನುವುದನ್ನು ಇಲ್ಲಿ ವಿಶೇಷವಾಗಿ ಗುರುತಿಸಬೇಕು.

4

ಸಂಶೋಧನೆ-ಬೌದ್ಧಿಕತೆಗಳ ಸಂಸ್ಕೃತಿ ನಮ್ಮಲ್ಲಿ ಇದೆಯೆ ಎನ್ನುವುದಕ್ಕೆ ಒಂದು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತೇನೆ. ಕರ್ನಾಟಕದ ವಿಶ್ವವಿದ್ಯಾನಿಲಯವೊಂದರಲ್ಲಿ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ನನ್ನ ವಿಭಾಗದ ಮುಖ್ಯಸ್ಥರು ನನಗೆ ಒಂದು ಕಿವಿಮಾತು ಹೇಳಿದರು: “ನೀವು ಓದುವುದು-ಬರೆಯುವುದು-ಸಂಶೋಧನೆ ಇವುಗಳನ್ನೆಲ್ಲ ಮನೆಯಲ್ಲಿ ಮಾಡಿಕೊಳ್ಳಿ. ವಿಭಾಗದ ನಿಮ್ಮ ಕಚೇರಿಯಲ್ಲಿ ಇರುವಾಗ, ವಿಶ್ವವಿದ್ಯಾನಿಲಯದ ಕೆಲಸ ಮಾಡಬೇಕು.”

ನನಗೆ ಇಂದಿಗೂ ಅವರ ಮಾತು ಅರ್ಥವಾಗಿಲ್ಲ. ಸುಮಾರು ನಾಲ್ಕು ದಶಕಗಳ ಕಾಲ ಸ್ನಾತಕೋತ್ತರ ವಿಭಾಗವೊಂದರಲ್ಲಿ ಕೆಲಸ ಮಾಡಿದ್ದ ಆ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯದ ಕೆಲಸವೆಂದರೆ ಏನು ಎಂದು ಗ್ರಹಿಸಿದ್ದರು ಎನ್ನುವುದು ಯಕ್ಷಪ್ರಶ್ನೆ. ಪಾಠ ಮಾಡುವುದು-ಬರೆಯುವುದು, ಮೌಲ್ಯಮಾಪನ ಮಾಡುವುದು ಇವುಗಳನ್ನು ಸರ್ವೆಸಾಮಾನ್ಯವಾಗಿ ಮಾಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ. ಸ್ನಾತಕೋತ್ತರ ವಿಭಾಗದಲ್ಲಿ, ಅದರಲ್ಲಿಯೂ ಸಂಶೋಧಕ ವಿದ್ಯಾರ್ಥಿಗಳು ಸಹ ಇರುವ ಸಂದರ್ಭಗಳಲ್ಲಿ, ಓದು-ಬರಹ-ಕ್ಷೇತ್ರಕಾರ್ಯಗಳನ್ನು ಮಾಡುವುದು ಒಬ್ಬ ಅಧ್ಯಾಪಕನ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಭಾಗ ಎನ್ನುವುದನ್ನು ಸುಲಭವಾಗಿ ಮರೆತುಬಿಟ್ಟಿದ್ದೇವೆ.

ಕರ್ನಾಟಕದಲ್ಲಿ ಯಾವುದೆ ಅಧ್ಯಾಪಕರನ್ನು ಕೇಳಿದರೂ ನಾನು ಮೇಲೆ ಉಲ್ಲೇಖಿಸಿದ ರೀತಿಯ ನೂರಾರು – ಸಾವಿರಾರು ಉದಾಹರಣೆಗಳನ್ನು ನೀಡುತ್ತಾರೆ. ಇವುಗಳಲ್ಲಿ ಕೆಲವು ಗಂಭೀರ ಸಂಶೋಧಕರಿಗೆ ಅಡಚಣೆ ಮಾಡುವ ಬಗೆಯ ಕಥೆಗಳಾಗಿರುತ್ತವೆ. ಸ್ವಲ್ಪ ಕನ್ನಡ-ಇಂಗ್ಲಿಷ್ ಭಾಷೆಗಳೆರಡರಲ್ಲಿ ಬರೆಯಲು ಬರುವವರು ತಮ್ಮ ಸಂಸ್ಥೆಯ ಎಲ್ಲ ಟಪಾಲುಗಳಿಗೆ ಉತ್ತರಿಸುವ, ವರದಿಗಳನ್ನು ತಯಾರಿಸುವ ಜವಾಬ್ದಾರಿಯನ್ನು ಪಡೆಯುತ್ತಾರೆ. ಬಹುಶಃ ನನ್ನ ವಿಭಾಗ ಮುಖ್ಯಸ್ಥರು ಹೇಳಿದ ವಿಶ್ವವಿದ್ಯಾನಿಲಯದ ಕೆಲಸವೆಂದರೆ ಇದೆ ಇರಬೇಕು. ನಾನು ಸಹ ಸಂಶೋಧನೆಯಲ್ಲಿ ತೊಡಗಿಸಿಕೊಂಡದ್ದಕ್ಕಿಂತ ಹೆಚ್ಚು ಸಮಯವನ್ನು ಸಂಶೋಧನೆ ಚಟುವಟಿಕೆಗಳಲ್ಲಿ ಏನು ನಡೆದಿವೆ ಎನ್ನುವ ವರದಿ ಬರೆಯುವ ಕೆಲಸಕ್ಕೆ ವಿನಿಯೋಗಿಸಿದ್ದೇನೆ. 

ಮತ್ತೆ ಕೆಲವು ಉದಾಹರಣೆಗಳು ಬೌದ್ಧಿಕ ಕೆಲಸಗಳು ಇಂದು ಹೇಗೆ ತಾಂತ್ರಿಕ ಪ್ರಕ್ರಿಯೆಗಳಾಗಿವೆ ಎನ್ನುವುದನ್ನು ತೋರಿಸುವಂತಹವು ಆಗಿವೆ. ಈ ಬಗೆಯ ತಾಂತ್ರಿಕತೆಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಕೆಲವು ನೀತಿಗಳು ಸಹ ಪ್ರೋತ್ಸಾಹಿಸುತ್ತವೆ. ಗುಣಮಟ್ಟಕ್ಕಿಂತ ಸಂಖ್ಯೆಗಳಿಗೆ ಹೆಚ್ಚು ಮಹತ್ವ ನೀಡುವ ಯು.ಜಿ.ಸಿ.ಯ ನೇಮಕಾತಿ ಮತ್ತು ಬಡ್ತಿ ನೀತಿಗಳು ಸಂಶೋಧನಾ ಸಂಸ್ಕೃತಿಗೆ ನೀಡಿರುವ ಹೊಡೆತ ಅಷ್ಟಿಷ್ಟಲ್ಲ. ವಿಚಾರಸಂಕಿರಣಗಳನ್ನು ಆಯೋಜಿಸುವ ಮತ್ತು ಭಾಗವಹಿಸುವ ಕುಶಾಲಿನಲ್ಲಿ ಎಲ್ಲರೂ ಇದ್ದಾರೆ. ಈ ಚಟುವಟಿಕೆಗಳಿಗೆ ಧನಸಹಾಯ ಮಾಡುವ ಸಂಸ್ಥೆಗಳೂ ಸಾಕಷ್ಟಿವೆ. ಹಾಗಾಗಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ.

ಈ ಮೇಲಿನ ಮಾತುಗಳೆಲ್ಲವೂ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಸ್ಕೃತಿಗೆ ಸಂಬಂಧಿಸಿದುವು. ಈ ವಿಷಯದ ಬಗ್ಗೆಯೆ ನೂರಾರು ಪುಟಗಳನ್ನು ಬರೆಯಬಹುದಾಗಿರುವಂತಹ ರೋಚಕ ಕಥೆಗಳು ಎಲ್ಲೆಡೆ ತೇಲಾಡುತ್ತಿರುತ್ತವೆ.

5

ಕೆಲವು ಸಮರ್ಥ ವಿದ್ವಾಂಸರನ್ನು ಹೊರತುಪಡಿಸಿದರೆ, ಮಿಕ್ಕಂತೆ ಸಾಮಾನ್ಯವಾಗಿ ಕರ್ನಾಟಕದ ಸಂಶೋಧನ ವಿದ್ಯಾರ್ಥಿಗಳಿಗೆ ದೊರಕುವ ಮಾರ್ಗದರ್ಶಕರೆ ಉತ್ತಮವಾದ ಸಂಶೋಧನಾ ಸಂಸ್ಕೃತಿಯನ್ನು ಕಟ್ಟಲು ಇರುವ ಬಹುಮುಖ್ಯ ಅಡಚಣೆ. ಒಂದು ಪುಟ ವಿಶ್ಲೇಷಣಾತ್ಮಕ ಗದ್ಯವನ್ನು ಯಾವುದೆ ಭಾಷೆಯಲ್ಲಿ ಬರೆಯುವ ಸಾಮರ್ಥ್ಯವಿಲ್ಲದ ಅಧ್ಯಾಪಕರನ್ನು ವಿಶ್ವವಿದ್ಯಾನಿಲಯಗಳಲ್ಲಿ ನಾನು ನೋಡಿದ್ದೇನೆ. ಉತ್ತಮ ಸಂಶೋಧನ ಲೇಖನವೊಂದನ್ನು ಓದಿ, ವಿವರಿಸಬಲ್ಲ ಸಾಮರ್ಥ್ಯವಿಲ್ಲದವರೂ ಇದ್ದಾರೆ. ಇವರ ಸಂಖ್ಯೆಯೆಷ್ಟಿದೆ ಎನ್ನುವ ಅಂದಾಜು ಬೇಕೆಂದರೆ ಕರ್ನಾಟಕ ಮತ್ತು ಕನ್ನಡದ ಬಗ್ಗೆ ನೀವು ಓದಿರುವ ಗಂಭೀರ ಲೇಖಕರ ಪಟ್ಟಿಯನ್ನು ನೀವೆ ಮಾಡಿಕೊಳ್ಳಿ. ಕರ್ನಾಟಕದಲ್ಲಿ ಸುಮಾರು ಮೂವತ್ತರಷ್ಟು ವಿಶ್ವವಿದ್ಯಾನಿಲಯಗಳು, ಸಾವಿರಾರು ಪ್ರಥಮ ದರ್ಜೆ ಕಾಲೇಜುಗಳು ಇವೆ. ಅವುಗಳಲ್ಲಿ ಸ್ನಾತಕೋತ್ತರ ವಿಭಾಗಗಳಲ್ಲಿ ಪಾಠ ಮಾಡುವವರನ್ನು ಮಾತ್ರ ಲೆಕ್ಕ ಹಾಕಿದರೂ, ಹಲವು ಸಾವಿರ ಅಧ್ಯಾಪಕರು ನಿಮಗೆ ದೊರಕುತ್ತಾರೆ. ಅವರಲ್ಲಿರುವ ಹಲವು ಸಮರ್ಥರಿಗೆ ಅಡಚಣೆ ಮಾಡುವ ಸಂಸ್ಕೃತಿ ವ್ಯಾಪಕವಾಗಿ ನೆಲೆಮಾಡಿದೆ ಎನ್ನುವುದನ್ನು ಮೇಲೆ ಹೇಳಿದೆ.

ಆದರೆ ಮಾರ್ಗದರ್ಶಕರ ಸಮಸ್ಯೆಯನ್ನು ಕೇವಲ ವ್ಯವಸ್ಥೆ ಮತ್ತು ಸಂಸ್ಕೃತಿಗಳ ಮೇಲೆ ಹೇರಲು ಸಾಧ್ಯವಿಲ್ಲ. ಅವರ ಅಸಾಮರ್ಥ್ಯ, ಭ್ರಷ್ಟತೆ, ಅನಾಸಕ್ತಿ, ಲೈಂಗಿಕ ದೌರ್ಜನ್ಯ ಇವುಗಳೆಲ್ಲವನ್ನೂ ಎತ್ತಿಹಿಡಿಯುವ ಅಸಂಖ್ಯಾತ ಕಥೆಗಳು ಎಲ್ಲೆಡೆ ಕೇಳಿಬರುತ್ತವೆ. ಇತ್ತೀಚಿನ ದಶಕಗಳಲ್ಲಿ ವಿಶ್ವವಿದ್ಯಾನಿಲಯದೊಳಗೆ ಅಧ್ಯಾಪಕರಾಗಿ ಬರುವ ಪ್ರಕ್ರಿಯೆಯೆ ಸಂಪೂರ್ಣವಾಗಿ ಭ್ರಷ್ಟವಾಗಿರುವ ಹಿನ್ನೆಲೆಯಲ್ಲಿ, ಸಂಶೋಧನಾ ವಿದ್ಯಾರ್ಥಿಗಳನ್ನು ಆದಾಯ ಮೂಲವಾಗಿ ಅಥವಾ ಉಚಿತ ಸೇವೆ ಒದಗಿಸುವ ಕೂಲಿಗಳಾಗಿ ನೋಡುವ ಮನೋಭಾವವೂ ಸಹ ನೆಲೆಮಾಡಿದೆ.

ಇಂತಹ ಸಂದರ್ಭದಲ್ಲಿ ಯಾವುದೆ ಬಗೆಯ ಸತ್ಯದ ಹುಡುಕಾಟ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಮೂಡಿದರೆ ಅದು ಸಹಜವೆ. ಹಣ-ಪ್ರಭಾವಗಳ ಮೂಲಕ ಒಬ್ಬ ವ್ಯಕ್ತಿ ಒಳಗೆ ಬಂದರೂ ಸಾಕು ವ್ಯವಸ್ಥೆ ಶಿಥಿಲವಾಗುವುದು ಪ್ರಾರಂಭವಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಈಗಿರುವಂತೆ ಉತ್ತಮ ಸಂಶೋಧನಾ ಕೌಶಲದಿಂದ ಏನಾದರೂ ಉಪಯೋಗವಾಗುತ್ತದೆ ಎನ್ನುವ ಆಶಾವಾದ ಯಾವ ಯುವ ವಿದ್ಯಾರ್ಥಿಯಲ್ಲಿಯೂ ಇಲ್ಲ. ಕಲಿಯಬೇಕು ಎನ್ನುವ ಆಸೆಯಿದ್ದರೆ ಅದು ಕೇವಲ ಆತ್ಮಸಂತೋಷಕ್ಕೆ ಹೊರತು ಅದರಿಂದ ವೃತ್ತಿಜೀವನದಲ್ಲಿ ಬೆಳೆಯಲು ಅವಕಾಶವಾಗುತ್ತದೆ ಎಂದು ಯಾರೂ ನಂಬಿಲ್ಲ.

6

ಮೇಲಿನ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಜೊತೆಗೆ ಗಂಭೀರವಾದ ಮತ್ತೊಂದು ಅಂಶವನ್ನು ಪ್ರಸ್ತಾಪಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಬೋಧನೆ ಮತ್ತು ಸಂಶೋಧನೆಗಳನ್ನು ಹತ್ತಿರದಿಂದ ಅಭ್ಯಸಿಸಿದಾಗ ನನಗೆ ಅರಿವಾದ ಸತ್ಯವಿದು: ನಾವು ಅಧ್ಯಯನಶಿಸ್ತುಗಳು ಎಂದು ಇಲ್ಲಿ ಏನನ್ನು ಕಲಿಸುತ್ತಿದ್ದೇವೆಯೊ ಅದಕ್ಕೂ ಅದೇ ಹೆಸರಿನಲ್ಲಿ ಜಗತ್ತಿನ ಇತರ ಭಾಗಗಳಲ್ಲಿ ಕಲಿಸುತ್ತಿರುವ ವಿಷಯಕ್ಕೂ ಏನೂ ಸಂಬಂಧವಿಲ್ಲ.

ನನ್ನ ಮೇಲಿನ ಮಾತಿನ ಸರಳ ವಿವರಣೆಯಿಷ್ಟೆ. ನನ್ನ ವಿಶೇಷ ಪರಿಣತಿಯ ವಿಷಯವಾದ ಇತಿಹಾಸವನ್ನು ತೆಗೆದುಕೊಳ್ಳೋಣ. ಸಾಮಾನ್ಯವಾಗಿ ನಮಗೆ ಕೇಳಿಬರುವ ದೂರೆಂದರೆ ನಮ್ಮ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮ ಹಳೆಯದು ಎನ್ನುವುದು. ನಮ್ಮ ಸಮಸ್ಯೆ ಬರಿ ಇಷ್ಟೆ ಆಗಿದ್ದರೆ ಪರಿಹಾರಗಳು ಸುಲಭ ಸಾಧ್ಯವಾಗಿರುತ್ತಿದ್ದವು. ಆದರೆ ಇತಿಹಾಸವೆಂದು ನಾವು ಕಲಿಸುತ್ತಿರುವ ವಿಷಯಗಳಿಗೆ, ಸೃಷ್ಟಿ ಮಾಡುತ್ತಿರುವ ಹೊಸ ಜ್ಞಾನಕ್ಕೆ ಹೊರಗಿನ ಪ್ರಪಂಚದಲ್ಲಿ ನಡೆಯುತ್ತಿರುವ ಬೌದ್ಧಿಕ ಚಟುವಟಿಕೆಗಳಿಗೂ ಯಾವುದೆ ಸಂಬಂಧವಿಲ್ಲ. ಇದರ ಪರಿಣಾಮವೆಂದರೆ ನಮ್ಮಲ್ಲಿ ನಡೆಯುವ ಸಂಶೋಧನೆಗಳ ಜ್ಞಾನಸೃಷ್ಟಿಯ ನೆಲೆಗಳೇನು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಇತಿಹಾಸದ ಸಂಶೋಧನೆಯಲ್ಲಿ ಸತ್ಯ ಮತ್ತು ಜ್ಞಾನ ಎಂದು ಯಾವುದನ್ನು ಗುರುತಿಸಬೇಕು ಎಂದರೆ ವಿಶ್ಲೇಷಣೆಯ ನೆಲೆಗಳು ಅಸ್ಪಷ್ಟವಾಗಿವೆ.

ಒಂದೆರಡು ಉದಾಹರಣೆಗಳನ್ನು ಗಮನಿಸೋಣ. ಹಲವು ಕನ್ನಡದ ಹಿರಿಯ ವಿದ್ವಾಂಸರು ಕನ್ನಡನಾಡಿನ ಗಡಿಗಳನ್ನು ಗೋದಾವರಿ ನದಿಯವರೆಗೆ ಎಂದು ವಾದಿಸುತ್ತಾರೆ. ಕವಿರಾಜಮಾರ್ಗಕಾರನೂ ಸೇರಿದಂತೆ ಹಲವು ಆಕರಗಳನ್ನು ಈ ವಾದಕ್ಕೆ ಪುಷ್ಟಿ ನೀಡಲು ಬಳಸುತ್ತಾರೆ. ಆದರೆ ಈ ಚಿಂತನೆಗಳಲ್ಲಿ ಕನ್ನಡನಾಡೆನ್ನುವ ಪರಿಕಲ್ಪನೆಯೆ ಜಾಳಾಗಿಬಿಡುತ್ತದೆ. ಇದು ರಾಜಕೀಯ ಪರಿಕಲ್ಪನೆಯೆ? ಭಾಷಿಕ ಸಮುದಾಯದ ಸ್ವ-ಕಲ್ಪನೆಯೆ? ಅಥವಾ ಸಾಂಸ್ಕೃತಿಕ ನೆಲೆಯದೆ? ನಮ್ಮ ವಾದಗಳನ್ನು ದುರ್ಬಲಗೊಳಿಸುವ ಇತರ ಆಕರಗಳನ್ನು ಗಮನಿಸದಿರುವುದು ಏಕೆ? ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ.

ಆಕರಗಳನ್ನು ಕಲೆಹಾಕಿ, ಅವುಗಳನ್ನು ತಕ್ಕಮಟ್ಟಿಗೆ ಅಧ್ಯಯನ ಮಾಡಬಲ್ಲ ಭಾಷಿಕ ಕೌಶಲ್ಯವಿದ್ದಾಗಲೂ ಸಹ ವಿಶ್ಲೇಷಣೆಯನ್ನು ಮಾಡುವ ಸಾಮರ್ಥ್ಯ ನಮ್ಮ ಸಂಶೋಧನಾ ಸಂಸ್ಕೃತಿಯಲ್ಲಿ ಕಡಿಮೆಯಾಗಿದೆ. ಇದಕ್ಕೆ ಒಂದು ಬಹುಮುಖ್ಯ ಕಾರಣವೆಂದರೆ ವಿವಿಧ ಅಧ್ಯಯನ ಶಿಸ್ತುಗಳು ಕಳೆದ ಐದು ದಶಕಗಳಲ್ಲಿ ಹೇಗೆ ಬದಲಾಗಿವೆ ಎನ್ನುವುದನ್ನು ನಾವು ಅರಿಯುವಲ್ಲಿ ವಿಫ಼ಲರಾಗಿರುವುದು. ಮತ್ತೆ ಇತಿಹಾಸದ ಉದಾಹರಣೆಯನ್ನೆ ನೀಡುವುದಾದರೆ, ಐತಿಹಾಸಿಕ ಸತ್ಯ ಎಂದರೇನು? ಅದನ್ನು ಹೇಗೆ ಗ್ರಹಿಸಬಹುದು ಎನ್ನುವುದರಲ್ಲಿ ಮೂಲಭೂತವಾದ ಬದಲಾವಣೆಗಳಾಗಿವೆ. ಇದೆ ಮಾತನ್ನು ಇತರೆ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಕುರಿತಾಗಿ ಸಹ ಹೇಳಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಈ ಬಗೆಯ ಮೂಲಭೂತ ಬದಲಾವಣೆಗಳಾಗಿಲ್ಲ ಎನ್ನುವುದು ನನ್ನ ಗ್ರಹಿಕೆ. ಆದರೆ ಆ ಕ್ಷೇತ್ರಗಳಲ್ಲಿ ಸಹ ಬಹಳ ಕ್ಷಿಪ್ರವಾಗಿ ಹೊಸ ಬೆಳವಣಿಗೆಗಳು ಪ್ರತಿನಿತ್ಯವೂ ಆಗುತ್ತಿವೆ. ಅವುಗಳನ್ನು ಗ್ರಹಿಸಿ, ನಮ್ಮ ಪಠ್ಯಕ್ರಮಗಳೊಳಗೆ ತರುವ ಚುರುಕುತನ ಕಾಣುತ್ತಿಲ್ಲ. ಹಾಗಾಗಿಯೆ ಮೂಲ ಮತ್ತು ಆನ್ವಯಿಕ ವಿಜ್ಞಾನಗಳೆರಡರ ಪ್ರಯೋಜನಗಳು ನಮಗೆ ಸ್ಪಷ್ಟವಾಗಿ ದೊರಕುತ್ತಿಲ್ಲ. ಇತರೆ ವಿಷಯಗಳಿಗೆ ಹೋಲಿಸಿದಾಗ, ವಿಜ್ಞಾನದ ವಿಷಯಗಳಲ್ಲಿನ ಬೋಧನೆಯಲ್ಲಿ ಮೂಲತತ್ವಗಳ ಪರಿಚಯ ತಕ್ಕಮಟ್ಟಿಗೆ ಆಗುತ್ತದೆ. ಆದರೆ ಸಂಶೋಧನೆಗಳು ಎಷ್ಟರ ಮಟ್ಟಿಗೆ ಪ್ರಸ್ತುತತೆಯನ್ನು ಹೊಂದಿವೆ ಎನ್ನುವ ಪ್ರಶ್ನೆಗೆ ದೊರಕುವ ಉತ್ತರ ಸಾಕಷ್ಟು ನಿರಾಶಾದಾಯಕವಾದುದು.

ಸಂಶೋಧನೆಗಳ ಅಪ್ರಸ್ತುತತೆ ಮತ್ತು ಅನುಪಯುಕ್ತತೆಯ ಪ್ರಶ್ನೆಗಳು ಎಲ್ಲ ಜ್ಞಾನಶಿಸ್ತುಗಳನ್ನೂ ಕಾಡುತ್ತದೆ. ಮತ್ತೆ ನನ್ನ ಪರಿಣತಿಯ ವಿಷಯದ ಉದಾಹರಣೆಯನ್ನೆ ನೀಡುತ್ತೇನೆ. ಪ್ರತಿವರ್ಷವೂ ಹತ್ತಾರು ಇತಿಹಾಸದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆಯುತ್ತಾರೆ. ನೂರಾರು ಪುಸ್ತಕಗಳು ಕರ್ನಾಟಕದ ಇತಿಹಾಸದ ಬಗ್ಗೆ ಪ್ರಕಟವಾಗುತ್ತವೆ. ಇಷ್ಟೆಲ್ಲ ಸಾಂಸ್ಥಿಕ ಸಂಪನ್ಮೂಲಗಳು ಇದ್ದರೂ ಸಹ, ಒಂದು ಐತಿಹಾಸಿಕ ಸ್ಥಳವನ್ನು ಪ್ರವಾಸಿಗರಿಗೆ ಬಣ್ಣಿಸಬಲ್ಲ ಮಾರ್ಗದರ್ಶಕರಿಗೆ ತರಬೇತಿ ನೀಡುವ ಸಾಮರ್ಥ್ಯ ನಮಗಿಲ್ಲ ಎಂದರೆ ಅದು ಉತ್ಪ್ರೇಕ್ಷೆಯಲ್ಲ. 

7

ಕಡೆಗೆ ಕೇಳಿಕೊಳ್ಳಬೇಕಾದ ಒಂದು ಪ್ರಶ್ನೆ. ಈ ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ?

ಅಧ್ಯಾಪಕ-ಸಂಶೋಧಕರನ್ನು ಸ್ವಾಯತ್ತ ಘಟಕವೆಂದು ಗುರುತಿಸುವ ಪ್ರಜಾಸತ್ತಾತ್ಮಕ ಸಂಸ್ಕೃತಿ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಬೇಕು. ಸ್ವಾಯತ್ತತೆ ಬೇಕಾಗಿರುವುದು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅದರಲ್ಲಿ ಕೆಲಸ ಮಾಡುವ ಅಧ್ಯಾಪಕ-ಸಂಶೋಧಕರಿಗೆ. ರಾಜಕೀಯ ಹಸ್ತಕ್ಷೇಪ ನಿಲ್ಲಬೇಕಿರುವುದು ಕುಲಪತಿಗಳು ಮತ್ತಿತರ ಅಧಿಕಾರವರ್ಗಗಳಿಗೆ ಮಾತ್ರವಲ್ಲ; ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು ಅಧ್ಯಾಪಕ-ಸಂಶೋಧಕರ ಕೆಲಸಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದೂ ನಿಲ್ಲಬೇಕು. ಸಂಶೋಧನಾ ಚಟುವಟಿಕೆಗಳಿಗೆ ಅನುವು ಮಾಡಿಕೊಡುವ ರೀತಿಯಲ್ಲಿ ಶೈಕ್ಷಣಿಕ ವರ್ಷವನ್ನು ಯೋಜಿಸಬೇಕು. ಅಧ್ಯಾಪಕರಿಗೆ ಬಿಡುವು ದೊರೆಯುವುದು ಸಹ ಬಹಳ ಮುಖ್ಯ.

ಇಂತಹ ಸ್ವಾಯತ್ತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವುದು ಸಹ ಒಂದು ಬೇರೆ ರೀತಿಯ ಅರ್ಹತೆಯೆ. ಈಗಿರುವ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಬಗೆಯ ತರಬೇತಿ ದೊರಕುತ್ತಿಲ್ಲ. ಇದಕ್ಕೆ ಪ್ರಪಂಚದ ವಿವಿಧೆಡೆ ಕೆಲಸ ಮಾಡಿ, ಅನುಭವ-ಅರ್ಹತೆ ಪಡೆದಿರುವ ಹೊಸರಕ್ತವನ್ನು ವ್ಯವಸ್ಥೆಯೊಳಗೆ ತರಬೇಕು. ಇಂದಿನ ರಾಜಕೀಯ ಹಸ್ತಕ್ಷೇಪ, ಹಣ-ಪ್ರಭಾವಗಳ ವಾತಾವರಣದಲ್ಲಿ ಇದು ಕಷ್ಟಸಾಧ್ಯವಾದ ವಿಷಯವೆ. ನನ್ನ ಸಂಪರ್ಕದ ಪ್ರತಿಭವಂತ ಯುವಕರು ಯಾರೂ ಸಹ ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡಲು ಬಯಸುತ್ತಿಲ್ಲ. ಅವರಿಗೆ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮ ಅವಕಾಶಗಳು ಸಹ ದೊರಕುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ನಿಯಮಿತವಾಗಿ ನೇಮಕಾತಿಯಾಗುವ ವ್ಯವಸ್ಥೆಯೂ ಆಗಬೇಕು. ಯಾವುದೆ ಹುದ್ದೆಯೂ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಭರ್ತಿಯಾಗದೆ ಉಳಿಯುವಂತಿಲ್ಲ ಎಂದಾದರೆ ಅವಕಾಶಗಳು ನಿಯಮಿತವಾಗಿ ದೊರಕುತ್ತವೆ ಮತ್ತು ಪ್ರತಿ ತಲೆಮಾರಿನ ಪ್ರತಿಭಾವಂತರಿಗೂ ಉತ್ಸುಕತೆಯಿರುತ್ತದೆ. ಇದೊಂದು ಸಣ್ಣ ವಿಷಯವೆನ್ನಿಸಬಹುದು. ಆದರೆ ಅಷ್ಟೆ ಮುಖ್ಯವಾದುದು.

 

Leave a Reply

Your email address will not be published.