ಕರ್ನಾಟಕ ಮತ್ತು ಮಹಾರಾಷ್ಟ್ರ ರೈತ ಚಳವಳಿಗಳ ವೈರುಧ್ಯಗಳು

ರೈತ ಚಳವಳಿಗಳ ಕಾಲ ಮುಗಿಯಿತೇ? ಅಥವಾ ಅವು ಸೋತುಹೋದವೇ? ಚಳವಳಿಗಳಿಗೆ ಕೆಲವು ಸಂದರ್ಭದಲ್ಲಿ ಹಿನ್ನಡೆಯಾದದ್ದು ಸತ್ಯ. ಅವು ರೈತರ ಆತ್ಮಹತ್ಯೆಯನ್ನು ತಡೆಯಲು ವಿಫಲವಾದದ್ದು ದಿಟ. ಆದರೆ ಚಳವಳಿಗಳ ಕಾಲ ಮುಗಿದಿಲ್ಲ.

ರೈತ ಚಳವಳಿಗಳ ಬಗ್ಗೆ ಶಾಸ್ತ್ರೀಯ ಚರ್ಚೆಗಳು ಆರಂಭಗೊಂಡದ್ದು 1990ರ ದಶಕದಲ್ಲಿ. ಅಷ್ಟರ ತನಕ ಇದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು. ಈ ಚರ್ಚೆಗಳಲ್ಲಿ ಹೆಚ್ಚು ಒತ್ತು ಸಿಗುತ್ತಿದ್ದದ್ದು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಿಕಾಯತ್‍ರವರ ಚಳವಳಿಗಳಿಗೆ. ಕರ್ನಾಟಕ ಮತ್ತು ತಮಿಳುನಾಡು ಇದಕ್ಕೆ ಅಪವಾದಗಳಾಗಿದ್ದವು. ಮಹಾರಾಷ್ಟ್ರ ಚಳವಳಿ ಚರ್ಚೆಯ ಕೇಂದ್ರವಾಗಲು ಅದು ಸೃಷ್ಟಿಸಿದ ‘ಇಂಡಿಯಾ’ ಮತ್ತು ‘ಭಾರತ್’ ಪರಿಕಲ್ಪನೆ. ಅಂದಿನ ಸಂದರ್ಭದಲ್ಲಿ ಆ ಪರಿಕಲ್ಪನೆ ನೂತನ, ಆಕರ್ಷಣೀಯ ಹಾಗೂ ವೈಚಾರಿಕ ಪರಿಕಲ್ಪನೆಯಾಗಿತ್ತು. ಅಲ್ಲದೇ ಮಹಾರಾಷ್ಟ್ರದ ರೈತ ಚಳವಳಿಗಳಿಗೆ ಮತ್ತು ಬೇಡಿಕೆಗಳಿಗೆ ಒಂದು ಸ್ವಷ್ಟತೆ ಇತ್ತು.

ಈ ರೀತಿಯ ಚಳವಳಿಗಳಿಗೆ ಕಾರಣಗಳೇನು. ಇವು ಬರೇ ಆರ್ಥಿಕ ಬಿಕ್ಕಟ್ಟಿನ ಫಲಶ್ರುತಿಯೇ? ಕೃಷಿಯಲ್ಲಿ ಬಂಡವಾಳಶಾಹಿಯ ಪ್ರತಿರೋಧವೇ? ಅಥವಾ ರೈತರ ರಾಜಕೀಯಕರಣ ಪ್ರಕ್ರಿಯೆಯ ಫಲಶ್ರುತಿಯೇ? ಎಂಬೆಲ್ಲಾ ಗೊಂದಲಗಳಿವೆ. ವಾಸ್ತವವಾಗಿ ಭೂ ಸುಧಾರಣೆ, ಚುನಾವಣಾ ರಾಜಕೀಯ, ಪ್ರಜಾಪ್ರಭುತ್ವ ಚೌಕಟ್ಟಿನ ವಿಸ್ತರಣೆ, ಹಸಿರು ಕ್ರಾಂತಿ, ವಿಕೇಂದ್ರಿಕರಣ, ಹೊಸ ಮಾರುಕಟ್ಟೆ ಇತ್ಯಾದಿಗಳು ರೈತರನ್ನು ರಾಜಕೀಯಕರಣದ ಭಾಗವನ್ನಾಗಿಸಿದ್ದು ದಿಟ. ಭೂ ಸುಧಾರಣೆಯ ಒಂದು ಫಲಶ್ರುತಿ ಏನೆಂದರೆ ಸಾವಿರಾರು ರೈತರನ್ನು ಹಾಗೂ ಗೇಣಿದಾರರನ್ನು ಗ್ರಾಮೀಣ ಪ್ರದೇಶದಲ್ಲಿ ಅಧಿಕಾರ ರಾಜಕಾರಣದ ಹೊಸ್ತಿಲಲ್ಲಿ ನಿಲ್ಲಿಸಿತ್ತು. ಇದಕ್ಕೆ ಪೂರಕವೆಂಬಂತೆ ಮೀಸಲಾತಿ ಮತ್ತು ವಿಕೇಂದ್ರಿಕರಣಗಳು ಕೂಡ ಕೆಲಸ ಮಾಡಿದ್ದವು. ಆದರೆ 1970 ಮತ್ತು 1980ರ ದಶಕದಲ್ಲಿ ರಾಜಕೀಯಕರಣಕ್ಕೆ ಅವಕಾಶ ನೀಡಿದ್ದು ಭೂ ಸುಧಾರಣೆ, ಹಸಿರು ಕ್ರಾಂತಿ, ಮೀಸಲಾತಿ ಮತ್ತು ರಾಜಕೀಯ ಪಕ್ಷಗಳ ರ್ಯಾಲಿಗಳು.

ಕರ್ನಾಟಕದಲ್ಲಿ ರೈತ ಚಳವಳಿ 1980ರ ದಶಕದ ತನಕ ಬಹಳ ತೀಕ್ಷ್ಣವಾಗಿತ್ತು, ಸರಕಾರವನ್ನು ಉರುಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಬೇಡಿಕೆಯ ಪಟ್ಟಿಯೂ ಕೂಡ ಉದ್ದವಾಗಿತ್ತು.

ಮಹಾರಾಷ್ಟ್ರದ ಶೇತ್ಕಾರಿ ಸಂಘದ ಹೋರಾಟದಲ್ಲಿ ಪ್ರಮುಖವಾದ ವಿಷಯ ಬೆಂಬಲ ಬೆಲೆಗಳು ಮತ್ತು ‘ರೈತರಿಗೆ ಮಾರುಕಟ್ಟೆ ಮತ್ತು ತಾಂತ್ರಿಕತೆಯ ಸ್ವಾತಂತ್ರ್ಯ’. ಇವೆರಡನ್ನು ಮುಂದಿಟ್ಟುಕೊಂಡು ಶೇತ್ಕಾರಿ ಸಂಘಟನೆ ಬಹಳಷ್ಟು ಚಳವಳಿ ಅಥವಾ ಹೋರಾಟಗಳನ್ನು ಮಾಡಿತ್ತು ನೀರುಳ್ಳಿಗೆ ಬೆಂಬಲ ಬೆಲೆಗಾಗಿ 1980ರ ನಾಸಿಕ್ ಚಳವಳಿ, ತಂಬಾಕಿಗೆ ಬೆಂಬಲ ಬೆಲೆಗಾಗಿ 1981ರಲ್ಲಿ ನಿಪ್ಪಾಣಿ ಹೋರಾಟ, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆಗಾಗಿ 1981 ಮತ್ತು 1986ರಲ್ಲಿ ರೈಲ್ ಮತ್ತು ರಾಸ್ತ ರೋಕೊ, 1983ರಲ್ಲಿ ಪಂಡರಾಪುರ್ ರ್ಯಾಲಿ, ರಾಜೀವ್ ವಸ್ತ್ರದ ವಿರುದ್ಧ 1986-87ರಲ್ಲಿ ವಸ್ತ್ರ ಚಳವಳಿ, 1986ರಲ್ಲಿ ಚಾಂದ್ವಾಡ್‍ನಲ್ಲಿ ಬೃಹತ್ ಮಹಿಳಾ ಸಮಾವೇಶ, 1998ರಲ್ಲಿ ರೈತ ಉದ್ಯಮಶೀಲತೆಗಾಗಿ ಜನಸಂಸದ್ ಮತ್ತು 2015ಕ್ಕೆ ಧುಲೆ ರ್ಯಾಲಿ. ವಾಸ್ತವವಾಗಿ 1990ರ ದಶಕದಲ್ಲಿ ಅದು ನಡೆಸಿದ ಹೋರಾಟಗಳು ಕಡಿಮೆ.

ಕರ್ನಾಟಕದಲ್ಲಿ ರೈತ ಚಳವಳಿ 1980ರ ದಶಕದ ತನಕ ಬಹಳ ತೀಕ್ಷ್ಣವಾಗಿತ್ತು, ಸರಕಾರವನ್ನು ಉರುಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಬೇಡಿಕೆಯ ಪಟ್ಟಿಯೂ ಕೂಡ ಉದ್ದವಾಗಿತ್ತು. ರೈತ ಹೋರಾಟ ಆರಂಭಗೊಂಡದ್ದೇ 19 ಬೇಡಿಕೆಗಳ ಪಟ್ಟಿಯೊಂದಿಗೆ. 1980ರ ದಶಕದ ತನಕ ಅದರ ಬೇಡಿಕೆಗಳ ಪಟ್ಟಿಯಲ್ಲಿ ಇದ್ದಂತಹ ವಿಷಯಗಳು- ಸಾಲ ಮನ್ನಾ, ಬೆಂಬಲ ಮತ್ತು ವೈಜ್ಞಾನಿಕ ಬೆಲೆ, ಲೆವಿ ಪ್ರಶ್ನೆ, ನಗರ ಕೇಂದ್ರಿತ ಬೆಳವಣಿಗೆ, ಸಬ್ಸಿಡಿ, ಕೈಗಾರಿಕೆ ಮತ್ತು ಕೃಷಿ ನಡುವೆ ಹೆಚ್ಚುತ್ತಿರುವ ಅಂತರ ಮತ್ತು ರೈತರ ಪ್ರಾತಿನಿಧಿತ್ವ. ಆದಕಾರಣ 1980ರ ದಶಕದ ತನಕ ಬೇಡಿಕೆಗಳು ಮತ್ತು ರೈತ ಹೋರಾಟದ ಪ್ರತಿರೋಧಗಳು ಅಭಿವೃದ್ಧಿ ವಿಷಯಕ್ಕೆ, ರಾಜಕೀಯ ವ್ಯವಸ್ಥೆಗೆ ಮತ್ತು ಕರ್ನಾಟಕಕ್ಕೆ ಸೀಮಿತವಾಗಿತ್ತು.

ಜಾಗತೀಕರಣ ಮತ್ತು ರೈತರಿಗೆ ಮಾರುಕಟ್ಟೆಯ ಅನಿಯಂತ್ರಿತ ಅವಕಾಶವನ್ನು ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿದ್ದು ಮಹಾರಾಷ್ಟ್ರದ ಚಳವಳಿ. ಶರದ್ ಜೋಶಿ ಮೂಲತಃ ಆರ್ಥಿಕ ಉದಾರವಾದಿ. ಆದಕಾರಣ ಅವರು ಕೃಷಿಯ ಮೇಲೆ ರಾಜ್ಯದ ನಿಯಂತ್ರಣವನ್ನ ವಿರೋಧಿಸುತ್ತಾ ಬಂದವರು.

1990ರ ದಶಕದಲ್ಲಿ ಅಂದರೆ ಜಾಗತೀಕರಣದ ದಶಕದಲ್ಲಿ, ಹೊಸ ಬೇಡಿಕೆಗಳು ಮತ್ತು ವಿಷಯಗಳು ಸೇರ್ಪಡೆಯಾದವು. ಅದರೊಟ್ಟಿಗೆ ಅದರ ಹೋರಾಟಗಳು ಮತ್ತು ಅದರ ಸ್ವರೂಪ ಬದಲಾದವು. ಹೊಸ ವಿಷಯಗಳಲ್ಲಿ ಬೌದ್ಧಿಕ ಆಸ್ತಿಯ ಹಕ್ಕು, ಡಂಕಲ್ ಪ್ರಸ್ತಾವನೆ, ವಿಶ್ವ ವ್ಯಾಪಾರ ಸಂಸ್ಥೆ, ಅಂತರರಾಷ್ಟ್ರೀಯ ಬಂಡವಾಳ, ಆಹಾರ ಸಂಸ್ಕೃತಿ, ಬೀಜ ಸಂಸ್ಕೃತಿ, ಜಾಗತೀಕ ಬಂಡವಾಳದಿಂದ ಶೋಷಣೆ ಇತ್ಯಾದಿಗಳು ಸೇರ್ಪಡೆಯಾದವು. ಸ್ವಾಮಿನಾಥನ್ ಸಮಿತಿಯ ಅನುಷ್ಠಾನದ ಬೇಡಿಕೆ ಇತ್ತೀಚಿನದು.

ಜಾಗತೀಕರಣ ಮತ್ತು ರೈತರಿಗೆ ಮಾರುಕಟ್ಟೆಯ ಅನಿಯಂತ್ರಿತ ಅವಕಾಶವನ್ನು ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿದ್ದು ಮಹಾರಾಷ್ಟ್ರದ ಚಳವಳಿ. ಶರದ್ ಜೋಶಿ ಮೂಲತಃ ಆರ್ಥಿಕ ಉದಾರವಾದಿ. ಆದಕಾರಣ ಅವರು ಕೃಷಿಯ ಮೇಲೆ ರಾಜ್ಯದ ನಿಯಂತ್ರಣವನ್ನ ವಿರೋಧಿಸುತ್ತಾ ಬಂದವರು. ಇದೇ ಕಾರಣಕ್ಕಾಗಿ ಅವರು ವಿಶ್ವ ವ್ಯಾಪಾರ ಸಂಸ್ಥೆ, ಡಂಕೆಲ್ ಪ್ರಸ್ತಾವನೆ ಮತ್ತು ಜಾಗತೀಕರಣವನ್ನು ಪರಿಪೂರ್ಣವಾಗಿ ಬೆಂಬಲಿಸಿದರು. ಅವರ ವಾದ ಇಷ್ಟೇ- ರೈತರಿಗೆ ಅನಿಯಂತ್ರಿತ ಮಾರುಕಟ್ಟೆ ಲಾಭದಾಯಕವಾಗಿರುತ್ತದೆ, ಬಂಡವಾಳಕ್ಕೆ ಮತ್ತು ಪೈಪೋಟಿಗೆ ಅನುವು ಮಾಡಿಕೊಡುತ್ತದೆ, ರೈತರನ್ನು ಬಂಡವಾಳಶಾಹಿ ಅಥವಾ ಶ್ರೀಮಂತ ರೈತರನ್ನಾಗಿಸುತ್ತದೆ. ಈ ನಿಲುವಿನಿಂದಾಗಿ ಶೇತ್ಕಾರಿ ಸಂಘಟನೆ ಯಾವತ್ತೂ ಜಾಗತೀಕರಣವನ್ನು ವಿರೋಧಿಸುವ ಹೋರಾಟಗಳನ್ನು ಮಾಡಲೇ ಇಲ್ಲ. ಮತ್ತೊಂದು ವಿಶೇಷವೆಂದರೆ ಮಹಾರಾಷ್ಟ್ರದ ಚಳವಳಿ ಸಮಾಜವಾದದ ವಿರೋಧಿಯಾಗಿತ್ತು. ಇದು ವ್ಯಕ್ತವಾಗುವುದು ಅದರ ತಾತ್ವಿಕತೆಯಲ್ಲಿ ಹಾಗೂ ರಾಜಕಾರಣದಲ್ಲಿ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಸಮಾಜವಾದ’ವನ್ನು ತೆಗೆದುಹಾಕಲು ಶರದ್ ಜೋಶಿ ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಸಮಾಜವಾದದ ಕುರಿತು ಅವರ ವಿರೋಧಕ್ಕೆ ಕಾರಣವಿದೆ- ಸಮಾಜವಾದ ಒಂದೆಡೆ ರಾಜಕೀಯ ಶಕ್ತಿಯ ಕೇಂದ್ರೀಕರಣ ಮಾಡುತ್ತದೆ, ಮತ್ತೊದೆಡೆ ಆರ್ಥಿಕ, ಉತ್ಪಾದನಾ, ವಿತರಣಾ, ಬಳಕೆ, ಜ್ಞಾನ,ಸಂಸ್ಕೃತಿ, ಇತ್ಯಾದಿ ಕ್ಕೇತ್ರಗಳ ಖಾಸಗೀತನವನ್ನು ನಾಶಮಾಡುತ್ತದೆ.

ಜಾಗತೀಕರಣವನ್ನು ಅತ್ಯಂತ ತೀಕ್ಷ್ಣವಾಗಿ ಮತ್ತು ಅತ್ಯಂತ ಶಕ್ತಿಯುತ್ವಾಗಿ ಪ್ರತಿರೋಧಿಸಿದ್ದು ಕರ್ನಾಟಕದ ಚಳವಳಿ. ಜಾಗತೀಕರಣದ ತಾತ್ವಿಕ ಚೌಕಟ್ಟನ್ನು, ಕಥನಗಳನ್ನು ನೆಲೆಗಟ್ಟುಗಳನ್ನು ಮತ್ತದರ ಹಿಂದಿರುವ ದೊಡ್ಡ ಕಾರಸ್ಥಾನಗಳನ್ನು ಬಯಲಿಗೆಳೆಯಲು ಕರ್ನಾಟಕ ಹೋರಾಟದಿಂದ ಮಾತ್ರ ಸಾಧ್ಯವಿತ್ತು.

ಇದಕ್ಕೆ ತೀರ ವಿರುದ್ಧವಾಗಿ ಕಂಡು ಬರುವುದು ಕರ್ನಾಟಕ ರೈತ ಹೋರಾಟ. ಜಾಗತೀಕರಣವನ್ನು ಅತ್ಯಂತ ತೀಕ್ಷ್ಣವಾಗಿ ಮತ್ತು ಅತ್ಯಂತ ಶಕ್ತಿಯುತ್ವಾಗಿ ಪ್ರತಿರೋಧಿಸಿದ್ದು ಕರ್ನಾಟಕದ ಚಳವಳಿ. ಜಾಗತೀಕರಣದ ತಾತ್ವಿಕ ಚೌಕಟ್ಟನ್ನು, ಕಥನಗಳನ್ನು ನೆಲೆಗಟ್ಟುಗಳನ್ನು ಮತ್ತದರ ಹಿಂದಿರುವ ದೊಡ್ಡ ಕಾರಸ್ಥಾನಗಳನ್ನು ಬಯಲಿಗೆಳೆಯಲು ಕರ್ನಾಟಕ ಹೋರಾಟದಿಂದ ಮಾತ್ರ ಸಾಧ್ಯವಿತ್ತು. ಆದ ಕಾರಣ ಜಾಗತೀಕರಣವನ್ನು ಕರ್ನಾಟಕ ರೈತ ಹೋರಾಟವು ರೈತ ವಿರೋಧಿಯಾಗಿ, ಐಡೆಂಟಿಟಿ ವಿರೋಧಿಯಾಗಿ, ಜೀವ ವಿರೋಧಿಯಾಗಿ, ಆಹಾರ ಸಂಸ್ಕೃತಿ ವಿರೋಧಿಯಾಗಿ, ಸಮುದಾಯ ವಿರೋಧಿಯಾಗಿ ಚಿತ್ರಿಸಿತ್ತು ಮತ್ತು ಪ್ರತಿರೋಧಿಸಿತ್ತು. ಇದರ ಪ್ರತಿರೋಧ ವಿವಿಧ ರೂಪಗಳಲ್ಲಿ ಅಭಿವ್ಯಕ್ತಗೊಂಡದ್ದು ಸತ್ಯ. ಇದೇ ದಶಕದಲ್ಲಿ ರೈತ ಸಂಘ ಆಹಾರ ಮತ್ತು ಬೀಜಗಳ ರಕ್ಷಣೆಗಾಗಿ ಮತ್ತು ಸಾರ್ವಭೌಮತ್ವಕ್ಕಾಗಿ ಬೀಜ ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು, ಅಮೃತಭೂಮಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿತ್ತು.

ಇದೊಂದು ರೀತಿಯ ಪ್ರಯೋಗಶಾಲೆ, ಇಲ್ಲಿ ಬೀಜಗಳ ಬ್ಯಾಂಕ್, ಸ್ಥಳೀಯ ಔಷಧಿ ಗಿಡಗಳು ಇತ್ಯಾದಿಗಳನ್ನು ಉಳಿಸುವ ಯತ್ನವನ್ನು ನೋಡಬಹುದು. ಬಹಳ ಮುಖ್ಯವಾಗಿ ಜಾಗತಿಕ ಬಂಡವಾಳವನ್ನು ಪ್ರತಿನಿಧಿಸುವ ಕಂಪೆನಿಗಳಾದ ಕಾರ್ಗಿಲ್, ಮೊನ್ಸಾಂಟೊ ಮತ್ತು ಕೆಂಟಕಿ ಫ್ರೈಡ್ ಚಿಕನ್ ಮೇಲೆ ಹಠಾತ್ ದಾಳಿಯನ್ನು ಮಾಡಿತ್ತು. ಮಾನ್ಸಾಂಟೊ ಕುರಿತಾದ ಅದರ ಚಳವಳಿ ‘ಆಪರೇಶನ್ ಕ್ರಿಮೇಶನ್ ಮಾನ್ಸಾಂಟೋ’ ಒಂದು ಜಾಗತಿಕ ಹೋರಾಟವಾಗಿತ್ತು. ಪ್ರಾನ್ಸ್ ಇಂಡೋನೇಶಿಯಾದಲ್ಲಿ ರೈತರು ಕುಲಾಂತರಿ ಹೊಲಗಳನ್ನು ಸುಟ್ಟುಬಿಟ್ಟಿದ್ದು ವಾಸ್ತವ. ಇದು ರೈತ ಚಳವಳಿಯ ಪ್ರಭಾವವನ್ನು ತೋರಿಸುತ್ತದೆ.

ಇದೇ ದಶಕದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು, ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿ ನೀಡಿದ ಕರೆಯಂತೆ ‘ಭಾರತದಿಂದ ತೊಲಗಿ’ ಎಂಬ ಕರೆಯನ್ನು ಕೂಡ ನೀಡಿತ್ತು. ಜಾಗತೀಕರಣದ ವಿರೋಧಿಯಾದ ಮುಂಬೈ ರೆಸಿಸ್ಟೆಂಟ್ ಎಂಬ ಪ್ರತಿರೋಧ ಹೋರಾಟದೊಂದಿಗೆ ಕೈಜೋಡಿಸಿತ್ತು. ಅಲ್ಲದೇ ಅಂತರರಾಷ್ಟ್ರೀಯ ಚಳವಳಿಯಾದ ಲಾ ವಿಯಾ ಕಂಪೆನ್‍ಸಿನಾದ ಅಂಗ ಸಂಸ್ಥೆಯಾಗಿ ಹೋರಾಟವನ್ನು ಜಾಗತೀಕಗೊಳಿಸಿತ್ತು. ಇನ್ನೊಂದು ಸಂಘಟನೆಯಾದ ಪೀಪಲ್ಸ್ ಗ್ಲೋಬಲ್ ಅಕ್ಷನ್‍ನ ಭಾಗವಾಗಿ ಜಾಗತೀಕರಣವನ್ನು ವಿರೋಧಿಸುತ್ತಾ ಬಂತು. ಅದರ ಹೋರಾಟಗಳ ನೆಲೆಗಳು ವಾಸ್ತವವಾಗಿ ಜಾಗತೀಕವಾದವು- ಜಿನೇವಾ, ಪ್ರಾಗ್, ವಾಶಿಂಗ್‍ಟನ್, ಲಂಡನ್, ಫ್ರಾಂಕ್‍ಫರ್ಟ್, ಪ್ಯಾರೀಸ್ ಇತ್ಯಾದಿಗಳಾದವು.

ವಿಚಿತ್ರವೆಂದರೆ ಎಲ್ಲಾ ಚಳವಳಿಗಳು ಆರಂಭದಲ್ಲಿ ವಾದಿಸಿದ್ದು ತಾವು ರಾಜಕೀಯೇತರ ಚಳವಳಿಗಳು ಎಂದು. ರಾಜಕಾರಣಕ್ಕೂ ತಮಗೂ ಏನೂ ಸಂಬಂಧವಿಲ್ಲ, ರಾಜಕೀಯ ಅಧಿಕಾರ ರೈತರ ಗುರಿಯಲ್ಲ ಇತ್ಯಾದಿ. ಈ ವಿಷಯಕ್ಕಾಗಿಯೇ ಚಳವಳಿಯಲ್ಲಿ ಭಿನ್ನಾಭಿಪ್ರಾಯ ಸಹಜವಾಗಿ ಮೂಡಿತ್ತು.

ವಿಚಿತ್ರವೆಂದರೆ ಎಲ್ಲಾ ಚಳವಳಿಗಳು ಆರಂಭದಲ್ಲಿ ವಾದಿಸಿದ್ದು ತಾವು ರಾಜಕೀಯೇತರ ಚಳವಳಿಗಳು ಎಂದು. ರಾಜಕಾರಣಕ್ಕೂ ತಮಗೂ ಏನೂ ಸಂಬಂಧವಿಲ್ಲ, ರಾಜಕೀಯ ಅಧಿಕಾರ ರೈತರ ಗುರಿಯಲ್ಲ ಇತ್ಯಾದಿ. ಈ ವಿಷಯಕ್ಕಾಗಿಯೇ ಚಳವಳಿಯಲ್ಲಿ ಭಿನ್ನಾಭಿಪ್ರಾಯ ಸಹಜವಾಗಿ ಮೂಡಿತ್ತು. ವಾಸ್ತವವಾಗಿ ಎಲ್ಲಾ ಚಳವಳಿಗಳು ಅಂತಿಮವಾಗಿ ರಾಜಕೀಯವಾಗಿರುತ್ತವೆ- ಯಾಕೆಂದರೆ ಅವರ ಬೇಡಿಕೆಗಳು, ಹೋರಾಟ ಮತ್ತು ಪ್ರತಿರೋಧಗಳು ಅಂತಿಮವಾಗಿ ರಾಜಕೀಯದ ಸುತ್ತಾ ಸುತ್ತಾಡುತ್ತಾ ಇರುತ್ತದೆ. ಆರಂಭದಿಂದಲೂ ತನ್ನ ಹೋರಾಟಗಳನ್ನು ರಾಜಕೀಯೇತರ ಹೋರಾಟವೆಂದು ಚಿತ್ರಿಸಿದರೂ, ಉತ್ತರ ಪ್ರದೇಶದ ಹೋರಾಟ ಅಂತಿಮವಾಗಿ ರಾಜಕೀಯವಾಗಿರುತ್ತಿತ್ತು. ಯಾಕೆಂದರೆ ಅದರ ಸಾಮಾಜಿಕ ತಳಹದಿಯಾದ ಖಾಪ್ ಪಂಚಾಯತ್‍ಗಳು ತೆಗೆದುಕೊಳ್ಳುವ ನಿರ್ಣಯಗಳು, ಸರಕಾರಗಳನ್ನು ವಿರೋಧಿಸುವ ಸಂದರ್ಭದಲ್ಲಿ ಅದು ಉಪಯೋಗಿಸುವ ಬಾóಷೆಗಳು ರಾಜಕೀಯ ಪ್ರೆರೇಪಿತವಾಗಿರುತ್ತಿತ್ತು. ಒಂದೇ ಒಂದು ಅಪವಾದವೆಂದರೆ ಚುನಾವಣಾ ರಾಜಕಾರಣದಲ್ಲಿ ಪಕ್ಷವನ್ನು ಕಟ್ಟಿ, (ಒಂದೆರೆಡು ವ್ಯಕ್ತಿಗಳನ್ನು ವೈಯಕ್ತಿಕ ನೆಲೆಗಳಲ್ಲಿ ಹೊರತುಪಡಿಸಿದರೆ), ಚುನಾವಣೆಗೆ ಸ್ವರ್ಧಿಸುವ ರಾಜಕಾರಣವನ್ನು ಮಾಡಲಿಲ್ಲ. ಇದನ್ನು ಮಾಡಿದ್ದು ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತ ಚಳವಳಿಗಳು.

ಮಹಾರಾಷ್ಟ್ರ ಮತ್ತು ಕರ್ನಾಟಕ ರೈತ ಸಂಘ ರಾಜಕೀಯಕ್ಕೆ ಧುಮುಕಲು ಪಕ್ಷವನ್ನೇ ಕಟ್ಟಿದವು. ಶರದ್ ಜೋಶಿ ಸ್ವತಂತ್ರ ಭಾರತ್ ಪಕ್ಷವನ್ನು ಕಟ್ಟಿದರು. ಈ ಪಕ್ಷದ ಪ್ರಣಾಳಿಕೆ ಮೂರು ವಿಷಯಗಳಿಗೆ ಒತ್ತುಕೊಟ್ಟಿತ್ತು: ರೈತರಿಗೆ ಮಾರುಕಟ್ಟೆಯೊಳಗೆ ಯಾವುದೇ ನಿರ್ಬಂಧಗಳಿಲ್ಲದೆ ಪ್ರವೇಶಿಸುವ ಹಕ್ಕು, ಕೃಷಿ ಮತ್ತು ವಿದ್ಯುಚ್ಛಕ್ತಿ ಮೇಲಿನ ಸಾಲದ ಮನ್ನಾ, ಸ್ವಾಧೀನ ಪಡಿಸಿದ ಭೂಮಿಯನ್ನು ಮತ್ತೊಮ್ಮೆ ಪಡೆಯುವ ಹಕ್ಕನ್ನು ನೀಡುವುದು. ಅಲ್ಲದೇ ಶರದ್ ಜೋಶಿ ರಾಜ್ಯ ಸಭೆಯ ಸದಸ್ಯರು ಕೂಡ ಆಗಿದ್ದರು. ವಿಚಿತ್ರವೆಂದರೆ ಅತ್ಯಂತ ಶಕ್ತಿಶಾಲಿ ಮಹಿಳಾ ಸಂಘಟನೆ ಶೇತ್ಕಾರಿ ಮಹಿಳಾ ಅಗಾದಿಯ ಸ್ಥಾಪಕರಾಗಿ ಮಹಿಳೆಯರ ಪರವಾಗಿ ಲಕ್ಷಿ ಮುಕ್ತಿ ಮತ್ತು ಖರಜ್-ಸಾಲ ಮುಕ್ತಿ ಹೋರಾಟಗಳನ್ನು ಮಾಡಿದ್ದ ಶರದ್ ಜೋಶಿ ರಾಜ್ಯಸಭಾ ಸದಸ್ಯರಾದ ಮೇಲೆ ಮಹಿಳೆಯರಿಗೆ ಪಾರ್ಲಿಮೆಂಟ್ ಮತ್ತು ಶಾಸನ ಸಭೆಗಳಲ್ಲಿ 33 ಶೇಕಡಾ ಮೀಸಲಾತಿಯನ್ನು ವಿರೋಧಿಸಿದರು(2010). ಇದು ವೈರುದ್ಧವೂ ಹೌದು. 2011ರ ಸುಮಾರಿಗೆ ಶೇತ್ಕಾರಿ ಸಂಘಟನೆ ಕಾಂಗ್ರೆಸೇತರ ವಿರೋಧ ಪಕ್ಷಗಳಿಗೆ ಬೆಂಬಲ ಸೂಚಿಸಿತ್ತು. ವಿಚಿತ್ರವೆಂದರೆ ಸಂಘಟನೆಯ ಕೆಲವು ಸದಸ್ಯರು ಚುನಾವಣಾ ರಾಜಕಾರಣದಲ್ಲಿ ಅಂದಿನ ಆಳುವ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು, ಧುಲೆ ರ್ಯಾಲಿಯಲ್ಲಿ ವಿವಿಧ ಪಕ್ಷಗಳು ಭಾಗವಹಿಸಿದ್ದವು.

ವಾಸ್ತವವಾಗಿ ಚುನಾವಣಾ ರಾಜಕಾರಣದಿಂದ ಅದಕ್ಕೆ ಲಾಭಕ್ಕಿಂತಲೂ ಹೆಚ್ಚು ನಷ್ಟವಾದದ್ದು ದಿಟ. ಕೇವಲ ಮೂರು ರೈತ ಮುುಖಂಡರು ಮಾತ್ರ ಶಾಸನ ಸಭೆಗೆ ಹೋಗಲು ಸಾಧ್ಯವಾಯಿತು. ರೈತರ ಸರಕಾರವನ್ನು ಕಟ್ಟುವ ಕನಸು ನನಸಾಗಲಿಲ್ಲ.

ಕರ್ನಾಟಕದ ರೈತ ಚಳವಳಿ ಮಹಾರಾಷ್ಟ್ರದ ಚಳವಳಿಯಿಂದ ಸಂಪೂರ್ಣವಾಗಿ ವಿಭಿನ್ನವಾಗಿರಲಿಲ್ಲ. 1983ರ ಚುನಾವಣೆ ಸಂದರ್ಭದಲ್ಲಿ ಅದು ಪಕ್ಷಾತೀತವಾಗಿ ಮತದಾರರ ವೇದಿಕೆಯ ಪ್ರಯೋಗವನ್ನು ಮಾಡಿತ್ತು. ಎಲ್ಲಾ ಮತದಾರರ ವೇದಿಕೆಯ ಅಭ್ಯರ್ಥಿಗಳು ಸೋತುಹೋದರು, ಠೇವಣಿಗಳನ್ನು ಕಳೆದುಕೊಂಡರು. ಈ ಚುನಾವಣಾ ರಾಜಕಾರಣ ರೈತ ಚಳವಳಿಯ ಆಂತರಿಕ ಘರ್ಷಣೆಗೆ ಮತ್ತು ವಿಭಜನೆಗೆ ಕಾರಣವಾಯಿತು. ಅಂದಿನ ಕಾಂಗ್ರೆಸ್ ಸರಕಾರ ಅಧಿಕಾರವನ್ನು ಕಳೆದುಕೊಳ್ಳುವುದರ ಹಿಂದೆ ರೈತರ ಸಿಟ್ಟು ಅಡಕವಾಗಿತ್ತು. ರೈತ ಸಂಘ ಮುಂದೆ ತನ್ನದೇ ಆದ ಪಕ್ಷ ‘ಕನ್ನಡ ದೇಶ’ವನ್ನು ಹುಟ್ಟುಹಾಕಿತ್ತು, ಮತ್ತು ಚುನಾವಣಾ ಕಣದಲ್ಲಿ ಸ್ಪರ್ಧಿಸಿತ್ತು. ಇಲ್ಲಿಯೂ ಕೂಡ ಅದು ಸೋತಿತ್ತು. ರೈತ ಸಂಘದ ಹೆಸರಿನಲ್ಲೂ ಕೂಡ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿತ್ತು. ಅಲ್ಲಿಯೂ ಸೋತಿತ್ತು. 2015ರಲ್ಲಿ ಸರ್ವೋದಯ ಪಕ್ಷದ ಭಾಗವಾಗಿ ಚುನಾವಣೆಯಲ್ಲಿ ಸ್ವರ್ಧಿಸಿತ್ತು.

ವಾಸ್ತವವಾಗಿ ಚುನಾವಣಾ ರಾಜಕಾರಣದಿಂದ ಅದಕ್ಕೆ ಲಾಭಕ್ಕಿಂತಲೂ ಹೆಚ್ಚು ನಷ್ಟವಾದದ್ದು ದಿಟ. ಕೇವಲ ಮೂರು ರೈತ ಮುುಖಂಡರು ಮಾತ್ರ ಶಾಸನ ಸಭೆಗೆ ಹೋಗಲು ಸಾಧ್ಯವಾಯಿತು. ರೈತರ ಸರಕಾರವನ್ನು ಕಟ್ಟುವ ಕನಸು ನನಸಾಗಲಿಲ್ಲ. ಈ ಪ್ರಕ್ರಿಯೆಯಲ್ಲಿ ಅದು ತನ್ನ ಸಾಮಾಜಿಕ ತಳಹದಿಗಳನ್ನು ಮತ್ತು ನೆಲೆಗಳನ್ನು ಕಳೆದುಕೊಳ್ಳುತ್ತಾ ಹೋಯಿತು. ಚಳವಳಿಗಳು ಮತಗಳನ್ನು ತರಲಿಲ್ಲ, ಅಧಿಕಾರವನ್ನು ನೀಡಲಿಲ್ಲ. ಪಿ.ಸಿ.ಜೋಶಿ ಹೇಳಿದ ಮಾತು ಸುಳ್ಳಾಗಲಿಲ್ಲ.

ಮಹಾರಾಷ್ಟ್ರ ಮತ್ತು ಕರ್ನಾಟಕದ ರೈತ ಹೋರಾಟದಲ್ಲಿ ಒಂದು ಸಾಮ್ಯ ಇದೆ. ಅದು ರೈತರ ಸಾಲದ ಪ್ರಶ್ನೆ ಬಂದಾಗಲೆಲ್ಲಾ ಅವರಿಬ್ಬರೂ ರೈತರ ಸಾಲ ಸರಕಾರ ನಿಯೋಜಿತ ಕೃತಕ ಸಾಲವೆಂದು ವಾದಿಸುತ್ತಾರೆ. ಅವುಗಳ ಪ್ರಕಾರ ಗ್ರಾಮೀಣ ಪ್ರದೇಶ ಮತ್ತು ಬಡತನಕ್ಕೆ ಅವೈಜ್ಞಾನಿಕ ಬೆಂಬಲ ಬೆಲೆ ಮತ್ತು ಅವ್ಯಾಹತವಾಗಿ ನಡೆಯುತ್ತಿರುವ ಗ್ರಾಮೀಣ ಪ್ರದೇಶದ ಶೋಷಣೆ ಕಾರಣಗಳು. ಈ ಶೋಷಣೆಯನ್ನು ಕರ್ನಾಟಕ ಚಳವಳಿ ಈ ರೀತಿಯ ಸ್ಲೋಗನ್‍ಗಳ ಮುಖಾಂತರ ಜನಪ್ರಿಯಗೊಳಿಸಿತ್ತು-‘ಕೋಳಿ ನಮ್ಮದು ಮೊಟ್ಟೆ ಯಾರಾದೋ, ದನ ನಮ್ಮದು ಹಾಲು ಯಾರದೋ’ ಇತ್ಯಾದಿ. ವಾಸ್ತವವಾಗಿ ಭಾರತದ ಅಭಿವೃದ್ಧಿಯ ಕೊರತೆಗೆ ಎರಡು ಕಾರಣಗಳೆಂದು ಕರ್ನಾಟಕ ರೈತ ಹೋರಾಟ ವಾದಿಸುತ್ತದೆ: 1980ರ ದಶಕದಲ್ಲಿ ವಸಾಹತುಶಾಹಿಯ ಪಳೆಯುಳಿಕೆಗಳು ಬಡಕಲು ಬಂಡವಾಳಕ್ಕೆ ಕಾರಣ. ಅದಕ್ಕೆ ಪರ್ಯಾಯವಾಗಿ ‘ಗಾಂಧಿ’ ಮತ್ತು ‘ಖಾದಿ ಖರ್ಟನ್’ ಅನ್ನು ವಾದಿಸಿತ್ತು. ಎರಡನೆಯದಾಗಿ, ಅಂತರರಾಷ್ಟ್ರೀಯ ಬಂಡವಾಳ. ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದ ಬಡತನಕ್ಕೆ, ಅಭಿವೃದ್ಧಿ ಕೊರತೆಗೆ ಕಾರಣ. ಇದಕ್ಕಾಗಿ ಅಂತರರಾಷ್ಟ್ರೀಯ ಬಂಡವಾಳ, ಸಂಸ್ಥೆಗಳೊಂದಿಗೆ ನೇರ ಮುಖಾಮುಖಿ, ಪ್ರತಿರೋಧ ಮತ್ತು ಅದರ ನಾಶವನ್ನು ಬಯಸುತ್ತದೆ. ಇದಕ್ಕೆ ಪೂರಕವೆಂಬಂತೆ ಬಂಡವಾಳಶಾಹಿಯ ಶೋಷಣೆಗಳಿಲ್ಲದ, ರೈತರ ಮತ್ತು ಕೆಳಸ್ತರ ವರ್ಗದ ಐಡೆಂಟಿಟಿಯನ್ನು ಉಳಿಸಿಕೊಳ್ಳುವ ಪರ್ಯಾಯ ಜಗತ್ತನ್ನು ಕಲ್ಪಿಸುತ್ತದೆ ಈ ವಾದದಲ್ಲಿ ತೀವ್ರತರ ಮಾಕ್ರ್ಸ್‍ವಾದವನ್ನು ನೋಡಬಹುದು. ಕರ್ನಾಟಕ ರೈತ ಹೋರಾಟದ ತಾತ್ವಿಕ ನಿಲುಗಳು ಗಾಂಧಿವಾದದಿಂದ ತೀವ್ರತರ ಮಾಕ್ರ್ಸ್‍ವಾದಕ್ಕೆ ವಾಲಿದ್ದು ನಿಚ್ಚಳ.

ಮಹಾರಾಷ್ಟ್ರ ಚಳವಳಿ ಶೋಷಣೆಯ ಸಂಬಂಧಗಳನ್ನು ‘ಇಂಡಿಯಾ ವರ್ಸಸ್ ಭಾರತ್’ ಎಂಬ ಪರಿಕಲ್ಪನೆಯಲ್ಲಿ ವಿಶ್ಲೇಷಿತ್ತು. ‘ಭಾರತ್ ಎಂಬುದು ಒಂದು ನಂಬಿಕೆಯ ಪರಿಕಲ್ಪನೆ. ವಸಾಹತುಶಾಹಿ ಧೋರಣೆಗಳ ವಿಸ್ತರಣೆಯಂತೆ ಈಗಲೂ ಅದೇ ನೀತಿ ನಿಯಮಗಳು ಭಾರತವನ್ನು ಬ್ರಿಟಿಷರ ನಿರ್ಗಮನದ ನಂತರವೂ ಮುಂದುವರಿಸಲಾಗುತ್ತಿದೆ. ಇಂಡಿಯಾ ಕೂಡ ಒಂದು ಪರಿಕ್ಪನೆ. ಅದು ವಸಾಹತುಶಾಹಿಯ ಶೋಷಣೆಯನ್ನು ತಲಾಂತರವಾಗಿ ಮುಂದುರಿಸುತ್ತಾ ಬಂದಿದೆ.’ ದೊಡ್ಡದೊಡ್ಡ ಕೈಗಾರಿಕೆಗಳು, ನಗರ ಮತ್ತು ಅಂತರರಾಷ್ಟ್ರೀಯ ಸಾಮ್ರಾಜ್ಯಶಾಯಿ ಈ ಇಂಡಿಯಾವನ್ನು ಪ್ರತಿನಿಧಿಸುತ್ತವೆ. ಅವು ಹಳ್ಳಿಗಳನ್ನು/ಗ್ರಾಮೀಣ ಪ್ರದೇಶಗಳನ್ನು ಬೆಲೆ, ಸಬ್ಸಿಡಿ, ವ್ಯಾಪಾರ ನಿಯಮಗಳ ಬದಲಾವಣೆ ಮೂಲಕ ಶೋಷಿಸುತ್ತದೆ’. ಇಂಡಿಯಾ ಎಂಬ ಪರಿಕಲ್ಪನೆ ಭಾರತದೊಳಗಿರಬಹುದು-ಆಶ್ಚರ್ಯವಿಲ್ಲ. ಅದು ಸಹಕಾರಿ ಸಕ್ಕರೆ ಕಾರ್ಖಾನೆ, ಬಟ್ಟೆ ಗಿರಣಿಗಳ ಮೂಲಕ ಇರಬಹುದು. ಇದನ್ನು ಆಂತರಿಕ ವಸಾಹತುಶಾಹಿ ಎನ್ನಬಹುದು.

ಮಹಾರಾಷ್ಟ್ರದ ಚಳವಳಿ ಬಂಡವಾಳಶಾಯಿ ವಿರೋಧಿಯಾಗಿತ್ತು ಎಂಬರ್ಥವಲ್ಲ. ಅದು ಬಂಡವಾಳಶಾಹಿಯನ್ನು ಒಂದೆಡೆ ವಿಮರ್ಶಿಸುತ್ತಲೇ ಅದರ ಪರವಾಗಿ ವಾದಿಸುತ್ತಾ ಬಂತು.

ಈ ವಾದ ಸಂಪೂರ್ಣವಾಗಿ ಹೊಸತಾಗಿರಲಿಲ್ಲ. ಈ ಹಿಂದೆ ಮಾಕ್ರ್ಸ್‍ವಾದಿ ಚಿಂತಕಿ ರೋಝಾ ಲುಕ್ಸೆಂಬರ್ ವಾದಿಸಿದ್ದರು. ಇಡೀ ಶೋಷಣೆಯ ಚಕ್ರವ್ಯೂಹವನ್ನು ಭೇದಿಸಲು ಅದು ವಾದಿಸಿದ್ದು ಮಾತ್ರ ಬೆಂಬಲ ಅಥವಾ ವೈಜ್ಞಾನಿಕ ಬೆಲೆ. ಅದಕ್ಕಾಗಿ ಏಳು ಕಾರಣಗಳನ್ನು ನೀಡುತ್ತದೆ: ಕೃಷಿಯಲ್ಲಿ ಹೆಚ್ಚುವ ಬಂಡವಾಳ, ಕೃಷಿ ಕಾರ್ಮಿಕರಿಗೆ ಹೆಚ್ಚುವ ಕೂಲಿ ಮತ್ತು ಬೇಡಿಕೆ, ವಿವಿಧ ಕ್ಷೇತ್ರಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೃಷಿಯಲ್ಲಿ ಹೊಸ ತಾಂತ್ರಿಕತೆಯ ಅಳವಡಿಕೆ, ವ್ಯಾಪಾರದ ವೃದ್ಧಿ. ಇದೆಲ್ಲರ ಅರ್ಥ ಮಹಾರಾಷ್ಟ್ರದ ಚಳವಳಿ ಬಂಡವಾಳಶಾಯಿ ವಿರೋಧಿಯಾಗಿತ್ತು ಎಂಬರ್ಥವಲ್ಲ. ಅದು ಬಂಡವಾಳಶಾಹಿಯನ್ನು ಒಂದೆಡೆ ವಿಮರ್ಶಿಸುತ್ತಲೇ ಅದರ ಪರವಾಗಿ ವಾದಿಸುತ್ತಾ ಬಂತು. ಉದಾರವಾಗಿ ಜಾಗತೀಕರಣವನ್ನು ಬೆಂಬಲಿಸುವುದರಲ್ಲಿ ಈ ರಾಜಕಾರಣ ಕಂಡು ಬರುತ್ತದೆ.

ಇವೆಲ್ಲರ ನಡುವೆ ಎರಡು ಪ್ರಶ್ನೆಗಳಿವೆ: ರೈತ ಚಳವಳಿಗಳ ಕಾಲ ಮುಗಿಯಿತೇ? ಅಥವಾ ಅವು ಸೋತುಹೋದವೇ? ಚಳವಳಿಗಳಿಗೆ ಕೆಲವು ಸಂದರ್ಭದಲ್ಲಿ ಹಿನ್ನಡೆಯಾದದ್ದು ಸತ್ಯ. ಅವು ರೈತರ ಆತ್ಮಹತ್ಯೆಯನ್ನು ತಡೆಯಲು ವಿಫಲವಾದದ್ದು ದಿಟ. ಆದರೆ ಚಳವಳಿಗಳ ಕಾಲ ಮುಗಿದಿಲ್ಲ. ವಾಸ್ತವವಾಗಿ ಜಾಗತೀಕರಣ ಜಗತ್ತಿನ ವಿವಿಧ ಭಾಗಗಳಲ್ಲಿ ಸಾವಿರಾರು ಚಳವಳಿಗಳನ್ನು ಹುಟ್ಟುಹಾಕಿದ್ದು ಕೂಡ ಅಷ್ಟೇ ಸತ್ಯ. ಚಳವಳಿಗಳು ಈಗ ದಿನನಿತ್ಯದ ವಿಷಯಗಳಾಗಿವೆ. ರೈತ ಚಳವಳಿಗಳು ಈ ಸಂದರ್ಭದಲ್ಲಿ ಹೊಸ ಪ್ರತಿರೋಧಗಳೊಂದಿಗೆ ಮರು ಹುಟ್ಟುತ್ತಿವೆ, ಹೊಸ ಕಥನಗಳಿಗೆ, ಹೊಸ ಇತಿಹಾಸಕ್ಕೆ ಸಾಕ್ಷಿಯಾಗುತ್ತಿವೆ.

*ಲೇಖಕರು ಮೈಸೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಮಾಜಿ ಅಧ್ಯಕ್ಷರು; ಪ್ರಸ್ತುತ ಪ್ರಸ್ತಾಪಿತ ರಾಯಚೂರು ವಿ.ವಿ.ಯ ವಿಶೇಷಾಧಿಕಾರಿ.

Leave a Reply

Your email address will not be published.