ರಾಜಕೀಯದಲ್ಲಿ ಉದಾಸೀನ ಪರ್ವ

– ಎ.ನಾರಾಯಣ

ಮೂರು ಲೋಕಸಭಾ ಸ್ಥಾನಗಳಿಗೆ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶದ ಆಧಾರದಲ್ಲಿ ಹೇಳುವುದಾದರೆ ರಾಜ್ಯದ ರಾಜಕೀಯ ಪರಿಸ್ಥಿತಿ ವಿಧಾನಸಭಾ ಚುನಾವಣೆಯ ಕಾಲದಲ್ಲಿದ್ದ ಹಾಗೆ ಈಗಲೂ ಇದೆ. ವಿಶೇಷವಾಗಿ ಏನೂ ಬದಲಾದಂತೆ ಕಾಣುತ್ತಿಲ್ಲ. ಬದಲಿಸುವ ಉತ್ಸಾಹ ಮೂರು ಪಕ್ಷಗಳಿಗೂ ಇದ್ದಂತೆ ಕಾಣುವುದಿಲ್ಲ.

ಕರ್ನಾಟಕ ರಾಜ್ಯ ರಾಜಕಾರಣ 20018ರ ವಿಧಾನಸಭಾ ಚುನಾವಣೆ ಕಳೆದ ನಂತರ ಒಂದು ವಿಚಿತ್ರವಾದ ಸ್ಥಗಿತ ಸ್ಥಿತಿಯನ್ನು ಪ್ರವೇಶಿಸಿದಂತಿದೆ. ಜೆಡಿ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರಕಾರ ಒಂಥರಾ ತಾತ್ಕಾಲಿಕ ನೌಕರಿ ನಡೆಯುವಂತೆ ನಡೆಯುತ್ತಿದೆ. ಹಿಂದೆಯೂ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರಗಳು ಆಗಿ ಹೋಗಿವೆ. ಸಮ್ಮಿಶ್ರ ಸರಕಾರ ಎಂದ ಮೇಲೆ ಅದನ್ನು ಒಂದಷ್ಟು ಮಟ್ಟಿಗಿನ ಅಭದ್ರತೆ, ಅಸ್ಥಿರತೆ ಕಾಡುವುದು ಅಸಹಜವೇನೂ ಅಲ್ಲ. ಆದರೆ ಈ ಬಾರಿ ರೂಪುಗೊಂಡ ಸಮ್ಮಿಶ್ರ ಸರಕಾರವನ್ನು ಘೋರ ನಶ್ವರಪ್ರಜ್ಞೆಯೊಂದು ಆವರಿಸಿ ಕೊಂಡಿರುವಂತಿದೆ. ಇದು ಕೇವಲ ಸರಕಾರದ ಕತೆ ಮಾತ್ರವಲ್ಲ. ರಾಜ್ಯ ರಾಜ ಕೀಯದ ಕತೆಯೂ ಹೌದು. ರಾಜ್ಯದ ಮೂರೂ ರಾಜಕೀಯ ಪಕ್ಷಗಳು -ಸರಕಾರ ನಡೆಸುತ್ತಿರುವ ಮಿತ್ರಪಕ್ಷಗಳು ಮತ್ತು ಅವಕಾಶಕ್ಕಾಗಿ ಹೊಂಚುಹಾಕುತ್ತಿರುವ ಪ್ರತಿಪಕ್ಷ ಬಿಜೆಪಿ- ಏನನ್ನೋ ನಿರೀಕ್ಷಿಸುತ್ತಾ, ಈಗ ಇರುವುದೆಲ್ಲ ಮಿಥ್ಯ ಎನ್ನುವ ಧ್ಯಾನಸ್ಥ ಸ್ಥಿತಿಯಲ್ಲಿರುವಂತಿವೆ. ಮುಂದೇನೋ ಬರಲಿದೆ, ಅಲ್ಲಿಯವರೆಗೆ ಎಲ್ಲವೂ ವ್ಯರ್ಥ ಎನ್ನುವ ರೀತಿ ದಿನದೂಡುತ್ತಿರುವಂತೆ ಭಾಸವಾಗುತ್ತಿದೆ.

ಕುಮಾರಸ್ವಾಮಿ ತಾತ್ಕಾಲಿಕ ಹುದ್ದೆಯಲ್ಲಿದ್ದಾರೆಯೇ

ಹಿಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆ ದಾಗ ಅವರಿಗೆ ಆಡಳಿತದಲ್ಲಿದ್ದ ಅನುಭವ ಸೊನ್ನೆ. ಈ ಬಾರಿ ಹಾಗಲ್ಲ. ಹಿಂದೆ ಮುಖ್ಯಮಂತ್ರಿಯಾದ ಅನುಭವ ಮತ್ತು ಒಂದಷ್ಟು ಸಮಯ ವಿರೋಧಪಕ್ಷದ ನಾಯಕನ ಸ್ಥಾನ ನಿರ್ವಹಿಸಿದ ಅನುಭವ ಬಗಲಿಗೆ ಕಟ್ಟಿಕೊಂಡು ಅವರು ಮುಖ್ಯಮಂತ್ರಿಯಾಗಿದ್ದಾರೆ. ಆದುದರಿಂದ ನಿರೀಕ್ಷೆಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತವೆ. ಆದರೆ ಅದ್ಯಾಕೋ ಈ ಬಾರಿ ಕುಮಾರಸ್ವಾಮಿಯ ನಡೆನುಡಿಯಲ್ಲಿ ಹಿಂದಿನ ಗೆಲುವು ಅಥವಾ ಉತ್ಸಾಹ ಕಾಣಿಸುತ್ತಿಲ್ಲ. ಅವರು ಸುಸ್ತಾದಂತೆ ಕಾಣಿಸುತ್ತಾರೆ. ಜತೆಗೆ ತಾನೇನೋ ಒಂದು ತಾತ್ಕಾಲಿಕ ಹುದ್ದೆಯನ್ನು ನಿರ್ವಹಿಸುತ್ತಿದ್ದೇನೆ ಎನ್ನುವ ರೀತಿಯ ಅಭಿಪ್ರಾಯ ಮೂಡಿಸಿಬಿಟ್ಟಿದ್ದಾರೆ.

ರೈತರ ಸಾಲಮನ್ನಾ ಮಾಡುವುದಾಗಿ ಅವರ ಪಕ್ಷ ನೀಡಿದ್ದ ಅವಸರದ ಭರವಸೆಯ ಹೊರೆ ಅಭಿವೃದ್ಧಿ ಆಡಳಿತದಲ್ಲಿ ಅವರು ಕೈಕಾಲು ಆಡಿಸಲು ಸಾಧ್ಯವಾಗದಂತೆ ಮಾಡಿದೆ ಅನ್ನಿಸುತ್ತದೆ. ಈ ಸಲ ಅವರ ಸರಕಾರ ಹೇಗೆ ನಿರ್ವಹಣೆ ನಡೆಸುತ್ತದೆ ಎನ್ನುವದರ ಮೇಲೆ ಅವರ ಪಕ್ಷ ಹಳೆ ಮೈಸೂರಿನಾಚೆಗೆ ಎಷ್ಟರ ಮಟ್ಟಿಗೆ ಛಾಪು ಮೂಡಿಸುತ್ತದೆ ಎನ್ನುವುದು ನಿರ್ಣಯವಾಗುತ್ತದೆ. ಆದರೆ ಮುಖ್ಯಮಂತ್ರಿಯ ಹುದ್ದೆಯನ್ನು ಅವರು ಈತನಕ ನಿರ್ವಹಿಸಿದ ರೀತಿ ಅಂತಹ ಯಾವ ಸಾಧ್ಯತೆಗಳನ್ನೂ ಸೃಷ್ಟಿಸಿಲ್ಲ. ಪಕ್ಷಕ್ಕೆ “ಸಂಪನ್ಮೂಲ ಕ್ರೂಡೀಕರಿಸುವ” ನಿಟ್ಟಿನಲ್ಲಿ ಗಮನ ಕೇಂದ್ರೀಕೃತವಾಗಿರುವುದು ಹೀಗಾಗಲು ಕಾರಣ ಎನ್ನುವವರಿದ್ದಾರೆ. ಅದು ನಿಜವಿರಲೂಬಹುದು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಆರು ತಿಂಗಳಾಗಿದೆ. ಇನ್ನು ಆರು ತಿಂಗಳು ಕಳೆದರೆ ಲೋಕಸಭಾ ಚುನಾವಣೆ. ಈ ಮಧ್ಯೆ ಒಂದು ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಒಂದು ಸುತ್ತು ಉಪಚುನಾವಣೆಗಳು. ಮೂರು ಲೋಕಸಭಾ ಸ್ಥಾನಗಳಿಗೆ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶದ ಆಧಾ ರದಲ್ಲಿ ಹೇಳುವುದಾದರೆ ರಾಜಕೀಯ ಪರಿಸ್ಥಿತಿ ವಿಧಾನಸಭಾ ಚುನಾ ವಣೆಯ ಕಾಲದಲ್ಲಿದ್ದ ಹಾಗೆ ಈಗಲೂ ಇದೆ. ವಿಶೇಷವಾಗಿ ಏನೂ ಬದಲಾದಂತೆ ಕಾಣುತ್ತಿಲ್ಲ. ಬದಲಿಸುವ ಉತ್ಸಾಹ ಮೂರು ಪಕ್ಷಗಳಿಗೂ ಇದ್ದಂತೆ ಕಾಣುವುದಿಲ್ಲ. ಉಪಚುನಾವಣಾ ಫಲಿತಾಂಶದಲ್ಲಿ ಅಚ್ಚರಿ ಎಂದು ಗುರುತಿಸಲಾದ ಎಲ್ಲಾ ಅಂಶಗಳು ವಿಧಾನಸಭಾ ಚುನಾಣೆಯ ಕಾಲದ ಬಲಾಬಲಗಳನ್ನೇ ಮತ್ತೆ ಪ್ರತಿಫಲಿಸಿದ್ದು, ಬಳ್ಳಾರಿ ಯಲ್ಲಿ ಬಿಜೆಪಿಯ ಬಲ ಕುಗ್ಗಿದ್ದು ವಿಧಾನಸಭಾ ಚುನಾವಣೆಯಲ್ಲೇ ಜಾಹೀರಾಗಿತ್ತು.

ಉಳಿದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಒಂದೋ ಎರಡೋ ಸ್ಥಾನಗಳನ್ನು ಪ್ರಯಾಸದಿಂದ ಗೆದ್ದುಕೊಂಡಿದ್ದ ಕಾಂಗ್ರೆಸ್ ಬಳ್ಳಾರಿಯ ಒಂಬತ್ತು ವಿಧಾನಸಭಾ ಸ್ಥಾನಗಳಲ್ಲಿ ಬರೋಬ್ಬರಿ ಆರು ಸ್ಥಾನಗಳನ್ನು ಪಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಅದೇ ಗಾಳಿ ಮತ್ತೆ ಬೀಸಿದೆ. ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಿಂದ ಗೆದ್ದಿದ್ದಾರೆ. ಶಿವಮೊಗ್ಗದಲ್ಲಿ ಜನತಾದಳ ವಿಧಾನಸಭಾ ಚುನಾವಣೆಯಲ್ಲಿ ಕೆಲವುಕಡೆ ಗಣನೀಯ ಮತಗಳನ್ನು ಪಡೆದುಕೊಂಡಿತ್ತು. ಅದಕ್ಕೆ ಮೊನ್ನೆನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಲವೂ ಸೇರಿದ್ದರಿಂದ ಮೈತ್ರಿಕೂಟದ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿದ್ದಾರೆ. ಬಿಜೆಪಿಯ ಗೆಲುವಿನ ಅಂತರ ಕಡಿಮೆಯಾಗಿದೆ. ಜಮಖಂಡಿ ವಿಧಾನ ಸಭಾ ಉಪಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಗೆದ್ದಿದೆ. ಅಲ್ಲಿ ಸ್ಥಳೀಯ ಬಿಜೆಪಿ ವೈಮನಸ್ಯ ಕಾಂಗ್ರೆಸ್ ಗೆಲುವಿನ ಅಂತರ ಹೆಚ್ಚಿಸಿದೆ ಅನ್ನಿಸುತ್ತದೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾಗಿ ಮಂಡ್ಯ ಜನತಾ ದಳದ ಬಳಿಯೇ ಉಳಿದಿದೆ. ಆದರೆ ಅಲ್ಲಿನ ಕಾಂಗ್ರೆಸ್ ಬೆಂಬಲಿಗರು ಮೈತ್ರಿಕೂಟದ ಅಭ್ಯರ್ಥಿಗೆ ಮತ ನೀಡದೆ ಬಿಜೆಪಿಗೇ ಸೈ ಅಂದದ್ದಕ್ಕೆ ಬಿಜೆಪಿಗೆ ಸೋಲಿನಲ್ಲೂ ದೊಡ್ಡ ಪ್ರಮಾಣದ ಮತ ಬಂದಿದೆ. ರಾಮನಗರದಲ್ಲಿಯೂ ಹೆಚ್ಚು ಕಡಿಮೆ ಹೀಗೆ. ಒಟ್ಟಿನಲ್ಲಿ, ಉಪಚುನಾವಣೆಗಳ ಫಲಿತಾಂಶ ಸಾರಿ ಹೇಳಿದ್ದು ಜನರ ಒಲವು ನಿಲುವುಗಳಲ್ಲಿ ವಿಧಾನಸಭಾ ಚುನಾವಣೆಯ ನಂತರ ಏನೇನೂ ಬದಲಾಗಿಲ್ಲ ಅಂತ.

ಉಪಚುನಾವಣಾ ಫಲಿತಾಂಶವನ್ನು ನೋಡಿದರೆ ಕಾಂಗ್ರೆಸ್ ಮತ್ತು ಜನತಾದಳ ಬಾಗುವ ಸ್ಥಿತಿಯಿಂದ ಬಚಾವಾದಂತೆ ಕಾಣುತ್ತದೆ. ಹಾಗೆಂದು ಅವು ಬೀಗುವ ಸ್ಥಿತಿಯಲ್ಲಿ ಖಂಡಿತಾ ಇಲ್ಲ. ಬಳ್ಳಾ ರಿಯನ್ನು ಕಳೆದುಕೊಂಡು, ಶಿವಮೊಗ್ಗದಲ್ಲಿ ಕಡಿಮೆ ಅಂತರದಿಂದ ಗೆದ್ದ ಬಿಜೆಪಿ ಸ್ವಲ್ಪ ವಿಚಲಿತಗೊಂಡಿರಬಹುದಾದರೂ ಆ ಕಾರಣ ಕ್ಕೆ ಕಾಂಗ್ರೆಸ್ ಆಗಲಿ ಜನತಾದಳವಾಗಲೀ ಸಮಾಧಾನ ಪಡುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅದರ ಸ್ಥಳೀಯ ನಾಯಕರಿಗಿಂತ ಹೆಚ್ಚಾಗಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಯಾವ ತಂತ್ರ ಹೂಡುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿ ಕೊಂಡು ಅದೆಂತಹಾ ಅಭೇದ್ಯ ವ್ಯೂಹ ಬೆಸೆದರೂ ಅದನ್ನು ಛಿದ್ರಗೊಳಿಸಿಯೇ ಬಿಟ್ಟೇವು ಎನ್ನುವಂತಹ ಭರವಸೆಯನ್ನು ಕಾಂಗ್ರೆಸ್-ಜೆಡಿ(ಎಸ್) ಮೈತ್ರಿಕೂಟ ಇಟ್ಟುಕೊಳ್ಳುವಂತಹ ಸ್ಥಿತಿ ಇಲ್ಲ. ಉಪಚುನಾವಣೆಯಲ್ಲಿ ಬಂದ ಫಲಿತಾಂಶ ಮಹಾಚುನಾವಣೆಯಲ್ಲಿ ಅಸ್ತವ್ಯಸ್ತವಾದ ಉದಾಹರಣೆಗಳಿವೆ. ಲೋಕಸಭಾ ಚುನಾವಣೆಯ ಫಲಿತಾಂಶ ಅನತಿ ಅಂತರದ ವಿಧಾನಸಭಾ ಚುನಾವಣೆಯಲ್ಲಿ ವ್ಯತಿ ರಿಕ್ತವಾದ ಚರಿತ್ರೆ ಇದೆ.

ವಿಧಾನಸಭೆಯ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಪುನಾರಾವರ್ತನೆಗೊಳ್ಳಬೇಕಾ ಗಿಲ್ಲ ಎನ್ನುವುದನ್ನು 2014ರ ಲೋಕಸಭಾ ಚುನಾವಣೆಯೇ ರಾಜ್ಯದಲ್ಲಿ ತೋರಿಸಿ ಕೊಟ್ಟಿದೆ. ಆದುದರಿಂದ ರಾಜಕೀಯದಲ್ಲಿ ಮುಖ್ಯವಾಗುವುದು ಚುನಾವಣಾ ಫಲಿತಾಂಶಗಳಿಂದಾಚೆಗಿನ ಪಕ್ಷಗಳ ಸಂಘಟನಾ ಬಲಾಬಲ, ಮತ್ತು ನಾಯಕತ್ವದ ವರ್ಚಸ್ಸು. ಮೂರೂ ಪಕ್ಷಗಳು ಕುಂಟುತ್ತಿರುವುದು ಈ ವಿಷಯದಲ್ಲಿ. ಸಂಘಟನಾತ್ಮಕವಾಗಿ ಅವು ಆರಕ್ಕೆ ಏರುತ್ತಿಲ್ಲ, ಮೂರಕ್ಕೆ ಇಳಿಯುತ್ತಿಲ್ಲ. ಮೂರೂ ಪಕ್ಷಗಳಲ್ಲೂ ಜಾತಿ ನಾಯಕರು ಇದ್ದಾರೆಯೇ ಹೊರತು ಜನನಾಯಕ ರಿಲ್ಲ. ಇದ್ದುದರಲ್ಲಿ ಪರ ವಾಗಿಲ್ಲ ಎನ್ನುವ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಒಂದು ಹಂತ ಮೀರಿ ಬೆಳೆಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಅಥವಾ ಅವರ “ಪರವಾಗಿಲ್ಲ” ದ ವರ್ಚಸ್ಸನ್ನು ಬಳಸಿಕೊಂಡು ಆ ಪಕ್ಷ ಹೊಸ ಕಾರ್ಯತಂತ್ರವನ್ನು ರೂಪಿಸುವ ಯೋಜನೆಯನ್ನೇನೂ ಇಟ್ಟುಕೊಂಡ ಹಾಗಿಲ್ಲ. ಮೂರೂ ಪಕ್ಷಗಳಲ್ಲಿ ಕೂಡಾ ಮಹತ್ವಾಕಾಂಕ್ಷೆ ಸತ್ತುಹೋಗಿ ಯಥಾ ಸ್ಥಿತಿವಾದ ಆಳುತ್ತಿದೆ.

2008ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಧಿಕಾರದ ಅವಕಾಶ ಬಳಸಿಕೊಂಡು ಕುಮಾರಸ್ವಾಮಿಯವರು ನಾಯಕರಾಗಿ ಬೆಳೆಯುವ ಆಶಾಭಾವನೆ ಮೂಡಿಸಿದರು. ತಮ್ಮ ಪಕ್ಷದ ನೆಲೆಯನ್ನು ಹಳೇಮೈಸೂರಿನಾಚೆಗೆ ವಿಸ್ತರಿಸುವ ಸಾಧ್ಯತೆ ತೆರೆದಿಟ್ಟರು. ಬಿಜೆಪಿಯ ಜತೆ ಸೇರಿಕೊಂಡು ನಡೆಸಿದ ಇಪ್ಪತ್ತು ತಿಂಗಳ ಸರಕಾರದಲ್ಲಿ ಕುಮಾರಸ್ವಾಮಿ ಏನೋ ಉತ್ತಮವಾದದನ್ನು, ಭಿನ್ನವಾದದನ್ನು ಮಾಡಹೊರಟಿದ್ದರು ಎನ್ನುವ ಸದ್ಭಾವನೆಯೊಂದನ್ನು ಆಗ ಅವರು ಮತದಾರರಲ್ಲಿ ಬಿಟ್ಟುಹೋಗಿದ್ದರು. ಈ ಸಲ ಮುಖ್ಯಮಂತ್ರಿಯಾದ ಬಳಿಕ ಇಂತಹದ್ದೊಂದು ಸಣ್ಣ ಭಾವನೆ ಕೂಡಾ ಅವರ ಬಗ್ಗೆ ಮೂಡುತ್ತಿರುವುದೇನೂ ಕಾಣುವುದಿಲ್ಲ.

ಕಾಂಗ್ರೆಸ್ ಯಾವತ್ತೂ ತಂತ್ರಹೂಡಿ, ವ್ಯೂಹರಚಿಸಿ ಚುನಾವಣೆ ಗೆದ್ದ ಉದಾಹರಣೆ ಇಲ್ಲ. ತನ್ನ ಎದುರಾಳಿಯ ವಿರುದ್ಧ ಜನ ಬೇಸತ್ತಾಗ ತನಗೊಂದು ಅವಕಾಶ ಬಂದೇ ಬರುತ್ತದೆ ಎಂದು ಅದು ಕಾಯುತ್ತಿರುತ್ತದೆ. ಜನತಾದಳದ ಜತೆ ಮೈತ್ರಿ ಮಾಡಿಕೊಂಡ
ನಂತರವೂ ಅದರ ಮನಸ್ಥಿತಿ ಹಾಗೆಯೇ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಜತೆ ಲಿಂಗಾಯತರಿಲ್ಲ, ಒಕ್ಕಲಿಗರಿಲ್ಲ. ಹಿಂದುಳಿದವರು ಮತ್ತು ದಲಿತರು ತಮ್ಮೊಂದಿಗಿದ್ದಾರೆ ಎಂದು ಕಾಂಗ್ರೆಸ್ ಭಾವಿಸಿದೆ. ಅದು ಸಂಪೂರ್ಣ ಸತ್ಯವಲ್ಲ ಅಂತ ವಿಧಾನಸಭಾ ಚುನಾವಣಾ ಫಲಿತಾಂಶ ಸಾರಿದೆ. ಕೇವಲ ಅಲ್ಪಸಂಖ್ಯಾತರ ಬಲ ಅದನ್ನು ಬಹುಕಾಲ ಪೊರೆಯಲಾರದು. ಸದ್ಯ ಲೋಕಸಭಾ ಚುನಾವಣೆಯನ್ನು ಎದುರುನೋಡುತ್ತಿರುವ ಈ ಹಂತದಲ್ಲೂ ರಾಜ್ಯ ಕಾಂಗ್ರೆಸ್ಸಿನಲ್ಲಿ ವಿಶೇಷವಾದ ತಯಾರಿ ಏನೂ ಕಾಣಿಸುತ್ತಿಲ್ಲ. ಜೆಡಿ ಎಸ್ ಜತೆಗಿನ ಹೊಂದಾಣಿಕೆ ಮತ್ತು ಕೇಂದ್ರ ಸರಕಾರದ ಮೇಲೆ ತಲೆದೋರಿದೆ ಎನ್ನಲಾದ ಒಂದು ಮಟ್ಟದ ಭ್ರಮನಿರಸನ ಇತ್ಯಾದಿ ಯಾವ ತಯಾರಿಯೂ ಇಲ್ಲದೆ ಸೃಷ್ಟಿಯಾದ ಅನುಕೂಲಗಳನ್ನು ಬಳಸಿ ಕೊಂಡು ಒಂದಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಅದರ ಲೆಕ್ಕಾಚಾರವಾಗಿರಬೇಕು.

ಬಿಜೆಪಿಯದ್ದು ಇನ್ನೂ ವಿಚಿತ್ರ ಪರಿಸ್ಥಿತಿ. ಅದರಲ್ಲಿ ಬಹುಮಂದಿಗೆ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಸಮಾಧಾನ ಇದ್ದಂತಿಲ್ಲ. ಆದರೆ ಯಡಿಯೂರಪ್ಪ ಇಲ್ಲದೆ ಹೋದರೆ ಆ ಪಕ್ಷಕ್ಕೆ ಕರಾವಳಿ ಕರ್ನಾಟಕ ದಾಚೆಗೆ ಅಸ್ತಿತ್ವಇಲ್ಲ. ಆ ಪಕ್ಷ ಕರ್ನಾಟಕದಲ್ಲಿ ಏರುವಷ್ಟು ಎತ್ತರ ಏರಿ ಆಗಿದೆ. ಇನ್ನು ಅದರ ಎತ್ತರ, ವಿಸ್ತಾರ ಬೆಳೆಯಬೇಕಾದರೆ ಅದು ದೊಡ್ಡ ಮಟ್ಟದಲ್ಲಿ ಶ್ರಮಿಸಬೇಕು. ಸದ್ಯಕ್ಕೆ ಅಂತಹ ಯಾವ ಭರವಸೆಗಳನ್ನು ಅದು ಮೂಡಿಸುತ್ತಿಲ್ಲ. ಬದಲಿಗೆ ಪಕ್ಷದೊಳಗೆ ಗೊಂದಲವಿದ್ದಂತಿ ದೆ. ಉಪಚುನಾವಣೆಯಲ್ಲಿ ಆದ ಹಿನ್ನಡೆಯ ನಂತರ ಹುಟ್ಟಿಕೊಂಡ ನಾಯಕತ್ವದ ಬದಲಾವಣೆಯ ಚರ್ಚೆಯೇ ಇದಕ್ಕೆ ಸಾಕ್ಷಿ. ದೆಹಲಿಯ ದೇವರುಗಳು ತಮ್ಮನ್ನು ಹೇಗೋ ರಕ್ಷಿಸುತ್ತಾರೆ ಎನ್ನುವುದೇ ಬಿಜೆಪಿಯರಿಗೆ ಇರುವ ಏಕೈಕ ಭರವಸೆ. ದೆಹಲಿ ದೇವರುಗಳು ಮತ್ತೊಮ್ಮೆ ಕಂಡಕಂಡ ದೇವರ ಮೊರೆ ಹೋಗಿ ಮೋಡಿ ಮಾಡುವ ಸನ್ನಾಹದಲ್ಲಿದ್ದಾರೆ ಎಂದು ಇತ್ತೀಚಿಗೆ ಅಮಿತ್ ಶಾ ಮಂಗಳೂರಿಗೆ ಬಂದು ಮಾಡಿದ ಕಸರತ್ತು ತಿಳಿಸುತ್ತದೆ.

ಮೂರೂ ಪಕ್ಷಗಳಿಗೂ ಹೊಸ ನಾಯಕತ್ವ, ಹೊಸ ಚಿಂತನೆ ಮತ್ತು ಹೊಸ ತಂತ್ರಗಾರಿಕೆಯ ಅವಶ್ಯಕತೆ ಇದೆ. ಆದರೆ ಹಳೆಯ ನಾಯಕತ್ವವನ್ನು ಬಿಟ್ಟರೆ ಅವುಗಳಿಗೆ ಬೇರೆ ಗತಿಯಿಲ್ಲ. ಹಳೆಯ ನಾಯಕತ್ವಕ್ಕೆ ಹಳಸಲು ಯೋಚನೆಯಿಂದ ಹೊರಬರಲು ಬೇಕಾದ ತಾಕತ್ತಿಲ್ಲ. ಅದಕ್ಕೆ, ಸದ್ಯಕ್ಕೆ ಎಲ್ಲರೂ ಯಥಾಸ್ಥಿತಿವಾದಕ್ಕೆ ಸಂಪೂರ್ಣ ಶರಣಾಗಿ ಲೋಕಸಭಾ ಚುನಾವಣೆಯ ನಿರೀಕ್ಷೆಯಲ್ಲಿರುವುದು.

*ಲೇಖಕರು ಮಂಗಳೂರು ವಿವಿಯಲ್ಲಿ ಎಂ.ಎ., ಇಂಗ್ಲೆಂಡಿನ ಸುಸೆಕ್ಸ್ ವಿವಿಯಿಂದ ಅಭಿವೃದ್ಧಿ ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು, ಅಂಕಣಕಾರರು.

Leave a Reply

Your email address will not be published.