ಕಲಬುರಗಿ ಭಾಷಾ ಸಂಸ್ಕೃತಿ

ಕಲಬುರಗಿ ಭಾಷೆ ಸಂಸ್ಕೃತಿ ಕಲಬುರಗಿ ಭಾಷೆಯ ಮೇಲೆ ಕಾಲಕಾಲಕ್ಕೆ ಅನ್ಯಭಾಷೆಗಳ ಪ್ರಭಾವ ಉಂಟಾಗಿದೆ. ಅದರಲ್ಲೂ ಉರ್ದುವಂತೂ ಕನ್ನಡಕ್ಕೆ ಕುತ್ತಾಗಿ ಬಂದರೂ ಇಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಧರ್ಮ ಮತ್ತು ಸಂಸ್ಕೃತಿಗಳೊಂದಿಗೆ ಭಾಷೆ ಎಷ್ಟು ಗಾಢವಾಗಿ ಹೊಂದಿಕೊಳ್ಳುತ್ತದೆ ಎಂಬುದಕ್ಕೆ ಇಲ್ಲಿಯ ಕನ್ನಡ ಭಾಷೆ, ಕನ್ನಡಿಗರೇ ಸಾಕ್ಷಿ.

ಡಾ.ಮಲ್ಲಿನಾಥ ಶಿ.ತಳವಾರ

ಮಾನವನು ಮೂಲತಃ ಸಮಾಜಜೀವಿ. ಒಂಟಿಯಾಗಿ ಇರಲು ಬಯಸದೆ ಸಾಮೂಹಿಕವಾಗಿ ಇರಬಯಸುತ್ತಾನೆ. ಅದರ ಫಲವೇ ಭಾವನೆಗಳ ಹಂಚಿಕೆ. ಈ ನೆಲೆಯಲ್ಲಿ ಮಾನವನಿಗೆ ಭಾಷೆಯು ಅನಿವಾರ್ಯವಾದ ಬಂಧವಾಗಿದೆ. ಈ ಭಾಷೆಯ ಬಂಧದಿಂದಲೇ ಮಾನವನು ಇತರ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಇದರೊಂದಿಗೆ ಅವನ ಆಲೋಚನಾ ಶಕ್ತಿ ಮತ್ತು ವಿವೇಚನಾ ಸಾಮಥ್ರ್ಯವೂ ಬೆಸೆದುಕೊಂಡಿದೆ.

ಭಾಷೆಯು ಮಾನವನ ಅಭಿವ್ಯಕ್ತಿಯ ಸಾಧನವಾಗಿದೆ. ಈ ಭಾಷೆಯೇ ಅವನನ್ನು ಉಳಿದ ಪ್ರಾಣಿಗಳಿಗಿಂತ ಪ್ರತ್ಯೇಕಿಸಿದೆ! ಈ ಕಾರಣಕ್ಕಾಗಿಯೇ ‘ಭಾಷೆ ಎಂಬ ಜ್ಯೋತಿ ಬೆಳಗದೆ ಇದ್ದರೆ ಇಡೀ ಭೂಮಂಡಲವೇ ಕತ್ತಲಲ್ಲಿ ಮುಳುಗಿರುತ್ತಿತ್ತು’ ಎಂದು ಲಾಕ್ಷಣಿಕರು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಅರ್ಥದಲ್ಲಿಯೇ ಭಾಷೆ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಈ ಭಾಷೆ ಎನ್ನುವುದು ಕೇವಲ ಅಕ್ಷರಗಳ ಹಂದರವಾಗಿರದೇ ಸಂಸ್ಕೃತಿ- ಪರಂಪರೆ ಮತ್ತು ಸಾಹಿತ್ಯದ ದ್ಯೋತಕವಾಗಿದ್ದು, ಒಂದು ದೇಶದ ನೈಜ ಸಂಪತ್ತಾಗಿದೆ. ಭಾಷೆಯಿಲ್ಲದೆ ಮನುಷ್ಯ ಬದುಕಬಲ್ಲನಾದರೂ ಅವನ ವ್ಯಕ್ತಿತ್ವದ ವಿಕಾಸಕ್ಕೆ, ನಾಗರಿಕತೆಗೆ, ಸಂಸ್ಕೃತಿಗೆ ಸರ್ವಾಂಗೀಣ ಅಭಿವೃದ್ಧಿಗೆ, ಜೀವನದ ಸುಗಮತೆಗೆ ಭಾಷೆ ತೀರಾ ಅವಶ್ಯಕವೆನಿಸಿದೆ. ಈ ಭಾಷೆಗೆ ಅಪಾರ ಚೈತನ್ಯ ಶಕ್ತಿಯಿದ್ದು, ಸುಂದರವಾದ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಭಾಷೆ ಯಾವಾಗಲೂ ವ್ಯಕ್ತಿಯಿಂದ ವ್ಯಕ್ತಿಗಳಿಗೆ ಸಂವಹನವಾಗುವಂಥದು. ಈ ಭಾಷೆ ಪ್ರದೇಶ, ಸಮಾಜ, ಸಂಸ್ಕೃತಿಗೆ ಅನುಗುಣವಾಗಿರುತ್ತದೆ. ಹಲವು ವ್ಯಕ್ತಿಗಳು ನಿರ್ದಿಷ್ಟ ಪ್ರದೇಶದಲ್ಲಿ ಬಳಸುವ ಒಂದು ಭಾಷೆ ಹೆಚ್ಚು ವ್ಯತ್ಯಾಸಗಳಿಲ್ಲದೆ ಬಳಕೆಯಾಗುತ್ತಿದ್ದರೆ, ಅದೇ ಭಾಷೆಯನ್ನು ಪಕ್ಕದ ಪ್ರದೇಶಗಳಲ್ಲಿ ವ್ಯಕ್ತಿಗಳು ಬಳಸುವ ರೀತಿ ಸ್ವಲ್ಪ ವ್ಯತ್ಯಾಸಗಳನ್ನು ತೋರಿಸಿಯೂ ಅದು ಒಂದು ದೊಡ್ಡ ಪ್ರದೇಶದ ವ್ಯಕ್ತಿಗಳ ಭಾಷೆಯೊಡನೆ ಹೋಲುತ್ತಿದ್ದರೆ ಅವುಗಳನ್ನು ಪ್ರಾದೇಶಿಕವಾಗಿ ಗುರುತಿಸಲಾಗುತ್ತದೆ. ಒಂದು ಭಾಷೆಯ ರೂಪಾಂತರವೆಂಬುದು ಆ ಭಾಷೆಯ ಜೀವಂತಿಕೆಯ, ಚಲನಶೀಲತೆಯ ಲಕ್ಷಣವಾಗಿದೆ.

ವ್ಯಕ್ತಿ-ವ್ಯಕ್ತಿಗಳು ಒಂದು ನಿರ್ದಿಷ್ಟವಾದ ಭೌಗೋಳಿಕ ಪರಿಸರದಲ್ಲಿ ಸೇರಿಕೊಂಡು ಪರಸ್ಪರ ತಮ್ಮತಮ್ಮಲ್ಲಿ ಅರ್ಥವಾಗುವಂತೆ ಮಾತನಾಡಿಕೊಳ್ಳುವ ಮಾತುಗಳ ಮೊತ್ತವೇ ಪ್ರಾದೇಶಿಕ ಭಾಷ ಪ್ರಭೇದ. ಇಲ್ಲಿ ಭೌಗೋಳಿಕ ಅಂಶಗಳೊಂದಿಗೆ ಸಾಮಾಜಿಕ ಅಂಶಗಳು ಪರಿಗಣನೆಗೆ ಬರುತ್ತವೆ. ಸಮಾಜಜೀವಿಯಾದ ಮಾನವನು ತಾನು ಯಾವ ಸಾಮಾಜಿಕ ಪರಿಸರದಲ್ಲಿ ಇರುವನೋ ಅಂಥ ಸಾಮಾಜಿಕ ಪರಿಸರದ ಭಾಷೆಯನ್ನೇ ಅವನು ಅಳವಡಿಸಿಕೊಳ್ಳುತ್ತಾನೆ. ಅವುಗಳಲ್ಲಿ ಕಲಬುರಗಿ ಕನ್ನಡ ತುಂಬಾ ಪ್ರಮುಖವಾದುದು.

ಕಲಬುರಗಿಯು ಐತಿಹಾಸಿಕವಾಗಿ, ಸಾಂಸ್ಕೃಶ್ತಿಕವಾಗಿ ಶ್ರೀಮಂತ ಮತು  ಉಜ್ವಲವಾದ ಪರಂಪರೆಯನ್ನು ಹೊಂದಿದೆ. ಧರ್ಮ, ಭಾಷೆ, ಸಾಹಿತ್ಯ ಮೂರರಲ್ಲೂ ಕ್ರಾಂತಿಯ ಕಿಡಿಗಳು ಇಲ್ಲಿಂದಲೇ ಮೊಳಗಿದವು. ಬೌದ್ಧರ ನೆಲೆವೀಡಾಗಿದ್ದ ಸನ್ನತಿ, ವಿಶ್ವವಿದ್ಯಾಲಯವಾಗಿದ್ದ ಚಾಲುಕ್ಯರ ಘಟಿಕಾಸ್ಥಾನ ನಾಗಾವಿ, ಕನ್ನಡಿಗರ ಹೆಮ್ಮೆಯ ಚಕ್ರವರ್ತಿ ನೃಪತುಂಗನ ರಾಜಧಾನಿಯಾಗಿದ್ದ ಮಳಖೇಡ, ಕನ್ನಡ ವಾಙ್ಮಯ ಲೋಕದ ಉಪಲಬ್ದವಾದ ಮೊದಲ ಕೃತಿ ಕವಿರಾಜಮಾರ್ಗ, ನ್ಯಾಯಶಾಸ್ತ್ರದಲ್ಲಿ ಆಕರ ಗ್ರಂಥವಾದ ‘ಮಿತಾಕ್ಷರ’ದ ಕೃತಿಕಾರ ವಿಜ್ಞಾನೇಶ್ವರ… ಇವೆಲ್ಲವೂ ಇಲ್ಲಿಯ ಹೆಜ್ಜೆಗುರುತುಗಳು. ರಾಷ್ಟ್ರಕೂಟರ ಕಾಲದಲ್ಲೇ ಪ್ರಾಕೃತ, ಸಂಸ್ಕೃತ ಸಾಹಿತ್ಯದೊಂದಿಗೆ ಕ್ನನಡ ಸಾಹಿತ್ಯವೂ ಪ್ರಾಶಸ್ತ್ಯ ಹೊಂದಿತ್ತು. ವೀರಶೈವ ವಚನಕಾರರ ಪರಂಪರೆ ಕಲ್ಯಾಣನಾಡಿನ ಈ ಭಾಗದಲ್ಲೂ ಕಾಣಿಸಿಕೊಂಡಿದ್ದು, ಇಂದಿಗೂ ಶೈವ ಪರವಾದ ಮಠಮಾನ್ಯಗಳು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮ ಕಾಣಿಕೆಗಳನ್ನು ನೀಡುತ್ತಿದೆ. ಕಲಬುರಗಿ ಕನ್ನಡ ಪ್ರದೇಶದ ಪೂರ್ವದಿಕ್ಕಿಗೆ ತೆಲುಗು, ಪಶ್ಚಿಮಕ್ಕೆ ಮರಾಠಿ ಭಾಷಿಕರ ಪ್ರದೇಶಗಳು ಇರುವುದರಿಂದ ಆಯಾ ಗಡಿ ಪ್ರದೇಶದಲ್ಲಿ ತೆಲುಗು ಪ್ರಭಾವ ಕಲಬುರಗಿ ಕನ್ನಡದ ಮೇಲಾಗಿದೆ. ಇವೆಲ್ಲದರ ಪರಿಣಾಮವಾಗಿ ಕಲಬುರಗಿ ಕನ್ನಡ ಭಾಷೆಯು ತನ್ನ ಮಡಿಲೊಳಗೆ ಸಾಂಸ್ಕೃತಿಕ ಸಂಪತ್ತನ್ನೇ ಇರಿಸಿಕೊಂಡಿದೆ.

ಭಾಷೆ ಕೇವಲ ಶಬ್ಧ, ಅದು ಭಾವನೆಗಳ ಸಂಗಮವಲ್ಲ. ಅದರಾಚೆಗೂ ಅದು ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ಅಂದರೆ ಭಾಷೆಯೊಂದಿಗೆ ‘ಸಂಸ್ಕೃತಿ’ಯು ಬೆರೆತು ಉಸಿರಾಡುತ್ತಿದೆ. ಪ್ರಪಂಚದಲ್ಲಿ ಅನುಭವ, ಆಲೋಚನೆ, ಜ್ಞಾನ, ಭಾವನೆ, ವಿಜ್ಞಾನಗಳು ವಿಕಾಸವಾದಂತೆಲ್ಲ, ಅವುಗಳಿಗೆ ಭಾಷೆಯು ಸ್ಪಂದಿಸುತ್ತ ಬೆಳೆಯುತ್ತದೆ. ಹೊಸ ಪದಗಳು ಸೃಷ್ಟಿಯಾಗುತ್ತವೆ, ಹಳೆಯ ಪದಗಳು ನವೀಕರಣಗೊಳ್ಳುತ್ತವೆ. ಬದಲಾದ ಜೀವನವಿಧಾನ ನಾಗರಿಕತೆ ಎನಿಸಿಕೊಳ್ಳುತ್ತದೆ. ನಾಗರಿಕ ಜೀವನ ಸುಂದರವಾಗುತ್ತಿದ್ದಂತೆ, ಕಲ್ಪನೆ, ಬುದ್ಧಿ, ಭಾವ ಮೊದಲಾದ ಅವನ ಆಂತರಿಕ ಶಕ್ತಿಗಳು ವಿಶ್ವಚೈತನ್ಯದಂತೆ ಪ್ರತೀಕಗಳು ಎನ್ನುವಂತೆ ವಿಕಸನಗೊಳ್ಳುತ್ತವೆ. ಮಾನವನ ಚೇತನದ ಸಾರ ಸರ್ವಸ್ವದಂತಿರುವ ಶಾಂತಿ ಶ್ರೇಯಸ್ಸುಗಳಿಗೆ ಕಾರಣವಾದ ಈ ವಿಕಾಸ ಕ್ರಮವನ್ನು ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಮನುಷ್ಯ ಸ್ವಭಾವಕ್ಕೆ ಸೌಂದರ್ಯವನ್ನೂ ಬೆಲೆಯನ್ನೂ ಕೊಡುವ ಎಲ್ಲ ಶಕ್ತಿಗಳ ಸುಸಂಗತ ವಿಕಾಸವೇ ಸಂಸ್ಕತಿ.

ಚಾಲುಕ್ಯ, ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ಉತ್ತರ ಗಡಿ ನರ್ಮದಾ ಎಂದೂ ಆಗ ಇಂದಿನ ಮಹಾರಾಷ್ಟ್ರವಿರಲಿಲ್ಲವೆಂದೂ, ಎಲ್ಲಕಡೆಯೂ ಕನ್ನಡ ಭಾಷೆ ಸ0ಸ್ಕೃತಿಗಳು ಹರಡಿಕೊಂಡಿದ್ದವೆಂದೂ, ಇಂದಿನ ಮರಾಠೀ ಸಂಸ್ಕೃತಿಗೆ ಕನ್ನಡವೇ ಮೂಲವೆಂದೂ, ತಳಹದಿಯೆಂದೂ ಹೇಳಲಾಗುತ್ತದೆ.

ಭಾಷೆಯಲ್ಲಿ ಒಂದು ಜನಾಂಗದ ಭಾವನೆ, ಬದುಕು, ಆಚರಣೆಗಳು, ವಿಧಿಕ್ರಿಯೆ, ವಿಚಾರಗಳು, ಕಲೆ, ವಾಸ್ತುಶಿಲ್ಪ, ಸಂಗೀತ, ಶಿಕ್ಷಣ, ನೃತ್ಯ ಮುಂತಾದವುಗಳು ಬೆರೆತಿರುತ್ತವೆ. ಇವು ಮುಂದಿನ ತಲೆಮಾರಿಗೆ ಭಾಷೆಯ ಮೂಲಕವೇ ಸಾಗುತ್ತವೆ. ಚರಿತ್ರೆ, ಅರ್ವಾಚೀನ ಸಾಹಿತ್ಯ, ಬದುಕಿನ ಸಾಂಸ್ಕೃತಿಕ ಮೌಲ್ಯಗಳು ಇಂದಿಗೂ ನಮಗೆ ಲಭ್ಯವಾಗಿರುವುದು ಭಾಷೆಯಿಂದಲೇ ಎಂಬುದು ಅಕ್ಷರಶಃ ಸತ್ಯ. ಒಂದು ಭಾಷೆ ತನ್ನ ಒಡಲೊಳಗೆ ಹುದುಗಿಕೊಂಡಿರುವ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ರಾಯಭಾರಿಯಾಗಿದೆ. ಈ ಭಾಷೆಕಲಿಕೆಯಿಂದ ಪರಿಪೂರ್ಣದತ್ತ ಸಾಗುವುದು. ಈ ಕಲಿಕೆ ಮಗುವಿಗೆ ಕೌಟುಂಬಿಕ ಪರಿಸರದಿಂದಲೇ ದೊರೆಯುತ್ತದೆ. ವೀರಶೈವರ ಮನೆಯ ಮಗು ಶರಣ ಎಂದರಾಗಲಿ, ವೈದಿಕರ ಮನೆಯ ಮಗು ಶ್ರಾದ್ಧ ಎಂದರಾಗಲಿ, ಇಸ್ಲಾಂನ ಮನೆಯ ಮಗು ನಮಾಜ್ ಎಂದರಾಗಲಿ ಗ್ರಹಿಸಲು ಕಷ್ಟಪಡುವ ಪ್ರಮೇಯ ಇರುವುದಿಲ್ಲ. ಇದರೊಂದಿಗೆ ಆಯಾಧರ್ಮದ, ಜಾತಿಯ ನೆಲೆಯಲ್ಲಿ ಭಾಷೆಯ ಮುಖಾಂತರ ಸಂಸ್ಕತಿಯನ್ನು ರೂಪಿಸಿಕೊಳ್ಳಲು ಸಾಧ್ಯ. ಆ ಸಂಸ್ಕೃತಿ ಊಟ, ಉಡುಗೆ ತೊಡುಗೆ, ಆಚಾರ- ವಿಚಾರ, ನಡೆ ನುಡಿ ಎಲ್ಲವನ್ನೂ ಒಳಗೊಂಡಿರುತ್ತದೆ. ಇಸ್ಲಾಂ ಮಕ್ಕಳು ಮೊಹರಂನಲ್ಲಿ ‘ಆಲಾಯಿ’ ಆಡುವುದು, ವೀರಶೈವ ಮಕ್ಕಳು ಲಿಂಗಧಾರಣೆ, ಲಿಂಗಪೂಜೆ ಮಾಡಿಕೊಳ್ಳುವುದು, ವೈದಿಕರ ಮಕ್ಕಳು ಸಂಧ್ಯಾವಂದನೆ ಮಾಡುವುದು, ಇವೆಲ್ಲವೂ ಭಾಷೆಯ ಉದರದಲ್ಲಿಯೇ ಜನಿಸಿರುವ ಸಂಸ್ಕೃತಿಯ ಪಡಿಯಚ್ಚುಗಳು. ಮುಸ್ಲಿಂ- ದಲಿತರ ಕುಟುಂಬಗಳಲ್ಲಿ ಮಾಂಸಾಹಾರ ಸೇವನೆ, ವೀರಶೈವ, ವೈದಿಕರ ಮನೆಯಲ್ಲಿ ಸಾತ್ವಿಕ ಆಹಾರ ಸೇವನೆ ಎಲ್ಲವೂ ಭಾಷ ಪ್ರಯೋಗದಿಂದಲೇ ಸಾಧ್ಯವಾಗಿವೆ.

14ನೇ ಶತಮಾನದಲ್ಲಿ ಕಲಬುರಗಿಯನ್ನು ಬಹುಮನಿ ಸುಲ್ತಾನರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು. ನಂತರದ 600 ವರ್ಷಗಳ ದೀರ್ಘ ಕಾಲ ಮುಸ್ಲಿಮರೇ ಆಡಳಿತ ನಡೆಸಿದರು. ಇದರ ಫಲವಾಗಿ ಇಲ್ಲಿನ ಕನ್ನಡ ಭಾಷೆ ಉರ್ದುವಿನ ದಟ್ಟ ಪ್ರಭಾವಕ್ಕೆ ಒಳಗಾಯಿತು. ಕರ್ನಾಟಕದ ಇತರ ಪ್ರದೇಶಗಳಿಗಿಂತಲೂ ಕಲಬುರಗಿ “ಈಗ ನಿಮ್ಮ ಪ್ರಾಣ ನೀಂತಿರುವುದು ಡಾಕ್ಟರ್ ಕೈಲಿ ಅಲ್ಲ… ಟ್ರಾಫಿಕ್ ಜಾಮ್ ಮೇಲೆ ಸಾರ್!!”.ಕನ್ನಡದ ಮೇಲೆ ಉರ್ದುವಿನ ಪ್ರಭಾವ ತುಂಬಾನೇ ಇದೆ. ಕನ್ನಡ- ಉರ್ದು ದ್ವಿಭಾಷಿಕತೆ ಈ ಪ್ರದೇಶದಲ್ಲಿ ಹೆಚ್ಚು.

ಕಲಬುರಗಿ ನಗರವೊಂದರಲ್ಲಿಯೇ 35% ಉರ್ದು ಮಾತನಾಡುವ ಮುಸ್ಲಿಂರನ್ನು ಕಾಣಬಹುದು. ಕಲಬುರಗಿ ಜನತೆಯ ಜೀವನ ಕ್ರಮ, ಭಾಷ ಒಲವುಗಳು, ಭಾಷಿಕ ಹಾಗೂ ಭಾಷಿಕವಲ್ಲದ ಹಲವಾರು ಅಂಶಗಳು ಇಲ್ಲಿನ ಮುಸ್ಲಿಂ-ಕನ್ನಡ ಪ್ರಭೇದದಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಮುಂಚೆಯೂ ಕೂಡಾ ಉರ್ದು, ಮರಾಠಿ, ಹಿಂದಿ ಸಾಹಿತ್ಯಕೃಷಿಯೂ ಈ ಜಿಲ್ಲೆಯಲ್ಲಿ ಗಮನಾರ್ಹವಾಗಿ ನಡೆದಿದೆ. ಖ್ವಾಜಾ ಬಂದೇ ನವಾಜರು ಸ್ವತಃ ಹಲವಾರು ಗ್ರಂಥಗಳನ್ನು ರಚಿಸಿದ್ದು, ಆ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಗಜಲ್, ಶಾಯರಿ ಮುಶಾಯರ ಉರ್ದುಕವಿತೆ ಹಾಡುವ ಒಂದು ದೊಡ್ಡತಂಡವೇ ಇದೆ. ಪ್ರಥಮ ಮುಸ್ಲಿಂ ತತ್ತ್ವಪದಕಾರ ಚೆನ್ನೂರು ಜಲಾಲಸಾಹೇಬರು ಇಲ್ಲಿಯವರೇ! ಇವರ ಅನೇಕ ಪದಗಳಲ್ಲಿ ಕನ್ನಡ- ಉರ್ದು ಮಧುರವಾಗಿ ಮಿಶ್ರವಾಗಿರುವ ಹೊಸ ಶೈಲಿಯೊಂದನ್ನು ಕಾಣಬಹುದು. ಅದನ್ನು ಇಲ್ಲಿ ಆಸ್ವಾದಿಸಬಹುದು.

ಇಲ್ಲಿಯ ಭಾಷೆಯ ಹಲವಾರು ಉಚ್ಛಾರಣೆಗಳು ಇಡೀ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೂ ಅನ್ವಯಿಸುವುದಲ್ಲದೆ ಧಾರವಾಡ, ವಿಜಯಪುರದ ಪ್ರಾಂತಗಳಿಗೂ ವಿಸ್ತರಿಸಬಹುದು!

‘ಹಮ್ ಭಿ ಕಹತೇ ತುಮ್ ಭೀ ಕಹತೇ ಮಾಡಬ್ಯಾಡರಿ ಮ್ಯಾಲಿನ ಶೀಲಾ’

ಪರೆಶಾನ್, ತನಖಾ, ಗರಂ, ಖರಾಬ್, ದುನಿಯಾ, ಷಿಕಾಯತ್, ಗುಂಜಾಯಿಸ್, ಬಯಾನ್, ಹಿಕಮತ್, ಮುಷ್ಕಿಲ್, ಗರೀಬ್, ತಕ್‍ಲೀಫ್, ಕೀಮತ್, ಬದ್‍ಲಾಮ್…ಮುಂತಾದ ಉರ್ದು ಶಬ್ದಗಳನ್ನು ಇಲ್ಲಿ ದಿನನಿತ್ಯ ಬಳಸಲಾಗುತ್ತದೆ.

ಉರ್ದುವಿನ ನಂತರ ಮರಾಠಿ, ಆಮೇಲೆ ತೆಲುಗು, ಈ ಪ್ರದೇಶದ ಕನ್ನಡದ ಮೇಲೆ ಪ್ರಭಾವ ಬೀರಿವೆ. ಮರಾಠಿ ಭಾಷೆಯ ಪ್ರಭಾವ ಕಲಬುರಗಿ ನಾಡಿನ ತುಂಬ ಆಗಿಲ್ಲ. ಕೇವಲ ಅಫಜಲಪುರ, ಕಲಬುರಗಿ, ಆಳಂದ ತಾಲೂಕಗಳಲ್ಲಿ ಆಗಿದೆ. ಮಾಂವಸಿ, ವೈನಿ, ಅಗಾವ್, ದಗದ, ಠೀಕ, ರಗಡ, ಠಿಕಾಣ, ಖರೆ, ಖವಡಿ, ಸಂದುಕ, ದಾಮ, ಪರಾತ್ ಮುಂತಾದ ಮರಾಠಿ ಶಬ್ಧಗಳು ಕಲಬುರಗಿ ಕನ್ನಡ ಭಾಷೆಯಲ್ಲಿ ಬೆರೆತು ಹೋಗಿವೆ.

ಕಲಬುರಗಿ ಕನ್ನಡ ಭಾಷೆ ಎಂದರೆ ಉರ್ದು, ಮರಾಠಿ, ಸ್ವಲ್ಪ ತೆಲುಗು ಮತ್ತು ಶುದ್ಧ ದೇಸೀ ಶಬ್ಧಗಳ ಕನ್ನಡ. ಇಲ್ಲಿಯ ಭಾಷೆ ಕರ್ನಾಟಕದ ಇನ್ನುಳಿದ ಜಿಲ್ಲೆಗಳ ಭಾಷೆಗಿಂತ ಭಿನ್ನವೂ, ವೈಶಿಷ್ಟ್ಯಪೂರ್ಣವೂ ಆಗಿದೆ. ಹಾನ, ಹಾರ, ಹಾಳ, ಹನಾ, ಹಣ ಎಂಬ ಪೂರ್ಣ ಕ್ರಿಯಾರೂಪಗಳು ಇಲ್ಲಿ ವಿಶೇಷವೆಂಬಂತೆ ಬಳಕೆಗೊಳ್ಳುತ್ತವೆ. ಅಲ್ಲಿ, ಇಲ್ಲಿ, ಎಲ್ಲಿ, ಅವನು, ಇವನು, ಅದು, ಇದು, ಆ ಕಡೆ, ಈ ಕಡೆ… ಈ ರೂಪಗಳಿಗೆ ಬದಲಾಗಿ ಇಲ್ಲಿ ಕಲ್ಲಿ, ಕಿಲ್ಲಿ, ಕೆಲ್ಲಿ, ಕವ, ಕಿವ, ಕದು, ಕಿದು, ಕಕಡೆ, ಕಿಕಡೆ ಎಂದೆಲ್ಲ ಬಳಕೆಗೊಳ್ಳುತ್ತವೆ. ಕೇಸಿ, ಕೇರಿ, ಆಪ್ಲೆ, ಉವ್ಣ್, ಆಟ್ಟು… ವಿಶಿಷ್ಟ ರೂಪದ ಪ್ರತ್ಯಯಗಳು ವಿಶೇಷವಾಗಿ ಬಳಕೆಗೊಳ್ಳುತ್ತಿವೆ. ಬಂದಕೇಸಿ, ಹೋದಕೇಸಿ, ನೋಡಕೇಸಿ, ಬಂದಕೇರಿ, ಹೋದಕೇರಿ, ನೋಡಕೇರಿ, ನೋಡದಪ್ಲೆಆಗೇದ, ಮಾಡದಪ್ಲೆಆಗೇದ, ಉಂಡ್ರುಪ್ಲೆ ಹೋದ, ನೋಡಟ್ಟೆ, ಮಾಡಟ್ಟೆ… ಸಂಕ್ಷಿಪ್ತರೂಪದ ಬಳಕೆಯೂ ಇಲ್ಲಿ ಸಾಮಾನ್ಯ.

ವಾಕ್ಯಮಟ್ಟದಲ್ಲೂ ಕಲಬುರಗಿ ಕನ್ನಡ ಅನನ್ಯವಾಗಿದೆ. ವಾಕ್ಯದ ಮಧ್ಯದಲ್ಲಿ ವ್ಯಂಜನಾಂಶ ಬಳಕೆಯಾಗುವುದನ್ನು ಗುರುತಿಸಬಹುದು.

ಉದಾ: ‘ನಾಟಕ್ ನೋಡಳಿಕ್ ಜನಾ ಭಕ್ಕಳ್ ಬಂದಿದ್ರು; ಹಪ್ದಳ ಕರೀಲಿಕ್ ಸುರು ಮಾಡುಣಾ ಥ್ವಾಡೆ ಎಣ್ಣಿಕಮ್ಮಿ ಬಿತ್ತು’

ಇಲ್ಲಿನ ಭಾಷೆಯಲ್ಲಿ ಕೆಲವು ವಿಶಿಷ್ಟ ವಿಶೇಷಣ ಪದಗಳಿರುವುದನ್ನು ಗುರುತಿಸಬಹುದು- ಮಾರಾಯ್ನ, ಮಸ್ತ್, ತೋಲ, ದುನಿಯಾದ್… ಕಲಬುರಗಿ ಜಿಲ್ಲೆಯ ಕನ್ನಡದ ಉಚ್ಛಾರಣೆಯಲ್ಲಿ, ವ್ಯವಹಾರದಲ್ಲಿ ಬದಲಾವಣೆಗಳು ಕಂಡುಬರುತ್ತವೆಯಾದರೂ, ಬರವಣಿಗೆಯಲ್ಲಿ ಶಿಷ್ಟ ಅಥವಾ ಗ್ರಾಂಥಿಕವೇ ಆಗಿರುತ್ತವೆ. ಇಲ್ಲಿಯ ಭಾಷೆಯ ಹಲವಾರು ಉಚ್ಛಾರಣೆಗಳು ಇಡೀ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೂ ಅನ್ವಯಿಸುವುದಲ್ಲದೆ ಧಾರವಾಡ, ವಿಜಯಪುರದ ಪ್ರಾಂತಗಳಿಗೂ ವಿಸ್ತರಿಸಬಹುದು!

ಕೆಲವು ವಾಕ್ಯಗಳು ಶುದ್ಧ ಕನ್ನಡದಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ಇಲ್ಲಿ ಗುರುತಿಸಬಹುದು.

• ರಾವೂರ ಮ್ಯಾಗ ದರ್ಶನಗ ನೋಡೀನಿ (ರಾವೂರಿನಲ್ಲಿ ದರ್ಶನ್ ಅವರನ್ನು ನೋಡಿದ್ದೇನೆ)

• ವಾಡಿ ಮ್ಯಾಲ ಹಾರ (ವಾಡಿಯಲ್ಲಿ ಇದ್ದಾರೆ)

• ಅವ್ರ ಎಂಟ ಬಡಿಲಾರ ಹೊರ್ಕಡಿಗಿ ಹೋಗಿ ಬರ್ತಾರ (ಅವರು ಎಂಟು ಗಂಟೆಗೆ ಶೌಚಕ್ಕೆ ಹೋಗಿ ಬರ್ತಾರೆ)

ಕಲಬುರಗಿ ಭಾಷೆಯ ಮೇಲೆ ಕಾಲಕಾಲಕ್ಕೆ ಅನ್ಯಭಾಷೆಗಳ ಪ್ರಭಾವ ಉಂಟಾಗಿದೆ. ಅದರಲ್ಲೂ ಉರ್ದುವಂತೂ ಕನ್ನಡಕ್ಕೆ ಕುತ್ತಾಗಿ ಬಂದರೂ ಇಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಇದಕ್ಕೆ ಮೂಲ ಹುಡುಕುತ್ತಾ ಹೊರಟರೆ ನಮಗೆ ದೊರಕುವುದು ಕನ್ನಡಿಗರ ಸಂಸ್ಕತಿ. ಏಕೆಂದರೆ ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಪೂರಕವಾಗಿವೆ! ಧರ್ಮ ಮತ್ತು ಸಂಸ್ಕೃತಿಗಳೊಂದಿಗೆ ಭಾಷೆ ಎಷ್ಟು ಗಾಢವಾಗಿ ಹೊಂದಿಕೊಳ್ಳುತ್ತದೆ ಎಂಬುದಕ್ಕೆ ಇಲ್ಲಿಯ ಕನ್ನಡ ಭಾಷೆ, ಕನ್ನಡಿಗರೇ ಸಾಕ್ಷಿ.

* ಲೇಖಕರು ಕಲಬುರಗಿ ನೂತನ ಪದವಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕರು. ಅವರ ಸಂಶೋಧನ ಮಹಾ ಪ್ರಬಂಧವು ‘ಕಾರಂತರ ಸ್ತ್ರೀ ಪ್ರಪಂಚ’ ಹೆಸರಲ್ಲಿ ಪ್ರಕಟಗೊಂಡಿದೆ. ಕಾರಂತ ಲೋಕ, ಪ್ರೇಮಾಂತರಂಗ, ಧರ್ಮಾಂತರಂಗ ಹಾಗೂ ಭಾವಾಂತರಂಗ ಕೃತಿಗಳಲ್ಲದೆ ಕವನ ಮತ್ತು ಕಥಾಸಂಕಲನ ಹೊರಬಂದಿವೆ. 

Leave a Reply

Your email address will not be published.