ಕಲಬುರಗಿ ಸಾಹಿತ್ಯ ಸಮ್ಮೇಳನ ಹೇಗಿತ್ತು? ಹೇಗಿರಬೇಕು?

ಸಮಾಜಮುಖಿಯ ಪ್ರಶ್ನೆಗೆ ತೂರಿಬಂದ ಉತ್ತರಗಳು ಇಲ್ಲಿವೆ.

ಕನ್ನಡತೇರು ಮತ್ತು ಎರಡನೇ ಹೆಂಡತಿ!

‘ಸ್ವಚ್ಛ ಭಾರತದ’ ಗೊಡವಿಗೆ ಹೋಗದ ಹೆಬ್ಬಂಕ ಬೆಳಿಗ್ಗೆಬೆಳಿಗ್ಗೆ ಚೆಂಬು ಹಿಡ್ಕೊಂಡು ಹೊರ್ಕಡಿಗೆ ಹೊಂಟಿದ್ದ. ಗೆಳೆಯ ಒಕ್ಕಣ್ಣ ಕಾಣುತ್ತಲೆ ಗಕ್ಕನೇ ನಿಂತುಕೊಂಡ.

‘ಯಾಕೋ ಹೆಬ್ಬಂಕ ಎಲ್ಲಿ ಹೋಗಿದ್ದಿ? 2-3 ದಿನ ಕಾಣ್ಸಲೇ ಇಲ್ಲ’

‘ಕಲ್ಬುರ್ಗಿಗೆ ಹೋಗಿದ್ದೆ’

‘ಹೌಂದಾ… ಶರಣಬಸಪ್ಪಗ ಕಾಯಿ-ಕರ್ಪೂರ ಮಾಡ್ಸಕ ಹೋಗಿದ್ದೇನು?’

‘ಇಲ್ಲ, ಮೈ ತಿಂಡಿ ಇಟ್ಟಿತ್ತು. ಬಂದೇನವಾಜ್ ದರ್ಗಾದ ಅಂಗಳದಾಗ ಉಳ್ಯಾಡಿ ಬರಾಕ ಹೋಗಿದ್ದೆ’

ಕ್ಷಣ ಹೊತ್ತು ಮೌನ. ಇಬ್ಬರು ಮಾತಾಡಲಿಲ್ಲ. ಹೆಬ್ಬಂಕನೆ ಮುಂದುವರಿಸಿದ,

‘ಕನ್ನಡದ ತೇರು ಎಳೆಯ್ಯಾಕ ಹೋಗಿದ್ದೆ.’

‘ಹಗ್ಗ, ಹೆಗ್ಲಮ್ಯಾಲೆ ಹೊತ್ಕೊಂಡು ಹೋಗಿದ್ದಿ ? ಜಾತ್ರಿ ಹೆಂಗಾತು?’ 

‘ಕನ್ನಡಿಗರ ಜಾತ್ರಿ ಅಂದ್ರ, ಏನಂತ ತಿಳ್ದಿ ನೀನು?’ 

‘ಹೌಂದು ಬಿಡೋ ನಂಗೇನು ಗೊತ್ತಿಲೇನು? ಯಾರ್ದೊ ಗಂಟು, ಎಲ್ಲಮ್ಮನ ಜಾತ್ರಿ! ಉಧೋ… ಉಧೋ… ಅನ್ನಾಕ ಬಂದೈತೇನು?’ 

ಒಕ್ಕಣ್ಣನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತು. ಕೈಯಲ್ಲಿ ಚಂಬು ಇದ್ದುದ್ದರಿಂದ ಸಹಿಸಿಕೊಂಡ.

‘ಕನ್ನಡದ ತೇರು ಅಂದೆಲ್ಲ, ಹಂಗಂದ್ರೇನು?’

‘ಅದು ಕನ್ನಡಿಗೆರಲ್ಲರ ಅಭಿಮಾನದ ತೇರು! ಸ್ವಾಭಿಮಾನದ ತೇರು! ಅಸ್ಮಿತೆಯ ತೇರು! ಕನ್ನಡದ ನೆಲ-ಜಲ-ಭಾಷೆ-ಸಂಸ್ಕøತಿ-ಕಲಾವೈಭವ ಇತ್ಯಾದಿ..ಇತ್ಯಾದಿ’

‘ಅಂತೂ ಜಾತ್ರಿ ಭರ್ಜರಿ ಇತ್ತು ಅನ್ನು! ಯಾರ್ಯಾರು ಬಂದಿದ್ರು?’

‘ವಿದ್ವಾಂಸರು, ಕವಿಗಳು, ಲೇಖಕರು, ಕಲಾವಿದರು, ಹೋರಾಟಗಾರರು, ಪತ್ರಿಕಾಮಿತ್ರರು, ರಾಜಕಾರಣಿಗಳು ಮುಂತಾಗಿ… ಮುಂತಾಗಿ’ 

‘ಪೊಲೀಸ್ರೂ, ಬಂದಿದ್ರಂತೆ… ದೇಶದ್ರೋಹದ ಕವನ ಓದುವವರ್ನ ಹಿಡ್ಕೊಂಡು ಹೋಗೋದ್ಕೆ…’

‘ಹರಿಬಿಡಬ್ಯಾಡ, ಕನ್ನಡದ ಬಗ್ಗೆ ಕೇವಲವಾಗಿ ಮಾತಾಡಿದ್ರೆ ನಾಲಿಗೆ ಸೀಳಿಬಿಟ್ಟೇನು! ಹುಷಾರು!’

‘ಹೋಗ್ಲಿಬಿಡು ಹೆಬ್ಬಂಕ, ನಿನ್ನ ಪ್ರಕಾರ ಒಟ್ಟು ಈ ಕನ್ನಡದ ‘ಮೂರು ದಿನದ ಜಾತ್ರೆ’ಯ ಬಜೆಟ್ ಎಷ್ಟು?’

‘ಕನ್ನಡದ ಜಾತ್ರೆ ಅಂದ್ರ, ಅದೇನು ಹಳ್ಳಿ ದ್ಯಾಮವ್ವ, ದುರಗವ್ವನ ಜಾತ್ರಿ ಮಾಡಿಯೇನು? ವರ್ಷಕ್ಕೊಮ್ಮೆ ಜರಗುವ ಅದ್ಧೂರಿ ಜಾತ್ರೆ! ಹತ್ತಿಪ್ಪತ್ತು ಕೋಟಿ, ಅದ್ಯಾವ ಲೆಕ್ಕ?’ 

‘ಅಷ್ಟೊಂದು ದುಡ್ಡು, ಯಾರು ಕೊಡ್ತಾರ?’  

‘ಆ ಕಾಲಕ್ಕ ಮಹಾರಾಜರು ಸುರ್ವು ಮಾಡಿದ್ದು. ಈಗ್ಲೂ ಮಹಾರಾಜರೇ ದೀಪ ಹಚ್ತಾರ. ಸಾಹಿತಿಗಳು ಸಂತೋಷದಿಂದ ಚಪ್ಪಾಳೆ ತಟ್ತಾರ.’

‘ದೇವ್ರ ದರ್ಶನ ಆತೇನು?’

‘ಅಹಾ! ನೋಡಲಿಕ್ಕೆ ಎರಡು ಕಣ್ಣುಗಳು ಸಾಲಲಿಲ್ಲ. ಸಾಕ್ಷಾತ್ ಸರಸ್ವತಿ ಪುತ್ರನೇ ಕುಳಿತಂತಿತ್ತು! ಕೇಸರಿ ಉಡುಪಿನಲ್ಲಿ ಕನ್ನಡದ ಪ್ರಾಣದೇವರು ಮಿರಿಮಿರಿ ಮಿಂಚಿತು! ಮುಖಕ್ಕೆ ಮಿಣಿಮಿಣಿ ಪೌಡರ್ ಬಳಿಯಲಾಗಿತ್ತು.!’

‘ಅಂತೂ ನಿನ್ನ ಜನ್ಮ ಸಾರ್ಥಕ ಆತು ಅನ್ನು!’ 

‘ನಂಗೂ ಹಂಗ ಅನ್ಸತ್ತ!’ 

‘ಕನ್ನಡದ ಎಲ್ಲ ಸಮಸ್ಯೆಗಳು ಬಗೆಹರಿದು ನಾಡು-ನುಡಿ ಉದ್ಧಾರಾತು ಅನ್ನು!’ 

‘ಆಗದೆ ಇನ್ನೇನು?’

‘ಹೋಗ್ಲಿಬಿಡು ಹೆಬ್ಬಂಕ, ಜಾತ್ರೆಯಿಂದ ಬರುವಾಗ ನಿನ್ನ ಮಕ್ಕಳಿಗೆ ಗೋಲಿಗುಂಡು, ಚೆಂಡು, ಗೊಂಬಿ, ನಿನ್ನ ಹೆಂಡರಿಗೆ ಜಡೆಪಿನ್ನು, ಬಳಿ-ರಿಬ್ಬನ್ ತಂದಿಯಿಲ್ಲ?’

ಹೆಬ್ಬಂಕನಿಗೆ ನಗು ತಡೆಯಲಾಗಲಿಲ್ಲ. ‘ಲೇ ಹುಚ್ಚ! ಕನ್ನಡದ ಜಾತ್ರೆಗೆ ಜನ, ಬಳಿ-ರಿಬ್ಬನ್, ಗಿಲಗಂಚಿ ತರಾಕ ಹೋಗ್ತಾರೇನು?’ 

‘ಇಲ್ಲ ಅಂತಿಯಾ, ಹಂಗಾದ್ರ ಅಂಗಿ-ಚೊಣ್ಣ, ಲಂಗ ಮಾರವ್ರು ಅಲ್ಲ್ಯಾಕಪ್ಪ ಬರ್ತಾರೆ?’ 

‘ಮನಿಗೆ ಬಾ. ಎಷ್ಟೊಂದು ಪುಸ್ತಕ ತಂದಿನಿ. ಮುಟ್ಟಿದ್ರ ಮಾಸ್ಬೇಕು’ 

‘ಹೋದ ವರ್ಷದ ಗಂಟು ಇನ್ನೂ ಬಿಚ್ಚಿಲ್ಲ. ಮತ್ತ ಪುಸ್ತಕ ತಂದೀದಿ?’

ಮಾತುಕತೆ ಹೀಗೆ ಸಾಗಿತ್ತು. ಅಷ್ಟೊತ್ತಿಗೆ ಸರಿಯಾಗಿ ಹೆಬ್ಬಂಕನ ಹೊಸಹೆಣ್ತಿ (ಎರಡನೆಯವಳು) ಸಂಗವ್ವೆ (ಅವಳನ್ನು ನುಂಗವ್ವೆ ಎಂತಲೂ ಕರೆಯುತ್ತಾರೆ) ಬಿರುಗಾಳಿಯಂತೆ ನುಗ್ಗಿ ಬಂದಳು.

‘ಮನಿಮಾರು ಬಿಟ್ಟು ಎಲ್ಲಿ ಹೋಗಿದ್ದಿ?’ 

‘ನುಡಿಜಾತ್ರೆ ನೋಡಾಕ ಹೋಗಿದ್ದೆ’.

‘ಹೊಟ್ಟಿಗೆ ಹಿಟ್ಟಿಲ್ಲ. ಮಕ್ಕಳ ಕುಂಡಿಗೆ ಗೇಣು ಬಟ್ಟಿಯಿಲ್ಲ. ಉಪ್ಪು-ಕಾರ, ಹುಳಿ-ಹುಣ್ಸಿಹಣ್ಣು ಮೊದ್ಲುಮಾಡಿ ನೆರೆಹಾವಳಿಗೆ ಕೊಚ್ಚಿಕೊಂಡು ಹೋತು. ಇಂಥಾದ್ರಾಗ ಜಾತ್ರಿ ಮಾಡಕ ನಾಚ್ಗಿ ಆಗಲಿಲ್ಲ…?’ ಎಂದವಳೆ ಗಂಡನ ಕೊರಳಪಟ್ಟಿ ಹಿಡಿದು ಎಳೆದಾಡಿದಳು. ಹಳ್ಳಿ ಜನ ಓಣಿಯಲ್ಲಿ ಸಾಗಿದ ಕನ್ನಡದ ತೇರಿಗೆ ಭಕ್ತಿಯಿಂದ ಕೈಮುಗಿದು ಎಲ್ಲಮ್ಮ ನಿನ್ನಾಲ್ಕು ಉಧೋ…ಉಧೋ… ಎಂದರು.

ಸಂಗವ್ವೆಯ ಮೈಯಲ್ಲಿ ಕರುನಾಡ ತಾಯಿಯೇ ಮೈದಳೆÀದು ರೌದ್ರಾವತಾರ ತಾಳಿದಂತೆ ಕಂಡಳು!

-ಈಶ್ವರ ಹತ್ತಿ, ಕೊಪ್ಪಳ.


ಕವಿಗಳಿಗೆ ಪ್ರಮಾಣ ಪತ್ರ

ಸಮ್ಮೇಳನಕ್ಕೆ ಜನಸಾಗರ ಹರಿದು ಬಂದ ರೀತಿ “ನಭೂತೋ ನಭವಿಷ್ಯತಿ” ಎನ್ನುವಂತಿದ್ದು. ಊಟದ ವ್ಯವಸ್ಥೆ ಹಾಗೂ ಸ್ವಚ್ಛತೆಯ ವಿಷಯದಲ್ಲಿ ಸಂಘಟಕರಿಗೆ ಅಭಿನಂದನೆ ಹೇಳಲೇಬೇಕಾಗುತ್ತದೆ. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಉತ್ತಮವಾಗಿ ಇತ್ತಾದರೂ ಅಲ್ಲಿ ಖರೀದಿಯಾದ ಪುಸ್ತಕಗಳಲ್ಲಿ ಉದ್ಯೋಗದ ದೃಷ್ಟಿಯಿಂದ ರಚನೆಯಾಗಿರುವ ಸ್ಪರ್ಧಾತ್ಮಕ ಪುಸ್ತಕಗಳೇ ಹೆಚ್ಚು. ಕತೆ, ಕಾದಂಬರಿ, ಕಾವ್ಯ… ದಂತಹ ಪುಸ್ತಕಗಳ ಖರೀದಿ ತುಂಬಾ ನೀರಸದಾಯಕವಾಗಿತ್ತು.

ಸಮ್ಮೇಳನಗಳು ಕನ್ನಡ ಜಾತ್ರೆಯಾಗುವುದರ ಜೊತೆಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ, ಸಾಹಿತ್ಯಿಕ ಅಭಿಮಾನ ಮತ್ತು ಆಸಕ್ತಿ ಮೂಡಿಸುವಂತಾಗಬೇಕು. ಕೇವಲ ಜಾತ್ರೆಯಾದರೆ ಸಮ್ಮೇಳನದ ಮೂಲ ಆಶಯಕ್ಕೆ ದಕ್ಕೆಯಾಗುತ್ತದೆ. ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿಗಳಿಗೆ ಪ್ರಮಾಣ ಪತ್ರ ನೀಡಬೇಕು. ಮುಂದೆ ಅದು ಅವರ ವೃತ್ತಿಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಸಮ್ಮೇಳನಗಳು ಕನ್ನಡದ ಅಸ್ಮಿತೆ ಮತ್ತು ಅಖಂಡತೆಯನ್ನು ಸಾರುವಂತಿರಬೇಕು.

-ಡಾ.ಮಲ್ಲಿನಾಥ ತಳವಾರ, ಕಲಬುರಗಿ


ಗಮನ ಸೆಳೆದ ‘ಲೇಖಕರ ಕಟ್ಟೆ’

ಪ್ರತೀ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ, ಈ ಸಲವೂ ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಕನ್ನಡ ನಾಡು-ನುಡಿ ಬಗೆಗಿನ ಅಭಿಮಾನಕ್ಕಾಗಿ ಇಂತಹ ಕನ್ನಡ ಸಾಹಿತ್ಯ ಸಮ್ಮೇಳನಗಳು ಖಂಡಿತ ಬೇಕು. ಈ ಹಿಂದಿನ ಹಲವಾರು ಸಾಹಿತ್ಯ ಸಮ್ಮೇಳನಗಳಂತೆ, ಕಲಬುರ್ಗಿ ಸಾಹಿತ್ಯ ಸಮ್ಮೇಳನವೂ ತುಂಬಾ ವಿಶೇಷವಾಗಿತ್ತು. ಸಂಕ್ಷಿಪ್ತದಲ್ಲಿ ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು:

* ಪ್ರಧಾನ ವೇದಿಕೆಯು ಅದ್ದೂರಿಯಾಗಿದ್ದು, ಕನ್ನಡ ನಾಡು-ನುಡಿಯ ಸೊಬಗನ್ನು ಪಸರಿಸುವಂತಿತ್ತು.

* ಮುಖ್ಯ ದ್ವಾರದ ವಿನ್ಯಾಸವು ಪ್ರಾದೇಶಿಕ ಸೊಗಡನ್ನು ಬಿಂಬಿಸುವಂತಿತ್ತು.

* ನೋಂದಾಯಿತ ಪ್ರತಿನಿಧಿಗಳಿಗೆ ತೆರೆದಂತಹ ಕೌಂಟರ್‍ಗಳು ಸಮೀಪವಿದ್ದು, ಎಲ್ಲರಿಗೂ ಅನುಕೂಲವಾಗುವಂತಿದ್ದವು.

* ಪುಸ್ತಕ ಮಾರಾಟ ಮಳಿಗೆಗಳನ್ನು ಪ್ರಧಾನ ವೇದಿಕೆಯ ಸಮೀಪವೇ ತೆರೆದಿದ್ದರಿಂದ ಪುಸ್ತಕಪ್ರಿಯರಿಗೆ ತುಂಬಾ ಅನುಕೂಲವಾಗಿತ್ತು.

* ಪುಸ್ತಕ ಮಳಿಗೆಗಳ ವಿನ್ಯಾಸ ಹಾಗೂ ಅಚ್ಚುಕಟ್ಟುತನ ಎಲ್ಲರಿಗೂ ಖುಷಿ ನೀಡಿತು.

* ಸಾಹಿತ್ಯಾಸಕ್ತರು ಪುಸ್ತಕ ಮಳಿಗೆಗಳಲ್ಲಿ ತಿರುಗಾಡಿ ನೋಡಲು ಸಾಕಷ್ಟು ಜಾಗವನ್ನು ಮೀಸಲಿಟ್ಟಿದ್ದರಿಂದ, ಪುಸ್ತಕಗಳನ್ನು ಖರೀದಿಸಲು ಯಾವುದೇ ತೊಂದರೆಯಾಗಲಿಲ್ಲ.

* ಪುಸ್ತಕ ಮಳಿಗೆಯಲ್ಲಿ ಈ ಸಲದ ವಿಶೇಷ ಎಂದರೆ, ಸುಮಾರು 3-4 ಕಡೆಗಳಲ್ಲಿ ‘ಲೇಖಕರ ಕಟ್ಟೆ’ ಸ್ಥಾಪಿಸಿದ್ದು. ಎಷ್ಟೋ ಜನ ಲೇಖಕರು ಅಲ್ಲಿ ಕುಳಿತು, ಸಾಹಿತ್ಯ ವಿಮರ್ಶೆ, ಪರಿಚಯ, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಇದು ತುಂಬಾ ಸಹಾಯಕವಾಯಿತು.

* ಊಟದ ವ್ಯವಸ್ಥೆಯೂ ತುಂಬಾ ಅಚ್ಚುಕಟ್ಟಾಗಿತ್ತು.

* ಸಾಕಷ್ಟು ಗೋಷ್ಠಿಗಳು ಅರ್ಥಪೂರ್ಣವಾಗಿದ್ದವು. ವಿಶೇಷವೆಂದರೆ, ಈ ಸಮ್ಮೇಳನದ ಎಲ್ಲಾ ಗೋಷ್ಠಿಗಳಲ್ಲೂ ಜನ ಕಿಕ್ಕಿರಿದು ತುಂಬಿದ್ದರು.

* ಪೊಲೀಸರ ಕರ್ತವ್ಯ ನಿರ್ವಹಣೆ ತುಂಬಾ ಶ್ಲಾಘನೀಯವಾಗಿತ್ತು.

* ವಸತಿ ವ್ಯವಸ್ಥೆಯೂ ಕೂಡಾ ಉತ್ತಮವಾಗಿತ್ತು.

ಇಷ್ಟೆಲ್ಲಾ ವಿಶೇಷಗಳ ಮಧ್ಯೆ ಒಂದಿಷ್ಟು ನ್ಯೂನತೆಗಳು ಕಂಡು ಬಂದವು:

* ಸಮಾನಾಂತರ ವೇದಿಕೆಯು ಇನ್ನಷ್ಟು ಸಮರ್ಪಕವಾದ ಸ್ಥಳದಲ್ಲಿ ಆಗಬೇಕಿತ್ತು.

* ಪ್ರಧಾನ ವೇದಿಕೆ ಮತ್ತು ಪುಸ್ತಕದ ಅಂಗಡಿಗಳ ಸುತ್ತಮುತ್ತ ದೂಳಿನ ಆರ್ಭಟ ಜೋರಾಗಿತ್ತು.

* ವಾಹನ ವ್ಯವಸ್ಥೆ ಅಚ್ಚುಕಟ್ಟಾಗಿದ್ದರೂ, ಸಮ್ಮೇಳನ ತಲುಪಲು 1 ರಿಂದ 2 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ವಯಸ್ಕರಿಗೆ ಮತ್ತು ವಿಶೇಷಚೇತನ ವ್ಯಕ್ತಿಗಳಿಗೆ ಅನಾನುಕೂಲವಾಗಿತ್ತು.

ಇವುಗಳನ್ನೆಲ್ಲಾ ಬದಿಗಿಟ್ಟು ನೋಡಿದರೆ, ಮೂರು ದಿನಗಳ ಕಾಲ ಸಮಯ ಸರಿದದ್ದೇ ಗೊತ್ತಾಗಲಿಲ್ಲ.

-ಶಂಕರಗೌಡ ವೈ. ಪಾಟೀಲ, ಬಾದಾಮಿ


ಎಚ್ಚೆತ್ತುಕೊಳ್ಳದ ಅಧ್ಯಕ್ಷರು!

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕುರಿತ ಚಿಂತನೆ ಇರಬೇಕು. ಈ ನೆಪದಲ್ಲಿ ಸಮಾಜದ ವರ್ತಮಾನದ ಸುಡುವ ಸಮಸ್ಯೆಗಳನ್ನು ನಿರ್ಭಿಡೆಯಿಂದ ಚರ್ಚಿಸಬೇಕು. ಗೋಷ್ಠಿಯ ವಿಷಯಗಳು ಒಟ್ಟು ಕರ್ನಾಟಕದ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿರಬೇಕು. ಅಲ್ಲಿ ಮಾತಾಡುವ ವಿಷಯ ತಜ್ಞರ ಆಯ್ಕೆ ಯಾವುದೇ ಪ್ರದೇಶ, ಪಂಥ, ಜಾತಿ, ಇಜಂಗಳಿಂದ ಹೊರತಾಗಿರಬೇಕು.

ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ವರ್ತಮಾನದ ಸಾಹಿತ್ಯ ಮತ್ತು ಸಮಾಜದ ಸಮಸ್ಯೆಗಳ ದಿಕ್ಸೂಚಿಯಾಗಿರಬೇಕು. ಪರಿಷತ್ತಿನ ಅಧ್ಯಕ್ಷರ ವಿಜೃಂಭಣೆ ಕಡಿಮೆಯಾಗಬೇಕು. ರಾಜಕೀಯ ರಗಳೆಗಳಾಗಬಾರದು. ಆದರೆ ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಈ ಎಲ್ಲಾ ಅವ್ಯವಸ್ಥೆಗಳಿದ್ದವು.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ಮೂಲ ಸೌಲಭ್ಯಗಳ ಕೊರತೆ ಇರುವುದು ಕಂಡುಬಂದಿದೆ. ಇಂತಹವುಗಳಿಂದ ಪರಿಷತ್ತಿನ ಅಧ್ಯಕ್ಷರು ಎಚ್ಚೆತ್ತುಕೊಳ್ಳದಿರುವುದು ದುರಂತ. ಮುಂದಿನ ಸಮ್ಮೇಳನದಲ್ಲಾದರೂ ಹೀಗಾಗದಿರಲಿ.   

-ಡಾ.ಜಗದೀಶ ಕೆರೆನಳ್ಳಿ, ಚಿತ್ರದುರ್ಗ

Leave a Reply

Your email address will not be published.