ಕಲಬುರ್ಗಿಯಲ್ಲಿ ವಿನೂತನ ಪ್ರಯೋಗ

‘ಉದ್ಯೋಗ ಖಾತ್ರಿ’ ಯೋಜನೆಗೆ ಸಂಘಟನೆಗಳ ಸಹಯೋಗ ಕಲಬುರ್ಗಿಯಲ್ಲಿ ವಿನೂತನ ಪ್ರಯೋಗ

ಈ ಬಳಗದ ವಿಶೇಷ ಮುತುವರ್ಜಿ, ಪ್ರಯೋಗ, ಸಾಧನೆ ಬೇರೆ ಜಿಲ್ಲೆಗಳಿಗೂ ಮಾದರಿಯಾಗಬಾರದೇಕೆ?

ಸರಕಾರದ ಹಲವು ಯೋಜನೆಗಳು ಜನಪರವಾಗಿಯೇ ರೂಪಿತವಾಗಿರುತ್ತವೆ. ಆದರೆ ಯೋಜನೆಗಳನ್ನು ಪ್ರಜೆಗಳಿಗೆ ತಲುಪಿಸುವಲ್ಲಿ ಸರಕಾರಗಳು ಸೋಲುತ್ತವೆ; ಕಾದುಕುಳಿತ ಪುಢಾರಿಗಳು, ಅಧಿಕಾರಿಗಳು ಹಣ ಬಾಚುತ್ತಾರೆ. ಇದಕ್ಕೆ ನರೇಗಾ ಯೋಜನೆಯೂ ಹೊರತಲ್ಲ. ಆದರೆ ಇಂತಹ ಅನರ್ಥ ತಪ್ಪಿಸಲೆಂದೇ ಕಲಬುರ್ಗಿಯಲ್ಲಿ ರೈತಪರ ಕಾಳಜಿಯ ಬಳಗ ಕ್ರಿಯಾಶೀಲವಾಗಿದೆ.

ಮಳೆಗಾಲದ ಕೊರತೆಯಿಂದ ಭಾರತದ ಬಹುಪಾಲು ರೈತರು, ಕೂಲಿ ಕಾರ್ಮಿಕರು ಊರನ್ನು ಬಿಟ್ಟು ದೂರದ ಶಹರಗಳಿಗೆ ಗುಳೆ ಹೋಗುವುದು ವಾಡಿಕೆ. ಆಗ ಕೆಲಸ ಮಾಡಲು ಆಗದ ಅರವತ್ತು ಎಪ್ಪತ್ತು ವರ್ಷದ ಹಿರಿಯ ಜೀವಗಳು, ಮಕ್ಕಳು ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಉಂಟು. ತುತ್ತಿನ ಚೀಲ ತುಂಬಿಕೊಳ್ಳಲು ಮುಂಬೈ, ಪೂನಾ, ದೆಹಲಿ, ಬೆಂಗಳೂರು, ಅರಸಿ ಹೋಗುವ ಜನರು ತಿರುಗಿ ಮನೆಗೆ ಬರುವಷ್ಟರಲ್ಲಿ ಏನೇನೋ ಅವಗಡಗಳು ಘಟಿಸುವ ಸಂಭವವೂ ಇರುತ್ತದೆ.

ಹಳ್ಳಿಯ ರೈತರಿಗೆ ವೈಜ್ಞಾನಿಕ ತಿಳಿವಳಿಕೆ ಇರುವುದಿಲ್ಲ. ತಿಳಿವಳಿಕೆ ಇದ್ದವರು ತಮ್ಮ ಹೊಲಕ್ಕೆ ಬದುವು ಹಾಕಿಕೊಂಡು ಮಟ್ಟಸ ಮಾಡಿಕೊಳ್ಳಬೇಕಾದರೆ ಕೈಯಲ್ಲಿ ದುಡ್ಡು ಇರುವುದಿಲ್ಲ. ಸಮರ್ಪಕ ಮಳೆ ಆಗದಿರುವುದರಿಂದ ಊರಿನ ಕೆರೆ ಹಳ್ಳಗಳು ಬತ್ತಿ ಅಂತರ್ಜಲ ಮಟ್ಟ ಪಾತಾಳಕ್ಕೆ ಮುಟ್ಟಿದೆ. ಕೆರೆ ಹಳ್ಳಗಳಲ್ಲಿ ಹೂಳು ತುಂಬಿ ಮಳೆಯ ನೀರು ಹರಿದು ಸಮುದ್ರದ ಪಾಲಾಗುತ್ತಿದೆ. ಎಲ್ಲರಿಗೂ ಇದರ ಅರಿವಿದ್ದರೂ ಏನೂ ಮಾಡದ ಅಸಹಾಯಕತೆ ತಲೆದೊರಿದೆ.

ಈ ಹಿನ್ನೆಲೆಯಲ್ಲಿ 2005-2006ನೇ ಸಾಲಿನಲ್ಲಿ ಯು.ಪಿ.ಎ. ಸರಕಾರ ಎಡ ಪಕ್ಷಗಳ ಒತ್ತಡಕ್ಕೆ ಮಣಿದು ರೈತ ಮತ್ತು ಕೃಷಿಕಾರ್ಮಿಕರಿಗಾಗಿಯೆ ಜಾರಿಗೆ ತಂದ ‘ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ’ ಯೋಜನೆಯು ನಿಜಕ್ಕೂ ಕಾಯಕಜೀವಿಗಳ ಪರವಾಗಿದೆ.

ಹದಿನೆಂಟರಿಂದ ತೊಂಬತ್ತು ವರ್ಷದ ಯಾರೇ ಆದರೂ ಈ ಉದ್ಯೋಗ ಖಾತ್ರಿಯ ಲಾಭವನ್ನು ಪಡೆಯಬಹುದಾಗಿದೆ. ಸಂಬಂಧಿಸಿದ ಹಳ್ಳಿಗಳ ಪಂಚಾಯತಿಯಲ್ಲಿ ತಾನು ಕೆಲಸ ಮಾಡುತ್ತೇನೆ, ನಾನು ನಿರುದ್ಯೋಗಿ ಎಂದು ಅರ್ಜಿ ತುಂಬಿ ಕಳಿಸಿದರೆ ಆ ಅಧಿಕಾರಿಯೇ ಕೆಲಸವನ್ನು ಸೂಚಿಸುತ್ತಾನೆ. ಪ್ರತಿ ದಿನಕ್ಕೆ ಒಬ್ಬರಿಗೆ ರೂ.259 ಕೊಡುತ್ತಾರೆ. ಜೊತೆಗೆ ಕೆಲಸ ಮಾಡುವಾಗ ಹಾರೆ, ಗುದ್ದಲಿ, ಪಿಕಾಸೆಗಳು ಸಹಜವಾಗಿ ತಮ್ಮ ಮೊನಚನ್ನು ಕಳಕೊಳ್ಳುತ್ತವೆ. ಅವುಗಳನ್ನು ಮತ್ತೆ ಯಥಾಸ್ಥಿತಿ ಗೆ ತರಲು ಪ್ರತಿನಿತ್ಯ ಹತ್ತು ರೂಪಾಯಿ ಹೆಚ್ಚಿಗೆ ನೀಡಲಾಗುತ್ತದೆ. ಒಬ್ಬ ಕಾರ್ಮಿಕ ಸರಾಸರಿ 1 ಅಡಿ ಉದ್ದ, 8 ಅಡಿ ಅಗಲ, 1 ಅಡಿ ಆಳದ ಅಗೆತ ಮಾಡಬೇಕಾಗುತ್ತದೆ. ಎಲ್ಲಾ ವಯಸ್ಸಿನವರೂ ಇಂತಿಷ್ಟು ಮಾಡಲೇಬೇಕೆಂಬ ಕಡ್ಡಾಯವಿಲ್ಲ. ಅವರವರ ವಯೋಗುಣಕ್ಕೆ ಸಹಜವಾದ ಕೆಲಸ ನಿರ್ವಹಿಸಬೇಕಾಗುತ್ತದೆ.

ಬಳಗದ ‘ಬೆವರ ಹನಿ’

ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಕೇಳಲು ಹೋದಾಗ ಅನುಭವಿಸಿದ ಸಂಕಟಗಳು, ಸರಕಾರದ ಮೂಲ ಉದ್ದೇಶಗಳು, ಕೆರೆಯ ಪುನಶ್ಚೇತನದಿಂದ ತುಂಬಿಕೊಂಡ ನದಿಗಳು ಮುಂತಾದ ವಿಷಯ ಕುರಿತು ‘ಬೆವರ ಹನಿ’ ಎಂಬ ಮಹತ್ವದ ಕೃತಿಯೊಂದನ್ನು ಬಳಗ ಹೊರತಂದಿದೆ. ಸದರಿ ಪುಸ್ತಕವನ್ನು ಕಲಬುರ್ಗಿ ಜಿಲ್ಲಾ ಪಂಚಾಯತಿ ಖರೀದಿಸಿದೆ. ಪುಸ್ತಕ ಖರೀದಿಯ ಹಣದಲ್ಲಿ ವಾಹನವೊಂದನ್ನು ಪಡೆದು ಸುತ್ತಮುತ್ತಲ ಜಿಲ್ಲೆಗಳಿಗೆ ಸರಕಾರದ ಯೋಜನೆಯನ್ನು ತಲುಪಿಸಲು ಹೊರಟಿದೆ ಈ ತಂಡ. ಬುದ್ಧಿಜೀವಿಗಳ ಈ ಬಳಗ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಸಿದ್ಧಾಂತಕ್ಕೆ ತಕ್ಕಂತೆ ಕೆಲಸ ಮಾಡಿ ಜನರಲ್ಲಿ ಬುದ್ಧ, ಬಸವ, ಅಂಬೇಡ್ಕರರ ವಿಚಾರದ ಬೀಜಗಳನ್ನು ಬಿತ್ತುತ್ತಿದೆ.

ದೈಹಿಕ ಶ್ರಮ ಮಾಡಲು ಸಾಧ್ಯವಾಗದ 70-80ರ ಇಳಿವಯಸ್ಸಿನ ಅಶಕ್ತರೂ ಜಾಬ್ ಕಾರ್ಡು ಮಾಡಿಸಿಕೊಂಡು ನರೇಗಾ ಯೋಜನೆಯ ಫಲ ಪಡೆಯಬಹುದು. ಸದರಿಯವರ ಕೆಲಸವೆಂದರೆ ನೆರಳಿನಲ್ಲಿ ಕುಳಿತು ಕಾಮಗಾರಿ ನಿರ್ವಹಿಸಲು ಬಂದ ಉದ್ಯೋಗಿಗಳ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವುದು. ಅಂಗವಿಕಲರೂ ಜಾಬ್ ಕಾರ್ಡು ಮಾಡಿಸಿಕೊಂಡು ದೈಹಿಕ ಶ್ರಮವಹಿಸದೆ, ಅಲ್ಲಿರುವ ಕೂಲಿ ಕಾರ್ಮಿಕರಿಗೆ ಕುಡಿಯಲು ನೀರು ಒದಗಿಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬಹುದು. ಎಲ್ಲರಿಗೂ ಸಮಾನ ವೇತನ ಕೊಡುವುದು ಈ ಯೋಜನೆಯ ಪ್ರಮುಖ ಅಂಶ. ಬಿರುಬಿಸಿಲಿನ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿತ ಕೆಲಸವನ್ನು ಕ್ರಮವಾಗಿ 20%, 25%, 30% ಕಡಿತಗೊಳಿಸಲು ಯೋಜನೆಯಲ್ಲಿ ಅವಕಾಶವಿದೆ. ಕೆಲಸ ಮಾಡುವಾಗ ಸಣ್ಣಪುಟ್ಟ ಗಾಯಗಳಾದರೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ.

ಒಂದು ಕುಟುಂಬಕ್ಕೆ 100 ದಿನಗಳ ಕೂಲಿಯನ್ನು ಸರಕಾರ ತನ್ನ ಖಜಾನೆಯಿಂದ ಭರಿಸಲು ಸಿದ್ಧವಿದೆ. ಹೊಲ ಉಳ್ಳ ರೈತ ತನ್ನ ಹೊಲದಲ್ಲಿಯೆ ಬದುವನ್ನು ನಿರ್ಮಿಸಿಕೊಳ್ಳುವುದು, ನೀರು ನಿಲ್ಲಲು ಚೆಕ್ ಡ್ಯಾಮ್‍ಗಳನ್ನು ಮಾಡಿಕೊಳ್ಳಲು ಕಾಮಗಾರಿಯನ್ನು ಹಾಕಿಸಿಕೊಳ್ಳಬಹುದು. ತನ್ನ ಹೊಲದಲ್ಲಿ ತಾನೇ ಕಾರ್ಮಿಕನಾಗಿ ದುಡಿದು ಅದರ ಫಲವನ್ನು ಪಡೆಯಬಹುದಾಗಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಸೂಚನೆಯ ಮೇರೆಗೆ ಅರಣ್ಯ, ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ವಿತರಿಸುತ್ತಾರೆ. ನರೇಗಾ ಯೋಜನೆ ಹೆಚ್ಚಾನೆಚ್ಚು ಜಲಸಂಬಂಧಿ ಕಾಮಗಾರಿಯಾದ್ದ ರಿಂದ ಹೂಳು ತುಂಬಿದ್ದ ಕೆರೆಗಳು ನೀರು ತುಂಬಿ ನಳನಳಿಸುತ್ತವೆ. ಹೊಲದ ಬದುವು ಗಟ್ಟಿಗೊಳ್ಳುವುದರಿಂದ ಮಣ್ಣಿನ ಫಲವತ್ತತೆಗೆ ಧಕ್ಕೆ ಉಂಟಾಗುವುದಿಲ್ಲ. ಚೆಕ್ ಡ್ಯಾಮ್ ನಿರ್ಮಾಣದಿಂದ ಜಲಸಂರಕ್ಷಣೆ ಆಗುತ್ತದೆ, ಅಂತರ್ಜಲ ಕುಸಿತ ತಪ್ಪುತ್ತದೆ. ಗೂಳೆ ಹೋಗಿ ಹೈರಾಣಾಗುವ ಬದಲು ಇದ್ದ ಊರಲ್ಲಿಯೇ ಉದ್ಯೋಗ ಸಿಕ್ಕು ಕಾರ್ಮಿಕರು ನೆಮ್ಮದಿಯ ಜೀವನ ನಡೆಸಲು ಈ ಯೋಜನೆ ಸಹಕಾರಿಯಾಗಿದೆ.

ಸರಕಾರದ ಹಲವಾರು ಯೋಜನೆಗಳು ಜನಪರವಾಗಿಯೇ ರೂಪಿತವಾಗಿರುತ್ತವೆ. ಆದರೆ ಆ ಯೋಜನೆಗಳ ಮಹತ್ವ ಮತ್ತು ವಿವರಗಳನ್ನು ಜನಸಾಮಾನ್ಯನಿಗೆ ತಲುಪಿಸುವಲ್ಲಿ ಬಹುತೇಕ ಚುನಾಯಿತ ಸರಕಾರಗಳು ಎಡವುತ್ತವೆ. ಈ ಅವಕಾಶಕ್ಕಾಗಿ ಕಾಯುತ್ತಿರುವ ಪುಢಾರಿಗಳು ಆ ಯೋಜನೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ರಾಜಕೀಯ ಒತ್ತಡ ಅಥವಾ ಆಮಿಷಕ್ಕೆ ಒಳಗಾದ ಅಧಿಕಾರಿಯೂ ಪುಢಾರಿಯೊಂದಿಗೆ ಸೇರಿಕೊಂಡರೆ ಆ ಯೋಜನೆ ಹಳ್ಳ ಹಿಡಿಯಿತೆಂದೇ ಅರ್ಥ. ಇದೇ ಕಾರಣಕ್ಕಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನರೇಗಾ ಯೋಜನೆ ಕೂಡಾ ವಿಫಲವಾಗಿದೆ. ಆದರೆ ಇಂತಹ ಅನರ್ಥ ತಪ್ಪಿಸಲೆಂದೇ ಕಲಬುರ್ಗಿಯಲ್ಲಿ ರೈತಪರ ಕಾಳಜಿಯ ಬಳಗ ಹುಟ್ಟಿಕೊಂಡಿದೆ.

ಸಂಘಟನೆಗಳ ಉತ್ಸಾಹ, ಸರಕಾರದ ಅಧಿಕಾರಿಗಳ ಸಹಕಾರದಿಂದ ಬೀದರ, ಕಲಬುರ್ಗಿ, ರಾಯಚೂರಿನ ಹಲವಾರು ಕೆರೆಗಳು ಹಿಂದಿನಂತೆ ತುಂಬಿನಿಂತಿವೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಎಲ್ಲಾ ಅಂಶಗಳನ್ನು ಮನಗಂಡ ಕಲಬುರ್ಗಿ ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿ ಬೀದರ, ಕಲಬುರ್ಗಿ, ರಾಯಚೂರುಗಳಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಪಣತೊಟ್ಟು ನಿಂತಿವೆ. ಇವರು ಮೂರ್ನಾಲ್ಕು ತಂಡಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹಳ್ಳಿಗಳಿಗೆ ಹೋಗಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿವರಿಸುವುದು ಮೊದಲ ಕೆಲಸ. ನಂತರ ಜನರ ಐ.ಡಿ.ಕಾರ್ಡ್ ಪಡೆದು ಅರ್ಜಿ ನಮೂನೆ ತುಂಬಿ ಸಂಬಂಧಿಸಿದ ಗ್ರಾಮ ಪಂಚಾಯತಿ/ತಾಲೂಕು ಪಂಚಾಯತಿಗಳಿಗೆ ನೀಡಿ ಜಾಬ್ ಕಾರ್ಡಗಳನ್ನು ಮಾಡಿಸಿಕೊಡುವುದು. ಸರಕಾರಿ ಯೋಜನೆಗಳ ದುಡ್ಡು ಎಂದರೆ ಕೆಲಸ ಮಾಡದೆ ಹೊಡಕೊಳ್ಳುವುದು ಎಂಬ ತಪ್ಪು ತಿಳಿವಳಿಕೆಯನ್ನು ಹೊಗಲಾಡಿಸಿ ಕೆಲಸ ಮಾಡಿದವರಿಗೆ ಮಾತ್ರ ಉದ್ಯೋಗ ಖಾತ್ರಿ ಎಂದು ಗಟ್ಟಿಯಾಗಿ ಸಾರುತ್ತಾರೆ. ಕಾಮಗಾರಿ ಆದ ನಂತರ ಹಣ ಫಲಾನುಭವಿಗಳ ಅಕೌಂಟ್‍ಗೆ ಹೋಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂಘಟನೆ ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ.

ಮಹಿಳಾ ಜನವಾದಿ ಸಂಘಟನೆಯ ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ನಂದಾ ದೇವಿ, ಲಿಂಗಪ್ಪ, ಚಂದಮ್ಮ, ಅಶ್ವಿನಿ ಮದನಕರ್, ರವೀಂದ್ರ ರುದ್ರವಾಡಿ ತಂಡದ ಕೆಲಸವನ್ನು ಗಮನಿಸಿದ ಕಲಬುರ್ಗಿ ಜಿಲ್ಲಾ ಪಂಚಾಯತಿಯ ಸಿ.ಇ.ಓ. ಅನಿರುದ್ಧ ಶ್ರವಣ ತಮ್ಮ ಅವಧಿಯಲ್ಲಿ ಸರಕಾರದಿಂದಲೇ ಎರಡು ಜೀಪ್‍ಗಳನ್ನು ಈ ಸಂಘಟನೆಯ ಕೆಲಸಕ್ಕಾಗಿ ಬಳಸಿಕೊಳ್ಳಲು ನೀಡಿದರು. ಜಾಬ್ ಕಾರ್ಡು ನೀಡಿದ ನಿರುದ್ಯೋಗಿಗಳಿಂದ ಕಾಮಗಾರಿ ಮಾಡಿಸಿ ಅವರೆಲ್ಲರ ಶ್ರಮದ ಫಲವನ್ನು ಅವರವರ ಖಾಸಗಿ ಬ್ಯಾಂಕ್ ಖಾತೆಗೆ ಬರುವಂತೆ ನೋಡಿಕೊಂಡರು.

ಸಂಘಟನೆಗಳ ಉತ್ಸಾಹ, ಸರಕಾರದ ಅಧಿಕಾರಿಗಳ ಸಹಕಾರದಿಂದ ಬೀದರ, ಕಲಬುರ್ಗಿ, ರಾಯಚೂರಿನ ಹಲವಾರು ಕೆರೆಗಳು ಹಿಂದಿನಂತೆ ತುಂಬಿನಿಂತಿವೆ. ಆಳಂದದ ಕಡಗಂಚಿ, ವೈಜಾಪುರ, ಹೊನ್ನಳ್ಳಿಯ ಕೆರೆಗಳಲ್ಲದೆ ಬಹಳಷ್ಟು ಕಡೆ ಹೊಲದ ಬದುಗಳು ಸುಧಾರಣೆ ಆಗಿವೆ. ಅವಶ್ಯವಿದ್ದಲ್ಲಿ ಚೆಕ್ ಡ್ಯಾಮ್‍ಗಳು ನಿರ್ಮಾಣಗೊಂಡಿವೆ. ಸತತ ಕಾಮಗಾರಿ ಯಿಂದ ರೈತ, ಕೃಷಿಕ ತನ್ನ ಊರನ್ನು ತೊರೆದು ಪರ ಊರಿಗೆ ಉದ್ಯೋಗ ಅರಸಿ ಹೋಗುವುದು ತಪ್ಪಿತು. ತನ್ನ ಇಡೀ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು. ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದ 80-90 ವರ್ಷದ ವೃದ್ಧರಿಗೆ, ಅಂಗವಿಕಲ ಮಕ್ಕಳಿಗೆ ಬದುಕಿನಲ್ಲಿ ಹೊಸ ಹುರುಪು ಹುಟ್ಟಿದೆ.

ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಸದಸ್ಯರು ಕೇವಲ ಭಾಷಣಕಾರರಲ್ಲ, ಬರಹಗಾರರಲ್ಲ, ನಿತ್ಯ ಬೆವರು ಹರಿಸಿ ದುಡಿಯುವ ಕಾಯಕಜೀವಿಗಳ ಪರ ಅವರ ತುಡಿತವಿದೆ ಎಂಬುದನ್ನು ಖಾತ್ರಿ ಮಾಡಿತೋರಿಸಿದ್ದಾರೆ.

*ಲೇಖಕರು ‘ಮನೆಯಲ್ಲಿ ಮಹಾಮನೆ’ ಮೂಲಕ ಶರಣರ ವಿಚಾರಗಳ ಪ್ರಚಾರದಲ್ಲಿ ನಿರತರು; ‘ಬಸವ ಬೆಳಕು’ ಕಾರ್ಯಕ್ರಮ ಆಯೋಜಿಸುತ್ತಾರೆ. ಪತ್ರಿಕೆಗಳಿಗೆ ಬರೆಯುವುದು, ಪುಸ್ತಕಗಳನ್ನು ಪ್ರಕಟಿಸುವುದು ಹವ್ಯಾಸ.

Leave a Reply

Your email address will not be published.