ಕಲಿಕಾ ವ್ಯವಸ್ಥೆ ಮತ್ತು ನಾಡಿನ ಏಳಿಗೆ

ನಾವು ಗೆದ್ದ ನಾಡುಗಳಾವುದರಿಂದಲೂ ಕಲಿಕೆಯ ವಿಷಯದಲ್ಲಿ ಏನನ್ನೂ ಕಲಿತಿಲ್ಲ. ಕಲಿತಿದ್ದರೆ ಮಗು ಕನಸು ಕಾಣುವ, ಆಲೋಚಿಸುವ ನುಡಿಯ ಕೈಬಿಟ್ಟು ಇನ್ನೊಂದು ನುಡಿಯಲ್ಲಿ ಜ್ಞಾನದ ಸಮಾಜ ಕಟ್ಟುತ್ತೇವೆ ಅನ್ನುವ ಭ್ರಮೆಯಲ್ಲಿ ಸಾಗುತ್ತಿರಲಿಲ್ಲ.

ನಿಮ್ಮ ಬಳಿ ಭೂಮಿ, ಬಂಡವಾಳ ಇಲ್ಲವೇ ಜ್ಞಾನ -ಈ ಮೂರರಲ್ಲಿ ಒಂದಾದರೂ ಇರದೇ ನಿಮ್ಮ ನಾಡು ಏಳಿಗೆಯಾಗದು ಅನ್ನುವ ಮಾತು ಪಬ್ಲಿಕ್ ಪಾಲಿಸಿ ವೃತ್ತಗಳಲ್ಲಿ ಚರ್ಚೆಯಾಗುವಂತದ್ದು. ಏನು ಹೀಗಂದರೆ ಅನ್ನುವ ಪ್ರಶ್ನೆಗೆ ಸರಳ ಉತ್ತರ: ಖನಿಜ ಇಲ್ಲವೇ ತೈಲ ಸಂಪನ್ಮೂಲ ಇರುವ ಗಲ್ಫನಂತಹ ನಾಡು, ಇಲ್ಲವೇ ಹೊರಗಿನ ಬಂಡವಾಳದ ಬಲದಲ್ಲಿ ಕಟ್ಟಲಾದ ತೈವಾನ್, ಚೀನಾದಂತಹ ನಾಡು, ಇಲ್ಲವೇ ಜ್ಞಾನದ ಬಲದ ಮೇಲೆ ಕಟ್ಟಲಾದ ಅಮೆರಿಕ, ಜಪಾನ್, ಸೌತ್ ಕೊರಿಯಾ ಮತ್ತು ಯುರೋಪಿನ ನಾಡುಗಳು… ಹೀಗೆ ಇಂದು ಮುಂದುವರೆದ ನಾಡುಗಳ ಏಳಿಗೆಯನ್ನು ಈ ಮೂರು ಅಂಶಗಳೇ ನಿರ್ಧರಿಸಿವೆ. ತೈಲ, ಖನಿಜ ಇಲ್ಲವೇ ಹೊರಗಿನ ಬಂಡವಾಳದ ವಿಷಯದಲ್ಲಿ ಹಿಂದಿರುವ ಭಾರತದಂತಹ ದೇಶದ ಏಳಿಗೆಗಿರುವ ದಾರಿ ಜ್ಞಾನದ ಬಲವೊಂದೇ ಅನ್ನುವ ಅಂಶ ಮನವರಿಕೆ ಮಾಡಿಕೊಂಡರೆ ಅದನ್ನು ಸಾಧ್ಯವಾಗಿಸುವಲ್ಲಿ ಶಿಕ್ಷಣ ಮತ್ತು ಕನ್ನಡದಂತಹ ಭಾಷೆಗಳ ಪಾತ್ರವೂ ಮನವರಿಕೆಯಾಗುತ್ತದೆ. ಹಾಗಿದ್ದಲ್ಲಿ ಯಾವ ರೀತಿಯ ಕಲಿಕೆಯ ಏರ್ಪಾಡು ಇರಬೇಕಿದೆ? ಈಗಿರುವುದರಲ್ಲಿ ಕಾಣಿಸುವ ಕೊರತೆಗಳೇನು? ಅನ್ನುವ ಎರಡು ಪ್ರಶ್ನೆಗಳನ್ನು ಎತ್ತಿಕೊಂಡು ನಾವು ಮತ್ತೆ ಮತ್ತೆ ಚರ್ಚೆ ಮಾಡುತ್ತಲೇ ಇರಬೇಕು.

ಕಲಿಕೆಯ ವಿಷಯದಲ್ಲಿ ನಾವು ಎಂದು ಎಲ್ಲಿದ್ದಿವೋ ಅದನ್ನು ಚರ್ಚಿಸುವ ಮುನ್ನ ನಾವು ಅಲ್ಲಿಗೆ ಹೇಗೆ ಬಂದೆವು ಅನ್ನುವುದರ ಮೇಲೂ ಸ್ವಲ್ಪ ಬೆಳಕು ಚೆಲ್ಲಬೇಕು. ನಮ್ಮ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ ಹಲವು ಕಾಲಘಟ್ಟಗಳನ್ನು ದಾಟಿ ಬಂದಿದೆ. ಪ್ರಾಚೀನ ಕಾಲದ ವ್ಯವಸ್ಥೆಗಳಲ್ಲಿ ಮುಖ್ಯವಾಗಿ ಎರಡು ಅಂಶಗಳನ್ನು ಕಾಣಬಹುದು. ಮೊದಲನೆಯದು ಅವು ಧಾರ್ಮಿಕ ವಿಷಯಗಳಿಗೆ ಒತ್ತು ಕೊಡುತ್ತಿದ್ದವು; ಎರಡನೆಯದು ಸಮಾಜದಲ್ಲಿ ವರ್ಗಗಳಿಗೆ ಅನುಗುಣವಾಗಿ ಶಿಕ್ಷಣ ವಿಂಗಡಣೆಯಾಗಿತ್ತು ಮತ್ತು ಸೀಮಿತವಾಗಿತ್ತು. ವಿಜ್ಞಾನ, ರಾಜಕೀಯ, ಹಣಕಾಸು ಮುಂತಾದ ಧಾರ್ಮಿಕೇತರ ವಿಷಯಗಳನ್ನು ರಾಜವಂಶದವರಿಗೆ ಇಲ್ಲವೇ ಸಮಾಜದ ಮೇಲ್ವರ್ಗಕ್ಕೆ ಸೀಮಿತಗೊಳಿಸಲಾಗಿತ್ತು.

ಹೀಗಿದ್ದರೂ ಖಗೋಳ ವಿಜ್ಞಾನ, ಗಣಿತ ಮುಂತಾದ ವಿಷಯಗಳಲ್ಲಿ ಅಂದಿನ ಸಮಾಜ ಹಲವು ಸಾಧನೆಗಳನ್ನು ಮಾಡಿತು. ಗುಡಿಗಳ ರೂಪದಲ್ಲಿ ಕಾಣುವ ಕಟ್ಟಡ ಕಟ್ಟಣೆ, ಕೆತ್ತನೆಯ ಜಾಣ್ಮೆ, ನೀರಾವರಿ, ನೇಯ್ಗೆ ಮುಂತಾದ ಕವಲುಗಳಲ್ಲಿ ಅಂದಿನ ನಮ್ಮ ಸಮಾಜ ಮುನ್ನಡೆಯಲ್ಲಿತ್ತು. ಕಾಲ ಬದಲಾದಂತೆ ಹಲವಾರು ಅರಸು ಮನೆತನಗಳು ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದವಾದರೂ ಒಟ್ಟಾರೆ ಮೂಲಭೂತ ಬದಲಾವಣೆಗಳು ನಿಧಾನವಾಗಿ ಸಾಗಿದವು. ಇಡೀ ಸಮಾಜಕ್ಕೆ ವರ್ಗಭೇದಗಳಿಲ್ಲದೇ ಕಟ್ಟಬೇಕಿದ್ದ ಕಲಿಕಾ ವ್ಯವಸ್ಥೆ ಅಂದಿನ ಕಾಲದಲ್ಲಿ ಹೊರಹೊಮ್ಮಲೇ ಇಲ್ಲ. 13ನೇ ಶತಮಾನದಿಂದ 18ನೇ ಶತಮಾನದವರೆಗಂತೂ ರಾಜಕೀಯ ತಲ್ಲಣಗಳೇ ಹೆಚ್ಚಾಗಿ ಶಿಕ್ಷಣ ವ್ಯವಸ್ಥೆಗಳಲ್ಲಿ ಆಗಬೇಕಾದ ಬದಲಾವಣೆಗಳು ಹಿಂಬದಿಗೆ ತಳ್ಳಲ್ಪಟ್ಟವು.

ತಮ್ಮ ತಾಯ್ನಾಡು ಬ್ರಿಟನ್ ನಲ್ಲಿ ಕಟ್ಟಿದ ಶಿಕ್ಷಣ ವ್ಯವಸ್ಥೆಗಳನ್ನು, ಅದರಿಂದ ಪಡೆದ ಒಳಿತುಗಳನ್ನು ವಸಾಹಾತು ದೇಶಗಳಿಗೂ ವಿಸ್ತರಿಸಬೇಕೆಂಬ ಕೂಗು ಹೆಚ್ಚುತ್ತಾ ಸಾಗಿದ್ದರಿಂದ ಭಾರತಕ್ಕೂ ಈ ಮಾರ್ಪಾಡುಗಳು ಬರತೊಡಗಿದವು.

18 ರಿಂದ 20ನೇ ಶತಮಾನದ ಮೊದಲಾರ್ಧದವರೆಗೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ನಮ್ಮ ಸಮಾಜ, ಅವರು ತಂದ ಶಿಕ್ಷಣ ವ್ಯವಸ್ಥೆಗೆ ಬೇಕೋ ಬೇಡವೋ ಒಪ್ಪಿಕೊಳ್ಳುತ್ತಾ ಸಾಗಬೇಕಾಯಿತು. ಬ್ರಿಟಿಷರು, ಭಾರತವೂ ಸೇರಿದಂತೆ ತಮ್ಮ ಹಿಡಿತದಲ್ಲಿದ್ದ ವಸಾಹತು ದೇಶಗಳಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮುಖ್ಯವಾಗಿ ತಮಗೆ ಸಹಾಯವಾಗುವಂತೆ ರೂಪಿಸುತ್ತಾ ಬಂದರು. ತಮ್ಮ ತಾಯ್ನಾಡು ಬ್ರಿಟನ್ ನಲ್ಲಿ ಕಟ್ಟಿದ ಶಿಕ್ಷಣ ವ್ಯವಸ್ಥೆಗಳನ್ನು, ಅದರಿಂದ ಪಡೆದ ಒಳಿತುಗಳನ್ನು ವಸಾಹಾತು ದೇಶಗಳಿಗೂ ವಿಸ್ತರಿಸಬೇಕೆಂಬ ಕೂಗು ಹೆಚ್ಚುತ್ತಾ ಸಾಗಿದ್ದರಿಂದ ಭಾರತಕ್ಕೂ ಈ ಮಾರ್ಪಾಡುಗಳು ಬರತೊಡಗಿದವು.

ಆದರೆ ಬ್ರಿಟನಲ್ಲಿರುವಂತಹ ಶಿಕ್ಷಣ ವ್ಯವಸ್ಥೆಗಳನ್ನು ನೇರವಾಗಿ ವಸಾಹಾತು ದೇಶಗಳಲ್ಲೂ ಅಳವಡಿಸುವ ಬದಲು ರಾಜಕೀಯವಾಗಿ ಬ್ರಿಟಿಷರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಟ್ಟಲು ತೀರ್ಮಾನಿಸಲಾಯಿತು. ಇಂಗ್ಲಿಶ್ ಎಜ್ಯುಕೇಶನ್ ಆಕ್ಟ್-1835, ಈ ನಿಟ್ಟಿನಲ್ಲಿ ಮಹತ್ತರ ಬೆಳವಣಿಗೆಯಾಯಿತು. ಇದನ್ನು ರೂಪಿಸುವ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿ ಮೆಕಾಲೆ ಅವರ ಮಾತುಗಳು, ಬ್ರಿಟಿಷರ ನಡೆಗಳನ್ನು ಪ್ರತಿನಿಧಿಸುವಂತಿದ್ದವು.

ಮೆಕಾಲೆ ಹೇಳಿದಂತೆ, ‘ಭಾರತದ ಶಿಕ್ಷಣ ವ್ಯವಸ್ಥೆ ಕೀಳರಿಮೆಯಿಂದ ಕೂಡಿದ್ದಾಗಿದೆ. ಅದೇ ಬ್ರಿಟನ್ನಿನ ವ್ಯವಸ್ಥೆ ಮೇರುಮಟ್ಟದ್ದಾಗಿದೆ. ಭಾರತದಲ್ಲಿ ನಾವು ಜಾರಿಗೊಳಿಸಬೇಕೆಂದಿರುವ ಈ ಶಿಕ್ಷಣ ವ್ಯವಸ್ಥೆ ಹೇಗಿರಬೇಕೆಂದರೆ, ಶಿಕ್ಷಣ ಪಡೆದವರು ತಮ್ಮ ರಕ್ತ, ಮೈಬಣ್ಣದಲ್ಲಷ್ಟೇ ಭಾರತೀಯರಾಗಿರಬೇಕು. ಆದರೆ ಅವರ ನಡೆಗಳು, ವಿಚಾರಗಳು ಬ್ರಿಟಿಷರಂತಿರಬೇಕು. ಅವರು ಭಾರತೀಯರು ಮತ್ತು ಬ್ರಿಟಿಷರ ನಡುವಿನ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಈ ವ್ಯವಸ್ಥೆಯನ್ನು ಕಟ್ಟಲು ಇಂಗ್ಲಿಶ್ ಸರಿಯಾದ ಮಾಧ್ಯಮ’. ಹೀಗೆ ಬ್ರಿಟಿಷರ ಕಾಲದಲ್ಲಿ ಅಡಿಪಾಯ ಹಾಕಿದ ಭಾರತದ ಶಿಕ್ಷಣ ವ್ಯವಸ್ಥೆ ಮುಖ್ಯವಾಗಿ ಸ್ಥಳೀಯರನ್ನು ಬ್ರಿಟಿಷರ ಅನುಕೂಲಕ್ಕೆ ಸಜ್ಜುಗೊಳಿಸುವ ಯೋಜನೆಯಾಗಿತ್ತು.

ತಮ್ಮ ನೆಲದ ನುಡಿಗಳ ಮೂಲಕವೇ ಜಾಗತೀಕರಣವನ್ನು ಎದುರಿಸುವುದು ಸರಿಯಾದ ದಾರಿ ಅನ್ನುವುದನ್ನು ಮನಗಾಣದೇ, ಶಾಲೆಗಳು ಇಂಗ್ಲಿಶ್ ಮಾಧ್ಯಮಕ್ಕೆ ತರಾತುರಿಯಲ್ಲಿ ಬದಲಾಗತೊಡಗಿದವು.

ಬ್ರಿಟಿಷರು ಜಾರಿಗೊಳಿಸಿದ ವ್ಯವಸ್ಥೆಗಳಿಂದ ಒಂದು ಉಪಯೋಗವಾದದ್ದೇನೆಂದರೆ 1871ರಲ್ಲಿ ಸುಮಾರು 3% ಇದ್ದ ಓದು ಬರಹ ಬಲ್ಲವರ ಸಂಖ್ಯೆ 1941ರ ಹೊತ್ತಿಗೆ 16% ಆಯಿತು. ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಸಾಕ್ಷರತೆಯನ್ನು ಹೆಚ್ಚಿಸುವ ಯೋಜನೆಗಳನ್ನು ಜಾರಿಗೊಳಿಸಲಾಯಿತಾದರೂ, ಬ್ರಿಟಿಷರು ಹುಟ್ಟುಹಾಕಿದ ಶಿಕ್ಷಣ ವ್ಯವಸ್ಥೆಯನ್ನು ಅದರ ಒಳಿತು-ಕೆಡಕುಗಳನ್ನು ಒರೆಗೆ ಹಚ್ಚದೇ ಮುಂದುವರೆಸಿಕೊಂಡು ಬರಲಾಯಿತು. ಕಳೆದ ಒಂದಿಪ್ಪತ್ತು ವರುಷದಲ್ಲಿ ಜಾಗತೀಕರಣದ ಗಾಳಿ ಬಿರುಸಾಗಿ ಬೀಸಿ, ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯು ಕೆಲಸ ಗಿಟ್ಟಿಸಿಕೊಳ್ಳುವ ಮಾಧ್ಯಮವಾಗಿ ಬದಲಾಯಿತು. ತಮ್ಮ ನೆಲದ ನುಡಿಗಳ ಮೂಲಕವೇ ಜಾಗತೀಕರಣವನ್ನು ಎದುರಿಸುವುದು ಸರಿಯಾದ ದಾರಿ ಅನ್ನುವುದನ್ನು ಮನಗಾಣದೇ, ಶಾಲೆಗಳು ಇಂಗ್ಲಿಶ್ ಮಾಧ್ಯಮಕ್ಕೆ ತರಾತುರಿಯಲ್ಲಿ ಬದಲಾಗತೊಡಗಿದವು. ಹೀಗೆ ನಮ್ಮ ಶಿಕ್ಷಣ ವ್ಯವಸ್ಥೆ ಬೆಳೆದುಬಂದುದರ ಮರುನೋಟ ಮಾಡಿದಾಗ ಕಾಣುವ ಅಂಶವೆಂದರೆ, ಸಮಾಜದ ಎಲ್ಲರನ್ನೂ ಒಳಗೊಂಡ, ಸಮುದಾಯದ ನಿಜವಾದ ಏಳಿಗೆಗಾಗಿ ಕಟ್ಟಿದ ವ್ಯವಸ್ಥೆ ನಮ್ಮಲ್ಲಿ ಇಂದಿಗೂ ಮೈದಾಳಿಲ್ಲ ಎನ್ನುವುದು!

ಅದೇ, ಇಂದು ಮುಂದುವರೆದ ದೇಶಗಳು ತಮ್ಮ ಸವಾಲುಗಳನ್ನು ಬೇರೆ ರೀತಿಯಲ್ಲಿ ಎದುರಿಸುತ್ತಾ ಬಂದಿವೆ. ಉದಾಹರಣೆಗೆ, ಜಪಾನ್ ಸಮಾಜ 16ನೇ ಶತಮಾನದಲ್ಲಿಯೇ ‘ರಂಗಾಕು’ (ಪಶ್ಚಿಮದಿಂದ ಕಲಿಕೆ) ಎಂಬ ಚಳವಳಿಯ ಮೂಲಕ ಪಶ್ಚಿಮ ದೇಶಗಳಿಂದ ಬಂದ ವೈಜ್ಞಾನಿಕ ಬೆಳವಣಿಗೆಗಳನ್ನು ತಮ್ಮ ನೆಲದ ನುಡಿ ಜಪಾನೀಸ್ ಗೆ ಒಗ್ಗಿಸಿಕೊಂಡರು. ತಮ್ಮಲ್ಲಿದ್ದ ವ್ಯವಸ್ಥೆ ಮತ್ತು ಪಶ್ಚಿಮದಿಂದ ಬಂದ ತಿಳಿವಳಿಕೆಯ ಒಳಿತು-ಕೆಡಕುಗಳನ್ನು ಒರೆಗೆಹಚ್ಚಿ, ಇಡೀ ಶಿಕ್ಷಣ ವ್ಯವಸ್ಥೆ ಜಪಾನೀಸ್ ಪರಿಸರದಲ್ಲಿ ಮೈದಾಳುವಂತೆ ಮಾಡಿದರು. ಇದರ ಪರಿಣಾಮವಾಗಿ ಜಪಾನಿಗರು ಇಂದು ಜಗತ್ತಿನೆಲ್ಲೆಡೆ ತಮ್ಮ ಜಾಣ್ಮೆಗೆ, ಏಳಿಗೆಗೆ ಹೆಸರುವಾಸಿಯಾಗಿದ್ದಾರೆ.

ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ, ಕಲಿಕಾ ಮಟ್ಟದಲ್ಲಿ ಇಂದು ಜಗತ್ತಿನಲ್ಲಿಯೇ ಮೊದಲನೇ ಸಾಲಿನಲ್ಲಿರುವ ಫಿನ್‍ಲ್ಯಾಂಡ್ ಕಳೆದ 60 ವರುಷಗಳಲ್ಲೇ ತನ್ನ ಇಡೀ ಕಲಿಕಾ ವ್ಯವಸ್ಥೆಯನ್ನು ತನ್ನ ನೆಲದ ನುಡಿ ಫಿನ್ನಿಶ್ ಸುತ್ತ ತುಂಬಾ ಚೆನ್ನಾಗಿ ಕಟ್ಟಿಕೊಂಡಿದ್ದನ್ನು ಕಾಣಬಹುದು. ಕಲಿಕೆ ಮತ್ತು ಸಮಾಜದ ಏಳಿಗೆಯ ನಂಟನ್ನು ಫಿನ್ನಿಶಿಗರು ತುಂಬಾ ಚೆನ್ನಾಗಿ ಅರಿತಿರುವುದರಿಂದ ಹೀಗಾಗಲು ಸಾಧ್ಯವಾಗಿದೆ. ಸೋಜಿಗವೆನಿಸಬಹುದು, ಫಿನ್‍ಲ್ಯಾಂಡಿನಲ್ಲಿ ಶಿಕ್ಷಕರ ಕೆಲಸ ದೊರಕಿಸಿಕೊಳ್ಳುವುದು, ಡಾಕ್ಟರ್, ಇಂಜನೀಯರ್ ಕೆಲಸಗಳು ಸಿಗುವುದಕ್ಕಿಂತ ಕಷ್ಟ. ಇದಕ್ಕೆ ಕಾರಣ ಶಿಕ್ಷಕರು ತಮ್ಮ ಇಡೀ ಸಮಾಜದ ಏಳಿಗೆಗೆ ಅಡಿಪಾಯವನ್ನು ಹಾಕುವವರು; ಹಾಗಾಗಿ ಅಲ್ಲಿ ಅವರ ಆಯ್ಕೆ ಪ್ರಕ್ರಿಯೆ ತುಂಬಾ ಆಳವಾಗಿ ನಡೆಯುತ್ತದೆ. ಜಪಾನ್, ಫಿನ್‍ಲ್ಯಾಂಡ್ ಅಲ್ಲದೇ ದಕ್ಷಿಣ ಕೊರಿಯಾ, ಇಸ್ರೇಲ್, ಯುರೋಪಿನ ಇತರೆ ದೇಶಗಳು ಕೂಡ ತಮ್ಮ ಪರಿಸರಕ್ಕೆ ಸರಿ ಹೊಂದುವ ಒಳ್ಳೆಯ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಂಡಿರುವುದರಿಂದಲೇ ಅವು ಮುಂದುವರೆಯಲು ಸಾಧ್ಯವಾಗಿದೆ.

ಸವಲತ್ತುಗಳ ಕೊರತೆ, ಶಿಕ್ಷಕರ ತರಬೇತಿಯ ಸಮಸ್ಯೆ, ಪಠ್ಯಕ್ರಮದ ತೊಂದರೆ, ಯಾವುದು ಕನ್ನಡದಲ್ಲಿ ಕಲಿಕೆಯ ಕೈಕಟ್ಟಿ ಹಾಕಿರುವುದು? ನನ್ನ ಪ್ರಕಾರ ಎಲ್ಲವೂ ಹೌದು. ಆದರೆ ಒಂದು ಆಯಾಮವನ್ನು ಚರ್ಚಿಸುವುದಾದರೆ ಅದು ಪಠ್ಯಕ್ರಮದಲ್ಲಿನ ಹುಳುಕಿನದ್ದು.

ನಾವು ಈ ಗೆದ್ದ ನಾಡುಗಳಾವುದರಿಂದಲೂ ಕಲಿಕೆಯ ವಿಷಯದಲ್ಲಿ ಏನನ್ನೂ ಕಲಿತಿಲ್ಲ. ಕಲಿತಿದ್ದರೆ ಮಗು ಕನಸು ಕಾಣುವ, ಆಲೋಚಿಸುವ ನುಡಿಯ ಕೈಬಿಟ್ಟು ಇನ್ನೊಂದು ನುಡಿಯಲ್ಲಿ ಜ್ಞಾನದ ಸಮಾಜ ಕಟ್ಟುತ್ತೇವೆ ಅನ್ನುವ ಭ್ರಮೆಯಲ್ಲಿ ಸಾಗುತ್ತಿರಲಿಲ್ಲ.

200 ವರುಷಗಳ ಹಿಂದೆ ಬ್ರಿಟಿಷ್ ಅಧಿಕಾರಿ ಮೆಕಾಲೆ ಅವರ ನಿಲುವೇ ಈಗ ನಮ್ಮೆಲ್ಲರದ್ದು ಆಗುತ್ತಿದೆ. ಹಾಗಿದ್ದರೆ ಚೆನ್ನಾಗಿಯೇ ಶುರುವಾಗಿದ್ದ ಕನ್ನಡ ಮಾಧ್ಯಮದಲ್ಲಿನ ಶಿಕ್ಷಣದ ಪಯಣ ಈಗೇಕೆ ಕುಸಿಯುತ್ತ ಹೊರಟಿದೆ? ಸವಲತ್ತುಗಳ ಕೊರತೆ, ಶಿಕ್ಷಕರ ತರಬೇತಿಯ ಸಮಸ್ಯೆ, ಪಠ್ಯಕ್ರಮದ ತೊಂದರೆ, ಯಾವುದು ಕನ್ನಡದಲ್ಲಿ ಕಲಿಕೆಯ ಕೈಕಟ್ಟಿ ಹಾಕಿರುವುದು? ನನ್ನ ಪ್ರಕಾರ ಎಲ್ಲವೂ ಹೌದು. ಆದರೆ ಒಂದು ಆಯಾಮವನ್ನು ಚರ್ಚಿಸುವುದಾದರೆ ಅದು ಪಠ್ಯಕ್ರಮದಲ್ಲಿನ ಹುಳುಕಿನದ್ದು.

ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳ ರಚನೆಯಲ್ಲಿ, ಅದರಲ್ಲೂ ವಿಶೇಷವಾಗಿ ವಿಜ್ಞಾನ ಮತ್ತು ಗಣಿತದ ವಿಷಯಗಳ ಪದಗಳ ಆಯ್ಕೆಯಲ್ಲಿ ಅನುಸರಿಸಲಾಗುತ್ತಿರುವ ಚಿಂತನೆಯಲ್ಲಿ ಸಮಸ್ಯೆಯಿದೆ. ಉದಾಹರಣೆಗೆ, ಎಚಿಟನೇ ತರಗತಿಯಲ್ಲಿರುವ ಇಂಜಿನ್ ಕುರಿತಾಗಿರುವ ಪಾಠದಲ್ಲಿ ಬಳಸಿರುವ ಪದಗಳನ್ನೇ ನೋಡಿ. ಭುಕ್ತಿ, ಸಂಪೀಡನಾ, ವ್ಯಾಕೋಚನ, ನಿಷ್ಕಾಸ ಅನ್ನುವಂತಹ ತಿಳಿಯದ ಪದಗಳನ್ನು ಅಲ್ಲಿ ಬಳಸಲಾಗಿದೆ. ಇವುಗಳ ಬದಲಾಗಿ ಹೀರುವಿಕೆ, ಒತ್ತುವಿಕೆ, ಹರಡುವಿಕೆ ಮತ್ತು ಹೊರಹಾಕುವಿಕೆ ಅನ್ನುವಂತಹ ಕನ್ನಡ ಪರಿಸರದ ಪದಗಳನ್ನು ಬಳಸಿದ್ದರೆ ಅವು ಮಗುವಿನ ಮನಸ್ಸಿಗೆ ಹತ್ತಿರದ ಪದಗಳೂ ಆಗುತ್ತಿದ್ದವು, ಮಗುವಿಗೆ ತಿಳಿಯಲು ಸುಲಭವಾಗುತ್ತಿತ್ತು.

ಹೀಗೆ ಮಾಡುವಾಗ ಕನ್ನಡದ ಜಾಯಮಾನಕ್ಕೆ ಹೊಂದದ ಗೊಂದಲಗಳೇ ಹೆಚ್ಚಾಗಿವೆ. ಪಠ್ಯಪುಸ್ತಕ ರಚನಾ ಸಮಿತಿಯ ಗಮನಕ್ಕೆ ಇದನ್ನು ತಂದರೂ ಏನೂ ಪ್ರಯೋಜವಾಗುತ್ತಿಲ್ಲ. ಇದು ಒಂದು ಸಮಸ್ಯೆಯಷ್ಟೇ.

ಪದಗಳ ವಿಷಯದಲ್ಲಿ ಕನ್ನಡ ಪರಿಸರಕ್ಕೆ ಒಗ್ಗದ ಈ ನಡೆ ಎಲ್ಲ ತರಗತಿಗಳ ಪಠ್ಯಗಳಲ್ಲೂ ಕಾಣಬಹುದು. ಇಲ್ಲಿನ ಇನ್ನೊಂದು ತೊಂದರೆಯೆಂದರೆ, ಪಠ್ಯಪುಸ್ತಕಗಳನ್ನು ಮೊದಲು ಇಂಗ್ಲಿಷನಲ್ಲಿ ಸಜ್ಜುಗೊಳಿಸಿ ಆಮೇಲೆ ಕನ್ನಡಕ್ಕೆ ನೇರ ಅನುವಾದ ಮಾಡಲಾಗುತ್ತಿದೆ. ಹೀಗೆ ಮಾಡುವಾಗ ಕನ್ನಡದ ಜಾಯಮಾನಕ್ಕೆ ಹೊಂದದ ಗೊಂದಲಗಳೇ ಹೆಚ್ಚಾಗಿವೆ. ಪಠ್ಯಪುಸ್ತಕ ರಚನಾ ಸಮಿತಿಯ ಗಮನಕ್ಕೆ ಇದನ್ನು ತಂದರೂ ಏನೂ ಪ್ರಯೋಜವಾಗುತ್ತಿಲ್ಲ. ಇದು ಒಂದು ಸಮಸ್ಯೆಯಷ್ಟೇ.

ನಮ್ಮ ಇಡೀ ಕಲಿಕಾ ವ್ಯವಸ್ಥೆಯನ್ನು ಕನ್ನಡದ ಪರಿಸರಕ್ಕೆ ಹೊಂದಿಸಿಕೊಳ್ಳಬೇಕು. ಹೀಗೆ ಮಾಡಬೇಕಿರುವುದು ಕನ್ನಡದ ಮೇಲಿರುವ ಅಭಿಮಾನದಿಂದಲ್ಲ ಬದಲಾಗಿ ಕನ್ನಡಿಗರ ನಿಜವಾದ ಏಳಿಗೆಗೆ ಇದು ಸರಿಯಾದ ದಾರಿಯಾಗಿರುವುದರಿಂದ. ತಾಯ್ನುಡಿಯಲ್ಲಿ ಕಲಿಕೆಯ ಮಹತ್ವವನ್ನು ಜನ ಸಮುದಾಯಕ್ಕೆ ಮನವರಿಕೆ ಮಾಡಲು ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೆ ಆಗುವ ಒಳಿತುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಫಲಕಗಳನ್ನು ಹಾಕುವುದರ ಮೂಲಕ, ಟಿವಿ, ಪತ್ರಿಕೆ ಮುಂತಾದ ಸಂಪರ್ಕ ಸಾಧನಗಳ ಮೂಲಕ ತಿಳಿಸಬೇಕು. ಸರಿಯಾದ ಕಲಿಕಾ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವುದು ತನ್ನ ಹೊಣೆ ಎನ್ನುವುದನ್ನು ಕರ್ನಾಟಕ ಸರಕಾರ ಮನಗಾಣಬೇಕು. ಅಂತೆಯೇ ಹಣದ ಲಾಭ ನಷ್ಟ ಎನ್ನುವ ತಕ್ಕಡಿಯಲ್ಲಿ ತೂಗದೇ ಎಲ್ಲರಿಗೂ ಎಟಕುವಂತಿರುವ, ಒಳ್ಳೆಯ ಮಾದರಿ ಶಾಲೆಗಳನ್ನು ಹಳ್ಳಿ-ಹಳ್ಳಿಗಳಲ್ಲೂ ಕಟ್ಟಿ ಬೆಳೆಸಬೇಕು. ಬಜೆಟ್ಟಿನ ದೊಡ್ಡ ಪಾಲು ಇಂತಹ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಮೀಸಲಾಗಿಡಬೇಕು.

ಫಿನ್‍ಲ್ಯಾಂಡಿನ ಉದಾಹರಣೆಯನ್ನು ಇಲ್ಲಿ ಮತ್ತೇ ತೆಗೆದುಕೊಂಡರೆ, ಅಲ್ಲಿನ ಜನ ಒಳ್ಳೆಯ ಶಾಲೆ ಯಾವುದು ಎಂದು ಹುಡುಕುವುದೇ ಇಲ್ಲವಂತೆ, ಅವರ ಮನೆಗೆ ಹತ್ತಿರವಿರುವ ಶಾಲೆಯೇ ಒಳ್ಳೆಯ ಶಾಲೆಯಾಗಿರುತ್ತದೆ. ಖಾಸಗಿ ಶಾಲೆಗಳ ಸುಳಿವೂ ಅಲ್ಲಿ ಸಿಗುವುದಿಲ್ಲ. ಸರಕಾರವೇ ಮೇರುಮಟ್ಟದ ಶಾಲೆಗಳನ್ನು ಕಟ್ಟುತ್ತದೆ, ನಡೆಸಿಕೊಂಡು ಹೋಗುತ್ತದೆ. ಮೇಲು ಕೀಳಿಲ್ಲದ, ಎಲ್ಲರಿಗೂ ಹತ್ತಿರವೆನಿಸುವ ಕನ್ನಡ ಮಾಧ್ಯಮದ ಮಾದರಿ ಶಾಲೆಗಳು ಕರ್ನಾಟಕದ ಉದ್ದಗಲಕ್ಕೂ ಕಾಣುವಂತಾಗಬೇಕು.

ಪ್ರತಿ ತಾಲೂಕಿಗೆ ಒಂದರಂತೆ ವಿಜ್ಞಾನದ ದೊಡ್ಡ ಪ್ರಯೋಗಾಲಯಗಳು, ಹಳ್ಳಿ-ಹೋಬಳಿಗಳಲ್ಲಿ ಅಚ್ಚುಕಟ್ಟಾದ ಗ್ರಂಥಾಲಯಗಳು, ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡ ಕಲಿಕಾ ವ್ಯವಸ್ಥೆ, ತರಬೇತಿ ಕೇಂದ್ರಗಳು ಎಲ್ಲರಿಗೂ ತಲುಪುವಂತೆ ಮಾಡುವ ಹೊಣೆ ಸರಕಾರದ್ದು.

ಶಾಲೆಯೊಂದನ್ನು ‘ಮಾದರಿ’ ಎನ್ನಲು ಅಲ್ಲಿನ ಕಟ್ಟಡಗಳು, ಕಲಿಕಾ ಸಾಮಾಗ್ರಿಗಳು, ಶಿಕ್ಷಕರು, ಕಲಿಸುವ ಬಗೆ ಎಲ್ಲವೂ ಮುಖ್ಯವಾಗುತ್ತದೆ. ಮಕ್ಕಳನ್ನು ಪಠ್ಯಪುಸ್ತಕಕ್ಕೆ ಸೀಮೀತವಾಗಿರಸದೇ ‘ಕಲಿಕೆ’ ಎಂಬುದು ಪರಿಸರದಲ್ಲಿ ಕಾಣುವ, ಕಾಣದ ತಿಳಿವಳಿಕೆಯನ್ನು ತಮ್ಮದಾಗಿಸುವುದು ಎಂದು ಅವರಿಗೆ ಮನವರಿಕೆ ಮಾಡುವ ವ್ಯವಸ್ಥೆಯನ್ನು ಕಟ್ಟಬೇಕಾಗುತ್ತದೆ. ಮುಂದುವರೆದ ದೇಶಗಳಲ್ಲಿ ಈ ವ್ಯವಸ್ಥೆ ಎಷ್ಟು ಸೊಗಸಾಗಿದೆ ಎಂದರೆ, ಮಕ್ಕಳು ಶಾಲೆ ಕೋಣೆಯೊಳಗೆ ಕಳೆಯುವುದಕ್ಕಿಂತ ದುಪ್ಪಟ್ಟು ಹೊತ್ತು ಹೊರಗಡೆ ಪರಿಸರದೊಂದಿಗೆ ಬೆರೆಯುತ್ತಾ, ಹಲವು ಕರಕುಶಲ ಕಲೆಗಳನ್ನು ಕಲೆಯುತ್ತಾ ಸಮಯದ ಬಳಕೆ ಮಾಡುತ್ತಾರೆ. ಹೊರೆಯಾಗಿರುವ ಪುಸ್ತಕ ಗಂಟಾಗಲಿ, ಒತ್ತಡ ಹೇರುವ ಪರೀಕ್ಷೆ, ಮಾಕ್ರ್ಸ್ ಗಳಾಗಲಿ ಅಲ್ಲಿ ಸುಳಿಯುವುದಿಲ್ಲ.

ಮೈಸೂರಿನಲ್ಲಿರುವ ಅರಿವು ಶಾಲೆ, ಕಲಿಯುವ ಮನೆ, ಧಾರವಾಡದಲ್ಲಿರುವ ಬಾಲ ಬಳಗ ಇಂತಹ ಪ್ರಯತ್ನಗಳನ್ನು ಮಾಡುತ್ತಿರುವುದು ಸಂತಸದ ವಿಷಯ. ಇದು ಸರಕಾರದ ಮಟ್ಟದಲ್ಲಿ ಸಾರ್ವತ್ರಿಕವಾಗಬೇಕು. ಪ್ರತಿ ತಾಲೂಕಿಗೆ ಒಂದರಂತೆ ವಿಜ್ಞಾನದ ದೊಡ್ಡ ಪ್ರಯೋಗಾಲಯಗಳು, ಹಳ್ಳಿ-ಹೋಬಳಿಗಳಲ್ಲಿ ಅಚ್ಚುಕಟ್ಟಾದ ಗ್ರಂಥಾಲಯಗಳು, ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡ ಕಲಿಕಾ ವ್ಯವಸ್ಥೆ, ತರಬೇತಿ ಕೇಂದ್ರಗಳು ಎಲ್ಲರಿಗೂ ತಲುಪುವಂತೆ ಮಾಡುವ ಹೊಣೆ ಸರಕಾರದ್ದು.

ಇದೆಲ್ಲ ಕೇಳಲು ಚೆನ್ನಾಗಿದೆ. ಆದರೆ ಇದನ್ನೆಲ್ಲ ಮಾಡಲು ಎಲ್ಲಿ ಆಗುತ್ತೆ ಅಂತ ಹತಾಶರಾಗುವುದು ಸುಲಭ. ಆದರೆ ಸರ್ಕಾರ ಮನಸ್ಸು ಮಾಡಿದರೆ ಜಯದೇವದಂತಹ ಅದ್ಭುತ ಆಸ್ಪತ್ರೆ ನಡೆಸಬಲ್ಲದು, ಐಐಟಿ/ಐಐಎಂ ನಂತಹ ಪ್ರತಿಷ್ಠಿತ ಉನ್ನತ ಕಲಿಕೆಯ ಸಂಸ್ಥೆಗಳನ್ನು ಕಟ್ಟಬಹುದಾದರೆ ಕನ್ನಡದಲ್ಲಿ ಜಾಗತಿಕ ಮಟ್ಟದ ಕಲಿಕೆ ಕೊಡುವಂತಹ ವ್ಯವಸ್ಥೆಯನ್ನು ಯಾಕೆ ಕಟ್ಟಲಾಗದು?

ಎಲ್ಲೋ ಒಂದು ಕಡೆ ಶುರು ಮಾಡಬೇಕು. ತಾಲೂಕಿಗೊಂದು ಮಾದರಿ ಶಾಲೆಯನ್ನು ಕಟ್ಟಿ, ಅಲ್ಲಿನ ಸ್ಥಳೀಯ ಸಂಘಸಂಸ್ಥೆಗಳ ನೆರವು ಪಡೆದು ಅದನ್ನು ಯಶಸ್ವಿಯಾಗಿಸುವ ಪ್ರಯೋಗ ಮಾಡುವುದು, ಅದರ ಕಲಿಕೆಯ ಆಧಾರದ ಮೇಲೆ ಎಲ್ಲೆಡೆಯ ಶಾಲೆಗಳನ್ನು ಸುಧಾರಿಸುವುದು, ಕನ್ನಡ ಮಾಧ್ಯಮದಲ್ಲಿ ಓದಿಸುವುದರ ಲಾಭದ ಕುರಿತು ಜನರ ಮನವೊಲಿಸುವುದು, ಕಲಿತವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಂದಿಷ್ಟು ಆದ್ಯತೆ ಕೊಡುವುದು; ರಾಜಕಾರಣಿಗಳ, ಸರ್ಕಾರಿ ನೌಕರರ ಮತ್ತು ಶಿಕ್ಷಕರ ಮಕ್ಕಳು ಕಡ್ಡಾಯವಾಗಿ ಸರ್ಕಾರದ ಶಾಲೆಗಳಲ್ಲಿ ಕಲಿಯಬೇಕು… ಹೀಗೆ ಹಲವು ಚಿಕ್ಕಚಿಕ್ಕ ಹೆಜ್ಜೆಗಳ ಮೂಲಕ ಈ ಕುಸಿತವನ್ನು ತಡೆಗಟ್ಟಬಹುದು ಮತ್ತು ಕನ್ನಡದಲ್ಲೇ ಒಳ್ಳೆಯ ಕಲಿಕೆಯನ್ನು ಕಟ್ಟಬಹುದು. ಕನ್ನಡಿಗರ ಕಲಿಕೆಯನ್ನು ಸುಧಾರಿಸುವುದು ತನ್ನ ಆದ್ಯ ಗಮನ ಎನ್ನುವ ರಾಜಕೀಯ ಪಕ್ಷವೊಂದು ಹುಟ್ಟಿದಾಗ ಇದೆಲ್ಲ ಆಗಬಹುದೇನೋ. ಆದರೆ ಅಲ್ಲಿಯವರೆಗೂ ಈ ದೀಪ ಆರದಂತೆ ಕಾಯುವ, ಬೆಳಗುವ ಕೆಲಸವಂತೂ ಮುಂದುವರೆಯಲೇಬೇಕು.

*ಲೇಖಕರು ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನದ ಅರಿವು ಪಸರಿಸುವ ‘ತಿಳಿ’ ಯುಟ್ಯೂಬ್ ಚಾನೆಲ್ ಹಾಗೂ www.arime.org ಸಂಪಾದಕರು.

Leave a Reply

Your email address will not be published.