ಕಲಿಯುತ್ತಾ ಕಲಿಯುತ್ತಾ… ಸಂಗೀತಕ್ಕೆ ಹರೆಯ ಬರ್ತದೆ, ದೇಹ ಮುಪ್ಪಾಗ್ತದೆ!

ಈಗಿನ ಯುವ ಪೀಳಿಗೆಯಲ್ಲಿ ತುಂಬಾ ಪ್ರತಿಭೆ ಇರುವವರೂ ಇದ್ದಾರೆ. ತುಂಬಾ ಅಂದ್ರೆ ವಿಪರೀತ ಟ್ಯಾಲೆಂಟ್. ಅಲ್ಲಿಯೇ ತಪ್ಪಾಗ್ತಾ ಇರೋದು!

-ಪಂ. ಕಾಶಿನಾಥ ಪತ್ತಾರ

ಸಂಗೀತಕ್ಕೆ ಲಭ್ಯವಿರುವ ದಾಖಲೆಗಳ ಪ್ರಕಾರ ಸುಮಾರು 9 ಸಾವಿರ ವರ್ಷಗಳ ಇತಿಹಾಸವಿದೆ. ಹಿಂದೂಸ್ತಾನಿಯಲ್ಲಿ ಈವರೆಗೆ ಸುಮಾರು 38,848 ರಾಗಗಳು ಲಭ್ಯವಿವೆ. ಏಳೇಳು ಜನ್ಮಗಳೆತ್ತಿದರೂ ಅದರಲ್ಲಿ 48 ರಾಗಗಳನ್ನು ಸಂಪೂರ್ಣವಾಗಿ ಅರಿಯುವುದು ಅಸಾಧ್ಯ. ಹಿಂದಿನ ಸಾಧಕರಾದ ಪಂ.ಪಂಚಾಕ್ಷರಿ ಗವಾಯಿಗಳು, ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳು, ಭಾರತರತ್ನ ಪಂ.ಭೀಮಸೇನ ಜೋಶಿ, ಪಂ.ಮಲ್ಲಿಕಾರ್ಜುನ ಮನ್ಸೂರ್, ವಿದುಷಿ ಗಂಗೂಬಾಯಿ ಹಾನಗಲ್, ಪದ್ಮಶ್ರೀ ಡಾ.ಎಂ.ವೆಂಕಟೇಶಕುಮಾರ್ ತಮ್ಮನ್ನೇ ಸಂಗೀತಕ್ಕೆ ಅರ್ಪಿಸಿಕೊಂಡಿದ್ದರು. ಅವರ ಉಸಿರು, ದೇಹ ಎಲ್ಲವೂ ಸಂಗೀತಮಯ.

ಆ ಕಾಲದಲ್ಲಿ ಸಂಗೀತ ಎನ್ನುವುದು ಈಗಿನ ತರಹ ವ್ಯಾಪಾರೀಕರಣ ಆಗಿರಲಿಲ್ಲ. ಆಗ ಗುರು-ಶಿಷ್ಯ ಪರಂಪರೆ ಅದ್ಭುತವಾಗಿತ್ತು. ಗುರುಗಳು ಹೇಳಿಕೊಡುವ ಪಾಠಗಳನ್ನು ಚಾಚೂ ತಪ್ಪದೇ ಶಿಷ್ಯರು ಪಾಲಿಸುವ ಪದ್ಧತಿ ಇತ್ತು. ನಾನು ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಲಿತಿದ್ದು. ಸುಮಾರು 30-35 ವರ್ಷಗಳಿಂದ ಸಂಗೀತ ಅಭ್ಯಾಸದಲ್ಲ್ಲಿ ತೊಡಗಿಸಿಕೊಂಡಿದ್ದು. ಅಲ್ಲಿನ ಅಭ್ಯಾಸದ ರೀತಿ ಹೇಗಿತ್ತು ಅಂದರೆ, ಅವತ್ತಿನ ಪಾಠಗಳನ್ನು ಒಪ್ಪಿಸದಿದ್ದರೆ ಊಟ-ತಿಂಡಿ ಏನೂ ಕೊಡುತ್ತಿರಲಿಲ್ಲ. ಶ್ರದ್ಧೆ, ಭಕ್ತಿ ಮತ್ತು ಪ್ರೀತಿ ಮೂರೂ ಆಶ್ರಮದ ಮಂತ್ರಗಳಾಗಿದ್ದವು. ಆಗೆಲ್ಲಾ ದಿನಕ್ಕೆ 15-16 ಗಂಟೆಗಳಷ್ಟು ಅಭ್ಯಾಸ ಮಾಡುವ ಶಿಷ್ಯವೃಂದವಿತ್ತು.

ಹಿಂದೆ ಇದ್ದ ಗುರು-ಶಿಷ್ಯ ಪರಂಪರೆಯ ಪದ್ಧತಿ ಈಗಿನ ಯುವ ಪೀಳಿಗೆಯಲ್ಲಿ ಕಾಣ್ತಾ ಇಲ್ಲ. ಕಾರಣ ಈ ಮಾಧ್ಯಮಗಳು. ಟಿವಿ ಮಾಧ್ಯಮಗಳು ಬಂದು ಸಿನೆಮಾ ಹಾಡುಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಿದರು. ಝೀ ಹಿಂದಿಯಲ್ಲಿ ಮೊಟ್ಟಮೊದಲು ಸೋನು ನಿಗಮ್ ನಡೆಸಿಕೊಡುತ್ತಿದ್ದ ಸರಿಗಮದಲ್ಲಿ ದೊಡ್ಡ ದೊಡ್ಡ ಸಂಗೀತಗಾರರೆಲ್ಲಾ ತೀರ್ಪುಗಾರರಾಗಿ ಬರುತ್ತಿದ್ದರು. ಅದು ತುಂಬಾ ಪ್ರಾಮಾಣಿಕವಾಗಿ ನಡೆಯುತ್ತಿತ್ತು. ಬರ್ತಾ ಬರ್ತಾ ಟಿವಿ ಮಾಧ್ಯಮವು ಟಿಆರ್ಪಿ ಗೋಸ್ಕರ್ ಯಾರೊಬ್ಬರನ್ನೋ ಫೋಕಸ್ ಮಾಡಿ ದುಡ್ಡು ಮಾಡಲು ಹೊರಟರು. ಉತ್ತರ ಭಾರತದಲ್ಲಿ ಸ್ವಲ್ಪ ನಿಯತ್ತಿದೆ. ನಮ್ಮ ಕರ್ನಾಟಕದಲ್ಲಿ ಮಾತ್ರ ಏನೂ ಇಲ್ಲ. ಇಲ್ಲಿ ಹೇಗಿದೆ ಅಂದ್ರೆ, ಪ್ರತಿಭೆ ಇರೋವ್ರು ಎಷ್ಟೋ ಜನ ಇರ್ತಾರೆ. ಅವರನ್ನು ಗುರುತಿಸೋದೇ ಇಲ್ಲ. ಯಾವುದೋ ವ್ಯಕ್ತಿಯನ್ನು ತಂದು ನಿಲ್ಲಿಸಿ ಇವನೇ ಚಂದ್ರ, ಇಂದ್ರ, ಎಂಬ ಪರಿಸ್ಥಿತಿ ಈಗಿನ ಕಾಲದಲ್ಲಿದೆ.

ಯಾವ ಗುರುಗಳ ಹತ್ತಿರ ಹೋಗಬೇಕು, ತಮ್ಮ ಮಕ್ಕಳಿಗೆ ಏನು ಅಭ್ಯಾಸ ಮಾಡಿಸಬೇಕು, ತಮ್ಮ ಮಕ್ಕಳ ಕಂಠಕ್ಕೆ ಏನನ್ನು ಕಲಿತರೆ ಸರಿ ಹೊಂದುತ್ತದೆ ಅನ್ನೋದು ಪಾಲಕರಿಗೆ ಗೊತ್ತಿಲ್ಲ. ನಮ್ಮ ಮಗ ಕಲಿಯಬೇಕು, ಮಾಧ್ಯಮದಲ್ಲಿ ಬರಬೇಕು, ಹಾಡಬೇಕು, ಹೆಸರು ಮಾಡಬೇಕು ಅನ್ನೋದೇ ಪಾಲಕರ ಉದ್ದೇಶ, ಕಲಿಯುವಿಕೆಯಲ್ಲೂ ಏನಾಗಿದೆ ಅಂದ್ರೆ, ಯಾರಾದ್ರೂ ಗುರುಗಳು ಬೈದರೆ ಮಾರನೇ ದಿನ ಆ ಗುರುಗಳ ಹತ್ರ ಪಾಠಕ್ಕೆ ಬರೋದೇ ಬಿಟ್ಟುಬಿಡ್ತಾರೆ.

ಎಲ್ಲಾ ಕಡೆ ಫಾಸ್ಟಾಗಿ ಹೊರಟಿದೆ. ಆದರೆ ಸಂಗೀತದಲ್ಲಿ ಫಾಸ್ಟ್ ಮಾಡಕ್ಕೆ ಸಾಧ್ಯನೇ ಇಲ್ಲ. ನಮ್ಮ ಗುರುಗಳಾದ ಪಂ.ಪುಟ್ಟರಾಜ ಗವಾಯಿಗಳು, “ಸಂಗೀತ ಸಾಧನೆ ಶುರು ಮಾಡಿದ ಮೇಲೆ, ನಿರಂತರವಾಗಿ 35 ವರ್ಷ ಕಲಿತರೆ ಆವಾಗ ಒಂದು ಚೂರು ತಿಳಿತದೆ. ಕಲಿತಾ ಕಲಿತಾ ಸಂಗೀತಕ್ಕೆ ಹರೆಯ ಬರ್ತದೆ, ದೇಹ ಮುಪ್ಪಾಗ್ತದೆ” ಅಂತ ಹೇಳ್ತಿದ್ರು,

ಈಗಿನ ಯುವ ಪೀಳಿಗೆಯಲ್ಲೂ ತುಂಬಾ ಪ್ರತಿಭೆ ಇರುವವರೂ ಇದ್ದಾರೆ, ತುಂಬಾ ಅಂದ್ರೆ ವಿಪರೀತ ಟ್ಯಾಲೆಂಟ್. ಅದೇ ತಪ್ಪಾಗ್ತಾ ಇರೋದು. ಇಂಥವರು ಒಂದೆರಡು ಹಾಡು ಕಲಿತು, ಅದನ್ನೇ ಪರಿಪೂರ್ಣ ಕರಗತ ಮಾಡಿಕೊಂಡು ಅಷ್ಟಕ್ಕೇ ಸೀಮಿತರಾಗಿ ಉಳೀತಿದಾರೆ. ಸಾಧಕರಾಗ್ತಿಲ್ಲ. ಸಾಧನೆ ತುಂಬಾ ತುಂಬಾ ದೊಡ್ಡದು. ಸಾಧನೆ ಮಾಡಿದವರು ಹಾಡಿದ ಹಾಡಿಗೆ ಉದಾಹರಣೆ ಅಂದ್ರೆ, ಹಳೆಯ ಸಿನೆಮಾ ಹಾಡುಗಳನ್ನು ಈಗಿನ ಪೀಳಿಗೆಯವರು ಕೇಳಿ ಇಷ್ಟಪಡ್ತಾರೆ. ಆಗಿನ ಸಂಗೀತಗಾರರು ಪದ್ಧತಿಗನುಗುಣವಾಗಿ ಕಲಿತಿದ್ರು. ಆಗಿನ ಹೀರೋ, ಹೀರೋಯಿನ್ ಕೂಡ ಸಂಗೀತ ಆಲಿಸುತ್ತಿದ್ದರು, ಹಾಡುತ್ತಿದ್ದರು. ಹಾಗಾಗಿ ಆಗಿನ ಹಾಡುಗಳು ಈಗಲೂ ಎವರ್‍ಗ್ರೀನ್ ಆಗಿವೆ. ಈಗಿನ ಸಂಗೀತ ನಿರ್ದೇಶಕರು ತಕ್ಕ ಮಟ್ಟಿಗೆ ಕಲಿತು, ಅಲ್ಪಸ್ವಲ್ಪ ಜ್ಞಾನದೊಂದಿಗೆ, ಶಾಸ್ತ್ರೀಯ ಸಂಗೀತ ಬೇಡಾ ಅಂತ, ಯಾರದ್ದೋ ಕಾಪಿ ಮಾಡ್ತಾರೆ, ಏನೋ ಮಸಾಲೆ ಮಾಡಿ ಕೆಲಸ ಮುಗಿಸ್ತಾರೆ. ಜನರೂ ಕೂಡ ಈ ಆಕರ್ಷಣೆಗೆ ಒಳಗಾಗ್ತಿದಾರೆ.

ಈಗಿನ ಯುವ ಪೀಳಿಗೆಯನ್ನು ಗುರುತಿಸುವ ಕೆಲಸ ಮಾಧ್ಯಮಗಳೂ ಸಾಕಷ್ಟು ಮಾಡ್ತಿವೆ. ಆದರೆ ನಿಜವಾದ ಪ್ರತಿಭೆ ಯಾವುದು ಅಂತ ಗುರುತಿಸುತ್ತಿಲ್ಲ. ಸಿನೆಮಾ ಸಂಗೀತ, ಸುಗಮ ಸಂಗೀತದಂತಹ ಪ್ರಕಾರಗಳಿಗೆ ಶಾಸ್ತ್ರೀಯ ತಳಹದಿ ಇದ್ದಲ್ಲಿ, ಅವನ್ನು ಇನ್ನು ಹೆಚ್ಚು ಹೆಚ್ಚು ಬೆಳೆಸಲು ಸಾಧ್ಯ. ಸಂಗೀತದ ಬೆಳವಣಿಗೆ ಹೊಸ ಪ್ರಕಾರಗಳ ಹುಟ್ಟು ಸಾಧನೆಯಿಂದ ಮಾತ್ರ ಸಾಧ್ಯ. ಸಾಧನೆ ಅನ್ನೋದು ನಿರಂತರವಾಗಿದ್ದರೆ ಯಾವತ್ತೂ ಅದು ಹರಿಯುವ ನೀರಿನ ಹಾಗೇ ಇರ್ತದೆ.

ಈಗಿನ ಯುವ ಪೀಳಿಗೆಗೆ ನನ್ನ ಒಂದು ಸಲಹೆ ಅಂದ್ರೆ, ಸಾಧನೆ ಮಾಡ್ರಿ, ಸಾಧಕರಾಗ್ರಿ, ಅದಕ್ಕೆ ಅಂತ ಸಮಯ ನಿಗದಿ ಮಾಡ್ರಿ. ತಿಳಿಯದಿದ್ದಲ್ಲಿ ಹತ್ತಾರು ಬಾರಿ ಗುರುಗಳ ಹತ್ತಿರ ಕೇಳಿ ಕಲಿತುಕೊಳ್ಳಿ. ಸಾಧಕರಿಗೆ ಸೂಕ್ತ ವೇದಿಕೆ ಸಿಕ್ಕೇ ಸಿಗುತ್ತೆ. ವೇದಿಕೆಗೋಸ್ಕರ ಸಾಧನೆ ಬೇಡ. ಸಂಗೀತಕ್ಕೋಸ್ಕರ ಸಾಧನೆ ಮಾಡಿ. ತಾಳ್ಮೆ ಸಂಗೀತದಲ್ಲಿ ತುಂಬಾ ಮುಖ್ಯ. ಪ್ರಮುಖವಾಗಿ ಈ ತಾಳ್ಮೆ ಈಗಿನ ಪೀಳಿಗೆಯಲ್ಲಿ ಕಡಿಮೆ.

ಈಗೀಗ ಬೆಂಗಳೂರಲ್ಲಿ ಹಿಂದೂಸ್ತಾನಿ ಸಂಗೀತ ತುಂಬಾ ದೊಡ್ಡದಾಗಿ ಬೆಳೀತಾ ಇದೆ. ಈಗಿನ ಯುವ ಪೀಳಿಗೆಗೆ ಸಿನೆಮಾ ಸಂಗೀತ, ಸುಗಮ ಸಂಗೀತ, ರ್ಯಾಪ್ ಸಂಗೀತದ ಒಲವು ಹೆಚ್ಚಾಗಿದ್ದು, ಅದಕ್ಕೆ ಶಾಸ್ತ್ರೀಯ ಸಂಗೀತದ ತಳಹದಿ ಇದ್ದರೆ ಇನ್ನೂ ಹೆಚ್ಚಿನ ಅನುಕೂಲಕರ ಎಂಬುದು ಮನವರಿಕೆಯಾಗ್ತಿದೆ. ಈ ನಡುವೆ ಆಲಾಪಗಳು ಬಹುತೇಕ ಎಲ್ಲ ಪ್ರಕಾರದ ಹಾಡುಗಳಲ್ಲೂ ಇದ್ದು, ಹಾಡಿಗೆ ಹೆಚ್ಚಿನ ಮೆರುಗನ್ನು ನೀಡುತ್ತಿರುವುದನ್ನು, ಜನ ಗುರುತಿಸಿದ್ದಾರೆ. ಶಾಸ್ತ್ರೀಯವಾಗಿ ಕಲಿತ ವಾದ್ಯಗಾರರೂ ಹೆಚ್ಚು ಪ್ರಚಲಿತರಾಗ್ತಾ ಇದಾರೆ.

ಯುವ ಪೀಳಿಗೆ ಒಂದು ನಿರ್ದಿಷ್ಟ ಕಡೆ ಗಮನ ಕೊಡದೇ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸುತ್ತಿರುವುದರಿಂದ ಸಾಧನೆ ಕುಂಠಿತವಾಗಿದೆ. ಹಿಂದಿನ ಕಾಲದವರಿಗಿಂತ ಇಂದಿನ ಕಾಲದವರಿಗೆ ಅನುಕೂಲಗಳು ಹೆಚ್ಚು. ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಅಂತ ಹರಿದಾಡಿಕೊಂಡು ಯಾವ ಹಾದಿಯನ್ನೂ ಗಟ್ಟಿಯಾಗಿ ಹಿಡಿಯದ ಕಾರಣ ಸಾಧನೆ, ಸಂಶೋಧನೆ ಮುಗ್ಗರಿಸಿದೆ. ಪ್ರತಿಭೆ ಇದ್ದವರೂ ಕೂಡ ಸಾಧನೆ ಮಾಡ್ತಿಲ್ಲ.

ಬೇರೆ ಭಾಷೆಗಳಲ್ಲಿ ಇರುವಂಥ ಪ್ರತಿಭೆಗಳು ಕನ್ನಡ ಚಾನೆಲ್‍ಗಳಲ್ಲಿ ಕಾಣ್ತಿಲ್ಲ. ಉದಾಹರಣೆಗೆ, ನನ್ಹತ್ರ ಪಾಲಕರು ಬಂದು ಮಕ್ಕಳಿಗೆ ಸಂಗೀತ ಕಲಿಸಿಕೊಡುವಂತೆ ಕೇಳುತ್ತಾರೆ. ಒಂದೆರಡು ತಿಂಗಳಲ್ಲಿ ನಮ್ಮ ಹುಡುಗ ಟೀವಿಯಲ್ಲಿ ಹಾಡುವಂತಾಗಬೇಕು ಅಂತ ಅವರ ಆಸೆ. ಈ ಧೋರಣೆ ಎಷ್ಟರ ಮಟ್ಟಿಗೆ ಸರಿ? ಒಂದು ಚಾನಲ್ಲಿನವರು ಆಡಿಷನ್ ದಿನಾಂಕ ಪ್ರಕಟಮಾಡಿದ ನಂತರ ನನ್ನ ಹತ್ತಿರ ಕಲಿಯಲು ಬರುವವರ ಸಂಖ್ಯೆ ಹೆಚ್ಚಾಗ್ತದೆ. ಆಡಿಷನ್‍ಗಾಗಿಯೇ ಕಲಿಯುವವರ ಸಂಖ್ಯೆಯೇ ಹೆಚ್ಚಾಗಿದೆ. ಅಂಥವರಲ್ಲಿ 10 ಜನ ಆಯ್ಕೆಯಾದರೂ ಅವರೂ ಕೂಡ ಇಂಥವರೇ.

ಪರಭಾಷೆಯಲ್ಲಿ ಹಾಗಲ್ಲ, ನಿರಂತರವಾಗಿ ಗರಡಿಯಲ್ಲಿ ಪಳಗಿಸಿ ಆ ವ್ಯಕ್ತಿಯನ್ನು ಮಾಧ್ಯಮದಲ್ಲಿ ನಿಲ್ಲಿಸ್ತಾರೆ. ಹಾಗಾಗಿ ಕನ್ನಡಕ್ಕಿಂತ ಹೆಚ್ಚಿನ ಪಕ್ವತೆ ಅಲ್ಲಿ ಕಾಣಿಸುತ್ತದೆ. ಇಲ್ಲಿಯವರೆಗೂ ಕನ್ನಡದಲ್ಲಿ ಎಷ್ಟೋ ಶೋಗಳಾದವು. ಎಷ್ಟೋ ಜನ ವಿಜೇತರಾದರು. ಅವರಲ್ಲಾರಾದರೂ ಸಿನಿಮಾಗಳಲ್ಲಿ ನಿಂತಿದ್ದಾರಾ?. ಒಂದೆರಡು ಹಾಡುಗಳಿಗೆ ತೃಪ್ತಿ ಪಡಬೇಕಾಗಿದೆ. ಆ ಕಾರಣಕ್ಕಾಗಿಯೇ ಕನ್ನಡದಲ್ಲಿಯ ಹಾಡುಗಳನ್ನೂ ಹಾಡಲು ಪರಭಾಷೆಯವರೇ ಬಂದು ನಿಲ್ಲುವ ಸ್ಥಿತಿ ಬಂದಿದೆ. ಕನ್ನಡದವರು ಒಂದೆರಡು ಹಾಡು ಸಿನಿಮಾದಲ್ಲಿ ಹೇಳಿದರೆ ಅವರ ಸಾಧನೆ ಅಲ್ಲಿಗೇ ಮುಗಿದಂತೆ. ಇನ್ನೂ ಹೆಚ್ಚಿನದನ್ನು ಕಲಿಯುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ನನ್ನ ಹತ್ತಿರ ಕಲಿತ ಅನೇಕರು ಪ್ಲೇಬ್ಯಾಕ್ ಸಿಂಗರ್ ಆಗಿದ್ದಾರೆ. ಸಿನೆಮಾ ರಂಗದಲ್ಲಿ, ಇನ್ನಿತರ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದಾರೆ. ತೀರ್ಪುಗಾರರಿಗೆ ಚಾನಲ್ಲಿನ ಒತ್ತಡವಿರುತ್ತದೆ. ಇರುವವರಲ್ಲಿ ಚನ್ನಾಗಿ ಹಾಡಿದವರನ್ನು ಆರಿಸುತ್ತಾರೆ. ಅವರು ಒಂದೆರಡು ವರ್ಷ ಪ್ರಚಾರದಲ್ಲಿರುತ್ತಾರೆ. ನಂತರ ಹೊಸಬರ ಹಾದಿ. ಕನ್ನಡದ ನಿಜವಾದ ಸಾಧಕರನ್ನೂ ಬೇರೆ ಭಾಷೆಯ ಚಾನಲ್ಲುಗಳು ಆಮಂತ್ರಿಸಿವೆ. ಸಂಗೀತಕ್ಕೆ ಭಾಷೆ, ಜಾತಿ ಯಾವುದೂ ಇಲ್ಲ.

ಹೊಸಬರನ್ನು ಉತ್ತೇಜಿಸುವಲ್ಲಿ ಪ್ರೇಕ್ಷಕ ವರ್ಗ ಹೆಚ್ಚು ಒಲವು ತೋರಿಸಬೇಕಿದೆ. ಬಹಳಷ್ಟು ಕಾರ್ಯಕ್ರಮಗಳಲ್ಲಿ ಇವರನ್ನೇ ಕರೆಸಿ, ಈ ಹಾಡನ್ನೇ ಹೇಳಿ ಎಂಬುದು ಪ್ರೇಕ್ಷಕರ ಅಭಿಮತ. ಆದಾಗ್ಯೂ ಹೊಸಬರನ್ನು ವೇದಿಕೆಗೆ ಕರೆತರುವ ಮೊದಲು ಅವರು ಕಲಿತ ಗುರುಗಳ ಸಲಹೆ ಪಡೆದುಕೊಳ್ಳುವುದು ಒಳಿತು. ಕೋಲ್ಕತ್ತಾದಲ್ಲಿ ಒಂದು ಮಲ್ಟಿನ್ಯಾಷನಲ್ ಕಂಪನಿ ಸಂಗೀತದ ಆಸಕ್ತಿಯಿರುವ ಆಯ್ದ ವಿದ್ಯಾರ್ಥಿಗಳಿಗೆ ಗುರುಕುಲ ಪದ್ಧತಿಯನ್ನು ಮಾಡಿದೆ. ವಿದ್ಯಾರ್ಥಿಗಳಿಂದ 5-10 ವರ್ಷಗಳ ಬಾಂಡ್ ಬರೆಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಪಾಲಕರಿಗೆ ಭೇಟಿಯಾಗುವ ಅವಕಾಶವಿದೆ. ಎಲ್ಲವನ್ನು ಕಲಿತಾದ ಮೇಲೆ “ಮಂಚ್ ಪ್ರದರ್ಶನ” ಎಂಬ ವೇದಿಕೆಯನ್ನು ಎಲ್ಲ ಸಾಧಕರಿಗೆ ನೀಡುತ್ತಾರೆ. ಕೇಳಲು ಪ್ರಸಿದ್ಧ ಸಂಗೀತಗಾರರನ್ನು ಕರೆಸಿರುತ್ತಾರೆ. ಅವರ ಅಭಿಪ್ರಾಯದ ಮೇಲೆ ಸಾಧಕ ಪಳಗಿರುವ ಕುರಿತು ಪರೀಕ್ಷೆ ಮಾಡಲಾಗುತ್ತದೆ.

ಗದಗದಲ್ಲಿ ಪಂಚಾಕ್ಷರಿ ಗವಾಯಿಗಳ ಆಶ್ರಮವಿದೆ. ಆದರೆ ತಾಳ್ಮೆಯಿಂದ, ಆಸಕ್ತಿಯಿಂದ ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ. ಪಂ.ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಬೆಳೆದ ಸಾಧಕರು ಈಗಲೂ ಇದ್ದಾರೆ. ಆದರೆ ಈಗ ಆ ಥರದ ಒಂದು ವ್ಯವಸ್ಥೆ ಇಲ್ಲ. ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ಮೈಸೂರಲ್ಲಿದೆ. ಕಾಲೇಜಿನಲ್ಲಿ 40 ನಿಮಿಷ ಪಾಠ. ಇಲ್ಲಿಯೂ ಮಂಚ್ ಪ್ರದರ್ಶನವಿದೆ. ಅದೊಂದು ಕೋರ್ಸ್ ಥರ ಆಗಿದೆ. ಮೂರು ವರ್ಷದ ಕೋರ್ಸು, ಎರಡು ವರ್ಷದ ಕೋರ್ಸು ಹೀಗಾಗಿದೆ. ಸಂಗೀತದ ಕಲಿಕೆ ಹಾಗಲ್ಲ. ಒಬ್ಬ ವ್ಯಕ್ತಿ 15 ವರ್ಷಗಳ ಕಾಲ ಸತತ ಅಭ್ಯಾಸ ಮಾಡಿದಾಗ ಮಾತ್ರ ಸಂಗೀತ ಕ್ಷೇತ್ರದಲ್ಲಿ ಸಾಧಕರಾಗ್ತಾರೆ. ಹೊಸಬರಿಗೆ ಮಾತ್ರ ಕಲ್ಪಿಸುವ ವೇದಿಕೆ ಸಿದ್ಧವಾಗಬೇಕು. ಸರಕಾರವಾಗಲಿ, ಖಾಸಗಿಯಾಗಿಲಿ ಯಾರಾದರೂ ಮುಂದೆ ಬರಬೇಕು ಎಂಬುದು ನನ್ನ ಆಶಯ.

ಸಂಸ್ಕೃತಿ ಇಲಾಖೆ ಜಾನಪದ, ನೃತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಪ್ರಕಾರಗಳಿಗೂ ವರ್ಷಕ್ಕೆ ಇಂತಿಷ್ಟು ಅಂತ ಹಣವನ್ನು ನಿಗದಿ ಮಾಡಿದೆ. ಆಯ್ಕೆ ಸಮಿತಿಯಲ್ಲಿ ಆಯಾ ಕ್ಷೇತ್ರದ ಪರಿಣತರನ್ನು ಕೂರಿಸಿ, ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಬೇಕು. ಅವರನ್ನು ಉತ್ತೇಜಿಸುವ ಕೆಲಸವಾಗಬೇಕು. ಸರಕಾರ ಮಾಡ್ತಿದೆ. ಆದರೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ.

ನಿರೂಪಣೆ: ಹನುಮಂತರಾವ್ ಕೌಜಲಗಿ

*ಲೇಖಕರು ಹಿಂದೂಸ್ತಾನಿ ಗಾಯಕರು, ಸಂಗೀತ ನಿರ್ದೇಶಕರು, ವಿಜಯಪುರ ಜಿಲ್ಲೆಯ ಯಂಕಂಚಿ ಗ್ರಾಮದವರು; ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳಲ್ಲಿ ಗ್ವಾಲೀಯರ್ ಘರಾನ ಸಂಗೀತ ಕಲಿತಿದ್ದಾರೆ. ಬೆಂಗಳೂರಿನಲ್ಲಿ ಸಂಗೀತ ಮಹಾವಿದ್ಯಾಲಯ ಸ್ಥಾಪಿಸಿ ಯುವ ಪೀಳಿಗೆಗೆ ಶಾಸ್ತ್ರೀಯ ಸಂಗೀತ ಕಲಿಸುತ್ತಿದ್ದಾರೆ.

Leave a Reply

Your email address will not be published.