ಕಲ್ಯಾಣ ಯೋಜನೆಗಳ ಬಗ್ಗೆ ಅಸಹನೆ ಏಕೆ?

– ಕು.ಸ.ಮಧುಸೂದನ

ರಾಜಕೀಯ ಪಕ್ಷಗಳಿಗೆ ಕಲ್ಯಾಣರಾಜ್ಯದ ‘ಉಚಿತ’ಗಳನ್ನು ನೀಡುವಲ್ಲಿ ಇರುವ ಆಸಕ್ತಿ ಆ ಉಚಿತಗಳ ಅಗತ್ಯವೇ ಇರದಂತೆ ಮಾಡಲು ಹಾಕಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಇಲ್ಲವಾಗಿದೆ.

ನಾವು ಕಟ್ಟುವ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರಿಗೆ ಸೋಮಾರಿಗಳಾಗುವುದನ್ನು ಸರಕಾರವೇ ಕಲಿಸಿಕೊಡುತ್ತಿದೆ. ಹಸಿದವರಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು ಸಿದ್ಧಪಡಿಸಿದ ಮೀನೂಟ ನೀಡುವುದಲ್ಲ! ಪ್ರತಿ ವರ್ಷವೂ ಬರದ ಹೆಸರಿನಲ್ಲಿ, ಅತಿವೃಷ್ಟಿಯ ಹೆಸರಿನಲ್ಲಿ ರೈತರ ಸಾಲಮನ್ನಾ ಮಾಡುತ್ತಾ ಹೋದರೆ ಖಾಲಿಯಾಗುವ ಸರಕಾರದ ಬೊಕ್ಕಸ ತುಂಬಲು ನಾವೇಕೆ ತೆರಿಗೆ ನೀಡಬೇಕು? ಇತ್ತೀಚೆಗೆ ರಾಜ್ಯಸರಕಾರ ರೈತರ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾಮಾಡಲು ನಿರ್ದರಿಸಿದಾಗ ಸಾರ್ವಜನಿಕವಾಗಿ ಕೇಳಿಬಂದ ಮಾತಿದು

ಈ ದೇಶದಲ್ಲಿ ಇಂತಹ ಅಸಹನೆಯೇನು ಹೊಸದಲ್ಲ. 1969-70ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದಾಗ, ತದನಂತರ ಆ ಬ್ಯಾಂಕುಗಳಿಂದ ಬಡವರಿಗೆ ಸಾಲವಿತರಣೆಯ ಮೇಳಗಳು ನಡೆದಾಗ, ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ಮತ್ತು ರಸಗೊಬ್ಬರಗಳನ್ನು ನೀಡಿದಾಗ, ಸರಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಜಾರಿಗೊಳಿಸಿದಾಗ, ಭಾಗ್ಯಜ್ಯೋತಿ ಯೋಜನೆ ತಂದಾಗ, ರೈತರಿಗೆ ಉಚಿತವಾಗಿ ಆಧು ನಿಕ ಕೃಷಿ ಉಪಕರಣಗಳನ್ನು ವಿತರಿಸಿದಾಗ, ಅನ್ನಭಾಗ್ಯ ನೀಡಿದಾಗ ಸಮಾಜದ ಒಂದು ವರ್ಗದ ಅಸಹನೆ ಅಸಮಾಧಾನಗಳು ಬಹಿರಂಗವಾಗಿ ಸ್ಫೋಟಗೊಳ್ಳುವುದನ್ನು ಕಾಣುತ್ತಲೇ ಬಂದಿದ್ದೇವೆ

ಮುದ್ರಣ ಮಾಧ್ಯಮಕ್ಕಿಂತ ಹೆಚ್ಚಾಗಿ ನಮ್ಮ ವಿದ್ಯುನ್ಮಾನ ಸುದ್ದಿವಾಹಿನಿಗಳು ಒಂದು ಹೆಜ್ಜೆ ಮುಂದೆ ಹೋಗಿ ‘ಉಚಿತ ಎಷ್ಟು ಉಚಿತ’ ಎನ್ನುವ ಅರ್ಥ ಬರುವಂತಹ ತಲೆಬರಹಗಳ ಅಡಿಯಲ್ಲಿ ದಿನಗಟ್ಟಲೆ ಚರ್ಚೆ ಮಾಡಿದ್ದಿದೆ. ಅನ್ನಭಾಗ್ಯ ಯೋಜನೆ ಜಾರಿಯಾದಾಗ ಸುದ್ದಿವಾಹಿನಿಯ ಮುಖ್ಯಸ್ಥನೊಬ್ಬ ಪ್ರೈಂಟೈಂ ನ್ಯೂಸಿನಲ್ಲಿ ‘ಹೀಗೇ ಆದರೆ ಮುಂದೊಂದು ದಿನ ಈ ಸರಕಾರ ಕುಡುಕರಿಗೆ ಎಣ್ಣೆಭಾಗ್ಯ ಯೋಜನೆ ಘೋಷಿಸುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿ ತಾನು ಪ್ರತಿನಿಧಿಸುವ ವರ್ಗದ ವಿಕೃತಿಯನ್ನು ಸಾರ್ವಜನಿಕವಾಗಿ ಹೊರಹಾಕಿದ್ದನ್ನು ನೋಡಿದ್ದೇವೆ. ಅದರಲ್ಲೂ ನವಸಾಕ್ಷರಸ್ಥರ ಮಾಧ್ಯಮಗಳೆಂದೇ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನೂರಾರು ಸ್ಟೇಟಸ್ಸುಗಳು, ಟಿಪ್ಪಣಿಗಳು, ವ್ಯಂಗ್ಯಚಿತ್ರಗಳು ಈ ಕ್ಷಣಕ್ಕೂ ಹರಿದಾಡುತ್ತಿವೆ.

ಇದು ರೈತರ ಅಳಿವುಉಳಿವಿನ ಹಾಗೂ ಬಡವರ ಹಸಿವಿನ ಪ್ರಶ್ನೆ ಎನ್ನುವ ಕಿಂಚಿತ್ತು ಕಾಳಜಿ ಇರದ ಇಂತಹ ಚರ್ಚೆಗಳು, ಬರಹಗಳು ಅಸಹ್ಯವೆನಿಸುವಷ್ಟು ಕೀಳುದರ್ಜೆಯ ಮಟ್ಟಕ್ಕೆ ಇಳಿದುಬಿಟ್ಟಿವೆ. ಹಿಂದೆಲ್ಲ ಇಂತಹ ಟೀಕೆಗಳು ಬಿಡಿಬಿಡಿಯಾಗಿ ಇದ್ದು ಜನರ ಗಮನ ಸೆಳೆಯುತ್ತಿರಲಿಲ್ಲ. ಇದೀಗ ಈ ಅಸಹನೆಗೊಂದು ರಾಜಕೀಯ ಬಣ್ಣ ಅಂಟಿಕೊಂಡು ಉಳ್ಳವರ ಅಸೂಯೆ ಅಸಹನೆಗಳು ಉಲ್ಬಣಗೊಂಡಂತೆ ಕಾಣುತ್ತಿವೆ ಮತ್ತು ಸಂಘಟಿತ ರೂಪ ಪಡೆದುಕೊಂಡಿವೆ.

ಕಲ್ಯಾಣರಾಜ್ಯದ ಕಲ್ಪನೆಯೇ ಇರದ ವರ್ಗವೊಂದು ಮಾತ್ರ ಇಂತಹ ಮಾತುಗಳನ್ನು ಆಡಬಲ್ಲದು. ಅದರಲ್ಲೂ ಜಾಗತೀಕರಣದ ನಂತರ ಸೃಷ್ಟಿಯಾದ ನವಸಾಕ್ಷರ ವರ್ಗ ಇಂತಹ ಟೀಕೆಗಳಲ್ಲಿ ಮುಂದಿದೆ. ಕಾರಣ, ಈ ವರ್ಗಕ್ಕೆ ಸಮಾಜವಾದಿ ಚಿಂತನೆಯ ಪರಿಚಯ ಇಲ್ಲದಿರುವುದು ಮತ್ತು ಸುಲಭವಾಗಿ ದಕ್ಕಿದ ಉದ್ಯೋಗಾವಕಾಶ, ಹಣ! ಕೇವಲ ಇದು ಮಾತ್ರವಲ್ಲದೆ ಮೀಸಲಾತಿಯ ವಿಚಾರದಲ್ಲಿಯೂ ಈ ವರ್ಗ ಇಂತಹ ಪ್ರತಿಗಾಮಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದೆ. ಇದರ ಜೊತೆಗೆ ಮತಾಂಧತೆಯ ಕರಿನೆರಳು ಈ ವರ್ಗವನ್ನು ಆವರಿಸಿಕೊಂಡಿದೆ. ಇವತ್ತು ನಾವು ಒಪ್ಪಿಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಅದೂ ಈ ಘಟ್ಟದಲ್ಲಿ ಕಲ್ಯಾಣರಾಜ್ಯದ ಆಶಯಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಜನತೆಯ ಬದುಕಿನ ಸಮಸ್ತ ಮಗ್ಗುಲುಗಳಿಗೂ ಸರಕಾರದ ಸೇವಾವ್ಯವಸ್ಥೆಯನ್ನು ವಿಸ್ತರಿಸುವುದೇ ಕಲ್ಯಾಣರಾಜ್ಯ ಕಲ್ಪನೆಯ ಮುಖ್ಯ ಗುರಿ. ಕೇಂದ್ರೀಕೃತಗೊಳ್ಳುವ ಬಂಡವಾಳದ ನಡುವೆಯೇ ದುಡಿಯುವ ಜನರ ಮತ್ತು ಶ್ರಮಕ್ಕೆ ತಕ್ಕಂತಹ ಪ್ರತಿಫಲ ದೊರೆಯದಂತಹ ಅಸಮಾನ ಸ್ಥಿತಿಯಲ್ಲಿ ಆ ವರ್ಗದ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಸರಕಾರದ ಕರ್ತವ್ಯ.

ಆದರೆ ಈ ಕಲ್ಯಾಣರಾಜ್ಯ ಕಲ್ಪನೆಯ ಕಾರ್ಯಕ್ರಮಗಳು ಶಾಶ್ವತವಾಗಿರಬೇಕೆಂಬ ನಿಯಮವೇನಿಲ್ಲ. ದುಡಿಯಲು ಶಕ್ತವಾಗಿರುವ ಕೈಗಳಿಗೆ ಉದ್ಯೋಗಾವಕಾಶಗಳನ್ನು ನೀಡಿ ಸೂಕ್ತ ಪ್ರತಿಫಲ ನೀಡಲು ಸಮರ್ಥವಾದ ದಿನ ಈ ಕಲ್ಯಾಣರಾಜ್ಯದ ಉಚಿತಗಳು ಇಲ್ಲವಾಗುತ್ತವೆ. ಆದರೆ ಪಕ್ಷ ರಾಜಕಾರಣ ವ್ಯವಸ್ಥೆಯಲ್ಲಿ ಸಕ್ರಿಯವಾಗಿರುವ ರಾಜಕೀಯ ಶಕ್ತಿಗಳಿಗೆ ಕಲ್ಯಾಣರಾಜ್ಯದ ಉಚಿತಗಳನ್ನು ನೀಡುವಲ್ಲಿ ಇರುವ ಆಸಕ್ತಿ ಆ ಉಚಿತಗಳ ಅಗತ್ಯವೇ ಇರದಂತೆ ಮಾಡಲು ಹಾಕಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಇಲ್ಲವಾಗಿದೆ.

ಸಮಾನ ಅವಕಾಶಗಳ ಸಮಾಜವೊಂದರ ನಿರ್ಮಾಣದತ್ತ ಕೆಲಸ ಮಾಡದ ಪಕ್ಷ ರಾಜಕಾರಣವನ್ನು ವಿರೋಧಿಸಿ ಹೋರಾಡಿದರೆ ಮಾತ್ರ ಕಲ್ಯಾಣರಾಜ್ಯದ ಉಚಿತಗಳ ಅಗತ್ಯವೇ ಇರದಂತಹ ಒಂದು ವ್ಯವಸ್ಥೆಯನ್ನು ರೂಪಿಸಬಹುದಾಗಿದೆ. ಇದನ್ನು ನಮ್ಮ ಅಕ್ಷರಸ್ಥ ಮೇಲುಮಧ್ಯಮವರ್ಗ ಅರಿಯಬೇಕಿದೆ. ಅಲ್ಲಿಯವರೆಗೆ ಕಲ್ಯಾಣ ಯೋಜನೆಗಳ ಕುರಿತಾದ ಅಸಮಾಧಾನವನ್ನು ತೊರೆದು, ಸಹನಶೀಲತೆಯಿಂದ ಬದುಕುವುದು ಅನಿವಾರ್ಯ.

Leave a Reply

Your email address will not be published.