ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಎರಡೂ ದಾರಿ ತಪ್ಪಿದ, ಧ್ಯೇಯವನ್ನು ಮರೆತುಹೋದ ಮನುಷ್ಯರಂತೆ ಬಳಲುತ್ತಿವೆ. ಎರಡನ್ನೂ ಸಮಾಜಘಾತುಕ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ವಿದ್ರೂಪಗೊಳಿಸುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹಾಗೂ ಹೊಸ ರಾಷ್ಟ್ರೀಯತೆಯ ಗಾಳಿ ಎಬ್ಬಿಸಿ ರಾಷ್ಟ್ರವನ್ನೇ ವಿಘಟಿಸುವ ಈ ಶಕ್ತಿಗಳು ಪ್ರಜಾಪ್ರಭುತ್ವದ ಉಚ್ಚ ಆದರ್ಶಗಳನ್ನು ಪಾಲಿಸಲು ಸಾಧ್ಯವೇ? ಅದೇ ರೀತಿ ಪತ್ರಿಕೋದ್ಯಮದ ಉದಾತ್ತ ತತ್ವಗಳಿಗೆ ಈ ಶಕ್ತಿಗಳು ಬದ್ಧವಾಗಿರಲು ಸಾಧ್ಯವೇ?

-ಸುಧೀಂದ್ರ ಕುಲಕರ್ಣಿ

ಒಂದು ಕಡೆ ಅಧಿಕಾರವನ್ನು ಗಳಿಸುವುದಕ್ಕಾಗಿ ಹಾಗೂ ಗಳಿಸಿದ ಅಧಿಕಾರವನ್ನು ಏನಕೇನ ಪ್ರಕಾರೇಣ ಉಳಿಸಿಕೊಳ್ಳುವುದಕ್ಕಾಗಿ ಸಮಾಜಘಾತುಕ ಶಕ್ತಿಗಳು ಪ್ರಜಾಪ್ರಭುತ್ವದ ಸಂಸ್ಥಾತ್ಮಕ ಅಂಗಗಳ ಮೇಲೆ ಪ್ರಹಾರ ಮಾಡುತ್ತಿವೆ. ಮತ್ತೊಂದು ಕಡೆ ಪ್ರಜಾಪ್ರಭುತ್ವದ ಆಧಾರಸ್ತಂಭವಾದ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ವಿವಿಧ ರೀತಿಯಿಂದ ಮೊಟಕುಗೊಳಿಸುತ್ತಿವೆ. ಇದರಿಂದಾಗಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಎರಡೂ ಸಂಕಟಗ್ರಸ್ತವಾಗಿವೆ. ಪತ್ರಿಕೋದ್ಯಮದ ಸಂಕಟದಿಂದಾಗಿ ಪ್ರಜಾಪ್ರಭುತ್ವ ಕ್ಷೀಣವಾಗುತ್ತಿದೆ. ಪ್ರಜಾಪ್ರಭುತ್ವದ ಸಂಕಟದಿಂದಾಗಿ ಪತ್ರಿಕೋದ್ಯಮ ಭೀತಿಗೊಳಗಾಗಿದೆ. 

ನಾವು ಇಲ್ಲಿ ಗಮನಿಸಬೇಕಾದ ಸತ್ಯವೆಂದರೆ ಈ ಎರಡೂ ಸಂಕಟಗಳಿಗೆ ಪ್ರಮುಖ ಕಾರಣ ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಲಾಢ್ಯವಾಗಿ ಎದ್ದು ಬಂದಿರುವ ಕೋಮುವಾದಿ ಹಾಗೂ ಸರ್ವಾಧಿಕಾರಿ ಶಕ್ತಿಗಳು. ನರೇಂದ್ರ ಮೋದಿ 2014ರಲ್ಲಿ ಪ್ರಧಾನಮಂತ್ರಿಯಾಗುವುದದಕ್ಕೆ ಮುಂಚೆ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಅತ್ಯಂತ ಸುಸ್ಥಿತಿಯಲ್ಲಿದ್ದವು ಎಂತೇನಿಲ್ಲ. ಅದಕ್ಕೆ ಮೊದಲೂ ಜನತಂತ್ರದ ಮೇಲೆ ಧನತಂತ್ರದ ದುಷ್ಪ್ರಭಾವ ಇತ್ತೇ ಇತ್ತು.

ಪತ್ರಿಕೋದ್ಯಮ ಧನಾಢ್ಯರ ಉದ್ಯಮಗಳ ಕೈಗೊಂಬೆಯಾಗುವ ಕುರೀತಿ ಮೊದಲೇ ಶುರುವಾಗಿತ್ತು. ಆದರೆ ಇತ್ತೀಚಿನ ಏಳು ವರ್ಷಗಳಲ್ಲಿ ನಾವು ಕಾಣುತ್ತಿರುವ ಸಮಸ್ಯೆಯ ಹೊಸ ಸ್ವರೂಪ ತುಂಬಾ ಬೇರೆಯಾಗಿದೆ. ಅಷ್ಟೇ ಅಲ್ಲ ಆಪತ್ತುಜನಕವೂ ಆಗಿದೆ. ಪ್ರಜಾಪ್ರಭುತ್ವ ಯಾವ ಸಂಸ್ಥೆಗಳ ಸ್ವತಂತ್ರ ಹಾಗೂ ನಿಷ್ಪಕ್ಷ ಕಾರ್ಯಪದ್ಧತಿಯಿಂದಾಗಿ ಜೀವಂತವಾಗಿರುತ್ತದೆಯೋ ಆ ಸಂಸ್ಥೆಗಳನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಳ್ಳುವ ಪ್ರಯತ್ನ ಮೋದಿ ಸರಕಾರ ನಡೆಸಿದೆ. ಈ ಪ್ರಯತ್ನದಲ್ಲಿ ಅದಕ್ಕೆ ಯಶಸ್ಸು ಕೂಡ ಸಿಗುತ್ತಿದೆ. ಇದು ಆಪತ್ತಿನ ಸಂಕೇತ.

ಚುನಾವಣಾ ಆಯೋಗ ಸ್ವತಂತ್ರವಾಗಿರಬೇಕು, ನಿರ್ಭೀತವಾಗಿರಬೇಕು. ಈ ಆಯೋಗ ಪಕ್ಷಪಾತಿಯಾದರೆ ಚುನಾವಣಾ ಪದ್ಧತಿಯ ಮೇಲಿನ ಜನರ ನಂಬಿಕೆಯೇ ಹಾರಿಹೋಗುತ್ತದೆ. ಆದ್ದರಿಂದಲೇ ಭಾರತೀಯ ಸಂವಿಧಾನವು ಚುನಾವಣಾ ಆಯೋಗಕ್ಕೆ ಸಂವೈಧಾನಿಕ ಸಂಸ್ಥೆ ಎಂದು ಗುರುತಿಸಿ ರಕ್ಷಣೆ ನೀಡಿದೆ. ಆದರೂ ಕೂಡ ಈ ಆಯೋಗವನ್ನು ಮಣಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಸರಕಾರ ಹಾಗೂ ಆಳುವ ಪಕ್ಷವಾದ ಬಿಜೆಪಿ ಬಳಸುತ್ತಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಅನೀತಿ ಕಂಡುಬಂದಿತ್ತು. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಂತೂ ಅದು ಸುಸ್ಪಷ್ಟವಾಯಿತು. ಕೇವಲ ಪ್ರಧಾನಮಂತ್ರಿ ಮೋದಿ ಮತ್ತು ಗೃಹ ಮಂತ್ರಿ ಅಮಿತ ಶಹಾ ಅವರಿಗೆ ರಾಜ್ಯದ ಎಲ್ಲ ಕಡೆಗಳಲ್ಲಿ ಪ್ರಚಾರ ಮಾಡಲು ಅನುಕೂಲ ಮಾಡಿಕೊಡುವುದಕ್ಕಾಗಿ ಎಂಟು ಹಂತದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಆಯೋಗ ಘೋಷಿಸಿತು.

ಕೋವಿಡ್ ಮಹಾರೋಗದ ಎರಡನೇ ಅಲೆ ಪಸರಿಸಿದ ಬಳಿಕವೂ ಕೂಡ ಬಂಗಾಲದಲ್ಲಿ ಮತದಾನದ ಹಂತಗಳು ನಡೆದೇ ಇದ್ದವು (ಅದೇ ಕಾಲದಲ್ಲಿ ತಮಿಳುನಾಡಿನಲ್ಲಿ ಒಂದೇ ಹಂತದ ಮತದಾನ ನಿಶ್ಚಯಿಸಿದ್ದು ಗಮನಾರ್ಹ). ತಮಗೆ ಜೀ ಹುಜೂರ ಅನ್ನುವ ಅನರ್ಹ ವ್ಯಕ್ತಿಗಳನ್ನೇ ಮುಖ್ಯ ಚುನಾವಣಾ ಅಧಿಕಾರಿಯಾಗಿ, ಆಯೋಗದ ಇತರ ಸದಸ್ಯರನ್ನಾಗಿ ನೇಮಿಸುವುದು ಮೋದಿ ಸರಕಾರದ ಷಡ್ಯಂತ್ರವಾಗಿದೆ.

ಇದೇ ಕುತಂತ್ರವನ್ನು ಮೋದಿ ಸರಕಾರ ಸರ್ವೋಚ್ಚ ನ್ಯಾಯಾಲಯದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಲು ನಡೆಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರು ನೀಡಿದ ನಿರ್ಣಯಗಳನ್ನು ನೋಡಿದರೆ- ಅದೇ ರೀತಿ ಸರಕಾರಕ್ಕೆ ಬೇಡವಾದ ಪ್ರಮುಖ ವಿಷಯಗಳಲ್ಲಿ ವಿಚಾರಣೆ ಮಾಡದೇ ನಿಷ್ಕ್ರಿಯವಾಗಿ ಇದ್ದದ್ದನ್ನು ನೋಡಿದರೆÉ- ಇವರು ಸರಕಾರದ ಹಸ್ತಕರೇ ಎಂಬ ಅನುಮಾನವಾಗುತ್ತದೆ. ಪೂರ್ವ ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯಿ ಅವರಂತೂ ಈ ಭ್ರಷ್ಟ ಆಚರಣೆಯ ನಗ್ನ ನಟನಾಗಿ ಬಿಟ್ಟರು. ಅವರು ನಿವೃತ್ತಗೊಂಡ ಕೂಡಲೇ ಅವರಿಗೆ ಮೋದಿ ಸರಕಾರ ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಿತು.

ಬಿಜೆಪಿಯ ಹಿರಿಯ ಮುಖಂಡ ಅರುಣ ಜೇಟ್ಲಿಯವರು ವಿರೋಧ ಪಕ್ಷದಲ್ಲಿದ್ದಾಗ ಹೇಳಿದ ಒಂದು ಇಲ್ಲಿ ನೆನಪಾಗುತ್ತದೆ- “There are two kind of judges- those who know the law and those who know the Law Minister. Even though there is a retirement age, judges are not willing to retire. Pre-retirement judgments are influenced
by post-retirement jobs”. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದೇ ಭ್ರಷ್ಟ ನೀತಿಯನ್ನು ಹೆಚ್ಚು ನಾಚಿಕೆಯಿಲ್ಲದೇ ಮುಂದುವರಿಸಿದೆ. 

ಸರ್ವೋಚ್ಚ ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ ಸ್ವತಂತ್ರತೆಯನ್ನೇ ಕಸಿದು ಹಾಕುವುದರಲ್ಲಿ ಯಶಗಳಿಸಿರುವ ಮೋದಿ ಸರಕಾರಕ್ಕೆ Chief Vigilance Commission ಮತ್ತು Chief Information Commission ಇವುಗಳನ್ನು ತನ್ನ ಹತೋಟಿಯಲ್ಲಿ ಇಡಲು ಕಷ್ಟವೇ? ಇವೂ ಕೂಡ ಸಂವಿಧಾನದ ರಕ್ಷಣೆ ಪಡೆದ ಸಂಸ್ಥೆಗಳೇ. ಆದರೆ ಇವೆಲ್ಲ ಇಂದು ಹಲ್ಲಿಲ್ಲದ, ಕಚ್ಚಲಾಗದ ನಾಯಿಗಳಾಗಿವೆ. ಇನ್ನು Central Bureau of Investigation, Enforcement Directorate, Income Tax Department,National Investigation Agency ಮುಂತಾದವುಗಳಂತೂ ನೇರವಾಗಿ ಸರಕಾರದ ಶಾಸನ ವ್ಯವಸ್ಥೆಯಲ್ಲಿಯೇ ಕೆಲಸ ಮಾಡುವ ಸಂಸ್ಥೆಗಳು. ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ವಿರೋಧಿಗಳನ್ನು ಹೆದರಿಸುವುದಕ್ಕಾಗಿ, ಬೆದರಿಸುವುದಕ್ಕಾಗಿ, ಅವರನ್ನು ಜೇಲಿಗೆ ತಳ್ಳುವುದಕ್ಕಾಗಿ ಈ ಸಂಸ್ಥೆಗಳ ದುರುಪಯೋಗ ಖುಲ್ಲಂ ಖುಲ್ಲ ನಡೆದಿದೆ. ಇದುವರೆಗೆ ಬಿಜೆಪಿಯ ಯಾವುದೇ ಮುಖ್ಯಮಂತ್ರಿ, ಸಂಸತ್ ಸದಸ್ಯ, ವಿಧಾನಸಭಾ ಸದಸ್ಯರ ಮೇಲೆ ಭ್ರಷ್ಟಾಚಾರದ ಕಾರಣ ತನಿಖೆಯಾಗಿಲ್ಲ. ಆದರೆ, ವಿರೋಧ ಪಕ್ಷಗಳ ರಾಜಕಾರಣಿಗಳ ಮೇಲೆ ಕ್ರಮ ಕೈಗೊಳ್ಳಲು ಈ ಅಸ್ತ್ರಗಳು ಸದಾ ಸಿದ್ಧ.

ಇಷ್ಟೇ ಅಲ್ಲದೇ, ಕಳೆದ ಏಳು ವರ್ಷಗಳಲ್ಲಿ ನಡೆದಷ್ಟು ರಾಜಕೀಯ ಭ್ರಷ್ಟಾಚಾರದ ಘಟನೆಗಳು ಹಿಂದೆಂದೂ ನಡೆದಿರಲಿಲ್ಲ. ‘ಆಪರೇಶನ್ ಕಮಲ’ ಇದು ವಿರೋಧ ಪಕ್ಷಗಳನ್ನು ಉರುಳಿಸಿ ತನ್ನ ಸರಕಾರ ಪ್ರಸ್ತಾಪಿಸಿರುವ ಬಿಜೆಪಿಯ ಪಕ್ಕಾ ಫಾರ್ಮುಲಾ ಆಗಿ ಬಿಟ್ಟಿದೆ. ಇದರ ಜತೆಯಲ್ಲಿ Electoral Bonds ನಂಥ ಕಪಟದ ಕ್ರಮಗಳನ್ನೂ ಕೂಡಿಸಿ ನೋಡಿದರೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಎಷ್ಟೆಲ್ಲ ಕುತ್ತುಗಳು ಹುಟ್ಟಿಕೊಂಡಿವೆ ಎಂದು ಗೊತ್ತಾಗುತ್ತದೆ.

ಪತ್ರಿಕಾರಂಗ ಏನು ಮಾಡುತ್ತಿದೆ?

ಪ್ರಜಾಪ್ರಭುತ್ವ ಈ ರೀತಿ ಸಂಕಟಗಳನ್ನೆದುರಿಸುತ್ತಿರುವಾಗ ಪ್ರಶ್ನೆ ಮೂಡುವುದೆಂದರೆ – ನಮ್ಮ ದೇಶದ ಪತ್ರಿಕಾರಂಗ ಎಲ್ಲಿದೆ? ನಮ್ಮ ಪತ್ರಿಕೋದ್ಯಮ ಸತ್ತಿಲ್ಲ. ಮರಣಶಯ್ಯೆಯಲ್ಲಿಯೂ ಇಲ್ಲ. ಆದರೆ ಹೆಚ್ಚು ಹೆಚ್ಚು ರೋಗಗ್ರಸ್ಥವಾಗುತ್ತಿದೆ. ಮೀಡಿಯಾ ಕುರುಡಾಗಿಲ್ಲ; ಏನು ನಡೆದಿದೆಯೋ ಅದನ್ನು ನೋಡುತ್ತಿದೆ, ಹೆಚ್ಚು ಹೆಚ್ಚು ಮೂಕನಾಗುತ್ತ ನಡೆದಿದೆ.

ಸಮಾಜದಲ್ಲಿ, ಶಾಸನ ವ್ಯವಸ್ಥೆಯಲ್ಲಿ ಹಾಗೂ ಆರ್ಥಿಕ-ರಾಜಕೀಯ ಜಗತ್ತಿನಲ್ಲಿ ನಡೆದಿರುವ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುವುದಂತೂ ಪತ್ರಿಕೋದ್ಯಮದ ಆದ್ಯ ಕರ್ತವ್ಯ. ಆದರೆ ಇದೊಂದೇ ಅದರ ಕರ್ತವ್ಯವಲ್ಲ. ಈ ಘಟನಾವಳಿಗಳ ಸಮೀಕ್ಷೆ, ಅವುಗಳ ಕಾರಣ ಮೀಮಾಂಸೆ, ಅಭ್ಯಾಸಪೂರ್ಣ ವಿಶ್ಲೇಷಣೆ ಹಾಗೂ ವಿಭಿನ್ನ ವಿಚಾರಸರಣಿಗಳ ಪ್ರಿಜಂ ಮೂಲಕ ಅವುಗಳನ್ನು ಅರ್ಥೈಸಿ ಪ್ರಕಟೀಕರಣ – ಇವೂ ಕೂಡ ಪತ್ರಿಕೋದ್ಯಮದ ಕೆಲಸಗಳೇ. ಇದನ್ನು ಮಾಡುತ್ತಿರುವಾಗಲೇ ಜನಸಾಮಾನ್ಯರ ಸಮಸ್ಯೆಗಳನ್ನು, ಆಸೆ-ಅಪೇಕ್ಷೆಗಳನ್ನು ಬೇಗುದಿ-ಬೇಡಿಕೆಗಳನ್ನು, ಅವರ ಭಾವನೆಗಳನ್ನು ಶಾಸನ ಮತ್ತು ರಾಜಕೀಯ ವ್ಯವಸ್ಥೆಯ ಎದುರಿಗೆ ಪ್ರದರ್ಶಿಸುವ ಜವಾಬ್ದಾರಿಯೂ ಪತ್ರಿಕೋದ್ಯಮದ್ದೇ.

ವೈಚಾರಿಕ ಮತಭೇದಗಳ ಅಭಿವ್ಯಕ್ತಿ ಮೀಡಿಯಾದ ಮುಖಾಂತರ ಆಗಲೇಬೇಕು. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಹಾಗೂ ಪ್ರಜಾಪ್ರಭುತ್ವದಲ್ಲಿ ವಿಚಾರ-ಅಭಿವ್ಯಕ್ತಿ ಸ್ವಾತಂತ್ರ್ಯ ಕೇಂದ್ರಬಿಂದುವಾಗಿರುವುದರಿಂದ, ವೈಚಾರಿಕ ವೈವಿಧ್ಯ ಮೀಡಿಯಾದಲ್ಲಿ ಪ್ರಕಟವಾಗಲೇಬೇಕು. ಆದರೆ ಸಮಾಜಕ್ಕೆ, ದೇಶಕ್ಕೆ, ಮಾನವತೆಗೆ ಮಾರಕವಾದ ವಿಚಾರಗಳ ವಿರುದ್ಧ, ಸುಳ್ಳಿನ ಮೇಲೆ ನಿಂತು ಬೆಳೆದ ಅಪಾಯಕಾರಿ ಶಕ್ತಿಗಳ ವಿರುದ್ಧ ದನಿಯೆತ್ತುವ ಕಾರ್ಯವನ್ನು ಮೀಡಿಯಾ ನಿರ್ಭೀತವಾಗಿ ಮಾಡಲೇ ಬೇಕು. ಈ ಜವಾಬ್ದಾರಿಯನ್ನು ಮೀಡಿಯಾ ನಿಭಾಯಿಸದೇ ಹೋದರೆ ನಮ್ಮ ದೇಶದ ಪ್ರಜಾಪ್ರಭುತ್ವವೇ ಗಂಡಾಂತರದಲ್ಲಿ ಸಿಕ್ಕಿಕೊಳ್ಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಪತ್ರಿಕೋದ್ಯಮದ ಈ ವ್ಯಾಪಕ ಜವಾಬ್ದಾರಿಗಳ ದೃಷ್ಟಿಕೋನದಿಂದ ನೋಡಲಾಗಿ ಇಂದಿನ ಸನ್ನಿವೇಶ ನಮ್ಮನ್ನು ಅತೀವ ಚಿಂತಾಗ್ರಸ್ತವಾಗಿ ಮಾಡುತ್ತದೆ. ನಾವು ಈ ಮೊದಲು ನಮೂದಿಸಿದ ಸರಕಾರದ ಕುತಂತ್ರ, ಷಡ್ಯಂತ್ರ, ಭ್ರಷ್ಟ ಆಚರಣೆಗಳಿಂದಾಗಿ ಭಾರತೀಯ ಪ್ರಜಾಪ್ರಭುತ್ವದ ಮುಂದೆ ಬೆಳೆದು ನಿಂತಿರುವ ವಿಪತ್ತುಗಳ ವಿರುದ್ಧ ನಮ್ಮ ಮೀಡಿಯಾ ದನಿ ಎತ್ತುತ್ತಿದೆಯೇ? ಜನಜಾಗೃತಿ ಮಾಡುತ್ತಿದೆಯೇ? ಸರಕಾರದ, ಆಡಳಿತ ಪಕ್ಷದ ತಪ್ಪುಗಳಿಗೆ ಕನ್ನಡಿಯಾಗಿ ನಿಂತಿದೆಯೇ? ಈ ಪ್ರಶ್ನೆಗಳ ಉತ್ತರ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ, ಈ ಹಿಂದೆ ಕೆಲಸ ಮಾಡಿದ ವ್ಯಕ್ತಿಗಳಿಗಷ್ಟೇ ಅಲ್ಲ, ಸಮಾಜದಲ್ಲಿಯ ಎಲ್ಲ ಪ್ರಬುದ್ಧ ಜನರಿಗೂ ಸ್ಪಷ್ಟವಾಗಿದೆ.

ಪ್ರಿಂಟ್ ಮೀಡಿಯಾದಲ್ಲಿಯ ಕೆಲವು ಅಭಿಮಾನಾಸ್ಪದ ಅಪವಾದಗಳನ್ನು ಬಿಟ್ಟರೆ ಬಹುತೇಕ ವರ್ತಮಾನ ಪತ್ರಿಕೆಗಳು, ಸಾಪ್ತಾಹಿಕ-ಪಾಕ್ಷಿಕ-ಮಾಸಿಕಗಳು ಸರಕಾರವನ್ನು, ಆಡಳಿತ ಪಕ್ಷವನ್ನು ಟೀಕಿಸಲು ಹಿಂಜರಿಯುತ್ತವೆ. ಪ್ರಧಾನಮಂತ್ರಿ ಮೋದಿಯವರನ್ನು ಟೀಕಿಸುವುದಂತೂ ಇವರಿಗೆ ಅಸಾಧ್ಯ ಮಾತು.

ಇದಕ್ಕೆ ಒಂದೇ ಒಂದು ಉದಾಹರಣೆ ಸಾಕು. ಇತ್ತೀಚೆಗೆ ಕೊರೋನಾ ಮಹಾರೋಗದ ಎರಡನೆ ಅಲೆ ದೇಶಾದ್ಯಂತ ಹರಡಿ ಭಯಾನಕ ಪ್ರಮಾಣದಲ್ಲಿ ಸಾವು-ನೋವುಗಳಿಗೆ ಕಾರಣವಾದ ಸಂದರ್ಭದಲ್ಲಿ ದೇಶದ ಪ್ರಮುಖ ಇಂಗ್ಲಿಷ್ ಸಾಪ್ತಾಹಿಕವಾದ ‘ಇಂಡಿಯಾ ಟುಡೇ’ ವಿಶೇಷ ಕವರ್‍ಸ್ಟೋರಿಯನ್ನು ಪ್ರಕಾಶಿಸಿತು. ಅದರ ಶೀರ್ಷಿಕೆ ‘THE FAILED STATE’. ಮುಖಪುಟದಲ್ಲಿ ಮೃತದೇಹಗಳ ಸಾಲಿನ ಹೃದಯವಿದ್ರಾವಕ ಚಿತ್ರ. ಆದರೆ ಹತ್ತು ಪುಟಗಳ ಸುದೀರ್ಘ ವರದಿಯಲ್ಲಿ ಮೋದಿಯವರ ಒಂದು ಚಿತ್ರವೂ ಇಲ್ಲ! ಪ್ರಧಾನಮಂತ್ರಿಯವರೇ ಭಾರತದ ಶಾಸನ ವ್ಯವಸ್ಥೇಯ ಕರ್ಣಧಾರರಾಗಿದ್ದರೂ, ಅವರು ಮಾಡಿದ ತಪ್ಪುಗಳ ಬಗ್ಗೆ, ಅವರಿಂದಾದ ನಿಷ್ಕಾಳಜಿಯ ಬಗ್ಗೆ, ಅವರೇ ಜವಾಬ್ದಾರರಾಗಿರುವ mismanagement ಬಗ್ಗೆ ‘ಇಂಡಿಯಾ ಟುಡೆ’ಯಲ್ಲಿ ಯಾವುದೇ ಕ್ಷ-ಕಿರಣವಿಲ್ಲ. ಅಂದರೆ ಇಂಥ ಅಭೂತಪೂರ್ವ ಭೀಷಣ ವಿಪತ್ತಿನ ಸಮಯದಲ್ಲಿಯೂ ಕೂಡ ಪ್ರಮುಖ ಪತ್ರಿಕೆಗಳು ಮಾಡಿದ್ದು ಮೋದಿಯವರ ಬಚಾವಗಾಗಿ ಪ್ರಯತ್ನ.

ಪ್ರಿಂಟ್ ಮೀಡಿಯಾದಲ್ಲಿ (ಇಂಗ್ಲಿಷ್ ಹಾಗೂ ಇತರ ಭಾಷೆಗಳಲ್ಲಿ) ಇನ್ನೂ ಒಂದಿಷ್ಟು ಜೀವಂತಿಕೆ ಇದೆ. ಪತ್ರಿಕೋದ್ಯಮದ ತತ್ವಗಳ ಬಗ್ಗೆ ಅಲ್ಪಸ್ವಲ್ಪ ಬದ್ಧತೆ ಉಳಿದಿದೆ. ಆದರೆ ಸಾಮಾನ್ಯ ಜನರನ್ನು ಹೆಚ್ಚು ಪ್ರಭಾವಿತಗೊಳಿಸುವ ಟೆಲಿವಿಜನ್ ಮೀಡಿಯಾ ಗತ ಏಳು ವರ್ಷಗಳಲ್ಲಿ ಬಹುತೇಕ ಮೋದಿಮಯವಾಗಿ ಬಿಟ್ಟಿವೆ. ಕೆಲವು ಅಪವಾದಗಳನ್ನು ಬಿಟ್ಟರೆ ಇತರೆಲ್ಲ ಚಾನೆಲ್‍ಗಳು ಸರಕಾರದ ಯಾವುದೇ ತಪ್ಪು ಧೋರಣೆಗಳನ್ನು, ನಿರ್ಣಯಗಳನ್ನು ಎತ್ತಿ ತೋರಿಸುವ ಸಾಹಸ ಮಾಡಿಲ್ಲ. ಬಿಜೆಪಿಗೆ ಬೇಕಾದ ಕೋಮುವಾದದ ಅಜೆಂಡಾವನ್ನು ಕಾರ್ಯಾಚರಣೆಯಲ್ಲಿ ತರುವುದರಲ್ಲಂತೂ ಟಿವಿ ಚಾನೆಲುಗಳು ವ್ಯಾವಸಾಯಿಕ ನೈತಿಕತೆಯ (professional ethics) ಎಲ್ಲ ಬಂಧನಗಳನ್ನೂ ಕಳಚಿಹಾಕಿ ಪ್ರೊಪಗಾಂಡಾ ಮಶೀನುಗಳಾಗಿಬಿಟ್ಟಿವೆ.

ಇದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ಹೋದ ವರ್ಷ ಕೊರೋನಾ ಮಹಾರೋಗದ ಶುರುವಾತಿನ ದಿನಗಳಲ್ಲಿ ಸುಮಾರಾಗಿ ಎಲ್ಲ ಭಾಷೆಗಳ ಎಲ್ಲ ಟಿವಿ ಚ್ಯಾನೆಲುಗಳು ತಬಲೀಗೀ ಜಮಾತೇ ದೇಶಾದ್ಯಂತ ಈ ರೋಗಾಣುವನ್ನು ಪಸರಿಸಿದೆ ಎಂಬಂಥ ದುಷ್ಟ ಪ್ರಚಾರ ನಡೆಸಿದವು. ಇದರಿಂದಾಗಿ ಮುಸ್ಲಿಂ ಸಮಾಜದ ಬಗ್ಗೆ ಇತರಲ್ಲಿ ಸಂದೇಹ-ದ್ವೇಷಗಳು ಇನ್ನೂ ಗಾಢವಾದುವು. ಅನಂತರ ಬಂಧಿತರಾದ ತಬಲೀಗೀ ಸದಸ್ಯರು ನಿರ್ದೋಷರು ಎಂದು ನ್ಯಾಯಾಲಯಗಳು ಸಾರಿದರೂ ಅಲ್ಲಿಯವರೆಗೆ ಟಿವಿ ಮಾಧ್ಯಮಗಳು ಪಸರಿಸಿದ ಸುಳ್ಳು ಭಾರಿ ದುಷ್ಪರಿಣಾಮವನ್ನು ಮಾಡಿಬಿಟ್ಟಿತ್ತು.

ಇನ್ನು ಕೋವಿಡ್ ಎರಡನೇ ಅಲೆ ಶುರುವಾದಾಗ ಮೋದಿ-ಅಮಿತ್ ಶಾಹ ಅವರೇ ಮಹಾರೋಗ ನಿಯಂತ್ರಣಕ್ಕಾಗಿ ಸರಕಾರವೇ ನಿರ್ಧರಿಸಿದ ಎಲ್ಲ ನಿರ್ಬಂಧನೆಗಳನ್ನು ಉಲ್ಲಂಘಿಸಿ ಬಂಗಾಲದಲ್ಲಿ ಚುನಾವಣೆ ಪ್ರಚಾರ ಮಾಡಿದಾಗ ಆಗಲಿ, ಲಕ್ಷಾವಧಿ ಭಕ್ತರು ಹರಿದ್ವಾರದ ಕುಂಭದಲ್ಲಿ ಪಾಲುಗೊಂಡಾಗ ಆಗಲೀ, ಈ ಸರಕಾರಪರ ಟಿವಿ ಚ್ಯಾನೆಲುಗಳು ಯಾವ ಪ್ರಶ್ನೆಗಳನ್ನೂ ಕೇಳಲಿಲ್ಲ.

ಮೇನ್‍ಸ್ಟ್ರೀಮ್ ಅಥವಾ ಮುಖ್ಯ ಪ್ರವಾಹದ ಪಾರಂಪಾರಿಕ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯ, ನಿರ್ಭೀತಿ ಮತ್ತು ನೈತಿಕ ಬದ್ಧತೆಯನ್ನು ಏಕೆ ಸಾಕಷ್ಟು ಪ್ರಮಾಣದಲ್ಲಿ ಕಳೆದುಕೊಂಡಿವೆ? ಇದಕ್ಕೆ ಎರಡು ಕಾರಣಗಳು ಸ್ಪಷ್ಟವಾಗಿವೆ: ಒಂದು- ಪತ್ರಿಕೋದ್ಯಮದಲ್ಲಿ ದೊಡ್ಡ ಉದ್ಯಮಿಗಳ (big business) ನೇರ ಪ್ರವೇಶ ಮತ್ತು ಅಪ್ರತ್ಯಕ್ಷ ಪ್ರಭಾವ. ಈ ದೊಡ್ಡ ಉದ್ಯಮಿಗಳು ಪತ್ರಿಕೋದ್ಯಮದ ಆದರ್ಶಗಳಿಗೆ, ಧ್ಯೇಯಗಳಿಗೆ ಬದ್ಧರಾಗಿ ಪತ್ರಿಕೋದ್ಯಮದಲ್ಲಿ ಕಾಲಿಟ್ಟಿಲ್ಲ. ಇದು ಅವರಿಗೆ ಆರ್ಥಿಕ ಲಾಭದ ಮತ್ತೊಂದು ಹಾದಿ. ಅಥವಾ ಸರಕಾರ ಮತ್ತು ರಾಜಕೀಯ ವರ್ತುಲಗಳಲ್ಲಿ ತಮ್ಮ ಪ್ರಭಾವ ಬೆಳೆಸಿಕೊಳ್ಳುವುದಕ್ಕಾಗಿ, ತಮ್ಮ ಸ್ವರಕ್ಷಣೆಗಾಗಿ, ಇಲ್ಲವೇ ತಮ್ಮ ಇತರೆ ಉದ್ಯೋಗಗಳ ಅಭಿವೃದ್ಧಿಗಾಗಿ ಒಂದು ಉಪಯುಕ್ತ ಅಸ್ತ್ರ ಮಾತ್ರ. ಇದೇ ಕಾರಣಕ್ಕಾಗಿ ಅನೇಕ ರಾಜಕಾರಣಿಗಳೂ ಪತ್ರಿಕೋದ್ಯಮದಲ್ಲಿ ಬಂಡವಾಳ ಹಾಕಿದ್ದಾರೆ. ಇತ್ತೀಚಿನ ದಶಕಗಳಲ್ಲಿ ರಾಜಕಾರಣಿಗಳೂ ಉದ್ಯಮಿಗಳು ಹಾಗೂ ಉದ್ಯಮಿಗಳೂ ರಾಜಕಾರಣಿಗಳು ಎಂಬ ಹೊಸ ದೃಶ್ಯ ಕಾಣಿಸಿಕೊಂಡಿರುವುದು ಈ ಕಾರಣಕ್ಕಾಗಿಯೇ. ಇದು ಪ್ರಜಾಪ್ರಭುತ್ವಕ್ಕೂ ಹಾಗೂ ಪತ್ರಿಕೋದ್ಯಮಕ್ಕೂ ಒಂದು ದೊಡ್ಡ ಕುತ್ತು.

ಆದರೆ ಇದಕ್ಕಿಂತ ಇನ್ನೊಂದು ಹೆಚ್ಚಿನ ಕುತ್ತು ಕಳೆದ ಏಳು ವರ್ಷಗಳಲ್ಲಿ ನಿರ್ಮಾಣವಾಗಿದೆ. ಅದೆಂದರೆ ಮೋದಿ ಸರಕಾರ ಪತ್ರಿಕೋದ್ಯಮದಲ್ಲಿ ಪಸರಿಸಿದ ಭೀತಿಯ ಅಲೆ. ಇಂದಿರಾಗಾಂಧಿಯವರು ತುರ್ತುಕಾಲದ ಪರಿಸ್ಥಿತಿಯಲ್ಲಿ (1975-77) ಸೆನ್ಸಾರ್‍ಶಿಪ್ ಘೋಷಿಸಿ ಭೀತಿ ನಿರ್ಮಿಸಿದ ರೀತಿ ಇದಲ್ಲ. ಆದರೆ ಪತ್ರಿಕೋದ್ಯಮದ ಮಾಲೀಕರನ್ನು, ದೊಡ್ಡ ಜಾಹೀರಾತುದಾರರನ್ನು ಬೆದರಿಸಿ ಪತ್ರಿಕೋದ್ಯಮದಲ್ಲಿ ಸರಕಾರ-ವಿರೋಧಿ, ಬಿಜೆಪಿ-ವಿರೋಧಿ ದನಿಗಳು ಬರದಂತೆ ಮಾಡುವ ಹೊಸ ವಿಧಾನವಿದು. ನ್ಯಾಯಾಧೀಶರನ್ನು, ಚುನಾವಣಾ ಆಯೋಗದ ಅಧಿಕಾರಿಗಳನ್ನು, ವಿರೋಧ ಪಕ್ಷದ ಮುಖಂಡರನ್ನು ಮಣಿಸುವುದರಲ್ಲಿ ಯಶಸ್ಸು ಗಳಿಸಿದ ಮೋದಿ ಸರಕಾರಕ್ಕೆ ಪತ್ರಿಕೋದ್ಯಮದ ಮಾಲೀಕರನ್ನು ಹೆದರಿಸುವುದು ಏನು ಕಷ್ಟ?

ನೇರವಾಗಿ ಪತ್ರಕರ್ತರನ್ನು, ಸಂಪಾದಕರನ್ನು ಲೇಖಕರನ್ನು ಹೆದರಿಸಲು ಕಷ್ಟ. ಆದರೆ ಮಾಲೀಕರು ಹಾಗೂ ಅವರ ವ್ಯವಸ್ಥಾಪಕರು ಸರಕಾರ ಹೇಳಿದ್ದನ್ನು ಕೇಳುವ ಪ್ರಾಣಿಗಳಾದರೆ ಸಂಪಾದಕರು, ಹಿರಿಯ ಪತ್ರಕರ್ತರನ್ನು ನಿಯಂತ್ರಣದಲ್ಲಿಡಲು ಸುಲಭ ಸಾಧ್ಯವಾಗುತ್ತದೆ. ಇದಲ್ಲದೇ ಪಾರಂಪಾರಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೌಕರಿಗಳ ಕಡಿತ ಪ್ರಾರಂಭವಾಗಿದ್ದರಿಂದ ಈಗಿರುವ ಪತ್ರಕಾರರಲ್ಲಿಯೂ ಭೀತಿ ನಿರ್ಮಾಣವಾಗಿದೆ. ಯಾವ ಮಾಧ್ಯಮಗಳಲ್ಲಿ ಯಾರು ಸರಕಾರ ವಿರೋಧಿ ಬರೆಯುವವರು-ಮಾತನಾಡುವವರು ಇದ್ದಾರೆಂಬ ಸೂಕ್ಷ್ಮ ವರದಿ ಬಿಜೆಪಿ ಮತ್ತು ಸರಕಾರದ ವಲಯಗಳಲ್ಲಿ ಸತತವಾಗಿ ತಯಾರಾಗುತ್ತಿರುತ್ತದೆ. ಆದ್ದರಿಂದ ಪತ್ರಿಕೋದ್ಯಮವನ್ನು ಹತೋಟಿಯಲ್ಲಿಡಲು ಹೆಚ್ಚು ಸುಲಭವಾಗಿದೆ.

ಇನ್ನು ಡಿಜಿಟಲ್ ಮೀಡಿಯಾ, ಸೋಶಿಯಲ್ ಮೀಡಿಯಾದಲ್ಲಿ ಏನು ನಡೆದಿದೆ ಎಂದು ನೋಡೋಣ. ಮಾಹಿತಿ ಕ್ರಾಂತಿಯ ಗರ್ಭದಿಂದ ಹುಟ್ಟಿದ ಪತ್ರಿಕೋದ್ಯಮದ ಹಾಗೂ ಅಭಿವ್ಯಕ್ತಿಯ ಹೊಸ ಜೀವಗಳಿವು. ಮಾನವನ ಇತಿಹಾಸದಲ್ಲಿ ಮೊದಲ ಬಾರಿ ಕೋಟ್ಯಾವಧಿ ಸಾಮಾನ್ಯ ಜನರಿಗೆ ತಮ್ಮ ವಿಚಾರಗಳನ್ನು, ಅನಿಸಿಕೆಗಳನ್ನು ತಮ್ಮ ಮಾತಿನಲ್ಲಿಯೇ ಹೇಳಲು ಸಾಧ್ಯ ಮಾಡಿಕೊಟ್ಟ ಟೆಕ್ನಾಲಜಿಯ ಕಾಣಿಕೆಗಳಿವು. ಇವು ಯಾವುದೇ ಸರಕಾರಕ್ಕೆ, ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆಗೆ ಘಾತಕವಾಗಬಲ್ಲವು.

ಇವುಗಳನ್ನು ಸಮಾಜಘಾತಕ, ರಾಷ್ಟ್ರಘಾತಕ ಶಕ್ತಿಗಳೂ ಉಪಯೋಗಿಸಲು ಸುಲಭ ಸಾಧ್ಯ. ಆದ್ದರಿಂದ ಡಿಜಿಟಲ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾಗಳನ್ನು ನಿಯಂತ್ರಿಸಲು ಸರಕಾರ ಎಲ್ಲ ರೀತಿಯಿಂದ ಹವಣಿಸುತ್ತಿದೆ. ಹೀಗೆ ಮಾಡುವಾಗ ಹೆಚ್ಚಾಗಿ ಸರಕಾರ-ವಿರೋಧಿ ದನಿಗಳನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದಿವೆ. ಹೊಸ ಕಾನೂನನ್ನು ತರಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಜೈಲಿಗೆ ಕಳಿಸಲಾದ ಪತ್ರಕರ್ತರಲ್ಲಿ, ನಾಗರಿಕರಲ್ಲಿ ಹೆಚ್ಚಿನವರು ಈ ಹೊಸ ಮಾಧ್ಯಮಗಳಲ್ಲಿ ದನಿ ಎತ್ತಿದವರು. ಇದಲ್ಲದೇ ಮೋದಿ ಪ್ರಚಾರಕ್ಕಾಗಿ, ಮೋದಿ ಬಚಾವಕ್ಕಾಗಿ ಬಹಳಷ್ಟು ಹಣ ಸುರಿಸಿ ಒಂದು ದೊಡ್ಡ ಡಿಜಿಟಲ್ ಸೈನ್ಯವನ್ನೇ ತಯಾರು ಮಾಡಲಾಗಿದೆ. ಸರಕಾರ-ವಿರೋಧಿ, ಬಿಜೆಪಿ-ವಿರೋಧಿ ಹಾಗೂ ಮೋದಿ-ವಿರೋಧಿ ಮಾತನಾಡುವ ಜನರು ದೇಶದ್ರೋಹಿಗಳು ಎಂಬ ಕೂಗು ಎಬ್ಬಿಸಿ ಅವರಲ್ಲಿ ಭೀತಿ ಹುಟ್ಟಿಸುವ ಕೆಲಸ ಸುನಿಯೋಜಿತವಾಗಿ ಸಾಗಿದೆ.

ನಾವೇನು ಮಾಡಬೇಕು?

ಹೀಗೆಲ್ಲ ನಡೆದಿರುವಾಗ ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಪತ್ರಿಕೋದ್ಯಮದ ರಕ್ಷಣೆಗಾಗಿ ನಾವು ಏನು ಮಾಡಬೇಕು? ಸಂಕ್ಷಿಪ್ತವಾಗಿ ಇಲ್ಲಿ ಹತ್ತು ವಿಚಾರಗಳನ್ನು ಹೇಳಬಹುದು.

  1. ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮದ ಒಂದು ಸುದೀರ್ಘವಾದ, ಗಾಢವಾದ, ಗೌರವಶಾಲಿ ಪರಂಪರೆ ಭಾರತದ ಎಲ್ಲ ಭಾಷೆಗಳಲ್ಲೂ ಇದೆ.
  2. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಇದು ಹುಟ್ಟಿತು, ಬೆಳೆಯಿತು ಹಾಗೂ ಅತ್ಯುಚ್ಚ ಶಿಖರವನ್ನು ಮುಟ್ಟಿತು. ಮಹಾತ್ಮಾ ಗಾಂಧಿ, ನೆಹರೂ, ಅಬ್ದುಲ್ ಕಲಮ್ ಆಝಾದ್, ಅಂಬೇಡ್ಕರ್ ಮುಂತಾದ ಮುಖಂಡರೆಲ್ಲರೂ ಪತ್ರಕರ್ತರಾಗಿದ್ದರು, ಮಹಾನ್ ಲೇಖಕರಾಗಿದ್ದರು ಎಂಬುದನ್ನು ನೆನಪಿಡಬೇಕು. ಕನ್ನಡದಲ್ಲಿಯೂ ಡಿ.ವಿ.ಗುಂಡಪ್ಪ, ಆಲೂರ ವೆಂಕಟರಾವ್, ಆರ್.ಆರ್.ದಿವಾಕರ, ಎಚ್.ಆರ್.ಮೊಹರೆ, ಖಾದ್ರಿ ಶಾಮಣ್ಣ, ಪಾ.ವೆಂ.ಆಚಾರ್ಯರಂಥ ಅನೇಕ ಗಣ್ಯರು ರಾಷ್ಟ್ರಹಿತಕಾರಿ ಪತ್ರಕಾರಿಕೆಯ ಬೇರೂರಿದ್ದಾರೆ. ಈ ಪರಂಪರೆಯಿಂದ ನಾವು ಪ್ರೇರಣೆ ಪಡೆದು, ಇದನ್ನು ಇನ್ನೂ ಸಂವರ್ಧಿಸಿ ಮುಂದಿನ ಪೀಳಿಗಿಗೆ ದಾರಿದೀಪವಾಗಿ ಕೊಡಬೇಕು.
  3. ಪತ್ರಿಕೋದ್ಯಮದಿಂದ ದೊಡ್ಡ ಉದ್ಯಮಗಳು ಹೊರಗೆ ಹೋಗಬೇಕೆಂದು, ಯಾವುದೇ ತರಹದ ಕಾರ್ಪೋರೇಟ್ ಏಕಾಧಿಪತ್ಯ ಮೀಡಿಯಾದಲ್ಲಿ ಬರಬಾರದೆಂದು ಕಾನೂನು ಹಾಗೂ ಇತರ ಕ್ರಮಗಳನ್ನು ತರುವಂತೆ ಸರಕಾರದ ಮೇಲೆ, ರಾಜಕೀಯ ಶಕ್ತಿಗಳ ಮೇಲೆ ಜನತಾಂತ್ರಿಕ ಒತ್ತಡ ತರಬೇಕು. ವಿಚಾರ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯ ಇವುಗಳಿಗೆ ಭಾರತದ ಸಂವಿಧಾನದಲ್ಲಿ ಸಂರಕ್ಷಣೆ ಇದೆ. ಆದರೆ, ವಾಸ್ತವಿಕತೆಯಲ್ಲಿನ ಈ ಸ್ವಾತಂತ್ರ್ಯಗಳನ್ನು, ಹಕ್ಕುಗಳನ್ನು ಮೊಟಕುಗೊಳಿಸುವ ಎಲ್ಲ ಕುಪ್ರಯತ್ನಗಳನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು.
  4. ಇದಕ್ಕಾಗಿ ರಾಜಕೀಯ ಪಕ್ಷಗಳಲ್ಲಿ ಬದ್ಧತೆ ಬೆಳೆಸುವುದಕ್ಕಾಗಿ ನಾವೆಲ್ಲರೂ ಸತತವಾಗಿ ಶ್ರಮಿಸಬೇಕು. ಕಾಂಗ್ರೆಸ್ ಸಹಿತವಾಗಿ ಅನೇಕ ಪಕ್ಷಗಳು ಅಧಿಕಾರದಿಂದ ಹೊರಗಿದ್ದಾಗ ಒಂದು ರೀತಿಯಲ್ಲಿ ವರ್ತಿಸುತ್ತವೆ. ಅಧಿಕಾರಕ್ಕೆ ಬಂದಾಗ ಅವರ ವರ್ತನೆ ಭಿನ್ನವಾಗುತ್ತದೆ. ಆದ್ದರಿಂದ ಯಾವುದೇ ಪಕ್ಷಪಾತವಿಲ್ಲದೇ ತಪ್ಪಿತಸ್ಥರ ವಿರುದ್ಧ ನಾವು ಪ್ರತಿಭಟಿಸಬೇಕು.
  5. ಪತ್ರಿಕಾಸ್ವಾತಂತ್ರ್ಯದ ರಕ್ಷಣೆಯಲ್ಲಿ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಲ್ಲಿ ನ್ಯಾಯಾಲಯಗಳ ಪಾತ್ರ ದೊಡ್ಡದು. ಆದ್ದರಿಂದ ಹಾಲಿ ಮತ್ತು ಮಾಜಿ ನ್ಯಾಯಾಧೀಶರಲ್ಲಿ, ನ್ಯಾಯಾಂಗ ವ್ಯವಸ್ಥೆಯ ಎಲ್ಲ ಕರ್ಮಿಗಳಲ್ಲಿ ಈ ವಿಷಯದ ಬಗ್ಗೆ ಬದ್ಧತೆ ಗಟ್ಟಿ ಮಾಡುವುದಕ್ಕಾಗಿ ಸತತ ಶ್ರಮ ಅಗತ್ಯ.
  6. ಕೋಮುವಾದಿ ವಿಚಾರಗಳು- ಹಿಂದೂ ಕೋಮುವಾದವೇ ಇರಲಿ, ಮುಸ್ಲಿಂ ಕೋಮುವಾದವೇ ಇರಲಿ- ಸಮಾಜಕ್ಕೆ, ರಾಷ್ಟ್ರಕ್ಕೆ, ಪ್ರಜಾಪ್ರಭುತ್ವಕ್ಕೆ ಘಾತಕ. ಆದ್ದರಿಂದ ಪತ್ರಿಕೋದ್ಯಮ ಇವುಗಳ ವಿರುದ್ಧ ಖಡ್ಗದಂತೆ ಎದ್ದು ನಿಲ್ಲಬೇಕು. ಆದರೆ, ಇದರರ್ಥ ಕೋಮುವಾದಿಗಳಂತೆ ನಾವು ಅಸಹಿಷ್ಣುತೆ, ದ್ವೇಷ ತೋರಿಸಬೇಕು ಎಂದಲ್ಲ. ತಪ್ಪು ವಿಚಾರಗಳನ್ನು ಒಳ್ಳೆಯ ವಿಚಾರಗಳಿಂದಲೇ ಸೋಲಿಸಲು ಸಾಧ್ಯ. ಆದ್ದರಿಂದ ಸಂವಿಧಾನದ – ಹಾಗೂ ಭಾರತೀಯ ಸಂಸ್ಕøತಿಯ – ಮೂಲ ತತ್ವವಾದ ಸೆಕ್ಯೂಲರಿಸಮ್ (ಸರ್ವಧರ್ಮ ಸಮಭಾವ) ಅನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಪತ್ರಿಕೋದ್ಯಮದಲ್ಲಿ ವೈಚಾರಿಕತೆಯ ನೆಲೆ ಗಟ್ಟಿಯಾಗಬೇಕು.
  7. ಎಲ್ಲ ಉದ್ಯಮಗಳಂತೆ ಪತ್ರಿಕೋದ್ಯಮಕ್ಕೂ ಬಂಡವಾಳ ಬೇಕು. ಆದ್ದರಿಂದ ಪತ್ರಿಕೋದ್ಯಮದ ಸ್ವಸ್ಥ ಬೆಳವಣಿಗೆಗಾಗಿ ಸರಕಾರ ವಿಶೇಷ ಆರ್ಥಿಕ ಸುಭದ್ರತೆಯ ವ್ಯವಸ್ಥೆ ಮಾಡುವುದಕ್ಕಾಗಿ ಒಗ್ಗಟ್ಟಿನ ಬೇಡಿಕೆ ಮುಂದೆ ಬರಬೇಕು. ಇಂದು ಡಿಜಿಟಲ್ ಮಾಧ್ಯಮದ ವೇಗದ ವಿಕಾಸದಿಂದಾಗಿ ಪತ್ರಿಕೋದ್ಯಮದ ಆರ್ಥಿಕ ಮಾಡೆಲ್ ಬದಲಾಗುತ್ತಿದೆ. ಹೆಚ್ಚು ಹೆಚ್ಚು ಜನ ಮೊಬೈಲ್ ಮೇಲೆ ಸುದ್ದಿ ಓದುತ್ತಿದ್ದಾರೆ. ವಿಡಿಯೋ ನೋಡುತ್ತಿದ್ದಾರೆ. ಇದು ಪತ್ರಿಕೋದ್ಯಮದ ಭವಿಷ್ಯಕ್ಕೆ ಆಶೆಯ ಕಿರಣ. ಇದರಿಂದಾಗಿ ಹೊಸ ಹೊಸ ಮತ್ತು ಚಿಕ್ಕ ಪ್ರಮಾಣದ ವಿಕೇಂದ್ರೀಕೃತ ಮೀಡಿಯಾ ಪ್ರಯೋಗಗಳಿಗೆ ಅವಕಾಶ ಸಿಕ್ಕಿದೆ. ಪತ್ರಕರ್ತರ ಹಾಗೂ ನಾಗರಿಕರ ಅಭಿವ್ಯಕ್ತಿಯ ಸಂಧಿಗಳು ಭಾರಿ ಪ್ರಮಾಣದಲ್ಲಿ ಬೆಳೆದಿವೆ. ಇವುಗಳಿಗೆ ಓದುಗರ-ವೀಕ್ಷಕರ ಆರ್ಥಿಕ ಬೆಂಬಲ ಹೆಚ್ಚಿಸುವುದಕ್ಕಾಗಿ ವಿನೂತನ ಹೆಜ್ಜೆಗಳನ್ನು ಇಡಲು ಸಾಧ್ಯ. ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ನಡೆದ ಸಫಲ ಪ್ರಯೋಗಗಳನ್ನು ನಾವು ಭಾರತದಲ್ಲಿ ಅಳವಡಿಸಿಕೊಳ್ಳಬೇಕು. ಇವುಗಳೆಲ್ಲವನ್ನೂ ಸದಸದ್ವಿವೇಕ ಬುದ್ಧಿಯಿಂದ ಉಪಯೋಗಿಸಿದರೆ ಪ್ರಜಾಪ್ರಭುತ್ವದ ಸಂರಕ್ಷಣೆ, ಸಂವರ್ಧನೆ ಸಾಧ್ಯ.
  8. ಭಾರತದಲ್ಲಿ ಡಿಜಿಟಲ್ ಮಾಧ್ಯಮದ ಆರ್ಥಿಕ ಸುಭದ್ರತೆಗೆ ಒಂದು ದೊಡ್ಡ ಅಡ್ಡಗಾಲೆಂದರೆ ಗೂಗಲ್ ಮುಂತಾದ ಸರ್ಚ್ ಎಂಜಿನ್ನುಗಳ ಹಾಗೂ ಕಂಟೆಂಟ್ ಅಗ್ರೆಗೆಟರ್ಸ್‍ಗಳ ಏಕಸ್ವಾಮಿತ್ವ. ಇವು ಭಾರತದಲ್ಲಿ ಕೂಡ ಕೋಟ್ಯಾವಧಿ ಲಾಭ ಗಳಿಸುತ್ತಿವೆ. ಆದರೆ ಪತ್ರಿಕೆಗಳಿಗೆ, ಟಿವಿ ಚ್ಯಾನೆಲುಗಳಿಗೆ ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕಂಟೆಂಟ್ ಸೃಷ್ಟಿಸುವ ಇತರರಿಗೆ ಈ ಲಾಭವನ್ನು ಹಂಚುತ್ತಿಲ್ಲ. ಇದು ಅನ್ಯಾಯಕಾರಿ. ಇದನ್ನು ಸರಿಪಡಿಸಲು ಜಗತ್ತಿನಾದ್ಯಂತ ಬೇಡಿಕೆ ಎದ್ದಿದೆ. ಭಾರತದಲ್ಲಿ ಕೂಡ ಸರಕಾರ ಭಾರತೀಯ ಮೀಡಿಯಾದ ಆರ್ಥಿಕ ಸ್ಥಿರತೆಗಾಗಿ ಈ ವಿಷಯದಲ್ಲಿ ಸೂಕ್ತ ಕಾನೂನು ತರಬೇಕು. ಆರ್ಥಿಕವಾಗಿ ವಿಕೇಂದ್ರಿಕೃತ ಹಾಗೂ ಪತ್ರಿಕೋದ್ಯಮದ ಆದರ್ಶಗಳಿಗೆ ಅಂಟಿಕೊಂಡ ಮೀಡಿಯಾ ಎಷ್ಟು ಸುಭದ್ರವಾಗುತ್ತದೆಯೋ ಅಷ್ಟು ಪ್ರಜಾಪ್ರಭುತ್ವ ರಕ್ಷಣೆ ಸಾಧ್ಯವಾಗುತ್ತದೆ ಹಾಗೂ ಸರ್ವಾಧಿಕಾರಿ ರಾಜಕೀಯ ಶಕ್ತಿಗಳನ್ನು ಎದುರಿಸಲು ಸಾಧ್ಯವಾಗುತ್ತದೆ.
  9. ಪತ್ರಿಕೋದ್ಯಮ ಒಂದು ವಿಶಿಷ್ಟ ತರಹದ ಉದ್ಯಮ. ಅದು ಕಾರು, ಸೋಪು, ಬಟ್ಟೆ ಇತ್ಯಾದಿ ಉತ್ಪಾದಿಸುವ ಉದ್ಯಮಕ್ಕಿಂತ ಅತಿ ಭಿನ್ನ. ಜನರ ಮನಸ್ಸು, ಹೃದಯ, ವರ್ತನೆ ಬದಲಾಯಿಸುವಂಥ ಉದ್ಯಮ. ಆದ್ದರಿಂದ ಓದುಗರು, ವೀಕ್ಷಕರು, ನಾಗರಿಕರು ಪತ್ರಿಕೋದ್ಯಮದಲ್ಲಿ ಸಮಾನ ಪಾಲುಗಾರರು. ಡಿಜಿಟಲ್ ಕ್ರಾಂತಿಯ ನಂತರವಂತೂ ಈ ಪಾಲುಗಾರಿಕೆ ಇನ್ನೂ ಸುಲಭವಾಗಿದೆ. ಸಾಮಾನ್ಯ ನಾಗರಿಕರ ಜನತಾಂತ್ರಿಕ ಸಶಕ್ತೀಕರಣಕ್ಕೆ ಹೊಸ ಸುಸಂಧಿಗಳು ಹುಟ್ಟಿಕೊಂಡಿವೆ.

ಆದರೆ, ಪಾರಂಪರಿಕ ಮೀಡಿಯಾ ಈ ಪಾಲುಕಾರಿಕೆಯನ್ನು ಇನ್ನೂ ಒಪ್ಪಿಕೊಂಡಿಲ್ಲ. ಆದ್ದರಿಂದ ಪ್ರಜಾಪ್ರಭುತ್ವ ಪತ್ರಿಕೋದ್ಯಮದಲ್ಲೂ ಪ್ರತಿಧ್ವನಿತಗೊಳ್ಳ ಬೇಕಾದರೆ ಓದುಗರ, ವೀಕ್ಷಕರ, ಜನಸಾಮಾನ್ಯರ audit/ monitoring ವ್ಯವಸ್ಥೆಗಳು ತಯಾರಾಗಬೇಕು. ಪ್ರಜೆಗಳು ಸಶಕ್ತರಾದರೆ, ಮೋದಿಯಂಥ ಸರ್ವಾಧಿಕಾರಿಗಳಿಗೆ ಪತ್ರಿಕೆ-ಟಿವಿ ಚ್ಯಾನೆಲ್-ಡಿಜಿಟಲ್ ಪೋರ್ಟಲ್ ಹಾಗೂ ವಾಟ್ಸ್ ಆ್ಯಪ್, ಫೇಸ್‍ಬುಕ್‍ನಂತಹ ಸೋಶಿಯಲ್ ಮೀಡಿಯಾಗಳನ್ನು ತಮ್ಮ ಅಜೆಂಡಾಗಳಿಗೆ ದುರಪಯೋಗಿಸುವುದು ಕಷ್ಟವಾಗುತ್ತದೆ.

  1. ಕೊನೆಯದಾಗಿ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಪರಿಪಕ್ವವಾಗಬೇಕಾದರೆ, ಸಮಾಜದಲ್ಲಿ ಪ್ರಬುದ್ಧತೆ ಬೆಳೆಯಬೇಕು. ಲೋಕ ಶಿಕ್ಷಣ ಪತ್ರಿಕೋದ್ಯಮದ ಪ್ರಥಮ ಕರ್ತವ್ಯ. ಆದರೆ ಲೋಕ ಶಿಕ್ಷಣ ಮಾಡುವ ಸಾಮಥ್ರ್ಯ ಬರಬೇಕಾದರೆ ಮೊದಲು ಸ್ವಶಿಕ್ಷಣ ಅತ್ಯಗತ್ಯ. ಮಹಾತ್ಮಾ ಗಾಂಧಿ ಹೇಳಿರುವಂತೆ- “Be the change you wish to see in the world.” ಆದ್ದರಿಂದ ಪತ್ರಿಕಾ ಸ್ವಾತಂತ್ರ್ಯ, ನಿರ್ಭೀತಿ, ಸಾಮಾಜಿಕ ಕಳಕಳಿ, ವೈಚಾರಿಕ ಪ್ರಬುದ್ಧತೆ, ಪ್ರಾಮಾಣಿಕತೆ, ಸತ್ಯನಿಷ್ಠೆ, ವಿನಮ್ರತೆ, ಶೀಲ, ಸಮಸ್ತ ಮಾನವ ಜಾತಿಯ ಬಗ್ಗೆ ಜಾತಿ, ಧರ್ಮ, ಸಂಕುಚಿತ ರಾಷ್ಟ್ರೀಯತೆಯ ಸೀಮೆಗಳನ್ನು ದಾಟಿ ಪ್ರೀತಿ ಹಾಗೂ ಕಾಳಜಿ – ಈ ಗುಣಗಳು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಎಲ್ಲರಲ್ಲೂ ಬೆಳೆಯಬೇಕು.

ಹೀಗಾದರೆ, ಪತ್ರಿಕೋದ್ಯಮವೂ ಸುರಕ್ಷಿತ. ಪ್ರಜಾಪ್ರಭುತ್ವವೂ ಸುರಕ್ಷಿತ.

*ಲೇಖಕರು ಮೂಲತಃ ಕರ್ನಾಟಕದವರು, ಮುಂಬೈಯಲ್ಲಿ ನೆಲೆಸಿದ್ದಾರೆ; ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಕಟವರ್ತಿಯಾಗಿ ಸೇವೆ ಸಲ್ಲಿಸಿದ್ದರು. ಗಾಂಧಿ ವಿಚಾರದ ಪ್ರಸಾರಕ್ಕೆ ಬದ್ಧರು. ಸಂಪರ್ಕ: sudheenkulkarni@gmail.com

Leave a Reply

Your email address will not be published.